ಇಂದು ನಾವೆಲ್ಲ ಮೊಬೈಲ್ ಕಂಪ್ಯೂಟರ್ ಇಂಟರ್ನೆಟ್ ಬಳಸುತ್ತಿದ್ದೇವೆ. ಇವೆಲ್ಲ ಇಷ್ಟು ಸಮರ್ಪಕವಾಗಿ ಕೆಲಸ ಮಾಡುವುದರ ಹಿಂದೆ ಯಾವುದೋ ಒಂದು ಯೂಲರ್ ಐಡೆಂಟಿಟಿ ಎಂಬ ಗಣಿತದ ಅತ್ಯದ್ಭುತ ಅತಿ ಸುಂದರ ಕಾವ್ಯಾತ್ಮಕ ಈಕ್ವೇಶನ್ ಕಾಣಿಕೆಯಿದೆ ಎಂಬುದು ಬಹುತೇಕರಿಗೆ ಗೊತ್ತಿರುವುದಿಲ್ಲ, ಗೊತ್ತಿರಲೂ ಬೇಕಿಲ್ಲ. ಅಂತೆಯೆ ನಮ್ಮ ದೇಶ ಇತರ ಮುಂದುವರೆದ ದೇಶಗಳ ಹಾದಿಯಲ್ಲಿ ಸುಸ್ಥಿತಿಯ ಪಥದಲ್ಲಿ ಸಾಗುತ್ತಿದೆಯೆಂದರೆ ಅದರ ಸಂವಿಧಾನದಲ್ಲಿ ಸೆಕ್ಯುಲರಿಸ್ಮ್ ಎಂಬ ಸುಂದರ ಈಕ್ವೇಶನ್ ಅಳವಡಿಸಲಾಗಿದೆ ಎಂಬುದು. ಇವತ್ತು ಯಾವ ಯಾವ ದೇಶಗಳು ಮುಂದುವರೆದಿವೆ ಯಾವ ದೇಶಗಳು ಹಿಂದುಳಿದಿವೆ ಎಂಬುದನ್ನು ತಾಳೆ ಹಾಕಿ.
ಮಧುಸೂದನ್ ವೈ.ಎನ್ ಬರೆಯುವ ಅಂಕಣ

 

ಗಣಿತದಲ್ಲಿಯೆ ಅತ್ಯಂತ ಸುಂದರ, ರೋಮಾಂಚಕಕಾರಿ, ಅತ್ಯದ್ಭುತ ಈಕ್ವೇಶನ್ ಯಾವುದು ಎಂದು ನೀವು ಯಾವುದಾದರೂ ಗಣಿತಜ್ಞನನ್ನು ಕೇಳಿ ನೋಡಿ, ನಿಮಗೆ ಸಿಗುವ ಒತ್ತರ ಒಂದೇ ಆಗಿರುತ್ತದೆ. ಅದುವೇ ಯೂಲರ್ಸ್ ಐಡೆಂಟಿಟಿ ಎಂಬುದು. ನೋಬಲ್ ಪಡೆದ ನಮ್ಮ ನಿಮ್ಮೆಲ್ಲರ ನೆಚ್ಚಿನ ಜನಪ್ರಿಯ ಭೌತಶಾಸ್ತ್ರಜ್ಞ ರಿಚರ್ಡ್ ಫೇಯ್ಮನ್ ಇದನ್ನು ‘one of the most remarkable, almost astounding, formulas in all of mathematics’ ಎಂದು ಬಣ್ಣಿಸಿದ್ದಾನೆ. ಗಣಿತ ಭಾಷೆಯಲ್ಲಿ ಇದನ್ನು ಹೀಗೆ ಬರೆಯುತ್ತಾರೆ: eiπ+ 1 = 0. ಯಾಕಪ್ಪ ಇದು ಇಷ್ಟೊಂದು ಫೇಮಸ್ಸು ಎಂಬ ಪ್ರಶ್ನೆಗೆ ಸಿಗುವುದು ಮತ್ತೊಂದು ಅತ್ಯಂತ ಸರಳ ಅತ್ಯಂತ ಆಧ್ಯಾತ್ಮಿಕ ಉತ್ತರ; ಗಣಿತ ಲೋಕದ ಐದು ಮೂಲಭೂತ ಸ್ಥಿರ ಸಂಖ್ಯೆಗಳು(constants) ಒಂದೇ ಈಕ್ವೇಶನ್ನಿನಲ್ಲಿ ಕಾಣಿಸಿಕೊಂಡಿವೆ. ಅವು – e, i, π, 1,ಮತ್ತು 0.

ಇದರ ಸೌಂದರ್ಯದ ಮಹತ್ವ ತಿಳಿಯಬೇಕೆಂದರೆ, ವಿವಿಯನ್ ರಿಚರ್ಡ್ಸ್, ಗ್ಲೆನ್ ಮೆಕ್ ಗ್ರಾತ್, ವಿರಾಟ್ ಕೊಹ್ಲಿ, ಮುತ್ತಯ್ಯ ಮುರುಳೀಧರನ್.. ಹೀಗೆ ನಿಮ್ಮಿಷ್ಟದ ದಿಗ್ಗಜರನ್ನೆಲ್ಲ ಒಂದೇ ತಂಡದಲ್ಲಿ ಅಥವಾ ಒಂದೇ ಫ್ರೇಮಿನ ಫೋಟೋದಲ್ಲಿರುವುದನ್ನು ಕಲ್ಪಿಸಿಕೊಳ್ಳಿ. ಗಾಂಧಿ ಅಂಭೇಡ್ಕರ್, ಭಗತ್, ಬೋಸ್, ಬಸವಣ್ಣ, ಕುವೆಂಪು… ಒಟ್ಟಿಗೆ ಕೂತು ಚಾಯ್ ಪೆ ಚರ್ಚಾ ಮಾಡಿದಂತೆ ಊಹಿಸಿಕೊಳ್ಳಿ.

ಓದುಗರಾಗಿ ನೀವು ಕೆಳಗಿನ ಎರಡು ಮೂರು ಹಂಪ್ಸ್ ಗಳನ್ನು ದಾಟಬೇಕಾಗಿದೆ. ಸಾವಧಾನದಿಂದ ದಾಟಿದರೂ ಸೈ, ಕ್ಯಾರೆ ಎನ್ನದೆ ಹಾರಿಸಿದರೂ ಸೈ. ಹಾರುವುದಿದ್ದಲ್ಲಿ ಒಂದು ಸಣ್ಣ ನೋಟ: ಇಲ್ಲೊಂದಷ್ಟು ಭಾರತದ ಕೊಡುಗೆಯಿದೆ, ಐದರಲ್ಲಿ ಒಂದಾದ ಸೊನ್ನೆ ಕಂಡುಹಿಡಿದದ್ದು ನಮ್ಮವರು!, ಪೈ(π) ನ ಮೊತ್ತದ ಕರಾರುವಕ್ಕನ್ನು ಇನ್ನಷ್ಟು ತೀಕ್ಷ್ಣಗೊಳಿಸಿದವರೂ ನಮ್ಮವರೇ.

(ರಿಚರ್ಡ್ ಫೇಯ್ಮನ್)

e(ಇ) ಎಂಬುದು ಯೂಲರ್ ಸಂಖ್ಯೆ 2. 718281828459. 1/1 + 1/1*2 + 1/1*2*3… ಹೀಗೆ ಅನಂತದವರೆಗೆ ಕೂಡುತ್ತ ಹೋದರೆ ನಿಮಗೆ eಮೊತ್ತ ಸಿಗುತ್ತದೆ. ಇದು ಏಕ್ದಂ ನಿಮ್ಮನ್ನು ಲಾಗರಿತ್ಮ್ ಲೋಕಕ್ಕೆ ಕೊಂಡೊಯ್ಯುತ್ತದೆ. Naturallogarithm ನ ಬೇಸ್ ನಂಬರ್ e. ಲಾಗರಿತ್ಮ್ ಎಂದರೆ…. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ನೀವು ಬ್ಯಾಂಕಿನಲ್ಲಿ ಒಂದು ಸಾವಿರ ರುಪಾಯಿ ಡೆಪಾಸಿಟ್ ಮಾಡಿ ಇಂಟರೆಸ್ಟು ರೇಟು ಶೇಖಡಾ ನೂರು ಅಂತಿದ್ದರೆ ವರ್ಷಾಂತ್ಯಕ್ಕೆ ನಿಮ್ಮ ದುಡ್ಡು ಎರಡು ಸಾವಿರ ಆಗಿರಬೇಕಲ್ಲವೇ? ಅಕಸ್ಮಾತ್ ನೀವು ಗಣಿತದ ಸೆಟ್ಟಿಯಾಗಿದ್ದರೆ ಒಂದು ಸಾವಿರ ಡೆಪಾಸಿಟ್ ಮಾಡಿದ ದಿನದಿಂದ ಆ ಗಂಟೆಯಿಂದ ಬಡ್ಡಿ ಲೆಕ್ಕ ಹಾಕಿ ನೋಡಿದಾಗ ನಿಮಗೆ ಗೊತ್ತಾಗುತ್ತದೆ ನಿಮಗೆ ಬರಬೇಕಾದ ಹಣ ಎರಡು ಸಾವಿರವಲ್ಲ, ಎರಡು ಸಾವಿರದ ಏಳನೂರು ಚಿಲ್ಲರೆಯೆಂದು! ಈ ಚತುರತೆಗೆ ಸಹಾಯ ಮಾಡುವುದು ಇದೇ e.

i(ಐ) ಎಂಬುದು ಇಮ್ಯಾಜಿನರಿ ಸಂಖ್ಯೆ. ಎಂದರೆ ಕಾಲ್ಪನಿಕ ಎಂದರ್ಥ. ಗಣಿತದಲ್ಲಿ ನಿಜವಾಗಿಯೂ ಈ ತರಹದ್ದು ಒಂದು ಸಂಖ್ಯೆಯಿಲ್ಲ. ಇದನ್ನು ಗುಣ ವಿಶೇಷಣ ಎನ್ನಬಹುದು. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಬೆನ್ನ ಹಿಂದೆ ಕಣ್ಣಿರುವ ಮಾನವ ಎಂಬುದು ಕಾಲ್ಪನಿಕ ವಸ್ತು, ಅದೊಂದು ಗುಣ ವಿಶೇಷಣವಷ್ಟೆ ಆದರೂ ಎಷ್ಟೊಂದು ಲೆಕ್ಕದಲ್ಲಿ ಈ ತರಹದ ಒಬ್ಬ ಮನುಷ್ಯನಿದ್ದಾನೆ ಎಂದು ಭಾವಿಸಿದರೆ ಹಲವಾರು ಗಣಿತದ ಸಮಸ್ಯೆಗಳು ಬಗೆಹರಿಯುತ್ತವೆ.

ಹಾ, ಇಮ್ಯಾಜಿನರಿ ಎಂದರೆ ಸಂಪೂರ್ಣ ಕಾಲ್ಪನಿಕವಲ್ಲ, -1 ದರ ವರ್ಗಮೂಲ(squareroot) ಈ i ಎಂಬುದು. ಅದು ಇದೆ, ಆದರೆ ಅದಕ್ಕೊಂದು ರೂಪವಿಲ್ಲವಷ್ಟೆ. ರೂಪವಿಲ್ಲದಿರುವ ಎಷ್ಟೊಂದು ವಸ್ತು ವಿಷಯಗಳು ನಮ್ಮ ತಲೆಯಲ್ಲಿ ಅಸ್ತಿತ್ವ ಪಡೆದಿರುವವಲ್ಲವೇ ಹಾಗೆ.

ಪೈ(π = 3.14159) ಸಂಖ್ಯೆಯಾಗಿ ಅದೇ ಒಂದು ಅದ್ಭುತ. ಇದು ಪ್ರಕೃತಿಯೊಳಗಿನ, ವಿಶ್ವದೊಳಗಿನ ಪ್ಯಾಟರ್ನ್(pattern, ಹಕ್ಕಿಗಳ ಹಾರುವಿಕೆ, ಹಿಂಡು ಜಿಂಕೆಗಳ ಓಡುವಿಕೆ, ಹಸಿರೆಲೆಯಲ್ಲಿನ ಗೆರೆ, ಮನುಷ್ಯನ ಶರೀರದಲ್ಲಿನ ನರ..) ಅನ್ನು ಅತ್ಯಂತ ಸಮರ್ಥವಾಗಿ ಹಿಡಿದಿಡುವ ಸಂಖ್ಯೆ. ಇದು ಒಂದು ಸಂಖ್ಯೆಯಾಗಿಯೂ ಅದು ಬಿಂಬಿಸುವ ಅರ್ಥದಲ್ಲೂ ನಿಗೂಢ ಮತ್ತು ರೋಮಾಂಚಕಾರಿ. ಮನುಷ್ಯ ನಾಗರೀಕತೆ ರೂಪುಗೊಂಡ ದಿನದಿಂದಲೂ ಈ ಸಂಖ್ಯೆಯ ಬೇಟೆಯಲ್ಲಿ ತೊಡಗಿಸಿಕೊಂಡಿರುವನು. ಕ್ರಿಸ್ತಪೂರ್ವ ಅದೆಷ್ಟೋ ಸಾವಿರ ವರ್ಷಗಳ ಹಿಂದಿನಿಂದಲೂ. ಇದರ ಬಗ್ಗೆ ತುಸು ವಿವರವಾಗಿ ತಿಳಿಯಬೇಕೆಂದರೆ ಇಲ್ಲಿ ಓದಿ ( https://www.prajavani.net/columns/ಪೈ-ಪಾರುಪತ್ಯಕ್ಕೆ-ತೌ-ತಂದ-ತಹಬಂದಿ) . ಇದರ ವಿಶೇಷವೇನೆಂದರೆ ಇದು ಜಗತ್ತು ಸೃಷ್ಟಿಯಾಗುವುದಕ್ಕಿಂತಲೂ ಮುಂಚಿದ್ದ, ಜಗತ್ತು ಅಳಿದ ನಂತರವೂ ಅಸ್ತಿತ್ವದಲ್ಲಿರುವಂತಹ ವಿಶ್ವಾತ್ಮಕ ಸತ್ಯವುಳ್ಳದ್ದು. ಮನುಷ್ಯ ಇದು ಇದೆ ಎಂದು ಕಂಡುಕೊಂಡನಷ್ಟೆ.

ಇನ್ನು ಒಂದು ಮತ್ತು ಸೊನ್ನೆ: ಇವುಗಳ ಬಗ್ಗೆ ವಿಶೇಷವಾಗಿ ಹೇಳುವುದು ಏನೂ ಇಲ್ಲ. ಜನಸಾಮಾನ್ಯರಿಗೂ ಅರ್ಥವಾಗುತ್ತದೆ ಇವುಗಳ ಮಹತ್ವವೇನೆಂದು. ಸಂಖ್ಯಾಶಾಸ್ತ್ರ ಶುರುವಾಗುವುದೇ ಈ ಸಂಖ್ಯೆಗಳಿಂದ. ಒಂದು ಎಂಬುದು ಮುರಿಯಲಾಗದ ಕನಿಷ್ಠ ಪೂರ್ಣ ಸಂಖ್ಯೆ. ಸೊನ್ನೆ ಎಂಬುದು ಶೂನ್ಯ. ಶೂನ್ಯವೆಂದರೆ ಬೆಳಕು. ಕತ್ತಲೆಯ ಗೈರು.
ಹೊರೆಯೆನಿಸುವ ಗಣಿತವನ್ನು ಇಲ್ಲಿಗೆ ನಿಲ್ಲಿಸೋಣ.

ಸ್ಟಾನ್ಫೋರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಕೀತ್ ಡೆವ್ಲಿನ್ ಇದನ್ನು ಹೀಗೆ ಕೊಂಡಾಡುತ್ತಾರೆ, “ಶೇಕ್ಸಪಿಯರ್ ನ ಸಾನೆಟ್ ಪ್ರೇಮದ ಹೂರಣವನ್ನು ಹಿಡಿದಿಟ್ಟಂತೆ, ತೊಗಲು ಹೊತ್ತ ಮನುಷ್ಯನ ಚಿತ್ರವೊಂದು ಕೇವಲ ತೊಗಲನ್ನಲ್ಲದೆ ಅವನ ಆಳವನ್ನು ಬಗೆದು ತೋರಿಸಿದಂತೆ, ಯೂಲರ್ ಈಕ್ವೇಶನ್ ನಮ್ಮ ಅಸ್ತಿತ್ವದ ತಳಾತಳವನ್ನು ಮುಟ್ಟುತ್ತದೆ”

(ಕೀತ್ ಡೆವ್ಲಿನ್)

ಹತ್ತೊಂಭತ್ತನೇ ಶತಮಾನದ ತತ್ವಶಾಸ್ತ್ರಜ್ಞ, ಗಣಿತಜ್ಞ, ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರಾಗಿದ್ದಂತಹ ಬೆಂಜಮಿನ್ ಪಿಯರ್ಸ್ ನ ಪ್ರಕಾರ, “ಯೂಲರನ ಈಕ್ವೇಶನ್ ಅದೆಷ್ಟು ಒಗಟುಮಯ(ಪ್ಯಾರಡಾಕ್ಸಿಕಲ್) ಎಂದರೆ ಅದು ನಮಗೆ ಅರ್ಥವೇ ಆಗದು. ಅದೇನೆಂದು ನಮಗೆ ತಿಳಿಯದು ಆದರೂ ಅದು ಇದೆ ಎಂಬುದನ್ನು ಸ್ಥಾಪಿಸಿದ್ದೇವೆ, ಹೀಗಾಗಿ ಅದು ಸತ್ಯವೇ ಆಗಿದ್ದಿರಬೇಕು”.

ಪಟ್ಟಿ ಮಾಡುತ್ತ ಹೋದರೆ ಈ ಈಕ್ವೇಶನ್ ಬಗೆಗಿನ ಜಗತ್ತಿನಾದ್ಯಂತ ಖ್ಯಾತ ವಿಖ್ಯಾತರ ವಿಸ್ಮಯವನ್ನೆಲ್ಲ ಪಟ್ಟಿ ಮಾಡಬಹುದು. ಒಮ್ಮೆ ಒಂದು ಹದಿನಾರು ಗಣಿತಜ್ಞರನ್ನು ಅಭ್ಯಸಿಸಿದಾಗ ಬೇರೆಲ್ಲ ಫಾರ್ಮುಲಾಗಳಿಗಿಂದ ಯೂಲರ್ ಫಾರ್ಮುಲಾ ಎದುರಾದಾಗ ಅವರ ಮೆದುಳಿನಲ್ಲಿನ ಒಂದು ಭಾಗವು ನಿರಂತರವಾಗಿ ಮೀಂಟುತ್ತಿತ್ತಂತೆ. ಒರ್ಬಿಟೋಫ್ರಂಟಲ್ ಕೊರ್ಟೆಕ್ಸ್ ಎಂಬ ಹೆಸರಿಂದ ಕರೆಯಲ್ಪಡುವ ಮೆದುಳಿನ ಈ ಮೂಲೆಯಿಂದಲೆ ಸಂಗೀತ, ಕಾವ್ಯ, ಚಿತ್ರಕಲೆ ಇತ್ಯಾದಿಗಳು ಸೃಜಿಸುವುದು! ಎಲ್ಲಿಯ ಗಣಿತ, ಎಲ್ಲಿಯ ಕಲೆ! ಗಣಿತವೆಂದರೆ ಮೂಗು ಮುರಿಯುವವರೆಲ್ಲರೂ ಒಮ್ಮೆ ಇತ್ತ ಗಮನ ಹರಿಸಿರೆಂದು ಮನವಿ. ಹಾಗೆ ನೋಡಿದರೆ ಪ್ರಕೃತಿಯ ಸೌಂದರ್ಯವನ್ನು ಜಗತ್ತಿನ ತಿರುಳನ್ನು ಆದಿ ಅಂತ್ಯವನ್ನು ನಮ್ಮೀ ಪ್ರಯಾಣವನ್ನು ಅತ್ಯಂತ ಸಮರ್ಥವಾಗಿ ಕಾವ್ಯಮಯವಾಗಿ ಸೆರೆಹಿಡಿದಿರುವ ಏಕೈಕ ಭಾಷೆ ಅದುವೆ ಗಣಿತ ಭಾಷೆ.

2 +2 = 4 ಎಂದು ಬಗೆವ ಇದು ಕೇವಲ ತಾರ್ಕಿಕ ಭಾಷೆಯೆಂದು ಪರಿಗಣಿಸಿದವರು ಒಮ್ಮೆ ವಿಶಾಲ ಮನಸ್ಸಿಂದ ಅಭ್ಯಸಿಸಿದರೆ ತಿಳಿದೀತು, ಇಲ್ಲಿ ಇಮ್ಯಾಜಿನರಿ ಸಂಖ್ಯೆಯಿದೆ, ಒಟ್ಟುಗೂಡಿಸುವ ಇಂಟಿಗ್ರೇಶನ್ ಇದೆ, ಬಗೆದು ಬೇರ್ಪಡಿಸುವ ಡಿಫರೆನ್ಶಿಯೇಶನ್ ಇದೆ. ಅನಂತವೆಂಬುದು ಇಲ್ಲಿ ಇನ್ಫಿನಿಟಿಯಾಗಿದೆ. ಕವಿಗಳು ಕತೆಗಾರರು ಅನಂತವನ್ನು ಏನೋ ಎಂತೋ ಎಂದು ಬಣ್ಣಿಸಿ ನಿಲ್ಲಿಸಿಬಿಡುತ್ತಾರೆ. ಗಣಿತವು ಅನಂತದವರೆಗೆ ಕೂಡುತ್ತದೆ, ಕಳೆಯುತ್ತದೆ, ಗುಣಿಸಿ ಭಾಗಿಸುತ್ತದೆ. ಹಬಲ್ ಟೆಲಿಸ್ಕೋಪಿನ ಮೂಲಕ ಲಕ್ಷ ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿರುವ ಬ್ರಹ್ಮಾಂಡಗಳನ್ನು ವೀಕ್ಷಿಸಿದಾಗ ಅದೆಷ್ಟು ಸುಂದರವಾಗಿ ವರ್ಣಮಯವಾಗಿ ಜ್ವಾಲಾಮಯವಾಗಿ ಅಭೂತಪೂರ್ವವಾಗಿ ಕಾಣಿಸುತ್ತದೆ! ಅದರೊಂದಿಗೆ ಅಲ್ಲಿನ ಸೌರಮಂಡಲಗಳು ನಕ್ಷತ್ರಗಳು ಗ್ರಹಗಳು ಕ್ಷುಧ್ರಗ್ರಹಗಳು, ಅಲ್ಲಿನ ತಲ್ಲಣ ಕಷ್ಟಕೋಟಲೆ… ಅದೆಷ್ಟು ಸಂಯಮದಿಂದ ತೆರೆದಿಡುತ್ತದೆ! ಅದುವೇ ಗಣಿತದ ಪರಿಭಾಷೆ. ಅದುವೇ ಯೂಲರ್ ಈಕ್ವೇಶನ್ನಿನ ಸೌಂದರ್ಯ ಮತ್ತು ಗಹನತೆ.

ಎಲ್ಲ ಸರಿ ಯೂಲರನ ಐಡೆಂಟಿಟಿಗೂ ನಮ್ಮ ಅನ್ನಕ್ಕೂ ಶ್ರಮಕ್ಕೂ ಏನು ಸಂಬಂಧ? ದೂರದ ಗ್ರಹಚಿಂತನೆ ನನಗ್ಯಾಕೆ ಎಂದು ನೀವು ಕೇಳಿದರೆ ತಪ್ಪೇನಿಲ್ಲ. ಬೆಳಕೊಂದು ಕಣವೆಂದು ಪರಿಗಣಿಸಿದಾಗ ನಮ್ಮೆದುರು ಮೂಡುವ ಚಿತ್ರ, ಸೂರ್ಯನು ನಮ್ಮ ಮೇಲೆ ದಿನನಿತ್ಯ ಮರಳಿನಂತೆ ಬೆಳಕಿನ ಕಣಗಳನ್ನು ಸುರಿಯುತ್ತಿರುವುದು. ಇದು ಸತ್ಯವೇ ಹೌದು. ಕಾವ್ಯಾತ್ಮಕವಾಗಿಯೂ ಸೂಜಿಯಂತೆ ಚುಚ್ಚುವ ಸೂರ್ಯನ ಕಿರಣಗಳು ಮರಳಿನ ಹರಳುಗಳನ್ನೆ ನೆನಪಿಸುತ್ತವೆ. ಆದರೆ ಇಲ್ಲೊಂದು ಸಮಸ್ಯೆಯಿದೆ. ಬೆಳಕು ಬಾಗಬಲ್ಲದು. ಬೆಳಕನ್ನು ಕಣಗಳಾಗಿ ನೋಡಿದಾಗ ಈ ವರ್ತನೆಯನ್ನು ಅರ್ಥೈಸಿಕೊಳ್ಳಲು ಆಗದು. ಅದು ಗಾಳಿಯಂತೆ ಎಲ್ಲೆಂದರಲ್ಲೆ ಬಗ್ಗಿ ಎದ್ದು ನುಸುಳದಷ್ಟಲ್ಲದಿದ್ದರೂ ಬರಲು ಕೋಲಿನಂತೆ ಬಾಗುವುದು ಖಂಡಿತ. ನಮಗೆ ದೂರದ ಅಮೆರಿಕಾದ ವಿಡಿಯೋವೊಂದನ್ನು ನೋಡಲು ಸಾಧ್ಯವಾಗಿರುವುದು ಬೆಳಕಿನ ಈ ಗುಣದಿಂದ.

ಇನ್ನು ಒಂದು ಮತ್ತು ಸೊನ್ನೆ: ಇವುಗಳ ಬಗ್ಗೆ ವಿಶೇಷವಾಗಿ ಹೇಳುವುದು ಏನೂ ಇಲ್ಲ. ಜನಸಾಮಾನ್ಯರಿಗೂ ಅರ್ಥವಾಗುತ್ತದೆ ಇವುಗಳ ಮಹತ್ವವೇನೆಂದು. ಸಂಖ್ಯಾಶಾಸ್ತ್ರ ಶುರುವಾಗುವುದೇ ಈ ಸಂಖ್ಯೆಗಳಿಂದ. ಒಂದು ಎಂಬುದು ಮುರಿಯಲಾಗದ ಕನಿಷ್ಠ ಪೂರ್ಣ ಸಂಖ್ಯೆ. ಸೊನ್ನೆ ಎಂಬುದು ಶೂನ್ಯ. ಶೂನ್ಯವೆಂದರೆ ಬೆಳಕು. ಕತ್ತಲೆಯ ಗೈರು.

ನೀವೇನಾದರೂ ಅಮೆರಿಕಾದಲ್ಲಿ ಸೆರೆಹಿಡಿದ ವಿಡಿಯೋ ಸೆಟಲೈಟ್ ಗಳ ಮೂಲಕ ಟಿಂಗ್ ಟಿಂಗನೆ ಮೇಲೆ ಚಿಮ್ಮಿ ಕೆಳಗಿಳಿದು (ಮೊಬೈಲ್ ಸಿಗ್ನಲಿನಂತೆ) ನಮ್ಮನ್ನು ತಲುಪುತ್ತದೆ ಎಂದು ಭಾವಿಸಿದ್ದರೆ ಅದು ತಪ್ಪು. ವಿಡಿಯೋ, ಅರ್ಥಾತ್ ಇಂಟರ್ನೆಟ್ ಡೇಟಾ ಕೇವಲ ಒಂದು ಪೈಪಿನ ಮೂಲಕ ಸಪ್ತ ಸಾಗರಗಳನ್ನು ಹಾದು(ಹೌದು ಸಮುದ್ರದೊಳಗೆ ಇಂಟರ್ನೆಟ್ಟಿನ ಪೈಪುಗಳನ್ನು ಬಿಡಲಾಗುತ್ತದೆ) ಇಂಡಿಯಾದ ದಡ ಮುಟ್ಟಿ ಪುನಃ ಅಲ್ಲಿಂದ ಇನ್ನೊಂದು ಪೈಪಿಗೆ ವರ್ಗಾವಣೆಗೊಂಡು ಬೆಟ್ಟ ಗುಡ್ಡಗಳನ್ನು ಅಲೆದು ಕೊನೆಗೆ ನಿಮ್ಮ ನಮ್ಮ ಮನೆಬಾಗಿಲು ತಲುಪುತ್ತದೆ. ಇಷ್ಟು ದೂರದ ಪ್ರಯಾಣಕ್ಕೆ ಅದು ತೆಗೆದುಕೊಳ್ಳುವ ಸಮಯ ಸೆಕೆಂಡಿಗಿಂತ ಕಡಿಮೆ. ನೀವು ಯೂ ಎಸ್ ನಲ್ಲಿರುವ ಯಾರಿಗಾದರೂ ವಿಡಿಯೋ ಕಾಲ್ ಮಾಡಿದಾಗ ವಿಡಿಯೋದಲ್ಲಿ ಸೆಕೆಂಡಿಗಿಂತಲೂ ಕಡಿಮೆಯ ಮಂದಗತಿ(ಲ್ಯಾಗ್) ಇರುತ್ತದೆ. ಆ ಮಂದಗತಿಯ ಪ್ರಮಾಣಲ್ಲಿ ಅಷ್ಟು ದೂರದ ವಿಡಿಯೋ ಪ್ರಯಾಣದ ಸಮಯವೂ ಸೇರಿಕೊಂಡಿರುತ್ತದೆ.

ಈ ಸಿಗ್ನಲ್ ಎಂಬುದು ಡೇಟಾ ಎಂಬುದು ಮತ್ತೇನಲ್ಲ, electromagnetic waves. ಅಂದರೆ ಬೆಳಕಿನ ತರಂಗಗಳು. ಅಮೆರಿಕಾದಿಂದ ಇಂಡಿಯಾಕ್ಕೆ ಯಾರಾದರೂ ನೇರ ಗೆರೆಯ ಪೈಪ್ ಬಿಡಲು ಸಾಧ್ಯವೇ, ಬೆಳಕು ಮರಳಿನ ಕಣದಂತೆ ನೇರ ಚಲಿಸಲು? ಇಲ್ಲಿ ಬೆಳಕಿನ ತರಂಗ ಗುಣದ ಬಳಕೆಯಾಗುತ್ತದೆ. ಅರ್ಥಾತ್ ಬೆಳಕು ಪೈಪಿನೊಳಗೆ ಅದರ ಗೋಡೆಗೆ ಬಡಿಬಡಿದು ಚಿಮ್ಮಿ ಚಲಿಸುತ್ತ ನಮ್ಮನ್ನು ತಲುಪುತ್ತದೆ. ಬೆಳಕಿನ ಈ ಅಲೆಯ ಗುಣವನ್ನು ಸೆರೆಹಿಡಿಯುವುದು ಯೂಲರ್ ಈಕ್ವೇಶನ್ನಿನ ಒಂದು ಭಾಗ!!
ಇಲ್ಲಿಗೆ ಗಣಿತಕ್ಕೆ ಬಲವಾದ ಬ್ರೇಕ್ ಒತ್ತಿ ನಿಲ್ಲಿಸೋಣ.

ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಳ್ಳುತ್ತ ಇಷ್ಟವಾದುದನ್ನು ಕೊಂಡುಕೊಳ್ಳುತ್ತ ಇಷ್ಟವಾದುದನ್ನು ತಿನ್ನುತ್ತ ಕಷ್ಟಗಳನ್ನು ನೀಗಿಸುತ್ತ ಬದುಕು ಸಾಗಿಸುವ ಹಲವಾರು ಮಂದಿ ನಮ್ಮ ಸ್ನೇಹಿತವರ್ಗದಲ್ಲಿ ಬಂಧುವರ್ಗದಲ್ಲಿ ಸುತ್ತಮುತ್ತಲಿನ ಸಮಾಜದಲ್ಲಿದ್ದಾರೆ. ಇವರಿಗೆ ಸಂವಿಧಾನ ಸೆಕ್ಯುಲರಿಸ್ಮ್ ಜಾತ್ಯಾತೀತತೆ ಸಮಾಜವಾದ ಎಡ ಪಂಥ ಬಲ ಪಂಥ ಧಾರ್ಮಿಕ ರಾಜಕೀಯ ಇವ್ಯಾವುವೂ ಗೊತ್ತಿರಲ್ಲ. ತಲೆ ಕೆಡಿಸಿಕೊಳ್ಳಲ್ಲ. ಇವರು ಕೆಟ್ಟವರಲ್ಲ. ಹಾಗೆ ನೋಡಿದರೆ ನೂರಿಪ್ಪತ್ತು ಕೋಟಿಯಲ್ಲಿ ಇವರೇ ಅಪಾರ ಸಂಖ್ಯೆಯಲ್ಲಿರುವವರು. ಮೇಲಿದ್ದಕ್ಕೆಲ್ಲ ತಲೆಕೆಡಿಸಿಕೊಳ್ಳುವವರು ಕೆಲವೇ ಕೆಲವು ಕೋಟಿಯಿದ್ದಿರಬಹುದು. ದಿನವೂ ಬೊಂಬಡ ಹೊಡೆದುಕೊಂಡು ಸದಾ ಗದ್ದಲದಲ್ಲಿ ಭಾಗಿಯಾಗಿರುವವರೂ ಈ ಕೆಲವೇ ಕೋಟಿ ಮಂದಿ. ಈ ಅಪಾರ ಸಂಖ್ಯೆಯವರು ಈ ಗದ್ದಲದ ಹೊತ್ತಲ್ಲೂ ನಿರ್ವಿಣ್ಣರಾಗಿ ತಮ್ಮದೇ ಕಷ್ಟ ಕೋಟಲೆಗಳಲ್ಲಿ ಮುಳುಗಿರುತ್ತಾರೆ.

ಇಂಥವರಿಗೆ… ಉದಾಹರಣೆಗೆ ಅಡಿಗೆಮನೆಯಲ್ಲಿ ದುಡಿವ ನನ್ನೊಬ್ಬ ದೊಡ್ಡಮ್ಮನೋ ಹೊಲದಲ್ಲಿ ಉಳುವ ಚಿಕ್ಕಪ್ಪನೋ ಅವರ ಬಳಿಹೋಗಿ ಸೆಕ್ಯುಲರಿಸ್ಮ್ ಗೆ ಪೆಟ್ಟಾಗ್ತಿದೆ ಸಂವಿಧಾನ ಒಡೆಯುತ್ತಿದೆ ಎಂದುಬಿಟ್ಟರೆ ಅವರೆಷ್ಟು ಕಕ್ಕಾಬಿಕ್ಕಿಯಾಗಬೇಡ! ನಮ್ಮೂರಲ್ಲಂತೂ ತೀರ ಇತ್ತೀಚಿನವರೆಗೆ “ಹಿಂದೂ” ಎಂಬ ಪದಪರಿಚಯ ಇದ್ದಿರಲಿಲ್ಲ ಎಂಬುದು ನನ್ನ ಬಲವಾದ ಅನುಭವದಿಂದ ಮೂಡಿದ ಅಭಿಪ್ರಾಯ. ಮತ್ತು ಪಕ್ಕದಲ್ಲಿಯೆ ಮುಸ್ಲಿಮರು ಬಹುಸಂಖ್ಯಾತರಿರುವ ಪಟ್ಟಣವು. ನಾನು ಕೇಳ್ಪಟ್ಟಿರುವಂತೆ ಅಲ್ಲಿ ಬಳಸುವ ಪದಪ್ರಯೋಗವು, “ನಮ್ಮ ಜನ”, “ನಿಮ್ಮ ಜನ”. ವಕ್ಕಲಿಗರು. ಮಾದಿಗರು. ಗೊಲ್ಲರು. ದಾಸರು. ಬ್ರಾಂಬ್ರು. ಸಾಬ್ರು. ಹೀಗೆ. ಅರ್ಥಾತ್ ವರ್ಗ ಪ್ರಜ್ಞೆ ಇದೆ, ಧಾರ್ಮಿಕಪ್ರಜ್ಞೆಯಲ್ಲ ಎಂದು ಹೇಳಲು ಬಯಸುತ್ತಿರುವೆ. ಇವರ ಬಳಿ ಹೋಗಿ ಅಚ್ಚ ಕನ್ನಡದಲ್ಲಿ ಜಾತ್ಯಾತೀತತೆಗೆ ಹೊಡೆತ ಬಿದ್ದಿದೆ ಎಂದರೆ ಮೂತಿ ತಿರುವುತ್ತಾರೆ… ಮುಂಚೆ ಅದೆಲ್ಲಿತ್ತು.. ಅದರ ಅಗತ್ಯವೇನಿದೆ ಎಂದು! ಅರ್ಥಾತ್ ಇವರಿಗೆ ಜಾತ್ಯಾತೀತತೆಯ ಅರ್ಥ ಸ್ಪಷ್ಟ ಗೊತ್ತಿದೆ. ಮತ್ತು ಅದು ಒಗ್ಗದ ಒಗರು ಎಂದೂ ಗೊತ್ತಿದೆ.

ಸೆಕ್ಯುಲರಿಸ್ಮ್ ನ ಇನ್ನೊಂದು ಅಂಗ, ಅದುವೇ ಧರ್ಮಾತೀತತೆ ಅಥವಾ ಧರ್ಮ ನಿರಪೇಕ್ಷತೆ ಇವರಿಗೆ ಪರಿಚಯವಿಲ್ಲ, ಕಲ್ಪನೆಯಲ್ಲೂ ಇಲ್ಲ. ಇದು ಒಂದು ಬಗೆಯ ಮುಗ್ಧತೆ ಮತ್ತು ನನ್ನಿಷ್ಟದ ಮುಗ್ಧತೆ. (ನನ್ನ ಅಭಿಪ್ರಾಯದಲ್ಲಿ ಇದು ಧರ್ಮಾತೀತತೆ(ಮತ ಆತೀತ) ಎಂದಿರಬೇಕು, ನಾವು ಎಲ್ಲಿಯೂ ಸೆಕ್ಯುಲರಿಸ್ಮ್ ಎಂದರೆ ಜಾತಿ ನಿರಪೇಕ್ಷತೆ ಎಂದು ಹೇಳುವುದಿಲ್ಲ ತಾನೆ. ಒಂದು ಕಡೆ ಆತೀತತೆ ಇನ್ನೊಂದು ಕಡೆ ನಿರಪೇಕ್ಷತೆ ಎಂಬ ಭಿನ್ನ ಅರ್ಥೈಸುವಿಕೆ ವಿಶ್ವಮಾನವತೆಗೂ ಸೆಕ್ಯುಲರಿಸ್ಮ್ ಗೂ ಮಾಡುವ ಅರ್ಥ ಕೆಡಿಸುವ ವಂಚನೆ!) .

ಮೇಲೆ ವಿವರಿಸಿದ್ದು ಮುಗ್ಧ ಪಂಗಡ. ಇನ್ನೊಂದು ಪಂಗಡವಿದೆ. ಇದನ್ನು ತಿಳಿದ ಪಂಗಡವೆಂದು ಹೆಸರಿಸಲು ಇಚ್ಛಿಸುತ್ತೇನೆ. ಇವರಿಗೆ ಹಿಂದೂ ಮುಸಲ್ಮಾನ ಕ್ರಿಶ್ಚಿಯನ್.. ಈ ಧರ್ಮಗಳ ಮೂಲ ಸ್ಥಾನ ಇನ್ನಿತರೆ ವಿವರಗಳು ಗೊತ್ತು. ಇವರ ಮಟ್ಟಿಗೆ ಭಾರತವೆಂದರೆ ಹಿಂದೂ ಹಿಂದೂವೆಂದರೆ ಭಾರತ. ಮತ್ತು ಇದರಲ್ಲಿ ಹೆಚ್ಚಿನ ದುರುದ್ದೇಶವಿಲ್ಲದೆ ಯಾರನ್ನೋ ಕತ್ತು ಹಿಡಿದು ಹೊರಹಾಕಬೇಕು ಎಂಬ ಕ್ರೌರ್ಯವಿಲ್ಲದೆ ನಮ್ಮ ಮನೆ ನಮ್ಮ ಸ್ವತ್ತು ಅವರ ಮನೆ ಅವರ ಸ್ವತ್ತು ಎಂಬ ತಾರ್ಕಿಕ ಅರಿವು. ಇಂತವರು ಬಹುತೇಕ ನಮ್ಮ ಸ್ನೇಹಿತ ಬಂಧುವರ್ಗದಲ್ಲೆ ಸಿಗುತ್ತಾರೆ.

ಇಪ್ಪತ್ತು ಕೋಟಿಯಲ್ಲಿ ಅಪಾರ ಸಂಖ್ಯಾವರ್ಗವೆಂದನಲ್ಲ ಅದು ಮೇಲಿನ ಎರಡೂ ಪಂಗಡಗಳ ಒಟ್ಟು ಮೊತ್ತ. ಸೆಕ್ಯುಲರ್ ಎನ್ನುವವರು ಮತ್ತು ಸಿಕ್ಕುಲರ್ ಎನ್ನುವವರು ಇನ್ನುಳಿದ ಕೆಲವು ಕೋಟಿಗಳ ಮೊತ್ತ. ಸೆಕ್ಯುಲರ್ ಎನ್ನುವವರಿಗೆ ಅದರ ಅರ್ಥ ಉಪಯೋಗ ಗೊತ್ತಿದ್ದು ಅವರಿಗೆ ಇಲ್ಲಿ ಹೇಳುವುದು ಏನೂ ಇಲ್ಲ. ಸಿಕ್ಕುಲರ್ ಎಂಬುವವರಿಗೆ, ಅವರಲ್ಲಿನ ಸ್ಪಷ್ಟತೆ ಮತ್ತು ಉದ್ದೇಶ ಎರಡೂ ಸಮಾ ಇರುವುದರಿಂದ ಅವರಿಗೂ ಹೇಳಲಿಕ್ಕೇನು ಇಲ್ಲ. ಈ ಅಪಾರಸಂಖ್ಯಾವರ್ಗದವರೊಂದಿಗೆ ಒಂದಿಷ್ಟು ಮಾತಾಡಬೇಕು, ಮೇಲಿನ ಯೂಲರ್ ನ ಐಡೆಂಟಿಟಿ ಈಕ್ವೇಶನ್ ಮೂಲಕ.

ಇಂದು ನಾವೆಲ್ಲ ಮೊಬೈಲ್ ಕಂಪ್ಯೂಟರ್ ಇಂಟರ್ನೆಟ್ ಬಳಸುತ್ತಿದ್ದೇವೆ. ಇವೆಲ್ಲ ಇಷ್ಟು ಸಮರ್ಪಕವಾಗಿ ಕೆಲಸ ಮಾಡುವುದರ ಹಿಂದೆ ಯಾವುದೋ ಒಂದು ಯೂಲರ್ ಐಡೆಂಟಿಟಿ ಎಂಬ ಗಣಿತದ ಅತ್ಯದ್ಭುತ ಅತಿ ಸುಂದರ ಕಾವ್ಯಾತ್ಮಕ ಈಕ್ವೇಶನ್ ಕಾಣಿಕೆಯಿದೆ ಎಂಬುದು ಬಹುತೇಕರಿಗೆ ಗೊತ್ತಿರುವುದಿಲ್ಲ, ಗೊತ್ತಿರಲೂ ಬೇಕಿಲ್ಲ. ಅಂತೆಯೆ ನಮ್ಮ ದೇಶ ಇತರ ಮುಂದುವರೆದ ದೇಶಗಳ ಹಾದಿಯಲ್ಲಿ ಸುಸ್ಥಿತಿಯ ಪಥದಲ್ಲಿ ಸಾಗುತ್ತಿದೆಯೆಂದರೆ ಅದರ ಸಂವಿಧಾನದಲ್ಲಿ ಸೆಕ್ಯುಲರಿಸ್ಮ್ ಎಂಬ ಸುಂದರ ಈಕ್ವೇಶನ್ ಅಳವಡಿಸಲಾಗಿದೆ ಎಂಬುದು.

ಇವತ್ತು ಯಾವ ಯಾವ ದೇಶಗಳು ಮುಂದುವರೆದಿವೆ ಯಾವ ದೇಶಗಳು ಹಿಂದುಳಿದಿವೆ ಎಂಬುದನ್ನು ತಾಳೆ ಹಾಕಿ. ಯೋಚಿಸಿ ನೋಡಿ, ಬ್ರಿಟೀಷರ ಮುಘಲರ ಮುಂಚೆ ಇದು ಹಿಂದೂಸ್ಥಾನವೇ ಆಗಿದ್ದರೂ ಸ್ವತಂತ್ರ ಸಿಕ್ಕಿದ ನಂತರ ನಮ್ಮ ಹಿರಿಯರೆಲ್ಲರೂ ಸೇರಿ ಈ ದೇಶ ಒಂದು ಧರ್ಮಕ್ಕೆ ಸೀಮಿತವಾಗಿರದೆ ಎಲ್ಲರಿಗೂ ಸ್ಥಾನವಾಗಿರಲಿಕ್ಕೆ ಯಾಕೆ ಅವಕಾಶ ಮಾಡಿಕೊಟ್ಟರೆಂದು. ನಾವೂ ಇನ್ನೊಂದು ಪಾಕಿಸ್ತಾನವೋ ಇಂಡೋನೇಶಿಯಾವೋ ನೇಪಾಳವೋ ಆಗಿರಬಹುದಿತ್ತಲ್ಲವೇ? ನಾವು ಇವತ್ತಿಗೂ ಧರ್ಮ ಧರ್ಮ ಜಾತಿ ಜಾತಿ ಎಂದು ಕಿತ್ತಾಡುತ್ತಿರುವಾಗ ಎಪ್ಪತ್ತು ವರ್ಷಗಳ ಹಿಂದೆಯೆ ಈ ದೇಶವು ಜಾತ್ಯಾತೀತವಾಗಿ ಧರ್ಮಾತೀತವಾಗಿ ಮುನ್ನಡೆಯಬೇಕೆಂದು ಧೃಡವಾಗಿ ನಿರ್ಧರಿಸಿ ಸಂವಿಧಾನ ರಚಿಸಿ ಅದೇ ಕಾಲದಲ್ಲಿ ಸ್ವತಂತ್ರ ಪಡೆದ ಇನ್ನಿತರ ದೇಶಗಳನ್ನು ಹಿಂದಿಕ್ಕಿ ಇವತ್ತು ಪಾಶ್ಚಾತ್ಯ ದೇಶಗಳಿಗೆ ಸಮನಾಗಿ ನಿಲ್ಲುವ ಹಂತಕ್ಕೆ ತಂದು ನಿಲ್ಲಿಸಿರುವ ಹಿಂದಿನ ಮಹಾನುಭಾವರ ದೂರಾಲೋಚನೆಯ ಬಗ್ಗೆ ಯೋಚಿಸಿ. ಸೆಕ್ಯುಲರಿಸ್ಮ್ ಎಂಬುದು ಅರ್ಥ ಮಾಡಿಕೊಳ್ಳಲು ತರ್ಕಕ್ಕೆ ಸಿಗಲು ಕಷ್ಟವಾದರೆ ಮೊಬೈಲ್ ಕೆಲಸ ಮಾಡಲು ತಜ್ಞರು ಬಳಸಿರುವ ಯೂಲರ್ ಈಕ್ವೇಶನ್ನಿನಂತೆ ದೇಶ ಮುನ್ನಡೆಯಲು ಸಂವಿಧಾನ ತಜ್ಞರು ಅಳವಡಿಸಿರುವ ಒಂದು ಈಕ್ವೇಶನ್ ಎಂದು ಅರ್ಥ ಮಾಡಿಕೊಳ್ಳಿ.

ಗಣಿತದ ಮೂಲಕ ಹೇಳುವುದಾದರೆ ಗಣಿತದಲ್ಲಿರುವುದೆಲ್ಲವೂ ಜಗತ್ತಿನಲ್ಲಿ ಮನುಷ್ಯ ಹುಟ್ಟುವುದಕ್ಕೆ ಮುನ್ನವೆ ಇತ್ತು. ಅವೆಲ್ಲವೂ ಜಗತ್ತಿನ ಸೂತ್ರಗಳು. ಮನುಷ್ಯ ತಾನೊಂದು ಭಾಷೆ(ಗಣಿತ) ಕಂಡುಹಿಡಿದುಕೊಂಡು ಆ ಭಾಷೆಯಲ್ಲಿ ಜಗತ್ತಿನ ಸೂತ್ರಗಳನ್ನೆಲ್ಲವನ್ನೂ ದಾಖಲಿಸುತ್ತ ಹೋದ. ನ್ಯೂಟನ್ ಹುಟ್ಟದಿದ್ದರೆ ಸೇಬು ಕೆಳಗಿಂದ ಮೇಲಕ್ಕೆ ಜಿಗಿಯುತ್ತಿರಲಿಲ್ಲ ತಾನೆ. ಸೆಕ್ಯೂಲರಿಸ್ಮ್ ಕೂಡ ಹಾಗೇನೆ. ಪ್ರಕೃತಿಯ ಕಾಲಮಾನಕ್ಕೆ ಹೋಲಿಸಿದರೆ ಧರ್ಮಗಳು ತೀರ ಇತ್ತೀಚೆಗಿನ ಸಂಗತಿಗಳು. ಅದಕ್ಕೂ ಮೊದಲು ನಮ್ಮ ಪೂರ್ವಿಕರು ಸೆಕ್ಯುಲರ್ ಆಗಿಯೆ ಇದ್ದರು. ಧರ್ಮಗಳು ಹುಟ್ಟಿದ ನಂತರ ನಾವು ಬೇರ್ಪಡುತ್ತ ಹೋದೆವು.

ಪೈ(π)3.14 ಎಂಬುದು ಕೇವಲ ಸಂಖ್ಯೆಯಲ್ಲ, ಅದು ಜಗತ್ ಸೂತ್ರ. ಅದನ್ನು ನಾವು ಸಂಖ್ಯಾಶಾಸ್ತ್ರದ ಮೂಲಕ ಕಂಡುಕೊಂಡೆವು ಮಾತ್ರ. ಆ ತಿಳಿವಿನ ಮೂಲಕ ನಾಗರೀಕತೆ ಇನ್ನಷ್ಟು ಮುಂದುವರೆಯಿತು. ಅಂತೆಯೆ ಧರ್ಮ ಯುಗಗಳ ನಂತರ ತೀರ ಇತ್ತೀಚೆಗೆ ಸೆಕ್ಯೂಲರಿಸ್ಮ್ ಎಂಬುದನ್ನು ನಾವು ಪುನಃ ಕಂಡುಕೊಂಡೆವು. ಅದನ್ನು ಅಳವಡಿಸಿಕೊಂಡರೆ.. ನಾಗರೀಕತೆಯು ಮುಂದಿನ ಹಂತಕ್ಕೆ ಜಿಗಿಯಬಲ್ಲುದು. ಪುನಃ ಧರ್ಮಗಳಿಗೆ ಜೋತುಬಿದ್ದೆವೋ, ಎರಡು ಮೆಟ್ಟಿಲು ಕೆಳಗೆ ಜಾರುವೆವು.

ಸೆಕ್ಯೂಲರಿಸ್ಮ್ ಎಂಬುದು ಶಬ್ಧ ಭಂಢಾರದ ಪ್ರಕಾರ ಸರ್ಕಾರವು ಧರ್ಮನಿರಪೇಕ್ಷಿತವಾಗಿರುವುದು ಎಂದರ್ಥ. ನಾನು ಇಲ್ಲಿ ಅದನ್ನಷ್ಟೆ ಹೇಳುತ್ತಿಲ್ಲ. ಮನುಷ್ಯ ತನ್ನ ಮನಸ್ಸಿನಲ್ಲಿ ತನ್ನ ಮನೆಯಲ್ಲಿ ತನ್ನ ಸಮಾಜದಲ್ಲಿ ಅಳವಡಿಸಿಕೊಳ್ಳಬೇಕಾದ ಸೆಕ್ಯೂಲರಿಸ್ಮ್ ಬಗ್ಗೆ ಹೇಳುತ್ತಿರುವೆ. ಎಷ್ಟೋ ದೇಶಗಳು ಸಾಂವಿಧಾನಿಕವಾಗಿ ಸೆಕ್ಯುಲರ್ ಇದ್ದೂ ಆಚರಣೆಯಲ್ಲಿ ಧರ್ಮಬದ್ಧರಾಗಿ ಯಾವ ಸ್ಥಿತಿ ತಲುಪಿದ್ದಾರೆ ಎಂಬುದನ್ನು ಮನಗಾಣಲು ಟರ್ಕಿಯನ್ನು ಗಮನಿಸಿ. ಆಫ್ರಿಕಾ ದೇಶಗಳನ್ನು ಗಮನಿಸಿ. ಮತ್ತು ಇನ್ನೊಂದು ಎಚ್ಚರಿಕೆಯ ಮಾತು. ಧರ್ಮಾತೀತರಾಗಿಯೆಂದರೆ ಬದುಕಿಗೆ ಮನಸಿಗೆ ಅಗತ್ಯವಿರುವ ಧರ್ಮವನ್ನು ತ್ಯಜಿಸಿಯೆಂದಲ್ಲ. ನಾನು ಹಿಂದೂ ನಾನು ಮುಸ್ಲಿಂ ನಾನು ಕ್ರಿಶ್ಚಿಯನ್ ಅವನು ಇನ್ನೊಂದು ಎಂಬ ಮತ ಭಾವವನ್ನು ತೊರೆಯಿರಿ ಎಂದರ್ಥ.

ಇದಿಷ್ಟಾಯಿತು, ವ್ಯಾವಹಾರಿಕವಾಗಿ ಒಂದು ಮಾತು. ವ್ಯವಹಾರ ಎಂದರೆ ವ್ಯಾಪಾರ. ವ್ಯಾಪಾರಕ್ಕೆ ಸೆಕ್ಯುಲರಿಸ್ಮ್ ಅತ್ಯಗತ್ಯ. ಜಗತ್ತು ವ್ಯಾಪಾರಕ್ಕೆ ತೆರೆದುಕೊಂಡದ್ದೇ ಸೆಕ್ಯುಲರ್ ಆಗುವ ಮೂಲಕ. ನಿಮ್ಮ ಬೆಳೆಯನ್ನು “ನಾನು ಆ ಜಾತಿಯವನಿಗೆ ಮಾರಲ್ಲ, ಈ ಧರ್ಮದವನಿಗೆ ಮಾರಲ್ಲ” ಎಂದು ಕುಳಿತರೆ.. ನಿಮ್ಮ ಮನೆಯನ್ನು “ನಾನು ಮಾಂಸ ತಿನ್ನುವವನಿಗೆ ಬಾಡಿಗೆ ಕೊಡಲ್ಲ, ದನ ತಿನ್ನುವವನಿಗೆ ಕೊಡಲ್ಲ” .. ಎಂದು ಮೊಂಡು ಬಿದ್ದರೆ ನಿಮ್ಮದೇ ವ್ಯಾಪಾರಕ್ಕೆ ಕುತ್ತು. ಸಂಕುಚಿತತೆ ತೊರೆದ ಹೆಣ್ಣು ಮನೆಯಿಂದ ಹೊರಬಿದ್ದು ಸೊಪ್ಪು ಹೂಹಣ್ಣು ತರಕಾರಿ ಹೊತ್ತು ವ್ಯಾಪಾರಕ್ಕಿಳಿದು ಮನೆಯನ್ನುದ್ಧರಿಸುತ್ತಾಳೆ. ನಮ್ಮ ಹೆಂಗಸರನ್ನು ಮನೆಯಿಂದ ಕಾಲು ತೆಗೆಯಲು ಬಿಡಲ್ಲ ಎಂದು ಸಂಕುಚಿತನಾದವನು ಅಲ್ಲೇ.. ಅಲ್ಲೇ ಉಳಿಯುತ್ತಾನೆ.

ಈ ಬಗೆಯ ಸಂಕುಚಿತತೆಯನ್ನು ತೊರೆಯುವುದೇ ಸೆಕ್ಯುಲರಿಸ್ಮ್ ನ ಒಂದು ಅಂಶ. ಒಂದು ದೇಶದ ಎಕಾನಮಿ, ಅರ್ಥ ವ್ಯವಸ್ಥೆ ತಳಹಿಡಿಯುತ್ತಿದೆಯೆಂದರೆ.. ಹಲವಾರು ಕಾರಣಗಳಿರುತ್ತವೆ. ಅವುಗಳಲ್ಲಿ ಆ ದೇಶದ ಸಮಾಜದವು ಹೆಚ್ಚು ಸಂಕುಚಿತಗೊಳ್ಳುತ್ತಿದೆ ಎಂಬುದೂ ಇರುತ್ತದೆ. ದಿನೇ ದಿನೇ ನಾನು ನನ್ನದೇ ಎಂಬುದು ಜಾಸ್ತಿಯಾಗುತ್ತಿರುವವನ ಬಳಿ ವ್ಯಾಪಾರ ಮಾಡುವುದು ಬಲುಕಷ್ಟ. ವ್ಯಾಪಾರವು ಸಹಿಷ್ಣುತೆ, ಒಳಗೊಳ್ಳುವಿಕೆ, ಬಿಟ್ಟುಕೊಡುವಿಕೆ ಬಯಸುತ್ತದೆ. ವ್ಯಾಪಾರವೆಂದರೆ ಕುಟಿಲತೆಯಲ್ಲ. ವ್ಯಾಪಾರಿಗರೆಲ್ಲರೂ ಚಾಣಾಕ್ಷರೇ ಇರುವುದರಿಂದ ಅಲ್ಲಿ ಕುಟಿಲತೆ ತೋರಿಸುವವನ ಬಂಡವಾಳ ಬಹುಬೇಗ ಹೊರಬೀಳುತ್ತದೆ. Capitalism has it’s own internal socialism. ಧಾರ್ಮಿಕ ಬಂಡವಾಳಶಾಹಿತನದ ಉತ್ತುಂಗದಲ್ಲಿ ಕ್ರಿಶ್ಚಿಯನ್ ಕ್ಯಾಪಿಟಲಿಸ್ಮ್, ಮುಸ್ಲಿಂ ಕ್ಯಾಪಿಟಲಿಸ್ಮ್ ಮೆರೆದು ಈಗ ನೆಲಕಚ್ಚಿವೆ. ಈಗ ಹಿಂದೂ ಕ್ಯಾಪಿಟಲಿಸ್ಮ್ ಎಂದು ಶುರು ಮಾಡಿದರೂ ಕಳಿಂಗ ಯುದ್ಧದ ನಂತರ ಅಶೋಕನು ರಣರಂಗಕ್ಕೆ ಕಾಲಿಟ್ಟಾಗ ಉಂಟಾಗುವ ಶೋಕವಷ್ಟೆ ಎದುರು ಕಾದಿರುವುದು.