ನಾವು ಸ್ಕೂಲಿನಲ್ಲಿರುವಾಗ ಮೂವರು ಗೆಳತಿಯರಿದ್ದೆವು. ಅವತ್ತು ಫಿಸಿಕ್ಸ್ ಕ್ಲಾಸ್ ನಡೆಯುತ್ತಿತ್ತು. ನಮ್ಮ ಪಾಪದ ಫಿಸಿಕ್ಸ್ ಮೇಷ್ಟ್ರು ಹಿಂದೆ ಬಂದರೆ ಒದೆಯದ, ಮುಂದೆ ಬಂದರೆ ಹಾಯದಷ್ಟು ಒಳ್ಳೆಯವರು. ನಮಗೆ ವಿಜ್ಞಾನದ ವಿಷಯವನ್ನು ಕೇಳಿಸಿಕೊಂಡರೂ ತಲೆಗೆ ಏನೇನೂ ಹತ್ತುತ್ತಿರಲಿಲ್ಲವಾದ್ದರಿಂದ ಸಮಯ ವ್ಯರ್ಥ ಮಾಡುವುದು ಬೇಡವೆಂದು ನಿರ್ಧರಿಸಿ ಒಂದು ಗಹನ ಮಾತುಕತೆಯಲ್ಲಿ ತಲ್ಲೀನರಾಗುವುದು ನಮ್ಮ ಎಂದಿನ ಅಭ್ಯಾಸ. ಅವತ್ತಿನ ದಿನ ಕನ್ನಡದ ಹಾಡುಗಳಲ್ಲಿ ನಮ್ಮ ಮೆಚ್ಚಿನದ್ದು ಯಾವುದು ಅನ್ನುವುದರ ಬಗ್ಗೆ ಮಾತಾಡುತ್ತಿದ್ದೆವು. ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ ನನ್ನ ಇಷ್ಟದ ಹಾಡು ಅಂದ ನನ್ನ ಗೆಳತಿ ಎದೆಯಾಂತರಾಳದಲಿ ಪುಟಿವ ಕಾರಂಜಿಯಲಿ ಒಂದಾಗಿ ಕೂಗಲಿ ಕನ್ನಡ ಕನ್ನಡ ಅನ್ನುವ ಸಾಲು ಎಷ್ಟು ಇಷ್ಟ ಅಂತ ವರ್ಣಿಸಿದಳು. ನಾನು ಇಳಿದು ಬಾ ತಾಯಿ ಇಳಿದು ಬಾ ತುಂಬ ಇಷ್ಟ ಅಂದಿದ್ದೆ. ಮೊದಲಿಗೆ ಹಾಡು ಶುರುವಾಗುವಾಗಿನ ಅವರ ತುಂಬು ಕಂಠ ನನಗೆ ಹುಚ್ಚು ಹಿಡಿಸುವಷ್ಟು ಇಷ್ಟ ಅಂದಿದ್ದೆ. ಮತ್ತೊಬ್ಬಳು ನನಗೆ ಮೌನವೇ ಆಭರಣ ಹಾಡು ಇಷ್ಟ. ಅದರಲ್ಲಿ ಹೆಜ್ಜೆಯನಿಡಲು ಹೂವರಳುವುದು ಅಂತ ಹಾಡಿದರೆ ಮಲ್ಲಿಗೆ ಹೂ ಅರಳುವ ಅನುಭವವೇ ಆದ ಹಾಗಾಗುತ್ತೆ ಅಂದಿದ್ದಳು. ಹೀಗೆ ಶುರುವಾದ ಮಾತು ಆ ಹಾಡಿನ ಪದಪದಗಳನ್ನೂ ನಾವು ಮೆಚ್ಚಿ, ಸಣ್ಣ ದನಿಯಲ್ಲಿ ಹಾಡಿಕೊಳ್ಳುವವರೆಗೂ ಹೋಯ್ತು. ಈ ಮೂರೂ ಹಾಡುಗಳ ಹಿಂದಿನ ಮೋಡಿಯ ದನಿ ನಮ್ಮ ಪಿ.ಬಿ.ಶ್ರೀನಿವಾಸ್ ಅವರದ್ದು. ಹಾಗಾಗಿ ಅವರನ್ನು ಹುಚ್ಚಾಗಿ ಪ್ರೀತಿಸುತ್ತಿದ್ದ ನಾವು ‘ಎಂಥ ಚೆಂದಕ್ಕೆ ಹಾಡ್ತಾನೆ ನೋಡು ಕಳ್ಳ’ ಅಂತ ಸಲ್ಯೂಟ್ ಮಾಡಿದ್ದಾಯ್ತು (ಏಕವಚನ ಉಪಯೋಗಿಸುವುದು ಇಲ್ಲಿ ಪ್ರೀತಿಯ ಸಂಕೇತ ಮಾತ್ರ ಆಗಿತ್ತು, ಅಗೌರವದ ಸಂಕೇತವಾಗಿರಲಿಲ್ಲ… ದೇವರನ್ನು ಏಕವಚನದಲ್ಲಿ ಮಾತಾಡಿಸುತ್ತೇವಲ್ಲ ಆ ಥರ!). ಕಿಟಕಿಯಾಚೆ ನಿಂತು ನಮ್ಮ ಮಾತುಗಳನ್ನು ಹೆಡ್‌ಮಾಸ್ಟರ್ ಕೇಳಿಸಿಕೊಳ್ತಿದ್ದಾರೆ ಅನ್ನುವ ಸುಳಿವು ಕೂಡಾ ಇಲ್ಲದ ನಾವು ನಮ್ಮದೇ ಲೋಕದಲ್ಲಿದ್ದೆವು. ಅವರು ಕೇಳುವಷ್ಟು ಹೊತ್ತೂ ಕೇಳಿ, ಆ ನಂತರ ದೇವರ ಹಾಗೆ ದಿಢೀರನೆ ಪ್ರತ್ಯಕ್ಷರಾಗಿ, ನಮ್ಮನ್ನು ಕ್ಲಾಸಿನಿಂದ ಹೊರದಬ್ಬಿ, ತಮ್ಮ ರೂಮಿಗೆ ಬರುವ ಹಾಗೆ ಆದೇಶಿಸಿದ್ದರು. ನಾವು ಒಂದು ಚೂರೂ ಅಳುಕಿಲ್ಲದೇ ಅವರ ಮುಂದೆ ಹೋಗಿ ನಿಂತಿದ್ದೆವು. ಅವರು ಒಂದಿಷ್ಟು ಹೊತ್ತು ಬಾಯಿಗೆ ಬಂದಿದ್ದೆಲ್ಲ ಬಯ್ದ ನಂತರ ಮನೆಗೆ ಹೋಗಿ ಅಪ್ಪ-ಅಮ್ಮನನ್ನು ಕರೆದುಕೊಂಡು ಬನ್ನಿ ಅಂತ ಸ್ಕೂಲಿನಿಂದ ಕಳಿಸಿಬಿಟ್ಟಿದ್ದರು. ನಾವು ಆರಾಮವಾಗಿ ಮನೆಗೆ ಹೋಗಿದ್ದೆವು. ಹೊತ್ತಿಗಿಂತ ಮುಂಚೆ ಬಂದವರನ್ನು ಕಂಡು ಹುಬ್ಬೇರಿಸಿದ ಗೆಳತಿಯ ಅಮ್ಮ ಕಾರಣ ಕೇಳಿದಾಗ ನಾವು ‘ನೋಡಿ ಹಾಡಿನ ವಿಷಯ ಮಾತಾಡ್ತಿದ್ವಿ ಅಂತ ಸ್ಕೂಲಿಂದ ಓಡಿಸಿದ್ದಾರೆ. ನಾನು ಮಾತಾಡ್ತಿದ್ದಿದ್ದು ಪಿ.ಬಿ.ಶ್ರೀನಿವಾಸ್ ಹಾಡಿನ ಬಗ್ಗೆ. ಎಂಥ ಒಳ್ಳೆ ಹಾಡುಗಳ ಬಗ್ಗೆ ಮಾತಾಡ್ತಿದ್ದರೆ ಸಿನೆಮಾ ಹಾಡಿನ ಬಗ್ಗೆ ಮಾತಾಡ್ತಿದ್ವಿ ಅಂತ ಸ್ಕೂಲಿಂದ ಓಡಿಸಿದ್ದಾರಲ್ಲ .. ಇದು ನ್ಯಾಯಾನಾ?!’ ಅಂತ ವಾದಿಸಿದ್ದೆವು! ಪಿ.ಬಿ.ಶ್ರೀನಿವಾಸ್ ಹಾಡುಗಳೆಂದರೆ ಅಂಥ ಒಳ್ಳೆಯ ಅಭಿರುಚಿಯ ಹಾಡುಗಳು, ಅದಕ್ಕೆ ಒದ್ದು ಓಡಿಸಿದ್ದು ತೀರ ಅನ್ಯಾಯ ಅನ್ನುವ ಧಾಟಿಯಲ್ಲಿನ ನಮ್ಮ ವಾದಕ್ಕೆ ನಮ್ಮ ಅಪ್ಪ-ಅಮ್ಮಂದಿರು ನಗಬೇಕೋ, ಅಳಬೇಕೋ ತಿಳಿಯದೇ ತಬ್ಬಿಬ್ಬಾಗಿದ್ದರು! ಮತ್ತೆ ಸ್ಕೂಲಿಗೆ ನಮ್ಮನ್ನು ಎಳೆದುಕೊಂಡು ಬಂದು, ಹೆಡ್‌ಮಾಸ್ಟರ್ ಕಾಲಿಗೆ ಬೀಳಿಸಿ, ಕ್ಲಾಸಿನೊಳಗೆ ಸೇರಿಸಿ ನಮ್ಮ ಅಪ್ಪ-ಅಮ್ಮಂದಿರು ಹೊರಟ ನಂತರವೂ ನಮಗೆ ಪಿ.ಬಿ.ಶ್ರೀನಿವಾಸ್ ಹಾಡು ಹಾಡಿದರೆ ಅದಕ್ಕೆ ಒದ್ದು ಓಡಿಸಿದ್ದು ಮೇಷ್ಟರದ್ದೇ ತಪ್ಪು ಅನ್ನಿಸಿತ್ತು!

ಅವತ್ತು, ಎರಡು ವರ್ಷದ ಹಿಂದೆ, ಪಿ.ಬಿ.ಎಸ್ ಅವರನ್ನು ಭೇಟಿ ಮಾಡಲು ನಾನು ಶರವೇಗದಲ್ಲಿ ಹೋಗ್ತಿದ್ದಾಗ ಇದು ನೆನಪಾಗಿ ಒಬ್ಬಳೇ ನಕ್ಕಿಕೊಂಡಿದ್ದೆ. ಅವತ್ತಿನ ದಿನದ ಆ ಭೇಟಿಗೆ ಕಾರಣರಾಗಿದ್ದು ಗಾಯಕಿ ಬಿ.ಆರ್ ಛಾಯಾ ಮತ್ತು ಪದ್ಮಪಾಣಿಯವರು. ಪಿ.ಬಿ.ಶ್ರೀನಿವಾಸ್ ಅವರು ಒಂದು documentary ಯ ಸಲುವಾಗಿ ಅವರ ಮನೆಗೆ ಬರುತ್ತಿದ್ದಾರೆ ಅಂತ ಮಾತಿನ ಮಧ್ಯೆ ತಿಳಿಸಿದಾಗ ನಾನು ಹೇಗಾದರೂ ಮಾಡಿ ಪಿ.ಬಿ.ಎಸ್ ಅವರನ್ನು ನನಗೆ ಭೇಟಿ ಮಾಡಿಸಿ ಅಂತ ದುಂಬಾಲು ಬಿದ್ದಿದ್ದೆ. ಅವರು ಸ್ನೇಹದಿಂದ ನನ್ನನ್ನು ಮನೆಗೆ ಬರುವಂತೆ ಹೇಳಿದ್ದರು ಕೂಡಾ. ಕೊನೆಯ ಘಳಿಗೆಯಲ್ಲಿ ಏನೇನೋ ಬದಲಾವಣೆಗಳಾಗಿ ಹೋಗಿ ಅವರು ರೇಸ್ ಕೋರ್ಸ್ ರೋಡಿನ ಹೋಟೆಲ್ ಒಂದರಲ್ಲಿ ಭೇಟಿಯಾಗುವುದಂತ ನಿಗದಿಯಾಯಿತು. ನಾನಂತೂ ನನ್ನಿಡೀ ಜೀವಮಾನದಲ್ಲಿ ಗಂಟುಹಾಕಿಟ್ಟು ಕೊಂಡಿದ್ದ ಸ್ವಾಭಿಮಾನವನ್ನೆಲ್ಲ ಮೂಟೆ ಕಟ್ಟಿ ಬಿಸಾಡಿ ಛಾಯ ಮತ್ತು ಪದ್ಮಪಾಣಿಯವರ ಜೀವ ಹಿಂಡಿಬಿಟ್ಟಿದ್ದೆ. ನಾನು ಆಡಿದ್ದು ಯಾರಾದರೂ ನೋಡಿದರೆ ಪಿ.ಬಿ.ಎಸ್ ಬರುತ್ತಿರುವುದೇ ನನ್ನನ್ನು ಭೇಟಿಯಾಗಲೋ ಏನೋ ಅನ್ನುವಷ್ಟು ಆತಂಕ! ಕ್ಷಣ ಕ್ಷಣಕ್ಕೂ ಛಾಯ ಮತ್ತು ಪದ್ಮಪಾಣಿಯವರಿಗೆ ಫೋನ್ ಮಾಡಿ ಮಾಡಿ ಸುಸ್ತು ಹೊಡೆಸಿಟ್ಟಿದ್ದೆ. ಕೊನೆಯ ಘಳಿಗೆಯಲ್ಲಿ ಅಂತೂ ಅವರು ಬಂದಿದ್ದಾರೆ, ಬೇಗ ಹೊರಟು ಬಿಡುತ್ತಾರೆ, ಕೂಡಲೇ ಬನ್ನಿ ಅಂದಾಗ ಅಯ್ಯೋ ಹಾರಿಹೋಗಲು ಪುಷ್ಪಕ ವಿಮಾನ ಇದ್ದಿದ್ದರೆ ಎಷ್ಟು ಚಂದವಿತ್ತು ಅನ್ನಿಸಿತ್ತು. ಬಸವೇಶ್ವರನಗರದಿಂದ ರೇಸ್‌ಕೋರ್ಸ್ ರಸ್ತೆ ಅಷ್ಟೊಂದು ದೂರವಿದೆ ಅಂತ ಅನ್ನಿಸಿದ್ದು ಅವತ್ತೇ.

ಆ ದಾರಿಯಲ್ಲಿ ಹೋಗುವಾಗಲೇ ನನಗೆ ಹಳೆಯ ದಿನಗಳ ನೆನಪುಗಳ ಮೆರವಣಿಗೆ ಶುರುವಾಗಿದ್ದು…

ಪಿ ಬಿ ಎಸ್ ನಮಗೆ ದನಿಯಾಗಿ ಕಾಡಿದವರು ಅಷ್ಟೇ. ಅವರ ಹೊರರೂಪ ಮನಸ್ಸಿಗೆ ಬಂದರೆ, ಕರ್ಣ ಕುಂಡಲದ ಜೊತೆಗೇ ಹುಟ್ಟಿದ ಹಾಗೆ ಇವರು ಕೂಡ ಅವರ ತುಪ್ಪಳದ ಟೋಪಿಯ ಜೊತೆಗೇ ನೆನಪಾಗುತ್ತಾರೆ ಅಲ್ಲವಾ ಅಂದುಕೊಂಡೆ. ದಾರಿಯುದ್ದಕ್ಕೂ ಅವರ ಹಾಡುಗಳ ಜೊತೆ ಜೊತೆಗೆ ಮಿಳಿತಗೊಂಡ ನಮ್ಮ ಬದುಕಿನ ಬಗ್ಗೆ ಯೋಚಿಸುತ್ತಾ ಹೋದೆ. ಪಿ.ಬಿ.ಎಸ್ ಅಪ್ಪನ, ಅಣ್ಣನ, ಪ್ರಿಯಕರನ ಪಾತ್ರಗಳಿಗೆ ದನಿಯಾದರೆ ನನ್ನೆದುರು ಬೇರೆಯದೇ ಲೋಕ ತೆರೆದುಕೊಳ್ಳುತ್ತಿತ್ತು. ಇದೇ ನನ್ನ ಉತ್ತರ, ನಿನ್ನ ಒಗಟಿಗೆ ಉತ್ತರಾ ಅಂತ ಅವರು ಹಾಡಿದರೆ ನಾನು ಕೊರಳು ಕೊಂಕಿಸಿ ಊಊಊಊಹು ಅನ್ನುವ ಕಲ್ಪನಳಾಗುತ್ತಿದ್ದೆ! ಒಲವೇ ಜೀವನ ಸಾಕ್ಷಾತ್ಕಾರ ಅಂತ ಹಾಡಿದರೆ ಗುಂಡುಗುಂಡಗಿದ್ದರೂ ಚಿಗರೆಯಂತೆ ಓಡುವ ಜಮುನಳಾಗುತ್ತಿದ್ದೆ. ಕನ್ನಡ ನಾಡಿನ ವೀರರಮಣಿಯ ಹಾಡನ್ನು, ಕನ್ನಡ ನಾಡಿನ ವೀರರ ಮಣಿಯ ಅಂತ ತಪ್ಪು ತಪ್ಪು ಹಾಡಿಕೊಳ್ಳುತ್ತ ಒನಕೆ ಓಬವ್ವಳೂ ಆಗುತ್ತಿದ್ದೆ. ನೀರಿನಲ್ಲಿ ಅಲೆಯ ಉಂಗುರ ಅಂತ ಮೋಡಿಯ ದನಿಯಲ್ಲಿ ಹಾಡಿದರೆ ಕೆನ್ನೆಯ ಮೇಲೆ ಪ್ರೇಮದುಂಗುರ ನನಗೇ ತೊಡಿಸಿದ್ದೇನೋ ಅನ್ನುವಂತೆ ನಾಚುತ್ತಿದ್ದೆ. ನಾವಾಡುವ ನುಡಿಯೇ ಕನ್ನಡ ನುಡಿ ಅಂತ ಹಾಡಿದರೆ ಕನ್ನಡಿಗಳಾಗಿ ಹುಟ್ಟಿದ್ದಕ್ಕೆ ಆ ಕ್ಷಣದಲ್ಲಿ ರೋಮಾಂಚನ, ಧನ್ಯತೆ ಎಲ್ಲ ಅನುಭವಿಸಿ ಬಿಡುತ್ತಿದ್ದೆ. ನೀ ಬಂದು ನಿಂತಾಗ ಹಾಡಂತೂ ultimate ಅನ್ನಬಹುದು. ಜೇನಂಥ ಮಾತಲ್ಲಿ ಅಂತ PBS ಹಾಡಿದರೆ ಮಾತುಗಳಿಗೆ ಜೇನಿನ ಸಿಹಿ ಸಿಹಿ ಇದ್ದೇ ಬಿಟ್ಟಿದೆಯೇನೋ ಅನ್ನುವ ಭಾವ ಮೂಡದಿದ್ದರೆ ನನ್ನಾಣೆ! ಕೊಡಗಿನ ಕಾವೇರಿ ಅಂದರೆ ಮನಸ್ಸು ನದಿಯಾಗಿ ಹರಿಯಲು ಶುರು ಮಾಡುತ್ತಿತ್ತು. ಇನ್ನು ಭಕ್ತಿ ಗೀತೆಗಳನ್ನು ಅವರು ಹಾಡುತ್ತಿದ್ದರಂತೂ ಭಕ್ತಿ ಅನ್ನುವುದು ಎದೆಯಾಳದಲ್ಲಿ ಆಗ ತಾನೇ ಮೊಳಕೆಯೊಡೆದ ಭಾವ. ಒಲವಿನ ಪ್ರಿಯಲತೆ ಅವಳದೇ ಚಿಂತೆ ಅಂದರೆ ಪ್ರಿಯಕರ ಆಗ ತಾನೇ ದೂರವಾದನೇನೋ ಅನ್ನುವಂತೆ ವಿರಹದಲ್ಲಿ ಬೆಂದುಹೋಗುತ್ತಿದ್ದೆ. ನಗುನಗುತಾ ನಲಿ ನಲಿ ಅನ್ನುವುದು ಎದುರಿಸಲಾರೆ ಅನ್ನುವ ಕ್ಷಣ ಎದುರಾದ ಘಳಿಗೆಯಲ್ಲೆಲ್ಲ ನೆನಪಾಗಿ ಹೋಗುತ್ತದೆ. ಮತ್ತೆ ಕಾಲಿಗಿಷ್ಟು ಹುಮ್ಮಸ್ಸು. ಎದ್ದೇಳುವ, ತೆವಳುವ, ಧಾಪುಗಾಲಿಕ್ಕುವ, ಓಡುವ ಕನಸು ಶುರುವಾಗುತ್ತಿತ್ತು. ಇಳಿದು ಬಾ ತಾಯಿ ಇಳಿದು ಬಾ ಅಂತ ತುಂಬು ಕಂಠದಲ್ಲಿ ಹಾಡಲು ಶುರು ಮಾಡಿದರೆ ಎದೆಯಲ್ಲಿ ಭೋರ್ಗರೆವ ಜಲಪಾತ …

ಇಂಥ ಪಿ.ಬಿ.ಎಸ್ ಹಾಡುವುದು ಕಡಿಮೆಯಾದ ಶುರುವಿನ ದಿನಗಳು. ಆಗಿನ್ನೂ ರಾಜ್‌ಕುಮಾರ್ ಅವರ ಸಿನೆಮಾಗಳಿಗೆ ಅವರೇ ಹಿನ್ನೆಲೆ ಗಾಯನ ಮಾಡಲು ಶುರುಮಾಡಿದ್ದರು. ಪಿ.ಬಿ.ಎಸ್ ಈಗ ಮುತ್ತುರಾಜರ ಕಂಠವಾಗಿರಲಿಲ್ಲ! ಈಗ ಅಣ್ಣಾವ್ರು ಅವರ ಹಾಡನ್ನು ಅವರೇ ಹೇಳುತ್ತಾರೆ ಅನ್ನುವುದು ಎಲ್ಲೇ ಜನ ಕೂತಾಗ ಚರ್ಚೆಗೆ ಬರುತ್ತಿದ್ದ ವಿಷಯಗಳಲ್ಲಿ ಒಂದು. ಎಲ್ಲರೂ ಅವರವರ ಮೂಗಿನ ನೇರಕ್ಕೆ ವಾದ ಮಾಡುತ್ತಿದ್ದರು. ಆದರೆ ಈ ವಿಷಯದಲ್ಲಿ ನನಗೆ ಸಿಕ್ಕಾಪಟ್ಟೆ ಪ್ರಾಬ್ಲಮ್ ಆಗಿಹೋಗಿತ್ತು. ನನಗೆ ಇಬ್ಬರೂ ತುಂಬ ಪ್ರೀತಿಪಾತ್ರರು. ನಿಂಗೆ ಅಪ್ಪ, ಅಮ್ಮ ಇಬ್ರಲ್ಲಿ ಯಾರು ಇಷ್ಟ ಅಂತ ಮಕ್ಕಳನ್ನು ಪೆದ್ದು ಪ್ರಶ್ನೆ ಕೇಳುತ್ತಾರಲ್ಲ, ಹಾಗಾಗಿ ಹೋಗಿತ್ತು ನನ್ನ ಸ್ಥಿತಿ. ನನಗೆ ರಾಜ್‌ಕುಮಾರ್ ಕಂಡರೆ ಎಷ್ಟು ಇಷ್ಟವೋ PBS ಕಂಡರೆ ಕೂಡಾ ಅಷ್ಟೇ ಇಷ್ಟ. ಯಾರನ್ನೂ ಬಯ್ದುಕೊಳ್ಳಲು ಮನಸ್ಸೇ ಬರುತ್ತಿರಲಿಲ್ಲ. ಒಂದು ಸಲ ಈ ರಾಜ್‌ಕುಮಾರ್ ಸುಮ್ಮನೆ ನಟಿಸುತ್ತಾ ಇರಬೇಕಿತ್ತು. ಹಾಡು ಹಾಡಕ್ಕೆ ಯಾಕೆ ಹೋಗಬೇಕಿತ್ತು ಅಂತ ಅನ್ನಿಸುತ್ತಿತ್ತು. ಮರುದಿನಕ್ಕೆ ಅಲ್ಲಾ, ನಮ್ಮದೇ ದನಿ ಅಷ್ಟು ಚೆಂದವಿದ್ದರೆ ನಾನಾದರೂ ಬೇರೆಯವರಿಂದ ಹಿನ್ನೆಲೆ ಗಾಯನ ಮಾಡಿಸುತ್ತಿದ್ದೆನೇ? ಅಂತ ಪ್ರಶ್ನಾರ್ಥಕ ಚಿಹ್ನೆಯಾಗುತ್ತಿದ್ದೆ. ಯಾರದು ತಪ್ಪೋ, ಯಾರದ್ದು ಸರಿಯೋ ಅಂತೆಲ್ಲ ಎಲ್ಲೋ ಆಚೆ ನಿಂತು ಯೋಚಿಸುವವರಿಗೆ ಗೊತ್ತೇ ಆಗದ ಸ್ಥಿತಿ. ಸರಿ-ತಪ್ಪು, ನ್ಯಾಯ-ಅನ್ಯಾಯಗಳೆನ್ನುವುದರ ನಡುವಿನ ಗೆರೆ ಎಷ್ಟು ತೆಳು! ಎರಡೂ ತಪ್ಪು ಮತ್ತು ಎರಡೂ ಸರಿ ಅನ್ನಿಸುವಂಥ ವಿಚಿತ್ರ ಪರಿಸ್ಥಿತಿಯ ಬಳಿಕ PBS ಹಾಡುವುದು ತುಂಬ ಕಡಿಮೆಯಾಗಿ ಹೋಯಿತು. ಆದರೆ ನನ್ನ ಭಾವವಲಯದಿಂದ-ರಾಗವಲಯದಿಂದ ಅವರೆಂದೂ ಮರೆಯಾಗಲೇ ಇಲ್ಲ. ಹೊಸತಾಗಿ ಹಾಡಿರುವುದು ಬೆರಳೆಣಿಕೆಯಷ್ಟಕ್ಕೆ ಇಳಿದುಬಿಟ್ಟಾಗ, ಹಳೆಯದನ್ನು ಲೆಕ್ಕವಿಲ್ಲದಷ್ಟು ಸಲ ಕೇಳಲಂತೂ ಯಾವ ದೊಣೆನಾಯಕನ ಅಪ್ಪಣೆಯೂ ಬೇಕಿಲ್ಲವಲ್ಲ! ಕ್ಷಣ ಕ್ಷಣಕ್ಕೂ ದನಿಯಾಗಿ ಕಾಡಿದವರನ್ನು ಜೀವಮಾನದಲ್ಲಿ ಮೊದಲ ಸಲ ಭೇಟಿಯಾಗಲು ಹೊರಟಿದ್ದೆ … ಹೇಗಿರುತ್ತದೋ ಆ ಕ್ಷಣಗಳು ಅನ್ನುವ ಸಣ್ಣ ಆತಂಕ …

ನಾನು ಆ ಹೋಟೆಲ್ ತಲುಪುವಷ್ಟರಲ್ಲಿ ಚಿನ್ನದ ಜರಿಯ ಮೈಸೂರು ಪೇಟಾ ಧರಿಸಿದ್ದ ಅಜ್ಜ ಬಂದಾಗಿತ್ತು. ಆಕಾರ ತಳೆದು ನಿಂತ ದನಿಯ ಪಕ್ಕ ಓಡಿ ಹೋಗಿ ಕೂತು ಸಣ್ಣ ಮಗುವಿನ ಹಾಗೆ ಅವರ ಸುಕ್ಕುಗಟ್ಟಿದ ಕೈ ಹಿಡಿದು ಕೂತುಬಿಟ್ಟಿದ್ದೆ. ನೀವು ಕಣ್ಣ ಮುಂದೆ ಬಂದಾಗಲೆಲ್ಲ ನನಗೆ backgroundನಲ್ಲಿ ಯಾವ ಹಾಡು ನೆನಪಾಗುತ್ತದೆ ಹೇಳಿ ಸರ್? ಅಂದಿದ್ದೆ ಭಾವೋದ್ವೇಗದಿಂದ. ಅವರು ನಾವಾಡುವ ನುಡಿಯೇ ಕನ್ನಡ ನುಡಿ ಇರಬೇಕಲ್ಲವಾ? ಅಂದಿದ್ದರು ನಗುತ್ತಾ. ನಾನು ಇಲ್ಲ ಸರ್, ನಿಮ್ಮ ಆಕಾರ ಅಥವಾ ಹೆಸರು ಮನಸ್ಸಿನಲ್ಲಿ ಬಂದ ಕೂಡಲೇ ನನಗೆ ನೆನಪಾಗುವುದು ಇಳಿದು ಬಾ ತಾಯಿ ಇಳಿದು ಬಾ ಹಾಡು … ಅದು ನನಗೇ ಗೊತ್ತಿಲ್ಲದ ಹಾಗೆ ತಂತಾನೇ ಪ್ಲೇ ಆಗುತ್ತದೆ ಅಂದಿದ್ದೆ. ಅವರು ತುಂಬ ಮೃದುವಾಗಿ ನಕ್ಕಿದ್ದರು. ಈಗ ಅವರಿಗೆ ದನಿ ನಡುಗುತ್ತಿತ್ತು …ಬರಿಯ ಮಾತನಾಡುವಾಗ ಕೂಡಾ. ನನಗೆ ಯಾಕೋ ತುಂಬ ಖೇದವೆನಿಸಿದ ಘಳಿಗೆ ಅದು. ಆದರೆ ಆ ಅಜ್ಜ ಆ ದಿನಕ್ಕೂ ತುಂಬ ಚುರುಕಾಗಿದ್ದರು. ಪುಟಿಯುವ ಉತ್ಸಾಹ. ನಾನು ಒಂದೆರಡು ಕವನ, ಅದೂ ಇದೂ ಬರೆಯುತ್ತೇನೆ ಅಂತ ನನ್ನನ್ನು ಪರಿಚಯಿಸಿದಾಗ ‘ನಾನು ಕೂಡ ಚೂರು ಪಾರು ಬರೆದಿದ್ದೇನೆ’ ಅಂದಿದ್ದರು. ನನಗೆ ಗೊತ್ತಿತ್ತು ಮೂಲತಃ ತೆಲುಗಿನವರಾದ ಅವರು ಕನ್ನಡದಲ್ಲಿ ಸಾವಿರಗಟ್ಟಲೆ ಹಾಡುಗಳನ್ನು ಬರೆದಿದ್ದಾರೆ ಅನ್ನುವುದು. ಆದರೂ ಆತ ಅಷ್ಟು ವಿನಯದಿಂದ ಚೂರು ಪಾರು ಬರೆದಿದ್ದೇನೆ ಅಂದಾಗ ನಾನು ಮೂಕಳಾಗಿದ್ದೆ. ಅದು ತೋರಿಕೆಯ ವಿನಯದ ಮಾತಾಗಿರಲಿಲ್ಲ. ನಿಜಕ್ಕೂ ಶುದ್ಧ ಮಗುವಿನ ಹಾಗೆ ಮಾತಾಡಿದ್ದರು ಅವತ್ತು. ಖುಷಿಯಿಂದ ಫೋಟೋ ತೆಗೆಸಿಕೊಂಡರು. ವಾಪಸ್ಸಾಗುವ ವಿಮಾನದ ಟಿಕೆಟ್ ಸಮೇತ ಬಂದಿದ್ದ ಅವರಿಗೆ ಬೇಗ ಬೇಗ ಹೊರಡುವಂತೆ ಅವರ ಮಗ ಅವಸರಿಸುತ್ತಿದ್ದರೂ ಪಿ.ಬಿ.ಎಸ್ ಅವರು ಪುಟ್ಟ ಮಗುವಿನ ಹಾಗೆ ಅದರ ಅರಿವೇ ಇಲ್ಲದವರಂತೆ ‘ನನಗೆ ಪಾಯಸ ಬೇಕು’ ಅಂದಿದ್ದರು! ಆ ಘಳಿಗೆಯಲ್ಲಿ ಯಾರೋ ಓಡಿ, ಅದು ಹೇಗೋ ಅಂತೂ ಹೆಸರುಬೇಳೆ ಪಾಯಸ ಅವರ ಮುಂದೆ ತಂದಿಟ್ಟಾಗ ಚೂರೇ ಚೂರು ಊಟ ಮಾಡಿದ್ದವರು, ಪಾಯಸವನ್ನು ತಲೆದೂಗುತ್ತ ತಿಂದ ಆ ನಿಮಿಷದ ಅವರ ಜೀವನಪ್ರೀತಿ ನನಗೆ ಮೋಹ ಹುಟ್ಟಿಸಿತ್ತು. ಅಂತೂ ಪಾಯಸ ತಿಂದ ನಂತರವೇ ಅವರು ನೆಮ್ಮದಿಯಿಂದ ಅಲ್ಲಿಂದ ಹೊರಟಿದ್ದು. ಕೈ ಬೀಸಿ ಕಾರಿನಲ್ಲಿ ಕೂತ ಅಜ್ಜನಿಗೆ ಕೈ ಬೀಸಿದ್ದೆ … ಪಿ.ಬಿ.ಶ್ರೀನಿವಾಸ್ ಇನ್ನಿಲ್ಲವಂತೆ ಅನ್ನುವ ಮೆಸೇಜ್ ನನ್ನ ಮೊಬೈಲಿನ ಬಾಗಿಲು ತಟ್ಟಿದಾಗ ಎಲ್ಲ ಮತ್ತೆ ನೆನಪಾಯಿತು…

ರಾಶಿಯವರು ನಡೆಸುತ್ತಿದ್ದ ಕೊರವಂಜಿ ಪತ್ರಿಕೆ ನಿಲ್ಲಿಸಬೇಕಾಗಿ ಬಂದಾಗ ಅದರ ಕೊನೆಯ issueವಿನಲ್ಲಿ ಹೀಗೊಂದು ಎದೆಯನ್ನು ವಿಷಾದದಲ್ಲಿ ಅದ್ದುವಂತ ಮಾತಿತ್ತಂತೆ … ಕೊರವಂಜಿ ಗುಡ್ ಬೈ ಹೇಳುತ್ತಾ ‘ನಾನು ಹೋಗಿ ಬರಲೇನೇ?’ ಅಂತ ಹೇಳಿದಾಗ ‘ಅಯ್ಯೋ! ಇಷ್ಟು ದಿನ ನೀನಿದ್ದಿದ್ದೇ ನನಗೆ ಗೊತ್ತಿರಲಿಲ್ಲವಲ್ಲೇ’ ಅನ್ನುತ್ತಾರೆ ಬೀಳ್ಕೊಡುವವರು. ಪಿ.ಬಿ.ಎಸ್ ಹೋಗಿಬಿಟ್ಟರಂತೆ ಅಂದಾಗ ಯಾಕೋ ಈ ಸಾಲು ನೆನಪಾಯ್ತು … ಇದ್ದಾಗ ಅವರನ್ನು ನಾವು – ಕನ್ನಡಿಗರು – ಇನ್ನಿಷ್ಟು ಚೆಂದವಾಗಿ ನಡೆಸಿಕೊಳ್ಳಬೇಕಿತ್ತು …