ನಾವು ಮಕ್ಕಳು ಒಂದು ಕಡೆ ಆಡುತ್ತಿದ್ದೆವು. ಮೋಡ ಕಪ್ಪಾಯಿತು. ಮೀನು ಸಾರಿನ ಸಂಭ್ರಮದ ಮಧ್ಯ ಮಳೆ ಬರುವುದು ಚಿಂತೆಗೀಡು ಮಾಡಿತ್ತು. ಸಂದಿಗೊಂದಿಗಳಲ್ಲಿ, ಮೂಲೆಮುಡುಕುಗಳಲ್ಲಿ ಇದ್ದ ಪುಳ್ಳೆ ಸೌದೆಗಳನ್ನು ಅಜ್ಜಿ ಅದೇನೇನೋ ಗೊಣಗುತ್ತಾ ಎತ್ತಿ ತಂದು ಒಳಗೆ ಹಾಕುತ್ತಿದ್ದಳು. ಅಜ್ಜ ರಾತ್ರಿ ಕತ್ತಲಾದಾಗ ಬೆಳಕು ಮಾಡಲು ಸೀಮೆ ಎಣ್ಣೆ ದೀಪದ ಬತ್ತಿಗಳನ್ನು ಹಿಚುಕಿ ಸರಿಪಡಿಸುತ್ತಿದ್ದ. ಚಿಕ್ಕಪ್ಪ, ಅಪ್ಪ ಎಲ್ಲಿ ಮನೆ ಸೋರುತ್ತದೆಯೋ ಅಲ್ಲಿಗೆ ಕಾತಾಳೆ ಪಟ್ಟೆ, ಅಡಿಕೆ ಪಟ್ಟೆಗಳನ್ನು ತೂರಿಸುತ್ತ ಸೂರನ್ನು ಸರಿಪಡಿಸುತ್ತಿದ್ದರು. ಅಜ್ಜ ಮಾತ್ರ ‘ಈ ಹಾಳಾದ್ದು ಎಲ್ಲೋಯ್ತೋ ಕಾಣೆ… ಹೊತ್ನಂತೆ ಮನೆಗೆ ಬರಬ್ಯಾಡ್ವ’ ಅಂತ ಕೆಂಪಿಯನ್ನು ನೆನಪು ಮಾಡಿಕೊಳ್ಳುತ್ತಿದ್ದನು.
ಆಲೂರು ದೊಡ್ಡನಿಂಗಪ್ಪ ಬರೆದ ‘ಗಿಣಿ ಬಿಸ್ಕತ್ತು’ ಹೊಸ ಕಾದಂಬರಿಯ ಕೆಲ ಪುಟಗಳು ನಿಮ್ಮ ಓದಿಗೆ

 

ಹೊಸಕೆರೆ ಒಳಗೆ ಕತ್ತೆ ಮೇಯಿಸುತ್ತಾ ಅಪ್ಪ, ಅತ್ತೆ ಮಗಳು ಕೆಂಪಿ, ನನ್ನ ಚಿಕ್ಕಯ್ಯ ಪರಮೇಶ ಇದ್ದೆವು. ನಾನು ಒಂದು ಕತ್ತೆ ಮೇಲೆ ಕುಂತು ಓಡಾಡಿಸುತ್ತಾ ಆಟವಾಡುತ್ತಿದ್ದೆ.

ಊರ ಸುತ್ತ ಕತ್ತೆ ಮೇಯಿಸೋದು, ಸಂಜೆ ಆದ ಮೇಲೆ ಯಾರದಾದರೂ ತೋಟದಲ್ಲಿ ಮಂದೆ ಕಟ್ಟೋದು. ಹೀಗೆ ಒಂದು ಕತ್ತೆ ಅವರ ಜಮೀನಿಗೆ ಕಟ್ಟಿದ್ರೆ ಅದಕ್ಕೆ ನಾಲ್ಕಾಣಿ ಕೊಡ್ತಿದ್ರು. ನಮ್ಮಲ್ಲಿ ಸುಮಾರು ನೂರೈವತ್ತು ಕತ್ತೆಗಳು ಇದ್ದವು. ಈ ಕತ್ತೆಗಳನ್ನ ಮೇಯಿಸೋಕೆ ಅತ್ತೆ ಮಗಳು ಕೆಂಪಿ, ಅಪ್ಪ, ಅಜ್ಜಿ, ಮಾವ ಮರಿಯಣ್ಣ ಹೋಗ್ತಿದ್ರು. ಇವರ ಜೊತೆಗೆ ನಾನೂ ಹೋಗ್ತಿದ್ದೆ.

ನಾನು ಚಿಕ್ಕವನಿದ್ದಿದ್ರಿಂದ ಹಿಂದೆ ಹೋದರೆ ಒದೆಯದ, ಮುಂದೆ ಬಂದರೆ ಗುದ್ದದ ಕತ್ತೆ ಮೇಲೆ ನನ್ನನ್ನು ಕೂರಿಸೋರು. ನಾನು ಕುಳಿತು ದಾರಿ ಸಾಗುತ್ತಿದ್ದೆ. ಊರ ಮುಂದಲ ತಮ್ಮನಕೆರೆ ಅಂಗಳದಲ್ಲಿ ಕತ್ತೆ ಮೇಯಕೆ ಬಿಟ್ಟಾಗ ನನ್ನನ್ನ ಆ ಕತ್ತೆ ಮೈ ಮೇಲಿಂದ ಕೆಳಗೆ ಇಳಿಸಿ ಯಾವುದಾದರೂ ಈಚಲ ಮರದ ನೆರಳಿನಲ್ಲಿ ಕೂರಿಸೋರು.

ಕೆರೆ ಒಳಗೆ ನೀರು ಮಳ್ಳಾಕಿದರೆ ಅದರೊಳಗೆ ಮೀನು ಇದಾವೆ ಅಂತ ಅರ್ಥ. ಚಿಕ್ಕಯ್ಯ ಪರಮೇಶ ನೀರಿಗೆ ಇಳಿದು ತಡಕಿ ಮೀನು ಇದ್ದಾವೆ ಅಂದ್ರೆ ಕಟ್ಟೆ ಕಟ್ಟಿ ನೀರು ಉಗ್ಗಿ ಮೀನು ಹಿಡಿಯೋರು. ಕತ್ತೆಗಳು ಹಂಗೆ ಮೇಯ್ಕೊಂಡು ದೂರ ಹೋದಾಗ, ‘ಪಾಪ, ಹೋಗಲ ಅಂಗೆ ಇತ್ತಾಗೆ ಓಡಿಸ್ಕೊಂಡು ಬಾ ಅನ್ನೋರು. ಕತ್ತೆ ಹಸಿರು ಕಂಡ ಕಡೆಗೆ ಮೇಯ್ಕಂಡ್ ಮೇಯ್ಕಂಡ್ ಹೋಗಿ ಎಲ್ಲೆಂದರಲ್ಲಿ ಇದ್ದುಬಿಡೋವು. ನಾನು ಅವ್ನ ಹೊಡ್ಕಂಡು ಬಂದು ಬಂದು ಸಾಕಾಗಿ ‘ಮತ್ತೆ ಹೋಗ್ಲ ಹೊಡ್ಕಂಡು ಬರಕ್ಕೆ’ ಅಂದುಬಿಡುತ್ತಿದ್ದೆ. ಕೈ ಕಾಲು ನೋವಾಗಿ ‘ಹೋಗಲ್ಲ’ ಅಂತ ಬಿದ್ದುಹೋಗುತ್ತಿದ್ದೆ. ಆಗ ‘ಒಂದು ತಟ್ಟೆ ತಿಂತೀಯಾ’ ಅಂತ ಬೈಯೋರು. ಅಜ್ಜಿ ಹೋಗಿ ಹೊಡ್ಕೊಂಡು ಬರೋಳು. ನಾನು ನೀರಿನೊಳಗೆ ಕೈಗೆ ಸಿಗೋ ಸಣ್ಣ ಸಣ್ಣ ಮೀನು ಹಿಡಿಯೋದು, ಆ ಗುಂಡಿ ಒಳಗೆ ಚಿಕ್ಕಪ್ಪ, ಅಪ್ಪ ಮಾಡಿದ್ಹಂಗೆ ನಾನು ಕಟ್ಟೆ ಕಟ್ಟಿ ನೀರು ಉಗ್ಗೋದು, ಮೀನು ಹಿಡಿದು ಸಣ್ಣ ಗುಂಡಿಗೆ ಬಿಡೋದು ಮಾಡ್ತಾ ಆಡ್ತಿದ್ದೆ.

ಆಗಾಗ ಚಿಕ್ಕಯ್ಯ ನಾನು ಗುಂಡಿ ಒಳಗೆ ಇಳಿದು ನನ್ನ ಬಟ್ಟೆಬರೆನೆಲ್ಲ ಕೆಸರು ಮಾಡಿಕೊಳ್ಳೋದ ನೋಡಿ ‘ಹತ್ಲಾ ಮೇಲಕ್ಕೆ’ ಅಂತ ಆ ಕಡೆಯಿಂದ ನನ್ನ ಮೇಲೆ ನೀರು ಉಗ್ಗಿ ಮೇಲೆ ಹತ್ಸೋನು. ಆಗ ಮೇಲೆ ಹತ್ತಿ ಮತ್ತೆ ನೀರು ಉಗ್ಗೋ ಮನಸ್ಸಾದಾಗ ನಾನು ಮತ್ತೆ ನೀರೊಳಗೆ ಇಳಿದು ನನ್ನ ಆಟ ಶುರುಮಾಡ್ತಿದ್ದೆ.

ಆಗಾಗ ಅಜ್ಜಿನೂ ಗದರಿ ಅಯ್ಯನ ಗಮನ ಇತ್ತ ಸೆಳೆದು ಮತ್ತೆ ನನ್ನತ್ತ ಕೈ ಮಾಡಿ ‘ಹೇ ಹತ್ಲಾ, ನೋಡು ಈಗ ಬಿಡ್ತೀನಿ’ ಅಂತ ಅನ್ನೋಳು. ಕೆಸರ ತಗಂಡು ಇತ್ತ ಪರ್ಮಯ್ಯ ಎಸೆಯೋನು. ‘ಈ ಅಜ್ಜಿ ಒಬ್ಬಳು ಬಾಯಿ ಮುಚ್ಚಿಕೊಂಡು ಇರಲ್ವ’ ಅಂತ ಬೈದರೆ ನಗುತ್ತಾ ಕಲ್ಲ ತಗೊಂಡು ಕೆರೆ ಒಳಗೆ ಅಟ್ಟಾಡಿಸೋಳು. ಆಗ ಅಪ್ಪ ‘ಬಾರವ್ವಾ ಆ ಹುಡುಗುನ್ಕೈಲಿ ಏನಾಡ್ತೀಯಾ’ ಅಂದಾಗ ಮೀನು ಹಿಡಿಯೋ ಜಾಗಕೆ ಬಂದು ನಿಲ್ಲೋಳು.

ನನಗೆ ಮತ್ತೆ ನೀರಿಗೆ ಇಳಿಯಬೇಕೆನ್ನಿಸಿದರೂ ಇವರು ಬಿಡಲ್ಲ ಅನ್ನಿಸಿ ನೀರಿನ ದಡದಲ್ಲಿ ಬಂದು ನಿಂತೆ. ಅಪ್ಪ, ಚಿಕ್ಕಯ್ಯ ನೀರು ಉಗ್ಗಿ ಉಗ್ಗಿ ಗುಂಡಿ ಖಾಲಿ ಆಗ್ತಾ ಆಗ್ತಾ ಸಸಲು ಮೀನು ಬಾಯಿ ತೆರೆದುಕೊಂಡು ಇದ್ದ ಒಂದಷ್ಟು ನೀರಿನಲ್ಲಿಯೇ ಆಡುತ್ತಾ ಆಡುತ್ತಾ ನೀರ ಮೇಲೆ ಬರುತ್ತಿದ್ದವು. ಒಮ್ಮೊಮ್ಮೆ ಕೊರವ, ಆನೆಮೀನು ನೀರನ್ನು ಗುಳ್ಳನೆ ಮಳ್ಳಿಸಿ ಮರೆಯಾಗುತ್ತಿದ್ದವು.

ಅಪ್ಪ ನೀರಿನಿಂದ ಮೇಲೆ ಬಂದು ಒಂದು ಬೀಡಿ ಬಾಯಿಗಿಟ್ಟು ಆ ನೀರನ್ನ ನೋಡುತ್ತಾ ‘ಲೇ ಪರ್ಮ ಆನೆ ಗಿರ್ಲು ಇರಂಗೆ ಕಾಣ್ತವೆ… ಕತ್ಲೆ ಬೇರೆ ಆಗ್ತಾ ಬಂತು ನೀರು ಯಾವಾಗ ಉಗ್ಗೋದು.. ಗುಂಡಿ ಒಳಗೆ ಕೈ ಬಿರುಸು ಮಾಡು’ ಅಂತ ಹೇಳುತ್ತಿದ್ದ. ಆಗಾಗ ನೀರನ್ನು ಇನ್ನೆಷ್ಟು ಐತೆ ಅಂತ ಹೆಜ್ಜೆ ಮಟ್ಟದಲ್ಲಿ ಅಳೆದು ನೋಡುತ್ತಿದ್ದ. ನೀರು ಮಂಡಿತಂಕ ಬರೋದ ಕಂಡು ಅಜ್ಜಿ ಕಡೆಗೆ ನೋಡಿ ‘ಅವ್ವಾ, ಮನೆತಕೆ ಹೋಗಿ ಮಂಕರಿ ತರೋಗು’ ಅಂತ ಕಳಿಸಿದ.

ಹೊಸಕೆರೆ ನಮ್ಮ ಹೊಲಮನೆಗೆ ಕೂಗು ಅಳತೆ ದೂರದಲ್ಲಿ ಇರೋದ್ರಿಂದ ಅಜ್ಜಿ ಏನೂ ಮಾತನಾಡದೆ ಮನೆಯತ್ತ ನಡೆದಳು.

ಅಪ್ಪ, ಚಿಕ್ಕಪ್ಪ, ಅಜ್ಜಿ ಬರೋ ತನಕ ತಮ್ಮ ಕೆಲ್ಸ ನಿಲ್ಲಿಸದೆ ಮುಂದುವರಿಸಿದರೆ ಕೆಂಪಿ ಆಗಾಗ ಮೀನು ಹಿಡಿಯೋ ಜಾಗಕ್ಕೆ ಬರೋಳು. ಕತ್ತೆ ದೂರ ಹೋದಾಗ ಓಡಿಹೋಗಿ ಕತ್ತೆ ಈ ಕಡೆಗೆ ಹೊಡ್ಕಂಡು ಬಂದು ಮತ್ತೆ ಮೀನು ಹಿಡಿಯೋದ್ನ ನೋಡ್ತಾ ನಿಲ್ಲೋಳು. ನಾನು ‘ಕೆಂಪಕ್ಕಾ ಕೆಂಪಕ್ಕಾ… ಯಾಕೆ ಹಂಗೆ ಮೀನು ಬಾಯಿ ಬಿಟ್ಟುಕೊಂಡು ಈಜ್ತವೆ’ ಅಂತ ಕೇಳಿದ್ರೆ ‘ನೀರು ಖಾಲಿ ಮಾಡ್ತಿದ್ದಾರಲ್ಲಾ ಅದಕೆ ಮಳೆ ಕರಿತಾವೆ’ ಅನ್ನೋಳು. ಅವಳಂದ ಮಾತಿಗೆ ನನ್ನ ತಲೆಯೊಳಗೆ ಏನೇನೋ ಸುಳಿದು, ‘ಲಿÀಬ್ದ ಬರ್ತ್ಲಿ’ ಅಂತ ಮತ್ತೆ ಕೇಳಿದ್ರೆ, ‘ಆ ಮಳೆರಾಯನಿಗೆ ಮಾತ್ರಾ ಕೇಳುತ್ತೆ’ ಅನ್ನೋಳು. ಆಗ ನನಗೆ ಮತ್ತೆ ಏನೇನೊ ಸುಳಿಯೋದು. ರಾತ್ರಿಕೆ ಅವ್ವನ ಕೇಳಬೇಕು ಅನ್ನಿಸಿ ನಿಂತು ನೋಡ್ತಿದ್ದೆ.

ಅಷ್ಟೊತ್ತಿಗೆ ಅಜ್ಜಿ ಒಂದು ಕಸಮಂಕರಿ, ಗಡಿಗೆ ಎಲ್ಲ ಹೊತ್ತುಕೊಂಡು ಬಂತು. ತಂದ ಮಂಕ್ರಿಗೆ ಆ ಕಡೆ ಈ ಕಡೆ ಎರಡೆರಡು ಮೊಳದಷ್ಟು ಕೈಗೆ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಅಪ್ಪ ಹಗ್ಗ ಕಟ್ಟಿದ. ಆ ಕಡೆ ಒಬ್ಬರು ಈ ಕಡೆ ಒಬ್ಬರು ನಿಂತು ಹಗ್ಗದ ಸಹಾಯದಿಂದ ಮಂಕ್ರಿಯಿಂದ ನೀರನ್ನು ಎತ್ತಿಎತ್ತಿ ಹೊರ ಹಾಕುತ್ತಿದ್ದರು. ಮೊದಲು ಉಗ್ಗುತ್ತಿದ್ದ ನೀರು ಸಣ್ಣ ಚರಂಡಿಯಲ್ಲಿ ಹರಿದಂತೆ ಕಾಣುತ್ತಿದ್ದ ನನಗೆ, ಮಂಕರಿಯಿಂದ ಎತ್ತಿ ಎಸೆದ ನೀರು ನನ್ನ ಕಣ್ಣಿಗೆ ದೊಡ್ಡ ನದಿ ನೀರು ಹರಿದಂತೆ ಕಾಣುತ್ತಿತ್ತು. ನೀರು ಖಾಲಿ ಆಗುತ್ತಾ ಬಂದಂತೆ, ಕಟ್ಟೆ ಒಳಗೆ ಇದ್ದ ಮೀನು ಜೋರಾಗಿ ಆಡಲು ಶುರು ಮಾಡಿದವು. ನನಗೆ ಎಲ್ಲಿಲ್ಲದ ಸಂಭ್ರಮ. ನೀರು ಕಡಿಮೆ ಆಗುತ್ತಿದ್ದಂತೆ ಖಾಲಿ ಮಾಡಲೆಂದು ಎತ್ತಿ ಎಸೆಯುತ್ತಿದ್ದ ನೀರಿನೊಳಗೂ ಕೆಲ ಮೀನುಗಳು ಹೋಗಿಬಿಡುತ್ತಿದ್ದವು.

ಅದನ್ನು ಕಂಡ ಅಪ್ಪ, ಚಿಕ್ಕಯ್ಯ ‘ಲೇ ಪಾಪ’ ಅಂತ ನನ್ನನ್ನ ಕೂಗಿ ‘ಓಡೋಗ್ಲಾ ಅಲ್ಲಿ ಅಂಗ್ರೆಸೊಪ್ಪು, ತಂಗಡಿ ಸೊಪ್ಪು ಕಿತ್ಕೊಂಡು’ ಬಾ ಅಂದರು. ನಾನು ಓಡಿ ಹೋಗಿ ತಂಗಡಿ ಸೊಪ್ಪಿಗೆ ಕೈ ಹಾಕಿ ಒಂದೆರಡು ಕಡ್ಡಿ ಸೊಪ್ಪ ಮುರಿದೆ. ಅದರಲ್ಲಿ ಇದ್ದ ಗೊದ್ದ ನನ್ನ ಕೈಗೆಲ್ಲ ಮುತ್ತಿಕೊಂಡು ಕೆಲವು ಕಚ್ಚಿದವು. ‘ಆಹಾ’ ಎಂದು ಕಿರುಚಿದಾಗ ಸ್ವಲ್ಪ ಆತಂಕದಿಂದಲೇ ನೀರಿನಿಂದ ಮೇಲೆ ಎದ್ದು ಬಂದ ಅಪ್ಪ ‘ಏನಾಯ್ತು’ ಅಂತ ತನ್ನ ಬಗ್ಗಡದ ಕೈಗಳಿಂದಲೇ ಸವರಿ ನೋಡಿ ‘ಹೇ ದಡ್ಡ ಗೊದ್ದ ಇರೋ ಗಿಡ ಬಿಟ್ಟು ಬೇರೆ ಗಿಡದಲ್ಲಿ ಅಲ್ವಾ ಸೊಪ್ಪು ಮುರಿಯೋದು’ ಅಂದ. ಅವರು ಹಾಕಿದ ಸೊಪ್ಪು, ನೀರನ್ನು ಹೋಗಲು ಬಿಟ್ಟು, ಮೀನು ದಾಟಿ ಹೋಗುವುದನ್ನ ತಡೆಯುತ್ತಿತ್ತು. ಹೀಗೆ ಎಲ್ಲಾ ರೀತಿಯಿಂದಲೂ ಮೀನು ತಪ್ಪಿಸಿಕೊಂಡು ಹೋಗದಂತೆ ತಡೆಗಳನ್ನೂ ಒಡ್ಡಿ ಭರ್ಜರಿ ಮೀನು ಬೇಟೆ ಮಾಡಿದರು.

ನನಗಿನ್ನೂ ಗೊದ್ದ ಕಚ್ಚಿದ್ದು ಉರಿಯುತ್ತಲೇ ಇತ್ತು. ಕೈ ಉಜ್ಜಿಕೊಳ್ಳುತ್ತಲೇ ಇದ್ದದ್ದನ್ನು ಕಂಡ ಅಜ್ಜಿ ನನ್ನ ಅವಸ್ಥೆ ನೋಡಿ ‘ಲೇ ನೀನು ಆಡೋ ಆಟಕ್ಕೆ ಸರಿಯಾಗಿ ಮಾಡೈತೆ ಆ ಗೊದ್ದ’ ಅಂದಳು. ಸಿಟ್ಟು, ಬೇಸರ, ಅಳು ಒಟ್ಟೊಟ್ಟಿಗೆ ಬಂದಂತಾಗಿ ಅಜ್ಜಿಗೆ ಒಂದೇಟು ಕೊಟ್ಟೆ. ನನ್ನನ್ನು ಬರಸೆಳೆದ ಅಜ್ಜಿ, ಬಿಗಿದಪ್ಪಿ ‘ನನ್ನ ಕಂದಾ’ ಎಂದು ಮುತ್ತುಗಳ ಮಳೆಗರೆದಳು. ಅವಳ ಪ್ರೀತಿಗೆ ಕರಗಿಹೋದ ನಾನು ಅವಳ ಅಪ್ಪುಗೆಯಲ್ಲಿ ಹಾಗೆಯೇ ಇದ್ದುಬಿಟ್ಟೆ. ಅಜ್ಜಿಯ ಮಡಿಲು ಸೇರಿ ಅಪ್ಪಿ ಕುಳಿತಿದ್ದ ನನ್ನನ್ನು ಕೆಂಪಿ ಹಿಡಿದು ಆಚೆಗೆಳೆದಳು. ಅವಳಿಗೂ ಗೊದ್ದ ಕಚ್ಚಿದ ಕೈ ತೋರಿದೆ. ‘ಅಯ್ಯೋ ಯಾಕೆ ಅಲ್ಲಿ ಕೈ ಹಾಕಿದೆ, ನೋಡೋದ್ವ’ ಅಂದುಬಿಟ್ಟು ನನ್ನನ್ನೆತ್ತಿ ಕೆನ್ನೆ ಕಚ್ಚಿ ಎಂಜಲು ಹಚ್ಚಿದಳು.

*****

(ಆಲೂರು ದೊಡ್ಡನಿಂಗಪ್ಪ)

ಕಲ್ಲ ಮೇಲೆ ಮೀನು ಉಜ್ಜುತ್ತಿದ್ದರು. ನನ್ನ ಅತ್ತೆ ಪಾರ್ವತಮ್ಮ, ಮಾವ ಮರಿಯಣ್ಣ ಆಗಿನ್ನೂ ಅದೆಲ್ಲಿಂದಲೋ ಮನೆಗೆ ಬಂದಿದ್ದರು. ‘ಎಲ್ಲೋ ಮೀನು ತಂದವರೆ’ ಅನ್ನುತ್ತಾ ಅಚ್ಚರಿಯಿಂದ ನೋಡಿದರು. ಅಲ್ಲೇ ಕುಂತಿದ್ದ ತಾತಾ ‘ಲೋ ಮರಿಯ… ಕೆಂಪಿ ಕತ್ತೆಗೆ ಹೋದವಳು ಇನ್ನೂ ಬಂದಿಲ್ಲ. ಸ್ವಲ್ಪ ಎದ್ದೋಗಿ ನೋಡ್ಲಾ’ ಅಂತು. ‘ಎಲ್ಲೋಗ್ತಾಳೆ ತೋಟಕ್ಕೆ ಕತ್ತೆ ಕಟ್ಟಿ ಬತ್ತಾಳೆ’ ಸುಮ್ಕಿರು ಮಾವ ಅಂದ ಮರಿಯ. ಮೇಲೆ ಆಕಾಶ ನೋಡಿ, ‘ಹೋಗ್ಲಾ ಮರಿಯ ಮಳೆ ಬೇರೆ ಬರಂಗೈತೆ, ಒಂದೇ ಹೋಗೈತೆ, ನೀನು ಹೋಗಿ ಕರಕಂಡು ಬರೋಗು’ ಎಂದಿತು ಅಜ್ಜಿ. ಹೋಗಲು ಮನಸ್ಸಿಲ್ಲದಿದ್ದರೂ ಅಜ್ಜಿಯನ್ನು ಸುಮ್ಮನಾಗಿಸಲಿಕ್ಕಾಗಿ ‘ಆಯ್ತು ಬಿಡಕ್ಕಾ ಹೋಗ್ತಿನಿ’ ಅಂದ ಮಾವ ಮರಿಯ ಎದ್ದು ಟವಲ್ ಹೆಗಲಿಗೆ ಎಸ್ಕೊಂಡು ಹೊರಗೆ ಹೋದ.

ಕಲ್ಲ ಮೇಲೆ ಅರೆಯುತ್ತಿದ್ದ ಮೀನಿನ ಮಸಾಲೆ ಗಮ್ಮನೆ ಮೂಗಿಗೆ ಬಡಿಯುತ್ತಿತ್ತು. ಅವ್ವ ಗುಂಡುಕಲ್ಲು ಆಡಿಸುತ್ತಿದ್ದಳು. ಕುಚ್ಚು, ಆನೆಗಿರಲು ಮೀನುಗಳ ಕಡಿಕಡಿ ಕುಯ್ದು ಒಂದೊಂದಾಗಿ ಆಯ್ದು ಒಂದು ಮಡಕೆಗೆ ಹಾಕುತ್ತಿದ್ದರು. ಅಲ್ಲೇ ಕೋಲು ಹಿಡಿದು ಕುಂತ ತಾತ ರಾಮಣ್ಣ, ನಮ್ಮ ನಾಯಿ ಕೆಂಚನಿಗೆ ಒಂದು ದೊಣ್ಣೆಯಲ್ಲಿ ಕುಕ್ಕಿದ. ಆ ಏಟಿಗೆ ಅದು ‘ಕಯ್ಯಯ್ಯೋ’ ಎನ್ನುತ್ತಾ ಅತ್ತ ಒತ್ತಟ್ಟಿ ಒಂದು ಮೂಲೆಗೆ ಹೋಗಿ ನಿಂತಿತು. ಅದರ ನರಳಾಟ ನೋಡಿದ ಚಿಕ್ಕಪ್ಪಾ ‘ಅಪ್ಪೋ ನಿನಗೆ ಆ ನಾಯಿ ಏನ್‍ಮಾಡ್ತು, ಸುಮ್ಕೆ ಕುಂತ್ಕೋಳಕ್ಕೆ ಆಗಲ್ವ’ ಅಂದ. ಮೀನು ತುಂಬುತ್ತಿದ್ದ ಮಡಕೆ ತುಂಬಿದ್ರಿಂದ ಅವ್ವ ಒಳಗೆ ಹೋಗಿ ಇನ್ನೊಂದು ದೊಡ್ಡ ಮಡಕೆ ತಂದು ಕೊಟ್ಟಳು. ಅಜ್ಜಿ ‘ಅದು ಬ್ಯಾಡ ಇನ್ನೊಂದು ಪಡಸಾಲೆಲಿ ಐತಲ್ಲಾ ಅದ ತಗಂಡು ಬಾ’ ಅಂದಾಗ, ಅವ್ವ ‘ಇಷ್ಟನ್ನೆಲ್ಲ ಹಿಡಿಯೋದು ಇದೊಂದೆ, ಅದರಲ್ಲಿ ಸಾರು ಮಾಡೋಕೆ ಆಗಲ್ಲ. ಅದು ತುಂಬಾ ಕುಕ್ಕುರ್ತಿ ಆಗುತ್ತೆ’ ಅಂದು, ಅದನ್ನೇ ಅಜ್ಜಿಯ ಮುಂದೆ ಇಟ್ಟಳು.

ಅಲ್ಲೇ ಕುಂತಿದ್ದ ಅಜ್ಜನಿಗೆ ಹೊರಗೆ ಹೋದ ಮರಿಮಾವನ ನೆನಪಾಗಿ ಇವನು ಹೋದವನು ಇನ್ನೂ ಬರ್ಲಿಲ್ಲ ಎಂದು ಚಡಪಡಿಸುತ್ತಿದ್ದ. ‘ಇಷ್ಟೊತ್ತು ಬೇಕಾ ಕರ್ಕಬರಕೆ?’ ಅನ್ನುತ್ತಿದ್ದ. ಅವನ ಮಾತಿಗೆ ಅಜ್ಜಿ ‘ಎಲ್ಲೋಕ್ತಾನೆ, ಬರ್ತನೆ ಸುಮ್ಕಿರು’ ಅನ್ನುತ್ತಾ ತನ್ನ ಪಾಡಿಗೆ ತಾನು ಕೆಲಸದಲ್ಲಿ ತೊಡಗಿದಳು.

ನಾವು ಮಕ್ಕಳು ಒಂದು ಕಡೆ ಆಡುತ್ತಿದ್ದೆವು. ಮೋಡ ಕಪ್ಪಾಯಿತು. ಮೀನು ಸಾರಿನ ಸಂಭ್ರಮದ ಮಧ್ಯ ಮಳೆ ಬರುವುದು ಚಿಂತೆಗೀಡು ಮಾಡಿತ್ತು. ಸಂದಿಗೊಂದಿಗಳಲ್ಲಿ, ಮೂಲೆಮುಡುಕುಗಳಲ್ಲಿ ಇದ್ದ ಪುಳ್ಳೆ ಸೌದೆಗಳನ್ನು ಅಜ್ಜಿ ಅದೇನೇನೋ ಗೊಣಗುತ್ತಾ ಎತ್ತಿ ತಂದು ಒಳಗೆ ಹಾಕುತ್ತಿದ್ದಳು. ಅಜ್ಜ ರಾತ್ರಿ ಕತ್ತಲಾದಾಗ ಬೆಳಕು ಮಾಡಲು ಸೀಮೆ ಎಣ್ಣೆ ದೀಪದ ಬತ್ತಿಗಳನ್ನು ಹಿಚುಕಿ ಸರಿಪಡಿಸುತ್ತಿದ್ದ. ಚಿಕ್ಕಪ್ಪ, ಅಪ್ಪ ಎಲ್ಲಿ ಮನೆ ಸೋರುತ್ತದೆಯೋ ಅಲ್ಲಿಗೆ ಕಾತಾಳೆ ಪಟ್ಟೆ, ಅಡಿಕೆ ಪಟ್ಟೆಗಳನ್ನು ತೂರಿಸುತ್ತ ಸೂರನ್ನು ಸರಿಪಡಿಸುತ್ತಿದ್ದರು. ಅಜ್ಜ ಮಾತ್ರ ‘ಈ ಹಾಳಾದ್ದು ಎಲ್ಲೋಯ್ತೋ ಕಾಣೆ… ಹೊತ್ನಂತೆ ಮನೆಗೆ ಬರಬ್ಯಾಡ್ವ’ ಅಂತ ಕೆಂಪಿಯನ್ನು ನೆನಪು ಮಾಡಿಕೊಳ್ಳುತ್ತಿದ್ದನು. ನಮ್ಮ ಅತ್ತೆ ಪಾರ್ವತಮ್ಮ ‘ಯಾವಾಗ ಹೋದ್ಲು ಈ ಕೆಂಪಿ, ನೀನಾರ ಹೇಳದಲ್ವವ್ವ?’ ಅಂತ ನಮ್ಮಜ್ಜಿಗೆ ಕೇಳುತ್ತಾ ಚಡಪಡಿಸುತ್ತಿದ್ದಳು.

ಮೋಡದಲ್ಲಿ ಫಳಾರನೆ ಮಿಂಚು, ಸಣ್ಣ ಗುಡುಗು, ಹನಿ ಹನಿಗಳಿಂದ ಕೂಡಿದ ಮಳೆ. ಹೊರಗೆ ಆಡುತ್ತಿದ್ದ ನಾವೆಲ್ಲ ಮನೆ ಸೇರಿದೆವು. ಮನೆ ಚಿಕ್ಕದಿದ್ದರಿಂದ ಎಲ್ಲರ ಕೈ ಕಾಲಿಗೆ ಮಾತು ಸಿಕ್ಕುವಷ್ಟು ಹತ್ತಿರದಲ್ಲಿದ್ದೆವು. ಆಚೆ ಹೋದ ಮಾವ ಮರಿಯ ಇನ್ನೂ ಬಂದಿರಲಿಲ್ಲ. ‘ಮಳೆ ನಿಂತ ಮೇಲೆ ಬರ್ತಾರೆ’ ಅನ್ನುತ್ತಾ ಆಚೆ ಇಣುಕಿದ ಅಪ್ಪ ಅತ್ತಿಂದ ಬಂದ ಜೋರು ಮಿಂಚಿಗೆ ‘ಶಿವಶಿವಾ’ ಅನ್ನುತ್ತ ಒಳಗೆ ಬಂದ. ಇತ್ತ ಕೆಂಪಿಯನ್ನೂ ಕಾಣದ ಅತ್ತೆ, ‘ಎಷ್ಟೊತ್ತಿಗೋದ್ಲು, ನೀವ್ಯಾರಾರ ಜೊತೆಗೋಗಿ ಕತ್ತೆ ಕಟ್ಟಿ ಬರಕಾಗ್ತಿರ್ಲಿಲ್ವಾ? ಈ ಮಳೆಯಲ್ಲಿ ಯಾವ ಮರದ್ಕೆಳಗೆ ನಿಂತೈತೋ ಏನೋ?’ ಅಂತ ತನಗೆ ತಾನೇ ಪೇಚಾಡುತ್ತಿದ್ದಳು. ಹೊರಗೆ ಜೋರು ಮಳೆ. ಸಿಡಿಲು ಗುಡುಗಿನ ಅಬ್ಬರ. ಗೋಡೆಯ ಮೇಲೆ ಮೆಲ್ಲಮೆಲ್ಲಗೆ ನೀರು ತೊಟ್ಟಿಕ್ಕುತ್ತಿತ್ತು. ಇತ್ತ ಅಪ್ಪ, ಚಿಕ್ಕಪ್ಪ ಇಬ್ಬರೂ ಸೂರನ್ನು ಎತ್ತಿ ನೀರು ಇಳಿಯುವ ಜಾಗಕ್ಕೆ ಪಟ್ಟೆಗಳನ್ನು ಸಿಕ್ಕಿಸುತ್ತಲೇ ಇದ್ದರು. ಸಾರು ಬೇಯಿಸುತ್ತಿದ್ದ ಅವ್ವ ‘ಅಯ್ಯೋ ಹೋಗತ್ತ! ನೀರು ಒಲೆ ಒಳಗಡೆನೇ ಬಂತು’ ಎಂದು ಸಾರಿನ ಮಡಕೆಯನ್ನು ಇತ್ತ ತಂದು ಇಟ್ಟಳು. ಗೋಡೆಯ ದಡಕ್ಕೆ ಒಲೆ ಇದ್ದಿದ್ದರಿಂದ ಅಡಿಗೆ ಒಲೆಗೆ ನೀರು ಸೋರಿ ಒಲೆ ಕೆಟ್ಟಿತ್ತು. ಹಿಟ್ಟು ತಿರುವಲು ಬಳಸುವ ಕವೆ ಕೋಲಿನಿಂದ ಸೂರನ್ನು ಎತ್ತಿ ಅಪ್ಪ, ಚಿಕ್ಕಪ್ಪ ಅದಕ್ಕೊಂದು ಕಾತಾಳೆ ಪಟ್ಟೆ ಸಿಕ್ಕಿಸಿದರು, ನೀರು ನಿಂತಿತು. ಸ್ವಲ್ಪ ಹೊತ್ತಲ್ಲೇ ಜಲ ಉಕ್ಕಿದಂತೆ ನೀರು ಆ ಕಾತಾಳೆ ಪಟ್ಟೆಯಿಂದ ಹೊರ ನುಗ್ಗಿ ಗೋಡೆ ಮೇಲೆ ಬೀಳಲು ಆರಂಭವಾಯಿತು. ಅದನ್ನು ನೋಡಿದ ಅಪ್ಪ ‘ಇಲ್ಲ, ಈ ಮಳೆ ಉಯ್ದು ಕೆಡಿಸುತ್ತೆ, ಇಲ್ಲ ಉಯ್ದನೆ ಕೆಡಿಸುತ್ತೆ’ ಅಂದು ‘ಲೇ ಪರಮ… ಅಲ್ಲೊಂದು ಕಾತಾಳೆ ಪಟ್ಟೆ ಎತ್ಕಂಡು ಬಾ’ ಅಂತು. ತಲೆಯಲ್ಲೇ ಸೂರೆತ್ತಿ ನೀರು ಸೋರುವ ಜಾಗಕ್ಕೆ ಕಾತಾಳೆ ಪಟ್ಟೆ ಸಿಗಿಸಿತು.

ಅತ್ತೆ, ಅಜ್ಜ, ನೆಂದು ಬರುವ ಕೆಂಪಿಯ ನೆನೆದು ಜೀವ ಬಿಡುತ್ತಿದ್ದರು. ಸಿಡಿಲು ಗುಡುಗಿನ ಅಬ್ಬರ ಹಾಗೂ ಮನೆಯಲ್ಲಿ ಮಳೆ ತಂದ ಅವಾಂತರದ ನಡುವೆ ಹುಡುಗರಾದ ನಮಗೆ ಮೀನಿನ ವಾಸನೆ ಮರೆತೇ ಹೋಗಿತ್ತು. ಎಲ್ಲರ ಬಾಯಲ್ಲೂ ಆಗಾಗ ಕೆಂಪಿ, ಮರಿಮಾವನ ಮಾತು. ಒಂದೊಂದು ಸಲ ಮಿಂಚಿದಾಗ, ದೊಡ್ಡ ಗುಡುಗು ಬಂದಾಗ ತಾತ ‘ಶಿವಶಿವಾ ನಿಲ್ಸಪ್ಪ ನಿನ್ನ ಬಿರುಸು ಬಾಣನ, ಬಾಳೋ ಬದುಕೋ ಮಕ್ಕಳವೆ’ ಅನ್ನೋನು. ನಾವು ಅಜ್ಜನ ಪಕ್ಕದಲ್ಲೇ ಕುಂತು ನಮ್ಮ ಎದೆ ಬಾಯಿಗೆ ಬರಿಸಿಕೊಂಡು ಉಸಿರಾಡುತ್ತಿದ್ದೆವು.

ಮೇಲೆ ಆಕಾಶ ನೋಡಿ, ‘ಹೋಗ್ಲಾ ಮರಿಯ ಮಳೆ ಬೇರೆ ಬರಂಗೈತೆ, ಒಂದೇ ಹೋಗೈತೆ, ನೀನು ಹೋಗಿ ಕರಕಂಡು ಬರೋಗು’ ಎಂದಿತು ಅಜ್ಜಿ. ಹೋಗಲು ಮನಸ್ಸಿಲ್ಲದಿದ್ದರೂ ಅಜ್ಜಿಯನ್ನು ಸುಮ್ಮನಾಗಿಸಲಿಕ್ಕಾಗಿ ‘ಆಯ್ತು ಬಿಡಕ್ಕಾ ಹೋಗ್ತಿನಿ’ ಅಂದ ಮಾವ ಮರಿಯ ಎದ್ದು ಟವಲ್ ಹೆಗಲಿಗೆ ಎಸ್ಕೊಂಡು ಹೊರಗೆ ಹೋದ.

ಅಲ್ಲೇ ಕುಂತ ಅತ್ತೆಯ ಇನ್ನೊಬ್ಬ ಮಗಳು ಹುಚ್ಚಮ್ಮ ಕುಂತ ಜಾಗಕ್ಕೆ ಬಾಗಿಲ ಕಡೆಯಿಂದ ನೀರು ಸದ್ದಿಲ್ಲದೆ ಹರಿದುಬಂತು. ಅವಳ ಕುಂಡೆ ಒದ್ದೆಯಾದಾಗ ‘ಅಯ್ಯೋ ನೀರು ಒಳಗೆ ಬಂತು’ ಎಂದು ಎದ್ದು ಓಡಾಡಿದಳು. ಮನೆಯಲ್ಲಿ ಅತ್ತಿಂದಿತ್ತಿಂದ ಆತಂಕಗೊಂಡು ದೀಪ ಹಿಡಿದು ಬಂದರು. ಗಾಳಿಗೆ ದೀಪ ಕೆಟ್ಟು ಹೋಯಿತು. ಇನ್ನೊಂದು ದೀಪ ಹತ್ತಿಸಿಕೊಂಡು, ದೀಪ ಆರದಂತೆ ಕೈ ಮರೆ ಮಾಡಿಕೊಂಡು ಬಾಗಿಲ ಹತ್ತಿರ ಬಂದು ಅಪ್ಪ, ಚಿಕ್ಕಪ್ಪ ನೋಡಿದರು. ಹೊರಗಡೆಯ ಎರಚಲು ಮಳೆಗೆ ಬಾಗಿಲು ಸಂದಿಯಿಂದ ಬಂದ ನೀರು ಒಳನುಗ್ಗಿ ಬರುತ್ತಿರುವುದನ್ನು ಕಂಡು ಒಂದು ಗೋಣಿ ತಾಟನ್ನು ಆ ಸಂದಿಗೆ ಸಿಕ್ಕಿಸಿದರು. ಒಳ ಬರುವ ನೀರು ನಿಂತಿತು. ಆಚೆ ಅಂಥಾ ಮಳೆ ಇಲ್ಲದಿದ್ದರೂ ಮಿಂಚು ಗುಡುಗು ಇನ್ನೂ ಅಬ್ಬರಿಸುತ್ತಲೇ ಇತ್ತು. ಮಳೆ ನಿಧಾನಕ್ಕೆ ನಿಲ್ಲುತ್ತಾ ನಿಲ್ಲುತ್ತಾ ಕಡಿಮೆಯಾಗಿದ್ದನ್ನು ಕಂಡ ತಾತ ನಿಟ್ಟುಸಿರು ಬಿಟ್ಟನು.

ಯಾಕೋ ಮೀನಿನ ಸಂಭ್ರಮ ಮನೆಯಲ್ಲಿ ಯಾರಿಗೂ ಇದ್ದಂತೆ ಕಾಣಲಿಲ್ಲ. ಅಪ್ಪನೂ ಮೌನವಾಗಿಯೇ ಇದ್ದ. ಆಗಾಗ ಚಿಕ್ಕಪ್ಪ ಹೊರಗೆ ಕೆಂಪಿ ಮತ್ತು ಮರಿಮಾವ ಬರುವ ಮೊಸಳೆಗೊಂದಿ ಕಡೆಗೆ ಇಣಿಕಿಣಿಕಿ ನೋಡಿ ‘ಯಾರೂ ಕಾಣುತ್ತಿಲ್ಲ’ ಅಂದ್ಕಂಡು ಒಳಗೆ ಬರೋನು. ಅತ್ತೆ ಇನ್ನಷ್ಟು ದೂರ ಹೋಗಿ ‘ನೋಡ್ಲ ಪರ್ಮ, ಆ ಈಚಲೊನದ ಕಡೆ’ ಅನ್ನುತ್ತಿದ್ದರೆ ಅಜ್ಜಿ ‘ಈ ಕತ್ಲೆಲಿ ಕಣ್‍ಬಿಟ್ರೆ ಕಣ್‍ಕಾಣಲ್ಲ ಎಲ್ಲೋಗಿ ನೋಡ್ತನೆ, ಸುಮ್ಕಿರು’ ಅಂದಳು.

ಅವ್ವನ ಹತ್ತಿರ ಹೋದ ನಾನು ಒಂದು ‘ಮೀನಾಕ್ಕೊಡು’ ಅಂದೆ. ಅತ್ತಿಂದ ಅಜ್ಜ ‘ಈ ಹುಡುಗರ್ಗೆ ಉಣ್ಣಕ್ಕಿಕ್ಕಿ’ ಅಂದ. ನಾನು ತಟ್ಟೆ ತಕ್ಕಂಡು ಕುಂತೆ. ಅತ್ತೆ ಮಗಳು ಸಿದ್ದಿನೂ ಕುಂತಳು. ನನ್ನ ಪಕ್ಕ ಕುಂತ ಅವ್ವ ಮೀನಿನ ಕಡಿ ಬಿಡಿಸಿ ಬಿಡಿಸಿ ಮುಳ್ಳಿಲ್ಲದ್ದನ್ನು ಗ್ಯಾರಂಟಿ ಮಾಡಿಕೊಂಡು ಬಾಯಿಗೆ ಹಾಕುತ್ತಿದ್ದಳು.

ಮೇಲೆ ಮೋಡ ಬೆಳ್ಳಗಾಗುತ್ತಿತ್ತು. ಕಪ್ಪೆಗಳ ಕೊರಕೊರ, ಅಲ್ಲೆಲ್ಲೋ ದೂರದಲ್ಲಿ ನೀರು ಭೋರ್ಗರೆವ ಶಬ್ದ ಕೇಳಿಸುತ್ತಿತ್ತು. ಹೊರಗಡೆ ಹೋದವರ ಬಗ್ಗೆ ಎಲ್ಲರ ಗಮನ. ನನಗೂ ನಿದ್ರೆ ಬಾರದೆ ಅವರೊಟ್ಟಿಗೇ ಓಡಾಡುತ್ತಿದ್ದೆ. ‘ಎಲ್ಲೋ ಹೋದವ್ನು ಇವ್ನೂ ಬರ್ಲಿಲ್ಲ’ ಅಂದ ಅಜ್ಜ. ‘ಲೇ ಅಲ್ಲಿತನಕ ಲಾಟೀನು ಹಿಡಿದು ಹೋಗುರ್ಲ ನೋಡ್ಕಬನ್ನಿ’ ಅಂದ. ಇದ್ದ ಗಂಡಸರಿಬ್ಬರೂ ಹೋದಾಗ ನನಗೆ ಭಯ ಆಯಿತು. ಆವತ್ತು ಚೇಳು ಮನೆಗೆ ಬಂದಾಗ ಅಜ್ಜನಿಗೆ ತೋರಿಸಿದ್ರೂ ಕಣ್ಣಿಗೆ ಕಾಣ್ದೆ, ಹೊಡೆಯಕ್ಕೂ ಆಗ್ದೆ, ಅಪ್ಪ ಬರೋತನಕ ಕಾಯಬೇಕಾಗಿತ್ತು. ಅಪ್ಪ ಊರೊಳಗಿಂದ ಬಂದ ಮೇಲೆ ಸಾಯಿಸಿದ್ದ. ಅಷ್ಟೊತ್ತು ನಮ್ಮ ಕಣ್ಣಿಗೆ ನಿದ್ರೆ ಇಲ್ದೆ ಕಾಯ್ದು ಕುಂತಿದ್ದು ನೆನಪಿಗೆ ಬಂದು ಅವ್ವನ ಸೆರಗು ಹಿಡಿದು ನಿಂತೆ.

ನೆಲ ಮನೆಯನ್ನೆಲ್ಲ ಗುಡಿಸಿದ ಅವ್ವ ನಮಗೆ ಮಲಗಲು ಚಾಪೆ ಹಾಕಿದಳು. ಸಿದ್ದಿ ಅತ್ತೆ ಪಕ್ಕದಲ್ಲೇ ನಿದ್ದೆ ಹೋದಳು. ಹುಚ್ಚಮ್ಮ ಇನ್ನೂ ಎಚ್ಚರಾಗಿದ್ದಳು. ಅತ್ತೆ ಮಾತ್ರ ಇನ್ನೂ ಮಗಳ ಚಿಂತೆಯಲ್ಲೇ ಇದ್ದಳು. ಅಜ್ಜಿ ಅದೇನು ಸದ್ದು ಎಂದು ಹೊರಗೆ ಇಣುಕಿದಳು. ಅತ್ತಿಂದ ಲಾಟೀನು ಬೆಳಕು ಕಂಡವಳೆ ‘ಓ ಬಂದ್ರು’ ಎಂದು ಬಾಗಿಲು ತೆರೆದಳು. ನಾನು ಎದ್ದು ಬಾಗಿಲತ್ತ ಓಡಿದೆ. ಅತ್ತೆ ಗೆಲುವಾದಂತೆ ಎದ್ದು ಬಾಗಿಲಿಗೆ ಬಂದಳು. ಅವ್ವನೂ ಎದ್ದಿದ್ದಳು. ಆ ಲಾಟೀನು ಬೆಳಕಿನಲ್ಲಿ ಅಪ್ಪ, ಚಿಕ್ಕಪ್ಪ, ಮರಿಮಾವ ಕಂಡರು. ಕೆಂಪಿ ಮಾತ್ರ ಬಾರದಿದ್ದುದನ್ನು ನೋಡಿ ಆತಂಕಕ್ಕೆ ಒಳಗಾದರು. ಆ ಮೂವರು ಒಳಗೆ ಬರುತ್ತಲೇ ‘ಇಂಥಾ ನೀರು, ಇಂಥಾ ಮಳೆ ನಾವು ಯಾವತ್ತೂ ನೋಡಿರಲಿಲ್ಲ. ಇದು ಮಳೆನಾ? ತೋಟಗಳಲ್ಲಿ ಮರ ಗಿಡಗಳೆಲ್ಲ ಬಿದ್ದು ಚೆಲ್ಲಾಡೋಗವೆ. ಕೆರೆ ತುಂಬಿ ನೀರು ಹರಿಯುತ್ತಿರೋದನ್ನ ಕಿವಿಯಲ್ಲಿ ಕೇಳಿದರೆ ಸಾಕು, ಕೆರೆಯೇ ಒಡೆದೋದಂಗೆ ಅನ್ನಿಸುತ್ತೆ. ಅದಿರ್ಲಿ… ಎಲ್ಲಲ ಮರಿ ಕೆಂಪಿ?’ ಅಂದ ಅಜ್ಜ.

‘ಕತ್ತೆ ತೋಟಕ್ಕೆ ಕಟ್ಟವಳೆ, ಆದ್ರೆ ಅಲ್ಲೆಲ್ಲಿ ಹುಡುಕಿದ್ರೂ ಇಲ್ಲ. ತಿಮ್ಲಾಪುರಕ್ಕೇನಾದ್ರೂ ಹೋದ್ಲಾ? ತೋಟಕ್ಕೆ ಬಂದಿದ್ದವರು ಮಳೆ ಬರೋದನ್ನ ನೋಡಿ ಬಾ ನಾಳೆ ಹೋಗುವಂತೆ ಅಂತ ಕರ್ಕಂಡೋದ್ರ? ಏನೋ ನಾಳೆ ನೋಡಿದ್ರಾಯಿತು…’ ಅಂದು ಒಳಕ್ಕೆ ಬಂದ.

*****

ರಾತ್ರಿ ಬಂದ ಮಳೆಗೆ ನೆಲದ ಮೇಲೆ ಕಾಲಿಡಲೂ ಆಗದಷ್ಟು ಕೆಸರು. ನಾನು ಸ್ಕೂಲಿಗೆ ಹೋಗಿದ್ದೆ. ಸ್ಕೂಲ್ ಬಿಟ್ಟಿತ್ತು. ಮನೆ ಕಡೆಗೆ ಬರ್ತಿದ್ದೆ. ಅವ್ವ, ಸಣ್ಣತಾತ ಸಣ್ಣಸಿದ್ದಯ್ಯ ಅವರ ಮನೆ ಹತ್ತಿರ ಕಾಣ್ತು. ನಾನು ಅವ್ವನ ಹತ್ತಿರ ಹೋಗಲು ‘ಅವ್ವಾ’ ಅಂದೆ. ಜನ ಸುತ್ತ ನಿಂತಿದ್ದರು. ‘ಅವ್ವಾ, ಅವ್ವಾ’ ಅಂದಾಗ ‘ಅಲ್ಲೇ ಇರು ಬಂದೆ’ ಅಂದು ತಲೆ ಮೇಲೆ ಸೆರಗು ಹೊದ್ದ ಹೆಂಗಸೊಬ್ಬಳ ಸಂಪಲಿಗೆ ಕರೆದುಕೊಂಡು ಹೋದಳು. ಅವಳ ಹಿಂದೆ ನಾಲ್ಕೈದು ಜನ ಹೆಂಗಸರು ಹೋದರು. ಬದ್ರಮ್ಮ ಹಿಂದೆ ನೀರಿನ ಬಿಂದಿಗೆ ಹಿಡಿದುಕೊಂಡು ಹೋದಳು.

ನನಗೆ ಅದೇನು ಅನ್ನೋ ಕುತೂಹಲದಲ್ಲಿ ಅವರತ್ತ ಹೋಗಲು ಹೆಜ್ಜೆ ಹಾಕಿದೆ. ಅಲ್ಲಿ ನಿಂತಿದ್ದ ರಾಮಕ್ಕ ‘ಹೇ ಬತ್ತಾಳೆ ನಿಂತುಕೋ’ ಅಂದಳು. ‘ಅದಕೇನು ಗೊತ್ತು ಮಾಯದ ಮಗ ಹೋದ್ರೆ ಹೋಗಲಿ ಬಿಡೆ’ ಅಂದಳು ಜಯಮ್ಮ. ಆ ಮಾತಿಗೆ ಅತ್ತಿಂದ ‘ಗಂಡಸ್ಗ್ಯಾಕೆ ಗೌರಿ ದುಃಖ ಸುಮ್ಕಿರೆ’ ಅಂದ್ಲು. ‘ಅಲ್ಲಿ ನಿಮ್ಮವ್ವಾ ಬಿಸುಲುಬಾಳೆ ಹಣ್ಣು ತಿನ್ತಾಯಿಲ್ಲ ಬತ್ತಾಳೆ ಇರು’ ಅಂದು ತಡೆದಳು.

ನನಗೆ ಅವ್ವ ಹೋದ ಕಡೆಗೇ ಹೋಗಬೇಕು ಅನ್ನಿಸಿತು. ಇವರು ಬಿಡದೆ ಇದ್ದದ್ದರಿಂದ ಒಳಗೆ ದುಃಖವಾಗಿತ್ತು. ಅವ್ವನನ್ನು ಒಳಗೊಳಗೆ ಬೈದುಕೊಳ್ಳುತ್ತಿದ್ದೆ. ಅವ್ವ ಇನ್ನೂ ಬರ್ಲಿಲ್ಲ್ಲ, ನನ್ನ ಅವಳ ಜೊತೆಗೆ ಕರಕೊಂಡು ಹೋಗ್ಲಿಲ್ಲ ಅನ್ನೋದು ಒಳಗೆ ಭಾರವಾಗುತ್ತಲೇ ಹೋಗುತ್ತಿತ್ತು. ಅಲ್ಲಿ ಯಾರೋ ‘ಇದೇನೆ ನೀನು ಈ ಬೀದಿಲಿ’ ಅಂತ’ ಅವ್ವನ್ನ ಕೇಳಿದರು. ‘ನಮ್ಮ ಕಮಲಿ ನೀರಾಕೊಂಡವ್ಳೆ ಅದಕೆ ಬಂದೆ’ ಅಂತು. ಅವ್ವ ಹೇಳಿದ ಮಾತು ನನಗೆ ಅದೇನು ತಿಳಿಯಲಿಲ್ಲವಾದರೂ, ಅಲ್ಲಿ ಸುತ್ತ ನೆರೆದಿದ್ದವರು ‘ಇತ್ತ ಬಾ’ ಅಂತ ನನ್ನ ಕೈ ಹಿಡಿದು ಒತ್ತಟ್ಟಿಗೆ ಯಳ್ಕಂಡ್ರು. ಅವ್ವ ಹೊರ ಬಂದಾಗ ಅವ್ವನತ್ತ ಕೈ ಚಾಚಿದೆ. ‘ಅಲ್ಲೇ ಇರು ಬಂದೆ’ ಅಂತು. ತಲೆ ಮೇಲೆ ಮುಸುಕು ಹಾಕಿಕೊಂಡಿದ್ದ ಹುಡುಗಿಯೊಬ್ಬಳ ಮನೆ ಸಂಪಲಿಗೆ ಕರೆದುಕೊಂಡು ಹೋದರು. ಅವರ ಹಿಂದೆ ಬದ್ರಮ್ಮ ನೀರು ಎತ್ತಿಕೊಂಡು ಹೋದಳು.


ಇತ್ತಿಂದ ಹೋದ ಬದ್ರಮ್ಮ ಅತ್ತಿಂದ ತಲೆ ಮೇಲೆ ಮುಸುಕು ಹಾಕಿಕೊಂಡು ಹೋದ ಆ ಹುಡುಗಿನ ಒದ್ದೆ ಮಾಡಿಕೊಂಡು ಕರ್ಕೊಂಡು ಬಂದಳು. ಅಲ್ಲಿ ಅಷ್ಟೇನೂ ಗಂಡಸರು ಇರಲಿಲ್ಲ. ಸುತ್ತ ಇದ್ದವರಿಗೆ ಎಲೆ ಅಡಿಕೆ, ನೆನೆದಕ್ಕಿ, ಕಡ್ಲೆ, ಎಲೆ ಮೇಲೆ ಹಾಕಿ ಕೊಡುತ್ತಿದ್ದರು. ಅಲ್ಲೇ ನಿಂತ ನನಗೆ ನಿಂಗಮ್ಮ ‘ತಗಳ್ಳಾ ನಿಮ್ಮತ್ತೆ ದೊಡ್ಡವಳಾಗವ್ಳೆ’ ಅಂದು ಕೊಪ್ಪರಿ ಬೆಲ್ಲ ಕೊಟ್ಟಳು.

(ಕೃತಿ: ಗಿಣಿ ಬಿಸ್ಕತ್ತು  (ಕಾದಂಬರಿ), ಲೇಖಕರು: ಆಲೂರು ದೊಡ್ಡನಿಂಗಪ್ಪ, ಪ್ರಕಾಶಕರು: ಪಂಪ ಪ್ರಕಾಶನ, ಬೆಲೆ: 150/-)