ಎಲ್ಲೋ ಕೆಲವು ಹೆಣ್ಣುಮಕ್ಕಳು ಈ ಪರಿಧಿ ದಾಟಿ ತಾಲೀಮುಗಳಿಗೆ ಬರುವುದು ಅಪರೂಪ. ಇಂದಿಗೂ ಪರಿಸ್ಥಿತಿ ಹೀಗಿರುವಾಗ ಅಂದಿನ ಕಾಲಕ್ಕೆ ಗಿರಿಜಮ್ಮ ರಂಗಭೂಮಿ ಪ್ರವೇಶಿಸಿದ ಬಗೆಯೇ ವಿಚಿತ್ರ. ಮತ್ತು ನಟಿಸುತ್ತ ನಟಿಸುತ್ತ ಸರಿಸುಮಾರು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವುದು ದೊಡ್ಡ ಅಚ್ಚರಿ. ಕೊಂಚ ಎಚ್ಚರ ತಪ್ಪಿದ್ದರೆ ಈ ಆತ್ಮಕಥನ ತುಂಬ ನಾಜೂಕಿನ ‘ಆತ್ಮಪ್ರಶಂಸೆ’ಯ ಕಥನವಾಗುತ್ತಿತ್ತು.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

 

ನಟನೆ ನಾಟಕದಲ್ಲಾಗಿರಲಿ, ಸಿನಿಮಾದಲ್ಲಾಗಿರಲಿ; ಹೀರೋ ಆಗಿರಲಿ ಅಥವಾ ಪೋಷಕ ಪಾತ್ರವೇ ಆಗಿರಲಿ ಕೆಲವು ನಟರಿಗೆ ಸಿಗುವ ಪಾತ್ರಗಳು ಮೊನೊಟನಸ್ ಎಂದು ನೋಡುವ ಪ್ರೇಕ್ಷಕನಿಗೆ ಅನಿಸುತ್ತಿರುತ್ತದೆ. ಆದರೆ ಕೆಲವೇ ನಟರು ಮತ್ತು ನಟಿಯರು ಈ ಅಪಾಯದಿಂದ ತಪ್ಪಿಸಿಕೊಂಡಿರುತ್ತಾರೆ. ಈ ನೆಲೆಯಲ್ಲಿ ನನಗೆ ಡಾ.ರಾಜ್ ಕುಮಾರ್ ಬಿಟ್ಟರೆ ದಿ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಅನಿಸಿದ್ದು ಲೋಕೇಶ್. ಮತ್ತು ಲೋಕೇಶರ ಅಭಿನಯ ಕಣ್ತುಂಬಿಕೊಳ್ಳುವ ಜೊತೆಜೊತೆಗೇ ಮನಸ್ಸಿನಲ್ಲಿ ನೆಲೆನಿಲ್ಲಲು ಆರಂಭಿಸಿದ್ದು ಗಿರಿಜಮ್ಮ. ಅಂದರೆ ಗಿರಿಜಾಲೋಕೇಶ್. ನನ್ನ ಯಾವತ್ತಿನ ಪ್ರೀತಿಯ ಗಿರಿಜಮ್ಮನ ಕಥೆಗೆ ಅನಂತರ ಬರುತ್ತೇನೆ.

ಸಿನಿಮಾದಲ್ಲಿ ಬರೀ ಹೀರೋಯಿಸಂ ಮೆರೆಸೋದೇ ಆಯಿತು ಅಂತ ನಾನು ಗೊಣಗಿಕೊಳ್ಳುತ್ತಿದ್ದ ದಿನಗಳಲ್ಲಿ ಅಪರೂಪಕ್ಕೆ ತುಂಬ ಚೆಂದದ, ಬೇರೆ ಟ್ರಾಕಿನ ಸಿನಿಮಾಗಳೂ ಬರುತ್ತಿದ್ದವು. ತುಂಬ ಪ್ರಸಿದ್ಧ ನಾಟಕ ‘ಕಾಕನಕೋಟೆ’ ಯಲ್ಲಿ ಲೋಕೇಶ್ ಮತ್ತು ಗಿರಿಜಮ್ಮ ಹಿಂದೆ ನಟಿಸಿದ್ದರು ಅಂತ ಕೇಳಿದ್ದೆ. ಆದರೆ ನೋಡಿರಲಿಲ್ಲ. ಆದರೆ ಅದು ಸಿನಿಮಾ ಆದಾಗ ನೋಡಿದೆ. ನನ್ನ ಇಷ್ಟದ ಹಾಡು ‘ನೇಸರಾ ನೋಡು.. ನೇಸರಾ ನೋಡು…’ ಇಂದಿಗೆ ಕೇಳಿದರೂ ಕಾಕನಕೋಟೆ ಸಿನಿಮಾದ ಪ್ರತಿ ದೃಶ್ಯ ನೆನಪಿಗೆ ಬರುತ್ತದೆ. ಅದರಲ್ಲಿ ಲೋಕೇಶರ ಅಭಿನಯ ಕಣ್ಣಿಗೆ ಕಟ್ಟುತ್ತದೆ. ವರ್ಸಟೈಲ್ ಆ್ಯಕ್ಟರ್ ಅಂದರೆ ಇವರು ಕಣ್ರೀ ಅಂತ ಅನಿಸಿದ್ದು ಆ ಸಿನಿಮಾದಲ್ಲಿ ಲೋಕೇಶ್ ರನ್ನ ನೋಡಿದ ಮೇಲೆಯೇ. ಆಮೇಲೆ ‘ಪರಸಂಗದ ಗೆಂಡೆತಿಮ್ಮ’ ನೋಡಿದೆ. ‘ಬ್ಯಾಂಕರ್ ಮಾರ್ಗಯ್ಯ..’ ನಂತರ ‘ಮುಯ್ಯಿ’….ನಂತರ ‘ಭುಜಂಗಯ್ಯನ ದಶಾವತಾರʼ… ಎಷ್ಟು ತರಹದ ವೇರಿಯೇಷನ್ಸ್ ಇರುವ ಪಾತ್ರಗಳು! ಇಷ್ಟು ಚೆಂದ ನಟಿಸ್ತಾರಲ್ಲ.. ಹೇಗೆ ಎಂದು ಹಿನ್ನೆಲೆ ಕೆದಕಿದಾಗ ತಿಳಿದದ್ದು ಲೋಕೇಶ್ ಅವರು ಬಂದದ್ದೂ ರಂಗಭೂಮಿಯಿಂದಲೇ ಎಂದು. ತಂದೆ ಸುಬ್ಬಯ್ಯ ನಾಯ್ಡು ಅಂತಂದ ಮೇಲೆ ಮಾತಾಡಲು ಏನಿದೆ?

ಲೋಕೇಶರ ಜೊತೆಗೆ ದಾಂಪತ್ಯದಲ್ಲಿ ಚೆಂದದ ಮಡದಿಯ ಚಿತ್ರವಾಗಿ ಕದಲುತ್ತಿದ್ದ ಗಿರಿಜಮ್ಮ ಸಿನಿಮಾದ ಒಂದು ದೃಶ್ಯದಲ್ಲಿ ಕಣ್ಣಿಗೆ ಕಟ್ಟುವಂತೆ ಅಭಿನಯಿಸಿ ನನ್ನ ಮನಸ್ಸಿನಲ್ಲಿ ನೆಲೆನಿಂತುಬಿಟ್ಟಿದ್ದರು. ಆ ಸಿನಿಮಾ ಹೆಸರು ಮರೆತಿದೆ. ಅಥವಾ ಅದು ‘ಭುಜಂಗಯ್ಯನ ದಶಾವತಾರ ’ ವೇ ಇರಬೇಕು. ಗಿರಿಜಮ್ಮ ದುಃಖತಪ್ತ ಭಾವದಲ್ಲಿ ಮಣ್ಣು ತೂರುತ್ತ ಶಾಪ ಹಾಕುವ ದೃಶ್ಯ. ಅದರಲ್ಲಿ ಗಿರಿಜಮ್ಮನಲ್ಲಿದ್ದ ತನ್ಮಯತೆ ನನ್ನನ್ನ ಬೆರಗುಗೊಳಿಸಿತ್ತು. ಯಾಕೆಂದರೆ ಆ ರೀತಿ ತನ್ನನ್ನು ತಾನು ಮರೆಯದೆ ನಟಿಸಲು ಸಾಧ್ಯವಿಲ್ಲ. ಅಂದಿನಿಂದ ನಾನು ಲೋಕೇಶರಿಗೆ ಹೇಗೆ ಫ್ಯಾನ್ ಆಗಿದ್ದೆನೋ ಪ್ರೀತಿಯ ಗಿರಿಜಮ್ಮನಿಗೂ ಫ್ಯಾನ್ ಆದೆ.

‘ಪ್ರೀತಿಯ..’ ಅಂತ ಮತ್ತೆ ಮತ್ತೆ ಹೇಳಲೂ ಕಾರಣ ಇದೆ. ಆ ಹೊತ್ತಿಗೆ ಲೋಕೇಶ್ ನಿರ್ಗಮಿಸಿದ್ದರು. ಗಿರಿಜಮ್ಮನನ್ನ ಒಮ್ಮೆ ಸುಚಿತ್ರ ಫಿಲ್ಮ್ ಸೊಸೈಟಿ ಬಳಿಯೋ ಅಥವಾ ಬೇರೆ ಸಭಾಂಗಣದಲ್ಲೋ ನೆನಪಾಗುತ್ತಿಲ್ಲ- ಒಟ್ಟಿನಲ್ಲಿ ಭೇಟಿಯಾಗಿದ್ದೆ. ಕೆಮರಾ ಎದುರು ಚೆಂದ ನಟಿಸ್ತಾರೆ ಅಂದರೆ ಅದಕ್ಕೆ ಹಿನ್ನೆಲೆಯಾಗಿ ರಂಗಭೂಮಿಯ ಸೆಳವು ಇದ್ದೇ ಇರುತ್ತದೆ ಎಂದು ಇಂದಿನಂತೆ ಅಂದೂ ನಾನು ನಂಬಿದ್ದೆ. ಹೇಗೂ ನನ್ನ ಕಣ್ಣುಗಳಲ್ಲಿ ಪ್ರೀತಿಯ ಗಿರಿಜಮ್ಮನ ದುಃಖತಪ್ತ ಅಭಿನಯದ ಚಿತ್ರ ಮಾಸಿರಲಿಲ್ಲ. ಜೊತೆಗೆ ಗಿರಜಮ್ಮನನ್ನ ಕಂಡ ಕೂಡಲೇ ಅವರನ್ನ ಮಾತಾಡಿಸಬೇಕೆನ್ನುವ ಇಚ್ಛೆ ತೀವ್ರವಾಗಿ ಮಾತಾಡಿಸಲು ಮುಂದಾಗಿ ‘ಮೇಡಂ ನಿಮ್ಮ ಅಭಿನಯ ಸೂಪರ್. ರಂಗಭೂಮಿ ಹಿನ್ನೆಲೆ ಇರಲೇಬೇಕು ಅಂತನ್ನಿಸಿದೆ ನನಗೆ..’ ಎಂದಿದ್ದೆ.

‘ಹೌದು ಕಣ್ರೀ..’ ಎಂದು ಮೊದಲಿಗೆ ಮಾತು ಆರಂಭಿಸಿದ್ದರು ಗಿರಿಜಮ್ಮ. ‘ಅನಿಸೋದು ಏನು ಬಂತು..? ಎಷ್ಟು ನಾಟಕಗಳಲ್ಲಿ ಪಾತ್ರ ಮಾಡಿದ್ದೀನಿ ಲೆಕ್ಕ ಇಟ್ಟಿಲ್ಲ.. ನಿಮಗೆ ಹಾಗೆ ಅನಿಸ್ತಿದೆ ಅಂದರೆ ನನಗೆ ಸಂತೋಷವೇ…’ ಎಂದು ಮಾತಾಡಲು ಆರಂಭಿಸಿದ್ದರು. ಚೂರೂ ಬಿಂಕವಿರಲಿಲ್ಲ. ನಾನು ಆ ಹೊತ್ತು ಅವರ ಕಣ್ಣಿಗೆ ಪುಟ್ಟ ಹುಡುಗನ ತರ ಕಾಣುತ್ತಿದ್ದೆನೊ ಏನೋ, ಗಿರಿಜಮ್ಮ ನನ್ನ ತೋಳು ಹಿಡಿದು ಆತ್ಮೀಯವಾಗಿ ಮಾತಾಡಲು ಆರಂಭಿಸಿದ್ದರು. ಎಷ್ಟು ಆತ್ಮೀಯತೆ ಅಂದರೆ ನಾನೇ ಕನ್ ಫ್ಯೂಸ್ ಆಗುವಷ್ಟು! ಗಿರಿಜಮ್ಮ ನನಗೆ ಈ ಪರಿ ಪರಿಚಯ ಇದ್ದಾರೆಯೇ ಅನಿಸುವ ರೀತಿಯಲ್ಲಿ ಮಾತಾಡಿ ನನ್ನಲ್ಲಿ ಪ್ರಶ್ನೆಗಳನ್ನ ಹುಟ್ಟುಹಾಕಿ ನಡೆದಿದ್ದರು.

ಅವರು ಅಂದು ತೋರಿದ ಆತ್ಮೀಯತೆ ಮತ್ತು ಪ್ರೀತಿಯಲ್ಲಿ ಚೂರೂ ಕೃತಕತೆ ಇರಲಿಲ್ಲ. ಇದು ಹೇಗೆ ಸಾಧ್ಯ ಎಂದು ಈ ಹೊತ್ತಿಗೂ ಅನಿಸುತ್ತಲೇ ಇರುತ್ತದೆ. ಇನ್ನೊಮ್ಮೆ ಸೃಜನ್ ಅವರನ್ನ ಭೇಟಿಯಾಗುವ ಸಂದರ್ಭ ನಿರ್ಮಾಣವಾಗಿತ್ತು. ಅವರೂ ಅಷ್ಟೇ. ಡೌನ್ ಟು ಅರ್ತ್. ನಾನು ಈ ಪರಿ ಅವರಿಗೆ ಪರಿಚಯ ಹೇಗೆ ಅನಿಸುವಷ್ಟರ ಮಟ್ಟಿಗೆ ಮಾತು. ಭೇಟಿಯಾಗುತ್ತಿದ್ದದ್ದೇ ಮೊದಲ ಸಲ! ಆದರೂ ಈ ಪರಿ ಪ್ರೀತಿ! ಏನೋ ಈ ಕುಟುಂಬವೇ ಹೀಗಿರಬೇಕು ಅಂದುಕೊಂಡಿದ್ದೆ. ಆದರೆ ಯಾಕೋ ಗೊತ್ತಿಲ್ಲ ಅಂದಿನಿಂದ ಗಿರಿಜಮ್ಮ ನನ್ನಲ್ಲಿ ಪ್ರೀತಿಯ ಸೆಲೆಯಾಗಿ ಬೆಳೆಯುತ್ತಲೇ ಹೋದರು.

ಈಚೆಗೆ ಅವರ ಆತ್ಮಕಥೆ ‘ಗಿರಿಜಾ ಪರಸಂಗ’ ಹೊರಬಂದಾಗ ತುಂಬ ಅಕ್ಕರೆಯಿಂದ ಆ ಕೃತಿ ಕೊಂಡುಕೊಂಡೆ. ಅದನ್ನ ಕೊಂಡುಕೊಳ್ಳುವಾಗ ಜೊತೆಯಲ್ಲಿ ಗೆಳತಿ ಇದ್ದಳು. ಗಿರಿಜಮ್ಮ ಅಂದು ನನಗೆ ತೋರಿದ ಪ್ರೀತಿ ಸಲುವಾಗೇ ಈ ಕೃತಿ ಕೊಂಡುಕೊಳ್ಳುತ್ತಿದ್ದೇನೆ ಎಂದು ಗೆಳತಿಗೆ ಹಿಂದಿನ ಸಂದರ್ಭ ವಿವರಿಸಿದೆ. ಆಕೆ ಕಣ್ಣರಳಿಸಿದಳು.

‘ಗಿರಿಜಾ ಪರಸಂಗ’ ಓದಲು ಆರಂಭಿಸಿದೆ. ಇದು ಗಿರಿಜಮ್ಮ ನೇರ ಬರೆದಿರುವುದಲ್ಲ. ಅವರು ಹೇಳಿರುವುದನ್ನ ಜೋಗಿ ಸರ್ ನಿರೂಪಿಸಿರುವುದು. ಗಿರಿಜಮ್ಮನ ಮಾತಿನ ಶೈಲಿಯನ್ನ ಜೋಗಿ ಸರ್ ಎಲ್ಲೂ ತಿದ್ದಲು ಹೋಗಿಲ್ಲ. ಗಿರಿಜಮ್ಮ ಮಾತಾಡಿರುವ ಬಗೆಯಲ್ಲೇ ಕಥನ ಇರುವುದರಿಂದ ಆತ್ಮಕಥೆಗೊಂದು ಅನನ್ಯತೆ ದೊರಕಿದೆ. ಓದುತ್ತಾ ಓದುತ್ತ ನನಗೆ “ಛೆ ಅಂದು ನನಗೆ ಅಷ್ಟು ಪ್ರೀತಿ ತೋರಿದ ಗಿರಿಜಮ್ಮ ನನಗೇ ಒಂದು ಮಾತು ಹೇಳಿ ‘ಬಂದು ಬರ್ಕಳಪ್ಪ..ʼ ಅಂದಿದ್ದರೆ ತುಂಬ ಖುಷಿಯಿಂದ ಬರೆದಿರುತ್ತಿದ್ದೆ…” ಅಂದುಕೊಳ್ಳುವ ಮಟ್ಟಿಗೆ ಪುಸ್ತಕದಲ್ಲಿನ ವಿವರಗಳು ಚೆಂದವಾಗಿವೆ. ಆದರೆ ನನಗೆ ಚೆನ್ನಾಗಿ ನೆನಪಿರುವಂತೆ ಗಿರಿಜಮ್ಮನಿಗೆ ನನ್ನನ್ನ ಮಾತಾಡಿಸಿದ ನೆನಪೂ ಇರುವುದಿಲ್ಲ. ಆದರೆ ಅಂದು ಅವರ ಕಣ್ಣುಗಳಲ್ಲಿದ್ದ ಪ್ರೀತಿಯನ್ನ ನಾನು ಎಂದಿಗೂ ಮರೆಯಲಾರೆ. ಅವರೊಂದಿಗೆ ನನ್ನದು ಮೊದಲ ಭೇಟಿ ಅನಿಸದ ಹಾಗೆ ಮತ್ತು ನಾನು ಗೊಂದಲಗೊಳ್ಳುವ ಹಾಗೆ ಮಾತಾಡಿ ಹೊರಟಿದ್ದರು.

ಸಿನಿಮಾದಲ್ಲಿ ಅವರ ನಟನೆ ನೋಡಿ ನಾಟಕ ಹಿನ್ನೆಲೆ ಇರುತ್ತದೆ ಅಂದುಕೊಂಡಿದ್ದೆ. ಆದರೆ ‘ಗಿರಿಜಾ ಪರಸಂಗ’ ಓದುತ್ತಾ ಗಿರಿಜಮ್ಮನ ನಾಟಕ ಲೋಕ ಎಷ್ಟು ವಿಸ್ತಾರವಾದದ್ದು ಮತ್ತು ಎಂಥ ಸ್ವಾರಸ್ಯಕರ ಪ್ರಸಂಗಗಳಿಂದ ಕೂಡಿದೆ ಎಂಬುದನ್ನ ಕಂಡುಕೊಂಡೆ. ಅಷ್ಟೂ ಪರಸಂಗಗಳನ್ನ ಓದುತ್ತಿದ್ದಾಗ ನನ್ನಲ್ಲಿ ಬೇರೆಬೇರೆ ವಿಚಾರಗಳು ಕದಲಲು ಆರಂಭಿಸಿದವು.

ಯಾಕೆಂದರೆ ಇಂದಿಗೂ ಕೆಲ ರಂಗತಂಡಗಳು ‘ಹೆಣ್ಣು ಪಾತ್ರಗಳು ಹೆಚ್ಚಿಲ್ಲದ ನಾಟಕ ಇದ್ದರೆ ಉತ್ತಮ’ ಎಂದು ಹೇಳುವುದನ್ನ ಕೇಳಿಸಿಕೊಂಡಿದ್ದೇನೆ. ನಂತರ ನಮ್ಮ ತಂಡಕ್ಕೆ ನಾಟಕ ಬರೆಯುವಾಗ ಒಂದು ಅಥವಾ ಎರಡು ಹೆಣ್ಣಿನ ಪಾತ್ರ ಸಾಕು ಎನ್ನುವ ಹಾಗೆ ಬರೆಯುವ ಘಟ್ಟ ಮುಟ್ಟಿದ್ದೆ. ಮತ್ತು ಬರೆದದ್ದೂ ಇದೆ. ಇದಕ್ಕೆ ಕಾರಣ ನಾಟಕಗಳಲ್ಲಿ ನಟಿಸಲು ಹೆಣ್ಣುಮಕ್ಕಳಿಗಿರುವ ನಿರ್ಬಂಧ. ತೀರಾ ತಡವಾಗಿ ಮನೆ ಸೇರಿಕೊಳ್ಳಬಾರದು, ಹಾಗೊಂದು ವೇಳೆ ಹೀಗಾದದ್ದಾದರೆ ಮಾರನೆಯ ದಿನದಿಂದ ನಾಟಕಕ್ಕೆ ಆಕೆ ಗೈರಾಗುವುದು ಖಾಯಂ.

ಎಲ್ಲೋ ಕೆಲವು ಹೆಣ್ಣುಮಕ್ಕಳು ಈ ಪರಿಧಿ ದಾಟಿ ತಾಲೀಮುಗಳಿಗೆ ಬರುವುದು ಅಪರೂಪ. ಇಂದಿಗೂ ಪರಿಸ್ಥಿತಿ ಹೀಗಿರುವಾಗ ಅಂದಿನ ಕಾಲಕ್ಕೆ ಗಿರಿಜಮ್ಮ ರಂಗಭೂಮಿ ಪ್ರವೇಶಿಸಿದ ಬಗೆಯೇ ವಿಚಿತ್ರ. ಮತ್ತು ನಟಿಸುತ್ತ ನಟಿಸುತ್ತ ಸರಿಸುಮಾರು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವುದು ದೊಡ್ಡ ಅಚ್ಚರಿ. ಕೊಂಚ ಎಚ್ಚರ ತಪ್ಪಿದ್ದರೆ ಈ ಆತ್ಮಕಥನ ತುಂಬ ನಾಜೂಕಿನ ‘ಆತ್ಮಪ್ರಶಂಸೆ’ಯ ಕಥನವಾಗುತ್ತಿತ್ತು. ಗಿರಿಜಮ್ಮ ಹಾಗೆ ಹೇಳಿಕೊಳ್ಳಬಹುದಿತ್ತು. ಆದರೆ ಇಲ್ಲಿನ ಪ್ರಸಂಗಗಳಲ್ಲಿ ಆತ್ಮಪ್ರಶಂಸೆಗೆ ಬದಲು ಗಿರಿಜಮ್ಮ ತಾವು ನಾಟಕರಂಗಕ್ಕೆ ಬಂದ ವಾಸ್ತವ ಚಿತ್ರಗಳಿವೆ. ಅದಕ್ಕೆ ಸಂಬಂಧಿಸಿದ ಬಿಡಿಬಿಡಿ ಘಟನೆಗಳ ಪುಟ್ಟಪುಟ್ಟ ಪ್ರಸಂಗಗಳಲ್ಲಿ ಬೆಚ್ಚಿಬೀಳಿಸುವ ವಾಸ್ತವಗಳು ತಣ್ಣಗೆ ನಿರೂಪಿತಗೊಂಡಿವೆ. ರಂಗಭೂಮಿಗೆ ಯಾಕೆ ಬಂದಿರಿ ಎಂದು ಹಲವರನ್ನ ಕೇಳಿದರೆ ‘ಅದು ನನಗೆ ಪ್ಯಾಷನ್…’ ಎಂದು ಉತ್ತರಿಸುವುದನ್ನ ಕೇಳಿದ್ದೇನೆ. ಆದರೆ ಗಿರಿಜಮ್ಮ ನಾಟಕ ರಂಗಕ್ಕೆ ಬಂದದ್ದು ಬೇರೆ ಕಾರಣಕ್ಕೆ. ಅವರ ಬದುಕಿನ ಕಥನದ ಕೆಲ ವಿವರಗಳನ್ನ ಅವರ ಮಾತುಗಳಲ್ಲೇ ಕೇಳಿಸಿಕೊಳ್ಳುವುದಾದರೆ ಹೀಗಿವೆ-

(ಲೋಕೇಶ್‌ ಮತ್ತು ಗಿರಿಜಾ ಲೋಕೇಶ್‌ ದಂಪತಿ)

ನನಗೆ ಚೆನ್ನಾಗಿ ನೆನಪಿರುವಂತೆ ಗಿರಿಜಮ್ಮನಿಗೆ ನನ್ನನ್ನ ಮಾತಾಡಿಸಿದ ನೆನಪೂ ಇರುವುದಿಲ್ಲ. ಆದರೆ ಅಂದು ಅವರ ಕಣ್ಣುಗಳಲ್ಲಿದ್ದ ಪ್ರೀತಿಯನ್ನ ನಾನು ಎಂದಿಗೂ ಮರೆಯಲಾರೆ.

‘ …ತಂದೆಗೆ ನನ್ನ ಮೇಲೆ ಜಾಸ್ತಿ ಪ್ರೀತಿ. ಅವರೇನು ಹೆಚ್ಚು ಹೊಡೆಯುತ್ತಿರಲಿಲ್ಲ. ಈ ವೇಳೆ ನನ್ನ ತಂಗಿ ಲಲಿತಾ ಸಂಗೀತ ಕಲಿತಳು. ನಾನು ಚೂರುಪಾರು ನೃತ್ಯ ಕಲಿತೆ…

‘ಆ ದಿನಗಳಲ್ಲೇ ನನಗೊಬ್ಬ ತಮ್ಮ ಹುಟ್ಟಿದ. ಅವನು ಹುಟ್ಟಿದ ಗಳಿಗೆ ಚೆನ್ನಾಗಿಲ್ಲ, ಅವನ ಮುಖ ನೇರವಾಗಿ ನೋಡಬಾರದು, ಮೊದಲು ಎಣ್ಣೆಯಲ್ಲಿ ನೋಡಿ ಆಮೇಲೆ ಅವನ ಮುಖ ನೋಡಬೇಕು ಅಂತ ಹಿರಿಯರು ಅಪ್ಪನಿಗೆ ಹೇಳಿದರು. ಆಗ ಅಪ್ಪನ ಜೇಬು ತುಂಬಾ ಹಣ. ಭಾರಿ ಶ್ರೀಮಂತಿಕೆ. ನೆನೆದದ್ದೆಲ್ಲ ನಡೆಯುವ ಕಾಲ. ಹೀಗಾಗಿ ಅವರು ಯಾರ ಮಾತಿಗೂ ಕಿವಿಗೊಡಲಿಲ್ಲ. ಅದನ್ನೆಲ್ಲ ನಂಬಲೂ ಇಲ್ಲ. ಅವರ ವ್ಯಕ್ತಿತ್ವವೂ ಹಾಗೇ ಇತ್ತು. ಅವರು ನೇರವಾಗಿ ಮಗು ಮುಖ ನೋಡಿದರು…

‘ …ಹಿರಿಯರ ಮಾತು ನಿಜವಾಯಿತೋ.. ನಂಬದೆ ಇದ್ದದ್ದರಿಂದ ನಷ್ಟವಾಯಿತೋ ಅಥವಾ ಇದೆಲ್ಲ ಕಾಕತಾಳೀಯವೋ ಗೊತ್ತಿಲ್ಲ. ಅಪ್ಪನ ಏಲಕ್ಕಿ ವ್ಯಾಪಾರ ಪೂರಾ ಮುಳುಗಿ ಹೋಯಿತು…

‘ …ಅಪ್ಪ ತಮ್ಮ ಕೈಲಿ ಇದ್ದ ಹಣ ಕೊಟ್ಟಿದ್ದಲ್ಲದೆ ಮನೆಯಲ್ಲಿದ್ದ ಪಾತ್ರೆ, ಸಾಮಾನುಗಳನ್ನೆಲ್ಲ ಮಾರಿಬಿಟ್ಟರು..

‘ …ಮನೆ ನಡೆಸುವುದಕ್ಕೂ ಕಷ್ಟ ಆಗುವ ಪರಿಸ್ಥಿತಿ ಎದುರಾಯಿತು. ಊಟಕ್ಕೂ ತತ್ವಾರ ಅನ್ನುವಂತಹ ಕಾಲ. ನಮಗೆ ಕಷ್ಟ ಅಂದರೆ ಏನು ಅಂತ ಗೊತ್ತಾಗಿದ್ದೇ ಆಗ…

‘ … ಅಪ್ಪ ಕೆಲಸಕ್ಕಾಗಿ ಅಲೆಯುತ್ತಲೇ ಇದ್ದರು. ಅವರ ಬಳಿ ದುಡ್ಡಿದ್ದಾಗ ಬಿಂದಾಸ್ ಆಗಿ ಯಾರಿಗೆ ಬೇಕೋ ಕೊಡುತ್ತಿದ್ದರು. ಹೇಗೆ ಬೇಕೊ ಹಾಗೆ ಖರ್ಚು ಮಾಡುತ್ತಿದ್ದರು. ಆದರೆ ಈಗ ಅವರು ಖಾಲಿಯಾದಾಗ ಯಾರೂ ಕೇಳುತ್ತಿರಲಿಲ್ಲ. ಅಪ್ಪನಿಗೆ ಕುಡಿಯುವ ಅಭ್ಯಾಸ ಬೇರೆ ಇತ್ತು. ಅದಕ್ಕೆ ಮಾತ್ರ ಸ್ನೇಹಿತರು ಸಿಗುತ್ತಿದ್ದರು. ನಂಗೆ ಸಿಟ್ಟು. ಅಮ್ಮ ಅಷ್ಟು ಕಷ್ಟ ಪಡುತ್ತಿದ್ದಾರೆ. ಅಪ್ಪ ಕುಡಿಯುವುದಕ್ಕೆ ಮಾತ್ರ ದುಡ್ಡು ಒಟ್ಟು ಮಾಡುತ್ತಾರಲ್ಲ ಅಂತ. ಕ್ರಮೇಣ ನನಗೆ ಗೊತ್ತಾಯಿತು. ಸ್ನೇಹಿತರು ಏನು ಕೊಡಿಸದಿದ್ದರೂ ಕುಡಿಸುವುದಕ್ಕಂತೂ ಇದ್ದೇ ಇರುತ್ತಾರೆ ಅಂತ…

‘ … ನಮ್ಮ ಮನೆಯಲ್ಲಿ ಒಂದು ಬಾವಿ ಇತ್ತು. ಒಂದ್ಸಲ ಅಮ್ಮ ನಮ್ಮನ್ನೆಲ್ಲ ಕೂರಿಸಿ ಬಹಳ ಕಷ್ಟ ಇದೆ ನಮಗೆ, ಎಲ್ಲರೂ ಈ ಬಾವಿಗೆ ಬಿದ್ದು ಸಾಯೋಣ ಎಂದರು. ಅದನ್ನ ಕೇಳಿ, ಅಯ್ಯಯ್ಯೋ ನಾನು ಸಾಯಲ್ಲಪ್ಪಾ.. ನೀವು ಬೇಕಾದರೆ ಹಾರಿ.. ನಾನು ಹಾರಲ್ಲ ಎಂದು ಎದ್ದುಬಿಟ್ಟೆ. ಅವರೆಲ್ಲಾ ತುಂಬ ಹೊತ್ತು ಅಲ್ಲಿಯೇ ಕೂತಂತೇ ಇದ್ದರು…

‘ … ನಾವು ನಮಗೇ ಗೊತ್ತಿಲ್ಲದ ಹಾಗೆ ಒಂದು ದಾರಿಯಲ್ಲಿ ಸಾಗುತ್ತಿರುತ್ತೇವೆ. ಅದೇ ದಾರಿಯಲ್ಲಿ ಸಿಗುವ ಯಾರೋ ಒಬ್ಬರು ನಮ್ಮ ಜೀವನದ ದಾರಿಯನ್ನು ಬದಲಾಯಿಸುತ್ತಾರೆ. ನನ್ನ ಹಾದಿ ಬದಲಾದದ್ದು ಅಪ್ಪನಿಗೆ ಈಶ್ವರ ಗೌಡರು ಸಿಕ್ಕಾಗ. ಈಶ್ವರ ಗೌಡರಿಗೆ ಒಂದು ನಾಟಕ ಕಂಪನಿ ಇತ್ತು. ಅವರು ಅವರ ಕಂಪನಿಗೆ ಒಬ್ಬರು ಕಲಾವಿದೆಯನ್ನ ಹುಡುಕುತ್ತಿದ್ದರು. ಡಾನ್ಸ್ ಗೊತ್ತಿರುವ ಕಲಾವಿದೆ ಎಂದಾಗ ಅಪ್ಪನಿಗೆ ನನ್ನ ನೆನಪಾಯಿತು. ಆಗ ನನಗೆ ಡಾನ್ಸ್ ಬರುತ್ತಿತ್ತು.. 14 ವರ್ಷ ವಯಸ್ಸಾಗಿತ್ತು. ಅಪ್ಪ ಕರೆದುಕೊಂಡು ಹೋಗಿ ತೋರಿಸಿದರು. ಅವರು ನನ್ನ ರೂಪ, ನಟನೆ ನೋಡಿ ಮೆಚ್ಚಿಕೊಂಡರು. ನಾನು ಆಯ್ಕೆಯಾದೆ. ಇದಾದದ್ದು 1968ರಲ್ಲಿ. ಆಗ ನಾನು ಎಸ್.ಎಸ್.ಎಲ್.ಸಿ ಅರ್ಧ ಮುಗಿಸಿದ್ದೆ ಅಷ್ಟೇ. ನಮ್ಮ ಮನೆಯಲ್ಲಿ ಕಷ್ಟ ಇದದ್ದರಿಂದ ನಾನೂ ಒಪ್ಪಿಕೊಂಡೆ. ನನಗೂ ಒಳ್ಳೆಯ ಊಟ ಸಿಕ್ಕಿದರೆ ಸಾಕಾಗಿತ್ತು…’

– ನಾಟಕ ಲೋಕಕ್ಕೆ ತನ್ನ ಎಂಟ್ರಿ ಹೀಗಾಯಿತು ಎಂದು ಹೇಳಿಕೊಂಡಿರುವ ಗಿರಿಜಮ್ಮ ನಂತರ ಈ ರಂಗದಲ್ಲಿ ತುಂಬ ವಿಚಿತ್ರ ಮತ್ತು ಸ್ವಾರಸ್ಯಪೂರ್ಣ ಅನಿಸುವ ಪ್ರಸಂಗಗಳನ್ನು ದಾಖಲಿಸಿದ್ದಾರೆ. ಒಂದೊಂದೂ ರೋಚಕ. ಒಂದೊಂದೂ ಬೆರಗು. ಕೆಲವು ನಗೆ ಉಕ್ಕಿಸುತ್ತವೆ. ಮತ್ತೆ ಕೆಲವು ಕಣ್ಣರಳಿಸುವಂತೆ ಮಾಡುತ್ತವೆ. ನಾಟಕದ ಮಂದಿಗೆ ಈ ಪರಿ ಪಡಿಪಾಟಲುಗಳಿರುತ್ತವೆಯೇ ಎಂದು ಯೋಚಿಸುವಂಥ ಪ್ರಸಂಗಳೂ ಇವೆ.

ಗಿರಿಜಮ್ಮ ಒಂದೆಡೆ ಹೀಗೆ ಹೇಳಿಕೊಂಡಿದ್ದಾರೆ- ‘ಒಂದು ಹಂತದಲ್ಲಿ ನಾಟಕವೇ ನನ್ನ ಬದುಕಾಗಿತ್ತು. ತುಂಬಾ ನಾಟಕ ಮಾಡುತ್ತಿದ್ದೆ. ದುಡಿಯುತ್ತಲೂ ಇದ್ದೆ. ಆದರೆ ಉಳಿಯುತ್ತಿರಲಿಲ್ಲ. ನಾಳೆಗಾಗಿ ದುಡಿಯಲೇ ಬೇಕಿತ್ತು…

‘ …. ಒಮ್ಮೆಯಂತೂ ದಿನಕ್ಕೆ ನಾಲ್ಕು ನಾಟಕಗಳಲ್ಲಿ ನಟಿಸಿದ್ದೇನೆ. ಟೌನ್ ಹಾಲ್ ನಲ್ಲಿ ಬೆಳಿಗ್ಗೆ ಏಳೂವರೆಗೆ ನಾಟಕ. ಹತ್ತೂವರೆಗೆ ಮುಗಿಸಿ ಕೆಂಗೇರಿಯಲ್ಲೊಂದು ನಾಟಕ. ಅಲ್ಲಿಂದ ಕಲಾಕ್ಷೇತ್ರದಲ್ಲಿ ಮತ್ತೊಂದು. ಅದನ್ನು ಮುಗಿಸಿ ನಂದಿ ಬೆಟ್ಟಕ್ಕೆ ಹೋಗುವಾಗ ಆವತಿ ಅಂತ ಹಳ್ಳಿ ಸಿಗುತ್ತದೆ. ಅಲ್ಲೊಂದು ನಾಟಕ. ಬೇರೆಬೇರೆ ಥರದ ನಾಟಕ. ಒಂದು ಕಡೆ ಸಾಮಾಜಿಕ, ಇನ್ನೊಂದೆಡೆ ಪೌರಾಣಿಕ, ಐತಿಹಾಸಿಕ ಹೀಗೆ. ಕಲಾಕ್ಷೇತ್ರದಿಂದ ಆವತಿಗೆ ಹೋಗಿದ್ದೇ ಮಜಾ ಇತ್ತು. ನಮಗೆ ಅಲ್ಲಿಗೆ ಹೋಗಲು ಬಸ್ಸು ಸಿಗಲಿಲ್ಲ. ಲಾರಿ ಹತ್ತಿ ಹೋಗಿದ್ದು, ಅಲ್ಲಿ ರಾತ್ರಿಯೆಲ್ಲಾ ನಾಟಕ ಮಾಡಿ ಮನೆಗೆ ಬರೋ ಹೊತ್ತಿಗೆ ಬೆಳಕಾಗಿತ್ತು. ಆಗ ಅಂಥಾ ಎನರ್ಜಿ ಇತ್ತು. ಅನಿವಾರ್ಯತೆಯೂ ಇತ್ತು. ಈಗ ಅದನ್ನೆಲ್ಲ ನೆನೆದರೆ ಅಷ್ಟೆಲ್ಲಾ ಹೇಗೆ ಮಾಡಿದೆ ಅನ್ನಿಸುತ್ತದೆ. ಆದರೆ ಹೊಟ್ಟೆ ಎಲ್ಲವನ್ನೂ ಕಲಿಸುತ್ತದೆ. ಎಷ್ಟುಬೇಕಾದರೂ ದುಡಿಸುತ್ತದೆ.’

ಗಿರಿಜಮ್ಮನ ಪರಸಂಗಗಳು ಮತ್ತು ಮಾತು ನೆನೆಯುವಾಗ ನನ್ನ ಕಣ್ಣ ಮುಂದೆ ನಮ್ಮ ಹವ್ಯಾಸಿ ರಂಗಭೂಮಿಯ ಹಲವು ತಂಡಗಳು ಮತ್ತು ಅವುಗಳ ಪಡಿಪಾಟಲುಗಳು ನೆನಪಿಗೆ ಬಂದವು. ಗಿರಿಜಮ್ಮ ತಮಗಿದ್ದ ಅನಿವಾರ್ಯತೆ ಮತ್ತು ಹಸಿವು ನೀಗಿಸಿಕೊಳ್ಳಲಿಕ್ಕೆ ನಾಟಕ ರಂಗಕ್ಕೆ ಬಂದರು. ಮತ್ತು ನಾಟಕಗಳನ್ನ ಶ್ರದ್ಧೆಯಿಂದ ಮಾಡಲು ಸಾಧ್ಯವಾಗಿಸಿದ್ದು ಮತ್ತೆ ಅನಿವಾರ್ಯತೆ ಮತ್ತು ಹಸಿವಿನಿಂದಲೇ. ಇದು ಕರಾಕುವಕ್ಕುತನ ಮತ್ತು ಶ್ರದ್ಧೆ ಹುಟ್ಟುಹಾಕುತ್ತದೆ. ಇಲ್ಲಿ ಸಂಭಾವನೆ ಒಂದು ಉಪಶಮನದಂತೆ ಇರುತ್ತಿತ್ತು.

ಹವ್ಯಾಸಿಗಳಲ್ಲಿಯೂ ಹಸಿವೆ ಇದೆ. ಆದರೆ ಗಿರಿಜಮ್ಮನಿಗಿದ್ದ ಹಸಿವು ಅಲ್ಲ. ಮತ್ತು ಇಂದಿನ ದಿನಮಾನದಲ್ಲಿ ಹವ್ಯಾಸಿ ತಂಡಗಳನ್ನ ನಡೆಸುತ್ತಿರುವವರು ನಟರಿಗೆ ಸಂಭಾವನೆ ಕೊಟ್ಟುಕೊಂಡು ತಂಡ ನಡೆಸುವುದು ಕಷ್ಟ ಎಂದು ನಟನಟಿಯರಿಗೂ ತಿಳಿದೇ ಇರುತ್ತದೆ. ಆದರೂ ಅವರಲ್ಲಿ ಹಸಿವಿರುತ್ತದೆ. ಕೆಲವರಿಗೆ ರಂಗದ ಮೇಲೆ ಪರಿಪೂರ್ಣವಾಗಿ ಮಾಗಬೇಕೆಂಬ ಹಸಿವು. ಕೆಲವರಿಗೆ ರಂಗದ ಮೇಲೆ ಚಪ್ಪಾಳೆ ಗಿಟ್ಟಿಸಿಕೊಂಡರೆ ಸಾಕೆಂಬ ಹಸಿವು. ಬೆಳಗ್ಗಿನಿಂದ ಸಂಜೆವರೆಗೆ ರೊಕ್ಕ ತರುವ ಬೇರೆ ಕಾಯಕ. ಸಂಜೆ ನಂತರ ಆತ್ಮಕ್ಕೆ ನಿರಾಳ ತರುವ ಕಾಯಕ ಎಂದು ಕೆಲವರು ರಂಗಕ್ಕೆ ಹವ್ಯಾಸಿಗಳಾಗಿ ಬರುತ್ತಾರೆ.

ಆದರೆ ಬರಬರುತ್ತ ಕೆಲವರ ಮನಸ್ಸು ಕವಲೊಡೆಯಲು ಆರಂಭಿಸುತ್ತದೆ. ಹಸಿವು ಡಿವೈಡ್ ಆಗುತ್ತದೆ. ಹೆಚ್ಚಿನ ಹಸಿವನ್ನು ನೀಗಿಸಿಕೊಳ್ಳುವ ಕಡೆ ಮನಸ್ಸು ವಾಲಿದಾಗ ನಾಟಕದ ತಾಲೀಮಿನ ಕಡೆಗೆ ಹಸಿವು ಕಡಿಮೆ ಆಗುತ್ತದೆ. ನಿರ್ದೇಶಕ ಅನಿಸಿಕೊಂಡವನು ‘ತಾಲೀಮಿಗೆ ಸರಿಯಾಗಿ ಬನ್ನಿ. ಈ ಕಡೆಗೆ ಹಸಿವು ಕಡಿಮೆ ಆಗುತ್ತಿದೆ’ ಅಂದರೆ ಕೆಲವರು ಹವ್ಯಾಸಿ ತಂಡ ಎಂದು ಗೊತ್ತಿದ್ದೂ ರೊಕ್ಕದ ಮಾತೆತ್ತಿ ತಲೆಹರಟೆ ಮಾಡಲು ಆರಂಭಿಸುತ್ತಾರೆ.

ಆಗ ಹಿಂದಿನ ಕಾಲದಂತೆ ಸಂಭಾವನೆ ಕೊಟ್ಟರೆ ನಟನಟಿಯರ ಹಸಿವಿನ ಬದ್ಧತೆಯನ್ನ ಪ್ರಶ್ನಿಸಲು ಅವಕಾಶ ಕಲ್ಪಿಸಿಕೊಳ್ಳಲು ಸಾಧ್ಯತೆಗಳಿರುತ್ತಿದ್ದವು ಎಂದು ಅನಿಸಲು ಆರಂಭಿಸಿದೆ. ಸಂಭಾವನೆ ಬಾಯಿ ಮತ್ತು ಹಿಂದಿನ ಭಾಗವನ್ನು ಮುಚ್ಚಿಸಿ ಕೆಲಸ ಮಾಡಿಸುತ್ತದೆ ಅಂತನ್ನುವುದಾದರೆ ಮಾಡಲಿ. ಮಾಡದಿದ್ದರೆ ಕಪಾಳಕ್ಕೆ ಬಾರಿಸಿ ಕೇಳುವುದಕ್ಕೂ ಸಾಧ್ಯವಿದೆ ಎಂದೆಲ್ಲ ಗಿರಿಜಮ್ಮನ ರಂಗಕಥಾನಕಗಳನ್ನ ಓದುವಾಗ ಅನಿಸಿತು. ಎಲ್ಲ ತಿಳಿದೂ ಲಿಟರಲ್ಲಾಗಿ ಕೋಡಂಗಿಗಳ ಹಾಗೆ ಆಡುವವರಿಗೆ ಸಂಭಾವನೆ ಕೊಟ್ಟು ಕಪಾಳಕ್ಕೆ ಹೊಡೆದು ಡಿಮಾಂಡ್ ಮಾಡುವ ಕಾಲ ಹವ್ಯಾಸಿಗಳಿಗೆ ಬಂದರೆ ನಟನೆಗೂ ನಾಟಕಕ್ಕೂ ವೃತ್ತಿಪರತೆ ಬರುತ್ತದೆ ಎಂದು ಅನಿಸಿತು.


ಇವೆಲ್ಲ ಒತ್ತಟ್ಟಿಗಿರಲಿ, ನಮ್ಮ ತಂಡದ ನಟನಟಿಯರಿಗೆ ಒಂದಿಷ್ಟು ಕಿವಿ ಮಾತು ಹೇಳಲು ಗಿರಿಜಮ್ಮನನ್ನು ಒಮ್ಮೆ ತುಂಬು ಗೌರವದಿಂದ ಕರೆತರಬೇಕು ಅನಿಸಿತು. ನನ್ನ ಪ್ರೀತಿಯ ಗಿರಿಜಮ್ಮ ಬರಬಹುದೆ..?