ಕನಸಂಥ ಮಳೆಗೆ ಧಾತ್ರಿಯಾದವಳು
ತನಗಿಂತ ಉದ್ದವಾದ ಲಂಗ-
ತನ್ನದೇ ಕಾಲಡಿಗೆ ಸಿಗದಿರಲು ಪರದಾಡಿ
ನಿರಿಗೆ ಸೇರಿಸಿ ಹಿಡಿದು ಪುಟಪುಟನೆ ಓಡಾಡಿ
ಮನೆಗೆಲ್ಲ ಬೆಳಕಾದವಳು
ಬಣ್ಣದ ಕೊಡೆಯ ಹಿಡಿದು
ಶಾಲೆಯಿಂದ ಬರುವಾಗ
ಧೋ- ಎಂದ ಅಡ್ಡಮಳೆಗೆ
ಕೊಡೆ ಬಿಡಿಸಲು ಬರದೆ
ಕಂಗಾಲಾದವಳು
ಉದ್ದ ಜಡೆಯನುದ್ದುದ್ದ ಜಡೆ ಮಾಡಲು
ಚೌರಿ, ರಿಬ್ಬನ್, ಗೊಂಡೆಗಳ ಜಡಿದು
ನಡೆವಾಗ ಬಿದ್ದ ಚೌರಿಯ ಹಿಡಿದು
ಜಡೆಯೇ ಬಿತ್ತೆ!- ಎಂದು
ದಿಗ್ಭ್ರಾಂತಿಗೊಂಡವಳು!
ಮಳೆಹನಿಗಳೊಳ-ಹೊರಗೆ
ಮಳೆಬಿಲ್ಲಿನಂತೆ ಕಮನೀಯ
ಲಾವಣ್ಯ ತೋರಿ ಹೊಳೆತಂಪ
ಎದೆಯಲ್ಲಿ ಬಿತ್ತಿ ಹಾಲ್ದೆನೆಯ
ಬೆಳೆ ಬೆಳೆದವಳು
ಅತ್ತಿತ್ತ ಹಸಿರು ಭತ್ತದ ಗದ್ದೆ-
ನೆತ್ತಿಯಲಿ ಹೊತ್ತು- ನಡುವೆ
ಹರಿಯುವ ಝರಿಯಂಥ ಬೈತಲೆ-
ಯ ಅಡಿಗೆ ಎಳೆ-
ಸೂರ್ಯನಂತೆ ಹೊಳೆವ
ಕುಂಕುಮದ ಬೊಟ್ಟನಿಟ್ಟವಳು
ಘನನೀಲ ಮೇಘದಾವರಣ-
ದೊಳಗನ್ನು ಕೋರೈಸಿ ಮಿಂಚು-
ಬಳ್ಳಿಯು ಎರಗುವಂತೆ
ನೋಟ ಒಮ್ಮೊಮ್ಮೆ; ಮತ್ತಿನ್ನೊಮ್ಮೆ
ತಂಪು ತಂಗದಿರ ಎಸಳಂತೆ-
ಹಂಸತೂಲಿಕತಲ್ಪ-
ದಲ್ಲೊರಗುವಂತೆ!
ನಿಶೆಯಲ್ಲಿ ಚಂದ್ರನಿಗೆ
ಪಿಸುಮಾತ ಸಂಗಾತಿ
ಉಷೆಯಲ್ಲಿ ಹೊಸತಾಗಿ ಅರಳಿದ
ಸೂರ್ಯಕಾಂತಿ;
ಮಳೆಯಂಥ ಕನಸಿಗೆ
ರೂಪವಾದವಳು,
ಕನಸಂಥ ಮಳೆಗೆ
ಧಾತ್ರಿಯಾದವಳು!

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.
