“ನಾಲ್ಕು ಶತಮಾನಗಳ ನಂತರ ಅವರೆಲ್ಲರ ನೆನಪುಗಳ ಚರಿತ್ರೆಯಲ್ಲಿ ಕಬೀರನಿದ್ದಾನೆ. ಅವರ ನಾಲಗೆಯ ಮೇಲಿನ ದೋಹಾಗಳಲ್ಲಿ ಅವನಿದ್ದಾನೆ. ಆದರೆ ಮಗಧ, ಕೋಸಲ, ಕೋಸಂಬಿಯ ಜಗದೇಕವೀರರು ಇತಿಹಾಸದ ಪುಸ್ತಕಗಳ ಅಡಿಟಿಪ್ಪಣಿಗಳಲ್ಲಿ ಧೂಳು ಮೆತ್ತಿಕೊಂಡು ಮಸುಕಾಗಿದ್ದಾರೆ.ಮೊನ್ನೆ ಮೊನ್ನೆ ಅಂದರೆ ಹನ್ನೆರಡನೇ ಶತಮಾನದಲ್ಲಿ ಅಲ್ಲಮನ ಜೊತೆ ವಾದ ಮಾಡಲು ಕಲ್ಯಾಣಕ್ಕೆ ಬಂದಿದ್ದವನು ಕಬೀರ. ಈ ಸಂತರ ಸಹವಾಸವೇ ಹೀಗೆ.ಎಲ್ಲಿಂದಲೋ ಎಲ್ಲಿಗೋ, ಚರಿತ್ರೆ, ಕಾಲ, ಭಾಷೆಗಳಿಗೆ ಕ್ಯಾರೆ ಅನ್ನದೆ ಅಲೆಯುತ್ತಲೇ ಇರುತ್ತಾರೆ.”
ವಿಮರ್ಶಕ, ಕಥೆಗಾರ ಡಾ.ರಾಜೇಂದ್ರ ಚೆನ್ನಿ ಗೋರಖಪುರದಲ್ಲಿ ಕಂಡ ಸಂತ ಕಬೀರನ ಮುಖಗಳು ಇಲ್ಲಿವೆ

ಇತ್ತೀಚೆಗೆ ಅನಿರೀಕ್ಷಿತವಾಗಿ ನಾನು ಉತ್ತರ ಪ್ರದೇಶದ ಗೋರಖಪುರಕ್ಕೆ ಹೋಗಿದ್ದೆ.  ದೆಹಲಿಯಿಂದ ಗೋರಖಪುರಕ್ಕೆ ಒಂದು ಪುಟಾಣಿ ವಿಮಾನ ಮಧ್ಯಾಹ್ನ ಹೊರಡಬೇಕಿತ್ತು. ಬಹುಪಾಲು ಜನ ಗೋರಖಪುರದವರೇ ತುಂಬಿದ್ದರು. ಚಂದವಾದ ಹಿಂದಿಯಲ್ಲಿ ವಿರಾಮವಾಗಿ, ಸಚಿತ್ರವಾಗಿ ಪದಗಳನ್ನು ಚಪ್ಪರಿಸಿಕೊಂಡು ಮಾತನಾಡುತ್ತಿದ್ದರು. ಹಿಂದಿನ ಸೀಟಿನಲ್ಲಿ ಕುಳಿತವರೊಬ್ಬರು ಮೊಬೈಲ್ ನಲ್ಲಿ ಮನೆಗೆ ವಿಮಾನ ಪಯಣದ ಬಗ್ಗೆ ರನ್ನಿಂಗ್ ಕಾಮೆಂಟರಿ ಕೊಡುತ್ತಿದ್ದರು. ಎಲ್ಲರೂ ಕುಳಿತು, ಅರ್ಧಗಂಟೆಯಾದರೂ ವಿಮಾನ ಹೊರಡುತ್ತಲೇ ಇಲ್ಲ. ಕೇಳಿದರೆ ಒಬ್ಬ ಸಿಬ್ಬಂದಿ ಇನ್ನೊಬ್ಬರು ಪ್ರಯಾಣಿಕರು ಬರಬೇಕಿದೆ ಎಂದ. ಇನ್ನೊಬ್ಬ Technical snag ಬಹುಶಃ ತಡವಾಗುತ್ತದೆ ಎಂದ. ಇಡೀ ವಿಮಾನ ವಿಮಾನ ಕಂಪನಿಯ ಬೇಜವಾಬ್ದಾರಿಯ ಬಗ್ಗೆ ಗೊಣಗತೊಡಗಿತು. ಎಷ್ಟೋ ಸಾರಿ ಕಡಿಮೆ ಜನ ಪ್ರಯಾಣಿಕರಿದ್ದರೆ ಫ್ಲೈಟ್ ಕ್ಯಾನ್ಸಲ್ ಮಾಡುತ್ತಾರೆ ಎಂದು ಒಬ್ಬರು ಮಾಹಿತಿ ಕೊಟ್ಟರು.  ಹಿಂದಿನ ಸೀಟಿನ ವ್ಯಕ್ತಿ ಮೊಬೈಲ್ ನಲ್ಲಿ ಹೇಳಿದರು “ಹಾಂ ಭಾಯಿ, ಏರೋಪ್ಲೇನ್ ಮೇ ಬೈಠೇ ಹೈ, ಅಭೀ ಧಕ್ಕಾ ಲಗಾ ರಹೇ ಹೈ, ಶಾಯಿದ್ ಉಡೇಗಾ.” ಸ್ವಲ್ಪ ಹೊತ್ತು ಆದ ಮೇಲೆ ಅಂತೂ ಇಂತೂ ಹೊರಟಿತು ಅಂದರೆ ಒಂದೆರಡು ಸುತ್ತು ನೆಲದ ಮೇಲೆ ಓಡಾಡಿ ಮತ್ತೆ ನಿಂತು ಬಿಟ್ಟಿತು. ಹಿಂದಿನ ಸೀಟಿನವರು ಮತ್ತೆ ಮೊಬೈಲ್ ನಲ್ಲಿ ಮಾಹಿತಿ ಕೊಟ್ಟರು. “ಯಹೀಂ ಇಧರ್ ಉಧರ್ ಮಂಡರಾ ರಹಾ ಹೈ. ದೇಖತೇ ಹೈ ಶಾಯಿದ್ ಉಡೇಗಾ ಭೀ.” ಹೀಗೆಲ್ಲಾ ಪ್ರಯಾಣಿಕರಿಂದ ಮೂದಲಿಸಿಕೊಂಡು ಆ ಪುಟಾಣಿ ವಿಮಾನ ಹೊರಟು ಗೋರಖಪುರಗೆ ತಲುಪಿತು.

ಎರಡನೇ ದಿನ ಬೆಳಗ್ಗೆ ಟ್ಯಾಕ್ಸಿ ಡ್ರೈವರ್ ಹೇಳಿದಂತೆ ಬೇಗನೇ ತಯಾರಾಗಿ ಹೊರಟೆ. ಟೂರಿಸ್ಟ್ ಕುತೂಹಲದಿಂದ ಹತ್ತಿರದಲ್ಲಿ ನೋಡುವ ಜಾಗಗಳು ಏನಿವೆ ಅಂತ ಕೇಳಿದಾಗ ಬರಿ ಮೂವತ್ತು ಕಿಲೋ ಮೀಟರ್ ದೂರದಲ್ಲಿ ಸಂತ ಕಬೀರನ ಸಮಾಧಿ ಇದೆ ಮತ್ತು ಅರವತ್ತು ಕಿ.ಮೀ. ದೂರದಲ್ಲಿ ಬುದ್ಧನ ನಿರ್ವಾಣದ ಜಾಗವಿದೆ ಎಂದಿದ್ದ.  ಎಡವಿ ಬಿದ್ದಲ್ಲೇ ಇತಿಹಾಸದ ತುಣುಕುಗಳು, ರಸ್ತೆಯಲ್ಲಿ ಬೋರ್ಡುಗಳನ್ನು ನೋಡುತ್ತ ಹೋದರೆ ಕಲಿತ, ಕೇಳಿದ ಇತಿಹಾಸವೆಲ್ಲ ಅಲ್ಲಿಯೇ ಇದೆ.  ಐವತ್ತು ಕಿ.ಮೀ. ಗಡಿ ದಾಟಿದರೆ ನೇಪಾಳ. ಬುದ್ಧ ಹುಟ್ಟಿದ ಲುಂಬಿನಿ, ಈ ಕಡೆಗೆ ಹೊರಟರೆ ಅಯೋಧ್ಯೆ. ಐದು ಗಂಟೆಯಲ್ಲಿ ಲಕ್ನೋ, ಅಲ್ಲಿಂದಾಚೆಗೆ ವಾರಣಾಸಿ, ಪಕ್ಕಾ ದಕ್ಷಿಣ ಭಾರತೀಯನಾದ ನನಗೆ ಉತ್ತರ ಭಾರತವು ಚರಿತ್ರೆ ಮತ್ತು ಪುರಾಣಗಳಿಂದ ನಮ್ಮನ್ನು ಹೊರಗಿಟ್ಟಿದ್ದರ ಬಗ್ಗೆ ಯಾವಾಗಲೂ ಅಸಹನೆ. ನಮ್ಮ ದೇವರುಗಳು ಕೂಡ ಹುಟ್ಟಿದ್ದು ಉತ್ತರ ಭಾರತದಲ್ಲಿಯೆ. ಚಕ್ರವರ್ತಿಗಳಂತೂ ಕರಾರುವಾಕ್ಕಾಗಿ ಐದು ಮೈಲಿಗೊಬ್ಬರಂತೆ-  ಕೋಸಾಂಬಿ, ಮಗಧ, ಕುರುಕ್ಷೇತ್ರ.

ಈ ಅಸಹನೆಯ ಜೊತೆಗೆ ಒಂದು ರೀತಿ ರೋಮಾಂಚನ ಕೂಡ. ಯಾವುದೋ ಪುಸ್ತಕದಲ್ಲಿ ಒಣ ಮಾಹಿತಿಯಾಗಿದ್ದು ಇಲ್ಲಿ ನಡೆದ ವಾಸ್ತವವಾಗಿದೆ. ನಾನು ಇಳಿದುಕೊಂಡಿದ್ದ ಗೆಸ್ಟ್ ಹೌಸಿನಿಂದ ಮುಕ್ಕಾಲು ಗಂಟೆಯಲ್ಲಿ ಕಬೀರ್ ನಡೆದಾಡಿದ, ಉಸಿರಾಡಿದ, ಕೊನೆ ಗಳಿಗೆಗಳನ್ನು ಕಳೆದ ಮನಗಡ್ ಎಂಬ ಜಾಗ. ತುಂಬಾ ಬೇಗ ಬಂದಿದ್ದರಿಂದ ಅಲ್ಲಿಯವರೇ ಆದ ಕೆಲವರನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ. ಅವರೂ ಚಳಿ ಕಾಯಿಸುತ್ತ ಕುಳಿತಿದ್ದರು. ಪಕ್ಕದಲ್ಲಿ ಒಂದು ಪುಟ್ಟ ಚಹದಂಗಡಿ. ಅಲ್ಲಿ ಒಬ್ಬಳು ಏರು ದನಿಯಲ್ಲಿ ರಾಗವಾಗಿ ಮಾತನಾಡುತ್ತಿದ್ದಳು. ಕಿವಿ ನಿಮಿರಿದವು. ಗೋರಖಪುರದಲ್ಲಿ ಕೇಳಿದ್ದು ಶುದ್ಧ ಶಿಕ್ಷಿತ ಹಿಂದಿ. ತಪ್ಪಿದರೆ ಪೂರ್ವ ಉತ್ತರ ಪ್ರದೇಶದ ಬೈಯ ಹಿಂದಿ. ಆ ಹೆಂಗಸು ಮಾತ್ರ ಕಬೀರನ ಭಾಷೆಗೆ ಹತ್ತಿರವಾದ ಉಪಭಾಷೆಯಲ್ಲಿ ಮಾತನಾಡುತ್ತಿದ್ದಳು. ಭ್ರಜ್, ಬುಂದೇಲಖಂಡಿ, ಭೋಜ್ಪುರಿ ಮುಂತಾದ ಉಪಭಾಷೆಗಳು ಮುಂದೆ ಖಡೀಬೋಲಿಯಾಗಿ, ನಂತರ ಅದು ಇಂದಿನ ಹಿಂದಿ ಆಗಿದ್ದರ ಬಗ್ಗೆ ಅಸ್ಪಷ್ಟವಾಗಿ ಗೊತ್ತಿತ್ತು. ಕಬೀರನ ದೋಹೆಗಳಲ್ಲಿ ಕೇಳುವ ಭಾಷೆಯ ಕಾಕುವಿನೊಂದಿಗೆ ಚಹದಂಗಡಿಯ ಜನ ಮಾತನಾಡುತ್ತಿದ್ದರು. ಸ್ವಲ್ಪ ದೂರದಲ್ಲಿ ನದಿ, ಪಕ್ಕದಲ್ಲಿ ಒಂದು ಮಸೀದಿ.

ಮೆಟ್ಟಲು ಹತ್ತಿಕೊಂಡು ಹೋದರೆ ಎದುರಿಗೆ ಗೊತ್ತಿದ್ದರೂ ಹಠಾತ್ತನೆ ಚರಿತ್ರೆಯಿಂದ ಎದ್ದು ಬಂದು ತುಂಬಾ ವಾಚ್ಯವಾಗಿ, ನಮಗೆ ಗೊತ್ತಿದ್ದನ್ನು ಇನ್ನೊಮ್ಮೆ ಘಟ್ಟಿಸಿ ಹೇಳಿದಂತೆ ಎರಡು ಕಟ್ಟಡಗಳು… ಎಡಬದಿಗೆ ಕಬೀರನ ಗೋರಿ, (ಮಜಾರ್ ಕಬೀರ್ ಸಾಹೇಬ್) ಎಂದು ಬಾಗಿಲ ಮೇಲೆ ಬರೆದಿತ್ತು. ಬಲಬದಿಗೆ ಕಬೀರನ ಹಿಂದೂ ಸಮಾಧಿ. ‘ಸಂತ ಕಬೀರ್ ಜಿ ಕಿ ಸಮಾಧಿ’ ಎಂದು ಹಿಂದಿಯಲ್ಲಿ ಬರೆದಿತ್ತು. ಮುಸ್ಲಿಮ್ ಶೈಲಿಯ ಗೋರಿಯ ಕಟ್ಟಡದ ಬಾಗಿಲಿಗೆ ಬರಿ ಚಿಲಕ ಹಾಕಿದ್ದರು. ಅಲ್ಲಿ ನಿಂತಿದ್ದ ಒಬ್ಬ ಗಾರ್ಡ್ ಗೆ ಕೇಳಿದರೆ ಆತ ಮುಗುಳ್ನಗುತ್ತಾ ‘ನೀವೇ ತೆಗೆದು ಒಳಗೆ ಹೋಗಿರಿ’ ಎಂದ. ಅಲ್ಲಿ ಆ ನೇಕಾರ ಸಂತನ ನೆನಪಿನ ಸಮಾಧಿ. ಬಾಗಿಲ ಪಕ್ಕದಲ್ಲಿಯೇ ಕಬೀರನ ಕುರಿತು ಐತಿಹ್ಯ ಬರೆದಿತ್ತು. ಕಬೀರ್ ತೀರಿ ಹೋದ ಮೇಲೆ ಅವನ ಶರೀರ ಯಾರಿಗೂ ಸಿಗಲಿಲ್ಲ. ಅವನು ಕೂರುತ್ತಿದ್ದ ಚಾಪೆಯ ಮೇಲೆ ಬರೀ ಹೂಗಳಿದ್ದವಂತೆ. ಆದರೆ ಅವನ ಅನುಯಾಯಿಗಳು ತಮ್ಮ ತಮ್ಮ ಧರ್ಮದ ಹಾಗೆ ಸ್ಮಾರಕಗಳನ್ನು ಕಟ್ಟಿದರಂತೆ. ಕಬೀರನ ಗೋರಿಯ ಕಟ್ಟೆಗೆ ಹಣೆ ಆನಿಸಿ ಪ್ರಾರ್ಥನೆ ಮಾಡಿದೆ. ಸಮಾಧಿಯ ಪಕ್ಕದಲ್ಲಿ ‘ಕಬೀರ್ ಗುಫಾ’ ಎಂದು ಬೋರ್ಡು ಬರೆದಿತ್ತು. ಮೆಟ್ಟಿಲಿಳಿದು ನೋಡಿದರೆ ಒಂದು ಸಣ್ಣ ಗುಹೆ. ಅದರ ಕತ್ತಲೆ ಮೂಲೆಯಲ್ಲಿ ಕಬೀರನದು ಎನ್ನುವ ಮೂರ್ತಿಯನ್ನು ಕೂತ ಭಂಗಿಯಲ್ಲಿ ಇಟ್ಟಿದ್ದರು. ಆದರೆ ಇಡೀ ಗುಹೆಯ ಒಳಗೆ ಹೊರಗೆ ಸುಣ್ಣ ಹೊಡೆದಿದ್ದರಿಂದ ಮನಸ್ಸಿಗೆ ಪಿಚ್ಚೆನಿಸಿತು.

ಕಬೀರ್ ಆ ಚಹದಂಗಡಿಯವರ ಜೊತೆಗೆ ಹರಟೆ ಹೊಡೆಯುತ್ತಿರಬಹುದೇ ಎಂದು ನೋಡಿದೆ. ಬಡ ನೇಕಾರನಲ್ಲವೆ? ಸಪೂರ ಬಡಕಲು ದೇಹ; ನೀಳವಾದ ಗಡ್ಡ, ಕೊಳೆಯಾಗಿರದಿದ್ದರೂ ನಿರ್ಲಕ್ಷತನ ತೋರಿಸುವ ಬಟ್ಟೆಗಳು. ಅವಳ ಭಾಷೆಯಲ್ಲಿ ಏನೋ ಹೇಳುತ್ತಾ ಸಹಜವಾಗಿ ನಗುತ್ತಿದ್ದ, ಮಾತನಾಡುತ್ತಿದ್ದಂತೆಯೇ ಗೋಣು ಅಲ್ಲಾಡಿಸುತ್ತಾ ನದಿಯ ಕಡೆಗೆ ಹೊರಟ. ತುಟಿಯಲ್ಲಿ ಏನನ್ನೋ ಗುಣುಗುಣಿಸುತ್ತಿದ್ದವನು ದನಿ ಎತ್ತರಿಸಿ ಹಾಡತೊಡಗಿದ. ಹುಚ್ಚ ಕಬೀರನನ್ನು ನೋಡಿ ಪ್ರೀತಿಯಿಂದ ಚಹದಂಗಡಿಯವಳು ಮುಗುಳ್ನಗುತ್ತಿದ್ದಳು. ಚಳಿ ಕಾಯಿಸುತ್ತಿದ್ದವರು ಅವನನ್ನು ಹಿಂಬಾಲಿಸಿಕೊಂಡು ಹೋದರು……

……ನಾಲ್ಕು ಶತಮಾನಗಳ ನಂತರ ಅವರೆಲ್ಲರ ನೆನಪುಗಳ ಚರಿತ್ರೆಯಲ್ಲಿ ಕಬೀರನಿದ್ದಾನೆ. ಅವರ ನಾಲಗೆಯ ಮೇಲಿನ ದೋಹಾಗಳಲ್ಲಿ ಅವನಿದ್ದಾನೆ. ಮಗಧ, ಕೋಸಲ, ಕೋಸಂಬಿಯ ಜಗದೇಕವೀರರು ಇತಿಹಾಸದ ಪುಸ್ತಕಗಳ ಅಡಿಟಿಪ್ಪಣಿಗಳಲ್ಲಿ ಧೂಳು ಮೆತ್ತಿಕೊಂಡು ಮಸುಕಾಗಿದ್ದಾರೆ. ಅಂದ ಹಾಗೆ ನಾನು ಇಳಿದುಕೊಂಡ ಗೋರಖಪುರ ಗೋರಖನಾಥನ ಊರು. ಗೋರಕ್ಷನ ಊರು. ಮೊನ್ನೆ ಮೊನ್ನೆ ಅಂದರೆ ಹನ್ನೆರಡನೇ ಶತಮಾನದಲ್ಲಿ ಅಲ್ಲಮನ ಜೊತೆ ವಾದ ಮಾಡಲು ಕಲ್ಯಾಣಕ್ಕೆ ಬಂದಿದ್ದವನು. ಶಿವಪ್ರಕಾಶ್ ಕಾವ್ಯದಲ್ಲಿದ್ದಾನೆ. ಈ ಸಂತರ ಸಹವಾಸವೇ ಹೀಗೆ. ಎಲ್ಲಿಂದಲೋ ಎಲ್ಲಿಗೋ, ಚರಿತ್ರೆ, ಕಾಲ, ಭಾಷೆಗಳಿಗೆ ಕ್ಯಾರೆ ಅನ್ನದೆ ಅಲೆಯುತ್ತಲೇ ಇರುತ್ತಾರೆ. ಶುದ್ಧ ಅಲೆಮಾರಿಗಳು.

ಹೊರಡುವ ಮೊದಲು ಸಮಾಧಿಯ ಹಿಂದೆ ಇರುವ ಪ್ರಾಂಗಣದಲ್ಲಿದ್ದ ಪುಸ್ತಕ ಮಳಿಗೆಗೆ ಹೋದೆ. ಅಲ್ಲಿ ಕಬೀರನ ಪಂಥದ (?) ವಾರಸುದಾರನಾದ ಒಬ್ಬವನ ಫೋಟೋ ರಾರಾಜಿಸುವ ಪುಸ್ತಕಗಳು. ಅವನು ಯಾವುದೋ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪಡೆದು ಅಲ್ಲಿಟ್ಟಿದ್ದ ಪುಸ್ತಕಗಳಿಗೆ ಹಿಗ್ಗಾ ಮುಗ್ಗಾ ಮುನ್ನುಡಿ ಬರೆದಿದ್ದ. ಒಂದು ಪುಸ್ತಕ ಕೊಂಡುಕೊಂಡೆ. ಹಿಂದಿಯಲ್ಲಿತ್ತು. ಅದರಲ್ಲಿ ಕಬೀರನ ಜನ್ಮದ ವರ್ಣನೆ. “ಕಬೀರನ ನೇಕಾರ ತಂದೆ ತಾಯಿಗಳು ಒಂದು ದಿನ ತೀರ್ಥಯಾತ್ರೆಯಿಂದ ಬರುತ್ತಿದ್ದಾಗ ಸರೋವರವೊಂದರಲ್ಲಿ ಕಮಲದ ಎಲೆಯ ಮೇಲೆ ಒಂದು ಮಗುವನ್ನು ಕಂಡರು. ಅದು ಸಾಕ್ಷಾತ್ ವಿಷ್ಣುವೆ ಮಗುವಿನ ಅವತಾರದಲ್ಲಿ. ವಿಷ್ಣುವಿನ ಅಪರಂಪಾರ ಲೀಲೆ. ಅವನು ನೇಕಾರ ದಂಪತಿಗಳ ಮನೆಯಲ್ಲಿ ಕಬೀರ್ ಹೆಸರಿನಲ್ಲಿ ಮಗುವಾಗಿ ಬೆಳೆದ.”

ಪವಿತ್ರವಾದದ್ದನ್ನು ಕಡ್ಡಾಯವಾಗಿ ಅಸಹ್ಯಗೊಳಿಸುವ ನಮ್ಮ ಆಧುನಿಕತೆಯ ವಿಕಾರಗಳು!

ನನ್ನ ಟ್ಯಾಕ್ಸಿ ಹೊರಟಾಗ ಕಬೀರ್ ನದೀ ತೀರದಲ್ಲಿ ಬಟ್ಟೆ ಒಗೆಯುತ್ತ ಆ ಜನರ ಜೊತೆಗೆ ಹರಟುತ್ತಲೇ ಇದ್ದ.