ಆಸ್ಟ್ರೇಲಿಯಾದಲ್ಲಿ ತಯಾರಿಕೋದ್ಯಮ ಹಿಂದಿನಿಂದಲೂ ದುಬಾರಿ. ಕನಿಷ್ಟ ವೇತನ, ಓವರ್ ಟೈಂ ಸೇರಿದಂತೆ ಇಲ್ಲಿಯ ಕೆಲಸಗಾರರಿಗೆ ಕಾನೂನನ್ವಯ ಕೊಡಲೇ ಬೇಕಾದ ಅನುಕೂಲಗಳನ್ನೆಲ್ಲಾ ಲೆಕ್ಕ ಹಾಕಿದರೆ ಏಷಿಯಾ ದೇಶಗಳ ಜತೆ ಸಾಟಿಯಾಗದಷ್ಟು ಹೆಚ್ಚು ಖರ್ಚು. ಇದರಿಂದಾಗಿ ತಯಾರಾದ ಸಾಮಾನೂ ಕೂಡ ದುಬಾರಿ. ಒಂದು ಕಾಲದಲ್ಲಿ ಇಲ್ಲಿ ತಯಾರಾದ ಸಾಮಾನುಗಳು ಉತ್ಕೃಷ್ಟವಾಗಿರುತ್ತದೆ ಎಂದು ಹೇಳಿಕೊಳ್ಳುತ್ತಿದ್ದರು. ಆ ಮಾತೆಷ್ಟು ದಿಟವೋ ಕಾಣೆ, ಆದರೆ ಇತ್ತೀಚೆಗಂತೂ ಆ ಮಾತು ಅರ್ಥ ಕಳಕೊಂಡಿದೆ. ಇಲ್ಲಿಯಷ್ಟೇ ಚೆನ್ನಾಗಿ ಲೋಕದ ಯಾವ ದೇಶದಲ್ಲಿ ಬೇಕಾದರೂ ತಯಾರಿಕೆ ಮಾಡಿಸಬಹುದು ಎಂದು ಗೊತ್ತಾಗಿದೆ. ಇದಕ್ಕೆ ಮ್ಯಾನೇಜ್‌ಮೆಂಟ್ ಒಂದು ಕಾರಣವಾದರೆ, ತಾಂತ್ರಿಕತೆ ಮತ್ತೊಂದು ಕಾರಣ.

ಯಾಕೆ ಹೇಳಿದೆನಂದರೆ, ಎಲ್ಲವೂ ಜಾಗತೀಕರಣಗೊಳ್ಳುತ್ತಿರುವ ಈ ಹೊತ್ತಲ್ಲಿ ಮರೆತಿದ್ದ ಚರಿತ್ರೆ ಮತ್ತೆ ಮತ್ತೆ ಇಣುಕುವುದು ಒಂದು ವಿಪರ್ಯಾಸವೇನೋ. ಹಿಂದುಳಿದ ದೇಶಗಳಿಗೆ ಮುಂದರಿದ ದೇಶದ ಕೆಲಸಗಳು ಹೋಗಿ ಸೇರಿಕೊಳ್ಳುತ್ತಿವೆ ಎಂಬ ಕೂಗು ಈಗ ಸರ್ವೇಸಾಮಾನ್ಯ. ಹತ್ತಾರು ವರ್ಷ ಕೆಲಸ ಮಾಡಿದ್ದಾಕೆಯ ಕೆಲಸ ಕಾಲು ಭಾಗದ ಖರ್ಚಿಗೆ ಹಿಂದುಳಿದ ದೇಶಕ್ಕೆ ರವಾನೆಯಾಗುವುದು ಹೊಸ ಸುದ್ದಿಯೇನಲ್ಲ. ಆದರೆ ಈಗ, ಆರ್ಥಿಕ ಹಿಂಜರಿತದ ನೆಪವೊಡ್ಡಿಯೂ ಇದು ನಡೆಯುತ್ತಿದೆ. ಇತ್ತೀಚೆಗೆ ಆಸ್ಟ್ರೇಲಿಯದ ಬನಿಯನ್ನು ಚಡ್ಡಿ ಮಾಡುವ ಕಂಪನಿಯೊಂದು ತನ್ನ ಕಾರ್ಖಾನೆಯ ಬಾಗಿಲು ಮುಚ್ಚಿತು. ಒಂದೆರಡು ಸಾವಿರ ಮಂದಿ ಕೆಲಸ ಕಳಕೊಂಡರು. ಈ ಜಾಗತಿಕ ಕುಸಿತದ ವೇಳೆಯಲ್ಲಿ ಸಾಮಾನು ಮಾರಾಟವಾಗುತ್ತಿಲ್ಲ ಎಂಬುದು ಕಂಪನಿ ಕೊಟ್ಟ ವಿವರಣೆ. ಒಂದಿಷ್ಟು ದಿನಗಳ ನಂತರ ಅದು ಏಷಿಯಾದ ಹಿಂದುಳಿದ ದೇಶವೊಂದರಲ್ಲಿ ಕಾರ್ಖಾನೆ ನಡೆಸುತ್ತಿರುವುದು ತಿಳಿದುಬಂತು. ಪ್ರಶ್ನೆಗಳು ಏಳತೊಡಗಿತು. ಕಂಪನಿ ಸರಿಯಾದ ವಿವರಣೆ ಕೊಡಲೇಬೇಕಾಯಿತು.

ಆರ್ಥಿಕ ಹಿಂಜರಿತವೇ ಕಾರಣ ಎಂದು ವಿವರಿಸಿದ ಕಂಪನಿಯ ವಕ್ತಾರ ಮತ್ತೊಂದು ಗುಟ್ಟನ್ನು ಬಿಟ್ಟುಕೊಟ್ಟಳು. ಹೊರದೇಶದಲ್ಲಿರುವ ತಯಾರಿಕಾ ಘಟಕ ಹೊಸದೇನಲ್ಲ, ತುಂಬಾ ದಿನಗಳಿಂದ ಅದು ನಡೆದುಕೊಂಡು ಬಂದಿದೆ ಎಂದಳು. ಅಷ್ಟೇ ಅಲ್ಲ, ಇಲ್ಲಿಯವರೆಗೂ ಅಲ್ಲಿಯ ಘಟಕದಿಂದಾಗಿ ನಾವು ಮಾಡಿದ ಲಾಭ ಇಲ್ಲಿಯ ಕೆಲಸಗಾರರನ್ನು ನೋಡಿಕೊಳ್ಳಲು ಪೋಲಾಗುತ್ತಿದೆ. ಇದು ಹೆಚ್ಚು ದಿನ ನಡೆಸಲು ಸಾಧ್ಯವಿಲ್ಲ. ಕಂಪನಿಯೇ ಮುಳುಗಿಹೋಗುತ್ತದೆ ಎಂದಳು. ನನಗ್ಯಾಕೋ ಇದು ವಸಾಹತು ಕಾಲದ ಮಾತಿನಂತೆ ಕೇಳಿತು. ಬ್ರಿಟನ್ನಿನ ಖಜಾನೆಯನ್ನು ಇಂಡಿಯಾದ ಕೆಲಸಗಾರರ ಬೆವರಿನಿಂದ ತುಂಬುತ್ತಿದುದು, ಇಂಡಿಯಾದ ಕೆಲಸಗಾರರು ಬಡವಾಗಿಯೇ ಉಳಿದದ್ದು ಮತ್ತೆ ನೆನಪಾಯಿತು. ಈ ಕಂಪನಿಯ ಏಷಿಯಾದ ಘಟಕದ ಕೆಲಸಗಾರರಿಗೆ ಕೊಡಬೇಕಾದ ಹಣವನ್ನು ಕೊಡದೆ ಇರುವುದು ಒಂದು ತಪ್ಪಾದರೆ. ಆ ದುಡ್ಡು ಆಸ್ಟ್ರೇಲಿಯಕ್ಕೆ ರವಾನೆಯಾಗಿ ಕಂಪನಿಯ ಇಲ್ಲಿಯ ಕೆಲಸಗಾರರ ಕೈಸೇರಿದ್ದು ಮತ್ತೊಂದು ತಪ್ಪು. ಬಹುಶಃ ಜಾಗತೀಕರಣದ ನಾಡಿ ಹಿಡಿದವರಿಗೆ ಇವೆಲ್ಲಾ ಸೋಜಿಗ ಉಂಟು ಮಾಡಲಾರದೋ ಏನೋ.

ಅದೇ ಜಾಗತೀಕರಣದ ಇನ್ನೊಂದು ತಮಾಷೆ ಸಂಗತಿಯನ್ನೂ ಗಮನಿಸಿ. ಆಸ್ಟ್ರೇಲಿಯಕ್ಕೆ ಬರುವ ವಲಸಿಗರಿಗೆ ಹಲವಾರು ದಾರಿಗಳಿವೆ. ಕೆಲವು ದಾರಿಗಳು ಮುಚ್ಚಿಕೊಂಡರೆ, ಇನ್ನು ಕೆಲವು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಅಂತಹ ಒಂದು ದಾರಿ – ಆಸ್ಟ್ರೇಲಿಯದ ವಿಶ್ವವಿದ್ಯಾಲಯದಲ್ಲಿ ಕಲಿಯಲು ಬೇರೆ ಬೇರೆ ದೇಶಗಳಿಂದ ಮಂದಿ ಬರುವುದು. ಹೆಚ್ಚಿನವರು ಇಲ್ಲಿ ಒಂದು ಕೆಲಸ ಹಿಡಿದು ಉಳಿಯುತ್ತಾರೆ. ಹಲವರು ಇಲ್ಲಿ ಉಳಿಯಲೋಸುಗವೇ ಓದಲು ಬರುತ್ತಾರೆ. ಇವೆಲ್ಲಾ ಹೊಸತೇನಲ್ಲ, ವಿಶೇಷವೂ ಅಲ್ಲ. ವರ್ಷವರ್ಷವೂ ಈ ದೇಶದಲ್ಲಿ ಕೊರತೆಯಿರುವ ಕೆಲಸದ ಪಟ್ಟಿಯನ್ನು ಸರ್ಕಾರ ಪ್ರಕಟಿಸುತ್ತದೆ. ಒಂದೆರಡು ವರ್ಷದ ಕೆಳಗೆ ಅಡುಗೆ ಮಾಡುವ ಕುಕ್, ಶೆಫ್‌ಗಳ ಹೆಸರು ಆ ಪಟ್ಟಿಯಲ್ಲಿ ಮೇಲಿತ್ತು. ಆಗ ಹಲವರು ಇಲ್ಲಿ ವಿಶ್ವವಿದ್ಯಾಲಯದಲ್ಲಿ ಕುಕಿಂಗ್ ಡಿಗ್ರಿ ಮಾಡಿದರೆ, ಇಲ್ಲಿ ಉಳಿದುಕೊಳ್ಳಲು ಸುಲಭವೆಂದು ಅರಿತು ಹಿಂಡು ಹಿಂಡಾಗಿ ಸೇರಿಕೊಂಡರು. ಕೆಲವು ಕಾಲೇಜುಗಳಲ್ಲಿ ಕುಕಿಂಗ್ ಡಿಗ್ರಿಯ ಮಂದಿ ಮುಂಚಿಗಿಂತ ಒಂದಕ್ಕೆಂಟರಷ್ಟು ಹೆಚ್ಚಾದರಂತೆ. ದೇಶದಲ್ಲಿ ಬಂದು ಉಳಿಯಲು ಅದೊಂದು ಸುಲಭದ ಮಾರ್ಗವಾಯಿತು. ಹಲವರು ಅದನ್ನು ಬಳಸಿಕೊಂಡರು ಕೂಡ.

ವಿಚಿತ್ರವೆಂದರೆ ಹಾಗೆ ಕೋರ್ಸು ಮುಗಿಸಿ ಉಳಿದುಕೊಂಡವರಾರೂ ಶೆಫ್ ಆಗಲೀ ಕುಕ್ ಆಗಲೀ ಆಗಿ ಕೆಲಸ ಮಾಡುತ್ತಿಲ್ಲ. ಹೇಗೆ ಗೊತ್ತೆಂದು ಎಂದು ಕೇಳುತ್ತೀರ? ಆಸ್ಟ್ರೇಲಿಯದಲ್ಲಿ ಶೆಫ್‌ಗಳ ಕೊರತೆ ಮುಂಚಿನಂತಯೇ ಇದೆ. ಒಂದಿನಿತೂ ಕಡಿಮೆಯಾಗಿಲ್ಲ. ಯೂನಿವರ್ಸಿಟಿಯ ಅಕಡೆಮಿಕ್‌ಗಳು ಈ ಸಂಗತಿಯ ಬಗ್ಗೆ ಸ್ಟಡಿ ಮಾಡಲು ತೊಡಗಿ ಬಿಟ್ಟಿದ್ದಾರೆ. ಸತ್ಯ ಏನೆಂದು ರಟ್ಟುಮಾಡಿ ಎದೆತಟ್ಟಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯ ಸರ್ಕಾರವೂ ಕೆಟ್ಟ ಕನಸು ಕಂಡು ಎದ್ದಂತೆ ಎಚ್ಚೆತ್ತುಕೊಂಡುಬಿಟ್ಟಿದೆ. ಶೆಫ್‌ಗಳು ಡಿಮ್ಯಾಂಡಿರುವ ಕೆಲಸದ ಲಿಸ್ಟಲ್ಲಿ ಈಗ ಇಲ್ಲ. ದಿಟವಾಗಿಯೂ ಇನ್ನೂ ಕೊರತೆ ಇದ್ದರೂ ಕೂಡ! ಫ್ರೀ ಮಾರ್ಕೆಟ್ ಧುರೀಣರು ವಲಸಿಗರ ವಿರುದ್ಧ ದೇಶದ ರಕ್ಷಣೆಗೆ ನಿಲ್ಲುವ ಈ ಪರಿ ವಿಪರ್ಯಾಸವಾಗಿ ಏನೂ ಕಾಣಬೇಕಿಲ್ಲ. ಏಕೆಂದರೆ “ಫ್ರೀ ಮಾರ್ಕೆಟ್” ಕೂಡ ಸರ್ಕಾರದ ಬೆಂಬಲಕ್ಕೆ ಕೈಯೊಡ್ಡುತ್ತಿರುವ ಕಾಲವಲ್ಲವೇ ಇದು?