ನಾನು ಮೆಸ್ ಬಿಲ್ ಕೊಡುವುದು ಒಂದೆರಡು ತಿಂಗಳು ತಡವಾಯ್ತು. ಆಗ ಚೆನ್ನಕೇಶವಣ್ಣನ ಸಿಟ್ಟು ನನ್ನ ಮೇಲೆ ತಾರಕಕ್ಕೇರಿತ್ತು. ಈ ವಿಷಯವನ್ನು ಚೆನ್ನಕೇಶನಣ್ಣನ ಮನೆಯವರ ಬಳಿ ಹೇಳಿದೆ. ಆಗ ಅವರು ಅವರ ಬಳಿ ಇದ್ದ ಹಣವನ್ನೇ ಕೊಟ್ಟು ಮೆಸ್ ಬಿಲ್ ಕೊಡು ಎಂದು ತಿಳಿಸಿದ್ದರು. ಹೀಗೆ ಅವರು ಮಾತೃಹೃದಯಿಯಾಗಿದ್ದರು. ಅವರು ಕೋಪ ಮಾಡಿಕೊಂಡಿದ್ದನ್ನು ನಾನು ನೋಡಿಯೇ ಇರಲಿಲ್ಲ. ತುಂಬಾ ತಾಳ್ಮೆ ಇತ್ತು. ನಗುಮೊಗದ ಸ್ವಭಾವ. ನಾನಂತೂ ಅವರಲ್ಲೇ ನನ್ನ ತಾಯಿಯನ್ನು ಕಾಣುತ್ತಿದ್ದೆ. ತಿನ್ನುವ ವಿಷಯದಲ್ಲಿ ನಾವೆಷ್ಟೇ ತಿಂದರೂ ಅವರು ಏನೂ ಹೇಳುತ್ತಿರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೇಳನೆಯ ಕಂತು ನಿಮ್ಮ ಓದಿಗೆ
ಹಬ್ಬದ ಪ್ರಯುಕ್ತ ಕಾಲೇಜಿಗೆ ರಜೆ ಇತ್ತು. ಬಹುಷಃ ದೀಪಾವಳಿ ಇರಬೇಕು. ಆಗ ನಮ್ಮ ಕಾಲೇಜಿನಲ್ಲಿ ಪ್ರಾಂಶುಪಾಲರು ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೂ “ಬೆಳದಿಂಗಳ ಊಟ ಮಾಡೋಣ, ಮನೆಯಲ್ಲಿ ಹಬ್ಬಕ್ಕೆಂದು ಮಾಡಿದ ಹೋಳಿಗೆಯಲ್ಲಿ ಹೋಳಿಗೆ ತನ್ನಿ” ಎಂದು ತಿಳಿಸಿದರು. ಆದರೆ ಹಬ್ಬವನ್ನು ಮುಗಿಸಿಕೊಂಡು ಬಂದ ಹಲವರು ಹೋಳಿಗೆಯನ್ನು ತಂದಿರಲಿಲ್ಲ. ಆಗ ಅವರಿಗೆ ಬೇಸರವಾಯ್ತೇನೋ? ತಂದ ಕೆಲವರ ಹೋಳಿಗೆಯನ್ನು “ವಾಪಸ್ಸು ತೆಗೆದುಕೊಂಡಿ ಹೋಗಿ” ಎಂದು ಹೇಳಿದರು. ನಾವು ಕುತೂಹಲದಿಂದ ಕಾಯುತ್ತಿದ್ದ ಬೆಳದಿಂಗಳ ಊಟ ರದ್ದಾಯ್ತು. ಆಗ ಮುಂದಿನ ಅವಧಿ ತೆಗೆದುಕೊಂಡ ಉಪನ್ಯಾಸಕರು “ಹೋಳಿಗೆಯನ್ನು ತಿನ್ನುವ ಸ್ಪರ್ಧೆ ಮಾಡೋಣ, ಯಾರು ಬಂದು ಹೆಚ್ಚು ತಿನ್ನುತ್ತಾರೋ ನೋಡೋಣ” ಎಂದರು. ಆಗ ರಮೇಶ, ರಫಿ 10 ಹೋಳಿಗೆ ತಿಂದು ಬಂದರು. ಅವರು “ಇವರನ್ನು ಮೀರಿಸುವವರು ಯಾರಿದ್ದಾರೆ” ಎಂದಾಗ ನಾನು ಹೋಗಿ ಹನ್ನೊಂದು ತಿಂದು ಬಂದೆನು. ಮತ್ತೆ ರಮೇಶ ತನ್ನ ತಿನ್ನುವ ಸ್ಪರ್ಧೆ ಮುಂದುವರೆಸಿ ಮತ್ತೆ 5 ತಿಂದು ಬಂದನು. ನಾನು ಸ್ಪರ್ಧೆಯಲ್ಲಿ ಸೋಲಬಾರದೆಂದು ಅವನಿಗಿಂತ 1 ಜಾಸ್ತಿ ತಿಂದು ಬಂದೆನು. ಆಗ ಅವನು ಮತ್ತೂ ತಿಂದಾಗ ನಾನೂ ಸಹ ಅವನಿಗಿಂತ ಒಂದು ಜಾಸ್ತಿ ತಿಂದು ಈ ಸ್ಪರ್ಧೆಯಲ್ಲಿ ವಿಜಯಿಯಾದೆನು!! ಇಲ್ಲಿ ಬಹುಮಾನವಾಗಿ ಅವರು ಏನನ್ನೂ ಇಟ್ಟಿರಲಿಲ್ಲ. ಆದರೂ ನಾನು ಸ್ಪರ್ಧೆಯಲ್ಲಿ ಸೋಲಬಾರದು ಎಂಬ ಒಂದೇ ಉದ್ದೇಶದಿಂದ ನನಗೆ ಸಿಹಿಯೂಟ ಅಷ್ಟು ಇಷ್ಟ ಇಲ್ಲದಿದ್ದರೂ ತಿಂದು ಬಂದಿದ್ದೆ!!
ಮಾರನೇ ದಿನ ಸಾ.ಉ.ಉ.ಕಾ ವಿಷಯದ ಕಿರುಪರೀಕ್ಷೆ ಇತ್ತು. ಈ ಹಿಂದೆ ಹೇಳಿದಂತೆ ಆ ಉಪನ್ಯಾಸಕರು ನೋಟ್ಸಿನಲ್ಲಿ ಬರೆಸಿದಂತೆಯೇ ಬರೆಯಬೇಕಾಗಿದ್ದರಿಂದ ಕಂಠಪಾಠ ಮಾಡಬೇಕಾಗಿತ್ತು. ಇದೇ ದಿನ ಹೆಚ್ಚು ಹೋಳಿಗೆ ತಿಂದದ್ದು ಬೇರೆ. ಸಂಜೆ ಹೊಟ್ಟೆಯಲ್ಲಿ ತೊಳೆಸಿದಂತಾಗುತ್ತಿತ್ತು. ಆಗ ಕೆಲವರ ಸಲಹೆಯಂತೆ ಜೀರ್ಣವಾಗಲು ಹಾಜ್ ಮೂಲ ತಿಂದೆ. ಸೋಡಾ ಕುಡಿದೆ. ರಾತ್ರಿಯ ಊಟವನ್ನೂ ಬಿಟ್ಟೆ, ನಿಂಬೆಹಣ್ಣಿನ ಜ್ಯೂಸನ್ನೂ ಕುಡಿದೆ. ಸದ್ಯ ನನಗೇನೂ ಆಗಲಿಲ್ಲ. ಮಾರನೇ ದಿನ ಶನಿವಾರ ಬೇರೆ. ನಾನು ಕಾಲೇಜಿಗೆ ಹೋದಾಗ ನನ್ನ ಕೆಲ ಕ್ಲಾಸ್ ಮೇಟ್ ಹುಡುಗಿಯರು “ನಿನಗೆ ಆರೋಗ್ಯ ಕೆಟ್ಟು, ನೀನು ಇಂದು ಕಿರುಪರೀಕ್ಷೆಗೆ ಬರುವುದಿಲ್ಲವೇನೋ ಎಂದುಕೊಂಡಿದ್ದೆವು!! ಆದರೆ ನೀನು ಬಂದಿರುವುದನ್ನು ನೋಡಿ ತುಂಬಾ ಆಶ್ಚರ್ಯ ಎನಿಸುತ್ತಿದೆ” ಎಂದರು. ನಾನು ನಕ್ಕು ಸುಮ್ಮನಾದೆ.
“ತಿನ್ನೋಕಿಲ್ಲದವರಿಗೆ ತಿಗವೆಲ್ಲಾ ಬಾಯಿ” ಎಂಬ ಗಾದೆ ಮಾತಿನಂತೆ ಆ ಸಮಯದಲ್ಲಿ ತಿನ್ನುವ ಬಗ್ಗೆ ನನಗೆ ಬಹಳ ಆಸೆಯಿತ್ತು. ಅಷ್ಟೇ ಅಲ್ಲ, ನಾನು ಮಾಂಸ ತಿನ್ನದ ಜಾತಿಯಲ್ಲಿ ಹುಟ್ಟಿದರೂ ಸಹ ನನ್ನ ಬಹುತೇಕ ಗೆಳೆಯರೆಲ್ಲರೂ ತಿನ್ನುತ್ತಿದ್ದುದರಿಂದ ನಾನೂ ಸಹ ತಿನ್ನುವ ರೂಢಿ ಮಾಡಿಕೊಂಡಿದ್ದೆ! ನಮ್ಮ ಮೆಸ್ಸಿನಲ್ಲಿ ಭಾನುವಾರ ನಾನ್ ವೆಜ್ ನವರಿಗೆ ಚಿಕನ್, ವೆಜ್ ನವರಿಗೆ ಪಾಯಸದೂಟವನ್ನು ಮಾಡುತ್ತಿದ್ದರು. ನಾವು ನಮ್ಮ ಗೆಳೆಯರ ಜೊತೆ ಸೇರಿ ಚಿಕನ್, ಕುರಿ ಮಾಂಸವನ್ನು ಹೇಗೆ ತಿನ್ನುವುದು? ಎಂದು ಕಲಿತು ಅವರಿಗಿಂತ ತುಸು ಹೆಚ್ಚೇ ತಿನ್ನುತ್ತಿದ್ದೆವು!!! ಬರುಬರುತ್ತಾ ಪಾಯಸದ ಊಟ ನಿಂತು ಭಾನುವಾರ ನಾನ್ ವೆಜ್ ನಮ್ಮ ಮೆಸ್ ಊಟವಾಯ್ತು!! ಮಾಂಸದೂಟದ ಬಗ್ಗೆ ಇದ್ದ “ಮಾಂಸ ತಿಂದರೆ ಸಿಕ್ಕಾಪಟ್ಟೆ ಶಕ್ತಿ ಬರುತ್ತದೆಯಂತೆ, ಬಾಡಿ ಸಖತ್ ಆಗುತ್ತದೆಯಂತೆ” ಎಂಬ ನಂಬಿಕೆಗಳು ನನ್ನನ್ನು ಮಾಂಸದೂಟವನ್ನು ತಿನ್ನುವಂತೆ ಪ್ರಚೋದಿಸಿದ್ದವು. ಅಷ್ಟೇ ಅಲ್ಲದೇ “ಮೀನು ತಿಂದವರು ಬುದ್ಧಿವಂತರಾಗುತ್ತಾರೆ, ಹೆಚ್ಚಿನ ವಿಜ್ಞಾನಿಗಳೆಲ್ಲಾ ಮಾಂಸವನ್ನು ತಿನ್ನುತ್ತಾರೆ, ಶಿವನಿಗೆ ಬೇಡರ ಕಣ್ಣಪ್ಪ ಪ್ರಸಾದವಾಗಿ ಇಟ್ಟದ್ದು ಇದೇ ಮಾಂಸದೂಟವನ್ನು” ಎಂಬ ಮಾತುಗಳಿಂದ ಪ್ರಚೋದಿತನಾಗಿ ನಾನೂ ಮಾಂಸ ತಿಂದರೆ ತಪ್ಪಿಲ್ಲ ಎಂಬ ಭಾವನೆಯನ್ನು ನನ್ನಷ್ಟಕ್ಕೆ ನಾನೇ ತಳೆದುಕೊಂಡಿದ್ದೆ. ಆಗಾಗ್ಗೆ ನಾನು ತಪ್ಪು ಮಾಡುತ್ತಿದ್ದೇನೆಂಬ ಭಾವ ನನ್ನ ಮನದ ಮೂಲೆಯಲ್ಲಿ ಏಳುತ್ತಿತ್ತಾದರೂ ನನ್ನದೇ ಜಾತಿಯವರಾದ ನನ್ನ ಗೆಳೆಯರೂ ತಿನ್ನುತ್ತಿದ್ದರಿಂದ ನನಗೆ ಅವರೂ ತಿನ್ನುತ್ತಾರೆ ನಾನು ತಿಂದರೆ ಏನೂ ತಪ್ಪಾಗುವುದಿಲ್ಲ ಎಂದು ನನ್ನಷ್ಟಕ್ಕೆ ನಾನೇ ಮನದಲ್ಲಿ ಅಂದುಕೊಳ್ಳುತ್ತಿದ್ದೆ!!

ನಾವು ಓದುತ್ತಿದ್ದ ಊರಿನಲ್ಲಿ ಎರಡು ಮೆಸ್ಗಳಿದ್ದವು. ಬಹುತೇಕರು ಮಾದಣ್ಣನ ಮೆಸ್ಸಿಗೆ ಹೋಗುತ್ತಿದ್ದರು. ನಾವು ಕೆಲವೇ ಜನ ಮಾತ್ರ ಚೆನ್ನಕೇಶವಣ್ಣನ ಮೆಸ್ಸಿಗೆ ಹೋಗುತ್ತಿದ್ದೆವು. ಎರಡೂ ಕಡೆ ಮೆಸ್ ಬಿಲ್ ಒಂದೇ ಇತ್ತು. ಆದರೂ ನಾವು ಈ ಮೆಸ್ಸಿಗೆ ಹೋಗಲು ನಮಗೆ ಇಲ್ಲಿ ಕಮ್ಮಿ ಜನ ಬರುತ್ತಿದ್ದುದರಿಂದ ಊಟದ ರುಚಿ ಉತ್ತಮವಾಗಿರುತ್ತಿತ್ತು. ಆದರೆ ಚೆನ್ನಕೇಶವಣ್ಣ ಮಾತ್ರ ಜನರನ್ನು ಹಚ್ಚಿಕೊಳ್ಳದ ಮನುಷ್ಯ.. ಯಾರೊಡನೆಯೂ ಅಷ್ಟಾಗಿ ಮಾತನಾಡದ ವ್ಯಕ್ತಿತ್ವ ಹೊಂದಿದ್ದವ. ಆದರೆ ಅವನ ಮನೆಯವರು ಮಾತ್ರ ತುಂಬಾ ಒಳ್ಳೆಯವರು. ಮೆಸ್ ಬಿಲ್ ಕೊಡುವುದು ಒಂದೆರಡು ದಿನ ತಡವಾದರೆ ಚೆನ್ನಕೇಶವಣ್ಣ ಸಿಟ್ಟು ಮಾಡುತ್ತಿದ್ದ. ಒಮ್ಮೆ ಹೀಗೇ ಆಯ್ತು. ನಾನು ಮೆಸ್ ಬಿಲ್ ಕೊಡುವುದು ಒಂದೆರಡು ತಿಂಗಳು ತಡವಾಯ್ತು. ಆಗ ಚೆನ್ನಕೇಶವಣ್ಣನ ಸಿಟ್ಟು ನನ್ನ ಮೇಲೆ ತಾರಕಕ್ಕೇರಿತ್ತು, ನಮ್ಮನೆಯಲ್ಲೂ ಆಗ ತುಂಬಾ ಸಮಸ್ಯೆ. ಮತ್ತೂ ತಡವಾಗಬಹುದೆಂಬ ಮಾಹಿತಿ ಇತ್ತು. ಈ ವಿಷಯವನ್ನು ಚೆನ್ನಕೇಶನಣ್ಣನ ಮನೆಯವರ ಬಳಿ ಹೇಳಿದೆ. ಆಗ ಅವರು ಅವರ ಬಳಿ ಇದ್ದ ಹಣವನ್ನೇ ಕೊಟ್ಟು ಮೆಸ್ ಬಿಲ್ ಕೊಡು ಎಂದು ತಿಳಿಸಿದ್ದರು. ಹೀಗೆ ಅವರು ಮಾತೃಹೃದಯಿಯಾಗಿದ್ದರು. ಅವರು ಕೋಪ ಮಾಡಿಕೊಂಡಿದ್ದನ್ನು ನಾನು ನೋಡಿಯೇ ಇರಲಿಲ್ಲ. ತುಂಬಾ ತಾಳ್ಮೆ ಇತ್ತು. ನಗುಮೊಗದ ಸ್ವಭಾವ. ನಾನಂತೂ ಅವರಲ್ಲೇ ನನ್ನ ತಾಯಿಯನ್ನು ಕಾಣುತ್ತಿದ್ದೆ. ತಿನ್ನುವ ವಿಷಯದಲ್ಲಿ ನಾವೆಷ್ಟೇ ತಿಂದರೂ ಅವರು ಏನೂ ಹೇಳುತ್ತಿರಲಿಲ್ಲ. ಒಮ್ಮೆ ಹೀಗೇ ಆಯ್ತು.
ಹಬ್ಬಕ್ಕೆಂದು ರಜಾ ಬಿಟ್ಟ ದಿನ. ಮೆಸ್ ಇದ್ದ ಮನೆಯವರೂ ಹಬ್ಬ ಮಾಡಬೇಕಾದ ಕಾರಣ ಅವರು ಅಂದು ಮಧ್ಯಾಹ್ನ ಚಿತ್ರಾನ್ನ ಮಾಡಿ ನಮಗೆ ಹೊರಗಿನ ರೂಮಿನಲ್ಲಿ ಇಟ್ಟಿದ್ದಾರೆ. ನಾನೂ ತಿಪ್ಪೇಸ್ವಾಮಿ ಮಧ್ಯಾಹ್ನದ ಊಟಕ್ಕೆಂದು ಹೋದಾಗ ಮನೆಯೊಳಗಿದ್ದ ಆಂಟಿ “ರೂಮಿನಲ್ಲಿ ತಿಂಡಿ ಇಟ್ಟಿದ್ದೇನೆ ನೀವು ತಿನ್ನಿ” ಎಂದರು. ನಾವು ಆಗ ಅಲ್ಲಿ ಇಟ್ಟಿದ್ದ ತಿಂಡಿಯನ್ನೆಲ್ಲಾ ಮುಗಿಸಿ ರೂಮಿಗೆ ಹೋದೆವು. ನಮ್ಮ ನಂತರ ಮೆಸ್ಸಿಗೆ ಊಟಕ್ಕೆಂದು ಬಂದವರು ಆಂಟಿಯನ್ನು ಊಟ ಕೇಳಿದ್ದಾರೆ. ಅವರಿಗೆ ನಮ್ಮಂತೆಯೇ ಆಂಟಿ “ಹೊರಗಿನ ರೂಮಿನಲ್ಲಿದೆ ತಿನ್ನಿ” ಎಂದಿದ್ದಾರೆ. ಅವರು ಅಲ್ಲಿ ನೋಡಿ “ಇಲ್ಲಾ ಆಂಟಿ” ಎಂದಾಗ “ಅಲ್ಲೇ ಇದೆ ನೋಡ್ರೋ” ಎಂದಾಗ ಅವರು ಖಾಲಿ ಪಾತ್ರೆಯನ್ನು ತೋರಿಸಿದ್ದಾರೆ. ಅವರಿಗೆ “ತಿಂಡಿ ಇಲ್ಲ, ಹೊರಗಡೆ ಏನಾದ್ರೂ ತಿನ್ನಿರಿ” ಎಂದು ಹೇಳಿ ದುಡ್ಡು ಕೊಟ್ಟು ಕಳಿಸಿದ್ದಾರೆ. ರಾತ್ರಿ ಮೆಸ್ಸಿಗೆ ಹೋದಾಗ ಎಲ್ಲರಿಗೂ ಮಾಡಿ ಇಟ್ಟಿದ್ದ ತಿಂಡಿಯನ್ನು ನಾವಿಬ್ಬರೇ ತಿಂದು ಹೋಗಿದ್ದನ್ನು ಕೇಳಿದ ಆಂಟಿ ಬಿದ್ದೂ ಬಿದ್ದೂ ನಕ್ಕರೇ ಹೊರತು ನಮಗೆ ಏನೂ ಹೇಳಲಿಲ್ಲ.
ಒಮ್ಮೆ ನಮ್ಮ ಮೆಸ್ಸಿಗೆ ಬರುತ್ತಿದ್ದ ನಮ್ಮ ಸೀನಿಯರ್ ಇಬ್ಬರೂ ಸೇರಿ 13 ಮುದ್ದೆ ತಿಂದ ವಿಷಯವು ತಿಳಿಯಿತು. ಆಗ ನಮಗೂ ಮೆಸ್ಸಿನ ಆ ರೆಕಾರ್ಡ್ ಮುರಿಯಬೇಕು ಎಂದುಕೊಂಡೆವು. ನಾನು ಬಸವರಾಜ್ ಸೇರಿ ಮುದ್ದೆ ತಿನ್ನಲೇಬೇಕು ಈ ಮೂಲಕ ಹಿಂದಿನವರ ರೆಕಾರ್ಡ್ ಮುರಿಯಬೇಕು ಎಂದು ತೀರ್ಮಾನಿಸಿ ರಾತ್ರಿ ಊಟಕ್ಕೆ ಕುಳಿತೆವು. ಬಸ್ಸಾರು ಮುದ್ದೆ. ತುಂಬಾ ರುಚಿ ಹತ್ತಿತು. ನಾವು ತಿನ್ನಲು ಶುರು ಮಾಡಿದೆವು. 6 ನೇ ಮುದ್ದೆ ತಿನ್ನುತ್ತಿದ್ದಾಗ ಸಿಟ್ಟಾದ ಚೆನ್ನಕೇಶವಣ್ಣ “ಸರ್ ಮುದ್ದೆ ಉಳಿದವರಿಗೂ ಬೇಕು. ನೀವು ಖಂಡಿತಾ ತಿಂದೇ ತಿನ್ನುತ್ತೀರಿ. ದಯಮಾಡಿ ನಿಮ್ಮ ಚಾಲೆಂಜ್ ನಿಲ್ಲಿಸಿ” ಎಂದು ಕೇಳಿದ್ದಕ್ಕೆ ನಾವು ಮುಂದೆ ತಿನ್ನುವುದನ್ನು ನಿಲ್ಲಿಸಿದೆವು. ನಾವು ನಮ್ಮ ಸೀನಿಯರ್ಗಳ ರೆಕಾರ್ಡ್ ಮುರಿಯಬೇಕೆಂಬುದು ಚೆನ್ನಕೇಶವಣ್ಣನಿಂದಾಗಿ ಮುರಿಯಲ್ಪಡಲಿಲ್ಲ.
ನಾನು ಓದುವ ಸಮಯದಲ್ಲಿ ಅದೇನಾಗಿತ್ತೋ ಗೊತ್ತಿಲ್ಲ. ತಿನ್ನುವುದು ತುಸು ಜಾಸ್ತಿಯೇ ಇತ್ತು. ಅದರಲ್ಲೂ ಹೊರಗಿನ ತಿಂಡಿಗಿಂತ ಮೆಸ್ಸಿನಲ್ಲಿ ಊಟವನ್ನು ಮಾತ್ರ ಜಾಸ್ತಿ ತಿನ್ನುತ್ತಿದ್ದೆವು. ಅದರಲ್ಲೂ ನಾನು ಚಾಲೆಂಜ್ ಕಟ್ಟಿದರೆ ಮುಗೀತು. ಸೋತ ಉದಾಹರಣೆ ಇಲ್ಲ. ಅದು ಎಂತಹದ್ದೇ ಸಂದರ್ಭ ಆಗಿರಲಿ ಸೋಲನ್ನು ಸುಲಭವಾಗಿ ಒಪ್ಪಿಕೊಳ್ತಾ ಇರಲಿಲ್ಲ. ಪಕ್ಕದೂರು ಶಿವಪುರದಿಂದ ನಮ್ಮ ಕಾಲೇಜಿಗೆ ಪರಮೇಶ್ವರಪ್ಪ ಎಂಬುವವನು ಬರುತ್ತಿದ್ದ. ಅವರ ಅಪ್ಪ ಅಮ್ಮ ತುಂಬಾ ಧಾರಾಳ ಮನೋಭಾವದವರು. ಅವರ ಊರಿಗೆ ಟೀಚಿಂಗ್ ಪ್ರಾಕ್ಟೀಸಿಗೆ ನಾವು ಹೋದಾಗ ಹೋದ ಎಲ್ಲರಿಗೂ ತಿಂಡಿಯ ವ್ಯವಸ್ಥೆಯನ್ನು ಅವರ ಮನೆಯಲ್ಲಿಯೇ ಮಾಡುತ್ತಿದ್ದರು. ಅವರ ಮನೆಯವರಿಗೆ ನಾನು ಫ್ಯಾಮಿಲಿ ಫ್ರೆಂಡ್ ಆಗಿದ್ದೆ. ರಜಾದ ಅವಧಿಯಲ್ಲಿ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಒಮ್ಮೆ ಪರಮೇಶ್ವರಪ್ಪ ನಮ್ಮ ರೂಮಿನಲ್ಲಿ ಉಳಿದುಕೊಂಡಿದ್ದ. ನಮ್ಮ ಮೆಸ್ಸಿಗೆ ಊಟಕ್ಕೆ ಬಂದಿದ್ದ. “ಮನೇಲಿ ಹೋಳಿಗೆ ಮಾಡಿದ್ದಾರೆ ಕಣೋ, ಬರೆಯುವುದಿತ್ತು ಅದಕ್ಕೆ ನಾನು ಇಲ್ಲಿಯೇ ಉಳಿದೆ” ಎಂದ. ನಾನು ತಕ್ಷಣ “ನಿಮ್ಮ ಮನೆಗೆ ಊಟಕ್ಕೆ ಹೋಗುತ್ತೇನೆ” ಎಂದೆ. ಅವನು “ಆಗಲಿ ನನ್ನ ಸೈಕಲ್ ತೆಗೆದುಕೊಂಡು ಹೋಗು” ಎಂದ. ನಾನು ಹೋಗಲು ಅಣಿಯಾಗಿದ್ದೇ ತಡ “ಗೌಡ ನಮ್ಮೂರಿನ ಮಾರ್ಗ ಮಧ್ಯೆ ಇರುವ ಮರವೊಂದರಲ್ಲಿ ದೆವ್ವಯಂತೆ ಕಣೋ ಹುಷಾರಿ” ಎಂದ. ನನಗೆ ಸ್ವಲ್ಪ ಭಯ ಎನಿಸಿದರೂ ಮಾತು ತಪ್ಪಬಾರದೆಂದು ಬಸ್ಸಿನ ರೂಟೇ ಅಲ್ಲದ ಹೆಚ್ಚೇನೂ ವಾಹನಗಳು ಚಲಿಸದ, ಜನರೇ ಓಡಾಡದ ಮಾರ್ಗದಲ್ಲಿ ನಾನು ಪರಮೇಶಿಯ ಮನೆಗೆ ಸೈಕಲ್ಲಿನಲ್ಲಿಯೇ ಹೋಗಿ ಹೋಳಿಗೆ ತಿಂದು ರಾತ್ರಿ 10 ಘಂಟೆಗೆ ವಾಪಸ್ಸು ಬಂದಿದ್ದೆ!!

“ಕಡಲೆ ಇದ್ದಾಗ ಹಲ್ಲು ಇರೋಲ್ಲ, ಹಲ್ಲು ಇದ್ದಾಗ ಕಡಲೇ ಇರೋಲ್ಲ” ಎಂಬ ಗಾದೆ ಮಾತಿನಂತೆ ನನಗೆ ಸಾಕಷ್ಟು ತಿನ್ನುವಾಸೆಯಿದ್ದಾಗ ತಿನ್ನಲು ಆಗ ವಿವಿಧ ರೀತಿಯ ಭಕ್ಷ್ಯ ಭೋಜನಗಳು ಇರುತ್ತಿರಲಿಲ್ಲ. ಆದರೆ ಈಗ ಬೇಕಾದ್ದು ತಿನ್ನುವಷ್ಟರಮಟ್ಟಿಗೆ ಆರ್ಥಿಕ ಸ್ಥಿತಿಯು ಇದ್ದಾಗ್ಯೂ ಮೊದಲಿನಂತೆ ತಿನ್ನಲು ಆಗುತ್ತಿಲ್ಲ. “ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಮಾತಿನಂತೆ ಊಟವನ್ನು ಬೇಕಾಬಿಟ್ಟಿ ತಿನ್ನಬಾರದು, “ಮಿತಾಹಾರ ಆರೋಗ್ಯಕ್ಕೆ ತುಂಬಾ ಸಹಕಾರಿ” ಎಂಬ ಮಾತನ್ನು ಅನೇಕರು ಹೇಳುವುದರಿಂದ ನಾನು ತಿನ್ನುವುದನ್ನು ಕಡಿಮೆ ಮಾಡಿದ್ದೇನೆ. ಅಲ್ಲದೇ ನಮ್ಮ ಮೇಷ್ಟ್ರುಗಳು ಹೇಳುತ್ತಿದ್ದ “ಒಂದ್ಹೋತ್ತು ಉಂಡೋನು ಯೋಗಿ, ಎರಡ್ಹೋತ್ತು ಉಂಡೋನು ಭೋಗಿ, ಮೂರ್ ಹೊತ್ತು ಉಂಡೋನು ರೋಗಿ, ನಾಲ್ಕ್ ಹೊತ್ತು ಉಂಡವನ್ನಾ ಹಳ್ಳಕ್ಕೆ ಹೊತ್ಕೊಂಡು ಹೋಗಿ” ಮಾತು ಆಗಾಗ್ಗೆ ನೆನಪಾಗ್ತಾ ಇರುತ್ತೆ. ಆದರೆ ಇದರಂತೆ ನನಗೆ ಅನುಸರಿಸೋಕೆ ಆಗೊಲ್ಲ. ಊಟದ ವಿಷಯದಲ್ಲಿ ಮನುಷ್ಯ ಮಾತ್ರ ಜೀವನ ಪರ್ಯಂತ ತಿಳಿದುಕೊಳ್ಳೋಕೆ ಆಗೋಲ್ಲ. ಅದನ್ನು ತಿಂದರೆ ಒಳ್ಳೇದು ಇದನ್ನು ತಿಂದರೆ ಒಳ್ಳೇದು ಎಂದು ಹೇಳ್ತಾನೆ ಇರ್ತಾನೆ. ಆದರೆ ಒಂದಂತೂ ಸತ್ಯ. ಯಾರೇನೇ ಹೇಳಲಿ. ನಮಗೆ ಏನು ತಿನ್ನೋಕಾಗುತ್ತೆ? ಎಷ್ಟು ತಿನ್ನೋಕಾಗುತ್ತೆ? ಎಂಬುದನ್ನು ತಿಳಿದುಕೊಂಡು, ಅಷ್ಟು ತಿಂದು ಸಾಕಷ್ಟು ಕೆಲಸ ಮಾಡಿದರೆ ಆರೋಗ್ಯವಾಗಿ ಇರಬಹುದು. ಸೋಮಾರಿಯಾಗಿ ಕುಳಿತು ಬರೀ ತಿಂದರೆ ರೋಗರುಜಿನಗಳು ಬರಬಹುದು, ಈ ಕಾರಣ ನಾವು ಊಟದ ಬಗ್ಗೆ ಎಚ್ಚರವಹಿಸೋಣ.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
