ದೇಶವಿಡೀ ಇನ್ನೇನು ಬರಲಿರುವ ಕ್ರಿಸ್ಮಸ್ ಹಬ್ಬದ ಮೋಡಿಗೆ ಸಿಲುಕಿ ಸಜ್ಜಾಗುತ್ತಿದೆ. ಬಣ್ಣಬಣ್ಣಗಳ ಅಲಂಕಾರಗಳು, ಕ್ರಿಸ್ಮಸ್ ಮಾರ್ಕೆಟ್, ಜನಸಂದಣಿ, ನಗರ ಕೇಂದ್ರದಲ್ಲಿರುವ ಬೃಹತ್ ಅಲಂಕೃತ ಕ್ರಿಸ್ಮಸ್ ಮರ ಎಲ್ಲವೂ ಜನರನ್ನು ಕುಣಿದಾಡಿಸುತ್ತಿವೆ. ಕ್ರಿಸ್ಮಸ್ ದಿನದ ವಿಶೇಷ ಆಹಾರವಾದ ಟರ್ಕಿ ಕೋಳಿ ಮತ್ತು ಸಾಮನ್ ಮೀನು ಮಿಂಚಿನ ವೇಗದಲ್ಲಿ ಮಾರಾಟವಾಗುತ್ತಿವೆ. ‘ನೀನು ನಿಮ್ಮ ಮನೆಯಲ್ಲಿ ಭಾರತೀಯ ಕ್ರಿಸ್ಮಸ್ ಹಬ್ಬ ಮಾಡುತ್ತೀಯೋ ಇಲ್ಲಾ ಆಸ್ಟ್ರೇಲಿಯನ್ ಕ್ರಿಸ್ಮಸ್ ಮಾಡುತ್ತೀಯೋ’ ಎಂದು ನನ್ನನ್ನು ಕೇಳುವ ಮಂದಿ ಹೆಚ್ಚುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

ದಿನಗಳು ದಾಪುಗಾಲಿಡುತ್ತಾ ವರ್ಷಾಂತ್ಯವನ್ನು ತಲುಪುತ್ತಿವೆ. ಕಳೆದೆರಡು ವಾರಗಳಲ್ಲಿ ನಮ್ಮೀ ಆಸ್ಟ್ರೇಲಿಯಾದಲ್ಲಿ ಏನೇನು ನಡೆಯಿತು, ಈ ‘ಆಸ್ಟ್ರೇಲಿಯಾ ಪತ್ರ’ ಅಂಕಣದ ಓದುಗರ ಜೊತೆ ಏನೇನೆಲ್ಲಾ ಸುದ್ದಿಸಮಾಚಾರಗಳನ್ನು ಹಂಚಿಕೊಳ್ಳಬೇಕು, ಎಂದು ಯೋಚಿಸುತ್ತಾ ಕುಳಿತಾಗ ನನ್ನ ಮುಂದೆ ಚಿಕ್ಕ-ದೊಡ್ಡ ಸಮಾಚಾರಗಳೆಲ್ಲ ತಾಮುಂದು ತಾಮುಂದು ಎಂದು ಧುಮುಕಿದವು. ಮಾಮೂಲಿನಂತೆ ಒಂದಷ್ಟು ಸಿಹಿ, ಕಹಿಗಳ ಜೊತೆ ನೋವುನಲಿವು ಇದ್ದದ್ದೇ!

ದೇಶದ ಪಶ್ಚಿಮದ ವೆಸ್ಟೆರ್ನ್ ಆಸ್ಟ್ರೇಲಿಯಾ ರಾಜ್ಯದ ರಾಜಧಾನಿ ಪೆರ್ತ್ ನಗರದಲ್ಲಿ ಜನಾಂಗೀಯ ದ್ವೇಷ ಸಂಬಂಧಿತವಾಗಿ ನಡೆದ ಶಾಲಾ ಹುಡುಗನ ಕೊಲೆಯ ದುಃಖ ಕಡಿಮೆಯಾಗಿಲ್ಲ. ಆಸ್ಟ್ರೇಲಿಯಾ ಸಮಾಜದ ಖಾಯಂ ವರ್ತನೆಯಾದ ರೇಸಿಸಮ್ ಬಗ್ಗೆ ಒಂದಷ್ಟು ಮಾತು ಕೇಳಿಬಂದರೂ ಅದು ಸಮುದ್ರಕ್ಕೆ ಬೀಳುವ ಒಂದು ಕಿರು ಮಳೆಹನಿಯಂತಾಗಿದೆ. ಆದರೆ ಹೋದ ವಾರ ಬ್ರಿಟಿಷ್ ರಾಜಮನೆತನಕ್ಕೆ ಸಂಬಂಧಿಸಿದ ರೇಸಿಸಮ್ ಘಟನೆ ವಿಶ್ವದಾದ್ಯಂತ ದೊಡ್ಡ ಸುದ್ದಿಯಾಯಿತು. ಚಟಕ್ಕನೆ ರಾಜನ ಅರಮನೆಯಿಂದ ‘ರೇಸಿಸಮ್‌ಗೆ ಇಲ್ಲಿ ಎಡೆಯಿಲ್ಲ’ ಎಂಬ ಸಂದೇಶ ಬಿತ್ತರವಾಯಿತು. ನಗು ಬಂತು. ‘ನೀವೆ ಜನ್ಮಕೊಟ್ಟ ಈ ಆಸ್ಟ್ರೇಲಿಯಾಕ್ಕೆ ಬಂದು ನೋಡಿ, ರೇಸಿಸಮ್ ತಾಂಡವವಾಡುತ್ತಿದೆ,’ ಎಂದು ನನಗೆ ನಾನೇ ಹೇಳಿಕೊಂಡೆ. ನನ್ನನ್ನು ‘ಬ್ಲಾಕ್ ವುಮನ್’ ಎಂದು ಕರೆಯುತ್ತಾ ನಮ್ಮ ಪಕ್ಕದ ಮನೆಯವರು ಕೊಡುವ ಕಿರುಕುಳಕ್ಕೆ ಬೇಸತ್ತು ನಾನು ಆಸ್ಟ್ರೇಲಿಯನ್ ಹ್ಯೂಮನ್ ರೈಟ್ಸ್ ಕಮಿಷನ್‌ಗೆ ದೂರು ಕೊಟ್ಟೆ. ಉತ್ತರಿಸಿದ ಈ ಮಾನವ ಹಕ್ಕುಗಳ ಸಂಸ್ಥೆಯವರು ‘ಸರಿಯಾದ ಆಧಾರ’ಗಳನ್ನು ಕೇಳಿದ್ದೂ ಅಲ್ಲದೆ ಕಿರುಕುಳದ ಘಟನೆಗಳು ‘ಖಾಸಗಿ ವಲಯದಲ್ಲಿ’ (private space) ನಡೆದಿದ್ದರೆ ಅದನ್ನು ತಾವು ಪರಿಶೀಲಿಸುವುದಿಲ್ಲ ಎಂದಿದ್ದಾರೆ. ಅಂದರೆ ನನ್ನ ಪಕ್ಕದ ಮನೆಯವರ ರೇಸಿಸ್ಟ್ ವರ್ತನೆ ಮನೆಯಂಗಳ ದಾಟಿ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಬೇಕು; ಅದನ್ನು ನಾನು ಆಡಿಯೋ ಮತ್ತು ವಿಡಿಯೋವಾಗಿ ದಾಖಲಿಸಬೇಕು. ಆಗ ಮಾತ್ರ ನನ್ನ ದೂರಿಗೆ ಮಾನ್ಯತೆಯಿದೆ. ಇಂತಹ ಆಧಾರವಿಲ್ಲದೆ ಕೊಟ್ಟ ನನ್ನ ದೂರು ಅವರ ಕಸದ ಪೆಟ್ಟಿಗೆಗೆ ಹೋಯ್ತು. ಮಾನವಹಕ್ಕುಗಳ ಸಂಸ್ಥೆ ಕಾಗದದ ಹುಲಿಯಾಯ್ತು! ಡಿಸೆಂಬರ್ ೧೦ ವಿಶ್ವ ಮಾನವಹಕ್ಕುಗಳ ದಿನ. ಇದನ್ನು ಬರೆಯುತ್ತಿರುವಾಗ ಮನಸ್ಸು ವಿಹ್ವಲಗೊಂಡಿದೆ.

ಈ ರೀತಿಯ ಅನೇಕ ದುಃಖಗಳ ನಡುವೆಯೂ ಅತ್ತ ಉತ್ತರ-ಪೂರ್ವದ ಟೊರ್ರೆ ಸ್ಟ್ರೀಟ್ ದ್ವೀಪಗಳಲ್ಲಿ ದ್ವೀಪವಾಸಿಗಳು ಹವಾಮಾನ ಬದಲಾವಣೆ ವಿಷಯದಲ್ಲಿ ಕೇಂದ್ರ ಸರಕಾರದ ನಿಲುವುಗಳ ವಿರುದ್ಧ ಸೆಣೆಸಿ ತಾವು ಗೆದ್ದಿದ್ದಕ್ಕೆ ಅವರಲ್ಲಿ ಜಯಕಾರದ ನಗೆಯೆದ್ದಿದೆ. ಆದರೆ ಹವಾಮಾನ ಬದಲಾವಣೆ ಕಾರಣದಿಂದಲೇ ದಕ್ಷಿಣದ ಮೆಲ್ಬೋರ್ನ್ ಪ್ರದೇಶದಲ್ಲಿನ್ನೂ ಚಳಿ, ಮಳೆಯಿದ್ದು ಅದರ ಮೇಲಿರುವ ನ್ಯೂ ಸೌತ್ ವೇಲ್ಸ್ ರಾಜ್ಯದ ಭಾಗಗಳಲ್ಲಿ ಇನ್ನೂ ಪ್ರವಾಹ ವಿಕೋಪ ಆರಿಲ್ಲ. ಅಲ್ಲಿನ ಅನೇಕ ಜನರು ವಸತಿಹೀನರಾಗಿಯೇ ಉಳಿದಿದ್ದಾರೆ. ಅವರಲ್ಲಿನ ಚಳಿ ನಮಗೂ ಒಂದಿಷ್ಟು ಸಿಗಲೆಂದು ನಾವು ಉತ್ತರದ ರಾಣಿರಾಜ್ಯದವರು ಬೇಡಿಕೊಳ್ಳುವ ಪರಿಸ್ಥಿತಿ ನಮ್ಮದು. ರಾಣಿರಾಜ್ಯದಲ್ಲಿ ಈಗ ತಾಪಮಾನ ೩೬-೪೦ ಡಿಗ್ರಿಗಳಿಗೇರಿ ‘ಹೀಟ್ ವೇವ್’ ಎಚ್ಚರಿಕೆ ಗಂಟೆ ಮೊಳಗಿದೆ. ಈ ಪಾಟಿ ಬಿಸಿಲು, ಬೆವರು ಬವಣೆಯ ಜೊತೆ ಗುಡುಗು-ಸಿಡಿಲು ಸಹಿತ ಮಳೆ ಬರಲಿದೆಯೆಂದು ಹವಾಮಾನ ಇಲಾಖೆ ಹೇಳಿದೆ. ಹೀಗೆಲ್ಲಾ ವೈಪರೀತ್ಯಗಳಿಂದ ದಿನನಿತ್ಯದ ಬದುಕು ನಡೆದಿದೆ.

ಬೆಲೆಯೇರಿಕೆ ಎಲ್ಲರನ್ನೂ ಭಾದಿಸುತ್ತಿರುವ ದಿನಗಳಲ್ಲಿ ಅದರ ಜೊತೆಜೊತೆಗೆ ಬಂದಿರುವ ಸುದ್ದಿ ಈ ವರ್ಷ ಆಸ್ಟ್ರೇಲಿಯಾದ ಆರ್ಥಿಕ ಸ್ಥಿತಿಯಲ್ಲಿ ಶೇಕಡಾ ೬ ರಷ್ಟು ಪ್ರಗತಿ ಕಂಡಿದೆ. ಅದೇನು ಕೋವಿಡ್-೧೯ ಮಾಯೆಯೋ ತಿಳಿಯದು – ಒಂದು ಕಡೆ ಲಾಕ್ ಡೌನ್ ದುಷ್ಪರಿಣಾಮಗಳ ಬಗ್ಗೆ ಪುಂಖಾನುಪುಂಖವಾಗಿ ಚರ್ಚೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಜನರು ಎರಡು ವರ್ಷಗಳು ತಾವು ಕೂಡಿಟ್ಟ ಹಣವನ್ನು ಖರ್ಚು ಮಾಡಲು ಮುಂದೆ ಬಿದ್ದಿದ್ದಾರೆ. ಹೋದ ತಿಂಗಳು ನವೆಂಬರಿನಲ್ಲಿ ಮೆಲ್ಬೋರ್ನ್ ನಗರದ ವಾರ್ಷಿಕ ಕುದುರೆ ಓಟದ ಪಂದ್ಯದ ಸಂದರ್ಭದಲ್ಲಿ ಹೆಂಗಸರ ಉಡುಪುಗಳ ಮಾರಾಟ ಆರು ಮಿಲಿಯನ್ ಡಾಲರಿಗೂ ಹೆಚ್ಚು ವರಮಾನ ತಂದಿತ್ತು. ತಲೆಯನ್ನು ಅಲಂಕರಿಸುವ ಹ್ಯಾಟ್ ಮಾರಾಟದಿಂದ ಎರಡು ಮಿಲಿಯನ್ ಡಾಲರ್ ಹುಟ್ಟಿತ್ತು. ಬ್ರಿಟಿಷರ ಪದ್ಧತಿಯನ್ನು ಚಾಚೂತಪ್ಪದೆ ಅನುಕರಿಸುವ ಈ ಬಹು ಹೆಗ್ಗಳಿಕೆಯ ಕುದುರೆ ಓಟದ ದಿನದಂದು ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಿಸುತ್ತದೆ. ಅಂದರೆ ಅದೆಷ್ಟು ಮುಖ್ಯವೆಂದು ಅರ್ಥವಾಗುತ್ತದೆ. ಅದರ ಕಾರಣದಿಂದಲೇ ಅದನ್ನು ಹೀಗೆಳೆಯುವ, ಬಹಿಷ್ಕರಿಸುವ ಜನರೂ ಇದ್ದಾರೆ. ಅವರ ಗೊಣಗಾಟಗಳ ನಡುವೆಯೆ ಕ್ರಿಸ್ಮಸ್ ಸೀಸನ್ ಶುರುವಾಗುತ್ತದೆ.

ದೇಶವಿಡೀ ಇನ್ನೇನು ಬರಲಿರುವ ಕ್ರಿಸ್ಮಸ್ ಹಬ್ಬದ ಮೋಡಿಗೆ ಸಿಲುಕಿ ಸಜ್ಜಾಗುತ್ತಿದೆ. ಬಣ್ಣಬಣ್ಣಗಳ ಅಲಂಕಾರಗಳು, ಕ್ರಿಸ್ಮಸ್ ಮಾರ್ಕೆಟ್, ಜನಸಂದಣಿ, ನಗರ ಕೇಂದ್ರದಲ್ಲಿರುವ ಬೃಹತ್ ಅಲಂಕೃತ ಕ್ರಿಸ್ಮಸ್ ಮರ ಎಲ್ಲವೂ ಜನರನ್ನು ಕುಣಿದಾಡಿಸುತ್ತಿವೆ. ಕ್ರಿಸ್ಮಸ್ ದಿನದ ವಿಶೇಷ ಆಹಾರವಾದ ಟರ್ಕಿ ಕೋಳಿ ಮತ್ತು ಸಾಮನ್ ಮೀನು ಮಿಂಚಿನ ವೇಗದಲ್ಲಿ ಮಾರಾಟವಾಗುತ್ತಿವೆ. ‘ನೀನು ನಿಮ್ಮ ಮನೆಯಲ್ಲಿ ಭಾರತೀಯ ಕ್ರಿಸ್ಮಸ್ ಹಬ್ಬ ಮಾಡುತ್ತೀಯೋ ಇಲ್ಲಾ ಆಸ್ಟ್ರೇಲಿಯನ್ ಕ್ರಿಸ್ಮಸ್ ಮಾಡುತ್ತೀಯೋ’ ಎಂದು ನನ್ನನ್ನು ಕೇಳುವ ಮಂದಿ ಹೆಚ್ಚುತ್ತಿದ್ದಾರೆ. ಆಸ್ಟ್ರೇಲಿಯನ್ ಕ್ರಿಸ್ಮಸ್ ಎಂದರೆ ಹಿತ್ತಲಿನಲ್ಲಿ ಬಾರ್ಬೆಕ್ಯೂ ಮತ್ತು ಬಿಯರ್. ‘ಇಲ್ಲಾ, ನಮ್ಮಲ್ಲಿ ಇಂಗ್ಲಿಷ್ ಕ್ರಿಸ್ಮಸ್ ಮಾಡುವುದು’ ಎಂದರೆ ಹುಬ್ಬೇರಿಸುತ್ತಾರೆ. ಹಬ್ಬದಾಚರಣೆ ಅರ್ಥ ನೋಡುವ ಕಣ್ಣುಗಳಲ್ಲಿ, ಮನಸ್ಸುಗಳಲ್ಲಿ ಮೈದಾಳುತ್ತದೆ. ಅವರವರ ಪ್ರಪಂಚಗಳಲ್ಲಿ ಭಾವನೆಗಳ ಕುಂಚಗಳು ತುಂಬುವ ಬಣ್ಣಗಳ ಮೇಳದ ಸೊಗಸನ್ನು ಕಾಣುವುದು ಬರಿಯ ಕವಿಯಷ್ಟೇ ಅಲ್ಲ, ನಮ್ಮಂಥ ಸಾಮಾನ್ಯರಿಗೂ ಅದು ಕಾಣಬಲ್ಲದು. ಬದುಕನ್ನು ಪ್ರೀತಿಸಬೇಕು ಅಲ್ಲವೇ!

ಯಾಕೋ, ಬಣ್ಣಗಳ ಬಗ್ಗೆ ಮಾತನಾಡಿದಾಗ ನೆನಪಾಗಿದ್ದು ಟಿವಿ ಪರದೆಯ ಮೇಲೆ ಕಂಡ ನಮ್ಮ ಹಿಂದಿನ ಪ್ರಧಾನಮಂತ್ರಿಯ ಪೇಲವ ಮುಖ. ಈಗ ಸಂಸತ್ತಿನ ಹಿಂದಿನ ಬೆಂಚಿನಲ್ಲಿ ಕೂರುವ ಹಳೆಯ ಪ್ರಧಾನಮಂತ್ರಿ ಈ ವಾರ ಮತ್ತೆ ಸುದ್ದಿಯಾಗಿದ್ದರು. ಯಾಕೆಂದರೆ ಈ ವಾರವಷ್ಟೇ ಪ್ರಕಟವಾದ ಜನಾಭಿಪ್ರಾಯದಂತೆ ೧೯೯೦ ನಂತರದ ದಶಕಗಳಲ್ಲಿ ಅವರಷ್ಟು ಕುಪ್ರಸಿದ್ಧ ಜನನಾಯಕ ಮತ್ತೊಬ್ಬರಿಲ್ಲವಂತೆ. ಹಾಗೆಂದು ಹೇಳಿದ್ದು ಟಿವಿ ವರದಿ. ಯಾಕಪ್ಪಾ ಅಂದರೆ ಈ ಪ್ರಧಾನಮಂತ್ರಿ ಕೋವಿಡ್-೧೯ ಕಾಲದಲ್ಲಿ ಯಾರಿಗೂ ಹೇಳದೇ, ತನ್ನ ಇತರ ಮಂತ್ರಿಗಳನ್ನೂ ಕೇಳದೇ ರಹಸ್ಯವಾಗಿ ತಾನೇ ಹಲವಾರು ಮಂತ್ರಿಪದವಿಗಳನ್ನು ಸೃಷ್ಟಿಸಿ ಅವುಗಳ ಅಧಿಕಾರವನ್ನೂ ತನ್ನ ಕೈಯಲ್ಲೇ ಇಟ್ಟುಕೊಂಡಿದ್ದರಂತೆ. ಇದರ ಬಗ್ಗೆ ಬಲು ದೊಡ್ಡ ಆಕ್ಷೇಪಣೆಯೆದ್ದಿದೆ. ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳೆರಡರಲ್ಲೂ ಅಸಮಾಧಾನ ಭುಗಿಲೆದ್ದಿದೆ. ಪ್ರಜಾಪ್ರಭುತ್ವ ವಿರುದ್ಧವಾದ ನಡತೆಯ ಬಗ್ಗೆ ವಿಚಾರಣೆ ನಡೆಸುವುದಾಗಿ ಈಗಿನ ಪ್ರಧಾನಮಂತ್ರಿ ಹೇಳಿದ್ದಾರೆ.

ಅದೇ ಹಳೆಯ ಪ್ರಧಾನಮಂತ್ರಿಗಳ ಮುಖದ ಕಳೆ ಮತ್ತಷ್ಟು ಕುಂದುವುದಕ್ಕೆ ಇನ್ನೊಂದು ಕಾರಣವಿದೆ. ಮೂರು ವರ್ಷಗಳ ಹಿಂದೆ ಹವಾಮಾನ ಪ್ರತಿಕೂಲಗಳ ಬಗ್ಗೆ ಬಹು ಮಾತಾಗಿ, ನಮ್ಮ ದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಕಡಿಮೆಯಾಗಬೇಕು, ಕಲ್ಲಿದ್ದಲು ಬಳಸಿ ತಯಾರಾಗುವ ಶಕ್ತಿ ವಿಧಾನದ ಪರ್ಯಾಯಗಳನ್ನು ಗಮನಿಸಬೇಕು, ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಚಿಂತಿಸಬೇಕು, ವಿಶ್ವಸಂಸ್ಥೆಯ ಸೂಚನೆಗಳನ್ನು ಪಾಲಿಸಬೇಕು, ಎಂದೆಲ್ಲ ಒತ್ತಾಯಗಳು ಎದ್ದಿದ್ದವು. ಆದರೆ ಅಧಿಕಾರ ಹಿಡಿದಿದ್ದ ಪ್ರಧಾನಮಂತ್ರಿ ಅವನ್ನು ತಳ್ಳಿ ಹಾಕಿದರು. ಆಗ ಏರುತ್ತಿರುವ ಸಮುದ್ರಮಟ್ಟದಿಂದ ತಮ್ಮ ಆಸ್ತಿಪಾಸ್ತಿಗಳ ಮತ್ತು ಸಂಸ್ಕೃತಿ ಚಿಹ್ನೆಗಳ ನಾಶ, ತಮ್ಮ ಜೀವನ ಗುಣಮಟ್ಟಕ್ಕೆ ಆಗುತ್ತಿರುವ ಧಕ್ಕೆ, ಕುಲಕಸುಬಾದ ಮೀನುಗಾರಿಕೆಗೆ ಬೀಳುತ್ತಿರುವ ಪೆಟ್ಟು, ಮುಂಬರುವ ವರ್ಷಗಳಲ್ಲಿ ತಮ್ಮ ದ್ವೀಪಗಳು ಮುಳುಗುವ ಸಾಧ್ಯತೆ ಹೆಚ್ಚುತ್ತಿದೆ ಎಂತೆಲ್ಲಾ ವಿಷಯಗಳನ್ನು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳು ಚರ್ಚೆಯ ಮುನ್ನೆಲೆಗೆ ತಂದರು. ಆದರೂ ಪ್ರಧಾನಮಂತ್ರಿ ಕೇಳಲಿಲ್ಲ. ತಮ್ಮ ವಾದವನ್ನು ಮುಂದುವರೆಸಿ ದ್ವೀಪವಾಸಿಗಳು ವಿಶ್ವಸಂಸ್ಥೆಯ ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಿದರು. ಅಲ್ಲಿ ಅವರ ವಾದಕ್ಕೆ ಮನ್ನಣೆ ದೊರೆತು, ಆಸ್ಟ್ರೇಲಿಯಾ ಕೇಂದ್ರ ಸರಕಾರವು ಸರಿಯಾದ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂಬ ತೀರ್ಪು ಹೊರಬಿದ್ದಿತು. ದ್ವೀಪವಾಸಿಗಳಿಗೆ ಒಂದಷ್ಟು ಸಮಾಧಾನ. ಆದರೆ ಕೇಂದ್ರ ಸರಕಾರ, ಆಗಿನ ಪ್ರಧಾನಮಂತ್ರಿ ಪುನಃ ಅದನ್ನು ಅಲ್ಲಗಳೆಯಿತು. ಈತ್ತೀಚೆಗೆ ಅದೇ ಚರ್ಚೆ ಮುಂದುವರೆದು, ಮತ್ತೆ ವಿಶ್ವಸಂಸ್ಥೆ ತನ್ನ ಸಲಹೆಸೂಚನೆಗಳನ್ನು ಪುನರುಚ್ಚಿಸಿದೆ. ಈ ಬಾರಿ ಬದಲಾದ ಸರಕಾರದ ಹೊಸ ಪ್ರಧಾನಮಂತ್ರಿಗಳು ತಾವು ಬದ್ಧರಾಗಿ ಅವನ್ನು ಪಾಲಿಸುವುದಾಗಿ ಹೇಳಿದ್ದಾರೆ. ಹಳೆಯ ಪ್ರಧಾನಿಯ ಮಾತುಗಳು ಮತ್ತು ಕುಪ್ರಸಿದ್ಧ ನಡತೆ ಮತ್ತಷ್ಟು ನಗೆಪಾಟಲಿಗೆ ಈಡಾಗಿದೆ.

ಹೀಗೆ ಹಳತು, ಹೊಸತು, ಸುಖ-ದುಃಖ, ನೋವು, ನಲಿವುಗಳ ಬದುಕು ಹಾಗೇ ದಾಪುಗಾಲಿಡುತ್ತಾ ಓಡುತ್ತಿದೆ.