ಒಂದೆರೆಡು ರೊಟ್ಟಿ
ಮೆಂತ್ಯದ ಪಲ್ಯ
ಮೇಲೆ ಒಂದಿಷ್ಟು
ಅನ್ನ
ಅಚ್ಛ ಕಾರದಪುಡಿ
ಕಟ್ಟಿ ಕಳಿಸಿದ್ದಳು
ಕೌಸಲ್ಯ ಬುತ್ತಿಯಲ್ಲಿ..

ದಾರಿಯಲಿ
ನೆರಳಿರುವಲ್ಲಿ
ತಂಪು ನೀರಿರುವಲ್ಲಿ
ಕೇದಿಗೆಯ ಕಂಪು
ಬೀರುವಲ್ಲಿ
ಕುಳಿತುಣ್ಣು ಕೂಸೆ,
ಬಾಗಿಲಲೇ ನಿಂತು
ಹೇಳಿ ಕಳುಹಿದಳು ಹೀಗೆ ತಾಯಿ‌..

ಕಾಡ ನಡುವಲಿ ಬಂದು
ದಣಿದು ನಿಂತನು ಮಗನು
ಹುಡುಕಿ ಹೊಂಗೆಯ ನೆರಳ
ಹರಿವ ತುಂಗೆಯ ತಟವ
ತಾಯಿ ಕಟ್ಟಿದ ಬುತ್ತಿ
ನೆನೆಸಿ ಉಂಡನು ರಾಮಭದ್ರ..

ಹೊಟ್ಟೆ ತುಂಬ ಉಂಡವಗೆ
ನೆರಳು ಹಾಸಿಗೆಯಾಯ್ತು
ಕಣ್ಣು ಮುಚ್ಚಿದ ಹಾಗೆ
ತೇಲಿ ಬಂತು ನಿದಿರೆ..

ತುಸು ಹೊತ್ತು ಸವೆಯಿತು
ಬಂತು ಅರಮನೆಯಿಂದೊಂದು ಸಾರೋಟು
ದೊರೆಯ ಆಣತಿಯಂತೆ
ಕರೆದೊಯ್ಯಲು
ಪ್ರಭು ಶ್ರೀರಾಮನನ್ನು..

ಮಿಥಿಲೆಗೆ ಹೋದನು
ಬಿಲ್ಲು ತಾನೇ ಮುರಿದನು
ಜಗದೇಕ ಸುಂದರಿ
ಸೀತೆಯನು ವರಿಸಿ
ಕರೆತಂದನು ರಾಘವ
ಕೋಸಲಕ್ಕೆ..

ಸಂತಸದ ಅಲೆಯು
ತುಂಬಿತ್ತು ಅರಮನೆಯ
ಪಟ್ಟ ಕಟ್ಟಿದರಂತೆ
ರಾಮಭದ್ರನಿಗೆ
ತಾಯ ಅಣತಿಯಂತೆ
ಕಾಡು ವಾಸವಾಯಿತಂತೆ
ಹೊರಟರಂತೆ
ಸೀತೆ ಲಕ್ಣ್ಮಣರು ಜೊತೆಗೆ
ನಡೆದರಂತೆ, ದೂರವಾದಂತೆ
ಊರು ಕಾಣದಂತೆ
ಬಂದೊಬ್ಬ ರಾವಣ
ಸೀತೆಯನು ಹೊತ್ತೊಯ್ದಂತೆ
ಹುಡುಕುತ್ತ
ದೇಶಗಳ ಅಲೆದಂತೆ
ಯುದ್ಧದಿ ಗೆದ್ದು ಬಿಡಿಸಿ ತಂದಂತೆ
ತಾಯ ಮಡಿಲಿಗೆ
ಮರಳಿ ಬಂದಂತೆ
ಗಾಳಿಮಾತಿಗೆ ಕಿವಿಯಾದಂತೆ
ಕೈ ಹಿಡಿದ ಸತಿಯನ್ನು
ಅಡವಿಗಟ್ಟಿದಂತೆ
ಕಡೆಗೊಮ್ಮೆ
ಭೂಗರ್ಭದಲ್ಲಿ ಸೀತೆ…

ಛೇ..
ಮೇಲೆ ಕೆಂಡ ಬಿದ್ದವನಂತೆ
ಮೈಕೊಡವಿ ಎದ್ದ ರಾಮ
ಇದೆಂತಹ ಕನಸು
ಹೀಗೆಲ್ಲ ಆಗಬಹುದೆ
ಎಂದು, ನೆನೆಸಿ ನೊಂದ..

ದುಃಖ ಉಮ್ಮಳಿಸಿ
ತಾಯ ಮಡಿಲನು ನೆನೆಸಿ
ಮನೆಯ ದಿಕ್ಕನು ಹಿಡಿದ
ಹೆಣ್ಣುಗರುಳಿನ
ಹುಡುಗ ರಘುಕುಮಾರ..

 

ಚೇತನ್ ನಾಗರಾಳ ಎನ್ನುವ ಕಾವ್ಯನಾಮದಲ್ಲಿ ಕವಿತೆಗಳು ಮತ್ತು ಗಜ಼ಲ್‌ಗಳನ್ನು ರಚಿಸುತ್ತಿರುವ ಚನ್ನಮಲ್ಲಪ್ಪ ನಾಗರಾಳ ಮೂಲತಃ ಬಾಗಲಕೋಟ ಜಿಲ್ಲೆಯ ಬೀಳಗಿಯವರು.
ಸದ್ಯ ಖಾಸಗಿ ಬ್ಯಾಂಕೊಂದರ ಉದ್ಯೋಗಿ
ಹೀಗೊಂದು ಯುದ್ಧ ಬುದ್ಧನೊಂದಿಗೆ (ಕವನ ಸಂಕಲನ) ಮತ್ತು ಖಾಲಿ ಕೋಣೆಯ ಹಾಡು (ಗಜಲ್ ಸಂಕಲನ) ಪ್ರಕಟಿತ ಕೃತಿಗಳು
ಮೂರನೇ ಕೃತಿ “ಉಸಿರು ಮಾರುವ ಹುಡುಗ” ಗಜಲ್ ಸಂಕಲನ ಸದ್ಯ ಅಚ್ಚಿನ ಮನೆಯಲ್ಲಿದೆ.
ಗೆಳೆಯರೊಟ್ಟಿಗೆ ಸೇರಿ ಕಾಚಕ್ಕಿ ಪ್ರಕಾಶನ ನಡೆಸುತ್ತಿದ್ದಾರೆ