ಚೊಕ್ಕಾಡಿಯವರ ಒಂದು ವಿಶೇಷಗುಣ ಎಂದರೆ ಎಲ್ಲರ ಜೊತೆಗೂ ಸಹಜವಾಗಿ ಬೆರೆಯುವುದು, ಕುತೂಹಲ, ಮತ್ತು ಗುಣಗ್ರಾಹಿತ್ವ. ಅವರ ಓರಗೆಯ ಹಿರಿಯ ಲೇಖಕರಿರಲಿ, ಇತ್ತೀಚಿನ ಹೊಸ ಕವಿ ಲೇಖಕರಿರಲಿ ಚೊಕ್ಕಾಡಿಯವರು ಕಾಮನ್ ಫ್ಯಾಕ್ಟರ್ ಹಾಗೆ. ಅವರಿಗೆ ಹಳತು ಹೊನ್ನಿನ ಸಮುದ್ರವೂ ಗೊತ್ತು. ಹೊಸ ಹರಿವಿನ ಹಳ್ಳದೊರತೆಗಳೂ ಗೊತ್ತು. ವಿಮರ್ಶಿಸುವಾಗ ಸ್ಪಷ್ಟ ಮಾತುಗಳನ್ನು ಹೇಳುವ ನೇರವಂತಿಕೆ, ಹಾಗೆಂದು ಬರೆದವರ ಮನಸ್ಸು ಕುಗ್ಗಿಸದ ಹಾಗೆ ಆ ಬರಹದಲ್ಲಿನ ಒಳಿತನ್ನು ಮತ್ತೆ ಹುಡುಕಿ ಹೇಳಿ ಮುಂದಿನ ದಾರಿಗೊಂದು ಬೆಳಕು ಚೆಲ್ಲುವ ಹೃದಯವಂತಿಕೆ ಇವೆರಡೂ ಚೊಕ್ಕಾಡಿಯವರದ್ದು.
ಸುಬ್ರಾಯ ಚೊಕ್ಕಾಡಿಯವರ ಬದುಕು-ಬರಹದ ಕುರಿತು ಸಿಂಧುರಾವ್‌ ಟಿ. ಬರಹ

ನಮ್ಮ ಕನ್ನಡ ಸಾಹಿತ್ಯ ಕವಿತೆ, ಕಾವ್ಯ, ಗದ್ಯಬರಹಗಳಿಂದ ಶ್ರೀಮಂತವಾಗಿದೆ. ಪ್ರತೀ ಕಾಲಮಾನದಲ್ಲೂ ಒಂದು ಸಾಲು ಹಿರಿಕವಿಗಳು, ವಯಸ್ಸಿನಲ್ಲೂ ಮತ್ತು ಬರಹದ ಸತ್ವದಲ್ಲೂ ಹಿರಿಯರಾದ ಸಾಹಿತಿಗಳು ಕಿರಿಯರೊಡನೆ ಒಡನಾಡಲು ಸಿಗುತ್ತಿರುತ್ತಾರೆ. ಈಗ ಸಧ್ಯದಲ್ಲಿ ನಮ್ಮ ನಡುವಿರುವ ಹಿರಿಕವಿಗಳಲ್ಲಿ ತನ್ನ ಪಾಲ್ಗೊಳ್ಳುವಿಕೆಯಿಂದ ಸಮಕಾಲೀನರಂತೆಯೇ ಮಿಂಚುತ್ತಿರುವವರಲ್ಲಿ ಸುಬ್ರಾಯ ಚೊಕ್ಕಾಡಿಯವರದು ಮೊದಲ ಸಾಲಿನ ಹೆಸರು.

ಕವಿತೆ ಬರೆಯಬೇಕೇ? ವಿಮರ್ಶೆಗೆ ತೊಡಗಬೇಕೇ? ಕಿರಿಯರ ವಾಟ್ಸಪ್ ಗುಂಪುಗಳಲ್ಲಿ ಓದಿನ, ಬರಹದ ಕುರಿತು ಮಾರ್ಗದರ್ಶನ ಬೇಕೇ? ಹಳತು ಹೊನ್ನಿನ ತತ್ ಕ್ಷಣದ ರೆಫರೆನ್ಸು ಬೇಕೇ? ಸ್ವಲ್ಪ ಸಂಕೋಚದ ಕಿರಿಯರ ಪುಸ್ತಕಕ್ಕೆ ಬೆನ್ನುಡಿ ಬೇಕೇ? ಭಾವಗೀತ ಸಂಯೋಜನೆಗೆ ಒಗ್ಗುವ ಒಂದು ಪದ್ಯ ಬೇಕೆ? ಪಂಥಗಳ ಹಂಗಿಲ್ಲದೆ ಸಾಹಿತ್ಯಪ್ರೀತಿಯ ವೇದಿಕೆಯಲ್ಲಿ ಮಾತಾಡಬೇಕೆ?

ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಹೊಸಗಾಲದ ಹಾಡುಗಬ್ಬಗಳನ್ನ, ಮಾತುಕತೆಗಳನ್ನ, ಇನ್ನಿಷ್ಟೇ ಕಣ್ಣುಬಿಡುತ್ತಿರುವ ಕವಿತೆಗಳನ್ನ ಓದಬೇಕೇ, ಓದುವಾಗ ಕಿವಿಬೇಕೇ? ಓದಿದ ನಂತರ ಬೆನ್ತಟ್ಟಿ ಕಿವಿಹಿಂಡಿ ಮುಂದಿನ ದಾರಿಗೆ ಒಂದು ಕೈಮರ ಹಿಡಿಯಬೇಕೇ… ಅಗೋ ನೋಡಿ ಸುಬ್ರಾಯ ಚೊಕ್ಕಾಡಿಯವರಿದ್ದಾರೆ.

ಇವತ್ತು ನಮಗೆ ಚೊಕ್ಕಾಡಿಯವರು ಮೂರ್ತವಾಗಿ 82 ರ ತುಂಬು ಜೀವನದ ಒಬ್ಬ ಹಿರಿಕವಿಯಾಗಿ ಎದುರಿದ್ದಾರೆ. ಆದರೆ ಇದು ಈ ಹಿರಿಶಿಖರದ ಒಂದು ತುತ್ತ ತುದಿಯ ದರ್ಶನವಷ್ಟೇ. ದೂರದಿಂದ ನೋಡುವಾಗ ಮಲೆಸಾಲುಗಳಲ್ಲಿ ಚೂಪಾಗಿ ನಿಂತ ಶಿಖರವನ್ನು ನೋಡಿದರೆ ಅಬ್ಬಾ ಎನಿಸುವ ಒಂದು ದೂರನೋಟದ ಹೊಳಹಷ್ಟೆ.

ನೀವು ಚೊಕ್ಕಾಡಿ ಊರಿಗೆ ಹೋಗಿ, ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಓಡಾಡಿ, ಸುತ್ತ ಮುತ್ತಲ ಸಾಂಸ್ಕೃತಿಕ ಸಮುದಾಯಗಳಲ್ಲಿ ಮಾತನಾಡಿ, ಪುತ್ತೂರು ಸೀಮೆಯ ಆಸುಪಾಸು ಮತ್ತು ಹೆಚ್ಚೂ ಕಮ್ಮಿ ದಕ್ಷಿಣಕನ್ನಡದ ಈಗ ನೆಲೆನಿಂತ ಸಾಹಿತಿ, ಪತ್ರಕರ್ತ, ಚಿತ್ರಕಾರ, ನಾಟಕಕಾರ, ಇತ್ಯಾದಿ ಸಾಂಸ್ಕೃತಿಕವಾಗಿ ನಮ್ಮ ಕನ್ನಡವನ್ನು ಸಮೃದ್ಧಗೊಳಿಸುತ್ತಿರುವ ಯಾರನ್ನೇ ಮಾತನಾಡಿಸಿ ಅವರಿಗೆ ಚೊಕ್ಕಾಡಿಯವರು ಗುರುಗಳಾಗಿರುತ್ತಾರೆ ಇಲ್ಲವೇ ಒಡನಾಡಿ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ. ಅಥವಾ ಅಲ್ಲಿನದೆ ಜನಸಾಮಾನ್ಯರ ಜೊತೆ ಮಾತನಾಡಿ, ಗದ್ದೆ, ತೋಟ, ಕೊಟ್ಟಿಗೆ ಇತ್ಯಾದಿ ಕೃಷಿ ಸಂಬಂಧೀ ವ್ಯವಹಾರಗಳಲ್ಲಿ ಅವರು ಮೇಲ್ಪಂಕ್ತಿ ಹಾಕಿರುವ ಕೃಷಿಕರು. ಅಲ್ಲಿ ಸುತ್ತಮುತ್ತಲಿನ ಯಾವುದೇ ಪರಿಸರ ಆಂದೋಲನಗಳಲ್ಲಿ ಜೊತೆಗೆ ನಿಲ್ಲುವ, ಓಡಾಡುವ ಅತ್ಯಂತ ಚಟುವಟಿಕೆಯ ಜೀವ. ಚಿಕ್ಕಮಕ್ಕಳ ಹತ್ತಿರ ಕೇಳಿನೋಡಿ ನಗುನಗುತ್ತ ಮಾತನಾಡಿಸುವ, ಮಕ್ಕಳ ಕಥೆ ಕೇಳುವ, ಕೇಳಿದ ಮೇಲೆ ಅವರ ಕಾಲದ ಕಥೆ ಹೇಳುವ ಮೇಷ್ಟ್ರಜ್ಜ. ಚೊಕ್ಕಾಡಿಯವರು ಶಾಲೆಗೆ ಅಧ್ಯಾಪನೆಗಾಗಿ ಹೋಗುತ್ತಿದ್ದಾಗ ಓದುತ್ತ ನಡೆಯುವ ಮೇಷ್ಟರು ಎಂತಲೇ ಸುತ್ತ ಮುತ್ತಲೆಲ್ಲ ಖ್ಯಾತಿ. ಅವರ ಓದಿನ ಹಸಿವು ತೀರಿಸಲು ಮೈಮುರಿವ ದೈನಂದಿನ ಮಧ್ಯೆ ಸಮಯ ಹೊಂದಿಸಲು ದಿನಾ ನಡೆದು ಅಭ್ಯಾಸವಿರುವ ಹಾದಿಯಲ್ಲಿ ಪುಸ್ತಕ ಓದುತ್ತ ಶಾಲೆಗೆ ಹೋಗುತ್ತಿದ್ದರಂತೆ.

ಸುಳ್ಯದ ಮಲೆತಪ್ಪಲಲ್ಲಿ ಹಬ್ಬಿರುವ ಒಂದು ಪುಟ್ಟ ಊರು ಚೊಕ್ಕಾಡಿ. ಅಜ್ಜನಗದ್ದೆ ಗಣಪಯ್ಯ ಭಾಗವತರು ಮತ್ತು ಸುಬ್ಬಮ್ಮನವರಿಗೆ 1940 ಜೂನ್ 29ರಂದು ಸುಬ್ರಾಯರ ಜನನ. ಆಗಿನ ಕಾಲದಲ್ಲಿ ಎಲ್ಲರಿಗೂ ಅತ್ಯಂತ ಸಾಮಾನ್ಯವಾಗಿದ್ದ ಬಡತನ, ಋಜುತನ, ಕಷ್ಟಪಟ್ಟು ದುಡಿದುಂಬುವ ತುಂಬು ಕುಟುಂಬದ ಜೀವನದಲ್ಲಿ ಸುಬ್ರಾಯರ ಬಾಲ್ಯ ನಡೆಯಿತು. ಎಂದಿನ ಹಾಗೆ ಉಳ್ಳವರಿಗೆ, ಪ್ರದರ್ಶನಪ್ರಿಯರಿಗೆ ಮಣೆ ಹಾಕುವ ಜಗತ್ತು ಮತ್ತು ಸಮಾಜ ಆ ಬಾಲಕನಿಗೆ ತುಂಬ ಕ್ರೂರವಾಗಿತ್ತು. ಅಲ್ಲದೆ ಸಾಹಿತಿಯು ಸಾಹಿತ್ಯದಿಂದ ದುಡಿದುಂಬುವ ಕಾಲ ಖಂಡಿತ ಆಗಿರಲಿಲ್ಲ. ಆಗಷ್ಟೆ ನಾಡಿಗೆ ದೊರೆತ ಸ್ವಾತಂತ್ರ್ಯ, ಆಗಿನ ಜನಾಡಳಿತ, ರಾಜಕೀಯ, ಮತ್ತು ಆಗಿನ್ನೂ ಚಿಗುರುತ್ತಿದ್ದ ಕನ್ನಡ ನವ್ಯ ಸಾಹಿತ್ಯ ಇವೆಲ್ಲ ಬೆಳೆವ ಕವಿ ಸುಬ್ರಾಯರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು. ಇಲ್ಲಿಯವರೆಗಿನ ಸಾಕಷ್ಟು ಬರಹ ಮತ್ತು ಸಂದರ್ಶನಗಳಲ್ಲಿ ಅವರು ದಾಖಲಿಸಿದ ಹಾಗೆ ಸಾಹಿತ್ಯವೆಂದರೆ ಅವರ ಅದುಮಿಹಿಡಿದಿರುವ ಪ್ರತಿಭೆಗೆ ಮತ್ತು ಜೀವಚೈತನ್ಯಕ್ಕೆ ಅಡಗುದಾಣವಾಗಿತ್ತು. ಆಗ ಹೊಸತನ್ನ ಹುಡುಕಿ ಹುಡುಕಿ ಓದುವ ಆ ಬಾಲಕ ಸುಬ್ರಾಯ ಇವತ್ತಿನ 82 ವರ್ಷದ ಚೊಕ್ಕಾಡಿಯವರಲ್ಲಿಯೂ ಅಷ್ಟೇ ಚಟುವಟಿಕೆಯಿಂದ ಇದ್ದಾನೆ.

ತೀರಾ ಬಡತನದ ನಡುವೆಯೇ ಓದನ್ನು ನೆಚ್ಚಿ, ಅಧ್ಯಾಪಕ ವೃತ್ತಿಯನ್ನು ಕೈಗೊಂಡು, ಇದ್ದಲ್ಲಿಯೇ ತನ್ನ ನೆಲೆಯನ್ನು ರೂಪಿಸಿಕೊಂಡವರು ಸಾಕಷ್ಟು ಜನ ನಮಗೆ ಸಿಗುತ್ತಾರೆ. ಆದರೆ ತನ್ನ ನೆಲೆಯನ್ನು ರೂಪಿಸಿಕೊಳ್ಳುತ್ತಲೇ ಜೀವಕ್ಕೆ ಹತ್ತಿರವಾಗಿದ್ದ ಸಾಹಿತ್ಯವನ್ನು ತನ್ನ ಸುತ್ತಲ ಯುವಸಮುದಾಯದ ಮಡಿಲಿಗೆ ಹಾಕಿ ಎಲ್ಲರ ಓದನ್ನು ವಿಸ್ತರಿಸಿದ ಅಪರೂಪದ ಟೀಚರಲ್ಲದ ಟೀಚರು ಇವರು. ದಿನ ದೂಡುವ ಬಗ್ಗೆ ಯೋಚನೆ ಮಾಡುವ ಕಾಲದಲ್ಲಿ ಯೂರೋಪಿನ ಸಾಹಿತ್ಯಕ ಪತ್ರಿಕೆಗಳನ್ನು ತರಿಸಿ ಓದುವ, ಓದಿಸಿದ ಓದುಗುಂಪನ್ನು ಕಟ್ಟಿ ಪೋಷಿಸಿದ್ದು ಆಗಿನ ಕಾಲಕ್ಕೆ ದೊಡ್ಡ ಸಾಹಸ. ನಗರಕೇಂದ್ರಗಳಿಂದ, ದೂರವಿರುವ ಈ ಪುಟ್ಟ ಹಳ್ಳಿ ಚೊಕ್ಕಾಡಿಯಲ್ಲಿ ಆಗ 60ರ ದಶಕದಲ್ಲಿಯೇ ಪ್ರಪಂಚದೆಲ್ಲೆಡೆಯಲ್ಲಿ ಸಾಹಿತ್ಯಾಸಕ್ತರು ಬಯಸಿ ಓದುತ್ತಿದ್ದ “ಎನ್ ಕೌಂಟರ್” ಎಂಬ ಅಂತರಾಷ್ಟ್ರೀಯ ಸಾಹಿತ್ಯ ಪತ್ರಿಕೆ ಸಿಗುತ್ತಿತ್ತು ಅಂದರೆ ಅದರ ಹಿರಿಮೆ ಚೊಕ್ಕಾಡಿಯವರಿಗೆ ಸಲ್ಲುತ್ತದೆ. ಸಾಹಿತ್ಯಾಸಕ್ತರ ವೇದಿಕೆ ಮಾಡಿ ಅದರ ಮೂಲಕ ಯಾರಿಗೂ ಹೊರೆಯಾಗದಂತೆ ಹಂಚಿಕೊಂಡು ಆಗ ಪ್ರಕಟವಾಗುತ್ತಿದ್ದ ಉತ್ತಮ ಪುಸ್ತಕಗಳು, ಪತ್ರಿಕೆಗಳು, ಪ್ರಪಂಚ ಸಾಹಿತ್ಯದ ಹಲವಾರು ಪುಸ್ತಿಕೆಗಳನ್ನು ತಮ್ಮ ಓದಿಗೆ ಮತ್ತು ತಮ್ಮೂರಿನ ಸುತ್ತಮುತ್ತಲ ಸಾಹಿತ್ಯಾಸಕ್ತರ ಓದಿಗೆ ದಕ್ಕುವ ಹಾಗೆ ಮಾಡಿದ ಹಿರಿಕ್ರೆಡಿಟ್ ಇವರದ್ದು.

ಬರಿದೆ ಕನ್ನಡವಲ್ಲದೆ ತಮಿಳು ಮಲಯಾಳದ ಸಾಹಿತ್ಯಾಸಕ್ತರ ಜೊತೆಗೆ ಸಂವಾದ ಇಟ್ಟುಕೊಂಡಿದ್ದೆ ಇನ್ನೊಂದು ಮಜಲಾದರೆ, ಆಗಿನ್ನೂ ಕುಡಿಯೊಡೆದು ಮಿರುಗುತ್ತಿದ್ದ ನಮ್ಮ ನವ್ಯದ ಅನೇಕ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಪಡಿಸಿದ ಹಿರಿಮೆಯೂ ಇವರದ್ದೆ. ಅಜ್ಜನಗದ್ದೆ ಗಣಪಯ್ಯ ಭಾಗವತರು ಆ ಕಾಲದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತರು. ಅವರ ಮಗನಾಗಿ ಸುಬ್ರಾಯ ಚೊಕ್ಕಾಡಿಯವರಿಗೆ ಯಕ್ಷಗಾನ ಮತ್ತು ಸಂಗೀತಗಳದ್ದು ಹಿರಿಯ ನಂಟು. ಎಲ್ಲ ಪ್ರದೇಶಗಳಿಂದ, ಎಲ್ಲ ಪಂಥಗಳಿಂದಲೂ ಆಗಿನ ಹಿರಿಕಿರಿಯ ಸಾಹಿತಿಗಳನ್ನೂ ಚೊಕ್ಕಾಡಿ ಮತ್ತು ಸುತ್ತಲ ಪರಿಸರಕ್ಕೆ ಕರೆಸಿ ಮಾತನಾಡಿಸಿದ ಗತ್ತು ಇವರದ್ದು. ಚೊಕ್ಕಾಡಿಯವರು ಬರೆದಿರುವ ಒಳ-ಹೊರಗು, ಮತ್ತು ಸಮಾಹಿತ ಪುಸ್ತಕಗಳು ಕನ್ನಡ ಓದನ್ನು, ವಿಮರ್ಶೆಯನ್ನು ಪರಿಗಣಿಸುವ ಎಲ್ಲರೂ ಓದಲೇಬೇಕಾದ ಹೊತ್ತಿಗೆಗಳು. ಸಮಗ್ರ ಕಾವ್ಯದ ಬಗ್ಗೆ, ವಿಮರ್ಶೆಯ ಬಗ್ಗೆ, ಮತ್ತು ವ್ಯಕ್ತಿಚಿತ್ರಗಳಾಗಿ ಚೊಕ್ಕಾಡಿಯವರ ಕುರಿತು ಹಲವು ಪುಸ್ತಕಗಳಿವೆ. 500ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ. ಓದಲು ಸರಳ, ಭಾವಗೀತೆಗಾಗಿ ಸರಳ ಲಯದಲ್ಲಿ ಬರೆದಿರುವ ಪದ್ಯಗಳು ಅಂತ ಮುಟ್ಟಲು ಹೋಗಿ ನೋಡಿ. ಛಂದಸ್ಸಿನ ಬಿಗಿಬಂಧ ಎಲ್ಲಿಯೂ ತಪ್ಪದಿರುವ, ಅವರು ಬರೆಯುತ್ತಿದ್ದ ಕಾಲದಲ್ಲಿ ಅದಾಗಲೆ ಹೆಚ್ಚು ಪರಿಚಿತರಾಗಿದ್ದ ಮತ್ತು ಸ್ಥಾಪಿಸಲ್ಪಟ್ಟಿದ್ದ ಅನೇಕ ಹಿರಿಯ ಕವಿಗಳ ಪ್ರಭಾವಗಳನ್ನು ತಪ್ಪಿಸಿಕೊಳ್ಳುತ್ತ ತನ್ನದೇ ಛಾಪು ಒತ್ತುವ ಕವಿತೆಗಳು ಇವರವು. ಸರಳ ಸಾಲುಗಳ ಅಂತರಾಳದಲ್ಲಿ ಬದುಕಿನ ಹಲಮಗ್ಗುಲುಗಳ ಅನಾವರಣವಿದೆ. ವಿಪುಲ ಓದಿನ ಮಧ್ಯೆ ತನ್ನತನವನ್ನು ಒತ್ತೆಯಿಡದೆ ಸ್ವಾನಂದವಾಗಿ ಬರೆದಿರುವ ಕವಿತೆಗಳು ನಮ್ಮ ಭಾವಕೋಶವನ್ನು ವಿಸ್ತರಿಸುವ ಮೆಟ್ಟಿಲುಗಳಾಗಿ ಮೂಡಿವೆ.

ಇವೆಲ್ಲ ಕೆಲವು ಎಲ್ಲರಿಗೂ ಗೊತ್ತಿರುವ ವಿಷಯಗಳನ್ನೆ ನಾನು ಮತ್ತೊಮ್ಮೆ ನೆನಪಿಸಲು ಹೇಳಿದೆ. ಚೊಕ್ಕಾಡಿಯವರ ಒಂದು ವಿಶೇಷಗುಣ ಎಂದರೆ ಎಲ್ಲರ ಜೊತೆಗೂ ಸಹಜವಾಗಿ ಬೆರೆಯುವುದು, ಕುತೂಹಲ, ಮತ್ತು ಗುಣಗ್ರಾಹಿತ್ವ. ಅವರ ಓರಗೆಯ ಹಿರಿಯ ಲೇಖಕರಿರಲಿ, ಇತ್ತೀಚಿನ ಹೊಸ ಕವಿ ಲೇಖಕರಿರಲಿ ಚೊಕ್ಕಾಡಿಯವರು ಕಾಮನ್ ಫ್ಯಾಕ್ಟರ್ ಹಾಗೆ. ಅವರಿಗೆ ಹಳತು ಹೊನ್ನಿನ ಸಮುದ್ರವೂ ಗೊತ್ತು. ಹೊಸ ಹರಿವಿನ ಹಳ್ಳದೊರತೆಗಳೂ ಗೊತ್ತು. ವಿಮರ್ಶಿಸುವಾಗ ಸ್ಪಷ್ಟ ಮಾತುಗಳನ್ನು ಹೇಳುವ ನೇರವಂತಿಕೆ, ಹಾಗೆಂದು ಬರೆದವರ ಮನಸ್ಸು ಕುಗ್ಗಿಸದ ಹಾಗೆ ಆ ಬರಹದಲ್ಲಿನ ಒಳಿತನ್ನು ಮತ್ತೆ ಹುಡುಕಿ ಹೇಳಿ ಮುಂದಿನ ದಾರಿಗೊಂದು ಬೆಳಕು ಚೆಲ್ಲುವ ಹೃದಯವಂತಿಕೆ ಇವೆರಡೂ ಚೊಕ್ಕಾಡಿಯವರದ್ದು. ಹೊಸ ಬರೆಹಗಾರರು ತಮ್ಮ ಕೃತಿಗಳನ್ನ ಕೊಟ್ಟಾಗ ಓದುವಷ್ಟಕ್ಕೆ ನಿಲ್ಲದೆ, ಬರೆಯುವಾಗ ಕೇಳುವ ಪ್ರಶ್ನೆಗಳಿಗೆ ತಕ್ಕ ಉತ್ತರ, ತಿಳಿಹೇಳುವಿಕೆ ಚೊಕ್ಕಾಡಿಯವರದ್ದು. ನಾನು ಈ ಮುಂಚೆ ಕಾವ್ಯಕೇಳಿ ಮತ್ತು ಕಥೆಕೂಟ ಎಂಬ ಎರಡು ಸಾಹಿತ್ಯಾಸಕ್ತ ವಾಟ್ಸಪ್ ಗುಂಪಿನಲ್ಲಿದ್ದಾಗ ಗಮನಿಸಿದ ಎರಡು ಉದಾಹರಣೆಗಳನ್ನು ಇಲ್ಲಿಡುತ್ತೇನೆ.

ಸಂದರ್ಭ ೧. ಕಾವ್ಯಕೇಳಿಯಲ್ಲಿ ಬೇಂದ್ರೆಯವರ ಜನ್ಮದಿನದ ಕುರಿತಾಗಿ ಸದಸ್ಯರಲ್ಲಿ ಅವರ ಕವಿತೆಗಳ ಕುರಿತು ಮಾತುಕತೆ ನಡೆಯುತ್ತಿದ್ದ ಸಂದರ್ಭ. ಅಂದು ಬೇಂದ್ರೆಯವರ “ಜೋಗಿ” ಪದ್ಯದ ಕುರಿತು ಹೊಸನೋಟಗಳೇನಾದರೂ ಇವೆಯಾ ಎಂದು ನಿರುಕಿಸುವಾಗ… ಚೊಕ್ಕಾಡಿಯವರ ಜೊತೆ ಮಾತುಕತೆ ನಡೆಯಿತು. ಈ ಪದ್ಯಕ್ಕೆ ಎಷ್ಟು ಆಯಾಮಗಳಿವೆ ಎಂದು ಅವರನ್ನು ಕೇಳಿದಾಗ ಅವರು ಈ ಪದ್ಯವನ್ನು ನಮ್ಮ ಜಾನಪದ ಗೀತೆ ಎಲ್ಲೋ ಜೋಗಪ್ಪ ನಿನ್ನರಮನೆ ಪದ್ಯದ ಜೊತೆ ಓದಿಕೊಳ್ಳಿ.. ಬೇರೆಯದೇ ಇನ್ನೊಂದು ಆಯಾಮ ಸಿಕ್ಕಬಹುದು ಎಂದರು.. “ಜೋಗಿ ಕವಿತೆಯ ನಾಯಕಿ ಹೆಣ್ಣು.. ಅಲ್ಲಿರುವುದು ಗಂಡಲ್ಲ ಎಂಬುದು ನನ್ನ ಭಾವನೆ.. ಯೋಚಿಸಿ ನೋಡಿ” ಎಂದು ಒಂದಿಷ್ಟು ಹೇಳಿದರು.

ಚೊಕ್ಕಾಡಿಯವರು ಹೇಳಿದಂತೆ ಬೇಂದ್ರೆಯವರು ಜಾನಪದದ ದೊಡ್ಡ ಭಕ್ತರು. ಅವರ ಭಾಷೆ, ಮನಸ್ಸು, ಎಲ್ಲವೂ ಜಾನಪದವೇ. ಆ ಪದ್ಯದ ಪ್ರಭಾವ ಜೋಗಿ ಪದ್ಯದ ಮೇಲಿದೆ ಎಂಬ ಮಾತು ಆ ಎರಡೂ ಕವಿತೆಗಳನ್ನೂ ಓದುವಾಗ ಹೌದೆನಿಸುತ್ತದೆ. ಚೊಕ್ಕಾಡಿಯವರ ಮಾತನ್ನು ಖ್ಯಾತ ಲೇಖಕಿ, ವಿಮರ್ಶಕಿ ಮಾಲಿನಿ ಗುರುಪ್ರಸನ್ನ ಒರೆಗಿಟ್ಟ ಬಗೆ ಇಲ್ಲಿ ನಿಮ್ಮ ಮುಂದಿದೆ.

ಆ ಕವಿತೆಯ ಆರಂಭ “ಊರ ತುದಿಯ ಆ ಮೂರ ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ…. ದಿಕ್ಕೂ ತಪ್ಪತಾರ ತಪ್ಪಿ ಹೊಕ್ಕಾರಾ ಕಕ್ಕಾವಿಕ್ಕಿಯಾಗಿ..” ಇದು “ಎಲ್ಲೋ ಜೋಗಪ್ಪ ನಿನ್ನರಮನೆ..” ಎಂದು ಆಕೆ ಕೇಳುವುದಕ್ಕೆ ಹೋಲುತ್ತದೆ. ಅಲ್ಲಿಯ ಕಿನ್ನರಿ ಇಲ್ಲಿಯ ಕೊಳಲು.. ಇಲ್ಲಿ ಬೇರೆ ಕೆಲಸದಾಗೆ ಮನಸ್ಸು ತೊಡಗದ ಹೆಣ್ಣು.. ಅಲ್ಲಿಯೂ ಎಲ್ಲವನ್ನೂ ಬಿಟ್ಟು ನಡೆದವಳು.. ಎಳ್ಳಿನ ಹೊಲವನ್ನು ಒಳ್ಳೆಯ ಗಂಡನನ್ನು ಬಿಟ್ಟು ಹೊರಟವಳು.. ಬಂದೆ ಜೋಗಿ ಬಾ, ಬಾರೋ ಜೋಗಿ ಬಾ, ಏನು ಹೊತ್ತು ಬಂಡಿ ನೀನೆ ಹೇಳಿದಾ ನಾಮ ಜಪಿಸುವಾಗ ಬಂತೋ ಸುಗ್ಗಿಸಂಧಿ… ಸಾಮಾನ್ಯವಾಗಿ ಜೋಗಪ್ಪಗಳು ಬರುವಾಗ ತಮ್ಮೊಡನೆ ಜೋಳಿಗೆಯನ್ನು ಹೊತ್ತು ತಂದಿರುತ್ತಾರೆ. ಎಲ್ಲೋ ಜೋಗಪ್ಪದ ಜೋಗಪ್ಪ ಕೂಡ ಅಂತಹವರಲ್ಲಿ ಒಬ್ಬ. ಜೋಗಿ ಪದ್ಯದ ಪಯಣಕ್ಕೂ.. ಜೋಗಪ್ಪನ ಅರಮನೆಯತ್ತ ನಡೆಯುವ ಪಯಣಕ್ಕೂ ಸಾಕಷ್ಟು ಸಾಮ್ಯತೆಗಳಿವೆ. ಕೋಗಿಲೆ ಉಲಿಯುವಂತೆ… ಅಲ್ಲಿ ಕಿನ್ನರಿ ನುಡಿಸುತ್ತಾನೆ.. ಗುಡಿಗೆ ಹೋಗುವಾಗ ಕುಹೂ ಕುಹೂ ಎಂದು ಕರೆಯುವ ಕೋಗಿಲೆ.. ಮನದ ಜಪದ ನಡುನಡುವೆ ಮತ್ತೆ ಕುಹೂ ಎಂಬ ಸ್ವರ ಕೇಳಿ ಕನಸಿನಾಗ ಮಾಮರ ಆಗಿದ್ದೇನೆಂದು ಭ್ರಮಿಸಬಲ್ಲಷ್ಟು ಕಾತರ.. ಎಲ್ಲೋ ಜೋಗಪ್ಪದ ಹೆಣ್ಣಿನ ಕಿನ್ನರಿಯ ದನಿ ಕೇಳಿ ಹೂವಾಗಿ ಬಾರೋ ನನ್ನ ತುರುಬಿಗೆ ಎಂಬ ಹಂಬಲದ ಮುಂದುವರಿದ ಭಾಗವಾಗಿ ಕಾಣುತ್ತದೆ..

ಬೆಟ್ಟ ಹತ್ತೋಗಬೇಕು.. ಬೆಟ್ಟ ಇಳಿದೋಗಬೇಕು.. ಅವನ ಅರಮನೆಗೆ. ಅವಳಿಗೆ ಅದು ಸಮಸ್ಯೆಯೇ ಅಲ್ಲ.. ಆ ದೂರ ಲೆಕ್ಕವೇ ಅಲ್ಲ.. ಇಲ್ಲಿ ನಡೆಯುತ್ತಿದ್ದಾಳೆ.. ಬೆಟ್ಟ ಹತ್ತಿ ಬೆಟ್ಟ ಇಳಿದು.. ಸುತ್ತುಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕ ಎಂಬಷ್ಟು ತೀವ್ರತೆ.. ಕಟ್ಟಕಡೆಗೆ “ನನ್ನಾ ತೋಳಲ್ಲಿ ನಿನ್ನ ಕಿನ್ನೂರಿ ಮಾಡಿಕೊಂಡು ಚಂದದ ಪದವ ನುಡಿಸೇನು ನಾರಿ ಚಂದದ ಪದವ ನುಡಿಸೇನು” ಎಂಬ ಸಾಲಿನಲ್ಲಿರುವ ಭಾವ “ಬಿಸಿಲು ಕುಣಿದು ಬೆವತದ ಈಗ ಬಂದದ ಮಳಿಯ ಹದಕ” ಎಂಬ ಜೋಗಿಯ ಕಡೆಯ ಸಾಲಿನ ಭಾವವಾಗಿ ಹೊಮ್ಮುತ್ತದೆ.

ತನ್ನ ನೆಲೆಯನ್ನು ರೂಪಿಸಿಕೊಳ್ಳುತ್ತಲೇ ಜೀವಕ್ಕೆ ಹತ್ತಿರವಾಗಿದ್ದ ಸಾಹಿತ್ಯವನ್ನು ತನ್ನ ಸುತ್ತಲ ಯುವಸಮುದಾಯದ ಮಡಿಲಿಗೆ ಹಾಕಿ ಎಲ್ಲರ ಓದನ್ನು ವಿಸ್ತರಿಸಿದ ಅಪರೂಪದ ಟೀಚರಲ್ಲದ ಟೀಚರು ಇವರು. ದಿನ ದೂಡುವ ಬಗ್ಗೆ ಯೋಚನೆ ಮಾಡುವ ಕಾಲದಲ್ಲಿ ಯೂರೋಪಿನ ಸಾಹಿತ್ಯಕ ಪತ್ರಿಕೆಗಳನ್ನು ತರಿಸಿ ಓದುವ, ಓದಿಸಿದ ಓದುಗುಂಪನ್ನು ಕಟ್ಟಿ ಪೋಷಿಸಿದ್ದು ಆಗಿನ ಕಾಲಕ್ಕೆ ದೊಡ್ಡ ಸಾಹಸ.

ಈ ಪುಟ್ಟ ಸಂವಾದ ನಮಗೆ ಏನನ್ನು ತೋರಿಸುತ್ತದೆಯೆಂದರೆ- ಹಳತನ್ನು ನಮ್ಮ ಇಂದಿನ ಓದಿಗೆ, ಬರವಣಿಗೆಗೆ, ತಿಳುವಳಿಕೆಗೆ, ಮತ್ತು ಮುದಕ್ಕೆ ಒಗ್ಗಿಸುವ ರೀತಿ ಗೊತ್ತಿಲ್ಲದೆ ಹೋದರೆ ನಾವು ಹಳತ್ಯಾಕೆ ನಮಗೆ, ಹೊಸತ್ಯಾಕೆ ನಿಮಗೆ.. ಎಂದುಕೊಂಡು ನಮ್ ನಮ್ಮ ದ್ವೀಪಗಳಲ್ಲಿ ಮುಳುಗಿರುತ್ತೀವಿ. ಮೇಲಿನ ಸಂವಾದದಲ್ಲಿ ಚೊಕ್ಕಾಡಿಯವರು ಅನೂಚಾನವಾಗಿ ಬಂದಿರುವ ಒಂದು ಕವಿತೆಯ ಓದನ್ನು ಹೊಸ ದಿಕ್ಕಿಗೆ, ಹಳತೊಂದು ಜಾನಪದದ ಗೀತೆಯನ್ನೆ ಉಪಯೋಗಿಸಿ ತೆರೆದಿಟ್ಟಿದ್ದಾರೆ.. ಇದು ಓದಿನ, ಬರಹದ, ರಸಜ್ಞತೆಯ ಅತ್ಯುತ್ಕೃಷ್ಟ ಮಾದರಿ ಎಂದು ನನ್ನ ಅಭಿಪ್ರಾಯ.

ಸಂದರ್ಭ ೨: ಒಂದು ಕಥೆ ಬರೆದವರ ಉದ್ದಿಶ್ಯ ಏನು ಎಂಬುದನ್ನು ಓದಿನಲ್ಲಿ ಗ್ರಹಿಸದೇ ಹೋದಾಗ ಅದು ಕಥೆಗಾರನ ನ್ಯೂನತೆಯೋ, ಕಥನದ ಊನವೋ, ಅಥವಾ ಓದುಗನ ಅರ್ಥೈಸುವಿಕೆಯ ಕೊರತೆಯೋ ಎಂಬ ಮಾತುಕತೆ ಆಯಿತು. ಆಗ ಚೊಕ್ಕಾಡಿಯವರು ಒಂದು ಸೊಗಸಾದ ನಿದರ್ಶನ ಕೊಟ್ಟು ಮುಂದಿನ ದಾರಿ ತೋರಿದರು.

ಕವಿ (ಬೇಂದ್ರೆ) ಬರೆಯುತ್ತಾರೆ. “ಬಂತಿದೋ ಶೃಂಗಾರ ಮಾಸ, ಕಂತು ನಕ್ಕ ಚಂದ್ರಹಾಸ, ಇಂತು ತುಂಬಿತಾಕಾಶ “. ಯಾರನ್ನಾ ಅದು (ಶೃಂಗಾರ ಮಾಸ) ಅರಸುತ್ತದೆ? ಕಂಡವರನ್ನು ಅರಸುತ್ತದೆ. ನೋಡಿದವರು ಅರಸೋದಿಲ್ಲ. ಆ ಸೌಂದರ್ಯದ ಕಣ್ಣು ಇದೆಯಲ್ಲ ಅದು ಬೇಕು ಒಬ್ಬ ಕವಿಗೆ. ಅಷ್ಟು ಮಾತ್ರ ಸಾಕೇ? ನೋಡೋದು ಸರಿ, ಕಂಡಿದ್ದು ಸರಿ. ಕಾಣದ್ದನ್ನು ಹುಡುಕುವ ಪ್ರಯತ್ನ ಮಾಡಬೇಕು. ಕಾಣುವುದರ ಮೂಲಕ ಕಾಣದ್ದನ್ನು ಹಿಡಿಯುವ ಪ್ರಯತ್ನ ವನ್ನು ಯಾವ ಕವಿಯು ಮಾಡುತ್ತಾನೋ ಅವನು ಕವಿ. ನನ್ನದೇ ಒಂದು ಉದಾಹರಣೆ ಕೊಡುತ್ತೇನೆ. ಅದು ಒಳ್ಳೆಯ ಪದ್ಯವೋ, ಕೆಟ್ಟ ಪದ್ಯವೋ ಅಂತಲ್ಲ. ಒಂದು ಉದಾಹರಣೆ. ನಾನು ಒಂದು ಮರ ನೋಡುತ್ತೇನೆ, ಅದು ಪಾರಿಜಾತದ ಮರ. ನೀವು ಹೋಗಿ ನೋಡಿ ಅಂತ ಹೇಳುತ್ತೇನೆ. ನಿಮಗೆ ಅದು ಚಂದ ಹೂವಿರುವ ಪಾರಿಜಾತದ ಮರ ಅಷ್ಟೇ. ನಾನು ಅದನ್ನು ನೋಡುವುದಷ್ಟೇ ಅಲ್ಲ, ಅದರಲ್ಲಿ ಕಾಣುತ್ತೇನೆ, ಏನನ್ನು ಕಾಣುತ್ತೇನೆ,” ಅದೊಂದು ತ್ರಿಭಂಗಿ ನಿಲುವಲ್ಲಿ ನಿಂತ ಒಂದು ತಪಸ್ವಿ.” ಆ ಥರಾ ಕಂಡರೆ ಸಾಕಾ? ಅಷ್ಟೇ ಆದರೆ ಮುಗಿತು. ತ್ರಿಭಂಗಿ ನಿಲುವಲ್ಲಿ ಕಂಡಿತು ಅಂತ ಸಣ್ಣ ಕವಿತೆ ಬರೆದು ಮುಗಿಸುತ್ತೇನೆ. ಅದರ ಮೂಲಕ ನಾನು ಕಾಣದ್ದು ಏನು, ಅದರ ಮೂಲಕ ನಾನು ಕಾಣದ್ದನ್ನು ಹಿಡಿಯುವ ಪ್ರಯತ್ನ ಮಾಡುತ್ತೇನೆ. ಅದರ ಮೂಲಕ ಮನುಷ್ಯನ ಶಕ್ತಿಯ ಮಿತಿಯನ್ನು ಕಾಣುವ ಪ್ರಯತ್ನ ಮಾಡುತ್ತೇನೆ. ಈ ಕಾಣುವ ಪ್ರಯತ್ನ ಇದೆಯಲ್ಲ, ಇದು ಕಾಣ್ಕೆಯೂ ಆಗಿರಬಹುದು, ಕಣ್ ಕಟ್ಟೂ ಆಗಿರಬಹುದು. ಯಾವುದು ಕಣ್ ಕಟ್ಟೂ, ಯಾವುದು ಕಾಣ್ಕೆ ಅಂತ್ಹೇಳಿ ಹುಡುಕುವುದು ಬಹಳ ಕಷ್ಟ. ನೋಡೋದು ಮುಖ್ಯ ಅಲ್ಲವೇ ಅಲ್ಲ, ಯಾರೂ ನೋಡುತ್ತಾರೆ, ಎಲ್ಲರೂ ನೋಡುತ್ತಾರೆ. ನೀವೆಲ್ಲ ಮರ ವಸ್ತು ಎಲ್ಲ ನೋಡುತ್ತೀರಿ. ಆದರೆ ಬರೀ ನೋಡುತ್ತೀರಿ. ತ್ರಿವೇಣಿ ಅವರ ಕಾದಂಬರಿಯಲ್ಲಿ ಬರುತ್ತದೆ, ಬೆಕ್ಕಿನ ಕಣ್ಣು. ಅಲ್ಲಿ ಮಗು ಚಿತ್ರ ಬಿಡಿಸುತ್ತದೆ, ಆ ಚಿತ್ರಕ್ಕೆ ಬಣ್ಣ ಕೊಡುವಾಗ ಎಲೆಗೆ ಹಸಿರು ಬಣ್ಣ ಕೊಡಬೇಕಲ್ಲವಾ? ಅವಳು ನೇರಳೆ ಬಣ್ಣ ಕೊಡುತ್ತಾಳೆ. ಯಾಕೆ ಹೀಗೆ? ಅವಳು ಆ ಚಿತ್ರದ ಮೂಲಕ ಇನ್ಯಾವುದನ್ನೋ ನೋಡುತ್ತಿರುತ್ತಾಳೆ. ಅವಳ ಬದುಕಿನ ಯಾವುದೋ ಒಂದು ಅಂಶಕ್ಕೆ ಅವಳು ಅದನ್ನು connect ಮಾಡಿಕೊಳ್ಳುತ್ತಾಳೆ. ಇಷ್ಟವಿಲ್ಲದ ಅಂಶದಿಂದ ಅವಳ ಇಷ್ಟವಾದ ಇನ್ನೊಂದು ಅಂಶಕ್ಕೆ connect ಆಗುತ್ತಾಳೆ. ಅದು ಕಾಣ್ಕೆ. ವೈಯಕ್ತಿಕ ದೃಷ್ಟಿಯಿಂದ ಈ ಇನ್ನೊಂದನ್ನು ಕಾಣುವ ಶಕ್ತಿ ಉಂಟಲ್ಲ ಅದು ಕಾಣ್ಕೆ ಅಂತ್ಹೇಳಿ ನಾನು ಹೇಳುವುದು. ಹಾಗಾಗಿ ಅದು ಬಹಳ ಮುಖ್ಯವಾದದ್ದು. ಈ ರೀತಿಯಲ್ಲಿ ಒಂದು ಕಥೆ, ಕವಿತೆ, ಅಥವ ಒಂದು ಕೃತಿಯಲ್ಲಿ ಆ ಕಂಡಿದ್ದನ್ನು ಸರಿಯಾಗಿ ಓದಿಗೆ ದಾಟಿಸುವ ಹದ ಲೇಖಕರಿಗೆ ಇರಬೇಕು. ಆ ಹದ ಎಲ್ಲವನ್ನೂ ನಿರ್ದೇಶಿಸುತ್ತದೆ.

ಈ ಸಂವಾದದಲ್ಲಿ ಒಂದು ಓದನ್ನು ಹೇಗೆ ಗ್ರಹಿಸಬೇಕು ಎಂದು ಹೇಳುವ ಹೊತ್ತಿಗೇ, ಆ ಓದಿಗೆ ಒದಗಿಸುವ ಕೃತಿಯಲ್ಲಿ ಏನನ್ನು ಹೇಗೆ ತುಂಬಿರಬೇಕು ಎಂಬ ಕೃತಿಕಾರರ ಜವಾಬುದಾರಿಯನ್ನೂ ತಿಳಿಸಿಕೊಡುತ್ತಾರೆ. ಈ ರೀತಿಯ ಪಾಠ ಹೇಳುವ ಹಿರಿಯಗೆಳೆಯನಂತಹ ಸ್ನೇಹವು ನಮಗೆ ಚೊಕ್ಕಾಡಿಯವರಂತ ಧೀಮಂತ ಹಿರಿಯರ ಜೊತೆ ಸಾಧ್ಯ ಎನ್ನುವುದೇ ಈ ಕಾಲದ ಒಂದು ಸೊಬಗು. ಹೇಳಿಕೊಡುವಲ್ಲಿ, ತನಗೆ ಗೊತ್ತಿದ್ದನ್ನ ತಿಳಿಸಿಕೊಡುವಲ್ಲಿ, ಗೊತ್ತಿಲ್ಲದೆ ಇಲ್ಲದ್ದನ್ನು ತಿಳಿದುಕೊಳ್ಳುವ ಉತ್ಸಾಹದಲ್ಲಿ ಚೊಕ್ಕಾಡಿಯವರಿಗೆ ಯಾವುದೇ ಇಸಮುಗಳಿಲ್ಲ. ಹಮ್ಮುಬಿಮ್ಮಿಲ್ಲ. ಆ ನಿಟ್ಟಿನಲ್ಲಿಯೂ ಅವರು ಸಾಹಿತ್ಯಾಸಕ್ತರಿಗೆ ಮಾದರಿಯೇ.

ಇತ್ತೀಚಿನ ದಿನಗಳಲ್ಲಿ ನಾವು ಒಂದು ಸಿದ್ಧಾಂತವನ್ನು ನಂಬಿದ್ದರೆ ಅದರ ವಿರುದ್ಧ ಅಥವಾ ಅದಕ್ಕೆ ಭಿನ್ನವಾದ ಸಿದ್ಧಾಂತವನ್ನು ಹೊಂದಿರುವವರ ಜೊತೆಗೆ ಕಾಣಿಸಿಕೊಳ್ಳುವ ಹಾಗಿಲ್ಲ, ಬೆರೆಯಬಾರದು ಎಂದೆಲ್ಲ ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ, ರಾಜಕೀಯಾತ್ಮಕ ಫತ್ವಾಗಳು ಸಾಮಾಜಿಕ ತಾಣಗಳಲ್ಲಿ ಗಟ್ಟಿಯಾಗಿ ಮೊಳಗಲಾರಂಭಿಸಿರುವ ದಿನಗಳಲ್ಲಿ ನಾನು ನಂಬಿದ ತತ್ವ ನನ್ನದು. ನನ್ನ ಭಿನ್ನ ಅಭಿಪ್ರಾಯಕ್ಕೆ ದನಿಗೆ ಮನ್ನಣೆ ಇದ್ದರೆ ನಾನು ಎಲ್ಲಿಯೂ ಯಾರ ಜೊತೆಯೂ ಇರಬಲ್ಲೆ ಎಂಬ ನಿಲುವಿನ ಚೊಕ್ಕಾಡಿಯವರು ನಮ್ಮ ಮುಂದಿನ ದಿನಮಾನಗಳ ದಿಕ್ಸೂಚಿಯಾಗಿಯೂ ಕಾಣಿಸುತ್ತಾರೆ.

ಹಳ್ಳಿಯಲ್ಲಿ ನೆಲೆಸಿ, ಕೃಷಿಯನ್ನು ಅವಲಂಬಿಸಿ, ಮತ್ತು ಜೀವನಾದಾಯಕ್ಕಾಗಿ ಚಿಕ್ಕ ಸಂಬಳದ ಸರ್ಕಾರಿ ಅಧ್ಯಾಪಕನ ವೃತ್ತಿಯನ್ನು ನಡೆಸಿ, ದೊಡ್ಡ ಕುಟುಂಬವನ್ನು ಸಲಹುವ ಜವಾಬುದಾರಿ ಇದ್ದ ಚೊಕ್ಕಾಡಿಯವರಿಗೆ ಬಹುಶಃ ತನ್ನ ನಿಷ್ಠುರ ನಿಲುವನ್ನು ಸಿದ್ಧಾಂತವನ್ನು ಡಂಗುರ ಸಾರಿಸಿ ಮೆರವಣಿಗೆ ಮಾಡುವ ಜರೂರತ್ತು ಆಗ ಇರಲಿಲ್ಲ. ಅದು ಅವರನ್ನು ಎಲ್ಲರನ್ನೂ ಒಳಗೊಳ್ಳುವ ಅನಿವಾರ್ಯದಿಂದ ಎಲ್ಲರನ್ನೂ ಒಳಗೊಳ್ಳುವುದೇ ಬದುಕು ಎಂಬ ಅನನ್ಯತೆಯ ಕಡೆಗೆ ನಡೆಸಿತು ಎಂಬುದು ನನ್ನ ಅಂದಾಜು. ಹಾಗಂತ ಅವರ ಭಿನ್ನ ದನಿಯನ್ನು, ನಿಲುವನ್ನು ಹೇಳುವಲ್ಲಿ ಅವರಿಗೆ ಸಂಕೋಚವಿಲ್ಲ. ತನ್ನ ಮನಸ್ಸಾಕ್ಷಿಗೆ ಸರಿಕಂಡದ್ದನ್ನು ಮಾಡಿದ್ದಾರೆ ಮಾಡುತ್ತಾರೆ ಕೂಡ. ಅವರ ಆತ್ಮಚರಿತ್ರೆಯಾದ ಕಾಲದೊಂದೊಂದೆ ಹನಿ ಓದಿದವರಿಗೆ ಇದು ಮನವರಿಕೆಯಾಗುತ್ತದೆ. ಓದಿರದೆ ಇದ್ದರೆ ಅದನ್ನು ಓದಿ ಎನ್ನುವುದು ನನ್ನ ಸಲಹೆ. ನಾವೀಗ ಇರುವುದಕ್ಕಿಂತ ಬಹಳ ಭಿನ್ನವಾದ ದೇಶ, ಕಾಲ, ಮತ್ತು ಪ್ರವಾಹಗಳಲ್ಲಿ ಈಜಿದ ಹಿರಿಯ ಮೀನೊಂದು ನಮ್ಮ ಈಗಿನ ದೇಶ ಕಾಲದ ಪ್ರವಾಹದಲ್ಲಿ ಜೊತೆಗೇ ಈಜುತ್ತಿರುವುದರ ಒಂದು ಅಚ್ಚರಿಭರಿತ ಅಂದಾಜು ಸಿಗುತ್ತದೆ ನಿಮಗೆ.

ಈಗ ಚೊಕ್ಕಾಡಿಯವರ ಸಮಗ್ರ ಬರಹ ಸಂಪುಟಗಳು ಮೈಸೂರಿನ ರೂಪ ಪ್ರಕಾಶನದಿಂದ ಈ ತಿಂಗಳ ಎಂಟರಂದು ಬಿಡುಗಡೆಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಈ ಹಿರಿಯ ಕವಿ, ಕಥೆಗಾರ, ವಿಮರ್ಶಕ ಮತ್ತು ಟೀಚರಜ್ಜನನ್ನು ಕೆಂಡಸಂಪಿಗೆಯ ಓದುಗರಿಗೆ ಅವರ ಒಂದ್ನಾಲ್ಕು ಕವಿತೆಗಳ ಮೂಲಕ ಭೇಟಿ ಮಾಡಿಸುತ್ತಿದ್ದೇವೆ.

ಚಕ್ರಚಲನೆ

ದೇಶಪ್ರೇಮಿಗಳಿಗೂ ದೇಶದ್ರೋಹಿಗಳಿಗೂ
ಬಹಳ ವ್ಯತ್ಯಾಸವೇನೂ ಇಲ್ಲ
ನಮ್ಮ ದೇಶದಲ್ಲಿ!
ಒಂದೇ ನಾಣ್ಯದ ಎರಡು ಮುಖಗಳಂತೆ ಅವರು!

ಹೀಗೆಂದರೆ ನಾನು
ಯಾರೂ ಕೋಪಿಸಬೇಕಾಗಿಲ್ಲ,
ಗಮನಿಸಿ ನೋಡಿ:

ಸರಕಾರ ಬದಲಾದಾಗ ಆಗುತ್ತಾರೆ
ದೇಶಪ್ರೇಮಿಗಳು ದೇಶದ್ರೋಹಿಗಳು
ಹಾಗೂ
ದೇಶದ್ರೋಹಿಗಳೂ ದೇಶಪ್ರೇಮಿಗಳು
ಅದೆ ಅದೆ ಬದಲಾದ
ಸರಕಾರದ ದೃಷ್ಟಿಯಲ್ಲಿ.

ಇತಿಹಾಸದ ಚಲನೆ
ಇರುವುದೇ ಹೀಗೆ
ಚಕ್ರ ಚಲನೆಯ ಹಾಗೆ.

ಬಿಂಬ ಪ್ರತಿಬಿಂಬ

ಆಕಾಶಕ್ಕೆ ತಿಳಿನೀರ ಕೊಳದ ಬಯಕೆ
ಚಂದ್ರ ತಾರೆಗಳಿಗೆ
ಕೊಳದಲೀಜುವ ಬಯಕೆ

ಕೊಳಕ್ಕೆ
ಚಂದ್ರ ತಾರೆಯರ ಆಕಾಶದ ಬಯಕೆ

ತುಂಬಿಕೊಳ್ಳುತ್ತವೆ, ಆಕಾಶ
ಚಂದ್ರ, ತಾರೆಯರು ತಮ್ಮ
ಕನಸು, ಆಕಾಂಕ್ಷೆಗಳ
ತಿಳಿನೀರ ಕೊಳದ ಪ್ರತಿಬಿಂಬದಲ್ಲಿ
ಕೊಳವೋ
ವಿಸ್ತಾರ ಗಗನದ ಕನ್ನಡಿಯಲ್ಲಿ

ಮನುಷ್ಯನೂ ಹಾಗೆಯೇ
ತುಂಬಿಕೊಳ್ಳುತ್ತಾನೆ ವಿಶ್ವದ ಕನಸ
ತನ್ನ ಕಣ್ಣುಗಳಲ್ಲಿ.

ಸ್ಪರ್ಧೆ

ತಯಾರಾಗಿದ್ದರು ಎಲ್ಲ ಸ್ಪರ್ಧೆಗೆ;
ಎಸೆಯಲು
ದೂರ. ಕಲ್ಲನ್ನೆತ್ತಿ
ಎಸೆದರು ಸ್ಪರ್ಧಾಳುಗಳು ಒಬ್ಬರ ನಂತರ
ಒಬ್ಬರಂತೆ
ದೂರ; ಇನ್ನೂ ದೂರ
ತುದಿಗಾಲ ದಿಗಿಲ ಕೇಕೆ, ಹರ್ಷೋದ್ಗಾರ
ಛೇ, ಅಹಹಾ!…
ಸೋಲು ಗೆಲುವುಗಳ
ಆತಂಕದ ಕ್ಷಣಗಳ ನಡುವೆ –

ಕೊನೆಯಲ್ಲಿದ್ದವನು ನಿಧಾನಕ್ಕೆ
ಮುಂದೆ ಬಂದು
ಸಣ್ಣಗೆ ನಗುತ್ತ ಕಿಸೆಯಿಂದ ಕೈ ತೆಗೆದು
ಎಸೆದೇ ಬಿಟ್ಟ ದೂರ
ದಿಗಂತದತ್ತ ಗುರಿಯಿಟ್ಟು ಹೊಡೆ

ರಭಸದಿಂದ ದಿಗಂತವನ್ನೇ
ಸೀಳಿ ಮುನ್ನಡೆವಂತೆ
ನುಗ್ಗಿದ್ದು
ನೀಲಿ ಆಕಾಶದಲ್ಲಿ
ಕಲ್ಲೇ?
ಹಕ್ಕಿಯೇ?
ಅಥವಾ
ಕವಿತೆಯೇ?

ಬೀದಿಯಲ್ಲೊಂದು ಹೂವು

ಬೀದಿಯಲ್ಲೊಂದು ಹೂವು ಬಿದ್ದುಕೊಂಡಿದೆ
ಈಗ ತಾನೇ ಗಿಡದಿಂದ ಬಿಡಿಸಿ ತಂದಂತಿದೆ
ಮನುಷ್ಯ ಸ್ಪರ್ಶದ ಬಿಸಿ ಇನ್ನೂ ಉಳಿದಂತಿದೆ
ಹೂ ಬೆರಳುಗಳ ಗುರುತುಗಳನ್ನಪ್ಪಿಕೊಂಡಿದೆ
ಡಾಮರಿನ ಕಪ್ಪು ಹಿನ್ನಲೆಯಲ್ಲಿ ಹೊಳೆಯುತ್ತಿದೆ.

ಯಾವ ಸುಂದರಿಯ ಅಂದವನು ಇದು ತಗ್ಗಿಸಿರಬಹುದು?
ಯಾವ ಕೇಶದ ಚೆಲುವ ಕೊಂಚವೇ ಕುಂದಿಸಿರಬಹುದು?
ಯಾರ ಪ್ರೀತಿಯ ಕುರುಹು ಅರಿಯದೇ ಉದುರಿರಬಹುದು?
ಹೂವಿಗಂಟಿದ ಕೂದಲ ನೆನಪ ಮೇನೆಯಲಿ
ಯಾರು ಸವಾರಿ ಹೋಗಿರಬಹುದು?

ಈ ಹೂವ ವಿಶಾಲ ಕಣ್ಣುಗಳಲ್ಲಿ ಕನಸುಗಳಿವೆ
ಕಳೆದುಕೊಂಡದ್ದರ ವಿಷಾದದ ಗೆರೆಗಳಿವೆ
ಅನಾಥವಾದದ್ದರ ಕುರಿತು ಅಸಹನೆಯ ಎಳೆಗಳಿವೆ
ಆಗೀಗ ಹೊಳೆವ ಕಿರು ಆಸೆಯ ಸೆಲೆಗಳೂ ಇವೆ.

ಕಣ್ಣುಗಳನ್ನರಳಿಸಿ ಹೂವು ಕಾತರದಲ್ಲಿ
ಸುತ್ತ ನೋಡುತ್ತಿದೆ.
ತಾಯ ಬರವನ್ನು ಕಾಯುವ ಪುಟ್ಟ ಮಗುವಿನ ಹಾಗೆ
ವಾರೀಸುದಾರರನು ಹುಡುಕುತ್ತಿದೆ.

ಸುಮ್ಮನೆ ಎತ್ತಿಕೊಳ್ಳುತ್ತೇನೆ ಹಗುರಾಗಿ
ಸವರುತ್ತೇನೆ ಮೃದುವಾಗಿ-ರೋಮಾಂಚದಲಿ
ಮೆಲ್ಲಗೆ ಹಿಡಿದು ಮುಡಿಸುತ್ತೇನೆ- ಪಕ್ಕದ ಗಿಡಕ್ಕೆ
ಮುಂದೆ ಅಡಿಯಿಟ್ಟು, ಹಿಂತಿರುಗಿ ಒಮ್ಮೆ ನೋಡಿ
ವಿದಾಯ ಹೇಳುತ್ತೇನೆ- ನನ್ನನ್ನು
ತನ್ನ ಕಣ್ಣುಗಳಲ್ಲಿ ತುಂಬಿ ಕೊಳ್ಳುತ್ತಿರುವ ಹಾಗೆ ಹೂವು.
ಹಾ, ಅದೋ – ಬೀದಿಯಲಿ
ಮತ್ತೊಂದು..
ಮತ್ತೊಂದು..

ಬೀದಿಯಲ್ಲಿ ಬಿದ್ದ ಹೂವಿನ ವಿಶಾಲ ಕಣ್ಣುಗಳ ಒಳಗೆ ಇಣುಕುವವ ಮಾತ್ರ ಕವಿಯಾಗಲಾರ. ಆ ಕಣ್ಣೊಳಗಿನ ಕನಸು, ವಿಷಾದ, ಅಸಹನೆ, ಆಸೆಯ ಸೆಲೆಗಳ ಗುರುತಿಸಿ ಅದನ್ನು ನಮ್ಮ ಓದಿಗೆ ಸುರಳೀತವಾಗಿ ದಾಟಿಸುವುದು ಕವಿಯ ಕೆಲಸ. ಓದುತ್ತ ಓದುತ್ತ ಆ ಹೂವಿನೊಳಗಿನ ವಿದಾಯ ನಿಮ್ಮ ಮನವನ್ನೂ ತಟ್ಟಿತೋ ಅದು ಕವಿತೆಯ ಸಾರ್ಥಕ್ಯ. ಹೀಗೆ ನಮ್ಮ ಸುತ್ತಲ ಪರಿಸರದಿಂದಲೇ ನಮ್ಮ ಬದುಕಿನ ಹಲ ಬಣ್ಣಗಳ ಶೇಡನ್ನು ನಮ್ಮ ಅರ್ಥಕ್ಕೆ ನಿಲುಕುವಂತೆ, ನಮ್ಮ ಭಾವ ಉದ್ದೀಪಿಸುವಂತೆ ಬರೆದ ಸಾರ್ಥಕ ಕವಿ ಸುಬ್ರಾಯ ಚೊಕ್ಕಾಡಿಯವರು. ಅವರ ಕವಿತೆಯೊಂದರಲ್ಲಿ ಬಂದ ಹಾಗೆ ಇದರಲ್ಲಿ ಅದು, ಅದರಲ್ಲಿ ಇದು ಕಾಣಿಸುವ ತೀಕ್ಷ್ಣ ವಿಮರ್ಶಕರಾದ ಚೊಕ್ಕಾಡಿಯವರು ಇನ್ನೂ ಬಹುಕಾಲ ನಮ್ಮೊಡನೆ ಆರೋಗ್ಯ ನೆಮ್ಮದಿಯೊಂದಿಗೆ ಇರಬೇಕು. ನಮ್ಮ ಓದಿಗೆ ಹೊಸ ಹೊಸ ದಿಕ್ಕುಗಳನ್ನು ಸೂಚಿಸುತ್ತ ಜೊತೆಗಿರಬೇಕು ಎಂದು ಬಯಸುತ್ತೇನೆ.

(ಪುಸ್ತಕ ಬಿಡುಗಡೆಯ ದಿನಾಂಕ: 8/01/2023, ಸ್ಥಳ: ಐಡಿಯಲ್‌ ಜಾವಾ ಸಭಾಂಗಣ (ರೋಟರಿ ಸ್ಕೂಲ್)‌ ಮೈಸೂರು, ಸಮಯ ಬೆಳಗ್ಗೆ 10:30ಕ್ಕೆ)