ಕೆಂಡಸಂಪಿಗೆಯ ಮೂಲಕ ಬರಹಲೋಕಕ್ಕೆ ಕಾಲಿಟ್ಟ ಫಾತಿಮಾ ರಲಿಯಾ ಕವಿತೆಗಳನ್ನು ಬರೆಯಲಾರಂಭಿಸಿ ಪ್ರಬಂಧಗಳನ್ನು ತುಂಬಾ ಪ್ರೀತಿಸಿದರು. ಕರಾವಳಿಯ ಸಾಮಾಜಿಕತೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ  ಭರವಸೆಯ ಲೇಖಕಿ. ಅವರ ಕಥಾ ಸಂಕಲನದ ಹಸ್ತಪ್ರತಿಗೆ ಛಂದಪುಸ್ತಕ ಬಹುಮಾನ ಬಂದಿದೆ. ಕವಿತೆಯ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ ತಾನು ಪ್ರಬಂಧಗಳ ಲೋಕದಲ್ಲಿ ವಿಹರಿಸಿ ಈ ಕಥಾಲೋಕವನ್ನು ಪ್ರವೇಶಿಸಿದ್ದೇನೆ ಎನ್ನುವ ಫಾತಿಮಾ ರಲಿಯಾ ಅವರು ತಮ್ಮಖುಷಿಯನ್ನು ಕೆಂಡಸಂಪಿಗೆಯ ಜೊತೆಗೆ ಹಂಚಿಕೊಂಡರು.  ಅವರೊಡನೆ ನಡೆಸಿದ ಮಾತುಕತೆಯ ಒಂದಿಷ್ಟು ವಿಚಾರಗಳು ಇಲ್ಲಿವೆ.

ಈ ಬರಹಲೋಕಕ್ಕೆ ನೀವು ಬಂದಿದ್ದು ಹೇಗೆ.. ಅದಕ್ಕೊಂದು ಕತೆಯಿರಬೇಕಲ್ಲ?

ಹೌದು. ಪ್ರಾಥಮಿಕ ಶಾಲೆಯಲ್ಲಿಯೇ ಅದೂ ಇದೂ ಬರೆಯುವ ಹವ್ಯಾಸ ನನಗಿತ್ತು. ಕವಿತೆಗಳನ್ನು ಬರೆದರೂ, ಅದನ್ನುಯಾರಿಗೂ ತೋರಿಸುವ ಧೈರ್ಯ ಮಾಡುತ್ತಿರಲಿಲ್ಲ. ಕಲ್ಲಡ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಓದಿದ್ದು. ಅಲ್ಲಿಯೇ ನನ್ನ ಅಜ್ಜ ಅಹಮದ್‌ ಅವರು ಪಾಠ  ಮಾಡಿದ್ದರು. ನನಗೆ ಪಾಠ ಮಾಡುತ್ತಿದ್ದ ಶಿಕ್ಷಕರಲ್ಲಿ ಹೆಚ್ಚಿನವರು ನನ್ನ ಅಜ್ಜನ ಶಿಷ್ಯಂದಿರಾಗಿದ್ದರು. ನಾನು ಏನೋ ಬರವಣಿಗೆ ಮಾಡುತ್ತೇನೆ ಎಂದು ಅಜ್ಜ ಕಂಡು ಹಿಡಿದು ಬಿಟ್ಟರು. ಆದರೆ ಅದರ ಬಗ್ಗೆ  ಹೆಚ್ಚೇನೂ ವರಾತ ಮಾಡದೇ, ಬರೆಯುತ್ತಿರು ಎಂದು ಪ್ರೋತ್ಸಾಹ ನೀಡುತ್ತಿದ್ದರು. ಈ ಬರವಣಿಗೆ ಕಾಲೇಜಿಗೆ ಬಂದಾಗಲೂ ಮುಂದುವರೆಯಿತು. ಆಗ ಮನಸ್ಸಿಗೆ ತೋಚಿದ ಅನೇಕ ಹೆಸರುಗಳಲ್ಲಿ ಬರಹಗಳನ್ನು ನಾನು ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ. ಅವೆಲ್ಲ ಪ್ರಕಟವಾಗುತಿದ್ದವು. ಅಷ್ಟಲ್ಲಿ ನಾನು ಮದುವೆಯಾದೆ. ಮದುವೆಯ ಬಳಿಕ ನನ್ನ ಪತಿ ಅಬ್ದುಲ್‌ ಅಜೀಜ್‌  ಪ್ರೋತ್ಸಾಹದಿಂದ ನನ್ನದೇ ಹೆಸರಿನಲ್ಲಿ ಪತ್ರಿಕೆಗಳಿಗೆ ಕಳುಹಿಸಲು ಶುರು ಮಾಡಿದೆ. ಅವರೂ ನನ್ನ ಬರಹಗಳನ್ನು ಓದುತ್ತಾರೆ. ಆದರೆ ಯಾವುದೇ ಅಭಿಪ್ರಾಯ ಹೇಳುವುದಿಲ್ಲ. ಓದುತ್ತಾರಲ್ಲಾ..ಎಂಬುದೇ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಹಾಗಿದ್ದರೆ ಸಂಸಾರವು ನಿಮ್ಮ ಸಾಹಿತ್ಯ ಯಾನಕ್ಕೆ ಯಾವುದೇ ಬ್ರೇಕ್‌ ಹಾಕಿಲ್ಲ ಎಂದಾಯಿತು ?

ಇಲ್ಲವೆಂದರೆ ಇಲ್ಲ. ಹೌದೆಂದರೆ ಹೌದು. ಯಾಕೆಂದರೆ, ಮಗಳು ಹಿಬಾ ಹಲೀಮಾ ಹುಟ್ಟಿದಾಗ ಒಂದು ವರ್ಷ ಬರವಣಿಗೆ ಸಾಧ್ಯವಾಗಲಿಲ್ಲ. ಆದರೆ ಅದನ್ನು ಬ್ರೇಕ್‌ ಅಂತ ಹೇಗೆ ಹೇಳುವುದು ? ಯಾಕೆಂದರೆ ಅವಳು ಹುಟ್ಟಿದ ಮೇಲೆ ನನ್ನ ಜೀವನ ದೃಷ್ಟಿಯೇ ಬದಲಾಗಿದೆ. ಹಾಗಾಗಿ ಅವಳೊಡನೆ ಸಮಯ ಕಳೆಯುವುದೆಂದರೆ ಕಥೆ ಬರೆದಷ್ಟೇ ಖುಷಿಯಾಗುತ್ತದೆ. ಅಷ್ಟೇ ಅಲ್ಲ, ಎಷ್ಟೋ ಸಂದರ್ಭದಲ್ಲಿ ಅವಳು ಕೇಳುವ ಪ್ರಶ್ನೆಗಳಲ್ಲಿ ನನಗೆ ಹೊಸ ಕಥೆಗಳು ಹೊಳೆದಿವೆ. ಹಾಗಾದರೆ ಬರೆಯದೇ ಇರುವ ಈ ಅವಧಿಯನ್ನು ಬ್ರೇಕ್‌ ಎಂದು ಹೇಳಬಹುದೇ ? ಮೊನ್ನೆಯಷ್ಟೇ ಅವಳೊಂದು ಪ್ರಶ್ನೆ ಕೇಳಿದಳು. ಮನೆಗೆ ಬಂದ ನೆಂಟರಿಷ್ಟರಿಗೆ ಒಳಗೆ ಕರೆದು ಸತ್ಕರಿಸುತ್ತಿ. ಆದರೆ ಕೊರಿಯರ್‌ ಹುಡುಗ ಮುಂತಾದವರಿಗೆ ಯಾಕೆ ಒಳಗೆ ಕರೆದು ಸತ್ಕರಿಸುವುದಿಲ್ಲ ? ನಾನು ಅವರನ್ನು ಒಳಗೆ ಕರೆಯಲಾ ಎಂದು ಪ್ರಶ್ನಿಸುತ್ತಾಳೆ. ಅರರೆ..ಕುವೆಂಪು ಹೇಳಿದ ವಿಶ್ವಮಾನವ ಪರಿಕಲ್ಪನೆ ಇದೇ ಅಲ್ಲವಾ ಎಂದು ನನಗೆ ಅಚ್ಚರಿಯಾಗುತ್ತದೆ.

ಮತ್ತೆ ನಿಮ್ಮನ್ನು ಪ್ರಭಾವಿಸಿದ ಬರಹಗಾರರು?

ಕತೆಗಾರ ಅಬ್ದುಲ್‌ ರಶೀದ್‌ ಬರೆಯುತ್ತಿದ್ದ ಕಾಲುಚಕ್ರ ಅಂಕಣವನ್ನು ಪಟ್ಟಾಗಿ ಓದುತ್ತಿದ್ದೆ. ಕೆಂಡಸಂಪಿಗೆಗೆ ಬರೆಯುವಂತೆ ಒತ್ತಾಯಿಸಿ ನನ್ನೊಳಗಿನ ಬರೆಯುವ ಶಕ್ತಿಯನ್ನು ಬಡಿದೆಬ್ಬಿಸಿದವರು ಅವರೇ.   ಬಿ.ಎಂ. ಬಶೀರ್‌ ಕವಿತೆಗಳನ್ನುಹುಡುಕಿ ಓದುತ್ತೇನೆ. ಲಂಕೇಶ್‌ ಮತ್ತು ತೇಜಸ್ವಿಯವರ ಪುಸ್ತಕಗಳು ಇಷ್ಟ. ಇನ್ನು ನಮ್ಮೂರಿನ ಪರಿಸರವನ್ನೇ ಬಿಂಬಿಸುವ ಶಿವರಾಮ ಕಾರಂತರ ಕಾದಂಬರಿಗಳು, ಬೊಳುವಾರು ಮಹಮ್ಮದ್‌ ಕುಂಞಿ ಅವರ ಕಾದಂಬರಿ ನನಗೆ ಇಷ್ಟವಾಗದೇ ಇರುತ್ತದೆಯೇ… ವಸುಧೇಂದ್ರ, ಅನಿಲ್‌ ಗುನ್ನಾಪುರ, ದಾದಾಪೀರ್‌ ಜೈಮನ್‌,  ಇಸ್ಮಾಯಿಲ್‌ ತಳಕಲ್‌,  ಚೈತ್ರಿಕಾ ಹೆಗಡೆ.. ಮುಂತಾದವರನ್ನು ಇತ್ತೀಚೆಗೆ ಓದಿದ್ದುಂಟು.

ಮನೆಯಲ್ಲಿ ಸಾಹಿತ್ಯದ ವಾತಾವರಣ ಇದೆಯೇ?

ಅಪ್ಪ ಅಬ್ದುಲ್‌ ರಶೀದ್ ಕೃಷಿಕರು, ಅಡಿಕೆ, ತೆಂಗು ಬೆಳೆಯುವ ಕೃಷಿಕರು. ಅಮ್ಮನಿಗೆ ಸಾಹಿತ್ಯದ ಆಸಕ್ತಿಯಿದೆ. ಅವರೂ ನನ್ನಂತೆಯೇ ಕದ್ದು ಮುಚ್ಚಿ ಕವಿತೆ ಬರೆಯುತ್ತಿದ್ದರು. ಆದರೆ ಅವರಿದ್ದ ಕಾಲ ತುಸು ಹಿಂದಿನದು. ಅಜ್ಜನೇ ನನಗೆ ಮಾದರಿ ಮತ್ತು ಪ್ರೋತ್ಸಾಹಕರು. ನಮ್ಮ  ಮನೆಗೆ ಬರುವ ಕೃಷಿಕರು, ಕಾರ್ಮಿಕರು ನನ್ನ ನೋಟವನ್ನು ವಿಸ್ತಾರ ಮಾಡಿದ್ದಾರೆ. ಏರೋನಾಟಿಕಲ್‌ ಎಂಜಿನಿಯರ್‌ ಆಗಬೇಕೆಂದು ಕನಸು ಕಂಡಿದ್ದೆ.  ಆದರೆ ಓದಿದ್ದು ಐಟಿ. ಈಗ ನೋಡಿದರೆ ನಾನು ಕಥೆಗಾರ್ತಿಯಾಗಿದ್ದೇನೆಂದು ಖುಷಿಯಾಗುತ್ತಿದೆ. ಕತೆ ಬರೆಯುವಾಗ ನನಗೆ ಶೀರ್ಷಿಕೆ ಕೊಡುವುದೇ ದೊಡ್ಡ ಸವಾಲು. ತುಂಬ ಇಷ್ಟಪಟ್ಟು ನಾನು ಸರ ಸರಾ ಅಂತ ಪ್ರಬಂಧ ಬರೆಯುತ್ತೇನೆ. ಸುಧಾ ವಾರಪತಿಕೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಬಂದಿತ್ತು. ಆಗ ನನಗೆ ಪ್ರಬಂಧ ವೆಂಬುದು ನನಗೆ ಒಲಿದ ಮಾದರಿ ಎಂದು ಅನಿಸಿತು.  ಆದರೆ ಕಥೆಗಳು ಸ್ವಲ್ಪ ಕಾಡಿಸುತ್ತವೆ. ಬೇಗನೇ ಬರೆಯುವುದಕ್ಕಾಗುವುದಿಲ್ಲ.

ಈಗೊಂದು ಕವನ ಸಂಕಲನ ರೆಡಿಯಾಗಿದೆ. ಮತ್ತೆ ಕಾದಂಬರಿ ಬರೆಯಬೇಕೆಂದು ಭಾರೀ ಆಸೆಯಿದೆ. ಬರೆಯಬೇಕು. ಸಮಯವಿಲ್ಲ ಎಂದರೆ ಸುಳ್ಳಾಗುತ್ತದೆ. ಸಮಯ ಮಾಡಿಕೊಳ್ಳಬೇಕು ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ ಅನೇಕ ಬಾರಿ.