ಪ್ರತಿಯೊಬ್ಬ ವಿದ್ಯಾರ್ಥಿ ವೈವಿಧ್ಯಮಯವಾಗಿ ಬನಿಯನ್ ಬಾಕ್ಸ್‌ಗಳಲ್ಲಿ ಸರಸ್ವತಿಯ ಚಿತ್ರವಿಟ್ಟು ತನ್ನಿಚ್ಛೆಯಂತೆ ಸಿಂಗರಿಸಿ ಖುಷಿ ಪಡುತ್ತಿದ್ದ. ತುಂಬ ಶ್ರಮವಹಿಸಿ ತಯಾರಿಸಿದ ಈ ಸುಂದರ ‘ಸರಸ್ವತೀಮಂದಿರ’ಗಳನ್ನು ಬೇರೆ ವಿದ್ಯಾರ್ಥಿಗಳು ನೋಡುವುದು ಕಡಿಮೆ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸಿಂಗರಿಸಿದ ಸರಸ್ವತಿಯನ್ನು ತಾನೇ ನೋಡುತ್ತ, ನೋಡುತ್ತ ಆನಂದತುಂದಿಲನಾಗಿ ತನ್ನ ಮತ್ತು ಸರಸ್ವತಿಯ ಮಧ್ಯೆ ಯಾರೂ ಇಲ್ಲದ ಹಾಗೆ ತದೇಕಚಿತ್ತನಾಗಿರುತ್ತಿದ್ದ. ಆ ಕ್ಷಣದ ಆನಂದವೇ ಆನಂದ. ಇದು ಒಂದುರೀತಿಯ ಲಿಂಗಾಂಗಸಾಮರಸ್ಯದಂತೆ! ಇದೊಂದು ಅಪೂರ್ವ ಸನ್ನಿವೇಶ.
ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಹನ್ನೆರಡನೆಯ ಕಂತು

 

ಅದೇಕೋ ಒಂದನೇ ಇಯತ್ತೆ ಮುಗಿದ ಕೂಡಲೆ ನನ್ನ ತಂದೆ ಶ್ರೀ ಸಿದ್ಧೇಶ್ವರ ಪ್ರಾಥಮಿಕ ಶಾಲೆಯಲ್ಲಿ (ಎಸ್.ಎಸ್. ಪ್ರೈಮರಿ ಸ್ಕೂಲ್) ಹೆಸರು ಹಚ್ಚಿದರು. ಅದು ಎಸ್.ಎಸ್. ಹೈಸ್ಕೂಲಿನ ಮುಖ್ಯ ಕಟ್ಟಡದ ನೆಲ ಮಾಳಿಗೆಯಲ್ಲಿ ಇದ್ದುದರಿಂದ “ತೆಗ್ಗಿನ ಶಾಲೆ” ಎಂದೇ ಪ್ರಸಿದ್ಧವಾಗಿತ್ತು. ಅದರ ಕಿಟಕಿ ಹೊರಗಿನಿಂದ ಭೂತಳಕ್ಕೆ ಹತ್ತಿಕೊಂಡಿತ್ತು. ಮುಂದೆ ಹೋಗಿ ಎಡಕ್ಕೆ ಹೊರಳಿದರೆ ಶಾಲೆಯ ಬಾಗಿಲು. ಅದರೊಳಗೆ ಹೋಗಲು ಒಂದಿಷ್ಟು ಮೆಟ್ಟಿಲುಗಳನ್ನು ಇಳಿಯಬೇಕಿತ್ತು. ಒಳಗಡೆ ಎಷ್ಟು ಕೋಣೆಗಳಿದ್ದವೋ ನೆನಪಾಗುತ್ತಿಲ್ಲ. ಆದರೆ 7 ನೇ ಇಯತ್ತೆವರೆಗೆ ಕ್ಲಾಸುಗಳು ನಡೆಯುತ್ತಿದ್ದವು.

(ಗಚ್ಚಿನಮಠ)

ಅದೇ ವೇಳೆಗೆ ನನ್ನ ತಂದೆ ಮಠಪತಿಗಲ್ಲಿ ಪಕ್ಕದ ನಾವಿಗಲ್ಲಿಯಲ್ಲಿ ಬಾಡಿಗೆ ಮನೆ ಹಿಡಿದರು. ಆಗ ನಾನು ಎರಡನೇ ಇಯತ್ತೆ ವಿದ್ಯಾರ್ಥಿ ಎಂಬ ನೆನಪು. (ನಮ್ಮ ಕ್ಲಾಸ್ ಟೀಚರ್ ಕಪ್ಪು ಹಲಗೆಯ ಮೇಲೆ; ಅದರ ಕೆಳಗಿನ ಬಲಭಾಗದಲ್ಲಿ 1958 ಎಂದು ಖಡು (ಚಾಕ್ ಪೀಸ್)ವಿನಿಂದ ಬರೆದದ್ದು ಇನ್ನೂ ಕಾಣುತ್ತಿದೆ. ಆದರೆ ದಿನಾಂಕ ಮತ್ತು ತಿಂಗಳು ಬರೆದದ್ದು ನೆನಪಾಗುತ್ತಿಲ್ಲ. ಅದು 1958-59 ರ ಶೈಕ್ಷಣಿಕ ವರ್ಷ ಇರಬಹುದು.)
ತೆಗ್ಗಿನ ಶಾಲೆಯಿಂದ ನಾವಿಗಲ್ಲಿಗೆ ಬರಬೇಕಾದರೆ ಗಚ್ಚಿನಮಠ ಓಣಿಯನ್ನು ದಾಟಬೇಕಿತ್ತು. ಗಚ್ಚಿನಮಠದಿಂದ ಮುಂದೆ ಬಂದು ಬಲಕ್ಕೆ ಹೊರಳಿ ಮುನ್ನಡೆದರೆ ಸ್ವಲ್ಪ ದೂರದಲ್ಲಿ ಎದುರುಗಡೆ ಕಾಣುವುದೇ ಮಠಪತಿಗಲ್ಲಿ. ಆ ಕಡೆ ಹೋಗದೆ ಎಡಕ್ಕೆ ಹೊರಳಿದರೆ ನಾವಿಗಲ್ಲಿ. ಹೊರಳಿ ಇಪ್ಪತ್ತು ಹೆಜ್ಜೆ ಮುಂದೆ ಹೋಗುವಾಗ ಬಲಗಡೆ ಇದ್ದ ಶಿರನಾಳ ಚಾಳ (ವಠಾರ)ನ್ನು ದಾಟುತ್ತೇವೆ. ಆ ಚಾಳಿನ ಒಂದು ಗೋಡೆ ನಾವಿಗಲ್ಲಿಯ ಕಡೆಗೆ ಇದ್ದರೆ ಇನ್ನೊಂದು ಗೋಡೆ ಮಠಪತಿ ಗಲ್ಲಿಯ ಕಡೆಗೆ. ಎರಡೂ ಗಲ್ಲಿಗಳ ಮಧ್ಯೆ ಈ ಚಾಳ. ಅದರ ಎದುರುಗಡೆ, ರಸ್ತೆಗೆ ಹತ್ತಿಕೊಂಡೇ ಧ್ವಜಕಟ್ಟೆ. ಕಟ್ಟೆಯ ಪಕ್ಕದಲ್ಲಿ ಬೃಹತ್ತಾದ ಆಲದ ಮರ. ಆ ಮರದ ಹಿಂದೆ ಹಳೆಯ ಕಾಲದ ಸುಸಜ್ಜಿತ ಸೇದುವ ಬಾವಿ. ಆದರೆ ಆ ಬಾವಿ ಕೊಳಚೆ ನೀರಿನಿಂದ ತುಂಬಿಕೊಂಡಿತ್ತು. ದೇವರಿಗೆ ಏರಿಸಿದ ನಂತರ ಬಾಡಿದ ಹೂ, ಪತ್ರೆ (ನಿರ್ಮಾಲ್ಯ) ಎಸೆಯುವುದಕ್ಕಾಗಿ ಆ ಬಾವಿಯನ್ನು ಬಳಸುತ್ತಿದ್ದರು. ಅದರ ಪಕ್ಕದಲ್ಲಿ ಕೆಳಮಧ್ಯಮವರ್ಗದ ಮುಸ್ಲಿಮರ ಚಾಳ ಇತ್ತು. ಅದರ ಪಕ್ಕದಲ್ಲೇ ಸಂಗು ಸಜ್ಜನ ಅವರ ಮನೆ. ಇವುಗಳ ಎದುರಿಗೆ ಇರುವ ಸಂತಸೇನಾ ರಸ್ತೆಯೆ ನಾವಿಗಲ್ಲಿಯ ಮುಖ್ಯ ರಸ್ತೆ. (ಸಂತಸೇನಾ ಮಹಾರಾಜ್ ಎಂಬಾತ ಮಧ್ಯಯುಗದ ನಾವಿ ಸಮಾಜದ ಮರಾಠಿ ಸಂತ. ವಿಧುರನಾಗಿದ್ದ ಆತ ಮುಂದೆ ಕೆಲ ವರ್ಷಗಳಲ್ಲಿ ತನ್ನ ಇದ್ದೊಬ್ಬ ಮಗನನ್ನೂ ಕಳೆದುಕೊಂಡ. ಮಗನ ಸಾವಿನ ದುಃಖದಲ್ಲಿ ಆತ ತನ್ನ ಅಭಂಗವೊಂದರಲ್ಲಿ ಹೃದಯಸ್ಪರ್ಶಿಯಾಗಿ ಹೇಳಿದ. ಅದರ ಭಾವಾರ್ಥ ಹೀಗಿದೆ. “ಓ ದೇವರೇ ನಿನ್ನ ಮೇಲಿನ ಸಂಪೂರ್ಣ ಪ್ರೀತಿಗೆ ನನ್ನ ಮಗ ಅಡ್ಡ ಬರುತ್ತಾನೆ ಎಂದು ಭಾವಿಸಿ ಅವನನ್ನು ಕರೆದುಕೊಂಡೆಯಾ? ಆಯ್ತು ಬಿಡು; ಇನ್ನು ಮೇಲೆ ನನ್ನ ಸಂಪೂರ್ಣ ಪ್ರೀತಿ ನಿನಗಾಗಿಯೆ ಮೀಸಲು.) ಆ ಸಂತಸೇನಾ ರಸ್ತೆಯ ಬಲಗಡೆ ಶಿರನಾಳ ಚಾಳಿನ ಗೋಡೆ ಇದ್ದು ಅದನ್ನು ದಾಟಿದ ಮೇಲೆ ಮೊದಲಿಗೆ ಗಣಪತಿ ಮಾಮಾ (ಪ್ರೊ. ಜಿ.ಬಿ. ಸಜ್ಜನ್ ಸರ್) ಅವರ ಮನೆ. ಚಾಳಿನ ಗೋಡೆ ಮತ್ತು ಮನೆಯ ಮಧ್ಯೆ ಸಂದಿ. ಆ ಸಂದಿಯ ಆಚೆ ದಂಡೆಗೆ ಮಠಪತಿಗಲ್ಲಿ. ಸಂದಿಯಲ್ಲಿ ಎದುರು ಬದುರು ಒಂದಿಷ್ಟು ಮೂರಂಕಣದ ಮನೆಗಳಿದ್ದವು.

(ನಾವಿಗಲ್ಲಿಯ ನಾವಿದ್ದ ಮೇಲ್ಮುದ್ದಿ ಮನೆಯ ಜಾಗದಲ್ಲಿ ತಲೆಎತ್ತಿದ ಕಟ್ಟದ.  ಶಟರ್ ಕಾಣುವ ಜಾಗದಲ್ಲಿ ನಮ್ಮ ಬಾಡಿಗೆ ಮನೆ ಇತ್ತು.)

ಗಣಪತಿ ಮಾಮಾ ಅವರ ಮನೆಯ ಪಕ್ಕದಲ್ಲಿ ಅವರ ಸಂಬಂಧಿಕರ ದೊಡ್ಡಿ ಇತ್ತು. ತದನಂತರ ತಲಾ ಮೂರಂಕಣದ ಎರಡು ಹೊಸ ಮನೆಗಳಿದ್ದವು. ಅವುಗಳಲ್ಲಿ ಮೊದಲ ಮನೆ ಬಿಟ್ಟು ಎರಡನೇ ಮನೆ ನಮ್ಮದು. ಅವೆರಡೂ ಮೇಲ್ಮುದ್ದೆ ಮನೆಗಳೇ ಆಗಿದ್ದವು.

ನಮ್ಮ ಆ ಬಾಡಿಗೆ ಮನೆಯೊಳಗೆ ಎಡೆಗಡೆ ಮೂಲೆಯಲ್ಲಿ ಬಚ್ಚಲು ಇತ್ತು. ಅದರ ಮೇಲೆ ಒಂದು ಕಿಟಕಿ. ಬಚ್ಚಲು ಎದುರಿಗೆ ಒಲೆ. ಇವೆರಡರ ಮಧ್ಯೆ ಎರಡು ಮಣ್ಣಿನ ಹರವಿ ಇಡುವಷ್ಟು ಜಾಗ. ಅವು ದೊಡ್ಡ ಹರವಿಗಳಿದ್ದವು. ಒಂದೊಂದು ಹರವಿಯಲ್ಲಿ ಐದು ಕೊಡ ನೀರು ಹಿಡಿಸುತ್ತಿತ್ತು. ಇದ್ದ ಎರಡೂ ಕೊಡಗಳು ತಾಮ್ರದವುಗಳಾಗಿದ್ದವು. ಬಾಗಿಲು ಮತ್ತು ಬಚ್ಚಲು ಮಧ್ಯೆ ಒಂದು ಶಾಬಾದಿ ಪರ್ಸಿಯ ಕಟ್ಟೆ ಇತ್ತು. ಅದರೆ ಮೇಲೆ ಮತ್ತು ಕೆಳಗೆ ವಸ್ತುಗಳನ್ನು ಇಡಬಹುದಿತ್ತು. ಆಗ ಆ ಮನೆಯ ಬಾಡಿಗೆ ಎಂಟು ರೂಪಾಯಿ. ಅಷ್ಟೊಂದು ಸಣ್ಣ ಮನೆಗೆ ಈ ಬಾಡಿಗೆ ಬಹಳವಾಯಿತು ಎಂದು ನೋಡಿದವರು ಹೇಳುತ್ತಿದ್ದರು. ಆದರೆ ಅದು ಹೊಸದಾಗಿದ್ದರಿಂದ ಖುಷಿ ಕೊಡುವಂಥದ್ದಾಗಿತ್ತು. ನಮ್ಮ ಮನೆ ದಾಟಿದ ಮೇಲೆ ಇನ್ನೊಂದು ಚಾಳಿನ ಹಿಂಬದಿ ಗೋಡೆ ಇತ್ತು. ಆ ಗೋಡೆ ದಾಟಿದ ಮೇಲೆ ಹಡಪದ ಸಮಾಜದ ಸಹಪಾಠಿ ಸೂರ್ಯಕಾಂತನ ಮನೆ. ಆ ಮೂಲೆಮನೆಯಿಂದ ಬಲಕ್ಕೆ ಹೊರಳಿದರೆ ಇನ್ನೊಂದು ಉದ್ದನೆಯ ರಸ್ತೆ. ಅದು ಮುಳ್ಳಗಸಿಯಿಂದ ಮದ್ದಿನ ಖಣಿಯವರೆಗೆ ಹೋಗುತ್ತಿತ್ತು.

(ನಾವಿಗಲ್ಲಿಯಲ್ಲಿದ್ದ ಮೇಲ್ಮುದ್ದಿ ಬಾಡಿಗೆ ಮನೆ. ಬಲಗಡೆ ಬಾಗಿಲಿದೆ. ಚಿತ್ರದಲ್ಲಿ ಕಾಣುವುದಿಲ್ಲ. ನಿಂತವರು ನನ್ನ ತಂದೆ ಅಬ್ದುಲ್‍ಸಾ (ಅಬ್ದುಲ್ ಕರೀಂ) ಮತ್ತು ತಾಯಿ ಕಾಸಿಂಬಿ (ಆಶಾಬಿ)

ನಮ್ಮ ಮನೆಯ ಮುಂದಿನ ರಸ್ತೆ ಸ್ವಲ್ಪ ದೊಡ್ಡದೇ ಇದ್ದು ಬೋಧರಾಚಾರಿ ದೊಡ್ಡಿಗೆ ಹೋಗುತ್ತಿತ್ತು. ಎರಡು ಎಕರೆಗಳಷ್ಟು ವಿಶಾಲವಾದ ಆ ದೊಡ್ಡಿಯಲ್ಲಿ ಗೌಳಿಗರ ಹೆಣ್ಣುಮಕ್ಕಳು ಕುಳ್ಳು (ಬೆರಣಿ) ಹಚ್ಚುತ್ತಿದ್ದರು ಮತ್ತು ನಾವಿಗಲ್ಲಿ ಪುರುಷರು ಸಂಡಾಸಗೆ ಹೋಗುತ್ತಿದ್ದರು. ದೊಡ್ಡಿಯ ಒಳಗೆ ಹೋಗುವಾಗ ಎಡಗಡೆ ಸಾರ್ವಜನಿಕ ನಲ್ಲಿ ಇತ್ತು. ಬಲಗಡೆ ಅಷ್ಟೇನು ಹಳೆಯದಾಗದ ಬೇವಿನಮರವಿತ್ತು. ಅದು ದುಂಡಗಾಗಿದ್ದು ಬಹಳ ಸುಂದರವಾಗಿ ಕಾಣುತ್ತಿತ್ತು. ದೊಡ್ಡಿಯ ಆಚೆ ದಂಡೆಗೆ ಆದಿಲಶಾಹಿ ಕಾಲದ ಕೋಟೆಗೋಡೆ. (ಅದು ಆದಿಲಶಾಹಿ ಕಾಲದ ಇಡೀ ವಿಜಾಪುರ ನಗರವನ್ನು ಸುತ್ತುವರಿದ ಕೋಟೆ. ಅದಕ್ಕೆ ಅನೇಕ ಅಗಸಿ ಬಾಗಿಲುಗಳಿವೆ. ಆದರೆ ಇಪ್ಪತ್ತನೇ ಶತಮಾನದಲ್ಲಿ ಊರು ಬೆಳೆದಂತೆಲ್ಲ ಕೆಲವೆಡೆ ಕೋಟೆಗೋಡೆ ಬೀಳಿಸಿ ದಾರಿ ಮಾಡಿಕೊಂಡಿದ್ದಾರೆ. ಬೋಧರಾಚಾರಿ ದೊಡ್ಡಿಯಿಂದ ಬಲಕ್ಕೆ ಹೋದರೆ ಸ್ವಲ್ಪದೂರದಲ್ಲಿ ಕೋಟೆಗೋಡೆಯನ್ನು ಬೀಳಿಸಿ ದಾರಿ ಮಾಡುವುದನ್ನು ನಾನು ಬಾಲಕನಾಗಿದ್ದಾಗ ನೋಡಿದ್ದೇನೆ. ಅದು ಈಗ ಲಿಂಗದಗುಡಿ ರಸ್ತೆ. ಮುಂದೆ ಅದು ಸೋಲಾಪುರ ರಸ್ತೆಯನ್ನು ಕೂಡುವುದು. ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಯ ಮಹಾದ್ವಾರ ಅಲ್ಲೇ ಸಮೀಪದಲ್ಲಿ ಸೋಲಾಪುರ ರಸ್ತೆಯ ಬಲಭಾಗದಲ್ಲಿದೆ. ಇದು ಬಿ.ಎಲ್‌.ಡಿ.ಇ. ಸಂಸ್ಥೆಯ ಪಶ್ಚಿಮ ದಿಕ್ಕಿನ ಗಡಿಯಲ್ಲಿದೆ. ಕೋಟೆ ಒಡೆದು ಲಿಂಗದಗುಡಿ ರಸ್ತೆಗೆ ಅನುವು ಮಾಡಿದ ಸ್ಥಳದಿಂದ ಸ್ವಲ್ಪ ಮುಂದೆ ಹೋದರೆ ಬಿ.ಎಲ್.ಡಿ.ಇ. ರಸ್ತೆ ಬರುತ್ತದೆ. ಅದು ಕೂಡ ಕೋಟೆಗೋಡೆಯನ್ನು ಸೀಳಿಕೊಂಡು ಹೋಗಿದೆ. ನಾನು ಜನಿಸುವ ಮೊದಲೇ ಕೋಟೆಯ ಭಾಗವನ್ನು ಒಡೆದು ದಾರಿ ಮಾಡಿದ್ದಾರೆ. ಈ ರಸ್ತೆ, ಬಿ.ಎಲ್.ಡಿ.ಇ. ಸಂಸ್ಥೆಯ ಪೂರ್ವದ ಗಡಿಗೆ ಹೊಂದಿಕೊಂಡಿದೆ.)

ನಾವಿಗಲ್ಲಿ ಕೂಡ ಪಟ್ಟಣದ ನೆರಳಿನಲ್ಲಿರುವ ಹಳ್ಳಿಯೇ ಆಗಿದೆ. (ಹಾಗೆ ನೋಡಿದರೆ ಆ ಕಾಲದಲ್ಲಿ ಇಡೀ ವಿಜಾಪುರವೇ ಒಂದು ದೊಡ್ಡ ಹಳ್ಳಿಯ ಹಾಗೆ ಇತ್ತು. ಜನಸಂಖ್ಯೆ ಬಹಳವೆಂದರೆ 50 ಸಾವಿರದಷ್ಟಿತ್ತು.) ವಿವಿಧ ಜಾತಿ ಧರ್ಮಗಳ ಬಡವರು, ಕೆಳಮಧ್ಯಮ ವರ್ಗದವರು ಮತ್ತು ಮಧ್ಯಮವರ್ಗದವರು ನಾವಿಗಲ್ಲಿಯಲ್ಲಿ ಇದ್ದರು. ಮರಾಠಿ ಮಾತನಾಡುವ ಹಡಪದ ಸಮಾಜದವರಿಗೆ ‘ನಾವಿ’ ಎಂದು ಕರೆಯುತ್ತಾರೆ. ಅವರ ಮನೆತನಗಳು ಹೆಚ್ಚಿಗೆ ಇರುವುದರಿಂದ ‘ನಾವಿಗಲ್ಲಿ’ ಎಂದು ಹೆಸರು ಬಂದಿದೆ.

ನಾನು ಮತ್ತು ಇತರ ಒಂದಿಬ್ಬರು ಸಹಪಾಠಿಗಳು ಜೊತೆಯಾಗಿ ನಾವಿಗಲ್ಲಿಯಿಂದ ತೆಗ್ಗಿನ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದೆವು. ಆ ವಯಸ್ಸಿನಲ್ಲಿ ನಮಗೆ ನಮ್ಮ ಶಾಲೆ ಬಹಳ ದೂರ ಎನಿಸುತ್ತಿತ್ತು. ಶಾಲೆಯ ಆವರಣವನ್ನು ಮುಖ್ಯ ಗೇಟ್‌ನಿಂದಲೇ ಪ್ರವೇಶಿಸಬೇಕಿತ್ತು.
ತೆಗ್ಗಿನ ಶಾಲೆಯ ಎದುರಿನಿಂದ ಒಂದಿಷ್ಟು ಮುಂದೆ ಹೋದರೆ, ಪಕ್ಕದಲ್ಲಿ ಸುಂದರವಾದ ಬಗೀಚೆ (ಗಾರ್ಡನ್) ಇತ್ತು. ನಾವು ವಿದ್ಯಾರ್ಥಿಗಳು ಕೆಲವೊಂದು ಸಲ ಬುತ್ತಿ ಒಯ್ದಾಗ ಮಧ್ಯಾಹ್ನದ ಊಟವನ್ನು ಅಲ್ಲಿಯೆ ಮಾಡುತ್ತಿದ್ದೆವು. ಒಂದು ಸಲ ನಾನು ನನ್ನ ತಮ್ಮನೊಡನೆ ಊಟ ಮಾಡುತ್ತಿದ್ದಾಗ ಪಕ್ಕದಲ್ಲೇ ಕುಳಿತಿದ್ದ ಹೈಸ್ಕೂಲು ವಿದ್ಯಾರ್ಥಿಯೊಬ್ಬ ನನ್ನ ಕೂಡ ಮಾತನಾಡತೊಡಗಿದ. ನಮ್ಮಲ್ಲಿ ರೊಟ್ಟಿ ಸಾಕಾಗುವಷ್ಟು ಇರಲಿಲ್ಲ. ಬರಗಾಲದಲ್ಲಿ ಹಾಗೆ ಹಸಿವನ್ನು ತಡೆದುಕೊಳ್ಳುವುದು ನಮಗೆ ರೂಢಿಯೂ ಆಗಿತ್ತು. (ಉಳಿದ ದಿನಗಳಲ್ಲಿ ಮನೆಯವರು ಪೌಷ್ಟಿಕ ಆಹಾರಕ್ಕೇ ಹೆಚ್ಚಿನ ಮಹತ್ವವನ್ನು ಕೊಡುತ್ತಿದ್ದರು. ಹೀಗಾಗಿ ಹರಿದ ಬಟ್ಟೆಗಳಿದ್ದರೂ ಹೊಟ್ಟೆ ಮಾತ್ರ ಸಂತೃಪ್ತವಾಗಿರುತ್ತಿತ್ತು.) ಆ ಹೈಸ್ಕೂಲು ವಿದ್ಯಾರ್ಥಿ ನಮ್ಮ ಇತಿಹಾಸ ಮತ್ತು ವರ್ತಮಾನದ ಕುರಿತು ಏನೇನೋ ಕೇಳುತ್ತಿದ್ದ. ನಾನು ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಿದ್ದೆ. ಅವನಿಗೆ ಬಹಳ ಖುಷಿ ಆಯಿತು. ನಮ್ಮ ಬಗ್ಗೆ ಪ್ರೀತಿಯೂ ಮೂಡಿತು. ಆತನಿಗೆ ಅದೇನೋ ಅನಿಸಿತು. ನನ್ನ ಬಳಿ ಹೆಚ್ಚು ರೊಟ್ಟಿಗಳಿವೆ ಎಂದು ನಮಗೆ ಒಂದೊಂದು ರೊಟ್ಟಿಯನ್ನು ಕೊಟ್ಟ. ರೊಟ್ಟಿಯ ಜೊತೆ ಹೆಸರುಬೇಳೆಯ ಮೆತ್ತನೆಯ ವಣಗಿ (ಪಲ್ಯ) ಕೊಟ್ಟ. ಬಹಳ ರುಚಿಯಾಗಿತ್ತು. ಆ ಹೈಸ್ಕೂಲು ವಿದ್ಯಾರ್ಥಿ ಹಳ್ಳಿಯಿಂದ ಬಂದವನಾಗಿದ್ದ.

ಆಗಿನ ಕಾಲದಲ್ಲಿ ಹಳ್ಳಿಯ ಹುಡುಗರು ಇಬ್ಬರು ಮೂವರು ಸೇರಿ ಒಂದು ಖೋಲಿಯನ್ನು ಬಾಡಿಗೆ ಹಿಡಿಯುತ್ತಿದ್ದರು. ತಗಡಿನ ದುಂಡನೆಯ ಊಟದ ಡಬ್ಬಿ ಹಳ್ಳಿಯಿಂದ ರಾಜ್ಯ ರಸ್ತೆ ಸಾರಿಗೆಯ ಕೆಂಪು ಬಸ್ಸಿನಲ್ಲಿ ಬರುತ್ತಿತ್ತು. ಆ ಡಬ್ಬಿಗಳ ಮೇಲೆ ವಿದ್ಯಾರ್ಥಿಗಳ ಹೆಸರು ಇರುತ್ತಿತ್ತು. ಒಳಗೆ ರೊಟ್ಟಿ ಪಲ್ಯೆ ಚಟ್ನಿ ಮುಂತಾದ ಆಹಾರ ಪದಾರ್ಥಗಳಿಂದ ಕೂಡಿದ ಬುತ್ತಿ ಇರುತ್ತಿತ್ತು.

(ತಾಜ ಬಾವಡಿ. ಇದರ ಬಲಭಾಗದಲ್ಲಿನ ಕಮಾನುಗಳು ಮತ್ತು ಅದರ ಮುಂದಿನ ಬಯಲು ಸೇರಿ ವಿಜಾಪುರದ ಮೊದಲ ಬಸ್ ಸ್ಟ್ಯಾಂಡ್ ಆಗಿತ್ತು. ಆ ಕಮಾನುಗಳು ಚಿತ್ರದಲ್ಲಿ ಕಾಣುವುದಿಲ್ಲ.)

(ಈ ಬಸ್ ಸ್ಟ್ಯಾಂಡ್ ಮೊದಲಿಗೆ ತಾಜಬಾವಡಿಯ ಬಲಭಾಗದಲ್ಲಿತ್ತು. ಆ ಒಂದು ಭಾಗದ ಕಮಾನುಗಳೇ ಬಸ್ ಸ್ಟ್ಯಾಂಡ್ ಕಟ್ಟಡ ಆಗಿದ್ದವು. ಅವು ಎಷ್ಟು ದೊಡ್ಡದಾಗಿವೆ ಎಂದರೆ ಒಂದು ಕಮಾನಿನಲ್ಲಿ ಬಸ್ ಸ್ಟ್ಯಾಂಡ್ ಹೋಟೆಲ್ ನಡೆಯುತ್ತಿತ್ತು. ಇನ್ನೊಂದು ಕಮಾನಿನಲ್ಲಿ ಬಸ್ ಸ್ಟ್ಯಾಂಡ್ ಕಚೇರಿ, ಮತ್ತೊಂದು ಕಮಾನಿನಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ, ಮಗದೊಂದು ಕಮಾನಿನಲ್ಲಿ ಮಹಿಳೆಯರ ತಂಗುದಾಣ, ಉಳಿದ ಕಮಾನುಗಳಲ್ಲಿ ಪುರುಷರು ಕೂಡುತ್ತಿದ್ದರು. ಆಗ ರೆಡ್‌ಬೋರ್ಡ್ ಬಸ್ಸುಗಳು ಮಾತ್ರ ಇದ್ದವು. ಅಷ್ಟೆಲ್ಲ ಬಸ್ಸುಗಳು ಆ ಕಮಾನುಗಳ ಮುಂದೆ ನಿಲ್ಲುವಷ್ಟು ವಿಶಾಲವಾದ ಸ್ಥಳಾವಕಾಶವಿತ್ತು. ನಂತರ ಈಗಿರುವ ಸ್ಥಳದಲ್ಲಿ ಹೊಸ ಬಸ್ ಸ್ಟ್ಯಾಂಡ್ ಕಟ್ಟಲಾಯಿತು. ಆ ಬಸ್ ಸ್ಟ್ಯಾಂಡ್ ಬೀಳಿಸಿ ಈಗ ಅದೇ ಜಾಗದಲ್ಲಿ ಇನ್ನೂ ವಿಶಾಲವಾದ ಬಸ್ ಸ್ಟ್ಯಾಂಡ್ ಕಟ್ಟಲಾಗಿದೆ. ಇದಕ್ಕೆ ಸಮೀಪದಲ್ಲೇ ಆದಿಲಶಾಹಿ ಕಾಲದ ದರ್ಬಾರ ಹಾಲ್ ಇದೆ. ಒಳಗಡೆ ಜಿಲ್ಲಾಧಿಕಾರಿ ಕಚೇರಿ ಕೂಡ ಇದೆ. ವಿಜಾಪುರದ ಬಹುತೇಕ ಕಚೇರಿಗಳು ಮತ್ತು ಅಧಿಕಾರಿಗಳ ಬಂಗಲೆಗಳು ಆದಿಲಶಾಹಿ ಕಾಲದವು ಆಗಿರುತ್ತಿವೆ. ಇತ್ತೀಚಿನ ವರ್ಷಗಳವರೆಗೆ ಜಿಲ್ಲಾ ನ್ಯಾಯಾಲಯ ಮುಂತಾದ ಕಚೇರಿಗಳು ಕೂಡ ದರ್ಬಾರ ಹಾಲ್‌ನಲ್ಲೇ ಇದ್ದವು.)

ವಿದ್ಯಾರ್ಥಿಗಳ ಬುತ್ತಿಡಬ್ಬಿಯನ್ನು ತೆಗೆದಿಡುವ ಕಾಯಕವನ್ನು ಮಾಡುವವರಿಗೆ ಬಸ್ ಸ್ಟ್ಯಾಂಡ್ ಮೂಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆ ಕೆಲಸದವರು ಊಟದ ಡಬ್ಬಿಗಳನ್ನು ಬಸ್ಸಿನಿಂದ ತೆಗೆದಿಡುತ್ತಿದ್ದರು. ವಿದ್ಯಾರ್ಥಿಗಳು ಕ್ಲಾಸ್ ಮುಗಿದ ಕೂಡಲೆ ಬಂದು ತಮ್ಮ ಡಬ್ಬಿಗಳನ್ನು ಒಯ್ಯುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿ ಆ ಡಬ್ಬಿಗಳನ್ನು ತೆಗೆದಿಡುವವರ ಯಜಮಾನನಿಗೆ ತಿಂಗಳಿಗೆ ಬಹಳವೆಂದರೆ ಎರಡು ರೂಪಾಯಿ ಕೊಡುತ್ತಿದ್ದ. ಕೆಲ ವಿದ್ಯಾರ್ಥಿಗಳಿಗೆ ಆ ವೆಚ್ಚವನ್ನು ನಿಭಾಯಿಸಲು ಆಗುತ್ತಿರಲಿಲ್ಲ.

(ಸಿದ್ಧೇಶ್ವರ ಗುಡಿ)

ಮಗನ ಸಾವಿನ ದುಃಖದಲ್ಲಿ ಆತ ತನ್ನ ಅಭಂಗವೊಂದರಲ್ಲಿ ಹೃದಯಸ್ಪರ್ಶಿಯಾಗಿ ಹೇಳಿದ. ಅದರ ಭಾವಾರ್ಥ ಹೀಗಿದೆ. “ಓ ದೇವರೇ ನಿನ್ನ ಮೇಲಿನ ಸಂಪೂರ್ಣ ಪ್ರೀತಿಗೆ ನನ್ನ ಮಗ ಅಡ್ಡ ಬರುತ್ತಾನೆ ಎಂದು ಭಾವಿಸಿ ಅವನನ್ನು ಕರೆದುಕೊಂಡೆಯಾ? ಆಯ್ತು ಬಿಡು; ಇನ್ನು ಮೇಲೆ ನನ್ನ ಸಂಪೂರ್ಣ ಪ್ರೀತಿ ನಿನಗಾಗಿಯೆ ಮೀಸಲು.

ತೆಗ್ಗಿನ ಶಾಲೆಯ ಮುಂದೆ ಪಕ್ಕದಲ್ಲಿ ಇರುವ ಆ ಬಗೀಚೆಯ ಬೇಲಿಯ ಕಂಟಿಯಿಂದಲೇ ನಮ್ಮ ಶಿಕ್ಷಕರು ನಮಗೆ ಬಾರಿಸಲು ನಮ್ಮಿಂದಲೇ ಛಡಿ ತರಿಸುತ್ತಿದ್ದರು. ನಮಗೆ ಛಡಿಯೇಟು ಕೊಡುವಾಗ ‘ಛಡಿಯಾಮಿ ಛಂ ಛಂ, ವಿದ್ಯಾಯಾಮಿ ಘಂ ಘಂ’ ಎಂದೂ ಹೇಳುತ್ತಿದ್ದುದುಂಟು.
ಬಗೀಚೆಯಲ್ಲಿ ತೊಂಡಿಕಾಯಿಯ ಬಳ್ಳಿಯೊಂದಿತ್ತು. ಅದರಲ್ಲಿ ಬೇಕಾದಷ್ಟು ತೊಂಡಿಕಾಯಿ ಸಿಗುತ್ತಿದ್ದವು. ನಾವು ತೊಂಡಿಕಾಯಿ ಕತ್ತರಿಸಿ ಕಲ್ಲಿನ ಪಾಟಿಯನ್ನು ತಿಕ್ಕಿ ತಿಕ್ಕಿ ಸ್ವಚ್ಛಗೊಳಿಸುತ್ತಿದ್ದೆವು. ಕೋರಿ(ಹಿಪ್ಪನೇರಳೆ)ಗಿಡ ಬಗ್ಗಿಸಿ ಕಪ್ಪನೆಯ ಹಣ್ಣುಗಳನ್ನು ತಿನ್ನುತ್ತಿದ್ದೆವು.
ಅದಾಗಲೇ ನನ್ನ ಅಜ್ಜಿ ಸಿದ್ಧೇಶ್ವರ ಗುಡಿಯ ಹತ್ತಿರದ ಬೇವಿನ ಮರದ ಕೆಳಗೆ ಬಾಳೆಕಾಯಿ ಮಾರಲು ಪ್ರಾರಂಭಿಸಿದ್ದಳು. ನಾನು ಅನೇಕ ಸಲ ಶಾಲೆ ಬಿಟ್ಟ ಕೂಡಲೆ ಅಜ್ಜಿ ಬಳಿ ಹೋಗುತ್ತಿದ್ದೆ. ಬಾಬು ಮಾಮಾ ಹೋಟೆಲೊಂದರಲ್ಲಿ ‘ಬಾರವಾಲಾ’ ಆಗಿ ಕೆಲಸ ಮಾಡುತ್ತಿದ್ದ. ಅವನ ಊಟ ವಸತಿ ಎಲ್ಲವೂ ಹೊಟೇಲಲ್ಲೇ ಆಗುತ್ತಿತ್ತು. ಅಜ್ಜಿ ಕೊಡುವ ಬಾಳೆಹಣ್ಣು ಮತ್ತು ಬಾಬು ಮಾಮಾ ತಂದು ಕೊಡುವ ಮಿರ್ಚಿಭಜಿ ಮುಂತಾದವು ನನಗೆ ವಿಶೇಷವೆನಿಸುತ್ತಿತ್ತು.

‘ಬಾರವಾಲಾ’ ಎಂದರೆ ಹೊಟೇಲ್ ಹೊರಗೆ ಚಹಾ ತಿಂಡಿ ಸಪ್ಲೈ ಮಾಡುವವ. ಬಜಾರದೊಳಗಿನ ವಿವಿಧ ಅಂಗಡಿಗಳಲ್ಲಿ ವ್ಯಾಪಾರ ಮಾಡುವವರು, ಹಣ್ಣು ತರಕಾರಿ ಮಾರುವವರು ಮುಂತಾದವರಿಗೆ ತಾವಿದ್ದಲ್ಲಿಂದ ಹೊಟೇಲ್‌ಗೆ ಹೋಗಿ ತಿಂಡಿ ತಿನ್ನುವುದಾಗಲಿ, ಚಹಾ ಕುಡಿಯುವುದಾಗಲಿ ಆಗುತ್ತಿರಲಿಲ್ಲ. ಅಂಥವರಿಗಾಗಿ ಬಾರವಾಲಾಗಳು ಇರುತ್ತಿದ್ದರು. ಬಾರವಾಲಾ ಅಂದರೆ ಬಾಹರವಾಲಾ (ಹೊರಗಿನವನು).
ಈ ಬಾರವಾಲಾಗಳಿಗೆ ಪಗಾರ ಇರುತ್ತಿರಲಿಲ್ಲ. ಆದರೆ ಕಮಿಷನ್ ಇರುತ್ತಿತ್ತು. ಬಾರವಾಲಾನ ಬಗಲಿಗೆ ಮೂರು ಖಾನೆಯ ಒಂದು ಚೀಲ ಇರುತ್ತಿತ್ತು. ಅದರ ಅಗಲ ಒಂದು ಗೇಣು ಮತ್ತು ಉದ್ದ ಒಂದೂವರೆ ಗೇಣು. ಅದರ ಒಂದು ಖಾನೆಯಲ್ಲಿ ಹೊಟೇಲ್ ಬಿಲ್ಲೆಗಳಿರುತ್ತಿದ್ದವು. ಆ ಹಿತ್ತಾಳೆಯ ಬಿಲ್ಲೆಗಳು ನಯಾಪೈಸೆಗಿಂತ ಸ್ವಲ್ಪ ದೊಡ್ಡದಾಗಿರುತ್ತಿದ್ದವು. (ಈಗ ನಯಾಪೈಸೆ ಇಲ್ಲ. ನಾನು ಎರಡನೆಯ ಇಯತ್ತೆಯಲ್ಲಿದ್ದಾಗ್ಯೂ ನಯಾಪೈಸೆ ಇರಲಿಲ್ಲ. ಆಗ ದುಡ್ಡುಗಳಿದ್ದವು. 64 ದುಡ್ಡುಗಳು ಸೇರಿದಾಗ ಒಂದು ರೂಪಾಯಿ ಆಗುತ್ತಿತ್ತು. ಒಂದು ಆಣೆ ಅಂದರೆ ನಾಲ್ಕು ದುಡ್ಡು. ಎರಡು ಆಣೆ ಅಂದರೆ 8 ದುಡ್ಡು. ಆ 8 ದುಡ್ಡಿನ ಬೆಲೆಯ ನಾಣ್ಯಕ್ಕೆ ಚವಲಿ ಎನ್ನುತ್ತಿದ್ದರು. ಪಾವಲಿ ಎಂದರೆ 16 ದುಡ್ಡು. ಎಂಟಾಣೆ ಎಂದರೆ 32 ದುಡ್ಡು. ಒಂದು ರೂಪಾಯಿ ಅಂದರೆ 64 ದುಡ್ಡು. ನಯಾಪೈಸಾ ಬಂದ ಮೇಲೆ ಈ ದುಡ್ಡಿನ ವ್ಯವಹಾರ ಹೋಯಿತು. 1, 2, 5, 10 ಮುಂತಾದ ನಯಾಪೈಸೆಗಳ ನಾಣ್ಯಗಳು ಬಂದವು. 25 ನಯಾಪೈಸೆ ಮೌಲ್ಯದ ನಾಣ್ಯಕ್ಕೆ ಪಾವಲಿ ಎಂದರು. 50 ನಯಾಪೈಸೆ ನಾಣ್ಯಕ್ಕೆ ಎಂಟಾಣೆ ಎಂದರು. 100 ಪೈಸೆಯ ನಾಣ್ಯ ಒಂದು ರೂಪಾಯಿ ಆಯಿತು. ಕ್ರಮೇಣ ಹಳೆಯ ನಾಣ್ಯಗಳು ಹೋಗಿ ಹೊಸ ನಾಣ್ಯಗಳು ಚಲಾವಣೆಗೆ ಬಂದವು. ಆಗಿನ ಜನರ ಕೈಯಲ್ಲಿ ಹೆಚ್ಚು ಹಣ ಓಡಾಡುತ್ತಿರಲಿಲ್ಲ. ಇಪ್ಪತ್ತು ರೂಪಾಯಿ ಎಂದರೆ ಬಹಳವಾಯಿತು. ಜನಸಾಮಾನ್ಯರು 40 ರೂಪಾಯಿ ಹೇಳಲು ಎರಡಿಪ್ಪತ್ತು ಎಂದು ಹೇಳುತ್ತಿದ್ದರು. 60 ರೂಪಾಯಿಗೆ ಮೂರಿಪ್ಪತ್ತು. 70 ರೂಪಾಯಿಗೆ ಮೂರಿಪ್ಪತ್ತರದ ಹತ್ತು. ನೂರು ರೂಪಾಯಿಗೆ ಶಂಬೋರ್ ಎಂದು ಹೇಳುತ್ತಿದ್ದರು.)

(ಎಸ್.ಬಿ. ಆರ್ಟ್ಸ್‌ ಕಾಲೇಜ್)

ನಯಾಪೈಸೆ ಬರುವ ಮೊದಲು; ಬಾರವಾಲಾಗೆ ಹೊಟೇಲ್ ಮಾಲೀಕ ಒಂದು ರೂಪಾಯಿಗೆ 64 ಬಿಲ್ಲೆಗಳ ಹಾಗೆ ಕೊಡುತ್ತಿದ್ದ. ಅವು 64 ದುಡ್ಡು ಇದ್ದಹಾಗೆ. ಬಾರವಾಲಾ ಹೊರಗೆ ಹೋದಾಗ, ಬಜಾರದಲ್ಲಿನ ಅಂಗಡಿಯವರು ಮತ್ತು ಬೀದಿಬದಿ ವ್ಯಾಪಾರಿಗಳು ತಮಗೆ ಬೇಕಾದ ತಿಂಡಿ ತಿನಿಸು ಚಹಾ ಮುಂತಾದವುಗಳನ್ನು ತರಲು ಹೇಳುತ್ತಿದ್ದರು. ಬಾರವಾಲಾ ಅವರ ಆರ್ಡರ್‌ಗಳ ಪ್ರಕಾರ ಹೊಟೇಲ್‌ನಿಂದ ತಿಂಡಿ ತಿನಿಸು ತರುತ್ತಿದ್ದ. ತರುವಾಗ ಅವುಗಳ ಬಿಲ್ ಎಷ್ಟಾಗಿರುವುದೊ ಅದಕ್ಕೆ ಸಮಾನವಾದ ಬಿಲ್ಲೆಗಳನ್ನು ಗಲ್ಲೆ ಮೇಲೆ ಕುಳಿತ ಮಾಲೀಕಗೆ ಕೊಡುತ್ತಿದ್ದ.
ಆ ಬಿಲ್ಲೆಗೆ ತೂತುಗಳಿರುವುದರಿಂದ ಅವುಗಳನ್ನು ಮಾಲೀಕ, ಸ್ಟ್ಯಾಂಡ್ ಇರುವ, ಸ್ವಲ್ಪ ದಪ್ಪಗಿದ್ದು ಚೂಪಾದ ಮತ್ತು ಉದ್ದನೆಯ ಮೊಳೆಯಲ್ಲಿ (ಸ್ಪಾಯಿಕ್) ಸೇರಿಸುತ್ತಿದ್ದ. ರಾತ್ರಿ ಹೋಟೆಲ್ ಬಂದ್ ಆದಮೇಲೆ ಮಾಲೀಕ ಆ ಬಿಲ್ಲೆಗಳನ್ನು ಎಣಿಸಿ ಒಟ್ಟು ಎಷ್ಟು ರೂಪಾಯಿಯ ವ್ಯವಹಾರವಾಗಿದೆ ಎಂಬುದನ್ನು ಲೆಕ್ಕ ಹಾಕಿ ಬಾರವಾಲಾನಿಂದ ಅಷ್ಟು ದುಡ್ಡನ್ನು ಪಡೆಯುತ್ತಿದ್ದ. ನಂತರ ಹತ್ತು ರೂಪಾಯಿಗೆ ಒಂದು ರೂಪಾಯಿಯಂತೆ ಬಾರವಾಲಾನಿಗೆ ಕಮಿಷನ್ ಕೊಡುತ್ತಿದ್ದ.

ಬಾಬು ಮಾಮಾ ಹೀಗೆ ಆ ಕಾಲದಲ್ಲಿ ದಿನಕ್ಕೆ ಬಹಳವೆಂದರೆ ಎರಡು ರೂಪಾಯಿ ಗಳಿಸುತ್ತಿದ್ದ. ಪ್ರತಿದಿನವೂ ಎರಡು ರೂಪಾಯಿ ಗಳಿಸುತ್ತಿದ್ದ ಎಂದು ಹೇಳುವ ಹಾಗಿರಲಿಲ್ಲ. ಒಂದು ವೇಳೆ ಪ್ರತಿದಿನ ಅಷ್ಟು ಗಳಿಸಿದ್ದರೆ ತಿಂಗಳಿಗೆ 60 ರೂಪಾಯಿ ಆಗುತ್ತಿತ್ತು. ಆ ಹಣ ಪ್ರಾಥಮಿಕ ಶಾಲಾ ಮಾಸ್ತರರ ಸಂಬಳಕ್ಕಿಂತ ಹೆಚ್ಚಾಗುತ್ತಿತ್ತು. ಆಗ ವಿಜಾಪುರದಲ್ಲಿ ಸಾವಿರ ರೂಪಾಯಿಗೆ ಒಂದು ಎಕರೆ ಭೂಮಿ ಸಿಗುತ್ತಿತ್ತು ಎಂಬುದನ್ನು ಹಿರಿಯರು ಮಾತನಾಡುವಾಗ ಕೇಳಿದ್ದೇನೆ.

ಸಿದ್ಧೇಶ್ವರ ಗುಡಿಯ ಎದುರಿಗೆ ಕೆಲವರು ತೆಂಗಿನಕಾಯಿ ಮತ್ತು ಊದುಬತ್ತಿ ಮಾರುತ್ತಿದ್ದರು. ಹೂಗಾರರೂ ಇದ್ದರೆಂದು ಕಾಣುತ್ತದೆ. ಗುಡಿಯ ಪಕ್ಕದಲ್ಲಿ ಬಾಳೆಹಣ್ಣು ಮಾರುತ್ತಿದ್ದ ಅಜ್ಜಿಯ ಬಳಿಗೆ ಹೋಗಿ ನಾಳೆ ಸರಸ್ವತಿ ಪೂಜೆ ಇರುವುದರ ಕುರಿತು ಹೇಳಿದೆ. ಕಲ್ಲಿನ ಪಾಟಿಯನ್ನು ತೊಂಡಿಕಾಯಿಯಿಂದ ಚೆನ್ನಾಗಿ ತಿಕ್ಕಿ ತೊಳೆದುಕೊಂಡು ಬಂದಿದ್ದೆ. ಅಜ್ಜಿ ತೆಂಗಿನಕಾಯಿ ಮಾರುವ ಶಂಕ್ರೆಪ್ಪನಿಗೆ ಕೂಗಿ ನನ್ನ ಪಾಟಿಯನ್ನು ಚೆಂದಗೊಳಿಸಲು ಹೇಳಿದಳು. ಆತ ಬಹಳ ಮುತುವರ್ಜಿ ವಹಿಸಿ ಪಾಟಿಕಟ್‌ಗೆ ಹೊಂದಿಕೊಂಡಂತೆ ಪೆನ್ಸಿಲ್‌ನಿಂದ ಬಹಳ ಸುಂದರವಾಗಿ ಶ್ರೀ ಶ್ರೀ ಎಂದು ಒಂದಕ್ಕೊಂದು ಜೋಡಿಸಿದಂತೆ ನಿರಂತರವಾಗಿ ಬರೆದ. ಒಟ್ಟು ನಾಲ್ಕು ಸಾಲುಗಳನ್ನು ಬರೆದ. ಆಯತಾಕಾರದ ಪಾಟಿಯ ಸುತ್ತ ಹಾರ ಹಾಕಿದಂತೆ ಅದು ಕಂಗೊಳಿಸುತ್ತಿತ್ತು. ಮಧ್ಯದಲ್ಲಿ ಏನು ಬರೆದನೊ ನೆನಪಾಗುತ್ತಿಲ್ಲ. ಲಿಂಗದ ಚಿತ್ರ ಬರೆದಿರಬಹುದು. ಅದೊಂದು ಅವಿಸ್ಮರಣೀಯ ಆನಂದ. ಮರುದಿನ ಬಹಳ ಖುಷಿಯಿಂದ ಸರಸ್ವತಿ ಪೂಜೆಗಾಗಿ ಆ ಸುಂದರಗೊಂಡ ಪಾಟಿಯೊಂದಿಗೆ ಶಾಲೆಗೆ ಹೋದೆ. ಅಲ್ಲಿ ನನ್ನ ಹಾಗೆ ಪೂಜೆಗಾಗಿ ಪಾಟಿ ತಂದವರು ಬಹಳ ಕಡಿಮೆ ಇದ್ದರು. ಬಹಳಷ್ಟು ವಿದ್ಯಾರ್ಥಿಗಳು ಸರಸ್ವತಿಯ ಚಿತ್ರವನ್ನು ಸಿಂಗಾರಗೊಳಿಸಿ ತಂದಿದ್ದರು. ನನಗೆ ನನ್ನ ಪಾಟಿಯ ಬಗ್ಗೆ ಅಭಿಮಾನವೆನಿಸಿದರೂ ಒಳಗೊಳಗೆ ದುಃಖವಾಯಿತು. ಮರುದಿನ ಅಜ್ಜಿಯ ಮುಂದೆ ನನ್ನ ನೋವನ್ನು ತೋಡಿಕೊಂಡೆ. ಮುಂದಿನ ವರ್ಷ ನೀನೂ ಹಾಗೆ ಮಾಡು ಎಂದಳು.

(ಬನಿಯನ್ ಬಾಕ್ಸ್ ನಲ್ಲಿ ಸರಸ್ವತಿ)

ಮರುವರ್ಷ ಮೂರನೇ ಇಯತ್ತೆಯಲ್ಲಿದ್ದಾಗ ಸರಸ್ವತಿ ಪೂಜೆಗೆ ಒಂದು ವಾರ ಮೊದಲೇ ಅಜ್ಜಿಗೆ ಹೇಳಿದೆ. ಅಜ್ಜಿ ಹಣ ಕೊಟ್ಟಳು. ಆ ಹಣದಿಂದ ಐದಾರು ವಸ್ತುಗಳನ್ನು ಕೊಳ್ಳಬೇಕಿತ್ತು. ಮೊದಲನೆಯದಾಗಿ ರೆಡಿಮೇಡ್ ಶಾಪಿಗೆ ಹೋಗಿ ಒಂದಾಣೆ ಕೊಟ್ಟು ಗಟ್ಟಿಯಾಗಿರುವ ಖಾಲಿ ಬನಿಯನ್ ಬಾಕ್ಸ್ ಕೊಳ್ಳಬೇಕು. ನಂತರ ಪಾರದರ್ಶಕ ಪ್ಲ್ಯಾಸ್ಟಿಕ್ ಹಾಳೆ, ಬಣ್ಣ ಬಣ್ಣದ ಬೇಗಡೆ, ಟಾರ್ಚ್‌ಗೆ ಹಾಕುವ ಬಲ್ಬು, ಅದರ ಹೋಲ್ಡರ್, ವಾಯರ್, ಎರಡು ಷೆಲ್, ಅಂಟು ಮುಂತಾದವುಗಳನ್ನು ಕೊಂಡ ನಂತರ ಸುಂದರವಾದ ಸರಸ್ವತಿ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಹೀಗೆಲ್ಲ ಕೊಂಡು ಮನೆಗೆ ಬಂದು ಸರಸ್ವತಿಯನ್ನು ಅಲಂಕರಿಸುವಲ್ಲಿ ನಿಷ್ಣಾತರಾಗಿರುವ ಪರಿಚಿತ ಯುವಕರನ್ನು ಹುಡುಕಿಕೊಂಡು ಹೊರಟೆ. ಹೀಗೊಬ್ಬ ಪರಿಚಿತ ವ್ಯಕ್ತಿ ಸಿಕ್ಕಿದ. ಬನಿಯನ್ ಬಾಕ್ಸ್ ಮುಚ್ಚಳವನ್ನು ಸುಂದರ ಕಮಾನಿನ ಹಾಗೆ ಕೊರೆದ. ಒಳಗಿಂದ ಪಾರದರ್ಶಕ ಪ್ಲಾಸ್ಟಿಕ್ ಹಾಳೆಯನ್ನು ಅಂಟಿಸಿದ. ಮುಚ್ಚಳದ ಮೇಲೆ ಬೇಗಡೆ ಅಂಟಿಸಿದ. ಇನ್ನೊಂದು ಬಣ್ಣದ ಬೇಗಡೆ ಕತ್ತರಿಸಿ ಹೂಗಳ ರೂಪ ಕೊಟ್ಟು ಮುಚ್ಚಳದ ನಾಲ್ಕೂ ಮೂಲೆಗಳನ್ನು ಸಿಂಗರಿಸಿದ. ಬನಿಯನ್ ಬಾಕ್ಸ್ ಒಳಗಡೆ ಸರಸ್ವತಿಯ ಚಿತ್ರ ಅಂಟಿಸಿದ. ಆ ರಟ್ಟಿನ ಬಾಕ್ಸ್ ಮೇಲೆ ತೂತು ಕೊರೆದು ಎರಡು ವಾಯರ್ ಒಳಗೆ ಬಿಟ್ಟ. ನಂತರ ಆ ವಾಯರ್‌ಗೆ ಹೋಲ್ಡರ್ ಕೂಡಿಸಿ ಅದರೊಳಗೆ ಚಿಕ್ಕ ಬಲ್ಬ್ ಫಿಕ್ಸ್ ಮಾಡಿದ. ಎರಡು ಬ್ಯಾಟರಿ ಶೆಲ್‌ಗಳನ್ನು ಒಂದರ ಮುಂದೆ ಒಂದು ಇಟ್ಟು ಒಂದು ವಾಯರ್ ತುದಿಯನ್ನು ಮುಂದೆ ಮತ್ತು ಇನ್ನೊಂದು ವಾಯರ್ ತುದಿಯನ್ನು ಹಿಂದೆ ರಬ್ಬರ್ ಬ್ಯಾಂಡ್ ಮೂಲಕ ಅಂಟಿಕೊಳ್ಳುವಂತೆ ಮಾಡಿದ. ಆಗ ಒಳಗೆ ಬಲ್ಬ್ ಹತ್ತಿ ಸರಸ್ವತಿ ಹೊಳೆಯ ತೊಡಗಿದಳು. ಆ ಆನಂದಕ್ಕೆ ಪಾರವೇ ಇಲ್ಲ. ನೋಡಬೇಕೆನಿಸಿದಾಗಲೆಲ್ಲ ಬ್ಯಾಟರಿಗೆ ವಾಯರ್ ಅಂಟಿಸಿ ನೋಡುತ್ತಿದ್ದೆ.

ನಾಗರಪಂಚಮಿ (ಶ್ರಾವಣಶುದ್ಧ ಪಂಚಮಿ)ಯ ಹಿಂದಿನ ದಿನ ಸರಸ್ವತಿ ಪೂಜೆ. ಆ ದಿನಕ್ಕಾಗಿ ಕಾಯುವುದೇ ಸೊಗಸು. ಬೆಳಿಗ್ಗೆ ಎದ್ದು ಶುಚಿರ್ಭೂತನಾದೆ. ಪೂಜೆಗಾಗಿ ಹಾರ ಊದಬತ್ತಿ ಜೊತೆ ಅರಳು (ಅಳ್ಳು), ಉಂಡಿ, ಕೊಬ್ಬರಿ ತಿಗರಿ ಮುಂತಾದವುಗಳನ್ನು ತೆಗೆದುಕೊಂಡು ಸರಸ್ವತಿಯನ್ನು ಸಿಂಗರಿಸಿದ ಆ ಬಾಕ್ಸನ್ನು ಒಂದು ಕೈಚೀಲದಲ್ಲಿ ಜೋಪಾನವಾಗಿ ಇಟ್ಟುಕೊಂಡು ಸಹಪಾಠಿಗಳ ಜೊತೆ ಶಾಲೆಗೆ ಹೋದೆ. ನಾಗರಪಂಚಮಿ ಹಬ್ಬದಲ್ಲಿ ಕೊಬ್ಬರಿ ಬಟ್ಟಲನ್ನು ತಿರುಗಿಸುವುದು ವಿಶೇಷವಾಗಿತ್ತು.

(ಕೊಬ್ಬರಿ ತಿಗರಿ)

ನಮ್ಮ ಶಾಲಾ ಕೋಣೆಯ ಗೋಡೆಗೆ ಮುಖ ಮಾಡಿ ಕುಳಿತು, ಸರಸ್ವತಿಯ ಬಾಕ್ಸನ್ನು ಗೋಡೆಗೆ ತಾಗಿಸಿಟ್ಟು ಅದಕ್ಕೆ ಹಾರ ಹಾಕಿದ ನಂತರ ಊದಬತ್ತಿ ಹಚ್ಚುತ್ತಿದ್ದೆವು.

ಹೀಗೆ ಪ್ರತಿಯೊಬ್ಬ ವಿದ್ಯಾರ್ಥಿ ವೈವಿಧ್ಯಮಯವಾಗಿ ಬನಿಯನ್ ಬಾಕ್ಸ್‌ಗಳಲ್ಲಿ ಸರಸ್ವತಿಯ ಚಿತ್ರವಿಟ್ಟು ತನ್ನಿಚ್ಛೆಯಂತೆ ಸಿಂಗರಿಸಿ ಖುಷಿ ಪಡುತ್ತಿದ್ದ. ತುಂಬ ಶ್ರಮವಹಿಸಿ ತಯಾರಿಸಿದ ಈ ಸುಂದರ ‘ಸರಸ್ವತೀಮಂದಿರ’ಗಳನ್ನು ಬೇರೆ ವಿದ್ಯಾರ್ಥಿಗಳು ನೋಡುವುದು ಕಡಿಮೆ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸಿಂಗರಿಸಿದ ಸರಸ್ವತಿಯನ್ನು ತಾನೇ ನೋಡುತ್ತ, ನೋಡುತ್ತ ಆನಂದತುಂದಿಲನಾಗಿ ತನ್ನ ಮತ್ತು ಸರಸ್ವತಿಯ ಮಧ್ಯೆ ಯಾರೂ ಇಲ್ಲದ ಹಾಗೆ ತದೇಕಚಿತ್ತನಾಗಿರುತ್ತಿದ್ದ. ಆ ಕ್ಷಣದ ಆನಂದವೇ ಆನಂದ. ಇದು ಒಂದುರೀತಿಯ ಲಿಂಗಾಂಗಸಾಮರಸ್ಯದಂತೆ! ಇದೊಂದು ಅಪೂರ್ವ ಸನ್ನಿವೇಶ.

ಮಾಸ್ತರರು ಹೇಳಿದ ಹಾಗೆ ಎಲ್ಲರೂ “ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ” ಎಂದು ಸರಸ್ವತಿಯ ಪ್ರಾರ್ಥನೆ ಮಾಡುತ್ತಿದ್ದೆವು. ಎಲ್ಲ ವಿದ್ಯಾರ್ಥಿಗಳು ಸರಸ್ವತಿಯ ಪೂಜಾರಿಗಳೇ ಆಗಿರುತ್ತಿದ್ದರು. ಇಲ್ಲಿ ಮಧ್ಯವರ್ತಿಗಳಿಗೆ ಸ್ಥಾನವಿಲ್ಲ. ಅಳ್ಳು, ಉಂಡಿ, ಕರ್ಚಿಕಾಯಿ ಮುಂತಾದವುಗಳನ್ನು ಶಿಕ್ಷಕರು ಮೊದಲು ಮಾಡಿ ಎಲ್ಲರೂ ಸ್ವೀಕರಿಸುತ್ತಿದ್ದರು.

ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿಯಲ್ಲಿ ಉಂಡಿಗಳದೇ ಒಂದು ಕಥೆ. ನಾವಿರುವ ನಾವಿಗಲ್ಲಿ ಭಾಗದಲ್ಲಿ ನಮ್ಮದೊಂದೇ ಮುಸ್ಲಿಮರ ಮನೆ ಇತ್ತು. ಉಳಿದವರು ಮರಾಠಿ ಮಾತೃಭಾಷೆಯ ನಾವಿ (ಹಡಪದ) ಸಮಾಜದವರು, ಕನ್ನಡ ಮಾತನಾಡುವ ಒಂದಿಬ್ಬರು ಹಡಪದ ಸಮಾಜದವರು, ಗಾಣಿಗರು, ಇತರೆ ಲಿಂಗಾಯತರು, ಸಜ್ಜನ ಸರ್ ಮನೆ ಎದುರಿಗಿನ ಹರಿಜನ ಬೋರ್ಡಿಂಗ್‌ನಲ್ಲಿ ಇದ್ದ ಜೋಶಿ ಅಣ್ಣಾ ಅವರ ಬ್ರಾಹ್ಮಣರ ಮನೆ, ಹರಿಜನ ಬೋರ್ಡಿಂಗ್ ಪಕ್ಕದಲ್ಲಿ ಪತ್ತಾರರ ಮನೆ. ಪಕ್ಕದಲ್ಲೇ ಇದ್ದ ಅವರದೇ ಇನ್ನೊಂದು ಮೂರಂಕಣದ ಮನೆಯಲ್ಲಿ ಅನೇಕರು ಬಾಡಿಗೆಗೆ ಬಂದು ಹೋಗುತ್ತಿದ್ದರು. ಎದುರುಗಡೆ ಅವರದೇ ಒಂದು ಚಿಕ್ಕ ಕಿರಾಣಿ ಅಂಗಡಿ ಇತ್ತು. ಅದನ್ನು ಕೂಡ ಬಾಡಿಗೆಗೆ ಕೊಟ್ಟಿದ್ದರು. ಅದರ ಹಿಂದೆ ಎರಡಂಕಣದ ಕೋಣೆ ಇತ್ತು. ಮೊಘಲಾಯಿ (ರಾಯಚೂರು ಜಿಲ್ಲೆ) ಕಡೆಯಿಂದ ಬಂದ ತಳಮಾಡುವ ಹೆಣ್ಣುಮಕ್ಕಳು ಮತ್ತು ಹಮಾಲಿ ಮುಂತಾದ ಕಾಯಕ ಮಾಡುವವರು ಕೂಡ ನಾವಿಗಲ್ಲಿಯಲ್ಲಿ ಇದ್ದರು. (ತಳ ಮಾಡುವವರು ಎಂದರೆ ಅಡತಿ ಅಂಗಡಿ, ವಖಾರ ಮತ್ತು ಅಂಗಡಿಯ ಅಂಗಳದಲ್ಲಿ ಆಹಾರಧಾನ್ಯಗಳನ್ನು ಪರೀಕ್ಷಿಸಲು ವ್ಯಾಪಾರಿಗಳು ಮತ್ತು ಅಡತಿ ಅಂಗಡಿಯ ಗುಮಾಸ್ತರು ಕಬ್ಬಿಣದ ಬಂಬು ಹಾಕಿ ಚೀಲದಿಂದ ಒಂದಿಷ್ಟು ಧಾನ್ಯ ತೆಗೆದು ನೋಡಿದ ನಂತರ ಕೆಳಗೆ ಚೆಲ್ಲುತ್ತಿದ್ದರು. ಹಮಾಲರು ಹುಕ್ ಹಾಕಿ ಚೀಲವನ್ನು ಎತ್ತುವಾಗ ಕೂಡ ಕಾಳುಗಳು ಕೆಳಗೆ ಬೀಳುತ್ತಿದ್ದವು. ತಮ್ಮ ಅಡತಿ ಅಂಗಡಿಯಲ್ಲಿ ತಳ ಮಾಡುವ ಹೆಣ್ಣುಮಕ್ಕಳಿಗೆ ಮಾಲಕರು ಕೂಲಿ ಕೊಡುತ್ತಿರಲಿಲ್ಲ. ಆದರೆ ಅವರು ಅಲ್ಲಿ ಬಿದ್ದ ಆಹಾರಧಾನ್ಯಗಳನ್ನು ಬಳಕೊಂಡು ಒಯ್ಯುವ ಹಕ್ಕನ್ನು ಪಡೆದಿದ್ದರು. ವಖಾರ ಸಮೇತ ಇಡೀ ಅಂಗಡಿಯನ್ನು ಕಸಗುಡಿಸಿ ಸ್ವಚ್ಛವಾಗಿಡುವ ಜವಾಬ್ದಾರಿ ಅವರದಾಗಿತ್ತು. ತಳಮಾಡುವವರು ಹೀಗೆ ಬಳಿದುಕೊಂಡ ದವಸಧಾನ್ಯಗಳನ್ನು ಚುಂಗಡಿ ಅಂಗಡಿಯವರಿಗೆ ಮಾರುತ್ತಿದ್ದರು. ಇಂಥ ಮಿಶ್ರಣಗೊಂಡ ಧಾನ್ಯಗಳನ್ನು ಕೊಳ್ಳುವವರಿಗೆ ಚುಂಗಡಿ ಅಂಗಡಿಯವರು ಎಂದು ಹೇಳುತ್ತಾರೆ. ಅವರು ಇಂಥ ಧಾನ್ಯಗಳನ್ನು ಕೊಂಡ ನಂತರ ಎಲ್ಲ ಕಾಳುಗಳನ್ನು ಬೇರ್ಪಡಿಸಿ ಮಾರುತ್ತಿದ್ದರು. ಹೀಗೆ ರೈತರ ಧಾನ್ಯದ ಮೇಲೆ ಅನೇಕ ಕುಟುಂಬಗಳು ಬದುಕುತ್ತವೆ.)

(ಲಿಂಗದ ಗುಡಿಗೆ ಹೋಗುವ ದಾರಿ. ನನ್ನ ಬಾಲ್ಯದಲ್ಲಿ ಕೋಟೆ ಗೋಡೆ ಒಡೆದು ಈ ರಸ್ತೆ ನಿರ್ಮಿಸಿದ್ದಾರೆ. ಪಕ್ಕದಲ್ಲಿ ಸ್ವಲ್ಪದೂರ ಹೋದರೆ ಕೋಟೆ ಒಡೆದು ಬೆಳೆಸಿದ ಇನ್ನೊಂದು ದಾರಿಯಿದೆ. ಅದು ಬಿ.ಎಲ್.ಡಿ.ಇ. ಆಸ್ಪತ್ರೆಗೆ ಹೋಗುತ್ತದೆ. ನಾನು ಜನಿಸುವ ಮೊದಲೇ ಅಲ್ಲಿ ಕೋಟೆ ಗೋಡೆ ಒಡೆದು ದಾರಿಯನ್ನು ಬೆಳೆಸಲಾಗಿದೆ.)

ನಾವಿಗಲ್ಲಿಯ ಹೆಣ್ಣುಮಕ್ಕಳಿಗೆ ನನ್ನ ತಾಯಿ ಅಚ್ಚುಮೆಚ್ಚಿನವಳಾಗಿದ್ದಳು. ನಾವಿಗಲ್ಲಿ ಬಾಡಿಗೆ ಮನೆಯಲ್ಲಿ ಕಾಲು ಶತಮಾನದಷ್ಟು ದೀರ್ಘ ಅವಧಿಯವರೆಗೆ ಇದ್ದೆವು.

ನಾವು ನಾಗರಪಂಚಮಿ ಹಬ್ಬ ಆಚರಿಸುವುದಿಲ್ಲ ಎಂಬ ಕಾರಣಕ್ಕೆ ಬಹಳಷ್ಟು ಮಹಿಳೆಯರು ವಿಧವಿಧವಾದ ಉಂಡಿ, ಕರ್ಚಿಕಾಯಿ, ಚಕ್ಕುಲಿ, ಅಳ್ಳು ಮುಂತಾದವುಗಳನ್ನು ತಂದು ಕೊಡುತ್ತಿದ್ದರು. ನನ್ನ ತಾಯಿ ಅವರ ಎಲ್ಲ ಪ್ಲೇಟುಗಳನ್ನು ಜೋಡಿಸಿಡುತ್ತಿದ್ದಳು. ನಂತರ ಹೆಸರುಂಡಿ ಮಾಡಿ ಎಲ್ಲರ ಪ್ಲೇಟುಗಳಲ್ಲಿ ಹಾಕಿ ಕೊಡುತ್ತಿದ್ದಳು. (ಬಡವರಿಗೆ ಬಗೆಬಗೆಯ ಸಿಹಿ ಪದಾರ್ಥಗಳನ್ನು ತಯಾರಿಸುವ ಶಕ್ತಿ ಇಲ್ಲದಾಗ ಆ ಕಾಲದಲ್ಲಿ ಸೋವಿ ಬೆಲೆಯಲ್ಲಿ ಸಿಗುತ್ತಿದ್ದ ಹೆಸರು ಸಹಾಯಕ್ಕೆ ಬರುತ್ತಿತ್ತು.)

ಎಲ್ಲರೂ ಕೊಟ್ಟ ಬೇಸನ್, ಸೇಂಗಾ, ಎಳ್ಳು, ಬೂಂದೆ ಮುಂತಾದ ಉಂಡಿಗಳನ್ನು ಅವ್ವ ವಿಂಗಡಿಸಿ ಬಿಸ್ಕಿಟ್ ಡಬ್ಬಗಳಲ್ಲಿ ತುಂಬಿ ನಾಗಂದಿಗೆಯ ಮೇಲೆ ಇಡುತ್ತಿದ್ದಳು. ಅಳ್ಳನ್ನು ಗೋಣಿಚೀಲದಲ್ಲಿ ತುಂಬಿ ಇಡಲಾಗುತ್ತಿತ್ತು.

ಎಲ್ಲರ ಮನೆಯ ನಾಗರಪಂಚಮಿ ಉಂಡಿಗಳು ಎಂಟ್ಹತ್ತು ದಿನಗಳಲ್ಲಿ ಮುಗಿದರೂ ನಮ್ಮ ಮನೆಯಲ್ಲಿ ಮುಗಿಯುತ್ತಿರಲಿಲ್ಲ. ಗಲ್ಲಿಯವರೆಲ್ಲ ಕೊಟ್ಟ ಉಂಡಿಗಳು ತಿಂಗಳುಗಟ್ಟಲೆ ಇರುತ್ತಿದ್ದವು. ನಾನು ಶಾಲೆಯಿಂದ ಮಧ್ಯಾಹ್ನ ಊಟಕ್ಕೆ ಬಂದಾಗ ಚಡ್ಡಿಯ ಎರಡೂ ಕಿಸೆಗಳಲ್ಲಿ ಉಂಡಿಗಳನ್ನು ಇಟ್ಟುಕೊಂಡು ಹೋಗಿ ಗೆಳೆಯರಿಗೆ ಹಂಚುತ್ತಿದ್ದೆ.

(ಚಿತ್ರಗಳು: ಸುನೀಲಕುಮಾರ ಸುಧಾಕರ)