ಬಯಲಾಟದಲ್ಲಿ ದ್ರೌಪದಿ ಪಾತ್ರದ ಗಣಪು ಬಂದು ಒಂದಿಷ್ಟು ಕುಣಿದು ಮಾತನಾಡುವಾಗ ಆತನ ಧ್ವನಿ ಒಡೆದದ್ದು ಗೊತ್ತಾಯಿತು. ರಂಗತಾಲೀಮದಲ್ಲಿ ಮಾತಾಡಿ ಮಾತಾಡಿ ಆತ ಧ್ವನಿ ಕಳೆದುಕೊಂಡಿದ್ದಾನೆಂದು ಅಜ್ಜಿ ನನಗೆ ಹೇಳಿದಳು. ಅಜ್ಜಿಯ ಲಕ್ಷ್ಯ ಹೆಚ್ಚಾಗಿ ಅವನಿಗೆ ಹಾರ ಹಾಕಿ ಒಂದು ರೂಪಾಯಿ ಬಹುಮಾನ ಕೊಡುವುದರ ಕಡೆಗೆ ಇತ್ತು. ಎರಡನೇ ಸಲ ರಂಗದ ಮೇಲೆ ಬಂದಾಗ ಹಾರ ಹಾಕಿ ಬಹುಮಾನ ಕೊಡುವುದಕ್ಕಾಗಿ ಪಕ್ಕದಲ್ಲಿ ಕುಳಿತ ಒಬ್ಬ ದೊಡ್ಡ ಹುಡುಗನನ್ನು ಕಳಿಸುವ ವಿಚಾರ ಮಾಡಿದಳು. ಆದರೆ ಕಲಾವಿದರನ್ನು ಗೌರವಿಸುವ ಅಜ್ಜಿಯ ಆಸೆ ನೆರವೇರಲಿಲ್ಲ.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ನಾಲ್ಕನೆಯ ಕಂತು

ಊರ ಜನರು ನನ್ನ ಅಜ್ಜಿಗೆ ಬಹಳ ಮರ್ಯಾದೆ ಕೊಡುತ್ತಿದ್ದರು. ಯಾವುದೇ ಸಮಸ್ಯೆಯನ್ನು ಅವಳೊಟ್ಟಿಗೆ ಚರ್ಚಿಸುತ್ತಿದ್ದರು. ನಾವಿದ್ದ ಮನೆಗೆ ಕೂಡ ಬಾಡಿಗೆ ಇರಲಿಲ್ಲ. ಆಗ ಈಗಿನಂತೆ ಹಳ್ಳಿಗಳಲ್ಲಿ ಮನೆ ಬಾಡಿಗೆ ಕೊಡುವುದು ಇರಲಿಲ್ಲವೆಂದು ಕಾಣುತ್ತದೆ. ತಮಗೆ ಬೇಕಾದವರಿಗೆ ಹೆಚ್ಚಿಗಿರುವ ಖಾಲಿ ಮನೆಯನ್ನು ವಾಸಕ್ಕೆ ಬಿಟ್ಟುಕೊಡುತ್ತಿದ್ದರು.

ವಿವಿಧ ಕಡೆಗಳಂತೆ ಅಲ್ಲೀಬಾದಿಯಲ್ಲೂ ಜಾತ್ರೆ, ಉರುಸ್(ಸೂಫಿ ಸಂತರ ಪುಣ್ಯತಿಥಿ) ಮತ್ತು ಮೊಹರಂ(ಅಲಾಬ್) ಮುಂತಾದ ಹಬ್ಬಗಳನ್ನು ಎಲ್ಲರು ಕೂಡೇ ಆಚರಿಸುತ್ತಿದ್ದರು. (ಮೊಹರಂ ದುಃಖದ ಆಚರಣೆಯಾದರೂ ದೇಶದಲ್ಲಿ ಹಬ್ಬವಾಗಿ ಪರಿಣಮಿಸಿದೆ.) ಸಾಂಸ್ಕೃತಿಕ ಜೀವನದಲ್ಲಿ ಜಾತಿಗಿಂತ ನೀತಿಗೇ ಹೆಚ್ಚಿನ ಬೆಲೆ ಇತ್ತು. ಇಡೀ ಹಳ್ಳಿಯಲ್ಲಿ ನಮ್ಮ ಮನೆ ಹಿಡಿದು ಮುಸ್ಲಿಮರ ಮೂರು ಮನೆಗಳಿದ್ದಿರಬಹುದು. ಅದರಲ್ಲೊಂದು ಏಕತಾರ್ ಸಾಹೇಬ ದರ್ಗಾದ ಸಜ್ಜಾದಾ ನಶೀನ ಅವರ ಮನೆತನ.

ಬೀರೇಶ್ವರ (ಬೀರಲಿಂಗೇಶ್ವರ) ಗುಡಿ ಅಲ್ಲೀಬಾದಿಯಲ್ಲಿ ಎದ್ದು ಕಾಣುವ ಗುಡಿ. ಜಾತ್ರೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಹಾಲುಮತದವರ ಪಲ್ಲಕ್ಕಿಗಳ ಮೆರವಣಿಗೆ ಮತ್ತು ಡೊಳ್ಳು ಕುಣಿತ ಆಕರ್ಷಣೀಯವಾಗಿರುತ್ತಿದ್ದವು. ‘ನಮ್ಮಯ ದೇವರು ಬಂದಾವ ಬನ್ನಿರೋ’ ಎಂಬ ಸಾಲಿನಿಂದ ಅವರ ಡೊಳ್ಳಿನ ಹಾಡುಗಳು ಪ್ರಾರಂಭವಾಗುತ್ತಿದ್ದವು. ಆ ಹಾಡುಗಳನ್ನು ತನ್ಮಯತೆಯಿಂದ ಕೇಳುತ್ತಿದ್ದೆ. ಬೀರೇಶ್ವರ ಜಾತ್ರೆಯಲ್ಲಿ ಯಾವುದೇ ಪ್ರಾಣಿ ಪಕ್ಷಿಗಳ ಬಲಿ ಕೊಡುವ ಸಂಪ್ರದಾಯವಿಲ್ಲ.

(ಬೀರಲಿಂಗೇಶ್ವರ ಗುಡಿ)

ದುರ್ಗವ್ವನ ಜಾತ್ರೆಯಲ್ಲಿ ಕೋಣ ಬಲಿ ಕೊಡುವ ಸಂಪ್ರದಾಯವಿತ್ತು. ಅಂಥ ಭಯಂಕರ ದೃಶ್ಯವನ್ನು ಒಂದು ಸಲ ದೂರದಿಂದ ಎತ್ತರದಲ್ಲಿ ನಿಂತು ನೋಡಿದ್ದೆ. ಜನರ ಗದ್ದಲದಲ್ಲಿ ಬಲಿ ಕೊಡುವ ದೃಶ್ಯ ಕಾಣದಿದ್ದರೂ ಕಲ್ಪನೆಯಿಂದಲೆ ಬೆವತಿದ್ದೆ. ಜಾತ್ರೆಯಲ್ಲಿ ಇಡೀ ಹಳ್ಳಿಯ ಜನ ಸೇರುತ್ತಿತ್ತು. ವಾದ್ಯಗಳ ಸಪ್ಪಳ ಕೂಡ ಜೋರಾಗಿರುತ್ತಿತ್ತು. ಕೋಣ ಬಲಿ ಕೊಡುವಾತನ ಆವೇಶ ಹೇಳತೀರದಷ್ಟಿರುತ್ತಿತ್ತು. ಅದನ್ನು ನೋಡಿ ಜನ ಭಯಭಕ್ತಿಯಿಂದ ನಿಲ್ಲುತ್ತಿದ್ದರು. ಬಲಿ ಕೊಡುವ ಸಂದರ್ಭದಲ್ಲಿ ಅವನ ಮುಖಚರ್ಯೆಯನ್ನು ನೋಡಲಿಕ್ಕಾಗಲಿಲ್ಲ. ಆ ಸಂದರ್ಭದಲ್ಲಿ ಮಕ್ಕಳನ್ನು ಸಮೀಪ ಬರಕೊಡುತ್ತಿರಲಿಲ್ಲ. ರಾತ್ರಿ ಕೋಣ ಬಲಿಯನ್ನು ಕಲ್ಪಿಸಿಕೊಳ್ಳುತ್ತ ಭಯಪಟ್ಟು ಜ್ವರ ಬಂತು. ಬೇಡ ಎಂದರೂ ಅಲ್ಲಿ ಹೋಗಿ ಏಕೆ ನಿಂತಿದ್ದಿ? ಎಂದು ಅಜ್ಜಿ ಬೇಸರಪಟ್ಟುಕೊಂಡಳು.

ಏಕತಾರಸಾಬನ ಉರುಸ್ ಭಕ್ತಿಭಾವದಿಂದ ನೆರವೇರುತ್ತಿತ್ತು. ಅಲ್ಲೀಬಾದಿ ಜನರಲ್ಲದೆ ಸುತ್ತಮುತ್ತಲಿನ ಹಳ್ಳಿಗಳ ಎಲ್ಲ ಜಾತಿಗಳ ಜನರು ಏಕತಾರಸಾಬನ ದರ್ಗಾಕ್ಕೆ ನಡೆದುಕೊಳ್ಳುತ್ತಿದ್ದರು. ಆ ಸೂಫಿ ಸಂತನ ಹೆಸರು ಏನಿತ್ತೋ ನನಗೆ ಗೊತ್ತಿಲ್ಲ. ಎಲ್ಲರೂ ಏಕತಾರಸಾಬ ಎಂದೇ ಕರೆಯುತ್ತಿದ್ದರು. ಆ ಸೂಫಿಯ ಕುರಿತು ತಿಳಿದುಕೊಳ್ಳುವ ಬಯಕೆ ಇಂದಿಗೂ ಇದೆ. ಏಕತಾರಸಾಬ ಎಂದು ಕರೆಯಬೇಕಾದರೆ ಆತ ಏಕತಾರಿ ನುಡಿಸುವ ಅನುಭಾವಿ ಕವಿಯಾಗಿದ್ದಿರಬೇಕು. ಆತ ಬರೆದ ಅನುಭಾವದ ಹಾಡುಗಳನ್ನು ಯಾರಾದರೂ ಹಾಡುತ್ತ ಬಂದಿದ್ದರೆ ಆತನೂ ಇನ್ನೊಬ್ಬ ಶರೀಫಜ್ಜ ಆಗಿ ಜನಮನವನ್ನು ಸೂರೆಗೊಳ್ಳುತ್ತಿದ್ದ ಎಂದು ಅನಿಸುತ್ತಿದೆ.

(ಏಕತಾರಸಾಬ್ ದರ್ಗಾ)

ನಾನು ಸುಮಾರು ನಾಲ್ಕು ವರ್ಷದವನಿರಬೇಕು. ಆಗ ಒಂದು ಸಲ ಹಳ್ಳಿಯ ಜಾತ್ರೆಯೊಂದರ ಸಂದರ್ಭದಲ್ಲಿ ಬಯಲಾಟ ಇಟ್ಟಿದ್ದರು. ಅಂದು ಅಜ್ಜಿ ಹೂವಿನ ಹಾರವೊಂದನ್ನು ತರಿಸಿದ್ದಳು. ಆ ಹಾರ ಅಂದು ರಾತ್ರಿ ನಡೆಯುವ ಬಯಲಾಟದಲ್ಲಿ ದ್ರೌಪದಿಯ ಸಲುವಾಗಿ ಇತ್ತು. ಬಹುಮಾನ ಕೊಡಲು ಒಂದು ರೂಪಾಯಿಯನ್ನು ಕೂಡ ತೆಗೆದಿಟ್ಟಿದ್ದಳು. ದ್ರೌಪದಿಯ ಪಾತ್ರ ಮಾಡಿದ ಗಣಪು ನಮ್ಮ ಮನೆಯ ಎದುರುಗಡೆ ಮನೆಯವನು. ಆ ಮನೆಯವರ ಜೊತೆ ನಮಗೆ ಬಹಳ ಸಂಬಂಧ ಇತ್ತು.

ಸಂಜೆಯಾಗುವುದರೊಳಗಾಗಿ ಡಾಂಬರಿನ ಪಿಪಾಯಿಗಳ ಆಧಾರದ ಮೇಲೆ ಫಳಿಗಳನ್ನು ಜೋಡಿಸಿ ಬಯಲಾಟದ ಅಟ್ಟವನ್ನು ನಿರ್ಮಿಸಿದ್ದರು. ನಾಲ್ಕೂ ಮೂಲೆಗೆ ಎತ್ತಿನ ಗಾಡಿಯ ಗಾಲಿಗಳನ್ನು ಅಟ್ಟದ ಭದ್ರತೆಗಾಗಿ ಜೋಡಿಸಿದ್ದರು. ಅಟ್ಟವನ್ನು ಬಣ್ಣ ಬಣ್ಣದ ಪರದೆಗಳಿಂದ ಅಲಂಕರಿಸಿದ್ದರಿಂದ ಅದೊಂದು ದೊಡ್ಡ ರಥದ ಹಾಗೆ ಕಾಣುತ್ತಿತ್ತು. ಅಂಥ ಅಟ್ಟವನ್ನು ನೋಡುವುದು ಕೂಡ ಆನಂದಮಯವಾಗಿತ್ತು. ಸೂರ್ಯ ಮುಳುಗಿದ ಕೂಡಲೆ ಬೇಗನೆ ಊಟ ಮಾಡಿ ಕೌದಿಯನ್ನು ತೆಗೆದುಕೊಂಡು ಜಾಗ ಹಿಡಿಯುವುದಕ್ಕಾಗಿ ಅಟ್ಟದ ಮುಂದೆ ಹೋಗಿ ಕುಳಿತು ಓರಿಗೆಯ ಗೆಳೆಯರೊಂದಿಗೆ ನಗುತ್ತಾ. ಆಟವಾಡುತ್ತಾ, ಹುಡದಿ ಹಾಕುತ್ತ ಕೊನೆಗೆ ಕೌದಿಯನ್ನು ತಲೆದಿಂಬು ಮಾಡಿ ಅಟ್ಟದ ಮುಂದೆಯೆ ನಿದ್ದೆಹೋದೆ. ರಾತ್ರಿ ಬಹಳ ಹೊತ್ತಿನ ಮೇಲೆ ನಾಂದಿಪದ ಶುರುವಾಯಿತು. ಅಜ್ಜಿ ಬಂದು ಎಬ್ಬಿಸಿದಳು. ಪೇಟಿ, ಚಳ್ಳಂ, ತಬಲಾದವರು ಕ್ರಿಯಾಶೀಲರಾಗಿದ್ದರು. ಪಾತ್ರದವರ ಕುಣಿತ, ಮೇಳದವರ ಹಾಡುಗಳು, ಉದ್ದನೆಯ ಕೂದಲು ಬಿಟ್ಟು ಮೇಲೆ ರಟ್ಟಿನ ಕರಿಟೊಪ್ಪಿಗೆ ಹಾಕಿಕೊಂಡ ಪೇಟಿ ಮಾಸ್ತರನ ತಲ್ಲೀನತೆ ಹೀಗೆ ಇಡೀ ಅಟ್ಟ ಗ್ಯಾಸುಗಳ ಬೆಳಕಿನಲ್ಲಿ ನವನವೋನ್ಮೇಷಶಾಲಿನಿ ಆಗಿತ್ತು.

(ದುರ್ಗವ್ವ ದ್ಯಾಮವ್ವರ ಗುಡಿ)

ಪೇಟಿ ಮಾಸ್ತರನ ಪೇಟಿಗೆ ಕಾಲಪೇಟಿ ಎನ್ನುತ್ತಾರೆ. ಆತ ಎತ್ತರದ ಆಸನದ ಮೇಲೆ ಕುಳಿತಿರುತ್ತಾನೆ. ಕಾಲುಗಳು ಎರಡು ಪ್ಯಾಡ್(ಕಾಲಬಾತೆ)ಗಳ ಮೇಲೆ ಇರುತ್ತವೆ. ಅವುಗಳನ್ನು ಒತ್ತಿದಾಗ ಮೇಲೆ ಇರುವ ಪೇಟಿಯ (ಹಾರ್ಮೋನಿಯಂ) ಧ್ವನಿಪಟಲಪಟ್ಟಿಗಳಿಗೆ ಕೊಳವೆ ಮೂಲಕ ಗಾಳಿಯ ಪೂರೈಕೆ ಆಗುತ್ತದೆ. ಕರಿ ಪಟ್ಟಿಗಳು ಮೇಲೆ ಇದ್ದು ಅವುಗಳ ಕೆಳಗೆ ಬಿಳಿ ಪಟ್ಟಿಗಳಿರುತ್ತವೆ. ಇವುಗಳಿಗೆ ಮಣಿಗಳೆಂದು ಕರೆಯುತ್ತಾರೆ. ಸೂರ್ (ಸ್ವರ) ಹಿಡಿಯುವುದರಿಂದ ಸೂರ್ ಎಂದೂ ಹೇಳುತ್ತಾರೆ. ಪೇಟಿ ಮಾಸ್ತರ ಕುರ್ಚಿಯ ಮೇಲೆ ಕುಳಿತಾಗ ಹಾರ್ಮೋನಿಯಂ ಆತನ ಹೊಟ್ಟೆಯ ಎದುರಿಗೆ ಇರುವುದರಿಂದ ಅದಕ್ಕೆ ಬಯಲಾಟದ ಕಲಾವಿದರು ಹೊಟ್ಟೆಬಾತೆ ಎಂದು ಕರೆಯುತ್ತಾರೆ.

ಪೇಟಿ ಮಾಸ್ತರ ಕಾಲಿನಿಂದ ಕಾಲಬಾತೆಗಳನ್ನು ಒತ್ತುತ್ತ ಎರಡೂ ಕೈಗಳಿಂದ ಪಟ್ಟಿಗಳ ಮೇಲೆ ಕೈಯಾಡಿಸುತ್ತ ನಾದ ಹೊರಡಿಸುತ್ತಿದ್ದ. ನಾನು ಗಾಢ ನಿದ್ದೆಯನ್ನು ತಡೆಯುತ್ತ ತೂಕಡಿಸುತ್ತ ಉಗುಳನ್ನು ಕಣ್ಣಿಗೆ ಹಚ್ಚಿಕೊಂಡು ಎಚ್ಚರಾಗುತ್ತ ದಿಟ್ಟಿಸಿ ನೋಡುತ್ತಿದ್ದೆ.

ದ್ರೌಪದಿ ಪಾತ್ರದ ಗಣಪು ಬಂದು ಒಂದಿಷ್ಟು ಕುಣಿದು ಮಾತನಾಡುವಾಗ ಆತನ ಧ್ವನಿ ಒಡೆದದ್ದು ಗೊತ್ತಾಯಿತು. ರಂಗತಾಲೀಮದಲ್ಲಿ ಮಾತಾಡಿ ಮಾತಾಡಿ ಆತ ಧ್ವನಿ ಕಳೆದುಕೊಂಡಿದ್ದಾನೆಂದು ಅಜ್ಜಿ ನನಗೆ ಹೇಳಿದಳು.

ಅಜ್ಜಿಯ ಲಕ್ಷ್ಯ ಹೆಚ್ಚಾಗಿ ಅವನಿಗೆ ಹಾರ ಹಾಕಿ ಒಂದು ರೂಪಾಯಿ ಬಹುಮಾನ ಕೊಡುವುದರ ಕಡೆಗೆ ಇತ್ತು. ಎರಡನೇ ಸಲ ರಂಗದ ಮೇಲೆ ಬಂದಾಗ ಹಾರ ಹಾಕಿ ಬಹುಮಾನ ಕೊಡುವುದಕ್ಕಾಗಿ ಪಕ್ಕದಲ್ಲಿ ಕುಳಿತ ಒಬ್ಬ ದೊಡ್ಡ ಹುಡುಗನನ್ನು ಕಳಿಸುವ ವಿಚಾರ ಮಾಡಿದಳು.

(ಡೊಳ್ಳು ಕುಣಿತ)

ಜಾತ್ರೆಯಲ್ಲಿ ಇಡೀ ಹಳ್ಳಿಯ ಜನ ಸೇರುತ್ತಿತ್ತು. ವಾದ್ಯಗಳ ಸಪ್ಪಳ ಕೂಡ ಜೋರಾಗಿರುತ್ತಿತ್ತು. ಕೋಣ ಬಲಿ ಕೊಡುವಾತನ ಆವೇಶ ಹೇಳತೀರದಷ್ಟಿರುತ್ತಿತ್ತು. ಅದನ್ನು ನೋಡಿ ಜನ ಭಯಭಕ್ತಿಯಿಂದ ನಿಲ್ಲುತ್ತಿದ್ದರು.

ದ್ರೌಪದಿ ಹೋದಮೇಲೆ ಅರ್ಜುನ ಬಂದು ಬಿಲ್ಲು ಹೊಡೆಯುವ ಭಂಗಿಯಲ್ಲಿ ಕುಣಿದು ಏನೇನೋ ಮಾತಾಡಿ ಹೋದ. ಅವನು ಬರುವಾಗ ಹುಡುಗರಿಬ್ಬರು ಶಾಲು ಹಿಡಿದುಕೊಂಡು ಅವನಿಗೆ ಮರೆ ಮಾಡಿದ್ದರು. ಮುಂದೆ ಭೀಮನ ಪಾತ್ರ ವಹಿಸಿದ ವ್ಯಕ್ತಿ ಬಂದ. ಆತ ನಿಜವಾಗಿಯೂ ಭೀಮಕಾಯದ ವ್ಯಕ್ತಿಯೇ ಆಗಿದ್ದರಿಂದ ಮತ್ತು ಕುಡಿದದ್ದರಿಂದ ತಾಳ ಮೇಳವಿಲ್ಲದೆ ಕುಣಿಯ ತೊಡಗಿದ. ಊರಲ್ಲಿ ಎರಡು ಪಂಗಡಗಳು ಇದ್ದದ್ದರಿಂದ ಬೇರೊಂದು ಪಂಗಡದವರ ಜೊತೆ ಜಗಳವಾಡುತ್ತಿದ್ದಾನೇನೋ ಅನ್ನುವಂತೆ ಅವರ ಹೆಸರನ್ನು ತೆಗೆದುಕೊಳ್ಳದೆ ಸುಮ್ಮನೆ ಗದರಿಸುತ್ತ ಜೋರು ಜೋರಾಗಿ ಕುಣಿಯುತ್ತಿದ್ದ ಅವನ ಕುಣಿತಕ್ಕೆ ಅಟ್ಟದ ಫಳಿಗಳು ಮುರಿದು ಆತ ಅಟ್ಟದ ಕೆಳಗೆ ಬಿದ್ದುಬಿಟ್ಟ. ಅದೇ ಕ್ಷಣದಲ್ಲಿ ವಿರುದ್ಧ ಗುಂಪಿನವರು ಅಟ್ಟಕ್ಕೆ ಕಟ್ಟಿದ ಪರದೆಗಳಿಗೆ ಬೆಂಕಿ ಹಚ್ಚಿದರು. ಗ್ಯಾಸುಗಳನ್ನು ಒಡೆದಾಗ ಕತ್ತಲಾಯಿತು. ಆದರೆ ಪರದೆಯ ಉರಿಯ ಬೆಳಕಿನಲ್ಲೇ ಜನ ಸಂದಿಗೊಂದಿಗಳಲ್ಲಿ ಓಡತೊಡಗಿದರು.
ಎರಡೂ ಪಂಗಡದವರ ಮಧ್ಯೆ ಜಗಳವಾಯಿತು.

ದ್ರೌಪದಿ ಇನ್ನೊಮ್ಮೆ ರಂಗಕ್ಕೆ ಬರಲಿಕ್ಕಾಗದ ಕಾರಣ ಅಜ್ಜಿಗೆ ನಿರಾಶೆ ಎನಿಸಿತು. ಮರುದಿನ ಅವಳು ನನ್ನನ್ನು ಕರೆದುಕೊಂಡು ಗಣಪೂನ ಮನೆಗೆ ಹೋಗಿ ಹಾರ ಹಾಕಿ ಒಂದು ರೂಪಾಯಿ ಬಹುಮಾನ ಕೊಟ್ಟಳು. ಮತ್ತೆ ಹದಿನೈದು ದಿನಗಳ ನಂತರ ಅವರು ಅದೇ ನಾಟಕ ಆಡಿದರು. (ಆಗ ಅಜ್ಜಿ ಹಾರ ಹಾಕಲಿಲ್ಲ, ಬಹುಮಾನ ಕೊಡಲಿಲ್ಲ).

(ಬಯಲಾಟದ ಪಾತ್ರಧಾರಿಗಳು)

ಕೆಲವೊಮ್ಮೆ ಬಹುರೂಪಿಗಾರರು ಬರುತ್ತಿದ್ದರು. ನೀಲಿ ಬಣ್ಣ ಬಳಿದುಕೊಂಡ ಶಿವನ ಪಾತ್ರಧಾರಿಯ ಜಡೆಯಲ್ಲಿ ಗಂಗೆಯ ಮುಖ ಕಾಣಿಸುತ್ತಿತ್ತು. ಅದರ ಬಾಯಿಯಿಂದ ಆಗಾಗ ನೀರು ಚಿಮ್ಮುತ್ತಿತ್ತು. ಬಹುಶಃ ಬಗಲಲ್ಲಿನ ನೀರು ತುಂಬಿದ ಜೋಳಿಗೆಯಂಥ ತೊಗಲ ಚೀಲದಿಂದ ಆ ಶಿವನ ಪಾತ್ರದಾರಿ ಒತ್ತುತ್ತಿರಬಹುದು.

ಬಹುರೂಪಿಗಾರರ ಹೆಂಗಸರು ಗಂಗೆ ಗೌರಿಯರ ಕುರಿತು ಹಾಡುತ್ತಿದ್ದರು. ಆ ಹಾಡುಗಳಲ್ಲಿ ಸವತಿ ಮತ್ಸರದ ಅಂಶವೂ ಇರುತ್ತಿತ್ತು. ಹೀಗೆ ಆ ಬಹರೂಪಿಗಾರರು ಅನೇಕ ಪೌರಾಣಿಕ ಪ್ರಸಂಗಗಳನ್ನು ಆಡಿ ರಂಜಿಸುತ್ತಿದ್ದರು. ಅವರ ತಬಲಾ, ಪೇಟಿ ಮುಂತಾದ ಸಂಗೀತ ಪರಿಕರಗಳು ಕೊರಳಲ್ಲೇ ರಾರಾಜಿಸುತ್ತಿದ್ದವು. ಅವರು ಹಾಗೇ ಹಾಡುತ್ತ ಬಾರಿಸುತ್ತ ಮುಂದೆ ಮುಂದೆ ಸಾಗುತ್ತಿದ್ದರು. ಬಹುರೂಪಿಗಾರರು ಬಂದು ಒಂದು ಕಡೆ ನಿಂತು ಪ್ರಸಂಗವೊಂದನ್ನು ಆಡಿ ತೋರಿಸುವ ಸಂದರ್ಭದಲ್ಲಿ ದಲಿತರು ಸ್ವಲ್ಪ ದೂರ ಕುಳಿತು ನೋಡುತ್ತಿದ್ದರು. ಒಂದು ಸಲ ಒಬ್ಬ ದಲಿತ ಯುವಕ ತುದಿಗಾಲಲ್ಲಿ ಕುಳಿತು ಸ್ವಲ್ಪ ಸ್ವಲ್ಪ ಮುಂದೆ ಬರುತ್ತಿದ್ದ. ಮೇಲ್ಜಾತಿಯನೊಬ್ಬ ಕಣ್ಣು ಕಿಸಿದು ನೋಡಿದ. ಆತ ಸರಕ್ಕನೆ ಹಿಂದೆ ಸರಿದ.

ಹಳ್ಳಿಗರಿಗೆ ಜಾನುವಾರುಗಳೆಂದರೆ ಕುಟುಂಬದ ಸದಸ್ಯರಿದ್ದ ಹಾಗೆ. ದನಗಳಿಗೆ ಕುಸುಬಿ ಹಿಂಡಿಯೆಂದರೆ ಪಂಚಪ್ರಾಣ. ಹಿಂಡಿಯ ತುಂಡುಗಳ ಜೊತೆ ಕಣಕಿಯನ್ನು ಕತ್ತರಿಸಿ ಉಪ್ಪಿನ ನೀರಲ್ಲಿ ಅದ್ದಿ ತಿನಿಸುತ್ತಿದ್ದರು. ದನಗಳು ಚೆನ್ನಾಗಿ ತಿಂದು ರಾತ್ರಿ ಮೆಲಕು ಹಾಕುತ್ತಿದ್ದವು. ಕೆಲವರ ಮನೆಗಳಲ್ಲಿ ದನದ ಕೊಟ್ಟಿಗೆಯ ಮೇಲೆ ಅಟ್ಟವಿರುತ್ತಿತ್ತು. ಕೆಳಗೆ ದನಕ್ಕೆ ಮೇವು ಹಾಕುವ ಗೋದಲಿಯ ಮೇಲೆ ಆ ಅಟ್ಟದ ತುದಿ ಇರುತ್ತಿತ್ತು. ಅಟ್ಟದ ಮೇಲೆ ಮಲಗಿದಾತ ಕಾಲ ಬಳಿ ಕಣಿಕೆ ಇಟ್ಟಿರುತ್ತಿದ್ದ. ರಾತ್ರಿ ಎಚ್ಚರಾದಾಗಲೆಲ್ಲ ಕಾಲಿಂದಲೆ ಸ್ವಲ್ಪ ಸ್ವಲ್ಪ ಕಣಕಿ ಸರಿಸಿದಾಗ ಅದು ಗೋದಲಿಯಲ್ಲಿ ಬೀಳುತ್ತಿತ್ತು.

(ದ್ಯಾಬೇರಿ ಹಳ್ಳ)

ಸಮಯ ಸಿಕ್ಕಾಗಲೆಲ್ಲ ರೈತರು ತೆಂಗಿನ ನಾರಿನ ಕೈಗವಸದಲ್ಲಿ ಕೈ ಸೇರಿಸಿ ದನಗಳ ಮೈ ತಿಕ್ಕುವುದು, ಹಳ್ಳಿಯ ಪಕ್ಕದಲ್ಲೇ ಹರಿದ ದ್ಯಾಬೇರಿ ಹಳ್ಳದ ಬಳಿ ದನಗಳ ಮೈ ತೊಳೆಸುವುದು, ಅವು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಮುಂತಾದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಅವರ ದನಗಳ ಸೇವೆ, ಮಕ್ಕಳನ್ನು ಪ್ರೀತಿಸಿದಷ್ಟೇ ಸಹಜವಾಗಿರುತ್ತಿತ್ತು.

ಕಾರ ಹುಣ್ಣಿಮೆ, ಮಣ್ಣೆತ್ತಿನ ಅಮಾವಾಸೆ, ಸಂಕ್ರಾಂತಿ ಮುಂತಾದ ಹಬ್ಬಗಳಲ್ಲಿ ಜಾನುವಾರುಗಳದ್ದೇ ಮುಖ್ಯ ಪಾತ್ರ. ಎತ್ತು, ಆಕಳು ಮುಂತಾದವುಗಳನ್ನು ಸಿಂಗರಿಸುವುದೆಂದರೆ ರೈತರಿಗೆ ಎಲ್ಲಿಲ್ಲದ ಖುಷಿ.

(ಕೊಂಬು ಕೆತ್ತನೆ)

ರೈತರು ಎತ್ತುಗಳ ಸಿಬರುಗಟ್ಟಿದ ಕೋಡುಗಳನ್ನು ಕೆತ್ತಿಸಿ ಹೊಳೆಯುವಂತೆ ಮಾಡುತ್ತಿದ್ದರು. ಹಾಗೆ ಕೊಂಬು ತಿಕ್ಕುವ ಕಾಯಕದವರೂ ಇದ್ದರು. ಕೋಡುಗಳನ್ನು ಕೆತ್ತಿದ ನಂತರ ಅವುಗಳಿಗೆ ಎಣ್ಣೆ ಬೆರೆಸಿದ ಅರಿಷಿಣದಿಂದ ತಿಕ್ಕುತ್ತಿದ್ದರು. ಹೀಗೆ ಮಾಡುವವರು ಕೊಂಬುಗಳಿಗೆ ಪೇಂಟ್ ಮಾಡುವುದನ್ನು ಇಷ್ಟ ಪಡುತ್ತಿರಲಿಲ್ಲ. ಪೇಂಟು ‘ಉಷ್ಣ’ ಎಂದು ಅವರು ಹೇಳುತ್ತಿದ್ದರು. ಕೆಲವರು ಕೊಂಬಿಗೆ ಹಿತ್ತಾಳೆಯ ಗೊಂಬಣಸು ಸಿಗಿಸಿ ಅವುಗಳಿಗೆ ರಿಬ್ಬನ್ ಮತ್ತು ಗೊಂಡೆ ಕಟ್ಟುತ್ತಿದ್ದರು. ಬಣ್ಣ ಬಣ್ಣದ ಬಟ್ಟೆಯಿಂದ ಹೊಲಿಸಿ ಗೊಂಡೆ ಕಟ್ಟಿದ ಜೂಲ್ (ಗಲೀಫ) ಹಾಕುತ್ತಿದ್ದರು. ಡುಬ್ಬದ ಮೇಲೆ ಎತ್ತಿನ ಇಣಿ (ಹಿಣಿಲು) ಕಾಣುವ ಹಾಗೆ ಸಿಂಪಿಗರು ಬಟ್ಟೆಗೆ ದೊಡ್ಡ ರಂಧ್ರ ಮಾಡಿ ಹೊಲಿಯುತ್ತಿದ್ದರು. ಎತ್ತಿನ ಹಣೆಗೆ ಕಲಾತ್ಮಕವಾದ ಹಿತ್ತಾಳೆಯ ಪದಕದಂತಿರುವ ಹಣೆಕಟ್ಟು, ಕೊರಳಿಗೆ ಕಟ್ಟಲು ಗೆಜ್ಜಿಸರ, ಗಂಟೆ ಮುಂತಾದವು ದನಗಳ ಸಿಂಗಾರ ಸಾಧನಗಳಾಗಿದ್ದವು. ಉಳ್ಳಾಗಡ್ಡಿಯನ್ನು ಅಡ್ಡ ತುಂಡರಿಸಿ ಒಳಭಾಗದಲ್ಲಿ ಹೂವಿನ ಚಿತ್ರಬರುವ ಹಾಗೆ ಚಾಕುವಿನಿಂದ ಕತ್ತರಿಸಿದ ನಂತರ ಬಣ್ಣದಲ್ಲಿ ಅದ್ದಿ ಎತ್ತುಗಳ ಮೈಮೇಲೆ ಗುಲ್ಲಾ ಹೊಡೆಯುತ್ತಿದ್ದರು. ಅವು ಎತ್ತುಗಳ ಮೈತುಂಬ ಹೂವುಗಳು ಅರಳಿದಂತೆ ಕಾಣುತ್ತಿದ್ದವು. ಇಷ್ಟೆಲ್ಲ ಸಿಂಗಾರ ಮಾಡಿದ ಮೇಲೆ ನೋಡುಗರ ನೆದರು ಬೀಳಬಾರದೆಂದು ಕೊರಳಿಗೆ ಸಣ್ಣ ಸೈಜಿನ ಮೆತ್ತನೆಯ ಕಪ್ಪು ಹಗ್ಗ ಕಟ್ಟುತ್ತಿದ್ದರು.

(ಸಿಂಗರಿಸಿದ ಕಿಲಾರಿ ಎತ್ತು)

ವಿಜಾಪುರದಲ್ಲಿ ದನಗಳನ್ನು ಸಿಂಗರಿಸುವ ವಸ್ತುಗಳ ಜೊತೆ ಬಣ್ಣ ಬಣ್ಣದ ಹಗ್ಗ, ಕಣ್ಣಿ, ಮಗಡಾ, ಬಾರುಕೋಲು, ಬೆತ್ತದ ಬಡಿಗೆ ಮುಂತಾದವುಗಳನ್ನು ಮಾರುವ ಅಂಗಡಿಗಳಿದ್ದವು.

ಸೋಮವಾರ ಎತ್ತುಗಳಿಗೆ ರಜೆ. ಆ ದಿನ ಯಾರೂ ಎತ್ತುಗಳನ್ನು ಹೂಡುತ್ತಿರಲಿಲ್ಲ. ಎತ್ತಿಗೆ ಉಣ್ಣೆ ಹತ್ತದಂತೆ ಮತ್ತು ಅವುಗಳ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳುತ್ತಿದ್ದರು. ಎತ್ತುಗಳು ತಮ್ಮನ್ನು ಸಾಕುತ್ತಿವೆ. ಅವು ಉತ್ತು ಬಿತ್ತುವುದರಿಂದಲೇ ತಾವು ಬದುಕಿದ್ದೇವೆ ಎಂಬ ಭಾವ ರೈತರಿಗೆ ಇತ್ತು.

ನನ್ನ ತಾಯಿಯ ತವರೂರಾದ ಈ ಅಲ್ಲೀಬಾದಿ ನನಗೆ ಸದಾ ಭಾವಪೂರ್ಣ ನೆನಪಾಗಿ ಉಳಿದಿದೆ. ‘ನನ್ನ ಹಳ್ಳಿ ನನ್ನ ಜಗತ್ತು’ ಎನ್ನುವಷ್ಟರ ಮಟ್ಟಿಗೆ ಮಾನಸಿಕವಾಗಿ ಅದರ ಜೊತೆಗೆ ತಾದಾತ್ಮ್ಯ ಸಂಬಂಧವಿದೆ. ಆ ಐದಾರು ವರ್ಷಗಳಲ್ಲಿ ಮೊದಲ ಎರಡು ವರ್ಷಗಳನ್ನು ಬಿಟ್ಟರೂ ಉಳಿದ ನಾಲ್ಕು ವರ್ಷಗಳಷ್ಟು ಅವಧಿಯಲ್ಲಿ ನಾನು ಸಾಕ್ಷಿಪ್ರಜ್ಞೆಯಿಂದ ಆ ಹಳ್ಳಿಯ ಮೂಲಕ ಮಾನವಸ್ವಭಾವವನ್ನು ಅರಿತುಕೊಂಡೆ. ವಿವಿಧ ಜನಸಮುದಾಯಗಳ ಜೀವನಾನುಭವದ ಎಲ್ಲ ಬೀಜಗಳೂ ಅಲ್ಲೇ ನನ್ನ ಮನದಲ್ಲಿ ಮೊಳಕೆ ಒಡೆದಿದ್ದವು. ನಂತರ ಅವು ಬದುಕಿನುದ್ದಕ್ಕೂ ಬೆಳೆಯುತ್ತಲಿವೆ.

ಜಾತಿಗಳು, ವರ್ಗಗಳು, ಕೀಳರಿಮೆ, ಮೇಲುರಿಮೆ, ಅಹಂಕಾರ, ಉದಾತ್ತ ಮನೋಭಾವ, ತ್ಯಾಗ, ದ್ವೇಷ, ಮಾನವಪ್ರೇಮ, ಮನಸ್ತಾಪ, ಸಹಬಾಳ್ವೆ ಹೀಗೆ ಎಲ್ಲದಕ್ಕೂ ಅಲ್ಲೀಬಾದಿ ಸಾಕ್ಷಿಯಾಗಿತ್ತು.

(ಚಿತ್ರಗಳು: ಸುನೀಲಕುಮಾರ ಸುಧಾಕರ)