ಹೊಟ್ಟೆಯ ಸುತ್ತ
ನಮಗೆ ಆಸೆಗಳೇನೂ ಇರಲಿಲ್ಲ
ಗಾಳಿಯಲ್ಲೂ ನಾವು ಗೋಪುರ ಕಟ್ಟಲಿಲ್ಲ
ಕನಸಿನಲ್ಲಿಯೂ ಕುದುರೆಗಳನ್ನು ಏರಿ
ಓಡಲಿಲ್ಲ ಗೊತ್ತು ಗುರಿ ಇಲ್ಲದಂತೆ
ಅವರೆಲ್ಲ ಕಾಮನಬಿಲ್ಲಿಗೆ ಏಣಿ ಹಾಕಿದರು
ಮೋಡಗಳ ರೆಕ್ಕೆಯ ಮೇಲೆ ಕುಳಿತು
ಕನಸು ಕಂಡರು; ಬೆಚ್ಚಗೆ ಹೊದಿಯಲು
ಅವರ ಬಳಿ ಕಂಬಳಿಗಳಿದ್ದವು; ಕಾಲು
ಚಾಚಿ ಮಲಗಲು ಮೆತ್ತನೆಯ ಹಾಸು
ಹೊಟ್ಟೆತುಂಬಿದ ಮೇಲೆ ಕಣ್ಣುತುಂಬ ನಿದ್ದೆ
ರಾತ್ರಿ ಕನಸುಗಳ ಜೊತೆ ಹಗಲೂ ಅವರಿಗೆ
ಕನಸುಗಳಿದ್ದವು; ಗುಡ್ಡಬೆಟ್ಟಗಳ ಹತ್ತಿಳಿದ
ಅವರಿಗೆ ಯಾವಾಗಲೂ ಗೌರೀಶಂಕರವೆ
ಹಂಬಲ-ದೊಡ್ಡ ಮಾತು, ದೊಡ್ಡ ಕನಸು
ಚಳಿಯಲ್ಲಿ ನಡುಗುತ್ತಿದ್ದ ನಮಗೆ ಬೆಂಕಿ
ಕಾಯಿಸುವ ಹಂಬಲ, ಒಬ್ಬರಿಗೊಬ್ಬರು
ಒತ್ತೊತ್ತಾಗಿ ಬೆಚ್ಚಗೆ ಕುಳಿತು ಒಬ್ಬರ
ಕನಸಿನಲ್ಲಿ ಇನ್ನೊಬ್ಬರು ಹೋಗುತ್ತ
ಒಬ್ಬರ ರೊಟ್ಟಿಯ ಇನ್ನೊಬ್ಬರು ಕಸಿಯುತ್ತ
ಕನಸಿನಲ್ಲಿಯೂ ರೊಟ್ಟಿಗಾಗಿ ಬಡಿದಾಡುತ್ತ
ಬೆಳೆದ ನಮಗೆ ಒಡಲ ತುಂಬ ಬಯಲ ಗಾಳಿ;
ನೆತ್ತಿಯ ಸುಡುತ್ತಿದ್ದ ಸೂರ್ಯ ನಮ್ಮೆಲ್ಲ ಆಸೆ
ಕಮರಿಸಿದ್ದ; ಚಂದ್ರ ನಮಗೆ ವೈರಿಯೇ ಆಗಿದ್ದ
ಬೆಳದಿಂಗಳಲ್ಲಿ ನಾವು ಕದಿಯಲು ಹೋಗಿ
ಸಿಕ್ಕು ಏಟು ತಿನ್ನುತ್ತಿದ್ದೆವು; ಕತ್ತಲಲ್ಲಿ ನಾವೇ
ದೆವ್ವಗಳು, ದೆವ್ವಗಳೂ ನಮಗೆ ಹೆದರುತ್ತಿದ್ದವು
ಅರೆ ಹೊಟ್ಟೆ ಅರೆ ನಿದ್ದೆ ಅರಬರೆ ಕನಸು-ಎಲ್ಲ
ಎದ್ದಾಗ ಕರಗಿ ಬೆಳಗಿನ ಸೂರ್ಯನ ಜೊತೆಯಲ್ಲಿಯೇ
ನಮ್ಮ ಪಯಣ-ದಿಕ್ಕು ದೆಸೆ ಯಾವುದೂ ಇಲ್ಲದೆ
ಹೊಟ್ಟೆ ಕೆಟ್ಟದ್ದು, ಕನಸುಗಳನ್ನಂತೂ ಅದು
ಸೈರಿಸಿದ್ದೇ ಇಲ್ಲ; ಯಾವಾಗಲೂ ನಮ್ಮ ಕನಸು
ಒಂದೇ-ಹೇಗೆ ತುಂಬಿಸುವುದಯ್ಯ ಈ ಹೊಟ್ಟೆಯ
ನಮ್ಮ ಹೊಟ್ಟೆಗಳ್ಯಾಕೆ ತುಂಬುವುದೇ ಇಲ್ಲ
ಇದೊಂದೇ ನಮ್ಮ ಚಿಂತನೆಯ ಕೇಂದ್ರ
ಹೀಗೆ ಚಿಂತಿಸುತ್ತಲೇ ನಾವು ನಿದ್ದೆಗೆ
ಹೋಗುತ್ತಿದ್ದಾಗ ಹೊಟ್ಟೆಯೇ ಎಚ್ಚರಿಸುತ್ತಿತ್ತು
ಏನು ಹೇಳುವುದು ಈ ಹೊಟ್ಟೆಗೆ, ಹೇಗೆ
ಸಂತೈಸುವುದು ಈ ಹೊಟ್ಟೆಯ?- ಖಾಲಿ
ಹೊಟ್ಟೆಯ ಹೊತ್ತು ಅವರಿವರ ಮನೆಗಳಿಗೆ
ಎಡತಾಕಿದರೆ ರಟ್ಟೆ ಮುರಿಯುವಷ್ಟು ಕೆಲಸ
ಆಗಲೂ ಹೊಟ್ಟೆ ತುಂಬುತ್ತಿರಲಿಲ್ಲ; ರೊಟ್ಟಿ-
ಕೊಡುವವರು ಯಾಕೆ ಅರ್ಧ ಕೊಡುತ್ತಾರೆ?
ನಮ್ಮ ಕನಸು ಹಂಬಲ ಅಪೇಕ್ಷೆ
ಎಲ್ಲವೂ ಈ ಹೊಟ್ಟೆಯನ್ನು
ಬಿಟ್ಟು ದೂರ ಸರಿದದ್ದೇ ಇಲ್ಲ
ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ