ಕೆ.ಜಿ.ಎಫ್ ಎಂಬ ನೆಲದಲ್ಲಿ, ಚಿನ್ನದ ಅದಿರಿನ ಶೋಧನೆಯ ಸಮಯದಲ್ಲಿ ಅಲ್ಲಿನ ಜನರು ಹಾಗೂ ಕಾರ್ಮಿಕರು ಅನುಭವಿಸಿದ ತಲ್ಲಣಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” (ಕೆಜಿಎಫ್ ಗಣಿಗಳ ತವಕ ತಲ್ಲಣಗಳು) ಕಾದಂಬರಿ ಪ್ರತಿ ಶನಿವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ.
ಕಾದಂಬರಿಯ ಆರಂಭಕ್ಕೂ ಮುನ್ನ…
ಈ ಕಾದಂಬರಿ ಜಗತ್ಪ್ರಸಿದ್ಧ ಕೋಲಾರ ಚಿನ್ನದ ಗಣಿಗಳ ಹಿನ್ನೆಲೆ ಹೊಂದಿರುವ ಅಥವಾ ಆ ಚಿನ್ನದ ಗಣಿಗಳಲ್ಲಿ ಬದುಕು ಕಟ್ಟಿಕೊಂಡ ಮತ್ತು ದೇಶಕ್ಕೆ ಅಭಿವೃದ್ಧಿಯ ದಿಕ್ಕು ತೋರಿಸಿದ ಬಡ/ದಲಿತ ಕಾರ್ಮಿಕರ ಬವಣೆಗಳನ್ನು ಒಳಗೊಂಡ ಒಂದು ಅಸಾಧಾರಣ ಕತೆಯಾಗಿದೆ. ಹಾಗಾಗಿ ಓದುಗರು ಈ ಕಾದಂಬರಿಯ ಒಳಗೆ ಪ್ರವೇಶ ಮಾಡುವುದಕ್ಕೆ ಮುಂಚೆ ಒಂದೆರೆಡು ಪುಟಗಳ ಪೀಠಿಕೆ ಅಗತ್ಯ ಇದೆ. ಈ ಪೀಠಿಕೆ ಓದಿಕೊಂಡರೆ ಈ ಕಾದಂಬರಿ ನಿಮಗೆ ಸುಲಭವಾಗಿ ಅರ್ಥವಾಗುತ್ತದೆ.
ಸುಮಾರು 2000 ದಿಂದ 3000 ವರ್ಷಗಳ ವೈಜ್ಞಾನಿಕ ಇತಿಹಾಸ ಉಳ್ಳ ಈ ಪುರಾತನ ಚಿನ್ನದ ಗಣಿಗಳ ಚಿನ್ನದ ನಾಣ್ಯಗಳು ಹರಪ್ಪ-ಮೊಹೆಂಜೊ ದಾರೊ ನಾಗರಿಕ ತೊಟ್ಟಿಲುಗಳಲ್ಲಿ 1980ರ ದಶಕದಲ್ಲಿ ದೊರಕಿದವು. 1799ರಲ್ಲಿ ಮೈಸೂರು ಮತ್ತು ಬ್ರಿಟಿಷರ ನಡುವೆ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಅಸುನೀಗಿದನು. 1880ರ ದಶಕದಲ್ಲಿ ಜಾನ್ ವಾರೆನ್ ಎಂಬ ಬ್ರಿಟಿಷ್ ಅಧಿಕಾರಿ ಅಂದಿನ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ಗಡಿಯನ್ನು ಗುರುತಿಸಲು ಮೈಸೂರು ಬ್ರಿಟಿಷ್ ರೆಸಿಡೆನ್ಸಿಯಿಂದ ನಿಯುಕ್ತಗೊಂಡನು. ಬೆಂಗಳೂರಿನಲ್ಲಿ ನೆಲೆಸಿದ್ದ ವಾರನ್ ಇಂದಿನ ಕೆಜಿಎಫ್ ಪ್ರದೇಶದಲ್ಲಿ ಸಮೀಕ್ಷೆಗಾಗಿ ಬಂದಾಗ ಅಲ್ಲಿನ ಕಾಡುಮೇಡುಗಳ ಮಧ್ಯೆಮಧ್ಯೆ ಹಳ್ಳಿಕೊಂಪೆಗಳು ಮಾತ್ರ ಇದ್ದವು.
ಕೆಜಿಎಫ್ ಪ್ರದೇಶದಲ್ಲಿ ಜಾನ್ ವಾರೆನ್ ಸಮೀಕ್ಷೆ ನಡೆಸುತ್ತಿದ್ದಾಗ ಆ ಪ್ರದೇಶದಲ್ಲೆಲ್ಲ ಪುರಾತನ ಚಿನ್ನದ ಗಣಿಗಳು ಇರುವುದಾಗಿ ತಿಳಿದುಬಂದಿತು. ಸ್ಥಳೀಯರ ಸಹಾಯದಿಂದ ಅನೇಕ ಹಳೆ ಗಣಿಗಳನ್ನು ಗುರುತಿಸಿ ಸ್ವಲ್ಪ ಚಿನ್ನವನ್ನು ಹೊರತೆಗೆದು ಸಂಸ್ಕರಿಸಿ ಮದ್ರಾಸ್ ಟಂಕುಶಾಲೆಗೆ ಕಳುಹಿಸಿಕೊಟ್ಟರು. ಅದು ಪರಿಶುದ್ಧ ಅಪರಂಜಿ ಚಿನ್ನ ಎಂಬುದಾಗಿ ವರದಿ ಬಂದಿತು. ವಿಷಯ ತಿಳಿದಿದ್ದೆ ವಾರೆನ್ ಮದ್ರಾಸ್ ಪ್ರಸಿಡೆನ್ಸಿ ಒಳಗಿದ್ದ ಕೆಜಿಎಫ್ ಅಂಚಿನಲ್ಲಿದ್ದ ಯರ‍್ರಕೊಂಡ ಬೆಟ್ಟವನ್ನು ಸೇರಿಸಿ ಮೈಸೂರು ಪೂರ್ವದ ಗಡಿಯ ಒಳಕ್ಕೆ ಹಾಕಿಬಿಟ್ಟರು. ನಂತರ ಚಿನ್ನ ತೆಗೆಯಲು ಮೈಸೂರು ಸರ್ಕಾರದಿಂದ ಹತ್ತಾರು ಎಕರೆಗಳ ಭೂಮಿಯನ್ನು ಲೀಸ್‌ಗೆ ಪಡೆದುಕೊಂಡರೂ ಹಣದ ಮುಗ್ಗಿಟ್ಟಿನಿಂದ ವಾರೆನ್ ಹಿಂದಕ್ಕೆ ಹೊರಟುಹೋಗಬೇಕಾಯಿತು.
ಆದರೆ 1804ರಲ್ಲಿ ಬ್ರಿಟಿನ್‌ನ ಪ್ರಸಿದ್ಧ ಆಂಗ್ಲ ಪತ್ರಿಕೆ “ಏಷ್ಯಾಟಿಕ್ ಜರ್ನಲ್”ನಲ್ಲಿ ಇಲ್ಲಿನ ಎಲ್ಲಾ ಪುರಾತನ ಚಿನ್ನದ ಗಣಿಗಳ ಬಗ್ಗೆ ಒಂದು ಸುದೀರ್ಘ ವರದಿಯನ್ನು ಪ್ರಕಟಿಸಿದರು. ಇದಾದ ಮೇಲೆ ಸುಮಾರು ಆರು ದಶಕಗಳ ಕಾಲ ಈ ಪ್ರದೇಶದಲ್ಲಿ ಯಾವ ರೀತಿಯ ಚಿನ್ನದ ಚಟುವಟಿಕೆಗಳು ನಡೆಯಲಿಲ್ಲ. 1870ರ ಸುಮಾರಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ ಮೈಕೆಲ್ ಲ್ಯಾವಲ್ಲೆ ಎಂಬ ಅಧಿಕಾರಿ ತನ್ನ ಗೆಳೆಯರನ್ನು ಸೇರಿಸಿಕೊಂಡು ಒಂದು ಸಿಂಡಿಕೇಟ್ ಕಟ್ಟಿಕೊಂಡು ಹಣ ಸಂಗ್ರಹಣೆ ಮಾಡಿಕೊಂಡರು. ನಂತರ ಕೆಜಿಎಫ್‌ಗೆ ಬಂದು ಚಿನ್ನದ ಬಗ್ಗೆ ಶೋಧನೆ ಮಾಡತೊಡಗಿದರು. ಮೈಸೂರು ಸರ್ಕಾರದಿಂದ ಲ್ಯಾವೆಲ್ಲೆಗೆ ಚಿನ್ನ ತೆಗೆಯಲು ಅಪ್ಪಣೆ ದೊರಕಿದರೂ ಹಣದ ಮುಗ್ಗಟ್ಟಿನಿಂದ ಕೆಲಸ ಮುಂದುವರಿಸಲಾಗಲಿಲ್ಲ.
ಅದೇ ಕಾಲಕ್ಕೆ ಕೇರಳದ ವಯನಾಡ್ ಪ್ರದೇಶದ ನದಿಗಳ ಮೆಕ್ಕಲು ಮಣ್ಣಿನಲ್ಲಿ ಸಾಕಷ್ಟು ಚಿನ್ನ ದೊರಕುತ್ತಿದ್ದು ಅನೇಕ ಯೂರೋಪಿಯನ್ ಕಂಪನಿಗಳು ಅಲ್ಲಿ ಕೆಲಸ ಮಾಡುತ್ತಿದ್ದವು. ಕೆಜಿಎಫ್‌ನಲ್ಲಿ ಚಿನ್ನ ದೊರಕುತ್ತದೆ ಎಂಬ ವಿಷಯ ತಿಳಿದ ಈ ಕಂಪನಿಗಳು ಕೆಜಿಎಫ್ ಕಡೆಗೆ ಧಾವಿಸಿ ಬಂದು ಚಿನ್ನವನ್ನು ಹುಡುಕಾಡತೊಡಗಿದವು. ಈ ಕಂಪನಿಗಳೆಲ್ಲ ಮೈಸೂರು ಸರ್ಕಾರದಿಂದ ಚಿನ್ನದ ಹುಡುಕಾಟ ನಡೆಸಲು ಹತ್ತಾರು ಚದರ ಕಿ.ಮೀ.ಗಳ ಜಮೀನು ಗುತ್ತಿಗೆ ಪಡೆದುಕೊಂಡವು. ಮದ್ರಾಸ್‌ನ ಅರ್ಭುತನಾಥ್ ಕಂಪನಿ, ಇಂಗ್ಲೆಂಡಿನ ಪ್ರಸಿದ್ಧ ಮೈನಿಂಗ್ ಕಂಪನಿಯ ಎಂಜಿನಿಯರ್ 3ನೇ ಜಾನ್ ಟೇಲರ್ (ಕಂಪನಿ) ಅವರನ್ನು ಕೆಜಿಎಫ್‌ಗೆ ಬರುವಂತೆ ಆಹ್ವಾನಿಸಿತು.
ಬ್ರಿಟನ್‌ನಲ್ಲಿ ಷೇರುದಾರರಿಂದ ಹಣ ಸಂಗ್ರಹಿಸಿಕೊಂಡು ಬಂದ ಜಾನ್ ಟೇಲರ್ ಒಂದೆರಡು ತಿಂಗಳು ಕಾಲ ಪ್ರಯತ್ನಿಸಿದರು. ಆದರೆ ಆ ಹಣ ಬಹುಬೇಗನೇ ಕರಗಿಹೋಯಿತು. ನಂತರ ತನ್ನ ಗೆಳೆಯರಾದ ಆಸ್ಟ್ರೇಲಿಯಾದ ಕ್ಯಾ. ಬಿ. ಡಿ. ಪ್ಲಮ್ಮರ್ ಮತ್ತು ಬಿರಿಸ್ ಫೋರ್ಡ್ ಅವರನ್ನು ಕಳುಹಿಸಿಕೊಟ್ಟರು. ಇವರಿಬ್ಬರು ಕೆಜಿಎಫ್‌ಗೆ ಬಂದು ಎರಡು ಪುರಾತನ ಮೈಸೂರು ಗಣಿಗಳ ಮಧ್ಯೆ ಒಂದು ಗಣಿಯನ್ನು 100 ಅಡಿಗಳ ಆಳಕ್ಕೆ ತೋಡಿದ್ದೆ ಇಂಗ್ಲೆಂಡ್-ಇಂಡಿಯ ದೇಶಗಳ ಭಾಗ್ಯದ ಬಾಗಿಲು ತೆರೆದುಕೊಂಡುಬಿಟ್ಟಿತು. ಅವರಿಗೆ ಪ್ರಪಂಚ ಪ್ರಖ್ಯಾತ ಚಾಂಪಿಯನ್ ರೀಫ್ ಚಿನ್ನದ ಲೋಡ್ ದೊರಕಿತು. ಅದು 1880ನೇ ವರ್ಷ. ಅಲ್ಲಿಂದ 121 ವರ್ಷಗಳು ಕಾಲ ಚಿನ್ನದ ಗಣಿಗಳು ನಿರಂತರವಾಗಿ ನಡೆದು 2001ರಲ್ಲಿ ಸ್ಥಗಿತಗೊಂಡವು.
ಈ 121 ವರ್ಷಗಳ ಸುದೀರ್ಘ ಕಾಲದಲ್ಲಿ 8 ಕಿ.ಮೀ.ಗಳ ಉದ್ದ 2 ಕಿ.ಮೀ.ಗಳ ಅಗಲ ಮತ್ತು 3.25 ಕಿ.ಮೀ.ಗಳ ಆಳದವರೆಗೂ ಚಿನ್ನದ ಸುರಂಗಗಳನ್ನು ಮಾಡಲಾಯಿತು. ಇವುಗಳ ಒಟ್ಟು ಉದ್ದ 1647 ಕಿ.ಮೀ.ಗಳು. ದಾಖಲೆಗಳಂತೆ ಉತ್ಪಾದನೆಯಾದ ಚಿನ್ನ ಸುಮಾರು 800 ಟನ್ನುಗಳು. ಕಳ್ಳತನವಾದ ಚಿನ್ನ ಸುಮಾರು 200 ಟನ್ನುಗಳು! ಇನ್ನೂ ಗಣಿಗಳಲ್ಲಿ 100-150 ಟನ್ನುಗಳ ಚಿನ್ನ ಉಳಿದಿರಬಹುದು ಎಂಬ ಊಹೆ ಇದೆ. ಅಪಘಾತಗಳಲ್ಲಿ ಸತ್ತ ಕಾರ್ಮಿಕರ ಸಂಖ್ಯೆ 7000. ಅಂಗವಿಕಲರಾದವರ ಸಂಖ್ಯೆ 16,000. ಈ ಚಿನ್ನದ ಗಣಿಗಳಿಂದ ಬಂದ ಲಾಭಾಂಶ ಮತ್ತು ರಾಯಲ್ಟಿಯಾಗಿ ಅಂದಿನ ಮೈಸೂರು ರಾಜ್ಯಕ್ಕೆ ಡಾಲರ್ಸ್ ರೂಪದಲ್ಲಿ ಮಿಲಿಯನ್ಸ್‌ಗಟ್ಟಲೇ ಹಣ ದೊರಕುತ್ತಿತ್ತು. ಕಾರಣ, ಮೈಸೂರು ರಾಜ್ಯ “ಮಾದರಿ ರಾಜ್ಯ” ಎಂದು ಕರೆಸಿಕೊಂಡಿತು. ಆಗ ಎಲ್ಲಾ ರಾಜ್ಯಗಳಿಂದ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದ್ದ ಒಟ್ಟು ಹಣದಲ್ಲಿ ಮೈಸೂರು ರಾಜ್ಯದ ಪಾಲು 40%.
ಕೆಜಿಎಫ್ ನಗರವನ್ನು “ಲಿಟ್ಲ್ ಇಂಗ್ಲೆಂಡ್” ಎಂದು ಕರೆಯಲಾಯಿತು. ಜಗತ್ತಿನಲ್ಲಿ ಹೊಸದಾಗಿ ಆವಿಷ್ಕಾರವಾದ ಅಂದಿನ ಯಾವುದೇ ಹೊಸಹೊಸ ಉಪಕರಣಗಳು ಕೆಜಿಎಫ್‌ನಲ್ಲಿ ಮೊದಲಿಗೆ ಕಾಣಿಸಿಕೊಳ್ಳುತ್ತಿದ್ದವು. ಇಲ್ಲಿನ ತಂತ್ರಜ್ಞಾನ ಮತ್ತು ತಂತ್ರಜ್ಞರು ದೇಶ ವಿದೇಶಗಳಿಗೆ ಹೋದ ಕಾರಣ ಕೆಜಿಎಫ್ ಗಣಿಗಳಿಗೆ “ತಾಯಿ ಗಣಿಗಳು” ಎಂಬ ಹೆಸರು ಬಂದಿತು. ದೇಶಕ್ಕೆ ಇಷ್ಟೆಲ್ಲ ಕೊಟ್ಟ ಈ “ಲಿಟಲ್ ಇಂಗ್ಲೆಂಡ್” ಪಟ್ಟಣಕ್ಕೆ, ಚಿನ್ನದ ಗಣಿಗಳ ಕಪ್ಪು ಸುರಂಗಗಳಲ್ಲಿ ಹಗಲೂ ರಾತ್ರಿ ದುಡಿದ ಬಡ/ದಲಿತ ಕಾರ್ಮಿಕರಿಗೆ ರಾಜ್ಯ ಮತ್ತು ದೇಶದಿಂದ ದೊರಕಿದ್ದಾರೂ ಏನು..? ಈ ಎಲ್ಲ ಹಿನ್ನೆಲೆಯ ಸತ್ಯ ಘಟನೆಗಳ ಆಧಾರದಿಂದ ಹೆಣೆಯಲಾದ ಕಾದಂಬರಿಯೆ “ಒಂದು ಎಳೆ ಬಂಗಾರದ ಕಥೆ”.
ಚಿನ್ನದ ಗಣಿಗಳ ನಾಲ್ಕಾರು ತಲೆಮಾರುಗಳು ಕಪ್ಪು ಸುರಂಗಗಳಲ್ಲಿ ನಡೆಸಿದ ಹೋರಾಟ ಅವರು ಅನುಭವಿಸಿದ ತವಕ ತಲ್ಲಣಗಳು, ಅಪಘಾತಗಳು, ಆಂದೋಲನಗಳು ಇದೆಲ್ಲವನ್ನು ಸೇರಿಸಿಕೊಂಡು ಹೆಣೆದಿರುವ ಒಂದು ಎಳೆ ಬಂಗಾರದ ಕಥೆ ಭಯಾನಕವಾದದ್ದು ಮತ್ತು ತೀರಾ ಅನುಕಂಪ ಹುಟ್ಟಿಸುವ ಕಥೆಯಾಗಿದೆ. ಕಾದಂಬರಿಯಲ್ಲಿ ಮೂರು ತಲೆಮಾರುಗಳ ಹೋರಾಟವನ್ನು ಕಟ್ಟಿಕೊಡಲಾಗಿದ್ದು ಇಲ್ಲಿ ಬರುವ ಕೆಲವು ಘಟನೆಗಳು ಕಪ್ಪು ನೆಲದಲ್ಲಿ ನಡೆದ ಸಹಜ ಘಟನೆಗಳಾಗಿವೆ.
ಅಧ್ಯಾಯ – 1
ಗಣಿ ಕಾಮಿಕರು ಮತ್ತು ಗಣಿ ಕಾಲೋನಿಗಳು
ಮಾರಿಕುಪ್ಪಮ್ ಕಾಲೋನಿಯ ಮೊದಲನೇ ಬೀದಿಯ ನಾಲ್ಕನೇ ಮನೆಯಲ್ಲಿ ಸೆಲ್ವಮ್ ಮತ್ತು ಕನಕ ಎಂಬ ದಂಪತಿ ನೆಲೆಸಿದ್ದಾರೆ. ಅಪರೂಪ ಎಂಬಂತೆ ಅವರಿಗೆ ಇಬ್ಬರೇ ಮಕ್ಕಳು ಮಣಿ ಮತ್ತು ಸುಮತಿ. ಮಾರಿಕುಪ್ಪಮ್ ಕಾಲೋನಿಯಲ್ಲಿ ನಿಂತುಕೊಂಡು ದಕ್ಷಿಣಕ್ಕೆ ನೋಡಿದರೆ ಯರ‍್ರಕೊಂಡ (ಕೆಂಪುಬಿಟ್ಟ) ಬ್ಯಾಟರಾಯನಸ್ವಾಮಿ ಬೆಟ್ಟ ಎತ್ತರವಾಗಿ ಕಾಣಿಸುತ್ತದೆ. ಉಳಿದಂತೆ ಹಸಿರು ಗಿಡಮರಗಳ ಮಧ್ಯೆಮಧ್ಯೆ ಕರ‍್ರನೆ ಬಣ್ಣದ ಘಟ್ಟ ಪ್ರದೇಶಗಳು ಕಾಣಿಸುತ್ತವೆ. ಪೂರ್ವದಲ್ಲಿ ಕಾಲೋನಿ ಎದುರಿಗೆ ಇರುವ ರಸ್ತೆಯ ಆ ಕಡೆಗೆ ದೊಡ್ಡದಾದ ಹಳದಿಬೂದು ಮಿಶ್ರಿತ ಗಣಿ ತ್ಯಾಜ್ಯದ ಸಯನೈಡ್ ಗುಡ್ಡ ಬಿದ್ದುಕೊಂಡಿದೆ. ಈ ಸಯನೈಡ್ ತ್ಯಾಜ್ಯ ಗುಡ್ಡ ಗಣಿಗಳ ಒಳಗಿಂದ ಚಿನ್ನದ ಅದಿರನ್ನು (ಕಲ್ಲುಗಳು) ಮೇಲಕ್ಕೆ ತಂದು ಅವುಗಳನ್ನು ನುಣ್ಣಗೆ ಪುಡಿಮಾಡಿ ಚಿನ್ನವನ್ನು ಪ್ರತ್ಯೇಕ ಮಾಡುವುದಕ್ಕಾಗಿ ವಿಷ ಸಯನೈಡ್ (ಸೋಡಿಯಮ್ ಸಯನೈಡ್) ಬೆರೆಸಲಾಗುತ್ತದೆ. ಚಿನ್ನವನ್ನು ಸೋಸಿಕೊಂಡ ಮೇಲೆ ಸೈನಾಟ್/ಸಯನೈಡ್ ಮಿಶ್ರಿತ ಧೂಳು ಮಣ್ಣನ್ನು ಎಸೆದಿರುವುದೇ ಈ ಸಯನೈಡ್ ತ್ಯಾಜ್ಯ ಗುಡ್ಡ. ಇಂತಹ ಹತ್ತಾರು ಗುಡ್ಡಗಳು ಕೆಜಿಎಫ್ ನಗರದ ಒಳಗೆ ಮತ್ತು ಸುತ್ತಮುತ್ತಲೂ ಬಿದ್ದಿವೆ. ವಿಷ ಸಯನೈಡ್ ಕೆಲವೇ ದಿನಗಳಲ್ಲಿ ಆವಿಯಾಗಿ ಗಾಳಿಯಲ್ಲಿ ಸೇರಿಹೋದರೂ ಇವುಗಳಿಗೆ ಸಯನೈಡ್ ಗುಡ್ಡಗಳು ಎಂಬ ಹೆಸರು ಅಂಟಿಕೊಂಡುಬಿಟ್ಟಿದೆ. ಗುಡ್ಡಗಳ ಮೇಲಿನಿಂದ ಜೋರಾಗಿ ಗಾಳಿ ಬೀಸಿ ಬಂದಾಗ ಧೂಳು ಮಣ್ಣು ಸುತ್ತಮುತ್ತಲಿನ ಜನರ ಉಸಿರಾಟದಲ್ಲಿ ಸೇರಿಕೊಳ್ಳುತ್ತದೆ. ಮನೆಗಳ ಒಳಗೆ ಈ ಧೂಳು ತುಂಬಿಕೊಂಡು ಯಾವುದೇ ಆಹಾರ ಪದಾರ್ಥ ತಿನ್ನುವುದೇ ಕಷ್ಟವಾಗುತ್ತದೆ. ಗಾಳಿ ಬೀಸುವ ಕಾಲದಲ್ಲಿ ಮನೆಗಳ ಒಳಗೆ ಈ ಧೂಳನ್ನು ಗುಡಿಸುತ್ತಲೇ ಇರಬೇಕಾಗುತ್ತದೆ.
ಸೆಲ್ವಮ್ ಮನೆಯಿಂದ 100 ಅಡಿಗಳ ದೂರ ಇರುವ ರಸ್ತೆಯಲ್ಲಿ ಪೂರ್ವಕ್ಕೆ ನಡೆದು ಬಂದು ಉತ್ತರದಿಂದ ದಕ್ಷಿಣಕ್ಕೆ ಹಾದು ಹೋಗುವ ಮುಖ್ಯರಸ್ತೆ ಶ್ರೀಕೃಷ್ಣ ರಾಜೇಂದ್ರ ವಡೆಯರ್ ರಸ್ತೆಯಲ್ಲಿ ಉತ್ತರಕ್ಕೆ ನಡೆದರೆ ಆ ರಸ್ತೆ ಉತ್ತರ ದಿಕ್ಕಿನ ಕೊನೆಯಲ್ಲಿರುವ ಗೋಲ್ಕೊಂಡ ಗಣಿಯವರೆಗೂ ಸಾಗಿ ಮುಂದಕ್ಕೆ ಬಂಗಾರಪೇಟೆ ಕೋಲಾರ ಬೆಂಗಳೂರಿಗೆ ಹೋಗುತ್ತದೆ. ದಕ್ಷಿಣಕ್ಕೆ ಹೋದರೆ ಕಾಮಸಮುದ್ರ ಮತ್ತು ಕುಪ್ಪಂ ಕಡೆಗೆ ಸಾಗುತ್ತದೆ. ಈಶಾನ್ಯ ದಿಕ್ಕಿನಲ್ಲಿ ಕೇವಲ ಅರ್ಧ ಕಿ.ಮೀ. ದೂರದಲ್ಲಿ ಕೆಜಿಎಫ್ ಕೊನೆ ರೈಲು ನಿಲ್ದಾಣ ಮಾರಿಕುಪ್ಪಮ್ ಇದೆ. ಸೆಲ್ವಮ್ ಬೆಳಿಗ್ಗೆ 6 ಗಂಟೆಗೆಲ್ಲ ಎದ್ದು ಬಯಲು ಶೌಚಾಲಯಕ್ಕೆ ಹೋಗಿ ಬಂದು ಮನೆ ಒಳಗೆ ಸ್ನಾನ ಮಾಡಿ ಹಳೆ ಕುರ್ಚಿ ಮೇಲೆ ಕುಳಿತುಕೊಂಡು ತಿಂಡಿ ತಿನ್ನಲು ಸ್ಟೂಲ್‌ನ್ನು ಹತ್ತಿರಕ್ಕೆ ಎಳೆದುಕೊಂಡನು.
ಸೆಲ್ವಮ್‌ಗೆ ಕಾಲೋನಿ ಒಳಗಿರುವ ಸಾಮೂಹಿಕ ಶೌಚಾಲಯಕ್ಕೆ ಹೋಗುವುದಕ್ಕೆ ಇಷ್ಟವಿಲ್ಲ. ಇದನ್ನ ಸ್ಯಾನಿಟರಿ ಇನ್ಸ್ಪೆಕ್ಟರುಗಳು ನೋಡಿದರೆ ಪ್ರಶ್ನಿಸುತ್ತಾರೆ. ಆದರೆ ಸೆಲ್ವಮ್ ಬೆಳಿಗ್ಗೆಯೆ ಎದ್ದುಹೋಗಿ ಸಯನೈಡ್ ಗುಡ್ಡಗಳ ಹಿಂದೆ ಕೆಲಸ ಮುಗಿಸಿಕೊಂಡು ಬಂದುಬಿಡುತ್ತಾನೆ. ಕನಕ ಒಲೆ ಮುಂದೆ ಕುಳಿತುಕೊಂಡು ತಿಂಡಿ ತಯಾರು ಮಾಡುತ್ತಿದ್ದಾಳೆ. ನೆಲದ ಮೇಲೆ ಹಾಸಿದ್ದ ಚಾಪೆ ಮೇಲೆ ಮಗಳು ಸುಮತಿ ಇನ್ನೂ ಮಲಗಿದ್ದಾಳೆ. ಹತ್ತು ಇಡ್ಲಿಗಳನ್ನು ತಿಂದು ನೀರು ಕುಡಿದ ಸೆಲ್ವಮ್ ಎದ್ದುನಿಂತು ಹೊರಕ್ಕೆ ಬಂದು ಕಲ್ಲುಬಂಡೆ ಮೇಲೆ ಕುಳಿತುಕೊಳ್ಳುತ್ತಾನೆ. ಜೇಬಿನಿಂದ ಒಂದು ಬೀಡಿಯನ್ನು ಹೊರತೆಗೆದು ಅದಕ್ಕೆ ಬೆಂಕಿ ಹೊತ್ತಿಸಿಕೊಂಡು ಕೊನೆಯವರೆಗೂ ಬಿಡದೇ ಸೇದಿ ಬಂಡೆಯ ಮೂಲೆಯಲ್ಲಿ ಹೊಸಕಿ ಕಾಲುವೆಗೆ ಬಿಸಾಕಿದ.
ಮನೆ ಒಳಕ್ಕೆ ಬಂದ ಸೆಲ್ವಮ್ ಗಣಿ ಕಂಪನಿ ಕೊಟ್ಟಿರುವ ಬೂದುಬಣ್ಣದ ಉದ್ದನೇ ತೋಳಿನ ಶರ್ಟು, ಪ್ಯಾಂಟ್ ಧರಿಸಿ ಸ್ಟೂಲ್ ಮೇಲೆ ಕುಳಿತುಕೊಂಡು ಮೈನಿಂಗ್ ಬೂಟುಗಳನ್ನು ಹಾಕಿಕೊಂಡನು. ಪ್ಯಾಂಟ್ ಪಟ್ಟಿಗಳ ಒಳಕ್ಕೆ ಬೆಲ್ಟ್ ತೂರಿಸಿ ಗಟ್ಟಿಯಾಗಿ ಬಿಗಿದು ಕಟ್ಟಿ ಬೆಲ್ಟ್‌ನ ಹಿಂದೆ ಬ್ಯಾಟರಿ ಸಿಕ್ಕಿಸಿಕೊಂಡು ಅದರಲ್ಲಿರುವ ಪೈಪ್ ತೆಗೆದುಕೊಂಡು ತಲೆಮೇಲಿನ ಹೆಲ್ಮೆಟ್‌ಗೆ ಸಿಕ್ಕಿಸಿ ಲ್ಯಾಂಪ್‌ಅನ್ನು ಒಂದು ಸಲ ಸ್ವಿಚ್ ಆನ್ ಮಾಡಿ ಆಫ್ ಮಾಡಿ ನೋಡಿದ. ಮನೆ ಹೊರಕ್ಕೆ ಬರುತ್ತಾ, “ಕನಕ ನಾನು ಬರ್ತೀನಿ, ಮಣಿ ಬಂದ ಮೇಲೆ ಅವನಿಗೆ ತಿಂಡಿ ಕೊಟ್ಟು ಊರು ಸುತ್ತುವುದಕ್ಕೆ ಹೋಗದೆ ಚೆನ್ನಾಗಿ ಓದಿಕೊ ಅಂತ ಹೇಳು. ಸುಮತಿ ನೀನು ಮನೆಯಲ್ಲೇ ಅಮ್ಮನ ಜೊತೇನೆ ಇರಮ್ಮ” ಎನ್ನುತ್ತಾ ಮನೆ ಹಿಂದಿದ್ದ ಸೈಕಲ್ ತಳ್ಳಿಕೊಂಡು ರಸ್ತೆಗೆ ಬಂದ. ಅಷ್ಟರಲ್ಲಿ ಕನಕ ತಿಂಡಿ ತುಂಬಿದ ದಬ್ಬಿಯನ್ನು ಸೆಲ್ವಮ್ ಕೈಗೆ ಕೊಟ್ಟಳು. ಸೆಲ್ವಮ್ ಅದನ್ನು ಸೈಕಲ್‌ಗೆ ನೇತು ಹಾಕಿದ್ದ ಬಟ್ಟೆ ಬ್ಯಾಗಿನಲ್ಲಿ ಹಾಕಿಕೊಂಡು ಸೈಕಲ್ ತುಳಿಯುತ್ತಾ ಹೊರಟ. ಕನಕ, ಸೆಲ್ವಮ್ ಹೋಗುವುದನ್ನೇ ಹಿಂದಿನಿಂದ ನೋಡುತ್ತ ನಿಂತುಕೊಂಡಳು. ಆಗಲೇ ಕಾರ್ಮಿಕರು ಎಲ್ಲಾ ರಸ್ತೆಗಳಲ್ಲೂ ಒಂದೇ ರೀತಿಯ ಯುನಿಫಾರ್ಮ್ ಧರಿಸಿ ಯಾವುದೋ ಯುದ್ಧಕ್ಕೆ ಹೋಗುತ್ತಿರುವ ಸೈನಿಕರಂತೆ ಸೈಕಲ್‌ಗಳಲ್ಲಿ ಹೋಗುತ್ತಿದ್ದರು. ಸೆಲ್ವಮ್ ಕಾಣಿಸುವವರೆಗೂ ನೋಡಿದ ಕನಕ ಏನೋ ಯೋಚಿಸುತ್ತಾ ಮನೆ ಒಳಕ್ಕೆ ಬಂದಳು.
*****
ದೂರದಿಂದಲೇ ಒಂದು ಗಣಿಯ ಹೆಡ್‌ಗೇರ್ ಎತ್ತರವಾಗಿ ಕಾಣಿಸುತ್ತಿದೆ. ನಾಲ್ಕಾರು ಕಡೆಗಳಿಂದ ಕಾರ್ಮಿಕರು ಆ ಗಣಿ ಕಾಂಪೌಂಡ್ ಒಳಕ್ಕೆ ಸೈಕಲ್‌ಗಳಲ್ಲಿ ನುಗ್ಗಿಬಂದರು. ಗೇಟ್‌ನಲ್ಲಿರುವ ಪಂಜಾಬಿ ಭದ್ರಾತಾ ಸಿಬ್ಬಂದಿ, ಕಾರ್ಮಿಕರು ಧರಿಸಿರುವ ಯುನಿಫಾರ್ಮ್, ಬೂಟುಗಳು, ಬ್ಯಾಟರಿ ಮತ್ತು ಹೆಲ್ಮೆಟ್ಟುಗಳು ಸರಿಯಾಗಿ ಇವೆಯೇ ಎಂದು ನೋಡುತ್ತ ಒಳಕ್ಕೆ ಬಿಡುತ್ತಿದ್ದರು. ಕಾರ್ಮಿಕರು ಸೈಕಲ್‌ಗಳನ್ನು ಸ್ವಲ್ಪ ದೂರದಲ್ಲಿದ್ದ ಸೈಕಲ್ ಸ್ಟ್ಯಾಂಡ್‌ನಲ್ಲಿಟ್ಟು ಗಣಿ ಶ್ಯಾಫ್ಟ್ ಮುಂದಿರುವ ಉಕ್ಕಿನ ಗೂಡಿನ ಮುಂದೆ ಸಾಲಾಗಿ ನಿಂತುಕೊಳ್ಳತೊಡಗಿದರು. ಅಷ್ಟರಲ್ಲಿ ಸೈರನ್ ಸದ್ದು ಜೋರಾಗಿ ಕೇಳಿಸಿಕೊಂಡಿತು. ಅದು ಬೆಳಿಗ್ಗೆ ಏಳು ಗಂಟೆಯ ಮೊದಲ ಶಿಫ್ಟ್‌ನ ಸೈರನ್ ಆಗಿದ್ದು ಹತ್ತಾರು ಕಿ.ಮೀ.ಗಳ ವ್ಯಾಪ್ತಿಯವರೆಗೂ ಕೇಳಿಸುತ್ತದೆ. ಕಾರ್ಮಿಕರು ಸಂಪೂರ್ಣವಾಗಿ ಯುನಿಫಾರ್ಮ್‌ನಲ್ಲಿದ್ದು ಶ್ಯಾಫ್ಟ್ ಮೇಲಿನ ರಾಟೆ ಒಂದೇ ಸಮನೇ ತಿರುಗುತ್ತ ಕೇಜ್ ಅಥವಾ ಉಕ್ಕಿನ ಪಂಜರ ನೆಲದ ಮಟ್ಟಕ್ಕೆ ಬಂದು ನಿಂತುಕೊಳ್ಳುತ್ತದೆ. ಉಕ್ಕಿನ ಪಂಜರದ ಒಳಗಿದ್ದ ಆಪರೇಟರ್ ಬಾಗಿಲು ತೆರೆದಿದ್ದೆ ಕಾರ್ಮಿಕರು ಸಾಲಾಗಿ ಪಂಜರದ ಒಳಕ್ಕೆ ಹೋಗಿ ನಿಂತುಕೊಳ್ಳುತ್ತಾರೆ. ಆಪರೇಟರ್ ಬಾಗಿಲನ್ನು ಮುಚ್ಚಿಕೊಂಡು ಸಿಗ್ನಲ್ ಕೊಡುತ್ತಾನೆ.
ಸೆಲ್ವಮ್ ಜೊತೆಗೆ ಇನ್ನೂ 24 ಕಾರ್ಮಿಕರು ಸೇರಿಕೊಂಡ ಮೇಲೆ ಪಂಜರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹೊರಗಿನ ಭದ್ರತಾ ಸಿಬ್ಬಂದಿ ಎಲ್ಲವೂ ಸರಿಯಾಗಿದೆ ಎಂದು ಮನವರಿಕೆಯಾದ ಮೇಲೆ ಪಕ್ಕದಲ್ಲಿರುವ ದೊಡ್ಡದಾದ ಕಬ್ಬಿಣ ಸೀಟುಗಳ ಮನೆಯ ಒಳಗೆ ಇರುವ ಆಪರೇಟರ್‌ಗೆ ಸಂದೇಶ ಕೊಡುತ್ತಾರೆ. ಆ ಮನೆಯ ಒಳಗೆ ದೊಡ್ಡದಾದ ಉಕ್ಕಿನ ಡ್ರಮ್ ಸುತ್ತುತ್ತಿದ್ದು ಅದು ನೂರಾರು ಮೀಟರುಗಳ ಉದ್ದದ ಉಕ್ಕಿನ ಹಗ್ಗದೊಂದಿಗೆ ಪಂಜರವನ್ನು ಹಿಡಿದುಕೊಂಡಿತ್ತು.
ಈಗ ದೊಡ್ಡದಾದ ಗಣಿ ಎಂಬ ಬಾವಿಯ ಒಳಕ್ಕೆ ದೊಡ್ಡದಾದ ಲಿಫ್ಟ್‌ನಂತಹ ಪಂಜರ ಬರ‍್ರನೆ ಇಳಿಯುತ್ತಾ ಹೋಗುತ್ತದೆ. ದಿಢೀರನೆ ಒತ್ತಡದ ಏರುಪೇರು ಕಡಿಮೆಯಾಗಿ ಕಾರ್ಮಿಕರ ಕಿವಿಗಳು ಮುಚ್ಚಿಕೊಂಡಂತಾಗುತ್ತವೆ. ಆದರೆ ಅದು ಅವರಿಗೆ ಮಾಮೂಲಿಯಾಗಿದೆ. ಸೂಪರ್ ಫಾಸ್ಟ್ ರೈಲು ವೇಗವಾಗಿ ಧಾವಿಸುವಾಗ ಮಧ್ಯೆಮಧ್ಯೆ ಬರುವ ಬೆಳಕಿನ ನಿಲ್ದಾಣಗಳಂತೆ ನೂರು ಅಡಿಗಳಿಗೆ ಒಮ್ಮೆ ಬೆಳಕು ಜಗ್ ಜಗ್ ಎಂದು ಬರುತ್ತಿದೆ. ಅವೆಲ್ಲ ಗಣಿಯ ಸುರಂಗಗಳಿರುವ ಲೆವೆಲ್‌ಗಳು (ಹಂತಗಳು). ಉಕ್ಕಿನ ಪಂಜರ ಒಂದೇ ವೇಗವಾಗಿ 2.50 ಕಿ.ಮೀ. ಆಳ ತಲುಪಿ ನಿಂತುಕೊಂಡಿತು. ಪಂಜರದ ಬಾಗಿಲು ತೆರೆದುಕೊಂಡು ಎಲ್ಲಾ ಕಾರ್ಮಿಕರು ತಾವು ಕೆಲಸ ಮಾಡುವ ಸುರಂಗಗಳ ಕಡೆಗೆ ಬ್ಯಾಟರಿ ಆನ್ ಮಾಡಿಕೊಂಡು ಬೆಳಕಿನಲ್ಲಿ ನಡೆದುಕೊಂಡು ಹೊರಟರು.
ಸೆಲ್ವಮ್ ಜೊತೆಗೆ ಇನ್ನೂ ನಾಲ್ಕು ಜನ ಕಾರ್ಮಿಕರು ಅರ್ಧ ಕಿಲೋಮೀಟರ್ ದೂರದಲ್ಲಿ ಹೊಸದಾಗಿ ತೋಡುತ್ತಿರುವ ಸುರಂಗದಲ್ಲಿ ಚಿನ್ನದ ಅದಿರಿರುವ ಕಲ್ಲುಗಳನ್ನು ಮೊದಲಿಗೆ ಬಾಚಿ ತೆಗೆಯಬೇಕಾಗಿತ್ತು. ಭೂವಿಜ್ಞಾನಿ ಮತ್ತು ಗಣಿ ಎಂಜಿನಿಯರ್ ಒಂದು ದಿನ ಮುಂಚೆಯೇ ಬಂದು ಯಾವ ಕಡೆಗೆ ಎಷ್ಟು ಅಗಲದ ಸುರಂಗ ಮಾಡಬೇಕೆಂದು ಗೆರೆಗಳನ್ನು ಹಾಕಿಹೋಗಿದ್ದರು. ಕಾರ್ಮಿಕರು ಗಟ್ಟಿಯಾದ ಆಂಫಿಬೋಲೈಟ್ ಅಗ್ನಿ ಶಿಲೆಗಳ ಮಧ್ಯೆ ಚಿನ್ನ ಇರುವ ಕ್ವಾರ್ಡ್ಝ್ ಶಿಲೆಗಳಲ್ಲಿ ಡ್ರಿಲ್ಲಿಂಗ್ ಮಾಡಬೇಕಾಗಿತ್ತು. ನಿನ್ನೆ ಬ್ಲಾಸ್ಟಿಂಗ್ ಇಟ್ಟು ಸ್ಫೋಟಿಸಿದ್ದ ಅದರಿನ್ನು ಮೊದಲಿಗೆ ಬಾಚಿ ಟ್ರಾಲಿಗಳಿಗೆ ತುಂಬಿಸಿ ಕಳಿಸಲಾಯಿತು. ಅನಂತರ ಇಬ್ಬರು ಎರಡು ಕಡೆ ಶಿಲೆಗಳನ್ನು ಕೊರೆಯುವ ಯಂತ್ರಗಳನ್ನು ತೆಗೆದುಕೊಂಡು ಕೊರೆಯತೊಡಗಿದರು. ಅವರು ಕಣ್ಣುಗಳಿಗೆ ಗಾಗಲ್ ಮತ್ತು ಮುಖಕ್ಕೆ ಧೂಳು ತಡೆಯುವ ಮಾಸ್ಕ್‌ಗಳನ್ನು ಧರಿಸಿದ್ದರು. ಗಾಗಲ್ ಮತ್ತು ಮಾಸ್ಕ್‌ಗಳನ್ನು ಪಡೆಯಲು ಕಾರ್ಮಿಕರು ಹಲವಾರು ವರ್ಷಗಳಿಂದ ಆಂದೋಲನ ಮಾಡಿ ಕೊನೆಗೆ ಮೂರು ವರ್ಷಗಳ ಹಿಂದೆಯಷ್ಟೇ ಇವುಗಳನ್ನು ಪಡೆದುಕೊಂಡಿದ್ದರು. ಅವರು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡರೆ ಇನ್ನಿಬ್ಬರು ಅದೇ ಕೊರೆಯುವ ಯಂತ್ರಗಳನ್ನು ತೆಗೆದುಕೊಂಡು ಗೋಡೆಗಳಿಗೆ ಇಟ್ಟು ತೂತುಗಳನ್ನು ಮಾಡತೊಡಗಿದರು. ಸರಿಯಾಗಿ 12 ಗಂಟೆಗೆ ಅವರೆಲ್ಲ ತಂದಿದ್ದ ತಿಂಡಿಗಳನ್ನು ತಿಂದು ನೀರು ಕುಡಿದು ಸ್ವಲ್ಪ ಹೊತ್ತು ಸುಧಾರಿಸಿಕೊಂಡರು. ಮೇಲೆ ಕ್ಯಾಂಟೀನ್ ಇದ್ದರೂ ಹೋಗಿ ಬರಲು ಸಮಯ ಸಾಕಾಗುತ್ತಿರಲಿಲ್ಲ. ಸುರಂಗದ ತುಂಬಾ ಸಿಲಿಕಾ ಧೂಳು ತುಂಬಿಕೊಂಡಿತ್ತು. ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಮೇಸ್ತ್ರಿ ಬಂದು ಎಷ್ಟು ಕೆಲಸ ನಡೆದಿದೆ ಎಂದು ನೋಡಿಕೊಂಡು ಮುಂದೆ ಮಾಡುವ ಕೆಲಸದ ಬಗ್ಗೆ ಸೂಚನೆಗಳನ್ನು ಕೊಟ್ಟು ಹೊರಟುಹೋದನು.
ಸರಿಯಾಗಿ 2 ಗಂಟೆಗೆ ಡ್ರಿಲ್ಲಿಂಗ್ ಮಾಡಿದ್ದ 10 ತೂತುಗಳನ್ನು ಸೆಲ್ವಮ್ ಗುಂಪಿನ ಎಲ್ಲಾ ಕಾರ್ಮಿಕರು ಸೇರಿ ಸಿಡಿಮದ್ದನ್ನು ಎಲ್ಲಾ ತೂತುಗಳ ಒಳಕ್ಕೆ ಇಟ್ಟು ಗಟ್ಟಿಯಾಗಿ ಕೋಲು ಮತ್ತು ಕಬ್ಬಿಣದ ರಾಡ್‌ಗಳಲ್ಲಿ ಲೋಡ್ ಮಾಡಿ ಇಟ್ಟುಕೊಂಡರು. ಈಗ ಸಿಡಿಮದ್ದು ಸ್ಫೋಟಿಸುವ ಗುಂಪನ್ನು ಬಿಟ್ಟು ಉಳಿದವರು ಗಣಿ ಮೇಲಕ್ಕೆ ಪಂಜರಗಳಲ್ಲಿ ಹೊರಟುಹೋದರು. ಉಳಿದವರು ಸಿಡಿಮದ್ದುಗಳ ಬತ್ತಿಗಳಿಗೆ ಬೆಂಕಿ ಇಟ್ಟು ಬೇಗನೆ ನಡೆದುಕೊಂಡು ಪಂಜರದ ಹತ್ತಿರಕ್ಕೆ ಬಂದು ಸುರಕ್ಷಿತ ಸ್ಥಳಗಳಲ್ಲಿ ಅಡಗಿಕೊಂಡರು. ಅಷ್ಟರಲ್ಲಿ ಸಿಡಿಮದ್ದುಗಳು ಒಂದೊಂದಾಗಿ ಸ್ಫೋಟಗೊಂಡವು. ಎಲ್ಲವೂ ಸ್ಫೋಟಗೊಂಡ ಮೇಲೆ ಅವರೂ ಕೂಡ ಗಣಿ ಮೇಲಕ್ಕೆ ಬಂದುಬಿಟ್ಟಿರು. ಇದು ಹೊಸದಾಗಿ ಮಾಡುತ್ತಿರುವ ಸುರಂಗಗಳಲ್ಲೆಲ್ಲ ದಿನನಿತ್ಯ ನಡೆಯುವ ಕೆಲಸ. ಮತ್ತೆ ಮರುದಿನ ಬೆಳಗ್ಗೆ ಕಾರ್ಮಿಕರು ಹೋಗಿ ಎಷ್ಟು ಶಿಲಾರಾಶಿ ಕುಸಿದಿವೆ ಎಂದು ನೋಡಿಕೊಂಡು ಅದಿರನ್ನೆಲ್ಲ ಬಾಚಿ ಟ್ರಾಲಿಗಳಲ್ಲಿ ತುಂಬಿಕೊಂಡು ಬಂದು ಒಂದು ಕಡೆ ಸಿಂಕ್‌ಗೆ ಬೀಳಿಸುತ್ತಿದ್ದರು. ಅದನ್ನೆಲ್ಲ ಅಲ್ಲಿಂದ ಮೇಲಕ್ಕೆ ತಂದು ಮಿಲ್ಲುಗಳಿಗೆ ರವಾನಿಸುತ್ತಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಮೊದಲ ಶಿಫ್ಟ್‌ನ ಕಾರ್ಮಿಕರು ಗಣಿಗಳ ಮೇಲಕ್ಕೆ ಬಂದು ಸೈಕಲ್‌ಗಳಲ್ಲಿ ಅವರವರ ಮನೆಗಳ ಕಡೆಗೆ ಹೊರಟರು. ಅದು ಕಾರ್ಮಿಕರ ಪ್ರತಿದಿನದ ಮರುಹುಟ್ಟಾಗಿದ್ದು ಮಹಿಳೆಯರು ಅವರ ಗಂಡಂದಿರರನ್ನು ನೋಡಿದ್ದೆ ಸುರಕ್ಷಿತವಾಗಿ ಹಿಂದಕ್ಕೆ ಕರೆತಂದೆಯಲ್ಲ ದೇವರೆ ಎಂದು ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದರು.
(ಮುಂದುವರೆಯುವುದು…)
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.