ಆಹಹಹಾ, ಯಾಕಮ್ಮಣ್ಣಿ ಬಂದ್ಬಿಡು, ಅಯ್ಯೋ ಅಯ್ಯೋ ಅಯ್ಯೋ…., ಕೇಳಿಸ್ಕೊಂಡ್ಯೇನೋ ಕೆಪ್ರ, ಮನೆಹಾಳಿ, ಗೆಣಸು ಕೀಳು ಹೋಗು, ಚಿನಾಲಿ, ಚಂಗ್ಲು… ಹೀಗೆ ಅವಳ ಶಬ್ದಕೋಶದ ತುಂಬ ಆ ಪಾತ್ರದ ಮಾತುಗಳದ್ದೇ ಪಾರಮ್ಯ. ಕತ್ತೆ, ಕೋತಿ, ಗೂಬೆ ಎನ್ನುವ ಮೂರು ಪದದಿಂದಾಚೆ ಬೈಗುಳವೇ ಆಡಿ, ಕೇಳಿ ಗೊತ್ತಿಲ್ಲದ ಮನೆಯಲ್ಲಿ, ಇವಳ ಈ ಹೊಸ ವ್ಯಾಕರಣ, ಶಬ್ದಕೋಶ ಅಸಮಾಧಾನದ ಹೊಗೆ ಹಬ್ಬಿಸಿತ್ತು. “ಅಲ್ಲಿಂದು ಅಲ್ಲಿಗೆ ಬಿಟ್ಟು ಬರಬೇಕು. ಮನೆಯಲ್ಲಿ ನಮ್ಮ ಮನೆಭಾಷೆ ಹೇಗಿದೆಯೋ ಹಾಗೆಯೇ ಆಡಬೇಕು. ನಟನೆಯೇ ಬೇರೆ. ನಿಜಜೀವನವೇ ಬೇರೆ” ಎಂದು ಅವಳ ಪುಟ್ಟ ತಲೆಯೊಳಗೆ ತುಂಬಲು ಪ್ರಯತ್ನಿಸಿ ಸೋತಿದ್ದಳು.
ಎಸ್ ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ “ಹೆಜ್ಜೆ ಮೂಡದ ಹಾದಿ” ನಿಮ್ಮ ಓದಿಗೆ

“ಚೋಟುದ್ದ ಇದ್ದಾಳೆ. ನನಗೇ ತಿರುಗಿ ವಾದಿಸ್ತಾಳೆ. ಚುರುಕಾಗಿದ್ದಾಳಂತ ಮೆರೆಸಿದ್ದೇ ತಪ್ಪಾಯ್ತು. ಅಪ್ಪ ಅಮ್ಮಂಗೂ ಬೆಲೆ ಕೊಡದಷ್ಟು ಕೊಬ್ಬು ಹೆಚ್ಚಾಗಿದೆ. ನಾಲ್ಕು ಬಿಗಿದು, ಅರ್ಧ ದಿನ ಉಪವಾಸ ಕೆಡವಿದ್ರೆ ಸರಿಯಾಗ್ತಾಳೆ. ಈಗಲೇ ಹೇಳ್ತಿದ್ದೀನಿ. ಯಾರೂ ಅವಳಿಗೆ ಅಚ್ಚಾ ಅಚ್ಚಾ ಮಾಡೋ ಅಗತ್ಯ ಇಲ್ಲ. ತಾನೇ ಬಂದು ತಪ್ಪಾಯ್ತು ಅಂತ ಕೇಳಿಕೊಂಡ ಮೇಲೆ, ಮುಂದಿನ ಮಾತು. ಈಗ ದಾರಿಗೆ ತರದಿದ್ರೆ ಕೈಮೀರಿ ಹೋಗ್ತಾಳೆ. ಆಮೇಲೆ ಬಾಯಿಬಡಕೊಂಡು ಉಪಯೋಗ ಇಲ್ಲ.” ರಂಜಿತಾ ಕೋಣೆಯಿಂದ ನಡುಮನೆಗೆ, ನಡುಮನೆಯಿಂದ ಸಿಂಕ್ ಕಡೆಗೆ, ಅಲ್ಲಿಂದ ಅಡುಗೆಮನೆಗೆ ದಡದಡನೆ ಓಡಾಡುತ್ತಾ ತಿಂಡಿಗೆ ಬದಲಾಗಿ ಸ್ಮೂದಿ ಕುಡಿದು, ಕಣ್ಣಿಗೆ ಕಾಡಿಗೆ, ಪುಟ್ಟದೊಂದು ಹಣೆಬೊಟ್ಟು, ಅಗಲ ಜುಮುಕಿ ತೊಡುತ್ತಾ, ಆಳೆತ್ತರದ ಕನ್ನಡಿಯೊಳಗೆ ತಿರುಗಾಮುರುಗಾ ಇಣುಕುತ್ತಾ, ಅವತ್ತಿನ ಟಿವಿ ಶೋಗೆ ರೆಡಿಯಾಗುತ್ತಿದ್ದಳು. ಅಗಲ ಕಣ್ಣು, ಪುಟ್ಟ ಮೂಗು, ತುಂಬುದುಟಿಯ ರಂಜಿತಾ, ಕೋಪದಿಂದ ಕೆಂಪಾಗಿದ್ದ ಮುಖವನ್ನು ಕಾಂಪ್ಯಾಕ್ಟ್ ಪೂಸಿ ತಿಳಿಯಾಗಿಸುವ ಪ್ರಯತ್ನದಲ್ಲಿರುವಾಗ, ಮನೆಯಲ್ಲಿದ್ದ ಅತ್ತೆ, ಗಂಡನಿಗೆ ಹುಕುಂ ಜಾರಿಗೊಳಿಸಿದ್ದಳು.

ಶಾಂತಕ್ಕ ಸೊಸೆಯ ಮಾತು ಕೇಳಿಸಿಯೂ ಕೇಳಿಸದವರಂತೆ ಹೂ ಕಟ್ಟುವುದರಲ್ಲಿ ನಿರತರಾಗಿದ್ದರು. ಅವರ ಮೊಬೈಲ್‌ನಲ್ಲಿ ಸುಬ್ಬುಲಕ್ಷ್ಮಿಯ ಸಿರಿಕಂಠದಲ್ಲಿ ಸಹಸ್ರನಾಮವೋ, ಭಜನೆಯೋ ಮೊಳಗುತ್ತಿತ್ತು. ಗಂಡನಂತೂ ಅರೆಮುಚ್ಚಿದ ಲ್ಯಾಪ್ ಟಾಪ್ ಮುಂದೆ ಕಕ್ಕಾಬಿಕ್ಕಿಯಾಗಿ ಕುಳಿತಿದ್ದ. ಅದು ಅವನ ಆಫೀಸ್ ಕೆಲಸದಲ್ಲಿ ಉದ್ಭವಿಸಿದ ತೊಂದರೆಯಿಂದಿರಬೇಕು. ಹೆಂಡತಿ, ಮನೆ, ಮಗು, ಅಪ್ಪ ಅಮ್ಮ ಹೀಗೆ ಯಾವ ವಿಷಯಕ್ಕೂ ಆತ ತಲೆಕೊಟ್ಟವನೇ ಅಲ್ಲ. ಚೆನ್ನಾಗಿ ಓದಬೇಕು. ಒಳ್ಳೆಯ ಕೆಲಸ ಹಿಡಿದು, ಮದುವೆ ಅಂತಾಗಿ, ಒಂದು ಮಗು ಆಗಿಬಿಟ್ಟರೆ ಜೀವನ ಪಾವನ ಅಂತ ಸಿದ್ಧಸೂತ್ರಕ್ಕೆ ಬದ್ಧನಾಗಿ ಬೆಳೆದವನಾತ. ಹೇಗೋ ಏನೋ ಇದುವರೆಗೂ ಎಲ್ಲವೂ ಅಂದುಕೊಂಡಂತೆ ನಡೆದಾಗಿದೆ. ಮಗಳ ವಿದ್ಯಾಭ್ಯಾಸದ ಹೊಣೆ ಹೆಗಲೇರುವವರೆಗೂ ಆತ ನಿಶ್ಚಿಂತನಾಗಿರಲು ತೀರ್ಮಾನಿಸಿದಂತಿತ್ತು. ಪುಟ್ಟ ಮಾನ್ಯತಾ ಮಂಚದ ಮೂಲೆಯಲ್ಲಿ ಮೂತಿಯುಬ್ಬಿಸಿ ಕುಳಿತಿದ್ದಳು. ರಂಜಿತಾ ಕೊಟ್ಟ ಪೆಟ್ಟು, ಚುರುಕ್ ಎಂದು ಉರಿಯುತ್ತಿದ್ದಿರಬೇಕು. ತನ್ನ ಪುಟ್ಟ ತೋಳಿನ ಮೇಲೆ ಬಿದ್ದ ಕೆಂಪನೆ ಬೆರಳಚ್ಚನ್ನು ಸವರಿಕೊಳ್ಳುತ್ತಿದ್ದಳು. “ಐ ಹೇಟ್ ಯೂ ರಂಜುಮಾ” ಎನ್ನಬೇಕೆನ್ನಿಸಿದರೂ, ಭಯದಿಂದ ತುಚಿಕಚ್ಚಿ ಕುಳಿತಿದ್ದಳು.

“ಸದ್ಯ ಇವತ್ತು ಲೈವ್ ಷೋ ಒಪ್ಪಿಕೊಂಡಿಲ್ಲ. ಹಬ್ಬದ ದಿನದ ಸ್ಪೆಷಲ್ ಎಪಿಸೋಡ್ ಅಂತ ರೆಕಾರ್ಡಿಂಗ್‌ಗೆ ಕರೆದಿದ್ದಾರೆ. ಮಾನ್ಯತಾಗೆ ಜ್ವರ ಅಂದಿದ್ದಕ್ಕೆ, ಕ್ಲಿಪ್ಪಿಂಗ್ಸ್ ಹಾಕಿ ಕವರ್ ಮಾಡ್ತೀವಿ. ತೊಂದರೆ ಇಲ್ಲ. ನೀವು ಬನ್ನಿ ಮೇಡಂ ಅಂದಿದ್ದಾನೆ ಹುಡುಗ. ಈ ರಬ್ಬಚ್ಚಿನ ನಂಬ್ಕೊಂಡು ಇನ್ಮೇಲೆ ಎಲ್ಲೂ ಕಮಿಟ್ ಆಗಬಾರದು. ಓಹ್… ಕ್ಯಾಬ್ ಬಂದೇ ಬಿಡ್ತು. ನಾನು ಬರ್ತೀನಿ ಅತ್ತೆಮ್ಮ. ಮಧ್ಯಾಹ್ನ ಬರೋದು ತಡ ಆಗಬಹುದು. ಅಡುಗೆ ಅರ್ಧ ಮುಗಿದಿದೆ. ಬೇಳೆ-ತರಕಾರಿ ಬೇಯಿಸಿದ್ದೀನಿ. ನೀವೊಂಚೂರು ಉಪ್ಪು ಖಾರ ಹಾಕ್ಕೊಂಬಿಡಿ. ಕೋಸಂಬರಿಗೆ ಉಪ್ಪು ಹಾಕಿಲ್ಲ. ಮಿಕ್ಕಿದ್ದೆಲ್ಲ ರೆಡಿ ಇದೆ. ಬರ್ತೀನಿ.” ಎಂದು ಮಾತಾಡುತ್ತಲೇ ಹೊರಟಳು.

“ಹೋಗೆಲೆ ಮಿಟಿಕಲಾಡಿ. ಕಯ್ಯಪಿಯ್ಯ ಅಂದ್ರೆ ಮೂಗು ಕುಯ್ದು ಉಪ್ಪಿನಕಾಯಿ ಹಾಕಿ ನೆಕ್ಕಿಬಿಡ್ತೀನಿ. ನಂಗೆಲ್ಲ ಗೊತ್ತಿದೆ. ನೀನೇನ್ ನಂಗೆ ಕಲಿಸೋಕೆ ಬರಬೇಡ ಆಯ್ತಾ…. ಎಂ.ಪಿ. ಹಿಯರ್. ಮಾನ್ಯತಾ ಪ್ರಸಾದ್” ಎಂದು ಕೈಬಾಯಿ ತಿರುವುತ್ತಾ ಉತ್ತರ ಕೊಟ್ಟಾಗ, ಪಿತ್ತ ನೆತ್ತಿಗೇರಿ ಛಟೀರ್ ಅಂತ ಒಂದೇಟು ಬಿಗಿದ ಕ್ಷಣವೇ ಗುಂಗಿನಂತೆ ಮನಃಪಟಲದ ಮೇಲೆ ಮೂಡುತ್ತಿತ್ತು. ಸ್ಟುಡಿಯೋ ತಲುಪಲು ಕನಿಷ್ಟ ಮುಕ್ಕಾಲುಗಂಟೆಯಾದರೂ ಬೇಕಿತ್ತು. ಕನ್ನಡ ಬಾರದ ಹಿಂದಿ ಕ್ಯಾಬ್ ಡ್ರೈವರ್ ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಯಾರೊಂದಿಗೋ ಮಾತನಾಡುತ್ತಾ ಕಾರು ಓಡಿಸುತ್ತಿದ್ದ. ಮಗಳು “ಹೋಗೆಲೆ…” ಎನ್ನುವ ಸಲುಗೆ ತೆಗೆದುಕೊಂಡ ರೀತಿ ಇರಿಸುಮುರಿಸು ಹೆಚ್ಚಿಸುತ್ತಿತ್ತು. ಅವಳು ಯೂಟ್ಯೂಬ್‌ನ ಚಾನೆಲ್ ಒಂದಕ್ಕೆ ಒಪ್ಪಿಕೊಂಡ ಪಾತ್ರದ ಸಂಭಾಷಣೆಯ ಪ್ರಭಾವ ದಿನನಿತ್ಯದ ಮಾತಿನಲ್ಲಿ ಢಾಳಾಗಿ ಗೋಚರಿಸುತ್ತಿತ್ತು. ಆಹಹಹಾ, ಯಾಕಮ್ಮಣ್ಣಿ ಬಂದ್ಬಿಡು, ಅಯ್ಯೋ ಅಯ್ಯೋ ಅಯ್ಯೋ…., ಕೇಳಿಸ್ಕೊಂಡ್ಯೇನೋ ಕೆಪ್ರ, ಮನೆಹಾಳಿ, ಗೆಣಸು ಕೀಳು ಹೋಗು, ಚಿನಾಲಿ, ಚಂಗ್ಲು… ಹೀಗೆ ಅವಳ ಶಬ್ದಕೋಶದ ತುಂಬ ಆ ಪಾತ್ರದ ಮಾತುಗಳದ್ದೇ ಪಾರಮ್ಯ. ಕತ್ತೆ, ಕೋತಿ, ಗೂಬೆ ಎನ್ನುವ ಮೂರು ಪದದಿಂದಾಚೆ ಬೈಗುಳವೇ ಆಡಿ, ಕೇಳಿ ಗೊತ್ತಿಲ್ಲದ ಮನೆಯಲ್ಲಿ, ಇವಳ ಈ ಹೊಸ ವ್ಯಾಕರಣ, ಶಬ್ದಕೋಶ ಅಸಮಾಧಾನದ ಹೊಗೆ ಹಬ್ಬಿಸಿತ್ತು. “ಅಲ್ಲಿಂದು ಅಲ್ಲಿಗೆ ಬಿಟ್ಟು ಬರಬೇಕು. ಮನೆಯಲ್ಲಿ ನಮ್ಮ ಮನೆಭಾಷೆ ಹೇಗಿದೆಯೋ ಹಾಗೆಯೇ ಆಡಬೇಕು. ನಟನೆಯೇ ಬೇರೆ. ನಿಜಜೀವನವೇ ಬೇರೆ” ಎಂದು ಅವಳ ಪುಟ್ಟ ತಲೆಯೊಳಗೆ ತುಂಬಲು ಪ್ರಯತ್ನಿಸಿ ಸೋತಿದ್ದಳು. “ಅಲ್ಲಿ ನಾನು ಡೈಲಾಗ್ ಹೇಳ್ದಾಗ, ಸೂಪರ್ ಚಿನ್ನಿ…. ವಾರೆವ್ಹಾ ಬೊಂಬೆ… ಒಂದು ಸಲ ಹೇಳಿಕೊಟ್ಟರೆ ಫಟ್ಟಂತ ಮಾಡ್ತಾಳೆ. ಚುರುಕು ಮೆಣಸಿನಕಾಯ್ ಅಂತೆಲ್ಲ ಎಲ್ಲರೂ ಹೊಗಳ್ತಾರೆ. ನೀನು ಕೂಡ ಅಲ್ಲಿ ಖುಷಿಯಾಗಿ ಚಪ್ಪಾಳೆ ಹೊಡೀತೀಯ. ಮನೇಲಿ ಮಾತ್ರ ಅಮ್ಮಣ್ಣಿ ಅನ್ನಬೇಡ. ಮನೆಹಾಳಿ ಕೆಟ್ಟಪದ. ಲೊಟ್ಟೆಲೊಸ್ಕು ಅಂತ ಪುಂಗಿ ಊದ್ತೀಯ. ನಂಗೆ ಹೀಗೆ ಮಾತಾಡೋಕೆ ಇಷ್ಟ. ಡೋಂಟ್ ಫೋರ್ಸ್ ಮೀ ಮಾ.” ಎಂದು ಅರ್ಧಮಾತಿನಲ್ಲೇ ನಿರ್ಧಾರ ಪ್ರಕಟಿಸಿ ಎದ್ದು ಹೋಗಿದ್ದಳು. ಹೊಡೆದರೆ ಮಕ್ಕಳು ಮೊಂಡು ಬೀಳ್ತಾರೆ. ಒಳ್ಳೆಯ ಮಾತಿನಲ್ಲೇ ತಿದ್ದುವ ತಾಳ್ಮೆ ಇರಬೇಕು ಎಂದು ತಲೆಗೆ ನೂರಿ ಕಳಿಸಿದ್ದ ಅಮ್ಮನನ್ನು ನೆನೆದು ಸಹನೆಯಿಂದರಲು ಪ್ರಯತ್ನಿಸಿ, ಇಂದು ಸೋತು ಒಂದೇಟು ಬಿಗಿದಿದ್ದಳು.

ಇದೆಲ್ಲ ಶುರುವಾಗಿ ಎಂಟು-ಹತ್ತು ತಿಂಗಳಿರಬೇಕು. ಟ್ಯಾಲೆಂಟ್ ಷೋ ಒಂದಕ್ಕೆ ಇವಳ ಕೈಲಿ ಮಾಡಿಸಿ ಕಳಿಸಿದ್ದ ವೀಡಿಯೋ ಭರ್ಜರಿ ಯಶಸ್ಸು ಗಳಿಸಿತ್ತು. ಚಾನೆಲ್ಲಿನವರು ಮೂರು-ನಾಲ್ಕು ತಿಂಗಳ ಕಾಲ, ಹೇಳಿಕೊಟ್ಟಿದ್ದನ್ನೆಲ್ಲ ಪಟಪಟ ಒಪ್ಪಿಸುವ, ಮುದ್ದಾದ ಮೊಲದ ಮರಿಯಂತಿರುವ ಮಾನ್ಯತಾಳನ್ನು ಮೆರೆಸಿದ್ದರು. ಆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ, ಇವಳ ಹೆಸರಿಗಿದ್ದ ಜನಪ್ರಿಯತೆಯನ್ನು ಬಳಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಯೂಟ್ಯೂಬ್ ಚಾನೆಲ್ ಒಂದರ ಒಪ್ಪಂದಕ್ಕೆ ಸಹಿ ಹಾಕಿ ಆಗಿತ್ತು. ತಾನು ಸಣ್ಣವಳಿದ್ದಾಗಿನಿಂದ ಸ್ಪರ್ಧಿಸಿ, ಗೆಲ್ಲಲಾಗದೆ ಉಳಿದ ಯುದ್ಧವೊಂದರಲ್ಲಿ ಈಗಷ್ಟೇ ಜಯಿಸಿದ ಖುಷಿ ರಂಜಿತಾಳನ್ನು ಹುಚ್ಚಿಗೆಬ್ಬಿಸಿತ್ತು. ತನ್ನ ಸೋದರತ್ತೆಯ ಮಗಳು ವಿದ್ಯಾ, ಓದುವುದರಲ್ಲಿ ಮಾತ್ರವಲ್ಲ. ಹಾಡು, ನಟನೆ, ನೃತ್ಯ, ಕ್ರೀಡೆ ಎಲ್ಲದರಲ್ಲೂ ಪದಕಗಳನ್ನು ಗೆಲ್ಲುತ್ತಾ, ತಂದೆತಾಯಿಗಳ ಹೆಮ್ಮೆಯ ಗರಿಯಾಗಿದ್ದಳು. ಇರುವುದಕ್ಕೆ ಸ್ವಲ್ಪ ಹೆಚ್ಚೇ ಮಸಾಲೆ ಸೇರಿಸಿ, ಅದ್ಭುತವಾಗಿ ಜಂಬ ಕೊಚ್ಚುವ ಸಾಮರ್ಥ್ಯವುಳ್ಳ ಸೋದರತ್ತೆ, ಸಮಯ ಸಾಧಿಸಿ ಜನ ಸೇರಿದ ಕಡೆಯಲ್ಲೆಲ್ಲ ತನ್ನ ಮಗಳ ಗುಣಗಾನ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. ಬೇರೆ ಮಕ್ಕಳನ್ನು ಕಾಲಕಸದಂತೆ ಕಾಣುತ್ತಾ, “ಏನೇ ರಂಜು? ಮೊನ್ನೆ ಎಕ್ಸಾಂ ಅಲ್ಲಿ ಎಂಭತ್ತು ಪರ್ಸೆಂಟ್ ಅಂತೆ. ನಿಮ್ಮಪ್ಪನ್ನ ಕೇಳಿ ತಿಳ್ಕೊಂಡೆ. ಇವತ್ತಿನ ಕಾಲಕ್ಕೆ ಎಪ್ಪತ್ತು, ಎಂಭತ್ತೆಲ್ಲ ಯಾವ ಮಹಾ ಮಾರ್ಕ್ಸು? ಇಷ್ಟಾಗಿ ನಮ್ಮ ವಿದ್ಯಾ ತರಹ ಡಾನ್ಸು, ಡ್ರಾಮಾ, ಸಂಗೀತ ಅಂತೇನಾದ್ರೂ ಕಲಿತಿದ್ಯಾ? ಅದೂ ಇಲ್ಲ‌. ಇದೂ ಇಲ್ಲ. ನಿಮ್ಮಪ್ಪ ಅಮ್ಮ ಅಂತೂ ಮಕ್ಕಳನ್ನ ಹೆತ್ತು, ಶಾಲೆಗೆ ಹಾಕಿದ್ರೆ ತಮ್ಮ ಜವಾಬ್ದಾರಿ ಮುಗೀತು ಅನ್ಕೊಂಡ್ರೇನೋ… ಹತ್ತು ಕಡೆ ವಿಚಾರಿಸಿ, ನಾಲ್ಕಾರು ಕ್ಲಾಸಿಗೆ ಸೇರಿಸಿ‌ ನಮ್ಮ ವಿದ್ಯಾ ತರಹ ತಯಾರು ಮಾಡೋಕು ಛಾತಿ ಇರಬೇಕು.” ಎಂದು ದೊಡ್ಡವರ ಮುಂದೆ ಆಡಿ ಜಯಿಸಲಾಗದ ಮಾತುಗಳನ್ನು ನಮ್ಮಂತಹ ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರದಂತೆ ಪ್ರಯೋಗಿಸುತ್ತಿದ್ದರು. “ಆ ಅತ್ತೆ ಬರೋ ಕಡೆ ನಾನು ಬರಲ್ಲ. ಸುಮ್ಮನೆ ಹಂಗಿಸಿ ಮಾತಾಡ್ತಾರೆ. ವಿದ್ಯಾ ಒಬ್ಬಳೇ ಗ್ರೇಟ್ ಅನ್ನೋ ಹಾಗೆ” ಎಂದು ಅಮ್ಮನ ಮುಂದೆ ಆಡಿಯೂ ಉಪಯೋಗವಿರಲಿಲ್ಲ. “ಅಯ್ಯೋ… ನಿಮ್ಮತ್ತೆ ಹಾಗೆ ಸ್ವಲ್ಪ. ಆಸೆ ಜೀವ. ದೇವರು ಅವಳ ಅಕ್ಕರಾಸ್ತೆಗೆ ಸರಿಯಾಗಿ ಮುತ್ತಿನಂತಹ ಮಗಳನ್ನ ಕೊಟ್ಟಿದಾನೆ. ಜಂಬಪಡೋದ್ರಲ್ಲಿ ಆಶ್ಚರ್ಯವೇನಿದೆ? ಅವರ ಮಗಳ ಬಗ್ಗೆ ಅವರು ಕೊಚ್ಕೊಂಡ್ರೆ ನಮ್ಮನ್ನ ಹಂಗಿಸಿದ ಹಾಗೇನು? ಹೌದು. ನಿಮ್ಮ ಮಗಳು ಜಾಣೆ ಅಂದರೆ ಮುಗಿಯಿತು. ಎಲ್ಲ ಬೆರಳು ಸಮವಿರಲ್ಲ. ಒಡಹುಟ್ಟಿದವರೇ ಒಂದು ರೀತಿ ಇರಲ್ಲ. ನಾನಾಗಲಿ. ನಿಮ್ಮಪ್ಪ ಆಗಲಿ. ಒಂದು ದಿನಕ್ಕಾದರೂ ನಿಮ್ಮ ಮೇಲೆ ಒತ್ತಡ ಹೇರಿಲ್ಲ ತಾನೆ? ಮತ್ಯಾಕೆ ಈ ತರಹ ಸಿಟ್ಟು ಮಾಡ್ಕೊಂಡು ಮಖೇಡಿ ತರಹ ಮನೆಯಲ್ಲಿ ಕೂರಬೇಕು? ನಡಿ. ನಾಲ್ಕು ಜನರ ಜೊತೆ ಸೇರಿದ್ರೆ ನಿನಗೇ ಎಲ್ಲ ಅರ್ಥವಾಗತ್ತೆ” ಅಂತ ಸಮಾಧಾನ ಮಾಡಿ ಮತ್ತೆ ಮತ್ತೆ ಅತ್ತೆಯ ಬಾಯಿಗೆ ಸಿಲುಕುವಂತೆ ಮಾಡುತ್ತಿದ್ದಳು.

ಅಮ್ಮ ಯಾರನ್ನೂ ದೂರದ, ಯಾರೊಂದಿಗೂ ಕಾದಾಡದ ಪಲಾಯನವಾದಿ. ದೊಡ್ಡ ಕನಸನ್ನು ಕಂಡು ನನಸಾಗಿಸಲು ಹೋರಾಡದ ಅಲ್ಪತೃಪ್ತ ಜೀವ. ಅವಳೂ ಸೋದರತ್ತೆಯ ಹಾಗಿದ್ದಿದ್ದರೆ ನಮಗೆ ಈ ಅನ್ನಿಸಿಕೊಂಡು, ಮೂಲೆಗುಂಪಾಗುವ ಸ್ಥಿತಿ ಬರುತ್ತಿರಲಿಲ್ಲ ಎನ್ನಿಸಿ ಗಂಟಲುಬ್ಬಿ ಉಸಿರು ಕಟ್ಟುತ್ತಿತ್ತು. ದೊಡ್ಡವರಿಗೆ ಎದುರು ಮಾತಾಡಬಾರದೆಂಬ ಕಟ್ಟಳೆ ಬಾಯಿ ಕಟ್ಟಿಹಾಕುತ್ತಿತ್ತು. ಎದುರುವಾದಿಸುವ ಧೈರ್ಯ ಬಲಿಯುವ ಹೊತ್ತಿಗೆ, ಮನಸ್ಸಿನ ಮೂಲೆಯಲ್ಲಿ ಸಣ್ಣಗೆ ಮೊಳಕೆಯೊಡೆದಿದ್ದ ಕೀಳರಿಮೆ ಬೃಹದಾಕಾರ ತಾಳಿ, ಮೂಕವಾಗಿಸಿತ್ತು. ಇಷ್ಟೇನೆ ಬದುಕು ಎಂಬ ನಿರಾಶೆಯನ್ನು ಹಿಮ್ಮೆಟ್ಟಿಸಿದ್ದು ಚಿನಕುರಳಿಯಂತೆ ಮಾತಾಡುತ್ತಿದ್ದ ಮಗಳು. ತಾನು ಬಸುರಿಯಿದ್ದಾಗ ಆಶಿಸಿದಂತೆ, ಹಂಬಲಿಸಿದಂತೆ ಅಗಲ ಕಣ್ಣುಗಳ, ಚೆಂದುಟಿಯ ಮುದ್ದು ಮಗು. ನೋಡಿದ ತಕ್ಷಣ ಕಲಿಯುವ, ಕಲಿತಂತೆಯೇ ಮಾಡಿ ತೋರಿಸುವ ಚೂಟಿ. ಇಷ್ಟು ಕಾಲ ಕಾಡಿದವರಿಗೆಲ್ಲ ಉತ್ತರ ಕೊಡಲು ಹುಟ್ಟಿದ ಕೂಸು. ಬಾಲ್ಯದಿಂದ ಈವರೆಗಿನ ತನ್ನನ್ನು ಕಾಡಿದ ಸಾಧಾರಣ, ಆರಕ್ಕೇರದ ಮೂರಕ್ಕಿಳಿಯದ, ಯಾರಿಂದಲೂ ‘ವಾಹ್’ ಎಂಬ ಉದ್ಗಾರ ಹೊರಡಿಸದ ಬದುಕು ಈಗ ಅಸಾಧಾರಣವಾಗುವ ಶುಭಚಿಹ್ನೆ ತೋರಿತ್ತು. ಮಗಳಿಗೆ ಸಿಕ್ಕ ಅವಕಾಶ, ಯಶಸ್ಸು, ಜನಪ್ರಿಯತೆಯು ತನ್ನೊಂದಿಗೆ ತರಹೇವಾರಿ ಪ್ರಶ್ನೆಗಳನ್ನೂ ಹುಟ್ಟುಹಾಕಿತ್ತು. ಇದುವರೆಗೂ ಮನೆ, ಗಂಡ, ಮಗು ಎಂದು ಕುದುರೆಗೆ ಪಟ್ಟಿ ಹಾಕಿದಂತೆ ನಡೆಯುತ್ತಿದ್ದ ಸೊಸೆ, ಇಂಟರ್ವ್ಯೂ, ಶೂಟಿಂಗ್, ಕ್ಲಾಸ್ ಅಂತೆಲ್ಲ ಓಡಾಟ ಹಚ್ಚಿಕೊಂಡಿದ್ದು ಅತ್ತೆಮನೆಯವರ ಹೊಟ್ಟೆ ಉರಿಗೆ ಕಾರಣವಾದರೆ, ಎಷ್ಟೆಲ್ಲ ಪ್ರತಿಭಾನ್ವಿತ ಮಕ್ಕಳಿದ್ದಾರೆ. ಅವರಿಗೆ ದೊರೆಯದ ಮೀಡಿಯಾ ಕವರೇಜ್ ಈ ಹುಡುಗಿಗೇಕೆ? ಎಂಬ ಆಕ್ರೋಶ ಜನಸಾಮಾನ್ಯರದ್ದು. ಈ ಯಶಸ್ಸು ಎಷ್ಟು ಕಾಲವೋ? ಇರುವಾಗಲೇ ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂಬ ಅವಕಾಶವಾದಿತನ ಮಾಧ್ಯಮಲೋಕದ್ದು‌. ಅಂತೂ ಪ್ರಶ್ನೆಯೊಂದು ರಂಜಿತಾಳನ್ನು ರೊಚ್ಚಿಗೆಬ್ಬಿಸಿತ್ತು.

ಮನೆಯವರು, ನೆಂಟರಿಷ್ಟರು, ಅಷ್ಟೇ ಏಕೆ? ವೀಕ್ಷಕರು ಕೂಡ ಮಕ್ಕಳ ಕೈಲಿ ದುಡಿಸಿಕೊಂಡು ತಿನ್ನುವ ಭಂಡತನವೇಕೆ? ಎಂದು ಪ್ರಶ್ನಿಸಿದಾಗ, “ಪ್ರತಿಭೆ, ಯಶಸ್ಸು ಎನ್ನುವುದು ಎಲ್ಲರಿಗೂ ಒಲಿಯಲ್ಲ. ನನ್ನ ಮಗಳಿಗೆ ಇರುವ ಅಭಿನಯ ಚಾತುರ್ಯಕ್ಕೆ ಪ್ರೋತ್ಸಾಹ ಕೊಡುತ್ತಿದ್ದೇವೆಯೇ ಹೊರತು, ಅವಳ ಕೈಲಿ ದುಡಿಸಿ ತಿನ್ನುವ ಸ್ಥಿತಿ ನಮಗೆ ಬಂದಿಲ್ಲ‌. ದೇವರು ಕೊಟ್ಟಿರುವುದರಲ್ಲಿ ನೆಮ್ಮದಿಯಿಂದ ಇದ್ದೇವೆ. ಆಡುವವರಿಗೇನು? ಎಲುಬಿಲ್ಲದ ನಾಲಿಗೆ. ಇಷ್ಟಬಂದಂತೆ ಒದರುತ್ತಾರೆ. ನನ್ನ ಮಗಳ ಭವಿಷ್ಯದ ಬಗ್ಗೆ ನನಗಿಂತ ಹೆಚ್ಚಾಗಿ ಬೇರೆಯವರಿಗೆ ಕಾಳಜಿ ಇರುವುದು ಅಸಾಧ್ಯ. ಇದೇ ಕೊನೆ. ಇನ್ನು ಮುಂದೆ ಇಂತಹ ಕಿಡಿಗೇಡಿಗಳ ಪ್ರಶ್ನೆಗೆ ನಾನು ಉತ್ತರ ಕೊಡುವುದಿಲ್ಲ.” ಎಂದು ಖಡಕ್ ಹೇಳಿಕೆ ಕೊಟ್ಟಿದ್ದಳು. ಎಲ್ಲ ಮಾತಿಗೂ ಇರುವಂತೆ, ಇದಕ್ಕೂ ಪರ-ವಿರೋಧ ಕಮೆಂಟ್‌ಗಳು ಜಾಲತಾಣದ ತುಂಬ ಹರಿದಾಡಿದ್ದವು. ಇತ್ತೀಚೆಗೆ ಯಾವುದೇ ವೀಡಿಯೋ, ರೀಲ್ಸ್ ಕೆಳಗಿನ ಕಮೆಂಟ್‌ಗಳನ್ನು ಓದುವ ಸಾಹಸ ಮಾಡುತ್ತಿರಲಿಲ್ಲ. ಎಷ್ಟೇ ಮನಸ್ಸಿಗೆ ಹಚ್ಚಿಕೊಳ್ಳಬಾರದು ಎಂದುಕೊಂಡರೂ, ನೇರ ಎದೆಗೆ ಒದೆಯುವ ಮಾತುಗಳು ಯಾವ ಕವಚವನ್ನಾದರೂ ಬೇಧಿಸಿ ಬರುವಷ್ಟು ಹರಿತವಾಗಿರುತ್ತಿತ್ತು.

ಮಗು ಹುಟ್ಟಿದಾಗಿನಿಂದ ಕೂತರೆ ನಿಂತರೆ ತಪ್ಪುಗಳನ್ನೆಣಿಸಿ, “ನೀನೆಂತಹ ಅಮ್ಮ?” ಎಂದು ಪ್ರಶ್ನಿಸುತ್ತಿದ್ದ ಜನರ ಮನಃಸ್ಥಿತಿಯಿಂದ ಮೊಂಡು ಬಿದ್ದಿದ್ದ ರಂಜಿತಾ, ಮಾನ್ಯತಾಳಿಗೆ ಸಿಕ್ಕ ಈ ಅವಕಾಶದ ಮಹಾಪೂರದಲ್ಲಿ, ಬದುಕಿನ ದಿಕ್ಕು ನಿಚ್ಚಳವಾಯಿತೆಂದು ಸಂಭ್ರಮಿಸಿದ್ದಳು. ಮಧ್ಯಮವರ್ಗದ ಸಾಧಾರಣ ಜೀವನದಲ್ಲಿ ಸಿಕ್ಕ ತಿರುವು ಮಿಕ್ಕೆಲ್ಲ ಜಂಜಡಗಳನ್ನು ಇಷ್ಟು ಕಾಲ ಮರೆಸಿತ್ತು. ಕನಸಿನ ಲೋಕದಿಂದ ವಾಸ್ತವಕ್ಕಿಳಿಯಲು ಮಗಳು ತಿರುಗಿಬಿದ್ದಿದ್ದೇ ನೆಪವಾಯಿತು. ಅದೇನು ಕಾರಣವೋ? ಇಡೀ ರಸ್ತೆ ತುಂಬ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹತ್ತು ನಿಮಿಷಕ್ಕೊಮ್ಮೆ ಮುವ್ವತ್ತು ಅಡಿ ದೂರ ಕ್ರಮಿಸುವಷ್ಟು ನಿಧಾನಗತಿಯ ಸಂಚಾರ. ಸದ್ಯ. ಮಳೆಬೀಳಲು ಶುರುವಾಗದಿದ್ದರೆ ಸಾಕೆನ್ನಿಸಿತು. ಹೋಗೆಲೆ…. ಎಂದ ಮಗಳ ಮಾತು ರಿಂಗಣಿಸಿ, ಎದೆಯಲ್ಲಿ ತಳಮಳ ಹೆಚ್ಚಾಗುತ್ತಾ ಸಾಗಿ, ಕಣ್ಣು ತುಳುಕಿತು. ಇನ್ನೇನು ಎಲ್ಲವೂ ನನಸಾಯಿತೆನ್ನುವಾಗ ಒದಗಿದ ಈ ಸಮಸ್ಯೆ ಕರುಳಿಗೇ ಕತ್ತರಿ ಹಾಕಿತ್ತು.

“ಏನೇ ರಂಜು? ಮೊನ್ನೆ ಎಕ್ಸಾಂ ಅಲ್ಲಿ ಎಂಭತ್ತು ಪರ್ಸೆಂಟ್ ಅಂತೆ. ನಿಮ್ಮಪ್ಪನ್ನ ಕೇಳಿ ತಿಳ್ಕೊಂಡೆ. ಇವತ್ತಿನ ಕಾಲಕ್ಕೆ ಎಪ್ಪತ್ತು, ಎಂಭತ್ತೆಲ್ಲ ಯಾವ ಮಹಾ ಮಾರ್ಕ್ಸು? ಇಷ್ಟಾಗಿ ನಮ್ಮ ವಿದ್ಯಾ ತರಹ ಡಾನ್ಸು, ಡ್ರಾಮಾ, ಸಂಗೀತ ಅಂತೇನಾದ್ರೂ ಕಲಿತಿದ್ಯಾ? ಅದೂ ಇಲ್ಲ‌. ಇದೂ ಇಲ್ಲ. ನಿಮ್ಮಪ್ಪ ಅಮ್ಮ ಅಂತೂ ಮಕ್ಕಳನ್ನ ಹೆತ್ತು, ಶಾಲೆಗೆ ಹಾಕಿದ್ರೆ ತಮ್ಮ ಜವಾಬ್ದಾರಿ ಮುಗೀತು ಅನ್ಕೊಂಡ್ರೇನೋ… ಹತ್ತು ಕಡೆ ವಿಚಾರಿಸಿ, ನಾಲ್ಕಾರು ಕ್ಲಾಸಿಗೆ ಸೇರಿಸಿ‌ ನಮ್ಮ ವಿದ್ಯಾ ತರಹ ತಯಾರು ಮಾಡೋಕು ಛಾತಿ ಇರಬೇಕು.” ಎಂದು ದೊಡ್ಡವರ ಮುಂದೆ ಆಡಿ ಜಯಿಸಲಾಗದ ಮಾತುಗಳನ್ನು ನಮ್ಮಂತಹ ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರದಂತೆ ಪ್ರಯೋಗಿಸುತ್ತಿದ್ದರು.

ಮಕ್ಕಳ ಭವಿಷ್ಯದ ಬಗ್ಗೆ ಎಷ್ಟೆಲ್ಲ ರಮ್ಯ ಕನಸುಗಳನ್ನು ಹೆಣೆಯುತ್ತೇವೆ. ನಮಗೊದಗಿದ ಕಷ್ಟ ಅವರಿಗೆ ತಿಳಿಯಬಾರದೆಂದು ನಟಿಸುತ್ತೇವೆ. ಒಳ್ಳೆಯ ವಿದ್ಯೆ, ಸಂಸ್ಕಾರ ಕಲಿಸುವುದೇ ಧರ್ಮವೆಂದು ನಂಬುತ್ತೇವೆ. ಈ ಮಧ್ಯೆ ನಮ್ಮ ನನಸಾಗದ ಕನಸುಗಳನ್ನು, ಬೆಟ್ಟದಷ್ಟು ನಿರೀಕ್ಷೆಯ ಭಾರವನ್ನು ಹೊರಿಸಿ, ಅವರು ನಮ್ಮನ್ನು ಮೆಚ್ಚಿ ಗೌರವಿಸಲಿ. ನಮ್ಮ ತ್ಯಾಗಕ್ಕೆ ತಕ್ಕ ವಿಶ್ವಾಸ ತೋರಲೆಂದು ಆಶಿಸುತ್ತೇವೆ. ನಮ್ಮ ಕನಸನ್ನು ಮುಂದುವರೆಸಲೆಂದು ಹುಟ್ಟಿದವರೆ ಮಕ್ಕಳು? ನಾಳೆ ಮಗಳು ಬಂದು, ನನ್ನ ಬಾಲ್ಯವನ್ನು ಕಿತ್ತುಕೊಂಡ ಕಲ್ಲುಹೃದಯಿ ನೀನು ಎಂದರೆ, ನನ್ನಲ್ಲಿ ಉತ್ತರವಿದೆಯೆ? ಬದುಕಿಗೆ ಏಕೆ ಇಷ್ಟು ಮುಖ? ಒಂದು ಪರಿಚಿತವಾದೊಡನೆ, ಅಪರಿಚಿತ ಮುಖವೊಂದು ಎದುರಾಗಿ, ಅರಿ ನನ್ನ ಭಾವವನ್ನು ಎಂದು ಸವಾಲೆಸೆಯುತ್ತದೆ. ಇದುವರೆಗಿನ ಹೆಜ್ಜೆಗಳೆಲ್ಲ ತಪ್ಪು ಎನಿಸಿದಾಗ, ಆಗೊಮ್ಮೆ ಇದೇ ಸರಿಯೆನಿಸಿತ್ತು ಎಂಬ ಎಚ್ಚರ. ಈಗ ಇಷ್ಟು ದಿನ ಕಲಿತಿದ್ದನ್ನು ಮರೆಸುವುದು ಹೇಗೆ? ಮಾನ್ಯತಾಳ ಕಳೆದ ಮುಗ್ಧತೆ, ಬಿಳಿಹಾಳೆಯಂತಹ ಮನೋಲೋಕವನ್ನು ಮತ್ತೆ ಪಡೆಯುವುದು ಸಾಧ್ಯವೇ? ಹೆಜ್ಜೆಯಿಡುವ ತನಕ ದಾರಿಯೇ ತೆರೆದುಕೊಳ್ಳದ ವಿಸ್ಮಯ ಈ ಬದುಕು. ಆದದ್ದಾಗಲಿ. ಇಷ್ಟು ದಿನ ತೋರಿದ ಭಂಡಧೈರ್ಯದ ಮುಂದುವರಿಕೆಯಾಗಿ, ಈಗವಳನ್ನು ಹೊಸ ಹಾದಿಯೆಡೆಗೆ ಕರೆದೊಯ್ಯುವೆ ಎಂದು ನಿರ್ಧರಿಸಿದಾಗಲೂ ಎದೆ ಢವಗುಟ್ಟುತ್ತಿತ್ತು.

ಹೇಳಿದ ಸಮಯಕ್ಕಿಂತ ಅರ್ಧಗಂಟೆ ತಡವಾಗಿ ತಲುಪಿದ್ದಕ್ಕೆ, ಹುಡುಗ ಸಿಡಿಸಿಡಿಯೆನ್ನುತ್ತಿದ್ದ. “ಸ್ಟುಡಿಯೋ ಬುಕ್ ಮಾಡಿರ್ತೀವಿ ಮೇಡಂ. ಒಬ್ಬರು ನಿಧಾನಿಸಿದರೆ, ಎಲ್ಲರ ಕೆಲಸವೂ ಏರುಪೇರಾಗತ್ತೆ. ಮುಂದಿನ ಸಲ ಹೀಗೆ ಮಾಡ್ಬೇಡಿ ಆಯ್ತಾ?” ಎಂದು ಚೂರು ಅಸಮಾಧಾನದ ದನಿಯಲ್ಲಿ ಎಚ್ಚರಿಸಿದ.

“ಆದರೆ ನಾನು ಹೇಳಬೇಕಿರೋದು ಬೇರೆಯೇ ಇದೆ… ಇನ್ನು ಮುಂದೆ ಮಾನ್ಯತಾ ಯಾವುದೇ ಷೋಗಳಲ್ಲಿ, ಯಾವುದೇ ಸೀರೀಸ್‌ಗಳಲ್ಲಿ ಕಾಣಿಸಿಕೊಳ್ಳಲ್ಲ. ಅವಳನ್ನ ಮೀಡಿಯಾ ಲೋಕದಿಂದ ಒಂದಷ್ಟು ವರ್ಷ ಆಚೆ ಇಡೋಣ ಅಂತ ನಿರ್ಧರಿಸಿದ್ದೀವಿ. ಇದು ಗೊತ್ತಿದ್ದೂ ಷೋ ನಡೆಸಬಹುದು ಅನ್ನೋ ಹಾಗಿದ್ರೆ, ಇವತ್ತು ರೆಕಾರ್ಡ್ ಮಾಡಿ.” ಎಂದಳು.

ಅವನು ತನ್ನ ಕೈಗಳನ್ನು ಬಾಯಿಯವರೆಗೂ ತಂದು, ಕುರುಚಲು ಗಡ್ಡದ ಮೇಲೆ ಕೈಯಾಡಿಸಿ, ತಲೆಗೂದಲಲ್ಲಿ ಕೈಯಾಡಿಸಿಕೊಳ್ಳುತ್ತಾ,
“ಇದೇನ್ ಮೇಡಂ ಇಂತಹ ಟ್ವಿಸ್ಟು? ನಿಂತ ಕಾಲಲ್ಲಿ ಏನೂ ತೀರ್ಮಾನ ಮಾಡೋಕೆ ಆಗ್ತಿಲ್ಲ. ಒಂದು ಕೆಲಸ ಮಾಡಿ. ನಿಮಗೆ ಅಭ್ಯಂತರ ಇಲ್ಲದಿದ್ದರೆ, ಇನ್ನೊಂದು ದಿನ ರೆಕಾರ್ಡಿಂಗ್ ಇಟ್ಕೊಳ್ಳೋಣ. ನಾನು ನಮ್ ಪ್ರೋಗ್ರಾಮ್ ಹೆಡ್ ಜೊತೆ ಮಾತಾಡಿ ತಿಳಿಸ್ತೀನಿ. ಓಕೆನಾ ಮೇಡಂ?” ಎಂದು ಉತ್ತರಕ್ಕಾಗಿ ಕಾಯುತ್ತಾ ನಿಂತ.

ಯಾಕೆ? ಏನು? ನಮ್ಮ ಟೈಂ ಯಾಕೆ ವೇಸ್ಟ್ ಮಾಡಿದ್ರಿ ಎಂದು ನೂರೆಂಟು ಪ್ರಶ್ನೆ ಕೇಳದೆ, ಸಮಚಿತ್ತದಲ್ಲಿ ವ್ಯವಹರಿಸಿದ ಅವನ ರೀತಿಯನ್ನು ಮೆಚ್ಚುತ್ತಲೇ,
“ಓಕೆ. ಹಾಗೆಯೇ ಆಗಲಿ. ನನ್ನಿಂದ ನಿಮ್ಮ ಸಮಯ ಹಾಳಾಯ್ತು. ಕ್ಷಮಿಸಿ.” ಎನ್ನುತ್ತಾ ಮನೆಕಡೆಗೆ ಕ್ಯಾಬ್ ಬುಕ್ ಮಾಡಲು ಮೊಬೈಲ್ ತೆಗೆದಳು.

ಮನೆಯಿಂದ ನಾಲ್ಕು ಮಿಸ್ಡ್ ಕಾಲ್ ಇತ್ತು. ಸ್ಟುಡಿಯೋ ಒಳಕ್ಕೆ ಕಾಲಿರಿಸುವಾಗಲೇ ಸೈಲೆಂಟ್ ಮೋಡ್‌ಗೆ ಹಾಕಿದ್ದು ಒಳ್ಳೆಯದಾಯಿತು ಎನ್ನಿಸಿದರೂ, ಚೂರು ಗಾಬರಿಯಿಂದಲೇ ಕರೆ ಮಾಡಿದಳು.

ಅತ್ತಲಿಂದ, ” ರಂಜು ಮಾ , ಸಾರಿ. ಇನ್ಮೇಲೆ ಹೋಗೆ ಬಾರೆ ಅನ್ನಲ್ಲ. ಊಟ ಮಾಡಬೋದ ನಾನೀಗ?” ಎಂದು ಅಳುವಿನಿಂದ ಭಾರವಾದ ದನಿಯಲ್ಲಿ ಮಗಳು ಬೇಡುತ್ತಿದ್ದಳು.

ಉಕ್ಕಿ ಬಂದ ಅಳುವನ್ನು ಸಂಭಾಳಿಸುತ್ತಾ, “ಜಾಣಮರಿ ನೀನು. ಊಟ ಮಾಡು.” ಎಂದಷ್ಟೇ ಹೇಳಿ ಕರೆ ತುಂಡರಿಸಿದಳು. ಅಮ್ಮನ ನಿರ್ಲಿಪ್ತ ಮನಃಸ್ಥಿತಿ ನನ್ನನ್ನು ಕಾಡಿದಂತೆಯೇ, ನನ್ನ ಮಹತ್ವಾಕಾಂಕ್ಷೆ ಮಗಳನ್ನು ಕಾಡಬಹುದಲ್ಲವೆ ಎನ್ನಿಸಿ ಪೆಚ್ಚಾದಳು.

*****

ಇದಾಗಿ ವಾರ ಕಳೆದಿರಬೇಕು. ಸಾಮಾಜಿಕ ಜಾಲತಾಣದ ತುಂಬೆಲ್ಲ ಮಾನ್ಯತಾಳ ಕುರಿತಾದ ಊಹಾಪೋಹಗಳು ಎಗ್ಗಿಲ್ಲದೆ ಹರಿದಾಡತೊಡಗಿತು. ಲಕ್ಷಗಟ್ಟಲೆ ಅಡ್ವಾನ್ಸ್ ತೊಗೊಂಡು ಉಂಡೆನಾಮ ಹಾಕಿದ ರಂಜಿತಾ, ಮಾನ್ಯತಾಳಿಗೆ ಕಾಡುತ್ತಿದೆಯಾ ಕಿಡ್ನಿ ಸಮಸ್ಯೆ? ಹಣದ ಆಸೆಗೆ ಬಲಿಯಾದ ಪ್ರತಿಭೆ ಮಾನ್ಯತಾ ಪ್ರಸಾದ್, ಲೈಂಗಿಕ ದೌರ್ಜನ್ಯಕ್ಕೆ ಒಳಗಾದಳಾ ಮುದ್ದು ಹುಡುಗಿ? ಕೋರ್ಟ್ ಮೆಟ್ಟಿಲೇರಿದ ರಂಜಿತಾ ಪ್ರಸಾದ್- ವಿಚ್ಚೇದನಕ್ಕೆ ಅರ್ಜಿ… ಹಿಂದೊಮ್ಮೆ ರಂಜಿತಾಳ ಜೊತೆ ಹತ್ತು ನಿಮಿಷ ಮಾತನಾಡದವರು ಕೂಡ, ತಮ್ಮ ವಿದ್ವತ್ ಪ್ರದರ್ಶನಕ್ಕೆ ವೇದಿಕೆ ಹುಡುಕಿಕೊಂಡರು. ತಾವೇ ಕಣ್ಣಾರೆ ಕಂಡಷ್ಟು ವಿಶದವಾಗಿ ವಿವರಿಸತೊಡಗಿದರು. ಎಲ್ಲರೂ ತಮ್ಮಷ್ಟಕ್ಕೆ ಸಂಸ್ಕೃತಿ ಚಿಂತಕರು, ಮನೋವಿಶ್ಲೇಷಕರು, ಇತಿಹಾಸಕಾರರು, ಶಿಕ್ಷಣ ತಜ್ಞರು, ಮಾಧ್ಯಮ ವಿದ್ವಾಂಸರಾಗಿ ತಮ್ಮ ಮೂಗಿನನೇರಕ್ಕೆ ಇಡೀ ಪ್ರಕರಣದ ವಿಶ್ಲೇಷಣೆ ನಡೆಸಿ, ತೀರ್ಪು ನೀಡಿದರು.

ಜನರು ಸ್ವಂತದ ನೂರು ಗೋಜಲುಗಳನ್ನು ಕ್ಷಣಕಾಲ ಮರೆತು, ತಮ್ಮ ಮಹದಾಭಿಪ್ರಾಯವನ್ನು ದಾಖಲಿಸಲು ಮರೆಯಲಿಲ್ಲ. ರಂಜಿತಾಳ ಮನೆ ಅಕ್ಷರಶಃ ರಣಾಂಗಣವಾಗಿತ್ತು. ಹಣ, ಹೊಗಳಿಕೆ, ಹೆಸರು ಬಂದಾಗ ಮರೆತುಹೋಗಿದ್ದ ಮಾತುಗಳೆಲ್ಲ ಈಗ ಸಾಣೆಹಿಡಿಸಿಕೊಂಡು ಝಳಪಿಸುತ್ತಾ ಹೊರಬಂದಿದ್ದವು. “ನಮ್ಮ ವಿದ್ಯಾ ಮಕ್ಕಳ‌ ಕೈಗೆ ಮೊಬೈಲ್ ಕೊಡುವ ದುರಭ್ಯಾಸ ಮಾಡಿಸಿಯೇ ಇಲ್ಲ. ಈ ಕಾಲದ ಮಕ್ಕಳಾದರೂ ಎಷ್ಟು ಶಿಸ್ತಾಗಿ ಶಾಸ್ತ್ರೀಯ ಸಂಗೀತ, ಭರತನಾಟ್ಯ, ವೇದಪಾಠ, ಸ್ವಿಮಿಂಗ್ ಅಂತ ಸಮಯಕ್ಕೆ ಸರಿಯಾಗಿ ಹೊರಟುಬಿಡ್ತಾರೆ. ಮಾತು ಅಷ್ಟೇ. ಒಂದು ಕೆಟ್ಟಶಬ್ದ ಬಾಯಲ್ಲಿ ಬಂದ್ರೆ ಕೇಳಿ. ರಂಜು ಮಗಳನ್ನ ಟಿವಿಗೆ ಕಳಿಸಿ, ಆ ಚಿಲ್ಲರೆ ಯೂಟ್ಯೂಬ್ ಚಾನೆಲ್ ಅಲ್ಲಿ ಪಾರ್ಟ್ ಮಾಡಿಸಿ ಮನೆಮರ್ಯಾದೆ ಬೀದಿಗೆ ತಂದಿದ್ದಾಳೆ. ನಮ್ಮಂತಹ ಸಂಪ್ರದಾಯಸ್ಥರು ಹಾಗೆ ಟಿವಿ, ಸಿನಿಮಾ ಅಂತ ಕುಣಿದರೆ, ಹೀಗೆ ಆಗೋದು. ನಮ್ಮ ವಿದ್ಯಾ ಕೂಡ ಸ್ಕೂಲು, ಕಾಲೇಜಲ್ಲಿ ನಾಟಕದಲ್ಲಿ ಪಾರ್ಟ್ ಮಾಡೋಳು. ರಾಣಿ ಚೆನ್ನಮ್ಮ, ಅಕ್ಕಮಹಾದೇವಿ, ಭಾರತಮಾತೆ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಹೀಗೆ. ರಂಜು ಮಗಳ ತರಹ ಹಾಳುಮೂಳು ನಾಟಕ ಆ ಕಾಲಕ್ಕೆ ಇರಲೂ ಇಲ್ಲ. ನಾವು ಕಳಿಸಲೂ ಇಲ್ಲ.” ಎಂದು ಸೋದರತ್ತೆ ತಮ್ಮ ತಮಟೆ ಬಡಿದಾಗಿತ್ತು. ಅತ್ತೆ ಶಾಂತಕ್ಕ ಮುಸಿಮುಸಿ ಅಳುತ್ತಾ, ತಣ್ಣಗಿನ ಮೌನ, ಕೆಂಗಣ್ಣ ನೋಟದಲ್ಲಿ ಇರಿಯುತ್ತಿದ್ದರು.

ಅವರ ಮಾತುಗಳೆಂದೂ ನೇರವಾಗಿ ತನ್ನಂಗಳಕ್ಕೆ ಬಂದು ಬಿದ್ದಿದ್ದಿಲ್ಲ. ಊರೆಲ್ಲ ಸವಾರಿ ಮಾಡಿ, ಕಡೆಯಲ್ಲಿ ನನ್ನ ಕಿವಿಗೆ ಬಂದರಷ್ಟೇ ಅದು ಅತ್ತೆ ಉವಾಚ. ಈ ಎಲ್ಲ ಊಹಾಪೋಹ, ಸುಳ್ಳುಸುದ್ದಿಗಳಿಗೆ ತೆರೆ ಎಳೆಯೋಣವೆಂದರೆ, ಮಾಧ್ಯಮ ಮಿತ್ರರು ಆಟ ಇನ್ನಷ್ಟು ರಂಗೇರಲಿ ಎಂದು ಕಾಯುತ್ತಿದ್ದಂತೆ, “ಈಗ ನಮ್ಮ ಚಾನೆಲ್‌ನ ಅವಾರ್ಡ್ ಫಂಕ್ಷನ್ ಗಡಿಬಿಡಿಯಲ್ಲಿದ್ದೀವಿ ಮೇಡಂ. ಅದಕ್ಕೆ ಯಾವ ಹೊಸ ಪ್ರೋಗ್ರಾಂಗಳು, ಇಂಟರ್ವ್ಯೂ ಶೂಟಿಂಗ್ ನಡೆಯುತ್ತಿಲ್ಲ‌. ಶುರು ಮಾಡಿದ ಕೂಡಲೇ ನಾನೇ ನಿಮಗೆ ತಿಳಿಸ್ತೀನಿ.” ಎಂದು ನುಣುಚಿಕೊಂಡರು. “ಯಾವುದೋ ಚಾನೆಲ್ ಅಲ್ಲಿ ಪ್ರೋಗ್ರಾಂ ಕೊಟ್ಟು ಈಗ ಗೋಳು ಹೇಳೋಕೆ ನಮ್ಮ ಚಾನೆಲ್‌ಗೆ ಬಂದ್ರೆ ಹೇಗೆ? ನೀವು ಕೇಳಿದ ತಕ್ಷಣ ಸ್ಲಾಟ್ ಕೊಡೋಕೆ ಆಗಲ್ಲ ರೀ…” ಎಂದಿಬ್ಬರು ಎಗರಾಡಿದ್ದರು. ಪ್ರಿಂಟ್ ಮೀಡಿಯಾದಲ್ಲಿ ಕೊಟ್ಟ ಹೇಳಿಕೆಗಳು ಅಷ್ಟೇನೂ ಸದ್ದು ಮಾಡಲಿಲ್ಲ. ಅದನ್ನು ಹಿಡಿದು ಮತ್ತಷ್ಟು ವಿಚಿತ್ರ ಶೀರ್ಷಿಕೆಗಳೊಂದಿಗೆ ವಿಕೃತಿ ಮೆರೆಯಲು ಒಂದಷ್ಟು ಚಾನೆಲ್‌ಗಳು ಮುಂದಾದವು. ಫೇಸ್ ಬುಕ್ ಲೈವ್ ಅಲ್ಲಿ ಕೊಟ್ಟ ಸ್ಪಷ್ಟನೆಯನ್ನು ಜನರೇ ನಿರಾಕರಿಸಿದ್ದರು. ಕೆಟ್ಟದ್ದನ್ನು, ಸೋಲನ್ನು, ಮೋಸವನ್ನು ಒಪ್ಪಿಕೊಂಡಷ್ಟು ಸರಳವಾಗಿ ವಾಸ್ತವವನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.

ಹೊರಗಿ‌ನ ಹೋರಾಟ, ಒಳಗಿನ ತಾಕಲಾಟ ತಾರಕಕ್ಕೇರಿತ್ತು. ಇನ್ನು ಮಾನ್ಯತಾ ಕಲಿತಷ್ಟು ಸುಲಭಕ್ಕೆ ಮರೆಯಲು ಸಾಧ್ಯವಿರಲಿಲ್ಲ. ಮನೆಯವರ ದುಸುಮುಸು ಕೂದಲಿನಲ್ಲಿ ಕತ್ತು ಕುಯ್ಯುತ್ತಿತ್ತು. ಗಂಡ ಮಾತ್ರ, “ಆಗಿದ್ದಾಯ್ತು ರಂಜು. ಕೆಲವೊಂದನ್ನು ಹಾಗೆಯೇ ಬಿಟ್ಟರೆ ತಾನಾಗಿಯೇ ಪರಿಹಾರ ಕಂಡುಕೊಳ್ಳತ್ತೆ. ಈಗ ಯಾವೆಲ್ಲ ಕಾಂಟ್ರಾಕ್ಟ್ ಗಳಿವೆ? ಅವುಗಳಿಂದ ಹೊರಬರುವ ಮಾರ್ಗವೇನು? ಕೊಡಬೇಕಾದ ಪರಿಹಾರ ಮೊತ್ತವೇನು? ಇವೆಲ್ಲ ಒಬ್ಬ ಒಳ್ಳೆಯ ಲಾಯರ್ ಮೂಲಕ ಕಂಡುಕೊಂಡು, ಆ ಕೆಲಸ ಮುಗಿಸೋಣ. ಮಿಕ್ಕ ವಿಷಯ ಕಾಲಕ್ಕೆ ಬಿಟ್ಟುಬಿಡೋಣ.” ಎಂದಿದ್ದ. ಸೋದರತ್ತೆ ತನ್ನನ್ನು ಹೀಗೆಳೆದು, ನಿನ್ನ ಹಣೆಬರಹ ಇಷ್ಟೇ ಎಂದು ಷರಾ ಬರೆದಂತೆಯೇ, ತಾನು ಗಂಡನನ್ನು, ಓದಿ ಓದಿ ಕೆಟ್ಟ ಕೂಚುಂಭಟ್ಟ, ಹೆಂಡತಿ- ಮಗಳ ಭವಿಷ್ಯದ ಬಗ್ಗೆ ಕನಸಿಲ್ಲದ ಬೇಜವಾಬ್ದಾರಿ ಮನುಷ್ಯ ಎಂದು ಷರಾ ಬರೆದಿದ್ದೆ. ಆದರೆ ಆ ನಿರ್ಭಾವುಕ ಮುಖವಾಡದ ಹಿಂದೆ ಇದ್ದ ಪ್ರಬುದ್ಧತೆ, ಸಮಚಿತ್ತ ಮನಃಸ್ಥಿತಿ ಅರಿವಾಗಲು ಈ ಹೊಡೆತ ಅನಿವಾರ್ಯವಾಗಿತ್ತೇನೋ… ಏನೆಲ್ಲ ಕಳೆದುಹೋಯಿತೆಂಬ ನೋವಿನಲ್ಲೂ, ಪಡೆದುಕೊಂಡ ಭರವಸೆಯ ಆಸರೆ ನಗುವರಳಿಸಿತ್ತು. ಹೆಜ್ಜೆ ಮೂಡದ ಹಾದಿಯಲ್ಲಿ ಮೊದಲ ಹೆಜ್ಜೆ ಗಟ್ಟಿಯಾಗಿ ಇರಿಸಿದ್ದೆವು.