ನದಿಗೊಂದು ಮನವಿ

ಎಂತಿದ್ದರೂ ಸೇರುವೆ ನೀ ಕಡಲು
ವಿಸ್ತಾರ ಜಲರಾಶಿಯೇ ನಿನ್ನ ಗಮ್ಯಸ್ಥಾನ
ನಡುವೆ ಏಕೆ ಅಬ್ಬರ.

ನದಿಯೆಂದರೆ ಮಾತೆ; ಮಾತೃ ಹೃದಯಿ.
ಮಾತೆ ಮಾಡುವಳೆ ಮಕ್ಕಳ ಹರಣ.
ನದಿಯ ತಡಿಯಲ್ಲೇ ಸಿಂಧೂ ಹರಪ್ಪದಂತಹ
ನೂರಾರು ವಸಾಹತುಗಳು ಬೆಳೆದಿವೆ.
ಸುಂದರ ಹಚ್ಚ ಹಸಿರಿನ ಕಾಡುಗಳು ಹುಟ್ಟಿವೆ.
ನೀನೇ ಪೊರೆದ ಕೂಸುಗಳ ವಿನಾಶವೇಕೆ.

ನದಿಯ ಹರಿವೆಂದರೆ ಸುಂದರ ಪಯಣ
ಸೀರೆಯುಟ್ಟ ನೀರೆಯ ಬಳುಕುವಂತಹ ನಡಿಗೆ.
ನಿನ್ನ ನಲ್ಮೆಯ ನೆನಪ ಅಳಿಸುವೆಯೇಕೆ.

ಬೇಸಿಗೆಯಲ್ಲಿ ಬತ್ತುವೆ; ಬರಗಾಲ ತರುವೆ.
ನುಗ್ಗುವ ಒರತೆಯ ಒಡಲಲಿಟ್ಟು
ವರ್ಷವಡೀ ಪೊರೆವ ಕನಸ ಕಾಣಲೊಲ್ಲೆಯೇಕೆ.

‘ಇಂತಿಷ್ಟೇ ಕಾಲದಲಿ ಇಂತಿಷ್ಟೇ ನೀರ ತರಲಿ’
ಎಂದೇನೂ ಕಡಲು ನಿಯಮ ಮಾಡಿಲ್ಲ.
ನೀ ನೀರ ತರದಿದ್ದರೂ
ಕಡಲಿಗೇನೂ ಮುನಿಸಿಲ್ಲ.
ಕಡಲೊಂದು; ನದಿಗಳು ನೂರಾರು.

ಅಬ್ಬರಿಸಲೇಬೇಕೆಂಬ ಉತ್ಕಟ ಬಯಕೆಯಾದರೆ
ಕಡಲು ಸೇರಿ ಕಡಲೊಳಗೇ ಅಬ್ಬರಿಸು
ತೆರೆಯಾಗಿ ನೊರೆಯಾಗಿ ಸ್ವಚ್ಚಂದವಾಗಿ
ಅಲ್ಲಿ ನಿನ್ನ ತಡೆವರು ಯಾರೂ ಇಲ್ಲ.

ಡಾ.ಕೆ.ಎಸ್.ಗಂಗಾಧರ ಮೆಗ್ಗಾನ್ ಆಸ್ಪತ್ರೆಯ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು(ಕಿವಿ,ಮೂಗು,ಗಂಟಲು ವಿಭಾಗ)
ಮೂಲತಃ ಹಾಸನ ಜಿಲ್ಲೆಯ ಕಾಂತರಾಜಪುರ ಗ್ರಾಮ.
ಕಥೆ ಕವನ ಮತ್ತು ಲೇಖನಗಳನ್ನು ಬರೆಯುವುದು ಇವರ ಹವ್ಯಾಸ.
ಮೊದಲ ಕವನ ಸಂಕಲನ “ಕನಸ ಪೊರೆವ ಮೌನ” ಅಚ್ಚಿನಲ್ಲಿದೆ.