ನಾಳೆಯೆಂಬುದು ನಿಜವೋ ಸುಳ್ಳೋ ಬೇರೆ ಮಾತು. ಆದರೆ ಇಂದಿನ ಜೀವನವನ್ನು ದಾಟುವುದಕ್ಕಾಗಿ ಪ್ರೇರಣೆಯಾಗಿರುವುದು ಈ ʻನಾಳೆʼಗಳು ಅಲ್ಲವೇ. ಜಗತ್ತಿನ ಎಲ್ಲ ಜೀವಿಗಳೂ ನಾಳೆಗಳನ್ನು ಎಷ್ಟೊಂದು ಜತನ ಮಾಡುತ್ತವೆ. ಅದಕ್ಕಾಗಿ ಸದಾ ಶ್ರಮಿಸುತ್ತಲೇ ಇರುತ್ತವೆ. ಆದರೆ ಅದ್ಯಾಕೋ, ಈ ಜೀವಿಗಳ ಸಾಲಿನಲ್ಲಿ ಮನುಷ್ಯನ ಸ್ವಭಾವ ಮಾತ್ರ ವಿಭಿನ್ನವಾಗಿರುತ್ತವೆ. ಮನುಷ್ಯನೂ ನಾಳೆಗಳ ಬಗ್ಗೆ ಯೋಚಿಸಿದರೂ, ಅದಕ್ಕಾಗಿ ಮಾಡುವ ತಯಾರಿ ಮಾತ್ರ ತದ್ವಿರುದ್ಧವಾದುದು. ಸಂಪತ್ತನ್ನು ಜಮೆ ಮಾಡಿದಷ್ಟೂ ತಮ್ಮ ನಾಳೆಗಳು ಭದ್ರವಾಗಿರುತ್ತವೆ ಎಂದು ಭಾವಿಸುತ್ತ ಎಲ್ಲ ಜೀವಿಗಳಿಗೂ ತೊಂದರೆಯುಂಟು ಮಾಡುತ್ತಾನೆ ಎಂದು ಅನಿಸುತ್ತದೆ.
ನಾಳೆಗಳ ಕುರಿತು ಯೋಚಿಸುವ ಮೂರು ಘಟನೆಗಳನ್ನು ಪೋಣಿಸಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

ಆ ಮಹಾನಗರದಲ್ಲಿ ಅದೊಂದು ಎತ್ತರವಾದ ವಸತಿ ಸಮುಚ್ಛಯ. ಸದಾ ಮೋಡಗಳೊಡನೆ ಪಟ್ಟಾಂಗ ಮಾಡುತ್ತಿರುವಂತೆ, ಉಡಾಫೆಯಿಂದ ನಿಂತಂತೆ ತೋರುವುದು. ರಾತ್ರಿಯಾಯಿತೆಂದರೆ ಬಣ್ಣದ ಲೈಟು ಅದರ ನೆತ್ತಿಯನ್ನು ಬೆಳಗುವುದು. ಇಡೀ ನಗರಕ್ಕೇ ‘ದೀಪ ಸ್ತಂಭ’ದಂತೆ ಕಾಣುವ ವಸತಿ ಸಮುಚ್ಛಯ ಅಥವಾ ಫ್ಲಾಟ್ ನಲ್ಲಿ ಸುಮಾರು ಐನೂರು ಕುಟುಂಬಗಳು ವಾಸ ಮಾಡುತ್ತಿರಬಹುದು. ಆದರೆ ಹೀಗೆ ಭರ್ಜರಿ ವೈಭವದಿಂದ ಇರುವ ಫ್ಲಾಟ್ ಸುದ್ದಿಯಾಗಿರುವುದು ಅದರ ವೈಭವಕ್ಕಲ್ಲ, ಐಶಾರಾಮಿತನಕ್ಕಲ್ಲ. ಆ ಫ್ಲಾಟ್ ನ ಒಂದು ಬದಿಯಲ್ಲಿ ಪೈಪುಗಳ ಸಂದಿಯಲ್ಲಿಯೇ ಜೇನುನೊಣಗಳು ಬಂದು ದೊಡ್ಡದೊಂದು ತಟ್ಟಿಯನ್ನು ಕಟ್ಟಿವೆ. ಬಹಳ ದಿನಗಳವರೆಗೆ ಈ ವಿಷಯವೇ ಗೊತ್ತಿಲ್ಲದ ನಿವಾಸಿಗಳು, ಒಂದು ದಿವಸ ಈ ಜೇನುತಟ್ಟಿಯನ್ನು ಗಮನಿಸಿ ಅಚ್ಚರಿಗೊಂಡಿದ್ದಾರೆ. ಈ ಕುರಿತು ನಿವಾಸಿಗಳ ಅಸೋಸಿಯೇಷನ್ ಸಭೆಗಳಲ್ಲಿ ಚರ್ಚೆಗಳು ಶುರುವಾದವು. ಚರ್ಚೆಯಲ್ಲಿ ಎರಡು ಬಣಗಳು. ʻಜೇನು ತಟ್ಟೆ ಕಟ್ಟಿದರೆ ಅದು ಫ್ಲಾಟ್ ಗೆ ಅದೃಷ್ಟ ಒಲಿದು ಬಂದಂತೆ. ಆದ್ದರಿಂದ ಜೇನುಗೂಡಿಗೆ ಯಾರೂ ಹಾನಿ ಮಾಡಬಾರದುʼ ಎಂದು ಒಂದು ಬಣ ವಾದಿಸಿದರೆ, ಮತ್ತೊಂದು ಬಣ, ʻಈ ಹುಳುಗಳು ಕಚ್ಚುತ್ತವೆ, ಮೊದಲು ಇದನ್ನು ತೆರವು ಮಾಡಿʼ ಎಂದು  ವಾದಿಸುವುದು.

ಅದೇನೇ ಇರಲಿ, ಈ ಜೇನುಗಳೋ ಈ ನಿವಾಸಿಗಳ ಸಭೆಯಲ್ಲಿ ನಡೆಯುವ ಯಾವುದೇ ಗಲಾಟೆಗಳನ್ನು ಮನಸ್ಸಿಗೆ ತೆಗೆದುಕೊಳ್ಳದೇ, ಮಹಾನಗರದ ತೊಂದರೆ ತೊಡಕುಗಳಿಗೆ ಸೊಪ್ಪು ಹಾಕದೇ, ಜನನಿಬಿಡ ನಗರದಲ್ಲಿ ಅಲ್ಲೊಂದು ಇಲ್ಲೊಂದು ಕಾಣಿಸುವ ಹೂವಿನ ಗಿಡಗಳನ್ನು ದಿನಂಪ್ರತಿ ಹುಡುಕಿ ಹೊರಡುತ್ತವೆ. ಆ ಗಿಡಗಳಲ್ಲಿ ಅಪರೂಪಕ್ಕೆ ಅರಳಿದ ಹೂವುಗಳನ್ನು ಹುಡುಕಿ ಪರಾಗವನ್ನು ಹೊತ್ತುತರುತ್ತವೆ. ಸದಾ ಕ್ರಿಯಾಶೀಲವಾಗಿರುವ ಜೇನುಗೂಡು ಕಿಟಕಿಯ ಅಂಚಿನಲ್ಲಿ ಸದ್ದಿಲ್ಲದೇ ನಿಂತು ಜೇನುತಟ್ಟಿಯನ್ನೇ ನೋಡುತ್ತಿದ್ದರೆ ಎಲ್ಲ ಹುಳುಗಳೂ ಒಂದಿನಿತೂ ʻಕೆಲಸ ಕಳ್ಳತನʼ ಮಾಡದೇ ದುಡಿಯುತ್ತಿವೆ. ತಮ್ಮ ತಮ್ಮ ಪಾಲಿನ ಕೆಲಸವೆಷ್ಟೋ ಅಷ್ಟನ್ನು ನಿರ್ವಹಿಸುತ್ತ ಸಾಗುತ್ತಿವೆ. ಇವಕ್ಕೆ ನಾಳೆಗಳ ಹಂಗೇ ಇಲ್ಲವಲ್ಲಾ ಎಂದು ಅಚ್ಚರಿಪಡುತ್ತಿರಬೇಕಾದರೆ, ಜೇನುನೊಣಗಳ ಜೀವನ ಶೈಲಿಯು ಬೇರೆಯೇ ಕತೆಗಳನ್ನು ಹೇಳುತ್ತವೆ.

ಒಂದು ಜೇನು ಗೂಡಿನ ಸಂಸಾರದಲ್ಲಿ ರಾಣಿಹುಳ, ಗಂಡು ಹುಳ, ದುಡಿಮೆಗಾರ ಹುಳು ಹೀಗೆ ಮೂರು ವಿಭಾಗಗಳಿರುತ್ತವಲ್ಲ. ಜೇನುಗಳ ಕುಲವು ಬೆಳೆಯಬೇಕಾದರೆ ರಾಣಿ ಜೇನುಹುಳು ಬೇಕೇಬೇಕು. ಗಂಡು, ಹೆಣ್ಣು ಮತ್ತು ಸ್ವತಃ ರಾಣಿ ಜೇನು ಕೂಡ ಅದಕ್ಕಾಗಿ ನಿರಂತರ ಶ್ರಮಿಸುವುದು. ಹಾಗಿದ್ದರೆ ಒಂದು ವೇಳೆ ರಾಣಿಜೇನೇ ಏನಾದರೂ ಆಕಸ್ಮಿವಾಗಿ ಸಾವಿಗೀಡಾದರೆ ಏನು ಕತೆ? ಆಗಲೂ ದುಡಿಯುವ ಹುಳುಗಳು ತಮ್ಮ ಕುಲವನ್ನು ಬೆಳೆಸಲು ಒಂದು ತಂತ್ರ ಹೂಡುತ್ತವೆ. ಅಥವಾ ಪ್ರಕೃತಿಯೇ ಅಂತಹ ತಂತ್ರವನ್ನು ಅವುಗಳಿಗಾಗಿ ದಯಪಾಲಿಸಿದೆ. ದುಡಿಯುವ ಹುಳುಗಳು ತಯಾರಿಸುವ ಒಂದು ವಿಶಿಷ್ಟ ದ್ರವಕ್ಕೆ ರಾಜಾಶಾಹೀರಸ (Royal jelly) ಎನ್ನುತ್ತಾರೆ. ರಾಣಿ ಹುಳುವಿನ ಆರೋಗ್ಯ ಕ್ಷೀಣವಾದಾಗ ಅಥವಾ ಅಕಾಲಿಕ ಮರಣ ಹೊಂದಿದಾಗ ಈ ಹುಳುಗಳು ಹೊಸ ರಾಣಿಯನ್ನು ಸೃಷ್ಟಿ ಮಾಡಲು ಕಟಿಬದ್ಧವಾಗುತ್ತವೆ. ಈ ಕ್ರಿಯೆಗಾಗಿ ರಾಜಾಶಾಹೀರಸವನ್ನು ಬಳಸುತ್ತವೆ. ಬೆಳವಣಿಗೆ ಹಂತದಲ್ಲಿರುವ ಒಂದು ಹುಳುವನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಈ ರಾಜಾಶಾಹೀರಸವನ್ನು ಹೆಚ್ಚು ಕುಡಿಸುತ್ತವೆ. ಅದೇ ಮುಂದೆ ನೂತನ ರಾಣಿಯಾಗಿ ಹೊರಹೊಮ್ಮುತ್ತದೆ. ನಿರಂತರವಾಗಿ ಶ್ರಮಿಸುವ ಈ ಹುಳುಗಳು ತಮ್ಮ ನಾಳೆಗಳನ್ನು ಹೇಗೆಲ್ಲಾ ರಕ್ಷಿಸಿಕೊಳ್ಳುತ್ತವಲ್ಲ ಎಂದು ಅಚ್ಚರಿಯಾಗದೇ ಇದ್ದೀತೇ.

ಎಲ್ಲ ಜೀವಿಗಳೂ ನಾಳೆಗಳನ್ನು ಎಷ್ಟೊಂದು ಜತನ ಮಾಡುತ್ತವೆ. ಅದಕ್ಕಾಗಿ ಸದಾ ಶ್ರಮಿಸುತ್ತಲೇ ಇರುತ್ತವೆ. ಆದರೆ ಅದ್ಯಾಕೋ, ಈ ಜೀವಿಗಳ ಸಾಲಿನಲ್ಲಿ ಮನುಷ್ಯನ ಸ್ವಭಾವ ಮಾತ್ರ ವಿಭಿನ್ನವಾಗಿರುತ್ತವೆ. ಮನುಷ್ಯನೂ ನಾಳೆಗಳ ಬಗ್ಗೆ ಯೋಚಿಸಿದರೂ, ಅದಕ್ಕಾಗಿ ಮಾಡುವ ತಯಾರಿ ಮಾತ್ರ ತದ್ವಿರುದ್ಧವಾದುದು. ಸಂಪತ್ತನ್ನು ಜಮೆ ಮಾಡಿದಷ್ಟೂ ತಮ್ಮ ನಾಳೆಗಳು ಭದ್ರವಾಗಿರುತ್ತವೆ ಎಂದು ಭಾವಿಸುತ್ತ ಎಲ್ಲ ಜೀವಿಗಳಿಗೂ ತೊಂದರೆಯುಂಟು ಮಾಡುತ್ತಾನೆ. ನಾಳೆಗಳ ಬಗ್ಗೆ ಯೋಚಿಸುತ್ತ, ಇದೇ ಸಂದರ್ಭದಲ್ಲಿ ಜೇನುಹುಳುಗಳ ಕತೆಯ ಜೊತೆಗೆ ನೆನಪಾಗುವ ಮತ್ತೊಂದು ಕತೆ ಕೃಷ್ಣ ಸುಧಾಮರದ್ದು.

ಮುಷ್ಟಿ ಪೃಥುಕ ಎಂಬ ಜೀವಸೆಲೆ

ಕೃಷ್ಣ ಮತ್ತು ಸುಧಾಮರ ಸ್ನೇಹದ ಕತೆ ಯಾರಿಗೆ ಗೊತ್ತಿಲ್ಲ! ಒಂದು ಮುಷ್ಟಿ ಅವಲಕ್ಕಿಯ ಕತೆಯು, ಸ್ನೇಹಕ್ಕೆ ಮತ್ತೊಂದು ವ್ಯಾಖ್ಯಾನವನ್ನು ಬರೆದಿದೆ. ಶ್ರೀಕೃಷ್ಣನ ಮಹಿಮೆಯನ್ನು ಕೊಂಡಾಡುವ ಕತೆಯೆಂದು ಪ್ರಸಿದ್ಧವಾಗಿದೆ. ಸುಧಾಮನೆಂದರೆ ಅವನು ಶ್ರೀಕೃಷ್ಣನ ಬಾಲ್ಯ ಸ್ನೇಹಿತ. ವಿದ್ಯಾಭ್ಯಾಸದ ಬಳಿಕ ಬಡತನದ ಬದುಕನ್ನು ಬಾಳಿ ದಣಿದಿದ್ದಾನೆ. ಜೀವನದಲ್ಲಿ ತುಂಬಾ ಬಡತನವನ್ನು ಅನುಭವಿಸಿ, ನೊಂದು ನುಡಿದ ಹೆಂಡತಿಯು, ʻನಿಮ್ಮ ಸ್ನೇಹಿತರಾದ ಶ್ರೀಕೃಷ್ಣ ದೇವರ ಬಳಿ ಸ್ವಲ್ಪ ಸಹಾಯ ಕೇಳಬಹುದಲ್ಲಾ..ʼ ಎಂದು ಪತಿ ಸುಧಾಮನಿಗೆ ಸಲಹೆ ಮಾಡುತ್ತಾಳೆ. ಕೃಷ್ಣನನ್ನು ಕಾಣಲು ಬರಿಗೈಲಿ ಹೋಗಬಾರದು ಎಂದು ಬಗೆದು, ಆಕೆಯೇ ಅಕ್ಕಪಕ್ಕದ ಮನೆಗೋಗಿ ಒಂದು ಮುಷ್ಟಿ ಅವಲಕ್ಕಿಯನ್ನು ತಂದು ಬಟ್ಟೆಯೊಂದರಲ್ಲಿ ಕಟ್ಟಿಕೊಡುತ್ತಾಳೆ. ಹೆಂಡತಿ ಕೊಟ್ಟ ಗಂಟು ಹಿಡಿದುಕೊಂಡು ಕೃಷ್ಣ ಭಜನೆಯನ್ನು ಮಾಡುತ್ತಾ ಸುಧಾಮ ದ್ವಾರಕೆಗೆ ತೆರಳುತ್ತಾನೆ. ಅಲ್ಲಿ ಸ್ನೇಹಿತ ಶ್ರೀ ಕೃಷ್ಣನ ಜಗಮಗಿಸುವ ಅರಮನೆಯನ್ನು, ಕೃಷ್ಣನ ಪ್ರೀತಿ ವಾತ್ಸಲ್ಯದ ಆತಿಥ್ಯವನ್ನೂ ಕಂಡು ಸುಧಾಮನ ಎದೆಯಲ್ಲಿ ಅಳುಕು. ತಾನು ಈ ಹರುಕು ಬಟ್ಟೆಯಲ್ಲಿ ಕಟ್ಟಿದ ಒಂದೇ ಮುಷ್ಟಿ ಅವಲಕ್ಕಿಯನ್ನು ಶ್ರೀಕೃಷ್ಣನಿಗೆ ಕೊಡುವುದಾದರೂ ಹೇಗೆ? ಅಷ್ಟಮಹಿಷಿಯರು, ಹದಿನಾರು ಸಾವಿರ ಪತ್ನಿಯರು, ಆಳುಕಾಳು, ಹೊನ್ನ ಭಂಡಾರಗಳ ನಡುವೆ ವಿರಾಜಮಾನನಾದ ಶ್ರೀಕೃಷ್ಣನೊಡನೆ ಅವನು ತಾನು ತಂದ ಈ ಅವಲಕ್ಕಿಯ ವಿಚಾರವನ್ನೇ ಎತ್ತುವುದಿಲ್ಲ.

ಸದಾ ಕ್ರಿಯಾಶೀಲವಾಗಿರುವ ಜೇನುಗೂಡು ಕಿಟಕಿಯ ಅಂಚಿನಲ್ಲಿ ಸದ್ದಿಲ್ಲದೇ ನಿಂತು ಜೇನುತಟ್ಟಿಯನ್ನೇ ನೋಡುತ್ತಿದ್ದರೆ ಎಲ್ಲ ಹುಳುಗಳೂ ಒಂದಿನಿತೂ ʻಕೆಲಸ ಕಳ್ಳತನʼ ಮಾಡದೇ ದುಡಿಯುತ್ತಿವೆ. ತಮ್ಮ ತಮ್ಮ ಪಾಲಿನ ಕೆಲಸವೆಷ್ಟೋ ಅಷ್ಟನ್ನು ನಿರ್ವಹಿಸುತ್ತ ಸಾಗುತ್ತಿವೆ. ಇವಕ್ಕೆ ನಾಳೆಗಳ ಹಂಗೇ ಇಲ್ಲವಲ್ಲಾ ಎಂದು ಅಚ್ಚರಿಪಡುತ್ತಿರಬೇಕಾದರೆ, ಜೇನುನೊಣಗಳ ಜೀವನ ಶೈಲಿಯು ಬೇರೆಯೇ ಕತೆಗಳನ್ನು ಹೇಳುತ್ತವೆ.

ಸತ್ಯಮೂರ್ತಿ ಸರಸದಿಂದ ಭಾತೃಭಾವದಿಂದ ನ
ಮ್ಮತ್ತಿಗೇನು ಕಳುಹಿಕೊಟ್ಟಳಪೂರ್ವದೊಸ್ತುವ
ಚಿತ್ತದಲ್ಲಿ ಚಿಂತೆ ಬೇಡ, ಇತ್ತ ತನ್ನಿರೆನಲು ವಿಪ್ರ
ಮಸ್ತಕವ ಬಾಗಿ ಲಜ್ಜೆಯಿಂದ ನಿಂತನು

ಕೃಷ್ಣನ ಒತ್ತಾಯಕ್ಕೆ ಏನೆಂದು ಉತ್ತರಿಸುವುದು? ಆಗ ಕೃಷ್ಣನೇ ಮುಂದುವರೆದು, ಮುತ್ತುರತ್ನವೆಂಬ ಸಂಪತ್ತಿಗಿಂತಲೂ ಮುಖ್ಯವಾದುದು ಏನೇನು ಎಂಬುದನ್ನು ವಿವರಿಸುತ್ತಾ ಹೀಗೆ ಹೇಳುತ್ತಾನೆ:

ಭಕ್ತಿವರ್ಜ್ಯವಾಗಿ ತಂದ ಮುತ್ತು ರತ್ನ ಕೆಲಸವಿಲ್ಲ
ಭಕ್ತಿಯಿಂದ ತಂದುದೊಂದು ಪತ್ರ ಪುಷ್ಪವು
ಚಿತ್ತದಲ್ಲಿ ಚಿಂತೆ ಬೇಡ ಬೇಗ ತನ್ನಿರೆನಲು ಸ್ವರ್ಣ
ಪಾತ್ರೆಯಲ್ಲಿ ಪೃಥುಕವನ್ನೆ ಸುರಿದ ವಿಪ್ರನು..

ಆದರೆ ಆ ಅವಲಕ್ಕಿಯ ಮಹಿಮೆಯೇ ಅಪಾರವಾಗಿ, ಅದು ಎಲ್ಲರಿಗೂ ಸಲ್ಲುತ್ತದೆ. ಕೃಷ್ಣನು ಎರಡು ತುತ್ತು ತಿನ್ನುವಷ್ಟರಲ್ಲಿ, ಮಲ್ಲಿಗೆಯ ಮುಡಿಯ ಲಕ್ಷ್ಮಿಯು ಅಲ್ಲಿಗೆ ಧಾವಿಸಿ ಬರುತ್ತಾಳೆ. ತಮ್ಮ ಸ್ನೇಹಿತ ತಂದ ಅವಲಕ್ಕಿಯನ್ನು ತಮಗೆಲ್ಲರಿಗೂ ಕೊಡಬೇಕೆಂದು ಪಟ್ಟುಹಿಡಿಯುತ್ತಾಳೆ.

ಆಗ,
ಗೋವಿಂದ ತಾನು ನಸುನಗುತ್ತ
ಇಂದುಮುಖಿಯರಿಗೆ ಎಲ್ಲ ಕರೆದು ಕೊಟ್ಟನು
ಬಂಧು ಬಳಗಕೆಲ್ಲ ಕೊಟ್ಟು ಮಂದಿ ಮಾರ್ಬಲಕೆ ಕೊಟ್ಟು
ಹಿಂದೆ ಮಿಕ್ಕ ಪೃಥುಕ ಜೋಕೆ ಎಂದು ನುಡಿದನು.

ಈ ಬ್ರಹ್ಮಾಂಡದೊಡೆಯ ಶ್ರೀಕೃಷ್ಣನು, ಬೇಕು ಬೇಕಾದ ರಾಜವೈಭೋಗವನ್ನು ಅದಾಗಲೇ ಪಡೆದವನು. ಅಷ್ಟೈಶ್ವರ್ಯ ಸಂಪತ್ತುಗಳಿಂದ ಮೆರೆಯುತ್ತಿರುವ ದೇವರು. ಎಲ್ಲರೂ ಸಂಪತ್ತಿಗಾಗಿ ಆತನನ್ನೇ ಆರಾಧಿಸುತ್ತಿರಬೇಕಾದರೆ, ಸ್ನೇಹಿತ ಸುಧಾಮ ತಂದ ಒಣ ಅವಲಕ್ಕಿಯನ್ನು ಕೃಷ್ಣನು ಸಂಭ್ರಮದಿಂದ ಮೆಲ್ಲುವುದೇನೋ ಸರಿಯೇ. ಆದರೆ ಅದನ್ನೂ ಸ್ವಲ್ಪ ಮಿಗಿಸಿ ಎತ್ತಿಟ್ಟುಕೊಳ್ಳುವುದೆಂದರೆ ದೇವರು ಕೂಡ ‘ನಾಳೆ’ಗಳ ಬಗ್ಗೆ ಯೋಚಿಸುತ್ತಾರೆ ಎಂದಾಯಿತು. ಅದು ಆಸ್ತಿ ಪಾಸ್ತಿ ವಸ್ತು ಒಡವೆಗಳ ಮೂಲಕವಲ್ಲ, ಹೊಟ್ಟೆಯ ಹಸಿವಿನ ಬೆಂಕಿಯನ್ನು ನಂದಿಸುವ ಸಾಮರ್ಥ್ಯವಿರುವ ಒಂದು ಮುಷ್ಟಿ ಅವಲಕ್ಕಿಯನ್ನು ಜತನ ಮಾಡಿಡುತ್ತಾನೆ. ಅದರೊಡನೆ ಸ್ನೇಹಿತನ ಅಕ್ಕರೆಯೆಂಬ ಭಾವನೆಗಳ ಮಹಾಪೂರವೇ ಅಡಕವಾಗಿದೆ. ಪ್ರೀತಿ ಮತ್ತು ವಾತ್ಸಲ್ಯದ ಅಕ್ಷಯ ಸೆಲೆಯೇ ಅಡಗಿದೆ. ನಾಳೆಗಾಗಿ ಬೇಕಾಗಿರುವುದು ಇದೇ ಅಲ್ಲವೇ. ಜೀವ ಪೋಷಿಸುವುದಕ್ಕಾಗಿ ಒಂದು ಹಿಡಿ ಆಹಾರ ಮತ್ತು ಬದುಕನ್ನು ತಂಪಾಗಿಡುವ ಸಜೀವ ಭಾವಕೋಶ.

ಸುವರ್ಣ ಗೆಡ್ಡೆಯ ಕೊಂಬುಗಳು

ನೀಲಗಿರಿ ಬೆಟ್ಟಗಳಲ್ಲಿ ನೆಲೆಸಿರುವ ಆದಿವಾಸಿ ಸಮುದಾಯಗಳ ಪರವಾಗಿ ಕೆಲಸ ಮಾಡುವ ಮೇರಿ ಮಾರ್ಸೆಲ್ ತೆಕೆಕಾರ ಅವರು, ʻಎಕೋರ್ಡ್- ನೀಲಗಿರೀಸ್ʼ ಎನ್ನುವ ಸಂಸ್ಥೆಯ ಸಹಸಂಸ್ಥಾಪಕಿಯೂ ಹೌದು. ಕಳೆದ ಮೂರು ದಶಕಗಳಿಂದ ಅವರು ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ಆದಿವಾಸಿ ಸಮುದಾಯದ ಜೊತೆ ಕೆಲಸವನ್ನು ಮಾಡುತ್ತಿದ್ದಾರೆ. ಆದಿವಾಸಿ ಸಮುದಾಯದ ಮಹಿಳೆಯರ ಜೀವನ ಶೈಲಿಯ ಬಗ್ಗೆ ಅನೇಕ ಕುತೂಹಲಕರ ಅಂಶಗಳನ್ನು ಅವರು ಹಂಚಿಕೊಳ್ಳುವ ಸಂದರ್ಭದಲ್ಲಿ ಹೇಳುವ ಮಾತೊಂದು ಹೀಗಿದೆ: ʻಒಮ್ಮೆ ನಾವು ಸ್ಥಳೀಯ ಮಹಿಳೆಯರೊಂದಿಗೆ ಕಾಡಿನ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ದಾರಿಯಲ್ಲಿ ಯಾವುದೋ ಗಡ್ಡೆಯೊಂದರ ಕೊಂಬು ಕಾಲಿಗೆ ತಗುಲಿದಂತಾಯಿತು. ನನ್ನೊಡನೆ ಇದ್ದ ಮಹಿಳೆಯು ಆ ಮಣ್ಣನ್ನು ಅಗೆದು, ಗೆಡ್ಡೆಯನ್ನು ಹೊರತೆಗೆದರು. ಅಂದಿನ ಊಟಕ್ಕೆ ಬೇಕಾದ ಸಿದ್ಧತೆಯಾದಂತೆ ಆಕೆಯ ಮುಖದಲ್ಲಿ ಮಂದಹಾಸ ಮಿನುಗಿತು. ಆದರೆ ಇಡೀ ಗೆಡ್ಡೆಯನ್ನೇ ಆಕೆ ಚೀಲದೊಳಗೆ ಹಾಕಿಕೊಳ್ಳಲಿಲ್ಲ. ಗೆಡ್ಡೆಯ ಕೊಂಬುಗಳನ್ನು ಕಿತ್ತು ಅಲ್ಲಿಯೇ ನೆಲದ ಮಣ್ಣನ್ನು ತುಸುವೇ ಒಕ್ಕಿ ಅದರೊಳಗೆ ಈ ಕೊಂಬುಗಳನ್ನು ಸೇರಿಸಿ ಮಣ್ಣು ಮುಚ್ಚಿದರು. ಅರೆ, ಇದೇನಿದು ಎಂದು ಪ್ರಶ್ನಿಸಿದೆ. ʻಈ ಕೊಂಬುಗಳನ್ನುತೆಗೆದು ಹೀಗೆ ಹೂಳಲೇಬೇಕು. ಹಿರಿಯರು ಯಾರೋ ಹೀಗೆ ಕೊಂಬುಗಳನ್ನು ಹೂತಿಟ್ಟದ್ದರಿಂದ ಅಥವಾ ಅವರು ಈ ಗೆಡ್ಡೆಯ ಬುಡವನ್ನು ನಾಶ ಮಾಡದೇ ಇರುವುದರಿಂದ ತಾನೇ ನನಗೆ ಇದು ಸಿಕ್ಕಿದ್ದು? ನಾನು ಹೀಗೆ ಮಾಡಿದರೆ ನಾಳೆ ಮತ್ಯಾರಿಗೋ ಊಟಕ್ಕೆ ಮತ್ತೊಂದು ಗೆಡ್ಡೆ ಸಿಗುತ್ತದೆʼ ಎಂದು ವಿವರಿಸಿದಳು.

ಬೆಟ್ಟಗಳನ್ನು ಮತ್ತು ಕಾಡನ್ನು ದೇವರೆಂದು ನಂಬುವ ಆದಿವಾಸಿ ಸಮುದಾಯದ ಜನರಲ್ಲಿ ನಾಳಿನ ಬದುಕಿನ ಬಗ್ಗೆ ನಂಬಿಕೆಗಳಿವೆ. ಆ ನಂಬಿಕೆಗಳೇ ಅವರಿಗೆ ಇಂದಿನ ಜೀವನವನ್ನು ಹೆಚ್ಚು ಸುಸ್ಥಿರವಾಗಿ ನಿರ್ವಹಿಸುವಂತೆ ಪ್ರೇರೇಪಿಸುತ್ತವೆ.

ತಮಗೆ ಬೇಡದ ಎಲ್ಲವನ್ನೂ ಕಸವೆಂದು ಭಾವಿಸುವ, ಅವುಗಳನ್ನು ʻಕಸದ ಬುಟ್ಟಿʼಗೆ ಹಾಕುವ ಪರಿಕಲ್ಪನೆಯು ಇನ್ನೂ ಪ್ರವೇಶವಾಗದೇ ಇರುವೆಡೆಗಳಲ್ಲೆಲ್ಲ ʻನಾಳೆʼಗಳಿಗಾಗಿ ಮಾಡುವ ತಯಾರಿಗಳ ಪರಿಕಲ್ಪನೆಯೂ ವಿಭಿನ್ನವಾಗಿದೆ. ನಾಳಿನ ಸಾಧ್ಯತೆಗಳ ಬಗ್ಗೆ ಅಪಾರವಾದ ವಿಶ್ವಾಸವು ಉಳಿದುಕೊಂಡಿದೆ. ನಾಳೆಗಳೆಂದರೆ ಜೀವ ಪರಿಸರವನ್ನು ಪೋಷಿಸುವುದಲ್ಲದೇ ಮತ್ತೇನು?