ಪ್ರಕೃತಿಮಾತೆಯು ಹೇಗೆ ಸೂರ್ಯನ ಮುಖಾಂತರ ನಮಗೆ ಬೇಕಾದ್ದನ್ನು ಕೊಡುತ್ತಾಳೆಯೋ, ಬದಲಿಗೆ ಯಾವುದನ್ನೂ ನಮ್ಮಿಂದ ಅಪೇಕ್ಷಿಸುವುದಿಲ್ಲವೋ, ಅಂತಹಾ ಒಂದು ಶಕ್ತಿಗೆ, ಪ್ರಕೃತಿಗೆ ನಮ್ಮ ಸಂಕ್ರಾಂತಿಯ ಪೂಜೆ. ಸಂಕ್ರಾಂತಿಯ ದಿನದಂದು ಪೂಜೆಯನ್ನು ಕೃತಜ್ಞತಾ ಭಾವದಿಂದ ಪ್ರಕೃತಿಮಾತೆಗೆ ಮಾಡುವುದೆ ಸಂಕ್ರಾಂತಿಹಬ್ಬದ ವಿಶೇಷತೆ. ಆಹಾರದಲ್ಲಿ ಒಳಗೊಂಡ ಕೃಷಿ, ಆಹಾರ ಪದಾರ್ಥ ನಿರ್ವಹಣೆ, ಬಳಕೆ, ಸಮಯೋಚಿತವಾಗಿ ಹಬ್ಬಗಳಲ್ಲಿ ಸೇರಿಸಿಕೊಟ್ಟಿದ್ದಾರೆ. ಆಹಾರದಿಂದ ಆಗುವು ವ್ಯತಿರಿಕ್ತ ಪರಿಣಾಮಗಳನ್ನು ಅರಿತಿದ್ದ ನಮ್ಮ ಹಿರಿಯರು, ಇವನ್ನೆಲ್ಲ ಹಬ್ಬದ ಆಚರಣೆಗೆ ಸೇರಿಸಿ ತಿಳಿಸಿದ್ದಾರೆ.
ಸಂಕ್ರಾಂತಿ ಹಬ್ಬದ ನಿಮಿತ್ತ ಮೈಸೂರಿನ ಸಂಕ್ರಾಂತಿಯ ಹಿನ್ನೆಲೆ ಹಾಗೂ ಅದರ ವೈಶಿಷ್ಟ್ಯತೆಗಳ ಕುರಿತು ಡಾ. ಪುನೀತ್ ಕುಮಾರ್ ಪದ್ಮನಾಭನ್ ಬರಹ ನಿಮ್ಮ ಓದಿಗೆ

ನಾನು ಒಬ್ಬ ಆಯುರ್ವೇದ ವೈದ್ಯ, ಸಂಸ್ಕೃತಿ ಚಿಂತಕ. ಕಳೆದ ೨೦ ವರ್ಷಗಳಿಂದ ನಮ್ಮ ಭಾರತೀಯ ಸಂಸ್ಕೃತಿ ಹಾಗು ಸಂಪ್ರದಾಯದ ಹಿನ್ನೆಲೆಯ ಅಧ್ಯಯನ ನಿರತ. ನನಗೆ ಅವುಗಳ ವೈಜ್ಞಾನಿಕ ಹಿನ್ನೆಲೆಯನ್ನು ಮತ್ತಷ್ಟು ಅರ್ಥಮಾಡಿಕೊಳ್ಳುವ ದಾಹ. ಸಂಕ್ರಾಂತಿಯ ಸಮಯ ಈಗ ಬಂದಿದೆ. ಹಬ್ಬದ ಆಚರಣೆ ಹಾಗು ನಮ್ಮ ಮೈಸೂರನ್ನು ಒಳಗೊಂಡಂತೆ ಸಂಕ್ರಾಂತಿಯ ವೈಶಿಷ್ಟ್ಯ ಏನು ಎಂಬ ಕುತೂಹಲಕ್ಕೆ ಮಾಹಿತಿ ಕಲೆಹಾಕಬೇಕಿತ್ತು. ಆಗ ನನ್ನ ಮನಸ್ಸಿಗೆ ಬಂದವರು, ಮೈಸೂರಿನ ಆಯುರ್ವೇದ ವೈದ್ಯರಿಗೆಲ್ಲ ಹಿರಿಯಣ್ಣರಾದ ವೈದ್ಯರತ್ನ ಡಾ. ಬಿ. ವಿ. ಕುಮಾರಸ್ವಾಮಿ. ಇವರು ನನ್ನ ಆಯುರ್ವೇದ ಗುರುಗಳು, ಹಾಗು ಮಾರ್ಗದರ್ಶಕರು. ಇವರು ಸ್ನಾತಕೋತ್ತರ ಪದವಿಯ ನಂತರ ಬೆಂಗಳೂರಿನ ಪ್ರತಿಷ್ಠಿತ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಂತಹಾ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸರ್ಕಾರಿ ಸೇವೆ ಸಲ್ಲಿಸಿದ್ದಾರೆ. ಆಯುರ್ವೇದದ ಮೂಲಕ ಕ್ಯಾನ್ಸರ್ ಹಾಗು ಇತರೆ ಕಾಯಿಲೆಗಳ ಇವರ ಚಿಕಿತ್ಸೆಗೆ ಇಂದಿಗೂ ಮಾನ್ಯತೆ ಇದೆ. ನಿವೃತ್ತಿ ಜೀವನದಲ್ಲಿಯೂ ಆಯುರ್ವೇದ ಸೇವೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸರಿ ಎಂದು ಜೆ.ಪಿ.ನಗರದ ಅವರ ಮನೆಗೆ ಹೊರಟೆ. ಅವರಿಗೆ ನಮಸ್ಕರಿಸಿ ನನ್ನ ಬಿನ್ನಹ ಇಟ್ಟೆ. ಮುಂದಾದದ್ದೇ ಈ ಲೇಖನ ರೂಪದಲ್ಲಿರುವ ಸಂಭಾಷಣೆ.

(ಡಾ. ಬಿ. ವಿ. ಕುಮಾರಸ್ವಾಮಿ)

ಸಂಕ್ರಾಂತಿಯ ಹಿನ್ನೆಲೆ!

ಸಂಕ್ರಾಂತಿ ಎಂದರೆ ಮೂಲತಃ ಸೂರ್ಯನ ಉಪಾಸನೆ. ಸೂರ್ಯನ ಹಿಂದೆ ಇರುವ ಸವಿತೃ ದೇವತೆಯ ಪೂಜೆ. ಸೂರ್ಯದೇವನು ನಮಗೆ ಎಷ್ಟು ಮುಖ್ಯ ಎಂಬುದು ನಮಗೆಲ್ಲ ಗೊತ್ತು. ಪ್ರಕೃತಿಮಾತೆಯು ಹೇಗೆ ಸೂರ್ಯನ ಮುಖಾಂತರ ನಮಗೆ ಬೇಕಾದ್ದನ್ನು ಕೊಡುತ್ತಾಳೆಯೋ, ಬದಲಿಗೆ ಯಾವುದನ್ನೂ ನಮ್ಮಿಂದ ಅಪೇಕ್ಷಿಸುವುದಿಲ್ಲವೋ, ಅಂತಹಾ ಒಂದು ಶಕ್ತಿಗೆ, ಪ್ರಕೃತಿಗೆ ನಮ್ಮ ಸಂಕ್ರಾಂತಿಯ ಪೂಜೆ. ಸಂಕ್ರಾಂತಿಯ ದಿನದಂದು ಪೂಜೆಯನ್ನು ಕೃತಜ್ಞತಾ ಭಾವದಿಂದ ಪ್ರಕೃತಿಮಾತೆಗೆ ಮಾಡುವುದೆ ಸಂಕ್ರಾಂತಿಹಬ್ಬದ ವಿಶೇಷತೆ. ಆಹಾರದಲ್ಲಿ ಒಳಗೊಂಡ ಕೃಷಿ, ಆಹಾರ ಪದಾರ್ಥ ನಿರ್ವಹಣೆ, ಬಳಕೆ, ಸಮಯೋಚಿತವಾಗಿ ಹಬ್ಬಗಳಲ್ಲಿ ಸೇರಿಸಿಕೊಟ್ಟಿದ್ದಾರೆ. ಆಹಾರದಿಂದ ಆಗುವು ವ್ಯತಿರಿಕ್ತ ಪರಿಣಾಮಗಳನ್ನು ಅರಿತಿದ್ದ ನಮ್ಮ ಹಿರಿಯರು, ಇವನ್ನೆಲ್ಲ ಹಬ್ಬದ ಆಚರಣೆಗೆ ಸೇರಿಸಿ ತಿಳಿಸಿದ್ದಾರೆ. ಉದಾಹರಣೆಗೆ, ಬತ್ತ ಹಾಗು ಧಾನ್ಯಗಳನ್ನು ಕೊಯ್ಲು ಮಾಡಿದ ತತ್ಕ್ಷಣದಲ್ಲಿ ಬಳಸುವಹಾಗಿಲ್ಲ. ಆಗ ಅವುಗಳು ಜೀರ್ಣಕ್ಕೆ ಕಷ್ಟ. ಕನಿಷ್ಠ ೨-೩ ತಿಂಗಳ ನಂತರ ಬಳಬೇಕು. ಕೊಯ್ಲು ಮಾಡಿ ಸಂಕ್ರಾಂತಿ ಸಮಯಕ್ಕೆ ಸರಿಯಾಗಿ ಸುಮಾರು ೨-೩ ತಿಂಗಳು ಕಳೆದ ಹೊಸದಾದ ಅಕ್ಕಿ, ಹೆಸರುಬೇಳೆ, ಬೆಲ್ಲ ಇತ್ಯಾದಿ ಪದಾರ್ಥಗಳಿಂದ ಹಬ್ಬದಲ್ಲಿ ಹುಗ್ಗಿ, ಪಾಯಸ ತಯಾರಿಸಿ ತಿನ್ನುವುದು ಹಾಗು ಮುಂದೆ ಆ ಪದಾರ್ಥಗಳ ಉಪಯೋಗ ಪ್ರಾರಂಭ ಮಾಡುವುದು ರೂಢಿ. ಸಂಕ್ರಾಂತಿಯ ದಿನದಂದು ಆನಂದದಿಂದ ಹುಗ್ಗಿಯನ್ನು ಉಕ್ಕಿಸಿ ಸಮೃದ್ಧಿಯನ್ನು ಅನುಭವಿಸುವ ಪರ್ವವಾಗಿದೆ. ರಾಸುಗಳ ಪೂಜೆಯ ನಂತರ, ಎತ್ತುಗಳಿಂದ ಕೆಚ್ಚು ಹಾಯಿಸುವುದು, ಮನೆಯ ಮಕ್ಕಳನ್ನು ಕೂಡಿಸಿ ಏಲಚೆಹಣ್ಣು, ಎಳ್ಳುಗಳಿಂದ ಅಭಿಷೇಕ ಮಾಡಿ ಆರತಿ ಮಾಡಿ ಅವರಿಗೆ ಆಗಿರಬಹುದಾದ ದೃಷ್ಟಿದೋಷ ನಿವಾರಿಸುವುದು ಪದ್ಧತಿ. ಇದಕ್ಕೆ ಮುಂಚೆ ಮುಂಜಾನೆ ಎಳ್ಳೆಣ್ಣೆ ಅಭ್ಯಂಗಸ್ನಾನ ಮಾಡಿಸುವುದು ಸಂಕ್ರಾಂತಿಯ ವಿಶೇಷ.

ಋತು ಎಂದರೇನು?

ನಮ್ಮಲ್ಲಿ ವರ್ಷವಿಡೀ ಮಾಡುವ ಎಲ್ಲ ಹಬ್ಬಗಳ ಆಚರಣೆಯೂ ಪ್ರಕೃತಿಗೆ ಅನುಗುಣವಾಗಿ ಬರತಕ್ಕದ್ದು. ಸಂಕ್ರಾಂತಿಯು ಹಾಗೆ. ಪ್ರಕೃತಿಯುಲ್ಲಿ ಇರುವ ಅದರ ಎಲ್ಲಾ ನಿಯಂತ್ರಣ ತತ್ತ್ವಗಳು ಬೇರೆ ಬೇರೆ ಸಮಯಗಳಲ್ಲಿ, ಬೇರೆ ಬೇರೆ ರೀತಿಯಲ್ಲಿ ಇರುವುದರ ಹಿನ್ನೆಲೆಯ ಅಧ್ಯಯನ ಹಾಗು ಅರಿವಿಗಾಗಿ ಇರುವ ವಿಚಾರಕ್ಕೆ ‘ಋತು’ ಎಂದು ಹೆಸರು. ಋತುಗಳಲ್ಲಿ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅದರ ತಕ್ಕಂತೆ ಅನೇಕ ರೀತಿಯಲ್ಲಿ ಜೀವನ ನಿರ್ವಹಣೆಯ ಸೂಕ್ಷ್ಮತೆಯ ಸೂತ್ರಗಳು ಈ ಹಬ್ಬದ ಆಚರಣೆಗಳು. ಹಬ್ಬಗಳು ಆಚರಣೆಗಳ ಕೇಂದ್ರಬಿಂದು.

ವರ್ಷದ ೧೨ ತಿಂಗಳನ್ನು ೨ ತಿಂಗಳಿಗೆ ೧ ಋತುವಿನಂತೆ ೬ ಋತುಗಳಾಗಿ ವಿಭಾಗ ಮಾಡಿ, ಈ ೨ ತಿಂಗಳಲ್ಲಿ ಪ್ರಕೃತಿಯಲ್ಲಿ ಇರುವ ವಾತಾವರಣ ಒಂದು ರೀತಿಯಲ್ಲಿ ಇರುತ್ತದೆ ಎಂಬುದು ವಿಚಾರ. ಆದರೆ ನಿರ್ದಿಷ್ಟವಾಗಿ ರೇಖೆಯೋಪಾದಿಯಲ್ಲಿ ವಿಭಾಗ ಮಾಡಲು ಸಾಧ್ಯವಿಲ್ಲ. ಆಯಾ ವಿಭಾಗದ ಪ್ರಕೃತಿಗೆ ಅನುಗುಣವಾಗಿ ಋತುಗಳನ್ನು ಅರ್ಥೈಸಿಕೊಳ್ಳಬೇಕು. ಇದರ ಅನುಸಾರ ನಮ್ಮ ಆಹಾರ, ಆಚಾರ, ವಿಹಾರಗಳೆಲ್ಲವು ಆವಲಂಬಿತ. ಭಗದ್ಗೀತೆಯಲ್ಲಿ “ಯುಕ್ತಾಹಾರ ವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು! ಯುಕ್ತ ಸ್ವಪ್ನಾವಬೋಧಸ್ಯ ಯೋಗೋ ಭವತಿ ದುಖಃ !!” ಎಂಬಂತೆ ಆಯಾ ಪ್ರಾಂತ್ಯಕ್ಕೆ ಅನುಗುಣವಾಗಿ ಆಹಾರ ಹಾಗು ಆಚರಣೆಯನ್ನು ಇಟ್ಟುಕೊಳ್ಳಬೇಕು.

ವಿಶೇಷವಾಗಿ ಮೈಸೂರಿನಲ್ಲಿ ಆಗುವ ಹವಾಮಾನ ಬದಲಾವಣೆಗಳು ನಮ್ಮ ಮೇಲೆ ಮಾಡುವ ಪರಿಣಾಮವನ್ನು ಶಾಸ್ತ್ರಬದ್ಧವಾಗಿ ಅರಿಯುವುದಾದರೆ, ಸಾಮಾನ್ಯವಾಗಿ ೩ ವಿಧವಾದ ವಾತಾವರಣವನ್ನು ನಾವು ನೋಡಬಹುದು – ಬೇಸಿಗೆಗಾಲ, ಮಳೆಗಾಲ ಹಾಗು ಚಳಿಗಾಲ. ಇದು ಪ್ರಕೃತಿಯ ಗುಣ ಶೀತ, ಉಷ್ಣದ ಮೇಲೆ ನಿರ್ಭರವಾಗಿರುತ್ತದೆ. ‘ಉಷ್ಣಶೀತಗುಣೋತ್ಕರ್ಷಾತ್ ವೀರ್ಯಾ: ದ್ವಿಜಾ ಏವ ಸ್ಮೃತಾಃ’ ಎಂಬಂತೆ ಈ ಜಗತ್ತನ್ನು ಯಾವ ಉಷ್ಣಶೀತರೂಪವಾದ ಶಕ್ತಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೋ ಅದನ್ನು ‘ಜ್ಯೋತಿರ್ಮಯ ಜಗತ್’ ಎಂದು ಕರೆಯುತ್ತೇವೆ. ಈ ಶಕ್ತಿಯು ಸೂರ್ಯನ ಮುಖಾಂತರ ಭೂಮಂಡಲದ ಮೇಲೆ ಪ್ರಭಾವ ಬೀರುತ್ತದೆ. ಶೀತಉಷ್ಣಗಳಂತೆ ೨೦ ಬಗೆಯ ಗುಣಗಳು ಪ್ರಕೃತಿಯಲ್ಲಿ ಇವೆ. ಅವುಗಳು ಕೂಡ ನಮ್ಮ ಮೇಲೆ ಪರಿಣಾಮ ಮಾಡಿ ರೋಗ-ರೋಗಕ್ಕೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಹೇಗೆ ನಾವು ಕಂಬಳಿಯ ಉಪಯೋಗ ಸಾಮಾನ್ಯ ನಿಯಮದಂತೆ ತಿಳಿದು ಉಪಯೋಗಿಸುತ್ತೇವೆಯೋ, ಉಳಿದ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ಶಾಸ್ತ್ರಗಳ ಸಹಾಯದಿಂದ ಪಡೆದು, ವಿಶೇಷವಾಗಿ ಆಹಾರಕ್ರಮದ ಮೂಲಕ ಆರೋಗ್ಯ ಕಾಪಿಟ್ಟುಕೊಳ್ಳಬೇಕು.

ಮೈಸೂರಿನ ಸಂಕ್ರಾಂತಿ!

ಮೈಸೂರು ಪ್ರಾಂತ್ಯವು ಸುಮಾರು ೫೦೦ ವರ್ಷಗಳ ಹಿಂದೆ ರಾಜರಿಂದ ಕಟ್ಟಲ್ಪಟ್ಟಿದ್ದು, ಅನೇಕ ರಾಜವಿದ್ವಾಂಸರು ಈ ಪ್ರಾಂತ್ಯಕ್ಕೆ ಬೇಕಾಗುವ ಶಾಸ್ತ್ರದ ಕಲೆ ಹಾಕಿದ್ದಾರೆ. ಇದರ ಆಧಾರದ ಮೇಲೆ ದೇಶದ ಹಲವಾರು ಭಾಗಗಳಿಂದ ವಲಸೆ ಬಂದಂಥವರು ಇವನ್ನೆಲ್ಲ ಪಾಲಿಸಿಕೊಂಡು ಇಲ್ಲಿಯೇ ನೆಲೆಗೊಂಡರು. ಇಲ್ಲಿ ಭಾಗಶಃ ಹೊಸದೊಂದು ಸಂಸ್ಕೃತಿಯ ನಿರ್ಮಾಣವೇ ಆಯಿತು. ಈ ಸಂಕ್ರಾಂತಿಗೆ ಸಂಬಂಧಿಸಿದಂತೆ, ಶೀತಕಾಲದ ಪರಾಕಾಷ್ಠೆ ಮೈಸೂರಿನಲ್ಲಿ ಇರುತ್ತದೆ. ಜೊತೆಗೆ ಸೂರ್ಯನರಶ್ಮಿಗಳು ಉಷ್ಣವಾಗಿ ನಮ್ಮ ಮೇಲೆ ಪ್ರಭಾವ ಬೀರಲು ಆರಂಭಿಸುತ್ತದೆ. ಇಂತಹಾ ಶೀತ ಉಷ್ಣ ಕಾಲಗಳ ಮಿಲನಕ್ಕೆ ಋತುಸಂಧಿ ಎಂದು ಹೆಸರು. ಸೂರ್ಯನ ಪ್ರಾಬಲ್ಯ ಮುಂದೆ ಹೆಚ್ಚುವ ೬ ತಿಂಗಳ ಕಾಲಾವಧಿಗೆ ಉತ್ತರಾಯಣ ಪುಣ್ಯಕಾಲ ಎಂಬ ಹೆಸರು. ಇಲ್ಲಿ ನಮ್ಮ ದೇಹ ಶೀತಗುಣದ ಪ್ರಭಾವದಿಂದ ಹೊರಬಂದು, ಉಷ್ಣಗುಣಕ್ಕೆ ಹೊಂದಿಕೊಳ್ಳಬೇಕು. ಅತಿಯಾದ ಶೀತ ಗುಣಕ್ಕೆ ಸೇರಿಕೊಂಡಂತೆ ಶೀತವಾಯುವು ದೇಹದ ಚರ್ಮವನ್ನು ಒಣಗಿಸಿ ಕೆಲವೊಮ್ಮೆ ಚರ್ಮಸೀಳುವಂತೆಯೂ ಮಾಡುವುದು. ಇದಕ್ಕೆ ಎಣ್ಣೆಸ್ನಾನ ಒಂದು ಪರಿಹಾರ. ಹಾಗಾಗಿ ಮೈಸೂರು ಪ್ರಾಂತ್ಯದಲ್ಲಿ ದೀಪಾವಳಿಯ ಸಮಯದಲ್ಲೇ ಎಣ್ಣೆಸ್ನಾನಕ್ಕೆ ಅವಕಾಶ ಉಂಟು.

ಸಂಕ್ರಾಂತಿಯ ದಿನದಂದು ಆನಂದದಿಂದ ಹುಗ್ಗಿಯನ್ನು ಉಕ್ಕಿಸಿ ಸಮೃದ್ಧಿಯನ್ನು ಅನುಭವಿಸುವ ಪರ್ವವಾಗಿದೆ. ರಾಸುಗಳ ಪೂಜೆಯ ನಂತರ, ಎತ್ತುಗಳಿಂದ ಕೆಚ್ಚು ಹಾಯಿಸುವುದು, ಮನೆಯ ಮಕ್ಕಳನ್ನು ಕೂಡಿಸಿ ಏಲಚೆಹಣ್ಣು, ಎಳ್ಳುಗಳಿಂದ ಅಭಿಷೇಕ ಮಾಡಿ ಆರತಿ ಮಾಡಿ ಅವರಿಗೆ ಆಗಿರಬಹುದಾದ ದೃಷ್ಟಿದೋಷ ನಿವಾರಿಸುವುದು ಪದ್ಧತಿ. ಇದಕ್ಕೆ ಮುಂಚೆ ಮುಂಜಾನೆ ಎಳ್ಳೆಣ್ಣೆ ಅಭ್ಯಂಗಸ್ನಾನ ಮಾಡಿಸುವುದು ಸಂಕ್ರಾಂತಿಯ ವಿಶೇಷ.

ಆಹಾರದಿಂದ ಆರೋಗ್ಯ

ಸಂಕ್ರಾಂತಿಯ ಬಹು ಮುಖ್ಯ ಭಾಗ ಆಹಾರ. ಆಧುನಿಕ ಕಾಲದ ಆಹಾರದ ಪರಿಕಲ್ಪನೆ ಆಧಾರವಿಲ್ಲದ್ದು. ಇವೆಲ್ಲವೂ ವರ್ಷಾನುವರ್ಷ ಬೆಳೆದುಕೊಂಡು ಬಂದ ಪದ್ಧತಿಗಳು. ಸಂಕ್ರಾಂತಿಯ ಸಮಯದಲ್ಲಿ ಹೊಸ ಅಕ್ಕಿ, ಹೊಸ ಹೆಸರುಬೇಳೆ, ತುಪ್ಪ, ಕೊಬ್ಬರಿ, ಕಾಳುಮೆಣಸು ಸೇರಿಸಿ ಹುಗ್ಗಿಯನ್ನು, ಹೊಸ ಬೆಲ್ಲವನ್ನು ಉಪಯೋಗಿಸಿ ಸಿಹಿಪೊಂಗಲ್ ತಯಾರಿಸಿ ಬಳಸುವುದು ಆರೋಗ್ಯಕ್ಕೆ ಪೂರಕ. ಹುಳಿ ಪ್ರಧಾನವಾಗಿರುವ, ಎಳ್ಳನ್ನು ಸೇರಿಸಿಕೊಂಡು ತಯಾರಿಸುವ ಪುಳಿಯೋಗರೆ ಚಳಿಗೆ ಬೇಕಾಗುವ ಸಿಹಿ, ಹುಳಿ, ಹಾಗು ಉಪ್ಪು ರಸಗಳನ್ನು ಪೂರೈಸುತ್ತದೆ. ಪಾಯಸ, ಸಿಹಿ ಪೊಂಗಲ್ ಸುಲಭವಾಗಿ ಜೀರ್ಣವಾಗಿ, ಶರೀರಕ್ಕೆ ತೊಂದರೆಮಾಡದೆ, ಆರೋಗ್ಯ ತರುವುದು. ಪಿತೃಕಾರ್ಯಗಳಲ್ಲಿ ಹಾಗು ಸ್ತ್ರೀಯರ ಶರೀರ, ಗರ್ಭಕೋಶ ಶುದ್ಧೀಕರಿಸುವಲ್ಲಿ ಎಳ್ಳಿನ ಪ್ರಯೋಗ ಉಂಟು. ನಮ್ಮಲ್ಲಿ ಋತುಮತಿಯಾದ ಹೆಣ್ಣುಮಕ್ಕಳಲ್ಲಿ ಎಳ್ಳು ಉಂಡೆ ಅಥವಾ ಗ್ರಾಮ್ಯ ಭಾಷೆಯಲ್ಲಿ ಚಿಗಳಿ ಉಂಡೆ ಎಂದು ಕರೆಯುವ ಸಿಹಿಯನ್ನು ಗರ್ಭಕೋಶದ ಶುದ್ಧಿಗೆ ಬಳಸುವುದು ಉಂಟು. ಸಂಕ್ರಾಂತಿಯ ಸಮಯದಲ್ಲಿ ಅವರೇಕಾಳು ಸಿಹಿ ಕಡುಬು ನಮ್ಮ ಪ್ರಾಂತ್ಯದ ವಿಶೇಷ. ಅವರೇಕಾಳು, ಅಕ್ಕಿತರಿ, ಬೆಲ್ಲ, ತೆಂಗಿನತುರಿ, ಎಳ್ಳು ಸೇರಿಸಿ ತಯಾರಿಸಿ ತುಪ್ಪದಲ್ಲಿ ಹುರಿದು ಮುಂದೆ ಉಗಾದಿಯವರೆಗೆ ಉಪಯೋಗಿಸುವುದು ರೂಢಿ. ಅವರೇಕಾಳು, ಹುರಳಿಕಾಳು, ಅಲಸಂದೆಕಾಳು ಚಳಿಗಾಲದಲ್ಲಿ ಬೇಕಾಗುವ ಪೌಷ್ಟಿಕಾಂಶ ಪೂರೈಸುತ್ತವೆ. ಈ ಕಾಳುಗಳು ಮೈಸೂರು ಪ್ರಾಂತ್ಯದ ವಿಶೇಷತೆ. ಇವನ್ನು ದನಕರುಗಳಿಗೂ ಬಳಸುವುದು ಇದೆ.

ಮೈಸೂರಿನ ವಿಶೇಷ ಆಹಾರಗಳು!

ನಂಜನಗೂಡು ರಸಬಾಳೆ- ಮೈಸೂರಿನ ವಿಶೇಷ ರಸಬಾಳೆ ಬಹಳ ರುಚಿಕರ. ಈ ಕಾಲದಲ್ಲಿ ರಸಬಾಳೆಯನ್ನು ಮುಖ್ಯವಾಗಿ ಸೇವನೆ ಮಾಡಬೇಕು. ಹಬ್ಬದಲ್ಲಿ ದೇವರಪೂಜೆಗೂ ಬಳಸಬಹುದು.

ಮೈಸೂರು ವೀಳ್ಯದೆಲೆ – ನಿತ್ಯ ಬಳಕೆಯ, ಹೆಚ್ಚಾಗಿ ಹಬ್ಬದ ಸಮಯದಲ್ಲಿ, ಹಾಗು ಸಂಕ್ರಾಂತಿಯ ಸಮಯದಲ್ಲಿ ಇದರ ಪ್ರಯೋಗ ಹೆಚ್ಚು. ವೀಳ್ಯದೆಲೆ ಅಲಕ್ಷ್ಮೀ ನಿವಾರಕ ಅಂದರೆ, ದೇಹದಲ್ಲಿ ಉಂಟಾಗಬಹುದಾದ ಅಜೀರ್ಣ, ಇತರೆ ಅನಾರೋಗ್ಯಕ್ಕೆ ಇದು ರಾಮಬಾಣ. ಇದು ಕೂಡ ಮೈಸೂರು ಮಹಾರಾಜರು ದೇಶದ ಎಲ್ಲ ಭಾಗಗಳಿಂದ ಹುಡುಕಿ ತಂದ ಔಷಧಿ ಗುಣವುಳ್ಳ ನಿತ್ಯೋಪಯೋಗಿ ಪ್ರಭೇದ. ಇದನ್ನು ದೃಷ್ಟಿ ನಿವಾರಣೆಗೂ ಉಪಯೋಗಿಸಬಹುದು.

ಮೈಸೂರು ಮಲ್ಲಿಗೆ- ಪುಷ್ಪಗಳು ನಮ್ಮ ಸಂಸ್ಕೃತಿಯ ಮುಖ್ಯ ಭಾಗ. ಪುಷ್ಪಗಳ್ಳನ್ನು ದೇವರಿಗೆ ಸಮರ್ಪಿಸಿ ಧಾರಣೆ ಮಾಡುವುದು ಈ ಕಾಲಕ್ಕೆ ಬಹಳ ಸೂಕ್ತ. ಇದರಿಂದ ಪಿತ್ತ ಹಾಗು ವಾತ ದೋಷ ನಿವಾರಣೆ ಮಾಡುವಲ್ಲಿ ಸಹಾಯವಾಗುವುದು. ಮನಸ್ಸು ಪ್ರಶಾಂತವಾಗಿ ಇಡಲು ಸಹಾಯವಾಗಿ, ಮಾನಸಿಕ ಒತ್ತಡ ನಿರ್ವಹಣೆ ಮಾಡಿಕೊಳ್ಳಬಹುದು. ಸಂಕ್ರಾಂತಿಯ ರಾಸುಗಳ ಅಲಂಕಾರಕ್ಕೂ ಇದರ ಬಳಕೆ ಇದೆ.

ಮೈಸೂರು ಭತ್ತ ಹಾಗು ಕಬ್ಬು – ಭತ್ತವು ಮೈಸೂರು ವಿಜಯನಗರದ ಹಾಗು ಮೈಸೂರು ಮಹಾರಾಜರ ಇನ್ನೊಂದು ಕೊಡುಗೆಯೇ ಸರಿ. ಇಲ್ಲಿನ ಮಣ್ಣು ಭತ್ತ ಹಾಗು ಕಬ್ಬು ಬೆಳೆಯಲು ಬಲು ಸೂಕ್ತ. ಚೆನ್ನಾಗಿ ವರ್ಷವಿಡೀ ಮೈತುಂಬಿ ಹರಿಯುವ ನದಿ-ತೊರೆಗಳಿಂದ ಈ ರೀತಿಯಾದ ಬೆಳೆಗಳ ಕೃಷಿ ಲಾಭಕಾರಿಯೂ ಆಗಿದೆ. ಕಬ್ಬಿನಿಂದ ತಯಾರಾದ ಬೆಲ್ಲ ಹಾಗು ಸಕ್ಕರೆಯ ಉಪಯೋಗ, ಎಳ್ಳುಬೆಲ್ಲದಲ್ಲಿ ನಮಗೆ ತಿಳಿದೇ ಇದೆ.

ರಾಸುಗಳ ಜಾತ್ರೆಯು ಸಂಕ್ರಾಂತಿಯ ಸಮಯದಲ್ಲಿ ವಿಶೇಷ. ಅವುಗಳಿಗೆ ಕಬ್ಬಿನ ಮೇವು ಪರ್ವಕಾಲದ ವಿಶೇಷ. ಕೊಟ್ಟುಕಳುಹಿಸುವಾಗ ವೀಳ್ಯದೆಲೆ ಜೊತೆ ಅಡಿಕೆ, ಅಚ್ಚು ಬೆಲ್ಲ ಹಾಗು ಕೊಬ್ಬರಿ ಬಟ್ಟಲು ಸೇರಿಸುವುದು ರೂಢಿ.

ಬದನೆಕಾಯಿ – ಈರಣಗೆರೆ ಬದನೇಕಾಯಿ ಮೈಸೂರಿನ ವಿಶೇಷ ತರಕಾರಿ. ಇದು ಹಲವಾರು ರುಚಿಕಟ್ಟಾದ ಅಡುಗೆಗಳಲ್ಲಿ ಸಿಂಹಪಾಲು ಪಡೆದುಕೊಂಡಿದೆ.

ಮೈಸೂರಿನ ರಾಸುಗಳು – ಹಳ್ಳಿಕಾರ್ ಹಾಗು ಅಮೃತ್‌ಮಹಲ್ ನಮ್ಮ ಮೈಸೂರಿನ ಶ್ರೇಷ್ಠವಾದ ಹಾಲು ಕೊಡುವ ಹಸುಗಳು. ಜೊತೆಗೆ ಎಮ್ಮೆ, ಕುರಿ, ಆಡು ಎಲ್ಲವು ಕೂಡ ವಿಜಯನಗರ ಹಾಗು ಮೈಸೂರು ರಾಜರ ಈ ಪ್ರಾಂತ್ಯಕ್ಕೆ ಕೊಡುಗೆ. ಮೈಸೂರಿನ ಆರ್ಥಿಕ ಬೆಳವಣಿಗೆಗೆ ಇದು ಬಹಳ ಮುಖ್ಯ. ರಾಸುಗಳ ಪೂಜೆಯು ‘ವಸುಧೈವ ಕುಟುಂಬಕಂ’ – ನೀತಿ ಸ್ಥಾಪನೆ ಮಾಡುವುದಲ್ಲದೆ ಅವುಗಳನ್ನು ಕೃತಜ್ಞತಾ ಭಾವನೆಯಿಂದ ಕಾಣುವುದು ಇಲ್ಲಿ ನೋಡಬಹುದು. ಪಶುಗಳ ಅಭಿವೃದ್ಧಿಗೆ ಸಾವಿರಾರು ಎಕರೆ ಜಾಗಗಳನ್ನು ಕೂಡ ಮೈಸೂರು ರಾಜರು ಮುಡಿಪಾಗಿಟ್ಟಿದ್ದನ್ನು ಇಲ್ಲಿ ಜ್ಞಾಪಿಸಲೇ ಬೇಕು. ಇವೆಲ್ಲದರ ಜೊತೆ, ನಮ್ಮ ಮೈಸೂರು, ಸಂಕ್ರಾಂತಿ ಹಬ್ಬ, ಮೈಸೂರಿನಲ್ಲಿ ನೆಲೆನಿಂತ ವೈದಿಕ ಸಂಸ್ಕೃತಿ, ನೃತ್ಯ, ಸಂಗೀತ, ಆಯುರ್ವೇದ, ಜ್ಯೋತಿಷ್ಯ, ಇನ್ನು ಹಲವು ಕ್ಷೇತ್ರದ ಪಂಡಿತರು ಸೇರಿ ಮೈಸೂರಿನ ಭವ್ಯವಾದ ಹೊಸ ಸಂಸ್ಕೃತಿ ನಿರ್ಮಾಣ ಮಾಡಿದ್ದಾರೆ. ಮೈಸೂರು ದಸರೆ ಹಾಗು ಸಂಕ್ರಾಂತಿಯ ರಾಸುಗಳ ಜಾತ್ರೆ ಇಲ್ಲಿನ ವಿಶೇಷಗಳಲ್ಲಿ ವಿಶೇಷ.

ಹೀಗೆ, ನನ್ನ ಆಪ್ತಗುರು ಶ್ರೀ ಡಾ. ಕುಮಾರಸ್ವಾಮಿಯವರು ನಮಗೆಲ್ಲಾ ಸಂಕ್ರಾಂತಿಯನ್ನು ವೈಜ್ಞಾನಿಕವಾಗಿ, ಐತಿಹಾಸಿಕವಾಗಿ, ಭೌಗೋಳಿಕವಾಗಿ, ಗ್ರಾಮೀಣ ಸೊಗಡನ್ನು ಸೇರಿಸಿಕೊಂಡಂತೆ ಅರ್ಥಮಾಡಿಕೊಳ್ಳುವ ಅಪರೂಪದ ದೃಷ್ಟಿಕೋನದ ಕಿಚ್ಚು ನನ್ನಲ್ಲಿ-ನಿಮ್ಮಲ್ಲಿಯೂ ಹಚ್ಚಿದ್ದಾರೆ. ಅವರಿಗೆ ನನ್ನ ವಿನಯಪೂರ್ವಕ ಪ್ರಣಾಮಗಳು ಹಾಗು ಧನ್ಯವಾದಗಳು. ಕೊನೆಯದಾಗಿ ಇದ್ಯಾವುದೂ ಅರ್ಥವಾಗದ ಪಕ್ಷದಲ್ಲಿ, ಇನ್ಯಾವುದೋ ಶಾಸ್ತ್ರದ ಹಂಗಿಲ್ಲದಂತೆ, ಅರಿವಿಲ್ಲದೆಯೂ ಆಯಾ ಆಚರಣೆಗಳನ್ನು ಸಾಂಪ್ರದಾಯಿಕವಾಗಿ ಅಳವಡಿಸಿಕೊಂಡರೆ ಸಾಕು, ಅದರ ಫಲಲಾಭ ಉಂಟು ಎಂಬುದು ನನ್ನ ವಿಚಾರ. ಸಂಕ್ರಾಂತಿಯು ಕೇವಲ ಆಚರೆಣೆಗೆ ಮಾತ್ರವಲ್ಲ, ಆರೋಗ್ಯಕ್ಕೂ, ಪ್ರಕೃತಿಕಡೆಗೆ ನಮ್ಮ ದೃಷ್ಟಿ ಕೇಂದ್ರೀಕರಿಸುವಲ್ಲಿ, ಆನಂದದಿಂದ ಉಕ್ಕಿ ಮುದ ನೀಡುವ ಹಬ್ಬವಾಗಿದೆ.