ಉಳಿದ ಕಿಡಿಗಳು…

ಎಂದೋ ಹೊತ್ತುರಿದ ಪರ್ವದಿನಗಳ
ಅಗ್ನಿ ಕುಂಡದಲಿ, ಇನ್ನೂ ಬಿಸುಪು
ಉಳಿದಿರಬಹುದೇ ಎಂದು
ಕಣ್ಣೋಟದಲಿ ಮಿಂಚನರಸಿ
ಬರಬೇಡ ಹೊತ್ತು ಸಿಡಿವ ಕಿಡಿಗಳನು

ನೆರೆತ ತಲೆಗೂದಲು
ಮೈಯ ಸುಕ್ಕಲು ಬೆಸೆತ
ಹೊಸ ಬಾಂದವ್ಯಗಳ ಒಂಟಿ ಬದುಕಿನ ನಡುವೆ
ಉಳಿದಿರಬಹುದೇ ಎಂದು, ಕಾಡಿದ
ಅಂದಿನ ಆ ಬೆಳದಿಂಗಳು

ಭದ್ರವಾಗಿಟ್ಟಿರುವೆ ಜೋಪಾನ
ತೆರೆಯಹೊರಟರೆ ಉಕ್ಕಬಹುದು
ಆದರೂ ಒಪ್ಪಲಾರೆ, ಬತ್ತದೊಲವ
ನೋವಿನಲಿ ಮೌನ
ಹೊಲಿದ ತುಟಿಗಳ ನಡುವೆ ಉಳಿದ ನಮ್ಮದೇ ಧ್ಯಾನ

ಮನದುಳಿದ ಚಿತ್ರ ಕದಲಿಸಿ
ಕಳೆದ ದಿನಗಳ ಮರುಕಳಿಸಿ
ʼಒಂದಿಷ್ಟು ಜೀವಿಸು?ʼ ಎಂದವನ
ಕರೆಗೆ ಓಗೊಟ್ಟು, ಅಂದು ಬದಿಗೆ
ಸರಿದು ನಿಂತವನ ಪ್ರಶ್ನೆಗೆ ಉತ್ತರವಾಗಲಾರೆ