ಯುದ್ಧಗಳು

ಯುದ್ಧಗಳಲ್ಲಿ ತೊಡಗಿಕೊಂಡವರಿಗೆ
ಕದನ ಕಳೆದರೂ
ಯುದ್ಧಗಳು ಮುಗಿಯುವುದಿಲ್ಲ
ಘಾಸಿಯಾದ ಜಗತ್ತುಗಳಲ್ಲಿ
ಕನಸುಗಳು ಮತ್ತೆ ಅರಳುವುದಿಲ್ಲ

ಬೆಂಕಿಯುಗುಳುವ ಬಾನು
ನಿಂತ ನೆಲದ ಆಸ್ಪೋಟ
ಬಿರಿದೆದೆಗಳ ಆಕ್ರಂದನಗಳು
ಅನುರಣಿಸುವುದು ನಿಲ್ಲುವುದಿಲ್ಲ

ರೌರವ ರಾತ್ರಿಗಳಲಿ ನಿತ್ಯ
ಭೇಟಿಕೊಡುವ ಪ್ರೇತಗಳು
ಮೇಲೆರಗುವ ಬಂದೂಕು
ಕನವರಿಸುವ ಹೆಸರುಗಳು ಕರಗುವುದಿಲ್ಲ

ಅಡಗಿ ಕುಳಿತ ಶತ್ರು
ಹತ್ತಿಳಿದ ಬೆಟ್ಟ-ಗುಡ್ಡಗಳು
ಪಾತಾಳ ಲೋಕದ ಭೀತಿಗಳು
ಹರಿದ ರಕ್ತದ ಕಡಲು ಮರೆಯಾಗುವುದಿಲ್ಲ

ಜಾತಿ, ಧರ್ಮ, ಜನಾಂಗಗಳು
ಗಡಿ ರೇಖೆ ಸರಹದ್ದುಗಳು
ಮನುಕುಲದ ಮರುಳುಗಳು ಘಾಸಿಗೊಂಡ
ಮನಸುಗಳ ಎಣಿಸುವುದಿಲ್ಲ

ಹೊತ್ತಿ ಉರಿವ ದ್ವೇಷಗಳು
ಪ್ರತಿಷ್ಠೆ, ಅಹಮ್ಮು, ಅಧಿಕಾರಗಳು
ಬದುಕುಗಳ ಬಲಿಯೊಡನೆ
ಜೀವಂತ ಬದುಕ ಹಿಂಡುವುದ ನಿಲ್ಲಿಸುವುದಿಲ್ಲ

ವಿಷಯಗಳ ವಿಷಮತೆಯು
ಮನುಮೃಗದ ಆಳ ಸ್ವಭಾವದಲಿ
ಮಹಾಮಾರಿಯ ಪಿಡುಗಾಗಿ
ತೆರೆ ತೆರೆಯಾಗಿ ಅಪ್ಪಳಿಸುವುದ ತಪ್ಪಿಸುವುದಿಲ್ಲ….