ಕೊರೊನಾ ಸೋಂಕನ್ನು ದೂರವಿರಿಸುವ ಪ್ರಯತ್ನಗಳಿಗೆ ಆದ್ಯತೆ ನೀಡುವಾಗ, ಹಬ್ಬ, ಸಂಭ್ರಮಗಳ ಆಚರಣೆ ಸಹಜವಾಗಿಯೇ ದೂರವಾಗಿಬಿಡುತ್ತದೆ. ಸಂವಹನಕ್ಕೆ ಆನ್ ಲೈನ್ ಅನಿವಾರ್ಯವಾಗಿದೆ. ಹೊರನಾಡಿನಲ್ಲಿಯೂ ಇಂತಹುದೇ ಪರಿಸ್ಥಿತಿ. ಆಸ್ಟ್ರೇಲಿಯಾ ನಿವಾಸಿ ಡಾ. ವಿನತೆ ಶರ್ಮಾ ಅಲ್ಲಿನ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುವ ಲೇಖಕಿ.  ಸಣ್ಣ ಬಿಡುವಿನ ನಂತರ ಇದೀಗ ಅವರ ಅಂಕಣ ಆಸ್ಟ್ರೇಲಿಯಾ ಪತ್ರ ಮತ್ತೆ ಆರಂಭವಾಗಲಿದೆ. ಮೊದಲ ಪತ್ರದಲ್ಲಿ NAIDOC ಆಚರಣೆಯ ನೆನಪುಗಳನ್ನು ಬರೆದಿದ್ದಾರೆ.


ಆಸ್ಟ್ರೇಲಿಯಾದಲ್ಲಿ NAIDOC ಆಚರಣೆ, ಸ್ಥಗಿತದ ಬಗ್ಗೆ ಒಂದು ಸ್ವಗತ

ಇದು NAIDOC ಆಚರಣೆ ವಾರ. ಪ್ರತಿ ವರ್ಷ ಜುಲೈ ತಿಂಗಳ ಮೊದಲ ವಾರ ಬರುವ ಮುನ್ನ ಅದೇನೋ ಕುತೂಹಲ, ಸಣ್ಣನೆ ಆತಂಕ. ಆಸ್ಟ್ರೇಲಿಯಾ ದೇಶದಲ್ಲಿ ನೆಲೆಸಿರುವ ವಲಸಿಗರಿಗೆ ಇದು ಸಹಜವಾಗಿ ಇರಲೇಬೇಕಾದ ಭಾವನೆಗಳೇನೊ ಅಂತ ಅನಿಸುವುದು ನನಗೆ ಮಾತ್ರವೊ ಇಲ್ಲ ಬೇರೆಯವರಿಗೂ ಹಾಗೆ ಅನ್ನಿಸುತ್ತದೆಯೊ ಗೊತ್ತಿಲ್ಲ. ಆದರೆ ಸಮಾಜದ ಮುಖ್ಯ ಜನಸಂಖ್ಯೆಯಾದ ಬಿಳಿ ಆಸ್ಟ್ರೇಲಿಯನ್ನರಲ್ಲಿ NAIDOC ವಾರದ ಬಗ್ಗೆ ತುಸು ತಿರಸ್ಕಾರ, ನಿರ್ಲಕ್ಷ್ಯ ಮತ್ತು ಬೇಕೆಂತಲೆ NAIDOC ವಾರಪೂರ್ತಿ ಜರುಗುವ ಕಲಾಪಗಳ ಬಗ್ಗೆ ಅಸಡ್ಡೆ ಇರುವುದನ್ನು ನಾನು ಕೇಳಿದ್ದೀನಿ, ನೋಡಿದ್ದೀನಿ. ಹಾಗಿರುವ ಅವರ ಕಾಟಾಚಾರದ ಮನಃಸ್ಥಿತಿ ಅವರನ್ನೇ ಕಾಡುವುದು, ಅದರಿಂದ ಅವರ ಆತಂಕ ಹೆಚ್ಚುವುದು ನಿಜವೇನೂ ಅನ್ನಿಸಿಬಿಡುವಾಗ ಕಸಿವಿಸಿಯಾಗುತ್ತದೆ. ಆದರೆ, ಬಿಳಿ ಆಸ್ಟ್ರೇಲಿಯನ್ನರ ಅಸಡ್ಡೆ, ತಿರಸ್ಕಾರದ ಮನೋಭಾವ ನಿಧಾನವಾಗಿ ಬದಲಾಗುತ್ತಿರುವುದನ್ನೂ ಕೂಡ ಈಗೀಗ ನೋಡುತ್ತಿದ್ದೀನಿ. ಆ ಬದಲಾವಣೆಯಲ್ಲಿ ವಲಸಿಗರ ಅಗೋಚರ ಪಾತ್ರ ಹೆಚ್ಚುತ್ತಿದೆ ಎನ್ನುವ ಸಂಗತಿ ನನಗೆ ಬಹಳ ಸಮಾಧಾನ ತರುತ್ತಿದೆ.

ಅತ್ತ ಕಡೆ ಆಸ್ಟ್ರೇಲಿಯಾದ First Nations ಜನರು ತಮಗೆ ಸಂಪೂರ್ಣವಾಗಿ ಸೇರುವ, ಮುಡಿಪಿಟ್ಟಿರುವ NAIDOC ವಾರ ಹಬ್ಬದ ಆಚರಣೆಯನ್ನು ವರ್ಷದಿಂದ ವರ್ಷ ಹಿಗ್ಗಿಸುತ್ತಿದ್ದಾರೆ. ಭಾನುವಾರ ಆರಂಭವಾಗುವ ಹಬ್ಬಗಳು ಎರಡನೇ ಭಾನುವಾರಕ್ಕೆ ಕೊನೆಯಾಗುತ್ತವೆ. ಇದಕ್ಕೆ ರಾಜ್ಯ ಸರಕಾರಗಳ ಬೆಂಬಲವೂ ಇದೆ ಎನ್ನಿ. ಹೋದ ವರ್ಷ ಕರೋನ ಕಾರಣವಾಗಿ ಮುಖತಃ ನಡೆಯುವ ಹಬ್ಬದಾಚರಣೆ ರದ್ದಾಗಿ ಅದನ್ನು ಆನ್ಲೈನ್ ಮತ್ತು ಅವರವರ ಸ್ಥಳೀಯ ಮಟ್ಟದಲ್ಲಿ ನಡೆಸಿದ್ದರು. ಏನೇ ಹೇಳಿ ಹಬ್ಬವೆಂದರೆ ಅಲ್ಲಿ ಸಡಗರ, ಸಂಭ್ರಮ, ನಗು, ಹರ್ಷ, ಮಾತು, ಓಡಾಟ, ಸಂಗೀತ, ನೃತ್ಯ ಎಲ್ಲವೂ ಇರಬೇಕು. ಈ ವರ್ಷ 2021ರಲ್ಲಿ ಅವೆಲ್ಲವೂ ಇರುತ್ತವೆ ಎಂದು ನಮ್ಮ ರಾಣಿರಾಜ್ಯದಲ್ಲಿ ಹಬ್ಬದ ಸಂಘಟಕರು, ಆಯೋಜಕರು ಹೇಳಿದ್ದಾರೆ. ಆದರೂ ಕೋವಿಡ್-೧೯ ಸುರಕ್ಷತಾ ಪಾಲನೆಯನ್ನು ಮಾಡಲೇಬೇಕು ಎಂದು ಸರಕಾರದ ಮುಖ್ಯಸ್ಥರು ಎಚ್ಚರಿಸಿದ್ದರು. ದೇಶದಾದ್ಯಂತ ಅಲ್ಲಲ್ಲಿ ಇರುವ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಏನಾಗುತ್ತದೊ, ಹೇಗಾಗುತ್ತದೋ.

ಅಂದ ಹಾಗೆ NAIDOC ಅಂದರೆ ನ್ಯಾಷನಲ್ ಆಬೊರಿಜಿನಿಸ್ ಅಂಡ್ ಐಲ್ಯಾಂಡರ್ಸ್‌ ಡೇ ಅಬ್ಸರ್ವಾನ್ಸ್‌ ಕಮಿಟಿ. ದೇಶದ ಮೂಲನಿವಾಸಿಗಳ (ಅಬೊರಿಜಿನಲ್ ಮತ್ತು ದ್ವೀಪನಿವಾಸಿಗಳು) ಬಹುಜನ ಸಂಸ್ಕೃತಿಗಳನ್ನು ಗೌರವಿಸುತ್ತ, ಅವುಗಳ ಅಸ್ಮಿತೆಗಳನ್ನು ಗುರುತಿಸಿ ಅವನ್ನು ಕಾಪಾಡುವ ಮತ್ತು ಸಂಸ್ಕೃತಿಗಳನ್ನು ಹಬ್ಬವಾಗಿಸಿ ಆಚರಿಸುವ ಪದ್ಧತಿ ಕ್ರಮೇಣ ಬೆಳೆದುಬಂದಿದೆ. ಬೆಳೆಯುತ್ತಲೇ ಇದೆ. ಕಾರಣ ಆಸ್ಟ್ರೇಲಿಯನ್ ಬಿಳಿ ಜನತೆಯಲ್ಲಿ ಅನೇಕರು ಇದು ಜನವರಿ 26ರಂದು ನಡೆಯುವ ರಾಷ್ಟ್ರೀಯ ಆಸ್ಟ್ರೇಲಿಯನ್ ದಿನದ ಆಚರಣೆಗೆ ಪರ್ಯಾಯವಾಗಿ ಹುಟ್ಟಿದ್ದು, ತಮಗೆ, ತಮ್ಮ ಅಸ್ಮಿತೆಗೆ ಸಡ್ಡುಹೊಡೆದು ಅಬೊರಿಜಿನಲ್ ಜನಗುಂಪುಗಳು ಹೀಗೆ ತಮ್ಮದೆ ಪ್ರತ್ಯೇಕ ಹಬ್ಬದಾಚರಣೆಯನ್ನು ನಡೆಸುವುದು ತಪ್ಪು ಎಂದು ನಂಬುತ್ತಾರೆ. ಆದ್ದರಿಂದ NAIDOC ವಾರದ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ, ಹಿಂಜರಿಯುತ್ತಾರೆ ಮತ್ತು ತೆಗಳುತ್ತಾರೆ.

ಇದನ್ನೆಲ್ಲಾ ಹಿಂದೆ ನಾನು ಕೆಲಸ ಮಾಡುತ್ತಿದ್ದ ಯೂನಿವರ್ಸಿಟಿಯಲ್ಲೆ ಕಂಡು ಅನುಭವಿಸಿದ್ದೀನಿ. ಜನವರಿ 26 ಎಂದರೆ ಎಲ್ಲೆಲ್ಲಿ ನೋಡಿದರೂ ಹಬ್ಬವೋ ಹಬ್ಬ. ಅಂದು ರಾಷ್ಟ್ರೀಯ ರಜಾ ಕೂಡ. ಆದರೆ ಆ ದಿನವು ತಮ್ಮ ಪಾಲಿಗೆ ಕರಾಳ ದಿನ, ತಮ್ಮ ದೇಶವನ್ನು ಆಕ್ರಮಿಸಿಕೊಂಡ ವಸಾಹತುಶಾಹಿಗಳ ಆಕ್ರಮಣ ದಿನ ಎಂದು ಬಹುತೇಕ ಮೂಲನಿವಾಸಿಗಳು ನಂಬುತ್ತಾರೆ. ಇತಿಹಾಸದ ಪ್ರಕಾರ ಅವರ ನಂಬಿಕೆ ನಿಜವಾದದ್ದೆ ಹೌದು.

ಅವರ ಕೋರಿಕೆಯಂತೆ ಜುಲೈ 9 ಅನ್ನು ಅಬೊರಿಜಿನಲ್ ಮತ್ತು ದ್ವೀಪನಿವಾಸಿಗಳ ದಿನವನ್ನಾಗಿ ಘೋಷಿಸಿ ರಾಷ್ಟ್ರೀಯ ರಜೆಯೆಂದು ಜಾರಿಗೆ ತರಬೇಕು ಎನ್ನುವ ವಿಷಯ ಇನ್ನೂ ಇತ್ಯರ್ಥವಾಗಿಲ್ಲ. ಈ ರೀತಿಯ ವಿಭಜನೆಗಳಿರುವುದರಿಂದ ಈ ದೇಶದಲ್ಲಿ ಸದಾಕಾಲ ಆತಂಕ, ನೋವು, ತಲ್ಲಣಗಳಿದ್ದೆ ಇವೆ.

ಕೊರೋನ ದೆಸೆಯಿಂದ ಪ್ರಪಂಚದ ಮತ್ತು ತಮ್ಮ ದೇಶದ ಜನರೆಲ್ಲಾ ನೋವಿಗೀಡಾಗಿರುವುದರಿಂದ NAIDOC ಕಮಿಟಿ ಈ ವರ್ಷ ತಮ್ಮ ಆಚರಣೆಯ ಥೀಮ್ ‘ಹೀಲ್ ಕಂಟ್ರಿ’ ಎಂದು ಆರಿಸಿದ್ದಾರೆ. ಖಂಡಿತವಾಗಿಯೂ ಆ ಥೀಮ್ ಎಲ್ಲಾ ಕಾಲಕ್ಕೂ ಸಲ್ಲುತ್ತದೆ.

ಅವರ ಕಾಟಾಚಾರದ ಮನಃಸ್ಥಿತಿ ಅವರನ್ನೇ ಕಾಡುವುದು, ಅದರಿಂದ ಅವರ ಆತಂಕ ಹೆಚ್ಚುವುದು ನಿಜವೇನೂ ಅನ್ನಿಸಿಬಿಡುವಾಗ ಕಸಿವಿಸಿಯಾಗುತ್ತದೆ. ಆದರೆ, ಬಿಳಿ ಆಸ್ಟ್ರೇಲಿಯನ್ನರ ಅಸಡ್ಡೆ, ತಿರಸ್ಕಾರದ ಮನೋಭಾವ ನಿಧಾನವಾಗಿ ಬದಲಾಗುತ್ತಿರುವುದನ್ನೂ ಕೂಡ ಈಗೀಗ ನೋಡುತ್ತಿದ್ದೀನಿ.

ಈ ವಾರ ನಾನು ನಿಜವಾಗಿಯೂ ಬ್ರಿಸ್ಬೇನ್ ನಗರದ Musgrave ಪಾರ್ಕಿನಲ್ಲಿ ಶುಕ್ರವಾರದಂದು ನಡೆಯುವ ಇಡೀ ದಿನದ ಕಾರ್ಯಕ್ರಮಗಳಿಗಾಗಿ ಎದುರು ನೋಡುತ್ತಿದ್ದೆ. ಆ ದಿನ ದೊಡ್ಡ ಪ್ರಮಾಣದ ಆಚರಣೆಯಿರುತ್ತದೆ. ಸಾವಿರಾರು ಜನ ಸೇರುತ್ತಾರೆ. ಅಬೊರಿಜಿನಲ್ ಮತ್ತು ದ್ವೀಪನಿವಾಸಿಗಳ ಮುಖ್ಯಸ್ಥರ ಮಾತು, ಪ್ರಸಿದ್ಧ ಹಾಡುಗಾರರು, ಬಗೆಬಗೆ ನೃತ್ಯಗಳು, ಅಬೊರಿಜಿನಲ್ / ದ್ವೀಪಗಳ ಖಾದ್ಯಗಳು (ಮೊಸಳೆ ಮತ್ತು ಆಮೆ ಮಾಂಸವು ಜನಪ್ರಿಯ), ಸಮುದಾಯ ಸಂಸ್ಥೆಗಳ ಕೆಲಸಕಾರ್ಯದ ಬಗ್ಗೆ ಅರಿವು, ಸಂಸ್ಕೃತಿಗಳಿಗೆ ಸೇರಿದ ಚಿಹ್ನೆಗಳ ಮಾರಾಟ (boomerang ಇತ್ಯಾದಿ), ಆರ್ಟ್‌ವರ್ಕ್‌ ಮಾರಾಟ, ಏನೆಲ್ಲಾ ಇರುತ್ತವೆ. ಆದರೆ, ಸರಕಾರ ಮತ್ತು ಸಂಘಟಕ ಹಿರಿಯರು ಹೋದವಾರವಷ್ಟೇ ನಾಲ್ಕು ದಿನಗಳ ಲಾಕ್‌ಡೌನ್ ಮುಗಿಸಿ ನಿಟ್ಟುಸಿರು ಬಿಡುತ್ತಿರುವ ಸ್ಥಿತಿಯಲ್ಲಿ ಶುಕ್ರವಾರದ ಕಾರ್ಯಕ್ರಮಗಳು ಬೇಡ, ಸಾವಿರಾರು ಜನರು ಸೇರುವ ಕಾರ್ಯಕ್ರಮದಿಂದ ಕೊರೋನ ಸೋಂಕು ಮತ್ತಷ್ಟು ವ್ಯಾಪಿಸುವುದು ಬೇಡವೆಂದು ಎಲ್ಲವೂ ರದ್ದಾಗಿವೆ. ಆದರೆ, ಸ್ಥಳೀಯಮಟ್ಟಿಗೆ ಸಣ್ಣಪುಟ್ಟ ರೀತಿಯಲ್ಲಿ ಬೇರೆಬೇರೆ ಊರುಗಳಲ್ಲಿ ಕಾರ್ಯಕ್ರಮಗಳು ಜರುಗುತ್ತಿವೆ.

ಮುಖಾಮುಖಿ ಭೇಟಿಯೆ ಇಲ್ಲದಿರುವಾಗ ನಾವೆಲ್ಲ ಹೇಗೆ ‘ಹೀಲ್’ ಆಗುತ್ತೇವೋ ಕಾಣೆ. ಆನ್ಲೈನ್ ವಾಹಿನಿಗಳ ಮೂಲಕ ಸಂವಹಿಸುತ್ತಿರುವಂತೆ ಮುಖದರ್ಶನವಿಲ್ಲದೆಯೂ ಸಹ ಮನುಷ್ಯ ಮನಸ್ಸುಗಳು ಒಗ್ಗೂಡಬೇಕಿರುವ ಕಾಲವಿದು. ಅದಕ್ಕೆ ಬೇಕಿರುವ ಪ್ರೇರಕ ಅಂತಃಶಕ್ತಿಯನ್ನು ಗಮನದಲ್ಲಿಟ್ಟುಕೊಂಡೆ ಈ ಬಾರಿ ‘ಹೀಲ್ ಕಂಟ್ರಿ’ ಥೀಮ್ ಇಟ್ಟರೇನೊ.

ಜೂನ್ ತಿಂಗಳ ಕಡೆಯ ದಿನಗಳಲ್ಲಿ ಇದ್ದಕ್ಕಿದ್ದಂತೆ ಕೋವಿಡ್-೧೯, ಕೊರೋನಾ ಪಿಡುಗು ಎಲ್ಲರ ತಲೆಬಿಸಿ ಮಾಡಿ ಸರಕಾರಗಳು ತಲೆಕೆದರಿಕೊಳ್ಳುವಂತಾಗಿತ್ತು. ಏಕಕಾಲಕ್ಕೆ ಡಾರ್ವಿನ್, ಪರ್ತ್, ಸಿಡ್ನಿ ಮತ್ತು ಬ್ರಿಸ್ಬೇನ್ ನಾಲ್ಕು ನಗರವಲಯಗಳಲ್ಲಿ ಹಾಹಾಕಾರವುಂಟಾಗಿತ್ತು. ಹಾಹಾಕಾರ ಜನಸಾಮಾನ್ಯರಿಗೆ ಆದದ್ದೋ, ಆಳುವ ಪ್ರಭುತ್ವಕ್ಕೆ ಆದದ್ದೋ ಗೊತ್ತಿಲ್ಲ. ಸಿಡ್ನಿಯಲ್ಲಿ ಎಂಭತ್ತಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಂಡಿದ್ದು ಮಿಲಿಯನ್ ಗಟ್ಟಲೆ ಜನರಿರುವ ಆ ಮಹಾನಗರದಲ್ಲಿ ಆತಂಕವುಂಟಾಗಿತ್ತು. ಇತ್ತ ಕಡೆ ನಮ್ಮ ಬ್ರಿಸ್ಬೇನಿನಲ್ಲಿ ಡಾರ್ವಿನ್, ಪರ್ತ್ ನಗರಗಳಲ್ಲಿ ಬೆರಳೆಣಿಕೆ ಸೋಂಕು ಕೇಸುಗಳು. ಈ ಬಾರಿ ಕಾಣಿಸಿದ್ದು ಡೆಲ್ಟಾ ವೈರಸ್ಸಿನ ಸ್ವರೂಪವೆಂದು, ಸೋಂಕು ತಡೆಗಟ್ಟಲು ನಗರಗಳನ್ನು ಬಂದ್ ಮಾಡಲೇಬೇಕು ಎಂದು ಹಲವಾರು ದಿನಗಳ ಲಾಕ್ ಡೌನ್ ಆಯ್ತು, ಹೋಯ್ತು. ಆದರೆ ಸಿಡ್ನಿಯಲ್ಲಿ ಲಾಕ್ ಡೌನ್ ಇನ್ನೂ ಇದೆ. ಇನ್ನೂ ಅಪಾಯ ತಪ್ಪಿಲ್ಲವೆಂದುಕೊಳ್ಳುತ್ತಾ, ದೇಶಮಟ್ಟದ ರಾಜಕೀಯ ಚರ್ಚೆಗಳು ನಡೆದು ನಿರ್ಧಾರಗಳು ನಡೆಯುತ್ತಿವೆ. ಅದರಲ್ಲಿ ಮುಖ್ಯವಾದದ್ದು ಪ್ರತಿವಾರ ದೇಶದೊಳಗೆ ಬಂದಿಳಿಯುವ ಪ್ರಯಾಣಿಕ ವಿಮಾನಗಳ ಸಂಖ್ಯೆಯಲ್ಲಿ 50% ಕಡಿತವಾಗಲಿದೆ. ಇದನ್ನು ಕೇಳಿ ಕಾರಣಾಂತರಗಳಿಂದ ಹೋದವರ್ಷದಿಂದಲೂ ದೇಶದ ಹೊರಗಡೆಯಿದ್ದು ಮರಳಿ ಬರಲು ಕಾಯುತ್ತಿರುವ ಸಾವಿರಾರು ಆಸ್ಟ್ರೇಲಿಯನ್ನರಿಗೆ ಆಘಾತವಾಗಿದೆ. ಹೆಚ್ಚಿನವರು ತಮ್ಮ ಸರದಿಗಾಗಿ ಕಾಯುತ್ತಿರುವವರೆ ಸರಿ. ಅಂದರೆ, ಸರದಿ ಬಂದಾಗ ಕೋವಿಡ್ ಸೋಂಕು ಪರೀಕ್ಷೆ ಮಾಡಿಸಿಕೊಂಡು, ತಮಗಿಲ್ಲ ಎನ್ನುವ ದೃಢಪತ್ರವನ್ನು ಪಡೆದು ನಂತರ ಏರೋಪ್ಲೇನ್ ಮೆಟ್ಟಿಲು ಹತ್ತಬೇಕು. ಎಲ್ಲರಿಗೂ ಇದು ಸಾಧ್ಯವಾಗಿಲ್ಲ.

ನಮಗೆ ಪರಿಚಯವಿರುವ ಕುಟುಂಬದಾಕೆ ಒಬ್ಬರು ಮಾರ್ಚ್ ತಿಂಗಳಿನಲ್ಲಿ ಕೋವಿಡ್ ಪೀಡಿತರಾದ ತನ್ನ ತಂದೆತಾಯಿಯನ್ನು ನೋಡಲು ಭಾರತಕ್ಕೆ ಹೋದರು. ಪುಣ್ಯಕ್ಕೆ ಆಕೆಯ ಹೆತ್ತವರು ಗುಣಮುಖರಾದರು. ಆದರೆ ಆಸ್ಟ್ರೇಲಿಯನ್ ಸರಕಾರದ ನಿರ್ಧಾರದಿಂದ ಆಕೆಗೆ ತಾನು ವಾಪಸ್ ಬ್ರಿಸ್ಬೇನಿಗೆ ಬರಲು ಸಾಧ್ಯವಾಗದೆ ತನ್ನ ಸರದಿಗಾಗಿ ಕಾಯುತ್ತ ಅಲ್ಲೇ ಭಾರತದಲ್ಲೇ ಕೈಚೆಲ್ಲಿ ಕೂತಿದ್ದಾರೆ. ಇಲ್ಲಿರುವ ಆಕೆಯ ಗಂಡ, ಮಕ್ಕಳು ಪ್ರತಿದಿನವೂ ಆಕೆ ಬರುತ್ತಾಳೆಂಬ ಭರವಸೆಯ ಒಳ್ಳೆ ಸುದ್ದಿಗಾಗಿ ಎದುರು ನೋಡುತ್ತಿದ್ದಾರೆ. ಅವರನ್ನು ನೆನೆಯುತ್ತ, ಭಾರತದ ನನ್ನ ತವರಿನವರನ್ನು ನೆನೆಯುತ್ತಾ, ಪ್ರಪಂಚದ ಇತರೆ ದೇಶಗಳಲ್ಲಿ ಕೋವಿಡ್-19 ಕಾರಣದಿಂದ ನಾನಾ ವಿಧಗಳಲ್ಲಿ ಭಾದಿತರಾದವರನ್ನೆಲ್ಲಾ ನಾನು ನೆನೆಸಿಕೊಂಡು ಜೀವನವೇ ಒಂದು ಭ್ರಮೆಯ ಗುಳ್ಳೆಯಾಯ್ತಲ್ಲ ಎಂದುಕೊಳ್ಳುತ್ತೀನಿ.