ಪುನೀತ್ ಕನ್ನಡ ಸಿನೆಮಾಕ್ಕೆ ನಾಯಕನಾಗಿ ಬರುವಷ್ಟರಲ್ಲಿ ಶಿವರಾಜಕುಮಾರ್ ಆಗಲೇ ದೊಡ್ಡ ತಾರೆಯಾಗಿದ್ದರು ಮತ್ತು ರಾಘವೇಂದ್ರ ರಾಜಕುಮಾರ್ ಹಲವು ಸಿನೆಮಾ ಮಾಡಿ ತೆರೆಯಿಂದ ಮರೆಯಾಗಿದ್ದರು. ಬಾಲನಟನಾಗಿ ಕನ್ನಡಿಗರ ಮನೆಮಾತಾಗಿದ್ದ ಲೋಹಿತ್, ಪುನೀತ್ ಆಗಿ ತೆರೆಯ ಮೇಲೆ ಹೀರೋ ಆಗಿ ಬಂದು ಶಿವಣ್ಣನ ಹಾದಿ ಹಿಡಿಯುತ್ತಾರೋ ಇಲ್ಲವೋ ಎಂದು ಬಹಳ ಚರ್ಚೆ ನಡೆಯುತ್ತಿತ್ತು. ಆದರೆ ಪುನೀತ್ ಇಬ್ಬರ ಹಾದಿಯನ್ನೂ ತುಳಿಯದೇ ತಂದೆಯ ಹಾದಿ ಹಿಡಿದರು. ಹೀರೋ ವೈಭವೀಕರಣದ ಸಿನೆಮಾಗಳಿದ್ದರೂ ತಂದೆಯಂತೆ ಸಮಾಜ ಮುಖಿಯಾದ ಸಿನೆಮಾ ಮಾಡಿದರು, ತಂದೆಯಂತೆ ಹಿನ್ನೆಲೆ ಗಾಯನವನ್ನೂ ಮಾಡಿದರು, ತಂದೆಯಂತೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡರು.
ಡಾ. ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

 

ಪುನೀತ್ ರಾಜಕುಮಾರ್ ಅವರ್ ಹಠಾತ್ ಸಾವು ಕನ್ನಡ ನಾಡಿಗೆ ಸಂಬಂಧಿಸಿದ ಎಲ್ಲರಿಗೂ ದಿಗ್ಭ್ರಮೆಯಾಗಿದೆ. ವಾಟ್ಸ್ಯಾಪ್ಪಿನಲ್ಲಿ, ಫೇಸ್ಬುಕ್ಕಿನಲ್ಲಿ, ಸುದ್ದಿವಾಹಿನಿಗಳಲ್ಲಿ, ಯುಟ್ಯೂಬಿನಲ್ಲಿ, ಪತ್ರಿಕೆಗಳಲ್ಲಿ, ಕನ್ನಡದ ಜಾಲತಾಣಗಳಲ್ಲಿ ಪುನೀತ್ ಅವರ ಸಿನೆಮಾಗಳ ಬಗ್ಗೆ, ಪುನೀತ್ ವ್ಯಕ್ತಿತ್ವದ ಬಗ್ಗೆ, ಸಾಮಾಜಿಕ ಕೆಲಸಗಳ ಬಗ್ಗೆ ನೋಡುತ್ತಿದ್ದೇವೆ, ಓದುತ್ತಿದ್ದೇವೆ. ಅವರನ್ನು ಹತ್ತಿರದಿಂದ ನೋಡಿದವರ ಬೆರೆತವರ ಸಂದರ್ಶನಗಳು, ಅವರ ಅಂತ್ಯಸಂಸ್ಕಾರದ ವಿಡಿಯೋಗಳು ಸಾಕಷ್ಟು ಬರುತ್ತಿವೆ. ಇಂಗ್ಲೆಂಡಿನ ‘ಬಿ.ಬಿ.ಸಿʼ ಸುದ್ದಿವಾಹಿನಿಯಲ್ಲೂ ಪುನೀತ್ ಅವರನ್ನು ಸ್ಮರಿಸಲಾಯಿತು.

ನಾನು ಪುನೀತ್ ಅವರನ್ನು ಹತ್ತಿರದಿಂದ ನೋಡಿದವನೂ ಅಲ್ಲ, ಮಾತಾಡಿಸಿದವನೂ ಅಲ್ಲ. ನನ್ನ ಹೆಂಡತಿಯ ಗೆಳೆತಿಯ ಮದುವೆಯೊಂದಕ್ಕೆ ಮೈಸೂರಿಗೆ ಪುನೀತ್ ಬಂದಿದ್ದರು. ಆಗಿನ್ನೂ ‘ಅಪ್ಪೂʼ ಬಂದಿರಲಿಲ್ಲ. ಎರಡು ಮಾತು ಮಾತಾಡಿಸಿದ್ದೆ. ‘ನಿಮ್ಮ ಅಭಿನಯದ ‘ಭಾಗ್ಯವಂತ‘ ನನ್ನ ಬಾಲ್ಯದಲ್ಲಿ ಅಚ್ಚುಮೆಚ್ಚಿನ ಚಿತ್ರವಾಗಿತ್ತು, ನಿಮ್ಮ ಅಭಿನಯದಿಂದ ಸಿನೆಮಾ ಹಾಲಿನಲ್ಲಿ ಇದ್ದ ಎಲ್ಲರನ್ನೂ ಅಳಿಸಿಬಿಟ್ಟಿರಿ,’ ಅನ್ನುವ ಅರ್ಥದಲ್ಲಿ ಮಾತಾಡಿದ್ದೆ. ‘ನನಗೆ ಆಗ ಅಭಿನಯ ಎಂದರೇನು ಎನ್ನುವುದೇ ಗೊತ್ತಿರಲಿಲ್ಲ, ನಿರ್ದೇಶಕರು ಏನು ಹೇಳಿದರೋ ಅಷ್ಟು ಮಾಡಿದ್ದೆ, ಅಷ್ಟೇ,ʼ ಎಂದು, ಒಂದು ಸಹಜ ನಗೆ ಚೆಲ್ಲಿದ್ದರು.

‘ಲೋಹಿತ್ʼ ಆಗಿ ಮೊದಲನೇ ಇನ್ನಿಂಗ್ಸ್:

ಪುನೀತ್ ಅವರ ಸಿನೆಮಾಗಳನ್ನು ನಾನು ಅಷ್ಟಾಗಿ ನೋಡಿಲ್ಲ, ಆದರೆ ಲೋಹಿತ್ ಮಾಡಿದ ಎಲ್ಲ ಚಿತ್ರಗಳನ್ನೂ ತಪ್ಪದೇ ನೋಡಿದ್ದೇನೆ. ರಾಜಕುಮಾರ್ ನಟಿಸಿದ ಯಾವ ಸಿನೆಮಾಗಳನ್ನೂ ಬಿಡದ ನಮಗೆಲ್ಲ, ರಾಜಕುಮಾರ್ ವಾರಸುದಾರನಂತೆ ಬಂದ ಲೋಹಿತ್ ಅಂದರೆ ಪಂಚಪ್ರಾಣ. ನನಗಿಂತ ನಾಕಾರು ವರ್ಷ ಚಿಕ್ಕವನಾದ ಲೋಹಿತ್ ಸಿನೆಮಾ ಬಂದರೆ ಸಾಕು, ನಾವು ವಾರಿಗೆಯವರೆಲ್ಲ ಸೇರಿ ಲೋಹಿತ್ ಸಿನೆಮಾಕ್ಕೆ ದಂಡು ಹೋಗುತ್ತಿದ್ದೆವು.

ಚಲಿಸುವ ಮೋಡಗಳು ಸಿನೆಮಾದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದ ಲೋಹಿತ್ ಹಾಡಿ ಕುಣಿದ ‘ಕಾಣದಂತೆ ಮಾಯವಾದನೋ…’ ಹಾಡು ರಾಜಕುಮಾರ್ ಹಾಡುಗಳಷ್ಟೇ ಪ್ರಸಿದ್ಧವಾಗಿತ್ತು. ಲೋಹಿತ್ ಮುಖ್ಯಪಾತ್ರದಲ್ಲಿದ್ದ ‘ಭಾಗ್ಯವಂತʼ ಸಿನೆಮಾ ನೋಡಿದ ಅನುಭವ ಇನ್ನೂ ನಿನ್ನೆ ಮೊನ್ನೆ ನಡೆದಂತಿದೆ. ಸಿನೆಮಾದ ಮಧ್ಯಂತರವಾದಾಗ ನನ್ನ ಕಣ್ಣೆಲ್ಲ ಒದ್ದೆಯಾಗಿತ್ತು. ನನ್ನ ಪಕ್ಕ ಕುಳಿತಿದ್ದ ನನ್ನ ಕಸಿನ್ ಎಲ್ಲಿ ನನ್ನ ಕಣ್ಣೀರನ್ನು ನೋಡಿ ನಕ್ಕುಬಿಡುತ್ತಾನೋ ಎಂದು ಬೇಗ ಬೇಗ ಕಣ್ಣೀರನ್ನು ಒರೆಸಿಕೊಂಡು ಅವನತ್ತ ನೋಡಿದರೆ ಆತ ಮುಖ ಮುಚ್ಚಿಕೊಂಡು ಅಕ್ಷರಶಃ ಬಿಕ್ಕಿ ಬಿಕ್ಕಿ ಅಳುತ್ತಿದ್ದ! ಅವನನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಸಾಮಾನ್ಯವಾಗಿ ಸಿನೆಮಾದಲ್ಲಿ ಮಧ್ಯಂತರವಾದಾಗ ಜನರಿಗೆ ಅದಷ್ಟು ಬೇಗ ಎದ್ದು ಹೊರಗೆ ಹೋಗುವ ಆತುರ; ಆದರೆ ಈ ಸಿನೆಮಾದಲ್ಲಿ ಜನರು ಇನ್ನೂ ಗರಬಡಿದವರಂತೆ ಕೂತಿದ್ದರು, ಬಹಳಷ್ಟು ಜನರು ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದರು.

‘ಭಕ್ತ ಪ್ರಹ್ಲಾದʼ ಸಿನೆಮಾ ನೋಡಿ ಬಂದ ಮೇಲೆ, ಲೋಹಿತ್ ಅಲ್ಲದೇ ಇನ್ನಾರಿಗಾದರೂ ರಾಜಕುಮಾರ್ ಅವರ ‘ಹಿರಣ್ಯಕಷ್ಯಪುʼವಿನ ಅವತಾರವನ್ನು ಸಹಿಸಿಕೊಳ್ಳಲು ಆಗುತ್ತಿತ್ತೇ ಎಂದು ಅನಿಸಿತ್ತು. ರಾಜಕುಮಾರ್ ಅತ್ಯಮೋಘ ಅಭಿನಯ, ಸಿನೆಮಾದ ಸಂಭಾಷಣೆಗಳು, ಒಂದಾದ ಮೇಲೊಂದರಂತೆ ಬರುವ ಲೋಹಿತನ ಸುಂದರವಾದ ಹಾಡುಗಳು ಮನಸ್ಸನ್ನು ಸೂರೆ ಮಾಡಿದ್ದವು. ಆ ಸಿನೆಮಾವನ್ನು ನಾಕಾರು ಸಲವಾದರೂ ನೋಡಿರಬೇಕು. ಆ ಸಿನೆಮಾ ಕಥೆಯ ಕ್ಯಾಸೆಟ್ ಬಂದಾಗ ತಂದೆಯನ್ನು ಕಾಡಿಬೇಡಿ ಕ್ಯಾಸೆಟ್ ಖರೀದಿಸಿ ಸಂಭಾಷಣೆಯನ್ನು ಬಾಯಿಪಾಠ ಮಾಡಿದ್ದೆವು. ಬಂಧು ಬಳಗದವರು ಸೇರಿದಾಗ ನಾನು ತೆರೆಯ ಹಿಂದೆ ನಿಂತು ಸಂಭಾಷಣೆಯನ್ನು ಹೇಳುವುದು, ನನ್ನ ತಮ್ಮ ಎಲ್ಲರ ಮುಂದೆ ಹಿರಣ್ಯಕಷ್ಯಪು ಮತ್ತು ಪ್ರಹ್ಲಾದನ ದ್ವಿಪಾತ್ರಾಭಿನಯ ಮಾಡುವುದು ಮಾಡಿ ಮನರಂಜನೆ ನೀಡುತ್ತಿದ್ದೆವು.

‘ಬೆಟ್ಟದ ಹೂʼ ಸಿನೆಮಾದ ಕತೆ ಮತ್ತು ಅದರಲ್ಲಿ ಲೋಹಿತನ ಸಹಜ ಅಭಿನಯ ತುಂಬ ಆಪ್ತವಾಗಿತ್ತು. ಆ ಸಿನೆಮಾದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಬಂದಾಗ ಸಂಭ್ರಮಿಸಿದ್ದೆವು. ಹಾಗೆಯೇ ‘ಎರಡು ನಕ್ಷತ್ರಗಳುʼ ಮತ್ತು ‘ಯಾರಿವನು?ʼ ಸಿನೆಮಾಗಳನ್ನು ಆ ಚಿಕ್ಕ ವಯಸ್ಸಿನಲ್ಲಿ ಲೋಹಿತ್ ಅಭಿಮಾನಿಯಾಗಿ ನೋಡಿದ್ದೇನೆ. ನಾನು ಎಷ್ಟರ ಮಟ್ಟಿಗೆ ಲೋಹಿತನ ಅಭಿಮಾನಿಯಾಗಿದ್ದೆ ಎಂದರೆ ಲೋಹಿತ್ ಹಾಡಿದ ಹಾಡುಗಳೆಲ್ಲ ಬಾಯಿಪಾಠವಾಗಿದ್ದವು. ದಶಕಗಳು ಉರುಳಿದ ಮೇಲೆ ನನ್ನ ಪುಟ್ಟ ಮಗನನ್ನು ಮಲಗಿಸಲು ನಾನು ದಿನವೂ ‘ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ…ʼ ಹಾಡನ್ನು ಹಾಡಿ ಮಲಗಿಸಿದ್ದೇನೆ.

ಪುನೀತ್ ಅವರ ಸಿನೆಮಾಗಳನ್ನು ನಾನು ಅಷ್ಟಾಗಿ ನೋಡಿಲ್ಲ, ಆದರೆ ಲೋಹಿತ್ ಮಾಡಿದ ಎಲ್ಲ ಚಿತ್ರಗಳನ್ನೂ ತಪ್ಪದೇ ನೋಡಿದ್ದೇನೆ. ರಾಜಕುಮಾರನ ಯಾವ ಸಿನೆಮಾಗಳನ್ನೂ ಬಿಡದ ನಮಗೆಲ್ಲ, ರಾಜಕುಮಾರನ ವಾರಸುದಾರನಂತೆ ಬಂದ ಲೋಹಿತ್ ಅಂದರೆ ಪಂಚಪ್ರಾಣ.

‘ಪುನೀತ್ʼ ಆಗಿ ಎರಡನೇ ಇನಿಂಗ್ಸ್:

ಲೋಹಿತ್ ಪುನೀತ್ ಆಗುವ ಹೊತ್ತಿಗೆ ನಾನು ದೇಶವನ್ನು ಬಿಟ್ಟಾಗಿತ್ತು. ಹೀಗಾಗಿ ನಾನು ಅವರ ಎರಡನೇ ಇನಿಂಗ್ಸನ್ನು ಮಿಸ್ ಮಾಡಿಕೊಂಡೆ. ಭಾರತದಿಂದ ಬರುವಾಗ ತರುವ ಡಿವಿಡಿಗಳಲ್ಲಿ ‘ಮಿಲನʼ, ‘ಪೃಥ್ವಿʼ, ‘ವಂಶಿʼ, ‘ಹುಡುಗರುʼ, ‘ಪರಮಾತ್ಮʼ ಮತ್ತು ‘ಮೈತ್ರಿʼ ಸಿನೆಮಾಗಳನ್ನು ನೋಡಿದ್ದೇನೆ. ಅವರ ಕೊನೆಯ ಚಿತ್ರ ‘ಯುವರತ್ನʼವನ್ನು ಪ್ರೈಮ್‌ನಲ್ಲಿ ನೋಡಿದ್ದೇನೆ. ಅವರ ಎರಡನೇ ಇನಿಂಗ್ಸ್‌ನಲ್ಲಿ ನನಗೆ ‘ಮೈತ್ರಿʼ ತುಂಬ ಇಷ್ಟವಾದದ್ದು (ಆ ಚಿತ್ರದ ಚಿತ್ರೀಕರಣದ ವೇಳೆ ಸಿನೆಮಾದ ಪಾತ್ರಧಾರಿಗಳಾದ ಹಳ್ಳಿಯ ನೂರಾರು ಮಕ್ಕಳ ಕಾಲಲ್ಲಿ ಚಪ್ಪಲಿ ಇರಲಿಲ್ಲ ಎನ್ನುವುದನ್ನು ಕಂಡು ಅವತ್ತೇ ಎಲ್ಲ ಮಕ್ಕಳಿಗೂ ಚಪ್ಪಲಿ ತರಿಸಿ ಕೊಡಿಸಿದರೆಂದು ಆ ಸಿನೆಮಾದ ನಿರ್ದೇಶಕರಾದ ಗಿರಿರಾಜ್ ಅವರು ಸಂದರ್ಶನದಲ್ಲಿ ಹೇಳಿದ್ದನ್ನು ನೋಡಿ ಮನಸ್ಸು ಆರ್ದ್ರವಾಯಿತು).

ಪುನೀತ್ ಕನ್ನಡ ಸಿನೆಮಾಕ್ಕೆ ನಾಯಕನಾಗಿ ಬರುವಷ್ಟರಲ್ಲಿ ಶಿವರಾಜಕುಮಾರ್ ಆಗಲೇ ದೊಡ್ಡ ತಾರೆಯಾಗಿದ್ದರು ಮತ್ತು ರಾಘವೇಂದ್ರ ರಾಜಕುಮಾರ್ ನಾಕಾರು ಸಿನೆಮಾ ಮಾಡಿ ತೆರೆಯಿಂದ ಮರೆಯಾಗಿದ್ದರು. ಬಾಲನಟನಾಗಿ ಕನ್ನಡಿಗರ ಮನೆಮಾತಾಗಿದ್ದ ಲೋಹಿತ್, ಪುನೀತ್ ಆಗಿ ತೆರೆಯ ಮೇಲೆ ಹೀರೋ ಆಗಿ ಬಂದು ಶಿವಣ್ಣನ ಹಾದಿ ಹಿಡಿಯುತ್ತಾರೋ ಇಲ್ಲ ರಾಘಣ್ಣನ ಹಾದಿ ಹಿಡಿಯುತ್ತಾರೋ ಎಂದು ಚರ್ಚೆ ನಡೆಯುತ್ತಿತ್ತು. ಆದರೆ ಪುನೀತ್ ಇಬ್ಬರ ಹಾದಿಯನ್ನೂ ತುಳಿಯದೇ ತಂದೆಯ ಹಾದಿ ಹಿಡಿದರು. ಹೀರೋ ವೈಭವೀಕರಣದ ಸಿನೆಮಾಗಳಿದ್ದರೂ ತಂದೆಯಂತೆ ಸಮಾಜ ಮುಖಿಯಾದ ಸಿನೆಮಾ ಮಾಡಿದರು, ತಂದೆಯಂತೆ ಹಿನ್ನೆಲೆ ಗಾಯನವನ್ನೂ ಮಾಡಿದರು, ತಂದೆಯಂತೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡರು.

ತಂದೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಕನ್ನಡದ ಕಿರುತೆರೆಯಲ್ಲಿ ಎಲ್ಲರ ಮನೆಮಗನಂತೆ ‘ಕೋಟ್ಯಧಿಪತಿʼಯನ್ನು ನಡೆಸಿಕೊಟ್ಟು ತಮ್ಮ ಸಹಜತೆಯಿಂದ ಮನೆ-ಮನ ತಲುಪಿದರು. ‘ಕೋಟ್ಯಧಿಪತಿʼ ಕಾರ್ಯಕ್ರಮವನ್ನು ಪುನೀತ್ ನಡೆಸಿಕೊಡುವ ರೀತಿ ಅನನ್ಯವಾದದ್ದು. ಎಲ್ಲಿಯೂ ಅಮಿತಾಭ್ ಅವರನ್ನು ಅನುಕರಣೆ ಮಾಡದೇ ತಮ್ಮತನವನ್ನು ತೋರಿಸಿಕೊಟ್ಟರು. ಹಿರಿಯರಿಗೆ ಕೊಡುವ ಗೌರವವಿರಲಿ, ಕಿರಿಯರನ್ನು ಹುರಿದುಂಬಿಸುವುದಿರಲಿ, ಎಲ್ಲಿಯೂ ಕೃತಕತೆ ಕಾಣುತ್ತಿರಲಿಲ್ಲ.

ಎಂಬತ್ತನೇ ದಶಕದಿಂದ ಹಿಡಿದು ಇಂದಿನವರೆಗೆ ಕನ್ನಡದ ಮುಖ್ಯವಾಹಿನಿಯ ಬಹಳಷ್ಟು ಸಿನೆಮಾಗಳು ನಾಯಕ ಕೇಂದ್ರಿತವೇ. ಒಂದಾದರೂ ಹೀರೋ ವರ್ಷಿಪ್ಪಿನ ಹಾಡಿರಬೇಕು, ಸಿನೆಮಾ ಹೆಸರುಗಳೂ ಹೀರೋನ ಹೆಸರಿನಿಂದಲೇ ಶುರುವಾಗಬೇಕು, ಅಷ್ಟರಮಟ್ಟಿಗೆ ಈ ಸ್ಟಾರ್ ಸಿನೆಮಾಗಳು ಹೀರೋ ಕೇಂದ್ರಿತ. ಇದಕ್ಕೆ ಪುನೀತ್ ಅವರ ಸಿನೆಮಾಗಳು ಕೂಡ ಹೊರತಾಗಿರಲಿಲ್ಲ. ಇವುಗಳ ಮಧ್ಯೆ ‘ಮಿಲನʼ, ‘ಹುಡುಗರುʼ, ‘ಮೈತ್ರಿʼಯಂಥ ವಿಭಿನ್ನ ಸಿನೆಮಾಗಳನ್ನು ಮಾಡಿದರು, ಮತ್ತು ಆ ಪಾತ್ರಗಳಿಗೆ ತಕ್ಕುದಾಗಿ ಅಭಿನಯಿಸಿ ಜೀವ ತುಂಬಿದರು.

ನನಗೆ ಪುನೀತ್ ಹೀರೋ ಆಗಿ ನಟಿಸಿದ ಸಿನೆಮಾಗಳಿಗಿಂತ ಅವರು ನಿರ್ಮಿಸಿದ ಸಿನೆಮಾಗಳು ಹೆಚ್ಚು ಇಷ್ಟ. ಅವರ ನಿರ್ಮಾಣದ ಈ ಎಲ್ಲ ಚಿತ್ರಗಳೂ ವಿಭಿನ್ನ. ‘ಕವಲುದಾರಿʼ ತನ್ನ ವಿಭಿನ್ನ ರೀತಿಯ ಪತ್ತೆದಾರಿ ಕತೆಯಿಂದ ಗಮನ ಸೆಳೆಯುತ್ತದೆ. ಹಾಗೆಯೇ“ಮಾಯಾಬಜಾರ್-2016” ಮತ್ತು ‘ಫ್ರೆಂಚ್ ಬಿರಿಯಾನಿ‘ (ಹೆಸರೇ ಎಷ್ಟು ವಿಚಿತ್ರವಾಗಿದೆ) ಕನ್ನಡದ ಎರಡು ಉತ್ತಮ ಬ್ಲ್ಯಾಕ್-ಕಾಮಿಡಿಗಳು. ‘ಫ್ರೆಂಚ್ ಬಿರಿಯಾನಿʼ, ಇತ್ತೀಚೆಗೆ ಕನ್ನಡದಲ್ಲಿ ನಾನು ತುಂಬ ಮೆಚ್ಚಿಕೊಂಡ ಚಿತ್ರಗಳಲ್ಲಿ ಒಂದು. ಸಿನೆಮಾದ ಕತೆ, ಚಿತ್ರಕತೆ, ಜೋಕುಗಳು, ನಟನೆ, ಹಾಡುಗಳು, ಛಾಯಾಗ್ರಹಣ ಒಂದಕ್ಕೊಂದು ಪೂರಕವಾಗಿವೆ. ತಮ್ಮ ನಿರ್ಮಾಣದ ಸಿನೆಮಾಗಳಲ್ಲಿ ತಾವು ಅಭಿನಯಿಸದೇ, ಹೊಸಬರನ್ನು ಹಾಕಿಕೊಂಡು, ಕನ್ನಡಕ್ಕೆ ಹೊಸ ಕತೆಗಳನ್ನು ಹೇಳಲು ಪುನೀತ್ ಹೊಸ ಅಧ್ಯಾಯವನ್ನೇ ಶುರುಮಾಡಿದ್ದರು. ಇನ್ನೂ ಇದ್ದಿದ್ದರೆ ಇನ್ನೂ ಎಷ್ಟೊಂದು ಬೇರೆ ಬೇರೆ ತರಹದ ಕತೆಗಳನ್ನು ಕನ್ನಡ ಸಿನೆಮಾಕ್ಕೆ ತರುತ್ತಿದ್ದರೋ? ಮಲಯಾಳಂ ಭಾಷೆಗೆ ಸರಿಸಾಟಿಯಾಗಿ ನಿಲ್ಲಬಲ್ಲ ಸಿನೆಮಾಗಳನ್ನು ಕನ್ನಡದಲ್ಲೂ ನಿರೀಕ್ಷಿಸಬಹುದು ಎನ್ನುವ ಆಸೆಯನ್ನು ಹುಟ್ಟುಹಾಕಿದ್ದರು.

ಪವನ್‌ ಕುಮಾರ್ ಅವರ ನಿರ್ದೇಶನದ ‘ದ್ವಿತ್ವʼ ಚಿತ್ರವನ್ನು ಕನ್ನಡಿಗರು ಕಾತರದಿಂದ ಎದುರು ನೋಡುತ್ತಿದ್ದರು. ಕನ್ನಡ ಮುಖ್ಯವಾಹಿನಿಯ ಸಿನೆಮಾಗಳಿಗಿಂತ ವಿಭಿನ್ನವಾಗಿ ಸಿನೆಮಾಗಳನ್ನು ಮಾಡಲು ಪುನೀತ್ ಸಜ್ಜಾಗುತ್ತಿದ್ದರು ಎನಿಸುವ ಸೂಚನೆಗಳನ್ನು ಕೊಟ್ಟಿದ್ದರು. ತಮ್ಮ ನಿರ್ಮಾಣದಲ್ಲಿ ಇನ್ನೂ ಹೊಸರೀತಿಯ ಸಿನೆಮಾಗಳನ್ನು ಮಾಡುವ ಬಗ್ಗೆ ಮಾತಾಡಿದ್ದರು ಮತ್ತು ತೊಡಗಿಸಿಕೊಂಡಿದ್ದರು.

ಕ್ಲೀಷೆ ಎನಿಸಿದರೂ, ನಿಜವಾದ ಅರ್ಥದಲ್ಲಿ ಕನ್ನಡ ಚಿತ್ರರಂಗ ಮತ್ತು ಕನ್ನಡ ಕಿರುತೆರೆ ಬಡವಾಗಿದೆ. ಕನ್ನಡ ಸಿನೆಮಾರಂಗ ಒಬ್ಬನನ್ನಲ್ಲ, ಒಬ್ಬ ಸ್ಟಾರ್, ಒಬ್ಬ ಸಧಬಿರುಚಿಯ ನಿರ್ಮಾಪಕ, ಕಿರುತೆರೆಯ ನಿವೇದಕ ಮತ್ತು ಹಿನ್ನೆಲೆ ಗಾಯಕ ಎಂದು ನಾಲ್ವರನ್ನು ಕಳೆದುಕೊಂಡಿದೆ.

ಯಾರಿಗೂ ಯಾವ ಮುನ್ಸೂಚನೆ ಕೊಡದೇ ತೀವ್ರ ಹೃದಯಾಘಾತದ ಈ ಸಾವು, ಶಂಕರನಾಗ್ ಅವರ ಅಪಘಾತದ ಸಾವಿನಂತೆ ಹೋಲಿಕೆ ಕಂಡರೆ ಅಚ್ಚರಿಯಿಲ್ಲ. ಪುನೀತ್ ಕೂಡ ಶಂಕರನಾಗ್ ತರಹ ಅಪಾರ ಕನಸುಗಳನ್ನು ಕಟ್ಟಿಕೊಂಡು ಒಂದೇ ಸಮಯದಲ್ಲಿ ನಾಕಾರು ಕೆಲಸದಲ್ಲಿ ಕೈಹಾಕಿದವರು. ಶಂಕರನಾಗ್ ತರಹವೇ ಎಲ್ಲರ ಜೊತೆ ನಗುನಗುತ್ತ ಎಲ್ಲರನ್ನೂ ಪ್ರೋತ್ಸಾಹಿಸುತ್ತ ತಾನೂ ಬೆಳೆದು ಎಲ್ಲರನ್ನೂ ಬೆಳೆಸಿದ ಅಜಾತಶತ್ರು. ಶಂಕರನಾಗ್ ತರಹವೇ ಹಿಂದಿನ ದಿನದವರೆಗೂ ನಕ್ಕು ನಲಿದು ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ನಿರ್ವಾತವನ್ನು ಬಿಟ್ಟು ಹೋದರು. ಪುನೀತ್ ಬಿಟ್ಟು ಹೋದ ಕನಸುಗಳು ಮೊಳೆತು ಹೆಮ್ಮರಗಳಾಗಲಿ ಎಂದು ಆಶಿಸುತ್ತ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇನೆ.