ಬೆಟ್ಟಗುಡ್ಡಗಳನ್ನು ಹತ್ತಲೆಳಸುವುದು ನನಗೆ ಚಿಕ್ಕಂದಿನಿಂದಲೂ ಬಿದ್ದಿರುವ ದುರಭ್ಯಾಸಗಳಲ್ಲಿ ಒಂದು. ಇದಕ್ಕೆ ಕಾರಣವೇನೋ ತಿಳಿಯದು. ಬಹುಶಃ ಇದಕ್ಕೆ ನಮ್ಮ ಮನೆಯ ಬಾಗಿಲು ತೆಗೆದರೆ- ಹಿತ್ತಲಿಗೇ ಹೋಗಲಿ, ಅಂಗಳಕ್ಕೇ ಬರಲಿ- ಕಾಣುತ್ತಿದ್ದ ಬಾಬಾಬುಡನಗಿರಿ ಬೆಟ್ಟಶ್ರೇಣಿಯೂ ಒಂದು ಕಾರಣವಿದ್ದೀತು. ಬಾನೆತ್ತರಕೆ ಬೆಳೆದು ನಿಂತ ಈ ನೀಲಗಿರಿಗಳು ಮೋಡಗಳ ಜತೆ ಕಣ್ಣಮುಚ್ಚಾಲೆ ಆಡುತ್ತ, ನೆತ್ತಿ ಮೇಲಿಂದ ಸುರಿವ ಜಲಪಾತಗಳನ್ನು ತೋರುತ್ತ ಇದ್ದವು. ರಾತ್ರಿಯಾದೊಡನೆ ಅವುಗಳ ಹಣೆ ಭಾಗದಲ್ಲಿ ಮಿಣುಮಿಣು ಎನ್ನುತ್ತಿದ್ದ ಕೆಮ್ಮಣ್ಣುಗುಂಡಿಯ ಲೈಟುಗಳು ನಿಶಾಚರಿಯ ಕಣ್ಣುಗಳಂತೆ ಭಾಸವಾಗುತ್ತಿದ್ದವು. ಇವು ಬೆಳಗಿನ ಹೊತ್ತು ಮಂಜಿನ ಮುಸುಕೆಳೆದುಕೊಂಡು, ಮಳೆಗಾಲದಲ್ಲಿ ನೀರಿನ ಬುರುಖ ಧರಿಸಿಕೊಂಡು ದಿಗಂತಗಳಲ್ಲಿ ಕರಗಿ ಹೋಗುತ್ತಿದ್ದವು. ಬಯಲು ಸೀಮೆಗೆ ಬಾರದ ಮಳೆ ಈ ಗಿರಿಗಳಲ್ಲಿ ಸುರಿದು, ನಮ್ಮೂರ ಕೆರೆಗಳಿಗೆ ಹರಿದುಬರುತ್ತಿತ್ತು. ಈ ಕೆರೆಗಳಲ್ಲಿ ನಾವು ಈಜಾಡುತ್ತಿದ್ದೆವು. ಮೀನು ಹಿಡಿಯುತ್ತಿದ್ದೆವು.

ವರ್ಷಕ್ಕೆ ಹಲವಾರು ಬಾರಿ ಗಿರಿಗಳನ್ನು ಹತ್ತುವ ಅವಕಾಶ ನಮಗೆ ಬರುತ್ತಿತ್ತು. ಅದರಲ್ಲೂ ಬಾಬಾಬುಡನಗಿರಿಗೆ ಹೋಗುವುದು ಪ್ರತಿವರ್ಷದ ಉತ್ಸವ. ಬೆಳಿಗ್ಗೆಯೇ ಚಿಕ್ಕಮಗಳೂರಿಗೆ ಸಂತವೇರಿ ಮೂಲಕ ಹೋಗುವ ಬಸ್ಸು ಹಿಡಿದು, ಎಮ್ಮೆಕಾನಲ್ಲಿ ಇಳಿದು, ಕಾಫಿ ಎಸ್ಟೇಟುಗಳನ್ನು ಹಾದು,  ದಟ್ಟ ಅರಣ್ಯ ಹೊಕ್ಕು, ಫಲಹಾರ ಮಠದ ಮೂಲಕ ಜನ್ನತ್‌ಡಿ (ಸ್ವರ್ಗದ ಮೆಟ್ಟಿಲು) ಕಡೆಯಿಂದ ಕಡಿದಾದ ಬೆನ್ನನ್ನು ಹತ್ತಿ, ಸಂಜೆ ಹೊತ್ತಿಗೆ  ಗಿರಿಗಿಳಿಯುತ್ತಿದ್ದೆವು. ಭಕ್ತಿಯ ಆವೇಶದಿಂದಲೊ ತಿರುಗುವ ಖುಷಿಯಿಂದಲೊ ಅಲ್ಲಿನ ಕಂದರಗಳಲ್ಲಿ ಅಲೆಯುತ್ತಿದ್ದೆವು. ನಾನು ಬಾಬಾಬುಡನಗಿರಿ ಬೆಟ್ಟಗಳಲ್ಲಿ ತಿರುಗಾಡಿ ಪಟ್ಟಷ್ಟು ಸಂತೋಷವನ್ನು ಇನ್ನೆಲ್ಲೂ ಪಟ್ಟಿಲ್ಲ. ಅದರ ಗದಗುಟ್ಟಿಸುವ ಚಳಿ, ಸಂಜೆಮುಂಜಾನೆ ಆವರಿಸುತ್ತಿದ್ದ ಬೆಳ್ಳನೆಯ ಹೊಗೆಮಂಜು, ಸುಂಯ್ಯೋ ಎಂದು ಬೀಸುವ ದಬ್ಬುಗಾಳಿ, ಗುಹೆಯೊಳಗಿನ ತಣ್ಣನೆಯ ದರ್ಗಾ, ಅದರೊಳಗೆ ಹಾಕುತ್ತಿದ್ದ ಲೋಬಾನದ ಕಂಪು, ರಾತ್ರಿಗೆ ನಗಾರಿ ಬಾರಿಸಿ ‘ದಾದಾಪೀರ್ ಕ ಭಂಡಾರಾ’ ಎಂದು ಕೊಡುತ್ತಿದ್ದ ಹಬೆಯಾಡುವ ಗಂಜಿ,  ಕುಂಟೆಗಳನ್ನು ಕಚ್ಚಿ ಧಗಧಗಿಸುತ್ತಿದ್ದ ಬೆಂಕಿಯ ಹಿತವಾದ ಶಾಖ, ರಾತ್ರಿ ಭಂಗಿಸೇದಿಕೊಂಡು ಫಕೀರರು ಹಾಡುತ್ತಿದ್ದ ಖವಾಲಿಗಳು, ಕಲ್ಲಲ್ಲಿ ಹೊಡೆದಂತಾಗುವ ಅಲ್ಲಿನ ಜಲಪಾತಗಳಲ್ಲಿ ಮೀಯುವಿಕೆ, ಕುರಿಯನ್ನೊ ಕೋಳಿಯನ್ನೊ ಒಯ್ದು ಮಾಡುತ್ತಿದ್ದ ಅಡುಗೆ-ಇವೆಲ್ಲ ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದವು. ನಮ್ಮ ಭಾಗದ ಜನರಿಗೆ ಬಾಬಾಬುಡನಗಿರಿ ಬೆಟ್ಟಗಳು ಹುಟ್ಟಿನಿಂದ ಸಾವಿನ ತನಕ ಬದುಕನ್ನು ಆವರ್ತನವಾಗಿ ಆವರಿಸಿಕೊಂಡಿವೆ. ಅಪ್ಪ ಸಾಯುವ ಮುನ್ನ ಒಮ್ಮೆ ಗಿರಿಗೆ ಹೋಗಬೇಕೆಂದು ಹಠಹಿಡಿದ. ಉಸಿರಾಟದ ತೊಂದರೆಯಿದ್ದರೂ ಗಿರಿಯನ್ನು ಹತ್ತಿಳಿದು ಬಂದ ಬಳಿಕವೇ ಜೀವಬಿಟ್ಟ.

ಮುಂದೆ ನಾನು ಓದಲು ಶಿವಮೊಗ್ಗೆಗೆ ಹೋದೆ. ಸಹ್ಯಾದ್ರಿ ಕಾಲೇಜಿನ ತರಗತಿಗಳಿಂದ ಕಿಟಕಿಗಳಿಂದಲೇ ಪಡುವಣದಲ್ಲಿ ಮಲೆನಾಡಿನ ಬೆಟ್ಟಗಳು ಕಾಣುತ್ತಿದ್ದವು. ನಂತರ ಮೈಸೂರಿಗೆ ಹೋದೆ. ಅಲ್ಲೂ ಹಾಸ್ಟೆಲ್ ಕೋಣೆಯಿಂದ ಚಾಮುಂಡಿ ಬೆಟ್ಟ ಕಾಣುತ್ತಿತ್ತು. ನಾನು ಲಗ್ನವಾಗಿದ್ದು ಬೆಟ್ಟಗಳ ಊರಾದ ಚಿತ್ರದುರ್ಗದಲ್ಲಿ. ಹೊಸತರಲ್ಲಿ ಮಡದಿಯನ್ನು ಕಟ್ಟಿಕೊಂಡು ಅಲ್ಲಿನ ಬೆಟ್ಟ ಕೋಟೆ ಅಲೆಯುತ್ತಿದ್ದೆ. ಮನೆಗೆ ಬರುವುದು ತಡವಾದರೆ, ನಮ್ಮ ಹುಡುಗಿಯನ್ನು ಯಾವ ಜಾರಿನಲ್ಲಿ ದಬ್ಬಿದನೊ ಎಂಬಂತೆ ಅತ್ತೆ ಆತಂಕಗೊಂಡಿರುತ್ತಿದ್ದರು. ಹಂಪಿಗೆ ಬಂದೆ. ಇಲ್ಲಂತೂ ಮನೆಯ ಎದುರಾ ಎದುರೇ ಜಂಬುನಾಥ ಬೆಟ್ಟದ ನಿತ್ಯ ದರ್ಶನ. ಆದರೆ ಅದೀಗ ಅದಿರನ್ನು ಅಗೆದಗೆದು, ಹಂದಿ ಗೂರಾಡಿಹೋದ ಹೊಲದಂತೆ, ಕೆಂಪು ಕಲೆಗುಂಡಿಗಳಿಂದ ಕೂಡಿ ನಿತ್ರಾಣಗೊಂಡಿದೆ. ವಿಶ್ವವಿದ್ಯಾಲಯದಲ್ಲಿ ಕೂಡ ಕೋಣೆಯಿಂದ ಹೊರಬಂದು ಪಡಸಾಲೆಗೆ ನಿಂತರೆ, ತುಂಗಭದ್ರೆಯಗುಂಟ ಹಂಪಿ, ಆನೆಗೊಂದಿ, ಗಂಗಾವತಿಯ ತನಕ ಹಾದುಹೋಗಿರುವ ಬಂಡೆಬೆಟ್ಟಗಳ ಸರಣಿ, ದಣಿದ ವಿರೂಪಾಕ್ಷನು ಕೊರಳಿಂದ ತೆಗೆದಿಟ್ಟ ಶಿಲಾಹಾರದಂತೆ ಕಾಣುತ್ತದೆ. ಹಂಪಿಯ ಮತಂಗ, ಆನೆಗೊಂದಿಯ ಆಂಜನೇಯ ನನಗೆ ಪ್ರಿಯವಾದ ಬೆಟ್ಟಗಳು. ಮತಂಗವನ್ನು ಎಷ್ಟು ಬಾರಿ ಹತ್ತಿಳಿದಿರುವೇನೊ? ಬಹುಶಃ ನನಗೂ ಬೆಟ್ಟಗಳಿಗೂ ಯಾವುದೋ ಜನ್ಮಾಂತರದ ಸಂಬಂಧವಿದ್ದಂತೆ ಕಾಣುತ್ತದೆ.

ಸಮಸ್ಯೆಯೆಂದರೆ ಬೆಟ್ಟಹತ್ತುವ ನನ್ನ ಚಟಕ್ಕೆ ಮಡದಿ, ಮಕ್ಕಳು, ವಿದ್ಯಾರ್ಥಿಗಳು ಹಾಗೂ ಗೆಳೆಯರು ಬೆಲೆ ತೆತ್ತಿರುವುದು;  ಒಮ್ಮೆ ಬೆಳದಿಂಗಳ ಊಟವನ್ನು ಹೊಸಪೇಟೆಯ ಜೋಳದರಾಶಿಯ ತುದಿಯಲ್ಲಿ ಮಾಡಬೇಕೆಂದು ಬಾನುವನ್ನು ಒಪ್ಪಿಸಿ, ಎಳೆಯ ಮಕ್ಕಳನ್ನು ಜತೆಗೆ ಕರೆದುಕೊಂಡು ಹೋದೆ. ಬೆಳದಿಂಗಳು ಚೆನ್ನಾಗಿತ್ತು. ಸಮೋಸ ನಿಲ್ಲಿಸಿದಂತಿರುವ ಅದರ ತುದಿಯ ಮೇಲೆ ಕುಳಿತು ಕಟ್ಟಿಕೊಂಡು ಬಂದ ಬುತ್ತಿಯನ್ನುಂಡು ಆನಂದಪಟ್ಟೆವು. ಆದರೆ ಇಳಿಯುವಾಗ ತಿಪ್ಪಲವಾಯಿತು. ಅದರ ಗೊಟರುಗಳಲ್ಲಿ ಬೆಳದಿಂಗಳು ತುಂಬಿ ಅವೆಲ್ಲ ಮಟ್ಟಸವಾಗಿ ಕಾಣುತ್ತ, ಬಾನು ಒಂದು ತಗ್ಗಿನಲ್ಲಿ ಮುಗ್ಗರಿಸಿದಳು. ಚೆನ್ನಾಗಿ ಬೈಸಿಕೊಂಡೆ. ಇನ್ನೊಮ್ಮೆ ಹಳ್ಳಿಯಿಂದ ನನ್ನ ಇಬ್ಬರು ಚಿಕ್ಕಮ್ಮಂದಿರು ಹೊಸಪೇಟೆಯ ಡ್ಯಾಮು ನೋಡಲು ಬಂದರು. ಕಷ್ಟಪಟ್ಟು ದುಡಿಮೆ ಮಾಡಿ ಗಟ್ಟಿಗರಾಗಿದ್ದ ಅವರನ್ನು ಗುಂಡಾ ಕಾಡಿನ ಕಡೆಯಿಂದ ನೀರಂಚಿನಲ್ಲಿ ನಡೆಸುತ್ತ ಅಡ್ಡಾಗಿದ್ದ ಬೆಟ್ಟವೊಂದನ್ನು ಹತ್ತಿಸಿ, ನದಿಪಾತ್ರಕ್ಕೆ ಇಳಿಸಿದೆ.  ಅವರು ಗರಸು ನೆಲದಲ್ಲಿ ಜಾರಿಬಿದ್ದು, ಮೈಕೈ ತರಚಿಕೊಂಡು, ಶಾಪಹಾಕಿ ಹೋದರು. ಇವತ್ತಿಗೂ ಊರಿಗೆ ಬನ್ನಿ ಎಂದರೆ  ‘ಬ್ಯಾಡ ನಮಪ್ಪ ನಿನ್ನ ಸಾವಾಸ’ ಎಂದು ಸಲಾಮು ಮಾಡುತ್ತಾರೆ. ಒಮ್ಮೆ ಮುಂಬೈಗೆ ಹೋದಾಗ ಕಲ್ಯಾಣದ ಬೆಟ್ಟ ತೋರಿಸಲು, ಸಂಜೆ ಕನ್ನಡ ಎಂ.ಎ. ಓದುತ್ತಲೂ ಹಗಲು ಶಿಕ್ಷಕರಾಗಿ ಕೆಲಸ ಮಾಡುತ್ತಲೂ ಇದ್ದ ಒಬ್ಬ ಮಿತ್ರರಿಗೆ ಕಾಡಿದೆ. ಅವರು ನನ್ನ ಅವಸ್ಥೆ ನೋಡಲಾರದೆ, ರಾತ್ರೋರಾತ್ರಿ  ಕಲ್ಯಾಣದಲ್ಲಿರುವ ತಮ್ಮ ಮನೆಗೊಯ್ದು ಇರಿಸಿಕೊಂಡು, ಬೆಳಗಿನ ಜಾವವೆದ್ದು ಸೂರ್ಯ ಹುಟ್ಟುವುದರೊಳಗೆ ಬೆಟ್ಟದ ಬುಡಕ್ಕೆ ತಂದು ಬಿಟ್ಟರು. ಸುಪ್ರಸಿದ್ಧ ಸೂಫಿ ಹಾಜಿ ಮಲಂಗನ ದರ್ಗಾ ಇರುವ ಈ ಬೆಟ್ಟ, ಅಂತರಿಕ್ಷದಲ್ಲೇ ಡ್ಯಾಮು ಕಟ್ಟಿದಂತಿದೆ. ಬಹಳ ಹಿಂದೆ ಅಂಡಮಾನಿಗೆ ಹೋದಾಗ, ಗೆಳೆಯರನ್ನು ಗೋಳು ಹಾಕಿಕೊಂಡು ಅಲ್ಲಿನ ಹ್ಯಾರಿಯಟ್ ಬೆಟ್ಟ ಹತ್ತೋಣವೆಂದು ಪುಸಲಾಯಿಸಿದೆ. ಅವರು ದಾಕ್ಷಿಣ್ಯಕ್ಕೆ ಬಿದ್ದು ಬಂದರು. ಪಾಪ, ಆ ದಿನ ಕಡಲತಡಿಯಲ್ಲಿ ಮಡದಿಯರೊಡನೆ ಆಡುವ ನೀರಾಟದಿಂದ ಅವರು ವಂಚಿತರಾಗಬೇಕಾಯಿತು; ಇನ್ನೊಮ್ಮೆ ಚಿತ್ರದುರ್ಗ ಜಿಲ್ಲೆಯ ಲುಂಕೆಮಲೆಯ ಜಾತ್ರೆಗೆ  ಹೋದಾಗ ಅಲ್ಲಿನ ಗುಡ್ಡವನ್ನು ಹತ್ತೋಣವೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದೆ. ಅದು ಮುಳ್ಳಿನ ತರೆಗಿಡಗಳಿಂದ ತುಂಬಿದ ಬೆಟ್ಟ. ಎತ್ತ ಹೋದರೂ ಮೈಯನ್ನು ಮುಳ್ಳು ಪರಚುತ್ತಿದ್ದವು. ನಾನು ದಾರಿಯಿಲ್ಲದ ಕಡೆ ಹಂದಿಯಂತೆ ಪೊದೆಗಳಲ್ಲಿ ಜಾಗಮಾಡಿಕೊಂಡು ಹೋಗುವುದನ್ನು ಕಂಡ ವಿದ್ಯಾರ್ಥಿಗಳು ನನ್ನ ಮೇಲಿಟ್ಟಿದ್ದ ಗೌರವವನ್ನೇ ಕಡಿಮೆ ಮಾಡಿಕೊಂಡರು.

ಸೂಫಿ ಮತ್ತು ನಾಥರ ಅಧ್ಯಯನಕ್ಕೆಂದು ಹೊರಟಾಗ, ಬೆಟ್ಟಗುಡ್ಡಗಳು ಅನಿವಾರ್ಯವಾಗಿ ಗಂಟುಬಿದ್ದವು. ಅಥವಾ ಗುಡ್ಡಬೆಟ್ಟ ಹತ್ತುವ ವ್ಯಾಮೋಹದಿಂದಲೇ ನಾನು ಈ ವಿಷಯಗಳ ಬೆನ್ನುಬಿದ್ದೆನೊ ಏನೊ? ಮುಳ್ಳಯ್ಯನಗಿರಿ, ಚುಂಚನಗಿರಿ, ಹಂಡಿಬಡಗನಾಥ, ಮಾದೇಶ್ವರಬೆಟ್ಟದ ನಾಗಮಲೆ, ಕವಳೆಗುಹೆಯ ಬೆಟ್ಟ, ಶಿವಗಂಗೆಯ ಬೆಟ್ಟ, ಕೊರಟಗೆರೆಯ ಸಿದ್ಧರಬೆಟ್ಟ, ಶ್ರೀಶೈಲದ ಕದಳಿ- ಎಲ್ಲವೂ ಸಿದ್ಧ ಪರಂಪರೆಯ ಬೆಟ್ಟಗಳು. ಹಿಮಾಲಯದ ಪರ್ವತಗಳು, ಗುಜರಾತಿನ ಪಾವಗಡ ಬೆಟ್ಟ, ಮಹಾರಾಷ್ಟ್ರದ ಕೌಳಪರ್ವತ, ರಾಜಸ್ಥಾನದ ಅಬೂಪರ್ವತ, ತಮಿಳುನಾಡಿನ ಮುರುಗಾಮಲೈ, ವೈನಾಡಿನ ಚೆಂಬುರಾಗಳನ್ನು ಗೆಳೆಯರ ಜತೆ ನಾನಾ ಕಾರಣಗಳಿಂದ ಹತ್ತಿಳಿದೆ. ಆದರೆ ಕೆಲವೊಮ್ಮೆ ಮಂಗಳೂರಿನ ಕದ್ರಿಗುಡ್ಡೆ, ಆಗುಂಬೆಯ ಕುಂದಾದ್ರಿಯಂತಹ ಪುಟ್ಟಬೆಟ್ಟಗಳು ಕೊಟ್ಟ ಖುಷಿಯನ್ನು ಭಾರೀ ಗಾತ್ರದ ಬೆಟ್ಟಗಳು ಕೊಡಲಿಲ್ಲವೆನ್ನಬಹುದು. ಗಾತ್ರವು ಬಹಳ ದೊಡ್ಡ ಸಂಗತಿಯಲ್ಲವೆಂದು ನನ್ನ ಅಭಿಪ್ರಾಯ.

ಬೆಟ್ಟ ಹತ್ತುವ ಚಪಲಕ್ಕೆ ನಾನೂ ಸಾಕಷ್ಟು ಬೆಲೆ ಕಕ್ಕಿದ್ದೇನೆ. ಅವುಗಳಲ್ಲಿ ಎರಡನ್ನು ಪ್ರಸ್ತಾಪಿಸಬಹುದೆನಿಸುತ್ತದೆ.  ಮೊದಲನೆಯದು ಕೇರಳ-ತಮಿಳುನಾಡು ಗಡಿಯಲ್ಲಿರುವ ಕುಂಬಳೆಯ ಬೆಟ್ಟ. ಅಲ್ಲಿ  ಚಿನ್ನಾರಕೋಯಿಲ್ ಎಂಬ ಜಲಪಾತವಿದೆ. ಅದೇನು ದೊಡ್ಡ ದಭದಭೆಯಲ್ಲ. ಒಣಹಾಕಿದ ಬಿಳಿಸೀರೆ ಗಾಳಿಗೆ ಹಾರಾಡುವಂತೆ ಸಣ್ಣಗೆ ಧಾರೆ ಬೀಳುತ್ತದೆ. ಅದನ್ನು ನೋಡಲು ಬೆಟ್ಟದ ತುದಿಗೆ ಹೋಗಬೇಕು. ಮೇಲಿಂದ ನೋಡಿದರೆ ಬೆಟ್ಟಪಾದದಲ್ಲಿ ಹಾದು ಬಂದ ೧೫ ಕಿಮಿ ಸುತ್ತಿನ ಹಾದಿ ಇಲ್ಲೇ ಇದೆ ಎಂಬಂತೆ ಕಾಣುತ್ತದೆ. ಜಲಪಾತ ನೋಡಿಯಾದ ಬಳಿಕ ನಾನು ‘ನೀವು ವೆಹಿಕಲಿನಲ್ಲಿ ಕೆಳಗೆ ಬನ್ನಿ. ನಾನು ಹೀಗೆ ನೇರವಾಗಿ ಬೆಟ್ಟವಿಳಿದು ರಸ್ತೆಗೆ ಬರುವೆ’ ಎಂದು ಗೆಳೆಯರ ತಂಡಕ್ಕೆ ಹೇಳಿದೆ; ಎಲ್ಲರೂ ಒಕ್ಕೊರಲಲ್ಲಿ ಬೇಡವೆಂದರು. ‘ಚಿಂತೆ ಮಾಡಬೇಡಿ. ನಿಮಗಿಂತ ಮೊದಲೇ ಇಳಿದು ಕಾಯುತ್ತಿರುವೆ’ ಎಂದು ಹೇಳಿ ಬೆಟ್ಟ ಇಳಿಯತೊಡಗಿದೆ. ಈ ಪೀಡೆ ನಮ್ಮ ಮಾತು ಕೇಳುವುದಿಲ್ಲ ಎಂದು ಅವರು ನಿರ್ವಾಹವಿಲ್ಲದೆ ಹೊರಟರು.

ಅಪರಿಚಿತವಾದ ಬೆಟ್ಟವನ್ನು ಹತ್ತುವುದು, ಅಪರಿಚಿತ ನೀರಿನಲ್ಲಿ ಧುಮುಕುವುದು ಅಪಾಯಕರ. ನಾನೋ ಮಾಸ್ತಿಯವರ ‘ಮದಲಿಂಗನ ಕಣಿವೆ’ಯ ನಾಯಕನಂತೆ ಹಠದಿಂದ ನೆಗೆದಾಡಿಕೊಂಡು ಇಳಿಯುತ್ತ ಹೋದೆ. ಮೊದಲು ದಾರಿಗಡ್ಡವಾಗಿ ಮುಳ್ಳಪೊದೆ ಸಿಕ್ಕವು. ಬಳಿಕ ಬಳ್ಳಿ ಸುತ್ತಿಕೊಂಡ ಹಳು ಸಿಕ್ಕಿತು. ನುಗ್ಗಿ ನುಸುಳಿ ಬರತೊಡಗಿದೆ. ಆದರೆ ಅರ್ಧಬೆಟ್ಟ ಇಳಿದ ಬಳಿಕ ಇದ್ದಕ್ಕಿದ್ದಂತೆ ಕಡಿದಾದ ಇಳುಕಲು ಆರಂಭವಾಯಿತು. ಬೆಟ್ಟವನ್ನು ಹೆಗಲಮೇಲೆ ಹೊತ್ತುನಿಂತಂತೆ ೬೦-೭೦ ಡಿಗ್ರಿಯಲ್ಲಿ ಬಂಡೆಗಳು ನೆಲದಿಂದ ಮೇಲೆದ್ದು ನಿಂತಿದ್ದವು. ಇಳಿಯಹೋದರೆ ಕಾಲುಜಾರಿ ಬೀಳುವ ಸಂಭವವಿತ್ತು. ಸಾಹಸ ಮಾಡಲು ಹೋಗಿ ಮಂಗನಾಗಿದ್ದೆ. ಕೈಗಳನ್ನೂ ಕಾಲು ಮಾಡಿಕೊಂಡು ನಾಗಾಲಿಗನಾಗಿ ಯತ್ನಿಸಿದೆ. ಆಗಲಿಲ್ಲ. ವಾಪಾಸು ಹೋಗೋಣವೆಂದರೆ ವ್ಯಾನು ಹೋಗಿಯಾಗಿದೆ.

ಅಷ್ಟರೊಳಗೆ ಮಧ್ಯಾಹ್ನವಾಗುತ್ತ ಬಂತು. ಕೆಳಗೆ ನನಗಾಗಿ ಗೆಳೆಯರ ತಂಡ ರಸ್ತೆಯಲ್ಲಿ ವಾಹನವನ್ನು ಹಿಂದುಮುಂದು ಓಡಾಡಿಸುತ್ತ  ಹುಡುಕುತ್ತಿದೆ. ನನಗವರು ಕಾಣುತ್ತಿದ್ದಾರೆ. ನಾನವರಿಗೆ ಕಾಣುತ್ತಿಲ್ಲ. ಕೂಗಿದರೆ ಕೇಳಿಸದಷ್ಟು ದೂರ. ನನಗೇನಾದರೂ ಆದರೆ ಇಡೀ ಪ್ರವಾಸವೇ ಅಸ್ತವ್ಯಸ್ತವಾಗುತ್ತದೆ. ಛೇ! ಬೋನಿನಲ್ಲಿ ಸಿಕ್ಕಿಕೊಂಡ ಪ್ರಾಣಿಯಂತೆ ಅತ್ತಿತ್ತ ಹರಿದಾಡತೊಡಗಿದೆ. ಬೆವರು ಹರಿಯತೊಡಗಿತು. ಉದ್ವೇಗದಿಂದ ಎದೆ ಢವಗುಡುತ್ತಿತ್ತು. ಬಾಯಿ ಒಣಗಿತು. ನೀರಿಲ್ಲ. ಹಾದಿ ತಪ್ಪಿದ ಹೊತ್ತಲ್ಲಿ ಉದ್ವೇಗವೂ ಸೇರಿದರೆ, ಸಿಗಬಹುದಾದ ಹಾದಿಯೂ ಕಳೆದುಹೋಗುತ್ತದೆ. ಆದದ್ದಾಗಲಿ ಎಂದು ಮೂಡಣ ದಿಕ್ಕು ಹಿಡಿದು ಬೆಟ್ಟದ ಕಿಬ್ಬದಿಯಲ್ಲೇ ನಡೆಯತೊಡಗಿದೆ. ಎಷ್ಟೋ ದೂರಬಂದ ಬಳಿಕ ಮೇಕೆಹಾದಿ ಕಂಡಿತು. ಬಳಿಕ ದನಗಳ ಒಣತೊಪ್ಪೆ ಕಂಡಿತು. ಇಲ್ಲೀ ತನಕ ಮಾನವ ಸಂಚಾರವಾಗಿದೆ ಎಂಬುದು ಭರವಸೆ ಹುಟ್ಟಿತು. ಒಂದು ಗಂಟೆ ಇಳಿದಬಳಿಕ ಬೆಟ್ಟದಂಚಿನ ಹೊಲಗಳು ಸಿಕ್ಕವು. ಅವು ಉಳುಮೆ ಮಾಡಿದ ಮರಳಿನ ಹೊಲಗಳು. ಹೆಜ್ಜೆಯಿಟ್ಟರೆ ಮರಳು ಹಿಸಿದು ಕಾಲು ಮುಳುಗುತ್ತಿತ್ತು. ಬದುಗಳನ್ನು ಹಾರಿ ಇಳಿದು ಓಡತೊಡಗಿದೆ. ಹೊಲಗಳಲ್ಲಿದ್ದ ಜನರು ಕೆಲಸ ಬಿಟ್ಟು ವಿಸ್ಮಯದಿಂದ  ‘ಯಾರುಡ ನೀ? ಎನ್ನ ಆಯಿಚಿ?’ ಎಂದು ಕೇಳಿದರು. ನನ್ನ ಕತೆ ವಿವರಿಸಿದೆ. ‘ಅಪ್ಪಡಿಯಾ? ಇಂಗಪೋ’ ಎಂದು ದಾರಿ ತೋರಿಸಿದರು. ಟಾರು ರಸ್ತೆ ಸಿಕ್ಕಿತು. ನಾನು ಬರಲಿಲ್ಲವೆಂದು ನನ್ನ ಮಕ್ಕಳು  ಕಳವಳಗೊಂಡಿದ್ದರು. ಎಲ್ಲರ ಕ್ಷಮೆ ಕೇಳಿ ತಿರುಗಿ ನೋಡಿದೆ. ‘ಮತ್ತೊಮ್ಮೆ ಅಧಿಕಪ್ರಸಂಗ ಮಾಡುವೆಯಾ?’ ಎಂಬಂತೆ ಚಿನ್ನಾರಕೋಯಿಲ್ ಅಣಕಿಸಿತು.

ಎರಡನೆಯದು ಕೊಡಚಾದ್ರಿಯಲ್ಲಿ ಆದ ‘ಮೋಸ’. ಮಿತ್ರರಾದ ಎಚ್. ಗೋವಿಂದಯ್ಯ, ಧಾರವಾಡದ ವೈದ್ಯರಾದ ಡಾ.ಸಂಜೀವ ಕುಲಕರ್ಣಿ, ಕವಿ ಅರುಣ್ ಜೋಳದಕೂಡ್ಲಿಗಿ ಮತ್ತು ನಾನು ಕೂಡಿ ಕರ್ನಾಟಕವನ್ನು ಅದರಂಚಿನಲ್ಲಿ ಸುತ್ತುತ್ತ ಹೊರಟಿದ್ದೆವು. ಸಾಗರದಿಂದ ಹೊರಟು ಹಸಿರುಮಕ್ಕಿಯಲ್ಲಿ ಶರಾವತಿಯ ಹಿನ್ನೀರನ್ನು ಲಾಂಜಿನಲ್ಲಿ ದಾಟಿ, ಕೊಲ್ಲೂರ ದಾರಿ ಹಿಡಿದು ಕೊಡಚಾದ್ರಿ ಬುಡದಲ್ಲಿರುವ ನಿಟ್ಟೂರಿಗೆ ಬಂದೆವು. ಅಂದಿನ ರಾತ್ರಿಯನ್ನು ಕೊಡಚಾದ್ರಿಯಲ್ಲಿ ಕಳೆದು ಬೆಳಗಿನ ಸೂರ್ಯೋದಯವನ್ನು ನೋಡುವುದು ನಮ್ಮ  ಉದ್ದೇಶವಾಗಿತ್ತು. ಕೊಡಚಾದ್ರಿ ನನಗೆ ಹೊಸತಲ್ಲ. ಹಿಂದೊಮ್ಮೆ ಮಳೆಗಾಲದಲ್ಲಿ ಕೊಡಚಾದ್ರಿ ಹತ್ತಬೇಕೆಂದು ಹುಡುಗರ ಗುಂಪು ಕರೆದುಕೊಂಡು ಹೋಗಿದ್ದೆ. ಅಡಿಯಿಂದ ಮುಡಿಯತನಕ ತೊಯ್ದು ತಪ್ಪಡಿಯಾಗಿ ಬೆಟ್ಟ ಹತ್ತಿದ್ದೆವು. ದೊಡ್ಡ ಕೆರೆಯಷ್ಟು ಅಗಲವಾದ ನೀರುತುಂಬಿದ ಕಪ್ಪು ಮುಗಿಲುಗಳು ಮೈಮೇಲೇ ಎರಗಿ ಬಂದು ಹೆದರಿಸಿದ್ದವು. ಜಾರುತ್ತ ಏಳುತ್ತ, ಮೈತುಂಬ ಶಾವಿಗೆಯಂತೆ ಇಂಬಳಗಳನ್ನು ಹತ್ತಿಸಿಕೊಂಡು ಸಾಕಷ್ಟು ರಕ್ತಕಾಣಿಕೆ ಕೊಟ್ಟು ಬಂದಿದ್ದೆವು. ಆದರೆ ಕೊಡಚಾದ್ರಿ ಹತ್ತಲು ಪಡುವ ಪಾಡೆಲ್ಲ ಬೆಳಗಿನ ಜಾವ ಶಿಖರದ ತುದಿಯಲ್ಲಿ ಕುಳಿತು ಕಾಣುವ ಸೂರ್ಯಾಗಮನದ ನೋಟದಲ್ಲಿ ಮರೆತುಹೋಗುತ್ತದೆ. ಅಲೆಅಲೆಯಾಗಿ ತುಂಬಿದ ಮೋಡಗಳು ಸಿನಿಮಾಗಳಲ್ಲಿ ನಾರದ ಸಂಚಾರಕ್ಕೆಂದು ಇರುವ ಆಕಾಶದಾರಿಯನ್ನು ನಿರ್ಮಿಸುತ್ತವೆ. ನಮ್ಮ ಮೂಗಿನ ನೇರಕ್ಕೆ ಮಲೆತು ನಿಂತುಬಿಡುವ ಹತ್ತಿಯ ಕಡಲನ್ನು ಭೇದಿಸಿಕೊಂಡು ಸೂರ್ಯರಶ್ಮಿ ಹೋರಾಟ ಮಾಡಿ ಬರುತ್ತದೆ. ಅದೊಂದು ಮನೋಹರ ದೃಶ್ಯ.

ಇದನ್ನು ಜೀವನದಲ್ಲೊಮ್ಮೆ ನೋಡಿ ಸಾಯಬೇಕೆಂದು ಬಣ್ಣಿಸಲು, ಕವಿಗಳಾಗಿದ್ದ ಮೂವರೂ ಸುಲಭವಾಗಿ ಬಿದ್ದುಹೋದರು. ಆದರೆ ನಮ್ಮ ಮಾರುತಿ ವ್ಯಾನು ಕೊಡಚಾದ್ರಿ ಕಚ್ಚಾರಸ್ತೆಯನ್ನು ಹತ್ತಲೊಲ್ಲದು. ನಿಟ್ಟೂರಿನಿಂದ ಜೀಪುಗಳಷ್ಟೇ ಹೋಗುತ್ತವೆ. ಬಾಡಿಗೆ ಜೀಪು ಹಿಡಿಯೋಣವೆಂದರೆ, ಅಲ್ಲಿ ಅವತ್ತು ಎಂತಹದೋ ಸ್ಥಳೀಯ ಹಬ್ಬ. ಎಲ್ಲರೂ ವಾಲಿಬಾಲ್ ಆಡುತ್ತಿದ್ದಾರೆ. ಯಾರೂ ಬರಲು ತಯಾರಿಲ್ಲ. ನಮ್ಮ ಪರದಾಟ ನೋಡಿದ ಅಂಗಡಿಯವರೊಬ್ಬರು ಕರೆದು  ‘ನೀವು ನಾಗೋಡಿ ಕ್ರಾಸಿನಿಂದ ಕಾಡೊಳಗೆ ಐದು ಕಿಮಿ ಹೋಗಿ. ಅಲ್ಲೊಂದು ಮಲೆಯಾಳಿ ಹೋಟೆಲ್ ಸಿಗುತ್ತದೆ. ಅಲ್ಲಿ ಗಾಡಿ ನಿಲ್ಲಿಸಿ ಬೆಟ್ಟ ಹತ್ತಬಹುದು’ ಎಂದು ಸಲಹೆ ಕೊಟ್ಟರು.

ಸರಿ, ಕೊಲ್ಲೂರು ರಸ್ತೆಯಲ್ಲಿ ಹೋಗಿ, ನಾಗೋಡಿ ಕ್ರಾಸಿನಲ್ಲಿ ಹೊರಳಿ, ಮಲೆಯಾಳಿ ಹೋಟೆಲಿಗೆ ಬಂದೆವು. ರಾತ್ರಿ ಒಂಬತ್ತು ಗಂಟೆ. ವಾಹನ ಅಲ್ಲೇ ನಿಲ್ಲಿಸಿ ಕಾಕಾ ಕೊಟ್ಟ ಅಕ್ಕಿ ಕಡುಬುಗಳನ್ನು ಕಡಲೆಕಾಳಿನ ಸಾರಿನಲ್ಲಿ ಅದ್ದಿ ಸರಿಯಾಗಿ ಏರಿಸಿದೆವು;  ಶೇಂಗಾ ಹೊಲ ಕಾಯಲು ಹೋಗುವವರಂತೆ ದುಪ್ಪಟಿಗಳನ್ನು ಹೊದ್ದು, ಕೋಲುಗಳನ್ನು ಹಿಡಿದುಕೊಂಡು ಸಿದ್ಧವಾದೆವು. ನಮ್ಮ ಗಗನಯಾತ್ರಿಗಳ ವೇಷ ಕಂಡು ಕಾಕಾನ ನಾಯಿ ವಿಚಿತ್ರವಾಗಿ ಬೊಗಳಿ ಅಪಶಕುನ ನುಡಿಯಿತು. ಅಷ್ಟರಲ್ಲಿ ಸಮೀಪದಲ್ಲಿ ಗದ್ದೆಮಾಡಿಕೊಂಡಿದ್ದ ಒಬ್ಬನು ಅಂಗಡಿಗೆ ಚಹಾಪುಡಿ ಕೊಳ್ಳಲಿಕ್ಕೆ ಬಂದನು. ಅವನಿಗೆ ‘ ದಾರಿತೋರಿಸಲು ಬರುವೆಯಾ? ಕೇಳಿದಷ್ಟು ಕೊಡುತ್ತೇವೆ’ ಎಂದು ವಿನಂತಿಸಿದೆವು. ಅವನು ‘ಮನೆಗೆ ಹೋಗಿ ತಕ್ಷಣ ಬರುತ್ತೇನೆ’ ಎಂದು ಹೋದವನು ಸುಳಿವೇ ಇಲ್ಲ. ಅವನ ಮಡದಿ ಬಿಡಲಿಲ್ಲವೊ, ಅವನು ಹೊಡೆದಿದ್ದ ಎಣ್ಣೆ ಅನುಮತಿ ಕೊಡಲಿಲ್ಲವೊ ತಿಳಿಯದು.  ಕಾಕಾ ಮತ್ತವನ ಹೆಂಡತಿ  ‘ಕಷ್ಟಮಿಲ್ಲೆ. ನೇರದಾರಿಯುಂಟು. ಹೋಗಬಹುದು’ ಎಂದು ಅಭಯಕೊಟ್ಟರು. ನಾವು ರಾತ್ರಿ  ಹತ್ತು ಗಂಟೆಯ ಹೊತ್ತಿಗೆ ಕೊಡಚಾದ್ರಿ ಶಿಖರಕ್ಕೆ ದಂಡೀಯಾತ್ರೆ ಶುರುಮಾಡಿದೆವು. ಸೀಳುರಸ್ತೆ ಬಂದಕಡೆ ನಿಂತು ಪರಿಶೀಲಿಸಿ ಆದಷ್ಟೂ  ಹೆಚ್ಚು ಸವೆದ ಹಾದಿ ಹಿಡಿಯುತ್ತಿದ್ದೆವು. ರಾತ್ರಿ ೧೨ ಗಂಟೆ ಹೊತ್ತಿಗೆ ಮುಕ್ಕಾಲು ಭಾಗ ಹತ್ತಿದೆವು. ಆಕಾಶದಲ್ಲೆಂಬಂತೆ ಕೊಡಚಾದ್ರಿಯ  ಗುಡಿಯ ದೀಪಗಳು ಕಾಣಲಾರಂಭಿಸಿದವು.

ಕೊನೆಯ ಕಾಲು ಭಾಗ ತೀರ ಕಡಿದಾದ ಘಟ್ಟ. ಅರ್ಧಗಂಟೆಯಲ್ಲಿ ಕ್ರಮಿಸುವಂತಹುದು. ಅಷ್ಟರಲ್ಲಿ ಸಣ್ಣದೊಂದು ಬಯಲು ಬಂತು. ಅಲ್ಲಿ ದಾರಿ ಕವಲೊಡೆದಿತ್ತು. ಯಾರನ್ನು ಕೇಳುವುದು? ಹೇಗೆ ಹತ್ತಿದರೂ ಗುಡ್ಡದ ತುದಿ ಸಿಗಲೇಬೇಕು ಎಂಬ ಹುಂಬ ತರ್ಕದಲ್ಲಿ ಬಲಗಡೆಯ ಒಂದನ್ನು ಹಿಡಿದು ಹೊರಟೆವು. ದೊಡ್ಡದೊಡ್ಡ ಮರದ ದಿಮ್ಮಿಗಳು ಅಡ್ಡ ಬಂದವು. ಅವುಗಳಡಿ ನುಸುಳಿ ಪಾರಾದೆವು. ಒಂದು ಗಂಟೆ ನಡೆದ ಮೇಲೆ ದಾರಿ ದಟ್ಟವಾದ ಹಳುವಿನಲ್ಲಿ ತಟ್ಟನೆ ಕೊನೆಗಂಡಿತು. ಇನ್ನೆಲ್ಲಿ ಹೋಗುವಿರಿ ಎಂಬಂತೆ ಗಿಡಮರಬಳ್ಳಿಗಳು ಕೈಕೈಹಿಡಿದು ಅಡ್ಡನಿಂತಿದ್ದವು. ಹತ್ತುವುದಿರಲಿ ತೆವಳಲೂ ಸಾಧ್ಯವಿಲ್ಲ. ವಾಸ್ತವವಾಗಿ ನಾವು ಬಂದಿದ್ದು ದಾರಿಯಾಗಿರದೆ ನೀರು ಹರಿದು ನಿರ್ಮಾಣವಾಗಿದ್ದ ಕೊರಕಲಾಗಿತ್ತು. ನಾವು ದಾರಿತಪ್ಪಿದ್ದೆವು. ಮೇಲಿಂದ ಬೀಳುತ್ತಿದ್ದ ನಕ್ಷತ್ರದ ತೆಳುಬೆಳಕು ದಟ್ಟಕಾಡಿನ ನೆರಳಿನಲ್ಲಿ ಕಾಣದಂತಾಗಿ ಗವ್ವನೆ ಕತ್ತಲೆಯ ಬಸಿರೊಳಗೆ ನಿಂತಂತಾಯಿತು. ಸುಮ್ಮನೆ ದಿಕ್ಕುತೋಚದೆ ನಿಂತೆವು. ಕಾಡಿನ ಕೀಟಗಳ ಜೀರ್‌ಜೀರ್ ಶಬ್ದವೂ  ಪಕ್ಕದ ಕಣಿವೆಸೀಳಿನಲ್ಲಿ ಹುಟ್ಟಿದ ಝರಿ ಕೆಳಗೆಲ್ಲೂ ಧುಮುಕುವ ಸದ್ದು ಬಿಟ್ಟರೆ ನೀರವ ಮೌನವದು. ಹತ್ತಿರದಲ್ಲೇ ಹಂದಿಯೋ ಏನೋ ಧಡಧಡ ಎಲೆಗಳಲ್ಲಿ ಸದ್ದು ಮಾಡುತ್ತ ಓಡಿಹೋಯಿತು.

ನಮ್ಮ ಬ್ಯಾಟರಿಯ ಬೆಳಕು ಬರಬರುತ್ತ ನಮ್ಮ ಮುಖಗಳಂತೆಯೇ ಮಂಕಾಗತೊಡಗಿತು. ‘ನಾ ಗಾಡ್ಯಾಗೆ ಆರಾಮಾಗಿ ಮಕ್ಕೋತ್ತಿದ್ದೆ. ದೇವರ ಗುಡಿಯದೆಯಂತ ಬಂದೇರಿ’ ಎಂದು ಡ್ರೈವರ್ ಮಂಜು ಚಡಪಡಿಸುತ್ತಿದ್ದ. ಬಯಲು ಸೀಮೆಯ ಅವನಿಗೆ ಈ ಮಲೆಕಾಡನ್ನು ನೋಡಿಯೇ ಅರ್ಧ ಉಸಿರು ಕಳೆದಿತ್ತು; ಇದಕ್ಕೆ ಕಳಸವಿಟ್ಟಂತೆ ದಾರಿತಪ್ಪಿದ್ದು ಗೊತ್ತಾಗಿ ‘ಈ ಹುಚ್ಚರ ಜತೆ ಬಂದೆನಲ್ಲ’ ಎಂದು ಪರಿತಪಿಸುತಿದ್ದ.

ಈಗ ಉಳಿದಿದ್ದು ಎರಡೇ ದಾರಿ. ಒಂದು: ಮರಳಿ ಹೋಗುವುದು. ಆದರೆ ಇಳಿದು ಹೋಗಲಾರದಷ್ಟು ಮೇಲೆ ಬಂದಿದ್ದೆವು. ಜತೆಗೆ ಬಂದದಾರಿಯೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಎರಡು: ಬೆಳಕು ಹರಿಯುವವರೆಗೂ ಅಲ್ಲೇ ನಿಲ್ಲುವುದು, ಮಲಗುವುದು ಇಲ್ಲವೆ ಯಾವುದಾದರೂ ಮರವೇರಿ ರಾತ್ರಿ ಕಳೆಯುವುದು. ಅಲ್ಲೇ ಮಲಗುವುದಂತೂ ಅಸಾಧ್ಯವಾಗಿತ್ತು. ಕಾಲುಗಳು ಎಷ್ಟೋ ಕಾಲದಿಂದ ಬಿದ್ದ ಮರದ ಎಲೆಗಳ ರಾಶಿಯೊಳಗೆ ಮೊಳಕಾಲು ಹುದುಗಿದ್ದವು. ಎಲೆಗಳ ಅಡಿಯಲ್ಲಿ ಯಾವ ಸುಬ್ರಹ್ಮಣ್ಯನೊ ಏನೊ? ಅದು ಕಾಡುಕೋಣ ಹುಲಿ ಕಾಳಿಂಗಸರ್ಪಗಳ ಮೂಕಾಂಬಿಕಾ ಅಭಯಾರಣ್ಯ. ಒಬ್ಬೊಬ್ಬರೇ ಸಲಹೆ ಕೊಡತೊಡಗಿದರು. ಎಲ್ಲವೂ ಅಸಹಾಯಕತೆಯಲ್ಲಿ ಹುಟ್ಟಿಬರುತ್ತಿದ್ದ ನಿಷ್ಪ್ರಯೋಜಕ ಮಾತುಗಳು. ಎಲ್ಲವನ್ನು ಕೇಳಿಸಿಕೊಂಡ ಡಾಕ್ಟರು  ‘ನೋಡಿ. ಎಲ್ಲರ ಸಲಹೆಯನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಡೆಮಾಕ್ರಸಿ ಈಗ ಪ್ರಯೋಜನವಿಲ್ಲ. ನಾನೊಂದು ಕಡೆ ನಡೆಯುತ್ತೇನೆ. ಅದೃಷ್ಟವಿದ್ದರೆ ಇವತ್ತಿನ ರಾತ್ರಿ ಕಳೆಯಲು ಒಂದು ಬಯಲು ಸಿಕ್ಕರೂ ಸಿಗಬಹುದು. ಫಾಲೊ ದಿ ಲೀಡರ್’ ಎಂದು ಘೋಷಿಸಿದವರೇ, ಕೊಂಚ ಕೆಳಕ್ಕೆ ಇಳಿದು ಬಲಕ್ಕೆ ಹೊರಳಿದರು. ನಿರ್ವಾಹವಿಲ್ಲದೆ ಅವರ ಹಿಂದೆ ಕುರಿಗಳಂತೆ ಹೊರಟೆವು. ಪಂಚಮಿಗೆ ಹಾಕಿದ ಉಯ್ಯಾಲೆಯ ಹಗ್ಗಗಳಂತೆ ಬಳ್ಳಿಗಳು ಅಡ್ಡಡ್ಡ ಬಂದು ತಡೆಯುತ್ತಿದ್ದವು. ನಾವು ಸರ್ಕಸ್ಸು ಮಾಡಿ ಅವನ್ನು ದಾಟಿದೆವು. ಚಾಚಿದ ಗೆಲ್ಲುಗಳನ್ನು ಸರಿಸುತ್ತ, ಸುಮ್ಮನೆ ಅರ್ಧ ಗಂಟೆ ಹತ್ತಿದೆವು. ನಂತರ ಕಾಡು ಕಡಿಮೆಯಾಗಿ ಚಕ್ಕನೆ ಒಂದು ಶಿಖರದ ನೆತ್ತಿ ಸಿಕ್ಕಿತು. ಅಲ್ಲಿಂದ ನೋಡಿದರೆ ಇನ್ನೊಂದೇ ಶಿಖರದಲ್ಲಿದ್ದ ಕೊಡಚಾದ್ರಿಯ ಲೈಟುಗಳು ಕಂಡವು. ಯಾರೋ ಪ್ರವಾಸಿ ಮಂದಿರದ ಮೇಲೆ ಬೆಂಕಿಹಾಕಿಕೊಂಡು ಕ್ಯಾಂಪ್‌ಫೈರ್ ಮಾಡುತ್ತಿದ್ದರು. ಮೊಬೈಲು ದೀಪಗಳನ್ನು ಅವರತ್ತ ಬೀಸಿ ‘ದಾರಿತಪ್ಪಿದ್ದೇವೆ. ರಕ್ಷಿಸಿ’ ಎಂದು ಸಂದೇಶ ಕಳಿಸಿದೆವು. ಈ ಸಂದೇಶ ಅವರಿಗೆ ತಲುಪಿತೊ ಇಲ್ಲವೊ, ಅವರೂ ಬ್ಯಾಟರಿ ಬೆಳಕನ್ನು ಬೀಸಿದರು. ಆ ಅಪರಾತ್ರಿಯಲ್ಲಿ ಅಲ್ಲಿಗೆ ಬಂದು ಸಹಾಯ ಮಾಡುವುದು ಯಾರಿಗೂ ಸಾಧ್ಯವಿರಲಿಲ್ಲ. ನಮ್ಮ ಮತ್ತು ಕೊಡಚಾದ್ರಿಯ ಶಿಖರಗಳ ನಡುವೆ ದೊಡ್ಡಬೆಟ್ಟವೊಂದು ಅಡ್ಡನಿಂತಿತ್ತು. ಎರಡು ದೊಡ್ಡ  ಕಣಿವೆಗಳು ಅಡ್ಡಹಾದಿದ್ದವು.

ಅದೊಂದು ಶೋಲಾ ಕಾಡಿನ ಬೊಕ್ಕತಲೆಯಾಗಿತ್ತು. ಪಶ್ಚಿಮಘಟ್ಟದ ತೊಡೆಗಣಿವೆಗಳಲ್ಲಿ ದಟ್ಟವಾದ ಕಾಡು ಬೆಳೆದು ಝರಿಗಳು ಹುಟ್ಟಿ ಹರಿಯುತ್ತವೆ. ತುದಿಗೆ ಗಿಡಗಳಿಲ್ಲದ ಬೋರಲು ಹಾಕಿದ ಬಾಂಡ್ಲಿಯಂತಹ ಮೇಲ್ಮೈಯಲ್ಲಿ ಸೊಂಪಾದ ಹುಲ್ಲು ಬೆಳೆದಿರುತ್ತದೆ. ಅದು ಕಾಡುಕೋಣ ಜಿಂಕೆ ಕಡವೆ ಮೇಯುವ ಜಾಗ. ರಾತ್ರಿ ಒಂದು ಗಂಟೆಯಾಗಿತ್ತು. ಅಲ್ಲೇ ವಸತಿ ಮಾಡುವುದು ಎಂದಾಯಿತು. ಆದರೆ  ಬೆಂಕಿ ಹಾಕುವಂತಿಲ್ಲ. ಅದು ಅಭಯಾರಣ್ಯದ ಕಾನೂನಿಗೆ ವಿರುದ್ಧ. ಹಾಗೇ ಮಲಗಿದರೆ ಕಾಟಿಗಳ ಹಿಂಡು ತುಳಿದು ಹಾಕಬಹುದು. ಆದದ್ದಾಗಲಿ ಎಂದು ಅಲ್ಲಿದ್ದ ಕಲ್ಲದುಂಡಿಗಳನ್ನೇ ದಿಂಬು ಮಾಡಿಕೊಂಡು, ಹುಲ್ಲಿನ ಮೇಲೆ ಉರುಳಿಕೊಂಡೆವು. ‘ಇನ್ನೆಲ್ಲಿಯ ನಿದ್ದೆ?’; ಚಳಿಗಾಳಿ  ಸುಯ್ಯೋ ಎಂದು ತಡೆಯಿಲ್ಲದೆ ಬೀಸುತ್ತಿತ್ತು.  ಕಣ್ಣುಬಿಟ್ಟರೆ ನಮಗಾಗಿಯೇ ಆಗಸ  ಕೆಳಗಿಳಿದು ಬಂದಂತೆ ಝಗಮಗಿಸುವ ತಾರೆಗಳು. ಅವನ್ನು ಸವಿಯುವ ಸೌಂದರ್ಯ ಪ್ರಜ್ಞೆ  ಯಾರಲ್ಲೂ ಇರಲಿಲ್ಲ.

ಮೊದಲ ಬ್ಯಾಚು ಮಲಗುವುದು; ಉಳಿದವರು ಕಾವಲು ಕಾಯುವುದು; ನಂತರ ಎರಡನೇ ಬ್ಯಾಚು ಮಲಗುವುದು; ನಿದ್ದೆ ತೆಗೆದವರು ಎಚ್ಚರವಾಗಿದ್ದು ಕಾವಲು ಮಾಡುವುದು-ಎಂದು ಒಪ್ಪಂದ ಮಾಡಿಕೊಂಡು ಮಲಗಿದೆವು. ಮೊದಲಿಗೆ  ಹಿರಿಯರೆನಿಸಿಕೊಂಡು ನಾನು, ಡಾಕ್ಟರು, ಗೋವಿಂದಯ್ಯ ಮಲಗಿದೆವು. ಅರುಣ್-ಮಂಜು ಕಾವಲುಗಾರರಾದರು. ಕೊನೆಯಲ್ಲಿ ಮಲಗಿದ ನನಗೆ, ಪಕ್ಕದ ಪೊದೆಯಿಂದ ಹುಲಿ ಬಂದರೆ ಎಳೆದುಕೊಂಡು ಹೋಗುವ ಕಲ್ಪನೆಯೇ. ಜತೆಗೆ ಕಾಡುಗಳ್ಳರೆಂದು ಅರಣ್ಯ ಇಲಾಖೆಯವರು ನಮ್ಮನ್ನು ಗುಂಡುಹಾರಿಸಿ ಕೊಂದರೆ ಎಂಬ ಆತಂಕ. ಅಂತೂ ಸ್ಥಳೀಯ ಪತ್ರಿಕೆಗಳಲ್ಲಿ  ನಮ್ಮ ಕಣ್ಮರೆ ಅಥವಾ  ಸಾವಿನ ಸುದ್ದಿ ಪ್ರಕಟವಾಗುತ್ತದೆ; ನಮ್ಮ ಊರುಗಳಲ್ಲಿ ಸಂತಾಪಸೂಚಕ ಸಭೆ ನಡೆಯುತ್ತದೆ-ಒಟ್ಟಿನಲ್ಲಿ ಕೆಟ್ಟ ಯೋಚನೆಗಳೇ ಬರುತ್ತಿದ್ದವು. ಇದು ನನ್ನ ಜೀವನದ ಕೊನೆಯ ರಾತ್ರಿಯಾದರೂ ಆಗಬಹುದು ಎಂದುಕೊಂಡು ಚಿಂತಿಸುತ್ತಿರಲು, ಯಾವ ಮಾಯಕದಲ್ಲೊ ನಿದ್ದೆ ಸೆಳೆದುಕೊಂಡು ಹೋಗಿತ್ತು.

ನಾಲ್ಕನೇ ಜಾವಕ್ಕೆ ವಿಪರೀತ ಥಂಡಿಯಾಗಿ ಎಚ್ಚರವಾಯಿತು. ಬೆಳಗಿನ ಮೂರುವರೆ ಗಂಟೆ.  ಬೆಟ್ಟಹತ್ತಿದ ದಣಿವಿಗೆ ನಮ್ಮ ತರುಣ ‘ಕಾವಲುಗಾರರು’ ನಮಗಿಂತ ಮೊದಲೇ ನಿದ್ದೆ ಹೋಗಿದ್ದರು. ಹುಲಿಬಂದು ಕುಂಡೆ ಕಡಿದರೂ ಅವರು ಏಳುವ ಸಂಭವವಿರಲಿಲ್ಲ. ಅವರ ಗೊರಕೆಗಳು ಹುಲಿಯನ್ನೇ ಹೆದರಿಸಿ ಓಡಿಸುವಂತಿದ್ದವು. ಮೆಲ್ಲಗೆ ‘ಡಾಕ್ಟರೆ’ ಎಂದೆ. ‘ಓ’ ಎಂದರು. ಇಬ್ಬರೂ ಎದ್ದು ಕಾವಲು ಕಾಯುತ್ತ ಮಾತಾಡುತ್ತ ಕುಳಿತೆವು. ಬೆಳ್ಳಿ ಮೂಡತೊಡಗಿತು. ಸುತ್ತಲ ಆಗಸ ತಿಳಿಯಾಗಲಾರಂಭಿಸಿತು. ತಾರೆಗಳು ಮಸುಕಾಗುತ್ತ  ಚಂದ್ರ  ಮುಳುಗತೊಡಗಿದನು. ತಾಯ ಹೊಟ್ಟೆಯಿಂದ ಹೊರಬರುವ ಮುನ್ನ ಸೂರ್ಯ ಕಳಿಸಿದ ಮಂದ ಉಷೆಯ ಪ್ರಕಾಶ ಮೂಡಣದಲ್ಲಿ ಹಬ್ಬತೊಡಗಿತು. ಐದು ಗಂಟೆಗೆ ಎಲ್ಲರನ್ನೂ ಎಬ್ಬಿಸಿ ಅಂದಾಜಿನ ಮೇಲೆ ಹಾಗೆ ಬಂದ ದಿಕ್ಕಿನಲ್ಲೇ ಮುಂದುವರೆದೆವು.  ಕೊಂಚ ದೂರ ಹೋದಮೇಲೆ ನಿಟ್ಟೂರಿಂದ ಬರುವ ಜೀಪುರಸ್ತೆ ಸಿಕ್ಕಿತ್ತು. ರಾತ್ರಿಯೆ ಇನ್ನೊಂದಷ್ಟು ನಡೆದಿದ್ದರೆ ಅದರ ಭೇಟಿಯಾಗುತ್ತಿತ್ತು. ಆದರೆ ಯಾರಿಗೆ ಗೊತ್ತು?  ಸೂರ್ಯೋದಯ ತಪ್ಪಿಸಿಕೊಳ್ಳಬಾರದೆಂದು ಕೊಡಚಾದ್ರಿಯ ಎತ್ತರದ ಶಿಖರವೊಂದನ್ನು ಸರಸರ ಹತ್ತಲಾರಂಭಿಸಿದೆವು.

ಬೆಟ್ಟಗುಡ್ಡಗಳಲ್ಲಿ ತಿರುಗಾಡುವವರಿಗೆ ಇಂತಹ ಅನುಭವಗಳು ಸಾಮಾನ್ಯ. ಆದರೆ ತೀರ ಉಡಾಫೆ ಮಾಡಿದರೆ, ಕಾಡಿನ  ಅನುಭವಗಳು ಜೀವ ಕಸಿಯಬಲ್ಲವು. ಒಮ್ಮೆ ಮುಳ್ಳಯ್ಯನಗಿರಿಯಲ್ಲಿ ಶೋಲಾ ಕಾಡಿನ ಹುಲ್ಲಿಗೆ ಬೆಂಕಿ ಬಿದ್ದು ಕಾಡ್ಗಿಚ್ಚಿನಲ್ಲಿ ಸಿಕ್ಕಿಕೊಂಡು ಒಂದು ಟ್ರೆಕಿಂಗ್ ತಂಡವೆ  ಉಸಿರುಕಟ್ಟಿ ಸತ್ತಿತ್ತು. ಕುಮಾರಪರ್ವತದ ಹಾದಿಯಲ್ಲಿ ದಾರಿತಪ್ಪಿ ಸತ್ತವರು ಎಷ್ಟೋ ಜನ. ಇಂತಹ ಅಪಾಯಗಳಿದ್ದರೂ ಸೆಟೆದು ನಿಂತ ಬೆಟ್ಟಗಳನ್ನು ನೋಡಿದರೆ ಹತ್ತಬೇಕೆಂದು ಕಾಲು ಕಡಿಯತೊಡಗುತ್ತದೆ. ‘ನಾನೇರುವೆತ್ತರಕೆ ನೀನೇರಬಲ್ಲೆಯಾ’ ಎಂದವು ಆಹ್ವಾನಿಸಿದಂತಾಗುತ್ತದೆ. ತಮ್ಮ ದೈತ್ಯಾಕಾರದಿಂದಲೊ ಕಾಲಾತೀತ ಗುಣದಿಂದಲೊ ನಮ್ಮ ಅಹಂಕಾರವನ್ನು ಬೆಟ್ಟಗಳು ಭಗ್ನಗೊಳಿಸುತ್ತವೆ.  ಅವನ್ನು ಹತ್ತಿನಿಂತರೆ ಚೂರಾದ ನಮ್ಮ ಅಹಂಕಾರವೆಲ್ಲ ಸ್ವಲ್ಪಮಟ್ಟಿಗೆ ಮತ್ತೆ ಕಟ್ಟಿಕೊಳ್ಳುತ್ತದೆ. ಏನಿಲ್ಲವೆಂದರೂ, ಅಜ್ಜನಂತಿರುವ ಅವುಗಳ ಹೆಗಲನೇರಿದರೆ ತೋರುವ ಸೂರ್ಯನ ಹುಟ್ಟು-ಮುಳುಗು, ವಕ್ರವಾಗಿ ಹರಿದ ನದಿ, ದೂರದಲ್ಲಿ ಹೊಳೆವ ಕನ್ನಡಿಕೆರೆಗಳು,  ಗಿಡಮರಗಳ ಮರೆಯಲ್ಲಿ ಅಡಗಿದ ಊರು, ಅವುಗಳಿಂದ ಹೊರಡುವ ಅಡಿಗೆ ಹೊಗೆ, ಗೆರೆಯೆಳೆದಂತಹ ರಸ್ತೆಗಳು, ಎಂಬ್ರಾಯ್ಡಿರಿ ಮಾಡಿದಂತಿರುವ ಹೊಲ ಗದ್ದೆ ತೋಟ ಪಟ್ಟಿ-ಈ ಚಿತ್ರಗಳನ್ನೆಲ್ಲ  ಹಕ್ಕಿನೋಟದಲ್ಲಿ  ನೋಡುತ್ತ ಮನಸ್ಸಿನೊಳಗೆ ತುಂಬಿಕೊಳ್ಳುವುದು ಸಂತೋಷ ಕೊಡುತ್ತದೆ. ಇಂತಹ ನೋಟಕ್ಕೆ  ಹಿಮಾಲಯವೇ ಬೇಕಿಲ್ಲ. ನಮ್ಮೂರ ಸಣ್ಣಪುಟ್ಟ  ಬೆಟ್ಟಗಳೇ ಸಾಕು. ಈಗಲೂ ನಾಸಿಕಕ್ಕೆ ಹೋದರೆ ಮರಾಠಿ ಗೆಳೆಯರ ಜತೆ ಅಲ್ಲಿನ ಪಾಂಡವಲೇಣ ಬೆಟ್ಟವನ್ನು ಹತ್ತಿ ನಾನು ಆನಂದ ಪಡುತ್ತೇನೆ. ಕೊಳ್ಳೇಗಾಲದ ಸಿದ್ಧಯ್ಯನ ಬೆಟ್ಟದಲ್ಲಿಯೂ ಇಂತಹ ನೋಟವನ್ನು ಅಲ್ಲಿನ ಗೆಳೆಯರು ಕಾಣಿಸಿದ್ದಾರೆ. ಶಿವಗಂಗೆ ಮತ್ತು ದೇವರಾಯನ ದುರ್ಗದ ಶಿಖರಗಳಲ್ಲಿ ನಿಂತರೆ ತುಮಕೂರು ಸೀಮೆಯ ಇಡೀ ಕಲ್ಲುಬೆಟ್ಟಗಳ ಒಂದು ಭವ್ಯನೋಟ ಕಾಣುತ್ತದೆ. ಮೈಸೂರಲ್ಲಿದ್ದಾಗ ಅರಮನೆ ದೀಪಗಳು ಝಗ್ಗನೆ ಹತ್ತಿ ಉರಿಯುವುದನ್ನು ನೋಡಲೆಂದೇ ಚಾಮುಂಡಿ ಬೆಟ್ಟ ಹತ್ತಿಹೋಗುತ್ತಿದ್ದೆ. ನಿಜವಾಗಿಯೂ ಬೆಳಗುವ ಊರು ನೋಡಬೇಕಾದರೆ  ಮುಳ್ಯಯ್ಯನಗಿರಿಯಲ್ಲಿ ರಾತ್ರಿ ವಸ್ತಿ ಮಾಡಿ ಚಿಕ್ಕಮಗಳೂರನ್ನು ನೋಡಬೇಕು. ಲಕ್ಷಲಕ್ಷ ಬೆಳಕಿನ ಹುಳಗಳು ರೆಕ್ಕೆಕಡಿದುಕೊಂಡು ವಿಲವಿಲ ಒದ್ದಾಡುತ್ತಿರುವಂತೆ ಅದು ತೋರುತ್ತದೆ.

ನಾನು ಹತ್ತಬಯಸಿರುವ ಬೆಟ್ಟಗಳ ಪಟ್ಟಿಗೆ ಬಹುಶಃ ಒಂದು ಜನ್ಮ ಸಾಲದು. ಅವುಗಳಲ್ಲಿ ಕಾರಂತರ ಬೆಟ್ಟದ ಜೀವ ಕಾದಂಬರಿಯ ಕುಮಾರಪರ್ವತವೂ ಸೇರಿದೆ. ಯಾಕೋ ಏನೋ ಬರೀ ಕಲ್ಲಿನ ಕೋಡುಳ್ಳ ಬೆಟ್ಟಗಳನ್ನು ಹತ್ತಬೇಕೆಂದು ಅನಿಸುವುದಿಲ್ಲ. ಅವು ಜಾರಿಬೀಳಿಸಿ ಕೊಲ್ಲಲೆಂದೇ ನಿಂತ ಬಲಿಗಂಬಗಳಂತೆ ತೋರುತ್ತವೆ. ತ್ರ್ಯಂಬಕೇಶ್ವರ, ಮನ್ಮಾಡ್, ಕಲ್ಯಾಣ್ ಭಾಗದಲ್ಲಿ ಇಂತಹ ವಿಚಿತ್ರ ಬೆಟ್ಟಗಳಿವೆ. ಆದರೆ ಗಿಡಮರಗಳಿರುವ, ಹೂವು ಹಕ್ಕಿಯಿರುವ, ಜಲಧಾರೆಗಳಿರುವ ಬೆಟ್ಟಗಳು ಮನೆಯಂತೆಯೇ ಭಾಸವಾಗುತ್ತವೆ. ಅಲ್ಲಿ ದಾರಿತಪ್ಪಿದರೂ ದಾರಿ ಸಿಗುತ್ತದೆ. ನೀರಡಿಸಿದರೆ ನೀರು ಸಿಗುತ್ತದೆ. ಬಿದ್ದರೆ ಎತ್ತುವ ಯಾರಾದರೂ ಬರಬಹುದು. ಅವು ನಮ್ಮನ್ನು ತಮ್ಮಂತೆ ಬೆಳೆಯಲು ಪ್ರೇರಿಸುತ್ತವೆ. ಕೊಡಚಾದ್ರಿ, ಮುಳ್ಳಯ್ಯನಗಿರಿ, ಬಾಬಾಬುಡನಗಿರಿ, ಇವೆಲ್ಲ ಇಂತಹ ತಾಯ್ತನದ ಬೆಟ್ಟಗಳು. ಈ ವಿಷಯದಲ್ಲಿ ಹಿಮಾಲಯವೂ ತಾಯಿಯೇ. ಆದರೆ ಹಿಮಪಾತದಲ್ಲಿ ಸಿಕ್ಕಾಗ ಅದು ರಕ್ಕಸಿಯೂ ಆಗಬಲ್ಲದು.

(ಚಿತ್ರಗಳು- ಲೇಖಕರದು)