ಮನೆಗೆಲಸಕ್ಕೆ ಬರುತ್ತಿದ್ದ ಹುಲಿಗೆಮ್ಮ ಚುನಾವಣೆ ಒಂದುವಾರ ಇರುವಾಗಲೇ ನನ್ನ ಹೆಂಡತಿಗೆ ‘ಯಕೌ, ಎಂಟು ದಿನ ನಾನು ಬರಂಗಿಲ್ಲ. ಎಲೆಕ್ಷನ್ ಕೆಲಸಕ್ಕೆ ಹೋಗಬೇಕು’ ಎಂದು ನೋಟಿಸು ಕೊಟ್ಟಳು. ಹುಲಿಗೆಮ್ಮ ಮಾತ್ರವಲ್ಲ, ಹೊಸಪೇಟೆ ಬಳ್ಳಾರಿ ಭಾಗದ ಕೂಲಿಕುಂಬಳ ಮಾಡುವ ಬಹುತೇಕ ಜನ ಹೀಗೆ ನಿರಂಕುಶಮತಿಗಳಾಗಿದ್ದರು. ಮಾಡೋ ಬದುಕು ಬಿಟ್ಟು ಚುನಾವಣೆ ಕೆಲಸಕ್ಕೆ ಹೋಗಿದ್ದರು. ಮೇಸ್ತ್ರಿಗಳನ್ನು ಕೇರ್ ಮಾಡದೆ ಬೇಲ್ದಾರರು ರಜೆ ಘೋಷಿಸಿದ ಕಾರಣ, ಮನೆಕಟ್ಟುವ ಕಾಮಗಾರಿಗಳು ನಿಂತವು. ಮಾವಿನಮಂಡಿಯವರು ‘ಮರದಾಗೆ ಕಾಯೆಲ್ಲ ಹಣ್ಣಾಗಿ ಉದುರ್‍ತಾ ಇದೆ. ಕೀಳೋಕೆ ಜನ ಇಲ್ದಂಗಾಗಿದೆ. ಈ ಸುಡುಗಾಡು ಎಲೆಕ್ಷನ್ನು ಯಾವಾಗ ಮುಗೀತೈತೊ ಏನೊ’ ಎಂದು ಅವಲತ್ತುಕೊಳ್ಳುತ್ತಿದ್ದರು. ಮಾಗಾಣಿ ಕೆಲಸಗಳಿಗೆ ಕೇಳುವವರಿಲ್ಲವಾಗಿ ಕಟಾವಿಗೆ ಬಂದ ಕಬ್ಬು ಒಣಗತೊಡಗಿತು. ಚಪ್ಪಲಿ ಹೊಲಿಯುವರಿಂದ ಹಿಡಿದು ಅಂಗಡಿಗಳಲ್ಲಿ ಕೆಲಸ ಮಾಡುವ ಹುಡುಗರ ತನಕ, ಎಲ್ಲರಿಗೂ ಎಲೆಕ್ಷನ್ ಡೂಟಿ. ಈ ಭಾಗದ ಹಳ್ಳಿಗಳಲ್ಲಿ ಮತ್ತು ಪಟ್ಟಣದ ಕೆಳವರ್ಗಗಳು ವಾಸಿಸುವ ಕಾಲನಿಗಳಲ್ಲಿ, ಜನ ಕ್ಯಾಂಪೇನಿಗೆ ಹೋಗಿ ದಿನಕ್ಕೆ ಇನ್ನೂರು ಮುನ್ನೂರು ಗಳಿಸುತ್ತಿದ್ದರು. ಗಲ್ಲಿತುದಿಯ ತಟ್ಟಿ ಹೋಟಲಲ್ಲಿ ಕೂತು ಚಂಗು ಹೊಡೆಯುತ್ತಿದ್ದ  ‘ಗಣಮಕ್ಕಳು’ ಮರಿನಾಯಕರಾಗಿ ಅಭ್ಯರ್ಥಿಗಳಿಂದ ರೊಕ್ಕ ತರುವುದು, ಓಟರ್ ಲಿಸ್ಟು ಇಟ್ಟುಕೊಂಡು  ಹಂಚುವುದು ಮಾಡತೊಡಗಿದರು. ಈ ಹಂಚುವ ಕೆಲಸ ಕಲ್ಲುನೀರು ಕರಗೊ ಹೊತ್ತಲ್ಲಿ ನಡೆಯುತ್ತಿದ್ದ ಕಾರಣ, ಹದಿನೈದು ದಿನಗಳ ಕಾಲ ಜನ ಸರಿಯಾಗಿ ನಿದ್ದೆ  ಮಾಡಲಿಲ್ಲ.

ಜನರಿಗೆ ಚುನಾವಣೆ ಹೊಸದಲ್ಲ. ಆದರೆ ಈ ಸಲದ ಚುನಾವಣೆ ಬಡವರಿಗೆ ಜಾತ್ರೆ ಬಂದುಹೋದ ಅನುಭವ ಕೊಟ್ಟಿದೆ.  ಇದಕ್ಕೆ ಕಾರಣ ಬಳ್ಳಾರಿ ಜಿಲ್ಲೆಯಲ್ಲಿ ಮೈನ್ಸ್ ಓನರುಗಳು ಚುನಾವಣೆಗೆ ನಿಂತುಕೊಂಡು ಸ್ಪರ್ಧೆಯ ಮೇಲೆ ರೊಕ್ಕವನ್ನು ತೂರಾಡಿದ್ದು. ಅದರಲ್ಲೂ ಹೊಸಪೇಟೆಯಲ್ಲಿ (ವಿಜಯನಗರ ಕ್ಷೇತ್ರ) ಬಿಜೆಪಿ, ಕಾಂಗ್ರೆಸ್ ಪಕ್ಷೇತರ ಮೂವರೂ ಗಣಿಧಣಿಗಳಾದ ಕಾರಣ, ರೊಕ್ಕದ ಸೂರೆಹೊಡೆಯಲು ಸ್ಪರ್ಧೆ ಏರ್ಪಟ್ಟಿತ್ತು. ಮೂರೂ ಅಭ್ಯರ್ಥಿಗಳಿಂದ ತಲಾ ಓಟಿಗೆ ಸಾವಿರದಿಂದ ಮೂರು ಸಾವಿರದವರೆಗೆ ಹಂಚಿಕೆಯಾಗಿದೆ. ಇಲ್ಲಿನ ಜನರ ಬದುಕಿನಲ್ಲ್ಲಿ ಎಲೆಕ್ಷನ್ ರೊಕ್ಕವು ವಿಚಿತ್ರ ಸಂಚಲನಗಳನ್ನು ಸೃಷ್ಟಿಮಾಡಿದ್ದು, ಕೆಲವು ಸ್ಯಾಂಪಲ್ಲುಗಳು ಹೀಗಿವೆ:

೧. ಸಾಮಾನ್ಯವಾಗಿ ಆಯಾ ವಾರ್ಡಿನ ಜನ ಬೆಳಬೆಳಿಗ್ಗೆ ಊಟಮಾಡಿ ಒಬ್ಬ ಸೇರೆಗಾರನ ಅಡಿಯಲ್ಲಿ ಸೇರುತ್ತಿದ್ದರು. ಆತ ತಲೆಯೆಣಿಸಿ, ಅಭ್ಯರ್ಥಿಯ ಮುಂದೆ ಪೆರೇಡ್ ಮಾಡಿಸಿ, ನಂತರ ಕ್ಯಾಂಪೇನಿಗೆ ಊರುಸುತ್ತಲು ಕರೆದುಕೊಂಡು ಹೋಗುತ್ತಿದ್ದನು. ಸಂಜೆ ಮತ್ತೆ ತಲೆಎಣಿಸಿದ ಬಳಿಕ ಬಟವಾಡೆ ಆಗುತ್ತಿತ್ತು. ಇದರಲ್ಲಿ ದುಡ್ಡಿನಾಸೆಯಿಂದ ಕ್ಯಾಂಪೇನಿಗೆ ಸೇರಿಕೊಂಡ ಮುದುಕರ ಪಾಡು ವಿಚಿತ್ರವಾಗಿತ್ತು. ಬೀದಿ ಸುತ್ತಲು ತ್ರಾಣವಿಲ್ಲ. ಮನೆಯಲ್ಲಿ ಕೂತರೆ ಕಾಸಿಲ್ಲ. ಈ ದಂದುಗದಲ್ಲಿ ಕೆಲವು ಎದ್ದುಬಿದ್ದು ಮೆರವಣಿಗೆ ಹೋಗಿ ಅಲ್ಲಲ್ಲಿ ಕೂತು ಸುಧಾರಿಸಿಕೊಂಡು ಹೇಗೋ ಸಂಜೆಗೆ ಬಟವಾಡೆ ಪಡೆಯುತ್ತಿದ್ದವು. ಅದರಲ್ಲೂ ಕೆಲವು ಸೇರೆಗಾರರು ಕೈಚಳ ತೋರಿದರು. ನಮ್ಮ ಕಾಯಿಪಲ್ಲೆ ಮಾರುವ ಮುದುಕಿ ಯಮನೂರಮ್ಮ, ಮೂರು ದಿನ ಕ್ಯಾಂಪೇನಿಗೆ ಹೋಗಿದ್ದಳು. ಕೊನೆಯದಿನ ಎಲ್ಲ ಸೇರಿಸಿ ಒಟ್ಟಿಗೆ ಕೊಡುತ್ತೇನೆಂದ ಸೇರೆಗಾರನು ಕೈಕೊಟ್ಟಿದ್ದ. ‘ತಿಕ್ಕ, ಬರದೆ ಎಲ್ಲಿಗೆ ಹೋಗ್ತಾನ’ ಎಂದು ಆಕೆ ಹೊರಸಿನ ಮೇಲೆ ಕುಂತು ಕಾಯುತ್ತಿದ್ದಳು. ಇದರಲ್ಲಿ ಅನ್ಯಾಯವಾಗಿದ್ದು ಎಲೆಕ್ಷನ್ ಗುರುತಿನ ಕಾರ್ಡಿದ್ದೂ ಓಟರ್‌ಲಿಸ್ಟಲ್ಲಿ ಹೆಸರಿಲ್ಲದರಿಗೆ ಮತ್ತು ೧೮ ವರ್ಷವಾದರೂ ಹೆಸರನ್ನು ಸೇರಿಸದವರಿಗೆ; ಅವರು ಲಿಸ್ಟಿನಲ್ಲಿ ಹೆಸರು ಸೇರಿಸಲು ಹರಸಾಹಸ ಮಾಡಿ ಸುಮ್ಮನಾದರು. ಸೂಟಿಯಿದ್ದುದರಿಂದ, ಸಾಲೆ ಹುಡುಗರು ಕ್ಯಾಂಪೇನಿನಲ್ಲಿ ‘ವೋಟ್ ಫಾರ್’ ಕೂಗಿ ದಿನಕ್ಕೆ ಐವತ್ತರಂತೆ ನಾನೂರಷ್ಟು ಸಂಪಾದನೆ ಮಾಡಿಕೊಂಡವು. ಕೆಲವು ಮಾಡಿದ ಸಂಪಾದನೆ ಶೂನ್ಯವಾಗುವ ತನಕ ಮನೆಗೇ ಬಾರದೆ ದಿನದ ನಾಲ್ಕು ಶೂ ತೆಲುಗು ಸಿನಿಮಾ ನೋಡಿಕೊಂಡಿದ್ದವು. ಕಡೆಗೆ ತಂದೆ ತಾಯಿಗಳು ಹುಡುಕಿ ಅವನ್ನು ಥಿಯೇಟರಿನಿಂದ ಒದ್ದು ಎಳೆದುಕೊಂಡು ಬರಬೇಕಾಯಿತು.

೨. ಮೂರೂ ಅಭ್ಯರ್ಥಿಗಳು ಸಮಾನ ಮೊತ್ತದ ಹಣ ಹಂಚಿರುವ ಕಡೆ, ಯಾರಿಗೆ ಮತ ಎಂದು ಮತದಾರರಲ್ಲಿ ಧರ್ಮಸಂಕಟ ಹುಟ್ಟಿತು. ಇದರ ಸುಳಿವನ್ನು ಅರಿತ ಒಂದು ಪಕ್ಷವು ಹೆಚ್ಚುವರಿಯಾಗಿ ೨೦೦ ಬಟವಾಡೆ ಮಾಡಿ ಅವರನ್ನು ಧರ್ಮಸಂಕಟದಿಂದ ಪಾರುಮಾಡಿತು. ಆದರೆ ಮೊತ್ತ ಸಮಾನಾಗಿ ಹಂಚಿಕೆಯಾಗಿರುವ ಕಡೆ ಕೆಲವರು, ಒಬ್ಬರಿಗೆ ಓಟು ಕೊಟ್ಟರೆ ಉಳಿದಿಬ್ಬರಿಗೆ ಅನ್ಯಾಯವಾಗುತ್ತದಲ್ಲಾ ಎಂದು, ಕುಟುಂಬದ ಒಬ್ಬೊಬ್ಬ ಸದಸ್ಯರು  ಒಬೊಬ್ಬರಿಗೆ ಓಟು ಹಾಕಬೇಕೆಂದು ಸಮಾನತಾವಾದಿ ತೀರ್ಮಾನ ಕೈಗೊಂಡರು.

೩. ಓಣಿಗಳ ತುದಿಗೆ ರಸ್ತಮೇಲಿದ್ದ ಕಟ್ಟೆ ಮತ್ತು ಮಂಡಾಳು ಮಿರ್ಚಿ ಹೋಟಲುಗಳಲ್ಲಿ ವಯಸ್ಸಿಗನುಸಾರವಾದ ಸಣ್ಣಪುಟ್ಟ ಪಾರ್ಲಿಮೆಂಟುಗಳು ಏರ್ಪಟ್ಟು ಗಾಢ ಚರ್ಚೆಗಳು ನಡೆದವು. ಚರ್ಚೆಯ ಅಜೆಂಡಾಗಳೆಂದರೆ- ಬೇರೆಬೇರೆ ಕಡೆ ಓಟಿನ ಧಾರಣೆ ಹೇಗೆ ನಡೆದಿದೆ ಎಂಬುದರ ತೌಲನಿಕ ಸಮೀಕ್ಷೆ ಮಾಡುವುದು, ಎಲ್ಲೊ ಒಂದುಕಡೆ ಮೂರು ಸಾವಿರ ಕೊಟ್ಟರಂತಲ್ಲ ಎಂದು ಕರುಬುವುದು, ನಡುವಿನವರು ರೊಕ್ಕ ತಿಂದು ತಮಗೆ ಕಡಿಮೆ ಕೊಟ್ಟರು ಎಂದು ಶಪಿಸುವುದು, ‘ಹೊಲವಿದ್ದವರಿಗೆ ಬೋರವೆಲ್ಲಂತೆ, ಸೈಟಿದ್ದವರಿಗೆ ಮನೆ ಕಟ್ಟುವುದಕ್ಕೆ ಸ್ವಾಮಾನಂತೆ’ ಎಂದೆಲ್ಲ ಹಬ್ಬಿರುವ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲನೆ ಮಾಡುವುದು -ಇತ್ಯಾದಿ.

೪. ಒಂದು ಪಕ್ಷದವರು ಹಣಹಂಚುವಾಗ ಎದುರು ಪಕ್ಷದವರು ಪೋಲಿಸರಿಗೆ ತಿಳಿಸಿ ಬಡವಾಡೆ ನಿಲ್ಲಿಸುವುದು, ಇಲ್ಲವೇ ಹಂಚುವವರು ತಮ್ಮಲ್ಲೆಬ್ಬನಿಗೆ ‘ಜೀಪು ಬಂತ್ರಲೇ’ ಎಂದು ಗುಲ್ಲೆಬ್ಬಿಸಿ ಹಂಚಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಓಡಿಹೋಗುವಂತೆ ಮಾಡುವುದು, ಈ ಆಟವನ್ನು ಪತ್ತೆ ಹಚ್ಚಿದ ಮತದಾರ ಪ್ರಭುಗಳು ಕೆನಾಲ್ ಪಕ್ಕ ಬೀರು ಕುಡಿದು ಚಿಕನ್ ಫ್ರೈ ತಿನ್ನುತ್ತ ಕುಳಿತಿದ್ದ ಹಂಚಿಕೆದಾರರನ್ನು ಹುಡುಕಿ ಎಳೆತಂದು ಮರುಹಂಚಿಕೆ ಮಾಡಿಸುವುದು- ಇತ್ಯಾದಿ ಪ್ರಕರಣಗಳು ನಡೆದವು. ಕೈಗೆ ಚೈನು, ಓಡಿಸಲು ಪಲ್ಸರ್ ಪಡೆದ ಪಡ್ಡೆಗಳು ಬೆಳಕು ಹರಿಯುವುದರೊಳಗೆ ಹುಡುಗಿಯರು ಗಮನಿಸತಕ್ಕ   ಹೀರೋಗಳಾದರು.

೬. ಗೃಹಿಣಿಯರು ಜೀವನದಲ್ಲಿ ಮೊದಲ ಸಲ ಕಂಡಿರುವ ಮೈನಿಂಗಿನ ಬಣ್ಣ ಎರೆದುಕೊಂಡು ಬಂದಂತಹ ಕೆಂಗರಿಗರಿ ಸಾವಿರದ ನೋಟನ್ನು ಮುರಿಸಲು ಮನಸ್ಸಾಗದೆ ಟ್ರಂಕಿನಲ್ಲಿ ಭದ್ರಪಡಿಸಿದರು. ಆದರೆ ಕೆಲವು ಮತದಾರ ಪ್ರಭುಗಳು ಮಾತ್ರ ಆ ನೋಟುಗಳ ಜಂಬವನ್ನು ಸರಿಯಾಗಿ ಇಳಿಸಿದರು. ಉದಾಹರಣೆಗೆ- ಸಣ್ಣಪುಟ್ಟ ದೂರಕ್ಕೆಲ್ಲ ಆಟೊ ಬಳಸಲಾರಂಭಿಸಿದ ಅವರು,  ಆಟೊ ಇಳಿದ ಮೇಲೆ ಸಾವಿರದ ನೋಟನ್ನು ಚಾಚಿ ‘ಚಿಲ್ರೆ ಕೊಡೊ’ ಎಂದು ಆಟೋದವರಿಗೆ ಕಕ್ಕಾಬಿಕ್ಕಿ ಮಾಡುವುದು; ಒಂದು ಮಿರ್ಚಿ ಒಂದು ಕೇಟಿ ಕುಡಿದು ಐನೂರ ನೋಟನ್ನು ಡಬ್ಬ ಹೋಟೆಲಿನವನಿಗೆ ಮುಂದೆ ಹಿಡಿಯುವುದು ಇತ್ಯಾದಿ. ಅವರಾದರೂ ಚಿಲ್ಲರೆ ಎಲ್ಲಿಂದ ತರಬೇಕು? ‘ಇನ್ನೊಂದಿನ ಕೊಡುವಂತೆ ಹೋಗಣ್ಣೊ’ ಎನ್ನಬೇಕಾಯಿತು.

೭. ಎಣ್ಣೆಪಾರ್ಟಿಗಳಿಗೆ ಎಲೆಕ್ಷನ್ನು ಹಬ್ಬ ಬಂತಂತಾಗಿತ್ತು. ಅದರಲ್ಲೂ ಈಸಲ ದೊಡ್ಡ ನೋಟುಗಳು ಸಿಕ್ಕ ಕಾರಣ, ತಮ್ಮ ಪಾಲಿನ ರೊಕ್ಕವನ್ನು ತಮಗೆ ಕೊಟ್ಟುಬಿಡಬೇಕೆಂದು ಹಠಹಿಡಿದು ಮಡದಿಯರಿಂದ ವಸೂಲಿಮಾಡಿ, ಅದು ಮುಗಿಯುವ ತನಕ ಕೆಲವರು ಮನೆಕಡೆ ತಲೆಹಾಕಲಿಲ್ಲ. ಬಾರುಗಳು ತುಂಬಿತುಳುಕಿದವು. ಓಟಿಂಗಿನ ದಿನ ಮದ್ಯನಿಷೇಧ ಇದ್ದುದರಿಂದ ಮೂರುಪಟ್ಟು ಕೊಟ್ಟು ಬ್ಲಾಕಿನಲ್ಲಿ ಕೊಂಡುಕೊಳ್ಳಲು ಅವರು ಹಿಂಜರಿಯಲಿಲ್ಲ. ‘ಮಾಲು ಸಿಕ್ಕುತ್ತಿಲ್ಲ’ ಎಂದಾಗಲೇ ಹಾಳುಚಟ ಸತಾಯಿಸುತ್ತದೆ. ಚುನಾವಣೆ ಮುಗಿದ ಮಾರನೆ ದಿನ ಕೆಲವರು ಎಷ್ಟು ತವಿಸಿದ್ದರೆಂದರೆ, ವೈನ್‌ಶಾಪು ತೆಗೆಯುವ ಮೊದಲೇ ರೇಶನ್ನಿಗೆ ಜಮಾಯಿಸುವಂತೆ ಸೇರಿದ್ದರು. ಅವಸರದಲ್ಲಿ ‘ರಾ’ಕುಡಿದು ಬಿದ್ದುಹೋದಾರೆಂದು ಅಂಗಡಿಯವರು ಮಿಕ್ಸ್ ಮಾಡಿಕೊಳ್ಳಲು ಒಂದು ದೊಡ್ಡ ಡ್ರಮ್ಮಿನಲ್ಲಿ ನೀರುತುಂಬಿ ತಂಬಿಗೆ ಲೋಟಗಳನ್ನು ಇಟ್ಟಿದ್ದರು.

೮. ತನ್ನ ಓಟಿನ ರೊಕ್ಕವನ್ನು ಕೊಡಲು ನಿರಾಕರಿಸಿದ ಹೆಂಡತಿಯನ್ನು ಗಂಡಂದಿರು ಹೊಡೆದು ಕೌಟುಂಬಿಕ ಕಲಹಗಳು ಕಾಣಿಸಿಕೊಂಡು, ಜಖಂ ಆದ ಪ್ರಕರಣಗಳು ನಡೆದವು. ಆದರೆ ಕೆಲವು ಜಾಣ ಹೆಂಗಸರು ಗಂಡಸರಿಂದ ರೊಕ್ಕ ಉಪಾಯವಾಗಿ ಕಿತ್ತುಕೊಂಡು, ಕೈಖರ್ಚಿಗೆ ಐವತ್ತು ಕೊಟ್ಟು, ರೊಕ್ಕ ಮನೆಯಲ್ಲಿದ್ದರೆ ಉಳಿಯುವುದು ಕಷ್ಟವೆಂದು ಬೇಕಾದ ಸ್ವಾಮಾನು ಸರಂಜಾಮು ಖರೀದಿ ಮಾಡಿದರು; ಒಂದು ವಾರದಿಂದ ಹೊಸಪೇಟೆಯ ಬಜಾರದಲ್ಲಿ ತಿರುಗಲು ಜಾಗವಿಲ್ಲ. ಅಂಗಡಿಗಳಲ್ಲಿ ಕಾಲಿಡಲು ತಾವಿಲ್ಲ. ಅತಿ ಹೆಚ್ಚು ಖರೀದಿ ಆಗಿರುವುದು ಬಂಗಾರ, ಮೊಬೈಲು, ಕಬ್ಬಿಣದ ಬೀರು, ಕಲರ್‌ಟಿವಿ, ಪಾತ್ರೆ, ಬಟ್ಟೆ ಮತ್ತು ಮಾಂಸ. ಮಟನ್‌ಚಿಕನ್ ಅಂಗಡಿಗಳಲ್ಲಿ ‘ಯೆಯ್ ಸಾಬರೆ, ಆ ತೊಡೆ ಎಷ್ಟೈತಿ ಅಷ್ಟೂ ತೂಗರಿ’ ಎಂದು ಖರೀದಿ ಮಾಡುವವರು ಬಂದು, ಕೆಜಿ ಅರ್ಧಕೇಜಿಯ ಮಾಮೂಲು ಗಿರಾಕಿಗಳನ್ನು ಅಂಗಡಿಯ ಮಾಲೀಕರು  ‘ಇನ್ನೊಂದು ವಾರ ಈಕಡೆ ಬರಬೇಡಿ’ ಎಂದು ಬುದ್ದಿಹೇಳಿ ಕಳಿಸಬೇಕಾಯಿತು.

೯. ಈ ಸಲದ ಎಲೆಕ್ಷನ್ನಿನಲ್ಲಿ ಬಡವರ ದೇವರುಗಳೂ ಫಲಾನುಭವಿಗಳಾದವು. ಹುಲಿಗೆಮ್ಮ, ಗಾಳೆಮ್ಮ, ಮಾಸ್ತ್ಯಮ್ಮ, ಮಾಬೂಸುಬಾನಿ ಮುಂತಾದ ಬೀದಿ ದೇವರುಗಳು ಮನೆಗಳ ಆಸುಪಾಸಿನ ಬೇವಿನ ಮರದಡಿ ತ್ರೀಬೈಫೋರ್ ಗೂಡಿನಲ್ಲಿ ವಾಸವಾಗಿದ್ದವು. ಈಗ ಅವಕ್ಕೆಲ್ಲ ದೊಡ್ಡ ಕಟ್ಟಡ ಕಟ್ಟಿಸಿಕೊಡುವುದಾಗಿ ಅಭ್ಯರ್ಥಿಗಳು ಪ್ರಮಾಣ ಮಾಡಿ ಹೋಗಿದ್ದು, ಅವು ಟೈಲ್ಸು, ಲೈಟು, ಪೈಂಟಿಂಗು, ಗೋಪುರಗಳಿಗೆ ಕಾಯುತ್ತಿವೆ.

೧೦. ‘ಈ ಸಲ ಯಾರಿಗೆ ಹಾಕ್ತೀರಿ’ ಎಂದು ಕೇಳಿದವರಿಗೆ ‘ನೋಡಬೇಕು’ ಎಂತಲೊ, ‘ಯಾರಿಗೆ ಹಾಕಿದರೆ ಒಳ್ಳೇದು?’ ಎಂದು  ಮರುಪ್ರಶ್ನೆ ಹಾಕುತ್ತಲೊ, ಅಮಾಯಕತೆ ನಟಿಸುತ್ತ ಧ್ವನಿಪೂರ್ಣವಾದ ಭಾಷೆಯಲ್ಲಿ ಅಸ್ಪಷ್ಟ ಉತ್ತರಕೊಡುತ್ತ ಕೆಲವರು ಬಹುರೂಪಿಗಳಾದರು.

ಇವನ್ನೆಲ್ಲ ನೋಡುವಾಗ ದೇವನೂರರ ‘ಮಾರಿಕೊಂಡವರು’ ಕತೆ ನೆನಪಾಗುತ್ತದೆ. ಈ ಸಲದ ಚುನಾವಣೆಯಲ್ಲಿ ಬಡಜನರು ಯಾರಿಗೆ ಓಟು ಹಾಕಿದ್ದಾರೊ ತಿಳಿಯದು, ಆದರೆ ಓಟನ್ನು ಒಳ್ಳೆಯ ಬೆಲೆಗೆ ಮಾರಿಕೊಂಡಿದ್ದು ಮಾತ್ರ ನಿಜ. ಎಂತಹ ಬೆಲೆಗೆಂದರೆ, ಮುಂದಿನ ಸಲ ಯಾರಾದರೂ ನೂರಿನ್ನೂರು ಕೊಡಲು ಬಂದರೆ ‘ಏನಂತ ತಿಳ್ಕೊಂಡಿದ್ದಿಯಾ ಓಟ?’ ಅಂತ ಅವನಿಗೆ ನಾಯಿಗೆ ಒದ್ದಂತೆ ಒದ್ದು ಓಡಿಸಿದರೆ ಆಶ್ಚರ್ಯವಿಲ್ಲ.

ಆದರೂ ಈ ಜನರನ್ನು  ‘ಮಾರಿಕೊಂಡವರು’ ಎನ್ನಬಹುದೇ? ಈಸಲ ಎಲ್ಲರಿಗೂ ಗೊತ್ತಿರುವಂತೆ ಟಿಕೇಟುಗಳನ್ನು ಹೆಚ್ಚುಕಡಿಮೆ ಎಲ್ಲ ಪಕ್ಷಗಳು ಉಳ್ಳವರಿಗೆ ಮಾರಾಟ ಮಾಡಿಕೊಂಡವು; ನಗರಸಭೆ ಚುನಾವಣೆಗಳಲ್ಲಿ ಸೋತ ಗೆದ್ದ ಸದಸ್ಯರು ತಾವೂ ನಾಮಪತ್ರ ಸಲ್ಲಿಸಿ ತಾವು ಪಡೆದ ಓಟುಗಳ ಸಾಕ್ಷ್ಯ ಕೊಟ್ಟು, ವಾರ್ಡುಗಳನ್ನೇ ಮಾರಿ ನಾಮಪತ್ರ ವಾಪಾಸು ಪಡೆದುಕೊಂಡರು; ಪಕ್ಷವೇ ಘೋಷಿಸಿದ ಅಧಿಕೃತ ಅಭ್ಯರ್ಥಿ ಗಣಿದೊರೆಗಳ ಪರವಾಗಿ ನಾಮಪತ್ರ ವಾಪಾಸು ಪಡೆಯಲು ಸಂಭಾವನೆ ಕೋಟಿಯ ತನಕ ಹೋಗಿದೆಯಂತೆ; ವಿಭಿನ್ನ ಸಮುದಾಯಗಳ ನಾಯಕರು ‘ನಮ್ಮ ಸಮಾಜದ ಓಟು ನಿಮಗೆ ಹಾಕಿಸುತ್ತೇನೆ’ ಎಂದು ಕಮ್ಯುನಿಟಿಗಳನ್ನು ಮಾರಿಕೊಂಡರು.  (ಹೊಸಪೇಟೆಯಲ್ಲಿ ಕೆಲವು ಮುಸ್ಲಿಮರು ‘ಬಿಜೆಪಿ ಅಭ್ಯರ್ಥಿ ಬಹಳ ಒಳ್ಳೆಯವರು’ ಎಂದು ಪತ್ರಿಕೆಯಲ್ಲಿ ಪ್ರಕಟಣೆಯನ್ನೆ ಹೊರಡಿಸಿದ್ದರು);  ‘ಹಣ ಹಂಚಲು ದಯವಿಟ್ಟು ಅಡ್ಡಿಮಾಡಬೇಡಿ’ ಎಂದು ಎಲ್ಲ ಗಣಿಗಾರ ಅಭ್ಯರ್ಥಿಗಳು  ಪೋಲಿಸರಿಗೆ ಎಂದು ಮುಂಗಡವಾಗಿ ಗೌರವ ಸಂಭಾವನೆ ಕೊಟ್ಟಿರುವ ಸುದ್ದಿಗಳಿವೆ. ಇನ್ನು ಹೀಗೆಲ್ಲ ಆಯ್ಕೆಗೊಂಡ ಶಾಸಕರು ಸೇರಿ ರಚಿಸುವ ಸರ್ಕಾರಗಳು ನಾಡಿನ ಅದಿರು, ಭೂಮಿ, ನೀರು, ಮಾರುಕಟ್ಟೆಗಳನ್ನು ಬಲಿಷ್ಠ ದೇಶಗಳಿಗೆ ವಿಶ್ವಬ್ಯಾಂಕಿಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಿಕೊಳ್ಳುತ್ತವೆ. ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲವೂ ಮಾರಾಟದ ವಸ್ತುವಾಗಿರುವಂತೆ ಓಟುಗಳೂ ಮಾರಾಟಗೊಂಡಿವೆ.

ಆದರೆ ಈ ಅಕ್ರಮ ಚುನಾವಣೆ ಅನೈತಿಕ ಡೆಮಾಕ್ರಸಿಗೆ ಜನರು ಮಾತ್ರ ಹೊಣೆಗಾರರೇ? ಎಲೆಕ್ಷನ್ ಮುಗಿದ ಬಳಿಕ ಐದುವರ್ಷ ಕ್ಯಾರೆಯೆನ್ನದ ಶಾಸಕರು ದೀನರಾಗಿ ತಮ್ಮ ಮನೆಬಾಗಿಲಿಗೆ ಬಂದಾಗ, ಅವರ ಅಕ್ರಮ ಗಳಿಕೆಯ ಹಣವನ್ನು ಪಡೆದಿರುವ ಜನರನ್ನು ಅಪರಾಧಿಗಳೆಂಬಂತೆ ನೋಡುವುದು ಸರಿಯೇ? ಹಿಂದೆ ಯಾವ ಪ್ರಲೋಭನೆಗೂ ಈಡಾಗದೆ ಅವರು ಪ್ರಾಮಾಣಿಕರಾಗಿ ಮತಚಲಾಯಿಸಿ ಪಡೆದ ಭಾಗ್ಯವಾದರೂ ಏನು? ಇಷ್ಟಕ್ಕೂ ಅವರೀಗ ಸ್ವೀಕರಿಸಿರುವ ಹಣ ಎಲ್ಲಿಂದ ಬಂದಿದ್ದು? ನಾಡಿನ ಸಂಪತ್ತನ್ನು ಕೆಲವರೇ ದೋಚಿ ಸಂಗ್ರಹಿಸಿದ್ದರಿಂದ ಬಂದದ್ದು.  ಈ ಸಂಪತ್ತಿನ ಫಲ ಎಲ್ಲರಿಗೂ ಹಂಚಿಕೆಯಾಗಿದ್ದರೆ ಜನ ತಮ್ಮ ಓಟನ್ನು ಮಾರಿಕೊಳ್ಳುವ ಸ್ಥಿತಿ ಬರುತ್ತಿತ್ತೇ? ವರ್ಷವಿಡೀ ಮೈಮುರಿದು ದುಡಿದರೂ ಸುಖಕಾಣದ ಜನ ಒಂದು ವಾರ ಕಾಲ ಸಣ್ಣಪುಟ್ಟ ಸುಳ್ಳು ಹೇಳಿ ಸುಖ ಅನುಭವಿಸಿದ್ದು ತಪ್ಪೇ?

ರೊಕ್ಕದ ಕೊಳಚೆ ಆದರೆ ಜನರ ಪರವಾಗಿ ಮಾಡುವ ಈ ವಾದವು ಅವರ ಕ್ರಿಯೆಗಳನ್ನೆಲ್ಲ  ರೊಮ್ಯಾಂಟಿಸೈಜ್ ಮಾಡುತ್ತ ಹೋಗುತ್ತ, ಅವರ ‘ದೋಷ’ಗಳನ್ನು ನ್ಯಾಯಬದ್ಧಗೊಳಿಸುತ್ತ ಹೋಗುತ್ತದೆ. ಉಳ್ಳವರು ಎಲೆಕ್ಷನ್ನಿಗೆ ನಿಂತು ರೊಕ್ಕ ಚೆಲ್ಲುವುದನ್ನೆ ಸಾಹಸವೆಂಬಂತೆ ಚರ್ಚಿಸುವುದು, ಅವರಿಗೆ ಈ ಹಣ ಹೇಗೆಬಂತೆಂದು ಕೇಳಿಕೊಳ್ಳದಿರುವುದು, ಓಟನ್ನು ಮಾರಿಕೊಳ್ಳುವುದು ಅಂತಿಮವಾಗಿ ಚುನಾವಣಾ ರಾಜಕಾರಣವನ್ನು ಉಳ್ಳವರ ಆಡೊಂಬಲ ಮಾಡಿದೆ. ಬೇರೆಲ್ಲ ಕಡೆ ಹೇಗೊ, ಬಳ್ಳಾರಿ ಸೀಮೆಯಲ್ಲಂತೂ ರೊಕ್ಕಚೆಲ್ಲುವವರು ಮಾತ್ರ ಗೆಲ್ಲುವ ರಾಜಕೀಯ ಸಂಸ್ಕೃತಿಯೊಂದು ಬೇರೂರಿದೆ. ಇದಕ್ಕೆ ಜನರೂ ಅರ್ಧಕಾರಣ. ಆದರೂ ಅವರನ್ನು ಕರಪ್ಟಾದರೆಂದು ತೀರ್ಪುಕೊಡುವುದು ಕಷ್ಟ. ಯಾಕೆಂದರೆ ಅವರು ಎಲ್ಲ ಅಭ್ಯರ್ಥಿಗಳಿಂದ ಕಾಸುಕಿತ್ತುಕೊಂಡು, ತಮಗೆ ಬೇಕಾದವರಿಗೆ ಹಾಕಿ, ಇನ್ಯಾರದೊ ಮಗ್ಗುಲು ಮುರಿದಿರುವ ಸಾಧ್ಯತೆಯಿದೆ. ರಿಸಲ್ಟಿನ ತನಕ ಕಾದು ನೋಡಬೇಕು.

ಹೀಗೆ ಚುನಾವಣೆಗಳ ಸರಿ ತಪ್ಪುಗಳ ಮೇಲೆ ಧೇನಿಸುತ್ತ ಇರುವಾಗ, ಎಲೆಕ್ಷನ್ ಮುಗಿಸಿಕೊಂಡು ಹುಲಿಗೆಮ್ಮ ಸಂತೋಷ ಚೆಲ್ಲುವ ಮೊಗದಿಂದ ಮನೆಗೆಲಸಕ್ಕೆ ಮರಳಿ ಬಂದಳು. ಅವಳು ಬಹುಕಾಲದಿಂದ ಒತ್ತೆ ಬಿದ್ದಿದ್ದ ತನ್ನ ಲಗ್ನದ ಬೆಳ್ಳಿಚೈನು ಮತ್ತು ಬೆಂಡೋಲೆಗಳನ್ನು ಬಿಡಿಸಿ ಹಾಕಿಕೊಂಡು ಬಂದಿದ್ದಳು. ‘ಯಕ್ಕಾ, ಒಂದು ಟಿಜೋರಿ ತಗಂಡಿದೀನಿ. ಕೈಸಾಲ ಇದ್ದವು. ಅವನ್ನ ತೀರಿಸಿದೆ. ಇನೊಂದು ಸಾವಿರ ಉಳದೀತಿ. ಮಗಳು ಹಡಿಯಕೆ ಬರ್ತಾಳೆ. ನಮ್ಮವ್ವನಿಗೆ ಡಾಕ್ಟರಿಗೆ ತೋರಿಸಬೇಕು’ ಎಂದು ಒಳಗೆ ವರದಿ ಒಪ್ಪಿಸುತ್ತಿದ್ದಳು. ಚುನಾವಣೆಗಳು ನಮ್ಮ ಡೆಮಾಕ್ರಸಿಯ ಸ್ವರೂಪವನ್ನು ಮಾತ್ರವಲ್ಲ, ಅಪಾರ ಸಂಪತ್ತು ತುಂಬಿದ ದೇಶದಲ್ಲಿ ಅಪಾರ ಸಂಖ್ಯೆಯ ಅಸಹಾಯಕ  ಜನರನ್ನು ಸೃಷ್ಟಿಸಿರುವ ವೈರುಧ್ಯಮಯ ವ್ಯವಸ್ಥೆಯನ್ನೂ ಬಯಲಿಗೆಳೆಯುತ್ತಿವೆ.

[ಚಿತ್ರ –  ಕೆಪಿಎನ್ ಮತ್ತು ಗೋಪಿ ಬೀದರ್]