ನಾನು ಶಾಕ್ತಪಂಥದ ಅಧ್ಯಯನಕ್ಕಾಗಿ ಅಸ್ಸಾಮಿಗೆ ಹೋಗಬೇಕಾಗಿ ಬಂದಿತು. ದಾರಿಯಲ್ಲಿ ಸಿಗುವ ಬಂಗಾಳವನ್ನು ನೋಡಲು ಯತ್ನಿಸಿದೆ. ಹಾಗೆ ತಿರುಗುವಾಗ ಬಂಗಾಳದಲ್ಲಿ ನನಗೆ ಎದ್ದುಕಂಡಿದ್ದು ಅಲ್ಲಿನ ಕೊಳಗಳು. ಅವು ಸಹಸ್ರಾರು ಸಂಖ್ಯೆಯಲ್ಲಿವೆ. ಪುಟ್ಟಕೆರೆಗಳಂತಿರುವ ಇವನ್ನು ಬಂಗಾಳಿಯಲ್ಲಿ `ಪುಖೂರ್’ ಎನ್ನುತ್ತಾರೆ. ಬಂಗಾಳವನ್ನು ಹೂಗ್ಲಿಯ ನಾಡು, ಕಾಳಿಯ ನಾಡು, ಕಮ್ಯುನಿಸ್ಟರ ನಾಡು ಎಂದೆಲ್ಲ ಅಂದುಕೊಂಡು ಹೋಗಿದ್ದ ನನಗೆ, ಈ ಕಿರುಗೆರೆಗಳ ಸಂಖ್ಯೆ ನೋಡಿದ ಬಳಿಕ ಇದನ್ನು `ಪುಖೂರ್ ಗಳ ನಾಡು’ ಎಂದು ಕರೆಯಬೇಕೆನಿಸಿತು. ಕೇರಳದಲ್ಲಿರುವಂತೆ, ಐದು ಹತ್ತು ಮನೆಗಳ ನಡುವೆ ಕಡ್ಡಾಯವಾಗಿ ಇಲ್ಲಿ ಒಂದು ಸಾರ್ವಜನಿಕ ಕೊಳವಿದೆ. ಕೆಲವೆಡೆ ಮನೆಗೊಂದು ಕೊಳ. ಇವು ನಮ್ಮ ಕೆರೆಗಳಷ್ಟು ದೊಡ್ಡವಲ್ಲ. ಹೊಂಡಗಳಷ್ಟು ಚಿಕ್ಕವೂ ಅಲ್ಲ. ಬಂಗಾಳದಲ್ಲಿ ಉಳ್ಳವರ ಸಿರಿವಂತಿಕೆಯನ್ನು ಅವರಿಗಿರುವ ಕೊಳಗಳ ಆಧಾರದಲ್ಲಿ ಅಳೆಯುವ ಪದ್ಧತಿಯೂ ಇದೆಯಂತೆ- ತಿಪಟೂರು ಸೀಮೆಯಲ್ಲಿ ಒಬ್ಬ ವ್ಯಕ್ತಿಯ ಸ್ಥಿತಿವಂತಿಕೆಯನ್ನು ಅವನಿಗಿರುವ ತೆಂಗಿನಮರಗಳ ಸಂಖ್ಯೆಯಿಂದ ಅಳೆಯುವಂತೆ.

ಬಂಗಾಳದಲ್ಲಿ ಒಂದಾಳುದ್ದ ನೆಲಅಗೆದರೆ ಒರತೆ ಉಕ್ಕುವಂತೆ ಅಂತರ್ಜಲ ಮೇಲುಮೇಲೇ ಇದ್ದಂತಿದೆ. ಇದು ಹೂಗ್ಲಿ ನದಿಯು ನೆಲದ ನರನಾಳಗಳಿಗೆ ಇಳಿಸಿದ ನೀರಿರಬಹುದು ಅಥವಾ ಸಮುದ್ರಮಟ್ಟದಲ್ಲಿರುವ ಪ್ರದೇಶಗಳಲ್ಲಿ ಹೀಗೆ ನೀರು ಸಮೃದ್ಧವಾಗಿ ಸಿಗುತ್ತಿರಬಹುದು. ಮಳೆನೀರು ಇಂಗದೆ ನೆಲದ ಮೇಲೆ ಇಲ್ಲಿ ಬಹುಕಾಲ ಇರುತ್ತದೆಯೆಂದು ಕಾಣುತ್ತದೆ. ಕರ್ನಾಟಕದ ಕರಾವಳಿಯಲ್ಲೂ ಈ ಲಕ್ಷಣವಿದೆ ತಾನೇ?
ವಿಶೇಷವೆಂದರೆ ಈ ಪುಖೂರ್ ಗಳು ಏಕಾಂಗಿಯಾಗಿಲ್ಲ; ತಮ್ಮ ಜತೆಗೆ ಒಂದು ಸಸ್ಯ ಪಶು ಪ್ರಾಣಿಗಳ ಒಂದು ಸಂಸಾರವನ್ನೇ ಕಟ್ಟಿಕೊಂಡಿವೆ. ಅವುಗಳ ಅಂಚಿಗೆ ತಾಳೆಮರಗಳಿದ್ದು ಕೊಳದ ದಡ ಕುಸಿಯದಂತೆ ಬೇರಬಿಗಿ ಒದಗಿಸಿವೆ. ದಡದಲ್ಲಿ ಜನ ಬಾಳೆಗಿಡಗಳನ್ನು ನೆಟ್ಟುಕೊಂಡಿದ್ದಾರೆ. ಬಿದಿರು ಬೆಳೆದಿದೆ. ತೆಂಗಿದೆ. ಪುಖೂರ್ ಗಳ ಆಸುಪಾಸು ಬಂಗಾಳದ ಗಿಡ್ಡತಳಿಯ ಆಡುಗಳೂ ಎಮ್ಮೆಗಳೂ ಸದಾ ಮೇಯುತ್ತಿರುತ್ತವೆ. ನೀರೊಳಗೆ ಸಾಕಿದ ಬಾತುಗಳು ಹಿಂಡು ಕಟ್ಟಿಕೊಂಡು ಈಜಾಡುತ್ತಿರುತ್ತವೆ. ಕೆಲವು ಪುಖೂರ್ ಗಳಲ್ಲಿ ಕಮಲಗಳೂ ಅರಳಿ ನಳನಳಿಸುತ್ತಿರುತ್ತವೆ.

ಈ ಪುಖೂರ್ ಗಳಲ್ಲಿ ಕೆಲವು ಗಂಡಸರು ದನವನ್ನು ತೊಳೆಯುತ್ತಿರುವ, ಹುಡುಗರು ಈಜಾಡುವ ದೃಶ್ಯಗಳಿದ್ದವು. ಕೆಲವು ಹಳ್ಳಿಗಳಲ್ಲಿ ಪುಖೂರ್ ಗಳಿಗೆ ಪಂಪುಸೆಟ್ಟು ಇಟ್ಟುಕೊಂಡು, ರೈತರು ಕಲ್ಕತ್ತಾಪಾನ್ ಎಂದು ಹೆಸರಾಗಿರುವ ವೀಳೇದೆಲೆಯನ್ನೂ ದಪ್ಪಬದನೆಯನ್ನೂ ಬೆಳೆಯುತ್ತಿದ್ದರು. ಪುಖೂರ್ ಗಳಲ್ಲಿ ಮನೆಯವರು ಮೀನು ಸಾಕಣೆ ಮಾಡುವುದೂ ಉಂಟು.  ಬಹುಶಃ ಇವು ಕಡುಬೇಸಗೆಯಲ್ಲಿ ಬತ್ತುತ್ತವೆಯೊ ಏನೊ? ಒಂದೇ ಒಂದು ಬತ್ತಿದ ಪುಖೂರ್ ನಲ್ಲಿ ಬತ್ತಬೆಳೆದಿರುವುದು ಕಂಡಿತು. ಪುಖೂರ್ ಗಳು ಆತ್ಮಹತ್ಯೆಗೆ ಬಳಕೆಯಾಗಿದ್ದಾವೊ ಇಲ್ಲವೊ ತಿಳಿಯದು.

ಇಷ್ಟಾದರೂ ಇವು ಮೂಲತಃ ಸ್ತ್ರೀಜಗತ್ತಿಗೆ ಸೇರಿದವು ಎಂದು ಅನಿಸುತ್ತದೆ. ಕಾರಣ, ಅಲ್ಲಿ ಮಹಿಳೆಯರು ಬಟ್ಟೆ ಒಗೆಯುತ್ತಿದ್ದರು. ಮುಸುರೆ ಪಾತ್ರೆ ಬೆಳಗುತ್ತಿದ್ದರು. ಮೀನು ತೊಳೆಯುತ್ತಿದ್ದರು. ತಮ್ಮ ಮಕ್ಕಳ ಮೈತೊಳೆಯುತ್ತಿದ್ದರು. ತಾವೂ ಮೀಯುತ್ತಿದ್ದರು. ಬಾತುಗಳನ್ನು ಮನೆಯತ್ತ ಅಟ್ಟುತ್ತಿದ್ದರು. ಕೆಲವರು ತಾಂಬೂಲ ಮೆಲ್ಲುತ್ತ ಹರಟುತ್ತಿದ್ದರು. ಮೊದಲಿಂದಲೂ ಹೊಳೆದಂಡೆಗಳು ಬಾವಿಗಳು ನಮ್ಮ ಗ್ರಾಮೀಣ ಸ್ತ್ರೀಯರು ತಮ್ಮ ಸುಖದು:ಖ ಹಂಚಿಕೊಳ್ಳುವ ಜಾಗಗಳು. ಕನ್ನಡದ ಜನಪದ ಗೀತೆಯೊಂದು ಹೊಳೆಯ ಬದಿಯಲ್ಲಿ ತನ್ನ ಪ್ರಿಯಕರನ ಸಾವಿಗಾಗಿ ರೋದಿಸುವ ಹೆಣ್ಣಿನ ಕಥೆಯನ್ನು ಹೇಳುತ್ತದೆ.

ಆದರೆ ಪುಖೂರ್ ಗಳು ನಿತ್ಯದ ಬಳಕೆಗೆ ನೀರನ್ನು ಒದಗಿಸುವ ಕೇವಲ ಜಲತಾಣಗಳಲ್ಲ. ಅವು ಬಂಗಾಳದ ಸಂಸ್ಕೃತಿಯನ್ನು ಕೂಡ ರೂಪಿಸಿವೆ. ಉದಾಹರಣೆಗೆ, ಮನೆಗೆ ಅಳಿಯ ಬಂದಾಗ, ಮಾವ ಎನಿಸಿಕೊಂಡವನು ಬಲೆ ಹಿಡಿದು ಪುಖೂರ್ ಗೆ ಹೊರಟರೆ ಅದು ಅವನನ್ನು ಸ್ವಾಗತಿಸುವ ವಿಧಾನವೂ ಹೌದಂತೆ; ಮಾವ ಮೀನು ಹಿಡಿಯಲು ಹೋಗದಿದ್ದರೆ ಅಳಿಯನ ಮೇಲೆ ಮುನಿಸಾಗಿದೆಯೆಂದೊ ಅಳಿಯನು ತನಗೆ ಮಾಡಿದ ಅಪಮಾನವೆಂದೊ ತಿಳಿಯಲಾಗುವುದಂತೆ. ನಂಟರು ಬಂದಾಗ ಮಾರ್ಕೆಟ್ಟಿಗೆ ಓಡುವುದರ ಬದಲು, ಮನೆಯ ಪಕ್ಕದ ಹೊಂಡಕ್ಕೆ ಬಲೆಯೆಸೆದು ತಾಜಾ ಮೀನನ್ನು ಹಿಡಿಯುವ ಈ ಪದ್ಧತಿ ಚೆನ್ನಾಗಿದೆ.

ಪುಖೂರ್ ಗಳು ಇಲ್ಲದ ಬಂಗಾಳದ ಹಳ್ಳಿಯೇ ಇಲ್ಲವೆನ್ನಬಹುದು. ನಗರಗಳಲ್ಲಿ ಸಹಜವಾಗಿ ಇವು ಕಡಿಮೆಯಿವೆ ಅಥವಾ ಇವನ್ನು ಅಳಿಸಲಾಗಿದೆ. ನೂರಾರು ಕೆರೆಗಳ ನಾಶದ ಮೇಲೆ ಬೆಂಗಳೂರು ಬೆಳೆದಿರುವಂತೆ, ಕೊಲ್ಕತ್ತ ಪುಖೂರ್ ಗಳನ್ನು ಅಳಿಸಿ ಬೆಳೆದಿದೆ. ಈಗಲೂ `ತಲಾ’ (ಕೆರೆ) ಎಂದು ಕೊನೆಗೊಳ್ಳುವ ನೂರಾರು ಏರಿಯಾಗಳು ಇಲ್ಲಿವೆ. ಕೆಲವು ಬಡಾವಣೆಗಳಲ್ಲಿ ಈ ಕಿರುಗೆರೆಗಳನ್ನು ಅಲಂಕಾರದ ಕೊಳವನ್ನಾಗಿ ಮಾರ್ಪಡಿಸಲಾಗಿದೆ. ಹೆಚ್ಚಿನ ಕಡೆ ಅವು ಕೊಳಚೆ ನೀರು ಸೇರಿ, ಮಲೆತು ನಾರುತ್ತಿವೆ. ಬಂಗಾಳದ ಅಂಗಡಿಗಳಲ್ಲಿ ಸೊಳ್ಳೆಬತ್ತಿಯ ಹತ್ತಾರು ಬ್ರ್ಯಾಂಡುಗಳ ಮಾರಾಟ ಭರದಿಂದ ನಡೆಯಲು ಈ ಪುಖೂರುಗಳ ಕಾಣಿಕೆಯೂ ಇದೆ.

ಮಜಾ ಅನಿಸಿದ್ದು ಕಲಕತ್ತೆಯ ಹೃದಯಭಾಗದಲ್ಲಿ ಒಂದು ದೊಡ್ಡ ಪುಖೂರ್ ಇರುವುದು. ಬಂಗಾಳ ಸರ್ಕಾರದ ಸಚಿವಾಲಯ ಕಟ್ಟಡವಾಗಿರುವ ರೈಟರ್ಸ್ ಬಿಲ್ಡಿಂಗ್ ಎದುರಾ ಎದುರು ಇದಿದೆ. ಈಸ್ಟ್ ಇಂಡಿಯಾ ಕಂಪನಿಯ ನೌಕರರಿಗೆ ಕಟ್ಟಿಸಲಾದ ಬ್ರಿಟಿಶರ ಕಾಲದ ಬೃಹದಾಕಾರದ ರೋಮನ್ ವಾಸ್ತುಶಿಲ್ಪದ ಕಟ್ಟಡವಿದು. ಇದರ ಮೇಲೆ ಜಸ್ಟೀಸ್, ಕಾಮರ್ಸ್, ಅಗ್ರಿಕಲ್ಚರ್ ಎಂಬ ಹೆಸರಿನ ಅಮೃತಶಿಲೆಯ ಶಿಲ್ಪಗಳು. ಕಟ್ಟಡದ ಮೇಲೆ ಪಟಪಟ ಮಾಡುವ ರಾಷ್ಟ್ರಧ್ವಜ. ಈ ಪುಖೂರ್ ನ ಇನ್ನೊಂದು ಬದಿಗೆ ಹಿಮದಂತೆ ಬೆಳ್ಳಗೆ ಬೆಳುಗುವ ಪೋಸ್ಟಾಫೀಸು ಕಟ್ಟಡ. ರಿಸರ್ವ್ ಬ್ಯಾಂಕು. ಇನ್ನೊಂದು ಬದಿಗೆ ಟ್ರ್ಯಾಂ ಸ್ಟೇಶನ್. ಇವುಗಳ ನಡುವೆ ಹಠದಿಂದ ಕುಳಿತಿರುವ ಈ ಪುಖೂರ್. ಅದರ ಅಂಚಿನಲ್ಲಿ ದಿಕ್ಕಿಲ್ಲದ ಬಡವರು ಶೆಡ್ಡು ಹಾಕಿಕೊಂಡಿದ್ದಾರೆ. ಅದರ ದಡದಲ್ಲಿ ಸ್ಲಂ ಮಕ್ಕಳು ಆಡಿಕೊಂಡಿದ್ದಾರೆ. ಕಲಕತ್ತೆಯ ಫುಟ್ಪಾತ್ ವಾಸಿಗಳು ಅದರೊಳಗೆ ಮೈತೊಳೆಯುತ್ತ ಬಟ್ಟೆ ಒಗೆಯುತ್ತ, ಅಡಿಗೆ ಬೇಯಿಸುತ್ತ, ಬೇವಿನಕಡ್ಡಿಯಿಂದ ಹಲ್ಲುಜ್ಜುತ್ತ ಇರುತ್ತಾರೆ. ಕೆಲವರು ಗಾಳ ಹಾಕಿ ಮೀನು ಹಿಡಿಯುತ್ತ ಸಹ ಕೂತಿರುತ್ತಾರೆ.

ಪುಖೂರ್ ನ ನೀರೊಳಗೆ ಅದರ ದಡದಲ್ಲಿರುವ ಅಧಿಕಾರಸ್ಥ ಕಟ್ಟಡಗಳೂ ಈ ಶೆಡ್ಡುಗಳೂ ಪ್ರತಿಬಿಂಬಿಸುತ್ತಿರುತ್ತವೆ- ಚರಿತ್ರೆಯೂ ವರ್ತಮಾನವೂ ಕೈಕೈಹಿಡಿದು ನಿಂತಂತೆ; ವಸಾಹತುಶಾಹಿ ಭಾರತವೂ ಆಧುನಿಕ ಭಾರತವೂ ಒಟ್ಟಿಗೆ ಇರುವಂತೆ; ಬಂಗಾಳದ ಸಾಂಸ್ಕೃತಿಕ ಕುರುಹೂ ಆಧುನಿಕತೆಯೂ ಜತೆಗಿರುವಂತೆ.

ಇಲ್ಲಿನ ಅಧಿಕಾರಸ್ಥ ವ್ಯವಸ್ಥೆ, ಇಂತಹದೊಂದು ಪ್ರತಿಷ್ಠೆಯ ಜಾಗದಲ್ಲೂ ಸ್ವಚ್ಛತೆಯ ಹೆಸರಲ್ಲಿ ನಿರ್ಗತಿಕರನ್ನು ದೂರಹಾಕದೆ ಅವರನ್ನು ಅವರ ಪಾಡಿಗೆ ಬಿಟ್ಟಿದೆ. ಅದರ ಈ ಸಹನೆ ಅದರ ಉದಾರತೆಯಂತಿದೆ; ಆದರೆ ಅಧಿಕಾರಸ್ಥರು ತಮ್ಮ ಖೋಲಿಯ ಕಿಟಕಿ ತೆರೆದರೆ ಕಾಣುವ ಪುಖೂರ್ ವಾಸಿಗಳ ಬದುಕನ್ನು ಬದಲಿಸಲು, ಈ ಉದಾರತೆ ಒತ್ತಡ ನಿರ್ಮಿಸಿಲ್ಲ ಎಂಬುದು ಈ ವ್ಯವಸ್ಥೆಯ ಸಂವೇದನಾರಹಿತತೆಯಂತಿದೆ.

ಬಂಗಾಳದ ಪುಖೂರ್ ಗಳು ತಮ್ಮ ನೀರ್ಗನ್ನಡಿಯಲ್ಲಿ ದಡದ ಕಟ್ಟಡಗಳನ್ನು ಮಾತ್ರ ಪ್ರತಿಬಿಂಬಿಸುತ್ತಿಲ್ಲ. ನಮ್ಮ ಸಮಾಜದ  ವೈರುಧ್ಯಗಳನ್ನೂ ಕನ್ನಡಿಸುತ್ತಿವೆ.

(ಚಿತ್ರಗಳು: ರಹಮತ್ ತರೀಕೆರೆ)

(ಮುಂದಿನ ಕಂತು: ಹೂಗ್ಲಿನದಿ ಕುರಿತು)