ಮೊದಲಿಗೇ ಹೇಳಬೇಕು: ಇದು ನಾನು ನೋಡಿದ ಅರೆಬರೆಯಾಗಿ ಸಿಕ್ಕ ಮೊದಲ ಪ್ರದರ್ಶನದ ಅರೆಬರೆ ಅನುಭವದ ಟಿಪ್ಪಣಿ. ನಾಟಕ ಪ್ರದರ್ಶನದ ವಿಮರ್ಶೆಯಲ್ಲ.

‘ಮದುಮಗಳು’ ೨೦ನೇ ಶತಮಾನದ ಕನ್ನಡ ಸಾಹಿತ್ಯ  ಸೃಷ್ಟಿಸಿದ ಅತ್ಯುತ್ತಮ ಕೃತಿಗಳಲ್ಲಿ ಒಂದು. ನನ್ನ ಓದಿನಲ್ಲಿ ಇದನ್ನು ಮೀರಿಸುವ ಮತ್ತೊಂದು ಗದ್ಯಕೃತಿ ಈ ಶತಮಾನದಲ್ಲಿ ಇನ್ನೊಂದು ಬಂದಿಲ್ಲ. ‘ಮದುಮಗಳು’ ಕನ್ನಡ ಕಾದಂಬರಿ ಪರಂಪರೆಯ ವ್ಯಾಖ್ಯೆಯನ್ನೇ ತನ್ನ ವಿಶಿಷ್ಟ ರಚನಾ ವಿನ್ಯಾಸದಿಂದಲೂ, ವಿಸ್ತಾರವಾದ ಅನುಭವ ಲೋಕದಿಂದಲೂ, ಕಲಾತ್ಮಕ ಪ್ರತಿಭೆಯಿಂದಲೂ ವಿಸ್ತರಿಸಿಹಾಕಿದ ಕೃತಿ. ಈಗಲೂ ಭಕ್ತರು ತಮ್ಮ ಪ್ರಿಯವಾದ ತೀರ್ಥಕ್ಷೇತ್ರಕ್ಕೆ ಮತ್ತೆಮತ್ತೆ ಯಾತ್ರೆ ಹೋಗುವಂತೆ, ನಾನು ಇದನ್ನು ಎರಡು ವರ್ಷಕ್ಕೊಮ್ಮೆ ಓದುತ್ತೇನೆ. ಪ್ರತಿಸಲವೂ ನನಗಿದು ಹೊಸಹೊಸ ಅನುಭವವನ್ನೇ ಧಾರೆಯೆರೆಯುತ್ತದೆ. ಇದಕ್ಕೆ ಕಾರಣ, ಕುವೆಂಪು ಹಲವು ಕಥಾನಕದ ನದಿಗಳನ್ನು ಹುಟ್ಟಿಸಿ ಏಕಕಾಲಕ್ಕೆ ಕೂಡಿಸುತ್ತ ಬಿಡಿಸುತ್ತ ಹರಿಸುವ ಪರಿ; ಇದರೊಳಗೆ ಕಲ್ಲಿನೊಳಗೆ ಬಚ್ಚಿಟ್ಟ ಕಿಚ್ಚಿನಂತೆ ಅಡಗಿಸಿಟ್ಟಿರುವ ದರ್ಶನ. ಇದರ ಪ್ರಸ್ತಾವನೆಯ ಭಾಗದಲ್ಲಿರುವ ‘ಇಲ್ಲಿ ಯಾರೂ ಮುಖ್ಯರಲ್ಲ’ ಎಂದು ಶುರುವಾಗುವ ಅದ್ವೈತ ದರ್ಶನದ ಹೇಳಿಕೆಗಳು, ಕನ್ನಡ ಸಾಹಿತ್ಯ ಸೃಷ್ಟಿಸಿದ ಸಮಾಜವಾದಿ ಕಾಣ್ಕೆಗಳಾಗಿವೆ. ಇಂತಹದೊಂದು ಕಾದಂಬರಿಯನ್ನು ನಮ್ಮ ಪ್ರತಿಭಾವಂತ ರಂಗನಿರ್ದೇಶಕರಲ್ಲಿ ಒಬ್ಬರಾದ ಸಿ.ಬಸವಲಿಂಗಯ್ಯನವರು ಹೇಗೆ ನಾಟಕವಾಗಿಸಿದ್ದಾರೆ ಎಂಬ ಕುತೂಹಲ, ಸಮಸ್ತ ರಂಗಾಸಕ್ತರಲ್ಲಿಯೂ ಸಾಹಿತ್ಯದ ವಿದ್ಯಾರ್ಥಿಗಳಲ್ಲೂ ಸಹಜವಾಗಿಯೇ ಇತ್ತು. ಇಡೀ ರಾತ್ರಿ ೯ ಗಂಟೆಗಳ ಕಾಲ ನಾಟಕ ನಡೆಯುತ್ತದೆ ಮತ್ತು ಮೂರು ವಿರಾಮಗಳಲ್ಲಿ ಪ್ರೇಕ್ಷಕರು ನಾಲ್ಕು ಸ್ಟೇಜುಗಳಲ್ಲಿ ಸ್ವತಃ ತಾವೇ ನಡೆದುಹೋಗಿ ನಾಟಕ ನೋಡಬೇಕು ಎಂಬುದು ತವಕಕ್ಕೆ ಮತ್ತೊಂದು ಕಾರಣವಾಗಿತ್ತು.

ನಾನು ಮತ್ತು ಬಾನು, ಒಂದು ದಿನ ಮುಂಚಿತವಾಗಿಯೇ ಏಪ್ರಿಲ್ ೨೩ರಂದು ನಡೆದ ಮೊದಲ ಪ್ರದರ್ಶನವನ್ನು ನೋಡಲು ಮೈಸೂರಿಗೆ ಬಂದೆವು. ‘ಕುಸುಮಬಾಲೆ’ಯ ನಾಟಕರೂಪವನ್ನು ನೋಡಲು ಸಹ ನಾನು ಹಿಂದೆ ಹಂಪಿಯಿಂದ ಮೈಸೂರಿಗೆ ಬಂದು ಬಂದಿದ್ದವನು. ಈಗ ಕುತೂಹಲ ತಡೆಯದೆ ಹಗಲಿನಲ್ಲೇ ರಂಗಭೂಮಿಯನ್ನು ನೋಡಲು ಹೋದೆ. ಕುಕ್ಕರಹಳ್ಳಿ ಕೆರೆಯ ಅಂಗಳದಲ್ಲಿರುವ ಕಲಾಭವನದ ಹಿತ್ತಿಲು, ಒಂದು ನೌಕಾನಿರ್ಮಾಣದ ಜಾಗದಂತೆಯೊ ರಣಸಿದ್ಧತೆಯ ಜಾಗದಂತೆಯೊ ಅನಿಸಿತು. ಏಣಿಗಳನ್ನು ಮರಕ್ಕೆ ಕಟ್ಟುವವರು, ಪ್ರೇಕ್ಷಕರ ಸ್ಟೇಜನ್ನು ಸಿದ್ಧಪಡಿಸುತ್ತಿರುವ ಹತ್ತಾರು ಬಡಗಿಗಳು, ಸಿಂಬೆಸುತ್ತಿದ ವೈರುಗಳನ್ನು ಹಾಸುತ್ತಿರುವವರು, ಕೆಲಸದಲ್ಲಿ ನಿರತರಾಗಿದ್ದರು. ಒಂದು ಸ್ಟೇಜಿನಲ್ಲಿ ರಿಹರ್ಸಲ್ ನಡೆಯುತ್ತಿತ್ತು. ಯುದ್ಧದ ಕವಾಯತನ್ನು ನೋಡುವ ದಂಡನಾಯಕನಂತೆ ಬಸವಲಿಂಗಯ್ಯ ಕುಳಿತು, ತನ್ಮಯವಾಗಿ ಅದನ್ನು ನೋಡುತ್ತಿದ್ದರು. ನಾನು ಪಕ್ಕ ಹೋಗಿ ಕುಳಿತೆ. ಮೆಲ್ಲಗೆ ನನ್ನ ಕೈಹಿಸುಕಿದರು. “ನನ್ನ ಉದ್ದೇಶ, ಪ್ರತಿ ಮದುಮಗಳನ್ನು ಸೃಷ್ಟಿಸುವುದಲ್ಲ. ಅದನ್ನು ಓದಲು ಪ್ರೇರಿಸುವುದು” ಎಂದರು.

ನಾಟಕದ ದಿನ ರಾತ್ರಿಯಿಡೀ ನಿದ್ದೆಗೆಡಬೇಕೆಂದು ನಾನು ಮಧ್ಯಾಹ್ನ ಮಲಗಲು ಯತ್ನಿಸಿದೆ. ಸೂಫಿಗಳಲ್ಲಿ ಮೆಹಫಿಲೆ ಸಮಾ ಊರೆಲ್ಲ ನಿದ್ದೆಗೆ ಸಲ್ಲುವ ಹೊತ್ತಿಗೆ ಆರಂಭವಾಗಿ ಊರು ಏಳುವ ಹೊತ್ತಿಗೆ ಮುಗಿಯುತ್ತದೆ. ಹೀಗಾಗಿ ಮೆಹಫಿಲ್‌ನಲ್ಲಿ ಭಾಗವಹಿಸುವವರು ಮಧ್ಯಾಹ್ನದ ನಿದ್ದೆ ತೆಗೆಯುವ ಪದ್ಧತಿಯಿದೆ. ನಮ್ಮ ಬಯಲಾಟ ಮತ್ತು ಯಕ್ಷಗಾನಗಳಲ್ಲೂ ಈ ಪದ್ಧತಿ ಇರಬಹುದು. ಆದರೆ ನಾಟಕ ಕುರಿತ ಅತಿ ಕುತೂಹಲದಿಂದ ನನಗೆ ನಿದ್ದೆಯೇ ಬರಲಿಲ್ಲ. ಕಡೆಗೆ ಸಂಜೆಮುಂದೆ ನಿದ್ದೆ ಬಾರದಿರಲೆಂದು ನಾಲ್ಕು ತುತ್ತು ಕಡಿಮೆ ಊಟಮಾಡಿ ‘ರಂಗಾಯಣ’ಕ್ಕೆ ಹೋದೆವು. ಆಗ ನಸುಗತ್ತಲಿನಲ್ಲಿ ಮೈಸೂರಿನ ಹೆಸರಾಂತರೆಲ್ಲ ತಮ್ಮ ಮಡದಿ ಗೆಳೆಯರೊಡನೆ ಗೇಟಿನ ಮುಂದೆ ಪಾಳಿ ನಿಂತಿದ್ದರು.

ನಾಟಕವು ಸರಿಯಾಗಿ ರಾತ್ರಿ ೯ ಗಂಟೆಗೆ ಪವಿತ್ರ ಧಾರ್ಮಿಕ ಆಚರಣೆಯೊಂದು ಶುರುವಾದಂತೆ ಶುರುವಾಯಿತು. ನಿಜಕ್ಕೂ ಮಲೆನಾಡಿನ ದಿಬ್ಬ ಮನೆ ಕಾಡು ಹಿತ್ತಿಲುಗಳನ್ನು ನೆಲವನ್ನು ಏರಿಳಿತಗೊಳಿಸಿ, ಅಲ್ಲೇ ಇರುವ ಮರಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ರಚಿಸಲಾಗಿತ್ತು. ಒಂದೇ ಸಲಕ್ಕೆ ಐದಾರು ಕಡೆ ಪಾತ್ರಗಳು ಚಲಿಸುವುದು ನೋಡಬಹುದಿತ್ತು. ಆದರೆ ನಮ್ಮ ದುರದೃಷ್ಟಕ್ಕೆ ಪ್ರದರ್ಶನ ಶುರುವಾದ ಎರಡು ಗಂಟೆಯ ಬಳಿಕ ಮಳೆಯ ಸೂಚನೆ ಕಂಡವು. ಜೋರಾಗಿ ಗಾಳಿ ಬೀಸತೊಡಗಿತು. ಯಾವ ಮರಗಳಡಿ ನಾವು ಕುಳಿತಿದ್ದೆವೊ ಅವು ಕೊಂಬೆಗಳನ್ನು ತೂಗಿ ಹಣ್ಣೆಲೆ ಉದುರಿದವು. ನಡುನಡುವೆ ದಪ್ಪಹನಿಗಳನ್ನು ಆಗಸ ಕಳಿಸಿತು. ಆದರೂ ಯಾರೂ ಕದಲಲಿಲ್ಲ. ಸಣ್ಣಗೆ ಮಳೆ ಆರಂಭವಾಗಲು, ಕೆಲವರು ಅಳುಕಿ ಎದ್ದರು. ಬಹುತೇಕರು ಕುಳಿತಿದ್ದರು. ಆದರೆ ಮಳೆ ತನ್ನ ಆಟ ಆಡಲು ನಿರ್ಧರಿಸಿದಂತಿತ್ತು. ಅದು ಕೊಂಚ ಬಿರುಸಾಯಿತು. ನಟರು ತಮ್ಮ ಪ್ರದರ್ಶನವನ್ನು ಇನ್ನೂ ಕೊಡುತ್ತಿರುವಾಗಲೇ, ನೋಡುಗರು ಎದ್ದು ನೆನೆಯದ ಜಾಗಗಳಿಗೆ ದೌಡಿ ಬಂದರು. ಗುತ್ತಿ ಹೊಳೆಯ ಹೆಣವನ್ನು ಕಾಯುತ್ತ ಕೂರುವಂತೆ, ಮಳೆಯ ಹೆಣವನ್ನು ಕಾಯುತ್ತ ನಡುರಾತ್ರಿ ೨ಗಂಟೆಯ ಕಾಲ ಕೂತೆವು. ಮರಳಿ ನಾಟಕ ಶುರುವಾಯಿತು. ಆಗ ನಡುರಾತ್ರಿ ೨ ಗಂಟೆಯಿರಬೇಕು. ಒದ್ದೆಯಾದ ಹಾಸುಗಲ್ಲಿನ ಪಾವಟಿಗೆಗಳ ಮೇಲೆ ಕೂರಲು ಹಳೆಯ ವೃತ್ತಪತ್ರಿಕೆಗಳನ್ನು ಬಾಳೆಲೆಯಂತೆ ಹಂಚಲಾಯಿತು. ಅವನ್ನು ಹಾಸಿಕೊಂಡು ಕುಳಿತೆವು. ನಾಟಕ ಮತ್ತೆ ಶುರುವಾಯಿತು.

ಮಳೆಬಿದ್ದು ರಂಗಭೂಮಿ ಜಾರುತ್ತಿತ್ತು. ನಮ್ಮ ಮೇಲೂ ಮರದ ಎಲೆಗಳಿಂದ ಹನಿಗಳು ನಿರಂತರ ಉದುರುತ್ತಿದ್ದವು. ಯಾರಿಗೂ ಖಬರು ಇರಲಿಲ್ಲ. ಆದರೆ ನಾಟಕವನ್ನು ಪೂರ್ಣಗೊಳಿಸಲು ತಂಡಕ್ಕೆ ಆಗಲಿಲ್ಲ. ನಾವು ಕೊನೆಗೆ ನೋಡಿದ್ದು, ದೊಡ್ಡಣ್ಣನ ಶವಸಂಸ್ಕಾರದ ದೃಶ್ಯ. ಆಹೊತ್ತಿಗೆ ಬೆಳಕು ಸಾಕಷ್ಟು ಹರಿದು, ತಲೆ ಮೇಲಿದ್ದ ಮರಗಳಲ್ಲಿ ಹಕ್ಕಿಗಳು ಹಾಡತೊಡಗಿದ್ದವು. ದೊಡ್ಡಣ್ಣನ ಪಾತ್ರಧಾರಿಯು ತನ್ನ ಸಂಸ್ಕಾರದ ದೃಶ್ಯಮುಗಿದ ಬಳಿಕ ಚಿತೆಯ ಮೇಲಿಂದೆದ್ದು ಸೈಡ್‌ವಿಂಗಿಗೆ ಇಲಿ ಹಿಡಿಯುವವನಂತೆ ಬಾಗಿಕೊಂಡು ಹೋಗಿದ್ದು, ಸ್ವಚ್ಛ ಕಾಣುತ್ತಿತ್ತು. ಇನ್ನು ನಾಟಕ ಮುಂದುವರೆಸುವುದು ಸಾಧ್ಯವೇ ಇರಲಿಲ್ಲ. ಇನ್ನೂ ಒಂದೂವರೆ ಗಂಟೆಯಷ್ಟು ನಾಟಕ ಇರುವಾಗಲೇ ಮುಗಿಸಬೇಕಾಯಿತು. ನನಗೆ ಕಾವೇರಿಯ ಸಾವಿನ ಭಾಗ ಅಥವಾ ಗುತ್ತಿಯ ನಾಯಿ ಪ್ರವಾಹದಲ್ಲಿ ಕೊಚ್ಚಿಹೋಗುವ ದೃಶ್ಯಗಳು ಹೇಗಿರಬಹುದು ಎಂಬ ಕುತೂಹಲ ಹಾಗೆಯೇ ಉಳಿಯಿತು.

ಬಹುಶಃ ನಾಟಕದ ಮೊದಲ ಪ್ರದರ್ಶನಗಳನ್ನು ನೋಡಬಾರದು. ಅವುಗಳಲ್ಲಿ ಬಹಳಷ್ಟು ಕಚ್ಚಾತನವಿರುತ್ತದೆ. ಅವು ತಮ್ಮ ಮೊದಲ ಪ್ರದರ್ಶನಗಳ ದೋಷಗಳನ್ನು ತಿದ್ದಿಕೊಂಡು ನಾಟಕ ಒಂದು ಹದಕ್ಕೆ ಬಂದ ನಂತರವಷ್ಟೇ ನೋಡುವುದು ಜಾಣತನ. ಆದರೆ ನಾನು ಕಂಡಷ್ಟು ನಾಟಕದ ಅತ್ಯುತ್ತಮ ಅಂಶಗಳೆಂದರೆ, ಸುಬ್ಬಣ್ಣ ಹೆಗ್ಗಡೆಯ ಪಾತ್ರದ ಜೀವಂತಿಕೆ. ಕಾದಂಬರಿಯಲ್ಲಿ ಗುತ್ತಿಯು ನಾಯಕನಂತೆ ಬೆಳೆದಿದ್ದರೆ, ಇಲ್ಲಿ ಸುಬ್ಬಣ್ಣ ಹೆಗ್ಗಡೆಯ ಪಾತ್ರವು ನಾಯಕನಂತೆ ಬೆಳೆದು ಆವರಿಸಿಕೊಂಡಿದೆ. ಅದು ನಾಟಕದ ವಿನ್ಯಾಸದಲ್ಲಿ ಚೆನ್ನಾಗಿ ಹೊಂದಿಕೆಯೂ ಆಗಿದೆ. ಗುತ್ತಿಗಿಂತಲೂ ಅವನ ನಾಯಿಯು ಬಹಳ ಚುರುಕಾದ ಅಭಿನಯವನ್ನು ಮಾಡಿದೆ. ಹಂದಿಯ ಪಾತ್ರಧಾರಿ ಎಬ್ಬಿಸುವ ಕೋಲಾಹಲವು ನಾಟಕದಲ್ಲಿ ಸಂಚಲನೆಯನ್ನು ಉಂಟುಮಾಡಿದರೂ,  ಅದರ ರಭಸವು ಕೋತಿಯಾಟವನ್ನು ಹೋಲುತ್ತದೆ. ಪ್ರಾಣಿ ಕೀಟಗಳ ಪಾತ್ರಗಳನ್ನು ನಾಟಕವು ಬಹಳ ಸಮರ್ಥವಾಗಿ ಸೃಷ್ಟಿಸಿಕೊಂಡಿದೆ. ನಾಟಕದ ಇನ್ನೊಂದು ಶಕ್ತಿಸ್ಥಾನವೆಂದರೆ, ಉಂಗುರದ ಪ್ರತಿಮೆಯನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿರುವುದು. ಕಾಳಿದಾಸನ ‘ಶಾಕುಂತಲಾ’ ನಾಟಕದಲ್ಲಿ ಉಂಗುರವು ಗಂಡುಹೆಣ್ಣುಗಳ ನಡುವಣ ವಿರಹ ಮಿಲನಗಳನ್ನು ನಿಯಂತ್ರಿಸುವ ಒಂದು ಕೊಂಡಿಯಾಗಿ ಬರುತ್ತದೆ. ಇಲ್ಲಿ ಅದು ಇದರಾಚೆ ಹೋಗಿ, ವಿಸ್ಮೃತಿಗೆ ಒಳಗಾದ ಪರಂಪರೆಗಳನ್ನು ಮತ್ತೆ ನೆನಪಿಸಿಕೊಂಡು, ಮುಂದುವರೆಸುವ ಜಾನಪದ ಪ್ರತಿಭೆಗಳ ಕ್ರಿಯಾಶೀಲತೆಯ ಸಂಕೇತವಾಗಿ ಬಂದಿದೆ. ಬಹುಶಃ ಕುಸುಮಬಾಲೆಯಲ್ಲಿ ಜೋತಮ್ಮಂದಿರನ್ನು ಕಥೆಯ ನಿರೂಪಕಿಯರನ್ನಾಗಿ ಮಾಡಿಕೊಂಡಿರುವ ತಂತ್ರವನ್ನು ಇಲ್ಲಿಯೂ ತರಲಾಗಿದೆ. ಕಿನ್ನರಿ ಜೋಗಿಗಳು, ಸುಡುಗಾಡ ಸಿದ್ಧರು, ಕೊರವಂಜಿಯರು, ಇಲ್ಲಿ ಈ ಕಥೆಯ ತಂತುಗಳನ್ನು ಬೆಸೆಯುವ ಕೆಲಸವನ್ನು ಚೆನ್ನಾಗಿಯೇ ಮಾಡಿದ್ದಾರೆ. ವಿಶಾಲ ಕಾಡಿನಂತೆ ಹರಡಿರುವ ಕಾದಂಬರಿಯ ಕಥೆಯನ್ನು ಹೀಗೆ ಬೆಸೆಯುವ ಕೆಲಸಕ್ಕೆ ಇವರು ಅನಿವಾರ್ಯವೂ ಆಗಿದ್ದಾರೆ. ಜಾನಪದವನ್ನು ಒಂದು ಬಗೆಯಲ್ಲಿ ನಿರಾಕರಿಸಿದ ಕುವೆಂಪು ಅವರ ಕಾದಂಬರಿ ಕುರಿತ ನಾಟಕಕ್ಕೆ  ಜಾನಪದ ಪರಂಪರೆಯಿಂದ ಈ ನಿರೂಪಕ ಪಾತ್ರಗಳನ್ನು ಅಳವಡಿಸಿರುವುದು ಒಂದು ವಿಶೇಷ.

ಆದರೆ ನಾಟಕದಲ್ಲಿ ಅನೇಕ ಭಾಗಗಳು ಅನಗತ್ಯವಾಗಿ ಡ್ರ್ಯಾಗ್‌ ಆಗಿವೆ. ಅವು ನಾಟಕದ ಕ್ರಿಯೆಯನ್ನು ಅನಗತ್ಯವಾಗಿ ಮಂದಗೊಳಿಸಿವೆ. ಚಿತೆಗೆ ಸೌದೆ ಶೇಖರಿಸುವ ಭಾಗ, ಸುಬ್ಬಣ್ಣ ಹೆಗ್ಗಡೆ ತನ್ನ ಸೋದರನನ್ನು ನೆನೆಯುವ ಭಾಗ ಇತ್ಯಾದಿ. ಕ್ರೈಸ್ತರ ಬಗೆಗೆ ಮೂಲ ಕಾದಂಬರಿಯಲ್ಲೇ ಒಂದು ಬಗೆಯ ಪೂರ್ವಗ್ರಹಿಕೆಯಿದ್ದು ಅದು ಇಲ್ಲಿ ತಮಾಷೆಯ ರೂಪತಾಳಿ ಇಲ್ಲಿಯೂ ಕೊಂಚ ಮುಂದುವರೆದಿದೆ. ಆದರೆ ವಸೂಲಿ ಸಾಬರ ಬಗ್ಗೆ ಕಾದಂಬರಿಯಲ್ಲಿರುವ ಕಠೋರ ನಿಲುವನ್ನು, ಅವರೂ ಈ ಭೂಮಾಲೀಕ ವ್ಯವಸ್ಥೆಯ ಬಲಿಪಶುಗಳು ಎಂದು ಬಿಂಬಿಸುವ ಹಾಡನ್ನು ಸೇರಿಸುವ ಮೂಲಕ, ಮೃದುಗೊಳಿಸಲಾಗಿದೆ. ವೆಂಕಣ್ಣನ ಪಾತ್ರವು ನಾಟಕದಲ್ಲಿ ಭಿನ್ನವಾದ ರೂಪವನ್ನು ಪಡೆದುಕೊಂಡಿರುವುದು ಕಾದಂಬರಿ ಓದಿರುವವವರಿಗೆ ತಿಳಿಯುತ್ತದೆ. ಅದು ಮೂಲಕೃತಿಯಲ್ಲಿ ಇಲ್ಲದ ಹಾಸ್ಯವನ್ನು ಕೊಂಚ ಹೆಚ್ಚಾಗಿಯೇ ಆವಾಹಿಸಿಕೊಂಡಿದ್ದು, ಪ್ರೇಕ್ಷಕರನ್ನು ರಂಜಿಸುತ್ತದೆ. ಆದರೆ ಸುಬ್ಬಣ್ಣ ಹೆಗ್ಗಡೆಯ ಮಗ ತಿಮ್ಮಪ್ಪ ಹೆಗ್ಗಡೆಯನ್ನು ತೀರ ನಕಲಿಶ್ಯಾಮನನ್ನಾಗಿ ಮಾಡಲಾಗಿದೆ. ಮೂಲದಲ್ಲಿರುವಂತೆ ಸೇಡು, ಫ್ಯೂಡಲಿಸ್ಟ್ ಯಜಮಾನಿಕೆ ಮತ್ತು ದಯನೀಯ ಕೀಳರಿಮೆಗಳ ಸಂಗಮವಾಗಿರುವ ಅವನ ಪಾತ್ರವು ಸರಳೀಕರಣಗೊಂಡಿದೆ.

ಮೂಲಕೃತಿಯ ಜತೆಗೆ ಹೋಲಿಸುವ ಸೆಳೆತ ಕಾದಂಬರಿ ಓದಿದವರಿಗೆ ಬೇಡವೆಂದರೂ ಬರುತ್ತದೆ. ಆದರೆ ಈ ಹೋಲಿಕೆ ಅನಗತ್ಯ. ಯಾವುದೇ ಸೃಜನಶೀಲ ನಿದೇರ್ಶಕರು ಮೂಲಕೃತಿಯ ಜತೆ ರಂಗರೂಪಕ್ಕೆ ತರಲು ಬೇಕಾದ ಸ್ವಾತಂತ್ರ್ಯವನ್ನು ವಹಿಸುತ್ತಾರೆ. ಆದರೆ ಬಸವಲಿಂಗಯ್ಯನವರಿಗೆ ಮೂಲಕೃತಿಯ ಜತೆಗೆ ಇರುವ ಅಪಾರ ಗೌರವ ಮತ್ತು ಅತಿಯಾದ ಸಾಹಿತ್ಯಕ ಒಲವು, ಸಾಕಷ್ಟು ಸ್ವಾತಂತ್ರ್ಯವನ್ನು ವಹಿಸಲು ಅಡ್ಡಿಯಾಗಿರಬಹುದು ಎಂದು ನನಗನಿಸಿತು. ಆದರೂ ‘ಮದುಮಗಳು’ ನಾಟಕವು ಒಂದು ಅಪೂರ್ವ ಅನುಭವವನ್ನು ಕೊಟ್ಟಿತು. ಕಾದಂಬರಿಯನ್ನು ಓದಿದ ಯಾರಿಗೂ ಅದು ಪ್ರತಿಕಾದಂಬರಿಯಾಗಿಲ್ಲ ಅನಿಸುತ್ತದೆ. ಅದು ಹಾಗೆ ಆಗಬೇಕಾಗಿಯೂ ಇಲ್ಲ. ಮೂಲ ಕಾದಂಬರಿಯೊಂದು ಸಮುದ್ರ. ಅದನ್ನು ಕೊಡದಲ್ಲಿ ಹಿಡಿದುಕೊಡಲು ಬಸವಲಿಂಗಯ್ಯ ಮತ್ತು ಅವರ ಸಂಗಾತಿಗಳು ಗಂಭೀರವಾಗಿ ಯತ್ನಿಸಿದ್ದಾರೆ. ನಮ್ಮ ಅನುಭವವನ್ನು ಚೆನ್ನಾಗಿದೆ ಚೆನ್ನಾಗಿಲ್ಲ ಸೋತಿದೆ ಗೆದ್ದಿದೆ ಎಂಬ ಪರಿಭಾಷೆಯಲ್ಲಿ ಹೇಳುವುದು ಸಾಧ್ಯವಾಗುತ್ತಿಲ್ಲ. ಇದೊಂದು ರಂಗಸಾಹಸ. ಅವರದು ಮಹತ್ವಾಕಾಂಕ್ಷೆಯಿಂದ ಮಾಡಿರುವ ಯತ್ನ. ರಂಗಾಯಣ ತಂಡದ ಸಾಹಸ, ಶ್ರದ್ಧೆ, ಕಷ್ಟ, ಎಲ್ಲವೂ ಗೊತ್ತಿದ್ದರಿಂದಲೇ ಇರಬೇಕು, ಇನ್ನೂರು ಜನ ಪ್ರೇಕ್ಷಕರು, ಮಳೆ ಹುಯ್ಯುತ್ತಿದ್ದರೂ ಮತ್ತೆ ನಾಟಕವು ಶುರುವಾಗುತ್ತದೆ ಎಂಬ ಆಸೆಯನ್ನು ಇಟ್ಟುಕೊಂಡು ಗೊಣಗದೆ, ‘ಭೂಮಿಗೀತ’ ಸಭಾಂಗಣದಲ್ಲಿ ಕುಳಿತು ಕಾದಿದ್ದು. (ಬಹುಶಃ ಕರ್ನಾಟಕದ ರಂಗಭೂಮಿಯಲ್ಲಿ ೨ ಗಂಟೆಯ ಕಾಲ ಕೊಟ್ಟ ಅರ್ಧವಿರಾಮ ಇದೇ ಇರಬೇಕು.) ಕಡೆಗೂ ಕುವೆಂಪು ಕಾದಂಬರಿ ರಂಗಭೂಮಿಗೆ ಪೂರ್ತಿ ಮಣಿಯದೆ ಅಜೇಯವಾಗಿಯೇ ಉಳಿಯುತ್ತದೆ. ಇದನ್ನು ರಂಗಭೂಮಿಯ ಮಿತಿಯೆಂದು ತಿಳಿಯಬೇಕಾದ ಅಗತ್ಯವಿಲ್ಲ.

ರಂಗಾಯಣದ ನಿದೇರ್ಶಕಿಯಾಗಿದ್ದ ಜಯಶ್ರೀಯವರು, ರಗಳೆ ಮಾಡಿಕೊಂಡು ನಿರ್ಗಮಿಸಿದ್ದರು. ಬಳಿಕ ಅದಕ್ಕೆ ನಿರ್ದೇಶಕರನ್ನು ನೇಮಿಸುವ ಸಂದರ್ಭ ಬಂದಾಗ, ಸರ್ಕಾರವು ನಾಟಕಕಾರರಾದ ಲಿಂಗದೇವರು ಹಳೆಮನೆಯವರನ್ನು ಆರಿಸಿ, ಸಂಘಪರಿವಾರದ ವೀಟೊಗೆ ಮಣಿದು  ಕೈಬಿಟ್ಟು ರಂಪ ಮಾಡಿಕೊಂಡಿತ್ತು. ಈ ಘಟನೆಗಳಿಂದ ಸರ್ಕಾರ ಪೋಷಿತ ರೆಪರ್ಟರಿಗಳ ಬಗ್ಗೆಯೇ ಭರವಸೆ ಹೊರಟುಹೋಗುವಂತಹ ಸನ್ನಿವೇಶವಾಗಿತ್ತು. ಈ ಹಿನ್ನೆಲೆಯಲ್ಲಿ ‘ಮಲೆಮಗಳು’ ಪ್ರದರ್ಶನವು, ಸರ್ಕಾರಿ ಅಧೀನತೆಯ ಆಚೆ ಹೋಗಿ ಸ್ವತಂತ್ರವೂ ಸೃಜನಶೀಲವೂ ಆದ ಪ್ರಯೋಗವನ್ನು ಮಾಡಿದ್ದು ಸೋಜಿಗವಾಗಿ ಕಾಣುತ್ತಿತ್ತು. ಇದು ಸರ್ಕಾರ ಕೊಟ್ಟಿರುವ ಸ್ವಾತಂತ್ರ್ಯವಲ್ಲ. ತಮಗಿರುವ ಮಿತಿಗಳಲ್ಲೇ ರಂಗಾಯಣ ತಂಡವು ತೋರಿದ ದಿಟ್ಟತನ ಮತ್ತು ಪ್ರತಿಭೆ.

ಎಲ್ಲ ಓದುಗರು ಕಾದಂಬರಿಯನ್ನು ಓದಿ ಎಲ್ಲಿನ ಪಾತ್ರಗಳ ಚಹರೆಯನ್ನು, ಅವು ಜೀವಿಸುವ ಭೌಗೋಳಿಕ ಸನ್ನಿವೇಶವನ್ನು ತಮ್ಮದೇ ಆದ ಬಗೆಯಲ್ಲಿ ಕಲ್ಪಿಸಿ, ಕಟ್ಟಿಕೊಂಡಿರುತ್ತಾರೆ. ಅವು ಅವರವರ ಕಲ್ಪನೆ ಅನುಭವ ಜೀವನದೃಷ್ಟಿಗಳಿಂದಲೇ ನಿರ್ಮಿತವಾದ ಸ್ವಂತ ಅನನ್ಯ ಚಿತ್ರಗಳು. ಒಂದು ಕಾದಂಬರಿ ತನ್ನನ್ನು ಓದುವ ಎಲ್ಲ ಓದುಗರ ಮನದಲ್ಲೂ ಇಂತಹದೊಂದು ಚಿತ್ರಸಂಪುಟವನ್ನು ನಿರ್ಮಿಸಿಕೊಂಡಿರುತ್ತದೆ. ಈ ಅರ್ಥದಲ್ಲಿ ಕನ್ನಡದ ಓದುಗರಲ್ಲಿರುವ ಮಲೆಗಳಲ್ಲಿ ಮದುಮಕ್ಕಳು ಸಹಸ್ರಾರು. ಗುತ್ತಿಯ ರೂಪಗಳು ಸಹಸ್ರಾರು. ಆದರೆ ಕಾದಂಬರಿಯ ಓದಿನಿಂದ ಸೃಷ್ಟಿಸಿಕೊಳ್ಳುವ ಈ ಓದುಗರ ಸ್ವಂತದಾದ ಅನಂತ ಚಿತ್ರಗಳನ್ನು, ಅದೇ ಕಾದಂಬರಿ ಆಧರಿಸಿ ಹುಟ್ಟಿದ ಚಲನಚಿತ್ರ ಅಥವಾ ನಾಟಕಗಳು ಅಳಿಸಿಹಾಕಿ, ಏಕರೂಪಿ ಚಿತ್ರವೊಂದು ನೆಲೆಸುವಂತೆ ಮಾಡುವ ಸಾಧ್ಯತೆ ಇರುತ್ತದೆ. ಈ ಅಳುಕು ನನಗಿತ್ತು. ಇದೇ ಭಯದಿಂದ ನಾನು ಗಿರೀಶ್ ಕಾರ್ನಾಡರು ‘ಕಾನೂರು ಹೆಗ್ಗಡಿತಿ’ಯ ದೃಶ್ಯರೂಪವನ್ನು ನೋಡಿರಲಿಲ್ಲ. ಆದರೆ ರಂಗಾಯಣದ ‘ಮದುಮಗಳು’ ಪ್ರದರ್ಶನವನ್ನು ನೋಡಿದ ಮೇಲೆ, ಕಾದಂಬರಿ ಓದಿನಿಂದ ನನ್ನೊಳಗೆ ಮೂಡಿದ್ದ ನನ್ನವೇ ಆದ ಚಿತ್ರಗಳು ಏನಾಗಿವೆ ಎಂದು ನೋಡಿಕೊಂಡೆ. ಅವು ಹಾಗೆಯೇ ಉಳಿದಿವೆ ಅನಿಸಿ ಸಮಾಧಾನವಾಯಿತು. ಕಾದಂಬರಿ ಓದಿರದ ಬಾನುವಿಗೆ ಬೇರೆಯೇ ಅನುಭವವಾಗಿತ್ತು. ರಂಗಾಯಣದಿಂದ ಹೊರಹೊರಟು, ಚುಮುಚುಮು ಬೆಳಕಿನಲ್ಲಿ ಸಣ್ಣಗೆ ಕೊಳಚೆ ವಾಸನೆ ಬೀರುವ ಕುಕ್ಕರಹಳ್ಳಿಯ ಕೆರೆಯ ಏರಿಯ ಮೇಲೆ, ತಣ್ಣಗೆ ಬೀಸುವ ಗಾಳಿಯ ಜತೆ ಗುದ್ದಾಡುತ್ತ ನಾನು ಮತ್ತು ಬಾನು ವಾಕ್ ಮಾಡಿದೆವು. ರಾತ್ರಿಯ ಮಳೆಗೆ ನೆಲವೆಲ್ಲ ತೊಯ್ದು, ಎಲೆಗಳನ್ನೆಲ್ಲ ತೊಳೆದುಕೊಂಡ ಮರಗಳು ಹಾಡುವ ಹಕ್ಕಿಗಳನ್ನು ಹೂಗಳಂತೆ ಮುಡಿದು ಮದುಮಕ್ಕಳಂತೆ ನಿಂತಿದ್ದವು.

(ಕಲಾಕೃತಿ: ಅಮೃತಾ ಶೇರ್ ಗಿಲ್ ಅವರ ಬ್ರೈಡ್ಸ್ ಟಾಯ್ಲೆಟ್)