ಈ ಸಂಕಲನದಲ್ಲಿರುವ ಕತೆಗಳು ಕೆಲವೊಮ್ಮೆ ಈ ಕಾಲದ್ದಾದರೂ ಅವಧೂತರ ಆಧ್ಯಾತ್ಮಿಕ ವಿಲಾಸವನ್ನು ಹೊತ್ತಿರುತ್ತವೆ; ಜಲಾಲುದ್ದೀನ್‌ ರೂಮಿಯ ಕತೆಗಳನ್ನು, ಸೂಫಿ- ಝೆನ್‌ ಕತೆಗಳನ್ನು ನೆನಪಿಸುತ್ತವೆ. ಕೆಲವೊಮ್ಮೆ ಅತ್ಯಂತ ಪುರಾತನವೆನಿಸುವ ಇಂಥ ಕತೆಗಳಲ್ಲೇ ಹೊಸದೆನಿಸುವ ಕಾಣ್ಕೆಗಳನ್ನು ಕಾಣಿಸಬಲ್ಲ ಆಧುನಿಕ ಮನಸ್ಸೊಂದು ಮಿಡಿಯುತ್ತಿರುತ್ತದೆ. ಒಂದು ಇನ್ನೊಂದಾಗುವ, ಒಬ್ಬ ಇನ್ನೊಬ್ಬನಾಗುವ, ಒಬ್ಬರಿನ್ನೊಬ್ಬರಲ್ಲಿ ಬೆರೆತುಬಿಡುವ, ಇದೇನು ಉಪನಿಷತ್ತಿನ ಕತೆಯೇ ಎಂಬಂತೆ ಭಾಸವಾಗುವ ಹಲವು ಕತೆಗಳನ್ನು ಕುಂಟಿನಿ ಬರೆದಿದ್ದಾರೆ.
ಗೋಪಾಲಕೃಷ್ಣ ಕುಂಟಿನಿ ಅವರ ಹೊಸ ಪುಸ್ತಕ ‘ಮಾರಾಪು’ ಸಂಕಲನಕ್ಕೆ ಹರೀಶ್‌ ಕೇರ ಬರೆದ ಮುನ್ನುಡಿ

 

ಮಾರಾಪು ಎಂದರೆ ತಲೆ ಮೇಲೆ ಹೊತ್ತ ಕಟ್ಟು. ಒಂದೂರಿನಿಂದ ಇನ್ನೊಂದೂರಿಗೆ ನಡೆದು ಸಾಗುತ್ತಿದ್ದಾಗ ಹೊರುತ್ತಿದ್ದ ಆ ಕಟ್ಟಿನಲ್ಲಿ ಏನೂ ಇರಬಹುದು. ಇದೇ ಹೆಸರಿನ ಕುಂಟಿನಿಯವರ ಕತೆಯಲ್ಲಿ ಯಾರೋ ಒಬ್ಬ ಹೀಗೆ ಸಾಗುವವನು ತನ್ನ ತಲೆಯ ಕಟ್ಟನ್ನು ಇಳಿಸಲು ಇನ್ನೊಬ್ಬನ ಸಹಾಯ ಕೇಳುತ್ತಾನೆ. ಕಟ್ಟು ಹೊತ್ತವನೂ ಇಳಿಸಲು ಸಹಾಯ ಮಾಡುವವನೂ ಒಂದೆಡೆ ಸೇರಿ ಮಾತಾಡದಿದ್ದರೆ ಆ ಕಟ್ಟು ಕೆಳಗೆ ಇಳಿಯಲಾರದು. ಇಳಿಸಲು ಸಹಾಯ ಮಾಡಿದವನು ತನ್ನ ದಾರಿಯಲ್ಲಿ ಹಾದು ಹೋಗಬಹುದು; ಮತ್ತೆ ಅದನ್ನು ತಲೆಗೇರಿಸಲು ಇನ್ನೊಬ್ಬನ ಸಹಾಯ ಬೇಕೇ ಬೇಕಾಗುತ್ತದೆ. ಮಾರಾಪನ್ನು ನಾಜೂಕಾಗಿ ಇಳಿಸದಿದ್ದರೆ, ಕೆಳಗೆಸೆದರೆ ಒಳಗಿದ್ದುದು ಒಡೆದು ಚೂರಾಗಿ ಹೋಗಬಹುದು. ಹಾಗೆ ಈ ಕ್ರಿಯೆಯಲ್ಲಿ ಇನ್ನೊಬ್ಬ ನಮಗೆ ಬೇಕೇ ಬೇಕು. ಇನ್ನೊಬ್ಬನಿದ್ದಾಗ ಮಾತುಕತೆ ಸಹಜ. ಇಷ್ಟರಲ್ಲಾಗಲೇ ಈ ಮಾರಾಪು ಒಂದು ರೂಪಕವೆಂದು ನಿಮಗೆ ಅರ್ಥ ಆಗಿರುತ್ತದೆ. ಆ ಕಟ್ಟಿನಲ್ಲಿ ನಮ್ಮ ಬದುಕು ಭಾವದ ಕತೆಗಳು ಯಾಕೆ ಇರಲಾರದು? ಕುಂಟಿನಿ ಕತೆಗಳು ಹೀಗೆ ನಮ್ಮ ತಲೆಗೆ ಒಂದಷ್ಟನ್ನು ಏರಿಸಲೂ, ಒಂದಷ್ಟನ್ನು ಇಳಿಸಲೂ ಸಹಾಯ ಮಾಡುತ್ತವೆ.

(ಗೋಪಾಲಕೃಷ್ಣ ಕುಂಟಿನಿ)

ಕುಂಟಿನಿ ಉಪ್ಪಿನಂಗಡಿಯಂಥ ಕುಮಾರಧಾರೆ- ನೇತ್ರಾವತಿ ನದಿಗಳ ಸಂಗಮದ ಊರಿನಲ್ಲಿ ಕುಳಿತು ಇತರರಿಗಿಲ್ಲದ ಒಂದು ಸೌಖ್ಯವನ್ನು ಪಡೆದಿದ್ದಾರೆ. ಅದೇನೆಂದರೆ ಅವರು ಏಕಕಾಲಕ್ಕೆ ಅಡಕೆ ತೋಟಕ್ಕೆ ಮಳೆಗಾಲದಲ್ಲಿ ಕೊಳೆರೋಗಕ್ಕೆ ಮದ್ದು ಬಿಡಿಸುವ ವಾಸ್ತವ ಮತ್ತು ಸಹ್ರಲಿಂಗೇಶ್ವರನನ್ನು ಕೂಡುವ ನದಿಗಳ ಪುರಾಣ ಎರಡನ್ನೂ ಸುಖಿಸಬಲ್ಲರು. ಹಾಗಾಗಿಯೇ ಅವರ ಕತೆಗಳಲ್ಲಿ ಮಹಾರಾಜ, ಜಾಣ ಮಂತ್ರಿ, ಸುರಸುಂದರಿ, ಪುರಜನರು ಪರಿಜನರು, ಕುದುರೆಯೇರಿ ಅನೂಹ್ಯದೆಡೆಗೆ ಧಾವಿಸುವ ಸರದಾರರು ಇರುವಂತೆಯೇ, ವ್ಹಿಸ್ಕಿಗೆ ಸೋಡಾ ಬೆರೆಸಿದರೆ ಚೆನ್ನವೋ ಅಲ್ಲವೋ ಎಂದು ಚಿಂತಿಸುವ, ಈ ತರುಣ ಸೆಕ್ಸ್‌ನಲ್ಲಿ ಹೇಗಿರಬಹುದು ಎಂದು ಯೋಚಿಸುವ ಆಧುನಿಕ ಜಾಣ ಜಾಣೆಯರೂ ಇದ್ದಾರೆ.

ಕುಂಟಿನಿ ಕತೆಗಳು ಬಲು ವೇಗವಾಗಿ ಓಡುತ್ತವೆ. ಅದು ಕಾಲದ ಗುಣ. ಇಲ್ಲಿ ಬರುವ ಮಹಾರಾಜನಿಗೂ ಮನದಲ್ಲಿ ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ಸುರಸುಂದರಿಯರೂ ಜಾಣರೂ ಒಂದಲ್ಲ ಒಂದು ಉತ್ತರವನ್ನು ಹುಡುಕುತ್ತಲೇ ಇರುತ್ತಾರೆ. ಇಲ್ಲಿ ಮನಸ್ಸಿನ ನಿಗೂಢವನ್ನು ಹುದುಗಿಸಿ ಇಟ್ಟುಕೊಂಡಂತೆ ಕಾಣುವ ಗುಡ್ಡಗಳೂ ಬೆಟ್ಟಗಳೂ ಕಾಡುಗಳೂ ಅನೂಹ್ಯ ತಿರುವುಗಳನ್ನು ಕಾಣುವ ನದಿಗಳೂ ತೊರೆಗಳೂ ಹೆಚ್ಚು. ಘಟನೆಗಳು ಇಲ್ಲಿ ಮಿಂಚಿನಂತೆ ಓಡುತ್ತಿರುತ್ತವೆ. ಇಲ್ಲಿ ಪಾತ್ರಗಳು ನಿಂತು ಚಿಂತಿಸುವುದರಿಂದ ತತ್ವ ಹುಟ್ಟುವುದಿಲ್ಲ. ಅದು ಎಡೆಬಿಡದ ಘಟನಾವಳಿಗಳ ನಡುವಿನಿಂದಲೇ ಹೊಮ್ಮುತ್ತದೆ. ಕಾಲದ ನಿರಪೇಕ್ಷ ಗುಣ ದೇಶಕ್ಕೂ ಇದೆ. ಆದರೆ ಮನುಷ್ಯನ ಮನಸ್ಸಿಗೆ ಮಾತ್ರ ಅದು ಇಲ್ಲ. ದೇಶಕಾಲಗಳಿಗೆ ಬದ್ಧವಾಗಿ ಇರಬೇಕಾದ ಮನಸ್ಸು ಮಾತ್ರ ಅವೆರಡನ್ನೂ ನೆಲೆಯಾಗಿಟ್ಟುಕೊಂಡು ಬೇರೆ ನೆಲೆಗಳತ್ತ ಜಿಗಿಯುತ್ತದೆ. ಅದು ಪಾತಾಳದಲ್ಲಿ ಕಾಣುವ ಗುಡಿಸಲಿನ ಕೆಂಪು ದೀಪವನ್ನು ನಕ್ಷತ್ರವೆಂದು ಕಾಣಿಸುತ್ತದೆ. ‘ಆಲ್ಕೆಮಿಸ್ಟ್’ನಲ್ಲಿ ನಿಧಿಯನ್ನು ಹುಡುಕುತ್ತ ಹೋಗುವ ಕುರಿಗಾಹಿ, ತಾನು ಮೊದಲು ಇರುತ್ತಿದ್ದ, ಕನಸು ಕಂಡ ಪಾಳು ಕಟ್ಟಡದಲ್ಲೇ ನಿಧಿಯಿದೆ ಎಂದು ಅರಿಯುವಂತೆ, ಇಲ್ಲಿನ ಪಾತ್ರಗಳು ತಮ್ಮ ಒಳಗನ್ನು ಅರಿಯುತ್ತವೆ. ಹೀಗೆ ತನ್ನನ್ನು ತಾನು ಅರ್ಥ ಮಾಡಿಕೊಳ್ಳುವುದೇ ಎಲ್ಲದಕ್ಕಿಂತ ಕಷ್ಟ. ಈ ಕಷ್ಟದ ಕೆಲಸವನ್ನು ಕುಂಟಿನಿ ಕತೆಗಳು ಹಗುರವಾಗಿಸುತ್ತವೆ.

ಕುಂಟಿನಿಯ ಕತೆಗಳು ಕೆಲವೊಮ್ಮೆ ಈ ಕಾಲದ್ದಾದರೂ ಅವಧೂತರ ಆಧ್ಯಾತ್ಮಿಕ ವಿಲಾಸವನ್ನು ಹೊತ್ತಿರುತ್ತವೆ; ಜಲಾಲುದ್ದೀನ್‌ ರೂಮಿಯ ಕತೆಗಳನ್ನು, ಸೂಫಿ- ಝೆನ್‌ ಕತೆಗಳನ್ನು ನೆನಪಿಸುತ್ತವೆ. ಕೆಲವೊಮ್ಮೆ ಅತ್ಯಂತ ಪುರಾತನವೆನಿಸುವ ಇಂಥ ಕತೆಗಳಲ್ಲೇ ಹೊಸದೆನಿಸುವ ಕಾಣ್ಕೆಗಳನ್ನು ಕಾಣಿಸಬಲ್ಲ ಆಧುನಿಕ ಮನಸ್ಸೊಂದು ಮಿಡಿಯುತ್ತಿರುತ್ತದೆ. ಒಂದು ಇನ್ನೊಂದಾಗುವ, ಒಬ್ಬ ಇನ್ನೊಬ್ಬನಾಗುವ, ಒಬ್ಬರಿನ್ನೊಬ್ಬರಲ್ಲಿ ಬೆರೆತುಬಿಡುವ, ಇದೇನು ಉಪನಿಷತ್ತಿನ ಕತೆಯೇ ಎಂಬಂತೆ ಭಾಸವಾಗುವ ಹಲವು ಕತೆಗಳನ್ನು ಕುಂಟಿನಿ ಬರೆದಿದ್ದಾರೆ. ಕುಂಟಿನಿಯ ಕತೆಗಳು ಹೀಗೆ ನಮ್ಮನ್ನು ಕಾಲಯಂತ್ರದಲ್ಲಿ ಹಿಂದಕ್ಕೂ ಮುಂದಕ್ಕೂ ಜೀಕುವಂತೆ ಮಾಡುತ್ತವೆ. ಅವರ ಇತ್ತೀಚಿನ ಕತೆಗಳಲ್ಲಿ ಪಾತ್ರಗಳಿಗೆ ಹೆಸರು ಇರುವುದು ಕಡಿಮೆ. ಅವನು, ಇವನು, ಇವಳು, ರಾಜ, ರಾಣಿ, ಮಂತ್ರಿ ಇತ್ಯಾದಿಗಳೆಲ್ಲ ಇರುತ್ತಾರೆ. ಇವರೆಲ್ಲ ಯಾವ ಕಾಲಕ್ಕೂ ಎಲ್ಲೆಲ್ಲೂ ಇರುವವರೇ ಆದುದರಿಂದ ಇದು ಎಲ್ಲ ಕಾಲದ ಕತೆಗಳು. ಹಾಗೇ ಇವರೆಲ್ಲ ನಮ್ಮ ನಿಮ್ಮಲ್ಲೂ ಇರುವುದರಿಂದ ಇವು ನಮ್ಮ ನಿಮ್ಮ ಕತೆಗಳೂ ಹೌದು. ಹಾಗೇ ಕೆಲವೊಮ್ಮೆ ಅವರು ವಿಚಿತ್ರ ಅನಿಸುವಂಥ ಹೆಸರುಗಳನ್ನು ತಮ್ಮ ಕತಾ ನಾಯಕ ನಾಯಕಿಯರಿಗೆ ಕೊಡುತ್ತಾರೆ- ರಾಜಶೇಖರ ರಾಜಾರಾಯ, ಕೀರ್ತಿವಂತ ಸುಮನಸಾಚಾರ್ಯ ಶತಸಿದ್ಧಿ, ವಿಶ್ವಶೃಂಗ ವಿಜಯಧ್ವಜ ರಾಯರು, ವಿಶಾರದಾಮೃತಮತಿ ಇತ್ಯಾದಿ. ಇದು ಈ ಪಾತ್ರಗಳನ್ನು ನಿಗೂಢಗೊಳಿಸುತ್ತದೆ. ಕತೆಯ ಹೆಸರುಗಳೂ ಇಲ್ಲಿ ವಿಚಿತ್ರ- ಲೀಚಿಹಣ್ಣಿನ ಶರಬತ್ತಿನ ಮೇಲೆ ತುಳಸಿದಳ, ಹೆಸರಿಲ್ಲದ ಕಾಡಿನಲ್ಲಿ ಹೆಸರಿದ್ದ ಗೆಳತಿಯನ್ನು ಕಳೆದುಕೊಂಡ ಹೆಸರಿದ್ದ ಹುಡುಗನಿಗೆ ಹೆಸರಿಲ್ಲದ ಅವಳು ಹಂಗಿಸಿದ ಒಂದು ಪುಟ್ಟ ಕತೆ- ಹೀಗೆ. ಇದು ಕತೆಯ ಆವರಣವನ್ನು ಮಸುಕುಗೊಳಿಸಿ ಒಂದು ಬಗೆಯ ಮಂಪರಿನಲ್ಲಿ ಕತೆ ನಡೆಯುವಂತೆ ಮಾಡುತ್ತದೆ. ಹಾಗೇ ಕತೆಯ ಬಗೆಗಿನ ಚಿಂತನೆಯೂ ಕತೆಯಾಗುವುದನ್ನು ಅಪಾತ್ರ ಕತೆಯಲ್ಲಿ ನೋಡಬಹುದು- ಇಲ್ಲಿ ಪಾತ್ರವೊಂದು, ಒಂದು ಕತೆಗೆ ಎಷ್ಟು ಪಾತ್ರಗಳು ಬೇಕು ಎಂದು ತಿಳಿಯಲು ಕತೆಗಾರನ ಮನೆಗೆ ಹೋಗುತ್ತದೆ ಎಂಬಲ್ಲಿಂದ ಕತೆಯು ಆರಂಭವಾಗುತ್ತದೆ.

ಈ ಕತಾ ಸಂಕಲನ ಅವರ ಕತೆಗಾರಿಕೆಯ ಪ್ರತಿಭೆ ಮತ್ತು ಕಸುಬುದಾರಿಕೆಯ ಎಲ್ಲ ಸೂಕ್ಷ್ಮಗಳನ್ನು ಕಾಣಿಸುವಂಥದು. ಅಪರಿಚಿತವೆನಿಸುವ ಕಾಲದೇಶಗಳ ಮೂಲಕ ಪರಿಚಿತವೆನಿಸುವ ಮನೋಲೋಕಕ್ಕೆ ಸುರಂಗ ಕೊರೆಯುವುದು; ಕಣ್ಣಮುಂದೆಯೇ ಓಡುತ್ತಿದೆ ಎಂದೆನಿಸುವಷ್ಟು ತೀವ್ರಗತಿಯ ಕಥನ; ಹಲವಾರು ಅಂಶಗಳನ್ನು ಓದುಗನ ಊಹೆಗೇ ಬಿಡುವುದು, ಓದುಗನ ಸಹೃದಯತೆಯ ಮೇಲೆ ಅತೀವ ನಂಬಿಕೆ, ಅಸಂಗತ ಹಾಗೂ ಫ್ಯಾಂಟಸಿಗಳ ಮೊರೆ ಹೊಗುವುದರಲ್ಲಿ ಅಂಜಿಕೆಯಿಲ್ಲದಿರುವಿಕೆ; ವಸ್ತುವಿನ ಜತೆಗೆ ಶೈಲಿಯ ಬಗೆಗೂ ಅತೀವ ಶ್ರದ್ಧೆ- ಇತ್ಯಾದಿ. ಕುಂಟಿನಿ ಹಲವು ಪ್ರಣಯಕತೆಗಳನ್ನು ಇಲ್ಲಿ ಬರೆದಿದ್ದಾರೆ. ಆದರೆ ಎಲ್ಲವೂ ಅಪೂರ್ಣ ಪ್ರಣಯ ಕತೆಗಳು. ಇಲ್ಲಿ ಪರಿಪೂರ್ಣ ಪ್ರಣಯವೇ ಮೂರ್ತಿಭವಿಸಿದಂಥ ಚೆಲುವೆಯನ್ನು ಹುಡುಕುತ್ತಿರುವ ಚೆಲುವ, ಅಂಥ ಚೆಲುವನನ್ನು ಹುಡುಕುತ್ತಿರುವ ಚೆಲುವೆ ಬರುತ್ತಾರೆ. ಆದರೆ ಅಂಥವರು ಸಿಕ್ಕಿದರೂ ಇದಲ್ಲ ಇದಲ್ಲ ಎಂಬಂತೆ ನಿವಾಳಿಸಿ ಮುಂದುವರಿಯುತ್ತಾರೆ. ಹೀಗೆ ಕುಂಟಿನಿಗೆ ಪ್ರಣಯವೂ ಒಂದು ತುಂಬದ ಕೊಡ.

(ಹರೀಶ್‌ ಕೇರ)

ಹಾಗೆ ನೋಡಿದರೆ ಕುಂಟಿನಿ ಕತೆಗಳು ತಾತ್ವಿಕತೆಯ ನಿರಾಕರಣೆಯಲ್ಲೇ ನಿಜವಾಗುವಂಥವು. ನಮಗೆ ತಿಳಿದಂತೆ ಕನ್ನಡದ ಎಲ್ಲ ಕತೆಗಾರರೂ ತಮ್ಮ ಕತೆಗಳ ಮೂಲಕ ಒಂದಲ್ಲ ಒಂದು ಬಗೆಯ ತಾತ್ವಿಕತೆಯನ್ನು ಸಂರಚಿಸುತ್ತಿರುತ್ತಾರೆ. ಆದರೆ ಕುಂಟಿನಿ ಇಂಥ ಎಲ್ಲ ಸಂರಚನೆಗಳನ್ನು ನಿರಾಕರಿಸುತ್ತಾರೆ. ಒಂದು ಪಾತ್ರ ಅತಿಯಾಗಿ ಮಾತಾಡುತ್ತ ತಾತ್ವಿಕತೆಯನ್ನು ಕಟ್ಟಲು ಶುರುಮಾಡಿದರೆ ಇನ್ನೊಂದು ಪಾತ್ರ ಆ ಬಲೂನನ್ನು ಒಡೆದು ಟುಸ್ಸೆನಿಸುತ್ತದೆ. ನಿರಾಕರಣೆಯಲ್ಲೇ ಒಂದು ಬಗೆಯ ಕಟ್ಟುವಿಕೆಯೂ ಇದೆಯಲ್ಲವೇ? ಉಪನಿಷತ್ಕಾರರು ನೇತಿ ನೇತಿ ಅನ್ನುವ ಮೂಲಕವೇ ಬ್ರಹ್ಮದ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸಿದರು ತಾನೆ? ಆದ್ದರಿಂದ ತಾತ್ವಿಕತೆಯ ನಿರಸನದ ಸಾಮರ್ಥ್ಯವನ್ನು ನಾವು ಕೀಳಂದಾಜಿಸುವಂತೆಯೇ ಇಲ್ಲ. ಕುಂಟಿನಿ ಅದನ್ನು ಸಮರ್ಥವಾಗಿ ಬಳಸಿಕೊಂಡವರು.

ಕನ್ನಡದ ಬೇರೆ ಕತೆಗಾರರ ಹಾಗಲ್ಲ ಕುಂಟಿನಿ. ಅವರ ಮೇಲೆ ಬಹುಶಃ ಯಾರ ಪ್ರಭಾವವೂ ಇಲ್ಲ. ಅವರ ಕತೆಗಳು ಇನ್ಯಾರ ಕತೆಗಳನ್ನೂ ಕಾದಂಬರಿಗಳನ್ನೂ ಹೋಲುವುದಿಲ್ಲ. ಅವರಲ್ಲಿ ಒಂದು ಮಾರ್ಕೆಸ್‌ನ ನೂರು ವರ್ಷದ ಏಕಾಂತದಂಥ ಮಾಯಾವಾಸ್ತವದ ಕಾದಂಬರಿ ಇದೆ ಎಂದು ನನಗೆ ಅನಿಸುತ್ತಿರುತ್ತದೆ. ಅವರ ಕತೆಗಳೂ ಒಂದು ಬಗೆಯ ಸ್ವಪ್ನವಾಸ್ತವದಲ್ಲಿ ನಡೆಯುತ್ತಿರುತ್ತವೆ. ಅಲ್ಲಿ ಪಂಚತಂತ್ರದ, ಚಂದಮಾಮದ, ಶುಕಸಪ್ತತಿಯ ಕತೆಗಳೆಲ್ಲಾ ಮಿಶ್ರಗೊಂಡು ಹೊಸತೇ ಆದ ಒಂದು ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ. ಅವರ ಪಾತ್ರಗಳು ಇದ್ದಕ್ಕಿದ್ದಂತೆ ದ್ರಷ್ಟಾರರ ಶೈಲಿಯಲ್ಲಿ ಮಾತನಾಡುತ್ತವೆ. ಇದ್ದಕ್ಕಿದ್ದಂತೆ ದಿಗಂತದಾಚೆಗೆ ಏನೋ ಮಿಂಚಿದಂತೆ ನಡೆದುಕೊಳ್ಳುತ್ತವೆ. ಆ ಮಿಂಚು ಓದುಗನಲ್ಲೂ ಸಂಚರಿಸುವಂತೆ ಅವರು ನೋಡಿಕೊಳ್ಳುತ್ತಾರೆ. ಅವರ ಕತೆಗಳು ಸದಾ ಪರಿವರ್ತನಶೀಲ. ಅವರು ಆಗಾಗ ತಮ್ಮ ಕತೆಗಾರಿಕೆಯ ಶೈಲಿಯನ್ನು ಬದಲಿಸುತ್ತಾರೆ; ವಸ್ತುಗಳೂ ಅಷ್ಟೆ. ಅವರ ಹಳೆಯ ಕತೆಗಳಿಗೂ ಈಗಿನದಕ್ಕೂ ಅರ್ಥಾರ್ಥ ಸಂಬಂಧವೇ ಇಲ್ಲ. ಆದರೆ ಅವುಗಳ ಹೃದಯದಲ್ಲಿ ಒಂದು ಹರೆಯ ಇದ್ದೇ ಇದೆ. ಹೀಗಾಗಿ ಅವರ ಮುಂದಿನ ಕತೆಗಳ ಬಗ್ಗೆ ನನಗೆ ಸದಾ ಕುತೂಹಲ. ಮತ್ತೆ ಕುಂಟಿನಿಯಲ್ಲಿ ಒಂದು ಧಾಡಸಿತನವಿದೆ. ಅವರು ಕತೆಯನ್ನು ಓದಿ ಎಂದು ಯಾರಿಗೂ ದುಂಬಾಲು ಬೀಳುವುದಿಲ್ಲ. ಕನ್ನಡ ಕತಾಲೋಕದಲ್ಲಿ ನನ್ನ ಕತೆಗಳು ಎಲ್ಲಿ ನಿಲ್ಲುತ್ತವೆ ಅಂತ ಯಾವತ್ತೂ ಯೋಚಿಸುವುದಿಲ್ಲ. ಆಯಾ ಕಾಲದ ಜನಪ್ರಿಯ ಸೈದ್ಧಾಂತಿಕ ನಿಲುವುಗಳಿಗೆ ಅಂಟಿಕೊಳ್ಳುವುದಿಲ್ಲ. ಕತೆಗಾರನ ಮುಕ್ತ ನಿರ್ಭೀತ ಅಭಿವ್ಯಕ್ತಿಗೆ ಇದೆಲ್ಲ ಅಗತ್ಯ.

(ಕೃತಿ: ಮಾರಾಪು (ಕಥಾ ಸಂಕಲನ), ಲೇಖಕರು: ಗೋಪಾಲಕೃಷ್ಣ ಕುಂಟಿನಿ,ಪ್ರಕಾಶಕರು : ಸಪ್ನ ಪ್ರಕಾಶನ, ಬೆಲೆ : 150 ರೂ/-)