ಇತ್ತೀಚೆಗೆ ಟೊಟೊ ಪ್ರಶಸ್ತಿ ಪಡೆದ ಶ್ರೀಕೃಷ್ಣ ದೇವಾಂಗಮಠ, ಬರವಣಿಗೆಯನ್ನೂ ಪೋಟೋಗ್ರಫಿಯನ್ನೂ ಬಹುವಾಗಿ ಇಷ್ಟಪಡುವವರು. ಗದ್ಯ ಓದಲು ಭಾರೀ ತಾಳ್ಮೆ ಬೇಕಾಗುತ್ತದೆ ಎಂದು ಹೇಳುತ್ತಾ, ಬಯಲಿನಲ್ಲಿ ಕೀಟವೊಂದರ ಚಲನೆಯನ್ನು ಸೆರೆ ಹಿಡಿಯಲು ಗಂಟೆಗಟ್ಟಲೆ ‘ಕಮಕ್ ಕಿಮಕ್’ ಎನ್ನದೇ ಕಾಯುವವರು. ವೃತ್ತಿ, ತಿಂಗಳ ಸಂಬಳ, ಬದುಕು ಎಂಬ ಸಾಮಾನ್ಯ ಚೌಕಟ್ಟನ್ನು ದಾಟಿ ಕವಿತೆಗಳನ್ನೂ ಕೀಟಗಳನ್ನೂ ಹುಡುಕುತ್ತ ಅಲೆಯುವುದನ್ನು ಇಷ್ಟಪಡುವವರು. ಅವರ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.

ಬದುಕು ನಿರಂತರ ಸಾಗುತ್ತಿರುತ್ತದೆ, ಬದಲಾವಣೆಗಳೂ ನಿರಂತರವಾಗಿ ಸಾಗುತ್ತಲೇ ಇರುತ್ತವೆ. ಆ ಬದಲಾವಣೆಗಳು ಮತ್ತು ಬದುಕಿನ ಮೇಲೆ ಬೀರುವ ವಿವಿಧ ಪ್ರಭಾವಗಳ ಬಗೆಗೆಲ್ಲ ಸಂದರ್ಶನವೊಂದರಲ್ಲಿ ಕುಳಿತು ಹೇಳಲು ಶುರು ಮಾಡಿದರೆ, ಅದು ಬರೀ ಕೃತಕವೆನಿಸಿಬಿಡುತ್ತದೆ ಎಂದು ಹೇಳುವ ಶ್ರೀಕೃಷ್ಣ ದೇವಾಂಗ ಮಠ ಹೊಸ ತಲೆಮಾರಿನ ಬರಹಗಾರರ ಪೈಕಿ ವಿಭಿನ್ನವಾಗಿ ನಿಲ್ಲುವ ಆಸಾಮಿ. ಯಾವುದನ್ನೇ ಆಗಲಿ, ವಾಚ್ಯವಾಗಿ ಹೇಳಿದ ತಕ್ಷಣ ಅದು ಕೃತಕವೆನಿಸಿಬಿಡುತ್ತದೆ ಎನ್ನುವ ಕವಿ. ‘ಎಷ್ಟೋ ಜನರಿಗೆ ಕ್ಷುಲ್ಲಕ ಅನಿಸುವ ವಿಷಯಗಳು, ಮತ್ಯಾರದ್ದೋ ಬದುಕಿನಲ್ಲಿ ದೊಡ್ಡ ತಿರುವನ್ನೇ ಕೊಟ್ಟಿರುತ್ತದೆ. ಅದು ಅವರ ಪಾಲಿಗೆ ಬಹಳ ಮಹತ್ವದ್ದಾಗಿರುತ್ತದೆ. ಹಾಗೆಯೇ ವೈಯಕ್ತಿಕವೂ ಆಗಿರುತ್ತದೆ. ಆದ್ದರಿಂದ ಅಂತಹ ವೈಯಕ್ತಿಕ ವಿಚಾರಗಳನ್ನೆಲ್ಲ ಹೇಳಿಕೊಳ್ಳುವುದರಲ್ಲಿಹುರುಳಿಲ್ಲ, ಆಸಕ್ತಿಯೂ ಇಲ್ಲ’ ಎಂದು ಮಾತಿಗಿಂತ ದೀರ್ಘವಾಗಿ ನಕ್ಕುಬಿಡುತ್ತಾರೆ. ‘ಮಾತು ಸಾಕು’ ಎಂಬಂತೆ.

‘ಯಾವುದಕ್ಕೆ ಯಾವುದು ಕಾರಣ’ ಎಂಬ ರೀತಿಯ ತಾರ್ಕಿಕ ಪ್ರಶ್ನೆಗಳನ್ನೇ ನಿರಾಕರಿಸುವ ಅವರು ಮೆಚ್ಚುಗೆಯಿಂದ ಒಂದಷ್ಟು ಹೊತ್ತು ಮಾತನಾಡಬಹುದಾದರೆ ಅದು ಕವಿತೆಗಳ ಬಗ್ಗೆ ಮಾತ್ರ. ಅದರ ಹೊರತಾದ ಮಾತುಗಳೇನೇ ಇದ್ದರೂ ಅದು ಚಿಟ್ಟೆ, ಕಪ್ಪೆ, ಇರುವೆ ಮುಂತಾದ ಜೀವಲೋಕದ ವಿಸ್ಮಯಗಳ ಕುರಿತು. ಈ ಜೀವಲೋಕವನ್ನು ಗಮನಿಸುವ ಸಂದರ್ಭದಲ್ಲಿ ಅಂತರಂಗದಲ್ಲಿ ಮೂಡುವ ಬೆರಗಿನ ಕೈಹಿಡಿದುಕೊಂಡೇ ಕವಿತೆಗಳ ಊರಿನಲ್ಲಿ ಪಯಣಿಸುವ ಕೃಷ್ಣರಿಗೆ ಗದ್ಯ ಓದುವುದೆಂದರೆ ಬಹಳ ಕಷ್ಟ. ‘ಏನೋ ಒಂದು ವಿಷಯ ಹೇಳಲು, ಎಷ್ಟೊಂದು ಪದಗಳನ್ನು ದಂಡ ಮಾಡಿದ್ದಾರಲ್ಲ , ಇಷ್ಟು ಚಿಕ್ಕ ವಿಷಯ ಹೇಳುವುದಕ್ಕೆ ಇಷ್ಟೆಲ್ಲಾ ವಾಕ್ಯಗಳು ಬೇಕಾ ಎಂದು ಅಚ್ಚರಿಯೂ ಆಗುತ್ತದೆ. ಹೀಗೆಲ್ಲ ಅನಿಸುವುದರಿಂದ ಗದ್ಯ ಓದುವುದಕ್ಕೆ ನನಗೆ ಬಹಳವೇ ತಾಳ್ಮೆ ಬೇಕಾಗುತ್ತದೆ. ಹಾಗೆ ಕಷ್ಟಪಟ್ಟು ಒದುವುದಕ್ಕಿಂತ ಬಯಲಿನಲ್ಲಿ ಕೀಟವೊಂದರ ಜೊತೆಗೆ ಗಂಟೆಗಟ್ಟಲೆ ನಿಂತುಕೊಳ್ಳುವುದು ಸುಖವೆನಿಸುತ್ತದೆ’ ಎನ್ನುತ್ತಾರೆ.

ಹಾಗಂತ ಅವರು ಓದುವಿಕೆಯನ್ನೇ ನಿರಾಕರಿಸುವ ವ್ಯಕ್ತಿಯಲ್ಲ. ‘ಓದುವಿಕೆ ನಮಗೆ ಒಳ್ಳೆಯ ಮತ್ತು ಕೆಟ್ಟ ಬರವಣಿಗೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವ ಬಹಳ ದೊಡ್ಡ ಶಕ್ತಿಯನ್ನು ಅರಿವಿಗೆ ಬಾರದಂತೆ ನೀಡುತ್ತದೆ. ಎಷ್ಟು ಸಾಧ್ಯವೋ ಅಷ್ಟು ಓದುವ ಪರಿಪಾಠ ಬೆಳೆಸಿಕೊಳ್ಳಬೇಕು. ಇದು ತುಂಬಾ ಒಳ್ಳೆಯ ಅಭ್ಯಾಸ ಎಂದೂ ಒಪ್ಪುವೆ. ಇಂಥದ್ದನ್ನೆ ಓದಬೇಕು ಅಂತೆನಿಲ್ಲಾ, ಏನಾದರೂ ಓದಬಹುದು. ನಮಗೆ ಬೇಕೆನಿಸಿದ್ದು. ಭಿನ್ನ ಭಿನ್ನ ಶೈಲಿಯ ಲೇಖಕರಿದ್ದಾರೆ. ಮೊದಲು ನಮಗೆ ಸರಿಹೊಂದುವ, ನಮ್ಮ ಜೊತೆಗೆ ಬಹು ಸುಲಭವಾಗಿ ಸಂಪರ್ಕ ಸಾಧಿಸಬಹುದಾದವರ ಕೃತಿಗಳನ್ನು ಓದುವುದು ಇಷ್ಟವಾಗುತ್ತದೆ. ಯಾವಾಗ ಸದ್ಯ ಓದುತ್ತಿರುವ ಲೇಖಕರು ಸಪ್ಪೆಯಾಗಿ, ಬೋರ್ ಎನ್ನಿಸಲು ಶುರುವಾಗುತ್ತಾರೊ ಆಗ ನಾವು ಓದುವಿಕೆಯಲ್ಲಿ ಸ್ವಲ್ಪ ಮಾಗಿದ್ದೇವೆ ಎಂದೂ ಮತ್ತು ನಮ್ಮ ಅಭಿರುಚಿಯನ್ನು ಸ್ಪಷ್ಟ ಪಡಿಸಿಕೊಳ್ಳುವ ಹಾದಿಯಲ್ಲೂ ಇದ್ದೇವೆ ಎಂದು ಅಂದುಕೊಳ್ಳಬಹುದು’ ಎಂದು ಹೇಳುವವರು.

ಕೃಷ್ಣ ಬರೆಯುವ ಕವಿತೆಗಳಲ್ಲಿ ಮನುಷ್ಯ ಜೀವನದ ಏರುಪೇರುಗಳನ್ನು ಗುರುತಿಸಲು, ಬಣ್ಣಿಸಲು ಹಕ್ಕಿ, ಪಕ್ಕಿ, ಕೀಟಗಳ ಲೋಕದ ರೂಪಕಗಳೇ ನೆರವಾಗುತ್ತವೆ. ಜೊತೆಗೆ ಮನುಷ್ಯರಿಗೆ ಒಂಚೂರು ಬುದ್ಧಿ ಹೇಳಲೂ ಅವರು ಕೀಟಸಾಮ್ರಾಜ್ಯದ ಪ್ರತಿನಿಧಿಗಳ ಬಳಿಯೇ ಬಿನ್ನವಿಸಿಕೊಳ್ಳುತ್ತಾರೆ.

ನೆಲದಿಂದಲೇ ಆಕಾಶಕ್ಕೆ ಚಿಮ್ಮುವುದನರಿತ
ರೆಕ್ಕೆ ಇರುವೆಗಳೇ ನೀವು ಜಗತ್ತಿನ ಮೊದಲ ದೈವಗಳು
ಗೋಧಿಕಾಳು ಒಂದು ದೀರ್ಘ ಜೀವನ ಅನ್ನುವುದ ಕೊಂಚ ಕಲಿಸಿ
ಕಾಲ ಬುಡದಲ್ಲೇ ನಿಮ್ಮನ್ನು ಅಮುಕುವ ದೈತ್ಯರಿಗೆ

ಬಣ್ಣನೆಯೋ, ಬೋಧನೆಯೋ ಅಥವಾ ಮನಸ್ಸಿಗೆ ಹೊಳೆದ ಮಿಂಚಿನಂತಹ ವಿಚಾರಗಳೋ, ಅವುಗಳನ್ನೆಲ್ಲ ಕವಿತೆಯೆಂಬ ಲಯದಲ್ಲಿ ನೇಯುವುದು ಕೃಷ್ಣ ಅವರಿಗೆ ಒಲಿದು ಬಂದ ಕೌಶಲದಂತೆ ಕಾಣುತ್ತದೆ. ಆದ್ದರಿಂದ ನಿಸರ್ಗ ಮೋಹದಿಂದ ಬಿಡಿಸಿಕೊಂಡ ಕವನಗಳೂ ಅವರ ಜೋಳಿಗೆಯಲ್ಲಿವೆ.

ಶಾಂತಿಯ ಧಗೆಯಿಂದ ಕತ್ತಲನ್ನು ಹೊತ್ತಿಸು
ಖುಷಿಯ ಗಾಳಿ ಬೀಸಿ ಒಂದೇಸಮ ಕಿಟಕಿ ಬಡೆದುಕೊಳ್ಳುತ್ತವೆ
ದುಃಖ ಬಾಗಿಲು ದಾಟುತ್ತದೆ ಅದರಪಾಡಿಗೆ,
ಕಾರ್ಗಲ್ಲಿನಂತೆ ಕಪ್ಪಾದ ಇರುಳು ನೀರ್ಗಲ್ಲಿನಂತೆ ಬೆಳಕಾಗಿ
ಎರಡೂ ಮಗ್ಗಲು ಒಂದು ಕ್ಷಣ ಮಿಂಚಿ ಹೊಳೆಯುತ್ತವೆ

ಹೀಗೆ ಕವಿತೆ ಬರೆಯುವ ಶ್ರೀಕೃಷ್ಣ ದೇವಾಂಗಮಠ ಅವರ ಬಳಿಗೆ ಇತ್ತೀಚೆಗೆ ಪ್ರಶಸ್ತಿಯೆಂಬ ಗರಿಯೊಂದು ಬಂದಿದೆ. ಕನ್ನಡ ಸೃಜನಶೀಲ ಯುವ ಬರಹಗಾರರ ವಿಭಾಗದಲ್ಲಿ `ಟೊಟೊ ಪುರಸ್ಕಾರ- 2022’ ಪ್ರಶಸ್ತಿಯು ಅವರಿಗೆ ಲಭಿಸಿದೆ. ಪ್ರಶಸ್ತಿಯೆಂದರೆ ಅದು ಗುಲಾಬಿಯಂತೆ. ಜೊತೆಗೆ ಮುಳ್ಳೂ ಇರುತ್ತದೆ, ಜವಾಬ್ದಾರಿಯನ್ನು ಹೊರಿಸುತ್ತದೆ ಎಂದು ಪ್ರಶಸ್ತಿಯ ಸಮಾಚಾರವನ್ನು ಹೇಳುತ್ತಾರೆ. ಅದನ್ನು ಖುಷಿಯಿಂದಲೂ ಸ್ವಲ್ಪ ಭ ಯದಿಂದಲೂ ಒಪ್ಪಿಕೊಂಡಿದ್ದೇನೆ ಎಂದು ಹೇಳುವಾಗ ಹಾಗೂ ಆ ಪ್ರಶಸ್ತಿಯನ್ನು ಅವರು ಈ ರೀತಿ ಬಣ್ಣಿಸುವಾಗ, ಮಾತುಗಳಲ್ಲಿ ವಿನಯವಂತಿಕೆಯ ಛಾಯೆ.

‘ಎಷ್ಟೋ ಜನರಿಗೆ ಕ್ಷುಲ್ಲಕ ಅನಿಸುವ ವಿಷಯಗಳು, ಮತ್ಯಾರದ್ದೋ ಬದುಕಿನಲ್ಲಿ ದೊಡ್ಡ ತಿರುವನ್ನೇ ಕೊಟ್ಟಿರುತ್ತದೆ. ಅದು ಅವರ ಪಾಲಿಗೆ ಬಹಳ ಮಹತ್ವದ್ದಾಗಿರುತ್ತದೆ. ಹಾಗೆಯೇ ವೈಯಕ್ತಿಕವೂ ಆಗಿರುತ್ತದೆ. ಆದ್ದರಿಂದ ಅಂತಹ ವೈಯಕ್ತಿಕ ವಿಚಾರಗಳನ್ನೆಲ್ಲ ಹೇಳಿಕೊಳ್ಳುವುದರಲ್ಲಿಹುರುಳಿಲ್ಲ, ಆಸಕ್ತಿಯೂ ಇಲ್ಲ’ ಎಂದು ಮಾತಿಗಿಂತ ದೀರ್ಘವಾಗಿ ನಕ್ಕುಬಿಡುತ್ತಾರೆ.

ಜಗತ್ತಿನ ವಸ್ತು,ಜೀವಿ, ವಿಚಾರಗಳನ್ನು ಚಿಕ್ಕವು ದೊಡ್ಡವು ಎಂದು ಭೇದ ಮಾಡುವ ಮನುಷ್ಯರನ್ನು ಸ್ವಲ್ಪ ಅಸಮಾಧಾನದಿಂದಲೇ ನೋಡುವ ಶ್ರೀಕೃಷ್ಣ ದೇವಾಂಗಮಠ ಅವರು ಯಾವತ್ತಿದ್ದರೂ, ಜೀವ ಲೋಕವನ್ನು ನೋಡುವ ಖುಷಿಯನ್ನು ಬಿಟ್ಟುಕೊಡುವುದಿಲ್ಲ. ಫೋಟೋಗ್ರಫಿಯ ನೆಪ ಮಾಡಿಕೊಂಡು, ಈ ಲೋಕ ವಿಸ್ಮಯಗಳನ್ನುಬೆರಗುಗಣ್ಣಿನಿಂದ ನೋಡುತ್ತ ಸಾಗುತ್ತಾರೆ. ಅದೇ ಬೆರಗುಗಣ್ಣಿನ ಗ್ರಹಿಕೆಯ ಬಲದಿಂದ, ಲಾಲಿತ್ಯಮಯ ಪದಗಳು ಅವರನ್ನು ಅರಸಿಕೊಂಡು ಬಂದಂತಿದೆ. ಬೇಕಾದರೆ ಈ ಕವನವನ್ನೇ ನೋಡಬಹುದು.

ತಿಪ್ಪೆ ಕೆದರುವ ಕೋಳಿ ಎರೆಹುಳುವನೊಂದೊಯ್ದು
ನದಿಯ ಮೀನಿನೊಡಲಿಗೆ ದಾಟಿಸಿದೆ
ಚೂಪಾದ ಕೊಕ್ಕು ತೂರಿಸಿ ಹಿಡಿದು
ಕಿಂಗ್ ಫಿಶರ್ ಹಾರಲೆತ್ನಿಸುವಾಗ
ಏಡಿ ಕಾಲುಹಿಡಿದೆಳೆದು ಮೀನ ಮತ್ತದೇ
ನೀರಿಗೆ ಜಾರಿಸಿಕೊಳ್ಳುವುದು

ಕೃಷ್ಣ ದೇವಾಂಗಮಠ ಬೆಳಗಾವಿಯ ರಾಮದುರ್ಗದರು. ೨೦೧೪ ರಲ್ಲಿ ಪುಸ್ತಕ ಪ್ರಾಧಿಕಾರದ ಸಹಾಯ ಧನ ಪಡೆದು ನಲ್ಮೆಯ ಭಾವ ಬುತ್ತಿ ಎಂಬ ಕವನ ಸಂಕಲನ ಪ್ರಕಟಿಸಿದ್ದರು. ಫೋಟೋಗ್ರಫಿ, ಪ್ರವಾಸ, ಸಂಗೀತ , ರಂಗಭೂಮಿ, ಸಿನಿಮಾ ಅವರ ಆಸಕ್ತಿಯ ಕ್ಷೇತ್ರಗಳು. ಈ ಎಲ್ಲವೂ ಒಂದಕ್ಕೊಂದು ಪೂರಕ ಎನ್ನಲೂಬಹುದು.

‘ರಾಮದುರ್ಗ ಹುಟ್ಟೂರಾದರೂ ಈಗ ಧಾರವಾಡಕ್ಕೆ ಬಂದು ನೆಲೆಸಿದ್ದೇವೆ. ಆರಂಭದಲ್ಲಿ ಸಿನಿಮಾವೊಂದಕ್ಕೆ ಕೆಲಸ ಮಾಡಿದ್ದೆ, ನಂತರ ಕಂಪೆನಿಯೊಂದಕ್ಕೆ ಕೆಲಸ ಮಾಡಿದ್ದಾಯಿತು. ಈಗ ಡಿಎಸ್ಎಲ್ಆರ್ ಕ್ಯಾಮೆರಾ ಜೊತೆಗೆ ಅಲೆದಾಟ ಖುಷಿ ಕೊಡುತ್ತಿದೆ. ವನ್ಯಜೀವಿಗಳ ಹೆಜ್ಜೆಗಳನ್ನು ಅರಸುತ್ತಾ ಸಾಗುವುದು ಇಷ್ಟವಾಗುತ್ತಿದೆ’ ಎನ್ನುತ್ತಾರೆ.

ನಿರಾಯಾಸ ಹಾರುವ ಹಕ್ಕಿ ಕಂಡು
ಆಮೆಗೆ ಏನು ಆಗಬೇಕಿದೆ
ತಾನು ದೂರದ ದಾರಿಯನ್ನು ಕಲ್ಲುಗಳ
ಸಮುದ್ರ ದಾಟಿ ಹೋಗುವವನು
ಗಾಳಿಯಲ್ಲಿ ಸುತ್ತು ಹೊಡೆಯುವುದು ನನಗಿಷ್ಟವಿಲ್ಲ

ಎಂಬ ಸಾಲುಗಳನ್ನು ಓದುವಾಗ, ಓದು,ವೃತ್ತಿಯೆಂಬ ಸಾಮಾನ್ಯ ಚೌಕಟ್ಟಿಗೆ ಬೆನ್ನು ಮಾಡಿ, ಕೀಟಲೋಕದ ಸಂಭಾಷಣೆಯನ್ನು ಕಲಿಯಲು ಹೊರಟ ಅವರೇ ನೆನಪಾಗುತ್ತಾರೆ. ನನ್ನ ಕವನಗಳು ಹೇಗಿವೆ, ಯಾವ ಪ್ರಭಾವಗಳಿವೆ, ಒಳಿತೇನು, ಕೆಡುಕೇನು ಎಂಬುದನ್ನೆಲ್ಲ ಓದುಗರು ಹೇಳಬೇಕಷ್ಟೆ. ಬರೆಯುವುದಷ್ಟೇ ನನಗೆ ಗೊತ್ತಿರುವುದು ಅವರು ಬರೆದ ‘ಕಾಲಪುರಷನೊಂದಿಗೆ ಸಂವಾದ’ ಎಂಬ ಈ ಕವನ ಗಮನಿಸಹುದು.


ತಟಸ್ಥ ನಿಂತ ನೀರವ ಮೌನದಲ್ಲಿ ಕಾಲಪುರುಷ ಮಲಗಿದ್ದಾನೆ
ಅವನೆದೆಯಲ್ಲಿ ನಿರರ್ಥಕವಾಗಿ ಶೂನ್ಯ ಉರಿಯುತ್ತಿದೆ

ಹರಿಯುವ ಬದುಕಿನಲ್ಲಿ ನಾನು ಮುಳುಗದೆ ತೇಲುತ್ತಿರುವೆ
ನನ್ನೆದೆಯಲ್ಲಿ ಅಂತಿಮಗಾನ ಮೊಳಗುತ್ತಿದೆ

ದೇವರು ನನ್ನ ಅಸ್ತಿತ್ವವನ್ನು ನಾದದ ಮೂಲಕ ಎಚ್ಚರಿಸುತ್ತಾನೆ
ಆದರೆ ಕೇವಲ ನಿನ್ನ ಗುಪ್ತ ಸ್ಪರ್ಶಗಳಿಂದ ನಾನು ನಿದ್ರೆ ಹೋಗುತ್ತೇನೆ

ಬಿಡುಗಡೆ ಎಂದರೆ ಆಶ್ರಮವೂ ಬಂಧಿಸಬಾರದೆಂದೆ ಹೇಳುತ್ತಾರೆ
ದಿವ್ಯ ತೇಜೋಮಯನಿಂದ ನಾನು ಮುಕ್ತಿ ಬಯಸಿ ಬದುಕುಳಿದಿದ್ದೇನೆ

ಮರದ ಇರುವಿಕೆಯನ್ನೇ ಪ್ರಶ್ನಿಸಿ ನೆರಳಿಗಾಗಿ ಹಂಬಲಿಸುತ್ತಾರಾದರೆ
ನಿನ್ನ ಇರುವಿಕೆ ತಿಳಿದೂ ತಿಳಿಯದಂತೆ ಸಂಶಯಿಸಿ ಸೋಲುತ್ತೇನೆ

ಸಂವಾದದ ಅಂತಿಮ ತೀರ್ಪು ನನ್ನ ಪರವಾಗಿಯೇ ಇರಲಿದೆ
ಕಾಲಪುರುಷ ಪ್ರಾರ್ಥನೆಗಿಂತ ಪ್ರಾಮಾಣಿಕತೆಗೆ ಕರಗುತ್ತಾನೆ

ಸದಾ ನಿನ್ನ ಸ್ತುತಿ ಎಲ್ಲರಿಗೂ ಧ್ಯಾನವಾಗಿದೆ ಭಯವಿದೆ ನಿನೆಂದರೆ
ಪರವಶವಾಗಿಸಿಕೊಳ್ಳಬಲ್ಲ ನೀನು ಚೇತನಗಳ ಮಾಲಿಕ

ನೀನು ಅನಂತವಾಗಿದ್ದು ನನ್ನನ್ನು ಹುಡುಕಿ ಬಾಗಿಲಿಗೆ ಬಂದಿದ್ದಿಯೇ
ಇನ್ನು ಅಷ್ಟೇ ನನ್ನನ್ನು ಸಂಪೂರ್ಣ ಅರ್ಪಿಸಿಕೊಳ್ಳುತ್ತೇನೆ