ಕನ್ನಡದ ಕಥೆ-ಕಾದಂಬರಿಗಳಲ್ಲಿ ವಿಜ್ಞಾನದ ವಸ್ತುಗಳನ್ನು ಬಳಸಿಕೊಳ್ಳುವುದು ಅಪರೂಪವೇನಲ್ಲ, ಆದರೂ ಈ ಬಗೆಯ ಕಥೆಗಳಲ್ಲಿ ಪ್ರಯೋಗಶೀಲತೆಗೆ ಅಪಾರ ಅವಕಾಶವಿದೆ. ಎರಡು ಸಾವಿರದ ಒಂದುನೂರನೆಯ ಇಸವಿಯಲ್ಲಿ ನಡೆಯುವ ಈ ಕಥೆ, ಆದರ್ಶ ಲೋಕವನ್ನಲ್ಲ, ಅವನತಿ ಮುಖದ ನಾಗರಿಕತೆಯ ಚಿತ್ರಣವನ್ನು ಮಾಡುತ್ತದೆ. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ರೊಮಾಂಟಿಕ್ ಕವಿಗಳು ವಿಜ್ಞಾನದ ವಿರುದ್ಧವಾದ ಧೋರಣೆಯನ್ನು ತಳೆದಿದ್ದರು. ಅದೇರೀತಿಯಲ್ಲಿ ಇಂದಿನ ಬಹಳಷ್ಟು ವಿಜ್ಞಾನ ವಸ್ತು ಆಧರಿತ ಕಥೆಗಳು ಯಾಕೆ ವಿಜ್ಞಾನ, ತಂತ್ರಜ್ಞಾನದ ಋಣಾತ್ಮಕ ಅಂಶಕ್ಕೇ ಒತ್ತುಕೊಡುತ್ತವೆ ಅನಿಸುತ್ತದೆ.
ಪ್ರಸನ್ನ ಸಂತೆಕಡೂರು ಅವರ “ಮಾಯಾಪಂಜರ” ಕಥಾಸಂಕಲನಕ್ಕೆ ಪ್ರೊ.ಓ.ಎಲ್ ನಾಗಭೂಷಣಸ್ವಾಮಿಯವರ ಮುನ್ನುಡಿ

 

ಪ್ರಸನ್ನ ಸಂತೆಕಡೂರು ಇವರು ತೀರ ಇತ್ತೀಚೆಗೆ ಪರಿಚಯವಾದ ಲೇಖಕರು. ಆದರೆ, ಓದುಗರಾಗಿ ಅವರದ್ದು ಸ್ವಲ್ಪ ದೀರ್ಘಕಾಲದ ಪರಿಚಯ. ಹದಿಮೂರು ಕಥೆಗಳಿರುವ ‘ಮಾಯಾಪಂಜರ’ ಸಂಕಲನವನ್ನು ಕೊಟ್ಟು ತಮ್ಮ ರಚನೆಗಳ ಬಗ್ಗೆ ಕೆಲವು ಮಾತು ಹೇಳಬೇಕೆಂದು ಬಯಸಿದ್ದಾರೆ. ಅವರ ವಿಶ್ವಾಸಕ್ಕೆ ಕೃತಜ್ಞ.

(ಪ್ರಸನ್ನ ಸಂತೆಕಡೂರು)

ಪ್ರಸನ್ನ ಅವರು ತಮ್ಮ ಉದ್ಯೋಗದ ನಿಮಿತ್ತವಾಗಿ ಒಂದು ದಶಕ ಕಾಲ ಅಮೆರಿಕೆಯಲ್ಲಿ ಬದುಕಿದ್ದವರು. ಇಲ್ಲಿನ ಕಥೆಗಳಲ್ಲಿ ಬಹುಪಾಲನ್ನುಅವರು ಕಳೆದ ಎರಡು ಮೂರು ವರ್ಷಗಳಲ್ಲಿ ಅಮೆರಿಕೆಯಲ್ಲಿರುವಾಗಲೇ ಬರೆದಿದ್ದಾರೆ. ಮಧ್ಯಮ ವರ್ಗದ ಅಮೆರಿಕ ನಿವಾಸಿ ಕನ್ನಡಿಗರೊಬ್ಬರು ತಮ್ಮ ಸ್ಮರಣೆಯ ಕನ್ನಡ ಭಾಷೆ ಮತ್ತು ದಿನದಿನವೂ ಎದುರಾಗುವ, ಏಕತಾನದ್ದೂ ಅನಿಸುವ, ಅಮೆರಿಕೆಯ ಪಟ್ಟಣದ ಬದುಕಿನ ವಾಸ್ತವ ವಿವರಗಳನ್ನು ಕಥೆಗೊಳಿಸಿದ ಹಾಗೆ ಇಲ್ಲಿನ ರಚನೆಗಳಿವೆ.

ಅಮೆರಿಕದ ಭೌತಿಕ ವಿವರ ಮತ್ತು ಕನ್ನಡ ಸಾಹಿತ್ಯದ ನೆನಪುಗಳು ಈ ಕತೆಗಳಲ್ಲಿ ಬೆರೆತಿವೆ. ವಚನ, ಆಧುನಿಕ ಮತ್ತು ಹಳೆಯ ಕಾಲದ ಕವಿಸೂಕ್ತಿಗಳ ಬಳಕೆ, ಕನ್ನಡನಾಡಿನ ಚರಿತ್ರೆಯ ಘಟನೆಗಳ ನಿರೂಪಣೆ ಇವೂ ಇಲ್ಲಿವೆ. ವಿದೇಶೀ ನೆಲದಲ್ಲಿ ತಮ್ಮ ಊರು, ತಮ್ಮ ಭಾಷೆ ತೀವ್ರವಾಗಿ ಸೆಳೆಯುವಾಗ, ಕಾಡುವಾಗ ಇಂಥ ಕಥೆಗಳು ಹುಟ್ಟುತ್ತವೆ ಅನಿಸುತ್ತದೆ. ಆದರೆ ಪ್ರಸನ್ನ ಅವರ ಆಸಕ್ತಿ ಇರುವುದು ಸಂಸ್ಕೃತಿಯ ನೆನಪಿನಲ್ಲೂ ಅಲ್ಲ, ಅಮೆರಿಕದ ಟೀಕೆ ಅಥವಾ ವಿಜೃಂಭಣೆಗಳಲ್ಲೂ ಅಲ್ಲ. ಕನ್ನಡದ ಮೂಲಕ ತಿದ್ದಿಕೊಂಡ ಮನಸ್ಸೊಂದು ಭಿನ್ನಸಂಸ್ಕೃತಿಯ ವಿವರಗಳ ಮೂಲಕ ಮನುಷ್ಯ ಸಾಮಾನ್ಯ ಅನುಭವಗಳನ್ನು ಪರಿಶೀಲಿಸುವಂತೆ ಇವೆ ಇಲ್ಲಿನ ಕಥೆಗಳು.

ವಿಚ್ಛೇದನ ಪಡೆದ ದಂಪತಿಗಳ ಚಿತ್ರಣ, ಗತಿಸಿದ ಪತ್ನಿಯ ನೆನಪಿನಲ್ಲೆ ಬದುಕು ಸಾಗಿಸುವ ಗಂಡ, ಭಾರತಕ್ಕೆ ಗಂಡನೊಡನೆ ಮರಳುವ ಪತ್ನಿ ತನ್ನ ವಿವಾಹಪೂರ್ವ ಗೆಳೆಯನ ನೆನಪಿನ ಕುರುಹುಗಳ ಬೆನ್ನುಹತ್ತಿ ಹೋಗುವುದು, ಅವಳ ನೆನಪಿನಲ್ಲಿ ಸುಳಿದುಹೋಗುವ ಚರಿತ್ರೆಯ, ಪುರಾಣದ ವಿವರಗಳು ಇಂಥವೆಲ್ಲ ಪ್ರಸನ್ನ ಅವರ ಕಥೆಗಳ ಸಾಮಗ್ರಿಗಳಾಗಿವೆ.

ಕನಸು ಅಥವಾ ಕನಸಿನಂಥ ಅನುಭವವೂ ಇವರ ಹಲವು ಕಥೆಗಳಲ್ಲಿ ಎದುರಾಗುತ್ತದೆ ಸ್ಟ್ಯಾಚೂ ಆಫ್ ಲಿಬರ್ಟಿಯಲ್ಲಿ ಬರುವ ಕನಸು, ಮಾಯಾಪಂಜರ ಕಥೆಯಲ್ಲಿ ಬರುವ ಅಲ್ಲಮ-ಕಾಮಲತೆ-ಶಾಂತಲೆಯರ ಸ್ವಪ್ನಸದೃಶ ನೆನಪು, ಅಸ್ಥಿಪಂಜರದ ಬಾಲಕದಲ್ಲಿ ಬರುವ ವಾಸ್ತವದ ಅಂಚಿನ ತುಸು ಆಚೆಯ ಸಂಗತಿಗಳು, ಐಕ್ಯ ಕಥೆಯಲ್ಲಿ ಅಜ್ಜಿಯನ್ನು ಕಾಡುವ ಅಕ್ಕನ ನೆನಪು ಇಂಥ ಉದಾಹರಣೆಗಳು ಸಾಕಷ್ಟು ದೊರೆಯುತ್ತವೆ. ಇಂಥ ವಿವರಗಳ ಕಾರಣದಿಂದಲೇ ಪ್ರಸನ್ನ ಅವರ ಕಥೆಗಳು ಸಾಮಾನ್ಯತೆಯ ಮಟ್ಟದಿಂದ ಮೇಲೇರುತ್ತವೆ.

ಅತಿಮಾನವನ ವಿಕಾಸ ಮತ್ತು ಅವನತಿ ವೈಜ್ಞಾನಿಕ ಪರಿವೇಶದ ಕುತೂಹಲಕಾರೀ ಕಥೆ. ಕನ್ನಡದ ಕಥೆ-ಕಾದಂಬರಿಗಳಲ್ಲಿ ವಿಜ್ಞಾನದ ವಸ್ತುಗಳನ್ನು ಬಳಸಿಕೊಳ್ಳುವುದು ಅಪರೂಪವೇನಲ್ಲ, ಆದರೂ ಈ ಬಗೆಯ ಕಥೆಗಳಲ್ಲಿ ಪ್ರಯೋಗಶೀಲತೆಗೆ ಅಪಾರ ಅವಕಾಶವಿದೆ. ಎರಡು ಸಾವಿರದ ಒಂದುನೂರನೆಯ ಇಸವಿಯಲ್ಲಿ ನಡೆಯುವ ಈ ಕಥೆ, ಆದರ್ಶ ಲೋಕವನ್ನಲ್ಲ, ಅವನತಿ ಮುಖದ ನಾಗರಿಕತೆಯ ಚಿತ್ರಣವನ್ನು ಮಾಡುತ್ತದೆ. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ರೊಮಾಂಟಿಕ್ ಕವಿಗಳು ವಿಜ್ಞಾನದ ವಿರುದ್ಧವಾದ ಧೋರಣೆಯನ್ನು ತಳೆದಿದ್ದರು. ಅದೇರೀತಿಯಲ್ಲಿ ಇಂದಿನ ಬಹಳಷ್ಟು ವಿಜ್ಞಾನ ವಸ್ತು ಆಧರಿತ ಕಥೆಗಳು ಯಾಕೆ ವಿಜ್ಞಾನ, ತಂತ್ರಜ್ಞಾನದ ಋಣಾತ್ಮಕ ಅಂಶಕ್ಕೇ ಒತ್ತುಕೊಡುತ್ತವೆ ಅನಿಸುತ್ತದೆ. ಮಾನವಿಕ ವಿಷಯಗಳು, ಸಾಹಿತ್ಯ ಇವೆಲ್ಲ ವಿಜ್ಞಾನವನ್ನು ಸಂಶಯದಿಂದಲೇ ನೋಡಬೇಕು, ಅದರ ಧನಾತ್ಮಕ ಅಂಶಗಳನ್ನೇ ಎತ್ತಿ ಹೇಳಬೇಕು ಎಂಬ ಅಲಿಖಿತ ನಿಯಮವಿದೆಯೋ ಅನ್ನುವ ಯೋಚನೆ ಕೂಡ ಬರುತ್ತದೆ.

ವಂಶವಾಹಿನಿಯಂಥ ಕಥೆಗಳಲ್ಲಿ ವಿಜ್ಞಾನದ ವಿವರ ಬಳಸಿಕೊಂಡರೂ ಮುಖ್ಯವಾಗುವುದು ತುಂಗೆಯ ದಂಡೆಯಲ್ಲಿ ಬ್ರಾಹ್ಮಣರೇ ಹೆಚ್ಚಾಗಿರುವ ಗ್ರಾಮವೊಂದರಲ್ಲಿ ಹೆಣೆದುಕೊಳ್ಳುವ ಸಂಬಂಧಗಳ ಕಥೆ. ಈ ಕಥೆ ಪ್ರಸನ್ನ ಅವರ ಮಹತ್ವಾಕಾಂಕ್ಷೆಯನ್ನೂ ಅವರು ದಾಟಬೇಕಾಗಿರುವ ಮಿತಿಯನ್ನೂ ಒಟ್ಟಿಗೆ ಸೂಚಿಸುತ್ತದೆ. ಆನೆಯು ಸೊಂಡಲಿನಿಂದ ಆಹಾರ ಬಾಯಿಗಿಟ್ಟುಕೊಳ್ಳುವ ಹಾಗೆ ಮೊಬೈಲು ಜೇಬಿಗೆ ಸೇರಿಸಿದ್ದು’ ಅನ್ನುವಂಥ ಕುತೂಹಲಕರ, ಕವಿತೆಗಳಲ್ಲಿ ಕಾಣುವಂಥ ಕಲ್ಪನಾಶೀಲ ಹೋಲಿಕೆಗಳಿವೆ. ಮತ್ತೂರು, ಹೊಸಹಳ್ಳಿ, ಅಮೆರಿಕದ ನಗರಗಳ ಬದುಕನ್ನು ಜೋಡಿಸುವ ಕೌಶಲವೂ ಇದೆ. ಓದುಗರ ಕುತೂಹಲವನ್ನು ಕಾಯ್ದುಕೊಳ್ಳಬೇಕೆಂಬ ತವಕವೂ ತಿಳಿಯುತ್ತದೆ. ಒಲವೇ ಜೀವನ ಸಾಕ್ಷಾತ್ಕಾರದಲ್ಲೂ ವೈರುಧ್ಯಮಯ ಕೌಟುಂಬಿಕ ಚಿತ್ರಣಗಳನ್ನು ನೀಡಿ, ಕೊನೆಯಲ್ಲಿ ದಿವಂಗತ ಸಂಗಾತಿಯ ಬಗ್ಗೆ ಪ್ರೀತಿ ಉಳಿಸಿಕೊಂಡಿರುವ ಗಂಡನ ಚಿತ್ರ ಬರುತ್ತದೆ. ಇಂಥ ಕಥೆಗಳನ್ನು ಓದುವಾಗ ಪ್ರಸನ್ನ ಅವರು ಕುತೂಹಲ ತಣಿಸುವ ಕಥೆಯ ಮಾದರಿಯನ್ನು ಇನ್ನೂ ಮೀರಲಾಗಿಲ್ಲ ಅನಿಸುತ್ತದೆ.

ಕುತೂಹಲಕರವಾಗಿ ಕಥೆಯನ್ನು ಹೇಳುವುದು ಒಂದು ಮುಖ್ಯವಾದ ಕೌಶಲ. ಅದರ ಸಾಧನೆಗೆ ಪ್ರಸನ್ನ ಅವರು ಇಲ್ಲಿನ ಕಥೆಗಳಲ್ಲಿ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಇನ್ನೊಂದು ಹೆಜ್ಜೆ ಮುಂದೆಹೋಗಿ ಕಥೆಯನ್ನು ಕಟ್ಟುವುದಕ್ಕಿಂತ, ಕಥೆಯನ್ನು, ಆ ಮೂಲಕ ಬದುಕನ್ನು ತೋರಿಸುವ ಹಾಗೆ ಕಥೆಗೆ ಆಕಾರ ಕೊಡುವುದು ಇನ್ನೂ ಗಹನವಾದ, ಹೆಚ್ಚಿನ ತೃಪ್ತಿಯನ್ನು ಕೊಡುವ ಕಥೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಹಾಗಾಗುವುದಕ್ಕೆ ಬೇಕಾದಂಥ ಸಿದ್ಧತೆಯ ಅಂಶಗಳು ಪ್ರಸನ್ನ ಅವರಲ್ಲಿ ಧಾರಾಳವಾಗಿವೆ.

ಸಾಹಿತ್ಯದ ನಿಕಟ, ಪ್ರೀತಿಪೂರ್ವಕ ಓದು, ಸಣ್ಣಪುಟ್ಟ ಸಂಗತಿಗಳನ್ನು ಗ್ರಹಿಸುವ ಸಾಮರ್ಥ್ಯ, ವಾಸ್ತವದ ವಿವರಗಳನ್ನು ಮರೆಯದ ಎಚ್ಚರ ಇವೆಲ್ಲ ಪ್ರಸನ್ನ ಅವರಲ್ಲಿವೆ. ಮುಖ್ಯವಾಗಿ ಬೇಕಾದದ್ದು ಘಟನೆ ಪ್ರಧಾನವಾದ ಕಥೆಯನ್ನು ಹೇಳಬೇಕೆಂಬ ಹಂಬಲಕ್ಕಿಂತ ಹೆಚ್ಚಾಗಿ ಬದುಕನ್ನು ನೋಡುವ ಕ್ರಮವನ್ನು ಚಿತ್ರಿಸುವ ಧ್ಯಾನಶೀಲತೆ ಮತ್ತು ಅರ್ಥವನ್ನು ದಾಟಿಸುವ ಭಾಷೆಗಿಂತ ಮಿಗಿಲಾಗಿ ಅನುಭವವನ್ನೇ ಕಟ್ಟಿಕೊಡುವ ಭಾಷೆಯನ್ನು ವಶಮಾಡಿಕೊಳ್ಳುವ ಸಾಧನೆ. ಈಗಿರುವಂತೆ ಕಥೆಗಳು ಕುತೂಹಲ ತಣಿಸುವ, ಅರ್ಥಕ್ಕೆ ಹೆಚ್ಚು ಮನ್ನಣೆ ನೀಡುವ ಕಥೆಗಳಾಗಿವೆ. ಶ್ರೀ ಪ್ರಸನ್ನ ಅವರು ಅನುಭವವನ್ನೇ ಭಾಷೆಯಲ್ಲಿ ಕಟ್ಟಿಕೊಡುವ ದಿಕ್ಕಿನಲ್ಲಿ ಸಾಗುತ್ತ ಇನ್ನೂ ಉತ್ತಮ ಕಥೆಗಳನ್ನು ನೀಡಲಿ ಎಂದು ಹಾರೈಸುತ್ತೇನೆ.