ನೆನ್ನೆ ಬೆಳಿಗ್ಗೆ ಕವಿ-ಕಥೆಗಾರ, ಭಾಷಾಶಾಸ್ತ್ರಜ್ಞ ಕೆ.ವಿ.ತಿರುಮಲೇಶ್ ತೀರಿಹೋದರು. ಇಳಿವಯಸ್ಸಿನ ಅನಾರೋಗ್ಯದ ನೆವದಲ್ಲಿ ಈ ಸೂಕ್ಷ್ಮ ಸ್ವಭಾವದ ಆರ್ದ್ರಜೀವಿ ನಮ್ಮಿಂದ ಭೌತಿಕವಾಗಿ ದೂರಹೋದರು.  ಧಾವಿಸಿದರು.. ಆದರೆ ನಿಧಾನವಾಗಿ. ಅವರು ಹೋದ ಮೇಲೆ ಅವರು ಧಾವಿಸಿದರು ಎಂದು ನಮಗನ್ನಿಸುವಂತೆ ನಮ್ಮನ್ನು ಬಿಟ್ಟು ಹೋದರು.
ಕೆ.ವಿ. ತಿರುಮಲೇಶ್‌ ಅವರ ವ್ಯಕ್ತಿತ್ವ ಹಾಗೂ ಬರಹದ ಕುರಿತು ಬರೆದಿದ್ದಾರೆ ಸಿಂಧೂರಾವ್‌ ಟಿ.

ಇವತ್ತಿನ ಸಾಹಿತ್ಯ ಯುಗದಲ್ಲಿ ಕೆಲವು ಮಿಥ್‌ಗಳಿವೆ. ಇದು ಕವಿತೆಯಾಗಬಹುದು, ಕಥೆ ಅಂದರೆ ಹೀಗಿರಬೇಕು, ಮಹಾಕಾವ್ಯಕ್ಕೆ ಕೈ ಹಾಕುವವರು ಸಧ್ಯ ಯಾರಿಲ್ಲ. ಭಾಷೆಯ ವಿಷಯ ಈಗ ಬರೀ ಓರಾಟಗಾರರಿಗೆ ಮಾತ್ರ ಅಂತೆಲ್ಲ.

ಈ ಮಿಥ್‌ಗಳನ್ನೆಲ್ಲ ಪಟ ಪಟ ಒಡೆಯುವಂತೆ.. ತಿರುಮಲೇಶ್ ಇದ್ದರು. ಕವಿತೆಯ ಕೊನೆಯ ಅರ್ಧ ಸರೀ ಅರ್ಥ ಆಗಬೇಕಾದರೆ ಮೊದಲರ್ಧ ಮತ್ತೆ ಓದಿ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲ ಕವಿ, ಮೊದಲ ಐದು ಸಾಲನ್ನ ಕವಿತೆ ಬರೆದಾದ ಮೇಲೆ ಕತ್ತರಿಸಿ ಬಿಸಾಡಬೇಕು ಅಂತ ಹೇಳುವ ಕವಿ, ಕಥೆಗಳ ತುಂಬ ಕವಿತೆಗಳಿಗಿಂತ ಹೆಚ್ಚಿನ ರೂಪಕಗಳನ್ನ ಇಡಿಕಿರಿಸಿಯೂ.. ಎಂಥ ಚಿಂದಿ ಬರೀತಾರೆ ಮಾರಾಯ್ರೆ ಅಂತ ಅನ್ನಿಸುವಂತೆ, ಅಯ್ಯಬ್ಬ ಇಷ್ಟು ಸಾಂದ್ರವಾಗಿ ಬರೆದರೆ ಓದಲಿ ಹೇಗೆ ಎಂದು ಬೈದುಕೊಂಡರೂ ಓದಿ ಮುಗಿಸದೆ ಇರಲಾಗದಂತೆ ಇರುವ ಕಥೆ ಬರೆದು ಬೆಚ್ಚಿ ಬೀಳಿಸುವ ಕಥೆಗಾರ, ಈ ಕಥೆ, ಕವಿತೆಗಳ ತುಂಟತನವನ್ನೆಲ್ಲ ಮುದುರಿ ಮೂಟೆ ಕಟ್ಟಿ ಭಾಷೆಯ ಸಾಧ್ಯತೆಗಳ ಬಗ್ಗೆ ಅಕಾರದಿಂದ ಳಕಾರದವರೆ ವಿಸ್ತಾರವಾಗಿ ಬರೆಯುವ ಭಾಷಾಶಾಸ್ತ್ರಜ್ಞ, ಲೋಕಸಾಹಿತ್ಯವನ್ನೆಲ್ಲ ಅಂಕಣಗಳ ವಾಚನಶಾಲೆಯಲ್ಲಿ ಹಗೂರವಾಗಿ ಅರ್ಥವಾಗುವಂತೆ ಬರೆಯುವ ಹಿರಿಯ ಅಧ್ಯಾಪಕ, ಅತ್ಯುತ್ತಮ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದವರು ಹೀಗೆಲ್ಲ ಇದ್ದ ತಿರುಮಲೇಶರಿಗೆ ಸಾಕಷ್ಟು ಪ್ರಶಸ್ತಿಗಳು, ಸಮ್ಮಾನಗಳು, ವಿಮರ್ಶೆಗಳು, ಸಂವಾದಗಳು ಎಲ್ಲ ಸಂದಿವೆ.

ಹೀಗೆಲ್ಲ ಇದ್ದರೂ ಇವತ್ತು ಓದುವ ಬರೆಯುವ ನೆಟ್ಯುಗದ ಜನಾಂಗಕ್ಕೆ ತಿರುಮಲೇಶರು ಅಪರಿಚಿತರೇ. ಈ ಬಗ್ಗೆ ತಿರುಮಲೇಶರಿಗೆ ಕೊರಗಿತ್ತು ಅಂತ ಅವರನ್ನು ಹತ್ತಿರದಿಂದ ಬಲ್ಲ ಕೆಲವರು ಹೇಳುತ್ತಿದ್ದುದನ್ನು ಕೇಳಿದ್ದೇನೆ. ಅವರನ್ನೆ ಮುಖತಃ ಭೇಟಿಯಾಗಿ ಮಾತನಾಡಿಸಿದಾಗ ಮತ್ತು ಅವರ ಕಥೆ ಕವಿತೆಗಳನ್ನು ಓದುವಾಗ ನನಗೆ ಯಾವತ್ತೂ ಹಾಗೆ ಅನಿಸಲಿಲ್ಲ. ಅವರ ಬರವಣಿಗೆಯಲ್ಲಿ ಒಂದು ಪರ್ಸೆಂಟಿನಷ್ಟೂ ಅಳುಕಿರಲಿಲ್ಲ, ಯಾರು ಓದಬಹುದು ಇದನ್ನೆಲ್ಲ ಎಂಬ ಅಲವತ್ತುಕೊಳ್ಳುವ ಹಳಹಳಿಕೆ ಇರಲಿಲ್ಲ. ಹಾಗಂತ ತಿರುಮಲೇಶ್ ಎಂಬ ಲೇಖಕ ನಮ್ಮ ತಲೆಮಾರು ಮತ್ತು ನಂತರದ ತಲೆಮಾರಿನ ಓದಿಗೆ ಸಾಕಷ್ಟು ಸಿಕ್ಕಿದ್ದರು ಎಂದು ನಾನು ವಿಶ್ವಾಸದಿಂದ ಹೇಳಲಾರೆ. ನನಗಿಂತ ಹಿಂದಿನ ತಲೆಮಾರಿನವರ ಮತ್ತು ತಿರುಮಲೇಶರ ಸಮಕಾಲೀನರ ಬಗ್ಗೆ ನನಗೆ ಹೆಚ್ಚು ಒಡನಾಟವಿಲ್ಲ, ಆ ಬಗ್ಗೆ ನನಗೆ ಗೊತ್ತಿಲ್ಲ.

ವಿಪುಲವಾಗಿ ಮತ್ತು ಅಷ್ಟೇ ಗಾಢವಾಗಿ ಬರೆದ ಅವರಿಗೆ ಅವರ ವಿವಿಧ ಸಾಹಿತ್ಯ ಪ್ರಕಾರಗಳಿಗೆ ಸಾಕಷ್ಟು ಪ್ರಶಸ್ತಿ, ಸನ್ಮಾನ, ವಿಮರ್ಶೆಗಳು, ಸಂವಾದಗಳು ಎಲ್ಲವೂ ಸಂದಿವೆ. ಬಹುಶಃ ಬೆಂಗಳೂರೆಂಬ ಸಾಹಿತ್ಯ ಶಕ್ತಿ ಕೇಂದ್ರದಿಂದ ದೂರವಿದ್ದಿದ್ದರಿಂದ ಅವರು ಹೆಚ್ಚು ಪ್ರಚಾರದ ಚಲಾವಣೆಯಲ್ಲಿ ಇರಲಿಲ್ಲ ಅಲ್ಲದೆ ತನ್ನ ಬಗ್ಗೆ ತಾನೆ ಹೇಳಿಕೊಳ್ಳಬೇಕಾದ ಸೆಲ್ಫಿ ಸಂಭ್ರಮದ ಮನಸ್ಥಿತಿ ಅವರದ್ದಲ್ಲದ ಕಾರಣ ಅವರು ಮಾತುಕತೆಗಳಿಗೆ ಸಿಕ್ಕಿದ್ದು ಕಡಿಮೆ. ಅವರ ಅನುಪಸ್ಥಿತಿಯಲ್ಲಿ ಲೋಕಾರ್ಪಣೆಯ ಸಂಭ್ರಮಾಚರಣೆಗಳಿಲ್ಲದೆ ಅವರ ಪುಸ್ತಕಗಳು ಬಿಡುಗಡೆಯಾಗಿದ್ದೇ ಹೆಚ್ಚು, ಆದ ಕಾರಣದಿಂದಲೂ ಸಾಮಾನ್ಯವಾಗಿ ಪುಸ್ತಕವೊಂದು ಪ್ರಕಟವಾದಾಗ ಇರುವ ಸಹಜ ಬಾತಾಖಾನಿಗಳು, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಖುಷಿಹಂಚುವಿಕೆಯ ಪೋಸ್ಟುಗಳಿಗೆ ಅವರು ಸಿಗಲೇ ಇಲ್ಲ. ಅವರ ವೈಯಕ್ತಿಕ ಸ್ನೇಹಿತರ ಪುಟ್ಟ ಗುಂಪಿನ ಹೊರತಾಗಿ ಅವರಿಗೆ ಜಾಸ್ತಿ ಒಡನಾಟ ಕಡಿಮೆ. ಹಾಗಂತ ಅವರು ಒಣ ಜಂಭದ, ಪ್ರತಿಷ್ಠೆಯ ಮನುಷ್ಯ ಖಂಡಿತ ಅಲ್ಲ. ಸರಳ, ತಮ್ಮಷ್ಟಕ್ಕೆ ತಾವಿರುವ, ತಾನೇ ಹೋಗಿ ಇತರರನ್ನು ಮಾತನಾಡಿಸದ ಸ್ವಭಾವ ಅಷ್ಟೆ. ಕಾವ್ಯದ ಕುರಿತು, ಭಾಷೆಯ ಕುರಿತು, ಪ್ರಪಂಚ ಸಾಹಿತ್ಯದ ಕುರಿತು, ಕಥೆಗಾರಿಕೆಯ ಕುರಿತು ಅವರ ಜೊತೆ ಮಾತನಾಡಿದರೆ, ನಮಗೆ ಈ ಕುರಿತು ಇಷ್ಟವಿದೆ ಅಂತ ಗೊತ್ತಾದರೆ ಅವರು ವಿವರವಾಗಿ ಅರ್ಥವಾಗುವಂತೆ, ಮತ್ತೆ ಎಂದೂ ನಮಗೆ ಮರೆತುಹೋಗದಂತೆ ಹೇಳುತ್ತಿದ್ದರು. ಯಾರೇ ಕೇಳಿದರೂ ಅವರು ಅಷ್ಟೇ ಚಂದಕೆ ಹೇಳುತ್ತಿದ್ದರು. ಕೇಳಿದವರು ಸಾಹಿತ್ಯಾಸಕ್ತರು ಓದುವವರು ಅನ್ನಿಸಿದರೆ ಸಾಕಿತ್ತು ಬೇರೆ ಯಾವ ವಿವರವೂ ಅವರಿಗೆ ಮುಖ್ಯವಿರುತ್ತಿದ್ದಿಲ್ಲ.

ನಿಮ್ಮನ್ನು ಓದಿದ್ದೀವಿ ಅಂತ ನಾವು ಹೇಳಿದರೆ ಆ ಹಿರಿಯ ಕಣ್ಣಲ್ಲಿ ಕಾಣುವ ಒಂದು ಮಿಂಚು, ಆ ಮುಖದಲ್ಲಿ ಸುಳಿದು ಹೋಗುವ ಒಂದು ಪ್ರಸನ್ನ ಭಾವ, ಮರುಕ್ಷಣವೇ ಹೌದಾ ಎಂಬ ಅಚ್ಚರಿಯ ಪುಟ್ಟ ಮಾತು ಎಲ್ಲವೂ ಸಹ “ನನ್ನ ಒಳಗು ಹೇಳಿದ್ದನ್ನು ನೀನು ಕೇಳಿಸಿಕೊಂಡೆಯಲ್ಲ ಸಧ್ಯ” ಎಂಬ ಮನುಷ್ಯ ಸಹಜ ಹಂಬಲವನ್ನು ಪ್ರತಿಫಲಿಸುತ್ತಿದ್ದವು. ಇದು ಯಾರಿಗೆ ಇಲ್ಲ ಹೇಳಿ? ಸಾಹಿತಿಗೆ, ಕಲೆಗಾರರಿಗೆ ಒಂದು ಔನ್ಸು ಹೆಚ್ಚೆ ಇರುತ್ತದೆ. ಇರಬೇಕು ಕೂಡಾ ಅಲ್ಲವೆ? ಇವರಲ್ಲವೆ ನಮ್ಮ ಮನಸ್ಸಿನ ವಿವಿಧ ಸ್ಥಿತಿಗಳಲ್ಲಿ ನಮಗೆ ಹೊಂದುವ ಸಾಹಿತ್ಯ, ಕಲೆಗಳನ್ನು ಕೊಟ್ಟು ನಮ್ಮನ್ನು ತಣಿಸುವವರು. ಹಾಗಾಗಿ ಅವರಿಗೆ ಕೊರಗಿತ್ತು ಎಂಬ ಮಾತು ನನಗೆ ಒಪ್ಪಿಗೆ ಇಲ್ಲ. ಎಲ್ಲರಿಗೂ ಇರುವ ಹಂಬಲ ಅವರಿಗೆ ಇತ್ತು. ಆ ಹಂಬಲಕ್ಕೆ ಪ್ರತಿಕ್ರಿಯಿಸುವ ಮನಸ್ಸುಗಳು ಮತ್ತು ಅವಕಾಶ ಅವರಿಗೆ ಬಹಳ ಕಡಿಮೆ ಸಿಕ್ಕವು.

ಇದೆಲ್ಲ ಇರಲಿ. ನನ್ನ ಗೆಳತಿ ಮಾಲಿನಿಗೆ ತಿರುಮಲೇಶರೆಂದರೆ ರವಷ್ಟು ಜಾಸ್ತಿಯೇ ಇಷ್ಟದ ಕವಿ. ನಾನು ತಿರುಮಲೇಶರನ್ನ ಹೆಚ್ಚಾಗಿ ಓದಲು ಕಾರಣವೂ ಮಾಲಿನಿಯೇ. ಈ ವಿಷಯಕ್ಕೆ ನಾನು ಸದಾ ಋಣಿ. ನಮ್ಮಿಬ್ಬರ ಮಾತ್ ಮಾತಲ್ಲಿ 2020ರಲ್ಲಿ ಸೆಪ್ಟೆಂಬರ್ 12 ತಿರುಮಲೇಶರ ಜನ್ಮದಿನ ಅದನ್ನು ಆಚರಿಸಿದರೆ ಹೇಗೆ ಅಂತ ಒಂದು ಮಾತು ಬಂತು. ಅವರನ್ನು ಓದಿದ ಮತ್ತು ಓದದ ಒಂದಷ್ಟು ಸಾಹಿತ್ಯಾಸಕ್ತರ ಹತ್ತಿರ ಅವರ ಸಾಹಿತ್ಯವನ್ನು ಓದಿಸಿ ಆ ಕುರಿತು ಬರೆಸಿ/ಓದಿಸಿದರೆ ಹೇಗೆ ಎಂಬ ಅಂದಾಜು ಬರುತ್ತಲೆ ನಾವು ಗುರುಗಣಾಧೀಶ ಶ್ರೀ ಸುಬ್ರಾಯ ಚೊಕ್ಕಾಡಿಯವರಲ್ಲಿ ಅಹವಾಲು ಸಲ್ಲಿಸಿದೆವು. ಕಾವ್ಯಕೇಳಿ ವಾಟ್ಸಪ್ ಗುಂಪಿನ ಮೂಲಕ ಒಂದು 45 ಜನರ ಗುಂಪು ಹುರಿಗೊಂಡಿತು. ಇದರಲ್ಲಿ ಈಗಾಗಲೇ ಕೆವಿಟಿಯವರ ಕವಿತೆ, ಕಥೆಗಳ ನಾಡಿ ಹಿಡಿದು ಗೊತ್ತಿದ್ದವರಿಂದ ಹಿಡಿದು, ಕೆವಿಟಿ ಎಂದರೆ ಫುಲ್ ಫಾರ್ಮ್ ಹೇಳಿ ಎಂಬವರೂ ಇದ್ದೆವು. ಕೆವಿಟಿಯವರ ಒಂದಷ್ಟು ಕವಿತೆಗಳು, ಕಥೆಗಳು, ನಾಟಕಗಳು, ಅಂಕಣ ಸಂಕಲನಗಳು, ಅವರ ಹಲವು ಸಂದರ್ಶನಗಳು ಎಲ್ಲವನ್ನೂ ಗುಡ್ಡೆ ಹಾಕಿಕೊಂಡು ನಮನಮಗೆ ಒಲಿದಂತೆ ಓದಿದೆವು.

ಮಾತುಕಥೆ ಅತ್ತಿತ್ತ ಹೋಗದಂತೆ ಟ್ರ್ಯಾಕಿಗೆ ತರಲು ಸುಬ್ರಾಯ ಚೊಕ್ಕಾಡಿಯವರು, ರಾಜು ಹೆಗಡೆಯವರು, ಮಾಲಿನಿ ಗುರುಪ್ರಸನ್ನ, ಶ್ರೀಧರಮೂರ್ತಿ, ಗೋವಿಂದ ಹೆಗಡೆ ಇದ್ದರು. ಸಂಭ್ರಮದಿಂದ ಅವರ ಸಾಹಿತ್ಯ ಓದಿ ನಮ್ ನಮ್ಮ ಸ್ಪಂದನೆಗಳನ್ನು ಕವಿತೆ ಕುರಿತ ಬರಹ, ಕಥೆ ಕುರಿತ ಬರಹ, ನಾಟಕ ಕುರಿತ ಬರಹ, ಕವಿತಾ ವಾಚನ, ಕಥಾ ವಾಚನ, ಹೀಗೆ ವ್ಯಕ್ತಪಡಿಸುತ್ತಿದ್ದೆವು. ಬರಹಗಳು, ಆಡಿಯೋಗಳು, ವಿಡಿಯೋಗಳು ತಯಾರಾದವು. ಲೇಖಕನ ಹುಟ್ಟಿದ ದಿನವನ್ನು ಅವರದೇ ಸಾಹಿತ್ಯದ ಮೂಲಕ ಆಚರಿಸುವ ಒಂದು ಅರ್ಥಪೂರ್ಣ ಪ್ರಯತ್ನವನ್ನು ಮಾಡಿದೆವು. ಈ ಸಂಭ್ರಮಕ್ಕೆ ಜೊತೆಯಾಗಿ ವಿಶೇಷ ಸಂಚಿಕೆ ತರಲು ಮುಂದಾದವರು ನಸುಕು.ಕಾಂ ನ ವಿಜಯ್ ಶೆಟ್ಟಿ ಮತ್ತು ಈ ಕುರಿತು ಎಲ್ಲ ತಾಂತ್ರಿಕ ಸಂಯೋಜನೆಗಳಿಗೆ ನೆರವಾಗಿದ್ದು ಯುವಲೇಖಕ ಶ್ರೀಧರ್ ತಲಗೇರಿ.

ಈ ಪ್ರಯತ್ನದಲ್ಲಿ ಪಾಲ್ಗೊಂಡವರು ಸುಶ್ರುತ ದೊಡ್ಡೇರಿ, ಅಜಿತ್ ಹೆಗಡೆ ಹರೀಶಿ, ರಜನಿ ಗರುಡ, ಪೂರ್ಣಿಮಾ ಸುರೇಶ್, ವೀಣಾ ತಿರಪಕಡಿ, ಅಂಜನಾ ಹೆಗಡೆ, ಶೈಲಜಾ ಹೆಗಡೆ ಗೋರ್‍ನಮನೆ, ಶೋಭಾ ರಾವ್, ಜ್ಯೋತಿ ಮಹಾದೇವ್, ಶುಭಶ್ರೀ ಭಟ್, ಹರೀಶ್ ಟಿ.ಜಿ. ಅನನ್ಯಾ, ಶ್ರೀಧರ ತಲಗೇರಿ, ರವೀಂದ್ರ ಮಾವಖಂಡ, ವಿದ್ಯಾ ಭರತನಹಳ್ಳಿ, ನಂದಿನಿ ವಿಶ್ವನಾಥ್ ಹೆದ್ದುರ್ಗ, ಆಶಾ ಜಗದೀಶ್, ವಿದ್ಯಾ ರಶ್ಮಿ, ಸ್ಮಿತಾ ಭಟ್ಟ, ಶ್ರೀದೇವಿ ಕೆರೆಮನೆ, ವಾಸುದೇವ ನಾಡಿಗ್, ರೇಖಾ ಭಟ್, ನಾಗರೇಖಾ ಗಾಂವ್ಕರ್, ಮಂಜುಳಾ ಹಿರೇಮಠ, ಸಿಂಧು ಚಂದ್ರ ಹೆಗಡೆ, ಕುಸುಮಾ ಆಯರಳ್ಳಿ, ಆನಂದ ಕುಂಚನೂರು, ಗೋವಿಂದ ಹೆಗಡೆ, ರಾಜು ಹೆಗಡೆ, ಶ್ರೀಧರಮೂರ್ತಿ, ಸುಬ್ರಾಯ ಚೊಕ್ಕಾಡಿ, ಮಾಲಿನಿ ಗುರುಪ್ರಸನ್ನ ಮತ್ತು ನಾನು. ಈ ಸಂಭ್ರಮದಲ್ಲಿ ನಮ್ಮ ಜೊತೆಗೆ ನಸುಕು.ಕಾಂ, ಕೆಂಡಸಂಪಿಗೆ, ಕನ್ನಡಪ್ರೆಸ್.ಕಾಂ, ನ್ಯೂ ಸಿಕ್ಸ್, ಋತುಮಾನ, ಮೊದಲಾದ ಸಾಹಿತ್ಯಪತ್ರಿಕೆಗಳು ಮತ್ತು ಎಫ್ಬಿ ಇದ್ದವು.

ಯಾವುದೇ ಗುಂಪು ಮತ್ತು ಗಾರಿಕೆ ಎರಡೂ ಇಲ್ಲದ ಮತ್ತು ಒಲ್ಲದ ತಿರುಮಲೇಶರನ್ನು ನಮ್ಮ ಓದಿನ ಸುಖಕ್ಕಾಗಿ ಓದಿ, ಅವರ ಹುಟ್ಟಿದ ದಿನವನ್ನು ಹಬ್ಬವಾಗಿಸಿದ್ದನ್ನು ನೋಡಿ ಸ್ವತಃ ತಿರುಮಲೇಶ್ ಅಚ್ಚರಿ ಮತ್ತು ಖುಷಿ ಪಟ್ಟರು.

ತಿರುಮಲೇಶರೊಡನೆ ಆಗಾಗ ಮಾತುಕತೆಯಾಡುತ್ತ ಇತ್ತಲಿನ ಓದು ಪ್ರಪಂಚದ ಒಂದು ಕೊಂಡಿಯಾಗಿ ಇದ್ದಿದ್ದು ಮಾಲಿನಿ. ಇವತ್ತು ಅವರೇ ತಿರುಮಲೇಶರ ಕುರಿತು ಬರೆದಿದ್ದರೆ ಒಳ್ಳೆಯದಿತ್ತು. ಆದರೆ ಆತ್ಮೀಯರ ಸಾವಿನ ಭಾರ ಅದು ತುಂಬುವ ನಿರ್ವಾತ ಎಲ್ಲವೂ ಬಹಳ ಕಷ್ಟ, ಆಗ ಮಾತು ಬರೆಹ ಇನ್ನೂ ಕಷ್ಟ. ನನಗೆ ಸಧ್ಯಕ್ಕೆ ನೆನಪಾದ ಕೆಲವನ್ನು ಇಲ್ಲಿ ಹಂಚಿದ್ದೇನೆ. ಜೊತೆಗೆ ಆ ಹಿರಿಯ ಜೀವ ಇದ್ದಾಗ ಸಂಭ್ರಮಿಸಿದ ಕೆಲವು ಘಳಿಗೆಗಳು ಓದಿದ ಎಲ್ಲರ ನೆನಪಲ್ಲಿ ಆ ಜೀವದ ಹಿರಿಮೆಯ ನೆನಪು ಮಾಡುತ್ತ ಇರಲಿ ಎಂಬ ಆಶೆಯೂ. ಈ ವಿಶಿಷ್ಟ ಮತ್ತು ಅದ್ಭುತ ಲೇಖಕ ಇಂಗ್ಲಿಷಿನಲ್ಲಿ ಬರೆದಿದ್ದರೆ ಲೋಕಮಾನ್ಯರಾಗಿರುತ್ತಿದ್ದರು ಎಂಬ ಕೊರಗು ಅವರ ಹಲವು ಬರಹಗಳನ್ನ ಕುರಿತು ಓದಿದಾಗ ಅನ್ನಿಸಿಯೇ ಅನ್ನಿಸುತ್ತದೆ ಎಂಬುದು ನಿಜ. ತಿರುಮಲೇಶರು ಮಿಗೆಲ್ ಸರ್ವಾಂತಿಸ್ ನ ಸ್ಪಾನಿಷ್ ಮಹಾಕಾದಂಬರಿ ಡಾನ್ ಕ್ವಿಕ್ಸೋಟನ ಸಾಹಸಗಳನ್ನು ಕನ್ನಡಕ್ಕೆ ಸಂಗ್ರಹಾನುವಾದ ಮಾಡಿದ್ದಾರೆ. ಇದು ಅಮ್ಮನಾಗಿ ನನ್ನ ಅಚ್ಚುಮೆಚ್ಚಿನ ಕೃತಿ. ನನ್ನ ಮಗಳಿಗೆ ಇದನ್ನು ಓದುತ್ತ ಓದುತ್ತ ನಾವಿಬ್ಬರೂ ಬಿದ್ದು ಬಿದ್ದು ನಕ್ಕ ಕ್ಷಣಗಳು ಬಹಳ ಇದ್ದವು. ಆಮೇಲೆ ಎಲ್ಲಾದರೂ ಹೋಗುವಾಗ ದಾರಿಯಲ್ಲೆಲ್ಲ ಈ ಕೃತಿಯಲ್ಲಿ ಬಂದ ಪಾತ್ರಗಳನ್ನು ಅನ್ವಯಿಸಿ ನೋಡುತ್ತ ನಾನೂ ನನ್ನ ಮಗಳೂ ಬಹಳ ಮಜವಾದ ಪ್ರಯಾಣಗಳನ್ನು ಮಾಡಿದ್ದೇವೆ. ನಾನು ಮತ್ತು ಮಾಲಿನಿ ಈ ಕಥೆಯಲ್ಲಿ ಬರುವ ಕಂಬಳಿ ಸೇವೆಯ ಆರಾಧಕರು. ಮನಸ್ಸು ಪೂರ್ತಿ ಬೇಜಾರಾಗಿ ಪಾತಾಳ ಮುಟ್ಟಿದಾಗ ಈ ಕಂಬಳಿ ಸೇವೆಯನ್ನ ನೆನಸಿಕೊಂಡು ಅದರ ಮೂಲಕವೇ ಮೇಲೆದ್ದು ಬಂದ ದಿನಗಳು ಸಾಕಷ್ಟಿವೆ.

ಈಗ ನಿನ್ನೆ ರಾತ್ರೆ ನನ್ನ ಮಗನಿಗೆ ಈ ಕಥೆಯನ್ನು ಓದಿ ಹೇಳಲು ಶುರುಮಾಡಿದ್ದು ಕಾಕತಾಳೀಯವೇ. ಬೆಳಗ್ಗೆ ಸರ್ ಹೋದರು ಎಂದು ಗೊತ್ತಾದ ಕೂಡಲೆ ಒಮ್ಮೆ ಮನಸ್ಸು ಬ್ಲಾಂಕಾಗಿಬಿಟ್ಟಿತು. ಮತ್ತೆ ದೈನಂದಿನ ಗಾಣ ಅವರ ನೆನಪನ್ನು ಹಿಂಡಿ ತೆಗೆಯಲು ಅನುವು ಮಾಡಿತು.

ತಿರುಮಲೇಶರಿಗೆ ಒಂದು ಘನತೆಯ ವಿದಾಯ ಹೇಳುವುದೆಂದರೆ ಅವರನ್ನು ಓದುವುದು, ನೆನಪಿಟ್ಟುಕೊಂಡಿರುವುದು ಎಂಬುದು ನನ್ನ ಅಭಿಪ್ರಾಯ. ನಮನಗಳು ಸರ್. ಹೋಗಿ ಬನ್ನಿ.

ಅವರ ಇತ್ತೀಚಿನ ಒಂದು ಕವಿತೆ ನಿಮ್ಮ ಓದಿಗಾಗಿ

ಸೀಕ್ರೆಟ್ ಸಂಚಿ

ಪ್ರತಿಯೊಬ್ಬನಲ್ಲೂ ಒಂದು
ಸೀಕ್ರೆಟ್ ಸಂಚಿಯಿರುತ್ತದೆ ಖಾಸಗಿ ಗುಟ್ಟುಗಳ ಸಂಚಿ…
ಯಾರಿಗೂ
ಕಾಣದಂತೆ ಜೋಪಾನವಾಗಿರಿಸಿದ್ದು..
ಕಬರ್ಡಿನಲ್ಲಿ
ನಂಬರ್‌ಲಾಕ್‌ ಹಾಕಿ..
ಅಥವಾ ಡ್ರಾವರಿನಲ್ಲಿ ಬೀಗ ಹಾಕಿ..
ಹಾಸಿಗೆ ಕೆಳಗೆ ಅಥವಾ
ತಲೆದಿಂಬಿನೊಳಗೆ
ಎಷ್ಟೇ
ಜೋಪಾನ ಮಾಡಿದರೂ ಕೆಲವೊಂದು,
ಕೆಲವೊಮ್ಮೆ
ರಟ್ಟಾಗದಿರುತ್ತವೆಯೆ…?
ಕಿಂಡಿಗಳಿರುತ್ತವೆ..
ಹೊರಗಿಣುಕುತ್ತವೆ ಭದ್ರಪಡಿಸಲು ಮರೆತು
ಅಥವಾ ಬೆಕ್ಕಿನ ಬಾಯಿಗೆ ಸಿಕ್ಕಿ, ಒಮ್ಮೆ ಹೊರ ಬಂದವು…
ಮತ್ತೆ ಒಳ ಹೊಕ್ಕು
ಕೂತಿರುತ್ವೆ…
ತಾವು ಬೀದಿ ಸುತ್ತಿಯೆ ಇಲ್ಲ… ಎಲ್ಲಿಗೂ ಹೋಗಿಲ್ಲ…
ಯಾರನ್ನೂ ಮಾತಾಡಿಸಿಲ್ಲ ಎಂಬಂತೆ..!
ಮಕ್ಕಳ ಮುಗ್ಧ ಭಾವದಲ್ಲಿ…
ಯಾರಲ್ಲೂ ಹೇಳಬೇಡಿ..
ಗುಟ್ಟುಗಳು ಬಹುರೂಪಿಗಳು..
ಅವು ಹೇಳಿದವರ ಬಾಯಲ್ಲಿ
ಕೇಳಿದವರ ಕಿವಿಯಲ್ಲಿ ಬದಲಾಗುತ್ತವೆ..
ಮಾಯಾಲಾಂದ್ರದ
ನೆರಳಿನಲ್ಲಿ ವಿಧವಿಧ ವೇಷ,
ಪರಕಾಯ ಪ್ರವೇಶ
ಶ್ರೇಷ್ಠರ ತಲೆಗೆ ಸ್ವರ್ಣ ಕಿರೀಟ..
ಜನ ಸಾಮಾನ್ಯರಿಗೆ ಮುಳ್ಳಿನ ಕಿರೀಟ.

ಈ ವಿಶಿಷ್ಟ ಮತ್ತು ಅದ್ಭುತ ಲೇಖಕ ಇಂಗ್ಲಿಷಿನಲ್ಲಿ ಬರೆದಿದ್ದರೆ ಲೋಕಮಾನ್ಯರಾಗಿರುತ್ತಿದ್ದರು ಎಂಬ ಕೊರಗು ಅವರ ಹಲವು ಬರಹಗಳನ್ನ ಕುರಿತು ಓದಿದಾಗ ಅನ್ನಿಸಿಯೇ ಅನ್ನಿಸುತ್ತದೆ ಎಂಬುದು ನಿಜ. ತಿರುಮಲೇಶರು ಮಿಗೆಲ್ ಸರ್ವಾಂತಿಸ್ ನ ಸ್ಪಾನಿಷ್ ಮಹಾಕಾದಂಬರಿ ಡಾನ್ ಕ್ವಿಕ್ಸೋಟನ ಸಾಹಸಗಳನ್ನು ಕನ್ನಡಕ್ಕೆ ಸಂಗ್ರಹಾನುವಾದ ಮಾಡಿದ್ದಾರೆ. ಇದು ಅಮ್ಮನಾಗಿ ನನ್ನ ಅಚ್ಚುಮೆಚ್ಚಿನ ಕೃತಿ. ನನ್ನ ಮಗಳಿಗೆ ಇದನ್ನು ಓದುತ್ತ ಓದುತ್ತ ನಾವಿಬ್ಬರೂ ಬಿದ್ದು ಬಿದ್ದು ನಕ್ಕ ಕ್ಷಣಗಳು ಬಹಳ ಇದ್ದವು.

ಅವರ ನಾಟಕ ಕಲಿಗುಲ ಕುರಿತು ನಾನು ಬರೆದಿದ್ದು:

ಅವರ ಐತಿಹಾಸಿಕ ನಾಟಕ ಕಲಿಗುಲ ನನ್ನ ಓದಿಗೆ ದಕ್ಕಿದಂತೆ ಇಲ್ಲಿ ಬರೆಯುತ್ತಿದ್ದೇನೆ. ಒಬ್ಬ ಸಾಮಾನ್ಯ ಓದುಗಳಾಗಿ, ನಾಟಕ ನೋಡುವ ಆಸಕ್ತಿ ಇರುವವಳಾಗಿ ನನಗೆ ಈ ನಾಟಕ ಹೇಗೆ ಒದಗಿತು ಎಂಬುದನ್ನ ಇಲ್ಲಿ ಬರೆಯುತ್ತಿದ್ದೇನೆ. ಇದು ನಾಟಕದ ವಿಮರ್ಶೆಯಲ್ಲ.

ತಿರುಮಲೇಶರೇ ಹೇಳಿದ ಹಾಗೆ ಇದು ಐತಿಹಾಸಿಕ ಪಾತ್ರಗಳನ್ನ ಅವಲಂಬಿಸಿ ಲೇಖಕರ ಕಲ್ಪನೆಯ ಮೂಸೆಯಲ್ಲಿ ಪಾಕಗೊಂಡ ನಾಟಕ. ಇತಿಹಾಸವಲ್ಲ. ರೋಮ್ ಇತಿಹಾಸ ಮತ್ತು ಸಾಮ್ರಾಜ್ಯ ಶತಮಾನಗಳಿಂದ ಜಗತ್ತಿನಾದ್ಯಂತ ಸಾಹಿತ್ಯಕ್ಕೆ ಆಕರಗಳಾಗಿವೆ. ರೋಮ್ ಎಂಬ ಗಣತಂತ್ರ ನಮ್ಮ ಮನಸಲ್ಲಿ ಮೊದಲು ಕನಸಾಗಿ, ನಂತರ ಅಲ್ಲಿನ ದುರಂತದ ಅರಿವಲ್ಲಿ ದೂರದಲ್ಲಿ ಉರಿವ ದೀಪವಾಗಿ, ಕಥೆ ಕವಿತೆ ನಾಟಕಗಳ ಪಾತ್ರಗಳಲ್ಲಿ ನಮ್ಮ ಮನಕ್ಕೆ ಮತ್ತೆ ಹತ್ತಿರವಾಗಿ ಆಗೀಗ ಸಿಗುತ್ತಲೆ ಇರುತ್ತದೆ. ಅಲ್ಬರ್ಟ್ ಕಮೂ ಬರೆದ ಕಲಿಗುಲ ನಾಟಕವನ್ನ ಡಿ.ಎ. ಶಂಕರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತಿರುಮಲೇಶರು ಬರೆದ ಕಲಿಗುಲ ಅವರ ಸ್ವತಂತ್ರ ಕೃತಿ. ಅನುವಾದ ಅಲ್ಲ. ಈ ಕಲಿಗುಲ ಎಂಬ ಪಾತ್ರ ಕಾರ್ನಾಡರ ತುಘಲಕ್ ನಾಟಕಕ್ಕೆ, ಲಂಕೇಶರ ಗುಣಮುಖ ನಾಟಕಕ್ಕೆ ಸ್ಫೂರ್ತಿ ಎಂಬ ಮಾತನ್ನು ಹಿರಿಯ ಸಾಹಿತ್ಯಾಸಕ್ತರಿಂದ ಕೇಳಿ ತಿಳಿದಿದ್ದೇನೆ. ತಿರುಮಲೇಶರ ಕಥೆ, ಕವಿತೆ, ಮತ್ತು ಅಂಕಣಗಳನ್ನು ಓದಿದ ನನಗೆ ಅವರು ಯಾಕೆ ಈ ಪ್ರಾಚೀನ ರೋಮ್ ಪಾತ್ರವನ್ನು ಅವಲಂಬಿಸಿ ಕನ್ನಡದಲ್ಲಿ ನಾಟಕ ಬರೆದರು ಎಂಬ ಕುತೂಹಲದಿಂದ ಈ ಓದಿಗೆ ತೊಡಗಿದೆ. ಪ್ರಾಚೀನ ಐತಿಹಾಸಿಕ ಕೃತಿಗಳು ಭವ್ಯ ನೋಟವನ್ನು ಕಟ್ಟಿಕೊಟ್ಟರೂ ಹೆಚ್ಚಿನ ಸಲ ಅವನ್ನು ನಾವು ನಮ್ಮ ವರ್ತಮಾನಕ್ಕೆ ಹೊಂದಿಸುವಲ್ಲಿ ಸೋಲುತ್ತೇವೆ. ಚರಿತ್ರೆಯಲ್ಲಿ ಕ್ರೂರಿ ಮತ್ತು ವಿಕೃತ ದೊರೆಯೆಂದು ಹೆಸರಾದ ಕಲಿಗುಲ ಈಗ ಯಾಕೆ, ಇದನ್ನು ಓದಿ, ಅಥವಾ ನಾಟಕ ನೋಡಿ ಏನುಪಯೋಗ ಎಂಬ ಆಲೋಚನೆ ನನಗೆ ಸಹಜವಾಗಿ ಇತ್ತು. ಅಥವಾ ಇದಿನ್ನೊಂದು ಕಪ್ಪು ಚಿತ್ರಣವನ್ನು ಮನೋವೈಜ್ಞಾನಿಕ ವಿಶ್ಲೇಷಣೆಯಲ್ಲಿ ಬೆಳ್ಳಗಾಗಿಸುವ ರಚನಾತಂತ್ರವೋ ಎಂಬ ಅನುಮಾನ ಭರ್ ಪೂರ ಇತ್ತು.

ನಾಟಕವನ್ನು ನಿಧಾನವಾಗಿ ಮೂರುದಿನ ಓದಿದೆ. ಪುಟ್ಟ ನಾಟಕವೇ. ಆದರೆ ಅದರ ಹಂತಗಳನ್ನ ಒಂದೊಂದಾಗಿ ದಾಟಿದೆ. ಒಂದು ಅಪ್ಪಟ ಓದಿನ ಸುಖ ನನ್ನದಾಯಿತು. ಕ್ಲಪ್ತ ಮತ್ತು ನಿರ್ದಿಷ್ಟ ಮಾತುಗಳು, ಬಹಳ ಕಡಿದಾಗಿ ನಿರ್ಮಿಸಿದ ಪಾತ್ರಗಳು, ಹೆಚ್ಚು ವಿವರಣೆ ಬೇಡದ ಒಂದೆರಡು ಮಾತುಗಳಲ್ಲಿ (ಡಯಲಾಗುಗಳಲ್ಲೆ) ಓದುಗರ/ನೋಡುಗರ ಮನಕ್ಕೆ ಅರ್ಥವಾಗಿಬಿಡುವ ಪಾತ್ರಚಿತ್ರಣ, ಎಲ್ಲೂ ನಿಧಾನವೆನಿಸದೆ ಪಟಪಟನೆ ಸಾಗಿಬಿಡುವ ಏರುಗತಿಯ ಚಲನೆ, ಬಿಗಿಯಾದ ನಿರೂಪಣೆ ಬಹಳವೇ ಇಷ್ಟವಾಯಿತು. ರೋಮಿನ ಅಥವಾ ಇನ್ಯಾವ ಹಿನ್ನೆಲೆಯೂ ಇಲ್ಲದೆ ಇವತ್ತಿನ ನಮ್ಮ ವರ್ತಮಾನಕ್ಕೆ, ರಾಜಕೀಯಕ್ಕೆ, ಪಟಕ್ಕನೆ ಅಂಟಿಸಿಬಿಡಬಹುದಾದ ಕಥೆ ಈ ನಾಟಕದಲ್ಲಿ ಬಂದಿದೆ. ಭಾರತವಿರಬಹುದು, ಅಮೆರಿಕವಿರಬಹುದು, ಮಧ್ಯ ಪೂರ್ವ ರಾಷ್ಟ್ರಗಳಿರಬಹುದು, ಯೂರೋಪಿನಲ್ಲಿರಬಹುದು ಎಲ್ಲೆಡೆಯ ಅಧಿಕಾರಶಾಹಿಗೂ ಇದು ಅಪ್ಲೈ ಆಗುತ್ತದೆ. ಬರಿದೆ ರಾಜಕೀಯ ಅಧಿಕಾರವಲ್ಲದೆ ಇದನ್ನು ಕಾರ್ಪೋರೇಟ್ ವಲಯಕ್ಕೂ ವಿಸ್ತರಿಸಬಹುದು, ನಾರ್ಸಿಸಿಷ್ಟಿಕ್ ಗುಣಗಳನ್ನ ಮೈಗೂಡಿಸಿಕೊಳ್ಳುತ್ತಿರುವ ನಮ್ಮ ದಿನದಿನದ ಬದುಕಿಗೂ ಈ ನಾಟಕ ಕನ್ನಡಿ ಹಿಡಿಯುತ್ತದೆ ಅನಿಸುತ್ತದೆ. ಒಬ್ಬ ಕ್ರೂರಿ ವಿಕೃತ ರಾಜನ ಕಪ್ಪು ಬಿಳುಪು ಚಿತ್ರಣ ಅಥವಾ ಮನಃಶಾಸ್ತ್ರೀಯ ವಿಶ್ಲೇಷಣೆಯಾಗಿದ್ದರೆ ಇದು ಹತ್ತರಲ್ಲಿ ಹನ್ನೊಂದಾಗುವ ನಾಟಕವೇ. ಆದರೆ ಆ ಯಾವ ದಾರಿಯನ್ನೂ ಹಿಡಿಯದೆ ಲೇಖಕರು ಇಲ್ಲೊಂದು ನಿರ್ಮಮ ತಂತ್ರವನ್ನ ಅನುಸರಿಸಿದ್ದಾರೆ. ಅವರ ಆಳವಾದ ಚರಿತ್ರೆಯ ಓದು, ಜಾಗತಿಕವಾದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ, ಮನುಷ್ಯ ಸ್ವಭಾವದ ಒಳನೋಟ, ಅಧಿಕಾರದಾಹದ ಹುನ್ನಾರಗಳು, ಅಧಿಕಾರವೆಂಬ ಆಲ್-ಎನ್ ಕಂಪಾಸಿಂಗ್ ಯಶಸ್ಸು ಮತ್ತು ದುರಂತ ಇದರ ಗಾಢ ಅನುಭವ ಈ ಎಲ್ಲವನ್ನೂ ತಿರುಮಲೇಶರು ಈ ನಾಟಕದಲ್ಲಿ ತಮ್ಮ ಭಾಷೆಯ ಲಾಲಿತ್ಯವನ್ನು ಬಳಸಿಕೊಂಡು ಬಹಳ ಮನದಟ್ಟುವಂತೆ ಬರೆದಿದ್ದಾರೆ. ಉದ್ದೂದ್ದ ಡಯಲಾಗುಗಳು, ಸಿಕ್ಕಾಪಟ್ಟೆ ಪಾತ್ರಗಳು ತುಂಬಿಸಿ ಇದು ಓದಲು ಕಷ್ಟ ಎಂದೆಲ್ಲ ಇದನ್ನು ಓದುವ ಮೊದಲು ಕೆಲವು ಮಾತುಗಳನ್ನು ಕೇಳಿದ್ದೆ. ನನಗೆ ಎಲ್ಲಿಯೂ ಆ ಅಡೆತಡೆಗಳು ಕಾಣಿಸಲಿಲ್ಲ. ಈಗಿನ ಕಾಲಮಾನದ ಟ್ರೆಂಡಾಗಿರುವ ಚುಟುಕಾದ ಚುರುಕ್ ಡಯಲಾಗುಗಳ ಎಲ್ಲರೂ ಎಲ್ಲರನ್ನೂ ಖುಷಿಪಡಿಸುವ ನಾಟಕ ಅಲ್ಲ ಇದು. ನಾಟಕವಾಗಿ ಪ್ರಯೋಗಿಸುವಾಗ ಕೂಡ ಇಲ್ಲಿರುವ ಕೆಲವು ಉದೂದ್ದ ಡಯಲಾಗುಗಳು ರಂಗಪ್ರಯೋಗಕ್ಕೆ ತಕ್ಕಂತೆ ಹೊಂದಿಸಲ್ಪಡುತ್ತವೆ ಎಂಬಲ್ಲಿ ನನಗೆ ಸಂಶಯವಿಲ್ಲ.

ಅಅಧಿಕಾರ ಎಂಬುದು ಯಃಕಶ್ಚಿತ್ ಮನುಷ್ಯನನ್ನು ಎಲ್ಲಿಗೆ ಬೇಕಾದರೂ ಎತ್ತಬಲ್ಲದು ಎಂಬುದು ನಮಗೆ ದಿನದಿನವೂ ಅನುಭವಕ್ಕೆ ಬರುತ್ತಲೇ ಇರುತ್ತದೆ. ಎಷ್ಟೇ ಮೇಲೆತ್ತಿದರೂ ಅವರವರ ಸ್ವಭಾವಕ್ಕೆ ತಕ್ಕಂತೆ ಅವರು ಹೇಗೆ ತಮ್ಮನ್ನು ತಾವೇ ಕೆಳಕ್ಕೆ ತಳ್ಳಿಕೊಂಡಿರುತ್ತಾರೆ ಎಂಬುದೂ ಗೊತ್ತಾಗುತ್ತಲೆ ಇರುತ್ತದೆ. ಯಾವುದೋ ಗೇಟೊಂದರ ಸೆಕ್ಯುರಿಟಿ, ಟ್ರಾಫಿಕ್ ಪೋಲಿಸ್, ಅಥವಾ ಕೈಲಾಸಕ್ಕೆ ಹೋದಾಗ ಗರುಡನನ್ನು ಹಾವು ಗತ್ತಿನಿಂದ ವಿಚಾರಿಸಿಕೊಂಡ ಹಾಗಿನ ನಡವಳಿಕೆಗಳು ಎಲ್ಲೆಲ್ಲೂ ಕಂಡುಬರುತ್ತಲೆ ಇರುತ್ತವೆ. ಇವನ್ನ ಮಹಾನ್ ಚರಿತ್ರೆಯ ಸಂದರ್ಭದಲ್ಲಿಟ್ಟು ಅಲ್ಲಿನ ವಿಕ್ಷಿಪ್ತ ಪಾತ್ರಗಳ ಮೂಲಕ ಹಾಯಿಸಿದಾಗ ನಾವು ವರ್ತಮಾನದ ವಿಪತ್ತನ್ನು ಈ ಐತಿಹಾಸಿಕ ನಾಟಕದ ಮೂಲಕವೇ ಕಾಣಬಹುದು ಎಂಬುದನ್ನು ತಿರುಮಲೇಶ್ ನಿರೂಪಿಸಿದ್ದಾರೆ.

ನಾಟಕದ ಮೊದಲಿಗೆ ಬರುವ ಎರಡು ಭಜನೆ ಗುಂಪುಗಳು ನನಗೆ ಈ ಕಾಲದ ಎರಡು ಎಕ್ಸ್‌ಟ್ರೀಂ ಗುಂಪುಗಾರಿಕೆಯನ್ನು ನೆನಪು ಮಾಡಿದವು. ಒಂದು ವಿನೋದ ವಿಡಂಬನೆಯಲ್ಲಿ ಆ ಚಿತ್ರಣ ಕಟ್ಟಿಕೊಡುತ್ತಲೇ ನಾವು ಮಾಡುತ್ತಿರುವುದರ ನಿರರ್ಥಕತೆಯನ್ನೂ ಈ ಸನ್ನಿವೇಶ ಮನದಟ್ಟು ಮಾಡುತ್ತದೆ. ರಾತ್ರಿಯಲ್ಲಿ ತೋಳದಂತೆ ಊಳಿಡುವ ಕಲಿಗುಲನ ಚಿತ್ರಣವನ್ನು ಅವನ ಪ್ರಜೆಗಳ ಕೈಕೆಳಗಿನವರ ಮಾತುಕತೆಗಳಲ್ಲಿ ಕಟ್ಟಿಕೊಡುತ್ತಾ ಅವನ ವಿಕ್ಷಿಪ್ತತೆಯನ್ನು, ಒಂಟಿತನವನ್ನೂ, ಈ ಸ್ವಭಾವಗಳು ಅವನಲ್ಲಿ ಪ್ರೇರೇಪಿಸುವ ಅಧಿಕಾರದಾಹವನ್ನು, ಮನ್ನಣೆಯ ದಾಹವನ್ನೂ, ದಾಹ ತಣಿಯುತ್ತಲೇ ಕಳೆದುಕೊಳ್ಳುವ ಭಯದಲ್ಲಿ ಅವನು ತನ್ನ ಪರಿವಾರವನ್ನೇ ಕಗ್ಗೊಲೆಗೀಡು ಮಾಡುವುದನ್ನೂ ಬಹಳ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ.

ಕೆಲವು ಚಿಕ್ಕ ಚಿಕ್ಕ ಸಂಭಾಷಣೆಗಳು ಇಲ್ಲಿ ನಿಮ್ಮ ಓದಿಗಾಗಿ. ಇಡೀ ನಾಟಕವನ್ನು ಓದಿದರೆ, ಅಥವಾ ಎಲ್ಲಾದರೂ ಪ್ರಯೋಗವಾದಾಗ ನೋಡಿದರೆ ಪೂರ್ಣ ಅನುಭವ ನಿಮ್ಮದಾಗುತ್ತದೆ.
ಎಷ್ಟೊಂದು ಇಲ್ಲಗಳ ಲೋಕ ಈ ಅಂಧ ಜಗತ್ತು!
ಯಾವುದೂ ಆಕಸ್ಮಿಕವಲ್ಲ ಎಲ್ಲವನ್ನೂ ವಿಧಿ ಬರೆದಿರುತ್ತದೆ, ಕೆಲವು ಸಲ ನಾನವನ್ನು ತಿದ್ದಿರುತ್ತೇನೆ.
ಫೆಸ್ಟಿನಾ ಲೆಂಟೆ… (ಧಾವಿಸು…ಆದರೆ ನಿಧಾನವಾಗಿ)
ಮೇಲೆ ಹೇಗೋ ಹಾಗೆ ಕೆಳಗೆ, ಕೆಳಗೆ ಹೇಗೋ ಹಾಗೆ ಮೇಲೆ!
ಕಾರ್ಪೆ ಡಿಯೆಮ್, ಫಿದಿತೆ ನೆಮಿನಿ… ಗಾಳಿಬಂದಾಗ ತೂರಿಕೋ.. ಯಾರನ್ನೂ ನಂಬಬೇಡ
ಹಾವಿನ ಮುಂದಿರುವ ಕಪ್ಪೆ ಕುಪ್ಪಳಿಸಬಾರದು, ತೆವಳಬಾರದು, ಕಣ್ಣು ಆಚೀಚೆ ಹೊರಳಿಸಬಾರದು, ಸತ್ತಂತಿರಬೇಕು – ಕೆಲವು ಊನಗಳೇ ರಕ್ಷಣೆಗಳಾಗಿರುತ್ತವೆ.
ರಾಜ ಸತ್ತರೂ ರಾಜ ಸಾಯುವುದಿಲ್ಲ.
ಈ ನಾಟಕ ನಮ್ಮದೇ ದೇಶವನ್ನು, ಪರಿಸ್ಥಿತಿಯನ್ನು, ಪ್ರಗತಿಯ ಹೆಸರಿನಲ್ಲಿ ನಾವು ಕುರುಡಾಗಿ ಕುರಿಮಂದೆಗಳಂತೆ ನಡೆಯುತ್ತಿರುವುದನ್ನು, ಸ್ವಂತಿಕೆ ಮರೆತಿರುವುದನ್ನು, ಅಧಿಕಾರದಾಹವು ನಟಿಸಬಹುದಾದ ಬಹುರೂಪವನ್ನು ಅರ್ಥಮಾಡಿಸಲು ಬಹಳ ಸಮರ್ಥ ರೂಪಕಗಳನ್ನು ಕೊಟ್ಟಿದೆ. ಈ ಓದು ಕೊಟ್ಟ ಖುಷಿಯನ್ನು ರಂಗಪ್ರಯೋಗದ ಮೂಲಕವೂ ಪಡೆಯಲು ಕಾಯುತ್ತಿದ್ದೇನೆ.

*******

ಅವರ ಕಥೆ ಸಂಧ್ಯಾದೇವಿ ಕುರಿತು ನಾನು ಬರೆದಿದ್ದು ಇಲ್ಲಿದೆ:

ತಿರುಮಲೇಶರ ಕಥೆಗಳಲ್ಲಿ ಎರಡು ರೀತಿಯನ್ನ ನಾನು ಗಮನಿಸಿದ್ದೀನಿ. ಒಂದು ಬಹಳ ಹಳೆಯ ಬಾಲ್ಯಕಾಲ ಕಥೆಗಳ, ಪ್ರಾಂತೀಯ ಭಾಷೆಯ, ಸಂಸ್ಕೃತಿಯ ನಿರೂಪಣೆಯಲ್ಲಿರುವುದು. ಇನ್ನೊಂದು ಇವತ್ತಿನ ಅರ್ಬೇನ್, ಗ್ಲೋಬಲ್ ಮಹಾ ಆಧುನಿಕ ಮನುಷ್ಯನ/ಳ ಮನಸ್ಸಿನಲ್ಲಿ ನಡೆಯುತ್ತಿರುವುದು. ಹಳೇ ವಿಷಯಗಳ ಕಥೆ ಬರೆದಾಗ ಆ ನಿರೂಪಣೆಯ ಭಾಷೆಯಂತೂ ಆ ದಿನಗಳ ಬನಿಯಲ್ಲಿ ಅದ್ದಿ ತೆಗೆದು ಕನ್ನಡದ ಮೇಲಿನ ಮಮಕಾರವನ್ನು ಹೆಚ್ಚಿಸುತ್ತವೆ. ಆಧುನಿಕ ವಿಷಯಗಳ ಕಥೆಯಲ್ಲಿ ಭಾಷೆಯ ವಿವಿಧ ನೆಲೆ, ವಿವಿಧ ಭಾಷೆಯ ನೆಲೆ ಎರಡೂ ಒಂದರೊಳಗೊಂದಾಗಿ ಕಥೆಯ ವಿಷಯದ ಸಾಧ್ಯಾಸಾಧ್ಯತೆಗಳ ಜೊತೆಗೆ ತಾವೂ ಮೆರೆಯುತ್ತ ಇರುತ್ತವೆ. ಈಗ ನಾನು ಓದಿ ಅನಿಸಿಕೆ ವ್ಯಕ್ತಪಡಿಸಲು ಆರಿಸಿರುವ ಕಥೆ ತಿರುಮಲೇಶರ “ಅಪರೂಪದ ಕಥೆಗಳು” ಸಂಕಲನದಲ್ಲಿರುವ “ಸಂಧ್ಯಾದೇವಿ” ಎಂಬ ಆಧುನಿಕೋತ್ತರ ಕಥೆ.

ಈ ಕಥೆ ಓದುವಾಗ ಕಥೆಯಲ್ಲಿನ ಭಾಷಾಬಳಕೆಯ ಚಂದವನ್ನು ಅನುಭವಿಸಿದರೂ ಕಥೆಯ ಮೂಲ ಕೇಂದ್ರದಿಂದ ಎಲ್ಲೆಲ್ಲೋ ಹೋಗಿ ಗೊಂದಲವಾಗುತ್ತಿತ್ತು. ಒಂದು ಸಣ್ಣಕಥೆಯೆಂದರೆ ಇರಬಹುದಾದ ರಚನೆಗಿಂತ ತೀರಾ ಭಿನ್ನವಾದ ರಚನೆ. ಒಂದೊಂದು ಪ್ಯಾರಾ ಮಾತ್ರ ಓದಿದರೆ ಇದುಯಾವುದೋ ಭಾಷಾವಿಜ್ಞಾನಿಯ ಲಹರಿ ಎನ್ನಿಸಿಬಿಡಬಹುದಾದ ಅಪಾಯದ ಅಂಚುದಾರಿಯಲ್ಲಿ ಈ ಕಥೆ ನೇಯಲ್ಪಟ್ಟಿದೆ. ಆದರೆ ಒಟ್ಟಾರೆಯಾಗಿ ಓದಿಮುಗಿಸುವಾಗ ಈ ಕಥೆಯ ಸೊಗಸು ಕೈಹಿಡಿಯುತ್ತದೆ. ಮತ್ತು ಸಂಜೆಯಿಂದ ಹಿಡಿದು ರಾತ್ರೆ ಕಪ್ಪಗಾಗುವವರೆಗೆ ಬಣ್ಣ ಬದಲಾಯಿಸುವ ಆಕಾಶದ ಕ್ಯಾನ್ವಾಸಿನಂತೆ ಮನಸ್ಸನ್ನು ಕಥೆ ಆವರಿಸುತ್ತದೆ.

ಒಂಚೂರು ಕಥೆಯ ಒಂದೊಂದು ಝಲಕ್ ನೋಡುವ ಬನ್ನಿ.
“ಎಲ್ಲಕ್ಕೂ ಒಂದು ಮೂಲ ಇರುತ್ತೆ. ಮೂಲ ಹುಡುಕುತ್ತ ಹೋದರೆ ತಲುಪುವುದು ಪ್ರೈಮ್ ಮೂವರನ್ನ. ಏನು ಮೂವರನ್ನ? ಇಲ್ಲಿ ಮೂವರನ್ನ ಎಂದರೆ ಇಂಗ್ಲಿಷ್ ಮೂವರನ್ನ ಎಂದು ಪದವಿಂಗಡಣೆ, ಕನ್ನಡದ ಮೂವರ್ ಅಲ್ಲ. ಪ್ರೈಮ್ ಮೂವರೇ ಸ್ವಯಂ ಮೂವರ್. ತದನಂತರ ನಾನು ಗೊಂದಲದಲ್ಲಿ ಬಿದ್ದೆ. ಮೂವರ್ಸ್‌ನ ಮೆಟಫಿಸಿಕಲ್ ಅರ್ಥ ನನಗೆ ಹೊಳೆದಿರಲಿಲ್ಲ. ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಾಗಲೇ ಅದು ಗೊತ್ತಾದುದು. ಮೂವ್ ಮೂವ್ ಮೂವ್ ಸ್ವಲ್ಪ ಎಡಕ್ಕೆ ಮೂವ್, ಸ್ವಲ್ಪ ಬಲಕ್ಕೆ ಮೂವ್, ಸ್ವಲ್ಪ ಮೇಲಕ್ಕೆ ಮೂವ್, ಸ್ವಲ್ಪ ಕೆಳಕ್ಕೆ ಮೂವ್ ಮನುಷ್ಯ ಮೂವ್ ಆಗುತ್ತಲೆ ಇರಬೇಕು. ಸ್ವಲ್ಪ ಕಾಲದ ನಂತರ ನಾನು ನನ್ನ ಎಕ್ಸ್ ಬಾಸನ್ನು ಬಸ್ಸಿನಲ್ಲಿ ಕಂಡೆ ಅವನೂ ಮೂವಾಗಿದ್ದ.”

“ಅವತ್ತು ಅಪ್ಪನ ಕೈಗೆ ಸಿಕ್ಕಿದರೆ ನನ್ನ ಜೀವ ಉಳಿಯುವುದಿಲ್ಲ ಎಂದು ನನಗೆ ಖಚಿತವಿತ್ತು. ಅಪ್ಪ ಓಡಿಸಿಕೊಂಡು ಬರುತ್ತಿದ್ದರು. ಅಪ್ಪನಿಗೆ ಅಕ್ಷರಗಳ ಮೇಲೆ ಅಷ್ಟೊಂದು ಭಕ್ತಿಯೇ ಅಥವಾ ನನ್ನ ಮೇಲೆ ಅಷ್ಟೊಂದು ದ್ವೇಷವೇ ಅಥವಾ ಅಕ್ಷರಗಳ ಆಕಾರದಲ್ಲಿ ನಾನು ಹುಯ್ದ ಉಚ್ಚೆಯ ಮೇಲೆಯೋ ಹೇಳುವಂತಿರಲಿಲ್ಲ. ನಾವು ಅಪ್ರದಕ್ಷಿಣಾಕಾರದಲ್ಲಿ ಮನೆಯ ಸುತ್ತ ಓಡುತ್ತಿದ್ದೆವು. ನಮ್ಮ ಗಲಾಟೆ ಕೇಳಿಸಿ ಹೊರಬಂದ ಅಮ್ಮ ಏನೋ ಆಗುತ್ತದೆ ಎಂದು ಊಹಿಸಿದಳು. ಯಾಕೆಂದರೆ ನಾವು ಸದಾ ಯುದ್ಧ ಮತ್ತು ಶಾಂತಿಯ ಅಂಚಿನಲ್ಲಿ ಬದುಕುತ್ತಿದ್ದೆವು. ಅವಳು ಅಪ್ಪನನ್ನು ತಡೆಯಲು ಪ್ರಯತ್ನಿಸಿದಳು. ಅಪ್ಪ ಅವಳನ್ನು ದೂಡಿದ ರಭಸಕ್ಕೆ ಅವಳು ನನ್ನ ಮೈಮೇಲೆ ಬಿದ್ದು ನಾನೂ ಕಾಲು ಜಾರಿ ಕಲ್ಲಿಗೆ ಅಪ್ಪಳಿಸಿಬಿಟ್ಟೆ, ಕೊನೆಗೂ ಗೆಲುವು ಅಪ್ಪನದಾಗಿತ್ತು. ಆಯಿತು ಅದು ಯಾವಾಗಲೂ ಹಾಗೆಯೇ, ಅಪ್ಪಂದೇ.”

“ಆದರೆ ಈ ಘಟನೆಯಿಂದಾಗಿ ನನ್ನ ಮೇಲ್ಪಂಕ್ತಿಯ ನಾಲ್ಕು ಚಂದದ ಹಲ್ಲುಗಳೂ ನಾನು ಹೆಮ್ಮೆ ಪಡುತ್ತಿದ್ದ ಹಲ್ಲುಗಳು ಮುರಿದು ನನ್ನ ಮುಂದೆಯೇ ಆಚೀಚೆ ಗತಿಯಿಲ್ಲದಂತೆ ಬಿದ್ದಿದ್ದವು. ಇವು ನನ್ನವೇ?! ಎಂದು ಕೇಳಿಕೊಂಡೆ.”

“ಮಣಲಲ್ಲಿ ಬರೆದರೂ ಒಂದೇ, ಮಣ್ಣಲ್ಲಿ ಬರೆದರೂ ಒಂದೇ ಅಕ್ಷರ ಅಕ್ಷರವೇ ಎಂದುಕೊಂಡ ಆದಿಮ ರ್‍ಯಾಷನಲಿಸ್ಟ್ ನಾನು, ಮೂತ್ರಾಕ್ಷರ ಸ್ಪರ್ಧೆಯಲ್ಲಿ ಗೆದ್ದವನು.”

“ನನ್ನ ಜೀವನದಲ್ಲಿ ಸಂಧ್ಯೆ ಎಂಬುದೊಂದು ಇಲ್ಲದಿರುತ್ತಿದ್ದರೆ ಎಷ್ಟೊಂದು ನಷ್ಟ! ಮಲ್ಲಿಗೆ ಅರಳೋದು ಹೇಗೆ, ದನ ಮರಳೋದು ಹೇಗೆ, ಹಕ್ಕಿಗಳು ಗೂಡು ಸೇರೋದು ಹೇಗೆ, ಆದರೂ ಸಂಧ್ಯೆ ನೀನು ಯಾಕೆ ನಾಚುತ್ತೀ”

“ಡ್ರೆಸ್ಸಿಂಗ್ ಬಾಯ್ ಅರ್ಥಾತ್ ಕಲಾವಿದ ಮೆನೆಕ್ವಿನ್ ನಿನ್ನೆ ಉಟ್ಟಿದ್ದ ಲಂಗ ತೆಗೆಯುತ್ತಿದ್ದಾನೆ. ಪ್ರತಿದಿನವೂ ಹೊಸ ಡ್ರೆಸ್ ಆಗಬೇಕಿದೆ ಅವಳಿಗೆ.

ಯಾರೊಬ್ಬರ ಡ್ರೆಸ್ ತೆಗೆಯುವಾಗಲೂ ಅವನ ಕೈ ಕಂಪಿಸುವುದಿಲ್ಲವೇ, ಅವಳನ್ನು ಮನೆಗೆ ಒಯ್ಯಬೇಕೆಂದು ಅನಿಸುವುದಿಲ್ಲವೇ? ಆಶ್ಚರ್ಯ! ನೋಡ ನೋಡುತ್ತ ಇದ್ದಂತೆ ಆತ ಅವಳನ್ನು ವಿವಸ್ತ್ರಗೊಳಿಸಿದ್ದಾನೆ. ಒಳಗೆ ನೋಡಿದರೆ ಎಲ್ಲವೂ ಸಪಾಯಿ ಚಂದ್ರಖಂಡ, ಮೀನಖಂಡ ಎಲ್ಲಾ ಖಂಡ ಒಂದೇ ಖಂಡ. ಎಲ್ಲಾ ಸಪಾಟು ಫಳ ಫಳ ಹೊಳೆಯುವುದು. ಇದನ್ನೇ ನಾನು ದೈವತ ಎನ್ನುವುದು. ಸಂಧ್ಯೆಯಂತೆಯೇ ಈ ಮೆನೆಕ್ವಿನ್ ಸಹಾ ಪರಿಶುಭ್ರ ರೂಪಿಣಿ. ಯಾವ ಕಳಂಕವೂ ಇಲ್ಲದವಳು. ಅತೀತೆ. ಎಲ್ಲ ದೇವತೆಗಳೂ ಇದೇ ರೀತಿ ಇರುತ್ತಾರೆ. ಅವರು ಉಣ್ಣುವುದಿಲ್ಲ, ತಿನ್ನುವುದಿಲ್ಲ, ಕುಡಿಯುವುದಿಲ್ಲ, ಅವರ ತ್ವಚೆ ಬೆವರುವುದಿಲ್ಲ. ಆದರೆ ಮೆನೆಕ್ವಿನೆ ಎಂದರೆ ಮೇನಕೆ, ರಂಭೆ, ಊರ್ವಶಿ, ತಿಲೋತ್ತಮೆ ಎಂದು ಇವರು ಯಾರಿಗೂ ಗೊತ್ತಿಲ್ಲವಲ್ಲ.
ಇಲ್ಲಿ ನೀಡುವುದಕ್ಕಲ್ಲದೆ ಪಡೆಯುವುದಕ್ಕೇನೂ ಇಲ್ಲ…”

“ಹೋಗುವುದಿಕ್ಕೆ ಅವಳಿಗೆ ಕಾರಣಗಳಿದ್ದವು. ಬರುವುದಕ್ಕೆ ಯಾವ ಕಾರಣವೂ ಇರಲಿಲ್ಲ. ನನ್ನ ಹಲ್ಲಿನ ಸೆಟ್ಟು ಮಾಯವಾದಂತೆಯೇ ಈಕೆ ಕೂಡ ನನ್ನ ಬಿಟ್ಟು ಮಾಯವಾಗಿ ಹೋದಳಲ್ಲ. ಬಹುಶಃ ಈಕೆಗೂ ನನ್ನ ಜತೆ ಏಗಲು ಸಾಧ್ಯವಾಗಲಿಲ್ಲ. ನಾನು ಏನೂ ಅಪೇಕ್ಷೆ ಮಾಡದೆ ಇದ್ದರೂ ದೇವರಿಗೆ ಹೇಳ್ತೇನೆ. ದೇವರೇ ಇನ್ನು ನನ್ನಂಥ ಇನ್ನೊಬ್ಬನನ್ನು ಸೃಷ್ಟಿಸಬೇಡ. ಈ ಎಕ್ಸ್‌ಪೆರಿಮೆಂಟ್ ಟೋಟಲ್ ಫೇಲ್ಯೂರ್..”

ಸಂಧ್ಯೆಯೆನ್ನುವ ರೂಪಕ, ಮ್ಯಾನಿಕ್ವಿನ್ ಎನ್ನುವ ರೂಪಕ, ಅಕ್ಷರಗಳ ರೂಪಕ, ಕಟ್ಟಿಸಿದ ಹಲ್ಲಿನ ರೂಪಕ, ಅಪ್ಸರೆಯ ರೂಪಕ, ಮತ್ತು ಇಡೀ ಕಥೆಯನ್ನ ಆವರಿಸುವ ಸಮಯದ ರೂಪಕ.. ಇವೆಲ್ಲವನ್ನೂ ಹೀಗೆ ಒಟ್ಟಿಗೆ ನೇಯ್ದು ಬದುಕಿನ ಸಂಜೆಯನ್ನು ಓದುಗನ ಕಣ್ಣೆದುರಿಗೆ ಕಥೆಗಾರ ಸೊಗಸಾಗಿ ಇಟ್ಟಿದಾರೆ. ಇಡೀ ಕಥೆಯುದ್ದಕ್ಕೂ ಬಾಲ್ಯದ ಒಂದು ನೋವು ಅಂಡರ್ ಕರೆಂಟಾಗಿ ಹರಿಯುತ್ತಲೆ ಇರುತ್ತದೆ. ಬತ್ತಲಾಗುವ ಅಥವಾ ಅಲಂಕೃತಗೊಳ್ಳುವುದಕ್ಕೂ ಮುನ್ನಿನ ಮ್ಯಾನಿಕ್ವಿನ್ನಿಗಾಗಿ ಹಂಬಲಿಸುವ ನಿರೂಪಕ ಜೀವನದುದ್ದಕ್ಕೂ ತನ್ನನ್ನ ಬಿಟ್ಟೂಬಿಡದೆ ಕಾಡಿದ ಕೀಳರಿಮೆಗಳಿಂದ ಮುಕ್ತನಾಗಲು ಹವಣಿಸುವ ಹಂಬಲು, ತನ್ನ ಮಿತಿಯನ್ನು ಮೀರಲು ಹೋಗಿ ಸಿಕ್ಕು ಬಿದ್ದು ಒದ್ದಾಡುವ ಗೋಜಲು, ವಿಸ್ತಾರ ನೀಲಿಗೆ ರೆಕ್ಕೆ ಬಿಚ್ಚಿ ಹಾರಲು ಕಲಿತರೂ, ಕೂತ ಕೊಂಬೆಗೇ ನೇತುಬಿದ್ದ ನೆಳಲಾಗುವ ಅಳಲು ಇವೆಲ್ಲ ಗಾಢವಾಗಿ ಕಟ್ಟಲ್ಪಟ್ಟಿವೆ.

ನನಗೆ ಈ ಕಥೆ ಬಹಳ ಇಷ್ಟವಾಗಿದ್ದು ಇದರಲ್ಲಿನ ಯುನಿವರ್ಸಲ್ ಅಪ್ಲಿಕಬೆಲಿಟಿ. ಓದುವವಳು ಐಸಿಯುನಲ್ಲಿ ಮಲಗಿರಬೇಕಿಲ್ಲ. ಟ್ರಾಫಿಕ್ಕಿನಲ್ಲಿ, ಮನೆಗೆಲಸದಲ್ಲಿ, ಅಥವಾ ವೃತ್ತಿಯ ಪ್ರಗತಿಯ ದಾರಿಯಲ್ಲಿ ಓಡುತ್ತಿರುವ all-encompassing ದಿನದಿನದ ಕೆಲಸದಲ್ಲಿ ಸಿಕ್ಕಿಹಾಕಿಕೊಂಡು ಸಹ ಅದೇ ಭಾವವನ್ನು ಅನುಭವಿಸಬಹುದು. ಅವನ ಹಲ್ಲುಮುರಿದಿದೆ. ಓದುವವನ ಮನಸ್ಸೇ ಮುರಿದಿರಬಹುದು, ಕೂದಲು ಬೋಳಾಗಿರಬಹುದು, ಅಥವಾ ಇನ್ನೊಂದೇನೋ ಬಾಹ್ಯಸ್ವರೂಪದ ಗೋಜಲಿನಲ್ಲಿ ಸಿಕ್ಕಿ ನರಳುವ ಒಳಮನಸ್ಸು. ಇದು ಈ ಕಥೆಯ ವಿಸ್ತಾರ. ಮ್ಯಾನಿಕ್ವಿನ್ ಮೇನಕೆ, ಮತ್ತು ಸಂಧ್ಯಾದೇವಿಯೆಂಬ ಸಂಜೆ ಈ ಎರಡು ಮಹೋನ್ನತ ರೂಪಕಗಳನ್ನ ಇಡೀ ಕಥೆಗಳಲ್ಲಿ ಇಡಿಕಿರಿದಿರುವ ಸಣ್ಣ ಸಣ್ಣ ರೂಪಕಗಳು ಹೊತ್ತಿವೆ. ಒಂದ್ಸಲ ಇದು ಕಾದಂಬರಿಯಾಗಿದ್ದರೆ ಚೆನ್ನಿತ್ತಾ ಅನಿಸಿತು. ಇಲ್ಲ ಹೀಗೇ ಚೆನ್ನು. ಹೆಚ್ಚಿನ ವಿವರಣೆಗೆ ಸಿಕ್ಕರೆ ಅದು ಬರಿದೆ ಕಥೆಗಾರನ ವರದಿಯಾಗುಳಿಯುತ್ತಿತ್ತು, ಈಗ ಕಥೆಯೊಳಗೆ ಹೊಕ್ಕು ಓದುಗನ ಅಂಗೈಗೆ ದಕ್ಕಿದೆ. ನಮ್ಮೊಳಹೊಕ್ಕು ತನಗೆ ಬೇಕಾದ ರೂಪವನ್ನ ಧರಿಸುತ್ತಿದೆ ಅನಿಸಿತು.

ಈ ಕಥೆಯೆಂಬ ಮ್ಯಾನಿಕ್ವಿನ್ನಿಗೆ ನಮಗೆ ಬೇಕಾದ ಅಂಗಿಯನ್ನು ತೊಡಿಸುವ ಅನುಕೂಲವನ್ನ ಕಥೆಗಾರ ನಮಗೆ ಕೊಟ್ಟಿದ್ದಾರೆ.

ಆಗಲೇ ಹೇಳಿದ ಹಾಗೆ ತಿರುಮಲೇಶರ ವೈಶಿಷ್ಟ್ಯ ಆದ ಭಾಷೆಯ ಹಿಡಿತ, ಆಳ, ಮತ್ತು ವಿಸ್ತಾರ ಈ ಕಥೆಯ ಶಕ್ತಿಯೂ ಹೌದು ಮತ್ತು ಮಿತಿಯೂ ಹೌದು. ಇವರ ಬೇರೆ ಕಥೆಗಳನ್ನ ಕವಿತೆಗಳನ್ನ ಓದಿಲ್ಲದೆ ಇರುವ ಹೊಸಬರು ಮೊದಮೊದಲ ಪ್ಯಾರಾ ಓದುತ್ತಲೇ ಕಥೆಯನ್ನು ಓದದೇ ಇರುವ ಸಾಧ್ಯತೆಗಳು ಸಹಾ ಉಂಟು.

ನನಗೆ ಈ ಕಥೆ ಮೊದಲು ಕಷ್ಟ ಕೊಟ್ಟರೂ ಓದಿ ಮುಗಿಸಿದ ಮೇಲೆ ಬಹಳವೇ ಇಷ್ಟವಾಯಿತು. ಇದೇ ಸಂಕಲನದಲ್ಲಿ ಇರುವ ಐತ ಕಥೆ (ಹಳೇ ವಿಷಯ, ಭಾಷೆ, ಬಾಲ್ಯದ ನೆನಪುಗಳ ಮೇಲೆ ವಿಸ್ತರಿಸಿದ ಕಥೆ)ಯನ್ನೂ ಮತ್ತು ಈ ಸಂಧ್ಯಾದೇವಿ (ಹೊಸ ವಿಷಯ, ಗ್ಲೋಬಲ್ ಭಾಷೆ, ಬಾಲ್ಯದ ನೋವು ಮತ್ತು ಇಳಿಬದುಕಿನ ವಿಷಾದಗಳಲ್ಲಿ ತೂಗಿಕೊಳ್ಳುವ ಕಥೆ) ಎರಡನ್ನೂ ಮತ್ತೆ ಒಟ್ಟಿಗೆ ಓದಿ ಈಗ ಈ ತಿರುಮಲೇಶ್ ಎಂಬ ಕಥೆಗಾರನ ಬಗ್ಗೆ ಅಚ್ಚರಿ, ಅಕ್ಕರೆ, ಮತ್ತು ಗೌರವ. ಕಥೆಗಾರ ನಮಗೆ “ಓದು ಬಾ, ನಿನ್ನ ನಾಲಗೆಯ ಮೇಲೆ ಬರೆಯುವೆ ಅಸ್ತಿ ಕಶ್ಚಿತ್ ವಾಗ್ವಿಶೇಷಃ” ಎಂದು ಹೇಳುತ್ತಿರಬಹುದೇ ಎನಿಸುತ್ತಿದೆ.