“ಅಪ್ಪ ಮಗನು ನೋಡಲು ಒಂದೇ ದಪ್ಪವಿದ್ದರು. ನಸುಗಪ್ಪು ಹುಡುಗನ ಮೂಗು ದೊಣ್ಣಮೆಣಸಿನಕಾಯಂತೆ ಅಸಹಜ ದಪ್ಪವಿತ್ತು. ಅವರು ಕಾಫಿ ಕುಡಿದು ಹೊರಟ ಮೇಲೆ ನಾನು ಆ ಹುಡುಗನ ಮೂಗು ಚೆನ್ನಾಗಿಲ್ಲವೆಂದು ಒಂದೇ ಸಮನೆ ಅತ್ತು ಹಠ ಮಾಡತೊಡಗಿದೆ ಯಾರಾದರೂ ಕಂಡಕೂಡಲೇ ತುಟಿ ಸುರುಟಿಸಿ ಕಣ್ಣು ಕಿರಿದಾಗಿಸಿ ಅಳುವಂತೆ ನಟಿಸುತ್ತಿದ್ದೆ. ಹೇಗಾದರೂ ಆ ಗಂಡು ತಪ್ಪಿದರೆ ಸಾಕಾಗಿತ್ತು. ಅವನೇ ನನ್ನ ಗಂಡನೆಂದು ಸ್ನೇಹಿತೆಯರಿಗೆಲ್ಲಾ ತೋರಿಸುವುದು ಹೇಗೆಂಬ ಚಿಂತೆ ಕಾಡುತ್ತಿತ್ತು. ಅಮ್ಮ ಇದಾವುದರ ಬಗ್ಗೆಯೂ ಕಿಂಚಿತ್ತೂ ಯೋಚಿಸಿದಂತೆ ಕಾಣಲಿಲ್ಲ. ಅವಳ ಧ್ಯಾನವೆಲ್ಲಾ ಜಾತಕದ ಮೇಲೆ!”
‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಎಂಟನೇ ಕಂತು.
ನಾವು ಅಜ್ಜನ ಮನೆಗೆ ಬಂದು ಆರು ತಿಂಗಳು ಕಳೆದೇ ಹೋಗಿದ್ದವು. ಅಷ್ಟರಲ್ಲಿ ಅಪ್ಪ ಒಂದೆರಡು ಬಾರಿ ಬಂದು ಅಜ್ಜನೊಂದಿಗೂ ಮಾವಂದಿರೊಟ್ಟಿಗೂ ಏನೋ ಮಾತಾಡಿ ಹೋಗಿದ್ದರು. ಆಗೆಲ್ಲಾ ಅಮ್ಮ ಒಂದೆರಡು ಬಾರಿ ಜೋರಾಗಿ ಅತ್ತು ಕರೆದು ರಾಗ ಹಾಡಿದಳು. “ಬೇರೆ ಏನಾದರೂ ಸಹಿಸ್ಕೋತಿದ್ದೆ ಅಣ್ಣಾ.. ಅವರು ಬೇರೆಯವ್ಳ ಸಹವಾಸ ಮಾಡಿದಾರೆ. ಇದನ್ನ ತಡ್ಕೊಳೋದು ನನ್ನ ಕೈಲಾಗಲ್ಲ.” ಅಂತ ಸಮಜಾಯಿಷಿ ಬೇರೆ ಕೊಟ್ಟಳು. ಸಹವಾಸ ಮಾಡೋದು ಅಂದರೇನೆಂದೇ ಗೊತ್ತಿಲ್ಲದ ನಾವು ಬರೇ ಸಹವಾಸ ಮಾಡಿದ್ದಕ್ಕೆ ಅಮ್ಮ ಹೀಗ್ಯಾಕೆ ಆಡ್ತಾಳೆ ಅಂತ ಆಶ್ಚರ್ಯಪಡುತ್ತಿದ್ದೆವು. ಆಗಂತೂ ಅವಳು ರಣಚಂಡಿಯೇ ಆಗುತ್ತಿದ್ದಳು. ಅಪ್ಪ ಪೆಚ್ಚು ಮೋರೆ ಹಾಕಿ ಹೊರಗೆ ಹೊರಡುವನು. ಇಬ್ಬರು ಮಾವಂದಿರು ಅವನ ಬೆನ್ನ ಹಿಂದೆಯೇ ಹೊರಟು ಸಮಾಧಾನ ಮಾಡುವವರಂತೆ ಅಪ್ಪನ ಬೆನ್ನಿಗೆ ಕೈ ಹಾಕಿ ನೀವುತ್ತಾ ಅಂಗಳ ದಾಟಿ ಬಾವಿಕಟ್ಟೆಯ ತಿರುವಿನಲ್ಲಿ ಬಿಟ್ಟುಬರುವರು.
ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಬರುವುದಿತ್ತು. ಹತ್ತು ಮುಗಿದು ಕಾಲೇಜು ಸೇರುವ ಕನಸು ಕಣ್ತುಂಬ! ಯಾವ ಕಾಲೇಜು ಎಂಬುದೇ ದೊಡ್ಡ ಚರ್ಚೆಯ ವಿಷಯ. ಆದರೆ ನಮ್ಮ ಮನೆಯಲ್ಲಿ ನನಗೆ ಗಂಡು ನೋಡುವ ಸಂಭ್ರಮ! ವಾರದ ಮೊದಲೆರಡು ದಿನ ಸ್ಕೂಲಿನ ಗೆಳತಿಯರಿಗೆ ನನ್ನ ನೋಡಲು ಬಂದುಹೋದ ಗಂಡುಗಳ ಬಗ್ಗೆ ಕೇಳುವುದೇ ದೊಡ್ಡ ಕುತೂಹಲ. ತವರಿಗೆ ಬಂದ ಕೆಲವೇ ತಿಂಗಳುಗಳಲ್ಲಿ ನನ್ನ ಮದುವೆ ಪ್ರಸ್ತಾಪಗಳು ಶುರುವಾಗಿದ್ದವು. ಬೇಗ ಗಂಡು ಹುಡುಕಬೇಕೆಂದು ಮಾವಂದಿರಿಗೆ ಅಮ್ಮನೇ ತಾಕೀತು ಮಾಡಿದ್ದಳು. ಮಗು ಇನ್ನೂ ಓದಲಿ ಬಿಡು ಎನ್ನುತ್ತಿದ್ದವರನ್ನು ‘ಹೆಣ್ಣಿಗೆ ಕಾಗದಪತ್ರ ಓದುವಷ್ಟು ವಿದ್ಯೆ ಸಾಲದೇ ಅಣ್ಣಾ..? ಜಾಸ್ತಿ ಓದಲು ಬಿಟ್ಟರೆ ಕುಲದ ಹೆಸರು ಕೆಡಿಸುವಷ್ಟು ಬುದ್ಧಿ ಬೆಳೆಯುತ್ತೆ. ಸುಮ್ನಿರಿ ನಿಮಗೆ ತಿಳಿಯಲ್ಲ’ ಅಂದು ಬಾಯಿ ಮುಚ್ಚಿಸುತ್ತಿದ್ದಳು. ಅಮ್ಮನ ಇಂಥಾ ನಿಲುವುಗಳು ನನಗೆ ಆಶ್ಚರ್ಯ ಹುಟ್ಟಿಸುತ್ತಿದ್ದವು. ಅಪ್ಪ ಬಂದಾಗಲೆಲ್ಲಾ ‘ಓದು ಮಗೂ ಚೆನ್ನಾಗಿ ಓದು’ ಎನ್ನುತ್ತಿದ್ದರು. ಬರಬರುತ್ತಾ ಅಪ್ಪ ನಮ್ಮನ್ನು ನೋಡಲು ಬರುವುದೇ ಕಡಿಮೆಯಾಗಿಹೋಯಿತು.
ಈ ಮಧ್ಯೆ ಚಿಕ್ಕ ಮಾವನ ಮಗ ಶಶಾಂಕನಿಗೆ ನನ್ನ ಮದುವೆ ವಿಚಾರ ಬಂದಾಗಲೆಲ್ಲಾ ಭಾರೀ ಬೇಸರವಾಗಿ ಹೇಳದೇ ಕೇಳದೇ ಅವರೆ ಹೊಲಕ್ಕೆ ಹೋಗಿ ಕೂತು ಬಿಡುತ್ತಿದ್ದನು. ಸಂಜೆಗೆ ಯಾರಾದರೂ ಆಕಡೆ ಹೋಗಿ ಬೈದು ಕರೆತರುತ್ತಿದ್ದರು. ಒಮ್ಮೆ ಕೊಟ್ಟಿಗೆಯ ಹಿಂದಿನ ಓಣಿಯಲ್ಲಿ ಕೆಂಚಿ ಹಾಗೂ ಕಾಳಿಗೆ ಹುಲ್ಲು ಒಟ್ಟಲು ಹೋಗಿದ್ದಾಗ ಎಲ್ಲಿಂದಲೋ ಸರಕ್ಕನೆ ಬಂದು ನನ್ನ ಎರಡೂ ಕೈಗಳನ್ನೂ ಗಟ್ಟಿಯಾಗಿ ಹಿಡಿದು, – “ನನ್ನ ಕೈಬಿಡಬೇಡವೇ… ಬುದ್ಧಿ ಬಂದಾಗಿನಿಂದ ನೀನೇ ನನ್ನ ಹೆಂಡ್ತಿ ಅಂದ್ಕೊಂಡಿದೀನಿ. ಪ್ಲೀಸ್ ಕಣೇ… ಬೇರೆ ಗಂಡು ಒಪ್ಕೋಬೇಡ್ವೇ..” ಅಂದುಬಿಟ್ಟಿದ್ದ! ಅದುವರೆಗೂ ಎಲ್ಲರಂತೆ ಅವನನ್ನೂ ಅಣ್ಣಾ ಎಂದು ಕರೆಯುತ್ತಿದ್ದರೂ ಅಂದೇಕೋ ಅವನು ಆಡಿದ ಮಾತು ಕೇಳಿ ತಲೆಕೆಟ್ಟು ಗೊಬ್ಬರವಾಗಿಹೋಯಿತು. ಅಷ್ಟು ದಿನ ಅಪ್ಪನ ಮನೆಯ ಪ್ರೀತ್ಯಾದರಗಳಿಲ್ಲದೇ ನೊಂದವಳಿಗೆ ಅಜ್ಜನ ಮನೆ ಬೆಚ್ಚನೆಯ ಗೂಡಂತೆ ಸುಖ ನೀಡಿತ್ತು. ಇಲ್ಲಿ ಎಲ್ಲರೂ ನಮ್ಮನ್ನು ಪ್ರೀತಿಸುವವರೇ! ಆದರೆ ಅಂದು ಅವನು ಆಡಿದ ಮಾತು ನನ್ನನ್ನು ಅಧೀರಳನ್ನಾಗಿಸಿತ್ತು. ಒಮ್ಮೆಗೇ ಅತ್ತೆ ಮಾವಂದಿರ ಮುಖಗಳೆಲ್ಲವೂ ಕಣ್ಣಮುಂದೆ ಸರಿದುಹೋದವು. ನನಗೆ ಬೇರೆ ಊರಿನ ಸಂಬಂಧಗಳನ್ನೇ ನೋಡುತ್ತಿದ್ದ ಮಾವಂದಿರಿಗೆ ಈ ವಿಚಾರದ ಊಹೆಯೂ ಇರಲಿಲ್ಲ. ಅಥವಾ ಗೊತ್ತಾದರೆ ರಣರಂಗವೇ ನಡೆದುಬಿಡುವ ಸಾಧ್ಯತೆಗಳಿದ್ದವು.
ಕೆಲವೊಮ್ಮೆ ಅತ್ತೆಂದಿರೆಲ್ಲಾ ಒಂದೆಡೆ ಸೇರಿದಾಗ ಅಮ್ಮ ಗಂಡನಮನೆ ಬಿಟ್ಟು ಬಂದಿರುವ ಬಗ್ಗೆ ಕೆಟ್ಟದಾಗಿ ಮಾತಾಡಿಕೊಳ್ಳುತ್ತಿದ್ದರಾದರೂ ಎದುರುಬದುರು ಏನೂ ನಡೆಯದ ಕಾರಣ ಇದರ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಹಾಗೂ ಅಜ್ಜನ ಜಮೀನ್ದಾರೀ ಖದರಿಗೆ ಬಡವರ ಮನೆಗಳಿಂದ ಮಾಡಿಕೊಂಡು ಬಂದ ಹುಡುಗಿಯರಾದ ಅತ್ತೆಂದಿರು ಗಡಗಡ ನಡುಗಿ ಕಂಬದ ಹಿಂದೆ ಸರಿದು ಓಡುತ್ತಿದ್ದರು. ಅಮ್ಮನೂ ತಕ್ಕ ಮಟ್ಟಿಗೆ ಘಟಾಣಿಯೇ. ಅವಳ ಮೊನಚಾದ ಘಾಟು ಮಾತುಗಳಿಗೆ ಮಾವಂದಿರೇ ಹೆದರುತ್ತಿದ್ದರು. ಹಾಗಾಗಿಯೇ ಅವಳು “ಅಣ್ಣಾ, ಇವಳಿಗೆ ಮದುವೆ ಮಾಡಿಬಿಡಬೇಕು ಕಣೋ, ಗಂಡು ತಯಾರಿರಾ ನೆಂಟರು ಯಾರಾರಾ ಇದ್ರೆ ವಿಷ್ಯ ತಿಳುಸ್ರೋ. ಜಾತಕ ಕೂಡತದಾ ನೋಡಣ.” ಅಂದ ಕೂಡಲೇ ಮರುಮಾತಾಡದ ಮಾವಂದಿರು ಹೂಂಗುಟ್ಟಿ ಕಾರ್ಯೋನ್ಮುಖರಾಗಿದ್ದರು.
ಒಮ್ಮೆ ಕೊಟ್ಟಿಗೆಯ ಹಿಂದಿನ ಓಣಿಯಲ್ಲಿ ಕೆಂಚಿ ಹಾಗೂ ಕಾಳಿಗೆ ಹುಲ್ಲು ಒಟ್ಟಲು ಹೋಗಿದ್ದಾಗ ಎಲ್ಲಿಂದಲೋ ಸರಕ್ಕನೆ ಬಂದು ನನ್ನ ಎರಡೂ ಕೈಗಳನ್ನೂ ಗಟ್ಟಿಯಾಗಿ ಹಿಡಿದು, – “ನನ್ನ ಕೈಬಿಡಬೇಡವೇ… ಬುದ್ಧಿ ಬಂದಾಗಿನಿಂದ ನೀನೇ ನನ್ನ ಹೆಂಡ್ತಿ ಅಂದ್ಕೊಂಡಿದೀನಿ. ಪ್ಲೀಸ್ ಕಣೇ… ಬೇರೆ ಗಂಡು ಒಪ್ಕೋಬೇಡ್ವೇ..” ಅಂದುಬಿಟ್ಟಿದ್ದ!
ಮೊದಲ ಬಾರಿ ಚೂಡಿದಾರ್ ತೊಟ್ಟು ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಒಳಗಿಂದ ಅತ್ತೆಯ ಜೊತೆ ಬಂದಾಗ ನೋಡಲು ಬಂದವರ ಮುಂದೆ ಕೂರಲು ಸ್ವಲ್ಪ ನಾಚಿಕೆಯೆನಿಸಿತ್ತು. ಆದರೂ ಆ ಹಿಂಜರಿಕೆಯಂಥಾ ಭಾವವನ್ನು ತೋರಗೊಡಬಾರದು ಅಂತ ತೀರ್ಮಾನಿಸಿಬಿಟ್ಟಿದ್ದೆ. ಅದನ್ನೇ ಅವರು ಹುಡುಗಿ ನಾಚಿಕೊಂಡಳು ಒಪ್ಪಿಕೊಂಡಳು ಎಂದು ಬಗೆದು ಮುಂದಿನ ಮಾತುಗಳು ನಡೆದುಹೋದರೆ! ಎಂಬ ಭಯ ಹುಟ್ಟಿ ಸ್ವಲ್ಪ ಧೈರ್ಯದಲ್ಲಿ ತಲೆಯೆತ್ತಿಯೇ ಕೂತೆ. ಅವನ ತಾಯಿಯೆಂಬ ಹೆಂಗಸು ನನ್ನನ್ನು ಮೇಲಿಂದ ಕೆಳಗೆ ಒಂಥರಾ ನೋಡಿತ್ತು. ಅವನಪ್ಪ ‘ಹಾಡಲು ಬರುತ್ತಾ ಕೂಸು?’ ಅಂತ ಕೇಳಿತ್ತು. ಆತನ ತಲೆ ಹೆಚ್ಚುಕಡಿಮೆ ಕೂದಲೆಂಬ ಸಿರಿಯಿಂದ ಮುಕ್ತವಾಗಿ ದಬಾಕಿದ ಬೆಳ್ಳಿ ಬಟ್ಟಲಿನಂತೆ ಹೊಳೆಯುತ್ತಿತ್ತು. ಅಪ್ಪ ಮಗನು ನೋಡಲು ಒಂದೇ ದಪ್ಪವಿದ್ದರು. ನಸುಗಪ್ಪು ಹುಡುಗನ ಮೂಗು ದೊಣ್ಣಮೆಣಸಿನಕಾಯಂತೆ ಅಸಹಜ ದಪ್ಪವಿತ್ತು. ಅವರು ಕಾಫಿ ಕುಡಿದು ಹೊರಟ ಮೇಲೆ ನಾನು ಆ ಹುಡುಗನ ಮೂಗು ಚೆನ್ನಾಗಿಲ್ಲವೆಂದು ಒಂದೇ ಸಮನೆ ಅತ್ತು ಹಠ ಮಾಡತೊಡಗಿದೆ. ಎರಡು ದಿನ ಏನೂ ಸರಿಯಾಗಿ ತಿನ್ನಲಿಲ್ಲ. ಯಾರಾದರೂ ಕಂಡಕೂಡಲೇ ತುಟಿ ಸುರುಟಿಸಿ ಕಣ್ಣು ಕಿರಿದಾಗಿಸಿ ಅಳುವಂತೆ ನಟಿಸುತ್ತಿದ್ದೆ. ಹೇಗಾದರೂ ಆ ಗಂಡು ತಪ್ಪಿದರೆ ಸಾಕಾಗಿತ್ತು. ಅವನೇ ನನ್ನ ಗಂಡನೆಂದು ಸ್ನೇಹಿತೆಯರಿಗೆಲ್ಲಾ ತೋರಿಸುವುದು ಹೇಗೆಂಬ ಚಿಂತೆ ಅಹರ್ನಿಶಿ ಕಾಡುತ್ತಿತ್ತು. ಅಮ್ಮ ಇದಾವುದರ ಬಗ್ಗೆಯೂ ಕಿಂಚಿತ್ತೂ ಯೋಚಿಸಿದಂತೆ ಕಾಣಲಿಲ್ಲ. ಅವಳ ಧ್ಯಾನವೆಲ್ಲಾ ಜಾತಕದ ಮೇಲೆ! ಎರಡು ದಿನ ಶಾಸ್ತ್ರಿಗಳ ಮನೆಯಲ್ಲಿ ತಂಗಿದ್ದ ನಮ್ಮ ಜಾತಕಗಳು ಅಂದು ಸಂಜೆ ಮನೆಗೆ ವಾಪಸಾದವು. ಅವು ಹೊಂದುತ್ತಿರಲಿಲ್ಲ! ಅಮ್ಮ ಈ ಮದುವೆ ಬೇಡವೇ ಬೇಡ ಎಂದುಬಿಟ್ಟಳು. ಆಗ ಉಂಟಾದ ಸಖತ್ ಸಂತಸದ ಅಮಲು ಸ್ವಲ್ಪ ಇಳಿದ ಮೇಲೆ ನಾನು ಅಷ್ಟೆಲ್ಲಾ ಹ್ಯಾಪ್ ಮೋರೆ ನಾಟಕ ಆಡದೆಯೂ ತಪ್ಪಿಸಿಕೊಳ್ಳಬಹುದಾಗಿದ್ದ ಸಾಧ್ಯತೆಯೊಂದು ತಿಳಿದುಬಂತು! ಅಂತೂ ಜಾತಕ ಕೂಡದೇ ಆ ಬ್ರಹ್ಮನೇ ಬಂದು ಹೇಳಿದರೂ ಅಮ್ಮ ಮದುವೆಗೆ ಒಪ್ಪಲಾರಳೆಂದು ತಿಳಿದು ನೆಮ್ಮದಿಯ ಉಸಿರೊಂದು ಆಳಕ್ಕಿಳಿದು ಹೊರಬಂತು. ಅಷ್ಟರಲ್ಲಿ ಹತ್ತನೇ ಕ್ಲಾಸಿನ ಪರೀಕ್ಷೆಯೂ ಹತ್ತಿರಾಯಿತು. ಎಲ್ಲ ಚಿಂತೆ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಓದತೊಡಗಿದೆ. ಪರೀಕ್ಷೆ ಕಳೆದು ಫಲಿತಾಂಶ ಬಂದಾಗ ನಾನು ಮೊದಲ ದರ್ಜೆಯಲ್ಲಿ ಪಾಸಾದದ್ದು ಅಮ್ಮನಿಗೆ ನಾನೆಣಿಸಿದಷ್ಟು ಸಂತಸ ಕೊಡಲಿಲ್ಲ. ಆದರೆ ಶಶಾಂಕ ಮಾತ್ರ ಕುಣಿದಾಡಿ ನಲಿದಾಡಿ ಸಂತಸಪಟ್ಟುಕೊಂಡಿದ್ದ.
* * *
ಕಾಲೇಜೆಂಬ ಕನಸು ನನಸಾಗಿತ್ತು. ಅದರಲ್ಲೂ ಪಿಸಿ ಎಂ ಬಿ ಯ ತರಗತಿಗಳು ಎಂಥದ್ದೋ ಪ್ರಗತಿಪರ ಪಂಥದ ಭಾವ ತುಂಬಿ ಮೊದಲೇ ತೆಳ್ಳಗೆ ಬೆಳ್ಳಗೆ ಸುಂದರಿಯರ ಸಾಲಿಗೆ ಅನಾಯಾಸವಾಗಿ ಸೇರಿಸಬಹುದಾಗಿದ್ದ ನನ್ನಲ್ಲಿ ಇನ್ನಷ್ಟು ಗರುವ ಹುಟ್ಟಲು ಕಾರಣವಾಗಿದ್ದವು. ಈಗಿನಂತೆಯೇ ಆಗಲೂ ಸೈನ್ಸು ಹುಡುಗೀರು ದೇವತೆಯರಂತೆ! ಆದರೆ ತೋರುತ್ತಿದ್ದ ಪೊಳ್ಳು ಗರುವಿನ ಒಳಗೆ ಎಂತಹ ಭಯಾನಕ ಸತ್ಯವೊಂದನ್ನು ಎದೆಗೆ ಕೆಂಡ ಸುರುವಿಕೊಂಡಂತೆ ಇಟ್ಟುಕೊಂಡು ಓಡಾಡುತ್ತಿದ್ದೆನೆಂದು ನನಗೆ ಮಾತ್ರ ಗೊತ್ತಿತ್ತು. ಅಮ್ಮ ಪಿಯುಸಿ ಗೆ ಸೇರಿಸುವ ದಿನವೇ ನನ್ನಿಂದ ಭಾಷೆ ತೆಗೆದುಕೊಂಡಿದ್ದಳು, ಗಂಡು ಗೊತ್ತಾಗುವವರೆಗೆ ಮಾತ್ರ ಓದು. ಎಂದು ಜಾತಕ ಹೊಂದುವ ಗಂಡು ದೊರಕುವುದೋ ಅದೇ ಕ್ಷಣ ಚಕಾರವೆತ್ತದೇ ಕಾಲೇಜು ಬಿಟ್ಟು ಮನೆಗೆ ಬರಬೇಕು. ಮದುವೆಗೆ ಯಾವುದೇ ತಕರಾರು ತೆಗೆಯಬಾರದು. ಈ ಒಪ್ಪಂದದ ಮೇಲೆ ಹೊರಗೆ ಬರುತ್ತಿದ್ದೆನಲ್ಲಾ, ಪ್ರತಿದಿನವೂ ಮರುಹುಟ್ಟಿನಂತೆ ಕಾಣುತ್ತಿತ್ತು ನನಗೆ. ದಿನವೂ ದೇವರಲ್ಲಿ ಈ ಹಾಳಾದ ಗಂಡೂ ಅವನ ಜಾತಕವೂ ಎಲ್ಲಾದರೂ ಬಿದ್ದು ಸುಟ್ಟುಹೋಗಲಿ ಎಂದೇ ಬೇಡುತ್ತಿದ್ದೆ.
ಅದಿರಲಿ, ಇತ್ತ ಶಶಾಂಕನ ಕಾಟ ಹೆಚ್ಚಿಹೋಗಿತ್ತು. ನೀನು ಅಣ್ಣನಂತೆ ಕಣೋ ಎಂದು ಒತ್ತಿ ಹೇಳಿದರೂ ಒಪ್ಪಿಕೊಳ್ಳುವ ಮನಸ್ಥಿತಿ ಅವನದಾಗಿರಲಿಲ್ಲ. ದಿನೇ ದಿನೇ ನಮ್ಮಿಬ್ಬರ ಬಗೆಗಿನ ಕಲ್ಪನೆಗಳು ಅತಿಯಾಗುತ್ತಿದ್ದವು. ನನ್ನ ಬಗ್ಗೆ ಅವನು ತೋರಿಸುತ್ತಿದ್ದ ಅತಿಯಾದ ಕಾಳಜಿ ಕೆಲವೊಮ್ಮೆ ಹಿಂಸೆ ಅನಿಸುತ್ತಿತ್ತು. ಒಂದೊಮ್ಮೆಯಂತೂ ಹಬ್ಬಕ್ಕೆ ಸೀರೆಯನ್ನೇ ಉಡಬೇಕೆಂದು ದುಂಬಾಲು ಬಿದ್ದು ಸಿಟಿಗೆ ಹೋಗಿ ಅದೆಂಥದ್ದೋ ಸೀರೆಯನ್ನೂ ತಂದುಬಿಟ್ಟಿದ್ದ. ಯಾರಿಗಾದರೂ ಗೊತ್ತಾದರೆ ಏನು ಮಾಡೋದೆಂದು ಭಯವಾಗಿ ಗೆಳತಿಯೊಬ್ಬಳಿಗೆ ಹೇಳಿಕೊಂಡಿದ್ದೆ. ಅವಳೇನೋ ಗದರಿಬಿಡು ಎಂಬ ಸಲಹೆ ನೀಡಿದ್ದಳು. ಆದರೆ ಅವರ ಮನೆಯಲ್ಲೇ ಹಂಗಿನ ಕೂಳಿಗೆ ಬದುಕುತ್ತಿರುವ ಸ್ಥಿತಿ ನನಗೆ ಮಾತ್ರ ಅರಿವಿತ್ತು. ವಿಷಯ ಗೊತ್ತಾದರೆ ಅತ್ತೆ ಖಂಡಿತಾ ರಣಚಂಡಿಯಾಗುತ್ತಿದ್ದಳು. ಆದರೆ ನಾನು ಎಷ್ಟೇ ಕಾಪಾಡಿಕೊಂಡರೂ ಆ ದಿನ ಬಂದೇಬಿಟ್ಟಿತು. ಶಶಾಂಕ ಅವರಮ್ಮನ ಬಳಿ ನನ್ನನ್ನೇ ಮದುವೆಯಾಗುವುದಾಗಿ ಹೇಳಿಬಿಟ್ಟ. ಕೆಲವೇ ಗಂಟೆಗಳೊಳಗೆ ಮನೆಯ ವಾತಾವರಣವೇ ಬದಲಾಗಿಹೋಗಿತ್ತು. ಅತ್ತೆಯರು ಒಬ್ಬೊಬ್ಬರೇ ತಮ್ಮ ನಿಜ ಬಣ್ಣ ತೋರತೊಡಗಿದರು.
ಅಷ್ಟು ಹೊತ್ತಿಗೆ ಮೆತ್ತಗಾಗಿದ್ದ ಅಜ್ಜನಿಗೆ ಯಾರೂ ಹೆದರುತ್ತಿರಲಿಲ್ಲ. ಮಾವಂದಿರದ್ದು ಬಿಸಿತುಪ್ಪ ಬಾಯಲ್ಲಿಟ್ಟ ಸ್ಥಿತಿ. ಅತ್ತ ತಂಗಿ ಹಾಗೂ ಮಕ್ಕಳು ಅತ್ತ ಹೆಂಡಂದಿರ ಕಾರುಬಾರು. ಹಿಟ್ಟೋ ಗಂಜಿಯೋ ನಮ್ಮ ಸೂರೊಳಗೆ ನಾವೇ ದೊರೆಗಳು. ಅದರಲ್ಲೂ ತವರುಮನೆಯ ಸಿರಿವಂತಿಕೆ ನೆಚ್ಚಿ ಬಂದ ಹೆಣ್ಣಿನ ಸ್ಥಿತಿ ಕಡೆಗೆ ಏನಾಗಬಹುದೆಂಬ ಸ್ಪಷ್ಟ ಚಿತ್ರಣ ದೊರೆತಿತ್ತು. ಅಮ್ಮನ ಮೇಲಿನ ಅಸಮಾಧಾನ ಮೆಲ್ಲಗೆ ಹೊಗೆಯಿಂದ ಬೆಂಕಿಗೆ ತಿರುಗಿತ್ತು. ನನಗೇಕೋ ಸಿಕ್ಕವನೊಬ್ಬನನ್ನು ಕಟ್ಟಿಕೊಂಡು ಮೊದಲು ಈ ಮನೆ ಬಿಡುವುದೇ ವಾಸಿ ಅನಿಸತೊಡಗಿತ್ತು.
ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.