ಈ ಪುಸ್ತಕದಲ್ಲಿರುವ ‘ಒಂದು ಪ್ರೇತ ಕಥೆ’  ಎಂಬ ಕವಿತೆಯಲ್ಲಿ ಕವಿಗಳು ಓದಬೇಕಾದುದನ್ನು ಸೂಚ್ಯವಾಗಿ, ವಿಡಂಬನಾತ್ಮಕವಾಗಿ ಬರೆಯಲಾಗಿದೆ. ಇಲ್ಲಿ ಎಲ್ಲ ಕವಿತೆಗಳು ತಮ್ಮ ತಮ್ಮ ವೈವಿಧ್ಯತೆಯಿಂದ ಮನಸೂರೆಗೊಳ್ಳುತ್ತವೆ ಯೋಚಿಸುವಂತೆ ಮಾಡುತ್ತವೆ ಖುಷಿಯನ್ನೂ ಕೊಡುತ್ತವೆ ಹಾಗೆ ಬರೆಯುತ್ತ ಹೋದರೆ ಎಲ್ಲ ಕವಿತೆಗಳ ಬಗೆಗೂ ಬರೆಯಬೇಕಾಗುತ್ತದೆ, ಯಾವುದನ್ನೂ ಬಿಡುವಂತೇಯೇ ಇಲ್ಲ.
ತೇರಳಿ. ಎನ್. ಶೇಖರ್ ಅವರು ಅನುವಾದಿಸಿದ ಮಲಯಾಳಂ ಕವಿ  ಸಚ್ಚಿದಾನಂದನ್ ಅವರ ‘ಮರೆತಿಟ್ಟ ವಸ್ತುಗಳು’ ಕವನ ಸಂಕಲನದ ಕುರಿತು ಎಚ್.ಎಸ್. ಮುಕ್ತಾಯಕ್ಕ ಬರಹ

ತೇರಳಿ. ಎನ್. ಶೇಖರ ಅವರು ಅನುವಾದಿಸಿದ ಮಲಯಾಳಂ ಕವಿ  ಸಚ್ಚಿದಾನಂದನ್ ಅವರ ‘ಮರೆತಿಟ್ಟ ವಸ್ತುಗಳು’ ಒಂದು ಅಪರೂಪದ ಕಾವ್ಯ.  ಈ ಮೊದಲು ಮಲೆಯಾಳಂನಿಂದ ಅನುವಾದಗೊಂಡ ಅನೇಕ ಕಾವ್ಯ, ಕಥೆ, ಕಾದಂಬರಿಗಳನ್ನು ಓದಿದ್ದೇನೆ. ಆದರೆ ಈ ಕವಿತೆಗಳನ್ನು ಓದಿರಲಿಲ್ಲ. ಈ ವಿಶಿಷ್ಟ ಕವಿತೆಗಳನ್ನು ತೇರಳಿ.ಎನ್.ಶೇಖರ ಸಮರ್ಥವಾಗಿ ಮೂಲಕ್ಕೆ ಅಪಚಾರವಾಗದಂತೆ ಅನುವಾದಿಸಿದ್ದಾರೆ. ಮೂಲದ ಸೊಗಸನ್ನು, ಸೊಗಡನ್ನು, ಯಥಾವತ್ತಾಗಿ ತಂದಿದ್ದಾರೆ. ಈ ಕವಿತೆಗಳಲ್ಲಿಯ ಭಾವ, ವಿಷಯ, ವಸ್ತುವೈವಿಧ್ಯ, ಪ್ರೀತಿ, ದೇವರು, ಬದುಕು, ಸಾವು ಹೀಗೆ ನಾನಾರೀತಿಯ ತುಡಿತಗಳನ್ನು, ಸಾಮಾಜಿಕ ಕಳಕಳಿ,  ವ್ಯವಸ್ಥೆಯ ವಿಡಂಬನೆ, ವ್ಯಂಗ್ಯವು ರೂಪಕಗಳ ಮೂಲಕ ಮನತಟ್ಟುತ್ತದೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ತೇರಳಿ ಎನ್. ಶೇಖರ್ ಅವರು ಕೇರಳದ ಗುರುವಾಯೂರಿನಲ್ಲಿ ವಾಸಿಸುತ್ತಿರುವವರು. ಕಾವ್ಯವೆಂಬುದು ಅವರ ಪ್ರೀತಿಯ ಆಯ್ಕೆ. ‘ಈ ಶಬ್ದ’ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ.  ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ  ಸಮರ್ಥ ಹಿಡಿತ ಹೊಂದಿರುವುದರಿಂದ ಅವರು ಅನೇಕ ಕವನಗಳನ್ನು ಅಲ್ಲಿನ ಓದುಗರು, ಇಲ್ಲಿಯೂ, ಇಲ್ಲಿಯೂ ಇಲ್ಲಿನ ಓದುಗರು ಅಲ್ಲಿಯೂ ಓದುವಂತೆ ಮಾಡಿದ್ದಾರೆ. ಹಾಗೆಯೇ ಭಾಷೆಗಳ  ಏಳುಬೀಳುಗಳ ಕುರಿತೂ ಅರಿವು ಇರುವವರು.

ಈ ಪುಸ್ತಕದಲ್ಲಿ  ಗಮನ ಸೆಳೆದ ‘ಒಂದು ದಿವಸ’  ಕವಿತೆ ವಿಭಿನ್ನವಾಗಿದೆ.  ತಾಯಿ ಭಾಷೆಯು ಇನ್ನೊಂದು ಭಾಷೆಯ ಅಡಿಯಲ್ಲಿ ಸಿಕ್ಕು ನಶಿಸಿ ಹೋಗುವ ಬಗೆಗಿನ ವಿಡಂಬನೆ ಮತ್ತು ದುರಂತದ ಚಿತ್ರಣವಾಗಿದೆ. ವಿಷಾದವೆಂದರೆ ಕನ್ನಡದ ಸ್ಥಿತಿಯೂ ಅದೇ ಆಗಿದೆ. ಆದ್ದರಿಂದ ಕವಿತೆಯು ಸಕಾಲಿಕ ಮೌಲ್ಯವನ್ನೂ ಬಿಂಬಿಸುತ್ತದೆ.

(ತೇರಳಿ. ಎನ್. ಶೇಖರ್)

‘ ಒಂದು ಸ್ವೀಡಿಷ್ ಸಂಜೆಯ ನೆನಪಿಗೆ ‘ ಕವಿತೆಯ ಸಾಲುಗಳನ್ನು ನೋಡೋಣ.
‘ ತಾವು ನನ್ನ ಬಟ್ಟಲಿಗೆ
ಕೆಂಪಗಿನ ಶರತ್ಕಾಲವನ್ನು
ನಿಲ್ಲಿಸದೆ ತುಂಬುತಿದ್ದೀರಿ’
ಎಂದು ಋತುವನ್ನು ಬಟ್ಟಲಿಗೆ ತುಂಬುವುದು ನನಗೆ ತುಂಬ ಮೋಹಕವಾಗಿ ತೋರಿದೆ. ರೂಪಕಗಳು ಸಶಕ್ತವಾಗಿರುವ ಕವಿತೆ ಇದಲ್ಲವೇ. ಅವುಗಳನ್ನು ಒಂದು ಭಾಷೆಯಿಂದ   ಇನ್ನೊಂದು ಭಾಷೆಗೆ ದಾಟಿಸುವುದು ಕೂಡ ಸವಾಲಿನ ಕೆಲಸವೇ ಆಗಿದೆ.

‘ಮರಗಳು’  ಎಂಬ  ಇನ್ನೊಂದು ಕವಿತೆಯ ಸಾಲುಗಳಲ್ಲಿ ಅದು ಇನ್ನಷ್ಟು ಸಮರ್ಥವಾಗಿ ಗೋಚರಿಸುತ್ತದೆ.
‘ನೆನಪುಗಳಲ್ಲಿ ವಸಂತ ಇರುವವರೆಗೂ
ಅವು ಮುಪ್ಪನ್ನು ಹಳಿಯುವದಿಲ್ಲ’  

ಬದುಕಿನ ದೃಷ್ಟಿಕೋನವನ್ನು ಹಿಡಿದಿಡುವ  ಈ ಸಾಲುಗಳು ಕವಿತೆಯನ್ನು ಮತ್ತೆ ಮತ್ತೆ ಓದುವಂತೆ ಮಾಡಿದವು.  ‘ಒಗಟುಗಳು’ ಕವನದಲ್ಲಿ ಪ್ರಣಯವನ್ನು ಹೊಸರೀತಿಯಲ್ಲಿ ಪರಿಪರಿಯಾಗಿ ವರ್ಣಿಸಿದ್ದಾರೆ.

‘ನೀನು ಅದೆಷ್ಟು ಹತ್ತಿರ
ಆದರೂ ಅದೆಷ್ಟು ದೂರ!’
ಎಂದು ಆರಂಭವಾಗುತ್ತ ನಾನಾಪರಿಯಾಗಿ ಹತ್ತಿರವಾದರೂ ದೂರ, ದೂರವಾದರೂ ಹತ್ತಿರ, ಇದರ ಒಡಲ್ಲಲಿಯ ಅನಂತತೆ, ನೋವು, ಕ್ಷಣಿಕತೆ ಹೇಳುತ್ತ ಹೇಳುತ್ತ ಕೊನೆಗೆ,
‘ಅದೆಷ್ಟು ಹತ್ತಿರವೀ ದೂರ
ಅದೆಷ್ಟು ಅನಂತ ಕ್ಷಣಿಕತೆ
ಅದೆಷ್ಟು ಮಧುರವೀ ಕಹಿ’ 

ಎಂಬ ಸಾಲುಗಳು ಮೂಲ ಕನ್ನಡದ್ದೇ ಕವಿತೆಯಂತೆ ಆಪ್ತವಾಗಿ ನಿಲ್ಲುತ್ತದೆ.

‘ನೀನು ಹೀಗೆ
ಮುಟ್ಟಿ ಮುಟ್ಟದೆ
ನಿಕಟವರ್ತಿಯಾಗುವೆ ಕ್ಷಣಿಕ!’
ಮನಮಿಡಿಯುವ ಸಾಲುಗಳೊಂದಿಗೆ ಕವಿತೆಯೊಂದು ಮುಗಿಯುತ್ತದೆ- ಒಂದು ನಿಟ್ಟುಸಿರಿನೊಡನೆ.

‘ಒಂದು ಪ್ರೇತ ಕಥೆ’ಯಲ್ಲಿ ಕವಿಗಳು ಓದಬೇಕಾದುದನ್ನು ಸೂಚ್ಯವಾಗಿ, ವಿಡಂಬನಾತ್ಮಕವಾಗಿ ಬರೆಯಲಾಗಿದೆ. ಇಲ್ಲಿ ಎಲ್ಲ ಕವಿತೆಗಳು ತಮ್ಮ ತಮ್ಮ ವೈವಿಧ್ಯತೆಯಿಂದ ಮನಸೂರೆಗೊಳ್ಳುತ್ತವೆ, ಅನೇಕ ಬಾರಿ ಆಲೋಚಿಸುವಂತೆ ಮಾಡುತ್ತವೆ;  ಖುಷಿಯನ್ನೂ ಕೊಡುತ್ತವೆ. ಹಾಗೆ ಬರೆಯುತ್ತ ಹೋದರೆ ಎಲ್ಲ ಕವಿತೆಗಳ ಬಗೆಗೂ ಬರೆಯಬೇಕಾಗುತ್ತದೆ ಎಂದು ಅನಿಸುತ್ತದೆ. ಓದುವ ಖುಷಿಯನ್ನು ಕೊಡುವ ಈ ಕೃತಿಯಲ್ಲಿ  ಯಾವುದನ್ನೂ ಬಿಡುವಂತೆಯೇ ಇಲ್ಲ.

ಕವಿತೆಗಳಲ್ಲಿ ಶೇಖರ್ ಅವರು, ಮೂಲದ ಸೊಗಸನ್ನು, ಸೊಗಡನ್ನು, ಯಥಾವತ್ತಾಗಿ ತಂದಿದ್ದಾರೆ. ಈ ಕವಿತೆಗಳಲ್ಲಿಯ ಭಾವ, ವಿಷಯ, ವಸ್ತುವೈವಿಧ್ಯ, ಪ್ರೀತಿ, ದೇವರು, ಬದುಕು, ಸಾವು ಹೀಗೆ ನಾನಾರೀತಿಯ ತುಡಿತಗಳನ್ನು, ಸಾಮಾಜಿಕ ಕಳಕಳಿ, ವ್ಯವಸ್ಥೆಯ ವಿಡಂಬನೆ, ವ್ಯಂಗ್ಯವು ರೂಪಕಗಳ ಮೂಲಕ ಮನತಟ್ಟುತ್ತದೆ. 

ಕೊನೆಗೆ ಈ ಸಂಕಲನದ ಹೆಸರಾಗಿರುವ ಕವಿತೆ ‘ಮರೆತಿಟ್ಟ ವಸ್ತುವಗಳು’
ಒಂದು ಕ್ಲಾಸಿಕ್ ಕವಿತೆ ಎನ್ನಬೇಕು. ಅಪರೂಪದ ವಿಶಿಷ್ಟ ಕವಿತೆ ಹಲುವಾರು ರೀತಿಯಲ್ಲಿ ಸಕಾಲಿಕ.  ಅದನ್ನು ಪ್ರತಿಯೊಬ್ಬರೂ ತಮ್ಮ ಬದುಕಿಗೆ ಅನ್ವಯಿಸಿಕೊಳ್ಳಬಹುದು.
ಒಂದು ತೀರ ಸಹಜ, ನೈಜ ಭಾವ ಇಲ್ಲಿದೆ.

ಇಷ್ಟುಕಾಲವು ಮರೆತಿಟ್ಟಿದ್ದೆಲ್ಲವು
ಈಗ ಒಮ್ಮೆಲೆ ನೆನಪಾಗುತ್ತವೆ

ಬಾಲ್ಯಕಾಲ, ಆ ಮುಗ್ಧತೆ, ಮರೆತಿಟ್ಟ ಛತ್ರಿ, ಪೆನ್ನು, ಅಂಗಿ, ಪುಸ್ತಕ, ತೀರಿಸದ ಸಾಲ, ಜೊತೆಗೆ ಮರೆತ ಸ್ನೇಹಕೂಡ. ಅಲ್ಲದೆ ಇದು ಪ್ರೆಮಕ್ಕೂ, ಸೃಷ್ಟಿಗೂ ಅನ್ವಯಿಸುತ್ತದೆ. ಕೊನೆಗೆ ದೇವರೂ ಈ ಭೂಮಿಯನ್ನು ಮರೆತ್ತಿದ್ದಾನೆಂದು ಹೀಗೆ ಹೇಳುವರು,

‘ಈಗ ಅನಿಸುತ್ತಿದೆ
ಈ ಭೂಮಿಯನ್ನು ದೇವರು
ಮರೆತಿಟ್ಟಿದ್ದೆಂದು
ಆದರಲ್ಲಿ ನಮ್ಮನ್ನೂ ಸಹ
ನೆನಪು ಬಂದಂತೆಲ್ಲ
ಅವನು ವಾಪಸ್ಸು ತೆಗೆದುಕೊಳ್ಳುತ್ತಾನೆ.
ನದಿಗಳನ್ನು,
ಕಾಡುಗಳನ್ನು,
ನಮ್ಮನ್ನೂ.’

ಈ ಮರೆವಿನಲ್ಲಿ ಏನಿದೆ? ಏನೆಲ್ಲ ಇದೆ. ನೋವು, ಖುಷಿ, ದುಃಖ. ಅಂದರೆ ಬದುಕೇ ಇದೆ. ಒಂದು ಜೀವಿತಾವಧಿಯ ಕಥೆ ವ್ಯಥೆ ಬಯಕೆ ಕಂಬನಿ ಪಶ್ಚಾತಾಪ ಏನೆಲ್ಲವನ್ನೂ ಒಳಗೊಂಡಂತೆ ಪದಗಳು ಎಷ್ಟು ಭಾರವಾಗಿವೆ.

ತೇರಳಿ.ಎನ್.ಶೇಖರ ಅವರು ತುಂಬ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಹೊರಭಾಷೆಯ ಸಾಹಿತ್ಯ ನಮಗೆ ಓದಲು ಸಿಗುವುದು ಅನುವಾದಗಳಿಂದ ಮಾತ್ರ. ಅನುವಾದಕಾರರು ಅವುಗಳ ಪರಿಚಯವನ್ನು ಮಾಡಿಕೊಡುತ್ತ ನಮ್ಮ ಹೃದಯದ ಕಿಟಕಿಗಳನ್ನು ತೆರೆದಿಡುವಂತಹ ಕೆಲಸ ಮಾಡುತ್ತಾರೆ. ಮೂಲವನ್ನೇ ಓದುತ್ತಿರುವಂಥ ಅನುಭೂತಿಯನ್ನು,  ಖುಷಿಯನ್ನು ಒಬ್ಬ ಸಮರ್ಥ ಅನುವಾದಕ ಮಾತ್ರ ಕೊಡಬಲ್ಲ.

ಅವರು ಅನುವಾದಿಸಿದ ಕವಿತೆಗಳನ್ನು ಓದಿ ನನಗನಿಸಿದ ಸಾಲುಗಳು ಇಲ್ಲಿವೆ:

‘ಬದುಕು ಮರೆತಿಟ್ಟ ವಸ್ತುಗಳಲ್ಲಿ,
ಪ್ರೀತಿ ಮರೆತಿಟ್ಟ ವಸ್ತುಗಳಲ್ಲಿ,
ನಾನೂ ಒಂದು
ಅಯ್ಯೋ ದೇವರೆ,
ಅವಕೆಂದು ನನ್ನ ನೆನಪಾಗಲಿಲ್ಲ.
ಇನ್ನು
ಆಶಿಸುತ್ತೇನೆ,
ಸಾವು ಮರೆತಿಟ್ಟ ವಸ್ತುಗಳಲ್ಲಿ,
ನಾನು ಇಲ್ಲವೆಂದು
ನಾನು ಇಲ್ಲವೆಂದು.’