‘ಕಾಯೌ ಶ್ರೀಗೌರಿ..’ ಎಂಬ ನಾಡಗೀತೆಯನ್ನು ಅಂದು ಬರೆದಿದ್ದ ಬಸವಪ್ಪ ಶಾಸ್ತ್ರಿಗಳು ನೆನಪಾಗುತ್ತಾರೆ.  ಮೈಸೂರನ್ನು ನಾವಿಂದು ಸಾಂಸ್ಕೃತಿಕ ನಗರಿ ಎಂದು ಕರೆದುಕೊಳ್ಳುತ್ತೇವೆ. ವಿದ್ವತ್ತಿಗೆ ಹೆಸರಾದದ್ದು ಎಂದು ತಿಳಿದೇ ಇದೆ. ಇಷ್ಟಿದ್ದೂ ಬಸವಪ್ಪ ಶಾಸ್ತ್ರಿಗಳ ಸ್ಮಾರಕದ ಕಡೆಗೆ ಅಸಡ್ಡೆ ಯಾಕೆ ಮತ್ತು ಹೇಗೆ ಬೆಳೆಯಿತೋ ಗೊತ್ತಿಲ್ಲ. ಮೈಸೂರಿನಲ್ಲಿರುವ ಎಲ್.ಐ.ಸಿ ಬಿಲ್ಡಿಂಗ್ ಬಳಿ ರಸ್ತೆ ಪಕ್ಕದಲ್ಲಿ ಬಸವಪ್ಪ ಶಾಸ್ತ್ರಿಗಳ ಸ್ಮಾರಕವಿದೆ.  ಅದರ ಬಣ್ಣ ಮಾಸಿ, ಗೋಡೆಗಳ ಮೇಲೆಲ್ಲ ಬಳ್ಳಿ ಹಬ್ಬಿಕೊಳ್ಳುವಷ್ಟು ನಿರ್ಲಕ್ಷ್ಯವೇಕೆ..
‘ರಂಗ ವಠಾರ’ದಲ್ಲಿ ಕಾಲದ ಮಹಿಮೆಯ ಕುರಿತು ಬರೆದಿದ್ದಾರೆ ಎನ್. ಸಿ. ಮಹೇಶ್.

ಹಿರಿಯರೊಬ್ಬರು ನನಗೆ ಕರೆ ಮಾಡಿ ‘ಶ್ರೀ ದತ್ತ ಭಾಗವತ, 1202 ಪುಟಗಳಿವೆ. ಬೆಲೆ 200ರೂ ಅಷ್ಟೇ. ತಗೋಳ್ಳಿ’ ಎಂದು ತಾಕೀತು ಮಾಡಿದರು. ಇಂಥವರು ಮಾತಿಗೆ ಸಿಕ್ಕಾಗ ಅವರ ಬಗೆಗೆ ಗೌರವ ಇಟ್ಟುಕೊಂಡೇ ಒಂದಿಷ್ಟು ಕೀಟಲೆ ಮಾಡೋಣ ಅನಿಸುತ್ತದೆ. ಆದರೆ ಯಾಕೋ ಧೈರ್ಯ ಬರುವುದಿಲ್ಲ. ಯಾಕೆಂದರೆ ನನಗೆ ಈ ಬಗೆಯ ಪುಸ್ತಕಗಳನ್ನ ಓದಲು ಸೂಚಿಸುವವರು ಒಂದಿಲ್ಲೊಂದು ಬಗೆಯಲ್ಲಿ ನನ್ನ ಅಪ್ಪ ಅಮ್ಮನಿಗೆ ಹತ್ತಿರದವರಾಗಿರುತ್ತಾರೆ. ಚೂರು ಅಸಡ್ಡೆಯ ಧ್ವನಿಯಲ್ಲಿ ಮಾತಾಡಿದರೆ ಕಿಡಿ ಹಾರಬೇಕಾದ ಕಡೆ ಹಾರಿರುತ್ತದೆ. ಆಮೇಲೆ ಅದರ ಶಾಖವನ್ನು ಭರಿಸುವ ಕೆಲಸ ನನ್ನ ಪಾಲಿನದಾಗುತ್ತದೆ. ಮೊದಲಾಗಿದ್ದರೆ ಈ ಬಗೆಗೆ ಅಷ್ಟು ತಿಳುವಳಿಕೆ ಇಲ್ಲದೆ ಶಾಖ ತಟ್ಟಿಸಿಕೊಂಡದ್ದು ಇದೆ. ಆದರೆ ಕ್ರಮೇಣ ನನ್ನಲ್ಲಿ ಬದಲಾವಣೆ ಕಂಡಿತು. ಅಥವಾ ಶಾಖಕ್ಕೆ ಕರಗಿದೆನೇನೋ ಗೊತ್ತಿಲ್ಲ.

ನನ್ನ ಪ್ರಕಾರ ದೇವರು ಮತ್ತು ಅಧ್ಯಾತ್ಮ ವನ್ನು ಒಂದು ಜರ್ನಿಯನ್ನಾಗಿಸಿಕೊಳ್ಳಬೇಕು. ಇದು ಹೇಗೆಂದರೆ ಕಿವಿ ತೆರೆದಿರಬೇಕು, ಕೇಳಿಸಿಕೊಳ್ಳುವ ಪ್ರತಿಯೊಂದು ಸಂಗತಿಯ ಬಗೆಗೆ ವಿರೋಧವಿದ್ದರೂ ಗೌರವ ಹೊಂದಿರಬೇಕು, ಎಲ್ಲಕ್ಕೂ ಮಿಗಿಲಾಗಿ ಅನುಭವದ ಮೂಲಕ ತಿಳಿಯಲು ನಮ್ಮನ್ನು ಒಡ್ಡಿಕೊಂಡಿರಬೇಕು. ಒಂದು ಕಡೆ ಸ್ಥಾಯಿಯಾಗಿ ಉಳಿದುಬಿಟ್ಟು ದೇವರು ಮತ್ತು ಅಧ್ಯಾತ್ಮವನ್ನು ನೋಡಿದರೆ ಅದರ ಅನುಸಾರ ನಮಗೆ ದರ್ಶನ. ನಮ್ಮ ನಿತ್ಯ ಅನುಭವಗಳ ಜೊತೆ ದೇವರು ಮತ್ತು ಅಧ್ಯಾತ್ಮವನ್ನು ತಾಳೆ ಹಾಕುತ್ತ ನಡೆದರೆ ನಮಗೆ ದಕ್ಕುವ ಕಾಣ್ಕೆ ಬೇರೆ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಪು.ತಿ.ನ. ಅವರ ಒಂದು ಪದ್ಯದ ಸಾಲು ನನ್ನನ್ನು ತುಂಬ ಕಾಡುತ್ತದೆ- ‘ದೇವ ಬೊಂಬೆ, ಪೂಜೆ ಆಟ, ಭಕ್ತಿ ಸೋಜಿಗ..’

ನನಗೆ ಕರೆ ಮಾಡಿದ ಹಿರಿಯರಲ್ಲಿರುವ ಭಕ್ತಿಯೂ ನನಗೆ ಸೋಜಿಗವೇ ಅನಿಸಿತು. ಕೀಟಲೆ ಯಾಕೆ ಮಾಡಬೇಕು ಅಂದುಕೊಂಡು ನಾನು ಸುಮ್ಮನಾದೆ. ನನ್ನ ಮೌನ ಕಂಡು ಆ ಹಿರಿಯರು ದತ್ತಾತ್ರೇಯ ಸ್ವಾಮಿಯ ಬಗ್ಗೆ ಮಾತು ಶುರುಮಾಡಿ ಮಹಿಮೆಗಳನ್ನು ವಿವರಿಸುವ ಕಡೆಗೆ ಹೊರಳಿ ‘ದತ್ತಾತ್ರೇಯರದು ತ್ರಿಮೂರ್ತಿ ಸಂಗಮ ಸ್ವರೂಪ’ ಎಂದು ಪ್ರವಚನ ಆರಂಭಿಸುವ ಸೂಚನೆ ಕೊಟ್ಟರು.

ನಾನು ಸುಮ್ಮನಿದ್ದರೆ ಮುಂದುವರೆಸುತ್ತಾರೆ. ಹೋಗಲಿ ಕೇಳಿಸಿಕೊಳ್ಳೋಣವೆಂದರೆ ನನ್ನ ದರ್ಶನ ಬದಲಾಗಿದೆ. ಚೂರೇಚೂರು ನಗೋಣ ಅಂದುಕೊಂಡರೂ ಕಿಡಿ ಹಾರುವ ಭಯ. ಮಾಡುವುದು ಏನು?

ಬೇರೆಯವರ ವಿಚಾರದಲ್ಲಿ ಹೇಗೋ ನನಗೆ ಗೊತ್ತಿಲ್ಲ; ವಯಸ್ಸು ಹೆಚ್ಚಿದಂತೆಲ್ಲ ಅದು ನನ್ನ ವಿಚಾರದಲ್ಲಿ ಅಬ್ಬರ ಮತ್ತು ಉಬ್ಬರ ಕಡಿಮೆ ಮಾಡಿದೆ. ನಗು ಬಂದರೂ ಅದನ್ನು ಒತ್ತರಿಸಿ ಹಿಡಿದುಕೊಳ್ಳುವ ಸಂಯಮ ಕಲಿಸಿದೆ. ಕಿಡಿಹೊತ್ತಿಕೊಂಡರೆ ಹೊತ್ತಿಕೊಳ್ಳಲಿ, ನಾನೂ ಅದರಲ್ಲಿ ಪ್ರಜ್ವಲಿಸುತ್ತೇನೆ ಎನ್ನುವ ಹುಂಬತನವನ್ನ ನಿಧಾನಕ್ಕೆ ನನ್ನಲ್ಲಿ ಮಾಯಮಾಡುತ್ತಿದೆ.

ಎಲ್ಲ ಸರಿ; ಆದರೆ ನನ್ನಲ್ಲಿ ಸಂಯಮ ಇದೆ ಅಂದುಕೊಂಡು ಮಾತು ಬಂದ್ ಮಾಡಿ ಕಿವಿಗೊಟ್ಟರೆ ಹಿರಿಯರ ಮಾತು ದಡ ಮುಟ್ಟುವುದು ಯಾವಾಗಲೋ ಎನ್ನುವ ಅನುಮಾನ ನನಗೆ ಬಂದಿತು. ಹಾಗಾಗಿ ನಾನು ಅವರಿಗೆ ‘ದತ್ತಾತ್ರೇಯ ಸ್ವಾಮಿಯನ್ನು ನಾನು ಬದುಕುವ ಬಗೆಯಲ್ಲೇ ಕಾಣ್ತಿದ್ದೇನೆ…’ ಅಂದೆ. ‘ಹೇಗೆ..?’ ಅಂದರು. ‘ ಸೃಷ್ಟಿ, ಸ್ಥಿತಿ, ಲಯ ಇವು ಹೇಗೆ ಕಾರ್ಯನಿರತವಾಗಿದೆ ನನಗೆ ತಿಳೀತಿದೆ. ನೀವು ಪುಸ್ತಕದಲ್ಲಿನ ಅಂದಿನ ಕಥೆಗೆ ಸ್ಟಿಕ್ಆನ್ ಆಗಿದ್ದರೆ ನಾನು ವರ್ತಮಾನದಲ್ಲೇ ಅದರ ಚಿತ್ರಗಳನ್ನ ಕಂಡುಕೊಳ್ತಿದ್ದೇನೆ. ಹಾಗೆ ನೋಡಿದರೆ ನಾನು ಕಂಟೆಂಪರರಿ. ನಿಮಗೆ ಮೂರು ಚಿತ್ರಗಳನ್ನ ಕಟ್ಟಿಕೊಡ್ತೀನಿ. ನೀವೇ ತಾಳೆ ಹಾಕ್ಕೊಳ್ಳಲಿ’ ಅಂದೆ. ‘ ಹೇಳಪ್ಪ..’ ಅಂದರು. ನನಗೆ ಚಿತ್ರಗಳು ನೆನಪಾಗಲು ಆರಂಭಿಸಿದವು.

ಚಿತ್ರ 1

‘ಆಕೆಯ ಹೆಸರು ಅಪೂರ್ವ. ಬೆಂಗಳೂರಿನ ಒಂದು ಪ್ರತಿಷ್ಠಿತ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗವನ್ನ ಈಚೆಗೆ ಮುಗಿಸಿದ್ದಾರೆ. ರಂಗಭೂಮಿಯನ್ನು ಒಂದು ಸಬ್ಜೆಕ್ಟ್ ಆಗಿ ತೆಗೆದುಕೊಂಡು ಪದವಿಯಲ್ಲಿ ಅಧ್ಯಯನ. ಹವ್ಯಾಸಿ ರಂಗತಂಡಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ತಿಳಿದು ಬರಲು ಪಠ್ಯದ ಭಾಗವಾಗಿ ಸೂಚನೆ ಹೊರಟಾಗ ಅಪೂರ್ವ ನಮ್ಮ ರಂಗತಂಡಕ್ಕೆ ಇಂಟರ್ನ್ಶಿಪ್ ಮಾಡಲು ಬಂದು ನಂತರ ತಂಡದ ಒಂದು ಭಾಗವಾದವರು.

‘ಮೂಲತಃ ಚನ್ನರಾಯಪಟ್ಟಣದ ಹುಡುಗಿ. ನೃತ್ಯದಲ್ಲಿ ಪರಿಶ್ರಮ. ಚಿಕ್ಕವಯಸ್ಸಿಗೇ ವಿದುಷಿ ಪಟ್ಟ ಅಲಂಕರಿಸಿದವರು. ತಮ್ಮ ಪುಟ್ಟ ಮುಖಕ್ಕೆ ದೊಡ್ಡ ಕನ್ನಡಕ ಹಾಕಿಕೊಂಡು ಬಂದು ಕೂತು ಮಾತು ಆರಂಭಿಸುವವರು. ‘ನಿನ್ನ ಕನ್ನಡಕಕ್ಕೆ ವೈಪರ್ ಒಂದಿಲ್ಲ ನೋಡು.. ಇದ್ದಿದ್ರೆ ಚೆನ್ನಾಗಿರೋದು..’ ಎಂದು ಬಾಬು ಹಿರಣ್ಣಯ್ಯ ಸರ್ ಅಪೂರ್ವರನ್ನ ರೇಗಿಸಿದ್ದು ಇದೆ.

‘ಧಾರ್ಮಿಕ ಹಿನ್ನೆಲೆಯ ಮನೆತನ. ಪಕ್ಕಾ ಸಂಪ್ರದಾಯಸ್ಥ ಕುಟುಂಬ. ಅಪೂರ್ವ ಈ ಎರಡು ವಿಚಾರಗಳ ಬಗೆಗೆ ಗೌರವ ಇರಿಸಿಕೊಂಡಿದ್ದರೂ ಅಲ್ಲೇ ನೆಲೆ ನಿಂತಿಲ್ಲ. ಅವರು ಶಾಸ್ತ್ರೀಯ ನೃತ್ಯವನ್ನೂ ಮಾಡುತ್ತಾರೆ, ಮಾಡಲಿಂಗ್ ಡ್ರೆಸ್ ಏರಿಸಿಕೊಂಡು ಆ ಭಾವಭಂಗಿಯಲ್ಲಿ ನಿಂತು ಪೋಸ್ ಕೂಡ ಕೊಡುತ್ತಾರೆ.

‘ಡಿಗ್ರಿ ಮುಗಿದ ಮೇಲೆ ಮುಂದೇನು ಅಂತ ಮನೆಯವರು ಕೇಳಿದಾಗ ಅಪೂರ್ವ ತನ್ನ ಯೋಜನೆಗಳನ್ನ ಮುಂದಿರಿಸಿದ್ದಾರೆ. ಹೇಗೂ ನೃತ್ಯದಲ್ಲಿ ವಿದ್ವತ್ ಆಗಿದೆ; ಜೊತೆಗೆ ರಂಗಭೂಮಿಯ ಬಗೆಗೆ ಪಾಠ ಕೇಳಿ ಮಾಡಿಕೊಂಡಿರುವ ನೋಟ್ಸ್ ಕೂಡ ಇದೆ. ತನ್ನದೇ ಒಂದು ನೃತ್ಯ ಶಾಲೆ ಆರಂಭಿಸಬೇಕು. ಜೊತೆಗೆ ಅಲ್ಲೇ ರಂಗಭೂಮಿಯನ್ನೂ ಒಂದು ಶಿಸ್ತಾಗಿ ಮಕ್ಕಳಿಗೆ ಕಲಿಸಬೇಕು ಎನ್ನುವುದು ಅಪೂರ್ವ ಅವರ ಯೋಜನೆಗಳು.

‘ಮಗಳು ಕಲಿತದ್ದೇ ಅದು. ಈಗ ಗುರುವಾಗಿ ಕಲಿಸುತ್ತೇನೆ ಅನ್ನುವಾಗ ಅದಕ್ಕೆ ನೆರವು ನೀಡಬೇಕಾದದ್ದು ಕರ್ತವ್ಯʼ ಎಂದು ಭಾವಿಸಿದ ಆಕೆಯ ಅಪ್ಪ ಅಮ್ಮ ‘ಹೇಗೆ ಏನು ಎತ್ತ.. ತಿಳಿಸು. ಮನೆ ಪಕ್ಕ ಜಾಗವಂತೂ ಇದೆ. ಅಲ್ಲೊಂದು ಕಾಂಪ್ಲೆಕ್ಸ್ ಮೇಲೇಳುತ್ತ ಕೆಲಸ ನಡೀತಿದೆ. ಅದರ ಒಂದು ಫ್ಲೋರ್ ನಲ್ಲಿ ನಿನ್ನ ಶಾಲೆ ಆರಂಭಿಸು..’ ಅಂದಿದ್ದಾರೆ.

‘ಅಷ್ಟು ಜಾಗದಲ್ಲಿ ನೃತ್ಯ ಶಾಲೆ ಜೊತೆಗೆ ಒಂದು ಪುಟ್ಟ ರಂಗಮಂದಿರ ಕೂಡ ನಿರ್ಮಿಸಬಹುದೆ..? ಬಂದು ಜಾಗ ನೋಡಿ ಸಜೆಸ್ಟ್ ಮಾಡಿ’ ಎಂದು ಬಾಬು ಹಿರಣ್ಣಯ್ಯ ಸರ್ ಮತ್ತು ನನ್ನನ್ನ ಕೇಳಿದರು ಅಪೂರ್ವ.

ಹೋಗಿ ನೋಡಲೇನು ಅಡ್ಡಿ? ಚನ್ನರಾಯಪಟ್ಟಣಕ್ಕೆ ಹೋದದ್ದೂ ಆಯಿತು. ಜಾಗ ನೋಡಿದ್ದೂ ಆಯಿತು. ಒಂದಿಷ್ಟು ಮಾತುಕಥೆ, ಚರ್ಚೆ, ರಂಗಮಂದಿರದ ವಿನ್ಯಾಸ ಎಲ್ಲದರ ಬಗ್ಗೆ ಮಾತೂ ಆಯಿತು. ಈ ಎಲ್ಲವನ್ನು ಕಾರ್ಯವಾಗಿ ಪರಿವರ್ತಿಸುವುದು ಕಾಲಕ್ಕೆ ಬಿಟ್ಟದ್ದು. ನಿಧಾನವಾಗಿ ರೂಪುಕಂಡುಕೊಳ್ಳುವ ಕೆಲಸಗಳು ಇವು. ನಮಗನಿಸಿದ್ದನ್ನು ನಾವು ಹೇಳಿದೆವು.

ಆದರೆ ಬದುಕಿನ ನಿಜವಾದ ಸ್ವಾದ ಇರುವುದು ಊಟದಲ್ಲಿ ಎಂದು ನಂಬಿರುವವನು ನಾನು. ಅಪೂರ್ವರ ಮನೆಯಲ್ಲಿ ಅವರ ಕೆಲವು ಆಪ್ತೇಷ್ಟರ ಜೊತೆ ಒಂದೊಳ್ಳೆ ಭೋಜನವಾಯಿತು. ನುಚ್ಚಿನುಂಡೆ, ಅನ್ನ, ತುಪ್ಪ, ಘಮಘಮಿಸುವ ಸಾರು, ಮಜ್ಜಿಗೆ ಹುಳಿ, ಕೋಸಂಬರಿ, ಬೀಟ್ರೂಟ್ ಪಲ್ಯ, ಬಜ್ಜಿ ಎಲ್ಲ ತಿಂದು ಸಂತೃಪ್ತಭಾವ ಅನುಭವಿಸಿದ ಮೇಲೆ ಒಂದು ಗ್ರೂಪ್ ಫೋಟೊ ಸೆಷನ್. ನಂತರ ಕಾರ್ ಹತ್ತಿ ಬೆಂಗಳೂರಿನ ಕಡೆಗೆ ಪಯಣ…’

ಚಿತ್ರ 2

‘ಪಯಣ ಅಂತಂದಾಗಲೆಲ್ಲ ನನಗೆ ನೆನಪಾಗುವುದು ಮೈಸೂರು. ಬೆಂಗಳೂರಿನಿಂದ ಹೆಚ್ಚೆಂದರೆ ಮೂರು ತಾಸುಗಳ ಪ್ರಯಾಣ. ಹಳೇ ಮೈಸೂರಿನ ಕುಟುಂಬಗಳು, ಆ ಮನೆಗಳು, ಸಾಹಿತ್ಯಕ ಓದು ಮತ್ತು ಚರ್ಚೆ, ಅರಮನೆ, ಬೆಟ್ಟ, ಜೂ ಎತ್ತಿಂದೆತ್ತ ದಿಕ್ಕು ಬದಲಿಸಿ ಸಾಗಿದರೂ ಒಂದೊಂದು ಸುಂದರ ಜಾಗ ಎದುರಾಗುತ್ತದೆ. ಮೈಸೂರು ಅಂಥ ಚೆಂದದ ಊರು. ಮೊದಲಿನಿಂದಲೂ ಈ ಊರಿನ ಬಗೆಗೆ ನನ್ನಲ್ಲಿ ಒಲವು ಹೆಚ್ಚು.

ಆದರೆ ಈಚೀಚೆಗೆ ಮೈಸೂರಿನ ಬಗೆಗೆ ಒಲವು ಮೀರಿದ ಅನುಭೂತಿ ಹುಟ್ಟಿಕೊಳ್ಳಲು ಹಲವು ಕಾರಣಗಳು ಇವೆ. ಮತ್ತು ಆ ಎಲ್ಲ ಕಾರಣಗಳ ಹಿಂದೆಯೂ ಒಂದೊಂದು ಮಧುರ ಸ್ಮೃತಿ ಇದೆ.

ಒಂದು ಕಡೆ ಸ್ಥಾಯಿಯಾಗಿ ಉಳಿದುಬಿಟ್ಟು ದೇವರು ಮತ್ತು ಅಧ್ಯಾತ್ಮವನ್ನು ನೋಡಿದರೆ ಅದರ ಅನುಸಾರ ನಮಗೆ ದರ್ಶನ. ನಮ್ಮ ನಿತ್ಯ ಅನುಭವಗಳ ಜೊತೆ ದೇವರು ಮತ್ತು ಅಧ್ಯಾತ್ಮವನ್ನು ತಾಳೆ ಹಾಕುತ್ತ ನಡೆದರೆ ನಮಗೆ ದಕ್ಕುವ ಕಾಣ್ಕೆ ಬೇರೆ ಆಗಿರುತ್ತದೆ.

ಮೈಸೂರು ಅಂದರೆ ನನಗೆ ಈಚೆಗೆ ಟ್ರೈನು ನೆನಪಾಗುತ್ತದೆ. ಟ್ರೈನ್ ಒಳಗೆ ಮೇಲಿನ ಪರ್ತ್ ನೆನಪಾಗುತ್ತದೆ. ಅಲ್ಲಿ ಕೂತು ಇಯರ್ ಫೋನ್ ಸಿಕ್ಕಿಸಿಕೊಂಡು ಗುಲಾಂ ಅಲಿ ಸಂಗೀತ ಕೇಳಿದ್ದು, ಸ್ಯಾಂಡ್ವಿಚ್ ತಿಂದದ್ದು, ನಂತರ ಹಾಗೇ ಒರಗಿ ನಿದ್ರೆ… ಬೆಂಗಳೂರಿನಿಂದ ಮೈಸೂರಿಗೆ ಊಟಕ್ಕೆ ಅಂತಲೇ ಹೋಗುತ್ತಿದ್ದ ರಾಯಲ್ನೆಸ್(?) ಎಲ್ಲ ಕಣ್ಮುಂದೆ ಕದಲುತ್ತದೆ.

ಇದರ ಜೊತೆಗೆ ಮೈಸೂರಿನಲ್ಲಿ ಹೆಜ್ಜೆ ಊರುತ್ತಿದ್ದಂತೆ ಮನಸ್ಸು ಅದರ ಇತಿಹಾಸದ ಕಡೆಗೆ ವಾಲುತ್ತದೆ. ಮೈಸೂರಿನ ಬಗೆಗೆ ನೆನೆಯಲು ಸಂಗತಿಗಳಿಗೇನು ಕೊರತೆ? ಆದರೆ ನನ್ನ ಮನಸ್ಸನ್ನ ಸಂಗೀತ ಸದಾ ಆಕ್ರಮಿಸಿಕೊಂಡು ಆಳುವುದರಿಂದ ಮೈಸೂರಿನ ನೆಲದಲ್ಲಿ ನಾನು ನಡೆಯಲು ಆರಂಭಿಸಿದ ಕ್ಷಣ ನನಗೆ ‘ಕಾಯೌ ಶ್ರೀಗೌರಿ..’ ಹಾಡು ನೆನಪಿಗೆ ನಿಲುಕುತ್ತದೆ. ಈ ಹಾಡಿನ ಕರ್ತೃ ‘ಅಭಿನವ ಕಾಳಿದಾಸ’ ಎಂದು ಬಿರುದಾಂಕಿತರಾದ ಬಸವಪ್ಪ ಶಾಸ್ತ್ರಿಗಳು. ಕಾಳಿದಾಸನ ‘ವಿಕ್ರಮೋರ್ವಶೀಯ’ ಹಾಗೂ ‘ಅಭಿಜ್ಞಾನ ಶಾಕುಂತಲಾ’ ನಾಟಕಗಳನ್ನ ಕನ್ನಡದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟವರು. ಇಂಗ್ಲಿಷ್ ಬಾರದಿದ್ದರೂ ಶೇಕ್ಸ್ಪಿಯರನ ಹ್ಯಾಮ್ಲೆಟ್ ನಾಟಕವನ್ನು ಸಿ. ಸುಬ್ಬರಾಯರಿಂದ ಓದಿಸಿ ಅರ್ಥೈಸಿಕೊಂಡು

‘ಶೂರಸೇನ ಚರಿತ್ರೆ’ ಎಂದು ರೂಪಾಂತರಿಸಿಕೊಟ್ಟವರು. ಇವರ ಕಾಲಾವಧಿ 1843 ರಿಂದ 1891.

‘ಹತ್ತನೆಯ ಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರಿಗೆ ಬ್ರಿಟಿಷರು ಮೈಸೂರು ಆಡಳಿತವನ್ನು ಹಿಂದಿರುಗಿಸಿದ ಸಂದರ್ಭ. ಅಧಿಕಾರ ಸ್ವೀಕಾರದ ಸಮಯದಲ್ಲಿ ಮಹಾರಾಜರು ತಮ್ಮ ಆಸ್ಥಾನ ಪಂಡಿತರಾಗಿದ್ದ ಬಸವಪ್ಪ ಶಾಸ್ತ್ರಿಗಳಿಗೆ ಈ ನೆನಪಿನ ಸಲುವಾಗಿ ಒಂದು ಗೀತೆ ರಚಿಸಲು ಸೂಚಿಸುತ್ತಾರೆ. ಆಗ ಬಸವಪ್ಪ ಶಾಸ್ತ್ರಿಗಳಿಂದ ಒಡಮೂಡಿದ ಗೀತೆ ‘ಕಾಯೌ ಶ್ರೀಗೌರಿ’.

‘ಈ ಗೀತೆಯ ಸಂಯೋಜನೆಗೆ ‘ಧೀರ ಶಂಕರಾಭರಣ’ ರಾಗ ಬಳಸಿಕೊಳ್ಳಲಾಗಿದೆ. ಈ ಗೀತೆ ಆಗಿನ ಮೈಸೂರು ಸಂಸ್ಥಾನದ ನಾಡ ಗೀತೆಯಾಗಿ ಮಾರ್ಪಾಡುಗೊಂಡಿತು. ಶಾಲೆಗಳಲ್ಲಿ ಮಕ್ಕಳು ಈ ಹಾಡನ್ನು ಪ್ರಾರ್ಥನೆಯಾಗಿ ಹಾಡುತ್ತಿದ್ದರು. ಅಷ್ಟು ಪ್ರಸಿದ್ಧಿ ಪಡೆದಿತ್ತು ಹಾಡು. ಅದರಲ್ಲಿ ಬಸವಪ್ಪ ಶಾಸ್ತ್ರಿಗಳ ಪದ ಲಾಲಿತ್ಯ ಗಮನಿಸಬೇಕು.

ಕಾಯೌ ಶ್ರೀಗೌರಿ, ಕರುಣಾ ಲಹರಿ
ತೋಯಜಾಕ್ಷಿ ಶಂಕರೀಶ್ವರಿ
ವೈಮಾನಿಕ ಭಾಮಾರ್ಚಿತ
ಕೋಮಲಕರ ಪಾದೇ
ಶ್ರೀಮಾನ್ವಿತ ಭೂಮಾಸ್ವದೆ ಕಾಮಿತ ಫಲದೆ

ಶುಂಭಾದಿನು ದಾಂಬೋನಿಧಿ
ಕುಂಭಜ ನಿಭ ದೇವೀ
ಜಂಭಾಹಿತ ಸಂಭಾವಿತೆ ಶಾಂಭವಿ ಶುಭವೀ

ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೇಂದ್ರ
ನಾಮಾಂಕಿತ ಭೂಮೀಂದ್ರ ಲಲಾಮನ ಮುದದೆ

– ಹೀಗೆ ಬರೆದ ಬಸವಪ್ಪ ಶಾಸ್ತ್ರಿಗಳು ವಾಯುವಿಹಾರಕ್ಕೆಂದು ಒಮ್ಮೆ ಕುದುರೆಗಾಡಿಯಲ್ಲಿ ಹೋದಾಗ ಅಪಘಾತಕ್ಕೆ ಈಡಾಗಿ ತಮ್ಮ ನಲವತ್ತೆಂಟನೆಯ ವಯಸ್ಸಿಗೇ ತೀರಿಹೋಗುತ್ತಾರೆ. ಇಷ್ಟರ ನಡುವೆ ಅವರ ಸಾಧನೆ ಮಹತ್ತರವಾದದ್ದು. ತಮ್ಮ ಹದಿನೆಂಟನೆಯ ವಯಸ್ಸಿಗೇ ‘ಕೃಷ್ಣರಾಜಾಭ್ಯುದಯ’ ಕಾವ್ಯ ರಚಿಸಿದವರು. 1882ರಲ್ಲಿ ಮಹಾರಾಜರು ಸ್ಥಾಪಿಸಿದ ‘ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ’ ಬಸವಪ್ಪ ಶಾಸ್ತ್ರಿಗಳ ಅನೇಕ ನಾಟಕಗಳನ್ನ ರಂಗಭೂಮಿಯ ಮೇಲೆ ಪ್ರದರ್ಶಿಸಿತು.

ಕಾಳಿದಾಸನ ನಾಟಕಗಳನ್ನು ಕನ್ನಡಕ್ಕೆ ಅನನ್ಯವಾಗಿ ಅನುವಾದಿಸಿಕೊಟ್ಟು, ನಾಡಗೀತೆ ರಚಿಸಿ ಪ್ರಸಿದ್ಧರಾಗಿದ್ದ ಬಸವಪ್ಪ ಶಾಸ್ತ್ರಿಗಳನ್ನು ಸದಾ ಸಂಸ್ಮರಿಸಿಕೊಳ್ಳಲು ಹಿಂದೆ ಒಂದು ಸ್ಮಾರಕ ನಿರ್ಮಾಣ ಮಾಡಲಾಯಿತು. ಆದರೆ ಕಾಲಕ್ಕೆ ಎಲ್ಲವನ್ನೂ ಮಂಕುಗೊಳಿಸುವ ಚಾಳಿ.

ಮೈಸೂರನ್ನು ನಾವಿಂದು ಸಾಂಸ್ಕೃತಿಕ ನಗರಿ ಎಂದು ಕರೆದುಕೊಳ್ಳುತ್ತೇವೆ. ವಿದ್ವತ್ತಿಗೆ ಹೆಸರಾದದ್ದು ಎಂದು ತಿಳಿದೇ ಇದೆ. ಇಷ್ಟಿದ್ದೂ ಬಸವಪ್ಪ ಶಾಸ್ತ್ರಿಗಳ ಸ್ಮಾರಕದ ಕಡೆಗೆ ಅಸಡ್ಡೆ ಯಾಕೆ ಮತ್ತು ಹೇಗೆ ಬೆಳೆಯಿತೋ ಗೊತ್ತಿಲ್ಲ. ಮೈಸೂರಿನಲ್ಲಿರುವ ಎಲ್.ಐ.ಸಿ ಬಿಲ್ಡಿಂಗ್ ಬಳಿ ರಸ್ತೆ ಪಕ್ಕದಲ್ಲಿ ಬಸವಪ್ಪ ಶಾಸ್ತ್ರಿಗಳ ಸ್ಮಾರಕ. ಅದರ ಬಣ್ಣ ಮಾಸಿ, ಗೋಡೆಗಳ ಮೇಲೆಲ್ಲ ಬಳ್ಳಿ ಹಬ್ಬಿಕೊಳ್ಳುವಷ್ಟು ನಿರ್ಲಕ್ಷ್ಯ ತೋರಿದ್ದರು.

ವೃತ್ತಿ ಬೇರೆ ಆಗಿದ್ದರೂ ಇತಿಹಾಸದ ಬಗ್ಗೆ ಅದಮ್ಯ ಉತ್ಸಾಹ ತಳೆದಿರುವ ಧರ್ಮೇಂದ್ರ ಸರ್ ಅವರ ದೃಷ್ಟಿಗೆ ಬಸವಪ್ಪ ಶಾಸ್ತ್ರಿಗಳ ಸ್ಮಾರಕದ ದುಃಸ್ಥಿತಿ ಕಂಡಿದೆ. ಅವರು ತಮ್ಮ ಯೂಟೂಬ್ ಸರಣಿಯಲ್ಲಿ ಈ ಬಗ್ಗೆ ಬೆಳಕು ಚೆಲ್ಲಿದರು. ಪ್ರತಿವರ್ಷ ದಸರೆಗೆ ಕೋಟ್ಯಂತರ ವ್ಯಯಿಸಲಾಗುತ್ತದೆ. ದಸರೆಯ ಸಮಯದಲ್ಲಿ ಇಡೀ ಮೈಸೂರನ್ನ ದೀಪಗಳ ಝಗಮಗಿಸುವ ಬೆಳಕಿನಲ್ಲಿ ಬೆಳಗಿಸಲಾಗುತ್ತದೆ. ಆದರೆ ಬಸವಪ್ಪ ಶಾಸ್ತ್ರಿಗಳ ಸ್ಮಾರಕ ಮಾತ್ರ ಯಾಕೆ ಕತ್ತಲೆಯಲ್ಲಿ ಕಳೆದುಕೊಳ್ಳುವ ಸ್ಥಿತಿ ತಲುಪುತ್ತಿದೆ? ಸರ್ಕಾರಿ ಅಧಿಕಾರಿಗಳನ್ನ ಕೇಳಿದರೆ ಟೆಂಡರು, ಅದರ ಪ್ರಾಸಸ್, ಅದರ ನಿಧಾನಗತಿ ಬಗ್ಗೆ ಹೇಳಿದ್ದು ವರದಿಯಾಗಿತ್ತು. ಈ ಕುಂಟು ನೆಪಗಳಿಗೆ ಏನನ್ನಬೇಕು? ನಿಜಕ್ಕೂ ಬಸವಪ್ಪ ಶಾಸ್ತ್ರಿಗಳ ಬಗೆಗೆ, ಅವರ ವಿದ್ವತ್ತು ಮತ್ತು ಕೊಡುಗೆ ಬಗೆಗೆ ತಿಳಿದಿದ್ದರೆ ಯಾರೂ ಇಂಥ ಕಾರಣ ಕೊಡಲಾರರು.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೆ ಎಂದು ಕೇಳಿಕೊಳ್ಳುವ ಹೊತ್ತಿಗೆ ಯುವಬಿಗ್ರೇಡಿನವರು ಬಸವಪ್ಪಶಾಸ್ತ್ರಿಗಳವರ ಸ್ಮಾರಕ ಮತ್ತು ಅದರ ಜಾಗವನ್ನು ಸ್ವಚ್ಛಗೊಳಿಸುವ ಕಾಯಕ ಶುರುಮಾಡಿಕೊಂಡು ಹೊಸ ಕಳೆ ತಂದಿದ್ದಾರೆ ಎಂದು ಕೇಳಿದ ನೆನಪು…

ಚಿತ್ರ 3

ಇದು ನಮ್ಮೂರಿನ ಕಥೆ. ನನ್ನ ಬಾಲ್ಯಕಾಲದ ಭಾಗಶಃ ನೆನಪುಗಳನ್ನು ತುಂಬ ಸುಂದರಗೊಳಿಸಿದ ಊರು. ಹಳೆಯ ಕಾಲದ ಮಣ್ಣಿನ ಮನೆ. ಅಜ್ಜಿ ಹಾಗೂ ತಾತ ಇದ್ದ ಮನೆ. ರಜೆ ಬಂತೆಂದರೆ ಊರಿನ ಕಡೆ ಪಯಣ. ಹಳ್ಳಿಯ ಬದುಕಿನ ಅನಾವರಣ ಮಾಡಿಸಿದ ಊರು. ತಾತ ಪೋಸ್ಟ್ ಮಾಸ್ಟರ್ ಆಗಿದ್ದವರು. ಜೊತೆಗೆ ಹಾರ್ಮೋನಿಯಂ ಮಾಸ್ಟರ್ ಕೂಡ. ಹಳ್ಳಿಯಲ್ಲಿ ನಾಟಕ ಕಲಿಸುತ್ತಿದ್ದವರು.

ಕಾಲಕಾಲಕ್ಕೆ ಮಳೆಯಾಗಿ ನೆಲದಿಂದ ಮಣ್ಣಿನ ವಾಸನೆ ಹೊಮ್ಮುತ್ತ ಹಳ್ಳಿಯನ್ನು ಹಸಿರಿನಿಂದ ತುಂಬಿಸಿ ತಣ್ಣಗಿರಿಸಿದ್ದ ಕಾಲ ಅದು. ಸುಮಾರು ಮೂವತ್ತು ವರ್ಷಗಳ ಹಿಂದೆ ಹಳ್ಳಿಯಲ್ಲಿ ನಡೆಯುತ್ತಿದ್ದ ಮದುವೆಗಳ ಸ್ವರೂಪ, ಹೆಣ್ಣುಗಂಡಿನ ಮೆರವಣಿಗೆ ಸಂಭ್ರಮ, ರಾತ್ರಿವೇಳೆ ದೊಂದಿ ಬೆಳಕಲ್ಲಿ ನಡೆಯುತ್ತಿದ್ದ ದೇವರ ಮೆರವಣಿಗೆಗಳು, ಊಟ, ಊರಹಬ್ಬ, ಕೆರೆ ಕೋಡಿ ಬೀಳುವುದು ಎಲ್ಲ ಎಲ್ಲ ನೆನಪುಗಳೊಂದಿಗೆ ನನ್ನಲ್ಲಿ ಸದಾ ಕದಲುವ ನೆನಪೆಂದರೆ ನನ್ನ ತಾತನ ನಿರಾಳ ಬದುಕು ಮತ್ತು ನಾಟಕದ ಬಗೆಗೆ ಅವರಿಗಿದ್ದ ಒಲವು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಬಗೆಗೆ ಅಜ್ಜಿ ಕಾಣಿಸುತ್ತಿದ್ದ ಪ್ರೀತಿ.

ಈ ಅಜ್ಜ ಮತ್ತು ಅಜ್ಜಿ ನನ್ನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ರೀತಿ ಅನನ್ಯ. ಏನೇ ಸಂಘರ್ಷ ಮತ್ತು ಒತ್ತಡಗಳಿದ್ದರೂ ಆ ಊರು ಅವರಿಬ್ಬರನ್ನು ತುಂಬ ತಣ್ಣಗೆ ಮತ್ತು ಪ್ರಶಾಂತವಾಗಿ ಇಟ್ಟಿದ್ದಂತೆ ನನಗೆ ಅನಿಸುತ್ತಿತ್ತು. ಊರಿನ ತಿಮ್ಮರಾಯಸ್ವಾಮಿ ಗುಡಿಯಲ್ಲಿ ಸಂಜೆ ನಾಟಕದ ಪ್ರಾಕ್ಟೀಸ್ ಶುರುವಾಗುತ್ತಿತ್ತು. ತಾತ ಹಾರ್ಮೊನಿಯಂ ನುಡಿಸುತ್ತ ಕಂದಗಳನ್ನ ಹೇಳಿಕೊಡುವಾಗ ನಾನು ಅವರ ಪಕ್ಕದಲ್ಲೇ ನಿಂತಿರುತ್ತಿದ್ದೆ. ತಿಮ್ಮರಾಯ ಸ್ವಾಮಿಯ ಗುಡಿಯ ಮುಂದೆ ಕೊಂಚ ದೂರದಲ್ಲೇ ನಾಟಕದ ಸ್ಟೇಜ್ ಹಾಕಿಕೊಳ್ಳಲಿಕ್ಕೆ ಜಾಗ ಮೀಸಲಿರಿಸಿದ್ದರು.

ನಾಟಕದ ದಿನದ ಸಂಭ್ರಮವೇ ಬೇರೆ. ಲಾರಿಯಲ್ಲಿ ಸೆಟ್ಸ್ ಬರುವುದು, ಮೈಕ್ ಧ್ವನಿ ಮೊಳಗುವುದು, ರಾತ್ರಿ ಹೊತ್ತಿಗೆ ನಟಿಯರು ಬಂದು ತಾತನ ಮನೆಯ ಒಂದು ಕೋಣೆಯಲ್ಲಿ ಬುಡ್ಡಿ ದೀಪದ ಬೆಳಕಲ್ಲಿ ಬಣ್ಣ ಹಚ್ಚಲು ಕೂರುತ್ತಿದ್ದದ್ದು, ಸ್ಟೇಜ್ ಮುಂದೆ ಗುಂಡಿ ತೆಗೆದು ಲೆಗ್ ಹಾರ್ಮೋನಿಯಂ ಇಳಿಸಿ ತಾತನಿಗೆ ಅನುವು ಮಾಡಿಕೊಡುವುದು, ನಾಟಕ ಆರಂಭವಾಗಿ ನಡುನಡುವೆ ಕೆಲವು ಹಿರಿಯರು ಬಂದು ಹಾಡು ಹಾಡುವುದು, ವಾದ್ಯಗಾರರ ಸಂಭ್ರಮ, ಊರವರು ಚಾಪೆಗಳನ್ನ ತಂದು ಹಾಸಿ ಮಲಗಿ ತಮ್ಮ ಮನೆಯವರು ನಾಟಕದಲ್ಲಿ ಕಾಣಿಸಿಕೊಳ್ಳುವ ಹೊತ್ತಿಗೆ ಎದ್ದು ನಾಟಕ ನೋಡುತ್ತಿದ್ದ ಬಗೆ… ಅಜ್ಜಿ ಕೂಡ ಚಾಪೆಯನ್ನು ಮೊದಲೇ ಒಬ್ಬರ ಬಳಿ ಕಳುಹಿಸಿ ಆಲದ ಮರದ ಕೆಳಗಿನ ಜಾಗ ರಿಸರ್ವ್ ಮಾಡಿಸಿ ಕೆಲಸ ಎಲ್ಲ ಮುಗಿಸಿದ ನಂತರ ಬಂದು ಕೂತು ಅಡಕೆ ಎಲೆ ಹಾಕಿಕೊಳ್ಳುತ್ತ, ನನಗೂ ಚೂರು ಕೊಟ್ಟು ತಮ್ಮ ತೊಡೆಯ ಮೇಲೆ ನಾನು ತಲೆ ಇಟ್ಟು ಮಲಗಲು ಅನುವು ಮಾಡಿಕೊಡುತ್ತ, ರಾವಣನ ಸೀನ್ ಬಂದಾಗ ‘ ರಾವಣನ ಸೀನ್ ಬಂತು ಏಳಪ್ಪ…’ ಎಂದು ನನ್ನನ್ನು ತಟ್ಟಿ ಎಬ್ಬಿಸುತ್ತಿದ್ದದ್ದು, ನಾನು ನಿದ್ದೆಗಣ್ಣಿನಲ್ಲಿ ಎದ್ದು ರಾವಣನ ಸೀನ್, ಹಾಡು ಮತ್ತು ಮಾತು ಕೇಳಿ ಮತ್ತೆ ಮಲಗಿಬಿಟ್ಟಾಗ ಅಜ್ಜಿ ಹೊದಿಕೆ ಹೊದಿಸುತ್ತಿದ್ದದ್ದು…ಒಂದೊಂದೂ ಚೆಂದದ ನೆನಪೇ.

‘ಬಹಳ ಕಾಲದವರೆಗೂ ನಮ್ಮೂರಿನ ನಾಟಕದ ಆ ಸ್ಟೇಜ್ ನನ್ನ ಕಣ್ಣಲ್ಲಿ ಹಾಗೇ ಚಿತ್ರವಾಗಿ ಉಳಿದುಬಿಟ್ಟಿತ್ತು. ಆದರೆ ಇಲ್ಲಿ ಯಾವುದು ಸ್ಥಿರ? ನಾನು ಬೆಳೆಬೆಳೆದಂತೆ ಆಧುನಿಕತೆ ಮತ್ತು ಅದರ ಮನಸ್ಥಿತಿ ಒಳಹೊಕ್ಕು ಊರಿನ ಸ್ವರೂಪ ಮತ್ತು ಗತ್ತು ಬದಲಾದವು. ಮಳೆ ಮುನಿಸಿಕೊಂಡಿತು. ಕೆರೆ ಬತ್ತಿಹೋಯಿತು. ಗದ್ದೆಗಳಲ್ಲಿ ರಾಗಿ ಚೆಲ್ಲಲು ಶುರುಮಾಡಿದರು. ತಾತ ಮತ್ತು ಅಜ್ಜಿ ತಮ್ಮ ಗಟ್ಟಿತನ ಕಳೆದುಕೊಂಡು ಮೆತ್ತಗಾಗಿ ಬೆಂಗಳೂರಿಗೆ ಬಂದರು. ಮಣ್ಣಿನ ಮನೆ ಬಿದ್ದುಹೋಯಿತು. ಒಂದು ಪ್ರಶಾಂತ ಪರಿಸರಕ್ಕೆ ಒಗ್ಗಿ ಬದುಕಿದ್ದ ನನ್ನ ತಾತ ಮತ್ತು ಅಜ್ಜಿ ಬೆಂಗಳೂರಿನ ಬದುಕು ಕಂಡು ಆರಂಭದಲ್ಲಿ ಅಸಹಾಯಕತೆ ಅನುಭವಿಸಿದರು. ಆದರೆ ನಾನು ನಾಟಕ ಬರೆಯುತ್ತೇನೆ ಮತ್ತು ನನ್ನ ನಾಟಕಗಳು ರಂಗದ ಮೇಲೆ ಬರುತ್ತಿವೆ ಅಂತ ಗೊತ್ತಾದಾಗ ಅಜ್ಜಿ ತುಂಬ ಖುಷಿಪಟ್ಟಿದ್ದರು. ನಾಟಕ ಅಂದರೆ ಅವರಿಗೆ ಪೌರಾಣಿಕ ಅಷ್ಟೇ ಎನ್ನುವ ನಂಬಿಕೆ. ನಾನು ಕಂದಗಳಿಲ್ಲದ, ಝಗಮಗಿಸುವ ಉಡುಪುಗಳಿಲ್ಲದ ಆಧುನಿಕ ಸಂವೇದನೆಯ ನಾಟಕ ಬರೆದಾಗ ಅಜ್ಜಿಗೆ ಈ ಬಗ್ಗೆ ಅಂದಾಜು ಇದ್ದಂತೆ ಇರಲಿಲ್ಲ. ಒಮ್ಮೆ ಶೋಗೆ ಬಂದು ನೋಡಿ ನಿರಾಶರಾಗಿದ್ದರು. ಅವರಿಗೆ ಜುಬ್ಬ, ಪೈಜಾಮ, ಕಚ್ಚೆ ಪಂಚೆ ಶರ್ಟು ತೊಟ್ಟು ಮಾಡುವುದೆಲ್ಲ ನಾಟಕ ಅಲ್ಲ. ರಾವಣ ಅಂದರ ಹೇಗೆ ಗತ್ತಿನಲ್ಲಿ ಹಾಡುತ್ತಾನೆ ಎನ್ನುವುದಷ್ಟೇ ಮುಖ್ಯವೇ ಹೊರತು ರಾವಣ ಇಂದು ಬೇರೆಬೇರೆ ಬಗೆಗಳಲ್ಲಿ ಇದ್ದಾನೆ ಅಂದರೆ ಅವರಿಗೆ ಅರ್ಥವಾಗುತ್ತಿರಲಿಲ್ಲ.

ಅಂಥ ಅಜ್ಜಿ ತಾವು ಹಳ್ಳಿಯಲ್ಲಿ ತಾತ ಕಲಿಸುತ್ತಿದ್ದ ಪೌರಾಣಿಕ ನಾಟಕವನ್ನು ನಿಜವೆಂದು ಭಾವಿಸುತ್ತ, ನಗರದ ನಮ್ಮ ಬದುಕಿನ ಕ್ರಮವನ್ನು ನಾಟಕವೆಂದು ಅನುಮಾನಿಸುತ್ತ ಕಡೆಗೊಮ್ಮೆ ಮರೆಯಾದರು. ತಾತನದು ಮುಂದಿನ ಸರದಿ. ಬಿಕೊ ಅನಿಸುವ ಊರು; ಬಿದ್ದೋದ ಮಣ್ಣಿನ ಮನೆ. ಸ್ಟೇಜು ತನ್ನ ಪಾತ್ರ ಮುಗೀತು ಎಂದು ಖಾಲಿ ಜಾಗ ಉಳಿಸಿ ಮರೆಯಾದ ಹಾಗೆ ಅನಿಸುವ ಚಿತ್ರ ನನ್ನ ಕಣ್ಮುಂದೆ ಸುಳಿಯುತ್ತಿದೆ. ಆದರೂ ಊರು ಇಂದಿಗೂ ಒಂದು ನೆನಪು ಅಷ್ಟೇ. ಅಲ್ಲಿ ನಾಟಕ ನಡೆಯುತ್ತಿತ್ತು ಅಂತ ಊಹಿಸಲಿಕ್ಕೂ ಸಾಧ್ಯವಾಗದ ಸ್ಥಿತಿಗೆ ಇಂದು ತಲುಪಿದೆ. ಆದರೂ ಆಗೊಮ್ಮೆ ಈಗೊಮ್ಮೆ ಆ ಕಡೆಗೆ ನೆನಪುಗಳು ಹಾಯುತ್ತವೆ…

ನನ್ನ ಮನಸ್ಸಿನಲ್ಲಿದ್ದ ಈ ಮೂರು ಚಿತ್ರಗಳನ್ನು ಆ ಹಿರಿಯರಿಗೆ ವಿವರಿಸುತ್ತ – ‘ಕೊಂಚ ಯೋಚಿಸಿ. ನೃತ್ಯ ಹಾಗು ನಾಟಕದ ಶಾಲೆ ತೆರೆದು ಗುರುವಾಗಿ ಕಲಿಸಬೇಕು ಅನ್ನುವುದು ಅಪೂರ್ವಳ ಆಸೆ. ಒಂದು ಪುಟ್ಟ ರಂಗಮಂದಿರ ಕಟ್ಟಿಕೊಳ್ಳಬೇಕೆನ್ನುವುದು ಆಕೆಯ ಇಚ್ಛೆ. ಅಂದರೆ ಹೊಸತೊಂದರ ನಿರ್ಮಾಣದ ಬಗ್ಗೆ ಆಕೆಯ ಮನಸ್ಸಿನಲ್ಲಿ ಕನಸು ಇರುವುದರಿಂದ ಅದು ಸೃಷ್ಟಿ ಕಾರ್ಯದ ಸಂಕೇತ. ಅದೇ ನನಗೆ ಬ್ರಹ್ಮ ಸ್ವರೂಪ.

ನಂತರ ಬಸವಪ್ಪ ಶಾಸ್ತ್ರಿಗಳ ಸ್ಮಾರಕದ ಸರಿಯಾದ ಪಾಲನೆ ಆಗಬೇಕಾಗಿತ್ತು. ಆದರೆ ಆಗುತ್ತಿರಲಿಲ್ಲ. ಏನೇನೊ ಕಾರಣಗಳು, ಸಬೂಬು. ಜೊತೆಗೆ ಅಸಡ್ಡೆ. ವಿಷ್ಣುವಿನ ಪಾಲನೆ ಕುಂಠಿತ ಅಂತಾಯ್ತು. ಆದರೆ ಯುವಬ್ರಿಗೇಡ್ ನವರು ಆಸ್ಥೆವಹಿಸಿ ಮತ್ತೆ ಸ್ಮಾರಕಕ್ಕೆ ಹೊಸ ಕಳೆ ತಂದಿದ್ದಾರೆ ಅನ್ನುವ ಸುದ್ದಿ ಇದೆ. ಆದರೆ ಖುದ್ದು ನೋಡಿಲ್ಲ. ಒಟ್ಟಿನಲ್ಲಿ ಕಡೆಗೂ ಪಾಲನೆ ಆಗಿದೆ ಅಂತಾಯ್ತು. ಇದು ನನಗೆ ನಾರಾಯಣ ಸ್ವರೂಪ..

ಕಡೆಯದು ನಮ್ಮೂರಿನ ಚಿತ್ರ. ಒಂದು ಕಾಲದಲ್ಲಿ ಸೆಟ್ಸ್, ಬೆಳಕುಗಳಿಂದ ಕಂಗೊಳಿಸಿದ ಸ್ಟೇಜ್ ಇಂದು ಮಾಯವಾಗಿದೆ. ಕಾಲರುದ್ರ ಕಬಳಿಸಿದ್ದಾನೆ. ಮತ್ತು ಹಾಗೆ ಮಾಡುವ ಮೂಲಕ ಹೊಸ ಸೃಷ್ಟಿಗೆ ಅನುವು ಮಾಡಿಕೊಡುವ ಕೆಲಸ ಆತನದು. ಅಪೂರ್ವ, ಬಸವಪ್ಪ ಶಾಸ್ತ್ರಿಗಳು, ನಮ್ಮೂರು ಎಲ್ಲವೂ ಸೃಷ್ಟಿ ಸ್ಥಿತಿ ಲಯಗಳಿಗೆ ಸಂಕೇತ. ಇಲ್ಲಿ ಸೃಷ್ಟಿ, ಗತಿ ಮತ್ತು ಸ್ಥಗಿತತೆ ಇದೆ. ಇದೇ ಬದುಕು. ತ್ರಿಮೂರ್ತಿ ಸ್ವರೂಪ ಅಂದರೆ ಇದು. ಅಥವಾ ನನಗೆ ಈ ರೀತಿ ಕಂಡುಕೊಳ್ಳಲು ಇಷ್ಟ. ನಮ್ಮ ಬದುಕಿನ ಗತಿಯ ಒಳಗೇ ದೇವರನ್ನು ಕಾಣಲು ಶುರುಮಾಡಬೇಕು. ಆಗ ಅದರಲ್ಲೊಂದು ಸೌಂದರ್ಯವಿರುತ್ತದೆ. ಹೊಸ ಸೃಷ್ಟಿಯ ಬಗೆಗೆ ಭರವಸೆ, ಹುಟ್ಟಿಕೊಂಡದ್ದನ್ನು ಬೆಳೆಸಿ ಮುನ್ನಡೆಸಬೇಕಾದ ಜವಾಬ್ದಾರಿ ಮತ್ತು ಒಂದು ಹಂತದವರೆಗೆ ಸಾಗಿ ಬಂದದ್ದು ಕೊನೆಗೊಳ್ಳಬೇಕಾದ ಅನಿವಾರ್ಯ ಘಟ್ಟಗಳು ಅರ್ಥಕ್ಕೆ ನಿಲುಕುತ್ತವೆ. ಇವುಗಳನ್ನು ಕಾಣುತ್ತ ತಿಳಿಯುತ್ತಾ ಹೋದಂತೆ ನಮಗೆ ನಮ್ಮ ಬದುಕಿನ ಗತಿ ಅರ್ಥವಾಗುತ್ತದೆ. ಹುಟ್ಟಿದ್ದು ಬೆಳೆಯುತ್ತ ಕೊನೆಗೊಳ್ಳುವವರೆಗಿನ ಸ್ಥಿತಿಗಳಲ್ಲಿ ತ್ರಿಮೂರ್ತಿಗಳ ಶಕ್ತಿ ಸ್ವರೂಪದ ದರ್ಶನವಾಗುತ್ತದೆ. ನಿಮಗೆ ದತ್ತಭಾಗವತದಲ್ಲಿನ ಕಥಾನಕಗಳಷ್ಟೇ ಸತ್ಯ ಅನಿಸಿದರೆ ನನಗೆ ನನ್ನ ಕಾಲಮಾನದ ಬದುಕಿನಲ್ಲಿ ತ್ರಿಮೂರ್ತಿಗಳಿದ್ದಾರೆ ಅನಿಸುತ್ತದೆ. ನೀವು ರೆಲೆವೆಂಟಾ ಅಥವಾ ನಾನಾ ಹೇಳಿ ನೋಡುವ… ಎಂದು ಕೇಳಿದೆ. ಹಿರಿಯರು ಫೋನಿಟ್ಟರು. ಕಿಡಿ ಹಾರುವ ಬದಲು ನಂದಿತು. ನಾನು ನಗುತ್ತ ಅಜ್ಜಿಯ ನೆನಪುಗಳ ಜೊತೆ ಪ್ರಯಾಣ ಆರಂಭಿಸಿದೆ.