ತಾತ ಎಂದೆ, ಭಂಗವಾದಂತೆ ಎದ್ದುನಿಂತ. ಅವನ ಪರಮಾಪ್ತ ಪ್ರಿಯ ತಿನಿಸು ಎಂದರೆ ಎಲೆ ಅಡಿಕೆ ಹೊಗೆಸೊಪ್ಪು. ಊರವರು ತಾವಾಗಿಯೆ ಅವನಿಗೆ ನೀಡುತ್ತಿದ್ದರು. ಯಾರನ್ನೂ ಕೇಳುತ್ತಿರಲಿಲ್ಲ. ಹಾಗೆ ಕೊಡುವುದು ಗೌರವ ಸೂಚಕವಾಗಿತ್ತು. ಅವನ ಬಳಿ ಬಿಡಿಗಾಸು ಕೂಡ ಇರಲಿಲ್ಲ. ಬರಿಗಾಲ ನಡಿಗೆಯವನು ಅವನು. ಒಮ್ಮೆಯೂ ವಾಹನ ಏರಿ ಕೂತಿದ್ದವನಲ್ಲ. ಹಣದ ಬಗ್ಗೆ ಅಸಹ್ಯ. ಅದನ್ನು ಮುಟ್ಟುತ್ತಿರಲಿಲ್ಲ. ದೊಡ್ಡ ತಾತ ದುಡ್ಡು ಕೊಡಲು ಮುಂದಾದಾಗಲೆಲ್ಲ ವಿಷಾದ ಪಡುತ್ತಿದ್ದ. ಅಂತಹ ಕೆಟ್ಟದ್ದನ್ನ ಅಣ್ಣಾ ನೀನು ನನಗೆ ಕೊಡುವೆಯಾ ಎಂದು ನಿರಾಕರಿಸಿದ್ದ.
‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಬರಹ.
ಗುಸು ಗುಸು ಅಜ್ಜಿ ಅವರಿವರ ಗುಟ್ಟಿನ ವಿಷಯಗಳ ಕಜ್ಜಿಕೆರೆದುಕೊಳ್ಳುವಂತೆ ಮೈ ಪರಚಿಕೊಳ್ಳದಿದ್ದರೆ ಅವಳಿಗೆ ನಿದ್ದೆಯೇ ಬರುತ್ತಿರಲಿಲ್ಲ. ಅವಳ ಸಹವಾಸ ಮಾಡಿದರೆ ನಮಗೂ ಕಜ್ಜಿ ಅಂಟಿಕೊಳ್ಳುತ್ತದೆ ಎಂದು ಕೇರಿಯವರು ಹೇಗಿರಬೇಕೊ ಹಾಗಿದ್ದು ಬಿಡುತ್ತಿದ್ದರು. ಆದರೂ ಜನಕ್ಕೆ ಗುಸು ಗುಸು ಮಾತು ಕೆಲವೊಮ್ಮೆ ಸತ್ಯಕ್ಕಿಂತಲೂ ಹಿತವಾಗಿತ್ತು. ಕೆಲವರು ಅಜ್ಜಿಯ ಮೇಲೆ ಜಗಳಕ್ಕೆ ಬೀಳುತ್ತಿದ್ದರು. ಅಪ್ಪನ ಕುರುಡು ಬೆಂಬಲ ಯಾವತ್ತೂ ಅವಳ ಪರವಿತ್ತು.
‘ನನ್ನ ಕೆಣಕ ಬ್ಯಾಡೀ; ನಾನು ಬಾಯ್ಬಿಟ್ಟು ಬೀದಿಲಿ ನಿತ್ಕಂಡು ಮೂರು ಸಲ ಯೋಳಿದ್ನೋ… ಅದು ಸತ್ಯ ಆಗಿ ಬಲಿ ತಕತದೆ’ ಎಂದು ಎಚ್ಚರಿಸಿದ ಕೂಡಲೆ ಅದೆಷ್ಟೇ ದೊಡ್ಡ ಗಂಟಲ ಜಗಳವೇ ಆದರೂ ಎಲ್ಲರ ಬಾಯಿಗೂ ಬೀಗ ಬೀಳುತಿತ್ತು. ಅಷ್ಟೊಂದು ಭಯ ಅಜ್ಜಿಯ ಶಾಪಗಳಿಗೆ. ಆ ಎಲ್ಲಾ ಅವಳ ಶಾಪಗಳೂ ಆರೋಪಗಳೂ ಎಲ್ಲವೂ ಸುಳ್ಳು ಎಂದು ಕೆಕ್ಕರಿಸಿಕೊಂಡು, ಛೀ ಎನ್ನುತ್ತಿದ್ದವನು ವೀರಭದ್ರ ಮಾತ್ರ. ಬಲಾಡ್ಯ ಮನುಷ್ಯ ನಿಯತ್ತಿನಲ್ಲಿ. ಆರು ಅಡಿ ಮೇಲಿದ್ದ. ದೈತ್ಯ ದೇಹ ನೋಡಲು ಆ ಕಾಲದ ನಿಯಾಂಡರ್ಥಲ್ ಮಾನವನ ರೂಪಕ್ಕೆ ಹತ್ತಿರವಿದ್ದ. ಉದ್ದಕೂದಲು ಬಿಟ್ಟಿದ್ದ. ಗಡ್ಡ ಮೀಸೆ ಬೋಳಿಸಿದ್ದನ್ನೇ ಕಂಡಿರಲಿಲ್ಲ. ಆತ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ. ಏನನ್ನೂ ಕೇಳುತ್ತಿರಲಿಲ್ಲ. ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಅವನು ಜೀವನದಲ್ಲಿ ಯಾರೊಬ್ಬರನ್ನೂ ಆರೋಪಿಸಿದ್ದವನಲ್ಲ. ಆಸೆಯೂ ಇಲ್ಲ ನಿರಾಶೆಯೂ ಇಲ್ಲಾ; ಸುಖವೂ ದುಃಖವೂ ಇಲ್ಲಾ. ಮೌನ ಮುನಿ ಎಂದರೆ ಒಪ್ಪುತ್ತದೆ.
ಇವನು ನನ್ನ ತಾತನ ಮೂರನೆ ತಮ್ಮ. ಅವನ ಕೈಯಲ್ಲಿ ಉದ್ದನೆಯ ಬೆತ್ತದ ಕೋಲು ಇತ್ತು. ಅವನೇ ಅಲಂಕಾರಿಕವಾಗಿ ಮಾಡಿಕೊಂಡಿದ್ದ ಬೆತ್ತದ ಮೇಲೆ ಏನೇನೊ ಸೂಕ್ಷ್ಮ ಚಿತ್ರಗಳ ಕೊರೆದಿದ್ದ. ಬಂಡೆಗಲ್ಲುಗಳ ಮೇಲೆ ವಿಚಿತ್ರಗಳ ಕೆತ್ತುತಿದ್ದ. ಮನುಷ್ಯರ ಮುಖವನ್ನೇ ನೋಡುತ್ತಿರಲಿಲ್ಲ. ಏನೋ ತಪ್ಪೆಸಗಿ ತಲೆ ತಗ್ಗಿಸಿದಂತೆ ಇರುತ್ತಿದ್ದ; ಇಲ್ಲವೇ ಆಕಾಶಕ್ಕೆ ಒಪ್ಪಿಸುವಂತೆ ಅನಂತ ದಿಗಂತಗಳಿಗೆ ಕಣ್ಣು ನೆಟ್ಟು ಗಂಟೆಗಟ್ಟಲೆ ಕೂತು ಬಿಡುತ್ತಿದ್ದ. ಅರೆ ಹುಚ್ಚ ಎನ್ನುತ್ತಿದ್ದರು ಅವನನ್ನು. ಮನೆಯ ಯಾರೂ ಅವನ ಜೊತೆ ಮಾತನಾಡುತ್ತಿರಲಿಲ್ಲ. ಹುಚ್ಚನ ಜೊತೆ ಏನು ವ್ಯವಹಾರ ಎಂದು ನಿರ್ಲಕ್ಷಿಸುತ್ತಿದ್ದರು. ತಾತ ಮಾತ್ರ ಆಗೀಗ ವಿಚಾರಿಸುತ್ತಿದ್ದ. ಅವನದೆಲ್ಲ ಆಂಗಿಕವಾದ ಭಾಷೆ. ನನ್ನ ಅಪ್ಪ ಈತ ಮನುಷ್ಯನೇ ಅಲ್ಲ ಎಂದು ಬಿಟ್ಟಿದ್ದ. ನಾನೂ ನನ್ನ ಅಮ್ಮನೂ ತಾತನ ಮೇಲೆ ಏನೊ ಪ್ರೀತಿ ಇಟ್ಟುಕೊಂಡಿದ್ದೆವು. ಅವನು ಆಗಾಗ ಕಿರುಗಣ್ಣಲ್ಲಿ ನನ್ನನ್ನು ಒಂದಿಷ್ಟು ಪರಿಗಣಿಸಿದ್ದ. ನನ್ನ ತಮ್ಮ ತುಂಟ. ಅಜ್ಜಿ ವೀರಭದ್ರ ತಾತನ ಮೇಲೆ ಗೊಣಗುತ್ತಲೇ ಇದ್ದಳು. ಇವನು ಯಾಕೆ ಇಲ್ಲಿಗೆ ಬರಬೇಕೊ… ಹೆಂಡ್ರಿಲ್ಲಾ ಮಕ್ಕಳಿಲ್ಲಾ. ಗುಂಡ್ರುಗೋವಿ ತರ ಅವನೇ; ಇಲ್ಲಿ ಇವನಿಗೆ ಯಾವುದೇ ಪಾಲು ಇಲ್ಲಾ. ಊರೂರು ಅಲ್ಕಂಡಿರೋನ್ಗೆ ನಾವ್ಯಾಕೆ ಬಾರಪ್ಪಾ ಅನ್ನಬೇಕೂ ಎಂದು ಜನರ ಮುಂದೆ ಹಂಗಿಸುತ್ತಿದ್ದಳು. ತಾತನಿಗೆ ಅದು ಗೊತ್ತೇ ಆಗುತ್ತಿರಲಿಲ್ಲ. ನಿನ್ನ ಬಗ್ಗೆ ಹೀಗೆ ಅಂದರು ಎಂದು ಹೇಳಿದರೂ ಅವನ ಮುಖದಲ್ಲಿ ಯಾವ ಭಾವವೂ ಮೂಡುತ್ತಿರಲಿಲ್ಲ.
ಚಿಕ್ಕ ತಾತನಿಗೆ ಹೆಂಡತಿ ಮಕ್ಕಳು ಇದ್ದಾರೆಂದು ಜನ ಅನುಮಾನದಲ್ಲಿ ಮಾತಾಡುತ್ತಿದ್ದರು. ನಾವು ನಂಬಿರಲಿಲ್ಲ. ಒಮ್ಮೊಮ್ಮೆ ಅಪ್ಪ ತಾತನ ಮೇಲೆ ರೇಗಾಡಿ ತೊಲಗು ಎನ್ನುತ್ತಿದ್ದ. ಹೊರಟು ಹೋಗುತ್ತಿದ್ದ. ಮತ್ತೆ ಆರು ತಿಂಗಳ ನಂತರ ಪ್ರತ್ಯಕ್ಷ ಆಗುತ್ತಿದ್ದ. ಅವನಲ್ಲಿ ಒಂದಿಷ್ಟೂ ಬದಲಾವಣೆ ಆಗುತ್ತಿರಲಿಲ್ಲ. ಅನಾದಿ ಕಾಲದಿಂದಲೂ ಭೂ ಖಂಡಗಳನ್ನೇ ಸುತ್ತಿ ಬಂದಂತೆ ಕಾಣುತ್ತಿದ್ದ. ನಮ್ಮ ಅಜ್ಜಿ ನೀನು ಮುಂದಿನ ಸಾರಿ ಜೀವಂತವಾಗಿ ಬದುಕಿ ಬರುವುದಿಲ್ಲ ಎಂದು ಶಾಪ ಹಾಕಿದ್ದಳು. ಅವಳ ಶಾಪ ಅವಳ ಬಳಿಯೇ ಸುತ್ತಾಡುತ್ತಿತ್ತು. ತಾತನಿಗೆ ಊಟ ಬಡಿಸಲು ಸಂಕಟ ಪಡುತ್ತಿದ್ದಳು. ‘ಹಂದಿ ತಿಂದಂಗೆ ತಿಂತನೆ’ ಎನ್ನುತ್ತಿದ್ದಳು. ತಾತ ಊಟಕ್ಕೆ ಕೂತ ಎಂದರೆ ಅದು ದೇವರು! ಹಸಿವಿಗಿಂತ ದೊಡ್ಡ ಭಕ್ತಿ ಯಾವುದು ಎಂಬಂತಿತ್ತು ತಾತನ ವರ್ತನೆ. ಒಂದೊಂದು ತುತ್ತನ್ನೂ ಪವಿತ್ರ ಪ್ರಸಾದ ಎಂಬಂತೆ ಮೆಲ್ಲಗೆ ನಿಧಾನಕ್ಕೆ ಬಾಯಿಗೆ ಹಾಕಿಕೊಳ್ಳುತಿದ್ದ.
ಅಯ್ಯೋ ಇವನ ಪಿಶಾಚಿ ಹೊಟ್ಟೆಯ ತುಂಬಿಸಲು ಯಾರಿಂದಲೂ ಸಾಧ್ಯವಿಲ್ಲಾ… ಎದ್ದು ಕೈ ತೊಳೆದುಕೊಳ್ಳಲು ಆ ಬಕಾಸುರನಿಗೆ ಹೇಳು ಎಂದು ಅಜ್ಜಿ ಸೊಸೆಯರಿಗೆ ಜೋರಾಗಿ ಹೇಳುತ್ತಿದ್ದಳು. ತಾತ ಕೈತೊಳೆದು ಪಡಸಾಲೆಯ ಕತ್ತಲ ಮೂಲೆಯಲ್ಲಿ ತೆಪ್ಪಗೆ ಕೂತು ಬಿಡುತ್ತಿದ್ದ. ಅವನು ಜೋರಾಗಿ ಯಾವತ್ತಾದರೂ ತೇಕಿದ್ದನ್ನೆ ನಾನು ಕಂಡಿರಲಿಲ್ಲ. ಯಾವತ್ತೂ ಮರೆಯಲ್ಲೇ ಇರುತ್ತಿದ್ದ. ಲೋಕಕ್ಕೆ ಕಾಣಿಸಿಕೊಳ್ಳುವುದು ಎಂದರೆ ಅವನಿಗೆ ಅಗುತ್ತಿರಲಿಲ್ಲ. ಅವನ ಪ್ರಪಂಚವೇ ಒಂದು ರೀತಿ. ಅವನದೇ ಮತ್ತೊಂದು ದಾರಿ ಹೊಂದಿಕೊಂಡಿದ್ದು ಹೇಗೊ ಏನೊ ಮಾಯ ಜಗತ್ತಿನ ಜೊತೆ ಮುನಿಸಿಕೊಂಡಂತಿದ್ದ. ಅವನನ್ನು ಸುಮ್ಮನೆ ಹಿಂಬಾಲಿಸಬೇಕು ಅಷ್ಟೆ. ಏನನ್ನೂ ಕೇಳಬಾರದು. ವಿವರಣೆಗಳೇ ಇಲ್ಲದ ಲೋಕ ಅವನದು. ಮನುಷ್ಯನ ವರ್ಣನೆಗಳೇ ಸುಳ್ಳಿರಬೇಕು. ತಾತನಿಗೆ ಭಾಷೆಯ ಅಗತ್ಯವೇ ಇರಲಿಲ್ಲ. ಅದವನ ಮಿತಿಯೊ ಶಕ್ತಿಯೊ ತಿಳಿಯುತ್ತಿರಲಿಲ್ಲ. ಅವನ ಹಿಂದೆ ಹೋಗಲು ಸದ್ದಡಗಿ ಕೂತಿದ್ದೆವು.
ಅವತ್ತದು ಬೇಸಿಗೆಯ ಒಂದು ದಿನ. ಕೂಲಿ ಕಂಬಳವಿಲ್ಲ. ಹೋಟೆಲು ಬಣಗುಟ್ಟುತ್ತಿತ್ತು. ಅಪ್ಪನಿಗೆ ಹೊಸಬಳು ಸಿಕ್ಕಿದ್ದಳು. ಈ ಗಂಡನ ಬಿಟ್ಟು ತಾಯಿ ಜೊತೆ ಇದ್ದು ಬಿಡುವ ಎಂದು ನನ್ನನ್ನು ತಾಯಿ ಹಲವು ಸಲ ಅಜ್ಜಿ ಮುಂದೆ ಒತ್ತಾಯಿಸಿದ್ದಳು. ‘ಆಗದಾಗದು; ಉಂಟೇ? ಗಂಡನ ಬಿಟ್ಟೋಳು ಅನಿಸ್ಕಂಡು ಬದುಕಬೇಕೇ? ಬ್ಯಾಡ ಬ್ಯಾಡ ಮಗಳೇ ನಿನ್ನ ದಮ್ಮಯ್ಯ’ ಎಂದು ತಡೆದಿದ್ದಳು. ಅಪ್ಪ ಅಷ್ಟು ಹೊಲಸಾಗಿದ್ದ. ನನಗೂ ತಾಯಿ ಹೇಳುವುದು ಸರಿ ಎನಿಸುತಿತ್ತು. ನನ್ನ ತಾಯಿಗೆ ನಾಲ್ಕು ಜನ ತಮ್ಮಂದಿರಿದ್ದರು. ಅವರಿಗಾರಿಗೂ ಆಗಿನ್ನೂ ಮದುವೆಯೆ ಆಗಿರಲಿಲ್ಲ. ನನ್ನ ತಾಯಿಯ ತಂದೆ ಚಿಂಪಾಂಜಿಯಂತಿದ್ದ. ಅಂತವನಿಗೆ ಇಂತಹ ಚಂದದ ಮಗಳು ಹೇಗೆ ಹುಟ್ಟಿದಳು ಎಂದು ಜನ ಕೇಳುತ್ತಿದ್ದರು. ಅದೆಲ್ಲ ಆ ಕಾಲದಲ್ಲಿ ಮಾಮೂಲು ಮಾತು. ನನ್ನ ತಾಯಿಯನ್ನು ಮಾತ್ರ ವೀರಭದ್ರ ತಾತ ಎಂದಾದರೊಮ್ಮೆ ಒಂದೆರಡು ನುಡಿಯಲ್ಲಿ ಮಾತಾಡಿಸಿ ಆಶೀರ್ವದಿಸುವಂತೆ ಕೈ ಸನ್ನೆ ಮಾಡುತಿದ್ದ. ಆ ನನ್ನ ಎರಡು ಮಕ್ಕಳಿಗೆ ಆಶೀರ್ವದಿಸು ಎಂದು ತಾಯಿ ಕೈ ಮುಗಿದು ಕೋರುತ್ತಿದ್ದಳು. ತಾತ ನನ್ನ ತಲೆ ಸವರಿದ್ದ.
ತಾತ ರುಮಾಲನ್ನು ಬಿಗಿಯಾಗಿ ಕಟ್ಟಿಕೊಂಡ ಅಂದರೆ; ಎಲ್ಲೊ ಹೊರಟ ಎಂದು ಅರ್ಥ. ನಾಯಿ ಮರಿಗಳಂತೆ ಹಿಂಬಾಲಿಸಿದೆವು. ಅವನ ಜೊತೆ ಅಲೆದಾಡುವುದು ದೊಡ್ಡ ಸುಖ. ನಮ್ಮ ಯಾವ ಚೇಷ್ಟೆಗೂ ರೇಗುತ್ತಿರಲಿಲ್ಲ. ಬುದ್ಧಿ ಹೇಳದೆ ವಿವೇಕ ಕಲಿಸುವ ಯಾವುದೊ ಅತೀಂದ್ರಿಯ ಶಕ್ತಿ ಅವನಿಗಿತ್ತು. ನನ್ನ ತಮ್ಮ ಒಂದು ಉದ್ದನೆ ಕೋಲು ಹಿಡಿದು ಅದನ್ನೆ ಬಸ್ಸು ಮಾಡಿಕೊಂಡು ಮುಂದೆ ಮುಂದೆ ಓಡುತ್ತಿದ್ದ. ತಾತನ ನೆರಳ ಮರೆಯಲ್ಲಿ ನಾನು ಹಿಂಬಾಲಿಸುತಿದ್ದೆ. ತೋಟ ತುಡಿಕೆಯ ದಾರಿ. ತಾತ ನಿಧಾನಿ. ಮೆಲ್ಲಗೆ ನಡೆಯುತ್ತಿದ್ದ. ಯಾವುದರಲ್ಲೂ ಆತುರವಿಲ್ಲ. ಕಸಿದುಕೊಳ್ಳಬೇಕೆಂಬ ದುರಾಸೆ ಇಲ್ಲ. ಅಲ್ಲೊಂದು ಮರದ ಕೆಳಗೆ ಕೂತೆವು. ತಾತನಿಗೆ ನಿರ್ದಿಷ್ಟ ಗುರಿ ಇರಲಿಲ್ಲ. ನಡೆದಂತೆ ದಾರಿ; ಕಂಡಂತೆ ನೋಟ. ತಿಳಿದಂತೆ ಲೋಕ. ‘ಎಲ್ಲಿಗೆ ಹೋಗೋದು ತಾತಾ’ ಎಂದು ಕೇಳಿದ ತಮ್ಮ. ಉತ್ತರಿಸಲಿಲ್ಲ. ಎಲ್ಲಿಗೂ ಇಲ್ಲ. ಹೋಗಲು ಎಲ್ಲೂ ತಾ ವಿಲ್ಲ. ಈಗಿಲ್ಲಿ ಕೂತಿದ್ದೇವೆ; ಆನಂತರ ಮುಂದೆ ನಡೆಯುತ್ತೇವೆ. ಅದೊಂದು ಜಾಗ; ಇದೊಂದು ತಾವು… ಎಲ್ಲಿಗೆ ಹೋಗೋದು… ಯಾವುದೂ ತನ್ನದಲ್ಲ. ತನ್ನದೆನ್ನುವುದೆಲ್ಲ ತಾತ್ಕಾಲಿಕ… ಎಂದು ವಿಚಾರ ಮಾಡುವಂತೆ ತಾತ ಹಕ್ಕಿಗಳ ಕಲರವದಲ್ಲಿ ತಲ್ಲೀನನಾಗಿದ್ದ. ತಾತನ ಜೊತೆ ತಮಾಷೆ ಮಾಡುತ್ತ ಆ ಬೆಳಿಗ್ಗೆ ತಂಗಳಿಟ್ಟನ್ನೂ ನಾವು ಉಂಡಿರಲಿಲ್ಲ. ಖುಷಿಯಿದ್ದರೆ ಯಾವ ಹಸಿವೂ ಕಾಣದು. ತಾತ ದೊಡ್ಡ ಶಲ್ಯವನ್ನು ಯಾವತ್ತೂ ಹೊದ್ದಿರುತ್ತಿದ್ದ. ಬಟ್ಟೆ ತೊಡುತ್ತಿರಲಿಲ್ಲ. ಒಂದು ಕಚ್ಚೆಯೊ ಮುಂಡಾಸೊ ಹಾಕಿಕೊಂಡಿರುತ್ತಿದ್ದ. ಕೆಂಪು ಚೌಕುಳಿಯ ಅವನ ಶಾಲು ಎದ್ದು ಕಾಣುತಿತ್ತು. ಧೀಮಂತ ಯೋಗಿಯೋ ಅವಧೂತನಂತೆಯೊ ಕಾಣುತ್ತಿದ್ದ. ಯಾರೊಳಗೆ ಯಾರ್ಯಾರು ಇರುತ್ತಾರೊ! ಕೊಲೆಯಾದ ಆ ಪಾತಕಿ ಇದ್ದನಲ್ಲಾ; ಅವನು ಚಿಕ್ಕ ತಾತನ ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದ. ಎಂತಹ ವಿಚಿತ್ರ. ಪಾತಕಿಗೆ ಅಂತಹ ಗೌರವ ಭಾವನೆ ಯಾಕೆ ಬರುತ್ತಿತ್ತೋ… ಮನುಷ್ಯರನ್ನು ಅರ್ಥಮಾಡಿಕೊಳ್ಳಲಾಗದು. ಬೇಕಾದರೆ ದೇವರನ್ನು ತಿಳಿಯಬಹುದೇನೊ! ‘ನಂಬುವುದಾದರೆ ನಿನ್ನ ಚಿಕ್ಕಪ್ಪ ವೀರಭದ್ರನ ನಂಬುವೆ… ಇನ್ನಾರನ್ನೂ ನಂಬಲಾರೆ’ ಎಂದಿದ್ದ ಪಾತಕಿ. ಪಾತಕಿಗೂ ದೈವ ಜ್ಞಾನವೇ! ಹತ್ಯೆಯ ಕೈಗಳಿಗೂ ಭಕ್ತಿಯ ಪೂಜೆಯ ದೀಪಾರ್ಚನೆಯೇ…
ತಾತ ಎಂದೆ, ಭಂಗವಾದಂತೆ ಎದ್ದುನಿಂತ. ಅವನ ಪರಮಾಪ್ತ ಪ್ರಿಯ ತಿನಿಸು ಎಂದರೆ ಎಲೆ ಅಡಿಕೆ ಹೊಗೆಸೊಪ್ಪು. ಊರವರು ತಾವಾಗಿಯೆ ಅವನಿಗೆ ನೀಡುತ್ತಿದ್ದರು. ಯಾರನ್ನೂ ಕೇಳುತ್ತಿರಲಿಲ್ಲ. ಹಾಗೆ ಕೊಡುವುದು ಗೌರವ ಸೂಚಕವಾಗಿತ್ತು. ಅವನ ಬಳಿ ಬಿಡಿಗಾಸು ಕೂಡ ಇರಲಿಲ್ಲ. ಬರಿಗಾಲ ನಡಿಗೆಯವನು ಅವನು. ಒಮ್ಮೆಯೂ ವಾಹನ ಏರಿ ಕೂತಿದ್ದವನಲ್ಲ. ಹಣದ ಬಗ್ಗೆ ಅಸಹ್ಯ. ಅದನ್ನು ಮುಟ್ಟುತ್ತಿರಲಿಲ್ಲ. ದೊಡ್ಡ ತಾತ ದುಡ್ಡು ಕೊಡಲು ಮುಂದಾದಾಗಲೆಲ್ಲ ವಿಷಾದ ಪಡುತ್ತಿದ್ದ. ಅಂತಹ ಕೆಟ್ಟದ್ದನ್ನ ಅಣ್ಣಾ ನೀನು ನನಗೆ ಕೊಡುವೆಯಾ ಎಂದು ನಿರಾಕರಿಸಿದ್ದ. ‘ಇಂಗೆಲ್ಲ ಯಾಕೆ ಬದುಕಿರಬೇಕೂ ಎಲ್ಲಾದರೂ ಹೋಗಿ ಸಾಯಬೇಕು’ ಎಂದು ಅಜ್ಜಿ ಬಯ್ಯುತ್ತಿದ್ದಳು. ತಮ್ಮ ವಟ ವಟ ಎನ್ನುತ್ತಿದ್ದ. ನನ್ನ ಅಪ್ಪನ ಗುಣ ಅವಾಗಲೇ ಅವನ ನಡತೆಯಲ್ಲಿ ಚಿಗುರೊಡೆಯುತ್ತಿತ್ತು. ಕಾಲು ನಡೆದಂತೆ ಹೋಗುತ್ತಿದ್ದೆವು. ಉದ್ದೇಶಗಳೇ ಇಲ್ಲ. ತಾತನ ಅಂತರಾಳವ ಇಣುಕಿನೋಡುವಷ್ಟು ದೃಷ್ಠಿ ಹೇಗೊ ಬಂದಿತ್ತು. ಹೀಗೆ ಸುಮ್ಮನೆ ಇದ್ದುಬಿಟ್ಟು ಒಮ್ಮೆ ಜೀವ ಬಿಟ್ಟರೆ! ಅದಕ್ಕೂ ಒಂದು ಉದ್ದೇಶ ಇದೆಯೇ? ಇಷ್ಟೆಲ್ಲ ಯಾಕೆ ಕಷ್ಟ? ಸುಖವೂ ಕಷ್ಟವೇ ಅಲ್ಲವೇ? ಹುಟ್ಟು ಸಾವುಗಳು ಉದ್ದೇಶಗಳೇ, ಪರಿಣಾಮಗಳೇ… ದೊಡ್ಡವರಾಡುತಿದ್ದ ಮಾತುಗಳನ್ನೆಲ್ಲ ಚಿಕ್ಕ ತಾತನ ಮೌನದಿಂದ ಭಾವಿಸುತ್ತಿದ್ದೆ. ಅಸಾಧ್ಯ ಮೌನ ತಾತನದು. ಹೊತ್ತು ನೆತ್ತಿಮೇಲೆ ಬಂದಿತ್ತು. ಹಾಗೆ ಸುತ್ತುವುದೇ ಸುಖ. ತಮ್ಮ ಹೊಟ್ಟೆ ಹಸಿವು ಎನ್ನುತ್ತಿದ್ದ. ಅಲ್ಲೊಂದು ಪುಟ್ಟ ನೀಲಿ ಕೆರೆ ಇತ್ತು. ಹಕ್ಕಿಗಳು ಮುಳುಗೇಳುತ್ತಿದ್ದವು. ಹಾರಿ ಹೋದಂತೆಯೆ ಬಂದಿಳಿಯುತ್ತಿದ್ದವು. ತಾತನಿಗೆ ಅಂತವುಗಳಲ್ಲಿ ಮಾಂತ್ರಿಕ ಸುಖ. ಕಾರಣವೇ ಇಲ್ಲದೆ ಸಿಗುವ ಸುಖವೇ ಅನಂತವಾದದ್ದು. ಉದ್ದೇಶದಿಂದ ಸಾಧಿಸಿದ್ದು ನಿಜವಾಗಿಯೂ ಸಾಧನೆಯೇ? ಅದರ ಆಯಸ್ಸು ಎಷ್ಟು-ಎಲ್ಲಿ ತನಕ ಉಳಿದಿರುತ್ತದೆ? ಗೆದ್ದವರೆಲ್ಲ ಕೊನೆಗೆ ಗೆದ್ದರೇ?
ಅವನದೆಲ್ಲ ಆಂಗಿಕವಾದ ಭಾಷೆ. ನನ್ನ ಅಪ್ಪ ಈತ ಮನುಷ್ಯನೇ ಅಲ್ಲ ಎಂದು ಬಿಟ್ಟಿದ್ದ. ನಾನೂ ನನ್ನ ಅಮ್ಮನೂ ತಾತನ ಮೇಲೆ ಏನೊ ಪ್ರೀತಿ ಇಟ್ಟುಕೊಂಡಿದ್ದೆವು. ಅವನು ಆಗಾಗ ಕಿರುಗಣ್ಣಲ್ಲಿ ನನ್ನನ್ನು ಒಂದಿಷ್ಟು ಪರಿಗಣಿಸಿದ್ದ. ನನ್ನ ತಮ್ಮ ತುಂಟ. ಅಜ್ಜಿ ವೀರಭದ್ರ ತಾತನ ಮೇಲೆ ಗೊಣಗುತ್ತಲೇ ಇದ್ದಳು.
ಆದರೂ ಜೀವನಕ್ಕೆ ಒಂದು ಉದ್ದೇಶ ಕಾರಣ ಪರಿಣಾಮ ಇದೆ ಎಂಬುದು ನಿಧಾನಕ್ಕೆ ತಿಳಿಯುತ್ತಿತ್ತು. ಮುಂದೆ ಬಂದೆವು. ಅದೊಂದು ಮಾವಿನ ತೋಪು. ಮೈ ತುಂಬ ಹೂ. ನೆಲಕ್ಕೆ ತಾಗುವ ರೆಂಬೆಕೊಂಬೆಗಳು. ಮರಕೋತಿ ಆಟ ಆಡಿದೆವು ಮತ್ತೂ ಸಾಗಿದೆವು. ಅದೇ ಹೊಳೆ. ದಾಟಿ ಹೋಗಬೇಕಿತ್ತು. ಒಂದು ಕ್ಷಣ ಬೆಚ್ಚಿ ನಿಂತೆ. ತಾತ ಇಬ್ಬರ ಕೈ ಹಿಡಿದು ನೀರಿಗಿಳಿಯುವನಿದ್ದ. ತೊರೆಯ ದಂಡೆಯ ದಟ್ಟ ಲಕ್ಕಿಗಿಡದ ಎತ್ತರದ ಪೊದೆ ನೆನಪಿಸಿತು. ಅದರಲ್ಲೇ ಆ ಪಾತಕಿ ಬಚ್ಚಿಟ್ಟು ಕೂತಿದ್ದುದು. ನನಗರಿವಿಲ್ಲದೆ ನಾನೂ ಅಲ್ಲೇ ಇದ್ದೆನಲ್ಲಾ… ಕತ್ತು ಮುರಿವಂತೆ ಹಿಡಿದಿದ್ದನಲ್ಲಾ… ನನ್ನೊಳಗು ಅವರಿಗೆ ಗೊತ್ತಾಗಲಿಲ್ಲ. ಆ ಪಾತಕಿಯ ಆರ್ತ ಕೂಗು ಎದೆ ಬಡಿತದ ಜೊತೆ ಮಾತನಾಡುವಂತಿತ್ತು. ಹೊಕ್ಕುಳ ಕುಳಿಯಲ್ಲಿ ಚುಚ್ಚುವಂತೆ ಪಾತಕಿಯ ಮಾತುಗಳು ಕೇಳಿಸುತ್ತಿದ್ದವು. ಅಪ್ಪನ ದ್ರೋಹಕ್ಕೆ ನಾಳೆ ಏನು ಕಾದಿದೆಯೊ ಎಂದು ಮನಸ್ಸನ್ನು ಒಂದೆಡೆ ಕಟ್ಟಿಹಾಕಿದೆ. ಹೊಳೆದಾಟಿದೆವು. ಅದೊಂದು ಗೋಮಾಳ. ಅರೆಗಾಡು. ಇಲ್ಲೇಕೆ ಬಂದೆವೊ? ಗೊತ್ತಿಲ್ಲ. ತಾತನ ಹೆಜ್ಜೆಯ ಹೆಜ್ಜೆಗಳಾಗಿದ್ದವಷ್ಟೇ. ಅವನ ಹಿಂದೆ ಎಲ್ಲೆಂದರಲ್ಲಿಗೆ.
ದೂರದಿಂದ ಏನೋ ಘಮಲು. ಏನೊ ಸಡಗರ ಸದ್ದು. ದಪ ದಪನೆ ಅತ್ತ ಕಾಲು ಹಾಕಿದೆವು. ಅಲ್ಲೊಂದು ಪ್ರಾಚೀನ ದೇಗುಲ. ಅಪರೂಪಕ್ಕೆ ಹರಕೆ ಹೊತ್ತವರ ಪರಿಷೆ, ಪೂಜೆ ಪುನಸ್ಕಾರ, ಸಾಕಷ್ಟು ದೂರ ಬಂದಿದ್ದೆವು. ಅಪರಿಚಿತ ಜನ. ಬಹಳ ಮೇಲಿನವರು. ಇದ್ದಕ್ಕಿದ್ದಂತೆ ಹಸಿವು ನಮ್ಮ ಹೊಟ್ಟೆಯಲ್ಲಿ ಬೆಂಕಿಯಂತೆ ಹೊತ್ತಿಕೊಂಡಿತ್ತು. ತಡ ಮಾಡಲಿಲ್ಲ ತಮ್ಮ. ನುಗ್ಗಿದ. ಪರಿಷೆ ಊಟಕ್ಕೆ ಕೂತಿತ್ತು. ತಾತ ಎಳೆದು ನಮ್ಮಿಬ್ಬರನ್ನು ಅತ್ತ ಮರೆಯಲ್ಲಿ ಕೂರಿಸಿದ. ಜೋಪಾನ ಗಮನಿಸಿದ. ಯಾರೂ ಗುರುತಿಲ್ಲ. ಪೊತರುಗುಟ್ಟುತ್ತಿದ್ದೆವು. ಅಂತಹ ಘಮಲಿನ ಊಟೋಪಚಾರಗಳನ್ನು ನಾವು ಕಂಡೇ ಇರಲಿಲ್ಲ. ಪರಿಷೆ ಎಂದರೆ ಧರ್ಮ. ಅನ್ನದಾನ ಮಾಡುವರು… ಹೋಗಿ ಉಂಡುಬಿಡುವಾ ಎಂದು ತಾತನನ್ನು ಪೀಡಿಸುತ್ತಿದ್ದೆವು. ಉಣ್ಣುವವರು ಉಣ್ಣುತ್ತಲೆ ಇದ್ದರು. ಜನವೊ ಜನ. ಸವಿರುಚಿಯ ಸುಗ್ಗಿ. ಪರಿಷೆ ಮಾಡಿಸಿದ್ದವರು ನೆಂಟರಿಷ್ಟರತ್ತ ಗಮನ ಕೊಟ್ಟಿದ್ದರು. ಅತ್ತ ಇನ್ನೂ ಕೊಪ್ಪರಿಗೆಗಳಲ್ಲಿ ಅಡುಗೆ ಬೇಯುತ್ತಿತ್ತು. ಘಮ್ಮೆನ್ನುವ ಪಾಯಸ ಅಲ್ಲೆಲ್ಲ ಹಬ್ಬಿತ್ತು. ಅಹಾ ಒಂದೇ ಎರಡೇ ಹತ್ತೇ… ಹತ್ತಾರು ತರಾತರದ ಊಟವನ್ನು ಪಂಕ್ತಿಗೆ ಬಡಿಸುತ್ತಿದ್ದವರು ಸುಸ್ತಾಗುತ್ತಿದ್ದರು.
ಅಕಸ್ಮಾತ್ ಊಟ ತೀರಿಹೋದರೆ ಎಂದು ತಾತನ ಮೇಲೆ ಸಿಟ್ಟಾಗುತ್ತಿದ್ದೆವು. ಒಂದು ಸಾಲು ಪಂಕ್ತಿ ಮುಗಿಸಿತು. ಎಲೆ ಎತ್ತಿದರು. ಕಾದಿದ್ದವರು ಬಂದು ಕೂತರು. ತಾತನ ಕಾಯದೆ ನಾವೂ ಪುಸೀರನೆ ಹೋಗಿ ಸಾಲಿನ ಮಧ್ಯೆ ಕೂತೆವು. ಯಾರೂ ಯಾರೆಂದು ಕೇಳಲಿಲ್ಲ. ಅದು ರೂಢಿ ಅಲ್ಲ. ನೆಂಟರು ಎಂದುಕೊಂಡರು. ತಾತನ ಮುಖದಲ್ಲಿ ಕಂಡೂ ಕಾಣದಂತೆ ಅಳುಕಿತ್ತು. ನಮಗೆ ಅದೆನೋ ಗೊತ್ತಿರಲಿಲ್ಲ. ನಮ್ಮ ಕಣ್ಣುಗಳಲ್ಲಿ ಸವಿಯೂಟ ನಲಿಯುತ್ತಿತ್ತು. ಬಾಯಿ ತುಂಬಾ ಜೊಲ್ಲು ಸುರಿಯುತ್ತಿತ್ತು. ಸಕತ್ತಾಗಿ ಉಂಡು ಬಿಡಬೇಕು ಎಂದು ಹೊಟ್ಟೆ ಸದ್ದು ಮಾಡುತ್ತಿತ್ತು. ತಾತ ಶಾಲು ತೆಗೆದಿಟ್ಟ. ಬಲಾಢ್ಯ ದೇಹ. ಅವನು ದೋತ್ರ ಸರಿಪಪಡಿಸಿಕೊಂಡು ಕುಕ್ಕುರುಗಾಲಲ್ಲಿ ನೆಲಕ್ಕೆ ಬೇರೂರಿದಂತೆ ಕೂತಿದ್ದ. ಆ ಭಂಗಿಯಲ್ಲಿ ಕೂತ ಎಂದರೆ ಊಟ ಬಡಿಸುವವರಿಗೆ ಒಂದು ಘನವಾದ ಅಳತೆ. ಹಿಪ್ಪಡಿಹಿಪ್ಪಡಿಯಾಗಿ ಎರಡೂ ಕೈಗಳ ಅಗಲಿಸಿ ಬಾಚಿ ಹಿಡಿದು ಎಲೆ ಮೇಲೆ ಅನ್ನ ಹಾಕುವುದು ಸುಲಭದ ಸಂಗತಿ ಅಲ್ಲ. ಜೊತೆಗೆ ಇಬ್ಬರು ಮೊಮ್ಮಕ್ಕಳನ್ನೂ ಕೂರಿಸಿಕೊಂಡಿದ್ದಾನೆ. ನಾಲ್ಕು ಎಲೆಗಳನ್ನು ಒಟ್ಟಿಗೆ ಹಾಕಿಸಿಕೊಂಡು ಅಣಿಯಾಗಿದ್ದಾರೆ. ಪಕ್ಕದವರು ಅಯ್ಯೋ ಪಾಪ; ಬಹಳ ಹಸಿದಿದ್ದಾರೆ.. ತಾಳಿ ತಾಳಿ ಹೊಟ್ಟೆ ತುಂಬ ಬಡಿಸುತ್ತಾರೆ ಎಂಬಂತೆ ತಾತನ ಕಡೆ ಅನುಕಂಪದಿಂದ ನೋಡುತ್ತಿದ್ದರು. ತಾತ ತಲೆ ಎತ್ತುತ್ತಲೆ ಇರಲಿಲ್ಲ. ನಾವು ಹಾ ಹಾ ಹಾ ಎಂದು ಬಾಯಿ ಬಿಡುತ್ತಿದ್ದೆವು. ಸಾಲಾಗಿ ಏನೇನೊ ಬಡಿಸುತ್ತಾ ಹೋದರು. ಕೋತಿ ತಮ್ಮ ಇನ್ನೂ ಹಾಕಿ ಎಂದು ಅಸಭ್ಯವಾಗಿ ಕೇಳುತ್ತಿದ್ದ. ತಾತ ಆ ಮೊದಲೆ ಕಣ್ಣಲ್ಲೆ ಎಚ್ಚರಿಸಿದ್ದ. ಅವು ಏನೇನು ತಿಂಡಿಗಳೆಂಬುದೇ ಗೊತ್ತಿರಲಿಲ್ಲ. ನಮ್ಮ ತಮ್ಮ ಅಲ್ಲೇ ಸವಾಲಿಗೆ ಕರೆದ! ಯಾರು ಎಷ್ಟೆಷ್ಟು ಬೇಗ ಎಷ್ಟೆಷ್ಟು ಉಣ್ಣುತ್ತೇವೆ ಯಾರು ಸೋಲುತ್ತಾರೆ ಎಂಬುದನ್ನು ತೀರ್ಮಾನಿಸೋಣ ಎಂದು ಪಿಸ ಪಿಸನೆ ಕೇಳಿದ. ನನಗೆ ಇಷ್ಟವಾಗಲಿಲ್ಲ. ಹಳ್ಳಿಯಲ್ಲಿ ಹಾಗೆ ಊಟದ ಬಾಜಿ ಕಟ್ಟುವವರಿದ್ದರು. ಇಡೀ ಒಂದು ಹಪ್ಪಳವ ಪಳಕ್ಕೆಂದು ಮುದುರಿ ಬಾಯಿಗಿಟ್ಟು ಕಣ್ಣಲ್ಲೆ ಚಾಲೆಂಜ್ ಎನ್ನುತ್ತಿದ್ದ. ಬಡಿಸುವವರು ಜೋರಾಗಿ ಕೂಗಿ ಅನ್ನ ಗೊಜ್ಜು ಪಲ್ಯ ತನ್ನಿ ಎಂದು ಆದೇಶಿಸುವಂತೆ ಕರೆಯುತ್ತಿದ್ದ. ತಾತ ತಿವಿದ. ಎಚ್ಚರಿಸಿದ. ತಲೆಹರಟೆ ಅವನು. ಅನ್ನದ ಮುಂದೆ ಆವೇಶ ಬಂದು ಬಿಟ್ಟಿತ್ತು. ‘ಮಕ್ಕಳು ಆಸೆ ಪಡ್ತವೆ ತಂದಾಕ್ರೋ’ ಎಂದು ಯಾರೊ ಹೇಳುತ್ತಿದ್ದರು. ಕೈತುಂಬ ಅನ್ನ ಬಡಿಸುತ್ತ ಸಾಂಬಾರು ಸುರಿಯುತ್ತಿದ್ದರು. ಜೊನ್ನೆಗೆ ಸಾರು ಬಡಿಸಿಕೊಂಡು ಲೊಚಗರೆದು ಕುಡಿದು ‘ಇನ್ನೊಸಿ ಹಾಕಿ’ ಎಂದ ತಮ್ಮ. ತಾತನಿಗೆ ಉಣ್ಣಲು ಆತ ಬಿಡುತ್ತಲೇ ಇರಲಿಲ್ಲ. ನಾನೂ ಕೂಡ. ಕಲಸಿ ಕಲಸಿ ತುತ್ತು ಮಾಡಿ ನಮ್ಮ ಕೈಗಿಡುತ್ತಿದ್ದ ತಾತ. ಅವನಿನ್ನೂ ಒಂದು ಗಚ್ಚನ್ನೂ ತಿಂದಿರಲಿಲ್ಲ. ಎಲ್ಲ ನಮ್ಮದೆ ಬಾಯಿ. ಘಾತುಕತನ ಅವನು ಕಲಸುತ್ತಿದ್ದಂತೆಯೆ ಅವನ ಕೈಯಿಂದಲೇ ಕಿತ್ತುಕೊಳ್ಳುತ್ತಿದ್ದೆವು. ಅದಾವ ಪಿಶಾಚಿಗಳು ನಮ್ಮ ಹೊಟ್ಟೆಗೆ ಬಂದಿದ್ದವೋ! ಉಂಡಂತೆಲ್ಲ ಮತ್ತೆ ಮತ್ತೆ ಉಣ್ಣುವ ಬಕಾಸುರ ಬಯಕೆ.
ತಾತ ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದ. ಮನುಷ್ಯನಿಗೆ ಎಷ್ಟು ಅನ್ನಬೇಕು? ಎಷ್ಟು ಹಸಿವಿರಬೇಕು? ತಿನ್ನಲಿಕ್ಕಾಗಿಯೇ ಹುಟ್ಟಿದೆವೇ… ಮನುಷ್ಯರಿಗೆ ಹಸಿವೇ ಇರದಿದ್ದರೆ ಈ ಲೋಕ ಹೇಗಿರುತ್ತಿತ್ತು ಎಂಬಂತೆ ತಾತನ ಕಣ್ಣುಗಳು ಒದ್ದೆಯಾಗಿದ್ದವು. ನಮ್ಮ ಮೇಲೆ ಅವನಿಗೆ ಸಿಟ್ಟಿರಲಿಲ್ಲ. ಕರುಣೆ ಇತ್ತೇನೊ. ಆಗಾಗ ಪರಿಷೆಯ ಮುಖ್ಯಸ್ಥರನ್ನು ಭಯದಿಂದ ಗಮನಿಸುತ್ತಿದ್ದ. ನಾವಿನ್ನೂ ಅನ್ನದ ಸರದಿಯನ್ನೆ ಮುಗಿಸಿರಲಿಲ್ಲ. ನಾನು ನೀರು ಕುಡಿಯುತ್ತಲೇ ಇದ್ದೆ. ಕುಡಿಯಬೇಡ ಎಂದ ತಮ್ಮ. ಯಾಕೆಂದು ಹುಬ್ಬನ್ನು ಮೇಲಾಡಿಸಿದೆ. ಹೆಚ್ಚು ನೀರು ಕುಡಿದರೆ ನೀರು ತುಂಬಿಕೊಂಡು ಊಟ ಸೇರದೆ ಹೋಗುತ್ತದೆ ಎಂದ. ಅರೇ; ಹೌದಲ್ಲಾ ಪಾಯಸಕ್ಕೇ ನಾವಿನ್ನೂ ಬಂದಿಲ್ಲಾ ಎಂತಹ ದಡ್ಡ ನಾನು ಎಂದು ಅಗತ್ಯ ಇದ್ದರೂ ನೀರು ಕುಡಿವುದ ತಡೆದೆ. ನಮಗೆ ಎಂದೂ ಅಂತಹ ದರಿದ್ರ ಬಂದಿರಲಿಲ್ಲ. ತಾತ ಅಚ್ಚರಿ ಪಡುತ್ತಿದ್ದ. ಒಂದು ತುತ್ತೂ ಬಾಯಿಗೆ ಹಾಕಿಕೊಂಡಿರಲಿಲ್ಲ. ನೀನೂ ಉಣ್ಣು ಎಂದು ಸನ್ನೆ ಮಾಡಿದೆ. ತಲೆಯಾಡಿಸುತ್ತಾ ಬೇಗ ಮುಗಿಸಿ ಎನ್ನುತ್ತಿದ್ದ. ಅಕ್ಕ ಪಕ್ಕದವರು ಎದ್ದು ಹೋಗಿದ್ದರು.
ಯಾರೊ ಬಂದು ಯಾರು ಯಾವೂರು ಎಂದು ಕೇಳಿದರು. ಬಾಯಿ ಬಿಡಬೇಡಿ ಎಂಬಂತೆ ತಾತ ಕಣ್ಣಲ್ಲೆ ಎಚ್ಚರಿಸಿದ. ಪಾಯಸ ತನ್ನಿ ಎಂದು ಗೋಗರೆಯುತ್ತಿದ್ದ ತಮ್ಮ ಎಲೆಯ ನೆಕ್ಕುತಿದ್ದ. ವಿಚಾರಿಸಿದವರು ಸೂಕ್ಷ್ಮವಾಗಿ ಗಮನಿಸಿದರು. ಹಾದಿಹೋಕರಿರಬಹುದೆನಿಸಿತು. ತಾತ ನೆತ್ತಿಗೆ ಏರಿತೆಂದು ಕೆಮ್ಮುತ್ತಾ ಅವರ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದ. ಅವರು ಬಿಡಲಿಲ್ಲ. ಅದಾಗಲೆ ಇನ್ನೊಂದು ಪಂಕ್ತಿ ನಮ್ಮ ಜೊತೆಯೆ ಕೂತಿತ್ತು. ಇನ್ನೊಂದಿಷ್ಟು ಪಾಯಸ ಕುಡಿದು ಬಿಡುವ ಎಂದು ನಾವಿಬ್ಬರು ಕೂಗಿದೆವು. ಅವರು ಯಾರೂ ಬರಲಿಲ್ಲ. ಹೊಸ ಪಂಕ್ತಿಯಲ್ಲಿದ್ದವನೊಬ್ಬ ತಾತನ ಗುರುತಿಸಿದ್ದ. ಎದ್ದು ಹೋಗಿ ಯಜಮಾನರಿಗೆ ಅವರು ಹೊಲೆಯರವನು ಎಂದು ಗುಟ್ಟಾಗಿ ತಿಳಿಸಿದ. ಇಡೀ ಪರಿಷೆಯ ಪಾವಿತ್ರ್ಯವೇ ಕೆಟ್ಟು ಹೋಗಿತ್ತು. ಉಂಡದ್ದೆಲ್ಲ ಅಸಹ್ಯವಾಗಿತ್ತು. ಎಲಾ! ಹೊಲೆಯಾ! ನಮ್ಮ ಜೊತೆ ಬಂದು ಕೂತು ಉಂಡು ಜಾತಿ ಕೆಡಿಸಿ ಬಿಟ್ಟಿಯಾ, ಪೂಜೆಯ ಮಲಿನ ಮಾಡಿಬಿಟ್ಟೆಯಾ! ದ್ರೋಹೀ ಎಂತಾ ಸೂತಕ ಮಾಡಿಬಿಟ್ಟೆಯಲ್ಲೊ ಎಂದು ತಾತನ ಸುತ್ತ ಅಮರಿಕೊಂಡು ಅಲ್ಲೇ ಇದ್ದ ಸೌದೆ ಸೀಳುಗಳಿಂದ ಎಂಗೆ ಬಡಿದರು ಎಂದರೆ; ತಾತನನ್ನು ಕೊಂದುಬಿಡುತ್ತಾರೆಂದು ನಾವು ಇಡೀ ಪರಿಷೆಯೆ ಬಿರಿವಂತೆ ಆರ್ತವಾಗಿ ಕೂಗಿಕೊಂಡೆವು. ನಮ್ಮ ಪರವಾಗಿ ಯಾರೂ ಇರಲಿಲ್ಲ. ಅಲ್ಲಿದ್ದವರೆಲ್ಲ ಅಯ್ನೋರು! ದೊಂಬಿಯೇ ಆಗಿಬಿಟ್ಟಿತು. ಒಬ್ಬೊಬ್ಬರೂ ಒದ್ದು ತಿವಿದು ತುಳಿದು ಹೊಡೆಯುವಾಗ ನಾವು ತಾತನ ಹಿಂದೆಯೇ ಬಿದ್ದು ಹೊರಳಾಡುತ್ತಿದ್ದೆವು. ಅದರಾಚೆಗೆ ನಾವೇನೂ ಮಾಡುವಂತಿರಲಿಲ್ಲ. ತಾತ ಬಾಯಿ ಬಿಡಲಿಲ್ಲ. ಬಲವಾದ ಏಟುಗಳಿಗೆ ಅಯ್ಯೋ ಎಂದು ನರಳುತ್ತಿರಲಿಲ್ಲ. ಎಷ್ಟಾದರೂ ಹೊಡೆಯಿರಿ ಎಂಬಂತೆ ಕೈ ಮುಗಿಯುತ್ತಿದ್ದ. ದೊಡ್ಡವರ ಪಾದಗಳಿಗೆ ಎರಗುತ್ತಿದ್ದ. ಒಂದೇ ಒಂದು ಶಬ್ದವೂ ಅವನ ಬಾಯಿಂದ ಹೊರಡುತ್ತಿರಲಿಲ್ಲ. ಕಿಬ್ಬರಿ ಮುರಿಯುವಂತೆ ಬಡಿದಿದ್ದರು. ಅಯ್ನೋರಲ್ಲೂ ಎಷ್ಟೊಂದು ರೋಷ. ಯಾರೂ ಒಬ್ಬರು ಉರಿಯುತ್ತಿದ್ದ ಸೌದೆ ಸೀಳನ್ನು ತಂದು ತಾತನ ಬೆನ್ನಿಗೆ ಎಟ್ಟಿದ್ದ. ಆಗ ತಾತ ಬಾದೆಯಿಂದ ಅವ್ವಾ ಎಂದು ಆಕಾಶ ನೋಡಿದ್ದ. ಯಾರೊ ತಡೆದು ಕಿತ್ತು ಬಿಸಾಡಿದ್ದರು. ನಮ್ಮ ನೇಮ ನಿಷ್ಟೆ ಕೆಡಿಸಲೆಂದೇ ಹೀಗೆ ಬಂದು ಮೈಲಿಗೆ ಮಾಡಿದ್ದಾನೆಂದು ಹಲವರು ಸೇರಿ ಕಟ್ಟಿಹಾಕಿ ಮುಖಕ್ಕೆ ಉಗಿಯುತ್ತಿದ್ದರು. ಅಲ್ಲೇ ಒಂದು ಮರ ಇತ್ತು. ಮರಕ್ಕೆ ಸೇರಿಸಿ ಹಗ್ಗದಿಂದ ತಾತನ ಕಾಲುಗಳ ಬಿಗಿದಿದ್ದರು. ಸೊಂಟ, ಕೈಗಳಿಗೆ ಹಗ್ಗ ನುಲಿದಿದ್ದರು. ರುಮಾಲನ್ನು ಕಿತ್ತು ಬಿಸಾಡಿದ್ದರು. ಒಂದು ತುಂಡು ಧೋತ್ರದಲ್ಲಿ ಮರಕ್ಕೆ ಒರಗಿದ್ದ. ತಾತನನ್ನು ಮುಗಿಸಿಬಿಡುತ್ತಾರೆನಿಸಿತು. ಕತ್ತನ್ನು ಕೆಳಕ್ಕೆ ಹಾಕಿ ನೋವು ತಾಳಲಾರದೆ ಕಂಪಿಸುತ್ತಿದ್ದ.
ವಿಚಾರಿಸಿದರು ತಾತ ಮಾತಾಡಲಿಲ್ಲ. ನಮಗೂ ಏಟು ಬಿದ್ದಿದ್ದವು. ತಾತನ ಕಾಲ ಬಳಿ ನಡುಗುತ್ತ ಕೂತಿದ್ದೆವು. ಬಲ್ಲವನು ವಿವರಿಸುತ್ತಿದ್ದ. ಇನ್ನೂ ಮುಗಿದಿಲ್ಲವೇ ಇವರ ಪಂಚಾಯ್ತಿ ಎಂದು ಪೂಜಾರಪ್ಪ ಗರ್ಭಗುಡಿಯ ಕೆಲಸ ಮುಗಿಸಿ ಬಂದು ನೋಡಿದ. ಅಯ್ಯೋ ಎನಿಸಿತು! ‘ಮಾರಯ್ಯನ ತಮ್ಮ! ಹೇ; ಇವನು ಅವದೂತ ಇದ್ದಂತೆ… ಅವನಿಗೆ ಯಾವ ಜಾತಿ ಧರ್ಮ ಊರು ಕೇರಿ ಇಲ್ಲಾ. ಬಿಟ್ಟು ಬಿಡೀ. ಯಾರೊ ಎಂದುಕೊಂಡಿದ್ದೆ’ ಎಂದು ತಾತನ ಪರವಾಗಿ ನುಡಿದ ಕೂಡಲೆ ಬಹುಪಾಲು ಎಲ್ಲರೂ ಆಕ್ಷೇಪಿಸಿದರು. ‘ಇಲ್ಲ ಇಲ್ಲಾ; ಇವನಿಗೆ ಶಿಕ್ಷೆ ಆಗಬೇಕೂ… ಸೂತಕ ಕಳೆಯಬೇಕು… ದಂಡ ವಿಧಿಸಬೇಕೂ’ ಎಂದರು ಒಕ್ಕೂರಲಿನಿಂದ. ಪೂಜಾರಪ್ಪ ಸಭ್ಯ ಒಂದಿಷ್ಟು ವಿದ್ಯಾವಂತ. ನಮ್ ತಾತ ಮಾರಯ್ಯನ ಬಗ್ಗೆ ಗೌರವ ಇತ್ತು. ಅವನನ್ನು ಕರೆಸಿ ಬಗೆಹರಿಸುವುದೇ ನ್ಯಾಯ ಎಂದು ಜನರ ಒಪ್ಪಿಸಿದರು. ತಾತನನ್ನು ಕರೆಯಲು ಕಳಿಸಿದರು. ಬದುಕಿದೆವು ಎಂದುಕೊಂಡೆವು. ಆ ಕೂಡಲೆ ಇತ್ಯರ್ಥವಾಗಬೇಕಿತ್ತು. ತಾತ ಸೈಕಲಲ್ಲಿ ಬಂದ ಅದೊಂದು ಆಗ ದೊಡ್ಡಸ್ತಿಕೆ. ತಾತ ಬಂದವನೇ ಸೈಕಲನ್ನು ಅತ್ತ ನಿಲ್ಲಿಸಿ ಚಿಕ್ಕತಾತನ ಬಳಿ ಹೋದ. ಅವನ ಬೆತ್ತ ಅವನ ಕಾಲ ಬಳಿಯೇ ಇತ್ತು ಎತ್ತಿಕೊಂಡು ಚಚ್ಚಿಹಾಕಿದ. ಪೂಜಾರಪ್ಪ ತಡೆದ. ತಾತ ಎಂದೂ ಯಾರಿಗೂ ಒಂದೇ ಒಂದು ಏಟನ್ನೂ ಹೊಡೆದವನಲ್ಲ. ಯಾರೊ ಒಬ್ಬ ನೀಚ ತನ್ನ ಎಕ್ಕಡವನ್ನು ಚಿಕ್ಕ ತಾತನ ಬಾಯಿಗಿಟ್ಟು ಹಾಗೇ ಕಚ್ಚಿಕೊಂಡಿರತಕ್ಕದ್ದು ಎಂದು ಕಟ್ಟಾಜ್ಞೆ ವಿಧಿಸಿದ್ದ. ತಾತ ಒಂದು ತುತ್ತನ್ನೂ ಆ ಪರಿಷೆಯಲ್ಲಿ ಉಂಡಿರಲಿಲ್ಲ. ಕಲಸಿ ಕಲಸಿ ನಮಗೇ ಉಣ್ಣಿಸಿ ಬಿಟ್ಟಿದ್ದ. ಅವನಿಗೆ ಸಿಗದಂತೆ ನಾವೇ ಕಿತ್ತುಕೊಂಡು ತಿಂದಿದ್ದೆವು. ‘ನನ್ನೆಕ್ಕಡಾ ಉಣ್ಣುಕೆ ಬಂದಿದ್ಲಾ? ಉಣ್ಣಾ ನನ್ನೆಕ್ಡವಾ’ ಎಂದು ಬಾಯಿಗೆ ಆ ಮನುಷ್ಯ ಒತ್ತಾಯದಲ್ಲಿ ತುರುಕಿದ್ದ. ತಾತ ಹಾಗೇ ಬಾಯಲ್ಲಿ ಕಚ್ಚಿಕೊಂಡಿದ್ದ. ವಿಚಾರಣೆ ಶುರುವಾಯಿತು.
‘ನಿಂತಮ್ಮ ಮಾಡಿರುದು ಸರಿ ಏನೊ ಮಾರಾ’
‘ಇಲ್ಲಾ ಸೋಮೀ… ತಪ್ಪು ಮಾಡವನೆ’
‘ಅಂಗಾದ್ರೆ ದಂಡ ಏನಾಕ್ಬೇಕೂ’
ತಾತನಲ್ಲಿ ಮಾತಿರಲಿಲ್ಲ. ಚಡಪಡಿಸುತ್ತಿದ್ದ. ಪೂಜಾರಪ್ಪ ಬಾಯಾಕಿದ. ‘ಹೋಗ್ಲಿ ಬಿಡ್ರಪ್ಪಾ…ಅವುನು ವಲ್ಯಾ… ಏನ್ ಮಾಡುಕಾಗುತ್ತೇ? ಈ ಪರಿಷೆಲಿ ದೇವರು ಅವನಿಗೂ ಒಂದು ಪಾಲು ಕೊಟ್ಟಿದ್ನೇನೊ… ಅಲ್ದೆ ಇದ್ರೆ ಇಲ್ಲಿಗಂಟಾ ಅವುನು ಯಾಕೆ ಬರ್ತಿದಾ. ಅವನಿಗೂ ಪ್ರಸಾದ ಇತ್ತು… ದೇವರಿಚ್ಛೆ ಇಲ್ದೆ ಇಲ್ಲಿ ಯಾವ್ದೂ ನಡಿಯುದಿಲ್ಲ. ಆಗೋಗಿದೆ. ದಂಡ್ಸಿಯೂ ಆಯ್ತು. ಅವುನ ಬಾಯಿಗೆ ಎಕ್ಕಡನೂ ಹಾಕಾಯ್ತು… ಇನ್ನೇನು ದಂಡ ಮತ್ಯಾವ ಶಿಕ್ಷೆ. ಬಿಟ್ಟು ಬಿಡೋಣ’
ಯಾರೂ ಒಪ್ಪಲಿಲ್ಲ. ದಂಡ ವಿಧಿಸಿಯೇ ಬಿಟ್ಟರು. ನೂರ ಒಂದು ರೂಪಾಯಿ ದಂಡ. ಆ ಕಾಲಕ್ಕೆ ಅದೊಂದು ದೊಡ್ಡ ದಂಡ. ತಾತನಿಗೆ ದಂಡದ ಅಂದಾಜಿರಲಿಲ್ಲ. ಹಿಂತಿರುಗಿ ಹೋಗಿ ತಂದು ಪಂಚಾಯ್ತಿ ಎಂದು ದೇವಸ್ಥಾನಕ್ಕೆ ಅರ್ಪಿಸಿದ ನಂತರವೇ ಚಿಕ್ಕ ತಾತನನ್ನು ಬಿಟ್ಟುಕೊಟ್ಟರು. ತಾತ ಛೀ ಎಂದು ಚಿಕ್ಕ ತಾತನಿಗೆ ಉಗಿದು ಸೈಕಲ್ ಏರಿ ಹೊರಟ. ಪರಿಷೆಯೂ ಮಟಾ ಮಾಯ. ಪೂಜಾರಪ್ಪ ಸುಮ್ಮನೆ ದೇಗುಲದ ಬಾಗಿಲಲ್ಲಿ ನಿಂತು ನಮ್ಮನ್ನೇ ನೋಡುತ್ತಿದ್ದ. ತಾತ ದಿಕ್ಕಿಲ್ಲದಂತೆ ನಡೆದ. ಅವನನ್ನು ಬಿಟ್ಟು ಹಿಂತಿರುಗಲು ಮನಸ್ಸಾಗಲಿಲ್ಲ. ಹಾಗೇ ಹಿಂಬಾಲಿಸಿದೆವು. ತುಂಬಾ ಏಟಾಗಿತ್ತು. ಸಾವರಿಸಿಕೊಂಡು ಎತ್ತಲೊ ಬಂದೆವು. ತಾತನ ಕಣ್ಣುಗಳು ಇನ್ನೂ ಒದ್ದೆಯಾಗಿದ್ದವು. ದುಃಖಕ್ಕೆ ಉದ್ದೇಶವಿದೆಯೇ… ಕಾರಣ…? ಕಾರಣವಿಲ್ಲದ ದುಃಖ ಎಷ್ಟೊಂದು! ದುಃಖದಿಂದ ಕಾರಣವೇ, ಕಾರಣದಿಂದ ಕಾರುಣ್ಯದ ಬೆಳಗೇ… ತಾತನ ಮನದೊಳಗೆ ಏನೇನು ನಡೆಯುತ್ತಿತ್ತೋ… ಮರ್ಕಟ ಮನದ ತಮ್ಮ ಪಾಯಸ ತುಂಬಾ ರುಚಿಯಾಗಿತ್ತು ಎಂದು ನೆನೆಯುತ್ತಿದ್ದ. ಊರಿಗೆ ಹಿಂತಿರುಗಿ ವಿಷಯ ಅಪ್ಪನಿಗೆ ಗೊತ್ತಾಗಿದ್ದರೆ ಏನಾಗಬಹುದು ಎಂದು ಎದೆಗೂಡು ಪುಕಪುಕೆಂದಿತು.
ಯಾವುದೊ ಬಳ್ಳಿಯ ಕಿತ್ತು ತಾತ ಬಂಡೆ ಮೇಲೆ ಅರೆದು ಬೆಂಕಿಕೊಳ್ಳಿಯಿಂದ ತಿವಿದಿದ್ದ ಬೆನ್ನಿಗೆ ಹಚ್ಚಿಸಿಕೊಂಡ. ಅದೊಂದು ವಿಶಾಲ ಹಾಸು ಬಂಡೆ. ಅದರಲ್ಲಿ ಅಲ್ಲಲ್ಲಿ ನೀರು ನಿಂತಿದ್ದವು. ಆ ನೀರನ್ನೇ ಕುಡಿದೆವು. ಒಣಗಿ ಮುರಿದು ಬಿದ್ದಿದ್ದ ಸಣ್ಣ ಪುಟ್ಟ ರೆಂಬೆಕೊಂಬೆಗಳು ಅಲ್ಲಿ ಸಾಕಷ್ಟಿದ್ದವು. ಆಯ್ದು ತಂದೆವು. ಕತ್ತಲಾಯಿತು. ಬೆಂಕಿ ಹಚ್ಚಿದೆವು. ನೀರವ ರಾತ್ರಿಯ ಮೌನ ನಮ್ಮ ಜೊತೆಗಿತ್ತು. ಅದು ಏನೊ ಸಾಂತ್ವನ ಹೇಳುವಂತಿತ್ತು. ಅಷ್ಟಕ್ಕೇ ಏನೊ ಸುಖ. ನಮಗೆ ಏನೂ ಆಗಿಯೇ ಇಲ್ಲ ಎನಿಸಿ ಎಲ್ಲ ಮರೆತು ಬೆಂಕಿಕಾಯುತ್ತ ಕಾಯುತ್ತ ತೂಕಡಿಸುತ್ತಿದ್ದೆವು. ದೂರದಲ್ಲಿ ತೋಳಗಳು ಕೂಗುತ್ತಿದ್ದವು. ಆಗಾಗ ಇಲ್ಲೇ ನಮ್ಮ ಪಕ್ಕವೇ ಬಂದಂತೆ ಬಾಸವಾಗುತ್ತಿತ್ತು. ಬೆತ್ತದಿಂದ ತಾತ ಆಗಾಗ ಸದ್ದು ಮಾಡುತ್ತಿದ್ದ. ಅರೆಗಣ್ಣ ನಿದ್ದೆಯಲ್ಲೂ ತಾತನನ್ನು ನಾವು ಕೂಡ ಗಮನಿಸುತ್ತಿದ್ದೆವು. ಆ ತೋಳಗಳು ಅವರ ಪಾಡು ಕಂಡು ಊಳಿಡುತ್ತಲೇ ಇದ್ದವು. ತಾತ ಧ್ಯಾನದಲ್ಲಿ ಲೀನವಾಗಿದ್ದ.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಪ್ರೀತಿಯ ಮೊಗಳ್ಳಿಯವರೇ ,
ಬಡವರು,ಅಸಹಾಯಕರು, ದಲಿತರ ಮೇಲಿನ ಸಮಾಜದ ಕ್ರೌರ್ಯವನ್ನ ಪರಿ ಪರಿಯಾಗಿ ಪರಿಚಯಿಸಿದ್ದಕ್ಕೆ ಅನಂತ ಧನ್ಯವಾದಗಳು.
ಇಂತಹ ಅಘೋರ ಹೇಯ ಕೃತ್ಯವನ್ನ ಎಲ್ಲಿಯೂ ಕೇಳಿಲ್ಲ ಹಾಗು ಕಂಡಿಲ್ಲ
ಇಂತಹ ಸಾಮಾಜಿಕ ದುರಂತಗಳನ್ನು ಅನುಭವಿಸಿಯೂ ಮುಂದೆ ಬಂದ ನೀವೊಬ್ಬ ಮಹಾತ್ಮರು
ನಿಮ್ಮ ತಾಯಿಯಯವರು ಮೇಲಿಂದ ನಿಮ್ಮ ಬಗ್ಗೆ ನಿಸಂಶಯವಾಗಿಯೂ ಹೆಮ್ಮೆ ಪಡುತ್ತಿರುತ್ತಾರೆ
ನಿಮ್ಮ ಕೃತಿಯನ್ನು ಪುಸ್ತಕ ರೂಪದಲ್ಲಿ ತನ್ನಿ. ನಿಜಕ್ಕೂ ಸಾಹಿತ್ಯ ಅಕಾಡೆಮಿ ಪ್ರಶ್ಶಸ್ತಿಗೆ ಅರ್ಹವಾದ ಲೇಖನಗಳು
ಈ ಸಮಾಜಕ್ಕೆ ಸ್ವಲ್ಪ ಲಜ್ಜೆ ಬರಿಸಿ. ಬಾಯಿಯಲ್ಲಿ ಚಪ್ಪಲಿ ಇಡುವ ಜನರ ಮೆದುಳಿಗೆ ಸ್ವಲ್ಪ ವಿದ್ಯುತ್ ಸ್ಪರ್ಶೆ ಮಾಡಿಸಿ.
ಜೈ ಭೀಮ್
ಸತೀಶ್
ವಂದನೆಗಳು.ಬರಹ ಮನುಷ್ಯರ ಹಿಂಸೆಯ
ಕಡಿಮೆ ಮಾಡಬಲ್ಲದು.