ನೇತಿ ನೇತಿ

ನನಗೆ ಗೊತ್ತು
ನಮಗೆ ಇತಿಹಾಸವಿಲ್ಲ
ನೆನಪುಗಳಿವೆ
ಕಟ್ಟಲು ಹೊರಟಾಗಲೆಲ್ಲ
ಅದು ನದಿ
ಹರಿಯುತ್ತಾ ಹರಿಯುತ್ತಾ
ಮೀರುತ್ತದೆ ಸೀಮೆಗಳ
ಉಳಿಯುತ್ತದೆ ಜುಳು ಜುಳು ಜುಳು
ನದಿಯ ನಡಿಗೆಯ ಸದ್ದು
ಕಟ್ಟಿಕೊಳ್ಳುತ್ತದೆ ನೆನಪು ಮತ್ತೆ
ನೀನು ಬಯಲಲ್ಲಿ ನಿಂತು
ಉಟ್ಟ ಬಟ್ಟೆಯ ಕಿತ್ತೆಸೆದು
ಎದೆಯಲ್ಲಿ ಕೆತ್ತಿದ ಅಕ್ಷರವ ಕಾಣಿಸುತ್ತಿ
‘ನೇತಿ ನೇತಿ’

ನಿನಗೆ ಹಚ್ಚೆಯ ಮೋಹ
ನಿನ್ನೆದೆಯ ದೈತ್ಯ ಮೈಯ ಮೇಲೆ
ಹಸಿರು ಬಳ್ಳಿ ಕೆಂಪು ಹೂವು
ಮೋಡ ಮಳೆ ಕಾಲ ಕೆಳಗೆ ನದಿ
ಒಂದು ಬದಿ ಸೂರ್ಯ
ಮತ್ತೊಂದು ಬದಿ ಮಳೆಬಿಲ್ಲು
‘ಹಚ್ಚೆಯಲಿ ಅದು ಅಕ್ಷಯ’
ಹೇಳುವಾಗ ಹೊಳೆವ ನಿನ್ನ ಕಣ್ಣುಗಳಲ್ಲಿ
ಸಂಭ್ರಮದ ಹಬ್ಬ
ನಾನಾಗ ಮುದ್ದಿನಿಂದ ತಬ್ಬಿ
ಬೆನ್ನ ಹಿಂದೆ ಬರೆದ ಸಾಲುಗಳ ಕಾಣುತ್ತೇನೆ
‘ಬದುಕು ಮತ್ತೆಲ್ಲೋ ಇದೆ’
ನಾನಾಗ ಮೆತ್ತಗೆ ಉಸುರುತ್ತೇನೆ
ನೇತಿ ನೇತಿ

ನಾನು ನಂಬುತ್ತೇನೆ
ನೀನು ಹೇಳುವಾಗ
‘ನಾನೇ ಕಲೆ’
ಹೌದು
‘ಕಲೆ ಒಳ್ಳೆಯದು’
‘ಕಲೆ ಬದುಕಿಸುತ್ತದೆ’
ಕವಿತೆ ಘೋಷವಾಕ್ಯಗಳ ಆಸರೆ ಪಡೆಯುವಾಗ
ಕಸಿವಿಸಿಯಾಗುತ್ತದೆ ನಿನಗೆ
ನಾನಾಗ ಕವಿತೆಯನ್ನು ಹಕ್ಕಿ ಮಾಡುತ್ತೇನೆ
ಅದು ಸೀಮೋಲ್ಲಂಘನ ಮಾಡುತ್ತಾ
ಗಡಿಗಳನ್ನು ದಾಟುತ್ತದೆ
ಗುಡಿ ಚರ್ಚು ಮಸೀದಿ ಮಿನಾರುಗಳ ಮೇಲೆ
ಹಿಕ್ಕೆ ಹಾಕುತ್ತದೆ
ರೆಕ್ಕೆಗಳನ್ನು ಪದಪಡಿಸುತ್ತಾ
ಗೂಡು ಕಟ್ಟಿ ಹಾರಿ ಹಾರಿ ಎಲ್ಲೆ ಮೀರಿ
ಯಾತನೆಗೆ ರಾಗ ಕಟ್ಟುತ್ತದೆ…
ಕನಸುಗಳು ಬೇಕು ಹುಡುಗ ಜೀವನಕ್ಕೆ…

ನಿನ್ನ ಬೈಕಿನ ಮೇಲೆ
ಬೆನ್ನಿಗೆ ಎದೆಯ ನಂಟಿಸಿ
ಈ ಶಹರದ ಗೆರೆಗಳ ಅಳಿಸಿ ಬರೆವಾಗ
ನಿನ್ನದೇ ಪದ್ಯದ ಸಾಲು ಮತ್ತೆ ಉಸುರಿದ್ದು
ನೆನಪಾಗುತ್ತದೆ
ನಾವು ನಮ್ಮದೇ ಬಿಂಬಗಳು
ನಮ್ಮದೇ ನಿಜ ಮತ್ತು ನೆರಳು
ಎಣಿಸುವಾಗೆಲ್ಲಾ
ಎದೆಯ ದನಿ ಕೂಗುತ್ತದೆ
ನೇತಿ ನೇತಿ

ನಾವು ಹೀಗೆ ಜೋಗಿ ಜಂಗಮರ ಹಾಗೆ
ಜಗವ ಸುತ್ತುವ ನಡುವೆ
ಚಾಯಿಗೋ ಅನ್ನಕ್ಕೋ
ಮುದ್ದಿಗೋ ನಿದ್ರೆಗೋ
ಕಾಮಕ್ಕೊ ಕನಸಿಗೋ
ಎಲ್ಲೋ ಒಂದು ಕಡೆಗೆ
ನಿಂತು
ಒಬ್ಬರನ್ನೊಬ್ಬರು ಕಂಡು
ಕೇಳಿಕೊಂಡಾಗ
ಹೇಳಬಹುದು ನೀನು
ಇದೇ ಪ್ರೀತಿ ಇದೇ ಪ್ರೀತಿ
ಹೇಳುತ್ತೇನೆ ನಾನಾಗ
ನೇತಿ ನೇತಿ

(ನೇತಿ ನೇತಿ – ಅದೂ ಅಲ್ಲ ಇದೂ ಅಲ್ಲ
ಉಪನಿಷತ್ತಿನಲ್ಲಿ ಇದರ ಉಲ್ಲೇಖವಿದೆ.)