ರಾಸ್ಕೋಲ್ನಿಕೋವ್ ಕ್ಯಾಪು ತೆಗೆದುಕೊಂಡ, ಚಿಂತೆ ಮಾಡುತ್ತ ರೂಮಿನಾಚೆಗೆ ದೃಷ್ಟಿ ಹಾಯಿಸಿದ. ಎಷ್ಟೋ ದಿನಗಳ ನಂತರ ಮೊದಲ ಬಾರಿಗೆ ‘ಮನಸ್ಸು ಸ್ವಸ್ಥವಾಗಿದೆ,’ ಅನ್ನಿಸುತಿತ್ತು. ‘ಏನು ಆಗತ್ತೋ ಆಗಲಿ, ಸ್ವಿದ್ರಿಗೈಲೋವ್ ವಿಚಾರ ಮುಗಿಸಬೇಕು, ಎಷ್ಟು ಬೇಗ ಆಗತ್ತೋ ಅಷ್ಟು ಬೇಗ. ಅವನೂ ಕೂಡ ನನಗಾಗಿ ಕಾಯತಾ ಇದಾನೆ ಅನಿಸತ್ತೆ,’ ಅಂದುಕೊಂಡ. ಆ ಕ್ಷಣದಲ್ಲಿ, ಅವನ ದಣಿದ ಮನಸಿನಲ್ಲಿ ಎಷ್ಟು ದ್ವೇಷ ಹುಟ್ಟಿತೆಂದರೆ ಸ್ವಿದ್ರಿಗೈಲೋವ್ ಅಥವಾ ಪೋರ್ಫಿರಿ ಇಬ್ಬರಲ್ಲಿ ಒಬ್ಬರನ್ನಾದರೂ ಕೊಲ್ಲಬೇಕು ಅನಿಸಿತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

ಭಾಗ ಆರು: ಒಂದನೆಯ ಅಧ್ಯಾಯ

ರಾಸ್ಕೋಲ್ನಿಕೋವ್‌ನ ಮಟ್ಟಿಗೆ ಕಾಲಗತಿ ವಿಚಿತ್ರವಾಗಿತ್ತು. ಕಾವಳ ಕವಿದುಕೊಂಡ ಹಾಗೆ, ತಪ್ಪಿಸಿಕೊಳ್ಳಲಾಗದ ನಿರುತ್ಸಾಹ ಆವರಿಸಿಕೊಂಡ ಹಾಗೆ ಅವನಿಗೆ ಅನ್ನಿಸುತ್ತಿತ್ತು. ಬಹಳ ದಿನಗಳ ನಂತರ ರಾಸ್ಕೋಲ್ನಿಕೋವ್ ಈ ದಿನಗಳನ್ನು ನೆನೆದುಕೊಂಡಾಗ ‘ಆಗ ನನ್ನ ಪ್ರಜ್ಞೆಗೆ ಮಂಕು ಕವಿದಿತ್ತು, ನಡುನಡುವೆ ಆಗಾಗ ಮಂಕು ಚೆದುರಿದರೂ ಮಹಾ ಆಪತ್ತು ಸಂಭವಿಸಿದ ಕೊನೆಯ ಗಳಿಗೆಯವರೆಗೆ ಆ ಮಂಕು ಹಾಗೇ ಇತ್ತು,’ ಅನ್ನಿಸುತ್ತಿತ್ತು. ಆ ಕಾಲದಲ್ಲಿ ತಾನು ಅನೇಕ ಸಂಗತಿಗಳ ಬಗ್ಗೆ, ಉದಾಹರಣೆಗೆ, ಕೆಲವು ಘಟನೆಗಳು ಯಾವ ಕ್ರಮದಲ್ಲಿ ಎಷ್ಟು ಕಾಲ ನಡೆದವು ಅನ್ನುವ ಬಗ್ಗೆ, ತಪ್ಪು ತಿಳಿದಿದ್ದೆ ಅನ್ನುವ ಭಾವನೆ ಅವನಲ್ಲಿ ಗಟ್ಟಿಯಾಗಿತ್ತು. ಆನಂತರದ ಕಾಲದಲ್ಲಿ, ತನಗೆ ನೆನಪಿರುವುದನ್ನೆಲ್ಲ ಸರಿಯಾಗಿ ಹೊಂದಿಸಿಕೊಳ್ಳಲು ಪ್ರಯತ್ನಪಡುತ್ತ ರಾಸ್ಕೋಲ್ನಿಕೋವ್ ತನ್ನ ಬಗ್ಗೆ ತಾನೇ ಬಹಳಷ್ಟು ತಿಳಿದುಕೊಂಡ. ಬೇರೆಯವರಿಂದ ಸಿಕ್ಕ ಮಾಹಿತಿಯೂ ಇದಕ್ಕೆ ಸಹಾಯಮಾಡಿತ್ತು.

ಉದಾಹರಣೆಗೆ, ಒಂದು ಘಟನೆಯನ್ನು ಮತ್ತೊಂದು ಘಟನೆ ಎಂದು ಗೊಂದಲ ಮಾಡಿಕೊಳ್ಳುತ್ತಿದ್ದ, ನಡೆದ ಯಾವುದೋ ಘಟನೆಯನ್ನು ಕೇವಲ ತನ್ನ ಕಲ್ಪನೆ ಮಾತ್ರವಾಗಿದ್ದ ಮತ್ತೆ ಇನ್ಯಾವುದೋ ಘಟನೆಯ ಪರಿಣಾಮ ಎಂದು ತಿಳಿಯುತ್ತಿದ್ದ. ಕೆಲವು ಬಾರಿ ನೋವು ಕೊಡುವ ಕಳವಳ ಹುಟ್ಟುತಿತ್ತು, ಕೆಲವು ಬಾರಿ ಹೆದರಿ ದಿಕ್ಕು ತೋಚದ ಹಾಗಾಗುತ್ತಿತ್ತು. ಆದರೂ ಎಷ್ಟೋ ಗಳಿಗೆ, ಗಂಟೆ, ದಿನಗಳು ಕೂಡ ಜಡನಾಗಿ ಇರುತ್ತಿದ್ದೆ ಅನ್ನುವುದು ನೆನಪಾಗುತ್ತಿತ್ತು. ಮೊದಲಿದ್ದ ಭಯಕ್ಕೆ ವಿರುದ್ಧವಾಗಿ ಇಂಥ ಸೊನ್ನೆ ಭಾವ ಹುಟ್ಟುತಿತ್ತು-ಸಾಯುತ್ತಿರುವಾಗ ಕೆಲವರು ಅನುಭವಿಸುವಂಥ ರೋಗಗ್ರಸ್ತ ಜಡ ಉದಾಸೀನ ಭಾವ ಅದು. ಒಟ್ಟಾಗಿ ಹೇಳಬೇಕೆಂದರೆ ಈ ಕೊನೆಯ ದಿನಗಳಲ್ಲಿ ಅವನು ತನ್ನ ಪರಿಸ್ಥಿತಿಯನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಒಲ್ಲದೆ ಅರಿವಿನಿಂದ ಪಲಾಯನ ಮಾಡಲು ಬಯಸುತ್ತಿದ್ದ: ವಿಶೇಷವಾಗಿ ತತ್‍ ಕ್ಷಣದಲ್ಲಿ ಗಮನ ಕೊಡಬೇಕಾದ ಮುಖ್ಯ ಸಂಗತಿಗಳು ಅವನಿಗೆ ಹೊರೆ ಅನಿಸುತ್ತಿದ್ದವು. ಕೆಲವು ಜವಾಬ್ದಾರಿಗಳಿಂದ ದೂರ ಓಡಬೇಕು, ಕೆಲವು ಸಂಗತಿಗಳನ್ನು ಮರೆಯಬೇಕು ಅನಿಸುತ್ತಿತ್ತು. ಹಾಗೆ ಮಾಡಲು ಆಗಿದ್ದಿದ್ದರೆ ಅವನು ಸರ್ವನಾಶವಾಗುತ್ತಿದ್ದ.

ಸ್ವಿದ್ರಿಗೈಲೋವ್ ಬಗ್ಗೆ ಆತಂಕವಿತ್ತು, ಕಳವಳವಿತ್ತು. ಅವನನ್ನು ಬಿಟ್ಟು ಬೇರೆ ಏನೂ ಯೋಚನೆ ಮಾಡಲಾಗದ ಸ್ಥಿತಿಯಲ್ಲಿದ್ದ ಅಂತಲೂ ಹೇಳಬಹುದು. ಕ್ಯಾತರೀನಳ ಸಾವಿನ ಸಂದರ್ಭದಲ್ಲಿ, ಸೋನ್ಯಾಳ ಕೋಣೆಯಲ್ಲಿ ಸ್ವಿದ್ರಿಗೈಲೋವ್ ಆಡಿದ ಹೆದರಿಕೆ ಹುಟ್ಟಿಸುವಂಥ ಮಾತು ಕೇಳಿದ ಮೇಲೆ ರಾಸ್ಕೋಲ್ನಿಕೋವ್‌ನ ಆಲೋಚನೆಗಳಿಗೆ ಭಂಗ ಬಂದ ಹಾಗಿತ್ತು. ಯಾಕೆ ಹಾಗೆ ಮಾತಾಡಿದ ಅನ್ನುವ ವಿವರಣೆ ಬೇಕು ಅನಿಸಿದರೂ ಅದನ್ನು ತಿಳಿಯಲು ಮನಸಾಗುತ್ತಿರಲಿಲ್ಲ ರಾಸ್ಕೋಲ್ನಿಕೋವ್‌ಗೆ. ಅವನು ಒಂದೊಂದು ಸಾರಿ ಸುಮ್ಮನೆ ಅಲೆಯುತ್ತ, ಊರಿನ ಯಾವುದೋ ಜಾಗಕ್ಕೆ ಹೋಗಿ, ಅಲ್ಲಿನ ಯಾವುದೋ ದರಿದ್ರ ಹೆಂಡದಂಗಡಿಯಲ್ಲಿ ಒಬ್ಬನೇ ಕೂತು, ಹೇಗೆ ಇಲ್ಲಿಗೆ ಬಂದೆ ಅನ್ನುವ ನೆನಪು ಕೂಡ ಇಲ್ಲದೆ ಸುಮ್ಮನೆ ಯೋಚನೆ ಮಾಡುತ್ತಿರುವಾಗ ಸ್ವಿದ್ರಿಗೈಲೋವ್‌ನ ನೆನಪು ತಟ್ಟನೆ ಬಂದು ಕಾಡುತ್ತಿತ್ತು. ಸಾಧ್ಯವಾದಷ್ಟೂ ಬೇಗ ಈ ಮನುಷ್ಯನ ಜೊತೆ ಒಪ್ಪಂದ ಮಾಡಿಕೊಳ್ಳಬೇಕು, ಕೊನೆಯ ತೀರ್ಮಾನ ಮಾಡಿ ಮುಗಿಸಬೇಕು ಅನ್ನುವ ಸ್ಪಷ್ಟವಾದ ಎಚ್ಚರವೂ ಹುಟ್ಟುತ್ತಿತ್ತು.

ಒಂದು ಸಾರಿ, ಊರು ದಾಟಿ ಹೊರಗೆ ಬಂದುಬಿಟ್ಟಿದ್ದ. ಸ್ವಡ್ರಿಗೈಲೋವ್‌ನ ಜೊತೆಗೆ ಇಲ್ಲಿ ಭೇಟಿ ನಿಗದಿಯಾಗಿದೆ, ಇಲ್ಲೇ ಕಾಯಬೇಕು ಅನ್ನಿಸುವುದಕ್ಕೆ ಶುರುವಾಗಿತ್ತು. ಇನ್ನೊಂದು ಸಾರಿ, ಬೆಳಗಿನ ಜಾವ ಎಚ್ಚರವಾದಾಗ ಅವನೆಲ್ಲೋ ಇದ್ದ, ಸುತ್ತಲೂ ಪೊದೆಗಳಿದ್ದವು, ಹೇಗೆ ಬಂದೆ ಇಲ್ಲಿಗೆ ಅನ್ನುವುದೇ ತಿಳಿಯಲಿಲ್ಲ. ಹಾಗಿದ್ದರೂ, ಕ್ಯಾತರೀನಾ ಸತ್ತ ಮೊದಲ ಒಂದೆರಡು ದಿನಗಳಲ್ಲಿ ಅವನು ಸ್ವಿದ್ರಿಗೈಲೋವ್‌ನನ್ನು ಹಲವು ಬಾರಿ ಭೇಟಿಯಾಗಿದ್ದ. ಆ ಎಲ್ಲ ಭೇಟಿಗಳೂ ಸೋನ್ಯಾ ಕೋಣೆಯಲ್ಲೇ ಆಗಿದ್ದವು, ಪ್ರತಿ ಬಾರಿಯೂ ನಿರುದ್ದಿಶ್ಯವಾಗಿ ಅನ್ನಿಸುವಂತೆ ಒಂದೇ ನಿಮಿಷ ಅನ್ನುತ್ತಲೇ ಸ್ವಿದ್ರಿಗೈಲೋವ್ ಒಳಕ್ಕೆ ಬಂದಿರುತ್ತಿದ್ದ. ಪ್ರತಿ ಬಾರಿಯೂ ಸುಮ್ಮನೆ ಒಂದೆರಡು ಮಾತು ಆಡುತ್ತಿದ್ದರೂ ಆಡಬೇಕಾದ ಮುಖ್ಯ ವಿಷಯ ಪ್ರಸ್ತಾಪವೇ ಆಗುತ್ತಿರಲಿಲ್ಲ, ಸದ್ಯಕ್ಕೆ ಆ ವಿಚಾರ ಬೇಡ ಎಂದು ಇಬ್ಬರೂ ತೀರ್ಮಾನಮಾಡಿದ ಹಾಗೆ ಇರುತ್ತಿತ್ತು.

ಕ್ಯಾತರೀನಳ ದೇಹ ಇನ್ನೂ ಶವಪೆಟ್ಟಿಗೆಯಲ್ಲಿರುವಾಗಲೇ ಸ್ವಿದ್ರಿಗೈಲೋವ್ ಅಂತ್ಯ ಸಂಸ್ಕಾರದ ಜವಾಬ್ದಾರಿ ತಾನೇ ವಹಿಸಿಕೊಂಡು ಓಡಾಡುತ್ತಿದ್ದ. ಸೋನ್ಯಾ ಕೂಡ ಬ್ಯುಸಿಯಾಗಿದ್ದಳು. ಕೊನೆಯ ಬಾರಿ ಸ್ವಿದ್ರಿಗೈಲೋವ್‌ನನ್ನು ಕಂಡಾಗ—ಕ್ಯಾತರೀನಳ ಮಕ್ಕಳೆಲ್ಲರ ವಿಚಾರ ಇತ್ಯರ್ಥವಾಗಿದೆ, ತನಗೆ ಇರುವ ಸಂಪರ್ಕ, ಜನಬಳಕೆಯ ಕಾರಣದಿಂದ ಮಕ್ಕಳನ್ನು ಒಳ್ಳೆಯ ಅನಾಥಾಲಯಕ್ಕೆ ಸೇರಿಸಲು ಸಾಧ್ಯವಾಗಿದೆ, ಅವರಿಗಾಗಿ ಎತ್ತಿಟ್ಟಿರುವ ಹಣದಿಂದ ಕೆಲಸ ಸುಲಭವಾಯಿತು, ಬಂಡವಾಳ ಇರುವ ಅನಾಥರಿಗೆ ಸಿಗುವಂಥ ಪೋಷಣೆ ದುಡ್ಡಿರದ ಅನಾಥ ಮಕ್ಕಳಿಗೆ ಸಿಗದು ಎಂದು ರಾಸ್ಕೋಲ್ನಿಕೋವ್‌ಗೆ ಹೇಳಿದ್ದ. ಹಾಗೆಯೇ-ಇನ್ನೊಂದೆರಡು ದಿನಗಳಲ್ಲಿ ಏನೋ ಸಲಹೆ ಕೇಳುವುದಕ್ಕೆ ಸೋನ್ಯಾ ರಾಸ್ಕೋಲ್ನಿಕೋವ್‌ನನ್ನು ಭೇಟಿ ಮಾಡುತ್ತಾಳೆ ಅಂದಿದ್ದ. ‘ಕೆಲವು ವಿಚಾರಗಳಲ್ಲಿ ನಿನ್ನ ಸಲಹೆ ಬೇಕಾಗಿದೆ, ಕೆಲವು ವಿಚಾರ ನಿನ್ನ ಜೊತೆ ಮಾತಾಡಲೇಬೇಕಾಗಿದೆ…’ ಅಂತಲೂ ಅಂದಿದ್ದ. ಈ ಮಾತು ನಡೆದದ್ದು ಸೋನ್ಯಾಳ ಮನೆಯ ಮೆಟ್ಟಿಲು ಏರಿದ ಮೇಲೆ ಸಿಗುವ ಕಾರಿಡಾರಿನಲ್ಲಿ. ಸ್ವಿದ್ರಿಗೈಲೋವ್ ರಾಸ್ಕೋಲ್ನಿಕೋವ್‌ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ, ಸ್ವಲ್ಪ ಹೊತ್ತು ಸುಮ್ಮನಿದ್ದು, ಆಮೇಲೆ ತಗ್ಗಿದ ದನಿಯಲ್ಲಿ ಕೇಳಿದ್ದ,

‘ಏನಿದು ರೋಡಿಯಾನ್ ರೊಮಾನ್ಯಿಚ್? ಯಾಕೆ ಹೀಗಿದ್ದೀಯ? ನೀನು ನೀನಾಗಿಲ್ಲವಲ್ಲಾ! ನೀನು ನೋಡತೀಯ, ಕೇಳಿಸಿಕೊಳ್ಳತೀಯ, ಆದರೆ ನಿನಗೆ ಏನೂ ಅರ್ಥವಾಗಲ್ಲ ಅನಿಸತ್ತೆ. ಖುಷಿಯಾಗಿರಬೇಕು ನೀನು. ನಾವು ಮಾತಾಡಣ. ಬೇರೆ ಏನೇನೋ ಕೆಲಸದಲ್ಲಿ ಮಾತಾಡಕ್ಕೆ ಆಗಲೇ ಇಲ್ಲ… ನನ್ನದೇ ಕೆಲಸ, ಬೇರೇವರ ಕೆಲಸ ಹೀಗೇ… ಹ್ಞಾ, ರೋಡಿಯಾನ್ ರೊಮ್ಯಾನ್ಯಿಚ್ ಎಲ್ಲರಿಗೂ ಸ್ವಚ್ಛವಾದ ಗಾಳಿ ಬೇಕು, ಸ್ಚಚ್ಛವಾದ ಗಾಳಿ. ಅದೇ ಮುಖ್ಯ!’

ತಟ್ಟನೆ ಪಕ್ಕಕ್ಕೆ ಸರಿದ. ಮೆಟ್ಟಿಲು ಹತ್ತಿ ಬರುತ್ತಿದ್ದ ಪಾದ್ರಿಗೂ ಡೀಕನ್‌ಗೂ ಮುಂದೆ ಹೋಗಲು ಜಾಗ ಮಾಡಿಕೊಟ್ಟ.. ಸಂಸ್ಕಾರದ ಆಚರಣೆಗಳನ್ನು ನಡೆಸಿಕೊಡುವುದಕ್ಕೆ ಅವರು ಬಂದಿದ್ದರು. ಸ್ವಿದ್ರಿಗೈಲೋವ್ ಆರ್ಡರು ಮಾಡಿದ್ದರಿಂದ ಮೆಮೊರಿಯಲ್ ಸರ್ವಿಸಿಗೆ ದಿನಕ್ಕೆರಡು ಸಾರಿ ಬರುತ್ತಿದ್ದರು. ಸ್ವಿದ್ರಿಗೈಲೋವ್ ಹೊರಟು ಹೋದ, ರಾಸ್ಕೋಲ್ನಿಕೋವ್ ಅಲ್ಲೇ ಇದ್ದು, ಆಮೇಲೆ ಪಾದ್ರಿಯ ಹಿಂದೆ ಸೋನ್ಯಾ ಕೋಣೆಗೆ ಹೋದ. ಬಾಗಿಲಲ್ಲಿ ನಿಂತ. ಶಾಂತವಾಗಿ, ವಿದ್ಯುಕ್ತವಾಗಿ, ದುಃಖಪೂರ್ಣವಾಗಿ ಆಚರಣೆ ಶುರುವಾಯಿತು. ಸಾವಿನ ವಿಚಾರ, ಸಾವು ಇದೆ ಅನ್ನುವ ಅರಿವು ಚಿಕ್ಕಂದಿನಿಂದಲೂ ಅವನಲ್ಲಿ ನಿಗೂಢವಾದ ಭಯದ ಭಾವವನ್ನು ತರುತ್ತಿತ್ತು. ಅಲ್ಲದೆ ಸತ್ತವರ ನೆನಪಿಗೆ ನಡೆಸುವ ಆಚರಣೆಯಲ್ಲಿ ಹೇಳುವ ಪ್ರಾರ್ಥನೆಗಳನ್ನು ಕೇಳಿ ಬಹಳ ಕಾಲವಾಗಿತ್ತು. ಅಷ್ಟೇ ಅಲ್ಲ, ಭಯಂಕರವಾದದ್ದು. ನೆಮ್ಮದಿ ಕೆಡಿಸುವಂಥದ್ದು ಇನ್ನೇನೋ ಇತ್ತು ಇಲ್ಲಿ. ಮಕ್ಕಳನ್ನು ನೋಡಿದ. ಅವರೆಲ್ಲ ಶವಪೆಟ್ಟಿಗೆಯ ಹತ್ತಿರ ಮೊಳಕಾಲೂರಿ ಕೂತಿದ್ದರು. ಪೋಲೆಚ್ಕ ಅಂಜುತ್ತ, ಮೆಲ್ಲಗೆ ಅಳುತ್ತ ಅವನ ಹಿಂದೆ ನಿಂತಿದ್ದಳು. ಸೋನ್ಯಾ ಪ್ರಾರ್ಥನೆ ಮಾಡುತ್ತಿದ್ದಳು. ‘ಇತ್ತೀಚೆಗೆ ಅವಳು ನನ್ನ ಕಡೆ ನೋಡಿಲ್ಲ, ನನ್ನ ಜೊತೆ ಒಂದೂ ಮಾತಾಡಿಲ್ಲ,’ ಅನ್ನುವುದು ತಟ್ಟನೆ ಅವನ ಮನಸಿಗೆ ಬಂದಿತ್ತು. ರೂಮಿನೊಳಗೆ ಬಿಸಿಲು ಬಿದ್ದಿತ್ತು. ಗಂಧದ ಕಡ್ಡಿಗಳಿಂದ ಹೊಗೆ ಮೋಡಗಳ ಹಾಗೆ ಮೇಲೇಳುತ್ತಿತ್ತು. ಪಾದ್ರಿ ಓದುತ್ತಿದ್ದ—‘ಆತ್ಮಕ್ಕೆ ಶಾಂತಿ ಕೊಡು ದೇವರೇ…’ ಇಡೀ ಆಚರಣೆ ಮುಗಿಯುವವರೆಗೆ ರಾಸ್ಕೋಲ್ನಿಕೋವ್ ನಿಂತಿದ್ದ.

ಪಾದ್ರಿ ಆಶೀರ್ವಾದ ಮಾಡಿ ಹೊರಟ. ಹೋಗುವಾಗ ವಿಚಿತ್ರವಾಗಿ ಸುತ್ತಲೂ ನೋಡಿದ. ರಾಸ್ಕೋಲ್ನಿಕೋವ್ ಸೋನ್ಯಾಳ ಹತ್ತಿರ ಹೋದ. ಅವಳು ಇದ್ದಕಿದ್ದ ಹಾಗೆ ಅವನ ಎರಡೂ ಕೈ ಹಿಡಿದುಕೊಂಡು ತನ್ನ ತಲೆಯನ್ನು ಅವನ ಭುಜದ ಮೇಲೆ ಒರಿಸಿದಳು. ಈ ಪುಟ್ಟ ಭಾವನಾತ್ಮಕ ಕ್ರಿಯೆಯಿಂದ ರಾಸ್ಕೋಲ್ನಿಕೋವ್‌ಗೆ ಗೊಂದಲ ಹುಟ್ಟಿತು. ಇದು ವಿಚಿತ್ರ ಅನಿಸಿತು. ಒಂದಿಷ್ಟೂ ಅಸಹ್ಯ ಇಲ್ಲವೇ ನನ್ನ ಬಗ್ಗೆ? ಒಂದಿಷ್ಟೂ ಜುಗುಪ್ಸೆ ಇಲ್ಲವೇ? ಅವಳ ಕೈ ಒಂದಿಷ್ಟೂ ಕಂಪಿಸಲಿಲ್ಲವಲ್ಲಾ? ಇದೊಂದು ಥರ ಅಪರಿಮಿತವಾದ ನಮ್ರತೆ, ದೈನ್ಯ. ಹೀಗೆ ಅವನು ಅರ್ಥಮಾಡಿಕೊಂಡ. ಸೋನ್ಯಾ ಏನೂ ಹೇಳಲಿಲ್ಲ. ರಾಸ್ಕೋಲ್ನಿಕೋವ್ ಅವಳ ಕೈ ಒತ್ತಿ ಹೊರಕ್ಕೆ ನಡೆದ. ಮನಸ್ಸು ಭಾರವಾಗಿತ್ತು, ಕುಗ್ಗಿ ಹೋಗಿತ್ತು. ಈ ಕ್ಷಣದಲ್ಲಿ ಎಲ್ಲಿಗಾದರೂ ಹೋಗುವುದಕ್ಕಾದರೆ, ಜೀವಮಾನ ಪರ್ಯಂತ ಏಕಾಂಗಿಯಾಗಿದ್ದುಬಿಡುವುದಕ್ಕೆ ಸಾಧ್ಯವಾದರೆ ಅದಕ್ಕಿಂತ ಸುಖ ಬೇರಿಲ್ಲ ಅಂದುಕೊಂಡ. ಆದರೆ, ಏನೆಂದರೆ, ಇತ್ತೀಚೆಗೆ ಅವನು ಯಾವಾಗಲೂ ಒಂಟಿಯಾಗೇ ಇರುತ್ತಿದ್ದರೂ ನಾನು ಒಬ್ಬನೇ ಇದ್ದೇನೆ ಅನ್ನಿಸುತ್ತಿರಲಿಲ್ಲ.

ಒಂದು ಸಾರಿ ಏನಾಯಿತೆಂದರೆ ಊರಾಚೆಗೆ ನಡೆದ, ಪುಟ್ಟ ಕಾಡಿದೆಯಲ್ಲ ಅಲ್ಲಿಯವರೆಗೂ.. ಜಾಗ ನಿರ್ಜನವಾದಷ್ಟೂ ಯಾರೋ ಹತ್ತಿರದಲ್ಲೇ ಇದ್ದಾರೆ ಅನಿಸುತಿತ್ತು. ಭಯವಾಗದಿದ್ದರೂ ಕಿರಿಕಿರಿಯಾಗಿ ಹಿಂಸೆಯಾಗುತ್ತಿತ್ತು. ಮತ್ತೆ ವಾಪಸ್ಸು ಸಿಟಿಗೆ ಬಂದು ಜನದ ಗುಂಪಿನಲ್ಲಿ ಸೇರಿ, ಹೋಟೆಲಿಗೋ ಹೆಂಡದಂಗಡಿಗೋ ಫ್ಲೀ ಮಾರ್ಕೆಟ್ಟಿಗೋ ಹೇಮಾರ್ಕೆಟ್ಟಿಗೋ ಹೋಗುತ್ತಿದ್ದ. ಜನಗಳ ಮಧ್ಯೆ ಇದ್ದಾಗ ಸುಲಭ ಅನಿಸುತ್ತಿತ್ತು, ಒಂಟಿ ಅನಿಸುತ್ತಿತ್ತು. ಒಂದು ಪುಟ್ಟ ಹೋಟೆಲಿನಲ್ಲಿ, ಸಂಜೆ ಹೊತ್ತಿಗೆ ಜನ ಸೇರಿ ಹಾಡು ಹೇಳುತ್ತಿದ್ದಲ್ಲಿ ಅವನು ಒಂದು ಗಂಟೆ ಹೊತ್ತು ಕೂತು ಹಾಡು ಕೇಳಿಸಿಕೊಂಡ. ಹಾಡು ಕೇಳಿ ಸಂತೋಷಪಟ್ಟೆ ಅನ್ನುವುದನ್ನೂ ಮುಂದೆ ಆಗಾಗ ನೆನೆಯುತ್ತಿದ್ದ. ಕೊನೆಕೊನೆಗೆ ಇದ್ದಕಿದ್ದ ಹಾಗೆ ಪಶ್ಚಾತ್ತಾಪ ಪೀಡಿತನಾದನೋ ಅನ್ನುವ ಹಾಗೆ ಮನಸ್ಸು ಮತ್ತೆ ಚಡಪಡಿಸಲು ಶುರುಮಾಡಿತು. ‘ಇಲ್ಲಿ ಕೂತು ಹಾಡು ಕೇಳುತ್ತಾ ಇದೇನೆ, ಇದೇ ಏನು ನಾನು ಮಾಡಬೇಕಾಗಿದ್ದ ಕೆಲಸ?’ ಅನ್ನುವ ಯೋಚನೆ ಬಂದಿತು. ತಕ್ಷಣವೇ ನನಗೆ ತೊಂದರೆ ಕೊಡುತ್ತಿರುವುದು, ಪರಿಹಾರ ಹುಡುಕಬೇಕಾಗಿರುವುದು ಇದೊಂದೇ ಅಲ್ಲ ಅನ್ನಿಸಿ, ಅದೇನು ಮಾಡಬೇಕಾದದ್ದು ಅನ್ನುವುದನ್ನು ಮಾತಿನಲ್ಲಿ ಹಿಡಿದು ಅರ್ಥಮಾಡಿಕೊಳ್ಳುವುದಕ್ಕೆ ಆಗದ ಹಾಗೆ ಎಲ್ಲಾ ಯೋಚನೆಗಳು ಒಟ್ಟಿಗೆ ಉಂಡೆ ಸುತ್ತಿಕೊಂಡಿರುತ್ತಿದ್ದವು. ‘ಹೀಗಿರುವುದಕ್ಕಿಂತ ಬಡಿದಾಡುವುದು ವಾಸಿ! ಮತ್ತೆ ಪೋರ್ಫಿರಿಯನ್ನೋ ಅಥವಾ ಸ್ವಿದ್ರಿಗೈಲೋವ್‌ನನ್ನೋ ಎದುರಿಸುವುದು ವಾಸಿ. ಸವಾಲು ಹಾಕುವವರು ಯಾರಾದರೂ ಬೇಕು, ಮೇಲೆ ಎರಗಿ ಬೀಳುವವರು ಬೇಕು…. ಹೌದು, ಹೌದು!’ ಅಂದುಕೊಂಡ. ಹೋಟೆಲಿನಿಂದ ಹೊರಟವನೇ ಜೋರಾಗಿ ಓಡಿದ.

ಇದ್ದಕಿದ್ದ ಹಾಗೆ ಯಾಕೋ ದುನ್ಯಾಳ ನೆನಪು, ತಾಯಿಯ ನೆನಪು ಬಂದು ಅವನ ಮನಸಿನ ತುಂಬ ಭೀತಿ, ಭಯ ತುಂಬಿದವು. ಆ ದಿನ ರಾತ್ರಿಯೇ ಅವನು ಕ್ರೆಸ್ಟೋವ್ಸ್ಕಿ ದ್ವೀಪದಲ್ಲಿ ಪೊದೆಗಳ ಮಧ್ಯೆ ಮಲಗಿದವನು ಎಚ್ಚರಗೊಂಡದ್ದು ಬೆಳಗಿನ ಜಾವಕ್ಕೆ. ಜ್ವರ ಬಂದಿತ್ತು, ಬೆಳಕು ಹರಿಯುವ ಹೊತ್ತಿಗೆ ಮನೆಗೆ ಬಂದಿದ್ದ. ಕೆಲವು ಗಂಟೆಗಳ ಕಾಲ ನಿದ್ದೆಮಾಡಿದ, ಎಚ್ಚರವಾದಾಗ ಜ್ವರ ಬಿಟ್ಟಿತ್ತು. ಆಗಲೇ ಮಧ್ಯಾಹ್ನ ಎರಡು ಗಂಟೆಯಾಗಿತ್ತು.

ಕ್ಯಾತರೀನಳ ಅಂತ್ಯವಿಧಿ ಇವತ್ತು ಅನ್ನುವುದು ನೆನಪಿಗೆ ಬಂದಿತ್ತು. ಸದ್ಯ ಹೋಗಲಿಲ್ಲ ನಾನು ಅನ್ನುವ ಸಮಾಧಾನ ಹುಟ್ಟಿತು. ನಸ್ತಾಸ್ಯ ತಿನ್ನುವುದಕ್ಕೆ ಕುಡಿಯುವುದಕ್ಕೆ ತಂದಳು. ಹಸಿವಾಗಿತ್ತು. ಆತುರವಾಗಿ ತಿಂದ. ಲವಲವಿಕೆ ಮೂಡಿತು. ಕಳೆದ ಮೂರು ದಿನಗಳಲ್ಲಿ ಎಂದೂ ಇರದಂಥ ಶಾಂತಿಯೂ ಇತ್ತು. ಈ ಮೊದಲು ಮನಸನ್ನು ತುಂಬಿದ್ದ ಭಯ ಭೀತಿಯ ಉಬ್ಬರದ ಬಗ್ಗೆ ಕ್ಷಣ ಕಾಲ ಆಶ್ಚರ್ಯಪಟ್ಟ. ಬಾಗಿಲು ತೆರೆದುಕೊಂಡಿತು. ರಝುಮಿಖಿನ್ ಒಳಬಂದ.

‘ಆಹಾ! ಊಟ ಮಾಡತಿದಾನೆ! ಅಂದರೆ ಕಾಯಿಲೆ ಇಲ್ಲ!’ ರಾಸ್ಕೋಲ್ನಿಕೋವ್‌ನ ಎದುರಿಗೆ ಕುರ್ಚಿಯ ಮೇಲೆ ಕೂರುತ್ತ ಅಂದ ರಝುಮಿಖಿನ್. ಅವನ ಮನಸ್ಸು ಚೆನ್ನಾಗಿರಲಿಲ್ಲ, ಅದನ್ನು ಬಚ್ಚಿಡುವ ಪ್ರಯತ್ನವನ್ನೂ ಮಾಡಲಿಲ್ಲ ಅವನು. ರೇಗಿಕೊಂಡೇ ಮಾತಾಡಿದರೂ ಆತುರವಿರಲಿಲ್ಲ, ದನಿ ಏರಿಸಲಿಲ್ಲ. ಅದನ್ನು ನೋಡಿದರೆ ಅವನ ಮನಸಿನಲ್ಲಿ ವಿಶೇಷವಾದ ಏನೋ ಉದ್ದೇಶ ಇದೆ ಅನಿಸುತ್ತಿತ್ತು. ಮಾತು ದೃಢವಾಗಿತ್ತು: ‘ಕೇಳು, ನಿಮ್ಮನ್ನೆಲ್ಲ ದೆವ್ವ ಹಿಡಿದರೂ ನನಗೇನೂ ಆಗಬೇಕಾಗಿಲ್ಲ. ನನ್ನ ಕಣ್ಣೆದುರಿಗೆ ಕಾಣತಾ ಇರೋದನ್ನ ನೋಡಿದರೆ ನನಗೇನೂ, ಏನೇನೂ ಅರ್ಥ ಆಗತಿಲ್ಲ. ನಿನ್ನ ವಿಚಾರಣೆ ಮಾಡಕ್ಕೆ ಬಂದಿದೀನಿ ಅಂತ ದಯವಿಟ್ಟು ಅಂದುಕೊಳ್ಳಬೇಡ. ನಿನ್ನ ವಿಚಾರಣೆ ಮಾಡಿ, ಥೂ, ನನಗೇನಾಗಬೇಕು. ನೀನು ಬಚ್ಚಿಟ್ಟಿರುವ ಗುಟ್ಟೆಲ್ಲಾ ಹೇಳಿಕೊಂಡರೂ ಕೇಳಿಸಿಕೊಳ್ಳಲ್ಲ ನಾನು. ‘ಥೂ,’ ಅಂದು ಎದ್ದು ಹೋಗತೇನೆ. ಕೊನೇದಾಗಿ ಒಂದು ವಿಷಯ ತಿಳಿಯಬೇಕಾಗಿತ್ತು, ಬಂದಿದೇನೆ. ನಿನು ಹುಚ್ಚ ಅನ್ನುವುದು ನಿಜವಾ? ನೋಡು, ನೀನು ಹುಚ್ಚ, ಅಥವ ಇನ್ನೇನು ಹುಚ್ಚು ಹಿಡಿಯತ್ತೆ ಅಂತ ಎಲ್ಲೆಲ್ಲೋ ಯಾರು ಯಾರೋ ಅಂದುಕೊಂಡಿದಾರೆ. ನೀನು ಮಾಡುವ ಪೆದ್ದುತನದ, ಸ್ವಲ್ಪ ದುಷ್ಟತನದ, ಯಾವ ರೀತಿಯಿಂದಲೂ ವಿವರಿಸಲಾಗದ ಕೆಲಸಗಳನ್ನ ನೋಡಿದರೆ, ಇತ್ತೀಚಿಗೆ ನಿಮ್ಮ ತಾಯಿ, ನಿಮ್ಮ ತಂಗಿಯನ್ನು ನೀನು ನಡೆಸಿಕೊಳ್ಳುವ ರೀತಿ ನೋಡಿದರೆ, ಆ ಮಾತು ನನಗೂ ಅನಿಸತ್ತೆ ಆ ಮಾತು. ಹುಚ್ಚ ಅಲ್ಲದಿದ್ದರೆ ರಾಕ್ಷಸ ಅಥವ ಸ್ಕೌಂಡ್ರಲ್ ಮಾತ್ರ ನಿನ್ನ ಹಾಗೆ ನಡೆದುಕೊಳ್ಳತಾನೆ. ಹಾಗಾಗಿ ನೀನು ಹುಚ್ಚ.’

‘ಯಾವಾಗ ನೋಡಿದ್ದೆ ಅವರನ್ನ?’

‘ಇಗೋ, ಇದೇ ಈಗ ನೋಡಿಕೊಂಡು ಬರತಾ ಇದೇನೆ. ನೀನು ಅವರನ್ನ ನೋಡಿ ಯಾವ ಕಾಲ ಆಯಿತು? ಎಲ್ಲಿ ಹೋಗಿದ್ದೆ ಅಂತ ಕೇಳಬಹುದಾ? ಮೂರು ಸಾರಿ ಇಲ್ಲಿಗೆ ಬಂದು ಹೋದೆ. ನಿಮ್ಮ ತಾಯಿಗೆ ನಿನ್ನೆಯಿಂದ ಹುಷಾರಿಲ್ಲ. ಇಲ್ಲಿಗೆ ಬರಬೇಕು ಅನ್ನತಿದ್ದರು. ಅವದೋತ್ಯ ರೊಮನೋವ್ನ ತಡೆದರೂ ಕೇಳತಾ ಇರಲಿಲ್ಲ. ‘ಅವನಿಗೆ ಹುಷಾರಿಲ್ಲದೆ ಇದ್ದರೆ, ಅವನಿಗೆ ಹುಚ್ಚು ಹಿಡೀತಾ ಇದ್ದರೆ, ಅವನ ಅಮ್ಮ, ನಾನಲ್ಲದೆ ಬೇರೆ ಇನ್ನು ಯಾರು ನೋಡಿಕೊಳ್ಳಬೇಕು?’ ಅನ್ನುತಿದ್ದರು. ಅವರನ್ನ ಒಬ್ಬರನ್ನೇ ಕಳಿಸಕ್ಕೆ ಆಗಲ್ಲ ಅಂತ ನಾವೆಲ್ಲ ಒಟ್ಟಿಗೆ ಬಂದೆವು. ‘ಸಮಾಧಾನವಾಗಿರಿ,’ ಅಂತ ದಾರಿ ಉದ್ದಕ್ಕೂ, ನಿಮ್ಮನೆ ಬಾಗಿಲಿಗೆ ಬರೋವರೆಗೂ ಹೇಳತಾ ಬಂದೆವು. ಒಳಕ್ಕೆ ಬಂದು ನೋಡಿದೆವು, ನೀನಿರಲಿಲ್ಲ. ನಿಮ್ಮಮ್ಮ ಇಗೋ ಇಲ್ಲೇ ಕೂತರು. ಹತ್ತು ನಿಮಿಷ. ಒಂದೂ ಮಾತಾಡಲಿಲ್ಲ. ನಾವು ನಿಂತೇ ಇದ್ದೆವು. ಎದ್ದರು.
‘ಅವನು ಹೊರಗೆ ಹೋಗಿದಾನೆ ಅಂದರೆ, ಚೆನ್ನಾಗಿದಾನೆ. ಅದಕ್ಕೇ ಅಮ್ಮನ್ನ ಮರೆತುಬಿಟ್ಟಿದಾನೆ. ಹಾಗಿದ್ದರೆ ತಾಯಿಯಾಗಿ ನಾನು ಅವನ ಮನೆ ಬಾಗಿಲಲ್ಲಿ ನಿಂತು, ‘ನನಗೆ ಪ್ರೀತಿ ತೋರಿಸು,’ ಅಂತ ಭಿಕ್ಷೆ ಬೇಡೋ ಥರ ಕೇಳೋದು ನಾಚಿಕೆಗೇಡು,’ ಅಂದು ಹೊರಟರು. ಮನೆಗೆ ಹೋಗತಿದ್ದ ಹಾಗೆ ಅವರ ಆರೋಗ್ಯ ಕೆಟ್ಟಿತು. ಈಗ ಜ್ವರದಲ್ಲಿದಾರೆ. ‘ನೋಡು, ಅವನಿಗೆ ಹುಡುಗಿಯ ಹತ್ತಿರ ಹೋಗಕ್ಕೆ ಟೈಮಿದೆ, ನನ್ನ ಹತ್ತಿರ ಬರಕ್ಕೆ ಇಲ್ಲ,’ ಅಂತಾರೆ. ಸೋಫ್ಯಾ ನಿನ್ನ ಭಾವೀ ಪತ್ನಿಯೋ ನೀನು ಇಟ್ಟುಕೊಂಡವಳೋ, ನನಗಂತೂ ಗೊತ್ತಿಲ್ಲ, ಅವರು ಹಾಗಂದುಕೊಂಡಿದಾರೆ. ನಾನು ತಕ್ಷಣ ಸೋಫ್ಯಾ ಮನೆಗೆ ಹೋದೆ, ಯಾಕೆ ಅಂದರೆ ಬ್ರದರ್ ಎಲ್ಲ ಇತ್ಯರ್ಥ ಆಗಿ ಹೋಗಲಿ ಅಂತ. ನೋಡಿದರೆ, ಅಲ್ಲಿ ಶವಪೆಟ್ಟಿಗೆ ಇತ್ತು. ಮಕ್ಕಳು ಅಳತಾ ಇದ್ದರು. ಸೋಫ್ಯಾ ಅವರಿಗೆ ಬಟ್ಟೆ ತೊಡಿಸತಾ ಇದ್ದಳು. ನೀನು ಅಲ್ಲಿರಲಿಲ್ಲ. ಕ್ಷಮಿಸಿ ಅಂತ ಹೇಳಿ ಬಂದುಬಿಟ್ಟೆ. ಅದನ್ನ ನಿನ್ನ ತಂಗೀಗೆ ಹೇಳಿದೆ. ಅಂದರೆ ಹುಡುಗೀ ವಿಚಾರ ನಾನ್ಸೆನ್ಸ್. ಹುಚ್ಚು ಇರಬೇಕು ಅಷ್ಟೇ ಅಂದುಕೊಂಡೆ. ಇಲ್ಲಿ ಬಂದರೆ ಮೂರು ದಿನದಿಂದ ಅನ್ನದ ಮುಖ ನೋಡಿಲ್ಲ ಅನ್ನೋ ಹಾಗೆ ಗಬಗಬ ತಿನ್ನತಾ ಕೂತಿದ್ದೀಯ. ನಿಜ, ಹುಚ್ಚರೂ ಊಟ ಮಾಡತಾರೆ. ನೀನು ಹುಚ್ಚ ಅಲ್ಲ. ನನ್ನ ಜೊತೆ ಒಂದೇ ಒಂದು ಮಾತು ಆಡದಿದ್ದರೂ ನನಗೆ ಗೊತ್ತಾಗತ್ತೆ. ಬೇಕಾದರೆ ಪ್ರಮಾಣ ಮಾಡತೇನೆ. ನಿನಗೆ ಏನು ಬೇಕಾದರೂ ಆಗಿರಬಹುದು, ನಿನಗೆ ಹುಚ್ಚು ಮಾತ್ರ ಹಿಡಿದಿಲ್ಲ. ದೆವ್ವ ಹಿಡೀಲಿ ನಿಮ್ಮನ್ನೆಲ್ಲಾ! ಏನೋ ರಹಸ್ಯ ಇದೆ. ಅದೇನು ಅಂತ ತಲೆ ಚಚ್ಚಿಕೊಳ್ಳಕೆ ತಯಾರಿಲ್ಲ ನಾನು. ನನಗೆ ನೀನೂ ಬೇಡ, ನಿನ್ನ ಗುಟ್ಟೂ ಬೇಡ, ನಿನ್ನ ಬೈದು ಹೋಗಣ ಅಂತ ಬಂದೆ, ಅಷ್ಟೆ, ಏನು ಮಾಡಬೇಕೋ ನನಗಂತೂ ಗೊತ್ತಿಲ್ಲ,’ ಅನ್ನುತ್ತ ಎದ್ದು ನಿಂತ.

A hand-sketched illustration by Artist: John Thompson. Artwork: “Afghan Woman in White and Escort”. US Air Force Art Collection.

ಸೋನ್ಯಾ ಏನೂ ಹೇಳಲಿಲ್ಲ. ರಾಸ್ಕೋಲ್ನಿಕೋವ್ ಅವಳ ಕೈ ಒತ್ತಿ ಹೊರಕ್ಕೆ ನಡೆದ. ಮನಸ್ಸು ಭಾರವಾಗಿತ್ತು, ಕುಗ್ಗಿ ಹೋಗಿತ್ತು. ಈ ಕ್ಷಣದಲ್ಲಿ ಎಲ್ಲಿಗಾದರೂ ಹೋಗುವುದಕ್ಕಾದರೆ, ಜೀವಮಾನ ಪರ್ಯಂತ ಏಕಾಂಗಿಯಾಗಿದ್ದುಬಿಡುವುದಕ್ಕೆ ಸಾಧ್ಯವಾದರೆ ಅದಕ್ಕಿಂತ ಸುಖ ಬೇರಿಲ್ಲ ಅಂದುಕೊಂಡ.

‘ಏನು ಮಾಡತೀಯ?’

‘ನಾನು ಏನು ಮಾಡಿದರೆ ನಿನಗೇನು?’

‘ಹುಷಾರು, ಎಣ್ಣೆ ಹಾಕಕ್ಕೆ ಹೋಗತಾ ಇದೀಯ!’

‘ನಿನಗೆ ಹ್ಯಾಗೆ ಗೊತ್ತು?’

‘ಮತ್ತಿನ್ನೇನು?
ರಝುಮಿಖಿನ್ ಒಂದು ಕ್ಷಣ ತಡೆದ.

‘ನೀನು ಮಹಾ ವಿಚಾರವಾದಿ. ಇವತ್ತಲ್ಲ ಯಾವತ್ತೂ ಹುಚ್ಚು ಹಿಡಿದಿರಲಿಲ್ಲ ನಿನಗೆ,’ ತಟ್ಟನೆ ಪ್ರೀತಿಯಿಂದ ಹೇಳಿದ. ‘ಹೌದು, ಬಾಟಲಿ ಎತ್ತೋದಕ್ಕೇ ಹೋಗತಾ ಇದೇನೆ, ಗುಡ್ ಬೈ.’ ಹೊರಟ.

‘ರಝುಮಿಖಿನ್, ಎರಡು ದಿನದ ಹಿಂದೆ, ಅಂತ ಕಾಣತ್ತೆ, ತಂಗೀಗೆ ನಿನ್ನ ಬಗ್ಗೆ ಹೇಳತಾ ಇದ್ದೆ.’

‘ನನ್ನ ಬಗ್ಗೇನಾ! ಎರಡು ದಿನದ ಹಿಂದೇನಾ? ಎಲ್ಲಿ ನೋಡಿದೆ ಅವರನ್ನ?’ ರಝಮಿಖಿನ್ ನಿಂತ. ಮುಖ ಬಿಳಿಚಿತು. ಎದೆ ಬಡಿತ ನಿಧಾನವಾಗಿ ಟೆನ್ಸ್ ಆಗಿದ್ದು ತಿಳಿಯುತ್ತಿತ್ತು.

‘ಇಲ್ಲಿಗೆ ಬಂದಿದ್ದಳು. ಒಬ್ಬಳೇ. ಕೂತು ಮಾತಾಡಿದಳು ನನ್ನ ಜೊತೆ.’

‘ಬಂದಿದ್ದರಾ!’

‘ಹ್ಞೂಂ. ಬಂದಿದ್ದಳು.’

‘ಏನು ಹೇಳಿದೆ ನೀನು?… ಅಂದರೆ ನನ್ನ ಬಗ್ಗೆ?’

‘ನೀನು ಬಹಳ ಒಳ್ಳೆಯವನು, ಪ್ರಾಮಾಣಿಕ, ಕಷ್ಟಪಟ್ಟು ದುಡಿಯುವವನು ಅಂದೆ. ನೀನು ಅವಳನ್ನ ಪ್ರೀತಿಸತಾ ಇದೀಯ ಅಂತ ಹೇಳಲಿಲ್ಲ! ಯಾಕೆ ಅಂದರೆ ಅದು ಅವಳಿಗೆ ಗೊತ್ತು.’

‘ಹೌದಾ? ಗೊತ್ತಾ?’

‘ಮತ್ತೆ! ಗೊತ್ತಿಲ್ಲದೆ ಏನು! ನಾನು ಎಲ್ಲಿಗಾದರೂ ಹೋಗಲಿ, ನನಗೆ ಏನಾದರೂ ಆಗಲಿ ನೀನು ಮಾತ್ರ ಅವರ ಪಾಲಿನ ದೇವರಾಗೇ ಇರಬೇಕು. ಯಾಕೆ ಹೇಳಿದೆ ಅಂದರೆ, ನೀನು ಅವಳನ್ನ ಎಷ್ಟು ಪ್ರೀತಿಸುತ್ತೀಯ ಅನ್ನುವುದು ಗೊತ್ತು, ನಿನ್ನ ಮನಸು ಶುದ್ಧವಾಗಿದೆ, ಗೊತ್ತು. ಅವಳೂ ನಿನ್ನ ಪ್ರೀತಿಸತಾಳೆ, ಆಗಲೇ ಪ್ರೀತಿಸತಾ ಇದಾಳೆ ಅದೂ ಗೊತ್ತು. ಈಗ ನೀನೇ ತೀರ್ಮಾನ ಮಾಡು, ಎಣ್ಣೆ ಹಾಕಕ್ಕೆ ಹೋಗಬೇಕಾ ಬೇಡವಾ ಅಂತ.’

‘ರೋಡ್ಕಾ… ನೋಡು… ಸರಿ… ಅಯ್ಯೋ ದೆವ್ವಾ! ಎಲ್ಲಿಗೆ ಹೋಗಬೇಕು ಅಂತ ಪ್ಲಾನು ಮಾಡತಿದೀಯ? ನೋಡು, ಗುಟ್ಟು ಏನಾದರೂ ಇದ್ದರೆ ಅದರ ಪಾಡಿಗೆ ಅದು ಇದ್ದುಕೊಳ್ಳಲಿ! ಅದನ್ನ ನಾನೇ ಪತ್ತೆ ಮಾಡತೇನೆ… ಯಾವುದೋ ಚಿಲ್ಲರೆ ವಿಚಾರ ಆ ಗುಟ್ಟು ಅಂತ ಗೊತ್ತು. ನೀನೇ ಏನೋ ಮಾಡಿರತೀಯ. ಅದೇನಾದರೂ ಆಗಲಿ, ನೀನು ಮಾತ್ರ ಬಂಗಾರ, ಅಪ್ಪಟ ಬಂಗಾರದಂಥ ಮನುಷ್ಯ!’

‘ನಿನಗೆ ಹೇಳಬೇಕು ಅಂತಿದ್ದೆ. ರಹಸ್ಯ ಹಾಗೇ ಇದ್ದುಕೊಳ್ಳಲಿ ಅಂದೆಯಲ್ಲ, ಅದು ಸರಿ. ಸದ್ಯಕ್ಕೆ ಅದು ಹಾಗೇ ಇರಲಿ. ತಲೆ ಕೆಡಿಸಿಕೊಳ್ಳಬೇಡ. ನಿನಗೆ ತಿಳಿದೇ ತಿಳಿಯತ್ತೆ, ಯಾವಾಗ ತಿಳಿಯಬೇಕೋ ಆವಾಗ. ನಿನ್ನೆ ದಿನ ಯಾವನೋ ಒಬ್ಬ ನನಗೆ ಹೇಳಿದ, ‘ಗಾಳಿ ಬೇಕು, ಗಾಳಿ, ಒಳ್ಳೆಯ ಗಾಳಿ ಬೇಕು ನಿನಗೆ,’ ಅಂದ. ನಾನೀಗ ಅವನ ಹತ್ತಿರ ಹೋಗಿ ಏನು ಹಾಗಂದರೆ ಅಂತ ಕೇಳತೇನೆ.’
ರಝುಮಿಖಿನ್ ಏನೋ ಯೋಚನೆ ಮಾಡುತ್ತ, ಕಸಿವಿಸಿಪಡುತ್ತ ನಿಂತ.

‘ಈ ರಾಸ್ಕೋಲ್ನಿಕೋವ್ ರಾಜಕೀಯ ಸಂಚುಗಾರ. ಅನುಮಾನವೇ ಇಲ್ಲ. ಏನೋ ಮುಖ್ಯವಾದ ಕೆಲಸಕ್ಕೆ ಹೊರಟಿದಾನೆ.. ದುನ್ಯಾಗೆ ಗೊತ್ತಿದೆ,’ ರಝುಮಿಖಿನ್ ತನ್ನೊಳಗೇ ಅಂದುಕೊಂಡ. ‘ಹಾಗಾದರೆ ಅವದೋತ್ಯ ರೊಮಾನೊವ್ನಾ ನಿನ್ನ ನೋಡಕ್ಕೆ ಇಲ್ಲಿಗೆ ಬಂದಿದ್ದರು. ನೀನು ಹೋಗಿ ನಮಗೆ ಒಳ್ಳೆಯ ಗಾಳಿ ಬೇಕು ಅಂದ ಮನುಷ್ಯನ್ನ ನೋಡತಾ ಇದೀಯ, ಅದಕ್ಕೇ ಈ ಕಾಗದ ಕೂಡಾ. ಒಂದಕ್ಕೊಂದು ಸಂಬಂಧ ಇದೆ,’ ಅಂದ.

‘ಏನು ಕಾಗದ?’

‘ಅವರಿಗೆ ಇವತ್ತೊಂದು ಕಾಗದ ಬಂತು. ಅದನ್ನ ಓದಿ ಬಹಳ ಮನಸ್ಸು ಕೆಡಿಸಿಕೊಂಡಿದಾರೆ. ನಿನ್ನ ಬಗ್ಗೆ ಮಾತಾಡಕ್ಕೆ ಹೋದೆ. ಸುಮ್ಮನಿರಿ ಅಂದರು. ನಾವಿನ್ನ ಒಬ್ಬರನ್ನೊಬ್ಬರು ನೋಡೋದು ಕಷ್ಟ ಆಗಬಹುದು ಅಂದರು. ನನಗೆ ಯಾಕೋ ಏನೋ ಥ್ಯಾಂಕ್ಸ್ ಹೇಳಿದರು. ಆಮೇಲೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡರು.’

‘ಕಾಗದ ಬಂತಾ ಅವಳಿಗೆ?’ ರಾಸ್ಕೋಲ್ನಿಕೋವ್ ಯೋಚನೆ ಮಾಡತಾ ಕೇಳಿದ.

‘ಹ್ಞೂಂ. ಗೊತ್ತಿಲ್ಲವಾ ನಿನಗೆ?’
ಇಬ್ಬರೂ ಸ್ವಲ್ಪ ಹೊತ್ತು ಸುಮ್ಮನೆ ಇದ್ದರು.

‘ಗುಡ್ ಬೈ, ರೋಡಿಯಾನ್… ನಾನು… ಒಂದು ಕಾಲ ಇತ್ತು, ಬ್ರದರ್… ಇರಲಿ ಬಿಡು… ಗುಡ್ ಬೈ… ಒಂದು ಕಾಲ ಇತ್ತು… ಸರಿ, ಗುಡ್ ಬೈ! ಹೋಗಬೇಕು ನಾನು. ಎಣ್ಣೆ ಹಾಕಕ್ಕೆ ಹೋಗಲ್ಲ, ಬೇಕಾಗಿಲ್ಲ ಈಗ…’ ಆತುರವಾಗಿ ಹೊರಟ, ಆಚೆಗೆ ಹೋಗಿ ಬಾಗಿಲೆಳೆದುಕೊಳ್ಳುತ್ತಿದ್ದವನು ಮತ್ತೆ ತಟ್ಟನೆ ಬಾಗಿಲು ತೆರೆದು ಎಲ್ಲೋ ನೋಡುತ್ತ ತನ್ನಷ್ಟಕ್ಕೇ ಹೇಳಿದ:

‘ಅಂದ ಹಾಗೆ, ಆ ಕೊಲೆ, ಅದೇ ಪೋರ್ಫಿರಿ ಕೇಸು, ಗೊತ್ತಲ್ಲಾ, ಮುದುಕೀ ಕೊಲೆ? ಕೊಲೆಗಾರ ಸಿಕ್ಕ. ಮಾಡಿದ್ದು ನಾನೇ ಅಂತ ಹೇಳಿ ಸಾಕ್ಷಿ ಕೊಟ್ಟಿದಾನೆ. ಅವನೇ, ಅಲ್ಲಿ ಕೆಲಸ ಮಾಡತಿದ್ದವನು. ಬಣ್ಣ ಬಳೀತಿದ್ದವನು. ನಾನು ಹೋಗಿ ಹೋಗಿ ಅವರು ಮಾಡಿರಕ್ಕೆ ಸಾಧ್ಯ ಇಲ್ಲ ಅಂತ ವಾದ ಮಾಡತಿದ್ದೆ. ನಂಬತೀಯಾ? ಅವರಿಬ್ಬರೂ ಮೆಟ್ಟಿಲ ಮೇಲೆ ನಗತಾ ಜಗಳ ಆಡತಾ ಇದ್ದಿದ್ದು, ಯಾರೋ ಮೆಟ್ಟಿಲು ಹತ್ತಿ ಬರತಾ ಇದ್ದಿದ್ದು, ವಾಚ್‌ಮ್ಯಾನು, ಇಬ್ಬರು ಸಾಕ್ಷಿಗಳು ಎಲ್ಲಾನೂ ಪೋಲೀಸಿನವರ ದಾರಿ ತಪ್ಪಿಸುವುದಕ್ಕೆ ಅವರೇ ಕಟ್ಟಿದ ಕಥೆ ಅಂತೆ. ಎಂಥಾ ಜಾಣತನ, ಎಂಥಾ ಬುದ್ದಿವಂತಿಕೆ… ಅದೂ ಅಷ್ಟು ಚಿಕ್ಕ ಹುಡುಗ! ನಂಬಕ್ಕೇ ಆಗಲ್ಲ. ಅವನೇ ಎಲ್ಲಾನೂ ವಿವರಿಸಿ ತಪ್ಪು ಒಪ್ಪಿಕೊಂಡಿದಾನೆ. ನಾನೆಂಥ ಪೆಕರ ಆದೆ ನೋಡು! ನನ್ನ ಕೇಳಿದರೆ ಅವನು ಮಹಾ ಪ್ರತಿಭಾವಂತ. ಕಾನೂನ ಕಣ್ಣಿಗೆ ಮಣ್ಣೆರಚಿದ. ಆಶ್ಚರ್ಯ ಏನೂ ಇಲ್ಲ. ಇಂಥ ಜನ ಕೂಡ ಇರತಾರೆ, ಅಲ್ಲವಾ? ಇವನು ಗುಟ್ಟು ಕಾಪಾಡಿಕೊಳ್ಳುವುದಕ್ಕೆ ಕಷ್ಟವಾಗಿ ಅವನೇ ಒಪ್ಪಿಕೊಂಡುಬಿಟ್ಟ. ಹೀಗೇ ಆಗಿದೆ ಅನ್ನಿಸತ್ತೆ. ಅಲ್ಲಾ, ನಾನೆಂಥ ಪೆದ್ದ, ಅವನ ಪರವಾಗಿ ವಾದ ಮಾಡತಿದ್ದೆನಲ್ಲ!’

‘ನಿನಗೆಲ್ಲಿ ತಿಳೀತು ಇದು? ಯಾಕೆ ಇಷ್ಟೊಂದು ಕುತೂಹಲ ಈ ವಿಷಯದಲ್ಲಿ?’ ರಾಸ್ಕೋಲ್ನಿಕೋವ್ ತೀರ ಉದ್ರಿಕ್ತನಾಗಿದ್ದ.

‘ಎಂಥಾ ಪ್ರಶ್ನೆ! ಎಂಥಾ ಪ್ರಶ್ನೆ! ಪೋರ್ಫಿರಿ ಹೇಳಿದ, ಬೇರೆಯವರೂ ಹೇಳಿದರು. ಮುಖ್ಯವಾಗಿ ಪೋರ್ಫಿರಿ.’

‘ಪೋರ್ಫಿರಿ ಹೇಳಿದನಾ?’

‘ಹ್ಞೂಂ, ಅವನೇ.’

‘ಏನು ಹೇಳಿದ?’

‘ಪರ್ಫೆಕ್ಟಾಗಿ ವಿವರಿಸಿದ. ಸೈಕಾಲಜಿ ಇಟ್ಟುಕೊಂಡು ಹೇಳಿದ.’

‘ವಿವರಿಸಿದನಾ? ನಿನಗೇ ಸ್ವತಃ ವಿವರಿಸಿದನಾ?ʼ

‘ಹ್ಞೂಂ, ಅವನೇ ಹೇಳಿದ್ದು. ಗುಡ್ ಬೈ. ಮಿಕ್ಕಿದ್ದು ಆಮೇಲೆ ಹೇಳತೇನೆ. ಈಗ ನನಗೆ ಬೇರೆ ಕೆಲಸ ಇದೆ. ಒಂದು ಕಾಲದಲ್ಲಿ ಅಂದುಕೊಂಡಿದ್ದೆ… ಇರಲಿ, ಅದೆಲ್ಲ ಆಮೇಲೆ… ನಾನು ಯಾಕೆ ಕುಡೀಬೇಕು ಈಗ. ಹೆಂಡಾನೇ ಇಲ್ಲದೆ ಮತ್ತು ಬರುವ ಹಾಗೆ ಮಾಡಿದ್ದೀಯ. ಹೆಂಡಾನೇ ಮುಟ್ಟದೆ ಟೈಟಾಗಿದೀನಿ, ರೋದ್ಯಾ! ಗುಡ್‍ ಬೈ! ಆಮೇಲೆ ಬರತೇನೆ.’
ರಝುಮಿಖಿನ್ ಹೊರಟು ಹೋದ.

‘ರಾಜಕೀಯದ ಸಂಚು ಮಾಡತಿದಾನೆ, ಖಂಡಿತ, ಖಂಡಿತ!’ ಮೆಟ್ಟಿಲಿಳಿಯುತ್ತ ರಝುಮಿಖಿನ್ ಮನಸಿನಲ್ಲೇ ಹೇಳಿಕೊಂಡ. ‘ಜೊತೆಗೆ ತಂಗೀನೂ ಈ ಸಂಚಿಗೆ ಸೇರಿಸಿಕೊಂಡಿದಾನೆ. ಹಾಗೇ, ಹಾಗೇ ಆಗಿರಬೇಕು. ಯಾಕೆ ಅಂದರೆ ದುನ್ಯಾಗೂ ಇವನದೇ ಸ್ವಭಾವ. ಈಗ ಇಬ್ಬರೂ ಭೇಟಿ ಮಾಡಕ್ಕೆ ಶುರು ಮಾಡಿದಾರೆ… ಅವಳೂ ಅಂಥ ಸೂಚನೆ ಕೊಟ್ಟಳು. ಕರೆಕ್ಟು. ಹೀಗೇ ಆಗಿರಬೇಕು. ಅವಳು ಆಡಿದ ಎಷ್ಟೊಂದು ಮಾತು, ಎಷ್ಟೊಂದು ನುಡಿಗಳಲ್ಲಿ ಸೂಚನೆ ಇತ್ತು…! ಇದು ಬಿಟ್ಟರೆ ಬೇರೆ ವಿವರಣೆ ಏನಿದೆ? ಹ್ಞಂ! ನನಗನ್ನಿಸಿತ್ತು… ಅಯ್ಯೋ ದೆವರೇ, ಹೇಗಾದರೂ ಅಂಥ ಯೋಚನೆ ಬಂತು ನನಗೆ!’ ಹೌದು, ನನ್ನ ಬುದ್ಧಿಗೆ ಗ್ರಹಣ ಹಿಡಿದಿತ್ತು. ರೋದ್ಯಾನ ಕ್ಷಮೆ ಕೇಳಬೇಕು. ಕಾರಿಡಾರಿನಲ್ಲಿ, ದೀಪದ ಹತ್ತಿರ ನಿಂತಿದ್ದನಲ್ಲ, ಅದು ನನಗೆ ದಾರಿ ತಪ್ಪಿಸಿತು. ಥೂ! ಎಂಥಾ ಕೆಟ್ಟ, ದರಿದ್ರ, ಕ್ರೂರ ಯೋಚನೆ ಮಾಡಿದೆ ನಾನು! ಮಿಕೋಲ್ಕ ಒಳ್ಳೆಯ ಹುಡುಗ, ತಪ್ಪು ಒಪ್ಪಿಕೊಂಡ. ಈಗ ಎಲ್ಲ ಸಂಗತಿಗಳಿಗೂ ವಿವರಣೆ ಸಿಕ್ಕಿದೆ! ಅವನ ಕಾಯಿಲೆಗೆ, ವಿಚಿತ್ರ ವರ್ತನೆಗೆ, ಮೊದಲು ಯೂನಿವರ್ಸಿಟಿಯಲ್ಲಿ ಅವನು ಇರತಾ ಇದ್ದ ರೀತಿಗೆ, ಮಂಕಾಗಿ, ಬೇಜಾರು ಮಾಡಿಕೊಂಡಿರತಾ ಇದ್ದದ್ದಕ್ಕೆ, ಎಲ್ಲಕ್ಕೂ. ಸರಿ. ಆ ಕಾಗದ ಯಾಕೆ ಬಂತು, ಏನದು? ಇಲ್ಲಿ ಏನೋ ಇರಬೇಕು, ಯಾರು ಬರೆದಿದ್ದು? ಅದು…ಹ್ಞಂ. ಇರಲಿ, ಪತ್ತೆ ಮಾಡತೇನೆ.’.

ದುನ್ಯಾಳನ್ನು ಜ್ಞಾಪಿಸಿಕೊಂಡ. ಒಂದು ಎದೆ ಬಡಿತದ ಲಯ ತಪ್ಪಿದ ಹಾಗಾಯಿತು. ಅಲ್ಲಿಂದ ಓಡಿದ.

ರಝುಮಿಖಿನ್ ಹೊರಟ ತಕ್ಷಣ ರಾಸ್ಕೋಲ್ನಿಕೋವ್ ಎದ್ದ. ಕಿಟಕಿಯ ಹತ್ತಿರ ಹೋದ. ತಿರುಗಿದ. ಮೂಲೆಗೆ ಡಿಕ್ಕಿ ಹೊಡೆದ ಮತ್ತೆ ಹೆಜ್ಜೆ ಹಾಕಿದ. ಇನ್ನೊಂದು ಮೂಲೆ. ನಾಯಿಗೂಡಿನಂಥ ಕೋಣೆ ಎಷ್ಟು ಚಿಕ್ಕದು ಅನ್ನುವುದನ್ನು ಮರೆತಿದ್ದ. ಮತ್ತೆ ಸೋಫಾದ ಮೇಲೆ ಕೂತ. ಪೂರಾ ಲವಲವಿಕೆ ಬಂದಿತ್ತು. ಮತ್ತೊಂದು ಹೋರಾಟ—ಹೇಗೋ ಇನ್ನೊಂದು ದಾರಿ ಕಂಡಿತ್ತು!

ಹೌದು. ಹೊರಕ್ಕೆ ಹೋಗುವ ದಾರಿ ಸಿಕ್ಕಿತ್ತು. ಇಲ್ಲಿಯವರೆಗೂ ಇಕ್ಕಟ್ಟಿನಲ್ಲಿ ಸಿಕ್ಕಿ, ತಡೆಯಲಾಗದ ಭಾರ ಹೊತ್ತು ನಜ್ಜುಗುಜ್ಜಾಗಿ, ಮನಸ್ಸು ಹಿಂಡಿಹೋಗಿ ಮಂಕು ಕವಿದಿತ್ತು. ಅವತ್ತು ಪೋರ್ಫಿರಿ ಆಫೀಸಿನಲ್ಲಿ ಮಿಕೋಲ್ಕನ ಪ್ರಸಂಗ ನಡೆದ ಕ್ಷಣದಿಂದ ರಾಸ್ಕೋಲ್ನಿಕೋವ್‌ಗೆ ಉಸಿರು ಕಟ್ಟುತ್ತಿದೆ ಅನಿಸುತ್ತಿತ್ತು, ಸಿಕ್ಕಿಬಿದ್ದೆ, ತಪ್ಪಿಸಿಕೊಳ್ಳಲಾರೆ ಅನಿಸುತ್ತಿತ್ತು. ಮಿಕೋಲ್ಕ ಪ್ರಸಂಗ ಆದಮೇಲೆ ಅವತ್ತೇ ಸೋನ್ಯಾ ಮನೆಯಲ್ಲಿ ನಡೆದದ್ದು. ಅದನ್ನು ಅವನು ಅಂದುಕೊಂಡ ಹಾಗೆ ನಿರ್ವಹಿಸುವುದಕ್ಕೆ ಆಗಿರಲೇ ಇಲ್ಲ. ಬೇರೆ ಥರವೇ ಮುಗಿದಿತ್ತು… ಶಕ್ತಿಗುಂದಿ ದುರ್ಬಲನಾಗಿಬಿಟಿದ್ದ! ಅದೂ ಒಂದೇ ಏಟಿಗೆ! ಸೋನ್ಯಾ ಹೇಳಿದ ಮಾತನ್ನು ಒಪ್ಪಿದ್ದ, ನಾನು ಮಾಡಿದ ಇಂಥ ಕೆಲಸವನ್ನು ಮನಸಿನಲ್ಲಿ ಬಚ್ಚಿಟ್ಟುಕೊಂಡು ಒಬ್ಬನೇ ಬದುಕಲಾರೆ ಅಂತ ಒಪ್ಪಿಕೊಂಡಿದ್ದ! ಅವನ ಅಂತರಂಗಕ್ಕೂ ನಿಜ ಅನಿಸಿತ್ತು. ಮತ್ತೆ, ಸ್ವಿದ್ರಿಗೈಲೋವ್?

ಸ್ವಿದ್ರಿಗೈಲೋವ್ ಒಂದು ಒಗಟು… ಅವನು ರಾಸ್ಕೋಲ್ನಿಕೋವ್‌ನ ಮನಸ್ಸು ಕೆಡಿಸಿದ್ದ, ನಿಜ. ಅವನ ಜೊತೆಗೂ ಬಡಿದಾಡಬೇಕು. ಸ್ವಿದ್ರಿಗೈಲೋವ್ ವಿಚಾರದಲ್ಲೂ ಹೊರಬರುವ ದಾರಿ ಕಾಣಬಹುದು. ಪೋರ್ಫಿರಿಯದು ಮಾತ್ರ ಬೇರೆಯದೇ ವಿಷಯ. (ಆ ದಿನಗಳಲ್ಲಿ ಪೋರ್ಫಿರಿ ಜೊತೆ ನಡೆದ ಮಾತುಕತೆಯ ಚೂರುಪಾರುಗಳನ್ನು ತಾವಾಗಿಯೇ ರಾಸ್ಕೋಲ್ನಿಕೋವ್‌ಗೆ ನೆನಪಾಗುತ್ತಿದ್ದವು. ಇಡೀ ಪ್ರಸಂಗ ಅವನ ನೆನಪಿನಲ್ಲಿ ಉಳಿದಿರಲು ಸಾಧ್ಯವಿರಲಿಲ್ಲ.) ‘ನಾವು ಇಂತಿಂಥ ಪದ ಬಳಸಿ ಮಾತಾಡಿದೆವು, ಇಂಥ ಮಾತಾಡುವಾಗ ಹೀಗೆ ಹೀಗೆ ನಮ್ಮ ಕೈ ಆಡುತ್ತಿದ್ದವು, ಒಬ್ಬರನ್ನೊಬ್ಬರು ಹೀಗೆ ಹೀಗೆ ನೋಡಿಕೊಂಡೆವು, ಕೆಲವು ಮಾತನ್ನ ಕೆಲವು ನಿರ್ದಿಷ್ಟ ಮಾತಿನ ಏರಿಳಿತದಲ್ಲಿ ಹೇಳಿದ್ದೆವು, ನಮ್ಮ ಮಾತು ಯಾವ ಘಟ್ಟಕ್ಕೆ ಮುಟ್ಟಿತ್ತು ಅಂದರೆ ನಾನು ಕೊಲೆಗಾರ ಎಂಬ ಅವನ ನಂಬಿಕೆ ಅಲ್ಲಾಡಿಸುವುದಕ್ಕೆ ಮಿಕೋಲ್ಕಾಗಿಂತ ದೊಡ್ಡದಾದ ಸಂಗತಿ ಬೇಕಾಗಿತ್ತು,’ ಅಂದುಕೊಂಡ ರಾಸ್ಕೋಲ್ನಿಕೋವ್.

‘ಆಶ್ಚರ್ಯ ಏನಿದೆ? ರಝುಮಿಖಿನ್‌ಗೆ ಕೂಡ ಸಂಶಯ ಶುರುವಾಗಿತ್ತು! ಅವತ್ತು ಕಾರಿಡಾರಿನ ಬೆಳಕಿನಲ್ಲಿ ನಡೆದ ದೃಶ್ಯ ಕೆಲಸ ಮಾಡಿದೆ. ಅದಕ್ಕೇ ಪೋರ್ಫಿರಿ ಹತ್ತಿರ ಓಡಿ ಹೋದ. ಪೋರ್ಫಿರಿ ಯಾಕೆ ಅವನ ಕಣ್ಣಿಗೆ ಹೀಗೆ ಮಣ್ಣೆರಚಕ್ಕೆ ನೋಡತಾ ಇದಾನೆ? ಏನು ಬೇಕು ಪೋರ್ಫಿರಿಗೆ? ಮಿಕೋಲ್ಕಾ ಬಗ್ಗೆ ರಝುಮಿಖಿನ್ ಹತ್ತಿರ ಹೇಳಿ ನನ್ನ ದಾರಿ ತಪ್ಪಿಸಕ್ಕೆ ನೋಡತಿದ್ದಾನಾ? ಅವನ ಮನಸಿನಲ್ಲಿ ಏನೋ ಇರಲೇಬೇಕು. ಏನದು? ಅದು ನಡೆದದ್ದು ಅವತ್ತು. ಎಷ್ಟೋ ದಿನ ಕಳೆದವು. ಆಮೇಲಿಂದ ಪೋರ್ಫಿರಿ ಉಸಿರೇ ಬಿಟ್ಟಿಲ್ಲ, ಒಂದೂ ಮಾತಾಡಿಲ್ಲ. ಅವನು ಸುಮ್ಮನೆ ಇದಾನೆ ಅನ್ನೋದೇ ಕೆಟ್ಟದ್ದು…’

ರಾಸ್ಕೋಲ್ನಿಕೋವ್ ಕ್ಯಾಪು ತೆಗೆದುಕೊಂಡ, ಚಿಂತೆ ಮಾಡುತ್ತ ರೂಮಿನಾಚೆಗೆ ದೃಷ್ಟಿ ಹಾಯಿಸಿದ. ಎಷ್ಟೋ ದಿನಗಳ ನಂತರ ಮೊದಲ ಬಾರಿಗೆ ‘ಮನಸ್ಸು ಸ್ವಸ್ಥವಾಗಿದೆ,’ ಅನ್ನಿಸುತಿತ್ತು. ‘ಏನು ಆಗತ್ತೋ ಆಗಲಿ, ಸ್ವಿದ್ರಿಗೈಲೋವ್ ವಿಚಾರ ಮುಗಿಸಬೇಕು, ಎಷ್ಟು ಬೇಗ ಆಗತ್ತೋ ಅಷ್ಟು ಬೇಗ. ಅವನೂ ಕೂಡ ನನಗಾಗಿ ಕಾಯತಾ ಇದಾನೆ ಅನಿಸತ್ತೆ,’ ಅಂದುಕೊಂಡ. ಆ ಕ್ಷಣದಲ್ಲಿ, ಅವನ ದಣಿದ ಮನಸಿನಲ್ಲಿ ಎಷ್ಟು ದ್ವೇಷ ಹುಟ್ಟಿತೆಂದರೆ ಸ್ವಿದ್ರಿಗೈಲೋವ್ ಅಥವಾ ಪೋರ್ಫಿರಿ ಇಬ್ಬರಲ್ಲಿ ಒಬ್ಬರನ್ನಾದರೂ ಕೊಲ್ಲಬೇಕು ಅನಿಸಿತು. ಈಗಲ್ಲದಿದ್ದರೂ ಮುಂದಾದರೂ ಮಾಡುವವನೇ ನಾನು ಅನ್ನಿಸಿತು. ‘ನೋಡಣ, ನೋಡಣ,’ ಎಂದು ತನಗೇ ಹೇಳಿಕೊಂಡ.

ಆದರೆ, ಬಾಗಿಲು ತೆಗೆಯುತ್ತಿದ್ದ ಹಾಗೇ ದಿಡೀರನೆ ಸ್ವತಃ ಪೋರ್ಫಿರಿ ಎದುರಾದ. ಅವನು ಒಳಕ್ಕೆ ಬರುತ್ತಿದ್ದ. ರಾಸ್ಕೋಲ್ನಿಕೋವ್ ಒಂದು ಕ್ಷಣ ಮಾತಿಲ್ಲದವನಾದ. ವಿಚಿತ್ರವೆಂದರೆ ಪೋರ್ಫಿರಿಯನ್ನು ನೋಡಿ ಅವನಿಗೆ ಆಶ್ಚರ್ಯವಾಗಲಿಲ್ಲ. ಭಯವೂ ಇರಲಿಲ್ಲ. ಅರ್ಧ ಕ್ಷಣ ಮೆಟ್ಟಿಬಿದ್ದರೂ ಮರು ಕ್ಷಣವೇ ಸುಧಾರಿಸಿಕೊಂಡ. ‘ನಾಟಕ ಮುಗೀತು ಅನ್ನಿಸತ್ತೆ! ಸ್ವಲ್ಪ ಕೂಡ ಸದ್ದು ಮಾಡದೆ ಅದು ಹೇಗೆ ಬೆಕ್ಕಿನ ಥರ ಬಂದ, ನನಗೆ ಕೇಳಿಸಲೇ ಇಲ್ಲವಲ್ಲ?

‘ಯಾರೂ ಬರೋರು ಇರಲಿಲ್ಲವಾ ರೊಡಿಯಾನ್ ರೊಮಾನೊವಿಚ್!’ ಪೋರ್ಫಿರಿ ನಗುತ್ತ ಉದ್ಗರಿಸಿದ. ಬರಬೇಕು ಅಂತ ಬಹಳ ದಿನದಿಂದ ಅಂದುಕೊಳ್ಳುತ್ತಿದ್ದೆ. ಹೀಗೇ ಈ ಕಡೇನೇ ಹೊಗತಾ ಇದ್ದೆ, ಬಂದೆ… ಬಹಳ ಹೊತ್ತು ನಿಲ್ಲಿಸಿಕೊಳ್ಳಲ್ಲ ಐದೇ ನಿಮಿಷ. ಎಲ್ಲಿಗಾದರೂ ಹೋಗುವುದಿತ್ತಾ? ಬಹಳ ಹೊತ್ತು ಮಾಡಲ್ಲ. ಸಿಗರೇಟು ಸೇದಬಹುದಾ?’

‘ಕುಳಿತುಕೊಳ್ಳಿ ಪೋರ್ಫಿರಿ ಪೆಟ್ರೊವಿಚ್’, ರಾಸ್ಕೋಲ್ನಿಕೋವ್ ಉಪಚಾರ ಮಾಡಿ ಒಳಕ್ಕೆ ಕರೆದ. ಎಂಥ ಸಂತೋಷ, ಎಂಥ ಸ್ನೇಹ ಭಾವ ತೋರಿಸುತ್ತ ಆಹ್ವಾನಿಸಿದನೆಂದರೆ ಆ ದೃಶ್ಯವನ್ನು ನೋಡಿದ್ದರೆ ಸ್ವತಃ ರಾಸ್ಕೋಲ್ನಿಕೋವನೆ ಆಶ್ಚರ್ಯಪಡುತ್ತಿದ್ದ. ಇದು ಕೊನೆಯ ಮುಖಾಮುಖಿ, ಕೊನೆಯ ಶಕ್ತಿ ಪರೀಕ್ಷೆ. ದರೋಡೆಕೋರನ ಕೈಗೆ ಸಿಕ್ಕಿಬಿದ್ದು ಅರ್ಧ ಗಂಟೆಯ ಹೊತ್ತು ಅನುಭವಿಸುತ್ತಿದ್ದ ಸಾವಿನಷ್ಟು ಭಯಂಕರವಾದ ಭೀತಿ ಕೂಡ ಗಂಟಲಿಗೆ ಚೂರಿ ಒತ್ತುತಿದ್ದ ಹಾಗೆ ತಟ್ಟನೆ ಮಾಯವಾಗುತ್ತದಲ್ಲ, ಹಾಗೆ. ಪೋರ್ಫಿರಿಗೆ ನೇರವಾಗಿ ಎದುರಿನಲ್ಲಿ ಕೂತು ಕಣ್ಣು ಮಿಟುಕಿಸದೆ ಅವನನ್ನೇ ದಿಟ್ಟಿಸಿದ. ಪೋರ್ಫಿರಿ ಕಣ್ಣು ಕಿರಿದು ಮಾಡಿ ಸಿಗರೇಟು ಹೊತ್ತಿಸಿದ.

‘ಮಾತಾಡು, ಮಾತಾಡು,’ ಅನ್ನುವ ಪದಗಳು ರಾಸ್ಕೋಲ್ನಿಕೋವ್‌ನ ಎದೆಯಿಂದ ನುಗ್ಗಿಬರಲು ತವಕಪಡುತ್ತಿದ್ದವು. ‘ಯಾಕೆ ಮಾತಾಡತಿಲ್ಲ, ಯಾಕೆ ಮಾತಾಡತಿಲ್ಲ ನೀನು?’ ಅನ್ನುತಿತ್ತು ಅವನ ಮನಸ್ಸು.