ಕೇರಿಗೊಂದು ದಾರಿಯಿರುವಂತೆ ಊರಿಗೊಬ್ಬ ಸಿದರಾಮನಿದ್ದ. ಹೆಂಡತಿ, ಮಕ್ಕಳು, ಹಿಂದೆ, ಮುಂದೆ, ಎಡಕೆ, ಬಲಕೆ ಯಾರೂ ಇಲ್ಲದ ಅನಾಥ. ಹಾಗಂತ ಅವನು ಯಾರ ಹತ್ತಿರಾನೂ ಅನುಕಂಪ ನಿರೀಕ್ಷಿಸುವವನೂ ಅಲ್ಲ. ಬೆಳಗಾದರೆ ಸೈಕಲ್ ಬೆನ್ನಿಗೆ ಐಸ್ ಡಬ್ಬಾ ಕಟ್ಕೊಂಡು ‘ಗಾರೇಗಾರ’ ಮಾರುವುದು. ರಾತ್ರಿಯಾಗುತ್ತಿದ್ದಂತೆ ಊರಾಚೆಗಿನ ಗೂಡಂಗಡೀಲಿ ದಾರು ಮಾರುತ್ತಿದ್ದ. ಹೀಗಾಗಿ ಊರಲ್ಲಿ ಅವನನ್ನ ಕರೆಯೋದೆ ದಾರು ಸಿದರಾಮ ಅಂತ. ದಾರೂ ಮಾರಿದರೂ ಒಂದು ದಿನವೂ ಸಾರಾಯಿ ಕುಡಿದಿದ್ದನ್ನ ಯಾರೂ ಕೇಳಿರಲಿಲ್ಲ ಕಂಡಿರಲಿಲ್ಲ. ಆದರೆ ಗಾಂಜಾ ಸೇದದಿದ್ದರೆ ಅವನ ಕೈ ಕಾಲುಗಳಲ್ಲಿ ನಡುಕ ಶುರುವಾಗಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಹುಚ್ಚನಂತೆ ಕಂಡ ಕಂಡವರ ಮೇಲೆ ರೇಗಾಡುತಿದ್ದ..
ಡಾ. ಲಕ್ಷ್ಮಣ ವಿ.ಎ. ಬರೆಯುವ ಅಂಕಣ

 

ಸೂರ್ಯ ತನ್ನ ನೆತ್ತರು ಕಣ್ಣು ಬಿಟ್ಟುಕೊಂಡೇ ಸಂಜೆ ಸಾವಿಗೆ ಶರಣಾಗುತ್ತಿರುವ ಹೊತ್ತಿನಲ್ಲಿ ನಾನು ಊರ ಅಗಸೀ ಬಾಗಿಲಿಗೆ ಕಾಲಿಟ್ಟಿದ್ದೆ. ‘ದಾರೂ ಸಿದರಾಮನ ‘ ಸಾವಿನ ಸುದ್ದಿ ಕುಂತಲ್ಲಿ, ನಿಂತಲ್ಲಿ, ಎಲ್ಲೆಂದರಲ್ಲಿ, ಗಲ್ಲಿಯಲ್ಲಿ, ಹಳ್ಳಿಯಲ್ಲಿ ಹುಲ್ಲಾಗಿ ಒಬ್ಬೊಬ್ಬರ ಬಾಯಲ್ಲಿ ಒಂದೊಂದು ಕತೆಯಾಗಿ, ಬದುಕಿನುದ್ದಕ್ಕೂ ವಿಕ್ಷಿಪ್ತವಾಗಿ ಬಾಳಿ ಸಾವಿನಲ್ಲೂ ನಿಗೂಢತೆ ಬಿಟ್ಟು ನಿರಾಳವಾಗಿ ಉಸಿರಾಡತೊಡಗಿರುವನೆಂದು ಅನ್ನಿಸಿತು.

ಸಿದ್ದೇವಾಡಿ ಕೃಷ್ಣಾ ತೀರದ ಸಣ್ಣ ಹಳ್ಳಿ ಟೈಮ ಎಷ್ಟೂಂತ ಕೇಳಿದರೆ ‘ಬಾರಾ’ ಅನ್ನುತ್ತಾರೆ. ಭಾಷೆಯ ಬಗ್ಗೆ ಮಡಿ ಮೈಲಿಗೆ ಅನ್ನದ ಅಮಾಯಕ ಜನ, ಇಲ್ಲಿ ಕನ್ನಡ ಮರಾಠಿ ಒಂದರೊಳಗೊಂದು ಬೆರೆತು ಭಾಷೆಗೆ ವಿಶಿಷ್ಟ ಸೊಗಡಿನ ಶ್ರೀ ಮಂತಿಕೆಯಿದೆ. ಈ ಊರಿನಲ್ಲಿ ಎಷ್ಟೋ ದಿನಗಳವರೆಗೂ ಏನೂ ಸಂಭವಿಸುವುದಿಲ್ಲ. ಹತ್ತು ಊರಿನಾಚೆ ಈ ಊರ ಹೆಸರನ್ನು ಯಾರೂ ಕೇಳಿದುದನ್ನು ನಾ ಕಾಣೆ. ಕೋರ್ಟು, ಕಚೇರಿಯಂತೂ ದೂರದ ಮಾತೇಯಾಯಿತು. ಊರ ದೈವದಂತೆ ನ್ಯಾಯ ತೀರ್ಮಾನಗಳಾಗುತಿದ್ದವು. ಕಾಯಿಲೆ ಕಸಾರಿಕೆಗೆ ಸಿದರಾಮನಿದ್ದ.

ಇಂತಹ ಊರಿನ ಜೀವಂತಿಕೆಯನ್ನು ಕಾಪಾಡಿದ್ದು ಸದಾ ತುಂಬಿ ಹರಿಯುವ ಕೃಷ್ಣೆ ಹಾಗು ದಾರೂ ಸಿದರಾಮ.

ಆದರೆ ಈ ವರ್ಷ ಮಳೆಯಾಗದೆ ಬರ ಬಿದ್ದಿತ್ತು. ಆಷಾಢ-ಶ್ರಾವಣಮಾಸದಲ್ಲಿ ಮೈ ತುಂಬ ನೆರೆ ಬಂದು ನೀರು ಊರ ಅಗಸೀ ಬಾಗಿಲುತನಕ ಬಂದು ಬಯಲಿನ ಉಚ್ಚೆ-ಹೇಲು ಹಸನು ಮಾಡುವ ಕೃಷ್ಣೆ ಈ ಸಲ ತನ್ನ ಪಾತ್ರ ಬಿಟ್ಟು ಮೇಲೇಳೆವುದಿರಲಿ, ಕುಡಿಯುವ ನೀರಿಗೂ ಚಿಂತೆಯಾಗಿತ್ತು, ಜನ ಮೇಲೆ ಕತ್ತೆತ್ತಿ ಮೋಡ ದಿಟ್ಟಿಸಿದ್ದೇ ಬಂತು, ಎಲ್ಲರ ಮೊಗದಲ್ಲೊಂದು ಚಿಂತೆಯ ಗೆರೆ ಮೂಡಿಸಿತ್ತು.. ಜೊತೆಗೆ ಸಾಲ, ಸಾಲುಗಳ ಸರಣಿ ಸಾವು …

ಈ ಜನ ಮಳೆಗಾಗಿ ಏನೇನು ಮಾಡಲಿಲ್ಲ? ಮುತ್ತೈದೆಯರು ಮುಡಿ ಕೊಟ್ಟರು, ಗರತಿಯರು ವಾರೊಪ್ಪತ್ತ ಮಾಡಿದರು, ಜೋಕುಮಾರನ ತಂದು ಕುಣಿಸಿದರು. ಕಪ್ಪೆ ಮದುವೆ, ಕತ್ತೆ ಮದುವೆ, ಊರ ಸುತ್ತಲಿನ ಹತ್ತ ದೇವರ ತಂದ ಹೊತ್ತುಮೆರೆಸಿದರೂ ಜೋರಾಗಿ ಗಾಳಿ ಬೀಸಿ ತುಂತುರು ಮಾತ್ರ ಹನಿಸಿ ಒಡಲ ಕಾವು ಹೆಚ್ಚಿಸಿ ಹೋಯ್ತು. ಶಾಪಗ್ರಸ್ತ ಅಹಲ್ಯೆಯಂತೆ ಕಲ್ಲಾದಳೇ ಹೊರತು ಕೃಷ್ಣೆ ಮೈ ನೆರೆಯಲಿಲ್ಲ. ಊರತುಂಬ ಇಂತಹ ಹಳವಂಡಗಳೇ ತುಂಬಿರುವಾಗ ಸಿದರಾಮನ ಸಾವಿನ ಸೂತಕದಲ್ಲಿ ಬರ ಭೀಕರವಾಗಿ ತೋರತೊಡಗಿತು.

ಕೇರಿಗೊಂದು ದಾರಿಯಿರುವಂತೆ ಊರಿಗೊಬ್ಬ ಸಿದರಾಮನಿದ್ದ. ಹೆಂಡತಿ, ಮಕ್ಕಳು, ಹಿಂದೆ, ಮುಂದೆ, ಎಡಕೆ, ಬಲಕೆ ಯಾರೂ ಇಲ್ಲದ ಅನಾಥ. ಹಾಗಂತ ಅವನು ಯಾರ ಹತ್ತಿರಾನೂ ಅನುಕಂಪ ನಿರೀಕ್ಷಿಸುವವನೂ ಅಲ್ಲ. ಬೆಳಗಾದರೆ ಸೈಕಲ್ ಬೆನ್ನಿಗೆ ಐಸ್ ಡಬ್ಬಾ ಕಟ್ಕೊಂಡು ‘ಗಾರೇಗಾರ’ ಮಾರುವುದು. ರಾತ್ರಿಯಾಗುತ್ತಿದ್ದಂತೆ ಊರಾಚೆಗಿನ ಗೂಡಂಗಡೀಲಿ ದಾರು ಮಾರುತ್ತಿದ್ದ. ಹೀಗಾಗಿ ಊರಲ್ಲಿ ಅವನನ್ನ ಕರೆಯೋದೆ ದಾರು ಸಿದರಾಮ ಅಂತ. ದಾರೂ ಮಾರಿದರೂ ಒಂದು ದಿನವೂ ಸಾರಾಯಿ ಕುಡಿದಿದ್ದನ್ನ ಯಾರೂ ಕೇಳಿರಲಿಲ್ಲ ಕಂಡಿರಲಿಲ್ಲ. ಆದರೆ ಗಾಂಜಾ ಸೇದದಿದ್ದರೆ ಅವನ ಕೈ ಕಾಲುಗಳಲ್ಲಿ ನಡುಕ ಶುರುವಾಗಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಹುಚ್ಚನಂತೆ ಕಂಡ ಕಂಡವರ ಮೇಲೆ ರೇಗಾಡುತಿದ್ದ.. ಮನೆಯ ಪಾತ್ರೆ ಪಗಡೆ ಬೀದಿಗೆ ಬಿಸಾಕಿ ದೇವರ ಗುಡಿಯ ಮೇಲೆ ಹತ್ತಿ ಕಣಿ ಹೇಳುತಿದ್ದ. ಇದೂ ಒಂದು ಪವಾಡವಿರಬೇಕೆಂದು ಜನ ಕೈ ಮುಗಿಯುತಿದ್ದರು.

ಇವನ ಪವಾಡಗಳೇನೂ ಕಮ್ಮಿಯಿರಲಿಲ್ಲ; ಜ್ವರ, ವಾಂತಿ ಅಂತ ಬಂದವರಿಗೆ ತಾಯತ ಕಟ್ಟುತ್ತಿದ್ದ. ಅದೆಷ್ಟೋ ಬಂಜೆಯರಿಗೆ ಚಿಕಿತ್ಸೆ ನೀಡಿ ಮಕ್ಕಳ ಕರುಣಿಸಿದ್ದ. ಅದೆಂಥೆದೋ ಬೇರು ತಂದು, ಸಣ್ಣಿ ಹಿಡಿದ ಬಾಣಂತಿಯರ ಕೈಗೆ ಕಟ್ಟುತ್ತಿದ್ದ. ದೆವ್ವ, ಭೂತ, ಬಿಡಿಸುತ್ತಿದ್ದ. ಅದೊಂದು ದಿನ ಹರಿಜನರ ಪಾರೀ ಹೆರಿಗೆಬೇನೆಯೆಂದು ಒದ್ದಾಡುತಿರಬೇಕಾದರೆ ಅವಳನ್ನು ಹೆಗಲ ಮೇಲೆ ಹೊತ್ತು ತುಂಬಿದ ಹೊಳಿಯ ತೆರಿಗೆ ಹೊಡೆದು ಆಸ್ಪತ್ರೆಗೆ ಸೇರಿಸಿಬಂದಿದ್ದ. ಇಷ್ಟೆಲ್ಲಾ ಸೇವೆಗೆ ಪ್ರತಿಯಾಗಿ ಒಂದು ಬಿಡಿಗಾಸೂ ಕೇಳಿದವನಲ್ಲ. ಮುಖದ ಮೇಲೆ ಯಾವಾಗಲೂ ಒಂದು ನಗೆ ಹೊತ್ತು ಕೆಲಸ ಮಾಡುತ್ತಿದ್ದ ಸಿದರಾಮ ಯಾರಿಗು ಹೇಳದೆ, ಕೇಳದೆ ಒಂದು ವಾರ ಹದಿನೈದು ದಿನ ಮಾಯವಾಗಿ ಬಿಡುತ್ತಿದ್ದ. ಆಗ ಊರವರೆಲ್ಲ ಸಿದರಾಮ ನಿಧಿ ತೆಗೆಸಲು ಬೆಳಗಾವಿ ಸೀಮೆಗೆ ಹೋಗಿದ್ದಾನೆಂದು ಆಡಿಕೊಳ್ಳುತ್ತಿದ್ದರು. ಆದರೆ ಅಸಲು ಸಿದರಾಮನಿಗೆ ನಾಟಕದ ಹುಚ್ಚಿತ್ತು. ದೊಡ್ಡಾಟ, ಬಯಲಾಟ, ಪಾರಿಜಾತ, ಯಾವುದಾದರೂ ಸರಿ ಅವರ ಬೆನ್ನಿಗೆ ಬಿದ್ದು ನೇಪಥ್ಯದಲ್ಲಿರುತ್ತಿದ್ದ.

ಅದರ ಹಿಂದೆ ದಾರೂ ಸಿದರಾಮನ ಸಾವು. ಸಿದರಾಮನ ಗೂಡಂಗಡಿಗೆ ನಮ್ಮಪ್ಪ ಖಾಯಂ ಗಿರಾಕಿ ಸಿದರಾಮನಿಗೆ ಬೇಕಾಗಿದ್ದ ಗಾಂಜಾ ಕೊಟ್ಟು, ಬದಲಾಗಿ ದಾರು ಕುಡಿದು ಬರುತ್ತಿದ್ದ… ನಮ್ಮಪ್ಪ ಒಂದೆರಡು ದಿನ ಹೊರಗಡೆ ಹೋದರೆ ಸಿದರಾಮ ನಮ್ಮ ಮನೆಗೆ ಎಡತಾಕುತಿದ್ದ, ನಮಗೆಲ್ಲಾ ಆಗ ಏನೆಂದರೆ ಏನೂ ಅರ್ಥವಾಗುತಿರಲಿಲ್ಲ. ಬಹುಶಃ ನಮ್ಮಪ್ಪ ಯಾವುದೋ ಊರಿಂದ ತಂದು ಕದ್ದು ಮುಚ್ಚಿ ಗಾಂಜಾ ಮಾರುತ್ತಿದ್ದ. ಹೀಗಾಗಿ ನಮ್ಮಪ್ಪನಿಗೂ ಸಿದರಾಮನಿಗೂ ಖಾಸಾ ದೋಸ್ತಿ. ಗಾರೆಗಾರ ಮಾರುತ್ತಿದ್ದರಿಂದ ಸಿದರಾಮ ನನಗೆ ಇಷ್ಟವಾಗುತ್ತಿದ್ದ. ಚಿಕ್ಕವನಿರುವಾಗ ನಡೆದ ಒಂದು ಘಟನೆಯ ಬಗ್ಗೆ ನಿಮಗೆ ಹೇಳಲೇಬೇಕು.

ಈ ವರ್ಷ ಮಳೆಯಾಗದೆ ಬರ ಬಿದ್ದಿತ್ತು. ಆಷಾಢ-ಶ್ರಾವಣಮಾಸದಲ್ಲಿ ಮೈ ತುಂಬ ನೆರೆ ಬಂದು ನೀರು ಊರ ಅಗಸೀ ಬಾಗಿಲುತನಕ ಬಂದು ಬಯಲಿನ ಉಚ್ಚೆ-ಹೇಲು ಹಸನು ಮಾಡುವ ಕೃಷ್ಣೆ ಈ ಸಲ ತನ್ನ ಪಾತ್ರ ಬಿಟ್ಟು ಮೇಲೇಳೆವುದಿರಲಿ, ಕುಡಿಯುವ ನೀರಿಗೂ ಚಿಂತೆಯಾಗಿತ್ತು, ಜನ ಮೇಲೆ ಕತ್ತೆತ್ತಿ ಮೋಡ ದಿಟ್ಟಿಸಿದ್ದೇ ಬಂತು, ಎಲ್ಲರ ಮೊಗದಲ್ಲೊಂದು ಚಿಂತೆಯ ಗೆರೆ ಮೂಡಿಸಿತ್ತು..

ಆಗ ಈ ಸಿದರಾಮ ಈಗಿನಷ್ಟು ಅವನ ಮೇಲೆ ಕೆಲಸದ ಭಾರವಿರಲಿಲ್ಲ. ಕೇವಲ ಗಾರೆಗಾರ ಮಾರಿ ಬದುಕು ಸಾಗಿಸುತ್ತಿದ್ದ….. ಸೈಕಲ್ ನ ಹಿಂಬದಿಗೆ ಐಸ್ ಡಬ್ಬ ಕಟ್ಟಿಕೊಂಡು ಪೊಂ…….ಪೊಂ ಎಂದು ಹಾರ್ನ್ ಬಾರಿಸುತ್ತ ಬಂದರೆ ನಮ್ಮ ಪಂಚೇಂದ್ರಿಯಗಳು ಜಾಗೃತಗೊಂಡು ಬರಿಗಾಲುಗಳು ನೀರು ಬೇಸಗೆಯ ಕೆಂಡದಂತ ಬೀದಿಗೆ ಬಿದ್ದು ಸೈಕಲ್ ಹಿಂದೆ ಓಡುತ್ತಿದ್ದುವು. ನಾಲ್ಕಾಣೆಗೊಂದರಂತೆ ಐಸು ಕೊಂಡು ಬಾಯಲ್ಲಿಟ್ಟುಕೊಂಡು ಮನೆಗೆ ಬರುವಷ್ಟರಲ್ಲಿ ಕರಗಿ ನೀರಾಗಿ ಅಂಗಿ, ಚೊಣ್ಣ ಎಲ್ಲ ಕೊಳೆಯಾಗಿರುತ್ತಿತ್ತು. ಈ ಸಿದರಾಮನ ಸೈಕಲ್ ಸವಾರಿ ನಮ್ಮ ಸ್ಕೂಲಿನ ಅಂಗಳಕ್ಕೂ ಬರುತ್ತಿತ್ತು.

ಅದೊಂದು ದಿನ ಯಾವ ಹುಕಿ ಬಂದಿತ್ತೋ ಕಾಣೆ ನನ್ನ ಗುಂಪಿನ ಬಳಗದ ಏಳೆಂಟು ಗೆಳೆಯರಿಗೆ ಸಾಲ ಹೇಳಿ ಐಸು ಕೊಡಿಸಿದೆ, ಅವನೂ ಧಾರಾಳವಾಗಿ ಕೊಟ್ಟ. ಬರೋಬ್ಬರಿ ಮೂರು ರುಪಾಯಿ ಸಾಲ ನಿಮ್ಮಪ್ಪನ ಖಾಸಾ ದೋಸ್ತನಲ್ಲವೇ? ನಾನಾವಾಗ ಮೂರೋ ನಾಲ್ಕೋ ತರಗತಿಯಲ್ಲಿ ಓದುತ್ತಿದ್ದೆ.

ಸಾಲವೇನೋ ಧಾರಾಳವಾಗಿ ಆಯಿತು. ಇನ್ನು ಅದನ್ನು ತೀರಸುವುದು ಹೆಂಗ ಹೇಳಿ? ಮನೆಯಲ್ಲಿ ಏನು ಹೇಳುವುದು?

ಸಿದರಾಮನ ಕಣ್ಣು ತಪ್ಪಿಸಿ ತಿರುಗಿದ್ದೇ ಬಂತು. ಪ್ರತಿ ದಿನವೂ ಮರಳಿಸಲಾಗದ ಪಾಪ ಪ್ರಜ್ಞೆಯಲ್ಲಿ ನರಳಿದ್ದೇಯಾಯಿತು. ಆಗಿನ ಕಾಲಕ್ಕೆ ಮೂರು ರೂಪಾಯಿಯೆಂದರೆ ಸಾಮಾನ್ಯದ ಮಾತೇ?

ಅದೊಂದು ದಿನ ಶಾಲೆಯ ಆವರಣದಲ್ಲಿ ಸಿದರಾಮನ ಕಣ್ಣು ತಪ್ಪಿಸಿ ಗುಂಪಿನಲ್ಲಿ ಕಳೆದು ಕಣ್ಣಾ ಮುಚ್ಚಾಲೆಯಾಡುತಿರಬೇಕಾದರೆ ಸಿದರಾಮನ ಕರೆ ಬಂತು. ನಾಳೆ ನನ್ನ ಉದ್ರಿ ತೀರಿಸಲಿಲ್ಲಾಂದ್ರೆ ನಿಮ್ಮಪ್ಪನಿಗೆ ಹೇಳಿ ಚಮಡಾ ಸುಲಿಸ್ತಿನಿ ನೋಡ ಮಗನ ಅಂತ ಕಡ್ಡಿ ಮುರಿದಂತೆ ಹೇಳಿದಾಗ ನಾನು ಜಲಜಲ ಬೆವೆತು, ಗಡಗಡ ನಡುಗಿ ಹೋದೆ. ಯಾಕಾದ್ರೂ ಈ ಐಸಿನ ಸಹವಾಸ ಮಾಡಿದ್ನೆಪ್ಪೋ ಅಂತ ಕೊರಗು ಶುರುವಾಯಿತು. ಯಾರೊಂದಿಗೂ ಏರು ದನಿಯಲ್ಲಿ ಮಾತನಾಡದ ಸಿದರಾಮ, ನನ್ನ ಮೇಲೆ ಅಷ್ಟೊಂದು ಯಾಕೆ ವ್ಯಗ್ರನಾಗಿದ್ದನೆಂಬುದು ನನಗೆ ಈ ದಿನಕ್ಕೂ ಬಗೆ ಹರಿಯಲಾರದ ಪ್ರಶ್ನೆಯಾಗಿ ಕಾಡಿದೆ.

ಮನೆಯಲ್ಲಿ ಉದ್ರೀ ವಿಚಾರ ಗೊತ್ತಾದರೆ ಏನು ಮಾಡುವುದೆಂಬ ಯೋಚನೆಯಲ್ಲೇ ಮನೆಗೆ ಬಂದೆ. ರಾತ್ರಿ ಊಟ ಮಾಡಲಿಲ್ಲ, ಯಾಕೇಂತ ಯಾರೂ ಕೇಳಲಿಲ್ಲ …ಕಣ್ಣು ಮುಚ್ಚಿದರು ನಿದ್ದೆಯಿಲ್ಲ……..ಹೀಗೇ ಮಧ್ಯರಾತ್ರಿ ಸರಿದಿರಬೇಕು. ಆಗ ಥಟ್ಟನೆ ನೆನಪಾದದ್ದು ಅಡುಗೆ ಮನೆಯ ಸಾಸಿವೆ ಡಬ್ಬ. ನಾನು ಅತ್ತು ಕರೆದು ಕಾಸಿಗಾಗಿ ಹಠ ಮಾಡಿದಾಗಲೆಲ್ಲಾ ಅಮ್ಮ ನನಗೆ ಆ ಡಬ್ಬದಿಂದೆತ್ತಿ ಕಾಸುಕಾಸು ಕೊಡುತ್ತಿದ್ದರು, ಕಳ್ಳತನ ಮಾಡಲೇ? ಹಾಗೊಂದು ಕ್ಷಣ ಯೋಚಿಸಿ ಮೈ ನಡುಕ ಹೆಚ್ಚಿತು. ಆದರೂ ಸಿದರಾಮನ ಕುತ್ತಿನಿಂದ ಪಾರಾದರೆ ಸಾಕಾಗಿತ್ತು.

ಮಧ್ಯ ರಾತ್ರಿ ಬುದ್ಧನಿಗೆ ಜ್ಞಾನೋದಯವಾದಂತೆ ಸಾಸಿವೆ ಡಬ್ಬಕ್ಕೆ ಕೈ ಹಚ್ಚಿದ್ದೇ ತಡ ಮುಚ್ಚಳ “ಠಣ್ಣನೆ”ಸದ್ದು ಮಾಡಿತು. ಅಮ್ಮನಿಗೆ ಎಚ್ಚರವಾಗಿ ಏನದೂ ಅಂತ ಕೂಗಿದರು. ಏ…..ಏ…. ಏಣಿಲ್ಲವ್ವಾ ನಿ……..ನೀ….ನೀರಡಿಕೆ ಅಂದೆ. ಸದ್ಯ ಎದ್ದು ಬರಲಿಲ್ಲ..
ಡಬ್ಬದಲ್ಲಿ ಸಿಕ್ಕಿದ್ದು ಒಂದುರೂಪಾಯಿಯ ಐದು ಕಾಯಿನ್ ಗಳು. ಮೂರನ್ನ ಜೇಬಿಗಿಳಿಸಿಕೊಂಡು, ಎರಡನ್ನು ಅದೇ ಡಬ್ಬಿಗೆ ಹಾಕಿ ಕಳ್ಳ ಬೆಕ್ಕಿನಂತೆ ಬಂದು ಮಲಗಿದೆ. ಸಿದರಾಮನ ಸಾಲ ಹೀಗೆ ತೀರಿತ್ತು.

ಸಿದರಾಮ ಅಷ್ಟು ಖಾಸಾ ದೋಸ್ತನಾಗಿದ್ದ ಅಪ್ಪನಿಗೆ ನನ್ನ ಸಾಲದ ವಿಚಾರ ಹೇಳಿರಲಿಲ್ಲವೇ? ಸಾಸಿವೆ ಡಬ್ಬದಿಂದ ಮಾಯವಾದ ಕಾಸಿನ ಸಂಗತಿ ಅಮ್ಮನ ಅರಿವಿಗೆ ಬರಲಿಲ್ಲವೆ? ಅಥವ ಇದೆಲ್ಲವನ್ನೂ ಮೀರಿದ ತರ್ಕವೊಂದು ನಮ್ಮನ್ನೆಲ್ಲಾ ಆವರಿಸಿತ್ತೇ? ಕೇಳೋಣವೆಂದರೆ ಅಪ್ಪನೂ ಈ ಲೋಕದಲ್ಲಿಲ್ಲಾ…ಇದನ್ನೆಲ್ಲ ಯೋಚಿಸುತ್ತ ಜಗುಲಿಯ ಬೆಲೆ ಕುಂತಾಗ ತಣ್ಣನೆಯ ಕೈಯೊಂದು ನನ್ನ ಹೆಗಲು ಮುಟ್ಟಿ ಕೇಳುತಿತ್ತು …. ‘ಯಾವಾಗ ಬಂದೆ ಕೂಸೇ?’

ಒಳಗೆ ಅಡುಗೆ ಮನೆಯಲ್ಲಿ ಸಾಸಿವೆ ಡಬ್ಬಾ “ಠಣ್ಣ” ಅಂತ ಶಬ್ದ ಮಾಡಿದಂತಾಗಿ ಬೆಚ್ಚಿಬಿದ್ದೆ.