ಭಾರತೀಯರೆಲ್ಲರೂ ದೀಪಾವಳಿಯಲ್ಲಿ ಅದ್ದಿ ಮುಳುಗಿಕೊಂಡು ಇರುವಾಗಲೇ, ವಾರಾಂತ್ಯದ ಹಬ್ಬದ ಆಚರಣೆಗಳು ಇನ್ನೂ ಗಮ್ಮತ್ತಿನಿಂದ ನಡೆಯುತ್ತಿರುವಾಗಲೇ ಅತ್ತ ಕಡೆ ಯಾವುದೇ ಸದ್ದಿಲ್ಲದೇ ಗುಮ್ಮನಂತೆ ಕ್ರಿಸ್ಮಸ್ ಹಬ್ಬ ಅಂಗಳಕ್ಕೆ ಕಾಲಿಡುತ್ತದೆ. ಇದ್ದಕ್ಕಿಂದ್ದಂತೆ, ನೋಡನೋಡುತ್ತಾ ಇಡೀ ನಗರ ಕ್ರಿಸ್ಮಸ್ ಹಬ್ಬಕ್ಕೆ ಸಜ್ಜಾಗಿಬಿಡುತ್ತದೆ. ಅಟ್ಟದಲ್ಲಿ ಮಡಿಚಿಟ್ಟಿದ್ದ ಪ್ಲಾಸ್ಟಿಕ್ ಕ್ರಿಸ್ಮಸ್ ಮರಗಳು, ಬಗೆಬಗೆಯ ಅಲಂಕಾರಿಕ ಜೋಡಣೆಗಳು ಕೆಳಗಿಳಿಯುತ್ತವೆ. ಮಾಲ್ ಗೆ ಹೋದರೆ ಅರೆ, ಆಗಲೇ ಅಲ್ಲೊಂದು ಸಾಂಟಾಗೆಂದು ವಿಶೇಷವಾಗಿ ನಿರ್ಮಿತವಾದ ವೇದಿಕೆ ಬಂದು ಕೂತಿದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಒಂದು ಸಮಾಜವು ಇನ್ನೊಂದು ಸಮಾಜದಿಂದ ಯಾವ ಬಗೆಯಲ್ಲಿ ಎಷ್ಟು ಭಿನ್ನವಾಗಿರುತ್ತದೆ? ದೀಪಾವಳಿ ಹಬ್ಬದ ವಾರಗಳಲ್ಲಿ ಆಗಾಗ ನನ್ನಲ್ಲಿ ಈ ಪ್ರಶ್ನೆ ಏಳುತ್ತಿತ್ತು. ಬ್ರಿಸ್ಬನ್ ನಗರದಲ್ಲಿ ದೀಪಾವಳಿಯನ್ನ ಎಲ್ಲರೂ ಆಚರಿಸುತ್ತಾರೆ. ಎಲ್ಲರೂ ಅಂದರೆ ಭಾರತದ ಹಲವು ಭಾಷೆಯ ಗುಂಪುಗಳು, ಅಂತಹ ಭಾರತೀಯ ಗುಂಪುಗಳನ್ನು ಒಗ್ಗೂಡಿಸಿ ಇರುವ ದೊಡ್ಡದೊಂದು ಒಕ್ಕೂಟ, ಅವುಗಳ ಜೊತೆಗೆ ಸೇರಿಕೊಳ್ಳುವ ಫಿಜಿ ಭಾರತೀಯರ ಗುಂಪು, ಶ್ರೀಲಂಕಾದ ಭಾರತೀಯರು ಹೀಗೆ ಹತ್ತು ಹಲವಾರು. ದಕ್ಷಿಣ ಭಾರತದ ತಮಿಳರ ಗುಂಪು, ನಂತರ ಕನ್ನಡಿಗರು, ಅವರ ನಂತರ ತೆಲುಗರು, ಮಧ್ಯದಲ್ಲಿ ಹಿಂದಿ ಭಾಷೆ, ಬಂಗಾಳಿ, ಕೇರಳದ ಮಲಯಾಳಿಗಳು ಎಂಬಂತೆ ಒಟ್ಟಾರೆ ಎಲ್ಲರೂ ದೀಪಾವಳಿಯನ್ನು ಹಲವಾರು ವಾರಾಂತ್ಯಗಳಲ್ಲಿ ಆಚರಿಸುತ್ತಾ ಹೋಗುತ್ತಾರೆ. ತಿಂಗಳಾನುಗಟ್ಟಲೆ ತಯಾರಿ ಮಾಡಿಕೊಂಡು ವ್ಯವಸ್ಥಿತವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ವರ್ಷಕ್ಕೆ ಮೂರು ಅಥವಾ ನಾಲ್ಕು ಸಂದರ್ಭಗಳಲ್ಲಿ ನಡೆಯುವ ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೆಲನಿಮಿಷಗಳ ಮಟ್ಟಿಗೆ ಮಾತ್ರ ತಮ್ಮ ಪ್ರತಿಭೆಗಳನ್ನು ತೋರಲು ಅವಕಾಶವಿರುವುದರಿಂದ ಎಲ್ಲರೂ ಕಷ್ಟಪಟ್ಟು ಸಿದ್ಧತೆ ಮಾಡಿಕೊಂಡಿರುತ್ತಾರೆ. ಹೊರದೇಶಗಳಲ್ಲಿದ್ದರೂ ಶ್ರಮ ಮತ್ತು ಶಿಸ್ತಿನ ಈ ಪ್ರಯತ್ನಗಳನ್ನು ಮೆಚ್ಚಲೇಬೇಕು.

ಎಲ್ಲಾ ಕಾರ್ಯಕ್ರಮಗಳು ಮುಗಿಯಲು ಬರೋಬ್ಬರಿ ನಾಲ್ಕು, ಐದು, ಆರು ವಾರಗಳೇ ಬೇಕಾಗುತ್ತದೆ. ನಗರದ ಮೇಯರ್, ಸ್ಥಳೀಯ ಎಂಪಿಗಳು, ಕೌನ್ಸಿಲರ್ ಗಳು, ರಾಜಕೀಯ ನಾಯಕರು, ಪ್ರಭಾವಿತ ಮತ್ತು ಗಣ್ಯರೆಂದು ಗುರುತಿಸಲ್ಪಟ್ಟ ಭಾರತೀಯರು ವಾರದಿಂದ ವಾರಕ್ಕೆ, ಒಂದು ಭಾಷೆಯ ಕೂಟದಿಂದ ಇನ್ನೊಂದು ಭಾಷೆಯ ಕೂಟಕ್ಕೆ ಹೊರಟು ಹಾಜರಾಗುತ್ತಾರೆ. ಎಲ್ಲದರಲ್ಲೂ ಕಾಣಸಿಕ್ಕುವವರು ಸ್ಥಳೀಯ ಭಾರತೀಯ ರಾಯಭಾರ ಕಚೇರಿಯ ಮುಖ್ಯಸ್ಥರು. ಅವರಿಗೂ, ಮೇಯರ್ ಗೂ ಬಿಡುವಿಲ್ಲದಷ್ಟು ಕಾರ್ಯಕ್ರಮಗಳು. ಜೊತೆಗೆ ಭಾರತೀಯ ಉಡುಗೆತೊಡುಗೆ ಧರಿಸುವುದು, ಭಾರತೀಯ ವಿಭಿನ್ನತೆಯಲ್ಲಿ ಇರುವ ಏಕತೆಯನ್ನು ಪ್ರಶಂಸಿಸುವುದು ಇರುತ್ತದೆ.

ದೀಪಾವಳಿ ಹಬ್ಬದ ಚಟುವಟಿಕೆಗಳು, ಭಾರತೀಯರ ಸಂಭ್ರಮ, ತಿಂಡಿತಿನಿಸು, ಬಣ್ಣಗಳ ಉಡುಪು, ಹೆನ್ನಾ ಕೈ ಚಿತ್ತಾರಗಳು, ಬಾಲಿವುಡ್ ಹಾಡು-ನೃತ್ಯಗಳು ಸ್ಥಳೀಯರನ್ನು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಆಕರ್ಷಿಸುತ್ತಿದೆ. ‘ದಿವಾಲಿ’ (Diwali) ಎನ್ನುವ ಪದ ಸುಲಭವಾಗಿ ನಾಲಿಗೆಯ ಮೇಲೆ ನಲಿದಾಡುತ್ತದೆ. ಭಾರತೀಯರಿಗೆ ತಮ್ಮಗಳ ಹೊಸ ರೇಷ್ಮೆ ಸೀರೆ, ಒಡವೆ, ಕುರ್ತಾ, ಮಕ್ಕಳ ಧರಿಸುವ ಕಳೆಕಳೆಯಾದ, ಹೊಳೆಯುವ ಬಟ್ಟೆಬರೆಗಳನ್ನು ಎಲ್ಲರಿಗೂ ತೋರಿಸುವ ಸದವಕಾಶ. ಸ್ಥಳೀಯ ಆಸ್ಟ್ರೇಲಿಯನ್ನರಂತೂ ಬಣ್ಣಗಳಿಗೆ, ಹಾಡು-ನೃತ್ಯಕ್ಕೆ, ತಿಂಡಿತಿನಿಸಿಗೆ, ಹೆನ್ನಾ ಕಲೆಗೆ ತಲೆತೂಗುತ್ತಾ ಮಾರುಹೋಗುತ್ತಾರೆ. ದಿವಾಲಿ ಪಾರ್ಟಿಗೆ ಬನ್ನಿ ಎಂದು ಆಮಂತ್ರಿಸಿದರೆ ಖುಷಿಖುಷಿಯಾಗಿ ನಮ್ಮ ಝಗಝಗಿಸುವ ಭಾರತೀಯ ಉಡುಪುಗಳನ್ನ, ಒಡವೆಗಳನ್ನ ಧರಿಸಿ ನಗುನಗುತ್ತಾ ಹಾಜರಾಗಿ ಬೆರೆತುಕೊಳ್ಳುತ್ತಾರೆ. ಅದನ್ನೇ ಬಂಡವಾಳ ಮಾಡಿಕೊಂಡು ಅವರವರಲ್ಲೇ ‘ನೆಟ್ವರ್ಕ್’ ಮಾಡುವ ‘ನಮ್ಮವರೂ’ ಅಲ್ಲಿರುತ್ತಾರೆ. ‘ಅವರಿಗೆ ನಾವು, ನಮಗೆ ಅವರು ಆಗಿಬರಬೇಕು ಅಲ್ಲವೇ’ ಎನ್ನುವ ಇಬ್ಬರ ದೇಶಾವರಿ ನಗೆ ಅಲ್ಲಿರುತ್ತದೆ.

ಭಾರತೀಯರೆಲ್ಲರೂ ದೀಪಾವಳಿಯಲ್ಲಿ ಅದ್ದಿ ಮುಳುಗಿಕೊಂಡು ಇರುವಾಗಲೇ, ವಾರಾಂತ್ಯದ ಹಬ್ಬದ ಆಚರಣೆಗಳು ಇನ್ನೂ ಗಮ್ಮತ್ತಿನಿಂದ ನಡೆಯುತ್ತಿರುವಾಗಲೇ ಅತ್ತ ಕಡೆ ಯಾವುದೇ ಸದ್ದಿಲ್ಲದೇ ಗುಮ್ಮನಂತೆ ಕ್ರಿಸ್ಮಸ್ ಹಬ್ಬ ಅಂಗಳಕ್ಕೆ ಕಾಲಿಡುತ್ತದೆ. ಇದ್ದಕ್ಕಿಂದ್ದಂತೆ, ನೋಡನೋಡುತ್ತಾ ಇಡೀ ನಗರ ಕ್ರಿಸ್ಮಸ್ ಹಬ್ಬಕ್ಕೆ ಸಜ್ಜಾಗಿಬಿಡುತ್ತದೆ. ಅಟ್ಟದಲ್ಲಿ ಮಡಿಚಿಟ್ಟಿದ್ದ ಪ್ಲಾಸ್ಟಿಕ್ ಕ್ರಿಸ್ಮಸ್ ಮರಗಳು, ಬಗೆಬಗೆಯ ಅಲಂಕಾರಿಕ ಜೋಡಣೆಗಳು ಕೆಳಗಿಳಿಯುತ್ತವೆ. ಮಾಲ್ ಗೆ ಹೋದರೆ ಅರೆ, ಆಗಲೇ ಅಲ್ಲೊಂದು ಸಾಂಟಾಗೆಂದು ವಿಶೇಷವಾಗಿ ನಿರ್ಮಿತವಾದ ವೇದಿಕೆ ಬಂದು ಕೂತಿದೆ. ಡಿಸಂಬರ್ ತಿಂಗಳಲ್ಲಿ ಅಲ್ಲಿ ಸಾಂಟಾ ಮಕ್ಕಳನ್ನು ಹರಸಿ ಅವರಿಗೆ ಉಡುಗೊರೆ ಕೊಡುವ ನಿಗದಿತ ದಿನಗಳನ್ನು, ಸಮಯವನ್ನು ಆಗಲೇ ಪ್ರಕಟಿಸಿದ್ದಾರೆ. ಸರ್ಕಾರದ ಅಧೀನದಲ್ಲಿರುವ ಮಳಿಗೆಗಳು, ಪಾರ್ಕುಗಳು, ಬೀದಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಕ್ರಿಸ್ಮಸ್ ಅಲಂಕಾರ ಕಂಗೊಳಿಸುತ್ತಿದೆ. ಅವನ್ನು ನೋಡಿ ಜನರಿಗೆ ಉತ್ಸಾಹ ಗೆರಿಗೆದರುತ್ತದೆ. ನಿಧಾನವಾಗಿ ಕ್ರಿಸ್ಮಸ್ ಮೂಡ್ ಎಲ್ಲರನ್ನೂ ಆವರಿಸಿಕೊಳ್ಳುತ್ತದೆ.

ಈ ದೇಶದಲ್ಲಿ ದೀಪಾವಳಿ ಮತ್ತು ಕ್ರಿಸ್ಮಸ್ ಕೈಕೈ ಕುಲುಕುತ್ತಾ ಒಂದನ್ನೊಂದು ಅಪ್ಪಿಕೊಂಡಂತೆ ಒಮ್ಮೊಮ್ಮೆ ಅನ್ನಿಸುತ್ತದೆ. ಎರಡು ವಿಭಿನ್ನ ಸಂಸ್ಕೃತಿಗಳ ಕವಲುಗಳು ಮಾಯವಾಗಿ ಅಲ್ಲಿ ಕೇವಲ ನಮ್ಮನಿಮ್ಮ ಕಥೆಗಳು ಉಳಿಯುತ್ತವೆ ಅನ್ನಿಸತ್ತೆ. ಹೀಗೇ ಒಮ್ಮೆ ದೀಪಾವಳಿ ಸಮಯದಲ್ಲಿ ಒಂದಷ್ಟು ಜನ ಸೇರಿದ್ದಾಗ ಕಥೆಗಳ ಹಂದರವೊಂದು ಸೃಷ್ಟಿಯಾಗಿತ್ತು. ಒಬ್ಬ ಹೆಂಗಸು ತಾನು ತನ್ನ ಕೆಲಸವನ್ನು ಪ್ರೀತಿಸುತ್ತಾ ಹೋದಂತೆ ನೋಡನೋಡುತ್ತಾ ಕ್ರಮೇಣ ಹೇಗೆ ಅದು ತನ್ನನ್ನು ನುಂಗಿ ಹಾಕಿಬಿಟ್ಟಿದೆ ಎನ್ನುವುದನ್ನು ಸಂತೋಷದಿಂದಲೇ ಹೇಳಿಕೊಳ್ಳುತ್ತಿದ್ದಳು. ಮತ್ತೊಬ್ಬ ಹೆಂಗಸು ತಾನು ಮತ್ತು ಅವಳ ಗುಂಪು ಮಾಡುತ್ತಿರುವ ಕೆಲಸದ ಬಗ್ಗೆ ಮಾತನಾಡುತ್ತಾ ಸಣ್ಣದಾಗಿ ಹುಟ್ಟಿಕೊಂಡ ಪರಿಕಲ್ಪನೆಯೊಂದು ಈಗ ಹೇಗೆ ದೊಡ್ಡದಾಗಿ ಬೆಳೆಯುತ್ತಿದೆ ಎನ್ನುವುದನ್ನ ಯಾವುದೇ ಒತ್ತಿಲ್ಲದೆ, ಕಣ್ಣಿನ ಹೊಳಪನ್ನು ಮಾತ್ರ ಮಿಂಚಿಸುತ್ತಾ ಹೇಳಿಕೊಳ್ಳುತ್ತಿದ್ದಳು.

ಮಾತು ಎಲ್ಲಿಗೋ ಹೊರಳಿ ಬೆಳೆಯುತ್ತಿರುವ ಮಕ್ಕಳು ಎಷ್ಟು ಚೆಂದನೆ ತರುಣ-ತರುಣಿಯರಾಗುವ ಹಂತಕ್ಕೆ ಬಂದಿದ್ದಾರೆ ಎನ್ನುವುದರಲ್ಲಿ ಬಂದು ನಿಂತಿತು. ಅಲ್ಲೇ ಇದ್ದ ಎಳೆ ತರುಣಿಯೊಬ್ಬಳ ತಾಯಿ ನಿಟ್ಟುಸಿರುಬಿಟ್ಟು, “ಆ ಮಾತು ಹಾಗಿರಲಿ. ನನ್ನ ಮಗಳು ನಿನ್ನೆ ರಾತ್ರಿ ತಾನೇ ಊರಿಂದ ಮರಳಿದಳು. “ಅಮ್ಮ, ನಾನು ಎರಡು ತಿಂಗಳ ಗರ್ಭಿಣಿ,” ಎಂದಳು. ನಾವೀಗ ಈ ಅನಪೇಕ್ಷಿತ ಸನ್ನಿವೇಶವನ್ನು ನಿಭಾಯಿಸಬೇಕು,” ಎಂದು ಹೇಳುತ್ತಾ ನೀಟಾಗಿದ್ದ ಹುಬ್ಬನ್ನು ಬೈತಲೆ ಅಂಚಿನವರಗೆ ಏರಿಸಿದಳು. ಹೇಗೆ ನಿಭಾಯಿಸಬೇಕೆಂದು ಯೋಚಿಸುತ್ತಿದ್ದೀರಾ ಎಂದು ನಾನು ಬಾಯಿಹಾಕಿದೆ. ಆ ಹೆಂಗಸು, ಇನ್ನೂ ಅದರ ಬಗ್ಗೆ ಮನೆಯಲ್ಲಿ ಯಾರೂ ಮಾತನಾಡಿಲ್ಲ. ರಾತ್ರಿ ತಾನೆ ವಿಷಯ ಗೊತ್ತಾಯ್ತು. ಬೆಳಗ್ಗೆ ಎಲ್ಲರೂ ಅವರವರ ಕೆಲಸಗಳಲ್ಲಿ ನಿರತರಾಗಿದ್ದಿವಿ. ಸಂಜೆ ಮನೆಗೆ ಮರಳಿ ಅಲಂಕರಿಸಿಕೊಂಡು ಈ ಹಬ್ಬದಾಚರಣೆಗೆ ಬಂದಿದ್ದೀವಿ, ಅದರ ಬಗ್ಗೆ ಯೋಚಿಸಲೂ ಕೂಡ ಸಮಯವಾಗಿಲ್ಲ, ಎಂದಳು. ಅಷ್ಟೆಲ್ಲಾ ಹೇಳುವಾಗ ಅವಳಲ್ಲಿ ಯಾವುದೇ ಭಾವಾವೇಶವಿರಲಿಲ್ಲ. ಮುಂದಿನ ದಾರಿ ನಿಚ್ಚಳವಾಗಿದ್ದಂತೆ ತೋರಿತು – ಮಗಳಿಗೆ ಬೇಕಾದ ಬೆಂಬಲವನ್ನು ಕೊಡುವುದು, ಮಗುವನ್ನ ಬೆಳೆಸುವುದು.

ತಕ್ಷಣ ನೆನಪಿಗೆ ಬಂದದ್ದು ನನ್ನ ಹೆರಿಗೆಯ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದಾಗ ಅದೇ ಆಗಷ್ಟೇ ತಾಯಿಯಾಗಿದ್ದ ಹದಿನಾರರ ಶಾಲಾಹುಡುಗಿ. ಅವಳ ನಲವತ್ತು ವರ್ಷದ ತಾಯಿ ಮತ್ತು ಅರವತ್ತು ವರ್ಷದ ಅಜ್ಜಿ ಇಬ್ಬರೂ ಸೇರಿ ಹಸುಕಂದನನ್ನೂ ಮತ್ತು ಹುಡುಗಿಯನ್ನೂ ಉಪಚರಿಸುತ್ತಿದ್ದರು. ಹುಡುಗಿಗೆ, ಅವಳ ಗೆಳೆಯನಿಗೆ ತಿಳುವಳಿಕೆ ಸಾಲದೆ ಉಂಟಾದ ಈ ಸನ್ನಿವೇಶವನ್ನು ಮನೆಯವರೆಲ್ಲರೂ ಸೇರಿ ಒಮ್ಮತದಿಂದ ನಿಭಾಯಿಸುವ ಬಗ್ಗೆ ಸಮಾಧಾನವಾಗಿ ನನ್ನೊಡನೆ ಹೇಳಿಕೊಂಡರು. ಏನೇ ನಿರ್ಧಾರವಾಗಲೀ ಅಂತಹ ಸೂಕ್ಷ್ಮ ಸಮಯದಲ್ಲಿ ಹೆಣ್ಣುಮಕ್ಕಳ ಪರ ನಿಂತ ಆ ಹೆಂಗಸರ ಬಗ್ಗೆ ಹೆಮ್ಮೆಯೆನಿಸಿತು.

ಅದೇ ನೆನಪಿನಲ್ಲಿ ಅಂತಹ ಅನುಭವದ ಆ ಕಡೆಯ ವೈರುಧ್ಯವೂ ನೆನಪಿಗೆ ಬಂತು. ಇದೇ ವರ್ಷ ಈಸ್ಟರ್ ಹಬ್ಬಕ್ಕೆ ಮುಂಚೆ ಸಹೋದ್ಯೋಗಿಯೊಬ್ಬರು ಮಗಳ ಹದಿನೆಂಟನೇ ಹುಟ್ಟುಹಬ್ಬದ ಪಾರ್ಟಿಗೆ ಸಿದ್ಧರಾಗುತ್ತಿದ್ದರು. ಮಗಳಿಗೆ ನನ್ನ ಕಂಗ್ರಾಟ್ಸ್ ಹೇಳಿ ಎಂದರೆ ನಿಟ್ಟುಸಿರು ಬಿಡುವುದೇ?! ಯಾಕೆಂದೆ. “ಕಾನೂನಿನ ಪ್ರಕಾರ ಅವಳೀಗ ವಯಸ್ಕಳು. ಅವಳ ಜೀವನದ ಎಲ್ಲಾ ನಿರ್ಧಾರಗಳನ್ನ ಅವಳೇ ತೆಗೆದುಕೊಳ್ಳಬಹುದು. ಹದಿನೆಂಟು ದಾಟಿತು ಅಂದರೆ ಕಾನೂನೇನೋ ಸಡಿಲವಾಯಿತು, ನಿಜ. ಆದರೆ ಇದ್ದಕ್ಕಿದ್ದಂತೆ ಬದಲಾಯಿಸುವ ಜೀವನಶೈಲಿಯಿಂದ ಆಗುವ ಪರಿಣಾಮಗಳ ಹೊರೆ ಯಾರ ಮೇಲೆ ಬೀಳುತ್ತದೆ? ನನ್ನ ಮಗಳು ಮತ್ತು ಹತ್ತೊಂಭತ್ತರ ಮಗ ಅವರವರ ಸ್ನೇಹಿತರ ಜೊತೆ ವಾರಾಂತ್ಯಗಳನ್ನು ಕಳೆದು ಬರುವಾಗ ನನ್ನೆದೆ ಹೊಡೆದುಕೊಳ್ಳುತ್ತಿರುತ್ತದೆ. ಯಾರ ಜೊತೆ ಎಲ್ಲಿ ಹೋದರು, ಎಷ್ಟು ಆಲ್ಕೋಹಾಲ್ ಸೇವಿಸಿದರು, ಎಲ್ಲಾದರೂ ಯಾರಿಗಾದರೂ ಹಾನಿ ಮಾಡಿದರೇ ಅಥವಾ ಇವರಿಗೇ ಕೆಟ್ಟ ಅನುಭವ ಆಯ್ತೆ, ಸ್ನೇಹಿತರ ಒತ್ತಾಯಗಳು ಯಾವ ರೂಪದಲ್ಲಿದ್ದವು, ಇಬ್ಬರೂ ಗರ್ಭನಿರೋಧಕ ಕ್ರಮಗಳನ್ನು ಪಾಲಿಸಿದರೇ, ಸೋಮವಾರವಾದರೆ ಮತ್ತೆ ಪಾರ್ಟ್ ಟೈಮ್ ಕೆಲಸ ಮತ್ತು ಕಾಲೇಜು ಓದಿಗೆ ಮರಳಬೇಕು, ಒಹ್ ದೇವರೇ,” ಎಂದೆಲ್ಲಾ ಒಂದೇ ಉಸಿರಿಗೆ ಹರಿಬಿಟ್ಟರು. ಯಾವ ಸಂಸ್ಕೃತಿಯಾದರೇನು, ಯಾವ ದೇಶವಾದರೇನು, ನಮ್ಮ ಚಿಂತನೆಗಳು ಅವವೇ ಎಂದೆನಿಸಿತು.

ನಿರೀಕ್ಷೆಗೆ ಮೀರಿ ಅವರ ಮಾತು ಮುಂದುವರೆದು “ನಿಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಕ್ಕಳನ್ನ ಬಹಳ ಕಟ್ಟುನಿಟ್ಟಾಗಿ ಬೆಳೆಸುತ್ತೀರಾ, ಅಲ್ಲವೇ? ನನ್ನ ಮಗಳ ಇಂಡಿಯನ್ ಸ್ನೇಹಿತೆಯೊಬ್ಬಳು ಆಲ್ಕೋಹಾಲ್ ಮುಟ್ಟಲು, ಬಾಯ್ ಫ್ರೆಂಡ್ ಗಳ ಜೊತೆ ನಿರ್ಭಿಡೆಯಿಂದ ವರ್ತಿಸಲು ಹೆದರುತ್ತಾಳೆಂದು ನನ್ನ ಮಗಳು ಹೇಳುತ್ತಾ ನಗುತ್ತಾಳೆ. ಅವಳ ನಗು ನೋಡಿ ನನಗೆ ಕೋಪ ಬರುತ್ತದೆ. ನಾವೂ ಕೂಡ ಸ್ವಲ್ಪ ಹಾಗಿದ್ದರೆ ಒಳ್ಳೆದಲ್ಲವೇ ಎಂದೆ ಒಮ್ಮೆ. ನನ್ನ ಮಗಳು ‘ಅಮ್ಮ, ನೀನೇನು ಜೋಕ್ ಮಾಡ್ತಾ ಇಲ್ಲ ತಾನೇ. ಅವಳ ಅಪ್ಪ-ಅಮ್ಮಂದಿರು ಅವಳನ್ನ ನಂಬುವುದಿಲ್ಲ, ಎಲ್ಲವನ್ನೂ ಪ್ರಶ್ನಿಸುತ್ತಾರೆ. ಸದಾ ದೇವರುಗಳು, ಪೂಜೆ, ಅವರಿವರ ಜೊತೆ ಸೇರಬೇಡ ಅಂತಾರಂತೆ. ಅದೆಲ್ಲಾ ಅವಳಿಗೆ ವಿಚಿತ್ರವಾಗಿ ಕಾಣತ್ತೆ. ಅವಳಿಗೆ ಬೇಕಾದ ವೈಯಕ್ತಿಕ ಸ್ವಾತಂತ್ರವೇ ಇಲ್ಲ ಎಂದು ಅವಳು ಸದಾ ಕೊರಗುತ್ತಾಳೆ. ಆಸ್ಟ್ರೇಲಿಯನ್ ಆದರೂ ನಿಜವಾಗಿಯೂ ಆಸ್ಟ್ರೇಲಿಯನ್ ಆಗಲಿಲ್ಲ ಅಂತ ಯಾವಾಗಲೂ ಬೇಸರಿಸಿಕೊಳ್ಳುತ್ತಾಳೆ. ವಾಟ್ ಆ ಸ್ಯಾಡ್ ಲೈಫ್ ಅವಳದ್ದು, ಎಂದುಬಿಟ್ಟಳು.’ ಅವಳ ನಿಚ್ಚಳ ನಿಲುವನ್ನ ನೋಡಿ ನನಗೇ ಕನ್ಫ್ಯೂಸ್ ಆಗಿಹೋಯ್ತು,” ಎಂದರು.

ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯನ್ ಅಂದರೆ ಯಾರು, ಅದು ಯಾವ ಅಸ್ಮಿತೆ ಅನ್ನುವುದರ ಬಗ್ಗೆ ನಾನು ಒಂದು ಕಾನ್ಫರೆನ್ಸ್ ಲೇಖನವನ್ನ ಬರೆಯಲು ಶುರುಮಾಡಿದ್ದೆ. ನನ್ನ ಇಬ್ಬರು ಸಹಲೇಖಕರು ಆ ವಿಷಯವನ್ನ ಕೈಗೆತ್ತಿಕೊಳ್ಳಲು ಒಪ್ಪಲಿಲ್ಲ. ಕಡೆಗೆ ಲೇಖನವನ್ನ ಕಸದ ಡಬ್ಬಿಗೆ ಹಾಕಿದೆ. ನಿರಾಸೆಯಾಗಿತ್ತು. ಈ ಹೆಂಗಸಿನ ಮತ್ತು ಆಕೆಯ ಮಗಳ ಮಾತುಗಳ ಕತೆಯನ್ನು ಕೇಳುತ್ತಾ ಅದೇ ಅನ್ನಿಸಿತು. ಆಸ್ಟ್ರೇಲಿಯನ್ ಅಂದರೆ ಯಾರು? ಅಬೊರಿಜಿನಿಗಳೇ, ಬಿಳಿಯರೇ, ವಲಸೆ ಬಂದು ಪಟ್ಟ ಕಟ್ಟಿಕೊಂಡವರೇ … ಮತ್ತಷ್ಟು ಕತೆಗಳನ್ನ ಹೆಕ್ಕಬೇಕು.

ಅವರಿವರ ಕತೆಗಳನ್ನ ಕೇಳಿ, ಇನ್ನೊಂದಷ್ಟನ್ನ ನೆನಪಿನಾಳದಿಂದ ಹೆಕ್ಕಿ ಚಿತ್ತಪಟಲದ ಮುಂದೆ ಹರಡಿಕೊಂಡು, ಸುತ್ತಲೂ ನಡೆಯುತ್ತಿದ್ದ ದೀಪಾವಳಿ ಸಂಭ್ರಮವನ್ನ ಅನುಭವಿಸುತ್ತಾ ಕೂತಿದ್ದ ನನಗೂ ಒಂದಷ್ಟು ಕನ್ಫ್ಯೂಸ್ ಆಯ್ತು. ಆವರಿಸಿಕೊಂಡು ನಡೆಯುತ್ತಿದ್ದ ದೀಪಾವಳಿ ಒಂದು ಬಹುಸಂಸ್ಕೃತಿ ಹಬ್ಬದ ರೂಪವನ್ನ ಪಡೆದಿತ್ತು. ನಮ್ಮವರು, ಅವರು, ಅವರ ಅವರು ಎಲ್ಲರೂ ನಗುತ್ತಾ ಸಂತೋಷವನ್ನ ಬಿಂಬಿಸುತ್ತಿದ್ದರು.


ಇಲ್ಲಿ ಬೇಕು ಬೇಡ ಎಂಬುದಿದೆಯೇ? ಯಾವುದು ಹತ್ತಿರ, ಯಾವುದು ದೂರ? ವಿಭಿನ್ನ ಸಂಸ್ಕೃತಿಗಳು ಮುಖಾಮುಖಿಯಾದರೆ ನಾವು ಯಾವ್ಯಾವ ನಿರ್ದಿಷ್ಟ ಗೆರೆಗಳನ್ನು ಎಳೆಯಬೇಕು? ಗೆರೆಗಳನ್ನ ಹಾಕಿ ಅದನ್ನು ಸುಂದರ ರಂಗೋಲಿಯನ್ನಾಗಿ ಮಾಡುವುದು ಹೇಗೆ? ಕಾಲಕ್ಕೆ ತಕ್ಕಂತೆ ಅಗತ್ಯವಿರುವ ಮಿತಿಗಳನ್ನು ಅಥವಾ ಸಾಮರ್ಥ್ಯಗಳನ್ನು ಗುರುತಿಸಲು, ಅವನ್ನು ಗಮನಿಸುತ್ತಾ ಬದುಕಲು ಒಬ್ಬರಿಗೊಬ್ಬರು ಸಹಕರಿಸಿದರೆ ಸಾಕೇ. ಆದರೆ ಅದನ್ನು ಆಚರಣೆಗೆ ಇಳಿಸಬೇಕೆಂದರೆ ಅಷ್ಟು ಸುಲಭವೇ. ಎಲ್ಲರೂ ಎಲ್ಲರಿಗೂ ಹೇಗೆ ಒತ್ತಾಸೆಯಾಗಿ ನಿಲ್ಲುವುದು ಎಂಬ ಪ್ರಶ್ನೆ ಅಲ್ಲಾಡದೆ ದೀಪಗಳ ಸಾಲಿನಲ್ಲೇ ನಿಂತುಬಿಟ್ಟಿದೆ.