ಮೊಲದ ಕಾಲನ್ನು ಜೇಬಿನಲ್ಲಿಟ್ಟುಕೊಂಡು ಓಡಾಡಿಕೊಂಡಿದ್ದರೆ ಒಳ್ಳೆಯ ಕತೆ ಬರೆಯಲಾಗುವುದಿಲ್ಲ ಎನ್ನುವ ಲೇಖಕ ಐಸಾಕ್ ಬಾಷೆವಿಸ್ ಸಿಂಗರ್ ಬರೆದಿದ್ದು ಯಿದ್ದಿಷ್ ಭಾಷೆಯಲ್ಲಿ.  ಜಗತ್ತಿನಲ್ಲಿ ಅತೀ ಕಡಿಮೆ ಜನರು ಮಾತನಾಡುವ ಭಾಷೆಯಿದು. ಆದರೆ ಇದೇ ಭಾಷೆಯಲ್ಲಿ ಅವನು ಸೃಷ್ಟಿಸಿದ ಸಾಹಿತ್ಯ ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡಿತು. ಅನುವಾದದ ಮೂಲಕವೇ ಬಹುದೊಡ್ಡ ಓದುಗ ಸಮುದಾಯ ಅವನಿಗೆ ಒಲಿಯಿತು. ನೊಬೆಲ್ ಪ್ರಶಸ್ತಿಯೂ ಬಂತು.  1968ರಲ್ಲಿ ಮತ್ತೊಬ್ಬ ಲೇಖಕ ಹೆರಾಲ್ಡ್ ಪ್ಲೆಂಡರ್  ‘ಪ್ಯಾರಿಸ್ ರಿವ್ಯೂ’ ಪತ್ರಿಕೆಗಾಗಿ ನಡೆಸಿದ ಸಂದರ್ಶನದಲ್ಲಿ ಸಿಂಗರ್,  ಭಾಷೆ, ಧರ್ಮ, ರಾಜಕೀಯ ಮತ್ತು ನಂಬಿಕೆಗಳ ಕುರಿತು ವಿವರವಾಗಿ ಮಾತನಾಡಿದ್ದಾನೆ. ಆ ಸಂದರ್ಶನವನ್ನು ಲೇಖಕಿ ಹೇಮಾ ಎಸ್.  ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

 

ಸಂದರ್ಶಕ : ಹಲವು ಬರಹಗಾರರು ಬರವಣಿಗೆಯ ಆರಂಭದ ದಿನಗಳಲ್ಲಿ ಬೇರೆ ಬರಹಗಾರರನ್ನು ತಮ್ಮ ಮಾದರಿಯಾಗಿ ಇಟ್ಟುಕೊಂಡಿರುತ್ತಾರೆ.

ಸಿಂಗರ್‌ : ನನಗೆ ನನ್ನಣ್ಣನೇ ಮಾದರಿ. The Brothers Askenazi ಬರೆದ ಐ. ಜೆ. ಸಿಂಗರ್‌. ಅವನಿಗಿಂತ ಒಳ್ಳೆಯ ಮಾದರಿ ನನಗೆ ಸಿಕ್ಕುತ್ತಿರಲಿಲ್ಲ. ಅಪ್ಪ ಅಮ್ಮನ ಜೊತೆಗಿನ ಅವನ ಸಂಘರ್ಷ, ಅವನು ಬರವಣಿಗೆ ಆರಂಭಿಸಿದ್ದು, ನಿಧಾನವಾಗಿ ಬೆಳೆದು ತನ್ನ ಅಸ್ತಿತ್ವವನ್ನು ರೂಪಿಸಿಕೊಂಡಿದ್ದು ಎಲ್ಲವನ್ನೂ ನೋಡಿದ್ದೆ. ಹಾಗಾಗಿ ಅವನೇ ನನ್ನ ಮಾದರಿಯಾದ. ಅಷ್ಟೇ ಅಲ್ಲ ನಂತರದ ವರ್ಷಗಳಲ್ಲಿ ನನ್ನ ಬರವಣಿಗೆ ಪ್ರಕಟವಾಗಲು ಆರಂಭವಾದಾಗ ಅವನು ಬರವಣಿಗೆಯ ಕುರಿತು ಕೆಲವು ನಿಯಮಗಳನ್ನು ಕುರಿತು ಹೇಳಿದ್ದ. ಅವುಗಳನ್ನು ಕೇಳಿ ಹೆದರಿದ್ದೆ. ಅವುಗಳನ್ನು ಮುರಿಯುವಂತಿಲ್ಲ ಅಂತೇನಿಲ್ಲ. ಆದರೂ ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಅವನು ಹೇಳಿದ ಒಂದು ನಿಯಮ ಸತ್ಯ ಎಂದೂ ಹಳತಾಗುವುದಿಲ್ಲ. ವಿವರಣೆಗಳು ಅಪ್ರಸ್ತುತವಾಗುತ್ತವೆ. ಲೇಖಕ ವಿಪರೀತವಾಗಿ ವಿವರಿಸಲು ಶುರುಮಾಡಿದರೆ ಅವನು ಅಪ್ರಸ್ತುತವಾಗಿಬಿಡುತ್ತಾನೆ.

ಸುಮ್ಮನೆ ಕಲ್ಪಿಸಿಕೊಳ್ಳಿ ಒಂದು ವೇಳೆ ಹೋಮರ್‌ ತನ್ನ ನಾಯಕರ ಕೃತ್ಯಗಳನ್ನು ಗ್ರೀಕ್‌ ತತ್ವಶಾಸ್ತ್ರದನುಸಾರ ಇಲ್ಲವೇ ಮನಃಶಾಸ್ತ್ರದನುಸಾರ ವಿವರಿಸಿದ್ದರೆ ಇಂದು ಯಾರೂ ಅವನನ್ನು ಓದುತ್ತಲೇ ಇರಲಿಲ್ಲ. ಅದೃಷ್ಟವಶಾತ್‌ ಹೋಮರ್‌ ಪ್ರತಿಮೆಗಳನ್ನು, ಸತ್ಯಗಳನ್ನು ಮಾತ್ರ ನಮ್ಮ ಮುಂದಿಟ್ಟ. ಇದರಿಂದ ಇಲಿಯಡ್‌ ಮತ್ತು ಒಡಿಸ್ಸಿ ಇಂದಿಗೂ ಪ್ರಸ್ತುತವಾಗಿದೆ. ಇದು ಎಲ್ಲ ಬಗೆಯ ಬರವಣಿಗೆಗೂ ಅನ್ವಯಿಸುತ್ತದೆ. ಲೇಖಕ ನಾಯಕನ ಉದ್ದೇಶಗಳನ್ನು ಮನಃಶಾಸ್ತ್ರದ ದೃಷ್ಟಿಕೋನದಿಂದ ವಿವರಿಸಲು ಆರಂಭಿಸಿದ ತಕ್ಷಣ ಸೋಲುತ್ತಾನೆ. ಅಂದಮಾತ್ರಕ್ಕೆ ಮನಃಶಾಸ್ತ್ರೀಯ ಕಾದಂಬರಿಯನ್ನು ವಿರೋಧಿಸುತ್ತೇನೆ ಎಂದಲ್ಲ. ಕೆಲವು ಅತ್ಯುತ್ತಮ ಬರಹಗಾರರು ಇದನ್ನು ಸಾಧಿಸಿದ್ದಾರೆ. ಆದರೆ ಅವರನ್ನು ಅನುಕರಿಸುವುದು ಯುವಲೇಖಕರಿಗೆ ಸೂಕ್ತ ಅಂತ ನನಗನ್ನಿಸುವುದಿಲ್ಲ. ಉದಾಹರಣೆಗೆ ದಾಸ್ತೋವೆಸ್ಕಿಯನ್ನೇ ತೆಗೆದುಕೊಳ್ಳಿ. ಅವನನ್ನು ಮನಃಶಾಸ್ತ್ರೀಯ ಪಂಥದ ಲೇಖಕ ಎಂದು ಕರೆಯುತ್ತಾರೆ. ನಾನು ಹಾಗೆನ್ನಲಾರೆ. ಅವನು ವಿಷಯಾಂತರ ಮಾಡುತ್ತಿದ್ದ. ತನ್ನದೇ ರೀತಿಯಲ್ಲಿ ವಿಷಯಗಳನ್ನು ವಿವರಿಸುತ್ತಿದ್ದ. ಆದರೂ ಸತ್ಯವನ್ನು ಕಟ್ಟಿಕೊಟ್ಟ ರೀತಿಯಲ್ಲಿ ಅವನ ಶಕ್ತಿಯಿತ್ತು.

ಸಂದರ್ಶಕ : ಮನೋವಿಶ್ಲೇಷಣೆ ಮತ್ತು ಬರವಣಿಗೆಯ ಬಗ್ಗೆ ನಿಮಗೇನನ್ನಿಸುತ್ತದೆ? ಹಲವು ಲೇಖಕರು ಮನೋವಿಶ್ಲೇಷಣೆಯು ತಮ್ಮನ್ನು ಹಾಗೂ ತಾವು ಬರೆಯುತ್ತಿರುವ ಪಾತ್ರಗಳನ್ನು ಅರಿಯಲು ನೆರವಾಗುತ್ತದೆ ಎಂದುಕೊಳ್ಳುತ್ತಾರೆ.

ಸಿಂಗರ್‌ : ಲೇಖಕ ವೈದ್ಯರ ಬಳಿ ಹೋಗಿ ಮನೋವಿಶ್ಲೇಷಣೆಗೆ ಒಡ್ಡಿಕೊಳ್ಳುವುದು ಅವನ ವೈಯುಕ್ತಿಕ ವಿಷಯ. ಆದರೆ ತನ್ನ ಬರವಣಿಗೆಯಲ್ಲಿ ಮನೋವಿಶ್ಲೇಷಣೆಯನ್ನು ತೂರಿಸುವುದು ಭಯಂಕರ ಸಂಗತಿ. ಇದಕ್ಕೆ ಉತ್ತಮ ಉದಾಹರಣೆ Point Counter Point. ಅವನ ಹೆಸರೇನು?

ಅಲ್ಡಸ್‌ ಹಕ್ಸ್ಲೆ. ಅವನು ಫ್ರಾಯ್ಡನ ಮನೋವಿಶ್ಲೇಷಣೆಯಂತೆ ಕಾದಂಬರಿ ಬರೆಯಲು ಪ್ರಯತ್ನಿಸಿದ. ನನ್ನ ಪ್ರಕಾರ ಅವನು ಸೋತ. ಆ ಕಾದಂಬರಿ ಈಗೆಷ್ಟು ಹಳತಾಗಿದೆಯೆಂದರೆ ಶಾಲೆಯಲ್ಲಿ ಕೂಡ ಅದನ್ನು ಓದುವುದಿಲ್ಲ. ಹಾಗಾಗಿ ನನ್ನ ಪ್ರಕಾರ ಲೇಖಕ ಮನೋವಿಶ್ಲೇಷಣೆ ಮಾಡುತ್ತಾ ಕೂತರೆ ತನ್ನ ಕೃತಿಯನ್ನು ಹಾಳುಮಾಡುತ್ತಾನೆ.

ಸಂದರ್ಶಕ : Adventures of Sherlock Holmes ನೀವು ಓದಿದ ಮೊದಲ ಕಾದಂಬರಿ ಅಂತ ಒಮ್ಮೆ ಹೇಳಿದ್ದಿರಿ.

ಸಿಂಗರ್‌ : ಹೌದು. ಅದನ್ನು ಓದಿದಾಗ ನನಗೆ ಹತ್ತೋ ಹನ್ನೊಂದೊ ವರ್ಷ. ಆಗ ಅದು ಅದ್ಭುತ ಅನ್ನಿಸಿತ್ತು. ಈಗ ಮತ್ತೆ ಶೆರ್ಲಾಕ್‌ ಹೋಮ್ಸನನ್ನು ಓದಲಾರೆ. ನಿರಾಸೆಯಾಗಿಬಿಡಬಹುದು ಎನ್ನುವ ಭಯವಿದೆ.

ಸಂದರ್ಶಕ : ಎ. ಕೊನನ್‌ ಡೊಯ್ಲ್‌ ನಿಮ್ಮನ್ನು ಪ್ರಭಾವಿಸಿದ್ದಾನೆ ಅಂತನ್ನಿಸುತ್ತದೆಯೇ?

ಸಿಂಗರ್‌ : ಶೆರ್ಲಾಕ್‌ ಹೋಮ್ಸ್‌ನ ಕತೆಗಳು ನನ್ನನ್ನು ಪ್ರಭಾವಿಸಿತು ಅನ್ನಿಸುವುದಿಲ್ಲ. ಆದರೆ ಚಿಕ್ಕಂದಿನಿಂದಲೂ ಕತೆಯಲ್ಲೊಂದು ಟೆನ್ಷನ್‌ ಇರೋದು ಇಷ್ಟವಾಗೋದು. ಆರಂಭ, ಅಂತ್ಯದೊಂದಿಗೆ ಮಧ್ಯದಲ್ಲಿ ಏನಾಗುತ್ತೋ ಅನ್ನೋದು ಇರಬೇಕು. ಈ ನಿಯಮವನ್ನು ಇವತ್ತಿಗೂ ಇಟ್ಟುಕೊಂಡಿದಿನಿ. ಈ ಕಾಲದಲ್ಲಿ ಕತೆಹೇಳೋದು ಅನ್ನೋದು ಬಹುತೇಕ ಮರೆತುಹೋದ ಕಲೆಯಂತಾಗಿದೆ. ಈ ರೀತಿಯ ಮರೆವಿನಿಂದ ನರಳದಂತಿರಲು ಬಹಳ ಪ್ರಯತ್ನಿಸ್ತಿನಿ. ನನಗೆ ಕತೆಯೆಂದರೆ ಕತೆ. ಓದುಗರು ಕೇಳಲು ಇಷ್ಟಪಡುವಂತಹ ಏನಾಗುತ್ತೆ ಅಂತ ತಿಳಿಯಲು ಇಷ್ಟಪಡುವಂತಹ ಕತೆ. ಓದುಗರಿಗೆ ಶುರುವಿನಲ್ಲೇ ಏನಾಗುತ್ತೆ ಅಂತ ಗೊತ್ತಾಗಿಬಿಟ್ಟರೆ ಬಹಳ ಒಳ್ಳೆಯ ವಿವರಣೆ ಇದ್ದರೂ ಅದು ಕತೆಯಲ್ಲ.

ಸಂದರ್ಶಕ : ಪ್ರಶಸ್ತಿ ಸಮಿತಿಯು ಇಸ್ರೇಲಿನ ಧ್ವನಿಯನ್ನು ಎತ್ತಿಹಿಡಿದ ಇಬ್ಬರು ಯಹೂದಿ ಲೇಖಕರಿಗೆ ಪ್ರಶಸ್ತಿಯನ್ನು ನೀಡುತ್ತಿರುವುದಾಗಿ ಹೇಳಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಸಿಂಗರ್‌ : ನನ್ನ ಮಟ್ಟಿಗೆ ಯಿದ್ದಿಶ್ ಲೇಖಕರು, ಹೀಬ್ರೂ ಲೇಖಕರು, ಇಂಗ್ಲೀಷ್‌ ಲೇಖಕರು, ಸ್ಪಾನಿಷ್‌ ಲೇಖಕರು ಮಾತ್ರ ಇರುವುದು. ಯಹೂದಿ ಲೇಖಕ ಇಲ್ಲವೇ ಕ್ಯಾಥೊಲಿಕ್‌ ಲೇಖಕ ಅಂದರೆ ಏನು ನನಗರ್ಥವಾಗಲಿಲ್ಲ. ಯಹೂದಿ ಲೇಖಕ ಎನ್ನುವುದನ್ನು ಒಪ್ಪಲೇಬೇಕು ಎಂದಾದರೆ ಅವನಿಗೆ ಹೀಬ್ರೂ, ಯಿದ್ದಿಶ್‌, ತಾಲ್ಮುದ್‌, ಮಿದ್ರಸಾ, ಹಾಸಿದಿಕ್‌ ಸಾಹಿತ್ಯ, ಕಬ್ಬಾಲಾ ಮೊದಲಾದವುಗಳೆಲ್ಲ ಗೊತ್ತಿರಬೇಕು. ಇವೆಲ್ಲ ಗೊತ್ತಿದ್ದು ಅವನು ಯಹೂದಿಯರ ಬಗ್ಗೆ ಯಾವುದೇ ಭಾಷೆಯಲ್ಲಿ ಬರೆದರೂ ಅವನನ್ನು ಯಹೂದಿ ಲೇಖಕ ಎಂದು ಕರೆಯಬಹುದು. ಅವನನ್ನು ಕೇವಲ ಲೇಖಕ ಅಂತಲೂ ಕರೆಯಬಹುದು.

ಸಂದರ್ಶಕ : ನೀವು ಯಿದ್ದಿಶ್‌ ಭಾಷೆಯಲ್ಲಿ ಬರೆಯುವಿರಿ. ಅದನ್ನು ಓದಬಲ್ಲ ಸಮುದಾಯದವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ನಿಮ್ಮ ಪುಸ್ತಕಗಳು ೫೮ ಭಾಷೆಗಳಿಗೆ ಅನುವಾದಗೊಂಡಿವೆ. ನಿಮ್ಮ ಬಹುತೇಕ ಓದುಗರು ನಿಮ್ಮನ್ನು ಇಂಗ್ಲಿಷ್‌ ಇಲ್ಲವೇ ಫ್ರೆಂಚ್‌ ಭಾಷೆಯಲ್ಲಿ ಓದುತ್ತಾರೆ ಎಂದು ಹೇಳಿದ್ದಿರಿ. ನಿಮ್ಮನ್ನು ಯಿದ್ದಿಶ್‌ ಭಾಷೆಯಲ್ಲೇ ಓದುವಂತಹ ಲೇಖಕರು ಬೆರಳೆಣಿಕೆಯಷ್ಟು. ನಿಮ್ಮ ಬರವಣಿಗೆ ಅನುವಾದದಲ್ಲಿ ಸೊರಗುತ್ತದೆ ಅನ್ನಿಸುತ್ತದೆಯೇ?

ಸಿಂಗರ್‌ : ಯಿದ್ದಿಶ್‌ ಭಾಷೆಯಲ್ಲಿ ನನಗೆ ಹೆಚ್ಚಿನ ಓದುಗರಿಲ್ಲ ಎನ್ನುವುದು ಬೇಸರದ ಸಂಗತಿ. ಭಾಷೆಯೊಂದು ಬೆಳೆಯುವುದರ ಬದಲು ಅವನತಿಯತ್ತ ಸಾಗುತ್ತಿರುವುದು ಒಳ್ಳೆಯದಲ್ಲ. ಯಿದ್ದಿಶ್‌ ಭಾಷೆ ಅರಳಿ ನಳನಳಿಸಬೇಕೆಂದು ಬಯಸುವ ಯಿದ್ದಿಶ್‌ ಜನರಂತೆ ನಾನು ಕೂಡ ಬಯಸುತ್ತೇನೆ. ಅನುವಾದದ ವಿಷಯಕ್ಕೆ ಬರುವುದಾದರೆ ಸಹಜವಾಗಿ ಮೂಲ ಲೇಖಕ ಅನುವಾದದಲ್ಲಿ ಸೊರಗುತ್ತಾನೆ. ಅದರಲ್ಲೂ ಕವಿಗಳು ಹಾಗೂ ಹಾಸ್ಯಗಾರರು ಹೆಚ್ಚು ಸೊರಗುತ್ತಾರೆ. ಜನರ ನಂಬಿಕೆ, ಜನಪದದೊಂದಿಗೆ ಸಂಬಂಧವಿರುವ ಲೇಖಕರು ನಷ್ಟವನ್ನು ಅನುಭವಿಸುತ್ತಾರೆ. ನಾನು ಕೂಡ ಅನುವಾದದಲ್ಲಿ ಈ ರೀತಿ ಹೆಚ್ಚು ಕಳೆದುಕೊಂಡಿದ್ದೇನೆ ಅನ್ನಿಸುತ್ತದೆ. ಒಂದು ಭಾಷೆಯ ನುಡಿಗಟ್ಟಿಗೆ ಸಮಾನವಾದದ್ದನ್ನು ಮತ್ತೊಂದು ಭಾಷೆಯಲ್ಲಿ ಕಂಡುಕೊಳ್ಳುವುದು ಬಹುದೊಡ್ಡ ಸಮಸ್ಯೆ. ಆದರೆ ನಾವೆಲ್ಲ ಸಾಹಿತ್ಯವನ್ನು ಕಲಿತದ್ದು ಅನುವಾದಗಳಿಂದಲೇ ಎನ್ನುವುದು ಸತ್ಯ. ಬಹಳಷ್ಟು ಮಂದಿ ಬೈಬಲ್‌ ಓದಿರುವುದು, ನಾನು ಹೋಮರ್‌ ಹಾಗೂ ಮತ್ತಿತರರನ್ನು ಅನುವಾದದಲ್ಲೇ ಓದಿರುವುದು. ಅನುವಾದ ಲೇಖಕನಿಗೆ ಹಾನಿಯುಂಟು ಮಾಡಬಹುದು ಆದರೆ ಅವನನ್ನು ಕೊಲ್ಲಲಾರದು. ಉತ್ತಮ ಲೇಖಕನಾಗಿದ್ದರೆ ಅನುವಾದದಲ್ಲೂ ಕೂಡ ಉತ್ತಮವಾಗಿ ಹೊರಹೊಮ್ಮಬಲ್ಲ. ನನ್ನ ವಿಷಯದಲ್ಲೂ ಇದು ನಿಜ. ಅನುವಾದದಿಂದ ನನಗೆ ಸಹಾಯವಾಗಿದೆ. ಅನುವಾದಕರೊಂದಿಗೆ ಕೂತು ನನ್ನ ಕೃತಿಗಳ ಅನುವಾದವನ್ನು ತಿದ್ದುವಾಗ ಅವುಗಳನ್ನು ಮತ್ತೆ ಮತ್ತೆ ಓದುತ್ತಿರುತ್ತೇನೆ. ಇದರಿಂದ ನನ್ನ ಬರವಣಿಗೆಯ ನ್ಯೂನ್ಯತೆಗಳು ತಿಳಿಯುತ್ತವೆ. ಅವುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗಿದೆ.

ಸಂದರ್ಶಕ : ಓದುವವರು ಯಾರೂ ಇಲ್ಲವೆಂದು ಐದು ವರ್ಷ ನೀವು ಬರೆಯಲೇ ಇಲ್ಲವಂತೆ ಹೌದಾ?

ಸಿಂಗರ್‌ : ಹೌದು. ಈ ದೇಶಕ್ಕೆ ಬಂದಮೇಲೆ ಸುಮಾರು ವರ್ಷ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ. ಓದುಗರಿಲ್ಲ ಎನ್ನುವ ಕಾರಣವೋ ಏನೋ ಸರಿಯಾಗಿ ಗೊತ್ತಿಲ್ಲ. ಸುಮಾರು ಓದುಗರು ಇದ್ದರು. ಒಂದು ದೇಶದಿಂದ ಮತ್ತೊಂದಕ್ಕೆ ವಲಸೆ ಹೋಗುವುದೊಂದು ಬಿಕ್ಕಟ್ಟು. ನನ್ನ ಭಾಷೆ, ಪ್ರತಿಮೆಗಳು ಕಳೆದುಹೋದವು ಅನ್ನಿಸಿತು. ಇಲ್ಲಿ ನೋಡಿದ ಸಾವಿರಾರು ವಸ್ತುಗಳಿಗೆ ಯಿದ್ದಿಶ್‌ನಲ್ಲಿ ಹೆಸರಿರಲಿಲ್ಲ. ಉದಾಹರಣೆಗೆ ಸಬ್‌ವೇ. ಪೊಲೆಂಡಿನಲ್ಲಿ ಸಬ್‌ವೇಗಳಿಲ್ಲ. ಹಾಗಾಗಿ ಯಿದ್ದಿಶ್‌ನಲ್ಲಿ ಅದಕ್ಕೆ ಹೆಸರಿಲ್ಲ. ಸಬ್‌ವೇ ಕುರಿತೋ ಶಟಲ್‌ ಕುರಿತೋ ಲೋಕಲ್‌ ಟ್ರೈನ್‌ ಕುರಿತೋ ಸುತ್ತಲ ವಸ್ತುಗಳ ಕುರಿತೋ ಏನಾದರೂ ಅನ್ನಿಸಿ ಬರೆಯಲು ಹೋದಾಗ ಭಾಷೆಯೇ ಒದಗಿಬರುತ್ತಿರಲಿಲ್ಲ. ಜೊತೆಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಒದ್ದಾಟಗಳು ಇದ್ದವು. ಇವೆಲ್ಲವೂ ಸೇರಿ ಸುಮಾರು ವರ್ಷಗಳು ಏನೂ ಬರೆಯಲಿಲ್ಲ.

ಸಂದರ್ಶಕ : ಯಿದ್ದಿಶ್‌ ಭಾಷೆಗೆ ಭವಿಷ್ಯವಿದೆಯೇ ಇಲ್ಲವೇ ಸದ್ಯದಲ್ಲೇ ಮೃತಭಾಷೆ ಆಗಿಬಿಡುತ್ತದೋ?

ಸಿಂಗರ್‌ : ಯಿದ್ದಿಶ್‌ ಮೃತಭಾಷೆಯಾಗಲು ಸಾಧ್ಯವಿಲ್ಲ. ಸರಿಸುಮಾರು ಐದು ಇಲ್ಲವೇ ಆರುನೂರು ವರ್ಷಗಳ ಯಹೂದಿ ಇತಿಹಾಸದೊಂದಿಗೆ ಆ ಭಾಷೆ ಬೆಸೆದುಕೊಂಡಿದೆ. ತಮಾಷೆಗೆ ಆಗಾಗ ಹೇಳುತ್ತಿರುತ್ತೇನೆ ಯಡ್ಡಿಶ್‌ ಭಾಷೆಗೆ ವಿಶೇಷವಾದ ಸೌಲಭ್ಯವಿದೆ. ಈಗ ವಿಶ್ವದ ಒಟ್ಟಾರೆ ಜನಸಂಖ್ಯೆಯಲ್ಲಿ ಯಿದ್ದಿಶ್‌ ಜನ ೩.೫ ಬಿಲಿಯನ್‌ನಷ್ಟಿದ್ದಾರೆ. ಒಂದು ನೂರು ವರ್ಷಗಳ ನಂತರ ಇವರ ಸಂಖ್ಯೆ ೧೦೦ ಬಿಲಿಯನ್‌ ಆಗುತ್ತದೆ. ಅವರೆಲ್ಲ ಪಿಎಚ್‌ಡಿ ಮಾಡಲು ಹೊರಡುತ್ತಾರೆ. ಆ ವಿದ್ಯಾರ್ಥಿಗಳಿಗೆ ಆಗ ಯಿದ್ದಿಶ್‌ ಎಷ್ಟು ಉಪಯೋಗಕ್ಕೆ ಬರುತ್ತದೆ ಎಂದು ಊಹಿಸಿಕೊಳ್ಳಿ. ಅವರು ಯಿದ್ದಿಶ್‌ಗೆ ಸಂಬಂಧಿಸಿದ ಪ್ರತಿಯೊಂದನ್ನು ವಿಶ್ಲೇಷಿಸುತ್ತಾರೆ. ಅದರ ಬಗ್ಗೆ ಲೇಖನಗಳನ್ನು ಬರೆಯುತ್ತಾರೆ. ಇವೆಲ್ಲವನ್ನೂ ವಿಶ್ವವಿದ್ಯಾಲಯದ ಥೀಸಿಸ್‌ಗಾಗಿ ಮಾಡುತ್ತಾರೆ. ಹಾಗಾಗಿ ಆ ಭಾಷೆಯನ್ನು ಮರೆತುಬಿಡುತ್ತಾರೆ ಅನ್ನಿಸುವುದಿಲ್ಲ. ಅರಾಮಿಕ್‌ ಭಾಷೆಯನ್ನೇ ತೆಗೆದುಕೊಳ್ಳಿ. ಯಹೂದಿಗಳು ಎರಡು ಸಾವಿರ ವರ್ಷಗಳಿಂದ ಈ ಭಾಷೆಯನ್ನೇ ಬಳಸಿಲ್ಲ. ಆದರೂ ಆ ಭಾಷೆ ಇದೆ. ಈಗ ಅದು ಹೀಬ್ರೂ ಭಾಷೆಯ ಭಾಗವಾಗಿದೆ. ಅರಾಮಿಕ್‌ ಭಾಷೆಯನ್ನು ಈಗ ಸರ್ಟಿಫಿಕೇಟುಗಳಲ್ಲಿ ಡೈವೋರ್ಸ್‌ ಪೇಪರುಗಳಲ್ಲಿ ಬಳಸುತ್ತಾರೆ. ಯಹೂದಿಗಳು ಏನನ್ನೂ ಮರೆಯುವುದಿಲ್ಲ. ಅದರಲ್ಲೂ ಅವರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ ಯಿದ್ದಿಶ್‌ನಂತಹ ಭಾಷೆಯನ್ನು ಮರೆಯಲಾರರು.

ಸಂದರ್ಶಕ : ಯಿದ್ದಿಶ್‌ನಲ್ಲಿ ಬರೆಯುತ್ತಿರುವ ಸಮಕಾಲೀನ ಬರಹಗಾರರ ಕುರಿತು ಯೋಚಿಸಿದಾಗ ನಿಮ್ಮ ಹೆಸರು ನೆನಪಾಗುತ್ತದೆ. ಆದರೆ ಬೇರೆ ಯಾರ ಹೆಸರು ನೆನಪಾಗುವುದಿಲ್ಲ. ನೀವು ಮಹತ್ವದ ಲೇಖಕ ಎಂದು ಗುರುತಿಸುವ ಯಿದ್ದಿಶ್‌ ಲೇಖಕರು ಯಾರಾದರೂ ಇದ್ದಾರಾ?

ಸಿಂಗರ್‌ : ಹೌದು ಒಬ್ಬ ಮಹತ್ವದ ಕವಿಯಿದ್ದಾನೆ. ಅವನ ಹೆಸರು ಆರೂನ್‌ ಜೈಟ್ಲಿನ್‌. ಅವನು ನನ್ನ ಗೆಳೆಯ. ಆ ಕಾರಣದಿಂದ ಅವನನ್ನು ಹೊಗಳುತ್ತಿಲ್ಲ. ಅವನು ನಿಜಕ್ಕೂ ದೊಡ್ಡ ಕವಿ. ಥಾಮಸ್‌ ಹಾರ್ಡಿಯ ಬರವಣಿಗೆಯಷ್ಟೇ ಅವನ ಬರವಣಿಗೆ ಮಹತ್ವದ್ದು ಅನ್ನಿಸುತ್ತದೆ. ನನಗೆ ಥಾಮಸ್‌ ಹಾರ್ಡಿಯ ಬರವಣಿಗೆ ಬಹಳ ಇಷ್ಟ. ಇನ್ನೂ ಕೆಲವರು ಯಿದ್ದಿಶ್‌ ಲೇಖಕರಿದ್ದಾರೆ. ಶೋಲೆಂ ಆಸ್ಚ್, ಡೇವಿಡ್ ಬರ್ಗೆಲ್ಸನ್ ತರಹ ಪ್ರಸಿದ್ಧ ಲೇಖಕರು ಇದ್ದಾರೆ. ಎ. ಎಂ. ಫುಚ್ಸ್‌ ಎನ್ನುವ ಲೇಖಕ ಬಹಳ ಒಳ್ಳೆಯ ಗದ್ಯವನ್ನು ಬರೆಯುತ್ತಾನೆ. ಆದರೆ ಅವನ ಸಮಸ್ಯೆಯೆಂದರೆ ಒಂದೇ ರೀತಿಯ ವಿಷಯದ ಬಗ್ಗೆ ಬರೆಯುತ್ತಾನೆ. ಒಂದೇ ಕತೆಯನ್ನು ಬೇರೆ ಬೇರೆ ತರಹ ಹೇಳುತ್ತಿರುತ್ತಾನೆ.

ಯಿದ್ದಿಶ್‌ ಬರವಣಿಗೆ ರೀತಿ ಹಳೆಯದಾದರೂ ಬಹಳ ಪರಿಣಾಮಕಾರಿಯಾದದ್ದು. ಆಧುನಿಕ ಯಿದ್ದಿಶ್‌ ಲೇಖಕ ಯಹೂದಿ ಜ್ಞಾನೋದಯದ ಫಲವೇ ಆಗಿದ್ದರೂ ಯಹೂದಿ ವಿಷಯಗಳ ಕುರಿತು ಬರೆಯುವುದಿಲ್ಲ. ಅವನು ಯಹೂದಿತನವನ್ನು ಬಿಟ್ಟು ವಿಶ್ವಾತ್ಮಕವಾಗಬೇಕು ಎನ್ನುವ ಐಡಿಯಾದೊಂದಿಗೆ ಹೊರಟರೂ ಸ್ಥಳೀಯತೆಯನ್ನು ಮೀರಲಾರದೆ ಅಲ್ಲೇ ಉಳಿದುಬಿಡುತ್ತಾನೆ. ಇದು ದುರಂತ.

ದೇವರ ದಯೆಯಿಂದ ನಾನು ಬರವಣಿಗೆ ಆರಂಭಿಸಿದಾಗ ಇದರಿಂದ ತಪ್ಪಿಸಿಕೊಂಡೆ. ಸದಾ ದೆವ್ವ, ಭೂತಗಳ ಬಗ್ಗೆ ಯಾಕೆ ಬರೀತಿಯಾ ಅಂತ ಉತ್ಸಾಹಕ್ಕೆ ತಣ್ಣೀರೆರಚುತ್ತಿದ್ದರು. ಯಹೂದಿಗಳ ಬಗ್ಗೆ, ಝಿಯಾನಿಸಂ, ಸಮಾಜವಾದ, ಸಂಘಟನೆಗಳು, ದರ್ಜಿಗಳು ಹೇಗೆ ಅಭಿವೃದ್ಧಿ ಸಾಧಿಸಬಹುದು ಹೀಗೆ ಇವೆಲ್ಲದರ ಬಗ್ಗೆ ಯಾಕೆ ಬರೆಯುವುದಿಲ್ಲ ಎನ್ನುತ್ತಿದ್ದರು. ನನ್ನೊಳಗು ಇದನ್ನೆಲ್ಲ ಬರೆಯಲು ನಿರಾಕರಿಸುತ್ತಿತ್ತು. ನನ್ನ ಬರವಣಿಗೆ ಅಪ್ರಸ್ತುತವಾದದ್ದು. ತಲೆಮಾರುಗಳ ಹಿಂದೆಯೇ ನಾಶವಾಗಿರುವುದರ ಕುರಿತು ಬರೆಯುತ್ತೇನೆ ಎಂದೆಲ್ಲ ಹೇಳಿದರು. ಯುವಕರಲ್ಲಿ ಹಠಮಾರಿತನ ಇರುತ್ತದಲ್ಲ, ಅವರು ಹೇಳಿದ ದಾರಿಯಲ್ಲಿ ನಡೆಯಲು ನಿರಾಕರಿಸಿದೆ. ನನ್ನದೇ ದಾರಿ ಹಿಡಿದೆ. ಅವರು ಹೇಳುವ ತರಹದ ಬರವಣಿಗೆ ಎಷ್ಟು ಹಳತಾಗಿದೆ ಎಂದರೆ ಯಿದ್ದಿಶ್‌ನಿಂದ ಅದನ್ನು ಅನುವಾದಿಸುವ ಅಗತ್ಯವಿಲ್ಲ.

ಸಂದರ್ಶಕ : “ಈ ರೀತಿಯ ಬರವಣಿಗೆ,” ಎಂದಾಗ ಸಂಘಟನೆ ಮತ್ತಿತರ ವಿಷಯಗಳನ್ನು ಬರವಣಿಗೆ ಎಂದರ್ಥವೆ?

ಸಿಂಗರ್‌ : ಸಂಘಟನೆ, ವಲಸೆ, ಪ್ರಗತಿ, ಯಹೂದಿ ವಿರೋಧಗಳ ಕುರಿತಾದದ್ದು. ಈ ರೀತಿಯ ಪತ್ರಿಕೋದ್ಯಮ ಬರವಣಿಗೆಯಿಂದ ಉತ್ತಮ ಜಗತ್ತನ್ನು ಸೃಷ್ಟಿಸುವ ಹಂಬಲ ಇಟ್ಟುಕೊಂಡಿರುತ್ತಾರೆ. ಯಹೂದಿಗಳ ಪರಿಸ್ಥಿತಿಯನ್ನು ಸುಧಾರಿಸಬಹುದು ಅಂದುಕೊಳ್ಳುತ್ತಾರೆ. ಇಪ್ಪತ್ತರ ದಶಕದಲ್ಲಿ ಈ ರೀತಿಯ ಬರವಣಿಗೆ ಫ್ಯಾಷನ್‌ ಆಗಿತ್ತು. ಯಿದ್ದಿಶ್‌ ಬರಹಗಾರರು ಇದರಿಂದ ಹೊರಬರುವುದೇ ಇಲ್ಲ.

ಸಂದರ್ಶಕ : ನಿಮಗೆ ಉತ್ತಮ ಜಗತ್ತಿನ ಬಗ್ಗೆ ನಂಬಿಕೆಯಿಲ್ಲವೆ?

ಸಿಂಗರ್‌ : ಉತ್ತಮ ಜಗತ್ತಿನ ಬಗ್ಗೆ ನಂಬಿಕೆಯಿದೆ. ಕಾದಂಬರಿ ಬರೆಯುವ ಲೇಖಕ ಉತ್ತಮ ಜಗತ್ತನ್ನು ಸಾಧಿಸುತ್ತಾನೆ ಎನ್ನಿಸುವುದಿಲ್ಲ. ಆ ರೀತಿಯ ಜಗತ್ತನ್ನು ನಿರ್ಮಿಸಲು ರಾಜಕಾರಣಿ, ಸಮಾಜವಾದಿ ಹೀಗೆ ಹಲವರು ಒಟ್ಟಾಗಬೇಕು. ಅದು ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕಾದಂಬರಿಕಾರ ಮಾಡಲಾರ ಅಂತ ಮಾತ್ರ ಗೊತ್ತು.

ಸಂದರ್ಶಕ : ಅತಿಮಾನುಷ ಸಂಗತಿಗಳು ನಿಮ್ಮೆಲ್ಲ ಬರವಣಿಗೆಯಲ್ಲಿ ಅದರಲ್ಲೂ ಕತೆಗಳಲ್ಲಿ ಕಂಡು ಬರುತ್ತದೆ. ನಿಮಗೆ ಅದರ ಬಗ್ಗೆ ಅಷ್ಟು ನಂಬಿಕೆಯಿದೆಯಾ?

ಸಿಂಗರ್‌ : ಹೌದು. ನನ್ನ ಮನಸಿನಲ್ಲಿ ಅದು ಸದಾ ಇರುವುದರಿಂದ ಬರವಣಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ನನ್ನನ್ನು ನಾನು ಮಿಸ್ಟಿಕ್‌ ಅಂದುಕೊಳ್ಳಬಹುದೇ ಗೊತ್ತಿಲ್ಲ. ನಮ್ಮ ಸುತ್ತ ಅತಿಮಾನುಷ ಶಕ್ತಿಗಳಿವೆ. ಅವು ನಮ್ಮೆಲ್ಲ ಕೆಲಸಗಳನ್ನೂ ಪ್ರಭಾವಿಸುತ್ತಿರುತ್ತದೆ. ಟೆಲಿಪತಿ ಹಾಗೂ ಮುಂಗಾಣ್ಕೆಗಳು ಪ್ರೀತಿ, ವ್ಯವಹಾರ ಅಷ್ಟೇ ಏಕೆ ನಮ್ಮೆಲ್ಲ ಕ್ರಿಯೆಗಳಲ್ಲೂ ಪಾತ್ರವಹಿಸುತ್ತವೆ ಅನ್ನಿಸುತ್ತದೆ.

ಸಾವಿರಾರು ವರ್ಷಗಳ ಹಿಂದೆ ಜನ ಉಣ್ಣೆಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದರು. ರಾತ್ರಿ ಆ ಬಟ್ಟೆಗಳನ್ನು ತೆಗೆದಾಗ ಕಿಡಿಗಳು ಕಾಣಿಸಿತು. ಆಗ ಆ ಜನರಿಗೆ ಏನನ್ನಿಸಿರಬಹುದು ಅಂತ ಅಚ್ಚರಿಯಾಗುತ್ತದೆ. ಅವರದರ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ಮಕ್ಕಳು ‘ಅಮ್ಮ ಏನದು ಕಿಡಿ?ʼ ಅಂತ ಕೇಳಿದಾಗ ಅವರಮ್ಮ ‘ಸುಮ್ಮನೆ ನಿನ್ನಷ್ಟಕ್ಕೆ ನೀನೇ ಏನೋ ಅಂದುಕೊಂಡಿದ್ದೀಯಾ!ʼ ಎಂದು ಹೇಳಿರುತ್ತಾಳೆ. ಅವುಗಳ ಬಗ್ಗೆ ಮಾತಾಡಿದರೆ ಎಲ್ಲಿ ತಮ್ಮನ್ನು ಮಾಟಗಾರರು ಎಂದುಕೊಳ್ಳುತ್ತಾರೋ ಅನ್ನೋ ಭಯದಲ್ಲಿ ಜನ ಕಂಡ ನಿಜವನ್ನು ಭ್ರಮೆ ಎಂದುಕೊಂಡರು.

ಅದು ಭ್ರಮೆಯಲ್ಲ ವಾಸ್ತವವಾಗಿತ್ತು. ಇಂದು ಅವೇ ಕಿಡಿಗಳು ನಮ್ಮ ಕೈಗಾರಿಕೆಗಳನ್ನು ನಡೆಸುತ್ತಿರುವ ವಿದ್ಯುತ್‌. ಇದರ ಬಗ್ಗೆ ಅಂದು ಗೊತ್ತಿರಲಿಲ್ಲ.

ಪ್ರತಿ ತಲೆಮಾರಿನಲ್ಲೂ ಇಂತಹ ‘ಕಿಡಿʼಗಳನ್ನು ಕಾಣುತ್ತೇವೆ. ಅದು ತಮ್ಮ ವಿಜ್ಞಾನ ಮತ್ತಿತರ ತಿಳವಳಿಕೆಯ ಪರಿಧಿಯೊಳಗೆ ಹೊಂದುವುದಿಲ್ಲ ಎಂದು ಕಡೆಗಣಿಸಿಬಿಡುತ್ತಾರೆ. ಇಂತಹ ಕಿಡಿಗಳನ್ನು ಹಿಡಿಯುವುದು ಲೇಖಕನ ಕರ್ತವ್ಯ ಎನ್ನುವುದು ನನ್ನ ಅನಿಸಿಕೆ. ಮುಂಗಾಣ್ಕೆ, ಟೆಲಿಪತಿ, ದೆವ್ವ, ಭೂತ ಇವೆಲ್ಲವೂ ಇಂತಹ ಕಿಡಿಗಳು.

ಸಂದರ್ಶಕ : ದೆವ್ವಗಳು?

ಸಿಂಗರ್‌ : ದೆವ್ವ ಮತ್ತಿತರ ಸಂಗತಿಗಳನ್ನು ಇಂದು ಜನ ಮೂಢನಂಬಿಕೆ ಎನ್ನುತ್ತಾರೆ. ಅವೇ ಇಂದು ನಾವು ಕಡೆಗಣಿಸುತ್ತಿರುವ ಕಿಡಿಗಳು.

ಸಂದರ್ಶಕ : ಕಿಡಿ ಎಂದರೆ ವಿದ್ಯುತ್‌ ಎಂದು ವಿವರಿಸಿದಂತೆ ಅವುಗಳನ್ನು ವೈಜ್ಞಾನಿಕವಾಗಿ ವಿವರಿಸಲು ಸಾಧ್ಯವೇ?

ಸಿಂಗರ್‌ : ವಿಜ್ಞಾನದ ಕಲ್ಪನೆ, ಯಾವುದು ವೈಜ್ಞಾನಿಕ ಯಾವುದು ಅಲ್ಲ ಎನ್ನುವ ಕಲ್ಪನೆ ಕಾಲಕಾಲಕ್ಕೆ ಬದಲಾಗುತ್ತದೆ. ಪ್ರಯೋಗಾಲಯದಲ್ಲಿ ಸಾಬೀತು ಮಾಡಲಾಗದ ಎಷ್ಟೋ ಸತ್ಯಗಳಿವೆ. ಅವು ಸತ್ಯ ಅಷ್ಟೇ. ವಿದ್ಯುತ್‌ ಇದೆ ಎನ್ನುವುದನ್ನು ಸಾಬೀತು ಪಡಿಸಿದಂತೆ ನೆಪೊಲಿಯನ್‌ ಇದ್ದ ಎನ್ನುವುದನ್ನು ಪ್ರಯೋಗಾಲಯದಲ್ಲಿ ಸಾಬೀತು ಪಡಿಸಲಾಗುವುದಿಲ್ಲ. ಅವನಿದ್ದ ಎನ್ನುವುದು ಸತ್ಯ. ದೆವ್ವ, ಆತ್ಮ ಇಂತಹದ್ದನ್ನು ಪ್ರಯೋಗ ಮಾಡಿ ಸಾಬೀತುಪಡಿಸಲಾಗುವುದಿಲ್ಲ. ಅಂದ ಮಾತ್ರಕ್ಕೆ ಅವು ಸತ್ಯವಲ್ಲ ಎಂದಲ್ಲ.

ಸಂದರ್ಶಕ : ನಿಮ್ಮ ಬಹಳಷ್ಟು ಬರವಣಿಗೆಯಲ್ಲಿ ಭೂತ/ದೆವ್ವ ಮುಖ್ಯ ಪಾತ್ರ. ಅದರ ಬಗ್ಗೆ ಏನು ಹೇಳುವಿರಿ?

ಸಿಂಗರ್‌ : ಹೌದು ದೆವ್ವ, ಭೂತಗಳನ್ನು ಸಂಕೇತಗಳಾಗಿ ಬಳಸುತ್ತೇನೆ. ಅವುಗಳ ಬಗ್ಗೆ ಒಂದು ಫೀಲಿಂಗ್‌ ಕೂಡ ಇರುವುದರಿಂದ ಬಳಸುತ್ತೇನೆ. ನಮ್ಮ ಸುತ್ತ ಹಲವು ರೀತಿಯ ಶಕ್ತಿಗಳಿವೆ ಎನ್ನುವ ಐಡಿಯಾದೊಂದಿಗೆ ಬದುಕುತ್ತಿದ್ದೇನೆ. ನಾನು ಬೆಳೆದು ಬಂದದ್ದು ಇಂತಹ ನಂಬಿಕೆಗಳ ನಡುವೆಯಾದ್ದರಿಂದ ಅವುಗಳಿಗೆ ಅಂಟಿಕೊಂಡಿದ್ದೇನೆ. ರಾತ್ರಿ ಕತ್ತಲ ಕೋಣೆಯಲ್ಲಿದ್ದಾಗ ನೀವು ಥಟ್‌ ಅಂತ ದೀಪ ಆರಿಸಿದರೆ ಏಳೆಂಟು ವರ್ಷದ ಹುಡುಗನಂತೆ ಇವತ್ತಿಗೂ ಹೆದರುತ್ತೇನೆ. ಹಲವು ಮಂದಿ ವಿಚಾರವಾದಿಗಳ ಹತ್ತಿರ ಇದರ ಬಗ್ಗೆ ಹೇಳಿದಾಗ ಇದು ಅತಾರ್ಕಿಕವಾದದ್ದು ಎಂದಿದ್ದಾರೆ. ಚಳಿಗಾಲದ ರಾತ್ರಿಯಲ್ಲಿ ಹೆಣದೊಂದಿಗೆ ಒಂದೇ ರೂಮಿನಲ್ಲಿರಿ ಅಂದರೆ ನಡುಗುತ್ತಾರೆ. ಅತಿಮಾನುಷವಾದದ್ದರ ಕುರಿತು ಭಯ ಎಲ್ಲರಲ್ಲೂ ಇರುತ್ತದೆ. ಆ ಭಯ ಇರುವುದರಿಂದ ಅದನ್ನೇಕೆ ಬಳಸಬಾರದು? ನೀವು ಹೆದರುತ್ತೀರಿ ಅಂದರೆ ಅದು ಇದೆ ಎಂದು ಒಪ್ಪಿಕೊಂಡಂತೆ. ಇಲ್ಲದಿರುವುದರ ಕುರಿತು ನಾವು ಹೆದರುವುದಿಲ್ಲ.

ಸಂದರ್ಶಕ : ಯಹೂದಿ ಲೇಖಕರಲ್ಲಿ ನೀವೊಬ್ಬರೆ ದೆವ್ವಗಳ ಬಗ್ಗೆ ಬರೆಯೋದು. ಹೀಬ್ರೂ ಸಾಹಿತ್ಯದಲ್ಲಿ ಈ ವಸ್ತುವಿನ ಬಗ್ಗೆ ಬರೆಯೋಕೆ ಹೋಗಲ್ಲ.

ಸಿಂಗರ್‌ : ಯಿದ್ದಿಶ್‌ ಮತ್ತು ಹೀಬ್ರೂ ಸಾಹಿತ್ಯದ ಮೇಲೆ ‘ಜ್ಞಾನೋದಯʼ (ಎನ್‌ಲೈಟನ್‌ಮೆಂಟ್‌) ಪ್ರಭಾವವಿದೆ. ಎರಡೂ ಕೂಡ ಆಧುನಿಕ ರೀತಿಯ ಸಾಹಿತ್ಯ. ಲೇಖಕರಲ್ಲಿ ಅವರು ಇನ್ನೂ ಮಧ್ಯಕಾಲೀನ ಯುಗದಲ್ಲೇ ಇದ್ದುಬಿಟ್ಟಿದ್ದಾರೆ. ಆಧುನಿಕ ಸಾಹಿತ್ಯವು ತಾರ್ಕಿಕವಾಗಿ ವಾಸ್ತವ ಜಗತ್ತಿನ ಚಿತ್ರಣ ಕೊಡಬೇಕು ಎನ್ನುವ ಐಡಿಯಾವನ್ನು ತುಂಬಲಾಯಿತು. ನಾನು ಬರೆಯಲು ಶುರುಮಾಡಿದಾಗ ಅವರಿಗೆಲ್ಲ ನಾನು ಪ್ರತಿಗಾಮಿಯಂತೆ ಕಂಡಿದ್ದೆ. ಮಧ್ಯಯುಗದ ಕತ್ತಲಿಗೆ ಮರಳಿದವನಂತೆ ಕಂಡಿದ್ದೆ. ನಿಮಗೆ ಅವಾಸ್ತವಾದದ್ದು ನನಗೆ ವಾಸ್ತವ. ಅಂದು ನನ್ನೊಂದಿಗೆ ಜಗಳವಾಡಿದರು. ಇಂದು ಈ ರೀತಿಯ ಬರವಣಿಗೆ ಯಶಸ್ವಿಯಾಗಿರುವುದನ್ನು ನೋಡಿ ಸುಮ್ಮನಾಗಿದ್ದಾರೆ. ಈ ಲೋಕ ಇರುವುದೇ ಹೀಗೆ. ನನ್ನ ರೀತಿಯ ಬರವಣಿಗೆಯಲ್ಲಿ ನನಗೆ ಆಸಕ್ತಿಯಿದೆ. ನನಗಷ್ಟೇ ಸಾಕು.

ಸಂದರ್ಶಕ : ಆಚರಣೆ, ಮೂಢನಂಬಿಕೆಗಳಲ್ಲಿ ಆಸಕ್ತಿಯಿದೆ ಎಂದು ಹೇಳಿದಿರಿ. ನಿಮ್ಮ ಕೆಲಸ, ಕೆಲಸದ ಅಭ್ಯಾಸಗಳ ಬಗ್ಗೆಯೂ ಇಂತಹ ಯಾವುದಾದರೂ ನಂಬಿಕೆಗಳಿವೆಯೇ?

ಸಿಂಗರ್‌ : ನಿಜ. ನನಗೆ ಪವಾಡಗಳಲ್ಲಿ ನಂಬಿಕೆಯಿದೆ. ಅದು ಸ್ವರ್ಗದ ಅನುಗ್ರಹ ಅನ್ನಿಸುತ್ತದೆ. ಬರವಣಿಗೆಯನ್ನು ಬಿಟ್ಟು ಬದುಕಿನ ಎಲ್ಲ ಸಂಗತಿಗಳಲ್ಲಿ ಘಟಿಸುವ ಪವಾಡದ ಕುರಿತು ನಂಬಿಕೆಯಿದೆ. ಬರವಣಿಗೆಯಲ್ಲಿ ಪವಾಡಗಳು ಘಟಿಸುವುದಿಲ್ಲ ಎನ್ನುವುದು ಅನುಭವದಿಂದ ಅರ್ಥವಾಗಿದೆ. ಒಳ್ಳೆಯ ಬರವಣಿಗೆ ಕಠಿಣ ಪರಿಶ್ರಮದ ಫಲ. ಮೊಲದ ಕಾಲನ್ನು ಜೇಬಿನಲ್ಲಿಟ್ಟುಕೊಂಡು ಓಡಾಡಿಕೊಂಡಿದ್ದರೆ ಒಳ್ಳೆಯ ಕತೆ ಬರೆಯಲಾಗುವುದಿಲ್ಲ.

ಸಂದರ್ಶಕ : ನೀವು ಕತೆ ಹೇಗೆ ಬರೆಯುವಿರಿ? ವರದಿಗಾರನಂತೆ ಸದಾ ಗಮನಿಸುತ್ತಿರುವಿರೊ ಇಲ್ಲ ಟಿಪ್ಪಣಿಗಳನ್ನು ಮಾಡಿಕೊಳ್ಳುವಿರೋ?

ಸಿಂಗರ್‌ : ನಾನೆಂದೂ ಕತೆಯನ್ನು ಹುಡುಕಿಕೊಂಡು ಹೋಗುವುದಿಲ್ಲ. ಟಿಪ್ಪಣಿ ಮಾಡಿಕೊಳ್ಳುತ್ತೇನೆ ಆದರೆ ವರದಿಗಾರನಂತಲ್ಲ. ನನ್ನ ಬದುಕಿನೊಳಗೆ ಬಂದ ಸಂಗತಿಗಳಿಂದ ಕತೆಗಳು ಹುಟ್ಟುತ್ತವೆ. ಕತೆಯ ಐಡಿಯಾ ಕುರಿತು ಟಿಪ್ಪಣಿಗಳನ್ನು ಮಾಡಿರುತ್ತೇನೆ. ಕತೆಯೆಂದರೆ ಕ್ಲೈಮ್ಯಾಕ್ಸ್‌ ಇರಬೇಕು. ಬದುಕಿನೊಂದು ತುಣುಕನ್ನು ಚಿತ್ರಿಸುವ ಲೇಖಕ ನಾನಲ್ಲ. ಕತೆಯ ಐಡಿಯಾ ಹೊಳೆದಾಗ ಅದನ್ನೊಂದು ಪುಸ್ತಕದಲ್ಲಿ ಗುರುತುಮಾಡಿಕೊಳ್ಳುತ್ತೇನೆ. ಆ ಪುಸ್ತಕ ಯಾವಾಗಲೂ ನನ್ನೊಂದಿಗಿರುತ್ತದೆ. ಕತೆ ಬರೆಸಿಕೊಳ್ಳುವ ಒತ್ತಾಯ ಮಾಡಿದಾಗ ಬರೆಯುತ್ತೇನೆ.

ಸಂದರ್ಶಕ : ಕತೆ, ಕಾದಂಬರಿಗಳನ್ನು ಬರೆಯುವುದರ ಹೊರತಾಗಿ ಸುಮಾರು ವರ್ಷಗಳು ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದೀರಿ. ಈಗಲೂ Forward ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವಿರಾ?

ಸಿಂಗರ್‌ : ಹೌದು. ನಾನು ಪತ್ರಕರ್ತ. ವಾರದಲ್ಲಿ ಎರಡು-ಮೂರು ಲೇಖನಗಳನ್ನು ಬರೆಯುತ್ತಿರುತ್ತೇನೆ. ಯಿದ್ದಿಶ್‌ ಭಾಷೆಯಲ್ಲಿನ ಪತ್ರಿಕೋದ್ಯಮವು ಉಳಿದ ಭಾಷೆಗಳಿಗಿಂತ ಅದರಲ್ಲೂ ಇಂಗ್ಲಿಷ್‌ ಭಾಷೆಯದಕ್ಕಿಂತ ಭಿನ್ನ. ಅಮೆರಿಕೆಯಲ್ಲಿ ಪತ್ರಕರ್ತ ನಿಜ ಸಂಗತಿಗಳ ಕುರಿತು ಮಾತಾಡಬೇಕು ಇಲ್ಲವೆ ರಾಜಕೀಯದ ಬಗ್ಗೆ ಮಾತಾಡಬೇಕು. ಯಿದ್ದಿಶ್‌ ದಿನಪತ್ರಿಕೆ Forward ನಲ್ಲಿ ಬದುಕಿನಲ್ಲಿ ಅರ್ಥವಿದೆಯೋ ಇಲ್ಲವೋ, ಆತ್ಮಹತ್ಯೆ ಯಾಕೆ ಮಾಡಿಕೊಳ್ಳಬಾರದು ಎಂದೋ ಅಥವಾ ದೆವ್ವ, ಪಿಶಾಚಿಗಳ ಬಗ್ಗೆ ಕೂಡ ಬರೆಯಬಹುದು. ನಮ್ಮ ಓದುಗರು ಸುದ್ದಿಗಳನ್ನು ರೆಡಿಯೋ, ಟಿವಿ ಇಲ್ಲವೆ ಸಂಜೆಯ ಹೊತ್ತು ಬರುವ ಇಂಗ್ಲಿಷ್‌ ಪತ್ರಿಕೆಯ ಮೂಲಕ ತಿಳಿದುಕೊಳ್ಳುವುದಕ್ಕೆ ಒಗ್ಗಿಕೊಂಡಿದ್ದಾರೆ. ಬೆಳಿಗ್ಗೆ ಪತ್ರಿಕೆ ಖರೀದಿಸಿದಾಗ ಅವರು ಸುದ್ದಿಗಾಗಿ ಹುಡುಕುವುದಿಲ್ಲ, ಬದಲಿಗೆ ಲೇಖನಗಳನ್ನು ಓದಲು ಇಚ್ಛಿಸುತ್ತಾರೆ. ನಾನು ಪತ್ರಕರ್ತ ಆದರೆ The New York Timesನಲ್ಲಿ ಕೆಲಸ ಮಾಡುವ ಪತ್ರಕರ್ತನಂತಲ್ಲ.

ಸಂದರ್ಶಕ : ಟೈಮ್ಸ್‌ನಂತಹ ಪತ್ರಿಕೆಯಲ್ಲಿ ಕೆಲಸ ಮಾಡುವ ಪತ್ರಕರ್ತ ಕಾದಂಬರಿ ಇಲ್ಲವೇ ಕತೆ ಬರೆಯಲು ಇಚ್ಛಿಸಿದರೆ ಅವನಿಗದು ಒಳ್ಳೆಯ ಹಿನ್ನಲೆ ಒದಗಿಸುತ್ತದೆ ಎಂದು ನಿಮಗೆ ಅನ್ನಿಸುತ್ತದೆಯೇ?

ಸಿಂಗರ್‌ : ಮನುಷ್ಯರ ಕುರಿತಾದ ಯಾವುದೇ ಮಾಹಿತಿ ಲೇಖಕನಿಗೆ ಒಳ್ಳೆಯದು. ಪತ್ರಕರ್ತನಾಗಿರುವುದು ಲೇಖಕನಿಗೆ ಒಳ್ಳೆಯದಲ್ಲ ಎಂದು ನನಗನ್ನಿಸುವುದಿಲ್ಲ.

ಸಂದರ್ಶಕ : ಸಮಕಾಲೀನ ಬರಹಗಾರರಲ್ಲಿ ಹಲವರು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆಯಲ್ಲಿ ತೊಡಗಿಕೊಂಡವರು ಅಧ್ಯಾಪಕ ವೃತ್ತಿಯನ್ನು ಮಾಡುವುದರ ಕುರಿತು ನಿಮ್ಮ ಅನಿಸಿಕೆ ಏನು?

ಸಿಂಗರ್‌ : ನನ್ನ ಪ್ರಕಾರ ಲೇಖಕ ಅಧ್ಯಾಪಕನಾಗುವುದಕ್ಕಿಂತ ಪತ್ರಿಕೋದ್ಯಮಿಯಾಗುವುದು ಒಳ್ಳೆಯದು. ಅದರಲ್ಲೂ ಲೇಖಕ ಸಾಹಿತ್ಯವನ್ನು ಪಾಠ ಮಾಡುತ್ತ ಎಲ್ಲ ಕಾಲದ ಸಾಹಿತ್ಯವನ್ನು ವಿಶ್ಲೇಷಿಸುತ್ತಿರುತ್ತಾನೆ. ಒಮ್ಮೆ ವಿಮರ್ಶಕನೊಬ್ಬ ಹೇಳಿದ “ನಾನೆಂದೂ ಬರೆಯಲಾರೆ ಏಕೆಂದರೆ ಪ್ರಬಂಧದ ಮೊದಲ ಸಾಲನ್ನು ಬರೆಯುತ್ತಿದ್ದಂತೆ ನನ್ನ ವಿಮರ್ಶಕ ಬುದ್ಧಿ ಅದರ ವಿಮರ್ಶೆಯಲ್ಲಿ ತೊಡಗಿರುತ್ತದೆ.”

ಲೇಖಕನು ವಿಮರ್ಶಕನೂ ಆಗಿರುವುದು ಒಳ್ಳೆಯದಲ್ಲ. ಯಾವಾಗಲಾದರೊಮ್ಮೆ ಪುಸ್ತಕ ಪರಿಚಯವನ್ನೋ ಇಲ್ಲ ವಿಮರ್ಶೆಯ ಪ್ರಬಂಧವನ್ನೋ ಬರೆದರೆ ಪರವಾಗಿಲ್ಲ. ಈ ರೀತಿಯ ವಿಮರ್ಶೆ, ವಿಶ್ಲೇಷಣೆ ಎಲ್ಲ ಸಮಯದಲ್ಲೂ ಮಾಡಬೇಕಾದಲ್ಲಿ ಅದು ಅವನ ಬರವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಲೇಖಕ ಅರ್ಧ ಲೇಖಕ ಅರ್ಧ ವಿಮರ್ಶಕನಾಗಿರುವುದು ಕೆಟ್ಟದ್ದು. ಅವನು ಹೀರೊಗಳ ಕುರಿತು ಕತೆ ಹೇಳುವ ಬದಲು ಹೀರೊನ ವಿಶ್ಲೇಷಣೆಯಲ್ಲಿ ಪ್ರಬಂಧ ಬರೆಯುತ್ತಾನೆ.

ಸಂದರ್ಶಕ : ನಿಮ್ಮ ಕೆಲಸದ ರೀತಿಯ ಕುರಿತು ಸ್ವಲ್ಪ ಹೇಳುವಿರಾ? ವಾರದ ಎಲ್ಲ ದಿನಗಳಲ್ಲೂ ಕೆಲಸ ಮಾಡುವಿರಾ?

ಸಿಂಗರ್‌ : ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಬರೆಯಲು ಕೂರಬೇಕೆಂದು ಆಸೆಯಾಗುತ್ತದೆ. ಬಹುತೇಕ ಎಲ್ಲ ದಿನಗಳಲ್ಲೂ ಏನಾದರೂ ಬರೆಯುತ್ತೇನೆ. ಆಗ ಟೆಲಿಫೋನ್‌ ರಿಂಗಾಗುತ್ತದೆ. Forward ಪತ್ರಿಕೆಗಾಗಿಯೋ ಬೇರೆ ಯಾವುದಕ್ಕೋ ಲೇಖನ ಬರೆಯಲು ಕೇಳುತ್ತಾರೆ. ಕೆಲವೊಮ್ಮೆ ರಿವ್ಯೂ ಲೇಖನ ಬರೆಯಬೇಕಾಗುತ್ತದೆ ಇಲ್ಲವೆ ನನ್ನ ಸಂದರ್ಶನ ಮಾಡುತ್ತಾರೆ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಬರವಣಿಗೆಗೆ ಅಡ್ಡಿಯಾಗುತ್ತದೆ. ಇದರ ನಡುವೆಯೇ ಬರೆಯುತ್ತೇನೆ. ಎಲ್ಲೂ ಓಡಿಹೋಗುವುದಿಲ್ಲ. ಕೆಲವು ಲೇಖಕರು ತಮಗೆ ದ್ವೀಪಕ್ಕೆ ಹೋಗಿ ಕೂತರೆನೇ ಬರೆಯಲು ಆಗೋದು ಅಂತ ಹೇಳುತ್ತಾರೆ. ಹಾಗೆ ಅಡ್ಡಿ ಆತಂಕಗಳಿಲ್ಲದೆ ಬರೆಯಬೇಕು ಅಂದರೆ ಚಂದ್ರನ ಮೇಲೆ ಹೋಗಿ ಕೂರಬೇಕಾಗುತ್ತದೆ. ಈ ಅಡ್ಡಿಗಳು ಮನುಷ್ಯ ಬದುಕಿನಲ್ಲಿ ಸಹಜ.

ಕೆಲವೊಮ್ಮೆ ಇದರಿಂದ ಉಪಯೋಗವಾಗುತ್ತದೆ. ನೀವೇನೋ ಬರೆಯುತ್ತಿರುವಾಗ ಯಾವುದೋ ಕಾರಣದಿಂದ ನಿಲ್ಲಿಸಬೇಕಾಗುತ್ತದೆ. ಬರೆಯುವುದನ್ನು ನಿಲ್ಲಿಸಿ ಬೇರೆ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಮತ್ತೆ ಬರೆಯಲು ಕೂರುವ ಹೊತ್ತಿಗೆ ನಿಮ್ಮ ದೃಷ್ಟಿಕೋನ ಬದಲಾಗಿ ಅದು ಇನ್ನಷ್ಟು ವಿಶಾಲವಾಗಿರಬಹುದು. ನನ್ನ ಮಟ್ಟಿಗೆ ಹೇಳುವುದಾದರೆ ನಾನೆಂದೂ ಶಾಂತಿಯಿಂದ ಕೂತು ಬರೆದದ್ದೇ ಇಲ್ಲ. ಏನೇ ಅಡ್ಡಿಗಳು ಎದುರಾದರೂ ನನಗೆ ಬರೆಯಬೇಕೆನಿಸಿದ್ದನ್ನಂತೂ ಬರೆಯುತ್ತೇನೆ.

ಸಂದರ್ಶಕ : ಬರವಣಿಗೆಯಲ್ಲಿ ಅತ್ಯಂತ ಕಷ್ಟದ ಅಂಶ ಯಾವುದು?

ಸಿಂಗರ್‌ : ಕತೆ ಕಟ್ಟುವಿಕೆ. ನನಗೆ ಇದು ಬಹಳ ಕಷ್ಟದ ವಿಷಯ. ಕುತೂಹಲ ಹಾಳಾಗದಂತೆ ಕತೆ ಕಟ್ಟುವುದು ಹೇಗೆ? ಒಂದು ಸಲ ಇದು ಹೊಳೆದರೆ ವರ್ಣನೆ, ಸಂಭಾಷಣೆ ಇವೆಲ್ಲವನ್ನೂ ಸುಲಭವಾಗಿ ಬರೆದುಬಿಡುತ್ತೇನೆ.

ಶೆರ್ಲಾಕ್‌ ಹೋಮ್ಸ್‌ನ ಕತೆಗಳು ನನ್ನನ್ನು ಪ್ರಭಾವಿಸಿತು ಅನ್ನಿಸುವುದಿಲ್ಲ. ಆದರೆ ಚಿಕ್ಕಂದಿನಿಂದಲೂ ಕತೆಯಲ್ಲೊಂದು ಟೆನ್ಷನ್‌ ಇರೋದು ಇಷ್ಟವಾಗೋದು. ಆರಂಭ, ಅಂತ್ಯದೊಂದಿಗೆ ಮಧ್ಯದಲ್ಲಿ ಏನಾಗುತ್ತೋ ಅನ್ನೋದು ಇರಬೇಕು. ಈ ನಿಯಮವನ್ನು ಇವತ್ತಿಗೂ ಇಟ್ಟುಕೊಂಡಿದಿನಿ. ಈ ಕಾಲದಲ್ಲಿ ಕತೆಹೇಳೋದು ಅನ್ನೋದು ಬಹುತೇಕ ಮರೆತುಹೋದ ಕಲೆಯಂತಾಗಿದೆ.

ಸಂದರ್ಶಕ : ಪಾಶ್ಚಾತ್ಯ ಬರವಣಿಗೆಯಲ್ಲಿ ಬಹುತೇಕ ನಾಯಕ ಪಾತ್ರಗಳು ಸೂಪರ್‌ಮ್ಯಾನ್‌ ಮಾದರಿಯದು. ಪ್ರಮಿತಿಯಸ್‌(ಗ್ರೀಕ್‌ ಪಾತ್ರ) ಪಾತ್ರದಂತೆ ಇರುತ್ತದೆ. ಯಿದ್ದಿಶ್‌ ಕಾದಂಬರಿಗಳಲ್ಲಿ ನಾಯಕ ಸಾಧಾರಣ ಮನುಷ್ಯ. ಬಡವನಾಗಿದ್ದರೂ ತನ್ನ ಹೋರಾಟದ ಬಗ್ಗೆ ಹೆಮ್ಮೆ ಪಡುತ್ತಾನೆ. ನಿಮ್ಮ Gimpel the Fool ಕತೆ ಇದಕ್ಕೆ ಉತ್ತಮ ಉದಾಹರಣೆ. ಯಿದ್ದಿಶ್‌ ಕಾದಂಬರಿಯ ನಾಯಕ ಪಾತ್ರದ ಚಿತ್ರಣವನ್ನು ಹೇಗೆ ವಿವರಿಸುವಿರಿ?

ಸಿಂಗರ್‌ : ಯಿದ್ದಿಶ್‌ ಲೇಖಕರು ಹೀರೋ ಎನ್ನುವ ಐಡಿಯಾದೊಂದಿಗೆ ಬೆಳೆದವರಲ್ಲ. ಯಹೂದಿ ಸಾಹಿತ್ಯದಲ್ಲಿ ಕೆಲವು ಮಂದಿ ವೀರರು, ಯುದ್ಧದಲ್ಲಿ ಹೋರಾಡಿದವರು ಇದ್ದಾರೆ. ನನ್ನ ಬರವಣಿಗೆಯ ಬಗ್ಗೆ ಹೇಳುವುದಾದರೆ ನಾನು ಯಿದ್ದಿಶ್‌ ಲೇಖಕ ಪರಂಪರೆಯಲ್ಲಿ ಬರುವ “ಸಾಧಾರಣ ವ್ಯಕ್ತಿ”ಯಂತೆ ಬರೆಯುವುದಿಲ್ಲ. ಅವರು ಬರೆಯುವ ವ್ಯಕ್ತಿ ಯಹೂದಿ ವಿರೋಧ, ಆರ್ಥಿಕ ಮುಗ್ಗಟ್ಟು ಇತ್ಯಾದಿಗಳಿಗೆ ಸಿಲುಕಿದ ಬಲಿಪಶುವಾಗಿರುತ್ತಾನೆ.

ನನ್ನ ಪಾತ್ರಗಳು ಹೀರೋಗಳಲ್ಲದಿರಬಹುದು, ಲೋಕದಲ್ಲಿ ದೊಡ್ಡದೇನನ್ನೋ ಮಾಡದಿರಬಹುದು ಆದರೂ ಅವರು ಸಾಧಾರಣ ವ್ಯಕ್ತಿಗಳಲ್ಲ. ಅವರಿಗೊಂದು ವ್ಯಕ್ತಿತ್ವವಿದೆ, ಯೋಚಿಸಬಲ್ಲರು, ನೋವಿನಲ್ಲಿ ನರಳುತ್ತಿರುವವರು. Gimpel the Fool ಸಣ್ಣ ವ್ಯಕ್ತಿಯೇ ಆದರೂ ಶೋಲೋಮ್ ಅಲಿಚೆಮ್*(ಯಿದ್ದಿಶ್‌ ಲೇಖಕ) ಸೃಷ್ಟಿಸಿದ ತೆವಿಯೆ*(ಯಿದ್ದಿಶ್‌ ಸಣ್ಣಕತೆಯೊಂದರ ಪಾತ್ರ) ರೀತಿಯದ್ದಲ್ಲ. ತೆವಿಯೆ ಚಿಕ್ಕಪುಟ್ಟ ಆಸೆ, ಪೂರ್ವಾಗ್ರಹಗಳನ್ನು ಹೊಂದಿರುವ ವ್ಯಕ್ತಿ. ಅವನಿಗೆ ಬದಕಲೊಂದು ಆಸರೆ ಇದ್ದರೆ ಸಾಕು. ಅವನು ತನ್ನ ಬದುಕನ್ನು ಕಟ್ಟಿಕೊಂಡಿದ್ದರೆ ಊರಿನಿಂದ ಹೊರಹೋಗಬೇಕಾಗುತ್ತಿರಲಿಲ್ಲ. ತನ್ನ ಹೆಣ್ಣುಮಕ್ಕಳಿಗೆ ಮದುವೆ ಮಾಡಿಬಿಟ್ಟಿದ್ದರೆ ಸಂತೋಷವಾಗಿರುತ್ತಿದ್ದ. ನನ್ನ ಪಾತ್ರಗಳು ಹಾಗಿರುವುದಿಲ್ಲ. ನನ್ನ ನಾಯಕರಿಗೆ ಒಂದಿಷ್ಟು ದುಡ್ಡು ಸಿಕ್ಕಮಾತ್ರಕ್ಕೆ ಇಲ್ಲವೆ ಅವರು ರಷ್ಯಾ ಅಥವ ಬೇರೆಲ್ಲಾದರೂ ಇರಲು ಅನುಮತಿ ಸಿಕ್ಕ ಮಾತ್ರಕ್ಕೆ ಸಂತೋಷವಾಗಿರುವುದಿಲ್ಲ. ಅವರ ದುರಂತಗಳು ಬೇರೆ ರೀತಿಯವು. ಗಿಂಪಲ್‌ ಮೂರ್ಖನಾದರೂ ಸಾಧಾರಣ ಮನುಷ್ಯನಲ್ಲ. ಸಾಂಪ್ರದಾಯಿಕವಾಗಿ ಬಂದಿದ್ದ ಸಾಧಾರಣ ಮನುಷ್ಯನನ್ನು ನನ್ನ ಬರವಣಿಗೆಯಲ್ಲಿ ತರುವುದಿಲ್ಲ.

ಸಂದರ್ಶಕ : ನಿಮ್ಮ ಬಹುತೇಕ ಬರವಣಿಗೆಯು ಅಧಿಕಾರವಿಲ್ಲದ, ಭೂಮಿಯಿಲ್ಲದ, ಯಾವ ದೇಶಕ್ಕೂ ಸೇರದ, ರಾಜಕೀಯ ಸಂಘಟನೆಯೊಂದಿಗಿಲ್ಲದ, ತನ್ನಿಷ್ಟದ ವೃತ್ತಿ ಕೂಡ ಮಾಡಲಾಗದ ಜನರ ಬಗ್ಗೆ ಇದೆ. ಇದರ ಮೂಲಕ ಯಹೂದಿಗಳು ನಿರ್ಬಂಧ, ತಾರತಮ್ಯದ ನಡುವೆಯೇ ಚೆನ್ನಾಗಿದ್ದರು ಎಂದು ಹೇಳುತ್ತಿರುವಿರಾ?

ಸಿಂಗರ್‌ : ಅಧಿಕಾರ ಎನ್ನುವುದು ಬಹುದೊಡ್ಡ ಪ್ರಲೋಭನೆ. ಅಧಿಕಾರದಲ್ಲಿರುವವರು ಒಂದಲ್ಲ ಒಂದು ಸಲ ಅನ್ಯಾಯದತ್ತ ವಾಲುತ್ತಾರೆ. ಅದೃಷ್ಟವಶಾತ್‌ ಯಹೂದಿಗಳಿಗೆ ಎರಡು ಸಾವಿರ ವರ್ಷಗಳವರೆಗೆ ಅಧಿಕಾರ ಸಿಕ್ಕಿರಲಿಲ್ಲ. ಅವರಿಗೆ ಸಿಕ್ಕಿದ್ದ ಅಲ್ಪಸ್ವಲ್ಪ ಅಧಿಕಾರವನ್ನು ಉಳಿದವರಂತೆ ದುರ್ಬಳಕೆ ಮಾಡಿಕೊಂಡರು. ಎರಡು ಸಾವಿರ ವರ್ಷಗಳವರೆಗೆ ಅಧಿಕಾರ ವಂಚಿತರಾಗಿದ್ದರಿಂದ ಬೇರೆಯವರ ಬದುಕು ಸಾವಿನ ಮೇಲೆ ಅಧಿಕಾರ ಹೊಂದಿದ್ದವರಿಗಿಂತ ನಮ್ಮ ಪಾಪಗಳು ಕಡಿಮೆಯಾದವು. ಇದು ಉಪದೇಶವಲ್ಲ. ನನಗೆ ನಿಜವಾಗಿಯೂ ಅಧಿಕಾರವಿರುವ ಜನರ ಪರಿಚಯವಿಲ್ಲ. ಒಮ್ಮೊಮ್ಮೆ ಪೋಲಿಶ್ ಜನರನ್ನು ಅಥವ ಹಣದಿಂದ ಅಧಿಕಾರ ಪಡೆದ ಶ್ರೀಮಂತನನ್ನು ವರ್ಣಿಸಿದ್ದುಂಟು. ಆದರೆ ಇವರೇನು ಅಸಮಬಲದ ಅಧಿಕಾರವನ್ನು ಹೊಂದಿದ್ದವರಲ್ಲ.

ಸಂದರ್ಶಕ : ನಿಮ್ಮ ಬರವಣಿಗೆಯನ್ನು ಓದುತ್ತಿರುವಾಗ ನಿಮಗೆ ಜ್ಞಾನ ಅಥವ ತಿಳಿವಳಿಕೆಯ ಕುರಿತೇ ಅನುಮಾನಗಳಿವೆ ಅನ್ನಿಸುತ್ತದೆ.

ಸಿಂಗರ್‌ : ಒಂದು ರೀತಿಯಲ್ಲಿ ಅದು ನಿಜ. ಯಿದ್ದಿಶ್‌ ಬರವಣಿಗೆಯು ಎನ್‌ಲೈಟನ್‌ಮೆಂಟ್‌ ಅನ್ನೋ ಐಡಿಯಾದಿಂದ ಹುಟ್ಟಿದೆ. ಎನ್‌ಲೈಟನ್‌ಮೆಂಟ್‌ ಎಂದೂ ಬಿಡುಗಡೆ ಅಥವ ಮೋಕ್ಷವನ್ನು ನೀಡುವುದಿಲ್ಲ. ನನಗೆ ಸಮಾಜವಾದ ಅಥವ ಬೇರಾವುದೇ ಇಸಂಗಳಲ್ಲಿ ನಂಬಿಕೆಯಿಲ್ಲ. ಅವು “ಹೊಸ ಮನುಷ್ಯ”ನನ್ನು ಸೃಷ್ಟಿಸುತ್ತದೆ ಎನ್ನುವ ನಂಬಿಕೆಯಿಲ್ಲ. ಈ ಬಗ್ಗೆ ಹಲವಾರು ಲೇಖಕರೊಂದಿಗೆ ಚರ್ಚಿಸಿದ್ದೇನೆ. ಯುವಕನಾಗಿದ್ದಾಗ ಬರೆಯಲು ಶುರುಮಾಡಿದೆ. ಆಗ ಉತ್ಪಾದನೆಯ ಉಪಕರಣಗಳು ಸರ್ಕಾರದ ತೆಕ್ಕೆಗೆ ಸಿಕ್ಕರೆ ಸಾಕು “ಹೊಸ ಮನುಷ್ಯ” ಹುಟ್ಟುತ್ತಾನೆ ಅಂತ ನಂಬಿದ್ದರು. ನಾನು ಇವೆಲ್ಲ ಶುದ್ಧ ಮುಟ್ಠಾಳತನ ಅನ್ನಿಸಿ ಆ ಕುರಿತು ಸಂದೇಹವಾದಿಯಾಗಿದ್ದೆ. ರೈಲು ರಸ್ತೆಗಳು ಅಥವ ಫ್ಯಾಕ್ಟರಿಗಳು ಯಾರ ಒಡೆತನದಲ್ಲಿದ್ದರೂ ಮನುಷ್ಯರು ಹಾಗೇ ಇರುತ್ತಾರೆ ಅನ್ನಿಸಿತ್ತು.

ಸಂದರ್ಶಕ : ಮಾನವ ಜನಾಂಗವನ್ನು ಯಾವುದು ಕಾಪಾಡಬಹುದು ಅಂತ ನಿಮಗನ್ನಿಸುತ್ತದೆ?

ಸಿಂಗರ್‌ : ಯಾವುದೂ ಕಾಪಾಡಲಾರದು. ಅಗಾಧವಾಗಿ ಪ್ರಗತಿ ಸಾಧಿಸುತ್ತೇವೆ. ಆದರೆ ಅಗಾಧವಾಗಿ ನರಳುತ್ತಲೇ ಇರುತ್ತೇವೆ. ಇದಕ್ಕೆ ಕೊನೆಯಿಲ್ಲ. ನೋವಿಗೆ ಹೊಸ ಮೂಲಗಳನ್ನು ಹುಡುಕಿಕೊಳ್ಳುತ್ತಿರುತ್ತೇವೆ. ಮನುಷ್ಯ ರಕ್ಷಿಸಲ್ಪಡುತ್ತಾನೆ ಎನ್ನುವುದು ಸಂಪೂರ್ಣವಾಗಿ ಧಾರ್ಮಿಕ ಐಡಿಯಾ. ಧಾರ್ಮಿಕ ನಾಯಕರು ಕೂಡ ನಮ್ಮನ್ನು ಈ ಭೂಮಿಯಲ್ಲಿರುವಾಗಲೇ ರಕ್ಷಿಸಲಾಗುತ್ತದೆ ಎಂದು ಹೇಳುವುದಿಲ್ಲ. ಆತ್ಮ ಪರಲೋಕಕ್ಕೆ ಹೋದಾಗ ಅಲ್ಲಿ ಅದಕ್ಕೆ ರಕ್ಷಣೆ ಸಿಗುತ್ತದೆ ಎನ್ನುತ್ತಾರೆ. ನಮ್ಮ ನಡತೆ ಇಲ್ಲಿ ಶುದ್ಧವಾಗಿದ್ದರೆ ನಮ್ಮ ಆತ್ಮ ಸ್ವರ್ಗಕ್ಕೆ ಹೋಗುತ್ತದೆ. ಈ ಸ್ವರ್ಗದ ಕಲ್ಪನೆ ಕೂಡ ಯಹೂದಿ ಅಥವ ಕ್ರಿಶ್ಚಿಯನ್ನರದು ಅಲ್ಲ. ಅದು ಗ್ರೀಕ್‌ ಅಥವ ಪ್ಯಾಗನ್‌ ಐಡಿಯಾ. ಹಂದಿ ಬಾಲದಿಂದ ರೇಷ್ಮೆಯ ಪರ್ಸ್‌ ಮಾಡಕ್ಕಾಗಲ್ಲ ಎನ್ನುವುದು ಯಹೂದಿ ಗಾದೆ. ಈಗಿರುವ ಬದುಕನ್ನು ಇದ್ದಕ್ಕಿದ್ದಂತೆ ಸ್ವರ್ಗವಾಗಿ ಬದಲಾಯಿಸೋಕೆ ಆಗೋದಿಲ್ಲ. ನನಗೆಂದೂ ಅದರಲ್ಲಿ ನಂಬಿಕೆಯಿಲ್ಲ. ಜನ ಉತ್ತಮ ಪ್ರಪಂಚದ ಬಗ್ಗೆ ಮಾತಾಡೋವಾಗ ಯುದ್ಧಗಳಿಂದ ನಾವು ದೂರಾದರೆ ಚೆನ್ನ ಅಂತ ಅನ್ನಿಸುತ್ತದೆ. ಯುದ್ಧದಿಂದ ದೂರಾದರೂ ರೋಗ ರುಜಿನ ಮತ್ತಿತರ ದುರಂತಗಳು ಇದ್ದೇ ಇರುತ್ತವೆ. ಮಾನವ ಜನಾಂಗ ಅವುಗಳಿಂದ ನರಳುತ್ತಲೇ ಇರುತ್ತೆ. ನಿರಾಶಾವಾದಿಯಾದರೂ ನಾನು ವಾಸ್ತವತಾವಾದಿ.

ಈ ಎಲ್ಲ ನೋವು, ನರಳುವಿಕೆಯ ಹೊರತಾಗಿಯೂ ಬದುಕು ಸ್ವರ್ಗವಾಗದಿದ್ದರೂ ಬದುಕಿನಲ್ಲಿ ಬದುಕುವಂತಹದ್ದು ಇದೆ. ಮಾನವ ಜನಾಂಗಕ್ಕೆ ಸಿಕ್ಕಿರುವ ಅತಿದೊಡ್ಡ ಕೊಡುಗೆ ಮುಕ್ತ ಆಯ್ಕೆ. ಇಂತಹ ಆಯ್ಕೆಯನ್ನು ಯಾವಾಗಲೂ ಮಾಡಲಾಗುವುದಿಲ್ಲ ಎನ್ನುವುದು ನಿಜ. ಆದರೆ ಇಂತಹ ಆಯ್ಕೆಯ ಸ್ವಾತಂತ್ರ್ಯವಿದೆ ಎನ್ನುವುದರಿಂದಲೇ ಬದುಕು ಬದುಕಲರ್ಹವಾಗಿದೆ. ಒಂದು ರೀತಿಯಲ್ಲಿ ನಾನು ನಿಯತಿಯನ್ನು ನಂಬುವವನು. ನಾವು ಇಲ್ಲಿಯವರೆಗೆ ಬಂದಿರುವುದೇ ಇಂತಹ ಆಯ್ಕೆಯ ಸ್ವಾತಂತ್ರ್ಯ ನಮಗಿರುವುದರಿಂದಲೇ ಹೊರತು ಮಾರ್ಕ್ಸ್‌ವಾದಿಗಳು ಹೇಳುವಂತೆ ಪರಿಸ್ಥಿತಿಗಳು ಬದಲಾದದ್ದರಿಂದ ಅಲ್ಲ.

ಸಂದರ್ಶಕ : ಹಲವು ಓದುಗರು ನಿಮ್ಮನ್ನೊಬ್ಬ ಅದ್ಭುತ ಕತೆಗಾರ ಎಂದು ನೋಡುತ್ತಾರೆ. ಮತ್ತೆ ಕೆಲವರಿಗೆ ನಿಮ್ಮ ಉದ್ದೇಶ ಕೇವಲ ಕತೆ ಹೇಳುವುದಷ್ಟೇ ಅಲ್ಲ ಅನ್ನಿಸುತ್ತದೆ.

ಸಿಂಗರ್‌ : ಕತೆ ಹೇಳುವುದು ಕತೆಗಾರನ ಕೆಲಸ. ಕತೆ ಎಲ್ಲ ರೀತಿಯಲ್ಲಿ ಚೆನ್ನಾಗಿರಬೇಕು ಅಂತಲೇ ಪ್ರಯತ್ನಿಸುತ್ತಾನೆ. ಕತೆಯ ಕಟ್ಟುವಿಕೆಯ ರೀತಿ, ವಿವರಣೆ, ರೂಪ/ಪ್ರಕಾರ ಮತ್ತು ವಸ್ತುವಿನ ನಡುವೆ ಸಮತೋಲನ ಹೀಗೆ ಎಲ್ಲವೂ ಚೆನ್ನಾಗಿರಬೇಕು. ಆದರೆ ಇದಷ್ಟೇ ಅಲ್ಲ. ಪ್ರತಿ ಕತೆಯಲ್ಲೂ ನಾನು ಬೇರೇನೋ ಹೇಳಲು ಪ್ರಯತ್ನಿಸುತ್ತೇನೆ. ಅದು ಹೆಚ್ಚುಕಡಿಮೆ ಈ ಜಗತ್ತು, ಈ ಬಗೆಯ ಬದುಕೇ ಎಲ್ಲವೂ ಅಲ್ಲ, ಆತ್ಮವಿದೆ, ದೇವರಿದ್ದಾನೆ, ಸಾವಿನ ನಂತರವೂ ಬದುಕು ಇರಬಹುದು ಅನ್ನುವ ನನ್ನ ಐಡಿಯಾದೊಂದಿಗೆ ಸಂಬಂಧ ಹೊಂದಿರುತ್ತದೆ. ನಾನು ಧರ್ಮಿಷ್ಠನಲ್ಲದಿದ್ದರೂ ಈ ಬಗೆಯ ಧಾರ್ಮಿಕ ಸತ್ಯಗಳಿಗೆ ಹಿಂತಿರುಗುತ್ತೇನೆ. ಎಲ್ಲ ಬಗೆಯ ಧಾರ್ಮಿಕ ನಿಯಮಗಳನ್ನು ಒಪ್ಪುವುದಿಲ್ಲ. ಆದರೆ ಧರ್ಮದ ಈ ಮೂಲ ಸತ್ಯಗಳು ನನಗೆ ಹತ್ತಿರವಾದವು. ಅವುಗಳ ಕುರಿತು ಆಲೋಚಿಸುತ್ತೇನೆ. ಬೇರೆಲ್ಲ ಯಿದ್ದಿಶ್‌ ಬರಹಗಾರರಿಗಿಂತ ನನ್ನನ್ನು ನಾನು ಯಹೂದಿ ಲೇಖಕ ಎಂದುಕೊಳ್ಳುತ್ತೇನೆ. ಯಾಕೆಂದರೆ ಅವರೆಲ್ಲರಿಗಿಂತ ನಾನು ಹೆಚ್ಚಾಗಿ ಯಹೂದಿ ಸತ್ಯಗಳನ್ನು ನಂಬುತ್ತೇನೆ. ಅವರಲ್ಲಿ ಬಹುತೇಕರು ಪ್ರಗತಿಯಲ್ಲಿ ನಂಬಿಕೆ ಇರಿಸಿದವರು. ಪ್ರಗತಿ ಅವರ ಆದರ್ಶ. ಜನ ಎಷ್ಟರಮಟ್ಟಿಗೆ ಪ್ರಗತಿ ಸಾಧಿಸುತ್ತಾರೆಂದರೆ ಯಹೂದಿಗಳನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ, ಅವರು ಎಲ್ಲರೊಂದಿಗೆ ಬೆರೆಯುವಂತಾಗುತ್ತದೆ, ಅವರಿಗೆ ಒಳ್ಳೆಯ ಕೆಲಸ ಸಿಗುತ್ತದೆ ಹಾಗೂ ಬಹುಶಃ ಒಂದು ದಿನ ರಾಷ್ಟ್ರಾಧ್ಯಕ್ಷರು ಆಗಿಬಿಡುತ್ತಾರೆ ಎಂದು ನಂಬುತ್ತಾರೆ. ನನಗೆ ಇವೆಲ್ಲ ಕ್ಷುಲ್ಲಕ ಆಸೆಗಳು ಅನ್ನಿಸುತ್ತವೆ. ನಾವು ದೇಹದ ಬಗ್ಗೆ ಅಲ್ಲ ಆತ್ಮದ ಬಗ್ಗೆ ಭರವಸೆ ಇಡಬೇಕು ಅನ್ನಿಸುತ್ತದೆ. ಹೀಗೆ ನಾನೊಬ್ಬ ಧಾರ್ಮಿಕ ಲೇಖಕ.

ಸಂದರ್ಶಕ : ಕೆಲವೊಮ್ಮೆ ನಿಮ್ಮನ್ನು ಓದುವಾಗ ಪೂರ್ವದ ತತ್ವಶಾಸ್ತ್ರಜ್ಞರು ನೆನಪಾಗುತ್ತಾರೆ. ಉದಾಹರಣೆಗೆ ಭಾರತದ ತತ್ವಶಾಸ್ತ್ರಜ್ಞ ಕೃಷ್ಣಮೂರ್ತಿ. ನೀವು ಬೌದ್ಧ ಇಲ್ಲವೇ ಹಿಂದೂ ಬರವಣಿಗೆಗಳಿಂದ ಪ್ರಭಾವಿತರಾಗಿರುವಿರಾ?

ಸಿಂಗರ್‌ : ನಾನು ಈ ಬರಹಗಾರರನ್ನು ಓದಿದ್ದು ಬಹಳ ತಡವಾಗಿ. ಹಾಗಾಗಿ ಪ್ರಭಾವಕ್ಕೊಳಗಾಗಲು ಸಾಧ್ಯವಿರಲಿಲ್ಲ. ಆದರೆ ಅವರನ್ನೆಲ್ಲ ಆಮೇಲೆ ಓದುತ್ತಿದ್ದಾಗ ಇದೇ ಯೋಚನೆಗಳು ನನ್ನಲ್ಲಿ ಮೊದಲೇ ಇತ್ತಲ್ಲ ಅನ್ನಿಸಿತು. ಭಗವದ್ಗೀತೆಯನ್ನು ಓದಿದಾಗ ಹಿಂದಿನ ಜನ್ಮದಲ್ಲಿ ಓದಿರುವೆನೇನೋ ಅನ್ನಿಸಿತು. ಬುದ್ಧ ಮತ್ತಿತರ ಪೂರ್ವದ ಬರವಣಿಗೆಗಳನ್ನು ಓದಿದಾಗಲೂ ಹೀಗೆ ಅನ್ನಿಸಿತು. ಶಾಶ್ವತ ಸತ್ಯಗಳು ಎಂದಿದ್ದರೂ ಶಾಶ್ವತ ಸತ್ಯಗಳೇ. ಅದು ನಮ್ಮ ರಕ್ತದಲ್ಲಿ ನಮ್ಮ ಇರುವಿಕೆಯಲ್ಲೇ ಇರುತ್ತದೆ.

ಸಂದರ್ಶಕ : ಪ್ರಸ್ತುತ ಸನ್ನಿವೇಶವನ್ನು ವ್ಯಾಖ್ಯಾನಿಸುತ್ತಿರುವ ಮಾರ್ಷಲ್‌ ಮೆಕ್ಲುಹಾನ್‌ (ಕೆನಡಿಯನ್‌ ತತ್ವಶಾಸ್ತ್ರಜ್ಞ) ನಂತಹವರ ಪ್ರಕಾರ ನೂರಾರು ವರ್ಷಗಳಿಂದ ನಾವು ನೋಡುತ್ತಿರುವ ಸಾಹಿತ್ಯದ ಹಾದಿ ಬದಲಾಗಲಿದೆ. ಕತೆ, ಕಾದಂಬರಿಗಳನ್ನು ಓದುವುದು ಇನ್ನು ಮುಂದೆ ಗತಕಾಲಕ್ಕೆ ಸರಿದ ಸಂಗತಿಗಳಾಗಲಿವೆ. ವಿದ್ಯುನ್ಮಾನ ಅನ್ವೇಷಣೆಗಳು ಇವೆಲ್ಲವನ್ನೂ ಬದಲಿಸಲಿದೆ ಎಂದು ನಿಮಗನ್ನಿಸುತ್ತದೆಯೇ?

ಸಿಂಗರ್‌ : ನಮ್ಮ ಬರಹಗಾರರು ಒಳ್ಳೆಯ ಬರಹಗಾರರಲ್ಲದಿದ್ದರೆ ಇದು ನಿಜವಾಗುತ್ತದೆ. ಕತೆ ಹೇಳಬಲ್ಲವರು ಇರುವವರೆಗೂ ಓದುಗರೂ ಇದ್ದೇ ಇರುತ್ತಾರೆ. ಕಾಲ್ಪನಿಕ ವಿಷಯಗಳ ಕುರಿತು ಆಸಕ್ತಿ ಕಳೆದುಕೊಳ್ಳುವಷ್ಟರ ಮಟ್ಟಿಗೆ ಮನುಷ್ಯ ಸ್ವಭಾವ ಬದಲಾಗುತ್ತದೆ ಎಂದು ಅನ್ನಿಸುವುದಿಲ್ಲ. ನಿಜಸಂಗತಿಗಳು ಯಾವಾಗಲೂ ಕುತುಹೂಲ ಹುಟ್ಟಿಸುತ್ತದೆ. ಜನ ಚಂದ್ರ ಗ್ರಹಕ್ಕೆ ಹೋದರೆ ಪತ್ರಕರ್ತರೋ, ಸಿನೆಮಾಗಳೋ ಅಲ್ಲೇನಾಯಿತು ಅಂತ ನಮಗೆ ಹೇಳುತ್ತವೆ. ಇವು ಯಾವುದೇ ಲೇಖಕ ಬರೆಯುವ ಕಾದಂಬರಿಗಿಂತ ಹೆಚ್ಚು ಆಸಕ್ತಿ ಹುಟ್ಟಿಸುವಂತಹದ್ದು. ಆದರೂ ಒಳ್ಳೆಯ ಕತೆಗಾರನಿಗೆ ಸ್ಥಾನ ಇದ್ದೇ ಇರುತ್ತದೆ. ಯಾವುದೇ ಯಂತ್ರ ಇಲ್ಲವೇ ಯಾವುದೇ ವರದಿ ಇಲ್ಲವೇ ಸಿನಿಮಾ ಕೂಡ ಟಾಲ್ಸ್‌ಟಾಯ್‌ ಅಥವ ದಾಸ್ತೋವೆಸ್ಕಿ ಅಥವ ಗೊಗೊಲ್‌(ರಷ್ಯನ್‌ ಬರಹಗಾರರು) ಮಾಡಿದ್ದನ್ನು ಮಾಡಲಾಗುವುದಿಲ್ಲ.

ನಮ್ಮ ಕಾಲದಲ್ಲಿ ಕಾವ್ಯ ಭಾರಿ ಹೊಡೆತ ಎದುರಿಸಬೇಕಾಯಿತು ಎನ್ನುವುದು ಸತ್ಯ. ಆದರೆ ಅದಕ್ಕೆ ಕಾರಣ ಟಿವಿ ಅಥವ ಇತರ ವಸ್ತುಗಳಲ್ಲ. ಕಾವ್ಯವೇ ಕೆಟ್ಟ ಸ್ಥಿತಿಯನ್ನು ತಲುಪಿಬಿಟ್ಟಿತು.

ಕೆಟ್ಟ ಕಾದಂಬರಿಗಳು ಹೆಚ್ಚಿ, ಕೆಟ್ಟ ಕಾದಂಬರಿಕಾರರು ಒಬ್ಬರನ್ನೊಬ್ಬರು ಅನುಕರಿಸುತ್ತ ಬರೆದರೆ ಅಂತಹ ಬರವಣಿಗೆಗೆ ಅರ್ಥವೂ ಇರುವುದಿಲ್ಲ, ಆಸಕ್ತಿಕರವಾಗಿಯೂ ಇರುವುದಿಲ್ಲ. ಆಗ ಕಾದಂಬರಿ ಸಾಯಬಹುದು. ಆದರೆ ಒಳ್ಳೆಯ ಸಾಹಿತ್ಯಕ್ಕೆ ಎಂದೂ ತಂತ್ರಜ್ಞಾನದ ಆತಂಕ ಎದುರಾಗುವುದಿಲ್ಲ. ಬದಲಿಗೆ ತಂತ್ರಜ್ಞಾನ ಹೆಚ್ಚಿದಂತೆಲ್ಲ ತಂತ್ರಜ್ಞಾನವಿಲ್ಲದೆ ಮನುಷ್ಯನ ಮನಸ್ಸು ಏನನ್ನು ಸೃಷ್ಟಿಸಬಲ್ಲುದು ಎನ್ನುವುದರ ಕಡೆ ಜನರಿಗೆ ಆಸಕ್ತಿ ಹೆಚ್ಚಬಹುದು.

ಸಂದರ್ಶಕ : ಅಂದರೆ ಯುವಜನತೆ ಬರವಣಿಗೆಯನ್ನು ತಮ್ಮ ಬದುಕಿನ ದಾರಿಯನ್ನಾಗಿ ಮಾಡಿಕೊಳ್ಳಲು ನೀವು ಪ್ರೋತ್ಸಾಹಿಸುವಿರಾ?

ಸಿಂಗರ್‌ : ಬರಹದಿಂದ ಜೀವನ ನಿರ್ವಹಣೆ ಸಾಧ್ಯವೇ ಎಂದರೆ ನಾನೇನೂ ಹೇಳಲಾರೆ. ಕಾದಂಬರಿಕಾರನಿಗೆ ಸಿಗುವ ಗೌರವಧನ ಅತ್ಯಲ್ಪವಾಗಿ ಅವನ ಜೀವನ ನಿರ್ವಹಣೆ ಕಷ್ಟವಾಗಬಹುದು. ಯಾರಾದರೂ ಯುವಲೇಖಕ/ಕಿ ನನ್ನ ಬಳಿ ಬಂದು ನಾನು ಬರೆಯಲೇ ಅಂತ ಕೇಳಿದರೆ ಅವರಲ್ಲಿ ಪ್ರತಿಭೆಯಿದೆ ಅಂತ ನನಗನ್ನಿಸಿದರೆ ಖಂಡಿತ ಬರಿ. ಯಾವುದರ ಬಗ್ಗೆಯೂ ಭಯ ಬೇಡ ಅಂತ ಹೇಳುತ್ತೇನೆ. ಯಾವುದೇ ಪ್ರಗತಿ ಸಾಹಿತ್ಯವನ್ನು ಕೊಲ್ಲುವುದಿಲ್ಲ.

ಸಂದರ್ಶಕ : ಇಂದು ಅಮೆರಿಕೆಯಲ್ಲಿ ಹೆಚ್ಚಾಗಿ ಓದುವಂತಹ ಲೇಖಕರಲ್ಲಿ ನೀವು, ಸಾಲ್ ಬೆಲ್ಲೋ, ಫಿಲಿಪ್ ರಾತ್, ಹೆನ್ರಿ ರಾತ್, ಬರ್ನಾರ್ಡ್ ಮಲಮಡ್ ಹೀಗೆ ಯಹೂದಿ ಬರಹಗಾರರ ಸಂಖ್ಯೆ ದೊಡ್ಡದಿದೆ. ಯಹೂದಿಗಳಲ್ಲದ ಬರಹಗಾರರು ಕೂಡ ಯಹೂದಿ ವಿಷಯದ ಮೇಲೆ ಬರೆಯುತ್ತಿದ್ದು ಅವು ಉತ್ತಮವಾಗಿ ಮಾರಾಟವಾಗುತ್ತಿವೆ. ಜೇಮ್ಸ್ ಮೈಕೆನರ್‌ನ The Source ಒಂದು ಉದಾಹರಣೆ. ಎರಡನೆಯ ಮಹಾಯುದ್ಧದ ನಂತರದಲ್ಲಿನ ಯಹೂದಿ ಬರಹಗಾರರು ಮತ್ತು ಯಹೂದಿ ವಿಷಯಗಳ ಜನಪ್ರಿಯತೆಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತಿರಿ?

ಸಿಂಗರ್‌ : ಶತಮಾನಗಳವರೆಗೆ ಯಹೂದಿಗಳನ್ನು ಸಾಹಿತ್ಯದಲ್ಲಿ ನಿರ್ಲಕ್ಷಿಸಲಾಗಿತ್ತು. ಯಹೂದಿಗಳ ಬಗ್ಗೆ ಬರೆದಾಗಲೆಲ್ಲ ಕ್ಲೀಶೆಯಿಂದಲೇ ಬರೆಯುತ್ತಿದ್ದರು. ಯಹೂದಿ ಅಂದರೆ ದುಷ್ಟ, ಕುತಂತ್ರಿ, ಬಡವ, ಯಹೂದಿ ದ್ವೇಷದ ಬಲಿಪಶು ಹೀಗೆ ಚಿತ್ರಿಸಲಾಗುತ್ತಿತ್ತು. ಅತ್ಯಂತ ಕೆಟ್ಟವನು ಎನ್ನುವ ರೀತಿ ಇಲ್ಲ ಅತ್ಯಂತ ದೀನ ಎನ್ನುವ ರೀತಿಯಲ್ಲಿಯೇ ಚಿತ್ರಿಸಲಾಗುತ್ತಿತ್ತು. ಇದರಿಂದಾಗಿ ಯಹೂದಿಗಳ ಜೀವನಕ್ರಮ, ಅವರ ಪ್ರೀತಿ ಇವೆಲ್ಲವೂ ಜಗತ್ತಿಗೆ ರಹಸ್ಯವಾಗಿಯೇ ಉಳಿದಿತ್ತು. ಯಹೂದಿ ಬರಹಗಾರರು ಕೆಲವೇ ವರ್ಷಗಳಿಂದ ಬರೆಯಲು ಆರಂಭಿಸಿದ್ದಾರೆ. ಇಂಗ್ಲಿಷರು ಇಂಗ್ಲಿಷರ ಬಗ್ಗೆ ಬರೆದಂತೆ ಅಮೆರಿಕನ್ನರು ಅಮೆರಿಕನ್ನರ ಬಗ್ಗೆ ಬರೆದಂತೆ ಬರೆಯಲಾರಂಭಿಸಿದ್ದಾರೆ. ಅವರು ತಮ್ಮ ಒಳ್ಳೆಯದು ಕೆಟ್ಟದು ಎರಡನ್ನೂ ಹೇಳುತ್ತಿದ್ದಾರೆ. ಯಾರಲ್ಲೂ ಕ್ಷಮೆ ಕೇಳುತ್ತಿಲ್ಲ. ಯಾರನ್ನೂ ದೂಷಿಸುತ್ತಿಲ್ಲ. ಯಹೂದಿ ಬದುಕಿನ ಕುರಿತು ಅಪಾರ ಕುತೂಹಲವಿದ್ದುದ್ದರಿಂದ ಇಂದು ಅದರ ಸಾಹಿತ್ಯ ಜನಪ್ರಿಯವಾಗಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಅದರರ್ಥ ಇದು ಯಾವಾಗಲೂ ಹೀಗೆ ಇರುತ್ತದೆ ಎಂದಲ್ಲ. ಇಂದಲ್ಲ ನಾಳೆ ಪರಿಸ್ಥಿತಿ ಬದಲಾಗುತ್ತದೆ. ಎಷ್ಟು ಮಂದಿ ಯಹೂದಿ ಬರಹಗಾರರಲ್ಲಿ ಎಷ್ಟು ಮಂದಿ ಒಳ್ಳೆಯ ಅಥವ ಕೆಟ್ಟ ಬರಹಗಾರರಿದ್ದಾರೆ ಅಂತ ನನಗೆ ಗೊತ್ತಿಲ್ಲ. ಜನ ಅಂದುಕೊಳ್ಳುವಷ್ಟು ಒಳ್ಳೆಯ ಬರಹಗಾರರನ್ನು ನಾವು ಸೃಷ್ಟಿಸಿದ್ದೇವೆ ಎಂದು ನನಗನ್ನಿಸುತ್ತಿಲ್ಲ. ಸಮರ್ಥರಾದ, ಅಪರೂಪದ ಬರಹಗಾರರಿದ್ದಾರೆ. ನಮ್ಮಲ್ಲಿ ಅದ್ಭುತ ಲೇಖಕರಿದ್ದಂತೆ ಬೇರೆಯವರಲ್ಲೂ ಇದ್ದಾರೆ. ಒಟ್ಟಾರೆಯಾಗಿ ಎಲ್ಲೇ ಆದರೂ ಕೆಲವೇ ಮಂದಿ ಅದ್ಭುತ ಬರಹಗಾರರು ಇರುವುದು.

ಸಂದರ್ಶಕ : ಹೆರಾಲ್ಡ್ ಫ್ಲೆಂಡರ್
ಪ್ಯಾರಿಸ್‌ ರಿವ್ಯೂನಲ್ಲಿ 1968ರಲ್ಲಿ ಪ್ರಕಟವಾದ ಸಂದರ್ಶನ
ಹೆರಾಲ್ಡ್ ಫ್ಲೆಂಡರ್: Paris Blues, Rescue in Denmark ಎನ್ನುವ ಕೃತಿಗಳನ್ನು ರಚಿಸಿದ್ದಾನೆ. Saturday Review, The Nation, The New Leader ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾನೆ. I Spy, Paris Blues, Car 54, Where are you?, Kraft Theater ಚಿತ್ರಗಳಲ್ಲಿ ಬರಹಗಾರನಾಗಿ ಕೆಲಸ ಮಾಡಿದ್ದಾನೆ.