ಭಾರತದಲ್ಲಿ ಸರ್ಜನ್ ಆಗಿದ್ದ ಗಂಡನಿಗೆ ಕೆಲಸವಿಲ್ಲದೇ ನಿರುದ್ಯೋಗಿ ಪಟ್ಟ ಸಿಕ್ಕು ತಲೆಕೆಟ್ಟಂತಾಗಿತ್ತು. ಇಲ್ಲಿನ ಕ್ರಮ, ಪದ್ಧತಿಯಂತೆ ದಂತವೈದ್ಯನಾಗಿ ನೋಂದಣಿ ಮಾಡಿಸಲು, ತನ್ನ ವೃತ್ತಿಯನ್ನು ಪ್ರಾಕ್ಟಿಸ್ ಮಾಡಲು ಪರವಾನಗಿ ಪಡೆಯಬೇಕಿತ್ತು. ಅದಕ್ಕಾಗಿ ಬಹುಕಷ್ಟದ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕಗಳನ್ನು ಪಡೆಯಬೇಕಿತ್ತಂತೆ. ಅದಕ್ಕಾಗಿ ಆತ ಹೆಣಗಾಡುತ್ತಿದ್ದ. ಅವರಿಬ್ಬರ ಮಧ್ಯೆ ಆ ಐದು ವರ್ಷದ ಬಾಲಕ ಕಂಗೆಟ್ಟುಹೋಗಿದ್ದ. ಅವನಿಗೆ ಆಟವಾಡಲು ಅವಕಾಶಗಳಿಲ್ಲದೆ, ಸ್ನೇಹಿತರಿಲ್ಲದೆ, ಶಾಲೆಗೆ ಹೋಗಲು ಕೊಡಬೇಕಾದ ಅಂತರರಾಷ್ಟ್ರೀಯ ಮಟ್ಟದ ಫೀಸ್ ಹಣವಿಲ್ಲದೆ ಅವನು ತನ್ನ ತಂದೆಯ ಜೊತೆ ಮನೆಯಲ್ಲಿ ಬಂಧಿಯಾಗಿ ಕಾಲಕಳೆಯುವಂತಾಗಿತ್ತು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಬರುಬರುತ್ತಾ ಬ್ರಿಸ್ಬನ್ ಪ್ರಾಂತ್ಯದಲ್ಲಿ ಎರಡೇ ಎರಡು ಋತುಗಳಿರುವುದು ನಿಚ್ಚಳವಾಗಿದೆ. ಬಿಸಿಲು ಮತ್ತು ಜಾಸ್ತಿ ಬಿಸಿಲು. ಅಕ್ಟೋಬರ್ ಕಡೆಯ ವಾರದಿಂದ ರಾಣಿರಾಜ್ಯ ಮತ್ತು ನ್ಯೂ ಸೌತ್ ವೇಲ್ಸ್ ರಾಜ್ಯಗಳ ಕೆಲ ಭಾಗಗಳಲ್ಲಿ ಉರಿಯುತ್ತಿರುವ ನೂರಾರು ಪೊದೆಬೆಂಕಿ (ಬುಶ್ ಫೈರ್) ತಾಪದಿಂದ ವಾತಾವರಣದ ಉಷ್ಣ ಇನ್ನಷ್ಟು ಏರಿದೆ. ನಮಗೆಲ್ಲಾ ವಯಸ್ಸಾಗುತ್ತಿದ್ದಂತೆ ವಯಸ್ಸಿನ ಸಂಖ್ಯೆಯ ಮೇಲೆ ಕಣ್ಣು ಬೀಳುತ್ತದೆ. ಅಯ್ಯೋ ಮೂವತ್ತಾಯ್ತು, ನಲವತ್ತಾಯ್ತು ಅನ್ನೋ ಮಧ್ಯವಯಸ್ಕ ಹಂತ ಬಂದೆಬಿಟ್ಟಿತಾ, ಐವತ್ತರ ಕಕ್ಕಾಬಿಕ್ಕಿ ವಯಸ್ಸು ಯಾರಿಗೆ ಬೇಕು, ಅರವತ್ತು ಅಂದರೆ ಹಿರಿಯ ನಾಗರಿಕ ಅನ್ನೋ ಗೌರವ ಪಟ್ಟ ಸಿಕ್ಕಿದರೂ ಅದನ್ನು ಒಪ್ಪಿಕೊಳ್ಳದೆ ಇನ್ನೂ ಐವತ್ತರೊಳಗೆ ಇದ್ದರೆ ಚೆನ್ನಿತ್ತು ಅನ್ನುತ್ತಾ ಪಿಸುಗುಟ್ಟುವ ಮನಸ್ಸು … ಆದರೆ ರಾಣಿರಾಜ್ಯಕ್ಕೆ ತಾಪದ ಏಣಿ ಮೇಲೆ ಏರಲು ಅದೇನೋ ಬಲು ಉತ್ಸಾಹ. ಸೆಪ್ಟೆಂಬರ್ ತಿಂಗಳಲ್ಲಿ ಅಬ್ಬಾ ಸದ್ಯ ಇನ್ನೂ ಮೂವತ್ತು ಡಿಗ್ರಿಯಷ್ಟೇ ಇದೆ ಅಂತ ಸಮಾಧಾನಪಟ್ಟುಕೊಳ್ಳುವಷ್ಟರಲ್ಲಿ ಅದು ಮೂವತ್ತೈದರ ಗಡಿ ತಲುಪಿ ನೆರಳು, ನೀರು ಕಡಿಮೆಯಾಗಿ ಸಕಲಜೀವರಾಶಿಗೂ ಸಂಕಷ್ಟ ತಂದಿಟ್ಟಿದೆ.

ಹಾಗೆ ಒಮ್ಮೆ ನೀರು, ನೆರಳನ್ನು ಹುಡುಕಿಕೊಂಡು ಯೂನಿವರ್ಸಿಟಿಯ ಲೈಬ್ರರಿ ಹೊಕ್ಕಿ ತಣ್ಣಗೆ ನೆಲದ ಮೇಲೆ ಕೂತು ಬರೆಯುತ್ತಿದ್ದೆ. ಇಬ್ಬರು ವಿದ್ಯಾರ್ಥಿನಿಯರು ಬಂದು ಹತ್ತಡಿ ದೂರದಲ್ಲಿ ಕೂತು ಪಿಸುಮಾತಿನಲ್ಲಿ ಸಂಭಾಷಿಸುತ್ತಿದ್ದರು. ಐದಾರು ನಿಮಿಷಗಳಲ್ಲಿ ಇನ್ನೂ ಕೆಲವರು ಬಂದು ಸೇರಿಕೊಂಡು ಸಂಭಾಷಣೆ ಜೋರಾಯ್ತು. ಹುಡುಗಿ, ಹುಡುಗರು ಭಾರತೀಯರು. ಮಾತುಕತೆಗೆ ಕಳೆಕಟ್ಟಿ, ದನಿ ಜೋರಾಗಿ, ನಗು ಅಲೆಅಲೆಯಾಗಿ ಹೊಮ್ಮುತ್ತಿತ್ತು. ಒಂದೆರೆಡು ಬಾರಿ ನಾನು ಅವರ ಕಡೆ ನೋಡಿದ್ದನ್ನ ಗಮನಿಸಿದ ಒಬ್ಬಳು ಸಾರಿ ಎಂದಳು. ‘ಪರವಾಗಿಲ್ಲ, ನೀವೆಲ್ಲಾ ಅಷ್ಟು ಚೆನ್ನಾಗಿ ಒಂದೆಡೆ ಸೇರಿ ಸಂತೋಷವಾಗಿ ಹರಟುತ್ತಾ ಇರೋದನ್ನ ನೋಡಲು ಚೆನ್ನಾಗಿದೆ’, ಅಂದೆ. ‘ನಾವು ಗುಜರಾತಿಗಳೇ ಹಾಗೆ, ಒಂದೆ ಮನೆಯವರ ಥರ ಇರುತ್ತೀವಿ,’ ಅಂತ ಒಬ್ಬ ಹುಡುಗನೆಂದ. ಅವರೆಲ್ಲ ಗುಜರಾತಿನ ಬೇರೆಬೇರೆ ಕಡೆಗಳಿಂದ ಬಂದು ಈ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯ (public health) ವಿಷಯವನ್ನಾರಿಸಿಕೊಂಡು ಸ್ನಾತಕೋತ್ತರ ಪದವಿಗಾಗಿ ಓದುತ್ತಿದ್ದವರು. ಅಷ್ಟು ಕೇಳಿ ಸುಮ್ಮನಾಗಿ ನನ್ನ ಬರವಣಿಗೆ ಮುಂದುವರೆಸಿದೆ.

ಒಂದಷ್ಟು ಹೊತ್ತಿನ ನಂತರ ‘ಸಾರಿ’ ಅಂದಿದ್ದ ಹುಡುಗಿಯೊಬ್ಬಳನ್ನು ಬಿಟ್ಟು ಮಿಕ್ಕವರೆಲ್ಲರೂ ಹೊರಟುಹೋದರು. ಅವಳು ತಮ್ಮಿಂದ ಆದ ಗಲಾಟೆ, ತೊಂದರೆಗೆ ಮತ್ತೊಮ್ಮೆ ಕ್ಷಮೆ ಕೇಳಿದಳು. ನಂತರ ನಾನು ಭಾರತೀಯಳಾ ಎಂದು ವಿಚಾರಿಸಿದಳು. ಹೌದು, ನಾನು ಬೆಂಗಳೂರಿನವಳು ಅಂತ ಹೇಳಿಕೊಂಡರೆ ಮುಖವರಳಿಸಿಕೊಂಡು, ‘ಬೆಂಗಳೂರು ಬಹಳ ಚೆಂದನೆ ನಗರವೆಂದು ಕೇಳಿದ್ದೀನಿ’, ಅಂದಳು. ‘ಒಂದೊಮ್ಮೆ ಚೆಂದವಿತ್ತು, ಈಗ ಕಾಂಕ್ರೀಟ್ ನಗರಿಯಾಗಿ ಕೊಳೆತು ನಾರುತ್ತಿದೆ’, ಅಂದೆ. ಹಾಗೆ ಮಾತು ಬೆಳೆದು ಇಲ್ಲಿ ಬ್ರಿಸ್ಬನ್ನಿನಲ್ಲಿ ಜನ ಕಡಿಮೆ, ಆಸ್ಟ್ರೇಲಿಯಾ ಬಹು ಸುಂದರ ದೇಶವಲ್ಲವೇ ಅಂದಳು. ಎಲ್ಲರೂ ಹೇಳುವ ಮಾತನ್ನ ಈ ಹುಡುಗಿಯೂ ಹೇಳಿದ್ದು, ನನಗೆ ಕುತೂಹಲವಾಗಿ ಅವಳ ಕುಶಲೋಪರಿಯನ್ನ ವಿಚಾರಿಸಿದೆ.

ಗುಜರಾತಿನಲ್ಲಿ ನರ್ಸಿಂಗ್ ಕೋರ್ಸ್ ಡಿಗ್ರಿ ಮುಗಿಸಿ, ವರ್ಷವೋ ಏನೋ ಸ್ವಲ್ಪ ಕಾಲ ಕೆಲಸ ಮಾಡಿ ನಂತರ ಬ್ಯಾಂಕ್ ಸಾಲ ಪಡೆದು ಪಬ್ಲಿಕ್ ಹೆಲ್ತ್ ಪದವಿಗಾಗಿ ಇಲ್ಲಿಗೆ ಬಂದವಳು. ಅವಳ ಸ್ನೇಹಿತರೆಲ್ಲರೂ ಹಾಗೆಯೇ ಮಾಡಿದವರಂತೆ. ಎರಡು ವರ್ಷಗಳ ಪದವಿ ಓದಿನಲ್ಲಿ ಅವಳದ್ದು ಈಗ ಎರಡನೇ ಸೆಮೆಸ್ಟರ್ ಅಂದರೆ ಮೊದಲ ವರ್ಷದ ಓದು ಈಗಷ್ಟೆ ಮುಗಿಯುತ್ತಿದೆ. ಈ ವರ್ಷದ ವಿದ್ಯಾರ್ಥಿಗಳ ತಂಡದಲ್ಲಿ ಭಾರತೀಯರೇ ಹೆಚ್ಚಿನವರಿದ್ದಾರೆ, ಸುಮಾರು ನೂರಕ್ಕೂ ಹೆಚ್ಚು, ಅಂದಳು. ನನ್ನ ಹುಬ್ಬುಗಳು ಮೇಲೇರಿ ಕಣ್ಣುಗಳು ಅಗಲವಾದವು. ಅದ್ಯಾಕೆ ಅಷ್ಟೊಂದು ಜನ ಭಾರತೀಯರು ಇದೇ ಕೋರ್ಸ್ ಮಾಡುತ್ತಿದ್ದಾರೆ ಅಂತ ಕೇಳುತ್ತ ವಿಷಯವನ್ನ ಕೆದಕಿದೆ.

ಈ ವಿಶ್ವವಿದ್ಯಾಲಯದ ಡಿಗ್ರಿಗೆ ಒಳ್ಳೆ ಬೆಲೆಯಿದೆ, ಅದರಲ್ಲೂ ಪಬ್ಲಿಕ್ ಹೆಲ್ತ್ ಕೋರ್ಸಿಗೆ ಭಾರತೀಯರು ಮುಗಿಬೀಳುತ್ತಾರೆ. ಕೋರ್ಸಿನಲ್ಲಿರುವ ಐಚ್ಚಿಕ ವಿಷಯಗಳು ಆಸ್ಟ್ರೇಲಿಯಾ ಮತ್ತು ಭಾರತ ಎರಡೂ ಕಡೆಗಳಲ್ಲಿ ಉಪಯೋಗಕ್ಕೆ ಬರುತ್ತವೆ. ಸ್ನಾತಕೋತ್ತರ ಪದವಿ ಪಡೆದ ನಂತರ ಅವರು ಇಲ್ಲಿಯ ಉದ್ಯೋಗಗಳಿಗೆ ಅರ್ಜಿ ಹಾಕಿಕೊಳ್ಳಬಹುದು. ಪಬ್ಲಿಕ್ ಹೆಲ್ತ್ ಉದ್ಯೋಗಗಳಿಗೆ ಆಸ್ಟ್ರೇಲಿಯಾದಲ್ಲಿ ಬೇಡಿಕೆಯಿದೆ. ತಕ್ಷಣಕ್ಕೆ ಉದ್ಯೋಗ ಸಿಕ್ಕದಿದ್ದರೂ ಸ್ವಯಂಸೇವಾ ಸಂಸ್ಥೆಗಳಲ್ಲಿ ಅಥವಾ ಸರ್ಕಾರದ ವಿಭಾಗಗಳಲ್ಲಿ ಸ್ವಯಂಸೇವೆ ಸಲ್ಲಿಸಿದರೆ ಅದಕ್ಕೂ ಕೂಡ ಮಾನ್ಯತೆಯಿದೆ.

ಹೆಚ್ಚುಕಡಿಮೆ ಹುಡುಗಿ, ಹುಡುಗರೆಲ್ಲರೂ ಇಪ್ಪತೈದರ ಆಸುಪಾಸು ವಯಸ್ಸಿನೊಳಗಿದ್ದವರು. ಸ್ವಲ್ಪ ಕೆಲಸದ ಅನುಭವ ಪಡೆದ ತಕ್ಷಣ ಎಲ್ಲಾದರೂ ಉದ್ಯೋಗವನ್ನು ಸಂಪಾದಿಸಿಕೊಂಡು ಖಾಯಂ ನಿವಾಸಿ ವೀಸಾಗೆ ಅರ್ಜಿ ಹಾಕಿಕೊಳ್ಳುವುದು ಸುಲಭವಾಗುತ್ತದೆ. ವೀಸಾ ಅರ್ಜಿಗೆ ಬೇಕಿರುವ ಅರ್ಹತಾ ಪಾಯಿಂಟ್ ಗಳನ್ನ ಪೇರಿಸಿಟ್ಟುಕೊಳ್ಳಲು ಅವರಿಗೆ ಈ ಡಿಗ್ರಿ, ಅವರ ವಯಸ್ಸು, ಇಲ್ಲಿ ಸೇವೆ ಸಲ್ಲಿಸಿದ ಅನುಭವ ಎಲ್ಲವೂ ಅತ್ಯವಶ್ಯಕ. ಎಲ್ಲಕ್ಕೂ ಮುಖ್ಯವಾಗಿ ಆಸ್ಟ್ರೇಲಿಯಾ ದೇಶದ ಸರ್ಕಾರಗಳು ಅರೋಗ್ಯ ಕ್ಷೇತ್ರಕ್ಕೆ ಬಹಳ ಪ್ರಾಧಾನ್ಯತೆಯನ್ನು ಕೊಡುವುದರಿಂದ ಆ ಕ್ಷೇತ್ರಕ್ಕೆ ಅಪಾರ ಧನಸಹಾಯ (funding) ಒದಗುತ್ತದೆ. ಇದೆಲ್ಲದರ ಹಿನ್ನೆಲೆಯಲ್ಲಿ ಪಬ್ಲಿಕ್ ಹೆಲ್ತ್ ಡಿಗ್ರಿಗಳು ಮುಂಚೂಣಿಯಲ್ಲಿವೆ. ಅದನ್ನು ಆರಿಸಿಕೊಂಡು ಓದಲು ಭಾರತದಿಂದ ಬರುವ ಎಲ್ಲರಿಗೂ ಇಲ್ಲಿಯೇ ತಳವೂರುವ ಮಹದಾಶೆಯಿದೆ.

ಒಂದು ವರ್ಷದ ಓದಿಗೆ ಫೀಸೆಷ್ಟು ಅಂತ ಅವಳನ್ನು ಕೇಳಿ ತಿಳಿದುಕೊಂಡಾಗ ನಿಬ್ಬೆರಗಾದೆ. ಒಂದು ವರ್ಷಕ್ಕೆ (ಎರಡು ಸೆಮಿಸ್ಟರ್) ಸುಮಾರು ಮೂವತ್ತು ಸಾವಿರ ಆಸ್ಟ್ರೇಲಿಯನ್ ಡಾಲರು ಶಿಕ್ಷಣಾ ಶುಲ್ಕ. ಅದಲ್ಲದೆ ವಿದ್ಯಾರ್ಥಿ ಸೇವೆ ಶುಲ್ಕ, ಖಾಸಗಿ ಅರೋಗ್ಯ ವಿಮೆ ಮುಂತಾದ ಖರ್ಚುಗಳಿವೆ. ಅಂದರೆ ಸುಮಾರು ಹದಿನಾಲ್ಕರಿಂದ ಹದಿನೈದು ಲಕ್ಷ ರೂಪಾಯಿ ಬರಿ ಒಂದು ವರ್ಷದ ಶಿಕ್ಷಣಕ್ಕೆ. ಅವರುಗಳು ಎರಡು ವರ್ಷಗಳ ಪದವಿಯನ್ನು ಓದಲು ಕನಿಷ್ಠ ಮೂವತ್ತು ಲಕ್ಷ ರೂಪಾಯಿಗಳಷ್ಟು ಹಣ ಹೂಡಬೇಕು.

ಲೈಬ್ರರಿಯ ಒಳಗಡೆ ಏರ್ ಕಂಡಿಷನ್ನಿನ ತಂಪಿನಲ್ಲಿದ್ದರೂ ನಾಲಗೆ ಒಣಗಿದಂತೆ, ಬೆನ್ನಲ್ಲಿ ಬೆವರು ಹುಟ್ಟಿದಂತೆ ಭಾಸವಾಯ್ತು. ಒಬ್ಬ ಅಂತರರಾಷ್ಟ್ರೀಯ ವಿದ್ಯಾರ್ಥಿಯಿಂದ ಒಂದು ವರ್ಷಕ್ಕೆ ೩೦ ಸಾವಿರ ಡಾಲರುಗಳನ್ನ ಪಡೆಯುವ ಈ ವಿಶ್ವವಿದ್ಯಾಲಯ ಬಹು ಶ್ರೀಮಂತವಾದದ್ದು ಅಂದೆನಿಸಿ ಅವಳ ಪೋಷಕರು ಕೂಡ ಶ್ರೀಮಂತರಿರಬೇಕೇನೋ ಅಂದೆ. ಅಯ್ಯೋ ಅಪ್ಪನಿಗೇನೂ ಖರ್ಚು ಬಿದ್ದಿಲ್ಲ, ಎಲ್ಲವೂ ಬ್ಯಾಂಕ್ ಸಾಲ ಅಲ್ಲವೇ, ನಾನು ಇಲ್ಲಿ ದುಡಿದು ಸಾಲವನ್ನು ತೀರಿಸಬೇಕಷ್ಟೆ, ಎಂದು ಹುಡುಗಿ ನಕ್ಕಳು.

ಆದರೆ ರಾಣಿರಾಜ್ಯಕ್ಕೆ ತಾಪದ ಏಣಿ ಮೇಲೆ ಏರಲು ಅದೇನೋ ಬಲು ಉತ್ಸಾಹ. ಸೆಪ್ಟೆಂಬರ್ ತಿಂಗಳಲ್ಲಿ ಅಬ್ಬಾ ಸದ್ಯ ಇನ್ನೂ ಮೂವತ್ತು ಡಿಗ್ರಿಯಷ್ಟೇ ಇದೆ ಅಂತ ಸಮಾಧಾನಪಟ್ಟುಕೊಳ್ಳುವಷ್ಟರಲ್ಲಿ ಅದು ಮೂವತ್ತೈದರ ಗಡಿ ತಲುಪಿ ನೆರಳು, ನೀರು ಕಡಿಮೆಯಾಗಿ ಸಕಲಜೀವರಾಶಿಗೂ ಸಂಕಷ್ಟ ತಂದಿಟ್ಟಿದೆ.

ನಾನೂ ಕೂಡ ಹೀಗೆಯೇ ಸ್ವಲ್ಪ ಸಾಲ ಮಾಡಿ (ಖಂಡಿತವಾಗಿಯೂ ಮೂವತ್ತು ಲಕ್ಷವಂತೂ ಅಲ್ಲ!!) ಸ್ನಾತಕೋತ್ತರ ಪದವಿ ಓದಿಗಾಗಿ ಬಂದದ್ದು ನೆನಪಾಯ್ತು. ದುರದೃಷ್ಟವಶಾತ್, ನಾನು ಓದಲಿಚ್ಚಿಸಿದ್ದ ವಿಷಯವನ್ನು ಆ ಕೋರ್ಸಿನಿಂದ ತೆಗೆದುಹಾಕಿದ್ದರು. ಅದೇ ವಿಷಯವನ್ನು ನಾನು ಓದಬೇಕಿದ್ದರೆ ಬೇರೊಂದು ವಿಶ್ವವಿದ್ಯಾಲಯಕ್ಕೆ ಟ್ರಾನ್ಸ್ಫರ್ ಪಡೆದು ಹೋಗಬೇಕಿತ್ತು. ಆದರೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅಷ್ಟು ಸುಲಭದಲ್ಲಿ ಟ್ರಾನ್ಸ್ಫರ್ ಸಿಕ್ಕುವುದಿಲ್ಲ, ಅದಾಗಲೇ ಒಂದು ಸೆಮಿಸ್ಟರ್ ಓದಿನ ಶಿಕ್ಷಣ ಶುಲ್ಕವನ್ನು ಯೂನಿವರ್ಸಿಟಿಗೆ ಕಟ್ಟಿಯಾದ್ದರಿಂದ ಯೂನಿವರ್ಸಿಟಿ ನನ್ನನ್ನು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ ಎಂದು ತಿಳಿಯಿತು. ಹೋಗಲಿ, ಅದೇ ವಿಶ್ವವಿದ್ಯಾಲಯದಲ್ಲಿಯೇ ಬೇರೊಂದು ಕೋರ್ಸಿಗೆ ಸೇರೋಣವೆಂದರೆ ವಿದ್ಯಾರ್ಥಿ ವೀಸಾಗೆ ಇದ್ದ ನಿಬಂಧನೆಗಳ ಪ್ರಕಾರ ನಾನು ಕೋರ್ಸ್ ಬದಲಾಯಿಸುವಂತಿರಲಿಲ್ಲ. ಜೊತೆಗೆ, ವೀಸಾಗಳನ್ನ ಬಲು ಕಟ್ಟುನಿಟ್ಟಿನಿಂದ ನಿರ್ವಹಿಸುವ ಇಮಿಗ್ರೇಷನ್ ಕಛೇರಿ ವಿದ್ಯಾರ್ಥಿ ವೀಸಾವನ್ನ ರದ್ದುಪಡಿಸಿದ ಕೆಲಕಥೆಗಳು ಸುತ್ತಲೂ ಹರಿದಾಡುತ್ತಿದ್ದವು. ಕೊನೆಗೆ ನಾನು ಹತಾಶೆಯಿಂದ ಅದೇ ಯೂನಿವರ್ಸಿಟಿಯಲ್ಲಿ ಕೋರ್ಸ್ ವರ್ಕ್ ಡಿಗ್ರಿಯಿಂದ ರಿಸರ್ಚ್ ವರ್ಕ್ ಡಿಗ್ರಿಗೆ ಬಡ್ತಿ ಪಡೆದು ಎಂ.ಎಡ್. ಆನರ್ಸ್ ಓದನ್ನು ಆರಂಭಿಸಿದೆ.

ಅದೃಷ್ಟವಶಾತ್, ಓದಿನ ಆರಂಭದಲ್ಲೇ ಯೂನಿವರ್ಸಿಟಿಯಲ್ಲಿ ರಿಸರ್ಚ್ ಸಹಾಯಕ ಕೆಲಸ ದೊರೆತು ಸಾಲ ತೀರಿಸಲು, ನನ್ನ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ಸುಲಭವಾಗಿತ್ತು. ಆದರೆ ಆಗ ಪೂರೈಸಿದ ಎಂ.ಎಡ್. ಡಿಗ್ರಿ ನನ್ನ ಮುಂದಿನ ವೃತ್ತಿಜೀವನಕ್ಕೆ ಸಹಾಯವಾಗಲಿಲ್ಲ ಅನ್ನುವುದು ಬೇರೆ ಮಾತು. ಅದನ್ನು ಮುಗಿಸುವ ಹಂತದಲ್ಲಿ ಮುಂದಿನ ಪಿಎಚ್.ಡಿ ಓದಿಗೆಂದು ಅರ್ಜಿ ಹಾಕಿ ನನ್ನ ಅಧ್ಯಯನ ವಿಷಯವನ್ನು ಮಂಡಿಸಿ, ಎರಡು ಸುತ್ತುಗಳ ನಂತರ ಆಯ್ಕೆಯಾಗಿ ನನಗೆ ಅಂತರರಾಷ್ಟ್ರೀಯ ಸಂಶೋಧನಾ ವಿದ್ಯಾರ್ಥಿಗಳಿಗೆ ಕಾಮನ್ವೆಲ್ತ್ ಸರ್ಕಾರ ಕೊಡುವ ರಿಸರ್ಚ್ ಫೆಲೊಶಿಪ್ ಸಿಕ್ಕಿತು. ಶಿಕ್ಷಣ ಶುಲ್ಕವನ್ನು ಕೊಡುವುದು ತಪ್ಪಿದರೂ ಸ್ಟೈಪೆಂಡ್ ಇಲ್ಲವಾದ್ದರಿಂದ ಯೂನಿವರ್ಸಿಟಿಯಲ್ಲಿ ಎರಡು ಪಾರ್ಟ್ ಟೈಮ್ ಕೆಲಸಗಳನ್ನು ಮಾಡುತ್ತಾ ಜೀವನ ಮುಂದುವರೆಸಿದೆ.

ಕಡೇಪಕ್ಷ ಈ ಹುಡುಗಿಗೆ ಮತ್ತು ಅವಳ ಸ್ನೇಹಿತರಿಗೆ ಸರಿಯಾದ ಕೋರ್ಸ್ ಮತ್ತು ಇಲ್ಲೇ ಖಾಯಂ ನಿವಾಸಿಯಾಗುವ ನಿರ್ದಿಷ್ಟ ಗುರಿಗಳಿವೆಯಲ್ಲಾ, ಪರವಾಗಿಲ್ಲ ಎಂದು ಖುಷಿಯಾಯ್ತು. ಇಬ್ಬರು, ಮೂರು ವಿದ್ಯಾರ್ಥಿಗಳು ಸೇರಿ ಶೇರ್ಡ್ ಅಕಾಮಡೇಶನ್ ಬಾಡಿಗೆ ಮನೆಗಳು ಅಥವಾ ಫ್ಲ್ಯಾಟುಗಳಲ್ಲಿ ವಾಸವಿದ್ದಾರಂತೆ. ಹುಡುಗಿ ಮತ್ತವಳ ಸ್ನೇಹಿತರು ಅವಕಾಶ ಸಿಕ್ಕಂತೆಲ್ಲ ಪಿಜ್ಜಾ ಹಟ್, ಮನೆ ಕ್ಲೀನಿಂಗ್ ಕೆಲಸ, ಕ್ಯಾಟಲಾಗ್ ಡೆಲಿವರಿ, ಸೆವೆನ್ ಇಲೆವೆನ್ ಅಂಗಡಿಯಲ್ಲಿ ಪಾರ್ಟ್ ಟೈಮ್ ಕೆಲಸಗಳನ್ನು ಮಾಡುತ್ತಿದ್ದಾರಂತೆ. ಎರಡು ತಿಂಗಳಿನಿಂದ ಯಾವುದೇ ಕ್ಯಾಶುಯಲ್ ಜಾಬ್ ಸಿಕ್ಕಿಲ್ಲ, ಯಾವುದಾದರೂ ತಿಳಿದಿದ್ದರೆ ಹೇಳಿ, ಎಂದು ದುಂಬಾಲು ಬಿದ್ದಳು. ಅದನ್ನು ಕೇಳಿ ಹಿಂದೊಮ್ಮೆ ಕೆಲಕಾಲ ಪರಿಚಯವಾಗಿದ್ದ ದಂತವೈದ್ಯ ದಂಪತಿಯ ಕಥೆ ನೆನಪಿಗೆ ಬಂತು.

ಹೆಂಡತಿ ದಂತವೈದ್ಯೆ, ಗಂಡ ದಂತವೈದ್ಯ ಸರ್ಜನ್. ಅವರಿಗೆ ಐದು ವರ್ಷ ವಯಸ್ಸಿನ ಮಗ. ಇಡೀ ಸಂಸಾರ ಭಾರತ ಬಿಟ್ಟು ವಲೊಂಗೊಂಗಿಗೆ ಬಂದಿದ್ದರು. ಹೆಂಡತಿ ಅಲ್ಲಿನ ಯೂನಿವರ್ಸಿಟಿಯಲ್ಲಿ ಅದೇ ಪಬ್ಲಿಕ್ ಹೆಲ್ತ್ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಸೇರಿಕೊಂಡಿದ್ದಳು. ಆಸ್ಟ್ರೇಲಿಯಾದಲ್ಲಿ ಖಾಯಂ ಆಗಿ ಸೆಟ್ಲ್ ಆಗಲು ಅವರು ಬಂದಿದ್ದರಂತೆ. ಆದರೆ, ಹೆಂಡತಿಗೆ ಎರಡು ವರ್ಷಗಳ ವಿದ್ಯಾರ್ಥಿ ವೀಸಾ, ಗಂಡ ಮತ್ತು ಮಗುವಿಗೆ ಡಿಪೆಂಡೆಂಟ್ ವೀಸಾ ಮಾತ್ರವಿತ್ತು. ಬರುವ ಮುಂಚೆ ವಿಚಾರಿಸಬೇಕಿದ್ದ ಅನೇಕ ಸೂಕ್ಷ್ಮವಿಷಯಗಳನ್ನ ಅವರು ಮರೆತೇಬಿಟ್ಟಿದ್ದರು.

ದಂತವೈದ್ಯರಲ್ಲವಾ, ಕೆಲಸ ಸಿಕ್ಕೇಬಿಡುತ್ತದೆ ಎಂದು ಬಂದರಂತೆ. ಬಂದಮೇಲೆ ತಿಂಗಳುಗಳು ಕಳೆದರೂ ಇಬ್ಬರಿಗೂ ಹಣಸಂಪಾದನೆಯ ಉದ್ಯೋಗವಿಲ್ಲ. ತವರಿನಿಂದ ಹಣ ಕಳಿಸುತ್ತಿದ್ದರಂತೆ. ಹೆಂಡತಿಯೇನೋ ಓದುತ್ತಿದ್ದಾಳೆ ಸರಿ. ಭಾರತದಲ್ಲಿ ಸರ್ಜನ್ ಆಗಿದ್ದ ಗಂಡನಿಗೆ ಕೆಲಸವಿಲ್ಲದೇ ನಿರುದ್ಯೋಗಿ ಪಟ್ಟ ಸಿಕ್ಕು ತಲೆಕೆಟ್ಟಂತಾಗಿತ್ತು. ಇಲ್ಲಿನ ಕ್ರಮ, ಪದ್ಧತಿಯಂತೆ ದಂತವೈದ್ಯನಾಗಿ ನೋಂದಣಿ ಮಾಡಿಸಲು, ತನ್ನ ವೃತ್ತಿಯನ್ನು ಪ್ರಾಕ್ಟಿಸ್ ಮಾಡಲು ಪರವಾನಗಿ ಪಡೆಯಬೇಕಿತ್ತು. ಅದಕ್ಕಾಗಿ ಬಹುಕಷ್ಟದ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕಗಳನ್ನು ಪಡೆಯಬೇಕಿತ್ತಂತೆ. ಅದಕ್ಕಾಗಿ ಆತ ಹೆಣಗಾಡುತ್ತಿದ್ದ.

ಅವರಿಬ್ಬರ ಮಧ್ಯೆ ಆ ಐದು ವರ್ಷದ ಬಾಲಕ ಕಂಗೆಟ್ಟುಹೋಗಿದ್ದ. ಅವನಿಗೆ ಆಟವಾಡಲು ಅವಕಾಶಗಳಿಲ್ಲದೆ, ಸ್ನೇಹಿತರಿಲ್ಲದೆ, ಶಾಲೆಗೆ ಹೋಗಲು ಕೊಡಬೇಕಾದ ಅಂತರರಾಷ್ಟ್ರೀಯ ಮಟ್ಟದ ಫೀಸ್ ಹಣವಿಲ್ಲದೆ ಅವನು ತನ್ನ ತಂದೆಯ ಜೊತೆ ಮನೆಯಲ್ಲಿ ಬಂಧಿಯಾಗಿ ಕಾಲಕಳೆಯುವಂತಾಗಿತ್ತು. ತಾನೆಂದುಕೊಂಡಂತೆ ಆಗದೆ, ಪರೀಕ್ಷೆಗಳಿಗೆ ತಯಾರಾಗುತ್ತಾ, ತನ್ನ ವೃತ್ತಿ ರಿಜಿಸ್ಟ್ರೇಷನ್ ಕನಸನ್ನು ಮುಂದೂಡುತ್ತಾ ಮಾನಸಿಕ ಸ್ಥೈರ್ಯ ಕಡಿಮೆಯಾಗುತ್ತಾ ಹೋದಂತೆ ಅಪ್ಪ ಹುಡುಗನಿಗೆ ಹೊಡೆಯಲಾರಂಭಿಸಿದ್ದ. ಅದನ್ನು ನೋಡಲಾರದೆ, ತಾಳಲಾರದೆ ತಾಯಿ ಮಗುವನ್ನ ಭಾರತದ ತನ್ನ ತವರಿಗೆ ಕಳಿಸಿಬಿಟ್ಟಳು.

ಹೇಗೋ ಕಷ್ಟಪಟ್ಟು ಸಿಡ್ನಿ ನಗರದ ಒಂದುಕಡೆ ಸವೆನ್ ಇಲೆವೆನ್ ಅಂಗಡಿಯಲ್ಲಿ ಪಾರ್ಟ್ ಟೈಮ್ ಕೆಲಸ ಗಿಟ್ಟಿಸಿಕೊಂಡಳು. ಗಂಡಹೆಂಡತಿ ಇಬ್ಬರೂ ವಲೊಂಗೊಂಗ್ ಬಿಟ್ಟು ಸಿಡ್ನಿಗೆ ಹೊರಟುಹೋದರು. ಅದಾದ ನಂತರ ವಲೊಂಗೊಂಗ್ ಯೂನಿವರ್ಸಿಟಿಯಲ್ಲಿ ಒಮ್ಮೆ ಅವಳು ಸಿಕ್ಕಾಗ ಗಂಡನ ಖಿನ್ನತೆಯನ್ನು, ತನ್ನ ಸಂದಿಗ್ಧ ಪರಿಸ್ಥಿತಿಯನ್ನು, ಮಗ ದೂರವಾಗಿರುವುದನ್ನು, ಏರುತ್ತಿರುವ ಸಾಲವನ್ನು ಕುರಿತು ಹೇಳಿಕೊಂಡು ಗೊಳೋ ಅಂತ ಅತ್ತಿದ್ದಳು. ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋಹಿ ಬಿಸಿಬಿಸಿ ದೋಸೆ ಮಾಡಿಕೊಟ್ಟರೆ, ‘ಇನ್ನೂ ಎರಡು ದೋಸೆ ತಿನ್ನಲಾ, ಸ್ವಲ್ಪ ದೋಸೆಹಿಟ್ಟು ಮನೆಗೊಯ್ಯುತ್ತೀನಿ, ಕೊಡುತ್ತೀಯಾ,’ ಎಂದಾಗ ದೇಸಿ ವಿದ್ಯಾರ್ಥಿಗಳ ಕಥೆ ದೋಸೆಯಂತೆಯೇ ತೂತು ಎಂದೆನಿಸಿಬಿಟ್ಟಿತ್ತು.

ಆಸ್ಟ್ರೇಲಿಯಾ ದೇಶದ ಆರ್ಥಿಕ ಪರಿಸ್ಥಿತಿ ಬಲು ಕೆಟ್ಟು ಕೂತಿರುವ ಈ recession ಕಾಲದಲ್ಲಿ ಭಾರತವನ್ನು ಬಿಟ್ಟು ಬಂದು ಬ್ರಿಸ್ಬನ್ನಿನಲ್ಲಿ ಪಬ್ಲಿಕ್ ಹೆಲ್ತ್ ಕೋರ್ಸ್ ಓದುತ್ತಿರುವ ಈ ಕಿರಿಯ ವಯಸ್ಸಿನ ಹುಡುಗಿಹುಡುಗರ ಪಾಡು ಮುಂದೇನಾಗುತ್ತದೋ.