ದೊರೆಯ ಉಗ್ಗು ನಿವಾರಣೆ ಕುರಿತ ಪ್ರಯತ್ನಗಳು ಮುಂದುವರಿದ ಹಾಗೆ ಚಿತ್ರದಲ್ಲಿ ದೃಶ್ಯಗಳ ಒಟ್ಟಾರೆ ಭಾವದಲ್ಲಿ ತೀವ್ರತೆ ಹೆಚ್ಚಾಗುತ್ತದೆ. ಅವುಗಳಲ್ಲಿ ದೊರೆಯ ತಲ್ಲಣ, ತಳಮಳಗಳಿರುತ್ತವೆ, ತನ್ನ ಸಾಮರ್ಥ್ಯದ ಬಗ್ಗೆಯೇ ಅನುಮಾನ ಮತ್ತು ಹಿಂಜರಿಕೆಗಳಿರುತ್ತವೆ. ಅಷ್ಟೇ ಅನುಮಾನ ಹಾಗೂ ರೋಷ ಉಗ್ಗಿನ ದೋಷ ನಿವಾರಣೆಗೆ ಪ್ರಯತ್ನಿಸುವ ಡಾಕ್ಟರ್ ಜೆಫ್ರಿ ರಶ್ಲಿ ಬಗ್ಗೆ ಇರುತ್ತದೆ. ಈ ಜೆಫ್ರಿಯಾದರೋ ಸಾಂಪ್ರದಾಯಿಕ ವಿದ್ಯೆ ಹೊಂದಿದ ಡಾಕ್ಟರಲ್ಲ. ಅವನ ಹಿನ್ನೆಲೆಯೇ ಬೇರೆ. ಹಾಗಾದರೆ ಅವನು ಅನುಸರಿಸುವ ಮಾರ್ಗಗಳೇನು..
ಎ.ಎನ್‌. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಇಂಗ್ಲೆಂಡ್‌ನ ʻದ ಕಿಂಗ್ಸ್ ಸ್ಪೀಚ್ʼ ಸಿನಿಮಾದ ವಿಶ್ಲೇಷಣೆ

 

ಅದು ಚಿತ್ರದ ಮೊದಲನೆ ದೃಶ್ಯ: 1925ರಲ್ಲಿ ಬ್ರಿಟಿಷ್‌ ಎಕ್ಸಿಬಿಷನ್‌ನ ಉದ್ಘಾಟನೆ. ಯುವರಾಜ ಆಲ್ಬರ್ಟ್(ಕಾಲಿನ್‌ ಫಿರ್ಥ್) ತನ್ನ ತಂದೆ 5ನೇ ಜಾರ್ಜ್‌(ಮೈಖೇಲ್‌ ಗ್ಯಾಂಬನ್) ದೇಶವನ್ನು ಉದ್ದೇಶಿಸಿ ಬರೆದದ್ದನ್ನು ರೇಡಿಯೋದ ಮುಖಾಂತರ ಓದುವುದಕ್ಕೆ ಬರುವ ಸನ್ನಿವೇಶ. ಅವನು ಆಡುವ ಮಾತುಗಳನ್ನು ಕೇಳಲು ಬ್ರಿಟಿಷ್‌ ಜನತೆಯಲ್ಲದೆ ಯೂರೋಪಿನ ಇತರ ರಾಷ್ಟ್ರಗಳಲ್ಲಿನವರೂ ಕೂಡ ಕಾದಿರುತ್ತಾರೆ. ಉದ್ದಾನುದ್ದ ಕಾರಿಡಾರುಗಳನ್ನು ದಾಟಿ ಹೆಂಡತಿ ಎಲಿಜೆಬತ್ ಜೊತೆ ಅಧೈರ್ಯದಿಂದ ಬರುತ್ತಾನೆ. ಅವಳ ಮುಖದಲ್ಲಿಯೂ ಆತಂಕದ ಚಹರೆ. ಬಿಬಿಸಿ ಕಟ್ಟಡದಾಚೆ ಮತ್ತು ಉಳಿದೆಲ್ಲ ಕಡೆ ಅವನ ಮಾತು ಕೇಳಲು ಸಾವಿರಾರು ಜನರ ಗುಂಪು ಅಲ್ಲಲ್ಲಿ ನೆರೆದಿರುತ್ತದೆ.

ಅವನು ಅಧೈರ್ಯದಿಂದ ಮೈಕ್ರೊಫೋನ್ ಮುಂದೆ ನಿಲ್ಲುತ್ತಾನೆ. ಸುತ್ತ ನಿಂತವರ ಕಣ್ಣುಗಳೆಲ್ಲ ಅವನ ಮೇಲೆ. ಸುಮ್ಮನೆ ಚಡಪಡಿಸುತ್ತ, ಉದ್ವೇಗ ಉಕ್ಕುತ್ತ ನಿಂತು ಕ್ಷಣಗಳು ಕಳೆಯುತ್ತವೆ, ಒಂದೆರಡು ಬಾರಿ ಬರಿ ಗೊಗ್ಗರ ಶಬ್ದ ಹೊರಡುತ್ತದೆ. ಚೌಕುಮುಖದ ಅವನ ದೊಡ್ಡ ಕಣ್ಣುಗಳು ತೆಳುವಾಗಿ ತೇವಗೊಳ್ಳುತ್ತವೆ. ಕಾಗದವನ್ನು ಹಿಡಿದ ಕೈ ಸಣ್ಣಗೆ ನಲುಗುತ್ತದೆ. ಅವನಿಂದ ಒಂದು ಸ್ಪಷ್ಟ ಪದವನ್ನೂ ಉಚ್ಛರಿಸುವುದಕ್ಕೆ ಆಗುವುದಿಲ್ಲ. ಅಷ್ಟು ದೂರವಿರುವ ಅವನ ಹೆಂಡತಿಯ ರೆಪ್ಪೆ ಇಳಿಮುಖವಾಗುತ್ತದೆ. ಬಿಬಿಸಿ ಕಟ್ಟದ ಒಳಹೊರಗೆ, ಬೇರೆ ಊರು-ಪಟ್ಟಣಗಳಲ್ಲಿ ರೇಡಿಯೋ ಸುತ್ತ ನೆರೆದವರು ಮುಖಗಳನ್ನು ಪಕ್ಕಕ್ಕೆ ತಿರುಗಿಸುತ್ತಾರೆ. ಇನ್ನಷ್ಟು ಕ್ಷಣಗಳು ಕಳೆದು ಅವನು ಮಾತು ಹೊರಡದೆ ಮತ್ತಷ್ಟು ಉದ್ವಿಗ್ನನಾಗುತ್ತಾನೆ. ಅದು ಇನ್ನಷ್ಟು, ಮತ್ತಷ್ಟು ಒತ್ತರಿಸಿ ಅಲ್ಲಿ ನಿಲ್ಲಲಾಗದೆ ನಿರ್ಗಮಿಸುತ್ತಾನೆ. ಪರಿಣಾಮವಾಗಿ ಕೇಳುಗರೆಲ್ಲರಿಗೂ ನಿರಾಸೆ. ಆಲ್‌ಬರ್ಟ್‌ ಮತ್ತು ಎಲಿಜೆಬತ್ ಸೇರಿದಂತೆ ಎಲ್ಲರಿಗೂ ಸಮಸ್ಯೆಯ ಕೋಟೆ ಆವರಿಸುತ್ತದೆ. ಇವುಗಳ ಚಿತ್ರೀಕರಣಕ್ಕೆ ನಿರ್ದೇಶಕ ಟಾಮ್‌ ಹೂಪರ್ ಅಳವಡಿಸಿರುವ ಹೆಚ್ಚಿನ ಅತಿಸಮೀಪ ಚಿತ್ರಿಕೆಗಳು ಆಲ್ಬರ್ಟ್‌ ಎದುರಿಸಬೇಕಾದ ಸಮಸ್ಯೆಯ ಅಗಾಧತೆಯನ್ನು ಪ್ರತಿಬಿಂಬಿಸುತ್ತವೆ.

ಇಪ್ಪತ್ತನೆಯ ಶತಮಾನದ ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯವನ್ನು ಕಲ್ಪಿಸಿಕೊಳ್ಳಿ. ಮೊದಲಿನಿಂದಲೂ ಉಗ್ಗಿನ ದೋಷವಿರುವ ಯುವರಾಜ ಆಲ್ಬರ್ಟ್‌ನಲ್ಲಿರುವ ದೋಷ ನಿವಾರಣೆಗೆ ಅನೇಕ ಬಗೆಯ ಪ್ರಯತ್ನಗಳನ್ನು ಸಾರ್ವಜನಿಕ ಸಮಾರಂಭದಲ್ಲಿ ಸೋಲುವ ಮುಂಚೆ ಮಾಡಿರುತ್ತಾನೆ. ಆ ಸೋಲು ರೋಷದೊಂದಿಗೆ ಒಂದಷ್ಟು ಕೀಳರಿಮೆಯನ್ನೂ ಉಂಟುಮಾಡಿರುತ್ತದೆ. ಇವೆಲ್ಲವನ್ನು ಕ್ರಮೇಣ ಮೆಟ್ಟಿನಿಂತು ತನ್ಮೂಲಕ ತನ್ನ ವ್ಯಕ್ತಿತ್ವವನ್ನೇ ಹಲವು ಪಟ್ಟು ಹೆಚ್ಚಿಸಿಕೊಳ್ಳುವ ದೊರೆ ಆರನೇ ಜಾರ್ಜ್ ನ ಜೀವನದಲ್ಲಿ ಆಗುವ ಚಾರಿತ್ರಿಕ ಅಂಶವನ್ನು ಹೊಂದಿದ ಚಿತ್ರ ʻದ ಕಿಂಗ್ಸ್ ಸ್ಪೀಚ್ʼ. ಚಿತ್ರದ ಬೆಳವಣಿಗೆಗೆ ಮತ್ತು ಅಗತ್ಯಗಳಿಗೆ ಅನುಕೂಲವಾಗುವಂತೆ ಹಲಕೆಲವು ಕಾಲ್ಪನಿಕ ಪಾತ್ರ ಮತ್ತು ಘಟನೆಗಳನ್ನು ಒಳಗೊಂಡಿದೆ. ಉದಾಹರಣೆಗೆ ಆರ್ಚ್ ಬಿಷಪ್, ಚರ್ಚಿಲ್ ಇತ್ಯಾದಿ ಪಾತ್ರಗಳು. ಇವು ಕೂಡ ಜಾರ್ಜ್ ನ ಬೆಳೆಯುತ್ತಿರುವ ವ್ಯಕ್ತಿತ್ವವನ್ನು ಒಂದಿಲ್ಲೊಂದು ಬಗೆಯಲ್ಲಿ ಬಿಂಬಿಸುತ್ತವೆ. ಈ ಬಗೆಯ ದೈಹಿಕ ವಿಕಲತೆಯನ್ನು ಕಥಾವಸ್ತುವಾಗಿದ್ದ ಚಿತ್ರ 1960ರ ವಿನ್ಪ್ಸೆಂಟ್ ಡಾನ್‌ ಹ್ಯೂ ನಿರ್ದೇಶನದ ʻಸನ್ ರೈಸ್ ಅಟ್ ಕೈಂಪೊಬೆಲೋʼ. ಈ ಚಿತ್ರದಲ್ಲಿ ಅಮೆರಿಕದ ೩೨ನೆ ಅಧ್ಯಕ್ಷನಾದ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ತನ್ನ 40ನೇ ವಯಸ್ಸಿನಲ್ಲಿ ತಲೆದೋರಿದ ಪೋಲಿಯೋ ವಿರುದ್ಧ ಹೋರಾಡಿ ಜಯಿಸುವ ಜೀವನ ವೃತ್ತಾಂತ ಮತ್ತು ಕಲ್ಪಕತೆಯನ್ನು ಬೆರೆತ ಚಿತ್ರಣವಿದೆ. ಅವನ ಹೋರಾಟದಲ್ಲಿ ಹೆಂಡತಿ ಮತ್ತು ತಾಯಿ ತುಂಬು ಸಹಕಾರ ಒದಗಿಸಿ ಅವನಲ್ಲಿ ಆತ್ಮವಿಶ್ವಾಸ ಬೆಳೆಯಲು ಕಾರಣರಾಗುತ್ತಾರೆ. ಚಿತ್ರದಲ್ಲಿ ಹೆಂಡತಿಯ ಪಾತ್ರಧಾರಿ ಗ್ರೀರ್ ಗಾರ್ಸರ್ ಅತ್ಯುತ್ತಮ ನಟಿ ವಿಭಾಗಕ್ಕೆ 1961ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಳು.

ʻದ ಕಿಂಗ್ಸ್‌ ಸ್ಪೀಚ್‌ʼ ಎಲ್ಲ ಗಾಂಭೀರ್ಯ ಮತ್ತು ಗಂಭೀರತೆಯನ್ನು ಒಳಗೊಂಡದ್ದು. ಇಂಗ್ಲೆಂಡ್‌ ಸಾಮ್ರಾಜ್ಯದ ೬ನೇ ಜಾರ್ಜ್‌ ಗೆ ಸಂಬಂಧಪಟ್ಟ ವಿಷಯ. ವಿಷಯ ಅತ್ಯಂತ ತೀವ್ರವಾದ ಸಮಸ್ಯೆಯನ್ನು ಹೊಂದಿರುವಂಥಾದ್ದು. ಅದು ಅವನಿಗಷ್ಟೇ ಅಲ್ಲದೆ ಇಡೀ ರಾಜ ಮನೆತನಕ್ಕೆ ಮತ್ತು ದೇಶಕ್ಕೇ ಸಂಬಂಧಿಸಿದ ಸಂಗತಿ. ಸಾಮಾನ್ಯವಾದದ್ದಲ್ಲ. ಅದಷ್ಟೇ ಅಲ್ಲದೆ ಎಲ್ಲೆ ಮೀರಿದ ತುರ್ತಿನದೂ ಕೂಡ. ಅದೆಂದರೆ ದೊರೆಯಾಗಲಿರುವ ಯುರಾಜ ಆಲ್ಬರ್ಟ್‌ಗೆ ಮಾತಿನ ಉಚ್ಛರಣೆ ಸ್ಪಷ್ಟವಿರದೆ, ಉಗ್ಗು! ರಾಜಮನೆತನದಲ್ಲಿ ಅಲ್ಲಿಯ ತನಕ ಕಂಡರಿಯದ ಉಗ್ಗು. ಅವನಲ್ಲಿರುವ ದೋಷ ಆದಷ್ಟು ಬೇಗ ನಿವಾರಣೆಯಾಗಬೇಕು. ಉಳಿದೆಲ್ಲ ಸಂಗತಿಗಳನ್ನು ನೋಡಿಕೊಳ್ಳುವುದಕ್ಕೆ ತಕ್ಕ ವ್ಯವಸ್ಥೆ ಇರುವುದು ನಿಜವಾದರೂ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಸ್ವತಃ ದೊರೆಯೇ ಪಾಲ್ಗೊಳ್ಳಬೇಕು ಮತ್ತು ಅವನು ಆ ಪ್ರಯತ್ನ ಸಂಪೂರ್ಣ ಸಫಲವಾಗುವುದಕ್ಕೆ ಮಾರ್ಗದರ್ಶಕರಾಗಲು ಸಮರ್ಥರಾದ ಡಾಕ್ಟರೊಬ್ಬರ ವ್ಯವಸ್ಥೆಯಾಗಬೇಕು. ಆದರೆ ಆ ವಿಷಯದಲ್ಲಿ ಕೈಹಾಕುವಂಥ ಭರವಸೆಯುಳ್ಳವರು ಒದಗಬೇಕು. ಇವೆಲ್ಲ ಕೂಡಿ ಬಂದರಷ್ಟೇ ಮುಂದುವರಿಕೆ ಸಾಧ್ಯ. ಸಾಮಾನ್ಯರಿಗಾದರೆ ಸರಿ. ಆದರಿದು ಯುವರಾಜನಿಗೆ ಸಂಬಂಧಿಸಿದ್ದು. ತಮ್ಮ ಸಾಮರ್ಥ್ಯದ ಮೇಲೆ ಅತೀವ ನಂಬಿಕೆ ಇರುವ ಡಾಕ್ಟರು ಸಿಗಬೇಕು ಎಂದರೆ ಸಾಮಾನ್ಯವಲ್ಲ. ಅರಮನೆಯಲ್ಲಿ ದೊರೆಯ ಮೇಲೆ ದೃಷ್ಟಿ ಇರುವಷ್ಟೇ ಅವರ ಮೇಲೆ ಕೂಡ ಇರುವುದು ಸಾಮಾನ್ಯವೇ.

ಬಿಬಿಸಿ ಕಟ್ಟದ ಒಳಹೊರಗೆ, ಬೇರೆ ಊರು-ಪಟ್ಟಣಗಳಲ್ಲಿ ರೇಡಿಯೋ ಸುತ್ತ ನೆರೆದವರು ಮುಖಗಳನ್ನು ಪಕ್ಕಕ್ಕೆ ತಿರುಗಿಸುತ್ತಾರೆ. ಇನ್ನಷ್ಟು ಕ್ಷಣಗಳು ಕಳೆದು ಅವನು ಮಾತು ಹೊರಡದೆ ಮತ್ತಷ್ಟು ಉದ್ವಿಗ್ನನಾಗುತ್ತಾನೆ. ಅದು ಇನ್ನಷ್ಟು, ಮತ್ತಷ್ಟು ಒತ್ತರಿಸಿ ಅಲ್ಲಿ ನಿಲ್ಲಲಾಗದೆ ನಿರ್ಗಮಿಸುತ್ತಾನೆ. ಪರಿಣಾಮವಾಗಿ ಕೇಳುಗರೆಲ್ಲರಿಗೂ ನಿರಾಸೆ. ಆಲ್‌ಬರ್ಟ್‌ ಮತ್ತು ಎಲಿಜೆಬತ್ ಸೇರಿದಂತೆ ಎಲ್ಲರಿಗೂ ಸಮಸ್ಯೆಯ ಕೋಟೆ ಆವರಿಸುತ್ತದೆ.

ದೊರೆಯಾಗುವ ಅವಕಾಶ ಸಹಜವಾಗಿಯೇ ಆಲ್ಬರ್ಟ್‌ ನ ಅಣ್ಣ ಎಡ್ವರ್ಡ್‌ (ಗಯ್ ಪಿಯರ್ಸ್) ಮೇಲಿರುತ್ತದೆ. ಆದರೆ ತಾನು ಪ್ರೇಮಿಸುವವಳನ್ನು ಮದುವೆಯಾಗಿ ಜೀವನ ಸಾಗಿಸುವ ನಿರ್ಧಾರ ಮಾಡುತ್ತಾನೆ. ಹೀಗಾಗಿ ಅವನ ಬದಲು ಆಲ್ಬರ್ಟ್ ಮನಸ್ಸಿಲ್ಲದಿದ್ದರೂ ಆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವುದರಿಂದಲೇ ಆಲ್ಬರ್ಟ್‌ನಲ್ಲಿರುವ ಮಾತಿನ ದೋಷ ನಿವಾರಣೆಯ ಅಗತ್ಯ ಉಂಟಾಗುತ್ತದೆ.

ದೊರೆಯ ಉಗ್ಗು ನಿವಾರಣೆ ಕುರಿತ ಪ್ರಯತ್ನಗಳು ಮುಂದುವರಿದ ಹಾಗೆ ದೃಶ್ಯಗಳ ಒಟ್ಟಾರೆ ಭಾವದಲ್ಲಿ ತೀವ್ರತೆ ಹೆಚ್ಚಾಗುತ್ತದೆ. ಅವುಗಳಲ್ಲಿ ಅವನ ತಲ್ಲಣ, ತಳಮಳಗಳಿರುತ್ತವೆ, ತನ್ನ ಸಾಮರ್ಥ್ಯದ ಬಗ್ಗೆಯೇ ಅನುಮಾನ ಮತ್ತು ಹಿಂಜರಿಕೆಗಳಿರುತ್ತವೆ. ಅಷ್ಟೇ ಅನುಮಾನ ಹಾಗೂ ರೋಷ ಉಗ್ಗಿನ ದೋಷ ನಿವಾರಣೆಗೆ ಪ್ರಯತ್ನಿಸುವ ಡಾಕ್ಟರ್ ಜೆಫ್ರಿ ರಶ್(ಲಿಯೊನೆಲ್ ಲೋಗಿ) ಬಗ್ಗೆ ಇರುತ್ತದೆ. ಈ ಜೆಫ್ರಿಯಾದರೋ ಸಾಂಪ್ರದಾಯಿಕ ವಿದ್ಯೆ ಹೊಂದಿದ ಡಾಕ್ಟರಲ್ಲ. ಅವನ ಹಿನ್ನೆಲೆಯೇ ಬೇರೆ. ಆಸ್ಟೇಲಿಯಾದವನಾದ ಅವನು ನಟನಾಗಲು ಪ್ರಯತ್ನಿಸಿ ಸೋತವನು. ಅವನ ಡಾಕ್ಟರಿಕೆ ಏನಿದ್ದರೂ ಸಂಪೂರ್ಣ ಅಸಂಪ್ರದಾಯಿಕ. ಡಾಕ್ಟರ್‌ ಜೆಫ್ರಿ ರಶ್‌ ಈ ವಿಷಯಕ್ಕೆ ಪ್ರವೇಶಿಸುವುದಕ್ಕೆ ಮುಂಚೆ ದೊರೆ ತನ್ನ ಉಗ್ಗು ನಿವಾರಣೆಗೆ ಸುಮ್ಮನೆ ಸಣ್ಣ ಗುಂಡುಗಳನ್ನು ತುರುಕಿ ಗಂಟಲುಬ್ಬುವಂತೆ ಮಾಡಿ ಹಿಂಸಿಸುವ ಅರಮನೆಯ ಡಾಕ್ಟರನ್ನು ಹೊರಹಾಕಿರುತ್ತಾನೆ. ಅದಾದ ನಂತರವೇ ದೊರೆ ಜಾರ್ಜ್ ಜೆಫ್ರಿಯನ್ನು ತನ್ನ ಬಳಿ ಬಿಟ್ಟುಕೊಳ್ಳುತ್ತಾನೆ. ಅದೇನು ತುಂಬ ಹಿತವಾದ ಮನಸ್ಸಿನಿಂದಲ್ಲ. ಬಿಗಿದ ಮುಖದಿಂದ ಮತ್ತು ಅರೆಮನಸ್ಸಿನಿದಂಲೇ.

ಸದಾ ಸಾವಧಾನದಿಂದ ವ್ಯವಹರಿಸುವ ಜೆಫ್ರಿ ರ‌ಶ್‌ಗೆ ತನ್ನ ಸಾಮರ್ಥ್ಯವನ್ನು ಕುರಿತು ಇರುವಷ್ಟೇ ನಂಬಿಕೆ ದೊರೆಯ ಸಂಕಲ್ಪಬಲದ ಬಗ್ಗೆ ಇರುತ್ತದೆ. ಪ್ರಯತ್ನದ ಮುಂದುವರಿಕೆಯಲ್ಲಿ ದೊರೆಯಲ್ಲಿ ಆಗಾಗ ಇಣುಕುವ ತುಮುಲ, ಹೊಯ್ದಾಟ ಇವುಗಳನ್ನು ಪ್ರಬುದ್ಧ ರೀತಿಯಲ್ಲಿ ಉಪಶಮನಗೊಳಿಸುತ್ತ ಅವನಲ್ಲಿ ಅವನ ಬಗ್ಗೆಯೇ ಇರುವ ನಂಬಿಕೆಯ ವೃದ್ಧಿಗೆ ತಕ್ಕ ವಾತಾವರಣವನ್ನು ಸೃಷ್ಟಿಸುತ್ತಾನೆ. ಅವನ ಎಲ್ಲ ಪ್ರಯತ್ನಗಳಲ್ಲಿ ದೊರೆಗೆ ಪ್ರೋತ್ಸಾಹಪೂರ್ಣ ಬೆಂಬಲ ನೀಡುತ್ತಾಳೆ ದೊರೆಯ ಹೆಂಡತಿ ಕ್ವೀನ್‌ ಎಲಿಜೆಬಥ್ (ಹೆಲೀನಾ ಬೋನ್‌ ಕಾರ್ಟರ್‌) ಅವನಲ್ಲಿರುವ ಒಳತೋಟಿಯನ್ನು ಮನದಟ್ಟುಮಾಡಲು ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ನಾಟಕದ ಸುಪ್ರಸಿದ್ಧ ಸ್ವಗತ `ಟು ಬಿ ಆರ್ ನಾಟ್ ಟು ಬಿ’ಯನ್ನು ಅಭ್ಯಾಸಪಠ್ಯವಾಗಿ ಚಿತ್ರಕಥೆಯಲ್ಲಿ ಹೆಣೆದಿರುವುದು ಮೆಚ್ಚುಗೆ ಗಳಿಸುತ್ತದೆ.

ʻದ ಕಿಂಗ್ಸ್ ಸ್ಪೀಚ್‌ʼನಲ್ಲಿ ಒಂದಕ್ಕೊಂದು ಕಾರ್ಯಕಾರಣ ಸಂಬಂಧವಿರುವ ಕಥಾನಕವಿಲ್ಲ. ದೊರೆ ೬ನೇ ಜಾರ್ಜ್‌ ನ ಉಗ್ಗಿನ ವಿರುದ್ಧದ ಹೋರಾಟದ ವಿವಿಧ ಘಟನಾವಳಿಗಳವೆ. ಅದನ್ನು ಕುರಿತ ನಿರೂಪಣೆಯಲ್ಲಿ, ಚಿತ್ರೀಕರಣದಲ್ಲಿ ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದ ಶೈಲಿ ಹಾಗೂ ನಡೆಯಲ್ಲಿ ಹೇಳುವಂಥ ಪ್ರಯೋಗಗಳಿಲ್ಲ. ಒಂದು ರೀತಿಯಲ್ಲಿ ಪ್ರಚಲಿತ ವಿಧಾನವನ್ನೇ ನಿರ್ದೇಶಕರು ಅಳವಡಿಸಿದ್ದಾರೆ. ಮುಖ್ಯವಾಗಿ ಚಿತ್ರದ ಪ್ರಧಾನ ಅಂಶ ಚಿತ್ರೀಕರಣ ಒಳಾಂಗಣದಲ್ಲಿರಬೇಕಾದದ್ದನ್ನು ಅಪೇಕ್ಷಿಸುತ್ತದೆ. ನಿರ್ದೇಶಕರು ಹಾಗೆಯೇ ಮಾಡುವುದರಿಂದ ದೃಶ್ಯಗಳಲ್ಲಿನ ಹಿನ್ನಲೆ ರಾಜವೈಭವದಿಂದ ಕೂಡಿವೆ. ಪರಿಸ್ಥಿತಿ ಹೀಗಿರುವುದರಿಂದ ದೃಶ್ಯಗಳಿಗೆ ಘನತೆಯನ್ನು ತಂದುಕೊಡುವುದರಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಪಾತ್ರಧಾರಿಗಳ ಅಭಿನಯವೇ ಮುಖ್ಯವಾಗುತ್ತದೆ. ಉಳಿದ ಭಾಗವನ್ನು ಸಂಭಾಷಣೆ, ಮೌನ ಮತ್ತು ಪೂರಕ ಹಿನ್ನಲೆ ಸಂಗೀತ ನೆರವು ನೀಡಬೇಕಾಗುತ್ತದೆ. ಈ ಎಲ್ಲವೂ ಇಡೀ ಚಿತ್ರದಲ್ಲಿ ಸಮರ್ಥ ಸಹಕಾರವನ್ನು ಕೊಟ್ಟಿವೆ.

ತನ್ನ ಇಚ್ಛಾಶಕ್ತಿಯ ಬಲದಿಂದ ಉಗ್ಗಿನ ದೋಷವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಯಶಸ್ಸು ಸಾಧಿಸುವ ದೊರೆ 6ನೇ ಜಾರ್ಜ್‌ ನ ಸುದೀರ್ಘ ವೃತ್ತಾಂತವನ್ನು ʻದ ಕಿಂಗ್ಸ್ ಸ್ಪೀಚ್ʼ ಬೆರಗುಗೊಳಿಸುವ ರೀತಿಯಲ್ಲಿ ತೆರೆದಿಡುತ್ತಾನೆ ನಿರ್ದೇಶಕ ಟಾಮ್‌ ಹೂಪರ್. ದೊರೆ ತನ್ನ ಪ್ರಯತ್ನದ ಬಗ್ಗೆ ಏರು-ಇಳಿವಿನ ರೀತಿಯಲ್ಲಿ ಹೊಯ್ದಾಟ ಇತ್ಯಾದಿಯನ್ನು ಪ್ರಕಟಿಸುತ್ತ ಅತ್ಯಂತ ಸಹಜ ಮಾನವ ಗುಣ-ಸ್ವಭಾವಗಳನ್ನು ಪ್ರಕಟಿಸುತ್ತಿದ್ದರೂ ಜೆಫ್ರಿ ತಾನು ದೊರೆಯೊಡನೆ ವ್ಯವಹರಿಸುತ್ತಿದ್ದೇನೆ ಎನ್ನುವುದನ್ನು ಯಾವಾಗಲೂ ನೆನಪಿಟ್ಟುಕೊಂಡಿರುತ್ತಾನೆ. ಅವನು ನಡೆದುಕೊಳ್ಳುವ ರೀತಿಯಲ್ಲಿ ಅಲ್ಪ ಪ್ರಮಾಣದ ಹಾಸ್ಯ ಸನ್ನಿವೇಶಗಳೂ ಬೆರೆತಿರುವುದು ದೃಶ್ಯದ ಗಾಂಭೀರ್ಯತೆಯನ್ನು ತೆಳುವಾಗಿಸುವುದಿಲ್ಲ.

ಇಡೀ ಚಿತ್ರದಲ್ಲಿ ದೀರ್ಘ ಅವಧಿಯ ಉಪಕಥೆಗಳಿಲ್ಲ. ಆರ್ಚ್ ಬಿಷಪ್‌ನೊಡನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ಚರ್ಚಿಲ್ ಜೊತೆ ಹಿಟ್ಲರ್ ವಿರುದ್ಧ ಸಮರ ಸಾರುವ ಪ್ರಸಂಗ ಇವುಗಳನ್ನು ಬಿಟ್ಟರೆ ಚಿತ್ರದ್ದು ಏಕಮುಖ ಚಲನೆ. ದೊರೆಗೆ ರೆಪ್ಪೆ ಅಲುಗಿಸದೆ ಏಕಾಗ್ರತೆಯಿಂದ ವಿವಿಧ ಮಜಲುಗಳ ಮೂಲಕ ಸಂಕಲ್ಪ ಸಿದ್ಧಿಯ ಪ್ರಕ್ರಿಯೆಯ ಕಡೆಗೆ ದೃಷ್ಟಿ ಇರುತ್ತದೆ. ಇದರಿಂದ ಉಂಟಾದ ಚಿತ್ರದ ಸಫಲತೆಗೆ ದೊರೆ ಕೈಗೊಂಡ ಪಯಣವನ್ನು ಚಲನಚಿತ್ರದ ಚಿತ್ರೀಕರಣದ ವ್ಯಾಕರಣ ಮತ್ತು ಅದಕ್ಕೆ ಪೂರಕವಾಗಿ ೬ನೆ ಜಾರ್ಜ್ ಆಗಿ ಕಾಲಿನ್ ಫಿರ್ತ್ ಮತ್ತು ತರಬೇತುದಾರನಾಗಿ ಜೆಫ್ರಿ ರಶ್‌ರ ನಿಯಂತ್ರಿತವಾದ ಅಭಿನಯ ಉದ್ದೇಶಿತ ಭಾವನೆಗಳನ್ನು ಉದ್ದೀಪಿಸುತ್ತ ತಮ್ಮ ಕೊಡುಗೆ ನೀಡಿವೆ.

ನಿರ್ದೇಶಕರು ಮುಖ್ಯವಾಗಿ ದೊರೆಯ ವಿವಿಧ ಭಾವಗಳ ಸಂವಹನೆಗೆ ಹೆಚ್ಚಾಗಿ ಸಮೀಪ ಚಿತ್ರಿಕೆಗಳನ್ನೇ ಬಳಸಿ ಅವನ ಕಣ್ಣು, ಮತ್ತು ಮುಖದ ಸ್ನಾಯುಗಳ ಚಲನೆ ಹಾಗೂ ಆಗಾಗ ಉಬ್ಬುವ ಕುತ್ತಿಗೆಯನ್ನು ದಾಖಲಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ಮತ್ತು ನಿರ್ದೇಶಕನ ದೃಷ್ಟಿಕೋನವನ್ನು ಚಿತ್ರದ ಮೊದಲ ದೃಶ್ಯದಲ್ಲಿಯೇ ಕಾಣಬಹುದು ಇದಕ್ಕೆ ತದ್ವಿರುದ್ಧವಾಗಿ ಕೊನೆಯ ದೃಶ್ಯದಲ್ಲಿ ವ್ಯಕ್ತಿತ್ವ ಬದಲಾದ ಮತ್ತು ತನ್ನಲ್ಲಿ ನೆಲೆಯೂರಿರುವ ಭರವಸೆಯಿಂದ ಇಡೀ ದೃಶ್ಯದ ಅಂತರ್ಗತ ಭಾವವೇ ತದ್ವಿರುದ್ಧವಾಗಿ ಅಂದರೆ ಅವನಲ್ಲಿರುವ ಆತ್ಮವಿಶ್ವಾಸ, ಧ್ವನಿಯಲ್ಲಿ ಧೃಡತೆ, ಸಡಿಲಗೊಂಡ ಮುಖದ ಸ್ನಾಯುಗಳು, ಸುತ್ತಲಿರುವವರ ಮುಗುಳ್ನಗೆಯ ಪ್ರತಿಕ್ರಿಯೆಗಳು, ಬಿತ್ತರಿಸಿದ ಮಾತುಗಳನ್ನು ಕೇಳುವವರಲ್ಲಿ ಗೆಲುವು ಇತ್ಯಾದಿಗಳೆಲ್ಲ ಹದವಾಗಿ ಮಿಶ್ರಣಗೊಂಡ ಸಮೀಪ-ಮಧ್ಯಮ ಚಿತ್ರಿಕೆಗಳಲ್ಲಿ ನಿರೂಪಿತವಾಗಿವೆ. ಇವೆಲ್ಲವೂ ಒಗ್ಗೂಡಿ ತಮ್ಮ ಪರಿಕಲ್ಪನೆಗೆ ಕುಂದಾಗದಂತೆ ಉದ್ದೇಶಿತ ಆಶಯವನ್ನು ತಂಡದ ನೆರವಿನೊಡನೆ ಕಾಪಾಡಿಕೊಳ್ಳುವುದರಲ್ಲಿ ನಿರ್ದೇಶಕ ಟಾಮ್ ಹೂಪರ್ ಯಶಸ್ವಿಯಾಗಿದ್ದಾರೆ.

ʻದ ಕಿಂಗ್ಸ್‌ ಸ್ಪೀಚ್‌ʼ ನಿರ್ದೇಶಕ ಟಾಮ್ ಹೂಪರ್ 1991ರಲ್ಲಿ ಆಕ್ಸ್‌ಫರ್ಡ್‌ನಿಂದ ಪದವಿಗಳಿಸಿದರೂ 16ನೇ ವಯಸ್ಸಿನಲ್ಲಿಯೇ `ಪೇಂಟೆಡ್ ಫೇಸಸ್’ ಚಿತ್ರ ನಿರ್ಮಿಸಿದ. 90ರ ದಶಕದ ಕೊನೆಯಲ್ಲಿ ಮಕ್ಕಳಿಗಾಗಿ `ಬೈಕರ್ ಗ್ರೋವ್’ ಟಿವಿ ಸರಣಿ ನಿರ್ದೇಶಿಸಿದ. 2004ರಲ್ಲಿ ಮೊದಲ ಕಥಾನಕ `ರೆಡ್ ಡಸ್ಟ್’ ತಯಾರಿಸಿದ. ಅವನು ಎಲಿಜೆಬತ್ 1 ಟೀವಿ ಚಿತ್ರಕ್ಕಾಗಿ ಎಮ್ಮಿ ಪ್ರಶಸ್ತಿ ಗಳಿಸಿದ. ಅನಂತರದ `ಡ್ಯಾಮ್ಡ್ ಡಸ್ಟ್’(2009) ಅವನ ಪೂರ್ಣ ಪ್ರಮಾಣದ ಕಥಾಚಿತ್ರ. ʻದ ಕಿಂಗ್ಸ್‌ ಸ್ಪೀಚ್‌ʼ ನಂತರ 2013ರಲ್ಲಿ ವಿಶ್ವ ವಿಖ್ಯಾತ ವಿಕ್ಟರ್ ಹ್ಯೂಗೋನ `ಲೆ ಮಿಸೆರಬಲ್ಸ್’ ಕೃತಿ ಆಧರಿಸಿ ತಯಾರಿಸಿದ ಚಿತ್ರ ಜಾಗತಿಕ ಮನ್ನಣೆ ತಂದು ಕೊಟ್ಟಿತು.

2010ರ ವಿವಿಧ ವಿಭಾಗಗಳ ಪ್ರಶಸ್ತಿಗಳಿಗೆ ಅಮೆರಿಕದವರದೇ ಆದ ಜೇಮ್ಸ್‌ ಕ್ಯಾಮರೂನ್‌ನ ʻಅವತಾರ್‌ʼ, ಲೀ ಡೇನಿಎಲ್ಸ್‌ನ ʻಪ್ರೆಷಸ್‌ʼ, ಜಾನ್‌ ಲೀ ಹಾನ್‌ಕಾಕ್‌ನ ʻದ ಬ್ಲೈಂಡ್‌ ಸೈಡ್‌ʼ ಚಿತ್ರಗಳಿದ್ದವು. ಆದರೆ ಬಹುತೇಕ ಸೂಕ್ಷ ಸಂವೇದನೆಯ ವಿಮರ್ಶಕರ ನಿರೀಕ್ಷೆಗೆ ಅನುಗುಣವಾಗಿ ಟಾಮ್ ಹೂಪರ್ ನಿರ್ದೇಶನದ ʻದ ಕಿಂಗ್ಸ್ ಸ್ಪೀಚ್ʼ ನಾಲ್ಕು ಆಸ್ಕರ್ ಪ್ರಶಸ್ತಿಗಳ ಜೊತೆ ಅತ್ಯಧಿಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದು ಮೆಚ್ಚುವಂಥ ಸಾಧನೆಯೇ ಸರಿ.