ಅವರ ಕ್ರಿಕೆಟ್ಟನ್ನು ಸದಾಕಾಲ ಸ್ಮರಿಸಲು ಕರ್ನಾಟಕದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ‘ದ ವಾಲ್‌ʼಗೆ ಒಂದು ಗೋಡೆ ಮೀಸಲಿಟ್ಟು ಅವರ ಚಿತ್ರವನ್ನು ಮಾಡಿಸಿದ್ದಾರೆ. ಇದು ಒಂದು ರೀತಿ ಜನಗಳು, ಕ್ರೀಡಾಭಿಮಾನಿಗಳು, ಮುಂದಿನ ಪೀಳಿಗೆಯವರು ರಾಹುಲ್ ದ್ರಾವಿಡ್‌ರ ಆಟವನ್ನು ಇಲ್ಲಿ ಬಂದು ನೋಡಿ ಅವರ ಆಟವನ್ನು ಸ್ಮರಿಸುವುದಕ್ಕೆ ಅವಕಾಶ. ಅದರ ಮೇಲೆ ಕನ್ಸಿಸ್ಟೆನ್ಸಿ, ಕಮಿಟ್ಮೆಂಟ್, ಕ್ಲಾಸ್ ಎಂದು ಬರೆಸಿದ್ದಾರೆ. ಅರ್ಥಾತ್‌ ಸ್ಥಿರತೆ, ಭದ್ಧತೆ ಮತ್ತು ಆಡುವ ಶಿಸ್ತು ಅನ್ನುವ ಅರ್ಥ ಕೊಡುತ್ತೆ. ಇದೆಲ್ಲವೂ ಅವರ ಆಟಗಾರಿಕೆಯಲ್ಲಿ ನೋಡಬಹುದು. ಇವೆಲ್ಲವುಗಳ ಜೀವಂತ ಪ್ರತೀಕವೇ ರಾಹುಲ್ ದ್ರಾವಿಡ್.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ನಿಮ್ಮ ಓದಿಗೆ

ಭಾರತದ ಕ್ರಿಕೆಟ್ ಇತಿಹಾಸದಲ್ಲಿ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರ ಕೊಡುಗೆ ಬಹಳ ಮಹತ್ತರವಾದದ್ದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಇವರಿಬ್ಬರು ಸಲ್ಲಿಸಿದ ಸೇವೆ ಅಪ್ರತಿಮ. ಚಿಕ್ಕ ವಯಸ್ಸಿನಿಂದಲೇ ಅಸಾಧಾರಣ ಪ್ರತಿಭೆ ತೋರಿ ಭಾರತ ತಂಡಕ್ಕೆ ಆಯ್ಕೆಯಾಗಿ ಹಲವಾರು ವರ್ಷಗಳು ಬ್ಯಾಟಿಂಗ್‌ನಲ್ಲಿ ಪರಾಕ್ರಮವನ್ನು ತೋರಿಸಿ, ಅಲ್ಲಿಂದ ತಂಡದ ನಾಯಕನಾಗಿಯೂ, ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಬಿಸಿಸಿಐನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿ ಗಂಗೂಲಿಯವರಿಗೆ ಸೇರುತ್ತೆ. ಒಂದು ಕಾಲದಲ್ಲಿ ಇವರಿಬ್ಬರೂ ಭಾರತ ತಂಡದ ಬ್ಯಾಟಿಂಗ್‌ನ ಬೆನ್ನೆಲುಬಾಗಿದ್ದರೆಂದು ಹೇಳಿದರೆ ಅದು ಅತಿಶಯೋಕ್ತಿ ಅಲ್ಲ.

*****

ಜೂನ್ 20, 1996ರಲ್ಲಿ ಭಾರತ ಮತ್ತು ಇಂಗ್ಲೆಂಡಿನ ಮಧ್ಯೆ ಎರಡನೇ ಟೆಸ್ಟ್ ಆರಂಭವಾಗುವುದಕ್ಕೆ ಕೇವಲ 10 ನಿಮಿಷವಿತ್ತು. ಆಗ, ಟೀಮಿನ ಮ್ಯಾನೇಜರ್ ಆಗಿದ್ದ ಮಾಜಿ ಟೆಸ್ಟ್ ಆಟಗಾರ ಸಂದೀಪ್ ಪಾಟಿಲ್ ಒಬ್ಬ ಹೊಸಬ ಆಟಗಾರನ ಹತ್ತಿರ ಹೋಗಿ, ‘ನೀನು ಇವತ್ತಿನ ಪಂದ್ಯದಲ್ಲಿ ಆಡುತ್ತಿದಿಯಾ. ರೆಡಿಯಾಗು’ ಎಂದರು. ಅದು ರಾಹುಲ್ ದ್ರಾವಿಡ್! ಸಂಜಯ್ ಮಂಜ್ರೆಕರ್‌ಗೆ ಏಟು ಬಿದ್ದು ಮ್ಯಾಚು ಶುರುವಾಗುವುದರೊಳಗೆ ಚೇತರಿಸಿಕೊಳ್ಳಲಾಗಲಿಲ್ಲ. ಅದಕ್ಕೆ ಪಾಟಿಲ್ ದ್ರಾವಿಡ್‌ಗೆ ಟೀಮಿನಲ್ಲಿ ಆಡುವುದಕ್ಕೆ ಸೇರಿಸಿಕೊಂಡರು. ಏಳನೆಯವರಾಗಿ ಬಂದ ದ್ರಾವಿಡ್ 95 ರನ್ ಹೊಡೆದು, ಇನ್ನು ಶತಕ್ಕೆ ಕೇವಲ 5 ರನ್ ಇರುವಾಗ, ಕ್ಯಾಚ್ ಕೊಟ್ಟು ಔಟಾದರು. ಬಹಳ ವರ್ಷಗಳಾದ ಮೇಲೆ ತಮ್ಮ ಕೊನೆಯ ಇಂಗ್ಲೆಂಡಿನ ಪ್ರವಾಸದಲ್ಲಿ ದ್ರಾವಿಡ್ ಮತ್ತೆ ಅದೇ ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ಶತಕವನ್ನು ಬಾರಿಸಿ, ಲಾರ್ಡ್ಸನ ಶತಕ ಬ್ಯಾಟರ್ಸ್ ಪಟ್ಟಿಯಲ್ಲಿ ಸೇರಿದರು!

ಸುಮಾರು 16 ವರ್ಷಗಳ ಕಾಲ ಸೇವೆ ಸಲ್ಲಿಸಿದ ದ್ರಾವಿಡ್, 164 ಟೆಸ್ಟ್ ಮಾಚುಗಳನ್ನಾಡಿ 52.31 ಸರಾಸರಿಯಲ್ಲಿ 13,288 ರನ್ ಹೊಡೆದರು. 36 ಶತಕ ಮತ್ತು 63 ಅರ್ಧ ಶತಕವನ್ನು ಹೊಡೆದ ದ್ರಾವಿಡ್‌ರ ಹೆಸರು ‘ದ ವಾಲ್’ ಎಂದು ಪ್ರಖ್ಯಾತಿಯಾಯಿತು. ಬಹಳ ಅರ್ಥಪೂರ್ಣವಾದ ಪದ ವಾಲ್. ಅವರು ಒಂದು ಕಡೆ ನಿಂತರೆ ಮುಗಿಯಿತು ಅವರನ್ನು ಔಟ್ ಮಾಡುವ ಹಾಗೇ ಇಲ್ಲ ಎಂದು ಒಂದು ಅರ್ಥವಾದರೆ, ಅವರನ್ನು ಔಟ್ ಮಾಡುವ ತನಕ ಶತ್ರುಗಳ ಟೀಮಿಗೆ ಗೆಲುವಿನ ಮುಖ ನೋಡುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಇನ್ನೊಂದು ಅರ್ಥ. ಭಾರತವನ್ನು ಗೆಲ್ಲಬೇಕಾದರೆ ವಾಲ್‌ಅನ್ನು ದಾಟಿ ಹೋಗಬೇಕು, ಅದು ಅಸಾಧ್ಯ ಎಂದು ಬಹಳ ಬೋಲರ್‌ಗಳ ಒಮ್ಮತ ತೀರ್ಮಾನ ಎಂದೆನಿಸುತ್ತೆ ಕೆಲವು ಸಲ. ಇದು ಬ್ಯಾಟಿಂಗ್‌ನಿಂದ ಅವರಿಗೆ ಬಂದ ಒಂದು ಆದರಪೂರ್ಣ ಅಡ್ಡ ಹೆಸರು.

ದ್ರಾವಿಡ್ ಮೊದಲ ದರ್ಜೆ ಪಂದ್ಯಗಳಲ್ಲಿ 298 ಮ್ಯಾಚುಗಳಲ್ಲಿ 23794 ರನ್ 55.33 ಸರಾಸರಿಯಲ್ಲಿ ಹೊಡೆದರು. ಅದರಲ್ಲಿ 68 ಶತಕಗಳು ಮತ್ತು 117 ಅರ್ಧ ಶತಕಗಳು. ಟೆಸ್ಟ್ ಮ್ಯಾಚು ಮತ್ತು ಮೊದಲ ದರ್ಜೆಯ ಮ್ಯಾಚುಗಳಲ್ಲಿ ಎರಡರಲ್ಲೂ ಅವರು ಹೊಡೆದ ಅತ್ಯಂತ ಅಧಿಕ ಸ್ಕೋರ್ 270! ಪಾಕಿಸ್ಥಾನದ ವಿರುದ್ಧ ಒಂದು ದ್ವಿ ಶತಕ -235 ಅಜೇಯರಾಗಿ ಹೊಡೆದರು.

ದ್ರಾವಿಡ್ ಒಟ್ಟು 31,258 ಬಾಲ್‌ಗಳನ್ನು ಆಡಿ, ಅದು ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆಯಾಗಿದೆ! ಟೆಸ್ಟ್‌ನಲ್ಲಿ 210 ಕ್ಯಾಚ್‌ಗಳನ್ನು ಹಿಡಿದ ಇನ್ನೊಂದು ವಿಶ್ವ ದಾಖಲೆ ದ್ರಾವಿಡ್ ಅವರದು! ದ್ರಾವಿಡ್ 5 ದ್ವಿಶತಕಗಳನ್ನು ಹೊಡೆದು ಅದರಲ್ಲಿ 2 ಭಾರತದಲ್ಲಿ, ಮೂರು ಪರದೇಶಗಳಲ್ಲಿ ಹೊಡೆದಿದ್ದಾರೆ.

ಪ್ರಪಂಚದ ಎಲ್ಲಾ ದೇಶಗಳಲ್ಲಿ ಗೆದ್ದು ಕೊನೆಗೆ ಭಾರತಕ್ಕೆ ಬಂದ ಆಸ್ಟ್ರೇಲಿಯಾದ ನಾಯಕ ಸ್ಟೀವ್ ವಾ ಸ್ವಲ್ಪ ‘ಅಲೆಕ್ಸಾಂಡರ್ ದ ಗ್ರೇಟ್’ ಜೊತೆ ಹೋಲಿಕೆಯಿರುವ ಸೈನಿಕ. ಭಾರತಕ್ಕೆ ಬಂದು ಅಲ್ಲಿ ಆಡಿ ಗೆಲ್ಲಬೇಕೆಂಬ ಮನದಾಸೆ ವಾ ಅವರದು. ಅದು ಬಹಳ ಕಷ್ಟಕರವೆಂದೂ ಅವರಿಗೆ ಗೊತ್ತಿತ್ತು. ಅದಕ್ಕೆ ಅವರು ಸಕಲ ಸಿದ್ಧತೆ ಮಾಡಿಕೊಂಡು ತಮ್ಮ ಸೇನೆ, ಅರ್ಥಾತ್, ಟೀಮನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದರು.

ಮೊದಲ ಟೆಸ್ಟಿನಲ್ಲಿ 176ಕ್ಕೆ ಕುಸಿದುಬಿದ್ದ ಭಾರತ ಚೇತರಿಸಿಕೊಳ್ಳಲೇ ಇಲ್ಲ. ಅವರು 349ರನ್‌ ಹೊಡೆದರೆ ಎರಡನೆಯ ಇನಿಂಗ್ಸಿನಲ್ಲೂ ಕೇವಲ 219 ಔಟಾದಾಗ, ಬೇಕಾಗಿದ್ದ 49 ರನ್ನುಗಳನ್ನು ಒಂದು ವಿಕೆಟನ್ನೂ ಕಳೆದುಕೊಳ್ಳದೆ, ಆಸ್ಟ್ರೇಲಿಯನ್ನರು ಅದನ್ನು ಹೊಡೆದು ಸುಲಭವಾಗಿ ಗೆದ್ದರು. ಮೊದಲ ಟೆಸ್ಟ್‌ನಲ್ಲಿ ಸುಲಭವಾಗಿ ಗೆದ್ದ ಆಸ್ಟ್ರೇಲಿಯ ಆತ್ಮವಿಶ್ವಾಸದೊಡನೆ ಕೊಲ್ಕೊತ್ತಾಗೆ ಎರಡನೇ ಟೆಸ್ಟಿಗೆ ಬಂತು.

ಎರಡನೇ ಟೆಸ್ಟಿನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯ ಬ್ಯಾಟಿಂಗ್‌ನಲ್ಲಿ ಜೋರಾಗಿ ಅಬ್ಬರಿಸಿ 445 ರನ್ ಗಳಿಸಿತು. ನಾಯಕ ಸ್ಟೀವ್ ವಾ 110 ರನ್‌ ಹೊಡೆದರೆ, ಹೇಯ್ಡನ್ 97 ರನ್‌ ಹೊಡೆದರು. ಭಾರತಕ್ಕೆ ಆದ ಒಳ್ಳೆ ವಿಷಯವೆಂದರೆ ಹರ್ಭಜನ್ ಸಿಂಘ್ 7 ವಿಕೆಟ್ ತೆಗೆದರು. ಭಾರತ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಕಳಪೆ ಆಟವಾಡಿ ಕೇವಲ 171 ರನ್ ಗಳಿಸಿತು. ‘ಇನಿಂಗ್ಸ್ ಡಿಫೀಟ್’ ಗೆ ಒಳ್ಳೆ ಅವಕಾಶವೆಂದು ವಾ ಭಾರತಕ್ಕೆ ಫಾಲೊ-ಆನ್’ ಕೊಟ್ಟರು. ಈ ಬಾರಿಯೂ ನಿರಾಶಾದಾಯಕ ಬ್ಯಾಟಿಂಗ್ ಮಾಡಿದ ಭಾರತ 232 ರನ್‌ಗಳಿಗೆ 4 ವಿಕೆಟನ್ನು ಕಳೆದುಕೊಂಡಿತು. ಆಗ ಲಕ್ಷ್ಮಣ್‌ರ ಜೊತೆ ಆಡಲು ದ್ರಾವಿಡ್ ಮೈದಾನಕ್ಕೆ ಇಳಿದರು. ಆಸ್ಟ್ರೇಲಿಯಾಗೆ ಆಗ ಬಹಳ ಒಳ್ಳೆ ಬೋಲರ್‌ಗಳಿದ್ದರು. ಪ್ರಪಂಚದ ಅತ್ಯುತ್ತಮ ಬೋಲರ್‌ಗಳೆಂದು ಪ್ರಸಿದ್ಧಿಯಾದ ಗ್ಲೆನ್ ಮೆಗ್ರಾ ಮತ್ತು ಸ್ಪಿನ್ ಬೋಲರ್ ಶೇನ್ ವಾರ್ನ್‌ ಇಬ್ಬರೂ ಆ ಟೀಮಿನಲ್ಲಿದ್ದರು.

ಮೂರನೆ ದಿನ ಆಟ ಮುಗಿದಾಗ ಭಾರತದ ಸ್ಕೋರ್ 254/4 ಆಗಿತ್ತು. ನಾಲ್ಕನೇ ದಿನ ಅಂದರೆ ಮಾರ್ಚಿ 14 ಆಟ ಮುಗಿದಾಗ ಭಾರತದ ಸ್ಕೋರ್ 589/4 ಆಗಿತ್ತು!! ಅಂದರೆ ಇಡೀ ದಿನ ಒಂದು ವಿಕೆಟನ್ನೂ ಭಾರತ ಕಳೆದುಕೊಳ್ಳಲಿಲ್ಲ. ಮತ್ತು 335 ರನ್ ಗಳಿಸಿತು. ಲಕ್ಷ್ಮಣ್ 109ರಲ್ಲಿ ಶುರುಮಾಡಿ ಆಟ ಮುಗಿದಾಗ 275 ರನ್ನಿಗೆ ನಾಟ್ ಔಟ್ ಆದರು. 7ರಿಂದ ಶುರುಮಾಡಿದ ದ್ರಾವಿಡ್ ಅಜೇಯರಾಗಿ 155 ರನ್‌ನಲ್ಲಿ ಆಡುತ್ತಿದ್ದರು! ಇಡೀದಿನ ವಿಕೆಟ್ ಬೀಳದೆ ಇಬ್ಬರೇ ಆಡಿದ್ದು ಟೆಸ್ಟ್ ಮ್ಯಾಚ್‌ಗಳಲ್ಲಿ ಇದು ಒಂದು ಅಪೂರ್ವ ದಾಖಲೆಯಾಯಿತು. ಆಸ್ಟ್ರೇಲಿಯಾದ ನಾಲಕ್ಕು ಬೋಲರ್‌ಗಳು ಶತಕಕ್ಕೂ ಮೀರಿ ರನ್‌ಗಳನ್ನು ಕೊಟ್ಟರು. ಪ್ರಪಂಚದ ಅತಿಶ್ರೇಷ್ಟ ಸ್ಪಿನ್ನರ್ ಶೇನ್ ವಾರ್ನ್‌ 152 ರನ್‌ ಕೊಟ್ಟು ಕೇವಲ ಒಂದು ವಿಕೆಟ್ ಬೀಳಿಸಿದರೆ, ಮೈಕೆಲ್ ಕಾಸ್ಪೊರೋವಿಚ್ 35 ಓವರ್ ಬೋಲ್ ಮಾಡಿ 109 ರನ್‌ ಕೊಟ್ಟು, ಅವರಿಗೆ ಒಂದು ವಿಕೆಟ್ಟೂ ಬರಲಿಲ್ಲ!

5ನೇ ದಿನ ದ್ರಾವಿಡ್ 180 ಸ್ಕೋರಿಗೆ ರನ್ ಔಟಾದರು. ಲಕ್ಷ್ಮಣ್ 281 ರನ್‌ಗೆ ಔಟಾದರು. ಭಾರತ ತನ್ನ ಸ್ಕೋರ್ 657/7 ಕ್ಕೆ ಡಿಕ್ಲೇರ್ ಮಾಡಿತು. ಆಸ್ಟ್ರೇಲಿಯಾಗೆ ಗೆಲ್ಲಲು 384 ರನ್ ಬೇಕಾಗಿತ್ತು. ಆದರೆ 212 ರನ್‌ಗೆ ಕುಸಿದು ಎಲ್ಲರೂ ಔಟಾದರು. ಮತ್ತೊಮ್ಮೆ ಹರ್ಭಜನ್ ಸಿಂಘ್ 6 ವಿಕೆಟ್‌ಗಳನ್ನು ತೆಗೆದು ಭಾರತ ಜಯಭೇರಿ ಹೊಡೆಯಲು ಕಾರಣರಾದು. ಈ ಮ್ಯಾಚಿನಲ್ಲಿ ಒಂದು ವಿಶೇಷವೆಂದರೆ ಬೋಲರ್ ಆಗಿ ಸಚಿನ್ ಟೆಂಡೂಲ್ಕರ್ 3 ವಿಕೆಟ್ ತೆಗೆದು, ಮಿಗಿಲಾಗಿ ಯಾವಾಗಲೂ ಕಂಟಕವಾಗಿ ಬರುತ್ತಿದ್ದ ಗಿಲ್‌ಪ್ರಿಸ್ಟರನ್ನು ಸೊನ್ನೆಗೆ ಔಟ್ ಮಾಡಿದರು.

ಇತಿಹಾಸದಲ್ಲಿ ಈ ಮ್ಯಾಚು ಬಹಳ ದೊಡ್ಡ ದಾಖಲೆ ಮಾಡಿತು. ಸೋತು ಸುಣ್ಣವಾಗಿ ಸೊರಗಿದ್ದ ಭಾರತ ಮತ್ತೆ ಎದ್ದು ಹೇಗೆ ಬಂದು ಪರಿಸ್ಥಿತಿಯನ್ನೇ ಪೂರ್ತಿ ತಳಕಪಳಕ ಮಾಡಿತು ಎನ್ನುವ ಚರ್ಚೆ ಮುಂದೆಯೂ ನಡೆಯುತ್ತೆ. ಫಾಲೊ- ಆನ್ ಕೊಟ್ಟು ಗೆಲುವಿನ ಹೊಸ್ತಿಲಲ್ಲಿ ನಿಂತಿದ್ದ ಆಸ್ಟ್ರೇಲಿಯಾಗೆ ದಿಗ್ಭ್ರಮೆಯಾಗಿ ಸೋಲನ್ನು ಅನುಭವಿಸಬೇಕಾಯಿತು. ಇದರಿಂದ ದ್ರಾವಿಡ್ ಅವರಿಗೆ ‘ದ ವಾಲ್’ ಅನ್ನುವ ಪಟ್ಟ ಬಂದಿತೆಂದು ಹೇಳಬಹುದು.

ಮೂರನೇ ಟೆಸ್ಟಿನಲ್ಲೂ ಭಾರತ ಚೆನ್ನಾಗಿ ಆಡಿ ಆಸ್ಟ್ರೇಲಿಯಾವನ್ನು 2-1 ಸ್ಕೋರಿನಿಂದ ಸೋಲಿಸಿತು. ಈ ಟೆಸ್ಟಿನಲ್ಲೂ ದ್ರಾವಿಡ್ ಟೆಂಡೂಲ್ಕರ್ ಜತೆಗೂಡಿ ಭಾರತ ಉತ್ತಮ ಸ್ಕೋರ್ ತಲುಪಲು ಕಾರಣರಾದರು. ಟೆಂಡೂಲ್ಕರ್ ಶತಕವನ್ನು ಬಾರಿಸಿ 126 ರನ್ ಹೊಡೆದರೆ ದ್ರಾವಿಡ್ 81 ರನ್ ಹೊಡೆದರು. ಮತ್ತೆ ಹರ್ಭಜನ್ 7 ವಿಕೆಟ್ ಪಡೆದು ಅವರು ಆಸ್ಟ್ರೇಲಿಯಾಗೆ ಸಿಂಹಸ್ವಪ್ನರಾದರು!

1998-99ರಲ್ಲಿ ನ್ಯೂಜಿಲೆಂಡಿಗೆ ಹೋದಾಗ ದ್ರಾವಿಡ್ ಎರಡನೇಯ ಟೆಸ್ಟಿನಲ್ಲಿ ಎರಡು ಇನಿಂಗ್ಸಿನಲ್ಲೂ ಶತಕ ಬಾರಿಸಿ, 190 ಮತ್ತು ಅಜೇಯರಾಗಿ 103 ಹೊಡೆದು ವಿಜಯ್ ಹಝಾರೆ ಮತ್ತು ಸುನಿಲ್ ಗವಾಸ್ಕರ್ ಶತಕ ಬಾರಿಸಿದವರ ಗುಂಪಿಗೆ ಮೂರನೇಯವರಾಗಿ ಸೇರಿದರು.
2002ರಲ್ಲಿ ಹೆಡಿಂಗ್ಲಿಯಲ್ಲಿ ಆಡುತ್ತಾ ಭಾರತ 628/8 ರನ್‌ಗಳನ್ನು ಹೊಡೆಯಿತು. ದ್ರಾವಿಡ್ 148 ಹೊಡೆದರೆ, ಟೆಂಡೂಲ್ಕರ್ ಮತ್ತು ನಾಯಕ ಗಂಗೂಲಿ ಇಬ್ಬರು ತಲಾ 193 ಮತ್ತು 128 ಅಜೇಯರಾಗಿ ಹೊಡೆದರು. ಇಂಗ್ಲೆಂಡ್ 273 ಮತ್ತು 309 ರನ್‌ಗೆ ಔಟಾಗಿ ಭಾರತ ಇನಿಂಗ್ಸ್ ವಿಜಯವನ್ನು ಗಳಿಸಿತು. ಬ್ಯಾಟಿಂಗ್ ಆಡುವುದಕ್ಕೆ ಬಹಳ ಕಷ್ಟವೆನಿಸುವ ಪಿಚ್‌ನಲ್ಲಿ ಶ್ರೇಷ್ಟವಾದ ಮತ್ತು ಅತಿ ಉಪಯೋಗಿ ಆಟವಾಡಿದ ದ್ರಾವಿಡ್‌ ಅವರಿಗೆ ‘ಮ್ಯಾನ್ ಆಫ್ ದ ಮ್ಯಾಚ್ʼ ಪ್ರಶಸ್ತಿಯನ್ನು ಕೊಡಲಾಯಿತು. ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಉಪಯೋಗಕರ ಮತ್ತು ತಂಡಕ್ಕೆ ಸ್ಥಿರತೆ ತರಲೆಂದು ದ್ರಾವಿಡ್ ವಿಕೆಟ್ ಕೀಪರ್ ಆಗಿ ಬಂದರು.

ರಾಹುಲ್ ಶರದ್ ದ್ರಾವಿಡ್ 11 ಜನವರಿ 1973ರಲ್ಲಿ ಜನ್ಮ ತಾಳಿದರು. ಮರಾಠಿ ಮನೆಯಲ್ಲಿ ಹುಟ್ಟಿದ ದ್ರಾವಿಡ್ ಅವರ ತಂದೆ ಬೆಂಗಳೂರಿನಲ್ಲಿ ನೆಲೆಸಿದರು. ಜ್ಯಾಂ ಫಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮಗ ರಾಹುಲ್‌ಗೆ ಜಾಮಿ ಅನ್ನುವ ಅಡ್ಡ ಹೆಸರು ಕ್ರಿಕೆಟ್ ಸಹ ಆಟಗಾರರು ಕೊಟ್ಟ ಹೆಸರು. ತಾಯಿ ಪುಷ್ಪ ಆರ್ಕಿಟೆಕ್ಚರ್‌ನಲ್ಲಿ ಪ್ರೊಫೆಸರ್ ಆಗಿ ಬೆಂಗಳೂರಿನ ಯುವಿಸಿವಿಯಲ್ಲಿ ಅಧ್ಯಾಪಕಿಯಾಗಿದ್ದರು. ರಾಹುಲ್‌ ದ್ರಾವಿಡ್‌ರ ತಮ್ಮ ವಿಜಯ್.

ದ್ರಾವಿಡ್‌ಗೆ ಮೊದಲಿನಿಂದಲೂ ಹಾಕಿ ಆಟದಲ್ಲಿ ಆಸಕ್ತಿ ಇದ್ದು ಸ್ಕೂಲಿನಲ್ಲಿದ್ದಾಗ ಅದರಲ್ಲಿ ಚೆನ್ನಾಗಿ ಆಡುತ್ತಿದ್ದರು. ಸ್ಕೂಲಿನಿಂದ ಕ್ರಿಕೆಟ್ ಆಟ ಶುರುವಾಗಿ ಹಂತ ಹಂತವಾಗಿ ಮುಂದೆ ಬಂದರು. ದ್ರಾವಿಡ್ ಮತ್ತು ಸೌರವ್ ಗಂಗೂಲಿ ಒಟ್ಟಿಗೆ ಇಂಡಿಯ ಟೀಮಿಗೆ ಬಂದು ಇಬ್ಬರೂ ಒಂದೇ ಟೆಸ್ಟಿನಲ್ಲಿ ಕ್ರಿಕೆಟ್‌ನ ವೃತ್ತಿ ಶುರುಮಾಡಿದರು. ಸೌರವ್ ಗಂಗೂಲಿ ಮೊದಲ ಶತಕ ಚೊಚ್ಚಲ ಟೆಸ್ಟಿನಲ್ಲೇ ಹೊಡೆದರೆ, ದ್ರಾವಿಡ್ 95 ರನ್ ಹೊಡೆದು ಔಟಾದರು. 210 ಕ್ಯಾಚ್ ಹಿಡಿದು ದ್ರಾವಿಡ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. ಇದರ ಮಧ್ಯೆ ಭಾರತದ ನಾಯಕನಾಗಿ, ಒಡಿಐ ಪಂದ್ಯದಲ್ಲಿ ವಿಕೆಟ್ ಕೀಪರ್ರೂ ಆದರು.

ದ್ರಾವಿಡ್ ಮತ್ತು ವಿರೇಂದ್ರ ಸೆಹ್ವಾಗ್ ಪಾಕಿಸ್ಥಾನದ ವಿರುದ್ಧ ಪ್ರಾರಂಭದ ಇನಿಂಗ್ಸ್‌ನಲ್ಲಿ 400 ಕ್ಕೂ ಅಧಿಕ ರನ್ ಹೊಡೆದರು. ಜನವರಿ 2006 ಲಾಹೋರ್‌ನಲ್ಲಿ ನಡೆದ ಮೊದಲನೇ ಟೆಸ್ಟ್‌ನಲ್ಲಿ ಪಾಕಿಸ್ಥಾನ 679/7 ವಿಕೆಟ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಅದರಲ್ಲಿ 4 ಆಟಗಾರರು ಶತಕವನ್ನು ಬಾರಿಸಿದರು. ಸೆಹ್ವಾಗ್ ಮತ್ತು ದ್ರಾವಿಡ್ ಭಾರತದ ಬಾರಿ ಶುರುಮಾಡಿ ಮೊದಲನೇ ವಿಕೆಟ್‌ಗೆ 410 ರನ್ ಮಾಡಿದರು! ಸೆಹ್ವಾಗ್ 258, ದ್ರಾವಿಡ್ 128 ಹೊಡೆದು ವಿಶ್ವ ದಾಖಲೆ ಇನ್ನೂ ಕೆವಲ 4 ರನ್ ಇದ್ದಾಗ ಸೆಹ್ವಾಗ್ ಔಟಾದರು! 247 ಬಾಲ್‌ನಲ್ಲಿ 254 ರನ್ ಮಾಡಿದರು ಸೆಹ್ವಾಗ್! ಸ್ವಲ್ಪ ಹುಶಾರಾಗಿ ಆಡಿದ್ದರೆ ವಿಶ್ವ ದಾಖಲೆ ಮಾಡಬಹುದಾಗಿತ್ತಲ್ವಾ ಎಂದು ಪತ್ರಕರ್ತರೊಬ್ಬನು ಕೇಳಿದ್ದಕ್ಕೆ ‘ಅದು ನನಗೆ ಗೊತ್ತಿರಲಿಲ್ಲ… ಮುಂದಿನ ಸರ್ತಿ ಮಾಡ್ತಿವಿ’ ಎಂದು ಹೇಳಿದರು! ಆ ದಾಖಲೆಯೂ ಭಾರತ ಪಂಕಜ್ ರಾಯ್ ಮತ್ತು ವಿನೂ ಮಂಕಡ್ 413 ರನ್ ಹೊಡೆದಿದ್ದರು. ಮೊದಲು ಆಡಬೇಕಿದ್ದ ಆಟಗಾರನಿಗೆ ಏಟು ಬಿದ್ದ ಕಾರಣ ದ್ರಾವಿಡ್ ತಾವೇ ಪ್ಯಾಡ್ ಕಟ್ಟಿ ಸೆಹ್ವಾಗ್ ಜೊತೆ ಆಡುವುದಕ್ಕೆ ಇಳಿದಿದ್ದರು.

ದ್ರಾವಿಡ್ ಕೆನ್ಟ್ ಕೌಂಟಿಗೆ ಆಡುತ್ತಿದ್ದರು. ಅವರು ಐಪಿಎಲ್‌ನಲ್ಲಿ ರಾಜಾಸ್ಥಾನ್ ರಾಯಲ್ಸ್ ಟೀಮಿಗೆ ನಾಯಕರಾಗಿದ್ದರು. ಅದರಲ್ಲಿ ಮ್ಯಾಚ್ ಫಿಕ್ಸಿಂಗ್ ತೊಂದರೆಯಿಂದ ಆ ಟೀಮ್ ಎರಡು ವರ್ಷಗಾಳ ಕಾಲ ಅಮಾನತು ಆಗಿತ್ತು.

ದ್ರಾವಿಡ್‌ರ ಅತ್ಯಂತ ಪ್ರಮುಖ ಕೊಡುಗೆ 19 ವರ್ಷದ ಒಳಗಿರುವ ಹುಡುಗರಿಗೆ ಕ್ರಿಕೆಟ್‌ನ ಎಲ್ಲಾ ವಿಷಯದಲ್ಲಿ ತರಪೇತಿ ನೀಡಿ ಜೂನಿಯರ್ ಟೀಮ್‌ಗಳ ಕೋಚ್ ಆಗಿ ಕೆಲಸ ಮಾಡಿದ್ದು. ಭಾರತ 19-ವರ್ಷದ ಕಡಿಮೆ ಇರುವ ಕಿಕೆಟರ್‌ಗಳಿಗೆ ವಿಶ್ವ ಕಪ್ ಟೂರ್ನಮೆಂಟ್‌ಗಳಲ್ಲಿ ಗೆದ್ದು ಬರುವ ಮುಖ್ಯವಾದ ಕಾರಣ ಅವರಿಗೆ ತರಪೇತಿ ನೀಡಿದರು ದ್ರಾವಿಡ್. ಗುರುಕುಲದಂತೆ ನಡೆಸಿ ಪ್ರತಿಯೊಬ್ಬರಿಗೂ ಅವರವರ ನ್ಯೂನತೆಯನ್ನು ಕಂಡುಹಿಡಿದು ಅವರಿಗೆ ತಕ್ಕ ಶಿಕ್ಷಣ ಕೊಟ್ಟು ಮುಂದೆ ಅವರು ಭಾರತಕ್ಕೆ ಆಡುವ ಹಾಗೆ ಮಾಡಿದ ಗುರು ದ್ರಾವಿಡ್‌ರ ಕೊಡುಗೆ ಚಿರಸ್ಮರಣೀಯ. ಒಳ್ಳೆ ಆಟಗಾರರಾಗಿ, ಟೀಮಿನ ನಾಯಕರಾಗಿ, ಟೀಮಿನ ಅಗತ್ಯಕ್ಕೆ ವಿಕೆಟ್ ಕೀಪರ್ ಆಗಿ, ಓಪನರ್ ಆಗಿ, ಕೊನೆಗೆ ಕೋಚ್ ಆಗಿ ಭಾರತಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ ರಾಹುಲ್ ದ್ರಾವಿಡ್ ನಿಜಕ್ಕೂ ಒಂದು ರತ್ನವೇ ಸರಿ. ಆಟದಿಂದ ವಿಶ್ರಾಂತಿ ಪಡೆಯುವಾಗ, ಏನೂ ಸದ್ದಿಲ್ಲದೆ, ಅಬ್ಬರ ಆಡಂಬರವಿಲ್ಲದೆ, ಎಲೆ ಮರೆಯ ಹೂವಾಗಿದ್ದ ದ್ರಾವಿಡ್ ಅದೇ ರೀತಿ ಆಟದಿಂದ ಸರಿದರು. ಈಗ ಭಾರತದ ಟೆಸ್ಟ್ ಟೀಮಿನ ಕೋಚ್ ಆಗಿ ಸೇವೆ ಸಲ್ಲಿಸುತ್ತಾ ಇದ್ದಾರೆ.

ದ್ರಾವಿಡ್‌ಗೆ ಭಾರತ ಸರ್ಕಾರ 2013ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಕರ್ನಾಟಕ ಸರ್ಕಾರ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಬೇಕೆಂದಿದ್ದಾಗ ದ್ರಾವಿಡ್ ಅದನ್ನು ನಿರಾಕರಿಸಿದ್ದರು. ಅವರ ತಾಯಿ ತಮ್ಮ ಸಂಶೋಧನೆಯಲ್ಲಿ ಡಾಕ್ಟೊರೇಟ್ ಗಳಿಸಲು ಕಷ್ಟಪಡುವುದನ್ನು ನೋಡಿದ ದ್ರಾವಿಡ್ ಗೌರವ ಪ್ರಶಸ್ತಿಯನ್ನು ಸ್ವೀಕರಿಸಲು ಸುತರಾಂ ಒಪ್ಪಲಿಲ್ಲ. ನಯವಾಗಿ ನಿರಾಕರಿಸಿದರು!

ದ್ರಾವಿಡ್ ತಮ್ಮ ಪತ್ನಿ ವಿಜೇತ, ಮತ್ತು ಮಕ್ಕಳು ಸಮೀತ್ ಮತ್ತು ಅನ್ವಯ್ ಅವರ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅನ್ವಯ್ ಇದೀಗ 14 ವರ್ಷದ ಹುಡುಗರ ಕ್ರಿಕೆಟ್ ಟೀಮಿಗೆ ನಾಯಕನಾಗಿದ್ದಾನೆ!

ಭಾರತದ ಕ್ರಿಕೆಟ್ಟಿಗೆ, ಅದರಲ್ಲೂ ಹೊರಗಡೆ ದೇಶದಲ್ಲಿ ಡ್ರಾವಿಡ್‌ರ ಕೊಡುಗೆ ಮಹತ್ತರವಾದದ್ದು. ಬ್ಯಾಟಿಂಗ್‌ನಲ್ಲಿ ಬಹಳ ಕಠಿಣ ಪರಿಸ್ಥಿತಿಯನ್ನು ಬಹಳ ಸರ್ತಿ ಅವರು ಸಂಭಾಳಿಸಿದ್ದಾರೆ. ಅವರ ಕ್ರಿಕೆಟ್ಟನ್ನು ಸದಾಕಾಲ ಸ್ಮರಿಸಲು ಕರ್ನಾಟಕದ ಕೆ ಎಸ್ ಸಿ ಏ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ‘ದ ವಾಲ್‌ಗೆʼ ಒಂದು ಗೋಡೆ ಮೀಸಲಿಟ್ಟು ಅವರ ಚಿತ್ರವನ್ನು ಮಾಡಿಸಿದ್ದಾರೆ. ಇದು ಒಂದು ರೀತಿ ಜನಗಳು, ಕ್ರೀಡಾಭಿಮಾನಿಗಳು, ಮುಂದಿನ ಪೀಳಿಗೆಯವರು ರಾಹುಲ್ ದ್ರಾವಿಡ್‌ರ ಆಟವನ್ನು ಇಲ್ಲಿ ಬಂದು ನೋಡಿ ಅವರ ಆಟವನ್ನು ಸ್ಮರಿಸುವುದಕ್ಕೆ ಅವಕಾಶ. ಅದರ ಮೇಲೆ ಕನ್ಸಿಸ್ಟೆನ್ಸಿ, ಕಮಿಟ್ಮೆಂಟ್, ಕ್ಲಾಸ್ ಎಂದು ಬರೆಸಿದ್ದಾರೆ. ಅರ್ಥಾತ್‌ ಸ್ಥಿರತೆ, ಭದ್ಧತೆ ಮತ್ತು ಆಡುವ ಶಿಸ್ತು ಅನ್ನುವ ಅರ್ಥ ಕೊಡುತ್ತೆ. ಇದೆಲ್ಲವೂ ಅವರ ಆಟಗಾರಿಕೆಯಲ್ಲಿ ನೋಡಬಹುದು. ಇವೆಲ್ಲವುಗಳ ಜೀವಂತ ಪ್ರತೀಕವೇ ರಾಹುಲ್ ದ್ರಾವಿಡ್.

ಪರಿಸ್ಥಿತಿ ಹೇಗೇ ಇರಲಿ, ಆಗು ಹೋಗುವುದು ಏನೇ ಆಗಲಿ, ಒಂದಂತೂ ನಿಜ, ಯಾವ ಪರಿಸ್ಥಿತಿಯಲ್ಲೂ ಸಂಯಮ ಕಳೆದುಕೊಳ್ಳದೆ ಏನು ಬೇಕೋ ಅದನ್ನು ಮಾಡುತ್ತಾರೆ ರಾಹುಲ್ ದ್ರಾವಿಡ್. ಅಂತಹವರು ಸಿಕ್ಕುವುದು ವಿರಳ. ಅತಿ ವಿರಳ. ‘ಕರ್ಮಣ್ಯೇ ವಾಧಿ ಕಾರಸ್ಥೇ….’ ನಾಣ್ನುಡಿ ರಾಹುಲ್ ದ್ರಾವಿಡ್‌ಗೆ ಒಪ್ಪುತ್ತೆ.

ಇತಿಹಾಸದಲ್ಲಿ ಈ ಮ್ಯಾಚು ಬಹಳ ದೊಡ್ಡ ದಾಖಲೆ ಮಾಡಿತು. ಸೋತು ಸುಣ್ಣವಾಗಿ ಸೊರಗಿದ್ದ ಭಾರತ ಮತ್ತೆ ಎದ್ದು ಹೇಗೆ ಬಂದು ಪರಿಸ್ಥಿತಿಯನ್ನೇ ಪೂರ್ತಿ ತಳಕಪಳಕ ಮಾಡಿತು ಎನ್ನುವ ಚರ್ಚೆ ಮುಂದೆಯೂ ನಡೆಯುತ್ತೆ. ಫಾಲೊ- ಆನ್ ಕೊಟ್ಟು ಗೆಲುವಿನ ಹೊಸ್ತಿಲಲ್ಲಿ ನಿಂತಿದ್ದ ಆಸ್ಟ್ರೇಲಿಯಾಗೆ ದಿಗ್ಭ್ರಮೆಯಾಗಿ ಸೋಲನ್ನು ಅನುಭವಿಸಬೇಕಾಯಿತು.

ಸೌರವ್ ಗಂಗೂಲಿ ಭಾರತದ ಟೀಮಿಗೆ ಅನೇಕ ತರಹದ ಸೇವೆ ಸಲ್ಲಿಸಿದ್ದಾರೆ. ಬ್ಯಾಟಿಂಗ್, ಬೋಲಿಂಗ್, ನಾಯಕ ಮತ್ತು ಕೊನೆಗೆ ಅತ್ಯಂತ ಪ್ರಮುಖ ಪಟ್ಟ- ಭಾರತದ ಬಿಸಿಸಿಐನ ಅಧ್ಯಕ್ಷರಾಗಿ; ಎಲ್ಲವನ್ನೂ ನೋಡಿ, ಆಡಿ, ಸಂಸ್ಥೆಯ ಅಧ್ಯಕ್ಷರಾಗಿ ತೆರೆ ಎಳೆದರು ಗಂಗೂಲಿ.

113 ಟೆಸ್ಟ್ ಆಡಿದ ಎಡಗೈ ಆಟಗಾರ ಗಂಗೂಲಿ 42.17 ಸರಾಸರಿಯಲ್ಲಿ 7212 ರನ್ ಹೊಡೆದರು. ಇದರಲ್ಲಿ 16 ಶತಕ ಮತ್ತು 35 ಅರ್ಧಶತಕ ಸೇರಿತ್ತು. ಬಲಗೈಲಿ ಬೋಲಿಂಗ್ ಮಾಡಿ 32 ವಿಕೆಟ್‌ಗಳನ್ನು ಪಡೆದಿದ್ದರು.

ಒಡಿಐನಲ್ಲಿ ಅವರು 311 ಮ್ಯಾಚುಗಳು ಆಡಿ, 41.02 ಸರಾಸರಿಯಲ್ಲಿ 11,363 ರನ್ ಗಳಿಸಿದರು. ಅವರ ಅತ್ಯಾಧಿಕ ಸ್ಕೋರ್ ಟೆಸ್ಟ್‌ನಲ್ಲಿ 239 ಮತ್ತು ಒಡಿಐ ನಲ್ಲಿ 183.

ಸೌರವ್ ಗಂಗೂಲಿ ರಣಜಿ ಟ್ರೋಫಿಯಲ್ಲಿ ಶತಕದ ಮೇಲೆ ಶತಕವನ್ನು ಹೊಡೆಯುತ್ತಾ ತಮ್ಮ ಹೆಸರು ಸೆಲೆಕ್ಟರುಗಳ ಮನಸ್ಸಿನಲ್ಲಿ ಉಳಿಯುವ ಹಾಗೆ ಆಡಿದರು. ಆದರೆ ಅವರಿಗೆ ‘ಬಹಳ ಧಿಮಾಕಿನ ಮನುಷ್ಯ, ಬಹಳ ಕೊಬ್ಬು’ ಅನ್ನುವ ಸುದ್ದಿ ಹರಡಿತ್ತು. ಅದೃಷ್ಟವಷಾತ್, ಈ ಸುದ್ದಿಯ ಮಧ್ಯೆಯೂ ಗಂಗೂಲಿ ರನ್ ಹೊಡೆಯುತ್ತಲೇ ಹೋದರು. ಕೊನೆಗೆ ಇಂಗ್ಲೆಂಡಿಗೆ ಹೋಗುವ ಟೀಮಿನಲ್ಲಿ ಇವರೂ ಪ್ಲೇನು ಹತ್ತಿದರು. ಜೊತೆಯಲ್ಲಿ ಇದ್ದವರು ರಾಹುಲ್ ದ್ರಾವಿಡ್. ಅಲ್ಲೂ ಅವರಿಗೆ ಮೊದಲನೆಯ ಟೆಸ್ಟ್‌ನಲ್ಲಿ ಆಯ್ಕೆ ಮಾಡಲಿಲ್ಲ. ಎರಡನೇಯ ಟೆಸ್ಟಿಗೆ ಮುಂಚೆ ನವ್‌ಜ್ಯೋತ್ ಸಿಧು, ಕ್ಯಾಪ್ಟನ್‌ ಅಝರುದ್ದೀನ್ ಜೊತೆ ಜಗಳವಾಡಿಕೊಂಡು ಕೋಪದಿಂದ ಇಂಡಿಯಾಗೆ ವಾಪಸ್ಸು ಹೊರಟು ಬಿಟ್ಟರು! ಹಾಗೆ ಟೆಸ್ಟ್‌ನಲ್ಲಿ ಆಡುವ ಸುಯೋಗ ಅವರಿಗೆ ಸಿಕ್ಕಿತು. ಅದನ್ನು ಎಷ್ಟು ಚೆನ್ನಾಗಿ ಬಳಸಿಕೊಂಡರು ಗಂಗೂಲಿ! ಮೊದಲನೇ ಟೆಸ್ಟ್‌ನಲ್ಲಿ, ಅದರಲ್ಲೂ ಲಾರ್ಡ್ಸ್‌ ಮೈದಾನದಲ್ಲಿ ಶತಕ ಬಾರಿಸಿಯೇ ಬಿಟ್ಟರು ಗಂಗೂಲಿ! ರಾಹುಲ್ ದ್ರಾವಿಡ್ ಈ ಟೆಸ್ಟಿನಲ್ಲೇ 95ರನ್ ಹೊಡೆದು 5 ರನ್‌ನಿಂದ ಶತಕದಿಂದ ವಂಚಿತರಾದರು. ಲಾರ್ಡ್ಸ್‌ ಚೊಚ್ಚಲ ಶತಕ ಬಾರಿಸುವವರಲ್ಲಿ ಆಗ ಗಂಗೂಲಿ ಪ್ರಪಂಚದಲ್ಲಿ ಮೂರನೇಯವರಾದರು. ಮತ್ತು ಅವರ 131 ರನ್ ಈಗಲೂ ಅತ್ಯಂತ ಅಧಿಕ ಸ್ಕೋರ್. ಗಂಗೂಲಿ ಆ ಮ್ಯಾಚಿನಲ್ಲಿ 3 ವಿಕೆಟನ್ನೂ ಗಳಿಸಿದರು.

ಮುಂದಿನ ಟೆಸ್ಟ್ ಟ್ರೆನ್ಟ್ ಬ್ರಿಡ್ಜ್‌ನಲ್ಲೂ ಗಂಗೂಲಿ 136 ರನ್ ಹೊಡೆದು ಮೊದಲ ಎರಡು ಟೆಸ್ಟ್‌ನಲ್ಲಿ ಎರಡರಲ್ಲೂ ಶತಕ ಬಾರಿಸಿದ ಕ್ರಿಕೆಟ್ ಇತಿಹಾಸದಲ್ಲಿ ಮೂರನೇಯವರಾದರು! ಆ ಮ್ಯಾಚಿನಲ್ಲಿ ಟೆಂಡೂಲ್ಕರ್ ಜೊತೆ ಪಾಲುದಾರಿಕೆಯಲ್ಲಿ 255 ರನ್ ಭಾರತದ ಅತ್ಯಂತ ಹೆಚ್ಚು ರನ್‌ಗಳೆಂದು ಸಾಬೀತಾಯಿತು. ಇಂಗ್ಲೆಂಡಿನಿಂದ ಯಶಸ್ವಿಯಾಗಿ ಹಿಂತಿರುಗಿದರು ಗಂಗೂಲಿ.

1997ರಲ್ಲಿ ಅವರು ಒಡಿಐ ಮ್ಯಾಚಿನಲ್ಲಿ ಅವರ ಮೊದಲ ಶತಕ ಬಾರಿಸಿದರು. ಪಾಕಿಸ್ಥಾನದ ವಿರುದ್ಧ 5 /16 ತೆಗೆದು ಹೊಸ ಬಾಲಿನಲ್ಲಿ ಒಳ್ಳೆ ಸ್ವಿಂಗ್ ಬೋಲರ್ ಎಂದು ಹೆಸರುವಾಸಿಯಾದರು. 1999ರಲ್ಲಿ ಅವರ ದ್ರಾವಿಡ್ ಪಾಲುದಾರಿಕೆಯಲ್ಲಿ ಜೊತೆ ಹೊಡೆದ 318 ರನ್ ಒಡಿಐ ವಿಶ್ವ ಕಪ್ ಆಟದಲ್ಲಿ ಇಂದಿಗೂ ಒಂದು ದಾಖಲೆಯಾಗಿ ಉಳಿದಿದೆ.

ಭಾರತ ಒಳ್ಳೆಯ ಬ್ಯಾಟಿಂಗ್ ಟೀಮ್ ಅನ್ನುವ ಮಾತು ಇವರಿಬ್ಬರಿಂದ ಶುರುವಾಯಿತು. ಟೆಂಡೂಲ್ಕರ್, ದ್ರಾವಿಡ್, ಗಂಗೂಲಿ ಹಾಕಿದ ತಳಪಾಯದಿಂದ ಮುಂದೆ ಲಕ್ಷ್ಮಣ್, ಸೆಹ್ವಾಗ್, ಯುವರಾಜ್ ಸಿಂಘ್ ಅಂಥವರು ಬಂದು ಭಾರತದ ಟೀಮನ್ನು ಔಟ್ ಮಾಡುವುದು ಅತ್ಯಂತ ಕಷ್ಟಕರ ಎಂದು ಬೋಲರ್‌ಗಳ ಮನಸ್ಸಿಗೆ ಬಂತು. ಇಂದಿಗೂ ಭಾರತದ ಬ್ಯಾಟಿಂಗ್ ಹೆಸರುವಾಸಿಯಾಗಿ ಉಳಿದಿದೆ. ಈಗೀಗ ‘ಟೈಲ್’ ಎಂದು ಕರೆಯಲ್ಪಡುವ ಬೋಲರ್‌ಗಳ ಸರದಿ ಬಂದಾಗ ಬ್ಯಾಟಿಂಗ್‌ನಲ್ಲೂ ಮಿಂಚುತ್ತಿದೆ ಭಾರತದ ಬ್ಯಾಟಿಂಗ್!

ಗಂಗೂಲಿಯವರ ಬೋಲಿಂಗ್‌ನಲ್ಲಿ ಬಹಳ ವೇಗವಿರಲಿಲ್ಲ. ಆದರೆ ಎಲ್ಲಿ ಸೂರ್ಯ ಕಡಿಮೆ ಇದ್ದು, ಮೋಡದ ವಾತಾವರಣ ಇದ್ದಾಗ ಅವರ ಸ್ವಿಂಗ್ ಬೋಲಿಂಗ್‌ನ ಸ್ವಿಂಗ್ ಬಹಳ ಪರಿಣಾಮಕಾರಿಯಾಗಿತ್ತು.

ಗಂಗೂಲಿ ಸ್ಪಿನ್ನರ್, ಅದರಲ್ಲೂ ಆಫ್ ಸ್ಪಿನ್ನರ್‌ಗಳಿಗೆ ಸಿಂಹ ಸ್ವಪ್ನವಾಗಿದ್ದರು. ಸುಲಭವಾಗಿ ಮುಂದೆ ಬಂದು ಸಿಕ್ಸರ್‌ಗಳಮೇಲೆ ಸಿಕ್ಸರ್‌ಗಳ ಸುರಿಮಳೆ ಸುರಿಸುತ್ತಿದ್ದರು. ಆಫ್ ಸೈಡಿನಲ್ಲಿ ಎಷ್ಟು ಜನರಿದ್ದರೂ ಅವರ ಮಧ್ಯೆ ಬೌಂಡರಿಗೆ ಬಾಲನ್ನು ಕಳಿಸುತ್ತಿದ್ದರು. ದ್ರಾವಿಡ್ ಅವರಿಗೆ ಇದು ಬಹಳ ಇಷ್ಟವಾಗಿ ಒಂದು ಸಲ ಅವರು ‘ದೇವರಿದ್ದಾನೆ, ಅದರ ಜೊತೆ ಗಂಗೂಲಿಯ ಆಫ್ ಸೈಡ್ ಸ್ಟ್ರೋಕ್ ಕೂಡ ಇರುತ್ತೆ’ ಎಂದು ಪ್ರಶಂಸಿಸಿದರು. ಇದೆಲ್ಲರ ಮಧ್ಯೆ ಗಂಗೂಲಿ ಆಟಗಾರನ ಮತ್ತು ನಾಯಕನ, ಮತ್ತು ನಾಯಕತ್ವದ ಮಹತ್ತರ ವಿದ್ಯೆ ಕಲಿತರು, ತಾನಾಗಿ ಅವರಿಗೆ ಅದು ಬಂತು ಎಂದು ಹೇಳಬಹುದು.

ಬಹಳ ಸರ್ತಿ ಭಾರತದ ನಾಯಕನಲ್ಲಿ, ಅದರಲ್ಲೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತರಹ ಟೀಮನ್ನು ಎದುರಿಸಲು ಏನೋ ಅಳುಕು ಉಂಟಾಗಿರುತ್ತಿತ್ತು. ಅವರು ನಮಗಿಂತ ಬಹಳ ಮುಂದಿದ್ದಾರೆ ಎಂದೋ, ಅದು ನಿಜವಿಲ್ಲದಿದ್ದರೂ ಆ ಅಳುಕು ಇರುತ್ತಿತ್ತು. ಗಂಗೂಲಿಗೆ ನಾಯಕನಾಗುನ ದಿನ ಬಂತು. ಆ ದಿನದಿಂದ ಭಾರತದ ನಾಯಕತ್ವದಲ್ಲಿ ದೃಷ್ಟಾಂತವಾಗಿ ಒಂದು ಬದಲಾವಣೆ ಕಾಣಿಸಿತು. ಗಂಗೂಲಿ ಯಾರಿಗೂ ತಲೆ ಬಾಗಿದವರಲ್ಲ. ನಾವು ಎಲ್ಲರಿಗೂ ಸರಿಸಮ ಎಂದು ಬೆಳೆದವರು. ಅ ದಿಟ್ಟ ಮನೋಭಾವ ಅವರ ನಾಯಕತ್ವದಲ್ಲಿ ಕಾಣಿಸಿಕೊಳ್ಳಲು ಶುರುವಾಯಿತು. ‘ಯಥಾ ರಾಜ, ತಥಾ ಪ್ರಜಾ’ ಎನ್ನುವ ನಾಣ್ನುಡಿ ನಿಜವಾಯಿತು. ಮಿಕ್ಕ ಆಟಗಾರರಲ್ಲಿ ಕೂಡ ನಾವು ಯಾರಿಗೂ ಕಡಿಮೆಯಿಲ್ಲ ಅನ್ನುವ ಆತ್ಮ ವಿಶ್ವಾಸ ಮೂಡಿಬಂತು. ಇದರ ಅನುಭವ ಆಸ್ಟ್ರೇಲಿಯಾದ ಸ್ಟೀವ್ ವಾ ಅವರಿಗೆ ಆಯಿತು.

ಗಂಗೂಲಿಯ ದಿಟ್ಟ ಸ್ವಭಾವ, ಯಾರಿಗೂ ತಲೆಬಾಗದವರಾಗಿ ಭಾರತದ ದೇಶ ಯಾರಿಗೂ ಕಡಿಮೆಯಿಲ್ಲ ಎಂಬ ತನ್ನ ನಂಬಿಕೆಯಿಂದ ತಂಡವನ್ನು ನಿರ್ವಾಹಿಸಿದರು. ಇದರಿಂದ ತಂಡದಲ್ಲಿ ಎಲ್ಲರಲ್ಲೂ ಆತ್ಮ ವಿಶ್ವಾಸ ಮೂಡಿಬಂದು ಚೆನ್ನಾಗಿ ಆಡಲಾರಂಭಿಸಿದರು.

ಒಡಿಐ ಪಂದ್ಯದಲ್ಲಿ ಗಂಗೂಲಿ ಮತ್ತು ಸಚಿನ್ ಟೆಂಡೂಲ್ಕರ್ ಅವರ ಜೋಡಿ ಅತ್ಯಂತ ಯಶಸ್ವಿಯಾದ ಜೋಡಿಯಾಗಿತ್ತು. ಅವರು 136 ಇನಿಂಗ್ಸ್‌ ಶುರುಮಾಡಿ, 49.32 ರ ಸರಾಸರಿಯಲ್ಲಿ 6609 ರನ್ ಅವರ ಪಾಲುದಾರಿಕೆಯಾಯಿತು. ಅದರಲ್ಲಿ 21 ಶತಕ ಮತ್ತು 23 ಅರ್ಧ ಶತಕಗಳಿದ್ದವು. ಅನೇಕ ಬಾರಿ ಅವರು ಕೊಟ್ಟ ಪಾಲುದಾರಿಕೆ ಭಾರತ ಗೆಲ್ಲಲು ತಳಪಾಯವಾಯಿತು.

*****

ಸೌರವ್ ಗಂಗೂಲಿ ಕೊಲ್ಕೊತದಲ್ಲಿ ಜುಲೈ 1972ರಲ್ಲಿ ಒಂದು ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರು. ಫುಟ್ಬಾಲ್ ಮತ್ತು ಕ್ರಿಕೆಟ್‌ನ ಹುಚ್ಚಿನಿಂದ ಶುರುವಾದ ಬಾಲ್ಯ, ಬಲಗೈ ಆಟಗಾರ ಅಣ್ಣನ ಸಾಮಾನು ಸರಂಜಾಮು ಉಪಯೋಗಿಸಬೇಕೂಂತ ಎಡಗೈ ಆಟಗಾರರಾದರು! ಅದರಲ್ಲೇ ಪಳಗಿ ಕೊನೆಗೆ ಪೂರ್ತಿ ಎಡಗೈಲಿ ಒಳ್ಳೆಯ ಆಟಗಾರ ಎಂದು ಅನ್ನಿಸಿಕೊಂಡರು. ಸ್ಕೂಲಿನಿಂದ ಕ್ರಿಕೆಟ್ ಚೆನ್ನಾಗಿ ಆಟವಾಡುತ್ತಾ ಬಂದ ಗಂಗೂಲಿಗೆ, ಅವರ ನಡವಳಿಕೆ ಶ್ರೀಮಂತನ ಅಹಂಕಾರ ಇತ್ಯಾದಿ ಮಾತುಗಳು ಹಬ್ಬಿ ಅವರ ಏಳಿಗೆಗೆ ಸ್ವಲ್ಪ ಅಡ್ಡ ಬಂತು. ಆದರೆ ಅವರ ಮನಮೋಹಕ ಎಡಗೈ ಆಟ, ಹೆಚ್ಚಾಗಿ ಅವರ ಸ್ಕೋರುಗಳು ಅವರು ಮುಂದೆ ಬರಲು ಕಾರಣವಾಯಿತು.

1997ರಲ್ಲಿ ಅವರಿಬ್ಬರ ಮನೆಯವರಿಗೆ ಇವರ ಮದುವೆಗೆ ಇಷ್ಟವಿಲ್ಲದ ಕಾರಣ, ಗಂಗೂಲಿ ತಮ್ಮ ಸ್ಕೂಲಿನ ಸ್ನೇಹಿತೆ ಡೊನ ರಾಯ್ ಜೊತೆ ಓಡಿಹೋದರು! ಆಮೇಲೆ ಎಲ್ಲರ ಮನವೊಲಿಸಿದ ನಂತರ ಅವರಿಬ್ಬರ ಮದುವೆ ವಿಜೃಂಭಣೆಯಿಂದ ನಡೆಯಿತು. ಗಂಗೂಲಿ ದಂಪತಿಗಳಿಗೆ ಸಾನ ಎಂಬ ಹೆಸರಿನ ಮಗಳಿದ್ದಾಳೆ.

ನಾಯಕನಾದ ಮೇಲೆ ಗಂಗೂಲಿಯವರಿಗೆ ಅನೇಕ ಮ್ಯಾಚುಗಳಲ್ಲಿ ವಿಜಯಮಾಲಿಕೆ ಸಿಕ್ಕಿದರೂ ಅನೇಕ ವಿವಾದಗಳೂ ಬೆನ್ನಟ್ಟಿ ಬಂದವು. ಇಂಗ್ಲೆಂಡಿನಲ್ಲಿ ಭಾರತ ಒಡಿಐ ಮ್ಯಾಚು ಗೆದ್ದಾಗ ಒಳ್ಳೆ ಹುರುಪಿನಲ್ಲಿದ್ದ ಗಂಗೂಲಿ ತನ್ನ ಟಿ ಶರ್ಟನ್ನು ಕಳಚಿ ಅರ್ಧ ಬೆತ್ತಲೆಯಾಗಿ ಟಿ ಶರ್ಟನ್ನೇ ತಿರುಗಿಸುತ್ತಾ ಗೆಲುವನ್ನು ವಿಜೃಂಭಿಸಿದರು! ಇದು ಬಹಳ ಜನಕ್ಕೆ ಅದರಲ್ಲೂ ಇಂಗ್ಲೆಂಡಿನಲ್ಲಿ ಇಷ್ಟವಾಗಲಿಲ್ಲ. ಆದರೆ ಗಂಗೂಲಿ ಇದಕ್ಕೆಲ್ಲಾ, ‘ಡೋಂಟ್‌ ಕೇರ್’ ಸ್ವಭಾವದವರಾಗಿದ್ದರು.

2001ರಲ್ಲಿ ನಿಯಮಿತ ಸಮಯದಲ್ಲಿ ಟಾಸ್‌ಗೆ ಹೋಗದೆ ಆಸ್ಟ್ರೇಲಿಯಾದ ನಾಯಕ ಸ್ಟೀವ್ ವಾ ಅವರನ್ನು ಕಾಯಿಸಿದರು ಎನ್ನುವ ದೂರೂ ಬಂತು, ಆದರೆ ಎಲ್ಲೋ ಇಟ್ಟಿದ್ದ ಅವರ ಕೋಟು ಸಿಗದೆ ಬೇರೆಯವರ ಕೋಟನ್ನು ಹಾಕಿಕೊಂಡು ಬರುವಷ್ಟರಲ್ಲಿ ತಡವಾಯಿತು ಎಂದು ಸ್ಪಷ್ಟನೆ ಕೊಟ್ಟರು.

ಐಪಿಎಲ್ ಟೂರ್ನಮೆಂಟಿಗೆ ಅವರು ಕೆಕೆಆರ್ ಅನ್ನುವ ಟೀಮಿಗೆ ಆಡುತ್ತಿದ್ದರು. ಏನೇ ವಿವಾದವಿದ್ದರೂ ಅವರ ಕ್ರಿಕೆಟ್ ಆಟದಲ್ಲಿ ಅವರು ತನು ಮನು ಕೊಟ್ಟು ಆಡುತ್ತಿದ್ದರು ಎಂಬುದು ನಿಜ. ಅವರಲ್ಲಿ ಸಂಕುಚಿತ ಮನೋಭಾವವಿರಲಿಲ್ಲ. ತಮ್ಮ ಊರಿನವನು ತಮ್ಮ ಭಾಷೆಯಾಡುವವನು ಎಂದು ಅವರು ಯಾರಿಗೂ ಮೇಲೇರಿಸುತ್ತಿರಲಿಲ್ಲ. ಪಟೌಡಿಯಾದ ಮೇಲೆ ಈ ತರಹದ ವಿಶಾಲ ಮನೋಭಾವ ಹೊಂದಿದ್ದ ನಾಯಕ ಒಬ್ಬರೇ – ಅವರೇ ಗಂಗೂಲಿ. ಭಾರತದ ಮೂಲೆ ಮೂಲೆಯಿಂದ ಆಟಗಾರರನ್ನು ಒಗ್ಗೂಡಿಸಿ, ಅವರ ಪ್ರತಿಭೆಯನ್ನು ಅರಳಲು ಕೈ ಜೋಡಿಸಿದವರು ಗಂಗೂಲಿ.

ಅವರು ಬಿಸಿಸಿಐ ಅಧ್ಯಕ್ಷರಾಗಿರುವಾಗಲೇ ಮಹಿಳಾ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಲು ಶ್ರಮಿಸಿದರು. ಈಗ ವಿಮೆನ್ಸ್ ಪ್ರೀನಿಯರ್ ಲೀಗ್ ಈ ವರ್ಷದಿಂದ ಶುರುವಾಗಲಿದೆ. ಗಂಗೂಲಿ ಮತ್ತು ಭಾರತ ನಾಯಕರಾಗಿದ್ದ ವಿರಾಟ್ ಕೊಹ್ಲಿಯ ಮಧ್ಯೆ ಮಾತಿನ ಚಕಮಕಿಯಾಗಿ ಅದರ ಹೊಡೆದಾಟದಲ್ಲಿ ಇಬ್ಬರೂ ಅವರವರ ಸ್ಥಾನದಿಂದ ಕೆಳಗಿಳಿದಿದ್ದಾರೆ. ಕೆಲವು ತಿಂಗಳ ಹಿಂದೆ ಗಂಗೂಲಿಗೆ ಹೃದಯಘಾತವಾಗಿ ಈಗ ಚೇತರಿಸಿಕೊಂಡಿದ್ದಾರೆ.

ಭಾರತದ ಕ್ರಿಕೆಟ್‌ನ ಏಳಿಗೆಗಾಗಿ ಬಹಳಷ್ಟು ಶ್ರಮಿಸಿದವರಲ್ಲಿ ಗಂಗೂಲಿ ಕೂಡ ಒಬ್ಬರು. ಸ್ನೇಹಮಯಿ ಗಂಗೂಲಿಯಿಂದಲೇ ದ್ರಾವಿಡ್, ಲಕ್ಷ್ಮಣ್ ಮುಂತಾದವರು ಅವರ ವೃತ್ತಿ ಮುಗಿದಮೇಲೂ ಮತ್ತೆ ಬೇರೆ ಬೇರೆ ರೀತಿಯಲ್ಲಿ ಅವರ ಕೊಡುಗೆ ನೀಡಲು ಮುಂದೆ ಬಂದಿದ್ದಾರೆ.

ಗಂಗೂಲಿ ಹೊಡೆಯುತ್ತಿದ್ದ ಸಿಕ್ಸರ್‌ಗಳು ಈಗಲೂ ಪ್ರೇಕ್ಷಕರ ಮನಸ್ಸಿನಲ್ಲಿ ನಾಟಿವೆ. ಆ ನೆನಪುಗಳು ಎಂದಿಗೂ ಮಾಸಲ್ಲ.