ರಹಿಮತ್ ಖಾನರ ಗೆಳೆಯರ ಬಳಗ ದೊಡ್ಡದಿತ್ತು. ಸವಾಯಿ ಗಂಧರ್ವ ಮತ್ತು ಕಿರಾನಾ ಘರಾನಾ ಸ್ಥಾಪಕ ಅಬ್ದುಲ್ ಕರೀಂ ಖಾನ್ ಸಾಹಬ್ ಈ ಸಾಲಿನಲ್ಲಿ ಪ್ರಮುಖರು. ಈ ಮೂವರು ಸೇರಿದ ಜಾಗದಲ್ಲಿ ಸಂಗೀತದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಸವಾಯಿ ಗಂಧರ್ವರ ಕುಂದಗೋಳದ ‘ವಾಡ’ದಲ್ಲಿ ಈ ತ್ರಿಮೂರ್ತಿಗಳು ಅಪರೂಪಕ್ಕೊಮ್ಮೆ ಸೇರುತ್ತಿದ್ದರು. ಮದ್ಯಪಾನವೂ ಜೋರಾಗಿಯೇ ಇತ್ತು. ಕುಂದಗೋಳದ ಪಾನಗೋಷ್ಠಿಯಲ್ಲಿ ನಡೆಯುತ್ತಿದ್ದ ವಿಚಿತ್ರ ಘಟನೆಗಳು ಆಗಿನ ಕಲಾವಿದರ ಪ್ರತಿಭೆಗೂ ಸಾಕ್ಷಿಯಾಗಿದ್ದವು. ಶೇಣಿ ಮುರಳಿ ಬರೆದ ಉಸ್ತಾದ್ ರಫೀಕ್ ಖಾನ್ ಜೀವನಚರಿತ್ರೆ ‘ಖಾನ್ ಕಾಂಪೌಂಡ್’ನ ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ.

ಧಾರವಾಡವೂ ಗುರು ಬಂದೇ ಅಲಿ ಖಾನರ ಬಗ್ಗೆ ಪಿಸುಗುಡುತ್ತಿತ್ತು.
ಅಲ್ಲಿಯೂ ಅವರ ಶಿಷ್ಯರಿದ್ದರು. ಸಂಗೀತ ಕ್ಷೇತ್ರದಲ್ಲಿ ಗುಣಮಟ್ಟದಿಂದಲೇ ಗುರುತಿಸಿಕೊಂಡಿದ್ದ ಒಂದು ಮನೆಯಿತ್ತು ಅಲ್ಲಿ. ಆ ಮನೆಮಂದಿ ಗುರುಶಾಪಕ್ಕೆ ತುತ್ತಾಗಿ ಸಂಗೀತದಿಂದ ದೂರವಾಗಿ, ಬದುಕು ನಿರ್ವಹಿಸಲು ಅನ್ಯಮಾರ್ಗ ತುಳಿಯಬೇಕಾಗಿ ಬಂದಿತ್ತು. ಈಗ ಅಲ್ಲಿ ಸಂಗೀತಗಾರರಿಲ್ಲ. ಗುರುಗಳ ಮಾತು ಮೀರಿದ್ದರ ಪರಿಣಾಮವಿದು ಎಂದು ಈ ಊರ ಮಂದಿ ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ.

ಮೈಸೂರು ಮಹಾರಾಜರು ನೀಡಿದ್ದ ‘ಸಿತಾರ್ ರತ್ನ’ ಬಿರುದಿನೊಂದಿಗೆ ನೆಲೆಸಲು ರಹಿಮತ್ ಖಾನ್ ಬಂದದ್ದು ಇದೇ ಧಾರವಾಡಕ್ಕೆ!
ರೈಲು ನಿಲ್ದಾಣ ರಸ್ತೆಯಿಂದ ಹತ್ತು ಹೆಜ್ಜೆ ದೂರದಲ್ಲೇ ಅವರು ಖರೀದಿಸಿದ್ದ ಮನೆ ಇತ್ತು. ಅದರ ಹೆಸರು ಖಾನ್ ಕಾಂಪೌಂಡ್. ಖಾನ್ ಬಂಗ್ಲೆ ಎಂದೂ ಕೆಲವರು ಹೇಳುತ್ತಿದ್ದರು. ಬದುಕಿನಲ್ಲಿ ಅನುರಾಗದ ತಂಗಾಳಿ ಬೀಸಿ, ರಹಿಮತ್ ಖಾನ್ , ಚಂದ್ರಾಬಾಯಿ ಎಂಬವರನ್ನು ಮದುವೆಯಾದರು. ಇಬ್ಬರು ಮಕ್ಕಳ ತಾಯಿ ಸಕೀನಾ ಬೇಗಂ, ಈ ಹೊಸ ಸಂಬಂಧಕ್ಕೆ ಎದುರಾಡಲಿಲ್ಲ. ಅದೇ ಕಾಲಕ್ಕೆ ರಹಿಮತ್ ಖಾನ್ ‘ಭಾರತೀಯ ಸಂಗೀತ ವಿದ್ಯಾಲಯ’ ಎಂಬ ಹೆಸರನ ಸಂಗೀತ ಶಾಲೆ ತೆರೆದರು. ಈ ಶಾಲೆ ಧಾರವಾಡದಲ್ಲಿ ಅನೇಕರಿಗೆ ಸಿತಾರ್ ರುಚಿಯನ್ನು ಪರಿಚಯಿಸಿತು.

ಕಲಾವಿದರಾಗಿ ರಹಿಮತ್ ಖಾನ್ ಅಸಾಧಾರಣ ಪ್ರತಿಭಾವಂತರಾಗಿದ್ದರು. ಅವರು ಏಳು ತಂತಿಗಳ ಸಿತಾರಿಗೆ ಜನ್ಮ ನೀಡಿದ ಕಲಾವಿದ ಎಂಬ ಹೆಗ್ಗಳಿಕೆ ಹೊಂದಿದ್ದರೂ, ಗುರುಗಳು ಕಲಿಸಿದ ಬೀನ್ ಮೇಲೆ ಅಪಾರ ಮೋಹವನ್ನು ಉಳಿಸಿಕೊಂಡಿದ್ದರು. ರುದ್ರವೀಣೆಯಲ್ಲಿ ಅವರ ಬೆರಳುಗಳು ಹರಿದಾಡುತ್ತಿದ್ದವು. ಕಾಲದಲ್ಲಿ ಲೀನರಾದ ತಮ್ಮ ಗುರುಗಳನ್ನು ಅವರು ಈ ಮೂಲಕ ಸ್ಮರಿಸಿಕೊಳ್ಳುತ್ತಿದ್ದರೋ ಏನೋ? ಹಾಗಾಗಿ ಸಿತಾರಿನ ನಾದಸುಖ, ರುದ್ರವೀಣೆಯನ್ನು ದೂರ ಮಾಡಲಿಲ್ಲ. ರಹಿಮತ್ ಖಾನ್ ಅವರ ಸಂಗೀತ ವ್ಯಾಪ್ತಿ ಹಿರಿದಾಗುತ್ತಿತ್ತು. ಕಛೇರಿಗಾಗಿ ಅವರು ಮಹಾರಾಷ್ಟ್ರಕ್ಕೆ ಆಗಾಗ ಹೋಗಿ ಬರುತ್ತಿದ್ದರು. ಕೊಲ್ಹಾಪುರ ಆಗ ಸಂಗೀತ, ನಾಟಕಗಳಿಗೆ ಪ್ರಸಿದ್ಧ. ಹಿಂದಿ, ಮರಾಠಿ ಚಿತ್ರಗಳಿಗೂ ನಾಟಕಗಳ ನೆರಳಿತ್ತು. ಚಿತ್ರರಂಗದ ಬಹುತೇಕ ಕಲಾವಿದರಿಗೆ ನಾಟಕವೇ ಸಿನಿಮಾ ಹಾದಿಯನ್ನು ತೋರಿತ್ತು.

(ಪೃಥ್ವೀರಾಜ್ ಕಪೂರ್)

ಯಾವುದೋ ಕಛೇರಿಯ ತಯಾರಿಯಲ್ಲಿ ಸಿತಾರಿನ ಶ್ರುತಿ ಸರಿ ಮಾಡುತ್ತಿದ್ದಾಗ,
‘ನನಗೆ ಸಿತಾರ್ ಕಲಿಸುತ್ತೀರಾ?’

-ಹೀಗೊಂದು ಪ್ರಶ್ನೆ ಯೊಂದಿಗೆ ಒಬ್ಬ ನಾಟಕಕಾರ ರಹಿಮತ್ ಖಾನ್ ಅವರ ಬಳಿ ಬಂದರು. ಅಭಿರುಚಿ ಆತನ ಕಣ್ಣುಗಳಲ್ಲಿ ಹೊಳೆಯುತ್ತಿತ್ತು. ಪಾಠವೂ ಆರಂಭವಾಯಿತು. ಕೆಲವೇ ವರ್ಷಗಳಲ್ಲಿ ಆ ನಾಟಕಕಾರ ನಿಧಾನವಾಗಿ ಸಿನಿಮಾಗಳ ಕಡೆಗೆ ಹೆಚ್ಚು ಆಸಕ್ತರಾದರು. ಅದೃಷ್ಟವೂ ಚೆನ್ನಾಗಿತ್ತು. ಕಪ್ಪು ಬಿಳುಪಿನ ಚಲಿಸುವ ದೃಶ್ಯಗಳು ಬೆಳ್ಳಿಪರದೆ ಮೇಲೆ ಚೆನ್ನಾಗಿಯೇ ಮೂಡಿ, ಹಿಂದಿ ಚಿತ್ರರಂಗದಲ್ಲಿ ಹೆಸರನ್ನೂ ಸಂಪಾದಿಸಿಕೊಂಡರು. ಅವರು ಪೃಥ್ವಿರಾಜ್ ಕಪೂರ್!

ಆಗೆಲ್ಲ ಸಿನಿಮಾಗಳಲ್ಲಿ ಸಂಗೀತದ ಬಳಕೆ ಮಿತವಾಗಿರುತ್ತಿತ್ತು. ಪೃಥ್ವಿರಾಜ್ ಕಪೂರ್ ಜತೆಗೆ ವಸಂತ್ ಪವಾರ್ ಎಂಬವರೂ ಇರುತ್ತಿದ್ದರು ಆಗ. ರಹಿಮತ್ ಖಾನರ ಬಗ್ಗೆ ಕೇಳಿ ತಿಳಿದುಕೊಂಡೇ ಅವರು ಬಂದಿದ್ದರು. ನಂತರದ ದಿನಗಳಲ್ಲಿ ವಸಂತ ಪವಾರ್ ಮರಾಠಿ ಚಿತ್ರರಂಗದ ಸಂಗೀತ ನಿರ್ದೇಶಕರಾಗಿ ಬಹಳ ಪ್ರಸಿದ್ಧಿ ಪಡೆದರು. ಕಪೂರ್ ಮತ್ತು ಪವಾರ್ ರಹಿಮತ್ ಜತೆಗೆ ಕೊನೆಯ ತನಕವೂ ಉತ್ತಮ ಸಂಬಂಧ ಉಳಿಸಿಕೊಂಡಿದ್ದರು. ಸಿನಿಮಾ ಕ್ಷೇತ್ರದ ಕೀರ್ತಿಯ ಉತ್ತುಂಗದಲ್ಲಿದ್ದಾಗಲೂ, ಬಿಡುವಿನ ವೇಳೆ ಪೃಥ್ವಿರಾಜ್ ಕಪೂರ್ ಸಿತಾರ್ ಕೈಗೆತ್ತಿಕೊಳ್ಳುತ್ತಿದ್ದರು. ಈಗಿನಂತೆ ಚಿತ್ರಗೀತೆಗಳ ಬಳಕೆ ಆ ಕಾಲದಲ್ಲಿ ಇದ್ದಿದ್ದರೆ ರಹಿಮತ್ ಖಾನ್ ಅವರನ್ನು ಹಿಂದಿ ಚಿತ್ರರಂಗ ಹಾಡುಗಳಿಗೆ ಬಳಸಿಕೊಳ್ಳುತ್ತಿತ್ತೇ? ಖಾನ್ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಚಿತ್ರಗೀತೆಗಳಿಗೆ ಸಿತಾರ್ ನುಡಿಸುತ್ತಿದ್ದರೇ? ಗೊತ್ತಿಲ್ಲ.

ಕಪೂರ್-ಪವಾರ್-ಖಾನ್ ಗೆಳೆತನ ಸಿನಿಮಾಕ್ಕೆ ಹೊರತಾಗಿತ್ತು. (ಖಾನ್ ಕಾಂಪೌಂಡ್-ಬಾಲಿವುಡ್ ನಂಟು ಸಾಹೇಬರ ಮೂರನೇ ಮಗ ಗುಲಾಂ ದಸ್ತಗೀರ್ ಖಾನರ ಮೂಲಕ ಮುಂದುವರಿಯಿತು. ಮಗನ ಸಿನಿಮಾ ಸಂಗೀತಾಸಕ್ತಿಗೆ ರಹಿಮತ್ ಖಾನ್ ಆಕ್ಷೇಪಿಸಲಿಲ್ಲ).
ರಹಿಮತ್ ಖಾನರ ಗೆಳೆಯರ ಬಳಗ ದೊಡ್ಡದಿತ್ತು. ಸವಾಯಿ ಗಂಧರ್ವ ಮತ್ತು ಕಿರಾನಾ ಘರಾನಾ ಸ್ಥಾಪಕ ಅಬ್ದುಲ್ ಕರೀಂ ಖಾನ್ ಸಾಹಬ್ ಈ ಸಾಲಿನಲ್ಲಿ ಪ್ರಮುಖರು. ಈ ಮೂವರು ಸೇರಿದ ಜಾಗದಲ್ಲಿ ಸಂಗೀತದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಸವಾಯಿ ಗಂಧರ್ವರ ಕುಂದಗೋಳದ ‘ವಾಡ’ದಲ್ಲಿ ಈ ತ್ರಿಮೂರ್ತಿಗಳು ಅಪರೂಪಕ್ಕೊಮ್ಮೆ ಸೇರುತ್ತಿದ್ದರು. ಮದ್ಯಪಾನವೂ ಜೋರಾಗಿಯೇ ಇತ್ತು. ಕುಂದಗೋಳದ ಪಾನಗೋಷ್ಠಿಯಲ್ಲಿ ನಡೆಯುತ್ತಿದ್ದ ವಿಚಿತ್ರ ಘಟನೆಗಳು ಆಗಿನ ಕಲಾವಿದರ ಪ್ರತಿಭೆಗೂ ಸಾಕ್ಷಿಯಾಗಿದ್ದವು.

ನಂತರದ ದಿನಗಳಲ್ಲಿ ವಸಂತ ಪವಾರ್ ಮರಾಠಿ ಚಿತ್ರರಂಗದ ಸಂಗೀತ ನಿರ್ದೇಶಕರಾಗಿ ಬಹಳ ಪ್ರಸಿದ್ಧಿ ಪಡೆದರು. ಕಪೂರ್ ಮತ್ತು ಪವಾರ್, ರಹಿಮತ್ ಜತೆಗೆ ಕೊನೆಯ ತನಕವೂ ಉತ್ತಮ ಸಂಬಂಧ ಉಳಿಸಿಕೊಂಡಿದ್ದರು.

ಮದ್ಯದ ಅಮಲೇರುತ್ತಿದ್ದ ಸಮಯದಲ್ಲಿ ಸಂಗೀತದ್ದೇ ಚರ್ಚೆ. ಅವರೊಳಗೇ ಒಂದು ಸ್ಪರ್ಧೆಯೂ ಏರ್ಪಡುತ್ತಿತ್ತು. ಗಾಜಿನ ಲೋಟ ಬರಿದಾದಾಗ, ಅದರ ಎದುರು ಕುಳಿತು ಹಾಡಬೇಕಿತ್ತು. ಅಲ್ಲೊಂದು ನಾದಲೋಕ ಸೃಷ್ಟಿಯಾಗಿ, ಆ ಲೋಟ ಬಿರುಕು ಬಿಡಬೇಕು. ಇದು ಸವಾಲು. ಬಿರುಕು ಬಿಟ್ಟರೆ ಆತ ಅಪ್ರತಿಮ ಸಾಮರ್ಥ್ಯದ ಗಾಯಕ ಎಂದು ಗುರುತಿಸಿಕೊಳ್ಳುತ್ತಿದ್ದ! ರಹಿಮತ್ ಖಾನ್ ಅವರ ಗಾಯನಕ್ಕೆ ಸಾಕಷ್ಟು ಬಾರಿ ಗಾಜಿನ ಲೋಟ ಒಡೆಯುತ್ತಿತ್ತಂತೆ! ಅಲ್ಲಿ ತಾನೇನೂ ಕಡಿಮೆಯವನಲ್ಲ ಎನ್ನುವ ಇನ್ನೊಬ್ಬ ಸದಸ್ಯನೂ ಇದ್ದ. ಅದು ಕಿರಾನಾ ಘರಾನಾ ಸ್ಥಾಪಕ ಅಬ್ದುಲ್ ಕರೀಂ ಖಾನರ ನಾಯಿ. ಯಾವಾಗಲೂ ಜತೆಗೇ ಬರುತ್ತಿದ್ದ ಆ ನಾಯಿಗೆ ಶ್ರುತಿಯಲ್ಲೇ ಕೂಗುವ ಸಾಮರ್ಥ್ಯವಿತ್ತು. ಅಬ್ದುಲ್ ಕರೀಂ ಸಾಹಬ್ ‘ಸುರ್ ಲಗಾವೋ ಬೇಟಾ’ ಎಂದರೆ ಸಾಕಿತ್ತು, ನಾಯಿ ಊಳಿಡುತ್ತಿತ್ತು. ರಹಿಮತ್ ಖಾನ್ ಆ ಧ್ವನಿಯ ಆಧಾರದಲ್ಲೇ ಸಂಗೀತೋಪಕರಣವನ್ನು ಶ್ರುತಿಬದ್ಧಗೊಳಿಸುತ್ತಿದ್ದರು! ಇಂತಹ ಘಟನೆಗಳು ನಡೆಯುತ್ತಿದ್ದುದು ಪಾನ ಗೋಷ್ಠಿಯಲ್ಲಿ.

ಇತ್ತ ಮನೆಯಲ್ಲಿ ಸಕೀನಾ ಬೇಗಂ ಮತ್ತು ಚಂದ್ರಾಬಾಯಿ ನಡುವೆ ಹೊಂದಾಣಿಕೆ ಚೆನ್ನಾಗಿಯೇ ಇತ್ತು. ಆದುದರಿಂದ ರಹಿಮತ್ ಖಾನ್ ನೆಮ್ಮದಿಯಿಂದಲೂ ಇದ್ದರು. ಸಕೀನಾ ಬೇಗಂ ಮಡಿಲಲ್ಲಿ ಅಬ್ದುಲ್ ಕರೀಂ ಖಾನ್ ಆಡುತ್ತಿದ್ದಾಗ ಇತ್ತ, ಚಂದ್ರಾಬಾಯಿ ಮಗುವಿಗೆ ಜನ್ಮನೀಡಿದರು. ಅವರು ಗುಲಾಮ್ ಖಾದರ್ ಖಾನ್. ಅನಂತರ ಚಂದ್ರಾಬಾಯಿ ಹಡೆದ ಮಗು, ಗುಲಾಮ್ ದಸ್ತಗೀರ್ ಖಾನ್. ಕರೀಂ ಖಾನರ ನಂತರ ಮತ್ತು ಖಾದರ್ ಖಾನರ ನಡುವೆ ಬಾಬು ಖಾನ್ ಎಂಬವರು ಜನಿಸಿದ್ದರು. ಆದರೆ ಬಾಲ್ಯದಲ್ಲೇ ಅಸೌಖ್ಯಕ್ಕೆ ಒಳಗಾದ ಬಾಬು ನಿಧನ ಹೊಂದಿದರು. ಮೂವರು ಮಕ್ಕಳು ಎಳವೆಯಲ್ಲೇ ಸಿತಾರ್ ಅಭ್ಯಾಸ ಮಾಡಿ, ಅವರವರ ವ್ಯಕ್ತಿತ್ವವನ್ನು ಅವರಾಗಿಯೇ ರೂಪಿಸಿಕೊಂಡರು.

ಹಿರಿಯ ಮಗ ಅಬ್ದುಲ್ ಕರೀಂ ಖಾನ್ ತಂದೆಯ ಹಾದಿಯಲ್ಲೇ ಹೆಜ್ಜೆಹಾಕಿದರು. ಸಿತಾರ್ ವಾದನ ಅವರ ಬದುಕು ರೂಪಿಸಿತು, ಹಲವು ಶಿಷ್ಯರ ಬದುಕಿಗೆ ಅವರು ದಾರಿದೀಪವಾದರು. ಕೊನೆಯ ಮಗ ಗುಲಾಂ ದಸ್ತಗೀರ್ ಖಾನ್ ಸಿತಾರ್ ಕಲಾವಿದರಾಗಿದ್ದರೂ, ಅವರ ಪ್ರತಿಭೆ ವೇದಿಕೆಗಳಲ್ಲಿ ಅನಾವರಣಗೊಳ್ಳಲಿಲ್ಲ. ಮುಂಬೈಗೆ ಹೋದ ದಸ್ತಗೀರ್, ಹಿಂದಿ ಚಲನಚಿತ್ರ ಗೀತೆಗಳಿಗೆ ಸಿತಾರ್ ಮೀಟತೊಡಗಿದರು. ಅವರ ಸಿತಾರ್ ನುಡಿಸುವಿಕೆ ಸ್ಟುಡಿಯೋಗಳಿಗೆ ಸೀಮಿತವಾದವು. ಆರ್.ಡಿ.ಬರ್ಮನ್, ಲಕ್ಷ್ಮೀಕಾಂತ್ ಪ್ಯಾರೇಲಾಲ್, ರಾಜೇಶ್ ರೋಷನ್ ಮೊದಲಾದ ಸಂಗೀತ ನಿರ್ದೇಶಕರ ಸಾಕಷ್ಟು ಜನಪ್ರಿಯ ಹಾಡುಗಳಲ್ಲಿ ಇವರ ನುಡಿಸುವಿಕೆಯಿದೆ. ಗುಲಾಂ ಅಲಿ ಅವರ ಜತೆ ಸಿತಾರ್ ರೆಕಾರ್ಡಿಂಗ್ ಮಾಡುವ ಮೂಲಕ ಶಾಸ್ತ್ರೀಯ ನಂಟನ್ನೂ ಉಳಿಸಿಕೊಂಡರು. ದಸ್ತಗೀರ್ ಖಾನ್ ಚಲನಚಿತ್ರ ಸಂಗೀತ ಕ್ಷೇತ್ರಕ್ಕೆ ಸೀಮಿತರಾಗಿ, ಪೂರ್ಣತೃಪ್ತರೂ ಆಗಿದ್ದರು. ತಂದೆಯಂತೆ ಶಾಸ್ತ್ರೀಯ ಗುರುತಿಸುವಿಕೆಯನ್ನು ಬಹುಶಃ ಅವರು ಅಪೇಕ್ಷಿಸಿರಲಿಲ್ಲ. ಜರೀನ್ ಶರ್ಮ (ಜರೀನ್ ದಾರೂವಾಲ), ಉಲ್ಲಾಸ್ ಬಾಪಟ್, ರಯೀಸ್ ಖಾನ್ ಅವರಂಥ ದಿಗ್ಗಜರ ಜತೆಗೆ ದಸ್ತಗೀರ್ ಗೆಳೆತನ ಹೊಂದಿದ್ದರು. ೨೦೧೬ರಲ್ಲಿ ಅಬುಧಾಬಿಯಲ್ಲಿದ್ದ ನೆಂಟರ ಮನೆಯಲ್ಲಿ ದಸ್ತಗೀರ್ ಖಾನ್ ಹೃದಯಾಘಾತದಿಂದ ಕೊನೆಯ ಉಸಿರೆಳೆದರು.

ಅಣ್ಣ ಅಬ್ದುಲ್ ಕರೀಂ ಮತ್ತು ತಮ್ಮ ದಸ್ತಗೀರ್ ಖಾನರ ನಡುವೆ, ಗುಲಾಮ್ ಖಾದರ್ ಖಾನ್ ಕೊಂಚ ಭಿನ್ನವಾಗಿ ಬದುಕಿದರು. ಆ ಕಾಲದಲ್ಲಿ ಅವರು ತಮ್ಮ ಹೆಸರನ್ನು ಸತೀಶ್ ಕುಮಾರ್ ಎಂದು ಬದಲಾಯಿಸಿಕೊಂಡಿದ್ದರು! ಅದಕ್ಕೆ ಕಾರಣ ಸ್ಪಷ್ಟವಿಲ್ಲ. ಅದು ಮತಾಂತರ ಆಗಿರಲಿಲ್ಲ. ಹೆಸರು ಮಾತ್ರ ಬದಲಾಗಿತ್ತು ಎನ್ನುತ್ತಾರೆ ಕುಟುಂಬ ಸದಸ್ಯರು. ಹಿಂದೆ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿಕೊಂಡ ಕೆಲವರು, ಹಿಂದು ಹೆಸರುಗಳಿಗೆ ಮನಸೋತಿದ್ದರು. (ಯೂಸುಫ್ ಖಾನ್ ಬಾಲಿವುಡ್ ನಟರಾಗಿ ಗುರುತಿಸಿಕೊಂಡ ಅನಂತರ ದಿಲೀಪ್ ಕುಮಾರ್ ಆದುದು ಇದೇ ಟ್ರೆಂಡ್‌ನ ಪ್ರಭಾವ ಇರಬಹುದು). ಪಂಜಾಬಿ ಹುಡುಗಿಯನ್ನು ಮದುವೆಯಾದ ಸತೀಶ್ ಕುಮಾರ್, ಖಾನ್ ಕಾಂಪೌಂಡ್ ಜತೆ ಆತ್ಮೀಯತೆ ಉಳಿಸಿಕೊಳ್ಳಲಿಲ್ಲ. ಸಿಟ್ಟುಮಾಡಿಕೊಂಡು ಅವರು ರೈಲೇರಿ ಹೊರಟದ್ದು ದೆಹಲಿಗೆ. ಈ ನಿರ್ಧಾರದ ಹಿಂದಿನ ಕಾರಣವೂ ಅಸ್ಪಷ್ಟ. ಆದರೆ, ಎಳವೆಯಲ್ಲಿ ಮನೆಯ ಕಲಾತ್ಮಕ ವಾತಾವರಣ ಅವರನ್ನೂ ಬಿಟ್ಟಿರಲಿಲ್ಲ. ಗುಲಾಮ್ ಖಾದರ್ ಖಾನ್ (ಸತೀಶ್ ಕುಮಾರ್) ಕೂಡ ಉತ್ತಮ ಸಿತಾರ್ ಪಟುವೇ ಆಗಿದ್ದರು. ದೆಹಲಿಗೆ ತೆರಳಿ ಆಕಾಶವಾಣಿಯಲ್ಲಿ ಮುಖ್ಯ ಕಂಪೋಸರ್ ನೌಕರಿ ಪಡೆದರು. ಆಗ ಈ ಹುದ್ದೆಯಲ್ಲಿದ್ದ ಪಂಡಿತ್ ರವಿಶಂಕರ್, ಯಾಕೋ ಹುದ್ದೆ ತೊರೆದಿದ್ದರು. ಆ ಹುದ್ದೆಯಲ್ಲಿ ಸತೀಶ್ ಕುಮಾರ್ ಹೆಸರು ಬರೆದಿತ್ತು. ಧಾರವಾಡದಿಂದ ದೆಹಲಿ ದೂರವೇ ಉಳಿಯಿತು.

ರಹಿಮತ್ ಖಾನ್ ಎಂಬ ಪ್ರಸಿದ್ಧ ಕಲಾವಿದನ ಮೂವರು ಮಕ್ಕಳಿಗೂ ಸಿತಾರ್ ಅನ್ನದ ದಾರಿ ತೋರಿತು. ಉದ್ಯೋಗದಿಂದ ನಿವೃತ್ತಿ ಬಳಿಕ ಸತೀಶ್ ಕುಮಾರ್ ಒಮ್ಮೆ ತವರಿಗೆ ಬಂದಿದ್ದರೂ, ಕಾಲ ಸಾಕಷ್ಟು ಬದಲಾಗಿತ್ತು! ಖಾನ್ ಕಂಪೌಂಡಿನ ಹೊಸ ತಲೆಮಾರಿಗೆ ಅವರೊಬ್ಬ ಅಪರಿಚಿತ ಚಿಕ್ಕಪ್ಪನಾಗಿಬಿಟ್ಟಿದ್ದರು. ಮಕ್ಕಳ ಮನದಲ್ಲಿ ಈ ಚಿಕ್ಕಪ್ಪನ ಚಿತ್ರವೂ ಇರಲಿಲ್ಲ.

(ಬಸವರಾಜ್ ರಾಜಗುರು)

ಖಾನ್ ಕಂಪೌಡ್‌ನಲ್ಲೊಂದು ಕಾರಂಜಿ ಇತ್ತು. ಮನೆ ಮುಂದಿನ ಭಾಗದಲ್ಲಿ ಕಟ್ಟಡ ಕಟ್ಟಿಸಿ, ಸಾಲಾಗಿ ಅಂಗಡಿಗಳನ್ನು ತೆರೆಯಲಾಯಿತು. ಅದರ ಬಾಡಿಗೆಯು ಶಾಶ್ವತ ವರಮಾನದ ದಾರಿಯಾಗಿತ್ತು. ಪಕೀರಪ್ಪನ ಚಪ್ಪಲಿ ಅಂಗಡಿಯೂ ಅದೇ ಬೀದಿಯಲ್ಲಿತ್ತು. ಕೂಗಳತೆಯ ದೂರದಲ್ಲೇ ಇತ್ತು ಹಿರಿಯ ಸಂಗೀತಗಾರ ಬಸವರಾಜ ರಾಜಗುರು ಅವರ ಮನೆ. ಬಿಳಿ ಪೈಜಾಮ, ಕಪ್ಪು ಕೋಟ್, ಧಾರವಾಡ ಶೈಲಿಯ ಕಚ್ಚೆ, ತಲೆಯ ಮೇಲೊಂದು ಪೇಟ, ನಗುಮುಖದ ಚೆಂದ ಹೆಚ್ಚಿಸುವ ಕೆಂಪು ಬೊಟ್ಟಿನ ಅಲಂಕಾರ! ಅದು ರಾಜಗಾಂಭೀರ್ಯ. ಸೂರ್ಯ ತಂಪಾದ ಹೊತ್ತಿಗೆ ರಾಜಗುರು ನಡೆದುಕೊಂಡೇ ಆ ಬೀದಿಗೆ ಬರುತ್ತಿದ್ದರು. ಅವರ ಚರ್ಮದ ಚಪ್ಪಲಿ ಚರಕ್ ಚರಕ್ ಸದ್ದಿನೊಂದಿಗೆ ನಡಿಗೆಗೆ ಸಂಗತ ನೀಡುತ್ತಿತ್ತು.

ರಾಜಗುರು ಪಕೀರಪ್ಪನ ಚಪ್ಪಲಿ ಅಂಗಡಿಯಲ್ಲಿ ಪತ್ರಿಕೆ ಓದುತ್ತಿದ್ದರು. ಪಕ್ಕದಲ್ಲೇ ಇದ್ದ ಗೆಳೆಯ ಅಬ್ದುಲ್ ಕರೀಂ ಖಾನರ ಮನೆಗೂ ಬರುತ್ತಿದ್ದರು. ಅವರು ಬಂದರೆ ಸಾಕು, ಮನೆ ತಾನಾಗಿಯೇ ಸಂಗೀತದ ಚಾದರ ಹೊದ್ದುಕೊಳ್ಳುತ್ತಿತ್ತು. ರಾಜಗುರು ಆಲಾಪನೆಗೆ ತೊಡಗಿದರೆ, ಖಾನರ ಮಡಿಲಲ್ಲಿ ಸಿತಾರ್ ಇರುತ್ತಿತ್ತು. ಅದೆಷ್ಟು ಹೊತ್ತು? ಬಲ್ಲವನೇ ಬಲ್ಲ! ಆ ಮನೆಯೇ ಹಾಗಿತ್ತು, ಕಾಲವೂ!

ಕಾಲ ನಿಂತೀತೇ? ಕಛೇರಿಯ ವರಮಾನ, ಮನೆಯಲ್ಲಿ ಸಿತಾರ್ ಕ್ಲಾಸಿನಿಂದ ಬರುತ್ತಿದ್ದ ಹೆಚ್ಚುವರಿ ಆದಾಯದ ನಡುವೆಯೂ, ರಹಿಮತ್ ಖಾನ್ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ, ಬೆವರತೊಡಗಿದರು. ಖಾನ್ ಕಾಂಪೌಂಡ್ ತತ್ತರಿಸಿ, ಅನ್ಯರ ಪಾಲಾಯಿತು. ರಹಿಮತ್ ಖಾನ್ ತಮ್ಮ ಮಾವಿನ ತೋಟವನ್ನೂ ಮಾರಾಟ ಮಾಡಿದರು. ಆದರೆ, ಅವರ ಸಂಗೀತಯಾತ್ರೆ ಮೇಲೆ ಈ ಬೆಳವಣಿಗೆಗಳು ಯಾವ ಪರಿಣಾಮವನ್ನೂ ಬೀರಲಿಲ್ಲ. ಮನಸ್ಸಿನಲ್ಲಿ ಸಂಗೀತಕ್ಕೆ ಹೊರತಾದ ವಿಷಯಗಳಿಗೆ ಅವರು ಜಾಗ ಕೊಡುತ್ತಿರಲಿಲ್ಲ. ಹಕ್ಕಿ ವಲಸೆಯತ್ತ ಮನ ಮಾಡಿತು. ರೆಕ್ಕೆಗಳು ಸದ್ದು ಮಾಡಿದವು. ಇಬ್ಬರು ಪತ್ನಿಯರು, ಮೂವರು ಮಕ್ಕಳೊಂದಿಗೆ ನೇರ ಕೊಲ್ಹಾಪುರಕ್ಕೆ ಹೊರಟ ಖಾನ್ ಮತ್ತೆ ಮರಳಿದ್ದು ವರ್ಷಗಳ ಅನಂತರವೇ. ಆಗ ಅವರ ಕೂದಲುಗಳು ಬೆಳ್ಳಿಬಣ್ಣಕ್ಕೆ ತಿರುಗಿದ್ದವು.

ಬಾಳ ಸಂಜೆಯಲ್ಲಿ ಅವರು ಮೊಮ್ಮಕ್ಕಳಾದ ಉಸ್ಮಾನ್ ಖಾನ್, ಬಾಲೇ ಖಾನ್ ಅವರಿಗೆ ಸಿತಾರ್ ಪಾಠ ಮಾಡುತ್ತ ಕಾಲ ದೂಡಿದರು. ಈ ಮೊಮ್ಮಕ್ಕಳು ಮುಂದೆ ಖ್ಯಾತ ಕಲಾವಿದರಾಗಿ, ಅಜ್ಜನ ಕೀರ್ತಿಯನ್ನಷ್ಟೇ ಅಲ್ಲ, ಒಂದು ಘರಾನಾವನ್ನೇ ಬದುಕಿಸಿದರು. ಅಲಿ ಅಹಮದ್ ಹುಸೇನ್ ಅವರಂಥ ಉತ್ತಮ ಕಲಾವಿದರನ್ನು ರೂಪಿಸಿದ ‘ಸಿತಾರ್ ರತ್ನ’, ೧೯೫೨ರಲ್ಲಿ ಪಾರ್ಶ್ವವಾಯು ಪೀಡಿತರಾಗಿ ಇನ್ನಿಲ್ಲವಾದರು. ಅವರಿಗೆ ಆಗ ೯೩ ವರ್ಷ ವಯಸ್ಸು. ರಹಿಮತ್ ಖಾನ್ ನುಡಿಸುತ್ತಿದ್ದ ರುದ್ರವೀಣೆ ಮತ್ತು ಮೈಸೂರು ಮಹಾರಾಜರು ಉಡುಗೊರೆಯಾಗಿ ನೀಡಿದ್ದ ಪದಕಗಳು ಖಾನ್ ಕಾಂಪೌಂಡ್‌ನಲ್ಲಿ ಬೆಚ್ಚನೆ ಕುಳಿತವು.

ಬಾಲ್ಯದ ದಿನಗಳಲ್ಲಿ ಅಪ್ಪನ ನಾಗರಬೆತ್ತ ಕಂಡು ಹೆದರುತ್ತಿದ್ದ, ಗುರುಗಳ ಮನೆಯಲ್ಲಿ ಮಗುವಿನ ಮಲವನ್ನೂ ಬಾಚಿದ್ದ, ಬಂದೇ ಅಲಿ ಖಾನರ ಬಾಹುಗಳಲ್ಲಿ ಬಂಧಿಯಾಗಿ, ಸಿತಾರಿಗೆ ಹೊಸ ವ್ಯಾಖ್ಯಾನವನ್ನೇ ನೀಡಿದ್ದ ರಹಿಮತ್ ಖಾನ್, ಧಾರವಾಡ ಕಬರಸ್ತಾನದಲ್ಲಿ ಮಣ್ಣಾದರು.

ನೆನಪುಗಳು ಅಮರವಾದವು.