”ನೀನಾಸಮ್ ನಲ್ಲಿ ವಾಸಿಸುವ ನಾಯಿಗಳಿಗೆ ಪ್ರತಿವರ್ಷವೂ ಹೊಸ ಹೊಸ ವಿದ್ಯಾರ್ಥಿಗಳು ಬಂದಾಗ ಹೊಸ ಹೊಸ ಹೆಸರುಗಳ ನಾಮಕರಣವಾಗುತ್ತಿತ್ತು. ಆದರೆ ಅವೆಲ್ಲವೂ ಹೆಚ್ಚೂ ಕಡಿಮೆ ಪಾಶ್ಚಾತ್ಯ ಶಾಸ್ತ್ರೀಯ ನಾಟಕಗಳ ಪ್ರಸಿದ್ಧ ಪಾತ್ರಗಳ ಹೆಸರುಗಳಾಗಿರುತ್ತಿದ್ದವು. ಅಂದರೆ ಅವು ಸಾಮಾನ್ಯವಾಗಿ ‘ಈಡಿಪಸ್, ಯೊಕಾಸ್ತಾ, ಟೈರೀಸಿಯಸ್, ಒಫೀಲಿಯಾ’ – ಹೀಗೆ ಇಂತಹ ದುರಂತ ಪಾತ್ರಗಳೇ ಆಗಿರುತ್ತಿದ್ದವು. ಇದೊಂದು ರೀತಿ ನಾಯಿಪಾಡಿಗೆ ರೂಪಕದಂತಿದೆ ಅಲ್ಲವೇ? ಅದರೆ ಇದು ಸತ್ಯವಂತೂ ಹೌದು”
`ಚನ್ನಕೇಶವ ರಂಗಪುರಾಣ’ದ ನಾಲ್ಕನೆಯ ಕಂತು.

 

ನಾಟಕಗಳಲ್ಲವತರಿಸುವ ಧೀರೋದ್ಧಾತ, ಧೀರೋದ್ಧತ ಮತ್ತು ಧೀರಲಲಿತ ನಾಯಕರ ಕತೆಗಳಿಗಿಂತಲೂ, ಹೆಗ್ಗೋಡು ಮತ್ತು ಅಲ್ಲಿನ ನೀನಾಸಮ್ ಅಂಗಳದಲ್ಲಿ ಮೆರೆದಾಡುವ ಧೀರೋದ್ಧಾತ `ನಾಯಿ’ಕೆ-`ನಾಯಿ’ಕರ ಕತೆಗಳಂತೂ ಅದ್ಭುತ, ರೋಚಕ.

ನೀನಾಸಮ್ ಪ್ರಾಂಗಣದಲ್ಲಿ ಒಂದು ರಂಗಶಾಲೆ ಇರುವುದರಿಂದ, ಅಲ್ಲಿ ಪ್ರತಿ ವರ್ಷವೂ ಸುಮಾರು ಇಪ್ಪತ್ತು ವಿದ್ಯಾರ್ಥಿಗಳು, ಸುಮಾರು ಮೂರು ತಿಂಗಳುಗಳ ಕಾಲ ತಿರುಗಾಟದ ನಟ-ತಂತ್ರಜ್ಞ ವರ್ಗದವರು, ಅಲ್ಲದೇ ಹೆಗ್ಗೋಡಿನಲ್ಲಿರುವ ಪದವಿಪೂರ್ವ ಕಾಲೇಜಿಗೆ ಕಲಿಯಲು ಬರುವ ದೂರದೂರಿನ ಮಕ್ಕಳೂ ಸೇರಿದರೆ ಅಲ್ಲಿ ಒಂದು ದಿನಕ್ಕೆ ಬಹಳಷ್ಟು ಜನರಾಗುತ್ತಾರೆ. ಅವರೊಟ್ಟಿಗೆ ಸಂಜೆ ವೇಳೆಗೆ ನೀನಾಸಮ್ ಕಛೇರಿಯ ಮುಂದಿರುವ ಅಡಿಕೆ ದಬ್ಬೆಯ ಬೆಂಚಿನ ಮೇಲೆ ಕುಳಿತು ಚಹಾ ಕುಡಿದು, ಕವಳ ಮೆಲ್ಲುತ್ತಾ ಲೋಕಾಭಿರಾಮ ಹರಟೆ ಹೊಡೆಯಲು ಬರುವ ಕೆಲವು ಊರ ಜನರೂ ಸೇರುತ್ತಾರೆ. ಈ ಇವರೆಲ್ಲರ ಚಹಾ, ತಿಂಡಿ, ಊಟಗಳನ್ನು ಪೂರೈಸಲು, ಅದಕ್ಕಿಂತಲೂ ಮುಖ್ಯವಾಗಿ ನೀನಾಸಮ್ ಶಾಲೆಯ ಮಕ್ಕಳಿಗೆ ಮೂರು ಹೊತ್ತೂ ಆಹಾರವನ್ನು ಪೂರೈಸಲು ದಿನಪೂರ್ತಿ ತೆರೆದಿರುವ ಒಂದು ಮೆಸ್ಸು ನೀನಾಸಮ್ನಲ್ಲಿ ಇದೆ. ಸುಮಾರು ಹತ್ತದಿನೈದು ವರ್ಷಗಳ ಹಿಂದೆ ಯಾರೋ ಅದಕ್ಕೆ ‘ನೀನಾಸಮ್ ಆಹಾರ್ಯ’ ಎನ್ನುವ ವಿಲಕ್ಷಣ ಹೆಸರಿಟ್ಟಿದ್ದಾರೆ. ಆ ಹೆಸರಿನ ಒಂದು ಬೋರ್ಡೂ ಅಲ್ಲಿ ನೇತಾಡುತ್ತಿರುತ್ತದೆ. ‘ನಾಟ್ಯಶಾಸ್ತ್ರ’ದಲ್ಲಿ `ಆಹಾರ್ಯ’ವೆಂದರೆ ರಂಗಪರಿಕರ, ವಸ್ತ್ರ-ಒಡವೆ, ಪ್ರಸಾಧನ ಮುಂತಾದ ಅರ್ಥಗಳನ್ನು ವ್ಯಾಖ್ಯಾನಿಸಲಾಗಿದೆ. ಏನೇ ಆಗಲಿ ವರ್ಷದಲ್ಲಿ ಹತ್ತಾರು ನಾಟಕಗಳೂ, ಸಾಹಿತ್ಯ ಸಂವಾದಗಳೂ, ಸಾಂಸ್ಕೃತಿಕ ಚಟುವಟಿಕೆಗಳೂ ನಡೆಯುವ ನೀನಾಸಮ್ಗೆ, ಅಲ್ಲಿನ ಮೆಸ್ಸೂ ಒಂಥರಾ ‘ಆಹಾರ್ಯ’ದಂತೆಯೇ ಭೂಷಣ.

ಈ ಮೆಸ್ಸು ಅಲ್ಲಿನ ವಿದ್ಯಾರ್ಥಿಗಳಿಗೆ, ನಟರಿಗೆ, ನಾಟಕೇತರ ಚಟುವಟಿಕೆಗಳ ಭಾವಸಂಗಮದ ಜಾಗವೂ ಹೌದು. ನೀನಾಸಮ್ ಮೆಸ್ಸಿನ ಕುರಿತು ನೀವು ಯಾವುದೇ ಹಳೆಯ ವಿದ್ಯಾರ್ಥಿಗಳ ಬಳಿ ಕೇಳಿದರೂ ಕಂತೆ-ಕಂತೆ ಕತೆಗಳು ಸಿಗುತ್ತವೆ. ಕಥೆಗಳು ಹುಟ್ಟುವುದು, ತಯ್ಯಾರಾಗುವುದು ಅಡುಗೆ ಮನೆಯಲ್ಲೇ ಹೆಚ್ಚಲ್ಲವೇ! ಈ ಮೆಸ್ಸನ್ನು ನಡೆಸುವ ಪಾಲಕರು ಆಗಾಗ ಬದಲಾಗಿದ್ದಾರೆ. ನನಗೆ ಗೊತ್ತಿರುವ ಹಾಗೆ ಈವರೆಗೆ ಮೂರು ಸಂಸಾರಗಳು ಅಲ್ಲಿ ಪಾಲಕರಾಗಿ ಬದಲಾಗಿವೆ. ನಾನು ವಿದ್ಯಾರ್ಥಿಯಾಗಿದ್ದಾಗ ಶ್ರೀಧರ ಎನ್ನುವವರು ಅದನ್ನು ನಡೆಸುತ್ತಿದ್ದರು. ಮೆಸ್ಸಿನ ಪಾಲಕರದ್ದು, ಅದೇ ಮೆಸ್ಸಿಗೆ ಅಂಟಿಕೊಂಡಿರುವ ಒಂದು ಕೋಣೆಯಲ್ಲೇ ವಾಸ್ತವ್ಯ. ಮೆಸ್ಸಿನ ಪಾಲಕರ ಮಕ್ಕಳು, ರಂಗಪಾಠ ಕಲಿಯುವ ನಮ್ಮೊಟ್ಟಿಗೇ ಆಡುತ್ತಾ, ಬೆಳೆಯುತ್ತಾರೆ. ಹಾಗಾಗಿ ಊರು-ಮನೆ ಬಿಟ್ಟು ಕಲಿಯಲು ವಿದ್ಯಾರ್ಥಿಗಳಿಗೆ ಮೆಸ್ಸೇ ಮನೆಯಂತಾಗುವುದು.

ನೀನಾಸಮ್ ರಂಗಶಿಕ್ಷಣ ಕೇಂದ್ರದ ಆರಂಭದ ಕಾಲದಲ್ಲಿ ತರಗತಿ ನಡೆಸಲು ಸೂಕ್ತ ಸ್ಥಳವಿನ್ನೂ ನಿರ್ಮಾಣವಾಗದ ಕಾರಣ, ಇದೇ ಮೆಸ್ಸಿನ ಹಾಲ್ ನಲ್ಲೇ ತರಗತಿಗಳು ನಡೆಯುತ್ತಿದ್ದವಂತೆ. ತರಗತಿಯ ನಂತರ ಅದು ಊಟದ ಕೋಣೆಯಾಗಿ ಬದಲಾಗುತ್ತಿತ್ತು – ಶಿವರಾಮ ಕಾರಂತರು ಆ ಮೆಸ್ಸಿನಲ್ಲಿ ಪಾಠ ಮಾಡುತ್ತಿರುವ ಒಂದು ಫೋಟೋವನ್ನು ನಾನು ಎಲ್ಲೋ ನೋಡಿದ ನೆನಪು.

ಮೆಸ್ಸಿನರೊಡನೆ ಹೆಚ್ಚು ಅನ್ಯೋನ್ಯವಾಗಿರುವ ವಿದ್ಯಾರ್ಥಿಗಳಿಗೆ ತುಸು ಹೆಚ್ಚುವರಿ ಆಹಾರಭಾಗ್ಯವೂ, ಮೆಸ್ಸಿನ ನಿರ್ವಹಣೆಯ ಬಗ್ಗೆ ಅಸಮಾಧಾನ ಇರುವವರಿಗೆ ನಿಯತವಾದ ಸಾಮಾನ್ಯಾಹಾರಭಾಗ್ಯವೂ ಫಲಿಸುವುದು ಸಹಜ ಮತ್ತು ಸಾಮಾನ್ಯ. ನನ್ನ ಬ್ಯಾಚಿನಲ್ಲಿ ಮಾತ್ರವಲ್ಲದೇ ಅನೇಕ ಬ್ಯಾಚುಗಳಲ್ಲಿ ಮೆಸ್ಸಿನವರ ಧೋರಣೆ, ಮೆನುವನ್ನು ಧಿಕ್ಕರಿಸಿ ಬೇರೆಡೆ ಊಟ-ತಿಂಡಿಯ ವ್ಯವಸ್ಥೆ ಮಾಡಿಕೊಂಡವರು ಬಹಳಷ್ಟು ಜನರಿದ್ದಾರೆ. ಮೆಸ್ಸಿನ ಊಟದ ಕಾರಣಕ್ಕೆ ಸ್ಟ್ರೈಕ್ ಮಾಡಿದವರೂ ಇದ್ದಾರೆ. ಹಿಂದೆ ಪಿ. ಲಂಕೇಶರೇ ಪತ್ರಿಕೆ ನಡೆಸುತ್ತಿದ್ದಾಗ ನೀನಾಸಮ್ ಮೆಸ್ಸಿನ ಅನನುಕೂಲತೆ ಕುರಿತು ತಮ್ಮ ಪತ್ರಿಕೆಯಲ್ಲಿ ಬರೆದಿದ್ದರಂತೆ. ಅದೇನೇ ಇರಲಿ, ನೀನಾಸಮ್ ನಲ್ಲಿ ಮೆಸ್ಸು ನಡೆಯುವುದು ಒಂದೇ ಥರ. ಪ್ರಾಯಶಃ ಅವರಲ್ಲಿರುವ ಹಣಕಾಸು ವ್ಯವಸ್ಥೆಗೆ ಅಷ್ಟೇ ಸಾಧ್ಯವೇನೋ. ಬೆಳಿಗ್ಗೆ ತಿಂಡಿಗೆ ಒಂದು ದಿನ ದೋಸೆ, ಮರುದಿನ ಇಡ್ಲಿ. ಆಗಾಗ ಹಳದಿ ಅಥವಾ ಕಂದು ಬಣ್ಣದ ಅನ್ನ. (ಅದಕ್ಕೊಂದು ಹೆಸರನ್ನು ತಿಂದವರೇ ಇಟ್ಟುಕೊಳ್ಳಬೇಕು.) ಮಧ್ಯಾಹ್ನ ಚಪಾತಿ, ಬದನೇಕಾಯಿ ಸಾರು, ಸಂಜೆಗೆ ಅದರದ್ದೇ ಪಳೆಯುಳಿಕೆ. ಅಪರೂಪಕ್ಕೆ ಒಮ್ಮೊಮ್ಮೆ ಭಾನುವಾರದಂದು ತಿಂಡಿಗೆ ಉಪ್ಪಿಟ್ಟು ಭಾಗ್ಯ, ಮಧ್ಯಾಹ್ನಕ್ಕೆ ಹುರಳೀಕಟ್ಟು ಸಾರು… ಇದಿಷ್ಟು ನಮ್ಮ ಬ್ಯಾಚಿನಲ್ಲಿ… ಹೀಗೆ. ಮನೆ-ಮಠಗಳನ್ನು ಬಿಟ್ಟು ನಾಟಕ ಕಲಿಯಲು ಹೋದ ನಮಗೆ ಅದೇ ಹೆಚ್ಚಿನದಲ್ಲವೇ! ಮೆಸ್ಸಿನ ಮೆನುಗಳ ಬಗ್ಗೆ ಹೆಚ್ಚಿನ ವಿವರಗಳು ಬೇಡ ಬಿಡಿ.

ವಿಚಿತ್ರವೆಂದರೆ ಎಷ್ಟೋ ಸಲ ನೀನಾಸಮ್ ಸಂಸ್ಥೆಯ ಕುರಿತು ಭಿನ್ನಾಭಿಪ್ರಾಯ ಇರುವವರೂ ಕೂಡ, ಮೆಸ್ಸಿನವರೊಡನೆ ಇರುವ ತಮ್ಮ ಹಳೆಯ ಸಂಬಂಧದ ನೆನಪಿಗಾಗಿ ಹೆಗ್ಗೋಡಿಗೆ ಬರುವುದೂ ಉಂಟು. ಮನೆ ಬಿಟ್ಟು ಒಂದೆರಡು ವರ್ಷ ನಾಟಕವಾಡಲು ನೀನಾಸಮ್ ಸೇರುವ ಯುವಕ-ಯುವತಿಯರಿಗೆ ಈ ಮೆಸ್ಸು ಒಂದು ರೀತಿ ತವರುಮನೆಯಿದ್ದಂತೆ. ನಾನು ವಿದ್ಯಾರ್ಥಿಯಾಗಿದ್ದಾಗ ನಾವು ಕೆಲವರು ಮೆಸ್ಸಿನವರ ಜೊತೆ ಅನ್ಯೋನ್ಯವಾಗಿದ್ದೆವು. ಹಾಗಾಗಿ ಅವರು ತಮಗಾಗಿ ಮಾಡಿಕೊಂಡ ರುಚಿಕರ ಊಟ-ಉಪಹಾರಗಳ ಪಳೆಯುಳಿಕೆಯ ಘಮಲಾದರೂ ಸೀಕ್ರೇಟಾಗಿ ನಮಗೆ ದೊರೆಯುತ್ತಿತ್ತು. ಎಷ್ಟೋ ಸಲ ನಾವು ಕೋಟಾ ಮೀರಿದ ಅಧಿಕ ಚಹಾ-ಕಾಫಿಯೇನಾದರೂ ಸಿಕ್ಕರೆ, ಆ ಒಂದು ಚಹಾ-ಕಾಫಿಯನ್ನೇ ನಾಲ್ಕಾರು ಜನ ಹಂಚಿಕೊಂಡು ಕುಡಿಯುತ್ತಿದ್ದೆವು. ನಾನು ವಿದ್ಯಾರ್ಥಿಯಾಗಿದ್ದ ವರ್ಷದಲ್ಲಿ, ದೀಪಾವಳಿ ಹಬ್ಬದ ದಿನದಂದು ನಾವೊಂದಷ್ಟು ಜನ ಮೆಸ್ಸಿನಲ್ಲಿ ಸೇರಿ ಒಬ್ಬಟ್ಟು ಮಾಡಿದ್ದು ಈಗಲೂ ನೆನಪಿನಲ್ಲಿದೆ. ಅದಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ ಮೆಸ್ಸಿನವರೇ ಕೊಟ್ಟಿದ್ದರು. ಆ ದೀಪಾವಳಿಯ ರಾತ್ರಿ ಸುಬ್ಬಣ್ಣನವರ ಮನೆಯಿಂದ ಒಂದಷ್ಟು ಪಟಾಕಿಗಳೂ ಬಂದದ್ದು, ಅದನ್ನು ನನ್ನ ಗೆಳೆಯರು ಸಿಡಿಸಿದ್ದು ಈಗ ನೆನಪು. ನನ್ನ ಈ ಕಥನಗಳಲ್ಲಿ ಉಪಕತೆಗಳೇ ಹೆಚ್ಚಾಯ್ತು. ಇರಲಿಬಿಡಿ. ಉಪ್ಪಿನಕಾಯಿ, ತೊಕ್ಕು, ಹಪ್ಪಳ ಒಂದು ಒಣಜಬ್ಬು ಇದ್ದಷ್ಟೂ ಊಟದ ರುಚಿ ಹೆಚ್ಚುತ್ತದೆ.

ಇಂತಹ ಮೆಸ್ಸೊಂದರಲ್ಲಿ ನಿತ್ಯ ತಯ್ಯಾರಾಗುವ ಆಹಾರವು ಅಧಿಕವಾಗಿ ಉಳಿದು ಹಾಳಾಗುವುದೂ, ಹಾಳುಮಾಡಲು ಬಿಡುವುದಕ್ಕಿಂತ ಅದನ್ನು ನಾಯಿ, ಪಶು, ಪಕ್ಷಿಗಳಿಗೆ ಉಣಿಸುವುದೂ ಸಹಜ. ಇದು ಒಂದೆಡೆಯಾದರೆ, ಈ ಮೆಸ್ಸಿನ ವಾತಾವರಣದಲ್ಲಿ ಅನಾಥ ನಾಯಿಮರಿಗಳು ಹೇಗಾದರೂ ಬದುಕುತ್ತವೆಂಬ ‘ಮಾನವೀಯತೆ’ಯಿಂದ ಸುತ್ತಮುತ್ತಲ ಊರಿನ ಜನರು ತಮ್ಮ ಮನೆಯಲ್ಲಿ ಹುಟ್ಟಿದ ಹೆಚ್ಚುವರಿ ನಾಯಿಮರಿಗಳನ್ನು ರಾತೋರಾತ್ರಿ ಬೈಕು-ಸೈಕಲ್ಲು-ಬ್ಯಾಗುಗಳಲ್ಲಿ ಕೊಂಡುತಂದು, ಮೆಸ್ಸಿನ ಮುಂದೆ ಇಳಿಸಿ ಮಾಯವಾಗುವರು. ಹಾಗೆ ಬೆಳಕು ಹರಿಯುವುದರೊಳಗೆ ಅವತರಿಸಿದ ತಮ್ಮ ಕುಲದ ಹೊಸ ತಲೆಮಾರಿಗೆ ಹಿರಿಯ ನಾಯಿ-ನಾಯಕರು ಕೋಪಾವಿಷ್ಟರಾಗಿ, ತಮ್ಮ ಅಸ್ತಿತ್ವ ಕಸಿಯಲು ಬಂದ ಅವರಿಗೆ ‘ಕಾಳಗ’ದ ಸ್ವಾಗತವನ್ನೇ ನೀಡುತ್ತಿದ್ದವು. ಅವರಲ್ಲೂ ಕೆಲವು ‘ಮಾನವೀಯತೆ’ಯುಳ್ಳ ‘ನಾಯಿ’ಕ ‘ನಾಯಿ’ಕೆಯರು, ಆಗಷ್ಟೇ ಕಣ್ಣುಬಿಡುತ್ತಾ, ಯಾವ ಅರ್ಹತೆಯೂ, ಸರ್ಟಿಫಿಕೇಟೂ ಇಲ್ಲದೇ, ಮತ್ತೆ ರಂಗಶಿಕ್ಷಣವನ್ನೂ ಖಂಡಿತಾ ಬಯಸದೇ, ಆಕಸ್ಮಿಕವಾಗಿ ರಂಗಶಾಲೆಗೆ ಬಂದ ಈ ಮರಿಮರಿ ರಂಗನಾಯಿಕಿ-ನಾಯಿಕರನ್ನು ರಕ್ಷಿಸಲು, ತಮ್ಮ ಸಂಗಾತಿಗಳೊಡನೆಯೇ ಹೋರಾಟಕ್ಕೆ ನಿಲ್ಲುತ್ತಿದ್ದವು. ಆ ಹೊಸ ಮರಿಗಳೋ ಹೋರಾಟವೇನೆಂದು ಅರಿಯದೆ, ತಮ್ಮನ್ನು ರಕ್ಷಿಸಿಕೊಳ್ಳಲೂ ಗೊತ್ತಾಗದೆ, ಈ ವಿಚಿತ್ರ ಸ್ವಾಗತದ ಸನ್ನಿವೇಶಕ್ಕೆ ಕಂಗಾಲಾಗಿ ಕುಂಯ್ಞ್ ಗುಡುತ್ತಾ ಕಣ್ ಕಣ್ ಬಿಡುತ್ತಿದ್ದವು. ಇತ್ತ ಹೊಸ ಸಂತಾನವನ್ನು ರಕ್ಷಿಸಲು ನಾಯಿಗಳು ಹೋರಾಡುತ್ತಿರುವ ಹೊತ್ತಿಗೇ, ಅವುಗಳ ರಕ್ಷಣೆಗೆ ನಿಜಕ್ಕೂ ರಂಗಶಿಕ್ಷಣ ಕಲಿಯಲೆಂದೇ ಬಂದ ಕೆಲವು ದೇವಮಾನವ ಸ್ವರೂಪಿ ವಿದ್ಯಾರ್ಥಿಗಳು ಆ ರಣಾಂಗಣದಲ್ಲಿ ಅವತರಿಸುತ್ತಿದ್ದರು. ತಡವಾಗಿಯಾದರೂ. ಬೆಳಗ್ಗಿನ ವ್ಯಾಯಾಮ ಮುಗಿಸಿದ ನಂತರ. ಆ ಅನಾಥ, ನವಜಾತ ನಾಯಿಮರಿಗಳನ್ನು ಮೆಸ್ಸಿನ ಆವರಣದಿಂದ ತಮ್ಮ ಹಾಸ್ಟೆಲ್ಲಿನ ಆವರಣಕ್ಕೆ ಕೊಂಡೋಯ್ದು, ಅವುಗಳ ದೇಖರೇಖಿ ಮಾಡುತ್ತಾರೆ.

ನನ್ನ ರಂಗಶಿಕ್ಷಣ ನಡೆಯುತ್ತಿದ್ದ ಕಾಲದಲ್ಲಿ ಪ್ರಾಂಶುಪಾಲರಾಗಿದ್ದ ಚಿದಂಬರರಾವ್ ಜಂಬೆ ಮತ್ತು ಅವರ ಕುಟುಂಬದವರಿಗೆಲ್ಲಾ ನಾಯಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವರ ಮನೆಯ ಹತ್ತಿರದಲ್ಲಿ ಏನಿಲ್ಲವೆಂದರೂ ಹತ್ತರಿಂದ ಹದಿನೈದು ಬೀದಿನಾಯಿಗಳು ಯಾವಾಗಲೂ ಸುಖವಾಗಿ ವಾಸಿಸುತ್ತವೆ. ಈಗಲೂ. ಆ ನಾಯಿಗಳಿಗೂ ಜಂಬೆಯವರ ಸಂಸಾರದ ಮೇಲೆ ಎಲ್ಲಿಲ್ಲದ ಪ್ರೀತಿ. ಯಾರಾದರೂ ಜಂಬೆಯವರ ಮನೆಗೆ ಹೋಗಬೇಕೆಂದರೆ ನಾಯಿಗಳು ಸ್ವತಃ ಸೃಷ್ಟಿಸಿಕೊಂಡಿರುವ ಅಭೇಧ್ಯ ಚಕ್ರವ್ಯೂಹವನ್ನು ದಾಟಿಯೇ ಹೋಗಬೇಕು. ನೀವು ದಿಲ್ ದಾರ್ ಆಗಿದ್ದರೆ, ಹೇಗೋ ಆ ಚಕ್ರವ್ಯೂಹವನ್ನು ಬೇಧಿಸಿದಿರಾದರೂ, ಅವರ ಮನೆಯೊಳಗೆ ಕಾಲಿಡುವುದಕ್ಕೆ ಜಂಬೆ ಅಥವಾ ಭಾರತಿ ಜಂಬೆಯವರ ಧ್ವನಿಯಸ್ತ್ರವಿಲ್ಲದೇ ಅಸಾಧ್ಯ. ನಾನು ಹೆಗ್ಗೋಡಿನಲ್ಲಿದ್ದ ಆ ಕಾಲದಲ್ಲಿ ಜಂಬೆಯವರ ಮನೆಯಲ್ಲಿ ‘ಮಲ್ಲಿ’ ಎನ್ನುವ ಒಂದು ಸಾಕು ನಾಯಿಯಿದ್ದದ್ದು ನೆನಪು. ಈಗ ಬೇರೆ ನಾಯಿಗಳಿವೆ. ನಾಯಿಗಳಿರಲಿ, ಜಂಬೆಯವರ ಮನೆಯ ಮಾಡಿನಲ್ಲಿ ಹಲವಾರು ದಿನಗಳವರೆಗೆ ನಾಗರಹಾವೊಂದು, ಕಣ್ಣಿಗೆ ಕಾಣುವಂತೆಯೇ ವಾಸವಾಗಿತ್ತಂತೆ. ಅದರ ವಾಸ್ತವ್ಯಕ್ಕೆ ಜಂಬೆ ದಂಪತಿಗಳೂ ಸಮ್ಮತಿಸಿ ಅವರು ನೆಮ್ಮದಿಯಾಗಿಯೇ ಇದ್ದರಂತೆ. ಅವರ ಮನೆಗೆ ಹೋಗಿ ಕಷಾಯ ಕುಡಿಯುತ್ತಿದ್ದ ಅತಿಥಿಗಳಿಗೆ ಈ ವಿಷಯ ತಿಳಿದ ಮೇಲೆ ವಿಷದ ಭಯವುಂಟಾಗಿ ಬೇಗನೇ ವಾಪಸ್ಸು ಬರುತ್ತಿದ್ದರೇನೋ ಗೊತ್ತಿಲ್ಲ.

(ಜಂಬೆಯವರ ಮನೆ)

ಮತ್ತೆ ನಾಯಿಗಳ ಕತೆಗೆ ಬರುವ. ರಾತ್ರಿ ವೇಳೆಯಲ್ಲಿ, ಸಣ್ಣ ಗುಡ್ಡದ ಮೇಲಿರುವ ಜಂಬೆಯವರ ಮನೆಯ ಕಡೆಯಿಂದ ನಾಯಿಗಳೇನಾದರೂ ಬೊಗಳುತ್ತಿವೆಯೆಂದರೆ ಅವರು ನೀನಾಸಮ್ ಕಡೆಗೆ ರಾತ್ರಿ ಗಸ್ತಿಗೆ ಬರುತ್ತಿದ್ದಾರೆ ಎಂದೇ ಅರ್ಥವಾಗಿತ್ತು. ಅವರ ಮನೆ ಗುಡ್ಡದ ಮೇಲಿರುವುದಕ್ಕೂ ನಮ್ಮ ವಾಸ್ತವ್ಯ ಸ್ವಲ್ಪ ಕೆಳಗಿರುವುದಕ್ಕೂ ಹಾಸ್ಟೆಲ್ ಗಳಲ್ಲಿ ರಾತ್ರಿಯ ಹೊತ್ತು ನಾವು ಎಬ್ಬಿಸುವ ಯಾವುದೇ ಸಂಭ್ರಮದ, ಕಲಹದ ಮಾತಿನ ಅಬ್ಬರಗಳು ಸುಲಭವಾಗಿ, ಅವರಿಗೆ ರೇಡಿಯೋಗಿಂತಲೂ ಫಾಸ್ಟಾಗಿ ತಲುಪುತ್ತಿದ್ದವು. ಆಗ ಅವರು ನೀನಾಸಮ್ ಕ್ಯಾಂಪಸ್ ಹೊಕ್ಕು, ಹುಡುಗಿಯರ ಮತ್ತು ಹುಡುಗರ ಹಾಸ್ಟೆಲ್ಲನ್ನು ಒಂದು ರೌಂಡ್ ಹಾಕಿ ಹೋಗುತ್ತಿದ್ದರೆಂಬ ಪ್ರತೀತಿಯಿತ್ತು. ನಾನೆಂದೂ ಅದನ್ನು ಕಂಡವನಲ್ಲ. ಈ ಪ್ರತೀತಿಯಿಂದಾಗಿ ಗುಡ್ಡದ ಮೇಲೆ ಒಂದು ನಾಯಿ ಬೊಗಳಿದರೂ ವಿದ್ಯಾರ್ಥಿಗಳ ಮತ್ತು ತಿರುಗಾಟದವರ ಕೋಣೆಗಳ ದೀಪಗಳು ಆರಿ, ನೀನಾಸಮ್ ಕ್ಯಾಂಪಸ್ ನಲ್ಲಿ ಒಂದು ವಿಚಿತ್ರ ಮೌನವಾವರಿಸುತ್ತಿತ್ತು. ನಿದ್ರೆ ಬರದವರು ಗೇಟು ತೆರೆಯುವ ಮತ್ತು ಮುಚ್ಚುವ ಸದ್ದಿಗಾಗಿ ಕಿವಿ ನಿಮಿರಿಸಿಕೊಂಡು ಕಾಯುತ್ತಿರುತ್ತಿದ್ದರು.

ಬೆಳಿಗ್ಗೆ ಜಂಬೆಯವರು ತಮ್ಮ ಮನೆಯಿಂದ ನೀನಾಸಮ್ ಕಡೆಗೆ ಹೊರಟರೆ ಅವರ ಸುತ್ತಲೂ ನಿಯಮಿತವಾಗಿ ನಾಲ್ಕಾರು ನಾಯಿಗಳ ಬೆಂಗಾವಲು ಪಡೆಯಿರುತ್ತಿತ್ತು. ಆ ಬೆಂಗಾವಲು ಪಡೆಯು ತಮ್ಮ ಗಡಿರೇಖೆಗೆ ಸಮೀಪ ಬರುತ್ತಿದ್ದಂತೇ, ವಿರೋಧಿ ಪಾಳೆಯದ ನಾಯಿಪಡೆಗಳು ಗುರುಗುಟ್ಟುವುದರೊಳಗೇ ಅಲ್ಲಿಂದ ಕಾಲ್ತೆಗೆಯುತ್ತಿದ್ದವು. ಆಮೇಲೆ ಮುಂದಕ್ಕೆ ಬೇರೆಯದೇ ಬೆಂಗಾವಲು ಪಡೆ. ನಂತರ ಅವರು ನೀನಾಸಮ್ ಪ್ರಾಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ, ಅಲ್ಲಿಯ ಕಣ್ಗಾವಲು ಪಡೆಯ ನಾಯಿಗಳು ಜಂಬೆಯವರನ್ನು ಸುತ್ತುವರೆದು ತಮ್ಮ ಪಾಲಿನ ಪಾರ್ಲೆ-ಜಿ ಸವಿಯುತ್ತಾ, ಬಾಲವಲ್ಲಾಡಿಸುತ್ತಾ ಜಂಬೆಯವರನ್ನು ಸ್ವಾಗತಿಸಿ ಒಳಗೆ ಕರೆತರುತ್ತಿದ್ದವು. ನಮ್ಮ ಮೆಸ್ಸಿನ ಬಳಿ ಬಹಳ ವರ್ಷಗಳ ಕಾಲ ಬದುಕಿದ್ದ ಒಂದು ಒಂಟಿಕಣ್ಣಿನ ನಾಯಿಗೆ ಜಂಬೆಯವರು ‘ಬುಡಾನ್’ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು.

***

ನಾಯಿ, ನಾಯಿಮರಿಗಳನ್ನು ಕುರಿತು ಅಪಾರ ಪ್ರೀತಿಯನ್ನು ಇರಿಸಿಕೊಂಡ ವಿದ್ಯಾರ್ಥಿಗಳಿಗೇನೂ ನೀನಾಸಮ್ ನಲ್ಲಿ ಕೊರತೆಯಿಲ್ಲ. ಹಾಗಿದ್ದವರಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನವರೆನ್ನಬಹುದು. ಮೆಸ್ಸಿನಲ್ಲಿ ಕೊಡುವ ತಮ್ಮ ಪಾಲಿನ ಊಟವನ್ನು ಸೀಕ್ರೇಟಾಗಿ ಉಳಿಸಿ, ಲೋಟದೊಳಗೆ ಇಟ್ಟುಕೊಂಡೋ ಅಥವಾ ಹೇಗೋ ಕದ್ದೊಯ್ದು, ಹಾಸ್ಟೆಲ್ಲಿನ ಬಳಿ ತಾವು ಸಾಕಿರುವ ನಾಯಿಮರಿಗಳಿಗೆ ಉಣಿಸುವುದು ಪ್ರತಿವರ್ಷ ನಡೆಯುವ ಸಹಜಕ್ರಿಯೆ. ಕೆಲವು ಹೆಣ್ಣು ಮಕ್ಕಳಂತೂ ತಮ್ಮ ಮಕ್ಕಳನ್ನೇ ಸಾಕುವಂತೆ ಅನಾಥ ನಾಯಿಮರಿಗಳನ್ನು ಸಾಕುತ್ತಾರೆ. ಅವರ ಈ ನಾಯಿ ಪ್ರೀತಿಯ ಎರಡು ಕಥನಗಳನ್ನು ಈ ಕೆಳಗೆ ಬರೆಯುತ್ತೇನೆ.

(‘ರಾಜಾ’ನೊಂದಿಗೆ ತೇಜು ಬೆಳವಾಡಿ)

‘ಟಿಂಕು’ ಎಂಬ ಬೀದಿನಾಯಿ ‘ರಾಧೆ’
ಬೇಂದ್ರೆಯವರ ಒಂದು ಕವಿತೆ ಹೀಗೆ ಆರಂಭವಾಗುತ್ತದೆ…
‘ಬೀದಿನಾಯಿ ರಾಧೆಗೆ ಹೊಟ್ಟೆತುಂಬ ಮೊಲೆಗಳು… ಊರತುಂಬ ಗೆಳೆಯರು’

ಕವಿತೆಯ ಸಾಲಿನಂತೆ ನಾಯಿಯ ಹೊಟ್ಟೆಯು ಹಸಿವನ್ನು ಪ್ರತಿನಿಧಿಸಿದರೆ, ಅದೇ ಹೊಟ್ಟೆಯಲ್ಲಿ ಜೋಲಾಡುವ ರಾಧೆಯ ಮೊಲೆಗಳು ಹಸಿವನ್ನು ತಣಿಸುವ ಜೀವಸಲೆಗಳಾಗಿವೆ. ಆಹಾರ ಅಗತ್ಯವಿರುವ ಹೊಟ್ಟೆಯನ್ನು ಮತ್ತು ಹಸಿವನ್ನು ತಣಿಸುವ ಜೀವರಸದ ಮೊಲೆಗಳನ್ನು ‘ರಾಧೆ’ಯೆನ್ನುವ ಈ ಬೀದಿನಾಯಿಯು ತನ್ನ ಬಡದೇಹದಲ್ಲಿ ಒಟ್ಟಿಗೇ ಇರಿಸಿಕೊಂಡು ಒಂದು ರೂಪಕವಾಗಿ, ಒಬ್ಬ ಮಹಾತಾಯಿಯ ಪ್ರತಿಮೆಯಾಗಿದ್ದಾಳೆ.

2016ನೇ ಸಾಲಿನ ವಿದ್ಯಾರ್ಥಿಗಳಿಗೆ ನಾನು ವಿವೇಕ ಶಾನಭಾಗರ ‘ಬಹುಮುಖಿ’ ನಾಟಕವನ್ನು ನಿರ್ದೇಶಿಸುತ್ತಿದ್ದೆ. ಆ ತಂಡದಲ್ಲಿ ಪಯಸ್ವಿನಿ ಎನ್ನುವ ಮಂಗಳೂರಿನ ಹುಡುಗಿಯೊಬ್ಬಳಿದ್ದಳು. ನಾನು ಮಾಡಿಸುತ್ತಿದ್ದ ವ್ಯಾಯಾಮಗಳಲ್ಲಿ ಅವಳು ಸಹಜವಾಗಿ ಭಾಗವಹಿಸುತ್ತಿರಲಿಲ್ಲ. ಕಾರಣ, ಈ ಹಿಂದೆ ತರಗತಿಗಳಲ್ಲಿ ಮಾಡಿದ ಕೆಲವು ವ್ಯಾಯಾಮಗಳಿಂದಾಗಿ ಅವಳಿಗೆ ಮಂಡಿ ಚಿಪ್ಪಿನಲ್ಲಿ ಸಮಸ್ಯೆ ಉಂಟಾಗಿ, ಸ್ವಲ್ಪ ಕುಂಟುತ್ತಲೇ ಓಡಾಡುತ್ತಿದ್ದಳು. ಆಕೆಗೆ ಹೆಚ್ಚಿನ ಆರಾಮ ಮತ್ತು ಚಿಕಿತ್ಸೆಯ ಅಗತ್ಯ ಇದ್ದುದರಿಂದ ಆಕೆ ಊರಿಗೆ ಹೋಗಬೇಕಾಯ್ತು. ಸುಮಾರು ಒಂದೂವರೆ ತಿಂಗಳು ನಡೆದ ಆ ತಾಲೀಮಿನಿಂದ ಆಕೆ ದೂರ ಉಳಿದಳು.

ಸುಮಾರು ಎರಡು ತಿಂಗಳ ನಂತರ ವಾಪಸ್ಸು ಬಂದ ಪಯಸ್ವಿನಿಗೆ, ತನ್ನ ಸಹಪಾಠಿಗಳೆಲ್ಲಾ ಬದಲಾಗಿದ್ದಾರೆ ಎನ್ನಿಸಿತು. ಅವರೆಲ್ಲಾ ತಾನಿಲ್ಲದಿರುವಾಗ ಬಹಳಷ್ಟು ಕಲಿತಿದ್ದಾರೆ ಎನ್ನಿಸಿತು. ಹಾಗೆ ತಂಡ ಬಿಟ್ಟು ಹೋಗಿ ದೀರ್ಘ ಕಾಲದ ನಂತರ ಮತ್ತೆ ತಂಡಕ್ಕೆ ವಾಪಸ್ಸಾದಾಗ ಹಾಗನ್ನಿಸುವುದು ಸಹಜವೇ. ತಾನು ಏಕಾಂಗಿಯಾದಂತೆನಿಸಿ ಆಕೆ ಕೆಲವು ದಿನ ತಂಡದ ಸದಸ್ಯರಲ್ಲಿದ್ದ ಹುರುಪನ್ನು ಮುಟ್ಟಲಾರದೆ, ಅದನ್ನು ಅನುಭವಿಸಲಾಗದೆ ಹಪಹಪಿಸಿದಳು. ತಂಡದ ಬದಲಾದ ಮನೋಗುಣವನ್ನು ಅರಿತು ಅವರೊಡನೆ ಒಂದಾಗುವ ಪ್ರಯತ್ನದಲ್ಲಿ ಆಕೆಯಿದ್ದಳು. ಆಕೆಯ ಏಕಾಂಗಿತನದ ಭಾವಗಳನ್ನು ಹಂಚಿಕೊಳ್ಳಲು ಯಾವ ಗೆಳೆಯ ಗೆಳತಿಯರು ಇಲ್ಲವೆನ್ನಿಸಿತು. ಆಗ ಆಕೆಗೆ ಸಿಕ್ಕ ‘ನಾಯಿ’ಕೆ ಗೆಳತಿ ‘ಟಿಂಕೂ’. ಇದು ಆಕೆಯೇ ಇಟ್ಟ ಹೆಸರು. ಆಕೆಯ ಹೃದಯ ಸಂವಾದಗಳನ್ನು ಅರಿಯಬಲ್ಲಂತಹ ಆ ಸಹಧರ್ಮಿಣಿಯನ್ನು ಆಕೆ ನಿತ್ಯ ಪೋಷಿಸತೊಡಗಿದಳು. ಅದರೊಡನೆ ಸಂವಾದದಲ್ಲಿ ತೊಡಗಿದಳು. ಆಕೆಯ ಏಕಾಂತಕ್ಕೆ ಟಿಂಕೂ ಸಾಥಿಯಾಗತೊಡಗಿತು. ಆದರೆ ಪ್ರತಿದಿನ ಸಂಜೆಗಳಲ್ಲಿ ಆ ಟಿಂಕೂ ಅದೆಲ್ಲೋ ಮಾಯವಾಗಿ ಮತ್ತೆ ರಾತ್ರಿಗಳಲ್ಲಿ ಧುತ್ತನೆ ಪ್ರತ್ಯಕ್ಷವಾಗುತ್ತಿತ್ತು. ಮೆಸ್ಸಿನಲ್ಲಿ ರಾತ್ರಿ ಊಟದ ನಂತರ ಪಯಸ್ವಿನಿ ಲೋಟದಲ್ಲಿ ಅಡಗಿಸಿಟ್ಟುಕೊಂಡು ಬರುವ ಚಪಾತಿ ಮತ್ತು ಸ್ವಲ್ಪ ಅನ್ನಕ್ಕಾಗಿ ಅದು ಬಾಲವಲ್ಲಾಡಿಸುತ್ತಾ ಕಾಯುತ್ತಿರುತ್ತಿತ್ತು. ಹಗಲೆಲ್ಲಾ ಆಕೆ ಎಲ್ಲಿ ಹೋದರೆ ಅಲ್ಲಿ ಹಿಂಬಾಲಿಸುತ್ತಾ, ಮೂಸುತ್ತಾ, ನೆಕ್ಕುತ್ತಾ ತನ್ನ ಪ್ರೀತಿಯನ್ನು ಧಾರೆಯೆರೆಯುತ್ತಿತ್ತು. ಆದರೆ ‘ಗೊಂಬೆಮನೆ’ಯಲ್ಲಿ ಅವರ ತರಗತಿಗಳು ನಡೆಯುತ್ತಿರುವಾಗ ಅಪ್ಪಿತಪ್ಪಿಯೂ ಅದು ಒಳಗೆ ಪ್ರವೇಶಿಸದೆ, ಬಾಗಿಲ ಬಳಿಯೇ ಮಲಗಿ ಕಾಯುತ್ತಾ, ಅಲ್ಲಿಯೇ ತನ್ನ ರಂಗಪಾಠವನ್ನು ಕಲಿಯುತ್ತಿತ್ತು. ಯಾರಾದರು ಕರೆಯದ ಹೊರತು ಅದು ತರಗತಿಯ ಒಳಗೆ ಬರುತ್ತಿರಲಿಲ್ಲ. ಕಡೇ ಪಕ್ಷ ಅಷ್ಟು ಶಿಸ್ತನ್ನು ಟಿಂಕೂ ನೀನಾಸಮ್ ನಲ್ಲಿ ಕಲಿತಿತ್ತು.

(ಬಾಗಿಲಲ್ಲಿ ಮಲಗಿ ರಂಗಶಿಕ್ಷಣ ಪಡೆಯುತ್ತಿರುವ ನಾಯಿಮರಿ)

ಮಧ್ಯಾಹ್ನದ ಊಟದ ಬಿಡುವಿನಲ್ಲಿ ಪಯಸ್ವಿನಿ ಮತ್ತು ಟಿಂಕೂ ಇವರ ಆಟ ಬೇರೆಯವರಿಗೆ ಮನರಂಜನೆ ಒದಗಿಸುತ್ತಿತ್ತು. ಅವರಿಬ್ಬರೂ ಬಗೆಬಗೆಯ ಆಟಗಳನ್ನಾಡುತ್ತಾ, ಸೆಲ್ಫಿ ತೆಗೆದುಕೊಳ್ಳುತ್ತಾ ಆನಂದದಾಯಕ ಸಮಯ ಕಳೆಯುತ್ತಿದ್ದರು. ಅದೇ ಸಮಯದಲ್ಲಿ ನೆದರ್ಲ್ಯಾಂಡ್ನಿಂದ ಪಪೆಟ್ ರಂಗಭೂಮಿಯ ತರಬೇತಿ ನೀಡಲು ಬಂದಿದ್ದ ಮೋನಿಕ್ ಮತ್ತು ಎವ್ ಲಿನ್ ಎನ್ನುವವರೂ ಈ ಟಿಂಕೂವಿನ ಗೆಳತಿಯರಾದರಂತೆ. ಎಷ್ಟರ ಮಟ್ಟಿಗೆ ಎಂದರೆ, ಅವರು ಇದ್ದಷ್ಟು ದಿನ ಟಿಂಕೂಳನ್ನು ತಮ್ಮ ರೂಮಿನಲ್ಲೇ ಸಾಕಿಕೊಂಡಿದ್ದರಂತೆ. ಕೊನೆಗೆ ಅವರು ಹೊರಡುವ ಸಮಯ ಬಂದಾಗಲೇ ಟಿಂಕೂ ಮತ್ತೆ ಪಯಸ್ವಿನಿಯ ಜೊತೆಗೆ ಮತ್ತೆ ಸಂಸಾರ ಬೆಳೆಸಿದ್ದು.

ಅದಾದ ಮೇಲೆ ಇದ್ದಕ್ಕಿದ್ದಂತೆ ಒಮ್ಮೆ, ಸುಮಾರು ಒಂದು ವಾರಗಳ ಕಾಲ ಟಿಂಕೂ ನೀನಾಸಮ್ ಆವಾರದಲ್ಲಿ ಕಾಣಿಸಿಕೊಳ್ಳಲಿಲ್ಲ. ಪಯಸ್ವಿನಿ ತನ್ನ ಸಂಗಾತಿಗಾಗಿ ಯಾವ ಮೂಲೆಗಳಲ್ಲಿ ಹುಡುಕಿದರೂ ಟಿಂಕೂಳ ಇರವಿನ ಸೂಚನೆ ದೊರೆಯಲಿಲ್ಲ. ಗೆಳತಿಯನ್ನು ಕಳೆದುಕೊಂಡ ದುಗುಡ ಆಕೆಯನ್ನು ಆವರಿಸಿ, ತನ್ನ ಸಹವರ್ತಿಗಳೊಡನೆ ಮಾತಾಡುವುದನ್ನು ಕಡಿಮೆ ಮಾಡಿದಳು. ಪಯಸ್ವಿನಿಯ ಅನ್ಯಮನಸ್ಕತೆಯನ್ನು ಗಮನಿಸಿದ ಅವಳ ಸಹಪಾಠಿ ಪೀರಪ್ಪ, ಅದು ಬೇರೆಡೆ ಎಲ್ಲಾದರೂ ಸುರಕ್ಷಿತ ಜಾಗಕ್ಕೆ ತೆರಳಿ ಅಲ್ಲಿ ಮರಿ ಹಾಕಿರಬಹುದೆಂಬ ಸೂಚನೆ ನೀಡಿದ. ಅಷ್ಟೇ, ಪಯಸ್ವಿನಿಯ ಉತ್ಸಾಹ ಇಮ್ಮಡಿಯಾಯಿತು. ಆಕೆಯ ಗೆಳೆಯ-ಗೆಳತಿಯರು ಟಿಂಕೂ ತಾನು ಮರಿಗಳನ್ನು ಹೆತ್ತ ಸಂತೋಷಕ್ಕಾಗಿ ಟ್ರೀಟ್ ಕೊಡಿಸಬೇಕೆಂದು ಕಾಡಹತ್ತಿದರು. ಮರಿಗಳನ್ನು ಹೆತ್ತ ತನ್ನ ಗೆಳತಿಯನ್ನು ಕಾಣಲು ಪಯಸ್ವಿನಿ ಬಿಡುವಿನ ಸಮಯದಲ್ಲೆಲ್ಲಾ ಹೆಗ್ಗೋಡಿನ ಗಲ್ಲಿಗಲ್ಲಿ, ಮನೆಮನೆಗಳ ಮೂಲೆಮೂಲೆಗಳನ್ನು ತಡಕಾಡತೊಡಗಿದಳು. ಕಡೆಗೊಂದು ಮನೆಯ ಮುಂದೆ ನಿಂತು ವಿಚಾರಿಸಿದಾಗ, ಅವರು ಅದು ತಮ್ಮ ಹಿತ್ತಿಲಲ್ಲೇ ಮರಿ ಹಾಕಿರುವುದಾಗಿ ಹೇಳಿದರು. ಉದ್ವೇಗದಿಂದ ಪಯಸ್ವಿನಿ ಏರುದನಿಯಲ್ಲಿ ‘ಟಿಂಕೂ’ ಎಂದು ಕೂಗತೊಡಗಿದಳು. ತಾಯ ಕರೆಗೆ ಮಗು ಓಗುಡುವಂತೆ ಟಿಂಕೂ ಬಾಲವಾಡಿಸುತ್ತಾ ಹಿತ್ತಲಿನಿಂದ ಓಡಿಬಂತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರು ತಮ್ಮ ಅಗಲಿಕೆಯ, ಭೇಟಿಯ ಕುರಿತು ಮಾತಾಡಿದರಂತೆ. ಟಿಂಕೂ ತಾನು ತನ್ನ ಮಕ್ಕಳನ್ನು ಪಯಸ್ವಿನಿಗೆ ತೋರಿಸುವ ಉತ್ಸಾಹದಲ್ಲಿದ್ದಳು. ಆದರೆ ಪಯಸ್ವಿನಿಗೆ, ಅಕಸ್ಮಾತ್ ಅವೆಲ್ಲವೂ ತನ್ನನ್ನು ಹಿಂಬಾಲಿಸಿದರೆ ಏನು ಮಾಡುವುದೆನ್ನುವ ಭಯ ಆವರಿಸಿತು. ಟಿಂಕೂನ ಪೂರಾ ಸಂಸಾರವನ್ನೆಲ್ಲ ಸಾಕಲಾಗದ ತನ್ನ ಅಸಾಹಯಕತೆಯನ್ನು ಮನಬಿಚ್ಚಿ ತನ್ನ ಗೆಳತಿಗೆ ಹೇಳಿಕೊಂಡ ಮೇಲೆ ಟಿಂಕೂ ಮರುಮಾತಾಡದೆ ಹಿತ್ತಿಲಿಗೆ ಹೋಯ್ತಂತೆ. ಭಾರವಾದ ಮನಸ್ಸಿನಿಂದ ಪಯಸ್ವಿನಿ ವಾಪಸ್ಸಾದಳು.

(ಮೆಸ್ಸಿನ ಹೊರನೋಟ)

ಆ ನಂತರದಲ್ಲಿ ಟಿಂಕೂ ನೀನಾಸಮ್ ಆವರಣಕ್ಕೆ ಅಪರೂಪಕ್ಕೊಮ್ಮೆ ಬಂದು ಪಯಸ್ವಿನಿಯನ್ನು ಕಂಡು ವಾಪಸ್ಸಾಗುತ್ತಿತ್ತಂತೆ. ಹೆಚ್ಚಿನ ಸಮಯ ಅವರು ನೀನಾಸಮ್ ಆವರಣದ ಹೊರಗೇ ಭೇಟಿಯಾಗುತ್ತಿದ್ದರು. ಟಿಂಕೂಳ ಮಕ್ಕಳೊಂದಿಗೆ ಕಾಲವೂ ಬೆಳೆಯುತ್ತಿತ್ತು. ತನ್ನ ಪಾಲಿನ ಚಪಾತಿಯನ್ನೋ ಅಥವಾ ಕೊಂಡುತಂದ ಬ್ರೆಡ್ಡಿನ ತುಣುಕನ್ನೋ ಕೈಲಿಟ್ಟುಕೊಂಡು ನಟರು ದನಿಯ ಅಭ್ಯಾಸ ಮಾಡುವಂತೆ ಪಯಸ್ವಿನಿ ‘ಟಿಂಕೂ’ ಎಂದು ಕೂಗಿದಾಗಲೆಲ್ಲಾ ಅದು ಅದೆಲ್ಲಿಂದಲೋ ಓಡೋಡಿ ಬರುತ್ತಿತ್ತು. ಮರಿಗಳೊಂದಿಗಳಾದ ಟಿಂಕೂ, ಈಕೆ ಕೊಟ್ಟ ಸಣ್ಣ ತುಣುಕು ಆಹಾರ ಕಡಿಮೆಯಾಯಿತೆಂದು ಎಂದೂ ತನ್ನ ಪ್ರೀತಿಯನ್ನು ಕಡಿಮೆ ಮಾಡಲಿಲ್ಲ. ಕೆಲವೊಮ್ಮೆ ಆಹಾರ ನೀಡದಿದ್ದರೂ ಕೂಡ ಬೇಸರಿಸಲಿಲ್ಲ.
ಹಸಿವಿಗೆ ಅಳತೆ-ಆಕಾರಗಳಿಲ್ಲ. ರೂಪ-ರುಚಿಗಳಿಲ್ಲ. ಮರಾಠಿ ಲೇಖಕ ಶರಣಕುಮಾರ್ ನಿಂಬಾಳ್ಕರ್ ಅವರು ತಮ್ಮ ಆತ್ಮಕತೆ ‘ಅಕ್ಕರಮಾಶಿ’ಯಲ್ಲಿ ಹೇಳಿಕೊಂಡಂತೆ – “ಹಸಿದ ಹೊಟ್ಟೆಯೆನ್ನುವುದೊಂದು ಸ್ಮಶಾನದಂತೆ, ಅದು ಹುಗಿದಷ್ಟೂ ಹೆಣಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತದೆ. ಸಣ್ಣದಿರಲೀ ಯಾ ದೊಡ್ಡದೇ ಆಗಿರಲಿ, ಅಲ್ಲದೇ ಮತ್ತೂ ಬೇಕುಬೇಕೆನ್ನುತ್ತದೆ.’’

ಶಿವರಾಮ ಕಾರಂತರು ತಮ್ಮ ‘ವಿಜ್ಞಾನ ಪ್ರಪಂಚ’ ಎನ್ನುವ ಅಪರೂಪದ ವಿಶ್ವಕೋಶದಲ್ಲಿ ಪ್ರಾಣಿಗಳ ಭಾವ ಜೀವನದ ಬಗ್ಗೆ ಬರೆಯುತ್ತಾ, ತಮ್ಮ ಅನುಭವಕ್ಕೆ ಬಂದ ಸ್ನೇಹಿತರ ನಾಯಿಯೊಂದರ ಭಾವಪ್ರಪಂಚವನ್ನು ಕುರಿತ ಒಂದು ಪ್ರಸಂಗವನ್ನು ಹೀಗೆ ವಿವರಿಸಿದ್ದಾರೆ:

“ನನ್ನ ನೆರೆಯ ಗ್ರಾಮದಲ್ಲಿ, ನನ್ನ ಮಿತ್ರರೊಬ್ಬರು ಮೂರು ನಾಲ್ಕು ನಾಯಿಗಳನ್ನು ಸಾಕುತ್ತಿದ್ದರು. ಅವುಗಳಲ್ಲಿ ಎರಡು ಹೆಣ್ಣು ನಾಯಿಗಳಿದ್ದುವು. ಒಂದು ಹೆಣ್ಣು ನಾಯಿ ಮರಿಯಿಟ್ಟಿತು. ಆಗ ನನ್ನ ಮಿತ್ರರು ಈ ಮರಿಗಳಿಂದ ತುಂಬ ತೊಂದರೆಯಾಗುತ್ತದಲ್ಲ ಎಂದು, ಆವತ್ತು ಮರಿಗಳನ್ನು, ತಮ್ಮ ಸಮೀಪದ ಮಿತ್ರರೊಬ್ಬರಿಗೆ ಕೊಟ್ಟರು. ಅಲ್ಲಿಂದ ಮುಂದೆ ಆ ಹೆಣ್ಣು ನಾಯಿ ನಿತ್ಯವೂ ಬಕಬಕನೆ ಆಹಾರ ತಿನ್ನುತ್ತಿದ್ದರೂ, ಸೊರಗುತ್ತಿರುವುದು ಕಾಣಿಸಿತು. ಅಲ್ಲದೆ ಪ್ರತಿದಿನವೂ ಉಂಡೊಡನೆ ಅದು ಓಡಿ ಕಣ್ಮರೆಯಾಗುವುದು ತಿಳಿದು ಬಂತು. ‘ಇದೆಲ್ಲಿಗೆ ಹೋಗುತ್ತದೆ?’ ಎಂಬ ಕುತೂಹಲದಿಂದ ನನ್ನ ಮಿತ್ರರು ಆ ನಾಯಿಯನ್ನು ಹಿಂಬಾಲಿಸಿದರು. ಆಗ ಅದರ ರಹಸ್ಯ ತಿಳಿಯಿತು; ನಾಯಿ ತನ್ನ ಮರಿಗಳಿದ್ದ ಮನೆಯನ್ನು ಕಂಡುಹಿಡಿದು, ಅಲ್ಲಿಗೆ ಧಾವಿಸಿ, ತಿಂದ ಅನ್ನವನ್ನೆಲ್ಲ ಕಕ್ಕಿ, ಆ ಮರಿಗಳಿಗೆ ಉಣಿಸು ಕೊಟ್ಟು ಬರುತ್ತಿತ್ತು. ಇಂಥ ವಿಚಕ್ಷಣ ಮಾತೃಪ್ರೇಮ ಒಂದು ಭಾವ ವಿಶೇಷವಲ್ಲವೇ?’’

***
ಇದೇ ಪಯಸ್ವಿನಿ, ಯಾರೋ ಬಿಟ್ಟು ಹೋಗಿದ್ದ ಮತ್ತೊಂದು ನಾಯಿಗೆ ‘ಜಿಂಗಿ’ ಎಂಬ ಹೆಸರನ್ನಿಟ್ಟು ಅದನ್ನು ಸಾಕಿದ್ದಳು. ಆ ನಾಯಿಯೋ ತಾನು ಪ್ರಾಯಕ್ಕೆ ಬರುವ ದಿನಗಳಲ್ಲಿ – ವಿದ್ಯಾರ್ಥಿಗಳೆಲ್ಲಾ ಸಭಾಭವನದಲ್ಲಿ ಕೋಲುಗಳೊಂದಿಗೆ ಕೋಲಾಟವಾಡುತ್ತಿದ್ದರೆ, ತಾನು ವಿದ್ಯಾರ್ಥಿ-ಶಿಕ್ಷಕರ ಚಪ್ಪಲಿಗಳನ್ನು ಕಚ್ಚಿ ಒಯ್ದು, ಸಭಾಭವನದ ಹಿಂದಿರುವ ‘ಗೊಂಬೆಮನೆ’ಯಲ್ಲಿ ಆ ಚಪ್ಪಲಿಗಳ ಜೊತೆ ಚಪ್ಪಲಿಯಾಟ ಆಡುತ್ತಿತ್ತಂತೆ. ಪ್ರತಿದಿನ ಇದೇ ಆಟ. ಕೋಲಾಟ ಮುಗಿಸಿದ ವಿದ್ಯಾರ್ಥಿಗಳಿಗೆ ತಮ್ಮ ಹಸಿದ ಹೊಟ್ಟೆಗಳಿಗೆ ದೋಸೆ, ಇಡ್ಲಿ, ಚಿತ್ರಾನ್ನವನ್ನೋ ಹೊಟ್ಟೆಗೆ ಸೇರಿಸುವ ತರಾತುರಿ. ಅಂತಹ ಸಮಯದಲ್ಲಿ ತಮ್ಮ ಚಪ್ಪಲಿಗಳು ಬಿಟ್ಟಲ್ಲಿ ಇಲ್ಲದಿರಲು ಅವರ ಸಿಟ್ಟು ನೆತ್ತಿಗೇರುತ್ತಿತ್ತು. ಮೊದಲು ಹೊಟ್ಟೆಯನ್ನು ತಣಿಸಬೇಕಾದ್ದರಿಂದ ಅವರು ಬರಿಗಾಲಲ್ಲಿ ಮೆಸ್ಸಿಗೆ ನಡೆದು ಹೋಗುತ್ತಿದ್ದರು. ನಂತರ ತರಗತಿಯಲ್ಲಿ ಎಲ್ಲರೂ ಒಟ್ಟಿಗೇ ತಮ್ಮ ಸಿಟ್ಟನ್ನು ಪಯಸ್ವಿನಿಯ ಮೇಲೆ ತೋರುತ್ತಿದ್ದರು. ಸಿನೆಮಾದಲ್ಲಿ ನಡೆಯುವಂತೆ ‘ನೀನೋ? ನಾಯಿಯೋ’ ಎನ್ನುವವರೆಗೆ ವಾಗ್ವಾದಗಳು ನಡೆದು, ಆಕೆಯನ್ನು ಸೋಲಿಸಿದರು. ‘ಮಾತು ಆಡಿದರೆ ಹೋಯ್ತು… ನಾಯಿ ಬಿಟ್ಟರೆ ಹೋಯ್ತು…’ ಎನ್ನುವ ಗಾದೆಯನ್ನು ಆಕೆ ಮನದಲ್ಲೇ ಕಟ್ಟಿಕೊಂಡು, ವಿಧಿಯಿಲ್ಲದೇ ತನ್ನ ಜಿಂಗಿ ಮರಿಗಾಗಿ ತನ್ನ ಚಪ್ಪಲಿಗಳನ್ನೇ ಆಟವಾಡಲು ಕೊಟ್ಟು ತರಗತಿಯಲ್ಲಿ ಎಲ್ಲರಿಗೂ ತನ್ನ ಬರಿಗಾಲು ತೋರಿಸುತ್ತಾ ಕೂರುತ್ತಿದ್ದಳಂತೆ.

‘ಮೇಕಪ್ ಮಾಸ್ತರ್’ ಎಂದೇ ಖ್ಯಾತರಾಗಿದ್ದ ಬಿಳಿಕೂದಲು ನಾಣಿ ಮೇಷ್ಟ್ರ ಮೊಮ್ಮಗಳು ತೇಜು. ತೇಜೂ ಬೆಳವಾಡಿ. ಅವಳೂ ನೀನಾಸಮ್ ನಲ್ಲೇ ಕಲಿತವಳು. ನಾನು ಅವಳ ಬ್ಯಾಚಿಗೆ ವಿನ್ಯಾಸದ ತರಗತಿಯನ್ನು ತೆಗೆದುಕೊಳ್ಳುತ್ತಿದ್ದೆ. ಬೆಳ್ಳಂಬೆಳಿಗ್ಗೆ ನಾನು ಎಲ್ಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ತಮ್ಮ ಸ್ಕೆಚ್ ಪ್ಯಾಡ್ನಲ್ಲಿ ಸುತ್ತಮುತ್ತಲಿನ ತಮ್ಮ ಪರಿಸರದಲ್ಲಿ ಕಾಣುವುದನ್ನು ರೇಖೆಗಳಲ್ಲಿ ಚಿತ್ರಿಸಲು ಸೂಚಿಸುತ್ತಿದ್ದೆ. ಈ ತೇಜು, ಯಾವುದೇ ಪ್ರಾಣಿಗಳ ಚಿತ್ರ ಬರೆದರೂ ಅದು ನಾಯಿಯಂತೆಯೇ ಕಾಣುತ್ತಿತ್ತು! ತರಗತಿಗೆ ತಡವಾದರೂ ತೊಂದರೆಯಿಲ್ಲ, ಆದರೆ ತಾನು ಸಾಕಿಕೊಂಡಿದ್ದ ‘ರಾಜ’ ಮತ್ತು ‘ಸುಬ್ಬಿ’ಯರಿಗೆ ಏನಾದರೂ ತಿನಿಸದ ಹೊರತು ಆಕೆ ತರಗತಿಗೆ ಬರುತ್ತಿರಲಿಲ್ಲ. ಅವಳ ಈ ‘ಪ್ರೇಮದ ಕಾಣಿಕೆ’ಗಾಗಿ ರಾಜ-ಸುಬ್ಬಿಯರು ಅವಳ ಹಿಂಬಾಲನ್ನು ಯಾವತ್ತೂ ಬಿಡುತ್ತಿರಲಿಲ್ಲ. ತನ್ನ ‘ಹೋಂ ಸಿಕ್ನೆಸ್’ಅನ್ನು ಈ ನಾಯಿಗಳ ಮೂಲಕ ತೇಜು ಗುಣಪಡಿಸಿಕೊಳ್ಳುತ್ತಿದ್ದಳು. ತನ್ನ ‘ಅಲ್ಲಿರದ ಮನೆ’ಯ ಹಂಬಲವನ್ನು ಮರೆಸಲು ಈ ರಾಜ-ಸುಬ್ಬಿಯರು ಅವಳ ಸಂಗಾತಿಗಳಾಗಿ ಸಹಾಯಕವಾಗಿದ್ದವು. ಅಕಸ್ಮಾತ್ ಸುಬ್ಬಿ ತೀರಿಕೊಂಡಾಗ ತೇಜು ದಿನವಿಡೀ ಅಳುತ್ತಾ ರಂಗಶಿಕ್ಷಣದ ಬಗ್ಗೇ ನಿರಾಸಕ್ತಳಾಗಿದ್ದಳು. ಮನೆಗೆ ಹೋಗಬೇಕೆಂಬ ಹುಟ್ಟೊಲವು ಅವಳನ್ನು ಸೆಳೆಯುತ್ತಿತ್ತು. ಅವಳು ನಾಯಿಗಳಿಂದ ರಂಗಶಿಕ್ಷಣ ಕಲಿಯುತ್ತಿದ್ದಳೋ ಅಥವಾ ನಾಯಿಗಳಿಗಾಗಿ ಅಲ್ಲಿಗೆ ಬಂದಿದ್ದಳೋ ಗೊತ್ತಿಲ್ಲ. ಆದರೆ ಅವಳ ನಾಯಿ ಪ್ರೀತಿಯಂತೂ ಅನನ್ಯವಾದದ್ದು.

(ಲೇಖಕರ ತರಗತಿಯಲ್ಲಿ ವಿದ್ಯಾರ್ಥಿಗಳೊಟ್ಟಿಗೆ ಟಿಂಕು)

ಒಮ್ಮೆ ಮಂಜು ಕೊಡಗು ನಿರ್ದೇಶನದ ನಾಟಕದಲ್ಲಿ ಆಕೆ ಪಾತ್ರ ಮಾಡುವಾಗ ತಾಲೀಮಿನಲ್ಲಿ ಈ ಸುಬ್ಬಿಯೂ ರಂಗವನ್ನೇರಿ ತೇಜುವಿನ ಹಿಂದಿಂದೆಯೇ ಓಡಾಡಹತ್ತಿದಳು. ಪ್ರಾಯಶಃ ಟಿಂಕೂ ನಾಯಿಗಿದ್ದ ರಂಗಶಿಕ್ಷಣ, ಈ ಸುಬ್ಬಿಗೆ ಇನ್ನೂ ದೊರೆತಿರಲಿಲ್ಲವೇನೋ. ಆ ದಿನ ತಾಲೀಮಿಗೆ ತಡವಾಗಿ ಬಂದಿದ್ದ ತೇಜುವಿನ ಜೊತೆ, ಬಾಲದಂತೆ ರಂಗದ ಮೇಲೆಲ್ಲಾ ಅವಳನ್ನು ಹಿಂಬಾಲಿಸುತ್ತಿದ್ದ ಸುಬ್ಬಿಯನ್ನು ಕಂಡು ನಿರ್ದೇಶಕರಿಗೆ ಸಿಟ್ಟು ನೆತ್ತಿಗೇರಿತ್ತು. ‘ನೀನು… ನಿನ್ನ ನಾಯಿ ಇಬ್ಬರನ್ನೂ ಆಚೆಗೆ ಹಾಕುತ್ತೇನೆ’ ಎಂದು ಕೂಗಾಡಿದರು. ಆಗ ಸುಬ್ಬಿಗೆ ರಂಗಶಿಸ್ತನ್ನು ಅರ್ಥ ಮಾಡಿಸಲು ತೇಜುವಿಗೆ ಸುಮಾರು ಅರ್ಧ ಗಂಟೆ ಕಾಲ ಹೆಣಗಾಡಬೇಕಾಯ್ತಂತೆ. ಆ ಶಿಸ್ತನ್ನು ಅರ್ಧಂಬರ್ಧ ಅರಿತ ಆ ಸುಬ್ಬಿ, ಆದರೂ ಆಗಾಗ ತಾಲೀಮಿನಲ್ಲಿ ದಿಢೀರನೆ ಅವತರಿಸಿ, ನಿರ್ದೇಶಕರನ್ನೂ, ಮೇಲಾಗಿ ತೇಜುವನ್ನೂ ಕಂಗೆಡಿಸುತ್ತಿತ್ತಂತೆ.

***
ಹೀಗೆ ನೀನಾಸಮ್ನ ಲೇಡಿಸ್-ಜೆಂಟ್ಸ್ ಹಾಸ್ಟೆಲ್ನ ಬಳಿ ಬೆಳೆದು ವಾಸವಾಗುವ ಈ ನಾಯಿಗಳು ಅಲ್ಲಿನ ವಿದ್ಯಾರ್ಥಿಗಳೊಡನೆ ತಮ್ಮ ಸಂಬಂಧವನ್ನು ಬೆಳೆಸಿಕೊಂಡು, ದೊಡ್ಡದಾಗಿಸಿಕೊಂಡು, ತಮ್ಮ ನಿಷ್ಕಲ್ಮಶ ಪ್ರೀತಿಯನ್ನು, ಒಂದು ವರ್ಷ ಅನಾಥರಂತೆ ಬದುಕುವ ಈ ನಟ-ನಟಿಯರಿಗೆ ಧಾರೆಯೆರೆದು, ಅವರ ಸಂಗಾತಿಗಳಾಗಿ, ಅವರೊಡನೆ ನಲಿದಾಡಿ, ಆಟವಾಡಿ, ಮುಂದಿನ ವರ್ಷದ ಹೊಸ ಸಂಗಾತಿಗಳಿಗಾಗಿ ಹಂಬಲಿಸಿ, ತಮ್ಮ ಹೊಸ ಹೆಸರಿನ ನಾಮಕರಣಕ್ಕಾಗಿ ಬಾಲಮುದುರಿ ಕಾಯುತ್ತಿರುತ್ತವೆ.

(ವಿದ್ಯಾಧರ)

ಸಾಮಾನ್ಯವಾಗಿ, ಮೆಸ್ಸಿನ ಬಳಿ ವಾಸವಾಗಿರುವ, ಮೆಸ್ಸಿನವರಿಗೆ ಪ್ರಿಯವಾದ ಅಥವಾ ಹಾಗೆಂದುಕೊಂಡಿರುವ ನಾಯಿಗಳು, ಈ ಹಾಸ್ಟೆಲ್ಗಳ ಬಳಿ ಬೆಳೆದ ‘ರಂಗಶಿಕ್ಷಣ ಪಡೆದ’ ನಾಯಿಗಳನ್ನು ದೂರವಿಡುತ್ತವೆ. ಅವಂತೂ ಮೆಸ್ಸಿನ ಆಸುಪಾಸನ್ನು ಬಿಟ್ಟು ಕದಲುವುದಿಲ್ಲ. ಹಾಗಂತ ಅವೇನೂ ನಮ್ಮ ರಂಗಶಿಕ್ಷಣದ ವಿದ್ಯಾರ್ಥಿಗಳಿಗೆ ಮತ್ತು ಅವರ ‘ಸಾಕು’ ನಾಯಿಗಳಿಗೆ ವೈರಿಗಳೂ ಆಗಿರುವುದಿಲ್ಲ. ಆದರೆ ಹುಡುಗ-ಹುಡುಗಿಯರ ಹಾಸ್ಟೆಲ್ಗಳ ಬಳಿ, ಅವರ ವಿಶೇಷ ಆರೈಕೆಯಲ್ಲಿ ಬೆಳೆದ ಆ ‘ಅನಾಥ’ ‘ರಂಗನಾಯಿ’ಗಳ ಬಗ್ಗೆ ಅವುಗಳಿಗೆ ಕೊಂಚ ಅಸಹನೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳಿಗೆ ರಜೆ ಘೋಷಣೆಯಾದಾಗ ಅಥವಾ ಅವರ ಕೋರ್ಸ್ ಮುಗಿದ ನಂತರದ ರಜೆಗಳಲ್ಲಿ, ಈ ಎಲ್ಲಾ ಸಾರಾಸಗಟು ನಾಯಿಗಳಿಗೆ ಸಹಜ ಸಲುಗೆಗಳೊಡಗೂಡಿ ಅವೆಲ್ಲವೂ ಸಂಗಾತಿಗಳಾಗುತ್ತವೆ.

ಕೆಲವೊಮ್ಮೆ ಲೇಡೀಸ್ ಮತ್ತು ಜೆಂಟ್ಸ್ ಹಾಸ್ಟೆಲ್ ನಾಯಿಗಳಿಗೂ, ಮೆಸ್ಸಿನ ಬಳಿ ಬೆಳೆದ ನಾಯಿಗಳಿಗೂ ಜಗಳವಾಗುತ್ತಿತ್ತು. ಅವೆಲ್ಲವೂ ತಮ್ಮ ಗಡಿರೇಖೆಗಳ ಬಳಿ ಸಾರಿ ಕದನ ವಿರಾಮದ ಸಮಯವನ್ನು ಉಲ್ಲಂಘಿಸಿ, ‘ಭೌಭೌ-ಕುಂಯ್ಯ್ ಕುಂಯ್’ ಯುದ್ಧ ಸಾರುತ್ತಿದ್ದವು. 

ಇದು ಅಪರೂಪಕ್ಕೆ ನಡೆವ ಘಟನೆಯಾದರೂ, ಸಾಮಾನ್ಯವಾಗಿ ಈ ಯುದ್ಧ ಜರುಗುತ್ತಿದ್ದದ್ದು ಬೆಳಗ್ಗಿನ ತಿಂಡಿಯ ನಂತರದ ತರಗತಿಯ ವೇಳೆಯಲ್ಲಿಯೇ. ಅದು ವಿದ್ಯಾರ್ಥಿಗಳು ‘ಥಿಯರಿ’ ‘ಕೇಳುವ’ ಸಮಯ. ಆ ಸಮಯದಲ್ಲಿ ಯಾವುದಾದರೂ ನಾಯಿಮರಿ ‘ಕುಂಯ್’ಗುಟ್ಟುವ ಶಬ್ದವೇನಾದರೂ ಎದ್ದರೆ- ಭಾರತೀಯ, ಪಾಶ್ಚಾತ್ಯ ಅಥವಾ ಕನ್ನಡ ರಂಗಭೂಮಿಯ ಇತಿಹಾಸವನ್ನು ಕೇಳುತ್ತಿದ್ದ ಎಲ್ಲರಿಗೂ ‘ಥಿಯರಿನಿದ್ದೆ’ಯಿಂದೆಚ್ಚರವಾಗುತ್ತಿತ್ತು. ಆ ಕುಂಯ್ ಗುಡುವ ಪ್ರಾಕ್ಟಿಕಲ್ ಸದ್ದಿಗೆ ಎಲ್ಲರ ಅಂಗಾಂಗಗಳು, ಕಣ್ಣುಗಳು ಎಚ್ಚರವಾಗಿ, ಅವರೊಡನೇ ಎಚ್ಚರಾದ ಅವುಗಳ ‘ಕುಂಯ್ಯ್ ಕುಂಯ್ ಪೋಷಕ’ರ ಕಡೆಗೆ ಹರಿಯುತ್ತಿತ್ತು. ಆಗ ಆ ನಾಯಿಮರಿಯ ಪೋಷಕರ ಆತಂಕ ಮತ್ತೂ ಹೆಚ್ಚಾಗುತ್ತಿತ್ತು. ಹೊರಗಿಂದ ಕೇಳಿಬರುವ ಸದ್ದು ಬರೀ ‘ಭೌಭೌ’ ಆಗಿದ್ದರೆ ಅಡ್ಡಿಯಿರಲಿಲ್ಲ. ಆದರೆ ಅದರ ನಡುವೆಯೆಲ್ಲಾದರೂ ‘ಕುಂಯ್ಯ್… ಕುಂಯ್ಯ್… ಕುಂಯ್ಯ್…’ ಮರಿನಾದವೇನಾದರೂ ತೇಲಿಬಂದರೆ, ಆ ನಾಯಿಪೋಷಕರು, ಪಾಠ ಮಾಡುತ್ತಿರುವ ಮೇಷ್ಟರ ಬಳಿ ಒಂದು ‘ಒಂದ’ದ ಬ್ರೇಕ್ ತೆಗೆದುಕೊಳ್ಳುತ್ತಿದ್ದರು. ಅವರು ಹೊರಗೆ ಹೋದಾದಮೇಲೆ ಎಲ್ಲವೂ ಪ್ರಶಾಂತ. ‘ಥಿಯರಿ’ ಕ್ಲಾಸಿಗೆ ಸಹಜವಾಗಿ, ಅಲ್ಲದೇ ನಾಟಕೀಯವಾಗಿ ಒದಗಿ ಬಂದಿದ್ದ ಎಲ್ಲ ಪ್ರಾಕ್ಟಿಕಲ್ ಸದ್ದುಗಳೂ ಸ್ತಬ್ಧ. ಅಲ್ಲಿಂದಾಚೆಗೆ ನಿಶ್ಯಬ್ಧ ಥಿಯರಿ.

ನೀನಾಸಮ್ ನಲ್ಲಿ ವಾಸಿಸುವ ನಾಯಿಗಳಿಗೆ ಪ್ರತಿವರ್ಷವೂ ಹೊಸ-ಹೊಸ ವಿದ್ಯಾರ್ಥಿಗಳು ಬಂದಾಗ ಹೊಸ-ಹೊಸ ಹೆಸರುಗಳ ನಾಮಕರಣವಾಗುತ್ತಿತ್ತು. ಆದರೆ ಅವೆಲ್ಲವೂ ಹೆಚ್ಚೂ ಕಡಿಮೆ ಪಾಶ್ಚಾತ್ಯ ಶಾಸ್ತ್ರೀಯ ನಾಟಕಗಳ ಪ್ರಸಿದ್ಧ ಪಾತ್ರಗಳ ಹೆಸರುಗಳಾಗಿರುತ್ತಿದ್ದವು. ಅಂದರೆ ಅವು ಸಾಮಾನ್ಯವಾಗಿ ‘ಈಡಿಪಸ್, ಯೊಕಾಸ್ತಾ, ಟೈರೀಸಿಯಸ್, ಒಫೀಲಿಯಾ’ – ಹೀಗೆ ಇಂತಹ ದುರಂತ ಪಾತ್ರಗಳೇ ಆಗಿರುತ್ತಿದ್ದವು. ಇದೊಂದು ರೀತಿ ನಾಯಿಪಾಡಿಗೆ ರೂಪಕದಂತಿದೆ ಅಲ್ಲವೇ? ಅದರೆ ಇದು ಸತ್ಯವಂತೂ ಹೌದು. ನನಗೆ ಗೊತ್ತಿದ್ದಂತೆ ಯಾವ ಬ್ಯಾಚಿನವರೂ ಈ ನಾಯಿಗಳಿಗೆ ‘ಶಾಕುಂತಲಾ, ದುರ್ಯೋಧನ, ವಸಂತಸೇನೆ, ಶಕಾರ, ಚಾರುದತ್ತ’ ಮುಂತಾದ ಹೆಸರಿಟ್ಟಿಲ್ಲದಿರುವುದು ಆಶ್ಚರ್ಯ. ಅಥವಾ ನನ್ನ ಗಮನಕ್ಕೆ ಬಂದಿಲ್ಲವೇನೋ.

(‘ಜಿಂಗಿ’ಯೊಂದಿಗೆ ಸುನೀಲಾ)

ಹೀಗೆ ಪಾಶ್ಚಾತ್ಯ ನಾಟಕಗಳ ದುರಂತ ನಾಯಕ-ನಾಯಕಿಯರ, ನಾಟಕಕಾರರ, ಸಿದ್ಧಾಂತಕಾರರ ಹೆಸರುಗಳನ್ನು ನಾಯಿಗಳಿಗೆ ಇಡುವುದಕ್ಕೆ ನಾನೊಂದು ಕಾರಣವನ್ನು ಗುರುತಿಸಿದ್ದೇನೆ. ಸಾಮಾನ್ಯವಾಗಿ ನೀನಾಸಮ್ ನಲ್ಲಿ ಕಲಿಯಲು ಬಂದವರಿಗೆ ಅಲ್ಲಿಯ ವಾತಾವರಣ, ಅವಕಾಶ, ತರಬೇತಿಯ ತೀಕ್ಷ್ಣತೆ – ಇವೆಲ್ಲಾ ಸಂಪೂರ್ಣ ಹೊಸತಾಗಿರುತ್ತದೆ. ಹೆಚ್ಚಿನವರಿಗೆ ಮೊದಮೊದಲ ದಿನಗಳಲ್ಲಿ ಅಲ್ಲಿಯ ವಾತಾವರಣದಲ್ಲಿ ನಡೆಯುವ ಪ್ರತಿಯೊಂದು ಸಣ್ಣ ವಿಷಯಗಳ ಕುರಿತು ವಿಶೇಷ ಸೋಜಿಗ ಇರುತ್ತದೆ. ಕಾಲಕ್ರಮೇಣ ಅದು ಮಸುಕಾಗುತ್ತದೆ. ಮೊದಮೊದಲ ವಾರಗಳಲ್ಲಿ ಸಾಮಾನ್ಯವಾಗಿ ಗ್ರೀಕ್ ನಾಟಕ, ಅದರಲ್ಲೂ ಯೂರಿಪಿಡೀಸನ ‘ಈಡಿಪಸ್’ಅನ್ನು ಮೊದಲು ಓದಲಾಗುತ್ತದೆ. ನಂತರ ಅದು ಹಾಗೇ ಕ್ರಮಾನುಸರಣೆಯಲ್ಲಿ ಮುಂದುವರೆಯುತ್ತದೆ. ಇದರ ಜೊತೆಜೊತೆಗೆ ಸಂಸ್ಕೃತ ನಾಟಕಗಳನ್ನೂ ಸಮಾನವಾಗಿ ಬೋಧಿಸಲಾಗುತ್ತದೆ. ವಿಚಿತ್ರವೆಂದರೆ ಹೊಸತಾಗಿ ನೀನಾಸಮ್ ನ ಆವರಣಕ್ಕೆ ಬಂದ ವಿದ್ಯಾರ್ಥಿಗಳಿಗೆ ‘ಈಡಿಪಸ್, ಯೊಕಾಸ್ತಾ, ಟೈರೀಸಿಯಸ್, ಒಫೀಲಿಯಾ’ ಈ ಹೆಸರುಗಳು ಅವರನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯುವ ಒಂದು ಸರಳ ಮಾರ್ಗಗಳಂತಿವೆ. ಇದರೊಟ್ಟಿಗೇ ಅವರು ತಾವು ಅದುವರೆಗೂ ಅನುಭವಿಸದಿದ್ದ ಒಂದು ವಿಚಿತ್ರವಾದ, ಆದರೆ ನಿರ್ಬಂಧಿತ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುತ್ತಾರೆ. ಹಾಗಾಗಿ ತಾವು ಆವರೆಗೆ ಕೇಳಿದ ಹೆಸರುಗಳಿಗಿಂತಲೂ, ಹೊಸತಾಗಿ ಕೇಳಿಬಂದ ಆ ಹೆಸರುಗಳನ್ನು ಅವರು ನಾಯಿಗಳಿಗೆ ಇಡುವುದು ಸಹಜ. ಆ ನಾಯಿಗಳೋ ನಾಟಕ ಮಾಡುವುದರಲ್ಲಿ ತಿರುಗಾಟದ ನಟರಿಗಿಂತಲೂ ಎಕ್ಸ್ ಪರ್ಟ್ಗಳು. ಪ್ರತಿವರ್ಷವೂ ಬದಲಾಗುವ ತಮ್ಮ ಹೆಸರುಗಳಿಗೆ ಸುಮ್ಮನೆ ಬಾಲವಲ್ಲಾಡಿಸುತ್ತವೆ. ಪುಕ್ಕಟೆ ಸಿಗುವ ಪಾರ್ಲೆ-ಜಿ, ಚಪಾತಿ ಮತ್ತು ಮೆಸ್ಸಿನ ಅನ್ನದ ಆಸೆಗಾಗಿ.

ಇಂತಹ ನಾಯಿಗಳ ಹಲವಾರು ತಲೆಮಾರುಗಳನ್ನು ನಾನು ಹೊಕ್ಕು ಹಾದು ಬಂದಿದ್ದರೂ, ಆ ನಾಯಿಗಳನ್ನು ನಿರ್ದಿಷ್ಟ ಹೆಸರಿನಿಂದ ಗುರುತಿಸುವುದರಲ್ಲಿ ಸೋತಿದ್ದೇನೆ. ‘ಯಾರು ಯೊಕಾಸ್ತಾ? ಯಾರು ಈಡಿಪಸ್…? ಯೂರಿಪಿಡೀಸ್… ಶೇಕ್ಸ್ ಪಿಯರ್… ಎಲಿಜೆಬೆತ್, ಬ್ರೆಕ್ಟ್, ಸ್ತಾನಿಸ್ಲಾವ್ ಸ್ಕಿ, ಮೇಯರ್ಹೋಲ್ಡ್, ಗ್ರೊಟೋವ್ಸ್ಕಿ?’ ಸಹಜವಾಗಿ ನಡೆಯುವ ಈ ನಾಮಕರಣದ ಹಿಂದೆ, ಆ ಹೆಸರುಗಳ ಅಥವಾ ಆ ಹೆಸರಾಂತ ವ್ಯಕ್ತಿಗಳ ತತ್ವಗಳನ್ನು ಕುರಿತು ಪ್ರತಿರೋಧವಿದೆಯೋ, ಇಲ್ಲಾ ಆ ಕುರಿತು ಆಕರ್ಷಣೆಯಿದೆಯೋ, ಕೇವಲ ನಾಯಿ ಪ್ರೀತಿಯಿದೆಯೋ ನನಗಿನ್ನೂ ಅರಿವಾಗಿಲ್ಲ.

(ಜಂಬೆಯವರ ಪತ್ನಿ ಭಾರತಿ ಜಂಬೆ)

ನಾನು ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ನಮ್ಮ ಆವರಣದಲ್ಲಿ ನಾಯಿಗಳು ಏನಿಲ್ಲವೆಂದರೂ ಹದಿನೈದು ಸಂಖ್ಯೆಯನ್ನು ಮೀರಿದ್ದವು. ಅವುಗಳನ್ನು ನಿಯಂತ್ರಿಸುವುದು ಯಾರಿಗೂ ಕಷ್ಟಸಾಧ್ಯವಾಗಿತ್ತು. ನೀನಾಸಮ್ ರಂಗಮಂದಿರ, ಸಭಾಭವನ, ಕೋಣೆಗಳಿಗೆ ಗೋಡೆ ಛಾವಣಿ ಬಾಗಿಲು ಕಿಟಕಿಗಳಿದ್ದರೂ, ನಾಯಿಗಳು, ಹಾವುಗಳು, ಚೇಳು-ಕಪ್ಪೆಗಳು, ಚಿಟ್ಟೆಗಳು ಸರಾಗವಾಗಿ ಒಳಗೆ ಬಂದು ಹೋಗುವ ವ್ಯವಸ್ಥೆಯನ್ನು ವಾಸ್ತುಶಿಲ್ಪಿಗಳು ತಮಗೆ ಗೊತ್ತಿಲ್ಲದೇ ಕಲ್ಪಿಸಿದ್ದಾರೆ. ಅದು ಮಲೆನಾಡಿನ ಸೊಗಸೂ ಹೌದು. ತಮ್ಮ ಪಾಲಿನ ನಾಯಿಬಾಗಿಲನ್ನು ಸದುಪಯೋಗಪಡಿಸಿಕೊಂಡು, ಭೋರನೆ ಸತತ ಸುರಿವ ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಈ ನಾಯಿಗಳು ರಂಗಮಂದಿರ, ಸಭಾಭವನಗಳನ್ನು ತಮ್ಮ ಅಂತಃಪುರವನ್ನಾಗಿ ಮಾಡಿಕೊಳ್ಳುತ್ತಿದ್ದವು. ಕೆಲವು ಮರಿಗಳಂತೂ ಆ ರಂಗವಾಸ್ತವ್ಯವನ್ನೇ ಟಾಯ್ಲೆಟ್ಟನ್ನಾಗಿ ಮಾಡಿಕೊಂಡು ಅಲ್ಲೇ ಎಲ್ಲವನ್ನೂ ಮಾಡಿ ನೆಮ್ಮದಿಯಿಂದಿರುತ್ತಿದ್ದವು.

ಬೆಳಿಗ್ಗೆ ರಂಗಮಂದಿರ, ಸಭಾಭವನವನ್ನು ಸ್ವಚ್ಚಗೊಳಿಸುವ ವಿಠ್ಠಣ್ಣನಿಗೆ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸುತ್ತಿತ್ತು. ಒಂದು ದಿನ ಅವರು ಉಪಾಯ ಮಾಡಿ, ಈ ಎಲ್ಲಾ ನಾಯಿಗಳನ್ನೂ ಒಂದೊಂದಾಗಿ ಹಿಡಿದು ತಿರುಗಾಟದ ಬಸ್ಸಿನ ಹಿಂದಿರುವ ಲಗೇಜು ತುಂಬುವ ಕ್ಯಾಬಿನ್ಗೆ ತುಂಬಿ ಏನಿಲ್ಲವೆಂದರೂ ಸುಮಾರು 30 ಕಿಲೋಮೀಟರ್ ದೂರ ಕ್ರಮಿಸಿ ಆನಂದಪುರದ ಹತ್ತಿರದ ಯಾವುದೋ ಒಂದು ಹಳ್ಳಿಯಲ್ಲಿ ಅವನ್ನೆಲ್ಲಾ ಬಿಟ್ಟು ಬಂದರು. ಅದಾದ ಮೇಲೆ ಎರಡು ಮೂರು ದಿನ ನಮ್ಮ ‘ನಾಯಿಪ್ರಿಯ’ ಗೆಳೆಯ-ಗೆಳತಿಯರೆಲ್ಲರೂ ವಿಠ್ಠೂನನ್ನು ಮನದಲ್ಲೇ ಬೈಯುತ್ತಾ ಓಡಾಡಿದರು. ಪ್ರಾಯಶಃ ಜಂಬೆಯವರೂ ವಿಠ್ಠೋಭನನ್ನು ಬೈದಿರಬೇಕು. ದಿನಕ್ಕೊಮ್ಮೆಯಾದರೂ ಆ ‘ಪಿಟ್ರಿ, ಯೊಕಾಸ್ತಾ, ಬುಡಾನ್, ಈಡಿಪಸ್’ರನ್ನು ನಮ್ಮ ನಾಯಿ ಪ್ರಿಯ ಗೆಳೆಯ-ಗೆಳತಿಯರು ನೆನೆಯುತ್ತಿದ್ದರು.

ಒಂದು ದಿನ ಬೆಳಗ್ಗೆ ಕಳರಿಪಯ್ಯಟ್ ತರಗತಿಯನ್ನು ಮುಗಿಸಿ ಹಸಿವಿನಿಂದ ಮೆಸ್ಸಿಗೆ ಧಾವಿಸಿದ ನಮಗೆ, ದೋಸೆಯ ಪರಿಮಳದೊಂದಿಗೆ ಅಚ್ಚರಿಯ ಸಂಗತಿಯೊಂದಿತ್ತು. ವಿಠ್ಠಣ್ಣ ಆನಂದಪುರದಲ್ಲಿ ಬಿಟ್ಟು ಬಂದಿದ್ದ ನಾಯಿಗಳಲ್ಲಿ ಒಂದರೆಡು ನಾಯಿಗಳು ಮೆಸ್ಸಿನ ಬಳಿ ತಮ್ಮ ಬಾಲಗಳನ್ನಲ್ಲಾಡಿಸುತ್ತಾ ನಿಂತಿದ್ದವು. ವಿಟ್ಠಣ್ಣ ಅದೇ ಸಮಯದಲ್ಲಿ ನೀನಾಸಮ್ ಸಭಾಂಗಣವನ್ನು ನಿರಾತಂಕದಿಂದ ಒರೆಸುತ್ತಿದ್ದರು. ಆ ವಾಪಸ್ಸು ಬಂದ ನಾಯಿಗಳ ಹೆಸರುಗಳು ನನಗಂತೂ ಗೊತ್ತಿಲ್ಲ ಅಥವಾ ನೆನಪಿಲ್ಲ. ಯಾಕೆಂದರೆ ಒಂದೇ ನಾಯಿಗೆ ಬೇರೆಬೇರೆ ಹೆಸರಿನಿಂದ ಎಲ್ಲರೂ ಕರೆಯುತ್ತಿದ್ದರಲ್ಲಾ! ಯಾವುದೇ ಹೆಸರು ಕರೆದರೂ ಬಾಲವಾಡಿಸಲು ಆ ನಾಯಿಗಳು ರೆಡಿಯಾಗಿದ್ದವು. ವಿಚಿತ್ರ ಮತ್ತು ವಿಸ್ಮಯದ ಸಂಗತಿಯೆಂದರೆ, ಆ ನಾಯಿಗಳಿಗೆ ಯಾವುದೋ ಹಳ್ಳಿಯಲ್ಲಿ ತಿಂದು ಬದುಕುವುದು ಕಷ್ಟಕರವಾಗಿರಲಿಲ್ಲ. ಆದರೆ ಅವು ತಮ್ಮ ರಂಗಸಂಗಾತಿಗಳನ್ನು ಹುಡುಕುತ್ತ ಅಷ್ಟು ದೂರದಿಂದ ಅಲ್ಲಿಗೆ ಬಂದಿದ್ದವಲ್ಲ! ಅವುಗಳ ರಂಗಪ್ರೀತಿಯನ್ನು ಕಂಡು ನನಗೆ ಅವು ಧೀರೋದ್ಧಾತ್ತ ನಾಯಕರಂತೆ ಅನ್ನಿಸಿದ್ದು ನಿಜ. ನಾಯಿಗಳನ್ನು ಪ್ರೀತಿಸುತ್ತಿದ್ದ ನನ್ನ ಗೆಳೆಯ-ಗೆಳತಿಯರ ಆನಂದಕ್ಕೆ ಅಂದು ಪಾರವೇ ಇರಲಿಲ್ಲ.

(ಮುಂದುವರಿಯುವುದು)