ಬಸವಣ್ಣ ಹೇಳಿದ “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬ ನುಡಿಯೇ ಈ ಕಾದಂಬರಿಯ ಧ್ಯೇಯವಾಕ್ಯ. ಪ್ರತೀ ಅಧ್ಯಾಯದಲ್ಲೂ ಇರುವ ಸರ್ವನಿಯಾಮಕ ಎಳೆಯೆಂದರೆ ಅದು ಸಂಚಾರ, ಚಲನೆ. “ಜಗತ್ತಿಗೆ ಒಂದು ಸ್ಥಳದಲ್ಲಿ ನೆಲೆ ನಿಲ್ಲದವರ ಮೇಲೆ ಏನು ದ್ವೇಷವೋ ಕಾಣೆ. ಅದಕ್ಕೇ ಸಂಚಾರವನ್ನು ಆಯ್ದುಕೊಂಡವರನ್ನೆಲ್ಲ ತಡವಿಲ್ಲದೇ ಹೊಡೆದುರುಳಿಸಿದೆ ಚರಿತ್ರೆ” ಎನ್ನುತ್ತಾಳೆ ಕಾದಂಬರಿಯ ನಿರೂಪಕಿ ಒಂದು ಕಡೆ. ಅವಳು ನಿರಂತರವಾಗಿ ಚಲನೆಯಲ್ಲೇ ಇರುವವಳು. ಅಂದರೆ ಪ್ರಪಂಚದ ಬೇರೆ ಬೇರೆ ಊರುಗಳಿಗೆ ಸೈಟ್ ಸೀಯಿಂಗಿಗೆಂದು ಹೋಗಿ ಬರುವವಳಲ್ಲ.
‘ಕಾವ್ಯಾ ಓದಿದ ಹೊತ್ತಿಗೆ’ ಅಂಕಣದಲ್ಲಿ ಪೊಲಿಷ್ ಬರಹಗಾರ್ತಿ ಓಲ್ಗಾ ತೊಕಾರ್ಚುಕ್ ಬರೆದ ‘ಫ್ಲೈಟ್ಸ್ʼ ಕಾದಂಬರಿಯ ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

 

ನಕ್ಷತ್ರ ಮಂಡಲ ಇರುವುದು ಎಲ್ಲಿ? ರಾತ್ರಿಯ ಆಕಾಶದಲ್ಲೇ? ನೋಡುವ ನಮ್ಮ ಕಣ್ಗಳಲ್ಲೇ? ಅಥವಾ ದ್ವೀಪಗಳ ನಡುವೆ ಅದೃಶ್ಯ ಸೇತುವೆ ಕಟ್ಟಿ ಅದನ್ನು ಮಂಡಲವಾಗಿಸಿದ ನಮ್ಮ ಮನಸ್ಸುಗಳಲ್ಲೇ? ನಮ್ಮ ನಡುವಿರುವ ಈ ಕಾಲದ ಮಹತ್ವದ ಬರಹಗಾರ್ತಿ ಓಲ್ಗಾ ತೊಕಾರ್ಚುಕ್ ತಮ್ಮ ‘ಫ್ಲೈಟ್ಸ್’ ಕಾದಂಬರಿಯಲ್ಲಿ ಇಂಥದೇ ನೂರಾರು ಜಿಜ್ಞಾಸೆಗಳನ್ನು ನಮ್ಮ ಮುಂದೆ ಹರವಿಡುತ್ತಾರೆ. ಈ ಕಾದಂಬರಿಯಲ್ಲಿ ಫಾರ್ಮ್ ಮತ್ತು ಕಂಟೆಂಟ್ ಎರಡಕ್ಕೂ ನಡುವೆ ಅಪರೂಪದ ಸಂಗಮವೇರ್ಪಟ್ಟಿದೆ. ಕಾದಂಬರಿಕಾರ್ತಿಯ ದೈತ್ಯ ಪ್ರತಿಭೆಗೆ ಈ ಕಾದಂಬರಿಯೇ ಒಂದು ಮುನ್ನುಡಿಯಂತಿದೆ.

2018ರ ನೊಬೆಲ್ ಪಡೆದ ಓಲ್ಗಾ ತೊಕಾರ್ಚುಕ್ ಈ ಕಾದಂಬರಿಯ ನಿರೂಪಣೆಯಲ್ಲಿ constellation ಮಾದರಿಯನ್ನು ಬಳಸುತ್ತಾರೆ. ನಾಲ್ಕುನೂರು ಪುಟಗಳ ಈ ಪುಸ್ತಕದಲ್ಲಿ ನೂರಾರು ಅಧ್ಯಾಯಗಳಿವೆ. ಸಣ್ಣಕಥೆಗಳ ಸಂಗ್ರಹವೇನೋ ಎಂದು ತಬ್ಬಿಬ್ಬಾಗುವಷ್ಟು ಈ ಅಧ್ಯಾಯಗಳು ವಿವಿಧ ದಿಕ್ಕಿನಲ್ಲಿ ಹೊರಚಾಚಿಕೊಂಡಿವೆ. ಕೆಲವು ಅಧ್ಯಾಯಗಳು ಎರಡೇ ಸಾಲುಗಳಷ್ಟು ಸಣ್ಣವಿದ್ದರೆ ಉಳಿದವು ಹತ್ತು ಪುಟಗಳಿಗಿಂಥ ದೊಡ್ಡದಿವೆ. ಮೇಲ್ನೋಟಕ್ಕೆ ಕಾಣುವ ಹಾಗೆ ಒಂದೊಂದು ಪಠ್ಯಗಳ ನಡುವೆ ಮಾತ್ರ ಸಂಬಂಧವಿರುವಂತೆ ಭಾಸವಾಗುವುದು. ಆದರೆ ಓದಿದ ಯಾವುದೋ ಒಂದು ಸಾಲು, ಎಲ್ಲೋ ಹೊಳೆದ ಮಾತು ಇನ್ನೆಲ್ಲೋ ನುಸುಳಿ ಇಡೀ ಪುಸ್ತಕಕ್ಕೊಂದು ಆಕರ್ಷಣೆಯನ್ನು ಒದಗಿಸಿಕೊಟ್ಟಿದೆ. ಭಾಷೆ, ಕಟ್ಟುವಿಕೆಯ ತೀವ್ರತೆ ಮತ್ತು ದಟ್ಟ ಅನುಭವಗಳು ನಮ್ಮ ಆಳವನ್ನೇ ಛೇದಿಸುವಷ್ಟು wonderfully weird ಆಗಿದೆ.

(ಓಲ್ಗಾ ತೊಕಾರ್ಚುಕ್)

ಬಸವಣ್ಣ ಹೇಳಿದ “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬ ನುಡಿಯೇ ಈ ಕಾದಂಬರಿಯ ಧ್ಯೇಯವಾಕ್ಯ. ಪ್ರತೀ ಅಧ್ಯಾಯದಲ್ಲೂ ಇರುವ ಸರ್ವನಿಯಾಮಕ ಎಳೆಯೆಂದರೆ ಅದು ಸಂಚಾರ, ಚಲನೆ. “ಜಗತ್ತಿಗೆ ಒಂದು ಸ್ಥಳದಲ್ಲಿ ನೆಲೆ ನಿಲ್ಲದವರ ಮೇಲೆ ಏನು ದ್ವೇಷವೋ ಕಾಣೆ. ಅದಕ್ಕೇ ಸಂಚಾರವನ್ನು ಆಯ್ದುಕೊಂಡವರನ್ನೆಲ್ಲ ತಡವಿಲ್ಲದೇ ಹೊಡೆದುರುಳಿಸಿದೆ ಚರಿತ್ರೆ” ಎನ್ನುತ್ತಾಳೆ ಕಾದಂಬರಿಯ ನಿರೂಪಕಿ ಒಂದು ಕಡೆ. ಅವಳು ನಿರಂತರವಾಗಿ ಚಲನೆಯಲ್ಲೇ ಇರುವವಳು. ಅಂದರೆ ಪ್ರಪಂಚದ ಬೇರೆ ಬೇರೆ ಊರುಗಳಿಗೆ ಸೈಟ್ ಸೀಯಿಂಗಿಗೆಂದು ಹೋಗಿ ಬರುವವಳಲ್ಲ. ಅವಳೆಲ್ಲಿದ್ದಾಳೆ ಎಂದು ಯಾರಿಗೂ ಗೊತ್ತೇ ಆಗದ ಹಾಗೆ ವಿಳಾಸವಿಲ್ಲದೇ ಮಾಯವಾಗುವವಳು. ಹೆಣ್ಣು ಒಂದು ವಯಸ್ಸು ದಾಟಿದ ಮೇಲೆ ಈ ಪ್ರಪಂಚದಲ್ಲಿ ಹಾಗೆ ಅದೃಶ್ಯವಾಗುವುದು ಸುಲಭ ಸಾಧ್ಯ ಎನ್ನುತ್ತಾಳೆ ಆಕೆ ತನ್ನ ನೋಟ್‌ಬುಕ್ಕಿನಲ್ಲಿ.

ಇಲ್ಲಿ ಪುರಾಣವಿದೆ; ಇತಿಹಾಸ, ಭೂಗೋಳ, ಚರಿತ್ರೆ, ಸಾಹಿತ್ಯ ಎಲ್ಲವೂ ಇದೆ. ಒಂದು ಕಡೆಗಂತೂ ಗಣಿತದ ಪ್ರಮೇಯವೊಂದನ್ನು ಊರಿನ ಮರಗಳ ಗಾತ್ರಕ್ಕೆ ತಾಳೆ ಹಾಕಿ ಬರೆದ ಸೂತ್ರವಿದೆ. ಇಡೀ ಬರಹ everything under the sun ಎಂಬಂಥ ಮಹತ್ವಾಕಾಂಕ್ಷೆಯ ಸಾಕಾರದಂತಿದೆ. ಆಸ್ಟ್ರಿಯಾ ದೇಶದ ರಾಜ ಫ್ರಾನ್ಸಿಸ್ Cabinet of curiosities ಎಂಬ ಸಂಗ್ರಹಾಲಯ ಸ್ಥಾಪಿಸಿದ್ದಾನೆ. ನೂರಾರು ವರ್ಷಗಳ ಹಿಂದಿನ ರಕ್ಷಿತ ಶವಗಳು, ಅಪರೂಪಕ್ಕೆ ಮಾತ್ರ ಕಾಣಲು ಸಿಗುವ ಸಯಾಮಿ ಶಿಶುಗಳು, ಫಾರ್ಮಲ್ಡಿಹೈಡ್ ದ್ರಾವಣದಲ್ಲಿ ತೇಲುತ್ತಿರುವ ಹೃದಯ… ಹೀಗೆ ಜಗತ್ತಿನಲ್ಲಿ ಏನೇನು ಕೌತುಕಗಳಿವೆಯೋ ಅವುಗಳೆಲ್ಲವನ್ನೂ ಸಂಗ್ರಹಿಸಬೇಕು ಎಂಬುದು ಈ ರಾಜನ ಅಭೀಪ್ಸೆ.

ಮೇಲ್ನೋಟಕ್ಕೆ ಕಾಣುವ ಹಾಗೆ ಒಂದೊಂದು ಪಠ್ಯಗಳ ನಡುವೆ ಮಾತ್ರ ಸಂಬಂಧವಿರುವಂತೆ ಭಾಸವಾಗುವುದು. ಆದರೆ ಓದಿದ ಯಾವುದೋ ಒಂದು ಸಾಲು, ಎಲ್ಲೋ ಹೊಳೆದ ಮಾತು ಇನ್ನೆಲ್ಲೋ ನುಸುಳಿ ಇಡೀ ಪುಸ್ತಕಕ್ಕೊಂದು ಆಕರ್ಷಣೆಯನ್ನು ಒದಗಿಸಿಕೊಟ್ಟಿದೆ. ‌

ಆತನಿಗೆ ದೂರದ ದೇಶದಿಂದ ಹಲವು ವರ್ಷಗಳ ಅಂತರದಲ್ಲಿ ಒಂದಾದ ಮೇಲೊಂದು ಪತ್ರ ಬರುತ್ತದೆ. ನನ್ನ ತಂದೆಯ ಮೃತ ದೇಹದಲ್ಲಿ ಹುಲ್ಲು ತುಂಬಿ ನಿಮ್ಮ ಸಂಗ್ರಹಾಲಯದಲ್ಲಿ ವೀಕ್ಷಣೆಯ ಗೊಂಬೆಯಾಗಿ ಇಟ್ಟುಕೊಂಡಿದ್ದೀರಂತೆ. ದಯವಿಟ್ಟು ಆ ಮೃತದೇಹವನ್ನು ಕಳಿಸಿಕೊಡಿ, ಇಲ್ಲವೇ ಸೂಕ್ತ ಸಂಪ್ರದಾಯಗಳ ಜೊತೆಗೆ ಮಣ್ಣುಮಾಡಿ ಎಂಬ ಒಕ್ಕಣಿಕೆಯಿರುವ ಈ ಪತ್ರ ಬರೆವವಳು ಆಫ್ರಿಕಾ ದೇಶದ ಯುವತಿ ಜೋಸಫೀನ್ ಸುಲೇಮಾನ್. ಅವಳ ಅಸಹಾಯಕ ಕೂಗು ಈ ಪುಟಗಳಲ್ಲಿ ಪ್ರತಿಧ್ವನಿಸಿದೆ. ಮೊದಲು ಬಿನ್ನಹವಾಗಿ, ನಂತರ ಕೋರಿಕೆಯಾಗಿ, ಕಡೆಯಲ್ಲಿ ಆಜ್ಞೆಯಾಗಿ ಬದಲಾಗುವ ಆಕೆಯ ಮಾತುಗಳು ಸ್ಮರಣೀಯವಾಗಿವೆ. “ತಿಳಿಯುವುದೆಂದರೆ ಕಾಣುವುದು,” “ಚಲನೆಯೇ ಅಂತಿಮ ಸತ್ಯ” ಮುಂತಾದ ನುಡಿಗಳನ್ನು ಇಲ್ಲಿನ ಹೆಸರಿಲ್ಲದ ನಿರೂಪಕಿ ಆಗಾಗ ತೇಲಿ ಬಿಡುತ್ತಾಳೆ.

ಕಾದಂಬರಿಯಲ್ಲಿ ಮತ್ತೆ ಮತ್ತೆ ಉಲ್ಲೇಖಿಸಿರುವ “The strongest muscle in the human body is the tongue” ಎಂಬ ವಾಕ್ಯ ವೈಜ್ಞಾನಿಕವಾಗಿ ಪ್ರಶ್ನಾರ್ಹವಾದರೂ ಆ ಸಾಲಿನ ಹಿಂದಿನ ತಾತ್ವಿಕ ಆಯಾಮ ಅಚ್ಚರಿ ಪಡಿಸುತ್ತದೆ. ಒಂದು ಕಥೆಯಲ್ಲಿ ದೈಹಿಕ ನ್ಯೂನ್ಯತೆಯ ಮಗುವನ್ನು ಬಿಟ್ಟು ಹೊರಡುವ ತಾಯಿಯ ಪ್ರವರವಿದೆ. ಇನ್ನೊಂದು ಕಡೆ ಬಾಲ್ಯದ ಗೆಳೆಯನೊಬ್ಬನಿಗೆ ದಯಾ ಮರಣ ಕರುಣಿಸುವ ಪಶುವೈದ್ಯೆಯೊಬ್ಬಳ ಚಿತ್ರವಿದೆ. ಕಾದಂಬರಿಯಲ್ಲಿ ಮತ್ತೆ ಮತ್ತೆ ಬರುವ ಕ್ಯುನಿಸ್ಕಿ ಎಂಬ ವ್ಯಕ್ತಿ ಪ್ರವಾಸಕ್ಕೆಂದು ಹೋಗಿದ್ದಾಗ ಮೂರು ದಿನ ಕಾಣೆಯಾಗಿ ಹೋದ ಹೆಂಡತಿ ಮಗನ ವಿವರ ಹುಡುಕಲು ಹೆಣಗುತ್ತಾನೆ. ಇನ್ನೊಬ್ಬ ಕತ್ತರಿಸಿ ಹೋದ ತನ್ನ ಕಾಲನ್ನು ರಕ್ಷಿಸಿಟ್ಟು ಅದನ್ನು ಕುಯ್ಯುತ್ತ ದೇಹ ರಚನೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ.

ವೀಕಿಪೀಡಿಯಾ, ನಕಾಶೆಗಳು, ಇಂಗ್ಲೀಷ್ ಎಂಬ ಭಾಷೆ, ವಿಮಾನ ನಿಲ್ದಾಣಗಳು, ಅಪ್ಯುಲಿಯಸ್ ಎಂಬ ಕತ್ತೆ, ಬೋಧಿ ವೃಕ್ಷ, ಕಲಿಯುಗ… ಹೀಗೆ ಏನೆಲ್ಲ ಸಂಗತಿಗಳನ್ನು ತಮ್ಮ ಗದ್ಯವೆಂಬ ಮ್ಯಾಜಿಕ್ಕಿನಲ್ಲಿ ಹೆಣೆಯುತ್ತಾರೆ ಓಲ್ಗಾ ತೊಕಾರ್ಚುಕ್. ಎಷ್ಟು ಬರೆದರೂ ಇನ್ನೂ ಹೇಳಬೇಕಾದ ನೂರಾರು ಸಂಗತಿಗಳು ಉಳಿದೇ ಹೋಗುವಂತಿರುವ ಸಂಕೀರ್ಣ ಕಾದಂಬರಿ ಫ್ಲೈಟ್ಸ್. ಆ ಆನಂದವನ್ನು ಈ ಪುಸ್ತಕದಲ್ಲಿ ತೊಡಗಿಕೊಂಡಷ್ಟೇ ಸವಿಯಬೇಕೇನೋ. ಒಂದು ಮಹಾಕಾವ್ಯವನ್ನು ಓದಿದ ಸಮೃದ್ಧ ಅನುಭವ ನೀಡುವ ತೃಪ್ತಿ ಅಸಾಧಾರಣವಾದುದು.

ಜೆನಿಫರ್ ಕ್ರೋಫ್ಟ್‌ರ ಅನುವಾದದಲ್ಲಿ ಇಂಗ್ಲೀಷಿಗೆ ಹರಿದುಬಂದ ಪೊಲಿಷ್ ಭಾಷೆಯ ಈ ಕೃತಿ ಮೂಲದಲ್ಲಿ ಪ್ರಕಟವಾಗಿದ್ದು 2007ರಲ್ಲಿ. ಹತ್ತು ವರ್ಷಗಳ ದೀರ್ಘ ಅವಧಿಯ ನಂತರ ಇಂಗ್ಲೀಷ್ ಅನುವಾದ ಪ್ರಕಟವಾಗಿರುವುದಕ್ಕೆ ಕೃತಿಯ ಸಂಕೀರ್ಣ ಭಾಷೆ, ದಟ್ಟ ಒಳಮೈ ಕೂಡ ಕಾರಣವಾಗಿರಬಹುದೇನೋ. ಈ ಅನುವಾದಕ್ಕೆ ಜೆನಿಫರ್ ಕ್ರೋಫ್ಟ್ ಓಲ್ಗಾರ ಜೊತೆಗೆ Man Booker International Prize ಪಡೆದರು.

ಹೆಣ್ಣಿನ ಸಂವೇದನೆಗಳನ್ನು ಇಲ್ಲಿನ ತನಕ ರೂಢಿಯಲ್ಲಿದ್ದ ಯಾವ ಅಚ್ಚಿನಲ್ಲೂ ಹಾಕದೇ ಹರಿಯಬಿಟ್ಟಿರುವ ಸ್ವಚ್ಛಂದ ಈ ಕಾದಂಬರಿಗೊಂದು ವಿವರಿಸಲಾರದ ಹಿರಿಮೆಯನ್ನು ತಂದು ಕೊಟ್ಟಿದೆ.