“ಡಚ್ಚರ ದಿನನಿತ್ಯದ ಜೀವನದಲ್ಲಿ ಹೂವಿಗೊಂದು ಪಾತ್ರ ಇದ್ದೇ ಇದೆ. ಆ್ಯಮ್ಸ್ಟರ್ ಡ್ಯಾಮ್ ನಲ್ಲಿ ಸುಮಾರು ಪ್ರತಿ ಐನೂರು ಮೀಟರಿಗೊಂದರಂತೆ ಹೂವಿನ ಅಂಗಡಿ ಕಾಣಿಸುತ್ತದೆ.ಇಲ್ಲಿನ ಜನರಿಗೆ ಹೆಂಗಸರು, ಗಂಡಸರೆನ್ನದೆ ಎಲ್ಲರಿಗೂ ಹೂವಿನಮೇಲೆ ಪ್ರೀತಿ. ಮನೆಗೆ ಅತಿಥಿಗಳು ಬರುತ್ತಾರೆಂದರೆ ಟೇಬಲ್ ಮೇಲೆ ಹೂಗಳನ್ನಿಟ್ಟು ಸಿಂಗರಿಸಿರುತ್ತಾರೆ. ತಾವು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದಾದರೆ ಮರೆಯದೇ ಹೂವಿನ ಗುಚ್ಛ ಕೊಂಡು ಹೋಗುತ್ತಾರೆ.”
ಹೂವಿನ ದೇಶ ನೆದರ್ ಲ್ಯಾಂಡ್ಸ್ ಕುರಿತು ಸೀಮಾ ಎಸ್ ಹೆಗಡೆ ಬರೆಯುವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

 

ಸುಮಾರು ಸೆಪ್ಟೆಂಬರ್ ಕೊನೆಯಿಂದ ಅಕ್ಟೋಬರ್ ನಡುವಿನ ಹೊತ್ತಿಗೆ ಶರತ್ ಕಾಲ ಕಾಲಿರಿಸುತ್ತಿದ್ದಂತೆಯೇ ಯೂರೋಪ್ ನ ಅನೇಕ ದೇಶಗಳಲ್ಲಿ ಮರಗಿಡಗಳೆಲ್ಲಾ ಎಲೆಯುದುರಿಸಿ ಬೋಳಾಗಿ ನಿಂತು, ಒಣಕಟ್ಟಿಗೆಯಂತೆ ಕಾಣಿಸುತ್ತವೆ. ಎಲ್ಲಿ ನೋಡಿದರೂ ಒಂದೂ ಎಲೆ ಕಾಣುವುದಿಲ್ಲ. ಇನ್ನು ಹೂಗಳನ್ನಂತೂ ಕೇಳಲೇಬೇಡಿ. ಹಗಲು ಚಿಕ್ಕದಾಗಿ, ಸೂರ್ಯನ ಬೆಳಕು ಕಾಣದೇ ತಿಂಗಳುಗಳೇ ಕಳೆದುಹೋಗುತ್ತವೆ. ಎಲ್ಲಿ ನೋಡಿದರೂ ಮಬ್ಬುಮಬ್ಬು ವಾತಾವರಣ. ಹೊರಬೀಳಲು ಕೊರೆಯುವ ಚಳಿ, ಸೊನ್ನೆ ಡಿಗ್ರಿಗಿಂತ ಕಡಿಮೆ ಉಷ್ಣಾಂಶ ಅಡ್ಡಿಪಡಿಸುತ್ತದೆ. ಹಾಗಾಗಿ ಹೊರಬೀಳಬೇಕೆಂದರೆ ಮೂರ್ನಾಲ್ಕು ಪದರ ಬಟ್ಟೆಧರಿಸಿಯೇ ಹೊರಗೆ ಕಾಲಿರಿಸಬೇಕು. ಹೊರಹೋದರೆ ಮನೆ ಎಷ್ಟು ಹೊತ್ತಿಗೆ ತಲುಪುವೆನೋ ಎಂಬ ಕಾತರ. ಮನೆಯೊಳಗೆ ಇಡೀ ದಿನ ಲೈಟ್ ಹಾಕಿಯೇ ಇರಬೇಕಾದಷ್ಟು ಕತ್ತಲೆ. ಸೂರ್ಯನ ದರ್ಶನವಿಲ್ಲದ್ದರಿಂದ ಮನೆಮಂದಿಯೆಲ್ಲಾ ವಿಟಮಿನ್ ಡಿ ಮಾತ್ರೆಯನ್ನು ಐದಾರು ತಿಂಗಳುಗಳ ಕಾಲ ನುಂಗಲೇಬೇಕು. ಈ ಸಮಯದಲ್ಲಿ ಇಲ್ಲಿನ ಜನರಲ್ಲಿ ಆ ನಿರುತ್ಸಾಹಿ ಬೋಳು ಮರದಂತೆ ಯಾವುದೇ ಉತ್ಸಾಹ, ಜೀವಕಳೆ ಕಾಣಿಸುವುದಿಲ್ಲ. ದಿನನಿತ್ಯದ ಕೆಲಸಗಳನ್ನು ವಿಧಿಯಿಲ್ಲದೇ ಮುಗಿಸುತ್ತಿರುತ್ತಾರೆ ಅಷ್ಟೇ.

ಹೀಗೆಯೇ ಸುಮಾರು ಆರು ತಿಂಗಳುಗಳು ಕಳೆದು ಮಾರ್ಚ್ ಕೊನೆ ಬರುತ್ತಿದ್ದಂತೆಯೇ ಹಗಲು ದೊಡ್ಡದಾಗುತ್ತ ಉಷ್ಣಾಂಶ ಏರತೊಡಗುತ್ತದೆ. ಧುತ್ತೆಂದು ಭೂಮಿಯನ್ನು ಸೀಳಿಕೊಂಡು ಸಾಲುಸಾಲಾಗಿ ಡೆಫೋಡಿಲ್ ಹೂಗಳು ಮೇಲೆದ್ದು ಚಳಿಗಾಲ ಮುಗಿಯಿತೆಂದು ಸಾರುತ್ತವೆ. ಡೆಫೋಡಿಲ್ ಹೂಗಳು ಕಾಣಿಸಿದವೆಂದರೆ ಜನರು ಚಳಿಗಾಲವನ್ನು ಕಳೆದೆವೆಂದು ಸಂತೋಷದ ನಿಟ್ಟುಸಿರು ಬಿಡುತ್ತಾರೆ. ಆಗಾಗ ಸೂರ್ಯನೂ ಮುಖತೋರಿಸತೊಡಗುತ್ತಾನೆ. ಜನರ ತಲೆಮೇಲಿನ ಟೊಪ್ಪಿ, ಕುತ್ತಿಗೆಯ ಮಫ್ಲರ್, ದಪ್ಪನೆಯ ಭಾರವಾದ ಕೋಟು, ಕೈಗವಸುಗಳೆಲ್ಲಾ ಕಪಾಟುಸೇರಿ ಹಗುರವಾದ ಕೋಟು ಹೊರಬೀಳುತ್ತದೆ. ಡೆಫೋಡಿಲ್ ಕೆಲವೇ ದಿನಗಳ ಅತಿಥಿ. ಹತ್ತೆಂಟು ದಿನಗಳಲ್ಲಿ ಹೂವು ಮುದುಡಿ, ನಂತರ ಗಿಡವೂ ಸತ್ತುಹೋಗುತ್ತದೆ. ಯೂರೋಪ್ ನಲ್ಲಿ ಬೇಸಿಗೆಗಾಗಿ ಕಾಯಬೇಕು. ಆದರೆ ಊರಲ್ಲಿ ಬೇಸಿಗೆಯ ಉರಿ ತಾಳಲಾರದೇ ಮಳೆಗಾಲಕ್ಕಾಗಿ ಕಾಯಬೇಕಿತ್ತು.

ಚಿಕ್ಕಂದಿನಲ್ಲಿ ಅಮ್ಮನ ಮನೆಯಂಗಳದ ಹೂದೋಟದಲ್ಲಿ ಬೇಸಿಗೆಯ ಕೊನೆಯಲ್ಲಿ ಬರುವ ಸಂಜೆ ಮಳೆಯ ನಂತರ ಭೂಮಿಯಿಂದ ಏಳುತ್ತಿದ್ದ ನೆಲತಾವರೆ, ಗ್ಲ್ಯಾಡಿಯೋಲಸ್ ಹೂಗಳನ್ನು ಕಂಡು ಅಬ್ಬಾ ಅಂತೂ ಬೇಸಿಗೆ ಮುಗಿಯಿತು ಎಂಬ ಭಾವನೆ ಬರುತ್ತಿದ್ದ ನೆನಪು ಇಲ್ಲಿನ ಪ್ರತೀ ವಸಂತದಲ್ಲೂ ನೆನಪಿಗೆ ಬರುತ್ತದೆ. ವಸಂತದಲ್ಲಿ ಇದ್ದಕ್ಕಿದ್ದಂತೆ ಜನರ ಉತ್ಸಾಹ ಇಮ್ಮಡಿಯಾಗುತ್ತದೆ. ಮರಗಿಡಗಳೆಲ್ಲಾ ಗಡಿಬಿಡಿಯಲ್ಲಿದ್ದಾವೇನೋ ಎಂಬಂತೆ ನಾಮುಂದು ತಾಮುಂದು ಎಂಬಂತೆ ಚಿಗುರಿ ನಳನಳಿಸತೊಡಗುತ್ತವೆ. ನೆದರ್ ಲ್ಯಾಂಡ್ಸ್ ನಲ್ಲಿ ವಿಶೇಷವಾಗಿ ಎಲ್ಲಿ ನೋಡಿದರೂ ಕಣ್ಣು ಕೋರೈಸುವಷ್ಟು ಹಸಿರು, ಎಲ್ಲಿ ನೋಡಿದರೂ ತರಹೇವಾರಿ ಹೂಗಳು. ಅನೇಕ ಮನೆಗಳಲ್ಲಿಯೂ ಜನರು ಬಾಲ್ಕನಿಯಲ್ಲಿ ಹೂವಿನ ಗಿಡಗಳನ್ನು ಇಡುತ್ತಾರೆ. ವಸಂತಕ್ಕೆ ಸ್ವಲ್ಪ ಮೊದಲೇ ಮುನಿಸಿಪಾಲಿಟಿಯವರು ರಸ್ತೆಯ ಪಕ್ಕದಲ್ಲಿ, ಕೆನಾಲ್ ಗಳ ಪಕ್ಕದಲ್ಲಿ ಹೂವಿನಗಿಡಗಳನ್ನು ಹಾಕಿ ಅದರ ನಿರ್ವಹಣೆಯನ್ನು ಬೇಸಿಗೆಯ ಕೊನೆಯವರೆಗೂ ಮಾಡುತ್ತಾರೆ. ಇಷ್ಟೊಂದು ಬಗೆಯ ಹೂಗಳು, ಇಷ್ಟೆಲ್ಲಾ ಹೂಗಳು ಯುರೋಪ್ ನಲ್ಲಿ ಬೇರೆ ಯಾವ ದೇಶದಲ್ಲೂ ಕಾಣಸಿಗುವುದಿಲ್ಲ.

ಎಲ್ಲಿ ನೋಡಿದರೂ ಒಂದೂ ಎಲೆ ಕಾಣುವುದಿಲ್ಲ. ಇನ್ನು ಹೂಗಳನ್ನಂತೂ ಕೇಳಲೇಬೇಡಿ. ಹಗಲು ಚಿಕ್ಕದಾಗಿ, ಸೂರ್ಯನ ಬೆಳಕು ಕಾಣದೇ ತಿಂಗಳುಗಳೇ ಕಳೆದುಹೋಗುತ್ತವೆ. ಎಲ್ಲಿ ನೋಡಿದರೂ ಮಬ್ಬುಮಬ್ಬು ವಾತಾವರಣ. ಹೊರಬೀಳಲು ಕೊರೆಯುವ ಚಳಿ, ಸೊನ್ನೆ ಡಿಗ್ರಿಗಿಂತ ಕಡಿಮೆ ಉಷ್ಣಾಂಶ ಅಡ್ಡಿಪಡಿಸುತ್ತದೆ. ಹಾಗಾಗಿ ಹೊರಬೀಳಬೇಕೆಂದರೆ ಮೂರ್ನಾಲ್ಕು ಪದರ ಬಟ್ಟೆಧರಿಸಿಯೇ ಹೊರಗೆ ಕಾಲಿರಿಸಬೇಕು. ಹೊರಹೋದರೆ ಮನೆ ಎಷ್ಟು ಹೊತ್ತಿಗೆ ತಲುಪುವೆನೋ ಎಂಬ ಕಾತರ. ಮನೆಯೊಳಗೆ ಇಡೀ ದಿನ ಲೈಟ್ ಹಾಕಿಯೇ ಇರಬೇಕಾದಷ್ಟು ಕತ್ತಲೆ. ಸೂರ್ಯನ ದರ್ಶನವಿಲ್ಲದ್ದರಿಂದ ಮನೆಮಂದಿಯೆಲ್ಲಾ ವಿಟಮಿನ್ ಡಿ ಮಾತ್ರೆಯನ್ನು ಐದಾರು ತಿಂಗಳುಗಳ ಕಾಲ ನುಂಗಲೇಬೇಕು. ಈ ಸಮಯದಲ್ಲಿ ಇಲ್ಲಿನ ಜನರಲ್ಲಿ ಆ ನಿರುತ್ಸಾಹಿ ಬೋಳು ಮರದಂತೆ ಯಾವುದೇ ಉತ್ಸಾಹ, ಜೀವಕಳೆ ಕಾಣಿಸುವುದಿಲ್ಲ.

ಹೂಗಳ ಬಗ್ಗೆ ಹೇಳುವಾಗ ವಿಶ್ವವಿಖ್ಯಾತ ಟ್ಯೂಲಿಪ್ ಉದ್ಯಾನವನದ ಬಗ್ಗೆ ಹೇಳಲೇಬೇಕು. 1981ರ ಅಮಿತಾಭ್ ಬಚ್ಚನ್ ಮತ್ತು ರೇಖಾ ಅಭಿನಯದ ಹಿಂದಿ ಚಲನಚಿತ್ರ ‘ಸಿಲ್ಸಿಲಾ’ದ ಹಾಡುಗಳಲ್ಲಿ ನೆದರ್ ಲ್ಯಾಂಡ್ಸ್ ನ ಟ್ಯೂಲಿಪ್ ಉದ್ಯಾನವನದ ಮತ್ತು ಟ್ಯೂಲಿಪ್ ಹೊಲಗಳನ್ನು ನೀವು ನೋಡಿಯೇ ಇರುತ್ತೀರಿ. ಪ್ರಪಂಚದ ಕೆಲವೇ ದೊಡ್ಡ ಉದ್ಯಾನವನಗಳಲ್ಲಿ ಒಂದಾದ ಇದರ ಹೆಸರು ‘ಕೋಕೆನ್ಹೊಫ್ ಉದ್ಯಾನವನ’; ಸುಮಾರು 79 ಎಕರೆಯಷ್ಟು ವಿಸ್ತಾರವಾದ ಜಾಗದಲ್ಲಿ ಹರಡಿದೆ. ಹಸಿರು ಹುಲ್ಲುಹಾಸಿನ ನಡುವೆ ವೈವಿಧ್ಯಮಯ ಟ್ಯೂಲಿಪ್ ಹೂಗಳು- ಕಲ್ಪನೆಗೂ ಮೀರಿದ, ನಂಬಲಸಾಧ್ಯವಾದ ಬಣ್ಣಗಳಲ್ಲಿ ಕಂಗೊಳಿಸುತ್ತವೆ. ಕೆಲವು ನೀರಿನ ಕೊಳಗಳು, ಅದರಲ್ಲಿ ಬಿಳಿಯ ಹಂಸಗಳು, ಕೊಳದ ಸುತ್ತಲೂ ಆಗತಾನೇ ವಸಂತನ ಆಗಮನದಿಂದಾಗಿ ಹಸಿರಾಗುತ್ತಿರುವ ಮರಗಳು, ನೆಲದಿಂದ ಪುಟಿದೆದ್ದ ಬಣ್ಣಬಣ್ಣದ ಹೂಗಳು. ಕನಸೋ ನನಸೋ ಅರಿವಾಗಿ, ವಾಸ್ತವಕ್ಕೆ ಬರುವಷ್ಟರಲ್ಲಿ ಕೆಲವು ಕ್ಷಣಗಳೇ ಸರಿದಿರುತ್ತವೆ. ಚಿಕ್ಕವಳಿದ್ದಾಗ ಕೆಲವು ಕ್ಯಾಲೆಂಡರ್ ಗಳ ಮೇಲೆ ಈ ರೀತಿಯ ಟ್ಯೂಲಿಪ್ ಹೂದೋಟದ ಚಿತ್ರವನ್ನು ಕಂಡಾಗಲೆಲ್ಲಾ ನನಗನಿಸಿದ್ದು ಒಂದೇ- ‘ಈ ರೀತಿಯೆಲ್ಲಾ ಹೂಗಳು ಇರಲು ಸಾಧ್ಯವಾ? ಇದು ಯಾರೋ ಕಲ್ಪಿಸಿಕೊಂಡು ಬಿಡಿಸಿದ್ದಿರಬಹುದು’ ಅಂತ ಅಂದುಕೊಳ್ಳುತ್ತಿದ್ದೆ.

ಅಮ್ಮನ ಹೂದೋಟದ ಗುಲಾಬಿ, ಸೇವಂತಿಗೆ, ಮಲ್ಲಿಗೆ, ದಾಸವಾಳಗಳನ್ನು ಪ್ರೀತಿಸಿ ಬೆಳೆದವಳು ನಾನು. ಪ್ರತೀವರ್ಷ ಶರತ್ ಕಾಲದಲ್ಲಿಯೇ ಕೋಕೆನ್ಹೊಫ್ ಉದ್ಯಾನವನದಲ್ಲಿ ಟ್ಯೂಲಿಪ್ ಗೆಡ್ಡೆಗಳನ್ನು (ಆ ಗೆಡ್ಡೆಗಳನ್ನು ಬಲ್ಬ್ ಎಂದು ಕರೆಯುತ್ತಾರೆ) ನೆಡುವ ಕೆಲಸ ಪ್ರಾರಂಭವಾಗುತ್ತದೆ. ಸುಮಾರು 70 ಲಕ್ಷ ಗೆಡ್ಡೆಗಳನ್ನು ನೆಡುತ್ತಾರೆ. ನಂತರ ಅವು ಭೂಮಿಯ ಒಳಗಡೆಯಿದ್ದಾಗಲೇ ಮೇಲಿಂದ ಹಿಮ ಬೀಳಬೇಕಂತೆ. ಆ ನಂತರ ವಸಂತದಲ್ಲಿ ಹಿಮ ಕರಗಿ ಸೂರ್ಯ ಪ್ರಕಾಶಿಸತೊಡಗಿದ ತಕ್ಷಣ ಎಲ್ಲ ಗೆಡ್ಡೆಗಳೂ ಒಮ್ಮೆಲೇ ಮೇಲೆದ್ದು ಹೂಬಿಟ್ಟು ಪ್ರೇಕ್ಷಕರನ್ನು ಎದುರುಗೊಳ್ಳಲು ಸಜ್ಜಾಗಿ ನಿಲ್ಲುತ್ತವೆ. ಅಲ್ಲಿ ಪ್ರಮುಖವಾಗಿ ಟ್ಯೂಲಿಪ್ ಹೂಗಳು, ಇನ್ನುಳಿದಂತೆ ಹಲವು ಬಗೆಯ ಹೇಯಸಿಂತ್ ಮತ್ತು ಆರ್ಕಿಡ್ ಗಳು ಕಾಣಸಿಗುತ್ತವೆ. ಕಳೆದವರ್ಷ ಹದಿನಾಲ್ಕು ಲಕ್ಷ ಜನರು ಈ ಉದ್ಯಾನವನಕ್ಕೆ ಭೇಟಿಯಿತ್ತಿದ್ದರಂತೆ! ಈ ಹೂದೋಟ ಮಾರ್ಚ್ ಮಧ್ಯದಿಂದ ಮೇ ಮಧ್ಯದವರೆಗೆ ತೆರೆದಿರುತ್ತದೆ. ಸಾಧಾರಣವಾಗಿ ಹೆಚ್ಚಿನ ಹೂಗಳು ಅರಳಿರುವ ಸಮಯವೆಂದರೆ ಏಪ್ರಿಲ್ ಮಧ್ಯದ ಸಮಯ. ಅದು ಭೇಟಿಕೊಡಲು ಪ್ರಶಸ್ತವಾದುದು. ಒಮ್ಮೆ ಟಿಕೆಟ್ ಖರೀದಿಸಿ ಒಳಹೊಕ್ಕರೆ ಸಂಜೆಯವರೆಗೂ ಈ ಕನಸಿನ ಲೋಕದಲ್ಲಿ ಅಲೆದಾಡುವುದೊಂದೇ ಕೆಲಸ. ಹಸಿವಾದರೆ ಊಟಕ್ಕೆ ಕೆಲವು ಉಪಹಾರ ಗೃಹಗಳಿವೆ. ಬಹುತೇಕ ಜನರು ಕ್ಯಾಮೆರಾದ ಮೆಮೊರಿಕಾರ್ಡ್ ತುಂಬುವವರೆಗೂ ಫೋಟೋ ಕ್ಲಿಕ್ಕಿಸುತ್ತಾರೆ!

ಡಚ್ಚರ ಸುವರ್ಣ ಯುಗದ ಸಮಯದಲ್ಲಿ, ಹದಿನೇಳನೆಯ ಶತಮಾನದ ಮಧ್ಯದಲ್ಲಿ ಟ್ಯೂಲಿಪ್ ಗಳನ್ನು ಜನ ಎಷ್ಟು ಕೊಳ್ಳಲಾರಂಭಿಸಿದರೆಂದರೆ ಟ್ಯೂಲಿಪ್ ಗೆಡ್ಡೆಗಳನ್ನು ಹಣದ ಬದಲಾಗಿ ಉಪಯೋಗಿಸಿಲಾರಂಭಿಸಿದರಂತೆ. ಈ ಆರ್ಥಿಕತೆಯನ್ನು ಟ್ಯೂಲಿಪ್ ಮೇನಿಯಾ (Tulip mania) ಎಂದು ಕರೆಯಲಾಗಿದೆ. ಕುತೂಹಲಕಾರಿ ವಿಷಯವೆಂದರೆ ಇಂದು ಹಾಲೆಂಡ್ ಮತ್ತು ಟ್ಯೂಲಿಪ್ ಎರಡೂ ಎಷ್ಟು ಹಾಸುಹೊಕ್ಕಾಗಿವೆ, ಆದರೆ ಟ್ಯೂಲಿಪ್ ಮೂಲತಃ ಇಲ್ಲಿಯದಲ್ಲ! ಟರ್ಕಿ ದೇಶದಿಂದ ಹದಿನಾರನೆಯ ಶತಮಾನದಲ್ಲಿ ಆಮದಾಗಿ ಬಂದು ಸೇರಿದ್ದು! ಮೊದಲು ಕೆಲವೇ ಬಣ್ಣಗಳಲ್ಲಿ ಇರುತ್ತಿದ್ದ ಟ್ಯೂಲಿಪ್ ಅನ್ನು ವಿಜ್ಞಾನಿಗಳು ಮಾರ್ಪಾಟು ಮಾಡಿ ಇಂದು ನೂರಾರು ಬಗೆಯ ಬಣ್ಣದ ಹೂಗಳನ್ನಾಗಿಸಿದ್ದಾರೆ. ಜಗತ್ಪ್ರಸಿದ್ಧ ಹಲವಾರು ವ್ಯಕ್ತಿಗಳ ಹೆಸರುಗಳನ್ನು ಟ್ಯೂಲಿಪ್ ಹೂಗಳಿಗೆ ಇಡಲಾಗಿದೆ. ಅಂತೆಯೇ 2005 ರಲ್ಲಿ ಬಾಲಿವುಡ್ ತಾರೆ ಐಶ್ವರ್ಯ ರೈ ಹೆಸರನ್ನು ಹಳದಿ ಮಿಶ್ರಿತ ಕೆಂಪು ಟ್ಯೂಲಿಪ್ ತಳಿಗೆ ಇಡಲಾಗಿದೆ.

ಚಿಕ್ಕಂದಿನಲ್ಲಿ ಅಮ್ಮನ ಮನೆಯಂಗಳದ ಹೂದೋಟದಲ್ಲಿ ಬೇಸಿಗೆಯ ಕೊನೆಯಲ್ಲಿ ಬರುವ ಸಂಜೆ ಮಳೆಯ ನಂತರ ಭೂಮಿಯಿಂದ ಏಳುತ್ತಿದ್ದ ನೆಲತಾವರೆ, ಗ್ಲ್ಯಾಡಿಯೋಲಸ್ ಹೂಗಳನ್ನು ಕಂಡು ಅಬ್ಬಾ ಅಂತೂ ಬೇಸಿಗೆ ಮುಗಿಯಿತು ಎಂಬ ಭಾವನೆ ಬರುತ್ತಿದ್ದ ನೆನಪು ಇಲ್ಲಿನ ಪ್ರತೀ ವಸಂತದಲ್ಲೂ ನೆನಪಿಗೆ ಬರುತ್ತದೆ. ವಸಂತದಲ್ಲಿ ಇದ್ದಕ್ಕಿದ್ದಂತೆ ಜನರ ಉತ್ಸಾಹ ಇಮ್ಮಡಿಯಾಗುತ್ತದೆ. ಮರಗಿಡಗಳೆಲ್ಲಾ ಗಡಿಬಿಡಿಯಲ್ಲಿದ್ದಾವೇನೋ ಎಂಬಂತೆ ನಾಮುಂದು ತಾಮುಂದು ಎಂಬಂತೆ ಚಿಗುರಿ ನಳನಳಿಸತೊಡಗುತ್ತವೆ. ನೆದರ್ ಲ್ಯಾಂಡ್ಸ್ ನಲ್ಲಿ ವಿಶೇಷವಾಗಿ ಎಲ್ಲಿ ನೋಡಿದರೂ ಕಣ್ಣು ಕೋರೈಸುವಷ್ಟು ಹಸಿರು, ಎಲ್ಲಿ ನೋಡಿದರೂ ತರಹೇವಾರಿ ಹೂಗಳು. ಅನೇಕ ಮನೆಗಳಲ್ಲಿಯೂ ಜನರು ಬಾಲ್ಕನಿಯಲ್ಲಿ ಹೂವಿನ ಗಿಡಗಳನ್ನು ಇಡುತ್ತಾರೆ. ವಸಂತಕ್ಕೆ ಸ್ವಲ್ಪ ಮೊದಲೇ ಮುನಿಸಿಪಾಲಿಟಿಯವರು ರಸ್ತೆಯ ಪಕ್ಕದಲ್ಲಿ, ಕೆನಾಲ್ ಗಳ ಪಕ್ಕದಲ್ಲಿ ಹೂವಿನಗಿಡಗಳನ್ನು ಹಾಕಿ ಅದರ ನಿರ್ವಹಣೆಯನ್ನು ಬೇಸಿಗೆಯ ಕೊನೆಯವರೆಗೂ ಮಾಡುತ್ತಾರೆ.

ಕೊಕೆನ್ಹೊಫ್ ಉದ್ಯಾನವನದಲ್ಲಿನ ಹೂಗಳನ್ನು ನೋಡಿ ಕಣ್ಮನ ತಣಿಸಿಕೊಂಡಿದ್ದಲ್ಲದೇ ಆ ಉದ್ಯಾನವನದ ಸುತ್ತಮುತ್ತಲೂ ಇರುವ ಟ್ಯೂಲಿಪ್ ಹೊಲಗಳಿಗೂ ಕೂಡ ಹೋಗಬಹುದು. ಉದ್ಯಾನವನದ ಎದುರಿಗೆ ಸೈಕಲ್ ಬಾಡಿಗೆಗೆ ಸಿಗುತ್ತವೆ. ಯಾವ ದಾರಿಯಲ್ಲಿ ಹೋದರೆ ಯಾವ ರೀತಿಯ ಹೂಗಳು ಕಾಣಿಸುತ್ತವೆ ಎಂಬ ನಕಾಶೆಯನ್ನೂ, ವಿವರಣೆಯನ್ನೂ ಕೊಡುತ್ತಾರೆ. ದಾರಿತಪ್ಪದಂತೆ ದಾರಿಯುದ್ದಕ್ಕೂ ಅವರು ಗುರುತು ಹಾಕಿರುವ ಬೋರ್ಡ್ ಗಳಿರುತ್ತವೆ. 5, 10, 15 ಮತ್ತು 25 ಕಿಲೋಮೀಟರ್ ಗಳ ದೂರದ ದಾರಿಗಳನ್ನು ಗುರುತು ಮಾಡಿರುತ್ತಾರೆ. ನಮ್ಮ ಶಕ್ತಿಗನುಸಾರವಾಗಿ ಬೇಕಾದ್ದನ್ನು ಆಯ್ದುಕೊಳ್ಳಬಹುದು. ಪುನಃ ಅದೇ ಜಾಗಕ್ಕೆ ಮರಳಿ ಬರುವಂತೆ ಯೋಜನೆಮಾಡಿ ರಸ್ತೆಯ ನಕಾಶೆ ತಯಾರಿಸಿರುತ್ತಾರೆ. ಒಮ್ಮೆ ಬಾಡಿಗೆಯ ಸೈಕಲ್ ಪಡೆದಿರೆಂದರೆ ನಿಮ್ಮ ಶಕ್ತಿಯಿದ್ದಷ್ಟು ದೂರ ಸೈಕಲ್ ತುಳಿದುಕೊಂಡು ಹೋಗಬಹುದು. ಸಂಜೆಯೊಳಗೆ ಸೈಕಲ್ ಹಿಂದಿರುಗಿಸಿದರಾಯಿತು. ಈ ಹೊಲಗಳನ್ನು ನೋಡುವುದಂತೂ ಕಣ್ಣಿಗೆ ಹಬ್ಬ. ದೃಷ್ಟಿ ಹಾಯಿಸಿದಷ್ಟು ದೂರದವರೆಗೂ ಅರಳಿನಿಂತ ಹೂಗಳು! ಬಿಸಿಲಿರುವ ದಿನವಾದರೆ ಓಡಾಡಲು ಅನುಕೂಲ, ಬೆಚ್ಚನೆಯ ವಾತಾವರಣ ಹಿತವೆನಿಸುತ್ತದೆ, ಆದರೆ ಫೋಟೋಗ್ರಫಿಗೆ ಮೋಡಕವಿದ ವಾತಾವರಣ ಉತ್ತಮ. ಟ್ಯೂಲಿಪ್ ಹೊಲಗಳನ್ನು ವಿಮಾನದಲ್ಲಿ ಹಾರುತ್ತಿರುವಾಗ ನೋಡಿದರಂತೂ ಬಣ್ಣದ ಸೀರೆಗಳನ್ನು ತೊಳೆದು ನೆಲದಮೇಲೆ ಅಲ್ಲಲ್ಲಿ ಅಚ್ಚುಕಟ್ಟಾಗಿ ಒಣಗಿಸಿರುವಂತೆ ಕಾಣಿಸುತ್ತದೆ.

(ಚಿತ್ರಗಳು: ರಾಜೀವ ಭಟ್)

ಅಲ್ಲಲ್ಲಿ ಹೊಲದಲ್ಲಿ ಕೆಲಸಮಾಡುತ್ತಿರುವ ರೈತರು ಕಾಣಸಿಗುತ್ತಾರೆ; ಕೆಲಸ ಸಂಪೂರ್ಣ ಯಾಂತ್ರೀಕೃತ. ರೈತರು ಟ್ಯೂಲಿಪ್ ಅನ್ನು ಕೇವಲ ಗಡ್ಡೆಗಳಿಗಾಗಿ ಮಾತ್ರ ಬೆಳೆಯುತ್ತಾರೆ, ಕೆಲವೊಮ್ಮೆ ನಾವು ನೋಡುತ್ತಿರುವಂತೆಯೇ ಅರಳಿರುವ ಹೂಗಳನ್ನು ಯಂತ್ರಗಳ ಮೂಲಕ ಕತ್ತರಿಸಿ ಬಿಸಾಕುತ್ತಿರುತ್ತಾರೆ. ಅದನ್ನು ನೋಡಲು ದುಃಖವಾಗುತ್ತದೆ ನಿಜ, ಆದರೆ ಆ ಹೂವುಗಳನ್ನು ಸರಿಯಾದ ಸಮಯಕ್ಕೆ ಕತ್ತರಿಸುವುದರಿಂದ ಗಡ್ಡೆಗಳಿಗೆ ಪೌಷ್ಟಿಕಾಂಶ ದೊರಕಿ ಅದು ದೊಡ್ಡದಾಗಿ ಬೆಳೆಯಲು ಸಹಾಯವಾಗುತ್ತದೆ. ನಂತರದಲ್ಲಿ ಕಿತ್ತ ಗಡ್ಡೆಗಳನ್ನು ಕಂಪನಿಗಳಿಗೆ ಮಾರುತ್ತಾರೆ, ಅಲ್ಲಿ ಅವು ಪ್ಯಾಕ್ ಆಗಿ ಪ್ರಪಂಚದಾದ್ಯಂತ ತಲುಪುತ್ತವೆ.

ಹೂಗಳ ಉದ್ಯಮದ ಇನ್ನೊಂದು ಮಜಲು ‘ರಾಯಲ್ ಫ್ಲೋರಾ ಹಾಲೆಂಡ್’- ಜಗತ್ತಿನ ಅತ್ಯಂತ ದೊಡ್ಡ ಅದ್ಭುತ ಹೂವಿನ ಮಾರುಕಟ್ಟೆ. ಇದೊಂದು ಒಳಾಂಗಣ ಮಾರುಕಟ್ಟೆ. ಹೂಗಳು ಯಾವ ಯಾವ ಬಣ್ಣಗಳಲ್ಲಿ ಇರಬಹುದು ಎಂಬುದನ್ನು ನಾವು ಕಲ್ಪನೆ ಕೂಡ ಮಾಡಿರುವುದಿಲ್ಲವೋ ಆ ಬಣ್ಣಗಳ ಹೂಗಳೂ ಕಾಣಸಿಗುತ್ತವೆ. ಇಲ್ಲಿಗೆ ಪ್ರಪಂಚದಾದ್ಯಂತ, ಮುಖ್ಯವಾಗಿ ಆಫ್ರಿಕಾ ಖಂಡದ ದೇಶಗಳಿಂದ ಹೂಗಳು ಬಂದು ಹರಾಜಾಗಿ, ಪ್ಯಾಕ್ ಆಗಿ, ಪುನಃ ದೇಶವಿದೇಶಗಳಿಗೆ ಸರಬರಾಜಾಗುತ್ತವೆ. ಪ್ರತೀದಿನ ಸುಮಾರು 20 ಮಿಲಿಯನ್ ಹೂಗಳು ಹರಾಜಾಗುತ್ತವೆ! ವ್ಯಾಲೆಂಟೈನ್ಸ್ ಡೇ, ಮದರ್ಸ್ ಡೇ ದಂತಹ ಕೆಲ ವಿಶೇಷ ದಿನಗಳಂದು ಹೂಗಳ ಮಾರಾಟ ಶೇಕಡಾ 15 ಹೆಚ್ಚಿರುತ್ತದೆ. ಪ್ರಮುಖ ಹರಾಜು ಮುಂಜಾನೆ 5:00 ರಿಂದ 6:30 ರೊಳಗೆ ಮುಗಿದುಹೋಗುತ್ತದೆ. ಆನಂತರ ಕೆಲಸಮಯದವರೆಗೆ ನಡೆಯುವುದು ಬರಿದೇ ಸಣ್ಣಪುಟ್ಟ ಹರಾಜು ಮಾತ್ರ. ಏಳು ಗಂಟೆಯಿಂದ ಪ್ರೇಕ್ಷಕರಿಗೆ ಪ್ರವೇಶ ಲಭ್ಯವಿರುತ್ತದೆ. ಕಿಲೋಮೀಟರುಗಳಷ್ಟು ಉದ್ದದ ಕಾರಿಡಾರ್ ಮೇಲೆ ನಡೆದುಕೊಂಡು ಹೋಗುತ್ತಿದ್ದಂತೆ ಅಲ್ಲಿನ ಚಟುವಟಿಕೆಗಳನ್ನೆಲ್ಲಾ ನೋಡಲು, ಫೋಟೋ ತೆಗೆಯಲು ಸಾಧ್ಯವಿದೆ. ಎಲ್ಲಾ ಚಟುವಟಿಕೆಗಳೂ ಯಂತ್ರಚಾಲಿತ. ಹರಾಜಿಗೆಂದು ಹೂಗಳು ಟ್ರೋಲಿಯಲ್ಲಿ ಸ್ಟೇಜ್ ಮೇಲೆ ಬರುವುದು, ಕೊಳ್ಳುವವರು ಎದುರಿಗೆ ಕುಳಿತು ತಮ್ಮ ಕಂಪ್ಯೂಟರ್ ಮೂಲಕ ಅದಕ್ಕೆ ಬೆಲೆ ಕಟ್ಟುವುದು, ಮಾರಾಟವಾದ ಹೂವು ಒಂದೆಡೆ ಹೋಗುವುದು, ಯಂತ್ರಗಳ ಸಹಾಯದಿಂದಲೇ ಪ್ಯಾಕ್ ಆಗುವುದು, ಸಾಗಾಟವಾಗುವುದು ಎಲ್ಲವನ್ನೂ ಸ್ವತಃ ನೋಡಿಯೇ ನಂಬಬೇಕು. ಹನ್ನೊಂದು ಗಂಟೆಯೊಳಗೆ ಹೆಚ್ಚು ಕಡಿಮೆ ಎಲ್ಲಾ ಹೂಗಳೂ ಪ್ಯಾಕ್ ಆಗಿಬಿಟ್ಟಿರುತ್ತವೆ. ಹೂಗಳನ್ನೂ, ಪ್ಯಾಕ್ ಗಳನ್ನೂ ಟ್ರೋಲಿ ಮೂಲಕ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವುದನ್ನು ನೋಡುತ್ತಾ ಹೋದಂತೆ ಆಶ್ಚರ್ಯಕ್ಕೆ ಕೊನೆಯಿಲ್ಲವಾಗುತ್ತದೆ. ಹಲವಾರು ಬಾರಿ ನಾವು ಫೋಟೋ ತೆಗೆಯುತ್ತಿದ್ದರೆ ಕೆಲಸಗಾರರು ನಮ್ಮ ಕಡೆ ನೋಡಿ, ನಗೆಬೀರಿ, ಕೈಬೀಸುತ್ತಾರೆ. ಯೌಟ್ಯೂಬ್ ನಲ್ಲಿ ಫ್ಲೋರಾ ಹಾಲೆಂಡ್ ಎಂದು ಹುಡುಕಿ ವಿಡಿಯೋ ನೋಡಬಹುದು.

ಒಮ್ಮೆ ಬಾಡಿಗೆಯ ಸೈಕಲ್ ಪಡೆದಿರೆಂದರೆ ನಿಮ್ಮ ಶಕ್ತಿಯಿದ್ದಷ್ಟು ದೂರ ಸೈಕಲ್ ತುಳಿದುಕೊಂಡು ಹೋಗಬಹುದು. ಸಂಜೆಯೊಳಗೆ ಸೈಕಲ್ ಹಿಂದಿರುಗಿಸಿದರಾಯಿತು. ಈ ಹೊಲಗಳನ್ನು ನೋಡುವುದಂತೂ ಕಣ್ಣಿಗೆ ಹಬ್ಬ. ದೃಷ್ಟಿ ಹಾಯಿಸಿದಷ್ಟು ದೂರದವರೆಗೂ ಅರಳಿನಿಂತ ಹೂಗಳು! ಬಿಸಿಲಿರುವ ದಿನವಾದರೆ ಓಡಾಡಲು ಅನುಕೂಲ, ಬೆಚ್ಚನೆಯ ವಾತಾವರಣ ಹಿತವೆನಿಸುತ್ತದೆ, ಆದರೆ ಫೋಟೋಗ್ರಫಿಗೆ ಮೋಡಕವಿದ ವಾತಾವರಣ ಉತ್ತಮ. ಟ್ಯೂಲಿಪ್ ಹೊಲಗಳನ್ನು ವಿಮಾನದಲ್ಲಿ ಹಾರುತ್ತಿರುವಾಗ ನೋಡಿದರಂತೂ ಬಣ್ಣದ ಸೀರೆಗಳನ್ನು ತೊಳೆದು ನೆಲದಮೇಲೆ ಅಲ್ಲಲ್ಲಿ ಅಚ್ಚುಕಟ್ಟಾಗಿ ಒಣಗಿಸಿರುವಂತೆ ಕಾಣಿಸುತ್ತದೆ.

ಆ್ಯಮ್ಸ್ಟರ್ ಡ್ಯಾಮ್ ಗೆ ಭೇಟಿಯಿತ್ತರೆ ನೋಡಲೇಬೇಕಾದ ಇನ್ನೊಂದು ಜಾಗ ಆ್ಯಮ್ಸ್ಟರ್ ಡ್ಯಾಮ್ ಹೂವಿನ ಮಾರುಕಟ್ಟೆ (Amsterdamse bloemenmarket). ಇದು ಪ್ರಪಂಚದ ಏಕೈಕ ತೇಲುವ ಮಾರುಕಟ್ಟೆ- ಹೂವಿನ ಅಂಗಡಿಗಳು ಕೆನಾಲ್ ನಲ್ಲಿ ನಿಂತಿರುವ ಬೋಟ್ ಹೌಸ್ ನಲ್ಲಿ! ಈ ಮಾರುಕಟ್ಟೆ ಪ್ರಾರಂಭವಾಗಿದ್ದು 1862 ರಲ್ಲಿ. ಅಂದಿನ ದಿನಗಳಲ್ಲಿ ಮಾರುಕಟ್ಟೆಯ ವಸ್ತುಗಳು ದೋಣಿಗಳಲ್ಲಿ ಸರಬರಾಜಾಗುತ್ತಿದ್ದವು ಎಂಬುದನ್ನು ನೆನಪಿಸಲೆಂದು ಇಂದೂ ಕೂಡ ಆ ಮಾರುಕಟ್ಟೆಯನ್ನು ಬೋಟ್ ಹೌಸ್ ನಲ್ಲಿ ನಡೆಸುತ್ತಾರೆ. ನೀವಿಲ್ಲಿ ತರತರದ ಹೂಗಳು, ಬೀಜಗಳು, ಟ್ಯೂಲಿಪ್ ಗೆಡ್ಡೆಗಳನ್ನು ಕೊಳ್ಳಬಹುದು. ನಾನೂ ಕೂಡ ಟ್ಯೂಲಿಪ್ ಹೂಗಳ ಸೌಂದರ್ಯಕ್ಕೆ ಮರುಳಾಗಿ ಇಲ್ಲಿಂದ ಗೆಡ್ಡೆಗಳನ್ನು ಕೊಂಡುಹೋಗಿ ಅಮ್ಮನಿಗೆ ಕೊಟ್ಟಿದ್ದೆ. ನನ್ನ ಅನುಮಾನ ನಿಜವಾಗಿತ್ತು. “ಗಿಡವೇನೋ ಹುಟ್ಟಿತು, ಆದರೆ ಹೂವಾಗಲಿಲ್ಲ” ಎಂದಳು ಅಮ್ಮ. ಟ್ಯೂಲಿಪ್ ಬೆಳೆಯಲು ಚಳಿಯ ಹವಾಮಾನ ಬೇಕು. ನಮ್ಮಲ್ಲಿಯ ಚಳಿಗಾಲದ ಸೆಖೆಯನ್ನೂ ಕೂಡ ಅದು ತಾಳಲಾರದು. ಆದ್ದರಿಂದ ಭಾರದದಲ್ಲಿ ಕಾಶ್ಮೀರದಲ್ಲಿ ಟ್ಯೂಲಿಪ್ ಹೂದೋಟಗಳಿರುತ್ತವೆ.

ಡಚ್ಚರ ದಿನನಿತ್ಯದ ಜೀವನದಲ್ಲಿ ಹೂವಿಗೊಂದು ಪಾತ್ರ ಇದ್ದೇ ಇದೆ. ಆ್ಯಮ್ಸ್ಟರ್ ಡ್ಯಾಮ್ ನಲ್ಲಿ ಸುಮಾರು ಪ್ರತಿ 500 ಮೀಟರಿಗೊಂದರಂತೆ ಹೂವಿನ ಅಂಗಡಿ ಕಾಣಿಸುತ್ತದೆ.ಇಲ್ಲಿನ ಜನರಿಗೆ ಹೆಂಗಸರು, ಗಂಡಸರೆನ್ನದೆ ಎಲ್ಲರಿಗೂ ಹೂವಿನಮೇಲೆ ಪ್ರೀತಿ. ಮನೆಗೆ ಅತಿಥಿಗಳು ಬರುತ್ತಾರೆಂದರೆ ಟೇಬಲ್ ಮೇಲೆ ಹೂಗಳನ್ನಿಟ್ಟು ಸಿಂಗರಿಸಿರುತ್ತಾರೆ. ತಾವು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದಾದರೆ ಮರೆಯದೇ ಹೂವಿನ ಗುಚ್ಛ ಕೊಂಡು ಹೋಗುತ್ತಾರೆ.

ನನ್ನ ಅಮ್ಮನಿಗೆ ಹೂಗಳೆಂದರೆ ಪ್ರೀತಿ. ಇನ್ನು ಆ ಹೂವಿನ ಗಿಡಗಳೆಂದರಂತೂ ಪಂಚಪ್ರಾಣ. ಇಲ್ಲಿನ ಬಗೆಬಗೆಯ ಹೂಗಳನ್ನು ನೋಡಿದಾಗಲೆಲ್ಲಾ ನನಗವಳ ನೆನಪು. ಈಗೀಗ ವಯಸ್ಸಾದಂತೆ ಅವಳ ಹೂವಿನ ಗಿಡಗಳನ್ನು ನೆಡುವ, ಬೆಳೆಸುವ ಚಟುವಟಿಕೆ ಕುಂದಿದೆ. ನಾನು ಚಿಕ್ಕವಳಿದ್ದಾಗ ಮನೆಯಂಗಳ ತುಂಬೆಲ್ಲಾ ಹೂವಿನಗಿಡಗಳನ್ನು ಬೆಳೆಸುತ್ತಿದ್ದಳು. ದಿನಾಲೂ ಬೆಳಿಗ್ಗೆ ತಿಂಡಿಯ ನಂತರ ಹೂದೋಟದಲ್ಲಿ ಕಳೆ ತೆಗೆಯದೇ, ಗಿಡಗಳಿಗೆ ನೀರು ಹಾಕದೇ ಬೇರೆ ಕೆಲಸಗಳಿಗೆ ಮುಂದಾಗುತ್ತಲೇ ಇರಲಿಲ್ಲ. “ಹೊರಟಳು ನೋಡು ಅಮ್ಮ ಅಂಗಳಕ್ಕೆ” ಎಂದು ಅಪ್ಪ ದಿನಾಲೂ ನಗುತ್ತಿದ್ದ ನೆನಪು ನಿನ್ನೆ ನಡೆದುದೇನೋ ಎಂಬಷ್ಟು ಹಚ್ಚಹಸಿರಾಗಿದೆ, ಅಮ್ಮ ಬೆಳೆಸಿದ ಗಿಡಗಳಂತೆ! ಹೂದೋಟದ ಕೆಲಸ ಅವಳ ಹೃದಯಕ್ಕೆ ಹತ್ತಿರವಾದುದು. ಅವಳಿಂದ ಆರೈಕೆ ಮಾಡಿಸಿಕೊಂಡ ಗಿಡಗಳು ನಮ್ಮನೆಯ ಎದುರಲ್ಲಿ ಸದಾ ಹೂವಾಗಿ ನಗುತ್ತಿರುತ್ತಿದ್ದವು. ನೆದರ್ ಲ್ಯಾಂಡ್ಸ್ ನ ಟ್ಯೂಲಿಪ್ ಸಮಯದಲ್ಲೊಮ್ಮೆ ಅವಳು ಇಲ್ಲಿಗೆ ಬಂದಿದ್ದಳು. ಟ್ಯೂಲಿಪ್ ಉದ್ಯಾನವನವನ್ನು ಕಣ್ತುಂಬಾ ನೋಡಿ ಆನಂದಿಸಿದ್ದಳು. ಫ್ಲೋರಾ ಹಾಲೆಂಡ್ ಮಾರುಕಟ್ಟೆಯಲ್ಲಿನ ಯಂತ್ರಚಾಲಿತ ಪ್ರಕ್ರಿಯೆಗಳನ್ನೂ, ಬಣ್ಣಬಣ್ಣದ ಹೂಗಳನ್ನೂ ಆಶ್ಚರ್ಯಚಕಿತಳಾಗಿ ನೋಡಿದ್ದಳು. ಅವಳಿಗೆ ಇವನ್ನೆಲ್ಲ ತೋರಿಸಲು ಸಾಧ್ಯವಾಯಿತೆಂಬ ನೆಮ್ಮದಿಯಿದ್ದರೂ ಹೂಗಳನ್ನು ಕಂಡಾಗಲೆಲ್ಲಾ ಅವಳು ಮತ್ತೊಮ್ಮೆ ಮನಸ್ಸಿನಲ್ಲಿ ಹಾದುಹೋಗುತ್ತಾಳೆ. ಅಮ್ಮ ಇದನ್ನು ನೋಡಿದ್ದರೆ ಇಷ್ಟಪಡುತ್ತಿದ್ದಳು ಎಂದು ಹೂಗಳನ್ನು ನೋಡಿದ ಪ್ರತಿಯೊಂದು ಬಾರಿಯೂ ನೆನಪಾಗುತ್ತಾಳೆ.