ಅದಿನ್ನೂ ನನ್ನ ಊರು ನಿಧಾನವಾಗಿ ಆಧುನಿಕತೆಗೆ ತೆರೆದುಕೊಳ್ಳುತಿದ್ದ ಕಾಲ. ಊರಿಗೆ ಟಾರು ರಸ್ತೆ ವಿದ್ಯುತ್ತು ಹೊಸ ಬಗೆಯ ಶೌಚಗೃಹ ಒಂದಾದ ಮೇಲೆ ಒಂದು ಪ್ರವೇಶಿಸುತ್ತಿದ್ದ ಕಾಲಘಟ್ಟ. ಈ ಎಲ್ಲದರ ಮುಂದುವರಿಕೆಯೋ ಎಂಬಂತೆ ಮೊತ್ತ ಮೊದಲಾಗಿ ಒಂದು ಸಿನೆಮಾ ಟಾಕೀಸು, ಅದೂ ನಮ್ಮ ಮನೆಯ ಸಸ್ಸರಿ ಎದುರೇ, ಆಗಿದ್ದು ಎಂತಹ ರೋಮಾಂಚಕ ಸಂಗತಿ ಎನ್ನಲಿ? (ಆಮೇಲೆ ಅನತಿ ಕಾಲದಲ್ಲಿಯೇ ಇನ್ನೊಂದು ಟಾಕೀಸು ಮತ್ತು ದೀರ್ಘ ಸಮಯದ ಬಳಿಕ ಮತ್ತೊಂದು ಟಾಕೀಸು ಆಗಿ, ಕುಂದಾಪುರದಲ್ಲಿ ಈಗ ಒಟ್ಟು ಮೂರು ಟಾಕೀಸುಗಳಿವೆ.) ನಮ್ಮ ಇರಸ್ತಿಕೆಗೇ ಹೊಸ ರಂಗು ತಂದುಕೊಟ್ಟ ಘಟನೆ ಅದು. ಅದುವರೆಗೆ ಟೆಂಟ್ ಸಿನೆಮಾಗಳಿಗೆ ಅತಿ ವಿರಳವಾಗಿ ಹೋಗುತ್ತಿದ್ದ ನಮ್ಮ ಒಳಮನೆಯ ಹಿರಿಕಿರಿಯರಿಗೆಲ್ಲ ಸಿನೆಮಾ ಎಂಬ ಕೌತುಕ ಕೈಗೆಟುಕುವಷ್ಟು ಹತ್ತಿರವಾಗಿ ಬಿಟ್ಟಿತು. ಅವರ ಜೀವನ ಗತಿಗೊಂದು ಹೊಸ ಉಮೇದು ಬಂದಿತು.

ನಮ್ಮ ಜಿಲ್ಲೆ ಆಗ ಮದ್ರಾಸು ಪ್ರೆಸಿಡೆನ್ಸಿಗೆ ಸೇರಿತ್ತಾಗಿ ಅಲ್ಲೊಂದು ಇಲ್ಲೊಂದು ಕನ್ನಡ ಸಿನೆಮಾದೊಂದಿಗೆ ಪುಂಖಾನು ಪುಂಖವಾಗಿ ಬರುತಿದ್ದುದು ತಮಿಳು ಸಿನೆಮಾಗಳೆ. ಆಗಿನ್ನೂ ರೇಡಿಯೊ ಎಲ್ಲರ ಮನೆಗೂ ಸಾಮಾನ್ಯವಾಗಿರಲಿಲ್ಲವಷ್ಟೆ? ನಮ್ಮನೆಗೆ ಅದು ಬಂದದ್ದಂತೂ ತೀರಾ ತಡವಾಗಿ, ಅರ‍್ವತ್ತರ ದಶಕದಲ್ಲಿ. ಹಾಗಾಗಿ ಸಹಜವೆಂಬಂತೆ ನಮಗೆ ಹಾಡು ಕಲಿಯುವುದಕ್ಕೂ, ಗೆಳತಿಯರೊಂದಿಗೆ ಮಾತುಕತೆಗೆ,  ಕಥೆ ಹೇಳಲು ಕೇಳಲು ಸುಲಭವಾಗಿ ಒದಗೊದಗಿ ಬಂದದ್ದು ಸಿನೆಮಾಗಳೆ. ಶಾಲಾ ವಾರ್ಷಿಕೋತ್ಸವ ಸ್ಪರ್ಧೆಗಳಲ್ಲಿ ಚಿತ್ರಗೀತೆಯ ಸ್ಪರ್ಧೆಯೂ ಹೊಸದಾಗಿ ಸೇರಿಕೊಂಡದ್ದೆ ಅಲ್ಲದೆ ಚಿತ್ರವೂ ಚಿತ್ರಗೀತೆಗಳೂ ಯಾಯಾವ ಬಗೆಯಲ್ಲಿ ಜನಜೀವನದ ಒಳಹೊಕ್ಕಿತು ಎಂಬುದನ್ನು  ಕತೆಯಲ್ಲಿ ತುಸು ಹೇಳಿದ್ದೇನೆ. ಎದುರು ರಸ್ತೆಯಲ್ಲಿ ತಲೆಎತ್ತಿ ನಿಂತ ಟಾಕೀಸಿನ ಒಳಗೆ ನಡೆಯುತ್ತಿದ್ದ ಇಡಿಇಡೀ ಸಿನೆಮಾದ ಹಾಡು ಸಂಭಾಷಣೆ ಫೈಟಿಂಗ್‌ಸದ್ದು (ಸೌಂಡ್ ಟ್ರ್ಯಾಕ್ ಎಂಬ ಶಬ್ದವೇ ಆಗ ತಿಳಿದಿರಲಿಲ್ಲ.) ಎಲ್ಲವನ್ನೂ ನಾವು ಚಾವಡಿಯ ತಳಿಕಂಡಿಗೆ ಮುಖವೊತ್ತಿ ಕುಳಿತು ತದೇಕವಾಗಿ ಆಲಿಸುತ್ತ ಮುಳುಗಿಹೋದ, ಬಾಯಿಪಾಠ ಕಲಿತು ಮೆರೆದ ಕ್ಷಣಗಳು ಅವೆಲ್ಲ.

‘ಗುಲಾಬಿ ಟಾಕೀಸ್’ ಒಂದು ದೃಶ್ಯಒಟ್ಟು ಆ ಇಡೀ ಸಂಭ್ರಮ, ಉಮೇದು ಮತ್ತು ಜೀವನ ಕ್ರಮದ ಮಾರ್ಪಾಟಿನ ಜೊತೆಗೇ ಅವೆಲ್ಲವನ್ನೂ ಮೀರಿಸುವಂಥ ಒಂದು ಅಚ್ಚರಿ ಹೊಟ್ಟಿ ಹಾರಿದ್ದು ಮಾತ್ರ ನಮ್ಮಲ್ಲಿ ಪ್ರತಿ ಹೆರಿಗೆಗೂ ಮಿಡವೈಫ್‌ಗೆ ಸಹಾಯಕಳಾಗಿ ಬಂದು ಬಾಣಂತನ ಪೂರೈಸಿ ಕೊಡುತ್ತಿದ್ದ ಒಬ್ಬ ಮಹಿಳೆ ಅಲ್ಲಿ ಗೇಟ್‌ಕೀಪರ್ ಆಗಿ ನೇಮಕಗೊಂಡದ್ದು. ಅವಳ ಆಸೆ ಆಕಾಂಕ್ಷೆಗಳ ಕುರಿತು, ಟಾಕೀಸಿನಲ್ಲಿ ಜರುಗುವ ಸಣ್ಣಮಟ್ಟಿನ ರಾಜಕೀಯ ಆ ಹೆಣ್ಣುಹೆಂಗಸನು ಅನಾಮತ್ತಾಗಿ ಕೆಲಸದಿಂದ ಕಿತ್ತು ಹಾಕಿದ ಘಟನೆಯ ಕುರಿತು ಮತ್ತು ಟಾಕೀಸಿನಿಂದಾಗಿ ಸ್ರ್ತೀಯರು ಅವರಿಗೇ ಅರಿವಿಲ್ಲದಂತೆ ಎಚ್ಚರಿಸಿಕೊಂಡ ತಮ್ಮ ಅಸ್ಮಿತೆಯ ಕುರಿತು, ಒಟ್ಟಿನಲ್ಲಿ ಒಂದು ಸಿನೆಮಾ ಟಾಕೀಸಿನ ಪ್ರವೇಶದಿಂದಾಗಿ ಊರಿನ ಒಳಲೋಕದಲ್ಲಿ  ಎದ್ದ ಹೊಸ ಅಲೆಯ ಕುರಿತು ಆ ಕತೆ ಚಿಂತಿಸುತ್ತದೆ.

ಶ್ರೀ ಕಾಸರವಳ್ಳಿಯವರು ಇದನ್ನು ಆಧರಿಸಿ ಸಿನೆಮಾ ಮಾಡುವ ಬಯಕೆಯನ್ನು ಬಹಳ ಹಿಂದೆಯೇ, ಒಮ್ಮೆ ಹೆಗ್ಗೋಡಿನಲ್ಲಿ ಸಿಕ್ಕಾಗ, ವ್ಯಕ್ತ ಪಡಿಸಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆಯೇ ಎನ್ನಬಹುದು. ಆದರೆ ಅಷ್ಟರಲ್ಲಿ ಸಿನೆಮಾಕ್ಕೆ ಸಂಬಂಧ ಪಟ್ಟಂತೆಯೇ ಒಂದು (ಪ್ರಾಯಶಃ ಇಟಾಲಿಯನ್) ಚಿತ್ರ ಬಂತಾಗಿ ತನ್ನ ಚಿತ್ರವನ್ನು ಬೇರೆ ರೀತಿಯಲ್ಲಿ ಮಾಡಬೇಕಾದೀತೆಂದು ಆ ನಂತರ ಒಮ್ಮೆ ತಿಳಿಸಿದ್ದರು.

ಆದರೆ ಅದು ಈ ರೀತಿ ಎಂದು ನನಗೂ ಅಂದಾಜಿರಲಿಲ್ಲ.  ಚಿತ್ರದ ಚಿತ್ರಕತೆ ಯನ್ನು ಕಳಿಸಿ ಅದರ ಬಗ್ಗೆ ಚರ್ಚಿಸಲು ಅವರು ಮಣಿಪಾಲಕ್ಕೆ ಬಂದಾಗ ಆರಂಭದಲ್ಲಿ ಇದು ನನ್ನ ಕತೆಗೆ ಯಾವ ರೀತಿಯಲ್ಲಿ ಸಂಬಂಧಿಸುತ್ತದೆ ಎಂದು ನಾನು ಯೋಚಿಸುವಂತಾಯಿತು. ನಾನು ಹೇಳಿದೆ- ಇದು ನನ್ನ ಕತೆ ಅಲ್ಲವಲ್ಲ.  ಕಾಸರವಳ್ಳಿ ಹೇಳಿದರು- ಆದರೆ ನಿಮ್ಮ ಕತೆಯಿಲ್ಲದಿದ್ದಲ್ಲಿ ಈ ಕತೆ ಹುಟ್ಟುತ್ತಿರಲಿಲ್ಲ. ಚರ್ಚೆಗಿಳಿದ ಹಾಗೆ ನನಗೆ ಆ ಸಮಸ್ತ ಪ್ರಕ್ರಿಯೆಯ ಅರಿವಾಗತೊಡಗಿತು. ಹಾಗೆ ನೋಡಿದರೆ ಈ ಪ್ರಕ್ರಿಯೆಯ  ಅನುಭವ ಆಗಲೇ ನನ್ನ ಕಥಾಲೋಕದಲ್ಲಿ ನನಗಾಗಿತ್ತು. ಆದರೆ ಸ್ಪಷ್ಟವಾಗಿ ಗೋಚರ ವಾಗಿರಲಿಲ್ಲ. ಉದಾಹರಣೆಗೆ ನೀನಾಸಮ್ ತಿರುಗಾಟದ ಲೋಕಶಾಕುಂತಲ ನಾಟಕ ನನ್ನೊಳಗೆ ಒಂದು ಸ್ವತಂತ್ರ ಕತೆಯನ್ನು ಹುಟ್ಟುಹಾಕಿತ್ತು. ಅದು ಶಕುಂತಲೆಯ ಯಥಾವತ್ ಕಥೆಯಲ್ಲ. ಅದರೊಳಗೆ ನನಗೆ ಕಂಡ ಕಥೆ. ಇಷ್ಟಕ್ಕೂ ಆ ನಾಟಕ ಕೂಡ ಮೂಲ ಮಹಾಭಾರತದ ಆದಿಪರ್ವದಲ್ಲಿನ ಕತೆಯ ಯಥಾರೂಪವಲ್ಲ. ತದ್ರೂಪ ಸೃಷ್ಟಿಸುವ ಉದ್ದೇಶವೇ ಅಲ್ಲಿಲ್ಲ.
ಇಲ್ಲಿ ಕೂಡ ಆಗುತ್ತಿರುವುದು ನನ್ನ  ಕತೆಯ ಸೆಲ್ಯುಲಾಯ್ಡ್ ತದ್ರೂಪ ಅಲ್ಲ. ನನ್ನ ಕತೆಯಿಂದ, ಅದರ ಆಧಾರದಲ್ಲಿಯೇ, ನಿರ್ದೇಶಕ ಕಾಸರವಳ್ಳಿ ಅವರಿಗೆ ಕಾಣಿಸಿದ ಕವಲು ಕತೆ. ಒಂದು ಅನುಸೃಷ್ಟಿ. ಒಂದು ಕೃತಿಯನ್ನು ಓದುವಾಗ ಅಥವಾ ನೋಡುವಾಗ ಸೃಜನಶೀಲ ಮನಸ್ಸಿನೊಳಗೆ ಅದಕ್ಕೆ ಸಂವಾದಿಯಾಗಿ ಇನ್ನೊಂದು ಸೃಷ್ಟಿಗೊಳ್ಳುವುದು ಅತ್ಯಂತ ಸ್ವಾಭಾವಿಕ.  ಅದು ಕೃತಿಯು ಗ್ರಹೀತವಾಗುವ ಅಥವಾ ವ್ಯಕ್ತಿಯೊಳಗಿಳಿಯುವ ಕ್ರಮಗಳಲ್ಲಿ ಒಂದು ಕೂಡ. ಒಂದು ರೀತಿಯಲ್ಲಿ ಅದು ಕೃತಿಗೆ ತೋರುವ ಪ್ರತಿಕ್ರಿಯೆ  ಹಾಗೂ ಸೃಜನಾತ್ಮಕ ಸ್ಪಂದನ.  ಅಂತೆ -ವರ್ತಮಾನಕಾಲದ ಒಂದು ದೊಡ್ಡ ಸಂಕಟವನ್ನು ತೋಡಿಕೊಳ್ಳಲು ಕಾಸರವಳ್ಳಿಯವರಿಗೆ ನನ್ನ ಕಥೆ ಆಧಾರವಾಯಿತು ಎಂಬುದೂ ಅದರ ಆಧಾರದಲ್ಲಿದ್ದೂ ಅದೊಂದು ಸ್ವತಂತ್ರ ದೃಶ್ಯ ಕೃತಿ ಯಾಯಿತು ಎಂಬುದೂ ನನಗೆ ಅತ್ಯಂತ ಮುಖ್ಯ ವಿಚಾರ.

ಗುಲಾಬಿ ಟಾಕೀಸ್ಆ ಕಥೆಯ ಆಧಾರದಲ್ಲಿ ಚಿತ್ರ ಮಾಡುವ ಕಾಲಕ್ಕೆ ಕಾಲವೇ ಬದಲಾಗಿದೆ. ಟಾಕೀಸು ಹೋಗಿ ಟೀವಿ ಮನೆಮನೆಯ ಅವಿಭಾಜ್ಯ ಅಂಗವಾಗಿದೆ. ದೇಶದ ರಾಜ್ಯ ಊರು ಗ್ರಾಮ ಹಳ್ಳಿ ಹೋಬಳಿ ಮಾಗಣೆಗಳೂ ಆಧುನಿಕತೆಗೆ ತೆರೆದುಕೊಂಡಾಗಿದೆ. ಯಾವುದೂ, ದ್ವೀಪಗಳೂ ಕೂಡ, ಇವತ್ತು ದ್ವೀಪಗಳಾಗಿ ಉಳಿದಿಲ್ಲ. ಸುತ್ತಣ ಸಮಾಜ ಬೆಚ್ಚಿ ಬೀಳಿಸುವಂತೆ ಸ್ಥಿತ್ಯಂತರಗಳಿಗೆ ಈಡಾಗುತ್ತಿದೆ. ಕಾಮಾಲೆ ಪೀಡಿತರ ಸಂಖ್ಯೆ ಏರುತ್ತಿದೆ. ಇಂಥ ಕಾಲದಲ್ಲಿ ತನ್ನ ದಿಗ್ಭ್ರಮೆಗಳನ್ನು ಕತೆಯ ಆಧಾರದಲ್ಲಿ ಹೇಗೆ ಹಿಡಿಯಬೇಕು? ಕಲಾವಿದನ ಪ್ರಯೋಗಶೀಲತೆ ದುಡಿಯತೊಡಗುವುದು ಇಂಥ ಸಂಕೀರ್ಣ ಸಂದರ್ಭದಲ್ಲೆ.  ಕತೆಯಲ್ಲಿ ಕೊನೆಗೆ ಟಾಕೀಸಿನ ಯಜಮಾನಿಕೆ ಬದಲಾಗಿ ಲಿಲ್ಲೀಬಾಯಿಯ ಬದಲಿಗೆ  ಶೀನ ಎಂಬವ ನೇಮಕಗೊಳ್ಳುತ್ತಾನೆ. ಎಂದರೆ ಲಿಲ್ಲೀಬಾಯಿ ಅನಾಮತ್ತಾಗಿ ಮನೆಗೆ ಕಳಿಸಲ್ಪಡುತ್ತಾಳೆ. ಆದರೆ ಬಾಣಂತನ ವೃತ್ತಿ ಅವಳ ಬದುಕುವ ಕೆಚ್ಚನ್ನು ಕಾಪಾಡುತ್ತದೆ. ಅದೇ, ಬದಲಾದ ಸಂದರ್ಭದಲ್ಲಿ ಸೂಲಗಿತ್ತಿ ಗುಲಾಬಿಯನ್ನು ಅನಾಮತ್ತಾಗಿ ಊರಿಂದ ಹೊರ ತಳ್ಳುತ್ತಾರೆ. ಅಂದಿನಂತೆ ಇಂದೂ ಅವಳ ವೃತ್ತಿಯೇ ಅವಳಿಗೆ ಮತ್ತೆ ಆತ್ಮವಿಶ್ವಾಸ ನೀಡಿ ಕುಸಿಯದಂತೆ ನೋಡಿಕೊಳ್ಳುತ್ತದೆ.  ನನ್ನ ಲಿಲ್ಲೀಬಾಯಿ ಚಿತ್ರದಲ್ಲಿ ಗುಲಾಬಿಯಾಗಿದ್ದಾಳೆ. ಇಲ್ಲಿರುವುದು ಸೂಲಗಿತ್ತಿ ಲಿಲ್ಲಿಬಾಯಿಗೆ ಇವತ್ತಿನ ವಿಷಮಯ ವಾತಾವರಣದಲ್ಲಿ ಎದುರಾಗುವ ಜಗತ್ತು. ಇನ್ನೊಂದು ಬಗೆಯಲ್ಲಿ ಇಂತಹ ಜಗತ್ತಿನಲ್ಲಿ ಲಿಲ್ಲಿಬಾಯಿಯಂಥವರನ್ನು ನೋಡುವ ಕ್ರಮದಲ್ಲಾಗುವ ಅತಾರ್ಕಿಕ ಮಾರ್ಪಾಟು. ಅದು ಇಂತಹ ಸಮಾಜದಲ್ಲಿ ಬದುಕುವ ಯಾರೊಬ್ಬರ ಪರಿಸ್ಥಿತಿಯೂ ಹೌದು. ಎಂದರೆ ಗುಲಾಬಿಯಲ್ಲಿ ಇವತ್ತು ಪ್ರಾಮಾಣಿಕವಾಗಿ ಬದುಕುವ ಮನುಷ್ಯ ಪ್ರೀತಿಯ ಎಲ್ಲರೂ (ಸ್ವತಂತ್ರ, ಪ್ರತ್ಯೇಕ ಅಸ್ತಿತ್ವ ಇದ್ದೂ), ಅದರಲ್ಲಿಯೂ ಹೆಣ್ಣುಮಕ್ಕಳು, ಸಮ್ಮಿಳಿತಗೊಂಡಿದ್ದಾರೆ.

ಕತೆಯಂತೆ ಚಿತ್ರಕತೆಯಿಲ್ಲ್ಲ ಅಂತ ನನಗೂ ಅನಿಸಿತ್ತು ಎಂದೆನಲ್ಲ. ಹಾಗೆ ಸಿನೆಮಾ ಬಂದ ಮೇಲಂತೂ ಅನೇಕರು ಇದನ್ನು ಹೇಳಿದರು, ಗೊಂದಲಗೊಂಡರು. ಅದು ಕೂಡ ತಪ್ಪೆನುವಂತಿಲ್ಲ. ಕಾರಣ ಚಿತ್ರದ ಮೊದಲಲ್ಲಿ ಮೂಲಕತೆ ನನ್ನದು ಅಂತ ಹೇಳಿರುವುದರಿಂದ ಜನ ಅಲ್ಲಿ ಆ ಕತೆಯನ್ನೇ ನಿರೀಕ್ಷಿಸಿ ಬರುತ್ತಾರೆ. ಒಂದು ವೇಳೆ ಚಿತ್ರ ಕೆಟ್ಟಿದ್ದರೆ ಸುಖಾ ಸುಮ್ಮನೆ ಅದು ನೀವು ಬರೆದದ್ದು ಅಂತ ಆಗುತ್ತಿರಲಿಲ್ಲವೆ? ಅಂತ ಕೇಳುವಾಗ ನಿರ್ದೇಶಕರೊಂದಿಗೆ ಅಷ್ಟೆಲ್ಲ ಚರ್ಚಿಸಿಯೂ ನನಗೂ ಹೌದೆಂತ ಕಂಡದ್ದಿದೆ. ಮೂಲಕತೆ ಅಂತ ಹಾಕುವುದರ ಬದಲು ಸ್ಪೂರ್ತಿ ಅಥವಾ ಪ್ರೇರಣೆ ಅಂತ ಹಾಕಿದ್ದರೆ ಈ ಯಾವ ಕರಕರೆ ಇರುತ್ತಿರಲಿಲ್ಲ ಅಂತಲೂ ಕಂಡಿದೆ. ಈ ಎಲ್ಲ ಸಂಚಾರೀ ಭಾವಗಳೂ ನನ್ನ ಮಟ್ಟಿಗೆ ಅಸ್ವಾಭಾವಿಕವಂತೂ ಅಲ್ಲ.
ಒಟ್ಟಿನಲ್ಲಿ ನನ್ನ ಕತೆ ನನ್ನ ಕತೆಯೇ. ಕಾಸರವಳ್ಳಿಯವರ ಚಿತ್ರಕತೆ ಅವರ ಚಿತ್ರಕತೆಯೇ. ಒಂದನ್ನೊಂದರ ಘರ್ಷಣೆ ಇಲ್ಲಿಲ್ಲ. ಆಕ್ರಮಣವೂ ಇಲ್ಲ. ನನ್ನ ಕತೆ ಒಬ್ಬ ಚಿಂತನಶೀಲ ನಿರ್ದೇಶಕನೊಂದಿಗೆ ಅದರದೇ ರೀತಿಯಲ್ಲಿ, ರೂಪಕಾತ್ಮಕವಾಗಿ, ಮಾತಾಡಿ ತನ್ನಂತೆ ತಾನಿದೆ.

ಲೇಖಕಿ ವೈದೇಹಿ (ಫೋಟೋ:ರಶೀದ್)ಸಿನೆಮ ನನಗೆ ತುಂಬ ತೃಪ್ತಿ ಕೊಟ್ಟಿದೆ. ಸಂಭಾಷಣೆಯನ್ನು ಪ್ರಾದೇಶಿಕ ವೈಶಿಷ್ಟ್ಯವುಳ್ಳ  ಕುಂದಾಪುರ ಕನ್ನಡಕ್ಕೆ ಮಾರ್ಪಡಿಸಿಕೊಟ್ಟ ವಿಶೇಷ ಸಮಾಧಾನ ನನಗಿದೆ. ಆ ಕನ್ನಡದ ಪರಿಚಯವಿರುವ ಪಾತ್ರಗಳು ಹೇಗೂ ಆಯಿತಲ್ಲ, ಪರಿಚಯವಿಲ್ಲದ ಪಾತ್ರಗಳೂ ಕೂಡ ಸಾಕಷ್ಟು ಚೆನ್ನಾಗಿಯೇ ಅದನ್ನು ಉಚ್ಚರಿಸಿ ಗೇಯಿಸಿಕೊಂಡಿರುವುದರಿಂದ ಚಿತ್ರ ಪ್ರಾದೇಶಿಕತೆಯ ಘಮವನ್ನೂ ಒಂದು ವಿಭಿನ್ನ ಕನ್ನಡ ಡಯಲೆಕ್ಟ್ನ ಶೋಭೆಯನ್ನೂ ಪಡೆದಿದೆ. ಅಷ್ಟೆ ಅಲ್ಲ, ಆ ಕನ್ನಡ ಮಾತಾಡುವ ಹೆಚ್ಚಿನವರಿಗೆಲ್ಲ ಒಂದು ವಿಶೇಷ ಮಮ ಕಾರವನ್ನೂ ಆಪ್ತತಯನ್ನೂ ಒದಗಿಸಿದೆ.
ನಮ್ಮ ಕರಾವಳಿ ಮಾತ್ರವಲ್ಲ ಎಲ್ಲೆಲ್ಲಿಯೂ ಹರಡುತ್ತಿರುವ ಸಾಮಾಜಿಕ ಕ್ಯಾನ್ಸರ್ ಕುರಿತು ಸಶಕ್ತವಾಗಿ ಕಾಳಜಿಯಿಂದ ರೂಪುಗೊಂಡ ಚಿತ್ರಣವಿದು. ದ್ವೀಪ ನಿರೂಪಣೆಯ ಕಾವ್ಯಾತ್ಮಕತೆಯಿಂದ  ಗೆದ್ದರೆ ಗುಲಾಬಿ . . . ಯಾವ ಕಥಾ ಏರಿಳಿತ ಗಳು ಇಲ್ಲವೆಂಬಂತಿದ್ದೂ  ಕ್ಷೋಭೆಯ ಸುಡುಕಾವು ತೋರಿಸುವಲ್ಲಿ ಅಪರೂಪದ ಯಶಸ್ಸು ಪಡೆದಿದೆ.