ಒಂದಂತೂ ಸತ್ಯ ಪ್ರತಿಷ್ಠೆ ಪ್ರಸಿದ್ಧಿ ಹೆಸರು ಮಣ್ಣು ಮಸಿ… ಎನ್ನುವ ಬಾಲ ಹಿಡಿದು ಹುಸಿ ಹೋಗುವ ಮುನ್ನ ನಮ್ಮ ಆತ್ಮದ ಜರೂರತ್ತಿಗೆ ನಾವು ಕಿವಿಯಾಗಬೇಕಿದೆ. ಹೃದಯದ ಮಾತನ್ನು ವಿಧೇಯವಾಗಿ ಒಮ್ಮೆ ಆಲಿಸಬೇಕಿದೆ ಎಂದೆಲ್ಲ ತೀವ್ರವಾಗಿ ಅನಿಸುತ್ತದೆ. ಎಲ್ಲವನ್ನೂ ಕೊಡವಿಕೊಂಡು ಸುಮ್ಮನೆ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೇ ಬದುಕಬೇಕೆನಿಸಿಬಿಡುತ್ತದೆ. ಹಾಗಂತ ನಿರೀಕ್ಷೆಯೂ ತಪ್ಪದಂತೆ ಹೇಳಲು ಬರುವುದಿಲ್ಲ. ಹಗಲಿನ ನಿರೀಕ್ಷೆ ಇದ್ದಾಗಲೇ ರಾತ್ರಿ ಸಹ್ಯವಾಗುವುದು ಅಥವಾ ರಾತ್ರಿಯ ಕಡು ಶಾಂತ ಏಕಾಂತ ನೀರವತೆಯ ಆಕರ್ಷಣೆ ಇಲ್ಲದೆ ಹಗಲನ್ನು ಕಳೆಯುವುದು ದುಸ್ತರವಾಗಬಹುದು. ಅಂದ ಮೇಲೆ ಯಾವುದು ನಮ್ಮ ನಿರೀಕ್ಷೆಯಾಗಬೇಕೆನ್ನುವ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು.
ಆಶಾ ಜಗದೀಶ್ ಅಂಕಣ

 

ನನಗೆ ನನ್ನ ದೌರ್ಬಲ್ಯವನ್ನು ಜಗತ್ತಿನೆದುರು ತೋರಿಸಿಕೊಳ್ಳಲು ಇಷ್ಟವಿಲ್ಲ. ನನ್ನನ್ನು ದುರ್ಬಲ ಎಂದು ಯಾರಾದರೂ ತಿಳಿಯುವುದು ನನಗೆ ಇಷ್ಟವಿಲ್ಲ. ಬೇಕಾಗೇ ಇಲ್ಲ. ಬಹುಶಃ ಯಾರಿಗೂ ಅದು ಇಷ್ಟವಾಗುವುದಿಲ್ಲ. ನನಗಂತೂ ಹೀಗೆ. ಹಾಗಾಗಿ ನಾನು ಕೋಪ, ಅಹಂಕಾರ, ಬಿಗುಮಾನ, ಗರ್ವ, ಗಂಭೀರತೆಯಂಥವಗಳನ್ನು ನನ್ನ ಪೊಳ್ಳಿಗೆ ತುಂಬಿ ನನಗೆ ಬೇಕಾದ ನನ್ನನ್ನು ತಯಾರು ಮಾಡಿಕೊಂಡು ಜಗತ್ತಿನ ಮುಂದೆ ಇಡಲು ಪ್ರಯತ್ನಿಸುತ್ತಿರುತ್ತೇನೆ ಅನಿಸುತ್ತದೆ. ಯಾರೂ ನಾನು ಮಧ್ಯರಾತ್ರಿ ಎದ್ದು ಗಂಟೆಗಟ್ಟಲೆ ಅತ್ತಿದ್ದನ್ನು ನೋಡಿರಲಿಕ್ಕಿಲ್ಲ. ಯಾರೋ ಮುಂದುವರಿದದ್ದನ್ನು ಕಂಡು ಕರುಬಿದ್ದನ್ನು ನೋಡಿರಲಿಕ್ಕಿಲ್ಲ. ಇನ್ನೊಬ್ಬರ ಸಂತೋಷದಲ್ಲಿ ನಿರುಮ್ಮಳವಾಗಿ ಒಂದಾಗುವ ಸ್ವಚ್ಛಂದ ಮನಸ್ಥಿತಿ ಇಲ್ಲದಿರುವುದು ಯಾರಿಗೂ ಗೊತ್ತಾಗಿರಲಿಕ್ಕೇ ಇಲ್ಲ.

ಒಂದಷ್ಟು ಪೇಲವ ನಗುವಿನ ತೇಪೆಗಳು ನಮ್ಮಲ್ಲಿ ಸದಾ ಇರುತ್ತವೆ. ಮತ್ತೆ ನಾವೆಲ್ಲ ಎಲ್ಲ ರೀತಿಯ ತೇಪೆಗಳಿಗೂ ಹೊಂದಿ ಹೋಗಿದ್ದೇವೆ. ಈ ತೇಪೆಗಳು ಯಾಕೆ ಹುಟ್ಟುತ್ತವೆ, ಹೇಗೆ ಹುಟ್ಟುತ್ತವೆ ಎಂದೆಲ್ಲಾ ಗೊತ್ತಿರುವ ನಮಗೆ ಅದನ್ನು ಸುಲಭವಾಗಿ ಸ್ವೀಕರಿಸಿಬಿಡುವಾಗ ಎಂಥದೋ ವಿಕೃತ ತೃಪ್ತಿ. ಆದರೆ ಮನುಷ್ಯನಿಗೆ ಅವನಿಗೆ ದಕ್ಕಿರುವ ಪಾತ್ರ ಮಾತ್ರವಾಗಿ ಬದುಕಲು ಯಾವ ತೇಪೆಗಳ ಅಗತ್ಯವಿರುವುದೇ ಇಲ್ಲ. ಇದು ಅಗತ್ಯ ಎನ್ನುವುದಕ್ಕಿಂತ ನಮ್ಮ ನಿರೀಕ್ಷೆಯಾಗಿರುತ್ತದೆ. ಯಾವುದು ಸಹಜವೋ ಅದನ್ನು ಒಪ್ಪಿಕೊಳ್ಳುವುದಕ್ಕೆ ವಿರುದ್ಧವಾಗಿ ಪರಿಸ್ಥಿತಿಯನ್ನು ನಮ್ಮ ಮನಸ್ಥಿತಿಗೆ ತಕ್ಕಂತೆ ಮಾರ್ಪಾಡಿಸಲು ತೊಡಗಿಬಿಡುತ್ತವೆ.

ಗೊತ್ತಿಲ್ಲ ಇದು ಎಲ್ಲಿಂದ ನಮ್ಮನ್ನು ಎಲ್ಲಿಗೆ ನಡೆಸುತ್ತಿದೆ, ನಡೆಸುತ್ತದೆ ಮತ್ತು ನಡೆಸುವುದು ಎಂದು. ನಾವೆಲ್ಲ ಯಾವ ಧಾವಂತದ ಭಾಗವಾಗಿ ಹೀಗೆ ನಮ್ಮ ನಮ್ಮ ನಡುವೆಯೇ ಕತ್ತಿಯೊಂದನ್ನು ಮಸೆದು ಬಚ್ಚಿಟ್ಟುಕೊಳ್ಳುತ್ತಿದ್ದೇವೆ ಎಂದು! ಆದರೆ ನಮಗೆ ನಮ್ಮೊಬ್ಬರನ್ನು ಬಿಟ್ಟು ಬೇರೆ ಯಾರೂ ಇಷ್ಟವಾಗುತ್ತಿಲ್ಲ. ನಮ್ಮ ದೈಹಿಕ ಮತ್ತು ಭೌತಿಕ ಅಂಶಗಳಷ್ಟೇ ನಮಗೆ ಮುಖ್ಯವಾಗುತ್ತಿವೆ. ನಾವು ನಮ್ಮ ದೇಹ ಮನಸ್ಸುಗಳ ಅವಶ್ಯಕತೆಗೆ ಕಿವಿಯಾಗುತ್ತಿಲ್ಲ. ನಮ್ಮ ನಮ್ಮ ಆತ್ಮದ ಜರೂರತ್ತಾದರೂ ಏನು ಎಂದು ಒಮ್ಮೆಯಾದರೂ ಕೇಳಿಕೊಳ್ಳುತ್ತಲೇ ಇಲ್ಲ.

ನಿಜ ಏನೆಂದರೆ, ನಾವು ಸತ್ಯವನ್ನು ಎದುರಿಸುವ ಶಕ್ತಿಯನ್ನು ಪಡೆಯಬೇಕಿದೆ. ನಾವು ಒಳಗೆ ಹೇಗಿದ್ದೇವೋ ಹೊರಗೂ ಅದೇ ಆಗಿ ತೋರಿಸಿಕೊಳ್ಳುವ ಧಾರ್ಷ್ಟ್ಯವನ್ನು ಬೆಳೆಸಿಕೊಳ್ಳಬೇಕಿದೆ. ಇಲ್ಲವಾದರೆ ವೇಷ ಕಳಚುವುದು ಎಷ್ಟು ಹೊತ್ತಿನ ಕೆಲಸ! ನಾವು ಯಾವುದು ಅಲ್ಲವೋ ಅದಾಗಿ ನಮ್ಮನ್ನು ನಾವು ತೋರಿಸಿಕೊಳ್ಳಲಿಕ್ಕೆ ನಮಗೆ ಹೆಚ್ಚು ಪ್ರಯತ್ನ ಬೇಕಾಗಬಹುದು. ಆದರೆ ನಾವು ನಾವಾಗಿರುವುದಕ್ಕೆ ಅಷ್ಟೊಂದು ಪ್ರಯತ್ನ ಬೇಕಿರುವುದಿಲ್ಲ. ನಾವು ನಾವಾಗಲ್ಲದೆ ನಾವು ಬಯಸಿದ ನಾವಲ್ಲದ ಪಾತ್ರವಾಗಿ ಜಗತ್ತನ್ನು ನಂಬಿಸಲು ಸದಾ ಎಚ್ಚರದಿಂದ ಇರಬೇಕಾಗಿರುತ್ತದೆ. ಆದರೆ ನಿದ್ರೆಯಲ್ಲೂ ನಾವು ನಾವಾಗಿರುವುದು ಸಾಧ್ಯ.

ಒಂದಂತೂ ಸತ್ಯ ಪ್ರತಿಷ್ಠೆ ಪ್ರಸಿದ್ಧಿ ಹೆಸರು ಮಣ್ಣು ಮಸಿ… ಎನ್ನುವ ಬಾಲ ಹಿಡಿದು ಹುಸಿ ಹೋಗುವ ಮುನ್ನ ನಮ್ಮ ಆತ್ಮದ ಜರೂರತ್ತಿಗೆ ನಾವು ಕಿವಿಯಾಗಬೇಕಿದೆ. ಹೃದಯದ ಮಾತನ್ನು ವಿಧೇಯವಾಗಿ ಒಮ್ಮೆ ಆಲಿಸಬೇಕಿದೆ ಎಂದೆಲ್ಲ ತೀವ್ರವಾಗಿ ಅನಿಸುತ್ತದೆ. ಎಲ್ಲವನ್ನೂ ಕೊಡವಿಕೊಂಡು ಸುಮ್ಮನೆ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೇ ಬದುಕಬೇಕೆನಿಸಿಬಿಡುತ್ತದೆ. ಹಾಗಂತ ನಿರೀಕ್ಷೆಯೂ ತಪ್ಪದಂತೆ ಹೇಳಲು ಬರುವುದಿಲ್ಲ. ಹಗಲಿನ ನಿರೀಕ್ಷೆ ಇದ್ದಾಗಲೇ ರಾತ್ರಿ ಸಹ್ಯವಾಗುವುದು ಅಥವಾ ರಾತ್ರಿಯ ಕಡು ಶಾಂತ ಏಕಾಂತ ನೀರವತೆಯ ಆಕರ್ಷಣೆ ಇಲ್ಲದೆ ಹಗಲನ್ನು ಕಳೆಯುವುದು ದುಸ್ತರವಾಗಬಹುದು. ಅಂದ ಮೇಲೆ ಯಾವುದು ನಮ್ಮ ನಿರೀಕ್ಷೆಯಾಗಬೇಕೆನ್ನುವ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು.

ಹೀಗೆ ಆಗಾಗ ನಿಕಶಕ್ಕೆ ಒಡ್ಡಿಕೊಳ್ಳುತ್ತಲೇ ನಡೆಯಬೇಕಿದೆ ಅನಿಸುತ್ತದೆ. ಇಲ್ಲವಾದರೆ ನಮಗೆ ನಾವು ಸಿಕ್ಕುವುದಾದರೂ ಹೇಗೆ…

ಚನ್ನವೀರ ಕಣವಿಯವರ “ಕೊಡೆ” ಕವಿತೆಯಲ್ಲಿ ಕವಿ ಕೊಡೆ ಎನ್ನುವ ನಿರ್ಜೀವ ವಸ್ತುವನ್ನಿಟ್ಟುಕೊಂಡು ನಮ್ಮ ನಡೆನುಡಿಗಳಿಗೆ ಕನ್ನಡಿ ಹಿಡಿಯುತ್ತಾ ಹೋಗುವುದು ಬಹಳ ಚಂದ ಮೂಡಿ ಬಂದಿದೆ.

ಕೊಡೆ ಹಿಡಿಯುತ್ತೇವೆ
ಬಿಸಿಲಿಗೆ ಮಳೆಗೆ ದೊಡ್ಡವರ ಕಾರು
ಸಿಡಿಸುವ ಕೊಲೆಗೆ ಆಗದವರು
ಎದುರಿಗೆ ಬಂದಾಗ ಮರೆಗೆ
ಹೊತ್ತು ಬಂದಂತೆ
ಮತ್ತೊಬ್ಬರ ತಲೆಗೆ
ನೆರಳು ಮಾಡುವ ಉಸಾಬರಿಗೆ
ಹೋಗಿ ಚುಚ್ಚುತ್ತೇವೆ
ಮೆಚ್ಚುತ್ತೇವೆ
ಹೆಣ್ಣು ಏರಿಸಿದ
ಹೂವಿನ ಕೊಡೆಗೆ
ತಂತಿ ಮೇಲಿನ ನಡಿಗೆ
ಏಕಚಕ್ರಾಧಿಪತಿಯ
ಬೆಳ್ಗೊಡೆಗೆ
ಬೆಂಕಿ ಹಚ್ಚುತ್ತೇವೆ, ಮೆರೆಸುತ್ತೇವೆ
ಉಧೋ ಉಧೋ ಎಂದು
ಛತ್ರ ಚಾಮರ ಹಿಡಿದು
ಪಲ್ಲಕ್ಕಿಯಲ್ಲಿ ಬೇಕಾದ ದೇವರನಿಟ್ಟು
ಹೊತ್ತು ಹೋದಂತೆ ಮಡಿಚಿ-
ಹಿಡಿಯುತ್ತೇವೆ ನಮ್ಮ ಅಭಿರುಚಿ-
ಗೆ ತಕ್ಕಂತೆ, ಬೆದರಿಸಲಿಕ್ಕೆ ನಾಯಿ-
ಗೆ, ನಡೆಯಲಿಕ್ಕೆ ಊರುಗೋಲಾಗಿ.
(ಕೊಡೆ, ಚನ್ನವೀರ ಕಣವಿ)

ಇಲ್ಲಿ ಈ ಕವಿತೆ, ಕೊಡೆಯ ರೂಪಕವನ್ನಿಟ್ಟುಕೊಂಡು ನಮ್ಮ ವರ್ತನೆಯನ್ನು ಒರೆಗೆ ಹಚ್ಚುವುದು ಬಹಳ ಮಾರ್ಮಿಕವಾಗಿದೆ. ಕವಿತೆಯ ಲಿಟರಿಕ್ ಅರ್ಥದ ಆಚೆಗೂ ಕವಿ ನಮ್ಮನ್ನು ಯೋಚನೆಯ ಹಾದಿಗೆ ದಾಟಿಸುತ್ತಾರೆ. ಅದು ಈ ಕವಿತೆಯಲ್ಲಿ ಬಹಳ ಚಂದ ಚಿತ್ರಿತವಾಗಿದೆ.

ಕವಿಯಾದವನು ತನ್ನ ಗುಣಾತ್ಮಕ ಗುಣಗಳಿಗೆ ಎದುರಾಗುವ ಹಾಗೆ ಋಣಾತ್ಮಕ ಗುಣಗಳಿಗೂ ಎದುರಾಗಬೇಕಿರುತ್ತದೆ. ಹೊಗಳಿಕೆಗೆ ಕಿವಿಯಾಗುವಷ್ಟೇ ವಿಮರ್ಶೆಯನ್ನೂ ಸ್ವೀಕರಿಸಬೇಕಿದೆ. ಇಲ್ಲವಾದರೆ ಎರೆಡನ್ನೂ ಸಮಾನವಾಗಿ ಸ್ವೀಕರಿಸುವ ಅಥವಾ ಯಾವುದಕ್ಕೂ ಹೆಚ್ಚು ಪ್ರತಿಕ್ರಿಯಿಸದ ನಿರ್ಲಿಪ್ತತೆ ಹೆಚ್ಚು ಸೂಕ್ತವೇನೋ. ಅಷ್ಟಕ್ಕೂ ಹೊಗಳಿಕೆ ಮತ್ತು ವಿಮರ್ಶೆ ಕವಿತೆಯ ಅವಶ್ಯಕತೆ ಅಲ್ಲ. ಅದು ಕವಿಯ ಅಪೇಕ್ಷೆ.

“ಬಸಿರು ಬಸಿರೇ ಬಿರಿದು ಬಕ್ಕರಿಸುವುದು, ಕಣ್ಣ
ಕೆಕ್ಕರಿಸುವುದು ಸೌರಬಿಂಬದಲಿ ಸ್ಫೋಟ
“Things Fall apart, center cannot hold”
-ಚನ್ನವೀರ ಕಣವಿ

ಸಿಡಿಯುವುದು ಹೋಳಾಗುವುದು ಸೃಷ್ಟಿಯ ಕ್ರಿಯೆಯಲ್ಲಿ ಸಾಮಾನ್ಯ. ಹಾಗೆ ನುಂಗುವುದು, ಒಳಗೊಳ್ಳುವುದು ಕೂಡುವುದೂ ಸೃಷ್ಟಿಕ್ರಿಯೆಯ ಭಾಗವೇ. ಆದರೆ ಈ ಸಮ್ಮಿಲನ ಮತ್ತು ವಿದಳನದ ಜಾಗ ಮತ್ತು ಔಚಿತ್ಯ ಬಹಳ ಮುಖ್ಯ. ಬೇರಾಗುವುದರಿಂದಲೂ ಒಂದು ಒಳ್ಳೆಯದೇ ಆಗಬೇಕಿರುತ್ತದೆ. ಒಂದಾಗುವುದಕ್ಕೇ ಶಕ್ತಿ ಜಾಸ್ತಿ. ಸೃಷ್ಟಿಯನ್ನು ನಾವು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಇಲ್ಲಿನ ನಿರ್ಜೀವ ವಸ್ತುಗಳ ಚಲನೆಯೂ ಅಕಾರಣವಲ್ಲ. ಕುರುಡಾಗಿ ವರ್ತಿಸುವ ಬುದ್ಧಿ ಮನುಷ್ಯನ ವಿಚಕ್ಷಣ ಮೆದುಳಿಗೆ ಮಾತ್ರ ಸಾಧ್ಯವೇನೋ. ನಾವು ನಾವಾಗಿರುವುದೇ ನಮಗೆ ಕಷ್ಟ.

ಅಣೆಕಟ್ಟು ನಮಗೆ ಅದೆಷ್ಟೋ ಸುಖವನ್ನು ಉಣಿಸುತ್ತದೆ. ಆದರೆ ಅದು ಒಡೆದ ಮರುಕ್ಷಣವೇ ಎಲ್ಲವೂ ನಿರ್ನಾಮವಾಗಿಬಿಡುತ್ತದೆ. ಹಾಗೆ ನಮ್ಮೊಳಗಿನ ದುಷ್ಟತೆಗೆ ಅಣೆಕಟ್ಟು ಕಟ್ಟುವುದಕ್ಕಿಂತ ಶಿಷ್ಟತೆಯ ಸಂಸ್ಕಾರ ಕೊಡಬೇಕು ನಾವು ಅನಿಸುತ್ತದೆ…

ನಮ್ಮ ವರ್ತನೆಯ ವೈರುಧ್ಯಗಳ ಬಗ್ಗೆ ಯೋಚಿಸುತ್ತಿರುವ ಇದೇ ಹೊತ್ತಿನಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರ “ಇಕ್ಕಳ” ಕವಿತೆ ನೆನಪಾಗಿ ಸಣ್ಣ ನಗು ತರಿಸುತ್ತಿದೆ…

“ಚಳಿಗಾಲ ಬಂದಾಗ “ಎಷ್ಟು ಚಳಿ?” ಎಂದರು
ಬಂತಲ್ಲ ಬೇಸಿಗೆ, “ಕೆಟ್ಟ ಬಿಸಿಲೆಂದರು”
ಮಳೆ ಬಿತ್ತಿಗೆ, “ಬಿಡದಲ್ಲಿ ಶನಿ!” ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಚಿಗುರು ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲ್ಲಿ ಹಣ್ಣು ಹೊಗಳುವರು
“ಹೆಣ್ಣಿನ ಗಾತ್ರ ಪೀಚು” ಎಂದವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ
ನಿಂತವರ ಕೇಳುವರು ನೀನೇಕೆ ನಿಂತೆ?
ಮಲಗಿದರೆ ಗೊಣಗುವರು ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಓದಿದರೆ ಹೇಳುವರು, ಮತ್ತೊಮ್ಮೆ ಬರಿಯೋ
ಬೆರೆದಿಡಲು ಬೆದಕುವರು ಬರವಣಿಗೆ ಸರಿಯೋ?
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.
-ಇಕ್ಕಳ, ಕೆ.ಎಸ್.ನರಸಿಂಹಸ್ವಾಮಿ

ಹೌದಲ್ಲ… ನಮ್ಮನ್ನು ತೃಪ್ತಿಪಡಿಸುವ ಒಂದೇ ಒಂದು ವಸ್ತುವೂ ಈ ಜಗತ್ತಿನಲ್ಲಿಲ್ಲ!!!